ಪುಟಗಳು

ಸೋಮವಾರ, ಫೆಬ್ರವರಿ 6, 2017

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ


          ಕಮ್ಯೂನಿಸ್ಟರ ಗೂಂಡಾಗಿರಿಗೆ ಕೊನೆ ಮೊದಲಿಲ್ಲ. ಜನವರಿ 31ರಂದು ಕೇರಳದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು  ವಿ.ಮುರಳೀಧರನ್ ನೇತೃತ್ವದಲ್ಲಿ ನಡೆಯುತಿದ್ದ ನಿರಾಹಾರ ಸತ್ಯಾಗ್ರಹಕ್ಕೆ ಪೊಲೀಸರನ್ನು ಛೂ ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದೆ ಕಮ್ಯೂನಿಸ್ಟ್ ಸರಕಾರ. ಕೆ.ಸುರೇಂದ್ರನ್ ಸೇರಿದಂತೆ ಹಲವಾರು ಕಾರ್ಯಕರ್ತರು ಗಂಭೀರ ಗಾಯಕ್ಕೊಳಗಾಗಿದ್ದರೆ, ಕೇರಳ ಬಿಜೆಪಿ ಉಪಾಧ್ಯಕ್ಷ ಡಾ. ಪಿ.ಪಿ ವಾವಾರ ಎಡಕಣ್ಣಿನ ದೃಷ್ಟಿಯೇ ಹೋಗಿದೆ. ಇದೇನೂ ಹೊಸದಾದ ವಿಷಯವಲ್ಲ. ಅಧಿಕಾರದಲ್ಲಿ ಇದ್ದಾಗಲೂ ಇಲ್ಲದಿದ್ದಾಗಲೂ ಕಮ್ಯೂನಿಸ್ಟರ ಕ್ರೌರ್ಯಕ್ಕೆ ಮಿತಿಯೇ ಇಲ್ಲ. ಕಮ್ಯೂನಿಸ್ಟ್ ಎಂದಾಗ ನೆನಪಾಗುವುದು ಸಮಾನತೆ, ಸಮಾಜವಾದಗಳಲ್ಲ; ಗೂಂಡಾಗಿರಿ, ಹಲ್ಲೆ, ಕೊಲೆ! ಜನವರಿ 31 ಎಂದಾಗ ಕಮ್ಯೂನಿಸ್ಟರು ಇತಿಹಾಸದ ಗರ್ಭದಲ್ಲೇ ಹೂತು ಹಾಕಿದ ಮೂವತ್ತೆಂಟು ವರ್ಷಗಳ ಹಿಂದಿನ ಭಯಾನಕ ಘಟನೆಯೊಂದು ನೆನಪಿಗೆ ಬರುತ್ತಿದೆ.


              1979ರ ಜನವರಿ 31. ಮತಾಂಧ ಮುಸ್ಲಿಮರಿಂದ ಅತ್ಯಾಚಾರ-ಕೊಲೆಗೊಳಗಾಗುವುದರಿಂದ ತಪ್ಪಿಸಿಕೊಂಡು ನೆಮ್ಮದಿಯ ನೆಲೆ ಕಂಡುಕೊಳ್ಳುವುದಕ್ಕಾಗಿ ಸಾವಿರಾರು ಹಿಂದೂಗಳು ಭಾರತವನ್ನು ಹಿಂದೂರಾಷ್ಟ್ರವೆಂದೂ, ಅಲ್ಲಿ ತಮಗೆ ರಕ್ಷಣೆ ದೊರೆಯುವುದೆಂದು ಭ್ರಮಿಸಿ ಭಾರತದೊಳಕ್ಕೆ ಪ್ರವೇಶಿಸಿದ್ದರು. ಅದರಲ್ಲೊಂದು ಗುಂಪು ಬಂಗಾಳದೊಳಕ್ಕೆ ಬಂದಿತ್ತು. ಪಾಪ ಅವರಿಗೇನು ಗೊತ್ತಿತ್ತು ಅಲ್ಲಿರುವುದು, ಆಳುತ್ತಿರುವುದು ಹಿಂದೂ ಹೆಸರಿನ ರಾಕ್ಷಸರೆಂದು? ಬರೋಬ್ಬರಿ 1700 ಹಿಂದೂಗಳನ್ನು ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿಬಸುವಿನ ಆಜ್ಞೆಯಂತೆ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹುರಿದು ಮುಕ್ಕಿ ತಿಂದವು! ನೂರಕ್ಕೂ ಹೆಚ್ಚು ಮಹಿಳೆಯರನ್ನು ಸರಣಿ ಅತ್ಯಾಚಾರ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಮರುದಿವಸ ಸರಸ್ವತಿ ಪೂಜೆಗೆ ತಮ್ಮ ಗುಡಿಸಲಿನಲ್ಲಿ ಕುಳಿತು ತಯಾರಿ ನಡೆಸುತ್ತಿದ್ದ 15 ಮಕ್ಕಳು ಕಮ್ಯೂನಿಸ್ಟ್ ಗೂಂಡಾಗಳು ಹಾಗೂ ಪೊಲೀಸರಿಗೆ ಬಲಿಯಾದರು. ಅವರ ರಾಕ್ಷಸ ಕೃತ್ಯಕ್ಕೆ ಸರಸ್ವತಿಯ ವಿಗ್ರಹ ಪುಡಿಪುಡಿಯಾಗಿ ಬಿತ್ತು. 4128 ಹಿಂದೂ ಪರಿವಾರಗಳು ನೆಲೆ ಹುಡುಕಿ ಹೋಗುವ ಭರದಲ್ಲಿ ಹಸಿವು, ಬಾಯಾರಿಕೆ, ಬಳಲಿಕೆ ಅದಕ್ಕಿಂತಲೂ ಹೆಚ್ಚಾಗಿ ಕಮ್ಯೂನಿಸ್ಟ್ ರಾಕ್ಷಸರ ಬೆಂಕಿಯ ಬಲೆಗೆ ಬಿದ್ದು ಕರಟಿ ಹೋದವು. ಕಾಶಿಪುರ, ಕುಮಿರ್ ಮರಿ, ಮರೀಚ್ ಝಾಪಿಗಳಲ್ಲಿ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹಿಂದೂಗಳನ್ನು ಹುರಿದು ಮುಕ್ಕಿ ತಿಂದು ಆನಂದದ ಕೇಕೆ ಹಾಕಿದವು. ಕಮ್ಯೂನಿಸ್ಟ್ ಪಕ್ಷದಿಂದ ಸಂಭ್ರಮಾಚರಣೆಯೂ ನಡೆಯಿತು. ಜ್ಯೋತಿಬಸು ಸರಕಾರ ಸುದ್ಧಿ ಮಾಧ್ಯಮಗಳು, ವಿರೋಧ ಪಕ್ಷಗಳು, ಸಂಘಟನೆಗಳನ್ನು ಹತ್ಯಾಕಾಂಡ ನಡೆದ ಜಾಗಗಳಿಗೆ ಹೋಗದಂತೆ ನಿರ್ಬಂಧಿಸಿತು. ಪ್ರಪಂಚದ ಎಲ್ಲಾ ನಿರಾಶ್ರಿತರಿಗೆ ಅನ್ನಾಶ್ರಯ ಕೊಟ್ಟ ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಆಶ್ರಯ ಸಿಗಲಿಲ್ಲ. ಕಮ್ಯೂನಿಸ್ಟರ ಕರಾಳಹಸ್ತಕ್ಕೆ ಸಿಲುಕಿ ಅವರು ನಲುಗಿ ಹೋದರು. ಸಮಾನತೆ, ಮಾನವತಾವಾದದ ಬೊಗಳೆ ಬಿಡುವ ಕಮ್ಯೂನಿಸ್ಟರ ಹೃದಯದೊಳಗೆ ಮಾನವತೆಯೇ ಮರೆಯಾಗಿತ್ತು. ಅಲ್ಲಾ, ಮಾನವತೆ ಅವರಲ್ಲಿ ಇದ್ದದ್ದಾದರೂ ಎಂದು?

                 1947-48ರಲ್ಲಿ ಇತಿಹಾಸದ ಅತಿ ದೊಡ್ಡ ವಲಸೆಯನ್ನು ಬರಮಾಡಿಕೊಂಡಿದ್ದ ಭಾರತ 1970-71ರಲ್ಲಿ ಅಂತಹುದೇ ಮತ್ತೊಂದು ಕರುಣಾಜನಕ ದೃಶ್ಯವನ್ನು ಕಾಣಬೇಕಾಯಿತು. ಪೂರ್ವ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನೀಯರು ಹಾಗೂ ಅಧಿಕಾರಿ ವರ್ಗ ಬಂಗಾಳಿ ಮಾತಾಡುವ ಜನರನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಆರಂಭಿಸಿದ್ದರು. ಬಾಂಗ್ಲಾವನ್ನು ಸ್ವತಂತ್ರಗೊಳಿಸಿ ಇಂದಿರಾ ಗಾಂಧಿಯೇನೋ ದುರ್ಗೆಯಾದರು. ಆದರೆ ಬಾಂಗ್ಲಾದಲ್ಲಿದ್ದ ಹಿಂದೂಗಳಿಗೆ ಆ ದುರ್ಗೆ ಒಲಿಯಲೇ ಇಲ್ಲ. ಅವರು ಇತ್ತ ಭಾರತಕ್ಕೆ ಅಶ್ರಯ ಬೇಡಿ ಬಂದಾಗಲೂ ಆ ದುರ್ಗೆಯ ಕೃಪಾಕಟಾಕ್ಷಕ್ಕೆ ಅವರು ಒಳಗಾಗಲಿಲ್ಲ. ಮುಸ್ಲಿಮರ ಮತಾಂಧತೆಗೆ ಬೆದರಿ ಮಾನ, ಪ್ರಾಣ ಉಳಿಸಿಕೊಳ್ಳಲು ಬಾಂಗ್ಲಾದಿಂದ ಭಾರತಕ್ಕೆ ಓಡಿ ಬಂದಿದ್ದ ಹಿಂದೂಗಳು ಗಡಿರಾಜ್ಯಗಳಾದ ಅಸ್ಸಾಂ, ಬಂಗಾಳ ಹಾಗೂ ಒರಿಸ್ಸಾಗಳಲ್ಲಿ ನೆಲೆಕಂಡುಕೊಳ್ಳಲು ಯತ್ನಿಸಿದ್ದರು. ನಿರಾಶ್ರಿತರ ಸಂಖ್ಯೆ ವಿಪರೀತವಾದಾಗ ಒರಿಸ್ಸಾ ಹಾಗೂ ಈಗಿನ ಛತ್ತೀಸ್ ಗಢದಲ್ಲಿರುವ ಅರಣ್ಯ ಪ್ರದೇಶ ದಂಡಕಾರಣ್ಯದಲ್ಲಿ ಆಶ್ರಯ ಕಲ್ಪಿಸಲು ಕೇಂದ್ರ ಸರಕಾರ ಯತ್ನಿಸಿತು. ಅವರ ಕುಂದುಕೊರತೆಗಳ ನಿವಾರಣೆಗೆಂದೇ ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿಯನ್ನು ಸ್ಥಾಪಿಸಿತು. ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿ ನಿರಾಶ್ರಿತರಿಗೆ ಕೃಷಿ ಭೂಮಿ ಒದಗಿಸುವ ಭರವಸೆಯನ್ನೇನೋ ನೀಡಿತು. ಕೆಲವರು ಪಡೆದರೂ ಕೂಡಾ. ಆದರೆ ಫಲವತ್ತಾದ ಗಂಗಾ ತಟದಲ್ಲಿ ಕೃಷಿ ಮಾಡಿಯಷ್ಟೇ ಗೊತ್ತಿದ್ದವರನ್ನು ಏಕಾಏಕಿ ಅರಣ್ಯಕ್ಕೆ ತಂದು ಬಿಟ್ಟು ಕೃಷಿ ಮಾಡಿ ಎಂದರೆ ಏನಾದೀತು? ಅಲ್ಲಿನ ವಿಪರೀತ ಹವಾಗುಣ ಹಾಗೂ ದುರಂತ ಪರಿಸ್ಥಿತಿಗಳು ಅವರನ್ನು ಬಂಗಾಳಕ್ಕೇ ಮರಳುವಂತೆ ಮಾಡಿದವು. ಅಲ್ಲಿಂದ ಕೆಲ ನಿರಾಶ್ರಿತರು ವಾಪಸ್ ಬಂಗಾಳಕ್ಕೇ ಮರಳಿ ಸುಂದರ್ ಬನ್, ಮರೀಚ್ ಝಾಪಿಗಳಲ್ಲಿ ನೆಲೆಕಂಡುಕೊಂಡರು. ನಿರಾಶ್ರಿತರ ದಂಡಕಾರಣ್ಯದಿಂದ ಬಂಗಾಳದೆಡೆಗಿನ ಈ ವಲಸೆಯನ್ನು ಆಗಷ್ಟೇ ಬಂಗಾಳದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಮ್ಯೂನಿಸ್ಟರೇ ಬಹಿರಂಗವಾಗಿ ಬೆಂಬಲಿಸಿದರು. ತನ್ನ ಕಾಮ್ರೇಡುಗಳನ್ನು ದಂಡಕಾರಣ್ಯಕ್ಕೆ ಕಳುಹಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸುಂದರ್ ಬನ್ ಸೇರಿದಂತೆ ಉಳಿದ ದ್ವೀಪಗಳಲ್ಲಿ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ನಂಬಿಸಿ ನಿರಾಶ್ರಿತರ ಓಟು ಗಿಟ್ಟಿಸಿ ಅಧಿಕಾರಕ್ಕೂ ಬಂದರು. ಹೀಗೆ 1978ರ ಸುಮಾರಿಗೆ ಕಮ್ಯೂನಿಸ್ಟರ ಮಾತನ್ನು ನಂಬಿ ದಂಡಕಾರಣ್ಯ ಹಾಗೂ ಇತರ ಭಾಗಗಳಿಂದ ಬಂಗಾಳಕ್ಕೆ ಬಂದಿಳಿದ ನಿರಾಶ್ರಿತರ ಸಂಖ್ಯೆ ಸುಮಾರು ಒಂದೂವರೆ ಲಕ್ಷ!

                  ತಮಗೆ ಸಿಕ್ಕ ಖಾಸಗಿ ಹಾಗೂ ಸರಕಾರಿ ಜಾಗಗಳಲ್ಲಿ ಕೊಳಕು ನಾರುವ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳತೊಡಗಿದ ಈ ಮುಗ್ಧರು ವರ್ಷಗಳ ಪರ್ಯಂತ ಕಾದರೂ ಮುಖ್ಯಮಂತ್ರಿ ಜ್ಯೋತಿಬಸು ಖುದ್ದಾಗಿ ಭರವಸೆ ನೀಡಿದ್ದ ಉದ್ಯೋಗ, ಭೂಮಿ, ಶಿಕ್ಷಣಾದಿ ವ್ಯವಸ್ಥೆಗಳು ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿದವು. 1978ರ ಆದಿಯಲ್ಲಿ ಕೆಲ ನಿರಾಶ್ರಿತರು ಮರೀಚ್ ಝಾಪಿಗೆ ತೆರಳಿ ಅಲ್ಲಿದ್ದ ಕಾಡು ಕಡಿದು, ಹೆದ್ದೆರೆಗಳಿಂದ ದ್ವೀಪದ ರಕ್ಷಣೆಗಾಗಿ ತಡೆಗೋಡೆಗಳನ್ನೂ, ಮಳೆ ನೀರು ಶೇಖರಿಸುವ ಹಾಗೂ ಮೀನುಗಾರಿಕೆಯ ಸಲುವಾಗಿ ಕೆರೆಗಳನ್ನೂ, ಕೃಷಿ ಭೂಮಿ ಹಾಗೂ ಮನೆಗಳನ್ನು ನಿರ್ಮಿಸಿಕೊಂಡರು. ಇವರನ್ನೇ ಅನುಸರಿಸಿ ಇನ್ನಷ್ಟು ನಿರಾಶ್ರಿತರು ಅದೇ ಸ್ಥಳಕ್ಕೆ ಬಂದು ವಾಸಿಸತೊಡಗಿದರು. ಹೀಗೆ 1978ರ ಜೂನ್ ವರೆಗೆ ಮರೀಚ್ ಝಾಪಿನಲ್ಲಿ ಬಂದಿಳಿದ ನಿರಾಶ್ರಿತರ ಸಂಖ್ಯೆ 30ಸಾವಿರ! ಅಲ್ಲಿ 250 ಕಿಮೀ ಉದ್ದದ ದ್ವೀಪ ತೀರ ನಿರ್ಮಿಸಲ್ಪಟ್ಟು ಬೀಡಿ, ಕಾಲ್ಚೀಲ, ಮರ ಉದ್ಯಮಗಳೂ, ಮೀನುಗಾರಿಕೆ, ಸಹಕಾರಿ ಕೃಷಿಯೂ ಆರಂಭವಾಯಿತು. ಪುರುಷರು ಮೀನು ಹಾಗೂ ಉತ್ಪನ್ನಗಳನ್ನು, ಮಹಿಳೆಯರು ತಾವು ನೇಯ್ದ ಉಡುಪುಗಳನ್ನು ಹತ್ತಿರದ ಕುಮಿರ್ಮರಿ ದ್ವೀಪಗಳಲ್ಲಿ ಮಾರಲಾರಂಭಿಸಿದರು. ಆ ದ್ವೀಪದ ಉತ್ಪನ್ನಗಳು ಸನಿಹದ ಪ್ರದೇಶಗಳಲ್ಲಿ ಮನೆ ಮಾತಾದವು. ಕೆಲವರು ಸ್ವಯಂಪ್ರೇರಿತರಾಗಿ ಅಧ್ಯಾಪನಕ್ಕೂ ತೊಡಗಿಸಿಕೊಂಡರು. ಅಲ್ಲೊಂದು ಮಾಧ್ಯಮಿಕ ಶಾಲೆಯೂ ಆರಂಭವಾಯಿತು. ರಸ್ತೆಗಳು, ಡಿಸ್ಯಾಲಿನೇಷನ್ ಪ್ಲಾಂಟುಗಳು ನಿರ್ಮಾಣವಾದವು. ಇವೆಲ್ಲವೂ ಯಾವುದೇ ಸರಕಾರ ಅಥವಾ ಹೊರಗಿನವರ ಹಂಗಿಲ್ಲದೆ ಆ ನಿರಾಶ್ರಿತರಿಂದಲೇ ಆದ ಸಾಧನೆಗಳು. ಅಲ್ಲೊಂದು ಸ್ವಾವಲಂಬಿ ಬದುಕೇ ನಿರ್ಮಾಣಗೊಂಡಿತ್ತು.

                ಇತ್ತ ಚುನಾವಣೆ ಗೆಲ್ಲಲು ನಿರಾಶ್ರಿತರನ್ನು ಬಳಸಿಕೊಂಡಿದ್ದ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ಕೇಜ್ರಿವಾಲ್ ಟರ್ನ್ ತೆಗೆದುಕೊಂಡು ಬಿಟ್ಟರು. ಬಂಗಾಳದಲ್ಲಿ ಇನ್ನು ಮುಂದೆ ನಿರಾಶ್ರಿತರಿಗೆ ಜಾಗವಿಲ್ಲವೆಂದೂ, ಯಾವುದೇ ನಿರಾಶ್ರಿತರನ್ನು ಇರಗೊಡುವುದಿಲ್ಲವೆಂದೂ, ದಂಡಕಾರಣ್ಯದಿಂದ ಬಂದವರೆಲ್ಲಾ ಮರಳಿ ಅಲ್ಲಿಗೇ ತೆರಳಬೇಕೆಂದು ಕಮ್ಯೂನಿಸ್ಟ್ ಸರಕಾರ ಘೋಷಿಸಿತು. ಇದಕ್ಕಾಗಿ ಪೊಲೀಸ್ ಪಡೆಯನ್ನೂ ಸುವ್ಯವಸ್ಥಿತವಾಗಿ ಬಳಸಿಕೊಂಡಿತು ಕಮ್ಯೂನಿಸ್ಟ್ ಪಡೆ. ನಿರಾಶ್ರಿತರನ್ನು ಪಟ್ಟಿ ಮಾಡಿ ಬಲವಂತವಾಗಿ ಅವರನ್ನು ರೈಲುಗಳಲ್ಲಿ ತುರುಕಿ ಉಳಿದ ರಾಜ್ಯಗಳಿಗೆ ರವಾನಿಸಲಾಯಿತು. ಅವರಲ್ಲಿದ್ದ ಅತ್ಯಲ್ಪ ಸಂಪನ್ಮೂಲಗಳನ್ನು ಲೂಟಿ ಮಾಡಿ, ಅವರ ದಾಖಲೆಪತ್ರಗಳನ್ನು ನಾಶಮಾಡಿ ಹೊಡೆದು ಬಡಿದು ಹತ್ತಾರು ಸಾವಿರ ನಿರಾಶ್ರಿತರನ್ನು ಬಂಗಾಳದಿಂದ ಹೊರದಬ್ಬಲಾಯಿತು. ವಿಭಜನೆಯ ಹೊಸ್ತಿಲಲ್ಲಿ ಮುಸ್ಲಿಮರು ಹಿಂದೂಗಳ ಧನ-ಮಾನ-ಪ್ರಾಣಗಳನ್ನು ಲೂಟಿ ಮಾಡಿ ಪಾಕಿಸ್ತಾನದಿಂದ ಭಾರತಕ್ಕೆ ಓಡಿಸಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಮ್ಯೂನಿಸ್ಟರು ಮಾನ-ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಅತ್ತು ಕರೆದು ದೋಚಿ ಓಡಿಸಿಬಿಟ್ಟರು! ಯಾರನ್ನು ಆಶ್ರಯ ಕೊಡುತ್ತೇವೆ, ಬನ್ನಿ, ನಮಗೇ ಮತ ನೀಡಿ ಎಂದು ಆಸೆ ಹುಟ್ಟಿಸಿ ಕರೆಸಿಕೊಂಡಿದ್ದರೋ ಅಂತಹವರನ್ನು ತಮ್ಮ ಕಾರ್ಯ ಸಾಧನೆಯಾದ ಕೂಡಲೇ ಅಟ್ಟಾಡಿಸಿ ಓಡಿಸಿಬಿಟ್ಟರು.

                  ಬಂಗಾಳ ಬಿಟ್ಟು ತೆರಳಬೇಕೆಂದು ದಬಾಯಿಸಿದ ಕಮ್ಯೂನಿಸ್ಟ್ ಗೂಂಡಾಗಳನ್ನು ಮರೀಚ್ ಝಾಪಿಯ ಜನ ಓಡಿಸಿಬಿಟ್ಟರು. ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾದಾಗ ನೀಚತನದ ಪ್ರಯೋಗಕ್ಕೆ ಇಳಿದರು ಕಮ್ಯೂನಿಸ್ಟರು.ಮರೀಚ್ ಝಾಪಿಯ ಜನರ ಯಾವುದೇ ಉತ್ಪನ್ನಗಳನ್ನು ಕೊಳ್ಳದಂತೆ  ಉಳಿದ ಪ್ರದೇಶಗಳ ಜನರನ್ನು ಬೆದರಿಸಿದರು. ಅವರೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಬಂಧಿಸಿದರು. ಮಾತ್ರವಲ್ಲ ಮರೀಚ್ ಝಾಪಿ ಜನರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡತೊಡಗಿದರು. ಅವರು ಹಿಂದೂ ಮೂಲಭೂತವಾದಿಗಳೆಂದು, ಮುಸಲ್ಮಾನರನ್ನೂ ಓಡಿಸುವುದೇ ಅವರ ಉದ್ದೇಶವೆಂದು ಕಥೆ ಕಟ್ಟಿದರು. ಹೊರಗಿನಿಂದ ಅವರಿಗೆ ಧನಸಹಾಯವಾಗುತ್ತಿದೆಯೆಂದೂ, ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದಾರೆಂದೂ, ಭಾರತದ ವಿರುದ್ಧ ದಂಗೆ ಏಳಲು ಅವರು ಸನ್ನದ್ಧರಾಗುತ್ತಿದ್ದಾರೆಂದು ಪುಂಖಾನುಪುಂಖವಾಗಿ ಲೇಖನಗಳನ್ನೂ ಬರೆದರು. ಮರೀಚ್ ಝಾಪಿಯ ನಿರಾಶ್ರಿತ ಹಿಂದೂಗಳ ಮೇಲಿನ ಇಂತಹ ಆಧಾರರಹಿತ ಆಪಾದನೆಗಳು ಇಂದಿಗೂ ಕಮ್ಯೂನಿಸ್ಟರ ಲೇಖನಗಳಲ್ಲಿ ಕಾಣಸಿಗುತ್ತವೆ. ಒಟ್ಟಾರೆ ಕಪೋಲಕಲ್ಪಿತ ಕಥೆಗಳನ್ನು ಹಬ್ಬಿಸಿ ಜನರನ್ನು ದಂಗೆಯೆಬ್ಬಿಸಿ ಆ ನಿರಾಶ್ರಿತರನ್ನು ಅಲ್ಲಿಂದ ಓಡಿಸುವುದೇ ಅವರ ಉದ್ದೇಶವಾಗಿತ್ತು. ಆದರೆ ಇಂತಹ ಯಾವುದೇ ಬೆದರಿಕೆಗೆ ಮರೀಚ್ ಝಾಪಿಯ ಜನ ಹೆದರಲಿಲ್ಲ. ಇದು ಕಮ್ಯೂನಿಸ್ಟರನ್ನು ಮತ್ತಷ್ಟು ಕೆರಳಿಸಿತು. ಆಗ ಅವರು ನೇರ ಕಾರ್ಯಾಚರಣೆಗಿಳಿದರು. ಆ ನಿರಾಶ್ರಿತರ ಉತ್ಪನ್ನಗಳನ್ನು ಬಲವಂತವಾಗಿ ಕಸಿದುಕೊಂಡರು. ರಾತ್ರೋರಾತ್ರಿ ಆ ದ್ವೀಪದಲ್ಲಿ ಬಂದಿಳಿದು ಅವರ ದೋಣಿಗಳು, ಸಾಕುಪ್ರಾಣಿಗಳ ಕೊಟ್ಟಿಗೆಗಳು, ವಾಹನಗಳು, ಉದ್ಯಮಗಳನ್ನು ನಾಶಪಡಿಸಿದರು. ಅದಕ್ಕೂ ಬಗ್ಗದಿದ್ದಾಗ ಆರ್ಥಿಕ ದಿಗ್ಬಂಧನವನ್ನು ಹೇರಿದರು. ಪೊಲೀಸರನ್ನು ನಿಲ್ಲಿಸಿ ಆ ನಿರಾಶ್ರಿತ ಜನರು ಉಳಿದ ಪ್ರದೇಶಗಳಿಗೆ ಹೋಗದಂತೆ ನಿರ್ಬಂಧಿಸಿಬಿಟ್ಟರು. ಕೆಲವೇ ದಿವಸಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರು, ಆಹಾರಗಳು ಮುಗಿದಾಗ ಜನವರಿ 29ರ ರಾತ್ರಿ ಇಪ್ಪತ್ತು ಜನ ನಿರಾಶ್ರಿತರು ಪೊಲೀಸರ ಕಣ್ಣು ತಪ್ಪಿಸಿ ಕುಮಿರ್ಮರಿಗೆ ತೆರಳಿ ಆಹಾರವನ್ನು ಸಂಗ್ರಹಿಸಿಕೊಂಡರು. ಆವತ್ತೇನೋ ಆ ಪ್ರಯತ್ನ ಯಶಸ್ವಿಯಾಯಿತು. ಮರುದಿವಸ ಅದೇ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದರು. ಕಮ್ಯೂನಿಸ್ಟ್ ಪ್ರೇರಿತ ಪೊಲೀಸರು ಅವರಲ್ಲಿದ್ದ ಹಣ, ಆಹಾರಸಾಮಗ್ರಿಗಳನ್ನು ಕಿತ್ತುಕೊಂಡು, ಪ್ರತಿಭಟಿಸಿದಾಗ ಗುಂಡುಹಾರಿಸಿ ಕೊಂದು ಶವಗಳನ್ನು ಮರೀಚ್ ಝಾಪಿ ಹಾಗೂ ಕುಮಿರ್ಮರಿ ನಡುವೆ ಇದ್ದ ಕೋರಂಕಾಳಿ ನದಿಗೆ ಎಸೆದುಬಿಟ್ಟರು.

                ಮಧ್ಯಾಹ್ನದ ಹೊತ್ತಿಗೆ ವಿಷಯ ತಿಳಿದ ಮರೀಚ್ ಝಾಪಿ ಜನತೆ ಬೆಚ್ಚಿಬಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ಎಲ್ಲರನ್ನೂ ಒಟ್ಟು ಸೇರಿಸಿ ಅಲ್ಲಿಂದ ಸುರಕ್ಷಿತವಾಗಿ ಪಾರಾಗುವುದರ ಕುರಿತು ಚರ್ಚಿಸಿತು. ಪೊಲೀಸರು ಸ್ತ್ರೀಯರಿಗೆ ಯಾವುದೇ ಹಾನಿ ಮಾಡಲಾರರು ಎಂದು ಊಹಿಸಿ ಮೊದಲು ಸ್ತ್ರೀಯರನ್ನು ಅಲ್ಲಿಂದ ರವಾನಿಸುವುದೆಂದು ಅವರು ತೀರ್ಮಾನಿಸಿದರು. ಆದರೆ ಅವರ ಊಹೆ ತಪ್ಪಾಗಿತ್ತು. ಕಮ್ಯೂನಿಸ್ಟರ ಕೈಕೆಳಗಿನ ಪೊಲೀಸರ ಬುದ್ಧಿಯೂ ಕಮ್ಯೂನಿಸ್ಟರಂತೆಯೇ ಬದಲಾಗಿತ್ತು ಎನ್ನುವುದನ್ನು ಅವರು ತಿಳಿಯುವುದಾದರೂ ಹೇಗೆ? ಹದಿನಾರು ಜನ ಮಹಿಳೆಯರಿದ್ದ ಮೊದಲ ತಂಡದ ದೋಣಿಯನ್ನು ಅಡ್ಡಗಟ್ಟಿ, ನೀರಿಗೆ ಬಿದ್ದು ಪಾರಾಗಲೂ ಯತ್ನಿಸಿದ ಮಹಿಳೆಯನ್ನು ಗುಂಡು ಹಾರಿಸಿ ಕೊಂದಿತು ಪೊಲೀಸ್ ಪಡೆ. ಉಳಿದ ಮಹಿಳೆಯರ ಮೃತದೇಹ ಮರುದಿವಸ ಪಕ್ಕದ ಕಾಡಲ್ಲಿ ಸಿಕ್ಕಿತು. ಆ ಹತಭಾಗ್ಯೆಯರು ಪೊಲೀಸ್ ಹಾಗೂ ಕಮ್ಯೂನಿಸ್ಟ್ ಗೂಂಡಾಗಳಿಂದ ಭೀಕರ ಸರಣಿ ಅತ್ಯಾಚಾರಕ್ಕೊಳಗಾಗಿದ್ದರು.

                ಜನವರಿ 31ರ ರಾತ್ರಿ ಬಂಗಾಳದ ಪೊಲೀಸರಿಗೆ ಅಲ್ಲಿದ್ದವರನ್ನು ತೆರವುಗೊಳಿಸಿ ಎನ್ನುವ ಆದೇಶ ಬಂತು. ಪೊಲೀಸರೊಂದಿಗೆ ಸೇರಿದ ಕಮ್ಯೂನಿಸ್ಟ್ ಗೂಂಡಾ ಪಡೆ ಹಿಂದೂಗಳ ಮೇಲೆ ಮುಗಿ ಬಿತ್ತು. ಬಹುತೇಕರು ಗುಂಡಿಗೆ ಬಲಿಯಾದರು. ಜೀವ ಉಳಿಸಿಕೊಳ್ಳಲು ನದಿಗೆ ಹಾರಿದವರನ್ನು ಮೋಟಾರು ದೋಣಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಲ್ಲಲಾಯಿತು. ಗುಂಡಿನ ಭೋರ್ಗರೆತಕ್ಕೆ ಹೆದರಿ ಜೋಪಡಿಗಳಲ್ಲಿ ಅವಿತು ಅಳುತ್ತಾ ಕೂತಿದ್ದ ಮಕ್ಕಳನ್ನು ಹೊರಗೆಳೆದು ಕತ್ತರಿಸಲಾಯಿತು. ವಿರೋಧಿಯನ್ನು ಜೀವಂತ ಹೂತು ಹಾಕುತ್ತಿದ್ದ ತಮ್ಮ ಎಂದಿನ ವೈಖರಿಯಂತೆ ಕಮ್ಯೂನಿಸ್ಟರು ಈ ಹೃದಯವಿದ್ರಾವಕ ಘಟನೆಯನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿದರು. ತಮ್ಮ "ದ ಹಂಗ್ರಿ ಟೈಡ್" ನಲ್ಲಿ ಕಮ್ಯೂನಿಸ್ಟರು ಹೂತು ಹಾಕಿದ ಈ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಅಮಿತಾಬ್ ಘೋಷ್.ಈ ಘಟನೆಯ ತನಿಖೆಯೂ ಆಗಲಿಲ್ಲ. ತನಿಖೆಗೊಳಪಡಿಸುತ್ತೇನೆ ಎಂದು ಆಶ್ವಾಸನೆಯಿತ್ತು ಅಧಿಕಾರಕ್ಕೇರಿದ ಮಮತಾ ದೀದಿ ಕಮ್ಯೂನಿಸ್ಟರನ್ನೂ ನಾಚಿಸುವಂತೆ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಮರೀಚ್ ಝಾಪಿ ಹತ್ಯಾಕಾಂಡದಲ್ಲಿ ಅದೃಷ್ಟವಶಾತ್(ಅಥವಾ ದುರದೃಷ್ಟವಶಾತ್) ಬದುಕುಳಿದವರು, ಬದುಕಿದ್ದೂ ಸತ್ತಂತಿರುವ ಈ ರಾಜಕಾರಣಿಗಳನ್ನು ನೋಡಿ ಬೇಸತ್ತು ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ