ಬಲಾಹಕನೇ ವ್ಯಾಕುಲಗೊಂಡಿದ್ದ. ಅವನ ಕ್ರೋಧಕ್ಕೆ ಸಿಡಿಲಾರ್ಭಟವೇ ಸಾಕ್ಷಿಯಾಗಿತ್ತು. ರಣಭೀಕರ ವರ್ಷಧಾರೆ, ಕೋಲ್ಮಿಂಚಿನ ನಾಟ್ಯ ಮೇಳೈಸಿ ರುದ್ರತಾಂಡವವೊಂದು ನಡೆದಿತ್ತು. ಧಾರಿಣಿಗೆ ತನ್ನ ಹೆಸರಿನ ಬಗೆಗೇ ಅನುಮಾನ ಹುಟ್ಟಿತ್ತು! ನರ್ಮದೆ ಉಕ್ಕಿ ಹರಿದಿದ್ದಳು. ಅಮರಕಾಂತದ ಪರ್ಣಕುಟೀರದಲ್ಲಿ ಕುಳಿತ ಆಚಾರ್ಯ ಶಂಕರರು ನಿರ್ಲಿಪ್ತರಾಗಿ ನರ್ಮದೆಯ ರಣಭೀಷಣ ಓಟವನ್ನು ನೋಡುತ್ತಿದ್ದರು. ಯಾವಾಗ ನೀರಿನಲ್ಲಿ ತಮ್ಮ ಸಂಪತ್ತುಗಳ ಜೊತೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನತೆಯನ್ನು ಕಂಡರೋ ಯಾವಾಗ ನೀರಿನ ಸೆಳವಿಗೆ ಸಿಕ್ಕ ಗೋವುಗಳ "ಅಂಬಾ" ಎನ್ನುವ ಆರ್ತನಾದ ಅವರ ಕರ್ಣಪಟಲಗಳನ್ನು ಈಟಿಯಂತೆ ಇರಿಯಿತೋ ಆಗ ಶಂಕರರ ಎದೆ ತಲ್ಲಣಿಸಿತು. ಅವರ ಅಂತರಾಳದಿಂದ ನರ್ಮದಾಷ್ಟಕವೊಂದು ಹೊರಬಂದು ನರ್ಮದೆಯನ್ನು ಶಾಂತಗೊಳಿಸಿತು. ಉರಿದು ಉಕ್ಕಿ ಹರಿದು ಎಲ್ಲವನ್ನೂ ತನ್ನೊಂದಿಗೆ ಒಯ್ದ ನರ್ಮದೆಯನ್ನು ಶಾಂತಗೊಳಿಸಿ ಮುಗ್ಧ ಜೀವಿಗಳನ್ನು ಶಂಕರರು ರಕ್ಷಿಸಿದ ಈ ಘಟನೆಯ ಕುರಿತು ಅನೇಕರು ಬರೆದಿರಬಹುದು. ಆದರೆ ಶಂಕರರು ಅಂದು ಮಾಡಿದ ಪ್ರವಾಹಪೀಡಿತರ ಸೇವೆಯ ಬಗ್ಗೆ ಬರೆದವರು ದೀನದಯಾಳರೊಬ್ಬರೇ! ಒಬ್ಬ ನೈಜ ಸ್ವಯಂ ಸೇವಕ, ಓರ್ವ ದೀನರ ಪಾಲಿನ ದಯಾಳು ಮಾತ್ರ ಈ ಅವಿಶ್ರಾಂತ ಸ್ವಾರ್ಥರಹಿತ ಸೇವೆಯನ್ನು ಗುರುತಿಸಬಲ್ಲ. ಬ್ರಹ್ಮಜ್ಞಾನಿಯೊಬ್ಬ ಹುಲು ಜೀವಿಗಳ ಸೇವೆ ಮಾಡಬೇಕಾದ ಅಗತ್ಯವೇನು ಎನ್ನುವ ಪ್ರಶ್ನೆ ಉದ್ಭವಿಸಬಹುದು. ಇದಕ್ಕೆ ಪಂಡಿತ್ ಜೀ ಕೊಡುವ ಉತ್ತರ ಬಲು ಸುಂದರ. "ಆಗಸದಲ್ಲಿ ಬೇಕಾದರೆ ಹೂವು ಅರಳಲಿ, ದೇವರ ದರ್ಶನ ಅದಕ್ಕೆ ಅಸಾಧ್ಯ. ಅದಕ್ಕಾಗಿ ಪೃಥ್ವಿಯಲ್ಲಿಯೇ ನಮ್ಮ ಅಕ್ಕಪಕ್ಕದಲ್ಲೇ ತಡಕಾಡಬೇಕು." ಯಾರಿಗೆ ಆರ್ತರ ಕರೆಯಲ್ಲಿ ಆತ್ಮದ ಧ್ವನಿ ಕೇಳಿಸುವುದಿಲ್ಲವೋ ಅವನು ಆತ್ಮಜ್ಞಾನಿಯಾಗುವುದಾದರೂ ಹೇಗೆ ಸಾಧ್ಯ? ಮಹಾಪುರುಷರ ಧ್ಯೇಯಪಥದಲ್ಲಿ ಪ್ರಬಲಶಕ್ತಿಗಳೂ ಅವರ ಅನುಯಾಯಿಗಳಾಗಿ ಮಲ್ಲಿಗೆಯನ್ನು ಚೆಲ್ಲುತ್ತವೆ!
ಜಗತ್ತಿನ ಎಲ್ಲಾ ಘನ ಕಾರ್ಯಗಳು ಕೇವಲ ಬುದ್ಧಿಯ ಬಲದಿಂದಷ್ಟೇ ನಡೆಯಲಿಲ್ಲ. ಅದಕ್ಕೆ ಪೂರಕವಾದ ಹೃದಯ ವೈಶಾಲ್ಯತೆಯಿದ್ದಾಗ ಆ ಕಾರ್ಯಗಳು ಅನುಪಮವಾಗಿವೆ. ಬಾಲ್ಯದಿಂದಲೂ ಶಂಕರರು ನಿರ್ವ್ಯಾಜ ಪ್ರೇಮದಿಂದ ವಿಶಾಲ ಹೃದಯದಿಂದ ಎಲ್ಲರೊಡನೆ ಬೆರೆಯುತ್ತಿದ್ದ ಕಾರಣದಿಂದಲೇ ಅವರ ಸಂಪರ್ಕಕ್ಕೆ ಬಂದ ಎಲ್ಲರ ಹೃದಯದಲ್ಲೂ ಶಂಕರರಿಗೊಂದು ಅಪೂರ್ವ ಸ್ಥಾನ ಭದ್ರಗೊಳ್ಳುತ್ತಿತ್ತು. ಅವನ ಪ್ರೀತಿಯ ವ್ಯವಹಾರ ಹಾಗೂ ಹೃದಯ ವೈಶಾಲ್ಯತೆಯಿಂದಾಗಿಯೇ ಸುತ್ತಮುತ್ತಲಿನ ಜನರ ಶ್ರದ್ಧೆ ಹಾಗೂ ವಿಶ್ವಾಸವನ್ನು ಗಳಿಸಲು ಸಾಧ್ಯವಾಯಿತು ಎನ್ನುತ್ತಾರೆ ಪಂಡಿತ್ ಜೀ. ಅವರು ಹೇಳಿದ್ದು ಶಂಕರರ ಬಗೆಗಾದರೂ ಸಮಾಜದ ನಡುವೆ ಇದ್ದು ಸಮಾಜದ ಅಭ್ಯುದಯಕ್ಕಾಗಿ ಕಾರ್ಯ ನಿರ್ವಹಿಸುವಾತನಿಗಿರಬೇಕಾದ ಮುಖ್ಯ ಗುಣವನ್ನು ಸೂಕ್ಷ್ಮವಾಗಿ ಪ್ರಕಟೀಕರಿಸುತ್ತಾರೆ. "ತಾಯಿಯ ಹಾಲಿನೊಂದಿಗೆ ಅವನು ಸಮಸ್ತ ವಿದ್ಯೆಯನ್ನು ಕುಡಿದಂತೆ ತೋರುತ್ತಿತ್ತು!" ಎಂತಹಾ ಒಳನೋಟ. ಮೇಲ್ನೋಟಕ್ಕೆ ಶಂಕರರು ಹುಟ್ಟಿದಾರಭ್ಯದಿಂದಲೂ ಅತಿ ಬುದ್ಧಿವಂತರಾಗಿದ್ದು, ವಯಸ್ಸಿಗೆ ಮೀರಿದ ಜ್ಞಾನವನ್ನು ಹೊಂದಿದ್ದರು ಎನ್ನುವುದನ್ನು ಈ ರೀತಿ ವರ್ಣಿಸಿದ್ದಾರೆಂದು ಕಂಡರೂ ಅಲ್ಲಿ ಇನ್ನೊಂದು ಹೊಳಹು ಕಾಣುತ್ತದೆ. ಬಾಲ(ಅಥವಾ ಆಗಷ್ಟೇ ಸೇರಿಕೊಂಡ) ಸ್ವಯಂಸೇವಕನಿಗೆ ಇದು ಮುಖ್ಯ. ಸೂಕ್ಷ್ಮವಾಗಿ ಗಮನಿಸಿದರೆ ಉಣಬಡಿಸುವ ಪ್ರಕೃತಿಯೇ "ಅರಿವ"ನ್ನು ದಯಪಾಲಿಸುತ್ತದೆ. ಪ್ರಕೃತಿಯ ಕರೆಗೆ ಓಗೊಳ್ಳಬೇಕು, ತೆರೆದುಕೊಳ್ಳಬೇಕು. ಹೃದಯ ಬುದ್ಧಿಗಳೆರಡನ್ನೂ ತೆರೆದು ತೋರುವವನಿಗೆ "ಅರಿವು" ಆಗಲೇಬೇಕು. ತಾಯಿ ಎಂದರೆ ಮಾತೃಭೂಮಿ; ತಾಯಿಯ ಹಾಲು ಎಂದರೇನು? ಅದು ಮಾತೃಭೂಮಿಯ ಋಣ! ವಿದ್ಯೆಯನ್ನು ಅಥವಾ ಅರಿವನ್ನು ಪಡೆವ ನಡೆಯನ್ನು ಮಣ್ಣಿನೊಡನೆ ಜೋಡಿಸಿದ ಬಗೆ ಇದು! ವಿದ್ಯೆ ಪರಿಪೂರ್ಣವಾಗಿ ಆಗಬೇಕಾದರೆ ಅಂದರೆ ಬುದ್ಧಿಗೂ ಹೃದಯಕ್ಕೂ ನಾಟಬೇಕಾದರೆ ಮಣ್ಣಿಗಿಳಿಯಬೇಕು. ಎಂತಹಾ ಮಣ್ಣು? ಪವಿತ್ರ ಮಾತೃಭೂಮಿಯ ಮಣ್ಣು. ನಾಲ್ಕು ಗೋಡೆಯ ನಡುವೆ ಕುಳಿತು ವಿದ್ಯೆಯನ್ನು ಅರ್ಜಿಸಿದವ ಬೆಳೆದ ಮೇಲೂ ಬೆಳೆಸಿದ ಸಮಾಜದ ಗೊಡವೆ ತನಗೇಕೆಂದು ಗೋಡೆಯೊಳಗೇ ಬಂಧಿಯಾಗುತ್ತಾನೆ.
ಶಂಕರರಿಗೆ ದೊರೆತ ಶಿಕ್ಷಣವನ್ನು ವರ್ಣಿಸುವಾಗ ಗುರುಕುಲ ಪರಂಪರೆಯ ಶಿಕ್ಷಣವನ್ನು ಪ್ರಸಕ್ತ ಶಿಕ್ಷಣ ಪದ್ದತಿಯ ಜೊತೆ ತುಲನೆ ಮಾಡುತ್ತಾ ದೀನದಯಾಳರು ಕೊಡುವ ಹೊಳಹುಗಳು ಅನೇಕ. ವಿದ್ಯಾರ್ಥಿಯ ಸುಪ್ತಶಕ್ತಿಯನ್ನು ಹೊರಗೆಳೆದು ವಿಕಾಸಗೊಳಿಸಿ ಸಮಾಜದ ಚೈತನ್ಯಪೂರ್ಣ ಘಟಕವನ್ನಾಗಿ ಮಾಡಲು ಸಾಧ್ಯವಾಗುವಂತಹ ಶಿಕ್ಷಣವನ್ನು ಗುರುಕುಲ ಪದ್ದತಿ ಕೊಡುತ್ತಿತ್ತು. ಆ ವಿದ್ಯಾರ್ಥಿ ದೀನನ ಮಗನಾಗಿರಲಿ ಅಥವಾ ದಿವಾನನ ಮಗನೇ ಆಗಿರಲಿ ಹಳ್ಳಿಯ ಮನೆಮನೆಗೆ ತೆರಳಿ ಬಿಕ್ಷೆ ಬೇಡಿ ಆಹಾರ ಸಂಪಾದಿಸಬೇಕಾಗಿತ್ತು. ಸಹಜವಾಗಿಯೇ ಆತನಲ್ಲಿ ವಿನಯತೆ, ಆತ್ಮೀಯತೆ ಹಾಗೂ ಗುರು ಹಿರಿಯರಲ್ಲಿ ಶ್ರದ್ಧಾ-ಭಕ್ತಿಗಳು ಬೆಳೆಯುತ್ತಿದ್ದವು. ವಿದ್ಯೆಗೆ ವಿನಯವೇ ಭೂಷಣವಲ್ಲವೇ. ಆಗ ಸಮಾಜದ ಋಣದ ಜೊತೆಗೆ ತನ್ನ ಕರ್ತವ್ಯದ ಅರಿವು ಅವನನ್ನು ಅಡಿಗಡಿಗೆ ಕಾಡಲೇಬೇಕು. ಅಪ್ರಯತ್ನಪೂರ್ವಕವಾಗಿ ತನಗೆ ಅನ್ನ ಕೊಟ್ಟವರ, ತನ್ನ ಅಭ್ಯುದಯದ ಬಗ್ಗೆ ಸದಾ ಕಾಳಜಿ ವಹಿಸುವವರ ಹಿತರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣವಾಗಿರಿಸುವಂತಹ ಮನೋಭಾವ ಆ ವಿದ್ಯಾರ್ಥಿಯಲ್ಲಿ ಮೊಳೆಯುತ್ತಿತ್ತು. ಆಗ ವ್ಯಷ್ಟಿಯಿಂದ ಸಮಷ್ಟಿಯ ಹಿತದ ಬಗೆಗೆ ಆತ ಚಿಂತಿಸಲು ಆರಂಭಿಸುತ್ತಿದ್ದ. ವಿದ್ಯಾರ್ಥಿ ವರ್ಗ ಬೇರೆ ಸಮಾಜ ಬೇರೆ ಎಂಬ ವಿಭಜಕ ಮನಃಸ್ಥಿತಿ ಅಲ್ಲಿ ಬೆಳೆಯಲು ಆಸ್ಪದವೇ ಇರಲಿಲ್ಲ. ಶಂಕರರ ಕಾಲದ ಶಿಕ್ಷಣ ಪದ್ದತಿಯನ್ನು ಈ ರೀತಿ ವರ್ಣಿಸುತ್ತಾ ಅದನ್ನು ಆಧುನಿಕವೆನ್ನಲಾದ ಇಂದಿನ ಶಿಕ್ಷಣ ಪದ್ದತಿಯ ಜೊತೆ ತುಲನೆ ಮಾಡುತ್ತಾ ವ್ಯಥಿತರಾಗುತ್ತಾರೆ ಪಂಡಿತ್'ಜೀ. ಸಮಾಜದಲ್ಲಿ ಪ್ರತ್ಯೇಕ ವರ್ಗವನ್ನು ಸೃಷ್ಟಿಸಿ ಪರಕೀಯ ಭಾವನೆ, ವಿನಯ ಶೂನ್ಯತೆಗೊಳಗಾಗಿ ಪರಾಧೀನವಾಗಿರುವ ರಾಷ್ಟ್ರದ ವಿದ್ಯಾರ್ಥಿಗಳಂತೆ ಸಮಾಜದಿಂದ ಪ್ರತ್ಯೇಕಗೊಂಡು ಮಾನಸಿಕ ದಾಸ್ಯಕ್ಕೆ ಒಳಗಾದ ಇಂದಿನ ವಿದ್ಯಾರ್ಥಿಗಳನ್ನು ಕಂಡು ಅವರು ವಿಷಾದ ಭಾವ ಪ್ರಕಟಿಸುವಾಗ ಜನರ ತೆರಿಗೆ ಹಣದಿಂದ ಚೆನ್ನಾಗಿ ತಿಂದುಂಡು "ಭಾರತ್ ಕೀ ಬರ್ಬಾದಿ" ಎನ್ನುತ್ತಾ ಬೀದಿಗಿಳಿವ ಇಂದಿನ ವಿದ್ಯಾರ್ಥಿಗಳೆಂದು ಹೇಳಿಕೊಳ್ಳುವವರ ಚರ್ಯೆಗಳೊಮ್ಮೆ ಸ್ಮೃತಿಪಟಲದಲ್ಲಿ ಹಾದು ಹೋಗುತ್ತವೆ. "ತಮ್ಮ ಮೆದುಳನ್ನು ವಿದೇಶಿಯರ ಕೈಯಲ್ಲಿ ಅಡವಿಟ್ಟು ಯಾರ ವೈಚಾರಿಕ ಶಕ್ತಿ ದಿವಾಳಿಯಾಗಿದೆಯೋ, ಸ್ವಾರ್ಥದ ಹಾಗೂ ಆದರ್ಶ ಹೀನ ಜೀವನವು ಯಾರ ಹೃದಯ ರಸವನ್ನು ಶುಷ್ಕಗೊಳಿಸಿದೆಯೋ, ಯಾರ ಭಾವನೆಗಳು ಮರಗಟ್ಟಿದೆಯೋ, ಯಾರ ವೇದನೆಗಳು ಮಂದಗೊಂಡಿದೆಯೋ, ಆಲಸ್ಯದ ಸಾಮ್ರಾಜ್ಯವೇ ಕಂಡು ಪುರುಷಾರ್ಥ, ಉದ್ಯೋಗ, ಕರ್ಮಣ್ಯತೆ ಎಲ್ಲಿಂದ ಕಾಲ್ಕಿತ್ತಿವೆಯೋ ಅಂತಹಾ ವಿದ್ಯಾರ್ಥಿಗಳು ಅಂದಿರಲಿಲ್ಲ ಎನ್ನುವಲ್ಲಿ ಶಿಕ್ಷಣದ, ಶಿಕ್ಷಕರ, ಶಿಕ್ಷಿತರ ದುರವಸ್ಥೆ ಹೇಗೆ ಸಮಾಜದ ವಿಘಟನೆಗೆ ಕಾರಣವಾಗುತ್ತಿದೆ ಎನ್ನುವ ದುಃಖದ ಭಾವವೊಂದು ಹಾದುಹೋಗುತ್ತದೆ. ಹಿಂದೆ ಹಾಗಿತ್ತು, ಹೀಗಿತ್ತು ಇಂದಿಲ್ಲವಲ್ಲ ಎಂದು ವ್ಯಥಿಸುವುದಕ್ಕಿಂತ ಹಿಂದೆ ಯಾಕೆ ಹಾಗಿತ್ತು, ಇಂದಿಗದನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂದು ವಿಶ್ಲೇಷಿಸಿದುದರಿಂದಲೇ ಹಾಗೂ ಅದನ್ನು ಪ್ರಯೋಗಕ್ಕೆ ಅಳವಡಿಸಿಕೊಂಡಿದುದರಿಂದಲೇ ಪಂಡಿತ್ ಜೀ ಮಾತುಗಳು ಮಹತ್ವದ್ದಾಗುತ್ತವೆ. ಅಂದಿನ ಶಿಕ್ಷಣ ಭೇದಗಳಲ್ಲೂ ಅಭೇದ್ಯವನ್ನು ಕಂಡ, ಭರತವರ್ಷವನ್ನು ಏಕತ್ರಗೊಳಿಸಿ ತನ್ನ ತತ್ತ್ವಗಳೊಂದಿಗೆ ಒಯ್ದ ಶಂಕರರಂತಹ ಬ್ರಹ್ಮಜ್ಞಾನಿಯನ್ನು ಕೊಟ್ಟಿತು. ಇಂದಿನ ಶಿಕ್ಷಣ "ಭಾರತ್ ತೇರೀ ಟುಕ್ ಡೇ ಕರೇಂಗೇ" ಎಂದು ಬೊಬ್ಬಿರುವ ಮಂದಮತಿಗಳನ್ನು ಸಾಲುಸಾಲಾಗಿ ಸೃಷ್ಟಿಸುತ್ತಿದೆ.
ಪರಿವಾರದ ಪ್ರೇಮವೆಂಬ ನದಿಯಲ್ಲಿ ಸ್ವಹಿತದ ಮೊಸಳೆಯ ಬಾಯಿಂದ ತಪ್ಪಿಸಿಕೊಂಡು ತಾಯಿ ಆರ್ಯಾಂಬಾಳಿಂದಲೇ ಅನುಮತಿ ಹೊರಡಿಸಿಕೊಂಡು ಆರ್ಯಮಾತೆಯ ಸೇವೆಗಾಗಿ ನದಿಯಿಂದ ಸಂನ್ಯಾಸಿಯಾಗಿ ಹೊರಬಿದ್ದ ಆರ್ಯಪುತ್ರ. ನಶ್ವರವಾದ ಸಂಸಾರ ಸಾಗರದಿಂದ ಹನಿ ಬಿಂದೊಂದು ಹೊರಬಿದ್ದು ಅಮೃತವಾಗಲು ಹೊರಟಿತ್ತು! ಗೋಕರ್ಣದ ಬಳಿ ಬಂದಾಗ ಕಾಲಟಿಯ ಸಹಪಾಠಿ ವಿಷ್ಣುಶರ್ಮನ ಕಣ್ಣಿಗೆ ಬಿದ್ದ. "ಧ್ರುವನಂತೆ ಕಾಡಿನಲ್ಲಿ ತಪಸ್ಸನ್ನಾಚರಿಸಲು ಹೊರಟೆಯೇನು? ಉಳಿದ ವರ್ಣಾಶ್ರಮಗಳನ್ನು ಪಾಲಿಸದೇ ನೇರವಾಗಿ ಸಂನ್ಯಾಸ ಸ್ವೀಕರಿಸುವುದು ಎಷ್ಟು ಸಮಂಜಸ? ನಾವೇ ರಚಿಸಿಕೊಂಡ ನಿಯಮಗಳನ್ನು ನಾವೇ ಪಾಲಿಸದಿದ್ದರೆ ಅಂತಹಾ ನಿಯಮಗಳಂದ ಉಪಯೋಗವಾದರೂ ಏನು?" ಎನ್ನುವ ವಿಷ್ಣುಶರ್ಮನ ಗೊಂದಲಕ್ಕೆ ದೀನದಯಾಳರು ಶಂಕರರಿಂದ ಒದಗಿಸುವ ಪರಿಹಾರ ಪರಿ ಗಮನಾರ್ಹ. "ವಿಷ್ಣು, ನಾನು ಕರ್ಮದ ಸಂನ್ಯಾಸ ಸ್ವೀಕರಿಸಿದ್ದೇನೆ. ಇದು ಕಾಡಿನಲ್ಲಿದ್ದುಕೊಂಡು ಮಾಡುವ ತಪವಲ್ಲ. ಇದು ದೇಶ ಧರ್ಮದ ಕಾಯಕ. ಇವುಗಳಿಗೆ ಕರ್ಮಬಂಧನವಿಲ್ಲ. ವ್ಯವಸ್ಥೆ ಮತ್ತು ನಿಯಮಗಳು ಸಮಾಜಕ್ಕಾಗಿ ಇವೆಯೇ ಹೊರತು ಸಮಾಜವೇ ಅವುಗಳಿಗಾಗಿ ಅಲ್ಲ. ಯಾವಾಗ ಸಮಾಜಕ್ಕೆ ವ್ಯವಸ್ಥಿತ ಗಡಿಗಳ ಅವಶ್ಯಕತೆ ಇದೆಯೋ ಆ ಕಾಲಕ್ಕೆ ಮರ್ಯಾದ ಪುರುಷೋತ್ತಮ ರಾಮನ ಬದುಕು ಬೇಕು. ಯಾವಾಗ ಸಮಾಜದ ಉದ್ಧಾರಕ್ಕಾಗಿ ಎಲ್ಲೆಗಳನ್ನು ಉಲ್ಲಂಘಿಸಲೇಬೇಕಾದ ಅವಶ್ಯಕತೆಯೇ ಇದೆಯೋ ಆಗ ಶ್ರೀಕೃಷ್ಣನ ಜನನವಾಗುತ್ತದೆ. ಒಂದು ಮಹತ್ತರ ಉದ್ದೇಶವನ್ನು ಈಡೇರಿಸುವಲ್ಲಿ ವ್ಯವಸ್ಥೆ ಮತ್ತು ನಿಯಮಗಳು ಉಪಯೋಗವಾಗುತ್ತವೆ. ಅಂದರೆ ಅವು ಸಾಧನಗಳೇ ಹೊರತು ಸಾಧ್ಯಗಳಲ್ಲ. ಈ ಉಲ್ಲಂಘನೆ ಮತ್ತು ಪಾಲನೆಯ ಅನುಷ್ಠಾನದಲ್ಲಿ ಹಿಂದೂ ಸಮಾಜದ ಸಂಘಟನೆಯ, ಅದರ ಅಸ್ತಿತ್ವವನ್ನು ಉಳಿಸಿ ಕಾಪಿಟ್ಟುಕೊಳ್ಳುವ ಭಾವನೆ ಮಾತ್ರ ಇರುತ್ತದೆ. ಸಂಪ್ರದಾಯಗಳು, ಆಚರಣೆಗಳು ಸಮಾಜದ ಹಿತಕ್ಕೆ ರಾಷ್ಟ್ರದ ಹಿತಕ್ಕೆ ಪೂರಕವಾಗಿರಬೇಕು. ಒಂದು ವೇಳೆ ಅವು ಅನಾವಶ್ಯಕ ಗೊಂದಲಕ್ಕೋ, ಸಮಾಜದ ವಿಘಟನೆಗೋ ಕಾರಣವಾಗುತ್ತಿದ್ದಲ್ಲಿ ಕಂದಾಚಾರಗಳಂತೆ ಪಾಲಿಸದೆ ಅವುಗಳನ್ನು ತ್ಯಜಿಸಬಹುದು.” ಎನ್ನುವಂತಹ ಕ್ರಾಂತಿಕಾರಕ ನುಡಿಗಳನ್ನು ಒಬ್ಬ ಬದಲಾವಣೆಯ ಹರಿಕಾರ ಕ್ರಾಂತಿಕಾರಿ ಸಂತನಿಂದಲ್ಲದೆ ಬೇರಾರಿಂದ ಹೇಳಿಸಬಹುದು? ಪಂಡಿತ್ ಜೀಯ ನರನಾಡಿಗಳಲ್ಲಿ ಪ್ರವಹಿಸುತ್ತಿದ್ದದ್ದು ಹಿಂದೂ ಸಮಾಜದ ಸಂಘಟನೆ, ಹಿಂದೂ ಸಮಾಜದ ಸಂಘಟನೆ, ಹಿಂದೂ ಸಮಾಜದ ಸಂಘಟನೆ ಅಷ್ಟೇ! ಸಂನ್ಯಾಸ ಸ್ವೀಕಾರದ ಸಂದರ್ಭದಲ್ಲಿ ಎದ್ದ ತಕರಾರುಗಳಿಗೆ ಶಂಕರರು ಕೊಟ್ಟ ದಿಟ್ಟ ಉತ್ತರವನ್ನು ಶಂಕರರಂತೆಯೇ ಅನುಷ್ಠಾನಕ್ಕೆ ತಂದ ದಿಟ್ಟ ಅವರು. ಜಡ್ಡುಗಟ್ಟಿರುವ ಸಮಾಜದಲ್ಲಿ ಬದಲಾವಣೆಯನ್ನು ತರುವ ಛಾತಿ ಮಹಾಪುರುಷರಿಗಷ್ಟೇ ಇರುತ್ತದೆ. ಇಂತಹಾ ದೃಷ್ಟಿಯನ್ನಿರಿಸಿಕೊಂಡು ಸಂನ್ಯಾಸ ಸ್ವೀಕರಿಸುವ ವ್ಯಕ್ತಿ ಕಾಡು ಹೊಕ್ಕುತ್ತಾನೆಯೇ? ಉತ್ತರವನ್ನು ಶಂಕರರಿಂದಲೇ ಹೇಳಿಸುತ್ತಾರೆ ಪಂಡಿತ್ ಜೀ. "ಈ ಸಂನ್ಯಾಸದಲ್ಲಿ ಪ್ರತ್ಯೇಕತೆಯಿಲ್ಲ; ಎಲ್ಲರೂ ನನ್ನವರು ಎನ್ನುವ ಆತ್ಮೀಯತೆ ಇದೆ. ಇಲ್ಲಿ ಮೋಹ, ಬಂಧನಗಳಿಲ್ಲ; ಪ್ರೀತಿಯಿದೆ. ಇದರಲ್ಲಿ ಸಂಕುಚಿತತೆಯಿಲ್ಲ; ಹೃದಯ ವೈಶಾಲ್ಯತೆಯಿದೆ. ಇದು ವ್ಯಕ್ತಿಗಾಗಿ ಸಮಾಜ ಮಾಡುವ ತ್ಯಾಗವಲ್ಲ; ಸಮಾಜಕ್ಕಾಗಿ ವ್ಯಕ್ತಿಯ ವೈಯುಕ್ತಿಕ ಸ್ವಾರ್ಥಗಳ ತ್ಯಾಗ". ಒಬ್ಬ ಸ್ವಯಂಸೇವಕನಿಗಿರಬೇಕಾದ ಗುಣಗಳು ಇವೇ ಅಲ್ಲವೇ?
ಪದ್ಮಪಾದನ ಪ್ರಕರಣವನ್ನು ಓರ್ವ ಮಹಾನ್ ನಾಯಕನಲ್ಲಿ ಶ್ರದ್ಧೆಯನ್ನಿಟ್ಟು ನಾಯಕನ ಆದೇಶ ದೊರೆತೊಡನೆ ಅದನ್ನು ಪಾಲಿಸಲು ಮುಂದಾಗುವ ನಿಷ್ಠ ಕಾರ್ಯಕರ್ತನ ಉದಾಹರಣೆಯಾಗಿ ಪಂಡಿತ್ ಜೀ ತೆಗೆದುಕೊಳ್ಳುತ್ತಾರೆ. ಶ್ರದ್ಧಾಳು ಕಾರ್ಯಕರ್ತನ ಗಮನ ನೇರ ಗುರಿಯತ್ತ ಇರುತ್ತದೆ. ಮಾರ್ಗಮಧ್ಯದ ಅಡೆತಡೆಗಳತ್ತಲ್ಲ. ಪಥಮಧ್ಯದ ಕಲ್ಲುಮುಳ್ಳುಗಳು ಅವನನ್ನು ಎದೆಗುಂದಿಸುವುದೂ ಇಲ್ಲ. ಅವನು ಅತ್ತ ಗಮನವನ್ನು ಹರಿಸುವುದೂ ಇಲ್ಲ. ಪದ್ಮಪಾದನ ದೃಷ್ಟಿ ಅವನ ಪಾದಗಳ ಮೇಲಿರಲಿಲ್ಲ. ಅದು ಗುರು ಶಂಕರರ ಪಾದಪದ್ಮಗಳನ್ನು ಸೇವಿಸುವ ಕಡೆಗಿತ್ತು. ಹಾಗಾಗಿಯೇ ಅಗಾಧ ಜಲರಾಶಿಯ ಮಡುವಿನಲ್ಲಿ ಪದ್ಮಪುಷ್ಪಗಳೇ ಅವನ ಪಾದಗಳಿಗೆ ಆಸರೆಯಾದವು. ಗುರುವಿನ ಅಥವಾ ನಾಯಕನ ಮೇಲಿನ ಈ ಶ್ರದ್ಧಾಭಕ್ತಿಯೇ ಶಿಖರಸದೃಶ ವಿಘ್ನಗಳನ್ನು ನಿವಾರಿಸಿ ಸೇವಕನನ್ನು ರಕ್ಷಿಸುತ್ತದೆ.
ಶಂಕರರದ್ದು ಬರಿಯ ಬೋಧನೆಯಲ್ಲ. ಅವರು ಪ್ರತಿಯೊಂದನ್ನು ಆಚರಿಸಿ ತೋರಿದರು. ತಾಯಿಯ ವ್ರತ ಪೂರ್ಣಗೊಳಿಸಲು ಪೂರ್ಣಾ ನದಿಯನ್ನು ತಾಯ ಕಾಲ ಬಳಿ ಹರಿವಂತೆ ಮಾಡಿದರು. ಚಾಂಡಾಲನನ್ನೇ ಗುರುವೆಂದು ಬಗೆದು ಮನೀಷಪಂಚಕವನ್ನು ರಚಿಸಿದರು. ಅಕ್ಷಯ ವಟವೃಕ್ಷದ ಕೆಳಗೆ ಜನರ ಅನಾದರಣೆಗೊಳಗಾಗಿ ಬಿದ್ದಿದ್ದ ಕುಷ್ಠ ರೋಗಿಯನ್ನು ಉದ್ಧರಿಸಿ ಶಿಷ್ಯನನ್ನಾಗಿ ಮಾಡಿಕೊಂಡರು. ಅವನು ಉದಂಕನೆಂದೇ ಹೆಸರುವಾಸಿಯಾದ. ಮೀಮಾಂಸಕ ಪ್ರಭಾಕರಾಚಾರ್ಯನನ್ನು ಗೆದ್ದು ಶಿಷ್ಯನನ್ನಾಗಿ ಸ್ವೀಕಾರ ಮಾಡಿಕೊಂಡಾಗಲೇ ಆತನ ಮಗ ಪೃಥ್ವೀಧರನನ್ನು ಉದ್ಧರಿಸಿ ಕೈಯಲ್ಲಿಟ್ಟ ನೆಲ್ಲಿಕಾಯಿಯಂತೆ ಸುಸ್ಪಷ್ಟವಾಗಿದ್ದ ಅವನ ಜ್ಞಾನ ಪ್ರಭೆಯನ್ನು ಬೆಳಕಿಗೆ ತಂದರು. ಧರ್ಮದ ಅವನತಿಯನ್ನು ತಡೆಯಲು ಬೌದ್ಧರ ಪಾಳಯ ಹೊಕ್ಕು ಹೋರಾಡಿದ ಕುಮಾರಿಲ ಭಟ್ಟರನ್ನು ಅಡಿಗಡಿಗೆ ನೆನಪಿಸಿಕೊಳ್ಳುತ್ತಿದ್ದರು. ಧ್ಯೇಯದ ಒಳಿತು-ಕೆಡುಕಿನಿಂದ ಸಾಧನೆಯ ಒಳಿತು ಕೆಡುಕುಗಳನ್ನು ನಿರ್ಣಯಿಸಲಾಗುತ್ತದೆ. ಸಾಧನೆಗೆ ಯಾವುದೇ ಸ್ವತಂತ್ರ ಅಸ್ತಿತ್ವವಿಲ್ಲವೆನ್ನುವುದನ್ನು ಮರೆತ ಕುಮಾರಿಲರು ತುಷಾಗ್ನಿಯೊಳ ಹೊಕ್ಕಿದುದು ಅವರಿಗೆ ಆಘಾತ ತಂದಿತ್ತು.
ಧರ್ಮದ್ರೋಹಿ, ರಾಷ್ಟ್ರದ್ರೋಹಿಗಳನ್ನು ದಮನ ಮಾಡುತ್ತಲೇ ಮಧುರ ವೀಣಾನಾದವನ್ನು ಹೊರಡಿಸಿದ ಮಗಧ ಆಚಾರ್ಯ ಶಂಕರರನ್ನು ಕೂಗಿ ಕರೆದಿತ್ತು. ಚಾಣಕ್ಯ-ಚಂದ್ರಗುಪ್ತರ ನೆನಪನ್ನೇ ಹೊತ್ತು ಅತ್ತ ಸಾಗಿದರಾತ. ಬಾವಿಯ ನೀರು ಸೇದುತ್ತಿದ್ದ ದಾಸಿಯೋರ್ವಳಲ್ಲಿ ಮಂಡನಮಿಶ್ರರ ಮನೆಯ ವಿಳಾಸ ಕೇಳಿದರು. ಆಕೆ "ಯಾರ ಮನೆಯ ದ್ವಾರದ ಪಂಜರದಲ್ಲಿ ಕುಳಿತ ಗಿಳಿ ಮತ್ತು ಮೈನಾಗಳು ವೇದಗಳು ಸ್ವಯಂ ಪ್ರಮಾಣಗಳೇ ಅಥವಾ ಬೇರೆ ಸಾಕ್ಷಿ ಬೇಕೇ?; ಕರ್ಮಫಲದ ಲಾಭ-ದೋಷಗಳೇನು?; ಜಗತ್ತು ನಿತ್ಯವೋ ಅನಿತ್ಯವೋ ಇತ್ಯಾದಿ ಚರ್ಚೆಯಲ್ಲಿ ತೊಡಗಿರುವವೋ ಅಂತಹ ಮನೆಯನ್ನು ಮಂಡನ ಮಿಶ್ರನ ಮನೆಯೆಂದು ತಿಳಿಯಿರಿ" ಎಂದು ಸಂಸ್ಕೃತದಲ್ಲಿ ಹಾಡು ಕಟ್ಟಿ ಉತ್ತರಿಸಿದಳು. ಯಾರ ಸೇವಕ-ಸೇವಕಿಯರು ದೇವವಾಣಿ ಸಂಸ್ಕೃತದಲ್ಲಿ ಉಲಿಯುವರೋ ಯಾರ ಮನೆಯ ಗಿಳಿ ಮೈನಾಗಳೂ ಸಂಸ್ಕೃತದಲ್ಲಿ ತತ್ವಶಾಸ್ತ್ರದ ಚರ್ಚೆಗಳನ್ನು ನಡೆಸುವವೋ ಅಂತಹಾ ಮನೆಯ ಸಾಹುಕಾರನ ಪಾಂಡಿತ್ಯ, ಸನಾತನ ಪರಂಪರೆ ಹಿಂದೂ ಧರ್ಮದ ಪುನರುತ್ಥಾನಕ್ಕೆ ಉಪಯೋಗಕ್ಕೆ ಬರದೇ ಇದ್ದೀತೇ? ಅರೆಕ್ಷಣವೂ ತಡಮಾಡದೆ ಶಂಕರರು ಅತ್ತ ನಡೆದು "ತಮ್ಮ ಮನೆಯೋ ಎಂಬಂತೆ" ಮಂಡನನ ಮನೆಯೊಳಹೊಕ್ಕರು! ಇದು ಅಪ್ಪಟ ಸಂಘದ ಸ್ವಯಂಸೇವಕನ ಮನೋಭಾವ! ಮಂಡನಮಿಶ್ರನ ಗುರುತು - ಪರಿಚಯವೂ ಇಲ್ಲ, ಮನೆಯ ರೀತಿ-ರಿವಾಜು, ಸಂಪ್ರದಾಯಗಳ ಅರಿವೂ ಇಲ್ಲ. ಆದರೂ ಏಕಾಏಕಿ ತನ್ನ ಮನೆಯೆಂಬಂತೆ ಒಳಹೊಕ್ಕುವ ಗುಣ ಎಲ್ಲರೂ ನಮ್ಮವರು ಎಂಬ ಭಾವನೆ ಇರುವವರಿಗೆ ಮಾತ್ರ ಸಾಧ್ಯ. ಒಬ್ಬ ಸ್ವಯಂಸೇವಕ ಹೊಂದಿರಬೇಕಾದ್ದು ಇದನ್ನೇ. ಧರ್ಮವನ್ನು ಪ್ರೀತಿಸುವ ಮಂಡನನೆದುರು ತಮ್ಮ ಮನದ ಮಾತನ್ನು ಮಂಡಿಸಲು ಅವರು ಬಯಸಿದ್ದರು. ಹಾಗೆಯೇ ತಮ್ಮ ಮನಸ್ಸಿನ ವ್ಯಥೆ ಮತ್ತು ಧರ್ಮದ ಭಾವನೆಗಳನ್ನು ನೋಡಿ ಮಂಡನ ಮಿಶ್ರರು ತಮ್ಮವರಾಗದೆ ಇರಲಾರರು ಎನ್ನುವ ವಿಶ್ವಾಸ ಶಂಕರರಿಗಿತ್ತು. ಸ್ವಯಂಸೇವಕನೊಬ್ಬ ಪಳಗಬೇಕಾದ್ದು ಇಲ್ಲೇ! ಹಿಂದೂವೊಬ್ಬನ ಮನೆಯನ್ನು ಆತ ಅಪರಿಚಿತನಾದರೂ ಒಳಹೊಕ್ಕು ಆತನ ಬಳಿ ಆಪ್ತವಾಗಿ ಸಂವಹನಗೈದು ಆತನನ್ನು ತಮ್ಮವನನ್ನಾಗಿ ಮಾಡಿಕೊಂಡು ಆತನ ಕಷ್ಟಸುಖಗಳಲ್ಲಿ ಭಾಗಿಯಾಗುವುದು. ಹಿಂದೂಸಮಾಜದ ಸಂಘಟನೆಗೆ ಇದು ಅತ್ಯಮೂಲ್ಯ. ಶಂಕರರು ಮಂಡನನ ಮನೆ ಹೊಕ್ಕು ಮಾಡಿದ ತತ್ವಾರ್ಥ ವಾದದಂತಹ ಮಹಾನ್ ಐತಿಹಾಸಿಕ ಘಟನೆಯಲ್ಲೂ ಈ ಸಣ್ಣ ಎಳೆಯನ್ನು ಗುರುತಿಸಿದ್ದರು ದೀನದಯಾಳ್! ಸೂಕ್ಷ್ಮತೆ ಮಹಾಪುರುಷನೊಬ್ಬನ ಮೂಲ ಲಕ್ಷಣ! ಎಂತಹಾ ಸೂಕ್ಷ್ಮತೆ? ಇರುವೆಯ ಹೆಜ್ಜೆಯನ್ನು ಗುರುತಿಸುವ, ಹೆಜ್ಜೆ ಸಪ್ಪಳವನ್ನು ಕೇಳಿಸಿಕೊಳ್ಳುವ ಸೂಕ್ಷ್ಮತೆ! ಶ್ರಾದ್ಧಕರ್ಮ ಮಾಡುತ್ತಿದ್ದ ವೇಳೆ ಸಂನ್ಯಾಸಿಯೊಬ್ಬ ಏಕಾಏಕಿ ನುಗ್ಗಿದ್ದನ್ನು ಕಂಡು ಮಂಡನನ ಕಣ್ಣು ಕೆಂಪಗಾಯಿತು. ಶಂಕರರ ಸೂಕ್ಷ್ಮದೃಷ್ಟಿಗೆ ಅದು ಗೋಚರಿಸಿ ತಮ್ಮ ಮಧುರ ಮಾತುಗಳಿಂದಲೇ ಮಂಡನರ ಮನಗೆದ್ದರು.
ದೇಶದ ಇಬ್ಬರು ಅಪ್ರತಿಮ ದೇಶಭಕ್ತ ವಿದ್ವಾಂಸರು ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕಲು ಸದ್ಭಾವನೆಯೊಂದಿಗೆ ಚರ್ಚೆಗಿಳಿದಿದ್ದರು. ಅಲ್ಲಿ ಒಬ್ಬರೊನ್ನೊಬ್ಬರು ಸೋಲಿಸುವ ಇಚ್ಛೆ ಇರಲಿಲ್ಲ. ತಮ್ಮ ಅಭಿಪ್ರಾಯಗಳಿಗೆ ಅಂಟಿಕೊಳ್ಳುವ ದುರಾಗ್ರಹವೂ ಇರಲಿಲ್ಲ. ವಿರೋಧಿಯ ಅಪಮಾನವು ಅದರ ಉದ್ದೇಶವಾಗಿರಲಿಲ್ಲ. ಅಲ್ಲಿ ಪರಸ್ಪರ ಅರಿಯುವ ಉತ್ಕಟ ಬಯಕೆಯಿತ್ತು. ಸತ್ಯವನ್ನರಸುವ ಜಿಜ್ಞಾಸೆಯಿತ್ತು. ಸತ್ಯಪಥದಲ್ಲಿ ನಡೆವ ಅಭಿಲಾಷೆಯಿತ್ತು. ಆ ವಾಗ್ವಿಲಾಸಕ್ಕೆ ಸರಸ್ವತಿಯೇ ಮೈವೆತ್ತಂತಿದ್ದ ಮಂಡನರ ಸತಿ ಭಾರತಿಯೇ ತೀರ್ಪುಗಾರಳಾಗಿದ್ದಳು. ಆ ವಾಗ್ವೈಭವಕ್ಕೆ ಶಂಕರನ ಜಟೆಯಿಂದ ಇಳಿದು ಬಂದ ಸ್ವಚ್ಛ ಸಲಿಲ ಗಂಗೆ ನೀಲ ಯಮುನೆಯೊಂದಿಗೆ ಸಾಕ್ಷಿಯಾಗಿದ್ದಳು. ಅದೆಷ್ಟೋ ದಿನಗಳವರೆಗೆ ನಡೆದ ಈ ಜ್ಞಾನಪ್ರವಾಹದಲ್ಲಿ ಅನೇಕರು ಮಿಂದೆದ್ದರು. ಪಂಡಿತ್ ಜೀ ಕೂಡಾ. ಆದರೆ ಅವರು ಈ ಜಳಕದಿಂದ ಪುಳಕಿತರಾದ ಪರಿಯೇ ಬೇರೆ. ಅಲ್ಲಿ ಪರಂಪರೆಯ ಪ್ರವಾಹವಿದೆ; ಗಂಗೆಯ ಕಲರವವಿದೆ; ಸನಾತನತೆಯ ಪ್ರಭಾವವಿದೆ. ಅಲ್ಲಿ ರಾಷ್ಟ್ರವೀರರ ಧ್ಯೇಯದ ಸ್ಮರಣೆಯಿದೆ; ವಿದ್ವಾಂಸರ ಕೊಡುಗೆಯ ನೆನಪು ಇದೆ; ಸಾಮಾನ್ಯನ ಮುಗ್ಧತೆಯ ಅರಿವೂ ಇದೆ. ಸಾಧನ ಜೀವನವಲ್ಲ; ಧ್ಯೇಯವೇ ಜೀವನ ಎಂಬ ಅರಿವಿನ ಬೆಳಕಿನಲ್ಲಿ ಸಂಸ್ಕಾರ ಬಿತ್ತುವ ಮೂಲಕ ಹಿಂದೂ ಜನಾಂಗವನ್ನು ಮೇಲೆತ್ತುವ ಹುರುಪೂ ಅಲ್ಲಿದೆ. ರಾಷ್ಟ್ರದ ಸುಪ್ತಶಕ್ತಿಯನ್ನು ಬಡಿದೆಬ್ಬಿಸುವ ಛಲವನ್ನೂ ಅದು ಹೊಂದಿದೆ. ಒಂದು ಸತ್ಯದ ಆದರ್ಶಪ್ರಾಪ್ತಿಗಾಗಿ ನಡೆವ ಎಲ್ಲಾ ತ್ಯಾಗಕ್ಕೂ, ಆತ್ಮಾಹುತಿಗೂ ಅಪಾರ ಬೆಲೆಯಿದೆ. ಈ ಪ್ರವಾಹದಲ್ಲಿ ಮಿಂದೆದ್ದ ಪಂಡಿತ್ ಜೀ ಈ ವಾಗ್ವಿಲಾಸವನ್ನು ಕಟ್ಟಿಕೊಟ್ಟ ಪರಿಯಂತೂ ಪರಮಾದ್ಭುತ. ಅವರು ಶಂಕರರ ವಾದದಲ್ಲಿ ರಾಮನ ಆದರ್ಶವನ್ನು, ಕೃಷ್ಣನ ತಂತ್ರವನ್ನೂ, ಚಾಣಕ್ಯನ ನೀತಿಯನ್ನೂ ಎತ್ತಿ ತೋರಿದರು. ರುದ್ರನ ತಾಂಡವದಂತೆ ಅದನ್ನು ಕಂಡ ವಿಷ್ಣುವಿನ ಮಿಡುಕದಂತೆ ಸ್ಪೂರ್ತಿಗೊಂಡು ಒಡಮೂಡಿದ ಪತಂಜಲಿಯ ದರ್ಶನದಂತೆ ಶಂಕರರ ವಾದ ಸಂಪನ್ನಗೊಂಡಿತು. ಇಡಿಯ ಭಾರತವನ್ನು ಅದ್ವೈತದ ಏಕಸೂತ್ರದಲ್ಲಿ ಅದು ಸೆರೆಹಿಡಿದಿತ್ತು. ಸ್ವತಃ ಜೈಮಿನಿಯೇ ಪ್ರತ್ಯಕ್ಷಗೊಂಡು ಶಂಕರರಿಗೆ ಉಘೇ ಉಘೇ ಎಂದ. ಶಂಕರರೆಂಬ ಸರಸಿರೆಯಲ್ಲಿ ಮೀಯಲಿಳಿದಿದ್ದ ಮಂಡನ ಕರ್ಮಕಾಂಡವನ್ನು ತ್ಯಜಿಸಿ ಸುರೇಶ್ವರಾಚಾರ್ಯನಾಗಿ ಮೇಲೆದ್ದಿದ್ದ. ಭಾರತಿಯ ಸಂದೇಹಕ್ಕೂ ಪರಿಹಾರವೊದಗಿತ್ತು.
ಗಂಗೆ ಗೋದಾವರಿಯಲ್ಲಿ ಹರಿವ ನೀರಿನಂತೆ ಹಿಂದೂ ರಾಷ್ಟ್ರ ಹಾಗೂ ಧರ್ಮದ ಸನಾತನ ಸ್ರೋತ ನಿರಂತರವಾಗಿ ಹರಿಯಬೇಕೆಂಬುದೇ ಅವರ ಬಯಕೆಯಾಗಿತ್ತು. ಏಕತ್ವದ ಭಾವನೆ ಯುಗಯುಗಾಂತರದವರೆಗೂ ಹರಿಯುತ್ತಿರಬೇಕಾದರೆ ವಿಚಾರ ಮತ್ತು ಆಚರಣೆಯ ಅಲೆ ಸದಾ ಇರುವಂತಹ ವ್ಯವಸ್ಥೆ ಇರುವುದು ಅವಶ್ಯಕ. ಅದಕ್ಕಾಗಿಯೇ ದೇಶದ ನಾಲ್ದೆಸೆಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಈ ಮಠಗಳು ಸಮಾಜದ ಸೇವಕ, ದೇಶದ ಚುಕ್ಕಾಣಿ ಹಿಡಿವ, ಜ್ಞಾನಿ, ನಿಸ್ವಾರ್ಥಿ, ನಿಸ್ಪೃಹ ಹಾಗೂ ದೃಢನಿಶ್ಚಯದ ಕಾರ್ಯಕರ್ತರನ್ನು ತಯಾರುಮಾಡಬೇಕೆಂಬುದೇ ಅವರ ಉದ್ದೇಶವಾಗಿತ್ತು. ಅದರಲ್ಲೂ ಉತ್ತರದ ಮಠಕ್ಕೆ ದಕ್ಷಿಣದವರನ್ನೂ, ದಕ್ಷಿಣದ ಮಠಕ್ಕೆ ಉತ್ತರದವರನ್ನೂ ನೇಮಿಸಿದರು.
ತರ್ಕಶಾಸ್ತ್ರದ ಮಹಾಪಂಡಿತನೆಂದು ಬೌದ್ಧರಿಂದಲೇ ಹೊಗಳಿಸಿಕೊಂಡ ಶಂಕರರನ್ನು ತಕ್ಷಶಿಲೆ ಕರೆಯದೇ ಇರುತ್ತದೆಯೇ? ಅಲ್ಲಿ ನಡೆದದ್ದು ಪೂರ್ಣಕ್ಕೂ ಶೂನ್ಯಕ್ಕೂ ನೇರ ಮುಖಾಮುಖಿ! ಶಂಕರರನ್ನು ಸೋಲಿಸಿ ಬೌದ್ಧರನ್ನಾಗಿಸಿದರೆ ಮತ್ತೊಮ್ಮೆ ಸಂಪೂರ್ಣ ಭಾರತ ಬೌದ್ಧಮಯವಾಗಿಬಿಡುತ್ತದೆ ಎಂದು ಬೌದ್ಧ ಮಂಡಳಿ ಹಗಲುಗನಸು ಕಾಣಲಾರಂಭಿಸಿತು. ಆದರೆ ಶಂಕರರದ್ದು ಶಬ್ದಾಡಂಬರದ ಶುಷ್ಕತರ್ಕವಲ್ಲ, ಅದು ಭಾವನೆಯ ಕಣಿವೆಯಲ್ಲಿ ತೊನೆದಾಡುವ ಕರ್ಮಣ್ಯತೆಯ ಗಿಡ ಎಂದು ಅವರಿಗಾದರೂ ಹೇಗೆ ತಿಳಿದಿತ್ತು? ಈ ಪ್ರಕರಣವನ್ನು ಕೂಡಾ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಚಿತ್ರಿಸಿದ್ದಾರೆ ಪಂಡಿತ್ ಜೀ. "ಜಗತ್ತಿನಲ್ಲಿ ಶಾಂತಿ ಬುದ್ಧನ ಸಾನಿಧ್ಯದಿಂದ ಮಾತ್ರ ನೆಲೆಯೂರುವುದಕ್ಕೆ ಸಾಧ್ಯ. ನೀವೂ ನಮ್ಮವರಾಗಿ. ಶಕರು, ಹೂಣರ ಜೀವನವನ್ನು ಬೆಳಗಿದಂತೆಯೇ ನಿಮ್ಮನ್ನೂ ಬೆಳಗುತ್ತೇವೆ" ಎಂದು ಬೌದ್ಧರೆಂದಾಗ, ಬುದ್ಧನ ಆದರ್ಶ ಮಾರ್ಗವನ್ನು, ಬೌದ್ಧರ ಕುಟಿಲತೆ, ಅನಾಚಾರಗಳನ್ನು ಕಣ್ಣಿಗೆ ಕಟ್ಟುವಂತೆ ನಿಧಾನವಾಗಿ ಶಂಕರರಿಂದ ಹೇಳಿಸುವ ಪರಿ ಇಂದಿನ ನವಬೌದ್ಧರ ಕಣ್ಣುತೆರೆಸಬೇಕು! "ತನ್ನ ಸಮಾಜದ ದುಃಖವನ್ನು ಕಂಡು ಬುದ್ಧ ದಯೆಯಿಂದ ಕರಗಿ ಹೋದ. ಯಾವ ವೃದ್ಧನ ಕಂಪಿಸುವ ಶರೀರ ರಾಜಕುಮಾರ ಸಿದ್ಧಾರ್ಥನ ಕೋಮಲ ಹೃದಯವನ್ನೇ ಕಂಪಿಸಿತ್ತೋ ಆ ವೃದ್ಧನಾದರೂ ಯಾರು? ಆ ಶರೀರದಲ್ಲಿ ಯೌವನ ಕಾಲದಲ್ಲಿ ವೈಯ್ಯಾರದಿಂದ ಬೀಗುತ್ತಿದ್ದ ಪುಣ್ಯಗರ್ಭೆ ಭಾರತಿಯ ಮಣ್ಣ ಧೂಳಕಣಗಳು ವೃದ್ಧಾಪ್ಯದಲ್ಲಿ ಮತ್ತೆ ತಾಯ ಮಡಿಲಲ್ಲಿ ಸೇರಲು ತವಕಿಸುತ್ತಿದ್ದವು. ಈ ತಾಯಿಯ ಕೋಟಿ ಕೋಟಿ ಮಕ್ಕಳ ಜೀವನವನ್ನು ಪಾವನಗೊಳಿಸಲೋಸುಗ ಬುದ್ಧ ಕಠಿಣತಮ ಕಾರ್ಪಣ್ಯಗಳನ್ನೆದುರಿಸಿ ಘೋರ ತಪವಗೈದು ಜ್ಞಾನದ ಬೆಳಕು ನೀಡಿದ. ಆದರೆ ಅವನ ಅನುಯಾಯಿಗಳಾದ ನಾವು(ಇಲ್ಲಿ ಶಂಕರರ ಬಾಯಿಂದ ನೀವು ಎನ್ನುವ ಬದಲು ನಾವು ಎಂದೇ ಹೇಳಿಸಿರುವುದು ಪಂಡಿತ್ ಜೀ ಅವರ ಔದಾರ್ಯ) ಆತನ ಭಾವನೆಗಳನ್ನು ಕನಿಷ್ಟ ಸ್ಪರ್ಶಿಸಿದ್ದೇವೆಯೇ? ಶಕರು ಮತ್ತು ಹೂಣರು ಬೌದ್ಧ ಧರ್ಮದಲ್ಲಿ ಯಾಕೆ ದೀಕ್ಷೆಗೊಳ್ಳಲಿಲ್ಲ? ಅವರು ಬೌದ್ಧ ಧರ್ಮವನ್ನು ತಮ್ಮ ರಾಜಕೀಯ ಹಿಡಿತದಲ್ಲಿರಿಸಿಕೊಂಡರು. ಅವರು ಬೌದ್ಧ ಮತ ಸ್ವೀಕರಿಸಿದೊಡನೆ ನಮ್ಮವರಾದರು ಎಂದು ನೀವು ತಿಳಿದಿರಿ! ಆದರೆ ಅವರು ನಿಮ್ಮವರೇ ಆದ ಈ ದೇಶೀಯರ ಮೇಲೆ ಎಸಗಿದ ಪಾಶವೀಕೃತ್ಯಗಳನ್ನು ಕಂಡು ಬುದ್ಧನ ಅನುಯಾಯಿಗಳಾದ ನಿಮ್ಮ ಹೃದಯ ರೋದಿಸಲಿಲ್ಲ. ನಿಮ್ಮದೇ ಬಂಧುಗಳ ನಾಶವನ್ನು ಕಂಡು ನಿಮ್ಮ ಹೃದಯ ಕರಗಲಿಲ್ಲ! ಪರರನ್ನು ನಿಮ್ಮವರನ್ನಾಗಿಸುವ ಭರದಲ್ಲಿ "ನಮ್ಮತನ" ಎನ್ನುವ ಸಂಕುಚಿತ ಭಾವನೆಯಿಂದಲೇ ನೀವು ಅವರ ದಬ್ಬಾಳಿಕೆಗೆ ಸಹಕಾರ ಕೊಟ್ಟಿರಿ. ಆದರೆ ನಿಮ್ಮದೇ ದೇಶ ಭಾರತದ ಕತ್ತು ಹಿಸುಕಿದಿರಿ. ಭಾರತದ ಪುರಾತನ ಪರಂಪರೆ ಹಾಗೂ ಸಾಮಾಜಿಕ ವ್ಯವಸ್ಥೆ ಮುಂದುವರೆದುಕೊಂಡು ಬಂದರೆ ಈ ದೇಶ ತಮ್ಮ ಹಿಡಿತದಲ್ಲಿರಲಾರದು ಎಂದು ಅವರಿಗೆ ತಿಳಿದಿತ್ತು. ಅದಕ್ಕಾಗಿ ರಾಷ್ಟ್ರದ ಸಂಸ್ಕೃತಿ ಹಾಗೂ ನಾಗರಿಕತೆಯ ನಾಶಕ್ಕೆ ಮುಂದಾದರು. ಅವರ ಕೈಗೊಂಬೆಗಳಾದ ನೀವು ದೇಶದ ವ್ಯವಸ್ಥೆ ಹಾಗೂ ಪರಂಪರೆಯನ್ನು ನಾಶಗೊಳಿಸಲು ಪ್ರಯತ್ನಿಸಿದಿರಿ. ಆದರೆ ಭಾರತದ ಭಾಗ್ಯ ಸೂರ್ಯ ಅಸ್ತಂಗತನಾಗಲು ಶಕಾರಿ ವಿಕ್ರಮಾದಿತ್ಯ ಹಾಗೂ ಗುಪ್ತರು, ಯಶೋಧರ್ಮ, ಹರ್ಷಾದಿಗಳು ಬಿಡಲಿಲ್ಲ, "ಪರಂಪರೆಯಿಂದ ಶೂನ್ಯವಾಗಿರುವ" ಹೃದಯದಲ್ಲಿ ಸ್ವಾತಂತ್ರ್ಯದ ಇಚ್ಛೆ ಜಾಗೃತಗೊಂಡ ಒಂದೇ ಒಂದು ಉದಾಹರಣೆಯನ್ನು ಹೇಳಿ ನೋಡೋಣ" ಎನ್ನುತ್ತಿದ್ದಂತೆ ಬಿಕ್ಕುವರ್ಗ ತಲೆತಗ್ಗಿಸಿ ಮೌನವಾಯಿತು. "ಭಗವಾನ್ ಬುದ್ಧರು ನಮಗೂ ಪೂಜ್ಯರು. ನಿಮಗೂ ನಮಗೂ ಭೇದವಾದರೂ ಏನಿದೆ? ನೀವು ಆರ್ಯ ಸಂತಾನವಾದ್ದರಿಂದ ನೀವು ನಮ್ಮ ಈ ಪುರಾತನ ಪರಂಪರೆಯ ಭಾಗವೇ. ರಾಮಕೃಷ್ಣರ ಸಂತಾನವಾದ ಕಾರಣ ನೀವು ಹಿಂದೂಗಳೇ. ಭಗವಾನ್ ಬುದ್ಧನನ್ನು ಅರ್ಚಿಸುವುದರಿಂದ ನೀವು ಬೌದ್ಧರು, ಭಗವಾನ್ ಬುದ್ಧ ವಿಷ್ಣುವಿನ ಅವತಾರವಾದ ಕಾರಣ ನೀವು ವೈಷ್ಣವರು ಹಾಗೂ ರಾಷ್ಟ್ರದ ಶಿವನನ್ನು ಆರಾಧನೆ ಮಾಡುವ ಕಾರಣ ನೀವು ಶೈವರು. ನಿಮ್ಮ ವಿಚಾರಗಳು ವೇದಗಳೊಂದಿಗೆ ಹೊಂದಿಕೊಳ್ಳುವುದಾದರೆ ಅದು ನಮಗೇಕೆ ಅಡ್ಡಿಯಾಗಬೇಕು? ಪ್ರಾಚೀನತೆಯ ಗೌರವಕ್ಕಾಗಿ ಜನ ಕಾತರಿಸುತ್ತಾರೆ, ನೀವೇಕೆ ಅದನ್ನು ಕಳೆದುಕೊಳ್ಳಲು ಬಯಸುತ್ತೀರಿ? ಬನ್ನಿ, ಹಿಂದೂ ಎನ್ನುವ ಒಂದೇ ಪ್ರವಾಹದ ಜಲಕಣಗಳಾದ ನಾವು ರಾಷ್ಟ್ರವೆಂಬ ಏಕಸೂತ್ರದಲ್ಲಿ ಕಟ್ಟಲ್ಪಟ್ಟು ನಮ್ಮ ಭವ್ಯ ಪರಂಪರೆಯನ್ನು ನಿರಂತರವಾಗಿರಿಸಿಕೊಳ್ಳೋಣ" ಎಂದು ಶಂಕರರು ಹೇಳುತ್ತಿದ್ದಂತೆ ಆಚಾರ್ಯ ಶಂಕರರಿಗೆ ಜಯವಾಗಲಿ, ಹಿಂದೂಗಳಿಗೆ ಜಯವಾಗಲಿ ಎನ್ನುವ ಘೋಷಣೆ ಮುಗಿಲುಮುಟ್ಟಿತು. ಶಂಕರರ ವಿಜಯಗಾಥೆ ದಶದಿಕ್ಕುಗಳಿಗೂ ಹಬ್ಬಿ ರಾಷ್ಟ್ರೀಯತೆಯ ಅಲೆಯೊಂದು ಎದ್ದಿತು. ಲಕ್ಷಾಂತರ ಬೌದ್ಧರು ಅದರಲ್ಲಿ ಮಜ್ಜನಗೈದರು. ಮನೆಯಿಂದ ಮುನಿಸಿಕೊಂಡು ಹೋದ ಬಾಲಕನನ್ನು ಸ್ವಾಮಿ ಶಂಕರರು ಮರಳಿ ಮನೆಗೆ ಕರೆತಂದರು. ತರ್ಕಶಾಸ್ತ್ರ ವಿಶಾರದರಾದ ಕರ್ಮಠ ಬೌದ್ಧ ಭಿಕ್ಕುಗಳೇ ಪರಂಪರೆಯ ಪ್ರವಾಹದಲ್ಲಿ ಜೊತೆಯಾದರು; ಭಾರತೀಯತೆಯನ್ನೇ ವಿರೋಧಿಸುವ ನವಬೌದ್ಧರನ್ನು ಮರಳಿ ಮನೆಗೆ ತರಲು ಅಭಿನವ ಶಂಕರರು ಜನ್ಮತಾಳಬೇಕೇ?
ಶಂಕರರು ಅದ್ವೈತದ ಮೂಲಕವೇ ಭಾರತವನ್ನು ಏಕ ಸೂತ್ರದಲ್ಲಿ ಬೆಸೆದ ಬಗೆಯನ್ನು ದೀನದಯಾಳರು ಕಟ್ಟಿಕೊಟ್ಟ ಪರಿ ಅದ್ಭುತ. ತಮ್ಮ ದೇವ-ದೇವಿಯರೇ, ಪೂಜಾಕ್ರಮಗಳೇ ಶ್ರೇಷ್ಠ ಎಂದೇ ಪರಿಗಣಿಸುತ್ತಿದ್ದವರೆಲ್ಲಾ ಶಂಕರರನ್ನು ಭೇಟಿಯಾದ ಮಾತ್ರಕ್ಕೆ ತಮ್ಮ ಸಂಕುಚಿತತೆಯ ಪರಿಧಿಯನ್ನು ಕಿತ್ತೆಸೆದು ಬಿಟ್ಟರು. ವಿರೋಧ ಭಾವನೆಗಳನ್ನು ಹೊತ್ತು ಬಂದವರೆಲ್ಲಾ ಶಂಕರರ ಅನುಯಾಯಿಗಳಾಗಿ ಬದಲಾದರು. ಶಂಕರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸಿದವರೆಲ್ಲಾ ಅವರ ಉದಾತ್ತತೆಯನ್ನು ಕಂಡು ನಾಚಿ ಮರಳಿದರು. ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ. ಜನರ ಶ್ರದ್ಧೆಯನ್ನು ನಾಶಪಡಿಸಲಿಲ್ಲ. ಅದರ ಕೇಂದ್ರವನ್ನಷ್ಟೇ ಬದಲಾಯಿಸಿದರು. ಯಾವ ದೇವರನ್ನು ಪೂಜಿಸಿದರೂ ಅದು ಅನಂತ ಜ್ಞಾನಸ್ವರೂಪಿಯ ಪೂಜೆಯೇ. ಚೇತನ-ಅಚೇತನಗಳಲ್ಲಿ ವ್ಯಾಪಿಸಿರುವುದು ಅದೇ. ಈ ಎಲ್ಲಾ ಉಪಾಸನಾ ವಿಧಾನಗಳ ಹಿಂದಿರುವುದು ಹಿಂದೂ ಹೃದಯದ ಪ್ರೇರಣೆಯೇ! ಎಲ್ಲಾ ಪೂಜಾಪದ್ದತಿಗಳ ಹಿಂದೆ ಪರಮಾತ್ಮನ ಬಗೆಗಿರುವುದು ಒಂದೇ ವಿಧವಾದ ಕೃತಜ್ಞತಾ ಭಾವನೆ. ನಮ್ಮ ಸನಾತನ ವೈದಿಕ ಪರಂಪರೆಯನ್ನು ರಕ್ಷಿಸುವ ಅಭಿಲಾಷೆ ನಮ್ಮ ರಾಷ್ಟ್ರೀಯ ಜೀವನವನ್ನು ಸ್ವಾಧೀನದಲ್ಲಿಟ್ಟುಕೊಂಡು, ಅಭಿವೃದ್ಧಿಯ ಅತ್ಯುನ್ನತ ಸ್ಥಿತಿ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆ ಒಂದೆಡೆ ಸೂರ್ಯೋಪಾಸನೆಯ ರೂಪ ಪಡೆದರೆ ಇನ್ನೊಂದೆಡೆ ಗಣಪತಿಯ ಮೃತ್ತಿಕಾ ಮೂರ್ತಿಯನ್ನು ಪೂಜಿಸಿತು. ದೇಶವನ್ನು ಸುತ್ತುವರಿವಂತೆ ಐವತ್ತೊಂದು ಶಕ್ತಿ ಪೀಠಗಳನ್ನು ನಿರ್ಮಿಸಿದಂತೆಯೇ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಆರ್ಯಾವರ್ತಕ್ಕೆ ಪ್ರದಕ್ಷಿಣೆ ಹಾಕಿತು. ವಾಲ್ಮೀಕಿಯ ಆದಿಕಾವ್ಯ ಆದರ್ಶಪುರುಷನೊಬ್ಬನನ್ನು ದೇವನಾಗಿಸಿದರೆ ಭಾರತ-ಭಾಗವತಗಳ ನೀತಿ ಪ್ರತಿಯೊಂದು ಪೀಳಿಗೆಗೆ ಕೃಷ್ಣನಂತಹ ವ್ಯಕ್ತಿಯ ಅವಶ್ಯಕತೆಯನ್ನು ಸಾರಿ ಹೇಳಿತು. ಒಂದು ಕಡೆ ಯೋಗದ ಭಂಗಿಯೇ ದರ್ಶನವಿತ್ತರೆ ಮಗದೊಂದೆಡೆ ಕ್ರೂರತೆಯನ್ನೇ ಶಿರಚ್ಛೇದಿಸಿದ ಕಾಪಾಲಿಕರನ್ನು ಕೃತಕೃತ್ಯಗೊಳಿಸಿತು. ಸರಸ್ವತಿಯ ಸೇವೆಗೈವ ಶಾಸ್ತ್ರಕೋವಿದರನ್ನು ಸೃಷ್ಟಿಸಿದ ಉಪಾಸನೆಯೇ ಶಸ್ತ್ರ ಹಿಡಿದು ಶತ್ರುಗಳನ್ನು ಸದೆಬಡಿವ ಯೋಧರಿಗೆ ಜನ್ಮಕೊಟ್ಟಿತು. ಈ ಎಲ್ಲಾ ಆರಾಧನೆಯ ಹಿಂದಿರುವುದು ಅದೇ ಸಹಸ್ರಾನನ, ಸಹಸ್ರಾಕ್ಷ, ಸಹಸ್ರಪಾದಗಳಿರುವ ರಾಷ್ಟ್ರಪುರುಷನೇ! ತಮ್ಮದಾದ ಯಾವುದೊಂದನ್ನೂ ತ್ಯಜಿಸದೆ ಶ್ರೇಷ್ಠವಸ್ತುವೊಂದು ಜನರಿಗೆ ಸಿಕ್ಕಂತಾಯ್ತು; ತಮ್ಮ ಆರಾಧನೆಯ ಹಿಂದಿನ ಶ್ರೇಷ್ಠ ತತ್ತ್ವವೊಂದರ ಅರಿವಾಯಿತು. ಜೀವನದ ಅಗಾಧತೆ, ಧ್ಯೇಯದ ಶ್ರೇಷ್ಠತೆಯೊಂದಿಗೆ ಆಚರಣೆ ಹಾಗೂ ದೇಶದ ಗರಿಮೆಯೊಂದಿಗೆ ಅವರ ಸಂಬಂಧವನ್ನು ಬೆಸೆಯಿತು. ಇವೆಲ್ಲವೂ ಸಂಕುಚಿತ ಮತ ಬೋಧಕರಿಂದ ಸಾಧ್ಯವೇ? ಅದು ರಾಷ್ಟ್ರಪುರುಷ, ದೇಶವನ್ನು ಏಕಸೂತ್ರದೊಂದಿಗೆ ಬಂಧಿಸಿ ರಾಷ್ತ್ರದ ಪರಿಕಲ್ಪನೆಯನ್ನು ಮತ್ತೆಕಟ್ಟಿಕೊಟ್ಟ ಸ್ವಾಮಿ ಶಂಕರರಿಂದ ಮಾತ್ರ ಸಾಧ್ಯ. ಪಂಡಿತ್ ಜೀ ಹೇಳುತ್ತಾರೆ, ಹೀಗೆ ಶಂಕರರು ಕೆಳಗಿನ ಸೋಪಾನದಲ್ಲೇ ಕೊಳೆಯುತ್ತಿದ್ದ ಇಡೀ ಸಮುದಾಯವನ್ನು ಮೇಲಕ್ಕೆತ್ತಿದರು. ಸಂಕುಚಿತ ಧ್ಯೇಯದೊಂದಿಗೆ ನೀರ ಹೊಂಡದಲ್ಲಿ ಕೊಳೆಯುತ್ತಿದ್ದ ಪ್ರವಾಸಿಗನನ್ನು ವಿಶಾಲ ರಾಷ್ಟ್ರಗಂಗೆಯಲ್ಲಿ ಮಿಂದೇಳುವ ಯಾತ್ರಿಕನನ್ನಾಗಿಸಿದರು! ದೇವ-ದೇವಿಯರೆಂಬ ಚಿಕ್ಕಪಾತ್ರೆಗಳಲ್ಲಿ ತುಂಬಲಾಗದೆ ಉಕ್ಕಿ ಇತರರ ಬಗ್ಗೆ ಟೀಕೆಯಲ್ಲೇ ಕಾಲವ್ಯರ್ಥ ಮಾಡುತ್ತಿದ್ದ ಹಿಂದೂ ಹೃದಯದ ಅಗಾಧ ಶ್ರದ್ಧೆ ವಿಶಾಲವಾದ ಏಕತ್ವದ ಅದ್ವೈತ ಸಾಗರದಲ್ಲಿ ಸ್ಥಾನ ಪಡೆಯಿತು. ಭಗವಾನ್ ಶ್ರೀಕೃಷ್ಣ ಗೀತೆಯ ಮೂಲಕ ವಿಭಿನ್ನ ವಿಚಾರಧಾರೆಗಳಲ್ಲಿ ಅಭಿನ್ನತೆಯನ್ನು, ಸಮಾನತೆಯನ್ನು ಸಾಮ್ರಾಜ್ಯ ಸ್ಥಾಪನೆಯೊಂದರ ಮೂಲಕ ತರಲು ಯತ್ನಿಸಿದರೆ, ಭಗವಾನ್ ಶಂಕರರು ರಾಷ್ಟ್ರ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಏಕತೆಯನ್ನು ನಿರ್ಮಿಸಿ ಆ ಏಕತೆಯ ಸಂಸ್ಕಾರಗಳನ್ನು ಹಾಕುವ ಪರಂಪರೆಯನ್ನು ಪುಷ್ಠೀಕರಿಸಿ ಸಾಂಸ್ಕೃತಿಕ ಜೀವನದ ಅಭಿನ್ನತೆಗೆ ಶಕ್ತಿ ಕೊಟ್ಟರು. ಅನೇಕತೆಯಲ್ಲಿ ಏಕತೆ ಎನ್ನುವ ನಮ್ಮ ಪುರಾತನ ಸಿದ್ಧಾಂತವನ್ನು ಆಚಾರ್ಯ ಶಂಕರರೇ ಆತ್ಮಿಕ, ಭೌತಿಕ, ನೈತಿಕ, ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಂದು ಅದ್ವೈತದ ಸಿದ್ಧಾಂತವನ್ನು ಪ್ರತಿಪಾದಿಸಿ ಅವುಗಳನ್ನು ವ್ಯಾವಹಾರಿಕ ಜಗತ್ತಿಗೆ ತಂದರು. ಇದರಿಂದಾಗಿ ಒಂದು ಕಡೆ ಸಂಪ್ರದಾಯವಾದಿ ಕರ್ಮಕಾಂಡ ಇನ್ನೊಂದೆಡೆ ನಾಸ್ತಿಕವಾದಿ ಜಡವಾದದ ಸುಳಿಯಲ್ಲಿ ಬೀಳುವುದರಿಂದ ಭಾರತದೇಶ ತಪ್ಪಿಸಿಕೊಂಡಿತು. ಇದರಿಂದಾಗಿಯೇ ಭಾರತ ಛಿದ್ರ-ವಿಚ್ಛಿದ್ರವಾಗಿದ್ದೂ ಆಂತರಿಕ ಏಕತೆಯನ್ನು ವಾಸ್ತವಿಕತೆಯಾಗಿ ಮಾರ್ಪಾಟು ಮಾಡಲು ಭಾರತ ಹಂಬಲಿಸಿದೆ ಎನ್ನುತ್ತಾರೆ ಪಂಡಿತ್ ಜೀ.
ಮಲಗಿರುವವರು ಕಲಿಯುಗದವರು ಹಾಸಿಗೆ ಬಿಟ್ಟು ಎದ್ದವರು ದ್ವಾಪರಯುಗದವರು. ಎದ್ದು ನಿಲ್ಲುವವರು ತ್ರೇತಾಯುಗವನ್ನು ನಿರ್ಮಿಸುವರು. ಮುಂದೆ ನಡೆಯುವವರು ಕೃತಯುಗವನ್ನು ಕಡೆಯುವರು. ನಡೆಮುಂದೆ; ನಡೆ ಮುಂದೆ...ಇದು ದೀನದಯಾಳರ ಬಾಯಿಂದ ಆಗಾಗ ಕೇಳುತ್ತಿದ್ದ ಮಾತುಗಳು. ಶಂಕರರು ಬದುಕಿದ್ದು ಹೀಗೆಯೇ. ಅವರು ಕೃತಯುಗವನ್ನೇ ಕಡೆದರು. ಪಂಡಿತ್ ಜೀ ಶಂಕರರ ಜೀವನವನ್ನು ಪ್ರಸಕ್ತ ಕಾಲಕ್ಕೆ ಸಮೀಕರಿಸಿ ಬರೆದುದು ತರುಣ ಕಾರ್ಯಕರ್ತರಿಗೆ ಬೆಳಕಾಗಲೆಂದೇ. ಶಂಕರರ ಜೀವನವನ್ನು ಸ್ವಯಂಸೇವಕನೊಬ್ಬ ಸವೆಸಬೇಕಾದ ಜೀವನದಂತೆ ಕಂಡ ಅವರು ಸ್ವಯಂಸೇವಕನೊಬ್ಬ ತೃಣದಿಂದ ಬ್ರಹ್ಮತ್ವಕ್ಕೇರುವ ಕಥೆಯಂತೆ ಚಿತ್ರಿಸಿದ್ದಾರೆ. ಶಿವರಾಮುರವರ "ಜಡಲೋಕದಿಂದ ಉಡುಲೋಕಕ್ಕೆ" ಕವನದಲ್ಲಿ "ಇಷ್ಟಿತ್ತು ಸ್ವತ್ತು : ಎಷ್ಟಿತ್ತೊ ಸತ್ತ್ವ!" ಎಂದಿದ್ದಾರೆ. ಇದು ಶಂಕರರಿಗೂ ಅವರ ಚರಿತ್ರೆ ಬರೆದ ದೀನದಯಾಳರಿಗೂ ಅನ್ವಯವಾಗುತ್ತದೆ. ಅವರದೆನ್ನುವುದೂ ಅವರಲ್ಲಿ ಏನೂ ಇರಲಿಲ್ಲ. ಆದರೆ ಸರ್ವ ಸಮಾಜವೇ ಅವರದಾಗಿತ್ತು. ಅವರ ಸತ್ತ್ವವನ್ನು ನಾವು ಅಳೆಯುವುದು ಅಳವಲ್ಲ! ಅದಕೆಂದೂ ಅಳಿವಿಲ್ಲ!