ಪುಟಗಳು

ಬುಧವಾರ, ಫೆಬ್ರವರಿ 22, 2017

ಅಣುವಿನೊಳಗೆ ದೊಡ್ಡಣ್ಣನ ಮರಣದ ಬಲೆ; ವಂಶವೊಂದರ ಜೋಳಿಗೆ ತುಂಬಿದ ಕಲೆ

ಅಣುವಿನೊಳಗೆ ದೊಡ್ಡಣ್ಣನ ಮರಣದ ಬಲೆ; ವಂಶವೊಂದರ ಜೋಳಿಗೆ ತುಂಬಿದ ಕಲೆ


                       ಜೂನ್ 8, 2009. ನಲವತ್ತೇಳು ವರ್ಷ ಪ್ರಾಯದ ಕೈಗಾ ಅಣು ವಿದ್ಯುತ್ ಸ್ಥಾವರದ ಹಿರಿಯ ವೈಜ್ಞಾನಿಕ ಅಧಿಕಾರಿ ಲೋಕನಾಥನ್ ಮಹಾಲಿಂಗಮ್ ಕಾಣೆಯಾಗಿರುವ ಸುದ್ದಿ ದೇಶದಾದ್ಯಂತ ಸಂಚಲನ ಸೃಷ್ಟಿಸಿತು. ಸೀಬರ್ಡ್ ನೌಕಾ ನೆಲೆಯ ಸಮೀಪದ ಈ ವಿದ್ಯುತ್ ಸ್ಥಾವರದಲ್ಲಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಾಲಿಂಗಮ್ ಬೆಳಿಗ್ಗೆ ವಾಯುಸೇವನೆಗೆ ತೆರಳಿದವರು ಮರಳಲೇ ಇಲ್ಲ. ಅವರು ತಮ್ಮ ಜೊತೆ ಮೊಬೈಲ್ ಅಥವಾ ಹಣ ಒಯ್ದಿಲ್ಲವೆಂದು ಕುಟುಂಬ ತಲ್ಲಣಗೊಂಡರೆ, ಮಹಾಲಿಂಗಮ್ ಮನೆ ಬಿಟ್ಟು ತೆರಳಿದ್ದನ್ನು ನಾವು ನೋಡಲೇ ಇಲ್ಲ ಎಂದು ಬಿಟ್ಟರು ಭದ್ರತಾ ಸಿಬ್ಬಂದಿ! ಕೈಗಾ ಸ್ಥಾವರದ ಸುತ್ತಲಿನ ಒಂದುಸಾವಿರ ಎಕರೆ ವಿಸ್ತಾರದ ಪಶ್ಚಿಮ ಘಟ್ಟದ ದಟ್ಟವಾದ ಅರಣ್ಯದಲ್ಲಿ ಗುಪ್ತಚರ ಅಧಿಕಾರಿಗಳು ಸಿ.ಐ.ಎಸ್.ಎಫ್, ಜಿಲ್ಲಾ ಪೊಲೀಸ್ ಪಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ನಡೆಸಿದ ಹುಡುಕಾಟ ಫಲ ನೀಡಲಿಲ್ಲ. ಸೀಬರ್ಡ್ ನೌಕಾನೆಲೆಯ ಡೈವರ್ಸ್ ನೆರವು ಪಡೆದು ನಡೆಸಿದ ಹುಡುಕಾಟಕ್ಕೂ ಮಹಾಲಿಂಗಮ್ ಗೋಚರಿಸಲಿಲ್ಲ. ಪೊಲೀಸರು ಯಾರದ್ದೋ ಒತ್ತಡಕ್ಕೆ ಸಿಲುಕಿದವರಂತೆ ತನಿಖೆ ನಡೆಸಿದರೂ, ಅಣುಸ್ಥಾವರದ ಮಾಹಿತಿ ಕದಿಯುವ ಪ್ರಯತ್ನ ನಡೆಸುತ್ತಿರುವ ಗುಂಪಿನಿಂದ ಮಹಾಲಿಂಗಮ್ ಅಪಹರಣ ಆಗಿರಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.

              ಆರನೇ ದಿವಸ ಡೈವರ್ಸ್ಗಳಿಗೆ ಕಾಳಿನದಿಯಲ್ಲಿ, ಕೈಗಾ ಅಣೆಕಟ್ಟಿನ ಬಳಿ ಮಹಾಲಿಂಗಮ್ ಶವ ಸಿಕ್ಕಿತು. ಮಹಾಲಿಂಗಮ್ ಶವದ ಪೋಸ್ಟ್ ಮಾರ್ಟಮ್ ನಡೆಯಿತು. ಅದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆ ಷರಾ ಬರೆದು ಬಿಟ್ಟಿತು. ಅಲ್ಲಿಗೇ ಕೊನೆ, ಅದೇನು ಟಿ.ಆರ್.ಪಿ ಗಿಟ್ಟಿಸುವ ಸರಕಲ್ಲದ ಕಾರಣ ಮಾಧ್ಯಮಗಳು ಮುಗುಮ್ಮಾದವು. ಆದರೆ ಮಹಾಲಿಂಗಮ್ ಕುಟುಂಬ ಅದೊಂದು ವ್ಯವಸ್ಥಿತ ಕೊಲೆಯೆಂದೇ ಇಂದಿಗೂ ನಂಬಿದೆ. ಅಲ್ಲಾ, ಇದರ ಹಿನ್ನೆಲೆ ತಿಳಿದ ಯಾರಿಗಾದರೂ ಅದು ಕೊಲೆಯೆಂದು ಮನದೊಳಗೆ ಧ್ವನಿಸಲೇಬೇಕು. ಯಾಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣ ಮಹಾಲಿಂಗಮ್ ಅವರಿಗಿರಲಿಲ್ಲ. ಹಾಂ ಅದು ವೈಯುಕ್ತಿಕ ದ್ವೇಷಕ್ಕಾಗಿನ ಕೊಲೆಯಾಗಿರಲೂ ಸಾಧ್ಯವಿಲ್ಲ. ಯಾಕೆಂದರೆ ಅಂತರ್ಮುಖಿಯಾದ ಮಹಾಲಿಂಗಮ್'ಗೆ ಯಾವುದೇ ಶತ್ರುಗಳಿರಲಿಲ್ಲ. ಹಾಗಾದರೆ ಈ ಕೊಲೆಯ ಹಿಂದೆ ಯಾರಿರಬಹುದು?

                ಮಹಾಲಿಂಗಮ್ ಶವ ಸಿಕ್ಕಿದ ಸ್ಥಳದಲ್ಲೇ ಐದು ವರ್ಷಗಳ ಹಿಂದೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪೊಂದು ಭಾರತದ ಅಣುವಿದ್ಯುತ್ ಸಮಿತಿಯ(NPC) ಅಧಿಕಾರಿಯೊಬ್ಬರನ್ನು ಅಡ್ಡಗಟ್ಟಿತ್ತು. ಆತ ಸುದೈವವಶಾತ್ ತಪ್ಪಿಸಿಕೊಂಡಿದ್ದರು. ಹತ್ತು ವರ್ಷಗಳ ಹಿಂದೆ ಕಲ್ಪಕಮ್ ಅಣುಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೂ ಮಹಾಲಿಂಗಮ್ ಇದೇ ರೀತಿ ನಾಪತ್ತೆಯಾಗಿದ್ದರು. ಹಾಗೆ ಹೋದವರು ಮರಳಿದ್ದು ಐದು ದಿವಸಗಳ ಬಳಿಕ! ಇಲ್ಲಿ ಮೂರು ಮುಖ್ಯ ಅಂಶಗಳನ್ನು ಗಮನಿಸಬೇಕು. ೧) ಕೈಗಾದ ಎಂಟರಲ್ಲಿ ನಾಲ್ಕು ಅಣು ರಿಯಾಕ್ಟರುಗಳು ಹಾಗೂ ಕಲ್ಪಕಮ್'ನ ಎರಡು ಅಣು ರಿಯಾಕ್ಟರುಗಳು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯ ನಿಯಮಗಳಿಂದ ಹೊರತಾದ, ರಕ್ಷಣೋಪಾಯಗಳಿಗಾಗಿಯೇ ಇರುವಂತಹ ಸ್ಟ್ರೇಟಜಿಕ್ ಅಣು ರಿಯಾಕ್ಟರುಗಳು. ೨) ಕೈಗಾದ ಅಣುಸ್ಥಾವರ ಭಾರತದ ಮುಖ್ಯ ನೌಕಾ ನೆಲೆ ಐ.ಎನ್.ಎಸ್ ಕದಂಬದ ಸಮೀಪದಲ್ಲಿದೆ. ೩) ಹಿರಿಯ ಅಧಿಕಾರಿಯಾಗಿದ್ದ, ಕೈಗಾ ಅಣುಸ್ಥಾವರದಲ್ಲಿ ಅದು ಆರಂಭವಾದಂದಿನಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದ ಮಹಾಲಿಂಗಮ್'ಗೆ ದೇಶದ ಕೆಲವು ಸೂಕ್ಷ್ಮ ಪರಮಾಣು ಮಾಹಿತಿ ತಿಳಿದಿರುವುದು ಅಸಂಭವವೂ ಅಲ್ಲ, ಅಪರಾಧ ಅಥವಾ ಅನಪೇಕ್ಷಿತವೂ ಅಲ್ಲ. ಈ ಮೂರು ಚುಕ್ಕೆಗಳನ್ನು ಜೋಡಿಸಿದರೆ ಇದರ ಹಿಂದಿನ ಸೂತ್ರಧಾರರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅಂದರೆ ಇದರ ಹಿಂದೆ ಅಂತರಾಷ್ಟ್ರೀಯ ಮಟ್ಟದ ಕಾಣದ ಕೈಯೊಂದು ಗೋಚರಿಸಲೇ ಬೇಕಲ್ಲವೇ? ಆದರೆ ಇದರ ತನಿಖೆಯನ್ನು ಆರಂಭಿಸಿದ ಸರಕಾರ ಮಹಾಲಿಂಗಮ್ ಶವ ಪತ್ತೆಯಾದೊಡನೆ ಯಾಕೆ ಸುಮ್ಮನಾಗಿಬಿಟ್ಟಿತು? ಪೊಲೀಸರನ್ನು ಸುಮ್ಮನಾಗಿಸಿದ ಆ ಕಾಣದ "ಕೈ" ಯಾವುದು? ಐದು ವರ್ಷಗಳ ಹಿಂದೆ ಅಧಿಕಾರಿಯೊಬ್ಬರ ಮೇಲಾದ ದಾಳಿಯ ತನಿಖೆ ಯಾಕೆ ಸತ್ತು ಹೋಯಿತು? ಹತ್ತು ವರ್ಷಗಳ ಹಿಂದೆ ಮಹಾಲಿಂಗಮ್ ನಾಪತ್ತೆಯಾದುದರ ತನಿಖೆ ಏನಾಯಿತು? ಇವೆಲ್ಲವೂ ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

                ಮಹಾಲಿಂಗಮ್ ಮರಣದೊಡನೆ ಈ ನಿಗೂಢ ಕಥೆಯ ಅಂತ್ಯವಾಗಲಿಲ್ಲ. ಬದಲಾಗಿ ಅದು ಮತ್ತಷ್ಟು ಬೆಳೆದು ಆ ಕಥೆಯೇ ನಿಗೂಢವಾಯಿತು. 2009-13ರ ನಡುವೆ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿ(DAE)ಯ ಹತ್ತು ವಿಜ್ಞಾನಿಗಳು ಕೊಲೆ, ನಿಗೂಢ ಅಗ್ನಿ ದುರಂತಗಳಿಗೆ ಬಲಿಯಾಗಿ ಹೋದರು. 2011ರಲ್ಲಿ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ 63 ವರ್ಷದ ಉಮಾ ರಾವ್' ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದರೆಂದು ಪೊಲೀಸರು ವರದಿ ಬರೆದು ತಮ್ಮ ಕೆಲಸವನ್ನು ಸುಲಭ ಮಾಡಿಕೊಂಡರು. ಅಂತಹ ತುಂಬು ಪ್ರಾಯಕ್ಕೆ ಖಿನ್ನತೆಗೊಳಗಾಗಲು ಅವರಿಗೇನು ಕಾರಣವಿತ್ತೋ? ಅದು ಆತ್ಮಹತ್ಯೆಯಲ್ಲ ಎಂದ ಕುಟುಂಬಿಕರ ಅಳಲು ಅರಣ್ಯರೋದನವಾಯಿತು. ರಾಷ್ಟ್ರೀಯ ಅಣುವಿದ್ಯುತ್ ಸಂಸ್ಥೆ(NPC)ಯ ಉದ್ಯೋಗಿ ರವಿ ಮುಲಿಯವರನ್ನು ಅಪಹರಿಸಿ ಕೊಲೆಗೈದ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾದಾಗ ರವಿಯ ಸೋದರನೇ ಸ್ವತಂತ್ರ ತನಿಖೆಯನ್ನಾರಂಭಿಸಿದರು.

             2010ರ ಫೆಬ್ರವರಿ 23ರ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ ವಿಜ್ಞಾನಿ ಎಂ.ಅಯ್ಯರ್ ಮನೆಯಲ್ಲೇ ಸಾವನ್ನಪ್ಪಿರುವ ವರದಿಯಾಯಿತು. ಯಾವಾಗ ಮೇಲುನೋಟಕ್ಕೆ ಆತ್ಮಹತ್ಯೆಯಲ್ಲ ಎಂದು ಖಚಿತವಾಗಿ ಸಾಮಾನ್ಯರಿಗೂ ತಿಳಿದು ಕೊಲೆಯ ಶಂಕೆ ಮೂಡುತ್ತದೋ, ಆ ಕೊಲೆಯ ಹಿಂದೆ ಯಾರೋ ಪ್ರಭಾವಿಯ ಹಸ್ತವಿರುತ್ತದೋ, ಅಂತಹ ಸಾವನ್ನೆಲ್ಲಾ "ವಿವರಿಸಲಾಗದ" ಎಂದು ಬರೆದು ಪ್ರಕರಣವನ್ನು ಮುಚ್ಚಿಡುವ ಪರಿಪಾಠ ನಮ್ಮ ತನಿಖಾ ಸಮಿತಿಗಳಲ್ಲಿದೆ. ಅಯ್ಯರ್ ಸಾವೂ ಅಂತಹ ವಿವರಿಸಲಾಗದ ಪಟ್ಟಿಗೆ ಸೇರಿಬಿಟ್ಟಿತು. ಕೊಲೆಗಾರ ನಕಲಿ ಕೀ ಬಳಸಿ ಅಯ್ಯರ್ ಮನೆಯೊಳಗೆ ಪ್ರವೇಶಿಸಿದ್ದ. ನಿದ್ರೆಯಲ್ಲಿರುವಂತೆಯೇ ಅವರನ್ನು ಕತ್ತು ಹಿಸುಕಿ ಸಾಯಿಸಿದ್ದ. ಅವರ ದೇಹದ ಆಂತರಿಕ ಭಾಗಗಳಿಗೆ ಗಾಯಗಳಾಗಿದ್ದವು. ಆದರೂ ಫೊರೆನ್ಸಿಕ್ ತಜ್ಞರಿಗೆ ಬೆರಳಚ್ಚು, ಪೊಲೀಸರಿಂದ ಸಿಗಬಹುದಾದ ಉಳಿದ ಮೂಲಭೂತ ಸುಳಿವುಗಳೂ ಸಿಗಲಿಲ್ಲ. ಇರಾನಿಯನ್ ಅಣು ವಿಜ್ಞಾನಿಗಳನ್ನು ಕೊಲ್ಲುವಾಗ ಪ್ರದರ್ಶಿಸಿದ ವೃತ್ತಿಪರತೆಯೇ ಭಾರತೀಯ ಅಣುವಿಜ್ಞಾನಿಗಳ ಕೊಲೆಯಲ್ಲೂ ಪ್ರತಿಬಿಂಬಿತವಾಗುತ್ತಿತ್ತು. ತನಿಖೆಯನ್ನು ಬೇಗ ಮುಗಿಸಿ ಆತ್ಮಹತ್ಯೆಯೆಂದು ವರದಿ ಮಾಡುವಂತೆ ಕೆಲ ಮೇಲಿನ ಅಧಿಕಾರಿಗಳಿಂದ ಒತ್ತಡವೂ ಬಂದಿತ್ತು. ಈ ಎಲ್ಲಾ ಒತ್ತಡಗಳ ನಡುವೆಯೂ ಮುಂಬಯಿ ಪೊಲೀಸರು ಅದನ್ನು ಕೊಲೆಯೆಂದೇ ದಾಖಲಿಸಿದರು.

                INS ಅರಿಹಂತ್'ನ ಇಂಜಿನಿಯರುಗಳಾದ ಕೆ.ಕೆ ಜೋಷಿ ಹಾಗೂ ಅಭೀಷ್ ಶಿವಂರ ಮೃತದೇಹಗಳು ವಿಶಾಖ ಪಟ್ಟಣದ ರೈಲ್ವೇ ಹಳಿಗಳ ಮೇಲೆ ಸಿಕ್ಕಿದರೆ, ಉಮಾಂಗ್ ಸಿಂಗ್ ಹಾಗೂ ಪಾರ್ಥ ಪ್ರತಿಮ್ ಬಾಗ್ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ ರೇಡಿಯೇಷನ್ & ಫೋಟೋಕೆಮಿಸ್ಟ್ರಿ ಡಿಪಾರ್ಟ್ ಮೆಂಟಿನ ಲ್ಯಾಬಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಯಾವುದೇ ವಸ್ತುಗಳು ಇರದಿದ್ದಾಗ್ಯೂ ನಿಗೂಢವಾಗಿ ಸುಟ್ಟುರಿದು ಹೋದರು. ಮಹಮ್ಮದ್ ಮುಸ್ತಾಫ, ತಿತಸ್ ಪಟೇಲ್, ದಲಿಯಾ ನಾಯಕರ ಸಾವನ್ನು ಆತ್ಮಹತ್ಯೆಯ ಪಟ್ಟಿಗೆ ಸೇರ್ಪಡಿಸಲಾಯಿತು. 2011ರಲ್ಲಿ ನಂದಿ ಹಿಲ್'ನಲ್ಲಿ ಎಚ್.ಎ.ಎಲ್.ನ ಮುಖ್ಯ ಪರೀಕ್ಷಕ ಪೈಲಟ್ ಸ್ಕ್ವಾಡ್ರನ್ ಲೀಡರ್(ನಿವೃತ್ತ) ಬಲದೇವ್ ಸಿಂಗ್ ದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಯಿತು. 1990ರಿಂದ ಎಲ್.ಸಿ.ಎ ಪ್ರೋಗ್ರಾಂನಲ್ಲಿ ತೊಡಗಿಸಿಕೊಂಡಿದ್ದ, ಈ ಉದ್ದೇಶಕ್ಕಾಗಿಯೇ ವೈಮಾನಿಕ ಅಭಿವೃದ್ಧಿ ಇಲಾಖೆಗೆ ಸೇರಿಕೊಂಡಿದ್ದ ಆತ ಲಘು ವಿಮಾನಗಳ ಅಭಿವೃದ್ಧಿ ಹಾಗೂ ಹಾರಾಟ ಪರೀಕ್ಷೆ ಹಾಗೂ ನಿಯಮಗಳನ್ನು ರೂಪಿಸುವಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದ ಅನುಭವಿಯೂ ನಿಷ್ಣಾತರೂ ಆಗಿದ್ದರು. ಭಾರತಕ್ಕೆ ಬರುವ ಯುದ್ಧ ವಿಮಾನಗಳ ಮೌಲ್ಯಮಾಪನ ನಡೆಸುತ್ತಿದ್ದವರು ಅವರೇ. ಅಂತಹ ವ್ಯಕ್ತಿ ಆತ್ಮಹತ್ಯೆ ಯಾಕೆ ಮಾಡಿಕೊಂಡಾರು ಎನ್ನುವ ಸಣ್ಣ ಸಂಶಯವೂ ಪೊಲೀಸರಲ್ಲಿ ಮೊಳೆಯಲಿಲ್ಲ. ಅಥವಾ ಮೊಳಕೆಯಲ್ಲೇ ಚಿವುಟಲ್ಪಟ್ಟಿತು. ಇದಾಗಿ ಎರಡು ತಿಂಗಳೊಳಗಾಗಿ ರಾಫೇಲ್ (ಯುದ್ಧ ವಿಮಾನ) ಒಪ್ಪಂದಕ್ಕೆ ಸಹಿ ಬಿತ್ತು! ವರ್ಷಗಳು ಕಳೆದರೂ ರಾಫೇಲ್ ಬರಲೇ ಇಲ್ಲ. ಆದರೆ ಕುಟುಂಬವೊಂದರ ಜೋಳಿಗೆ ತುಂಬುತ್ತಲೇ ಇತ್ತು! ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನಲ್ಲಿ ಅವಧೇಶ್ ಚಂದ್ರ, ಅಶುತೋಷ್ ಶರ್ಮ, ಸೌಮಿಕ್ ಚೌಧರಿ, ಅಕ್ಷಯ್ ಚೌಹಾಣ್, ಕುಮಾರ್ ವೇಲು, ಸುಭಾಷ್ ಸೋನವಾನೆ, ಜಸ್ವಂತ್ ರಾವ್, ಹಾಗೂ ತಿರುಮಲ ಪ್ರಸಾದ್ ಕೂಡಾ ಆತ್ಮಹತ್ಯೆ ಮಾಡಿಕೊಂಡರಂತೆ!

                  ಭಾಭಾ ಅಟಾಮಿಕ್ ಸೆಂಟರಿನ ಉದ್ಯೋಗಿಗಳೇ ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೇ ಆತ್ಮಹತ್ಯೆಗೆ ಶರಣಾಗಬೇಕಾದರೆ ಆ ಆತ್ಮಹತ್ಯೆಗಳು ಏಕಾಗುತ್ತಿವೆಯೆಂದಾದರೂ ಸರಕಾರ ಕನಿಷ್ಟ ವಿಚಾರಣೆ ಯಾಕೆ ನಡೆಸಲಿಲ್ಲ? ಇವುಗಳೆಲ್ಲಾ ಆತ್ಮಹತ್ಯೆಗಳಲ್ಲ, ಕೊಲೆಗಳೇ ಎಂದು ಸಾಮಾನ್ಯನಿಗೂ ಬರುವ ಸಂಶಯ ಸರಕಾರಕ್ಕೆ ಯಾಕೆ ಹುಟ್ಟಲಿಲ್ಲ? ಸರಕಾರ ಕೊಲೆ ಪಾತಕಿಗಳ ಪ್ರಭಾವಕ್ಕೆ ಬಿದ್ದು ನರಳುತ್ತಿತ್ತೇ? ಅಥವಾ ತನ್ನ ಕುಟುಂಬದ ಬೊಕ್ಕಸಕ್ಕೆ ದೇಣಿಗೆ ಪಡೆಯುತ್ತಿತ್ತೇ? ಇರಲಿ, ಸರಕಾರವನ್ನು ಭೃಷ್ಟರ ಸಂತೆ ಎಂದು ಪಕ್ಕಕ್ಕಿರಿಸಿದರೂ ಅಣು ವಿಜ್ಞಾನಿಗಳನ್ನೇ ಗುರಿಯಾಗಿರಿಸಿದ ಆ ಕೊಲೆಪಾತಕಿಗಳ ತಂಡ ಯಾವುದು? ಪರಮಾಣು ಒಪ್ಪಂದದ ಚರ್ಚೆ ಜಾರಿಯಲ್ಲಿರುವಾಗ, ಅದಕ್ಕೆ ಸಹಿ ಹಾಕಬೇಕೆಂದು ಆಡಳಿತ ಪಕ್ಷ ಎಲ್ಲರನ್ನೂ, ಎಲ್ಲವನ್ನೂ ಓಲೈಸುತ್ತಿದ್ದಾಗ, ಪ್ರತಿಪಕ್ಷಗಳು ಅದನ್ನು ವಿರೋಧಿಸುತ್ತಿದ್ದಾಗಲೇ ಈ ಕೊಲೆಗಳೆಲ್ಲಾ ಯಾಕೆ ನಡೆದವು? ಆಗಿನ ಸರಕಾರ ಪರಮಾಣು ಒಪ್ಪಂದವನ್ನು ಮಾಡಿಯೇ ತೀರಬೇಕೆಂಬ ಹಠಕ್ಕೆ ಬಿದ್ದದ್ದೇಕೆ?

              ಪ್ರಶ್ನೆಗಳು ಹಲವಿವೆ. ಉತ್ತರ ಹುಡುಕ ಹೊರಟರೆ ಅದು ಹೋಮಿ ಜಹಾಂಗೀರ್ ಭಾಭಾರ ಅಕಾಲಿಕ ಮರಣಕ್ಕೇ ಹೋಗಿ ನಿಲ್ಲುತ್ತದೆ. ಅವರ ಮರಣದ ರಹಸ್ಯ ಕೆದಕಬೇಕಾದರೆ ಅವರದೇ ಸಾಲಿನಲ್ಲಿ ನಿಲ್ಲುವ ಯೋಗ್ಯತಾಸಂಪನ್ನ ವಿಜ್ಞಾನಿಯೊಬ್ಬನ ಅಳಲನ್ನು ಕೇಳಲೇಬೇಕು. ಅವರ ಕಥೆಯ ಹಿಂದಿನ ಕಾರಣವೇ ಈ ಮೇಲಿನ ಎಲ್ಲಾ ಕೊಲೆಗಳ ರಹಸ್ಯವನ್ನು ಬಿಡಿಸಲೂ ಬಲ್ಲದು. ಇದೊಂಥರಾ ಕ್ರೌಂಚದ ಕೂಗೇ! ಅನಾವಶ್ಯಕ ನೆಪವೊಡ್ಡಿ ವಿಜ್ಞಾನಿಯೊಬ್ಬನನ್ನು ಅವನ ನಿತ್ಯ ಜೊತೆಗಾರ ವಿಜ್ಞಾನದಿಂದ ಬೇರ್ಪಡಿಸಿದಾಗ ಎದ್ದ ಕೂಗು!

                "1994ರ ನವೆಂಬರ್ 30. ಮನೆಯ ಹೊಸ್ತಿಲ ಬಳಿ ಪೊಲೀಸರ ಬೂಟುಗಾಲಿನ ಶಬ್ಧ ಕೇಳಿಸಿತು. ಒಳ ನುಗ್ಗಿದವರೇ ಮಾತಿಗೂ ಅವಕಾಶ ಕೊಡದೇ ಕೋಳ ತೊಡಿಸಿದರು. ಮಾಲ್ಡೀವ್ಸ್ ನ ಇಬ್ಬರು ಗೂಢಚರರಾದ  ರಶೀದಾ ಹಾಗೂ ಫೌಝಿಯಾ ಹಸನ್ರಿಗೆ ಕ್ರಯೋಜನಿಕ್ ಎಂಜಿನ್ಗಳ ರಹಸ್ಯವನ್ನು ಕೋಟ್ಯಂತರ ರೂಪಾಯಿಗೆ ಮಾರಿದ್ದೇನೆಂಬುದು ನನ್ನ ಮೇಲಿನ ಆರೋಪವಾಗಿತ್ತು. ನಿಜವಾಗಿ ರಶೀದಳನ್ನು ನಾನು ನೋಡಿದ್ದೇ ವಿಚಾರಣೆಯ ಸಂದರ್ಭದಲ್ಲಿ. ಪೊಲೀಸರಿಗಾದರೂ ಕ್ರಯೋಜನಿಕ್ನ ಬಗ್ಗೆ ಹೇಗೆ ಗೊತ್ತಿರಲು ಸಾಧ್ಯ? 3 ದಿನಗಳ ಕಾಲ ಅನ್ನಾಹಾರಗಳಿಲ್ಲದೆ ಪೊಲೀಸರ ನಿಂದನೆ, ಹೊಡೆತಗಳನ್ನು ತಿಂದು ದೇಹ, ಮನಸ್ಸು ಜರ್ಝರಿತವಾಗಿತ್ತು. ದಾಹದಿಂದ ಜೀವ ಸಾಯುತ್ತಿತ್ತು. ನೀರು ಕೇಳಿದೆ. ದೇಶದ್ರೋಹಿಗೇಕೆ ನೀರು ಎಂದು ಸಿಟ್ಟಾಗಿ ಪೊಲೀಸನೊಬ್ಬ ಬೂಟುಗಾಲಿನಿಂದ ನನ್ನನ್ನು ತುಳಿದ. ನೆಲಕ್ಕುರುಳಿದೆ. ಯಾವ ಕೈಗಳಿಂದ ಸಾಲು ಸಾಲು ರಾಕೆಟ್ಗಳನ್ನು ನಭಕ್ಕೆ ಹಾರಿಸಿದ್ದೆನೋ ಅವುಗಳನ್ನೂರಿ ಏಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೋರ್ಟು ನನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರೂ ನಾನು ಪೊಲೀಸ್ ಕಸ್ಟಡಿಯಲ್ಲಿ ಇರಲೇ ಇಲ್ಲ. ವಿಚಾರಣೆಯ ನೆಪದಲ್ಲಿ ಯಾರ್ ಯಾರೋ ನನ್ನನ್ನು ಎಲ್ಲೆಲ್ಲಿಗೋ ಕೊಂಡೊಯ್ದು, ಕತ್ತಲ ಕೂಪದಲ್ಲೆಲ್ಲಾ ವಿಚಾರಣೆ, ದೌರ್ಜನ್ಯ ನಡೆಸಿದರು. ಐವತ್ತು ದಿನಗಳ ಕಾಲ ವೆಯ್ಯೂರು ಜೈಲಿನಲ್ಲಿರುವಾಗ ನನ್ನ ವ್ಯಕ್ತಿತ್ವವೇ ಕುಸಿದು ಹೋದಂತೆ ಸ್ಥಂಭೀಭೂತನಾಗಿದ್ದೆ. ಪರಿವಾರಕ್ಕೆ ಸಮಯವನ್ನೇ ಮೀಸಲಿಡದೆ 28 ವರ್ಷಗಳ ಕಾಲ ಇಸ್ರೋದಲ್ಲಿ ದಣಿವರಿಯದೇ ದುಡಿದ ನನ್ನನ್ನೇ ದೇಶದ್ರೋಹಿ ಅಂದದ್ದು ನನ್ನನ್ನು ಆ ಪರಿಯಾಗಿ ಘಾತಿಸಿತ್ತು. ದುಡ್ಡಿಗಾಗಿ ದೇಶವನ್ನೇ ಮಾರಿದ ದೇಶದ್ರೋಹಿ, ವಂಚಕ, ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಕಳ್ಳ.. ಎಂದೆಲ್ಲಾ ಮಾಧ್ಯಮಗಳು ವರ್ಣರಂಜಿತವಾಗಿ ಬರೆದಾಗ ಇಸ್ರೋದಲ್ಲಿ 28 ವರ್ಷಗಳಿಂದ ನಿಯತ್ತಿನಿಂದ ಕೆಲಸ ಮಾಡಿದ, ಎ.ಪಿ.ಜೆ. ಕಲಾಮ್ರ ಜೊತೆ ದುಡಿದಿರುವ ಆವರೆಗೆ ಒಂದೇ ಒಂದು ಆರೋಪವೂ ಇರದ ನನಗೆ ಹೇಗಾಗಿರಬೇಡ? ಅಮೇರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳಲ್ಲಿ ಮೊದಲಿಗನಾಗಿ ನಾನು ತೇರ್ಗಡೆಗೊಂಡಾಗ ಅಮೇರಿಕವೇ ಪ್ರಭಾವಿತಗೊಂಡಿತ್ತು. ನಾಸಾದಲ್ಲಿ ಉದ್ಯೋಗದ ಭರವಸೆ ನೀಡಿತ್ತಲ್ಲದೆ, ಅಮೇರಿಕನ್ ಪೌರತ್ವದ ಆಮಿಷವನ್ನೂ ಒಡ್ಡಿತ್ತು. ಅವೆಲ್ಲವನ್ನೂ ತಿರಸ್ಕರಿಸಿ ಇಸ್ರೋದಲ್ಲೇ ಮುಂದುವರಿಯಲು ತೀರ್ಮಾನಿಸಿದ ನಾನು ದೇಶದ್ರೋಹಿಯಾದೇನೇ? ದುಡ್ಡಿಗಾಗಿ ದೇಶದ ರಹಸ್ಯಗಳನ್ನು ಮಾರಲು ಮುಂದಾದೇನೇ?" ಹೀಗೆ ನಂಬಿ ನಾರಾಯಣನ್ ಹೇಳುತ್ತಿದ್ದರೆ ನಮ್ಮ ದರಿದ್ರ ವ್ಯವಸ್ಥೆಯನ್ನು ಸುಟ್ಟು ಬಿಡಬೇಕೆನ್ನುವಷ್ಟು ಸಿಟ್ಟು ಒತ್ತರಿಸಿ ಬರುತ್ತದೆ.

                    ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಅದುವರೆಗೆ ಅವಲಂಬಿಸಿದ್ದು ಪಿಎಸ್ಎಲ್ವಿ ರಾಕೆಟ್ಗಳನ್ನು. ಆದರೆ ಇದರಿಂದ ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ರವಾನಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಉಡಾವಣೆಗೆ ಭಾರತ ಅಪಾರ ಹಣವನ್ನು ತೆರುವುದರ ಜೊತೆಗೆ ವಿದೇಶಿ ರಾಕೆಟ್ಗಳ ನೆರವು ಪಡೆಯಬೇಕಾಗಿತ್ತು. ಆದರೆ ಕ್ರಯೋಜೆನಿಕ್ ತಂತ್ರಜ್ಞಾನ ಪಡೆದುಕೊಂಡಲ್ಲಿ ಈ ಕೊರತೆಯನ್ನು ನೀಗಿಸಬಹುದಾಗಿತ್ತು .ಅಲ್ಲದೆ ಇದರಿಂದ ವಿದೇಶಿ ವಿನಿಮಯ ಹಣವೂ ಉಳಿತಾಯವಾಗುವುದರ ಜೊತೆಗೆ ಇತರ ದೇಶಗಳ ಉಪಗ್ರಹಗಳನ್ನು ಉಡ್ಡಯನ ನಡೆಸಿ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಪಾರಮ್ಯವನ್ನೂ, ಸಾಕಷ್ಟು ಆದಾಯವನ್ನು ಗಳಿಸಬಹುದಾಗಿತ್ತು. ಇದೇ ಕಾರಣಕ್ಕೆ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನದ ಪಡೆಯಲು 1992ರಲ್ಲಿ ರಷ್ಯಾದೊಂದಿಗೆ ಭಾರತ ಒಪ್ಪಂದವೊಂದಕ್ಕೆ ಬಂದಿತ್ತು. 235 ಕೋಟಿ ರೂಪಾಯಿಯ ಈ ಬೃಹತ್ ಒಪ್ಪಂದ ಸಹಜವಾಗಿಯೇ ಅಮೇರಿಕದ ಕಣ್ಣು ಕುಕ್ಕಿತು. ಅಮೇರಿಕವು ಅದಾಗಲೇ ಇದೇ ಮಾದರಿಯ ಒಪ್ಪಂದಕ್ಕೆ 950 ಕೋಟಿ ರೂಪಾಯಿಯ ಬೇಡಿಕೆಯಿಟ್ಟಿತ್ತು. ಫ್ರ್ರಾನ್ಸ್ 650 ಕೋಟಿ ರೂಪಾಯಿ ಷರತ್ತು ವಿಧಿಸಿತ್ತು. ರಷ್ಯಾದ ಅಧ್ಯಕ್ಷರಾಗಿದ್ದ ಬೋರಿಸ್ ಯೇಲ್ಸಿನ್ ಮೇಲೆ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್ ಒಪ್ಪಂದ ರದ್ದುಗೊಳಿಸುವಂತೆ ಒತ್ತಡ ಹೇರಿದರು. ಈ ಒಪ್ಪಂದ ಜಾರಿಯಾದದ್ದೇ ಆದಲ್ಲಿ ರಷ್ಯಾವನ್ನು ಕಪ್ಪು ಪಟ್ಟಿಯಲ್ಲಿ  ಸೇರಿಸುವುದಾಗಿ ಬೆದರಿಕೆಯೊಡ್ಡಿದರು. ಬೆದರಿದ ಯೇಲ್ಸಿನ್ ಒಪ್ಪಂದವನ್ನು ರದ್ದುಗೊಳಿಸಿದರು. ಬಳಿಕ ಆದ ಹೊಸ ಒಪ್ಪಂದದಂತೆ ತಂತ್ರಜ್ಞಾನಗಳನ್ನು ವರ್ಗಾಯಿಸದೇ 4 ಕ್ರಯೋಜನಿಕ್ ಎಂಜಿನ್ಗಳನ್ನು ಸ್ವಯಂ ತಯಾರಿಸಿಕೊಡುವುದಕ್ಕೆ ರಷ್ಯಾ ಒಪ್ಪಿಕೊಂಡಿತು. ಆ ಸಂದರ್ಭದಲ್ಲಿ ಇಸ್ರೋದಲ್ಲಿ ಕ್ರಯೋಜನಿಕ್ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದದ್ದು ಇದೇ ನಂಬಿ ನಾರಾಯಣನ್.  ದ್ರವ ಇಂಧನ ಚಾಲಿತ ರಾಕೆಟನ್ನು ಭಾರತಕ್ಕೆ ಮೊತ್ತಮೊದಲು ಪರಿಚಯಿಸಿದ್ದೂ ವಿಕ್ರಂ ಸಾರಾಭಾಯ್, ಸತೀಶ್ ಧವನ್ ಹಾಗೂ ಯು.ಆರ್.ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದ ಇದೇ ನಂಬಿ ನಾರಾಯಣನ್.

                  ತಂತ್ರಜ್ಞಾನ ದೊರಕದಿದ್ದರೂ ನಂಬಿ ನಾರಾಯಣನ್ ನೇತೃತ್ವದಲ್ಲಿ ಇಸ್ರೋ ಶೂನ್ಯದಿಂದ ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾಯಿತು. ಇನ್ನೇನು ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗುತ್ತದೆನ್ನುವಷ್ಟರಲ್ಲಿ ಅವಘಡವೊಂದು ನಡೆದು ಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿ ನಂಬಿ ನಾರಾಯಣನ್ ಹಾಗೂ ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರರನ್ನು ಬಂಧಿಸಲಾಯಿತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಯಿತು. ಕ್ರಯೋಜೆನಿಕ್ ಯೋಜನೆ ಹಳ್ಳ ಹಿಡಿಯಿತು. ಜೊತೆಗೆ ಜಿಎಸ್ಎಲ್ವಿ, ಪಿಎಸ್ಎಲ್ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ ಹತ್ತಾರು ಯೋಜನೆಗಳೂ ನಿಂತ ನೀರಾದವು. ನಂಬಿಯವರ ಬಾಯಿ ಬಿಡಿಸಲು ಅವರಿಗೆ ಚಿತ್ರ ಹಿಂಸೆ ನೀಡಲಾಯಿತು. ಇಸ್ರೊಗೆ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಂಧಿಸಿದಾಗ ಅವರ ಬಳಿ ಇದ್ದ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ನಮೂದಾಗಿತ್ತು ಎನ್ನುವ ನೆಪವೇ ನಂಬಿಯವರನ್ನು ಬಂಧಿಸಲು ಸಾಕಾಗಿತ್ತು. ಬಂಧಿತ ರಷೀದಾ ಮತ್ತು ಫೌಜಿಯಾ ಬಳಿ ಕೇವಲ ನಂಬಿಯವರ ದೂರವಾಣಿ ಸಂಖ್ಯೆ ಇತ್ತು ಎಂಬ ಏಕೈಕ ಕಾರಣಕ್ಕೆ ಇಸ್ರೊಗೆ ಸಂಬಂಧಿಸಿದ ಕೆಲವು ರಹಸ್ಯ ಮಾಹಿತಿಗಳೂ ಅವರ ಬಳಿ ಇದ್ದವು, ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದೆಲ್ಲ ಪೊಲೀಸರು ಆರೋಪಿಸಿದರು. ಯಾವಾಗ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತೋ ಆಗ ಸತ್ಯ ನಿಧಾನವಾಗಿ ಹೊರಬರಲಾರಂಭಿಸಿತು. ಇಡೀ ಪ್ರಕರಣವನ್ನು ಪಿತೂರಿ ಎಂದು ಹೇಳಿದ  ಸಿಬಿಐ, ಈ ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ವರದಿಯನ್ನು 1996ರಲ್ಲಿ ದೇಶದ ಮುಂದಿಟ್ಟಿತು. ಬಳಿಕ, 1998ರಲ್ಲಿ ನಂಬಿ ನಾರಾಯಣನ್ರನ್ನು ನಿರ್ದೋಷಿ ಎಂದು ಸುಪ್ರೀಮ್ ಕೋರ್ಟ್ ಹೇಳಿತಲ್ಲದೇ, ಇಡೀ ಪ್ರಕರಣವನ್ನೇ ವಜಾಗೊಳಿಸಿತು. ಅಲ್ಲದೇ ನಂಬಿ ನಾರಾಯಣನ್ರಿಗೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2001ರಲ್ಲಿ ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು.

              ಆದರೆ ಈ ಪಿತೂರಿ ನಡೆಸಿದವರಾರು? ನಾರಾಯಣನ್ ಮೇಲಿದ್ದದ್ದು ಕೋಟ್ಯಂತರ ರೂಪಾಯಿಯನ್ನು ಪಡಕೊಂಡ ಆರೋಪ. ಹಾಗಿದ್ದರೆ, ತನಿಖಾಧಿಕಾರಿಗಳು ಅವರ ಮನೆಯ ಮೇಲೆ ದಾಳಿ ಮಾಡಬೇಕಿತ್ತಲ್ಲವೇ? ದಾಖಲೆಗಳನ್ನು ವಶಪಡಿಸಿಕೊಳ್ಳ ಬೇಕಿತ್ತಲ್ಲವೇ? ಅವರ ಬ್ಯಾಂಕ್ ಖಾತೆಯ ತಪಾಸಣೆ ನಡೆಸಬೇಕಿತ್ತಲ್ಲವೇ? ಇವಾವುದನ್ನೂ ಮಾಡದೇ ಕೇವಲ ದೇಶದ್ರೋಹಿ ಎನ್ನುತ್ತಾ ತಿರುಗಿದ್ದುದರ ಹಿಂದಿನ ಗುಟ್ಟೇನು? ವಿಚಾರಣೆಯ ಹೆಸರಲ್ಲಿ ಮಾಧ್ಯಮಗಳಲ್ಲಿ ದಿನಂಪ್ರತಿ ಬರುತ್ತಿದ್ದ ಸುದ್ದಿಗಳ ಹಿಂದೆ ಯಾರಿದ್ದರು? ಅವರ ಉದ್ದೇಶ ಏನಿತ್ತು? ಇಸ್ರೋದ ವರ್ಚಸ್ಸನ್ನು ಕೆಡಿಸಲು, ಬಾಹ್ಯಾಕಾಶ ವಿಭಾಗದಲ್ಲಿ ಇಸ್ರೋದ ಸಾಧನೆಗೆ ಅಡ್ಡಿಪಡಿಸಲು ಯಾವುದೋ ಶಕ್ತಿ ಈ ಎಲ್ಲ ಪಿತೂರಿಗಳನ್ನು ನಡೆಸಿರಬಾರದೇಕೆ? ನಂಬಿ ನಾರಾಯಣನ್  ಮೇಲೆ ಸುಳ್ಳು ಕೇಸು ಹಾಕಿದ, ದೇಶದ್ರೋಹಿ ಎಂದು ಜನಸಾಮಾನ್ಯರು ನಂಬುವಂಥ ವಾತಾವರಣವನ್ನು ಸೃಷ್ಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬಿಐ ಹೇಳಿತ್ತಲ್ಲವೇ? ಆದರೆ ಆ ಫೈಲು ಕಾಣೆಯಾಯಿತೇಕೆ? ಇದಕ್ಕೆಲ್ಲಾ ಉತ್ತರವನ್ನು ಬ್ರಿಯಾನ್ ಹಾರ್ವೆ ಅವರ "ರಶ್ಯ ಇನ್ ಸ್ಪೇಸ್: ದಿ ಫೇಲ್ಡ್ ಫ್ರಂಟಿಯರ್" (Russia in Space: The Failed Frontier; 2001)  ಪುಸ್ತಕ ನೀಡುತ್ತದೆ. ನಂಬಿ ನಾರಾಯಣನ್ ಪ್ರಕರಣವು ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ ಹೆಣೆದ ನಾಟಕವಾಗಿತ್ತೆಂದು ಅವರು ಹೇಳುತ್ತಾರೆ.

               ಆಗಿನ ಕೇಂದ್ರ ಕಾಂಗ್ರೆಸ್ ಸರ್ಕಾರ ಹಾಗೂ ಕೇರಳದ ಯುಡಿಎಫ್ ಸರ್ಕಾರ ನಂಬಿ ನಾರಾಯಣನ್ ವಿರುದ್ಧ ಅನ್ಯಾಯವಾಗಿ ಹೇರಲಾದ ಆರೋಪಗಳ ಕುರಿತು ತುಟಿ ಪಿಟಕ್ಕೆನ್ನಲಿಲ್ಲ. ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಐಬಿಯ ಮುಖ್ಯಸ್ಥರಾಗಿದ್ದ ಆರ್.ಬಿ.ಶ್ರೀಕುಮಾರ್ ಹಾಗೂ ಐಬಿಯ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್. ಮೊದಲು ಗುಜರಾತಿನಲ್ಲಿ ಡಿಜಿಪಿಯಾಗಿದ್ದ ಶ್ರೀಕುಮಾರ್ ಗೋಧ್ರೋತ್ತರ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರ ಇತ್ತೆಂದು ಆರೋಪಿಸಿ ಸೆಕ್ಯುಲರುಗಳ ಪ್ರಿಯತಮನಾಗಿದ್ದ ವ್ಯಕ್ತಿ. ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ 1999ರಲ್ಲಿ ಸಲ್ಲಿಸಿದ ಪರಿಹಾರ ಕುರಿತ ಅರ್ಜಿಯಲ್ಲಿ ನಂಬಿ ನಾರಾಯಣನ್ ಇವರಿಬ್ಬರ ಹೆಸರನ್ನೂ ಉಲ್ಲೇಖಿಸಿದ್ದರೂ, ಸಿಬಿಐ ಇವರೀರ್ವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರೂ ಕೇಂದ್ರ ಸರ್ಕಾರ ಮಾತ್ರ ಅವರ ಕೂದಲೂ ಕೊಂಕಿಸಲಿಲ್ಲ. ಬೇಹುಗಾರಿಕಾ ಪ್ರಕರಣದಲ್ಲಿ ಅಮೆರಿಕದ ಸಂಶಯಾಸ್ಪದ ಪಾತ್ರವಿದೆ ಎಂಬುದನ್ನು ತನ್ನನ್ನು ಭೇಟಿಯಾದ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ನಂಬಿ. ‘ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳಿದ ಮೊದಲ ಮುಖ್ಯಮಂತ್ರಿಯೆಂದರೆ ನರೇಂದ್ರ ಮೋದಿ. ಪ್ರಕರಣದ ಸಂದರ್ಭದಲ್ಲಿ ಆಗಿಹೋದ ಕೇರಳದ ಯಾವೊಬ್ಬ ಮುಖ್ಯಮಂತ್ರಿಯೂ ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳುವ ಸೌಜನ್ಯವನ್ನೂ ತೋರಲಿಲ್ಲ’ ಎನ್ನುತ್ತಾರೆ ನಾರಾಯಣನ್. ಇಸ್ರೊ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳ ಶಾಮೀಲು ಇದ್ದೇ ಇದೆ ಎನ್ನುವುದು ಕಣ್ಣಿಗೆ ರಾಚುವ ಸತ್ಯ.

              “ಆರೋಗ್ಯವಂತರಾಗಿದ್ದ, 52 ವರ್ಷದ ವಿಕ್ರಮ್ ಸಾರಾಭಾಯಿ 1971ರಲ್ಲಿ ಕೋವಲಮ್ ಹೋಟಲೊಂದರಲ್ಲಿ ಗಾಢ ನಿದ್ದೆಯಲ್ಲೇ ಮರಣವನ್ನಪ್ಪಿದಾಗ ದೇಹದ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಲಿಲ್ಲ ಎನ್ನುವುದು ಇಂದಿಗೂ ಬಿಡಿಸಲಾಗದ ಒಗಟು.  ವಿಕಾಸ್ ಎಂಜಿನ್'ಗೆ ನಾನು ಆ ಹೆಸರನ್ನಿಟ್ಟದ್ದು ವಿಕ್ರಮ್ ಸಾರಾಭಾಯ್ ನೆನಪಿಗೇ ಹೊರತು ಎಲ್ಲರೂ ಅಂದುಕೊಂಡಂತೆ ಅಭಿವೃದ್ಧಿ ಅರ್ಥದಲ್ಲಲ್ಲ. ಅದಕ್ಕೂ ಐದು ವರ್ಷಗಳ ಹಿಂದೆ ಹೋಮಿ ಜೆ. ಭಾಭಾ ವಿಮಾನ ಅಪಘಾತದಲ್ಲಿ ಮಡಿದಾಗ ಅವರ ಶವವೂ ಸಿಕ್ಕಲಿಲ್ಲ, ಬ್ಲಾಕ್ ಬಾಕ್ಸ್ ಕೂಡಾ ಸಿಕ್ಕಲಿಲ್ಲ ಏಕೆ?” ಎಂದು ತಮ್ಮ ಆತ್ಮಕಥನದಲ್ಲಿ ಸಿಐಎಯತ್ತ ಬೊಟ್ಟು ಮಾಡುತ್ತಾರೆ ನಂಬಿ. ಇಸ್ರೊ ಬೇಹುಗಾರಿಕಾ ಪ್ರಕರಣ ಹೇಗೆ ಮತ್ತು ಏಕೆ ನಡೆಯಿತು? ನಡೆಸಿದವರು ಯಾರು? ಎನ್ನುವುದನ್ನು ನಂಬಿಯವರ ಪುಸ್ತಕ ಹೇಳುತ್ತದೆ. ಭಾರತ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬಾರದು ಎನ್ನುವ ಕಾರಣಕ್ಕಾಗಿ ಈ ಪ್ರಕರಣವನ್ನು ಅಮೇರಿಕಾದ ನಿರ್ದೇಶನದಂತೆ ಹುಟ್ಟು ಹಾಕಲಾಯಿತು. ಇದರಿಂದಾಗಿ ಕ್ರಯೋಜೆನಿಕ್ ಇಂಜಿನ್ ಉಪಯೋಗಿಸಿ ಉಡ್ಡಯನ ನಡೆಸುವಲ್ಲಿ ಭಾರತ ಹದಿಮೂರು ವರ್ಷಗಳಷ್ಟು ಕಾಲ ನಿಧಾನಿಸಬೇಕಾಯಿತು. ಅಮೇರಿಕಾಕ್ಕೆ ಬೇಕಾದುದು ಅದೇ. ಆದರೆ ಭಾರತಕ್ಕೆ ತಂತ್ರಜ್ಞಾನವನ್ನು ಕೊಡಲೊಪ್ಪದ, ಅನ್ಯರು ಕೊಡಲು ತಯಾರಾಗಿದ್ದಾಗ ಅಡ್ಡ ಬಂದ, ಸ್ವತಂತ್ರವಾಗಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಿ ಯಶಸ್ವಿಯಾದಾಗ ಇಂತಹ ಪ್ರಕರಣ ಹುಟ್ಟು ಹಾಕಿ ಭಾರತದ ಅಂತಃಸತ್ತ್ವವನ್ನೇ ಉಡುಗಿಸಲು ಪ್ರಯತ್ನಿಸಿದ ಅಮೇರಿಕಾದ 96 ಉಪಗ್ರಹಗಳನ್ನು ಮೊನ್ನೆ ಮೊನ್ನೆ ಏಕಕಾಲಕ್ಕೆ ಉಡಾಯಿಸಲು ಭಾರತದ ಕ್ರಯೋಜೆನಿಕ್ ಎಂಜಿನ್ನೇ ಬೇಕಾಯಿತು ಎನ್ನುವುದು ಮಾತ್ರ ಚೋದ್ಯ. ಭಾರತದ ಅಣು ವಿಜ್ಞಾನಿಗಳ, ಇಂಜಿನಿಯರುಗಳ ಹತ್ಯೆಯ ಹಿಂದೆ ಇದ್ದುದೂ ಅಮೇರಿಕಾದ ಸಿಐಎ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ!

               ಅಮೇರೀಕಾವೇನೋ ತನ್ನ ಸಾರ್ವಭೌಮತ್ವಕ್ಕೆ ಯಾರೂ ಅಡ್ಡ ಇರಬಾರದೆಂಬ ಲೆಕ್ಕಾಚಾರ ಹೂಡಿ ಇದನ್ನೆಲ್ಲಾ ಮಾಡಿತು ಎಂದು ಸುಲಭವಾಗಿ ಆರೋಪಿಸಿಬಿಡಬಹುದು. ಆದರೆ ನಮ್ಮ ಸರಕಾರ, ನಮ್ಮ ಗುಪ್ತಚರ ಇಲಾಖೆಗಳೇನು ಮಕಾಡೆ ಮಲಗಿದ್ದವೆ? ಇವರ ಸಹಕಾರವಿಲ್ಲದೆ ಇಂತಹುದು ಆಗುವುದಾದರೂ ಹೇಗೆ ಸಾಧ್ಯ? ದೇಶದ ರಕ್ಷಣೆ, ಪರಮಾಧಿಕಾರದ ವಿಷಯದಲ್ಲೂ ಸ್ಥಿರವಾಗಿ ನಿಲ್ಲದೆ ಯಾರೋ ಎಸೆಯುವ ಎಂಜಲ ಕಾಸಿಗೆ ಬಾಯೊಡ್ಡುವ ಇಂತಹ ಹೀನ ಜೀವಿಗಳನ್ನು ಈ ದೇಶ ಆಯಕಟ್ಟಿನ ಸ್ಥಾನದಲ್ಲಿ ಕಾಣುವಂತಾದ್ದು ದೇಶದ ದೌರ್ಭಾಗ್ಯವಲ್ಲದೆ ಇನ್ನೇನು? ಮಾತೆತ್ತಿದರೆ ಸಮಾನತೆ, ತಳಸ್ಪರ್ಷಿ ಪ್ರಜ್ಞೆ ಎಂದೆಲ್ಲಾ ಬುರುಡೆ ಬಿಡುವ ಕಮ್ಯೂನಿಸ್ಟರಿಗೆ ವಿಜ್ಞಾನಿಗೂ ಸಮಾನತೆ, ನ್ಯಾಯ ಸಿಗಬೇಕು ಎಂದನ್ನಿಸಲಿಲ್ಲವೇ? ಸದಾ ಅಮೇರಿಕಾವನ್ನು ಬಹಿರಂಗವಾಗಿ ದ್ವೇಷಿಸುವ ಕಮ್ಯೂನಿಷ್ಟರು ಅದೇ ಅಮೇರಿಕಾ ಉಂಡೆಸೆದ ಎಲೆಯನ್ನು ನಕ್ಕಿದ್ದು ಅಧಿಕಾರ ದಾಹದಿಂದಲೇ ಅಲ್ಲವೇ? ದೇಶಕ್ಕಿಂತಲೂ ಪರಿವಾರವೊಂದರ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವ ಕಾಂಗ್ರೆಸ್ಸಿಗರಿಗೆ ಈ ಘಟನೆಗಳಿಂದ, ಪರಮಾಣು ಒಪ್ಪಂದದಿಂದ ಎಷ್ಟು ಹಣ ಸಂದಾಯವಾಗಿರಬಹುದು? ಹಲವಾರು ವರ್ಷಗಳು ಸರಿದು ಹೋದರೂ ದಡ ಕಾಣದೇ ಉಳಿದ ಕಾವೇರಿ ಇಂಜಿನ್ ಕಾಂಗ್ರೆಸ್ಸಿಗರಿಗೆ ಬಸಿದು ಕೊಟ್ಟ ಬಳುವಳಿಯಾದರೂ ಏನು? ದಶಕಗಳ ಪರ್ಯಂತ ಕಾರ್ಯನಿರ್ವಹಿಸಿದರೂ ಸ್ವಂತ ವಿಮಾನ ತಯಾರಿಸಲಾಗದ ಎಚ್.ಎ.ಎಲ್.ನಲ್ಲಿ ಕಾಣದ "ಕೈ"ಗಳು ಆಡಿದ ಆಟಗಳು ಎಂದು ಬಿತ್ತರಗೊಂಡಾವು? ಆ ಆಟದಲ್ಲಿ ಪಡೆದ ಬಲಿಗಳೆಷ್ಟು? ಪುಣ್ಯವಶಾತ್ ದೇಶ ಸದ್ಯ ಸಮರ್ಥನೊಬ್ಬನ ಆಡಳಿತಕ್ಕೊಳಪಟ್ಟಿದೆ. ಇಲ್ಲದಿದ್ದಲ್ಲಿ ಆ "ವಂಶ"ದ ಹೊಟ್ಟೆಪಾಡಿಗಾಗಿ ಎಷ್ಟು ವಿಜ್ಞಾನಿಗಳ "ಆತ್ಮಹತ್ಯೆ"ಯಾಗುತ್ತಿತ್ತೋ?

ಸೋಮವಾರ, ಫೆಬ್ರವರಿ 6, 2017

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ


          ಕಮ್ಯೂನಿಸ್ಟರ ಗೂಂಡಾಗಿರಿಗೆ ಕೊನೆ ಮೊದಲಿಲ್ಲ. ಜನವರಿ 31ರಂದು ಕೇರಳದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು  ವಿ.ಮುರಳೀಧರನ್ ನೇತೃತ್ವದಲ್ಲಿ ನಡೆಯುತಿದ್ದ ನಿರಾಹಾರ ಸತ್ಯಾಗ್ರಹಕ್ಕೆ ಪೊಲೀಸರನ್ನು ಛೂ ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದೆ ಕಮ್ಯೂನಿಸ್ಟ್ ಸರಕಾರ. ಕೆ.ಸುರೇಂದ್ರನ್ ಸೇರಿದಂತೆ ಹಲವಾರು ಕಾರ್ಯಕರ್ತರು ಗಂಭೀರ ಗಾಯಕ್ಕೊಳಗಾಗಿದ್ದರೆ, ಕೇರಳ ಬಿಜೆಪಿ ಉಪಾಧ್ಯಕ್ಷ ಡಾ. ಪಿ.ಪಿ ವಾವಾರ ಎಡಕಣ್ಣಿನ ದೃಷ್ಟಿಯೇ ಹೋಗಿದೆ. ಇದೇನೂ ಹೊಸದಾದ ವಿಷಯವಲ್ಲ. ಅಧಿಕಾರದಲ್ಲಿ ಇದ್ದಾಗಲೂ ಇಲ್ಲದಿದ್ದಾಗಲೂ ಕಮ್ಯೂನಿಸ್ಟರ ಕ್ರೌರ್ಯಕ್ಕೆ ಮಿತಿಯೇ ಇಲ್ಲ. ಕಮ್ಯೂನಿಸ್ಟ್ ಎಂದಾಗ ನೆನಪಾಗುವುದು ಸಮಾನತೆ, ಸಮಾಜವಾದಗಳಲ್ಲ; ಗೂಂಡಾಗಿರಿ, ಹಲ್ಲೆ, ಕೊಲೆ! ಜನವರಿ 31 ಎಂದಾಗ ಕಮ್ಯೂನಿಸ್ಟರು ಇತಿಹಾಸದ ಗರ್ಭದಲ್ಲೇ ಹೂತು ಹಾಕಿದ ಮೂವತ್ತೆಂಟು ವರ್ಷಗಳ ಹಿಂದಿನ ಭಯಾನಕ ಘಟನೆಯೊಂದು ನೆನಪಿಗೆ ಬರುತ್ತಿದೆ.


              1979ರ ಜನವರಿ 31. ಮತಾಂಧ ಮುಸ್ಲಿಮರಿಂದ ಅತ್ಯಾಚಾರ-ಕೊಲೆಗೊಳಗಾಗುವುದರಿಂದ ತಪ್ಪಿಸಿಕೊಂಡು ನೆಮ್ಮದಿಯ ನೆಲೆ ಕಂಡುಕೊಳ್ಳುವುದಕ್ಕಾಗಿ ಸಾವಿರಾರು ಹಿಂದೂಗಳು ಭಾರತವನ್ನು ಹಿಂದೂರಾಷ್ಟ್ರವೆಂದೂ, ಅಲ್ಲಿ ತಮಗೆ ರಕ್ಷಣೆ ದೊರೆಯುವುದೆಂದು ಭ್ರಮಿಸಿ ಭಾರತದೊಳಕ್ಕೆ ಪ್ರವೇಶಿಸಿದ್ದರು. ಅದರಲ್ಲೊಂದು ಗುಂಪು ಬಂಗಾಳದೊಳಕ್ಕೆ ಬಂದಿತ್ತು. ಪಾಪ ಅವರಿಗೇನು ಗೊತ್ತಿತ್ತು ಅಲ್ಲಿರುವುದು, ಆಳುತ್ತಿರುವುದು ಹಿಂದೂ ಹೆಸರಿನ ರಾಕ್ಷಸರೆಂದು? ಬರೋಬ್ಬರಿ 1700 ಹಿಂದೂಗಳನ್ನು ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿಬಸುವಿನ ಆಜ್ಞೆಯಂತೆ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹುರಿದು ಮುಕ್ಕಿ ತಿಂದವು! ನೂರಕ್ಕೂ ಹೆಚ್ಚು ಮಹಿಳೆಯರನ್ನು ಸರಣಿ ಅತ್ಯಾಚಾರ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಮರುದಿವಸ ಸರಸ್ವತಿ ಪೂಜೆಗೆ ತಮ್ಮ ಗುಡಿಸಲಿನಲ್ಲಿ ಕುಳಿತು ತಯಾರಿ ನಡೆಸುತ್ತಿದ್ದ 15 ಮಕ್ಕಳು ಕಮ್ಯೂನಿಸ್ಟ್ ಗೂಂಡಾಗಳು ಹಾಗೂ ಪೊಲೀಸರಿಗೆ ಬಲಿಯಾದರು. ಅವರ ರಾಕ್ಷಸ ಕೃತ್ಯಕ್ಕೆ ಸರಸ್ವತಿಯ ವಿಗ್ರಹ ಪುಡಿಪುಡಿಯಾಗಿ ಬಿತ್ತು. 4128 ಹಿಂದೂ ಪರಿವಾರಗಳು ನೆಲೆ ಹುಡುಕಿ ಹೋಗುವ ಭರದಲ್ಲಿ ಹಸಿವು, ಬಾಯಾರಿಕೆ, ಬಳಲಿಕೆ ಅದಕ್ಕಿಂತಲೂ ಹೆಚ್ಚಾಗಿ ಕಮ್ಯೂನಿಸ್ಟ್ ರಾಕ್ಷಸರ ಬೆಂಕಿಯ ಬಲೆಗೆ ಬಿದ್ದು ಕರಟಿ ಹೋದವು. ಕಾಶಿಪುರ, ಕುಮಿರ್ ಮರಿ, ಮರೀಚ್ ಝಾಪಿಗಳಲ್ಲಿ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹಿಂದೂಗಳನ್ನು ಹುರಿದು ಮುಕ್ಕಿ ತಿಂದು ಆನಂದದ ಕೇಕೆ ಹಾಕಿದವು. ಕಮ್ಯೂನಿಸ್ಟ್ ಪಕ್ಷದಿಂದ ಸಂಭ್ರಮಾಚರಣೆಯೂ ನಡೆಯಿತು. ಜ್ಯೋತಿಬಸು ಸರಕಾರ ಸುದ್ಧಿ ಮಾಧ್ಯಮಗಳು, ವಿರೋಧ ಪಕ್ಷಗಳು, ಸಂಘಟನೆಗಳನ್ನು ಹತ್ಯಾಕಾಂಡ ನಡೆದ ಜಾಗಗಳಿಗೆ ಹೋಗದಂತೆ ನಿರ್ಬಂಧಿಸಿತು. ಪ್ರಪಂಚದ ಎಲ್ಲಾ ನಿರಾಶ್ರಿತರಿಗೆ ಅನ್ನಾಶ್ರಯ ಕೊಟ್ಟ ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಆಶ್ರಯ ಸಿಗಲಿಲ್ಲ. ಕಮ್ಯೂನಿಸ್ಟರ ಕರಾಳಹಸ್ತಕ್ಕೆ ಸಿಲುಕಿ ಅವರು ನಲುಗಿ ಹೋದರು. ಸಮಾನತೆ, ಮಾನವತಾವಾದದ ಬೊಗಳೆ ಬಿಡುವ ಕಮ್ಯೂನಿಸ್ಟರ ಹೃದಯದೊಳಗೆ ಮಾನವತೆಯೇ ಮರೆಯಾಗಿತ್ತು. ಅಲ್ಲಾ, ಮಾನವತೆ ಅವರಲ್ಲಿ ಇದ್ದದ್ದಾದರೂ ಎಂದು?

                 1947-48ರಲ್ಲಿ ಇತಿಹಾಸದ ಅತಿ ದೊಡ್ಡ ವಲಸೆಯನ್ನು ಬರಮಾಡಿಕೊಂಡಿದ್ದ ಭಾರತ 1970-71ರಲ್ಲಿ ಅಂತಹುದೇ ಮತ್ತೊಂದು ಕರುಣಾಜನಕ ದೃಶ್ಯವನ್ನು ಕಾಣಬೇಕಾಯಿತು. ಪೂರ್ವ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನೀಯರು ಹಾಗೂ ಅಧಿಕಾರಿ ವರ್ಗ ಬಂಗಾಳಿ ಮಾತಾಡುವ ಜನರನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಆರಂಭಿಸಿದ್ದರು. ಬಾಂಗ್ಲಾವನ್ನು ಸ್ವತಂತ್ರಗೊಳಿಸಿ ಇಂದಿರಾ ಗಾಂಧಿಯೇನೋ ದುರ್ಗೆಯಾದರು. ಆದರೆ ಬಾಂಗ್ಲಾದಲ್ಲಿದ್ದ ಹಿಂದೂಗಳಿಗೆ ಆ ದುರ್ಗೆ ಒಲಿಯಲೇ ಇಲ್ಲ. ಅವರು ಇತ್ತ ಭಾರತಕ್ಕೆ ಅಶ್ರಯ ಬೇಡಿ ಬಂದಾಗಲೂ ಆ ದುರ್ಗೆಯ ಕೃಪಾಕಟಾಕ್ಷಕ್ಕೆ ಅವರು ಒಳಗಾಗಲಿಲ್ಲ. ಮುಸ್ಲಿಮರ ಮತಾಂಧತೆಗೆ ಬೆದರಿ ಮಾನ, ಪ್ರಾಣ ಉಳಿಸಿಕೊಳ್ಳಲು ಬಾಂಗ್ಲಾದಿಂದ ಭಾರತಕ್ಕೆ ಓಡಿ ಬಂದಿದ್ದ ಹಿಂದೂಗಳು ಗಡಿರಾಜ್ಯಗಳಾದ ಅಸ್ಸಾಂ, ಬಂಗಾಳ ಹಾಗೂ ಒರಿಸ್ಸಾಗಳಲ್ಲಿ ನೆಲೆಕಂಡುಕೊಳ್ಳಲು ಯತ್ನಿಸಿದ್ದರು. ನಿರಾಶ್ರಿತರ ಸಂಖ್ಯೆ ವಿಪರೀತವಾದಾಗ ಒರಿಸ್ಸಾ ಹಾಗೂ ಈಗಿನ ಛತ್ತೀಸ್ ಗಢದಲ್ಲಿರುವ ಅರಣ್ಯ ಪ್ರದೇಶ ದಂಡಕಾರಣ್ಯದಲ್ಲಿ ಆಶ್ರಯ ಕಲ್ಪಿಸಲು ಕೇಂದ್ರ ಸರಕಾರ ಯತ್ನಿಸಿತು. ಅವರ ಕುಂದುಕೊರತೆಗಳ ನಿವಾರಣೆಗೆಂದೇ ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿಯನ್ನು ಸ್ಥಾಪಿಸಿತು. ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿ ನಿರಾಶ್ರಿತರಿಗೆ ಕೃಷಿ ಭೂಮಿ ಒದಗಿಸುವ ಭರವಸೆಯನ್ನೇನೋ ನೀಡಿತು. ಕೆಲವರು ಪಡೆದರೂ ಕೂಡಾ. ಆದರೆ ಫಲವತ್ತಾದ ಗಂಗಾ ತಟದಲ್ಲಿ ಕೃಷಿ ಮಾಡಿಯಷ್ಟೇ ಗೊತ್ತಿದ್ದವರನ್ನು ಏಕಾಏಕಿ ಅರಣ್ಯಕ್ಕೆ ತಂದು ಬಿಟ್ಟು ಕೃಷಿ ಮಾಡಿ ಎಂದರೆ ಏನಾದೀತು? ಅಲ್ಲಿನ ವಿಪರೀತ ಹವಾಗುಣ ಹಾಗೂ ದುರಂತ ಪರಿಸ್ಥಿತಿಗಳು ಅವರನ್ನು ಬಂಗಾಳಕ್ಕೇ ಮರಳುವಂತೆ ಮಾಡಿದವು. ಅಲ್ಲಿಂದ ಕೆಲ ನಿರಾಶ್ರಿತರು ವಾಪಸ್ ಬಂಗಾಳಕ್ಕೇ ಮರಳಿ ಸುಂದರ್ ಬನ್, ಮರೀಚ್ ಝಾಪಿಗಳಲ್ಲಿ ನೆಲೆಕಂಡುಕೊಂಡರು. ನಿರಾಶ್ರಿತರ ದಂಡಕಾರಣ್ಯದಿಂದ ಬಂಗಾಳದೆಡೆಗಿನ ಈ ವಲಸೆಯನ್ನು ಆಗಷ್ಟೇ ಬಂಗಾಳದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಮ್ಯೂನಿಸ್ಟರೇ ಬಹಿರಂಗವಾಗಿ ಬೆಂಬಲಿಸಿದರು. ತನ್ನ ಕಾಮ್ರೇಡುಗಳನ್ನು ದಂಡಕಾರಣ್ಯಕ್ಕೆ ಕಳುಹಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸುಂದರ್ ಬನ್ ಸೇರಿದಂತೆ ಉಳಿದ ದ್ವೀಪಗಳಲ್ಲಿ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ನಂಬಿಸಿ ನಿರಾಶ್ರಿತರ ಓಟು ಗಿಟ್ಟಿಸಿ ಅಧಿಕಾರಕ್ಕೂ ಬಂದರು. ಹೀಗೆ 1978ರ ಸುಮಾರಿಗೆ ಕಮ್ಯೂನಿಸ್ಟರ ಮಾತನ್ನು ನಂಬಿ ದಂಡಕಾರಣ್ಯ ಹಾಗೂ ಇತರ ಭಾಗಗಳಿಂದ ಬಂಗಾಳಕ್ಕೆ ಬಂದಿಳಿದ ನಿರಾಶ್ರಿತರ ಸಂಖ್ಯೆ ಸುಮಾರು ಒಂದೂವರೆ ಲಕ್ಷ!

                  ತಮಗೆ ಸಿಕ್ಕ ಖಾಸಗಿ ಹಾಗೂ ಸರಕಾರಿ ಜಾಗಗಳಲ್ಲಿ ಕೊಳಕು ನಾರುವ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳತೊಡಗಿದ ಈ ಮುಗ್ಧರು ವರ್ಷಗಳ ಪರ್ಯಂತ ಕಾದರೂ ಮುಖ್ಯಮಂತ್ರಿ ಜ್ಯೋತಿಬಸು ಖುದ್ದಾಗಿ ಭರವಸೆ ನೀಡಿದ್ದ ಉದ್ಯೋಗ, ಭೂಮಿ, ಶಿಕ್ಷಣಾದಿ ವ್ಯವಸ್ಥೆಗಳು ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿದವು. 1978ರ ಆದಿಯಲ್ಲಿ ಕೆಲ ನಿರಾಶ್ರಿತರು ಮರೀಚ್ ಝಾಪಿಗೆ ತೆರಳಿ ಅಲ್ಲಿದ್ದ ಕಾಡು ಕಡಿದು, ಹೆದ್ದೆರೆಗಳಿಂದ ದ್ವೀಪದ ರಕ್ಷಣೆಗಾಗಿ ತಡೆಗೋಡೆಗಳನ್ನೂ, ಮಳೆ ನೀರು ಶೇಖರಿಸುವ ಹಾಗೂ ಮೀನುಗಾರಿಕೆಯ ಸಲುವಾಗಿ ಕೆರೆಗಳನ್ನೂ, ಕೃಷಿ ಭೂಮಿ ಹಾಗೂ ಮನೆಗಳನ್ನು ನಿರ್ಮಿಸಿಕೊಂಡರು. ಇವರನ್ನೇ ಅನುಸರಿಸಿ ಇನ್ನಷ್ಟು ನಿರಾಶ್ರಿತರು ಅದೇ ಸ್ಥಳಕ್ಕೆ ಬಂದು ವಾಸಿಸತೊಡಗಿದರು. ಹೀಗೆ 1978ರ ಜೂನ್ ವರೆಗೆ ಮರೀಚ್ ಝಾಪಿನಲ್ಲಿ ಬಂದಿಳಿದ ನಿರಾಶ್ರಿತರ ಸಂಖ್ಯೆ 30ಸಾವಿರ! ಅಲ್ಲಿ 250 ಕಿಮೀ ಉದ್ದದ ದ್ವೀಪ ತೀರ ನಿರ್ಮಿಸಲ್ಪಟ್ಟು ಬೀಡಿ, ಕಾಲ್ಚೀಲ, ಮರ ಉದ್ಯಮಗಳೂ, ಮೀನುಗಾರಿಕೆ, ಸಹಕಾರಿ ಕೃಷಿಯೂ ಆರಂಭವಾಯಿತು. ಪುರುಷರು ಮೀನು ಹಾಗೂ ಉತ್ಪನ್ನಗಳನ್ನು, ಮಹಿಳೆಯರು ತಾವು ನೇಯ್ದ ಉಡುಪುಗಳನ್ನು ಹತ್ತಿರದ ಕುಮಿರ್ಮರಿ ದ್ವೀಪಗಳಲ್ಲಿ ಮಾರಲಾರಂಭಿಸಿದರು. ಆ ದ್ವೀಪದ ಉತ್ಪನ್ನಗಳು ಸನಿಹದ ಪ್ರದೇಶಗಳಲ್ಲಿ ಮನೆ ಮಾತಾದವು. ಕೆಲವರು ಸ್ವಯಂಪ್ರೇರಿತರಾಗಿ ಅಧ್ಯಾಪನಕ್ಕೂ ತೊಡಗಿಸಿಕೊಂಡರು. ಅಲ್ಲೊಂದು ಮಾಧ್ಯಮಿಕ ಶಾಲೆಯೂ ಆರಂಭವಾಯಿತು. ರಸ್ತೆಗಳು, ಡಿಸ್ಯಾಲಿನೇಷನ್ ಪ್ಲಾಂಟುಗಳು ನಿರ್ಮಾಣವಾದವು. ಇವೆಲ್ಲವೂ ಯಾವುದೇ ಸರಕಾರ ಅಥವಾ ಹೊರಗಿನವರ ಹಂಗಿಲ್ಲದೆ ಆ ನಿರಾಶ್ರಿತರಿಂದಲೇ ಆದ ಸಾಧನೆಗಳು. ಅಲ್ಲೊಂದು ಸ್ವಾವಲಂಬಿ ಬದುಕೇ ನಿರ್ಮಾಣಗೊಂಡಿತ್ತು.

                ಇತ್ತ ಚುನಾವಣೆ ಗೆಲ್ಲಲು ನಿರಾಶ್ರಿತರನ್ನು ಬಳಸಿಕೊಂಡಿದ್ದ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ಕೇಜ್ರಿವಾಲ್ ಟರ್ನ್ ತೆಗೆದುಕೊಂಡು ಬಿಟ್ಟರು. ಬಂಗಾಳದಲ್ಲಿ ಇನ್ನು ಮುಂದೆ ನಿರಾಶ್ರಿತರಿಗೆ ಜಾಗವಿಲ್ಲವೆಂದೂ, ಯಾವುದೇ ನಿರಾಶ್ರಿತರನ್ನು ಇರಗೊಡುವುದಿಲ್ಲವೆಂದೂ, ದಂಡಕಾರಣ್ಯದಿಂದ ಬಂದವರೆಲ್ಲಾ ಮರಳಿ ಅಲ್ಲಿಗೇ ತೆರಳಬೇಕೆಂದು ಕಮ್ಯೂನಿಸ್ಟ್ ಸರಕಾರ ಘೋಷಿಸಿತು. ಇದಕ್ಕಾಗಿ ಪೊಲೀಸ್ ಪಡೆಯನ್ನೂ ಸುವ್ಯವಸ್ಥಿತವಾಗಿ ಬಳಸಿಕೊಂಡಿತು ಕಮ್ಯೂನಿಸ್ಟ್ ಪಡೆ. ನಿರಾಶ್ರಿತರನ್ನು ಪಟ್ಟಿ ಮಾಡಿ ಬಲವಂತವಾಗಿ ಅವರನ್ನು ರೈಲುಗಳಲ್ಲಿ ತುರುಕಿ ಉಳಿದ ರಾಜ್ಯಗಳಿಗೆ ರವಾನಿಸಲಾಯಿತು. ಅವರಲ್ಲಿದ್ದ ಅತ್ಯಲ್ಪ ಸಂಪನ್ಮೂಲಗಳನ್ನು ಲೂಟಿ ಮಾಡಿ, ಅವರ ದಾಖಲೆಪತ್ರಗಳನ್ನು ನಾಶಮಾಡಿ ಹೊಡೆದು ಬಡಿದು ಹತ್ತಾರು ಸಾವಿರ ನಿರಾಶ್ರಿತರನ್ನು ಬಂಗಾಳದಿಂದ ಹೊರದಬ್ಬಲಾಯಿತು. ವಿಭಜನೆಯ ಹೊಸ್ತಿಲಲ್ಲಿ ಮುಸ್ಲಿಮರು ಹಿಂದೂಗಳ ಧನ-ಮಾನ-ಪ್ರಾಣಗಳನ್ನು ಲೂಟಿ ಮಾಡಿ ಪಾಕಿಸ್ತಾನದಿಂದ ಭಾರತಕ್ಕೆ ಓಡಿಸಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಮ್ಯೂನಿಸ್ಟರು ಮಾನ-ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಅತ್ತು ಕರೆದು ದೋಚಿ ಓಡಿಸಿಬಿಟ್ಟರು! ಯಾರನ್ನು ಆಶ್ರಯ ಕೊಡುತ್ತೇವೆ, ಬನ್ನಿ, ನಮಗೇ ಮತ ನೀಡಿ ಎಂದು ಆಸೆ ಹುಟ್ಟಿಸಿ ಕರೆಸಿಕೊಂಡಿದ್ದರೋ ಅಂತಹವರನ್ನು ತಮ್ಮ ಕಾರ್ಯ ಸಾಧನೆಯಾದ ಕೂಡಲೇ ಅಟ್ಟಾಡಿಸಿ ಓಡಿಸಿಬಿಟ್ಟರು.

                  ಬಂಗಾಳ ಬಿಟ್ಟು ತೆರಳಬೇಕೆಂದು ದಬಾಯಿಸಿದ ಕಮ್ಯೂನಿಸ್ಟ್ ಗೂಂಡಾಗಳನ್ನು ಮರೀಚ್ ಝಾಪಿಯ ಜನ ಓಡಿಸಿಬಿಟ್ಟರು. ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾದಾಗ ನೀಚತನದ ಪ್ರಯೋಗಕ್ಕೆ ಇಳಿದರು ಕಮ್ಯೂನಿಸ್ಟರು.ಮರೀಚ್ ಝಾಪಿಯ ಜನರ ಯಾವುದೇ ಉತ್ಪನ್ನಗಳನ್ನು ಕೊಳ್ಳದಂತೆ  ಉಳಿದ ಪ್ರದೇಶಗಳ ಜನರನ್ನು ಬೆದರಿಸಿದರು. ಅವರೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಬಂಧಿಸಿದರು. ಮಾತ್ರವಲ್ಲ ಮರೀಚ್ ಝಾಪಿ ಜನರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡತೊಡಗಿದರು. ಅವರು ಹಿಂದೂ ಮೂಲಭೂತವಾದಿಗಳೆಂದು, ಮುಸಲ್ಮಾನರನ್ನೂ ಓಡಿಸುವುದೇ ಅವರ ಉದ್ದೇಶವೆಂದು ಕಥೆ ಕಟ್ಟಿದರು. ಹೊರಗಿನಿಂದ ಅವರಿಗೆ ಧನಸಹಾಯವಾಗುತ್ತಿದೆಯೆಂದೂ, ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದಾರೆಂದೂ, ಭಾರತದ ವಿರುದ್ಧ ದಂಗೆ ಏಳಲು ಅವರು ಸನ್ನದ್ಧರಾಗುತ್ತಿದ್ದಾರೆಂದು ಪುಂಖಾನುಪುಂಖವಾಗಿ ಲೇಖನಗಳನ್ನೂ ಬರೆದರು. ಮರೀಚ್ ಝಾಪಿಯ ನಿರಾಶ್ರಿತ ಹಿಂದೂಗಳ ಮೇಲಿನ ಇಂತಹ ಆಧಾರರಹಿತ ಆಪಾದನೆಗಳು ಇಂದಿಗೂ ಕಮ್ಯೂನಿಸ್ಟರ ಲೇಖನಗಳಲ್ಲಿ ಕಾಣಸಿಗುತ್ತವೆ. ಒಟ್ಟಾರೆ ಕಪೋಲಕಲ್ಪಿತ ಕಥೆಗಳನ್ನು ಹಬ್ಬಿಸಿ ಜನರನ್ನು ದಂಗೆಯೆಬ್ಬಿಸಿ ಆ ನಿರಾಶ್ರಿತರನ್ನು ಅಲ್ಲಿಂದ ಓಡಿಸುವುದೇ ಅವರ ಉದ್ದೇಶವಾಗಿತ್ತು. ಆದರೆ ಇಂತಹ ಯಾವುದೇ ಬೆದರಿಕೆಗೆ ಮರೀಚ್ ಝಾಪಿಯ ಜನ ಹೆದರಲಿಲ್ಲ. ಇದು ಕಮ್ಯೂನಿಸ್ಟರನ್ನು ಮತ್ತಷ್ಟು ಕೆರಳಿಸಿತು. ಆಗ ಅವರು ನೇರ ಕಾರ್ಯಾಚರಣೆಗಿಳಿದರು. ಆ ನಿರಾಶ್ರಿತರ ಉತ್ಪನ್ನಗಳನ್ನು ಬಲವಂತವಾಗಿ ಕಸಿದುಕೊಂಡರು. ರಾತ್ರೋರಾತ್ರಿ ಆ ದ್ವೀಪದಲ್ಲಿ ಬಂದಿಳಿದು ಅವರ ದೋಣಿಗಳು, ಸಾಕುಪ್ರಾಣಿಗಳ ಕೊಟ್ಟಿಗೆಗಳು, ವಾಹನಗಳು, ಉದ್ಯಮಗಳನ್ನು ನಾಶಪಡಿಸಿದರು. ಅದಕ್ಕೂ ಬಗ್ಗದಿದ್ದಾಗ ಆರ್ಥಿಕ ದಿಗ್ಬಂಧನವನ್ನು ಹೇರಿದರು. ಪೊಲೀಸರನ್ನು ನಿಲ್ಲಿಸಿ ಆ ನಿರಾಶ್ರಿತ ಜನರು ಉಳಿದ ಪ್ರದೇಶಗಳಿಗೆ ಹೋಗದಂತೆ ನಿರ್ಬಂಧಿಸಿಬಿಟ್ಟರು. ಕೆಲವೇ ದಿವಸಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರು, ಆಹಾರಗಳು ಮುಗಿದಾಗ ಜನವರಿ 29ರ ರಾತ್ರಿ ಇಪ್ಪತ್ತು ಜನ ನಿರಾಶ್ರಿತರು ಪೊಲೀಸರ ಕಣ್ಣು ತಪ್ಪಿಸಿ ಕುಮಿರ್ಮರಿಗೆ ತೆರಳಿ ಆಹಾರವನ್ನು ಸಂಗ್ರಹಿಸಿಕೊಂಡರು. ಆವತ್ತೇನೋ ಆ ಪ್ರಯತ್ನ ಯಶಸ್ವಿಯಾಯಿತು. ಮರುದಿವಸ ಅದೇ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದರು. ಕಮ್ಯೂನಿಸ್ಟ್ ಪ್ರೇರಿತ ಪೊಲೀಸರು ಅವರಲ್ಲಿದ್ದ ಹಣ, ಆಹಾರಸಾಮಗ್ರಿಗಳನ್ನು ಕಿತ್ತುಕೊಂಡು, ಪ್ರತಿಭಟಿಸಿದಾಗ ಗುಂಡುಹಾರಿಸಿ ಕೊಂದು ಶವಗಳನ್ನು ಮರೀಚ್ ಝಾಪಿ ಹಾಗೂ ಕುಮಿರ್ಮರಿ ನಡುವೆ ಇದ್ದ ಕೋರಂಕಾಳಿ ನದಿಗೆ ಎಸೆದುಬಿಟ್ಟರು.

                ಮಧ್ಯಾಹ್ನದ ಹೊತ್ತಿಗೆ ವಿಷಯ ತಿಳಿದ ಮರೀಚ್ ಝಾಪಿ ಜನತೆ ಬೆಚ್ಚಿಬಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ಎಲ್ಲರನ್ನೂ ಒಟ್ಟು ಸೇರಿಸಿ ಅಲ್ಲಿಂದ ಸುರಕ್ಷಿತವಾಗಿ ಪಾರಾಗುವುದರ ಕುರಿತು ಚರ್ಚಿಸಿತು. ಪೊಲೀಸರು ಸ್ತ್ರೀಯರಿಗೆ ಯಾವುದೇ ಹಾನಿ ಮಾಡಲಾರರು ಎಂದು ಊಹಿಸಿ ಮೊದಲು ಸ್ತ್ರೀಯರನ್ನು ಅಲ್ಲಿಂದ ರವಾನಿಸುವುದೆಂದು ಅವರು ತೀರ್ಮಾನಿಸಿದರು. ಆದರೆ ಅವರ ಊಹೆ ತಪ್ಪಾಗಿತ್ತು. ಕಮ್ಯೂನಿಸ್ಟರ ಕೈಕೆಳಗಿನ ಪೊಲೀಸರ ಬುದ್ಧಿಯೂ ಕಮ್ಯೂನಿಸ್ಟರಂತೆಯೇ ಬದಲಾಗಿತ್ತು ಎನ್ನುವುದನ್ನು ಅವರು ತಿಳಿಯುವುದಾದರೂ ಹೇಗೆ? ಹದಿನಾರು ಜನ ಮಹಿಳೆಯರಿದ್ದ ಮೊದಲ ತಂಡದ ದೋಣಿಯನ್ನು ಅಡ್ಡಗಟ್ಟಿ, ನೀರಿಗೆ ಬಿದ್ದು ಪಾರಾಗಲೂ ಯತ್ನಿಸಿದ ಮಹಿಳೆಯನ್ನು ಗುಂಡು ಹಾರಿಸಿ ಕೊಂದಿತು ಪೊಲೀಸ್ ಪಡೆ. ಉಳಿದ ಮಹಿಳೆಯರ ಮೃತದೇಹ ಮರುದಿವಸ ಪಕ್ಕದ ಕಾಡಲ್ಲಿ ಸಿಕ್ಕಿತು. ಆ ಹತಭಾಗ್ಯೆಯರು ಪೊಲೀಸ್ ಹಾಗೂ ಕಮ್ಯೂನಿಸ್ಟ್ ಗೂಂಡಾಗಳಿಂದ ಭೀಕರ ಸರಣಿ ಅತ್ಯಾಚಾರಕ್ಕೊಳಗಾಗಿದ್ದರು.

                ಜನವರಿ 31ರ ರಾತ್ರಿ ಬಂಗಾಳದ ಪೊಲೀಸರಿಗೆ ಅಲ್ಲಿದ್ದವರನ್ನು ತೆರವುಗೊಳಿಸಿ ಎನ್ನುವ ಆದೇಶ ಬಂತು. ಪೊಲೀಸರೊಂದಿಗೆ ಸೇರಿದ ಕಮ್ಯೂನಿಸ್ಟ್ ಗೂಂಡಾ ಪಡೆ ಹಿಂದೂಗಳ ಮೇಲೆ ಮುಗಿ ಬಿತ್ತು. ಬಹುತೇಕರು ಗುಂಡಿಗೆ ಬಲಿಯಾದರು. ಜೀವ ಉಳಿಸಿಕೊಳ್ಳಲು ನದಿಗೆ ಹಾರಿದವರನ್ನು ಮೋಟಾರು ದೋಣಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಲ್ಲಲಾಯಿತು. ಗುಂಡಿನ ಭೋರ್ಗರೆತಕ್ಕೆ ಹೆದರಿ ಜೋಪಡಿಗಳಲ್ಲಿ ಅವಿತು ಅಳುತ್ತಾ ಕೂತಿದ್ದ ಮಕ್ಕಳನ್ನು ಹೊರಗೆಳೆದು ಕತ್ತರಿಸಲಾಯಿತು. ವಿರೋಧಿಯನ್ನು ಜೀವಂತ ಹೂತು ಹಾಕುತ್ತಿದ್ದ ತಮ್ಮ ಎಂದಿನ ವೈಖರಿಯಂತೆ ಕಮ್ಯೂನಿಸ್ಟರು ಈ ಹೃದಯವಿದ್ರಾವಕ ಘಟನೆಯನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿದರು. ತಮ್ಮ "ದ ಹಂಗ್ರಿ ಟೈಡ್" ನಲ್ಲಿ ಕಮ್ಯೂನಿಸ್ಟರು ಹೂತು ಹಾಕಿದ ಈ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಅಮಿತಾಬ್ ಘೋಷ್.ಈ ಘಟನೆಯ ತನಿಖೆಯೂ ಆಗಲಿಲ್ಲ. ತನಿಖೆಗೊಳಪಡಿಸುತ್ತೇನೆ ಎಂದು ಆಶ್ವಾಸನೆಯಿತ್ತು ಅಧಿಕಾರಕ್ಕೇರಿದ ಮಮತಾ ದೀದಿ ಕಮ್ಯೂನಿಸ್ಟರನ್ನೂ ನಾಚಿಸುವಂತೆ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಮರೀಚ್ ಝಾಪಿ ಹತ್ಯಾಕಾಂಡದಲ್ಲಿ ಅದೃಷ್ಟವಶಾತ್(ಅಥವಾ ದುರದೃಷ್ಟವಶಾತ್) ಬದುಕುಳಿದವರು, ಬದುಕಿದ್ದೂ ಸತ್ತಂತಿರುವ ಈ ರಾಜಕಾರಣಿಗಳನ್ನು ನೋಡಿ ಬೇಸತ್ತು ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.