ಪುಟಗಳು

ಭಾನುವಾರ, ಜುಲೈ 28, 2019

ನಿಜವಾದ ಅಸಹಿಷ್ಣುಗಳಾರು?

ನಿಜವಾದ ಅಸಹಿಷ್ಣುಗಳಾರು?


             ದನ ಕಳ್ಳ ಅಖ್ಲಾಖನಿಗೆ ಬಡಿದಾಗ ಎದ್ದ ಅಸಹಿಷ್ಣುತೆ ಎಂಬ ಕೂಗು ಅಖ್ಲಾಖನ ಬಳಿ ಇದ್ದದ್ದು ದನದ ಮಾಂಸ ಎಂದು ಫೊರೆನ್ಸಿಕ್ ರಿಪೋರ್ಟ್ ಹೇಳಿದಾಗ ಮಕಾಡೆ ಮಲಗಿತ್ತು. ಸ್ವಾತಂತ್ರ್ಯೋತ್ತರದಲ್ಲಿ ದೇಶ ಕಂಡು ಕೇಳರಿಯದ ಅಭಿವೃದ್ಧಿಯನ್ನು ಕಳೆದ ಐದು ವರ್ಷಗಳಲ್ಲಿ  ನಡೆಸಿದ ಸರಕಾರಕ್ಕೆ ಎಲ್ಲಾ ಪ್ರತಿಪಕ್ಷಗಳಿಂದ, ವಿರೋಧಿಗಳಿಂದ ಸಿಕ್ಕಿದ್ದೇನೆಂದರೆ  "ಭಾರತದಲ್ಲಿ ಅಸಹಿಷ್ಣುತೆ ಇದೆ, ಮಾಬ್ ಲಿಂಚಿಂಗ್ ನಡೆಯುತ್ತಿದೆ, ಕೇಸರಿಕರಣ ನಡೆಯುತ್ತಿದೆ" ಎಂಬ ಸುಳ್ಳನ್ನು ಜಾಗತಿಕ ಮಟ್ಟದಲ್ಲಿ ಬೊಬ್ಬೆಯೆಬ್ಬಿಸಿ ಭಾರತದ ಮಾನವನ್ನು ಹೀನವಾಗಿಸಲು ನಡೆಸಿದ ಯತ್ನ!

              ಆದರೆ ನಿಜವಾದ ಅಸಹಿಷ್ಣುತೆ, ಅಸಹನೆ ಯಾವ ಕಡೆಯಿಂದ ಇದೆ ಎನ್ನುವುದನ್ನು ಇತಿಹಾಸದ ಹಲವು ನಿದರ್ಶನಗಳೇ ನಮಗೆ ಪರಿಚಯಿಸುತ್ತವೆ. ಅಜ್ಮೀರದಲ್ಲೊಂದು ದರ್ಗಾ ಇದೆ. ಹಿಂದೂಗಳೂ ಚಾದರ ಸಮರ್ಪಿಸುವ ದರ್ಗಾ! 1191ರಲ್ಲಿ ಮಹಮ್ಮದ್ ಘೋರಿ, ಪೃಥ್ವೀರಾಜನ ರಾಜ್ಯದ ಮೇಲೆ ಆಕ್ರಮಣಕ್ಕೆ ಬಂದಿದ್ದಾಗ ಆತನ ಜೊತೆ ಬಂದವನೇ ಮೊಯಿನುದ್ದೀನ್ ಚಿಸ್ತಿ. ಪೃಥ್ವೀರಾಜನಿಂದ ಹೀನಾಯವಾಗಿ ಸೋಲಲ್ಪಟ್ಟ ಘೋರಿ ಹಿಂದಿರುಗಿದ. ಆದರೆ ಈ ಚಿಸ್ತಿ ಅಜ್ಮೀರದಲ್ಲೇ ನೆಲೆಯೂರಿದ. ಮರು ವರ್ಷ ಮತ್ತೆ ಆಕ್ರಮಣಕ್ಕೆ ಬಂದ ಘೋರಿಗೆ ಪೃಥ್ವೀರಾಜನನ್ನು ಗೆಲ್ಲಲು ವಂಚನೆಯ ಮಾರ್ಗವನ್ನು ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ. ಅಣ್ಣನನ್ನು ಕೇಳದೆ ನಾನು ನಿರ್ಣಯಿಸಲಾರೆ. ಹಾಗಾಗಿ ಅಣ್ಣನಿಂದ ಉತ್ತರ ಬರುವವರೆಗೆ ತಡೆಯಿರಿ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ಕಾಫಿರರನ್ನು ಸಾಯಬಡಿದು ತರೈನಿನಲ್ಲಿ ತಮ್ಮ ಅರಸ ಸಾಧಿಸಿದ ವಿಜಯವನ್ನು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ. ಪೃಥ್ವೀರಾಜನನ್ನು ಕೊಂದ ಬಳಿಕ ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಹೀಗೆ ಭಾರತದ ಇತಿಹಾಸವನ್ನೇ ಬದಲಿಸಿದ ಈ ಘಟನೆ ನುಸುಳುಕೋರನೊಬ್ಬ ಆಶ್ರಯ ಕೊಟ್ಟವರ ವಿರುದ್ಧವೇ ಅಸಹನೆ ತೋರಿದ, ಭಾರತದ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಮೊದಲ ಘಟನೆಯೂ ಹೌದು. ನುಸುಳುಕೋರರು ಎಂದೆಂದಿಗೂ ದೇಶಕ್ಕೆ ಅಪಾಯಕಾರಿಗಳು ಎನ್ನುವುದನ್ನು ಸೂಚಿಸಿದ ಘಟನೆಯೂ ಹೌದು. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು! ಈಗ ಹೇಳಿ ಅಸಹಿಷ್ಣುಗಳು ಯಾರು? ಅಸಹನೆ ಯಾರದ್ದು?
ಕೌಟಿಲ್ಯ ತನ್ನ ಲಬ್ಧಪ್ರಶಮನಂದಲ್ಲಿ
ಚೋರ ಪ್ರಕೃತೀನಾಂ ಮ್ಲೇಚ್ಛಜಾತೀನಾಂ
ಚ ಸ್ಥಾನವಿಪರ್ಯಾಸಂ ಅನೇಕಸ್ಥಂ ಕಾರಯೇತ್ ||
ಕಳ್ಳ ಸ್ವಭಾವದವರು, ಮ್ಲೇಚ್ಛ ಮುಂತಾದ ವಲಸಿಗರನ್ನು ಒಂದೇ ಜಾಗದಲ್ಲಿ ಒಟ್ಟುಗೂಡಿ ನಿಲ್ಲುವುದಕ್ಕೆ ಅವಕಾಶ ಕೊಡಬಾರದು. ಅವರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುತ್ತಿರಬೇಕು ಎಂದಿದ್ದಾನೆ. ನಮ್ಮ ರಾಜರುಗಳ ಔದಾರ್ಯಕ್ಕೆ ಕೊನೆಯೆಲ್ಲಿ? ರಾಜನಾದವನು ಉದಾರನಿರುವಂತೆ, ಕಠಿಣನೂ ಇರಬೇಕು ಎನ್ನುವುದನ್ನು ಮರೆತುಬಿಟ್ಟೇ ಇಂದಿಗೂ ವಲಸಿಗರ ಉಪಟಳ ತಾರಕಕ್ಕೇರಿರುವುದು! ಇದು ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಲು ಹೊರಟಿರುವ, ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರವೂ ಹೌದು; ಈ ವಲಸಿಗರು ಅಸಹಿಷ್ಣುಗಳೂ ಕೂಡಾ!

             ಹುಮಾಯೂನ ರಜಪೂತರ ಮೇಲೆ ಆಕ್ರಮಣ ಮಾಡಿದ್ದ. ಆದರೆ ಮುಂದೆ ರಜಪೂತರು ಹುಮಾಯೂನ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಆತನಿಗೆ ಆಶ್ರಯ ನೀಡಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟರು! ಅಕ್ಬರ್ ಹುಟ್ಟಿದ್ದು ಹಿಂದೂ ಕೋಠಿಯೊಳಗೆ. ಬಾಣಂತನವೆಲ್ಲಾ ಮುಗಿದ ಬಳಿಕ ಹುಮಾಯೂನನ ಅಸಹಿಷ್ಣುತೆ ಭುಗಿಲೆದ್ದಿತು. ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಅವನು ಯುದ್ದಕ್ಕಿಳಿದ! ಹಿಂದೂಗಳ ಆಶ್ರಯದಲ್ಲಿ ಅದರಲ್ಲೂ ರಜಪೂತರ ಸೂರಿನಡಿಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ! ಅದೆಷ್ಟು ದೇವಾಲಯಗಳನ್ನು ಭಗ್ನಗೊಳಿಸಿದ! ಚಿತ್ತೋಡಗಢದ ಮೇಲೆ ದಾಳಿ ಮಾಡಿದ ಅಕ್ಬರ್ ಊರೂರುಗಳನ್ನೇ ಸುಟ್ಟು ಕೋಟೆಗಳನ್ನು ಪುಡಿಗಟ್ಟಿದ. ಅಬುಲ್ ಫಜಲ್ ಹೇಳುವಂತೆ ಮೂವತ್ತು ಸಾವಿರ ಜನರನ್ನು ಕೊಂದು ಅವರ ತಲೆಗಳನ್ನು ಕುಯ್ಯಿಸಿ ಅವುಗಳಿಂದ ಒಂದು ಗೋಪುರ ಕಟ್ಟಿದ. ಅವನ ಅನುಯಾಯಿಗಳು ಒಡೆಯನ ಅನುಮತಿ ಪಡೆದು ವಿಜೃಂಭಿಸಿದರು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು.  ಕೆಲವು ದಾಖಲೆಗಳ ಪ್ರಕಾರ ಸತ್ತವರ ಯಜ್ಞೋಪವೀತ ತೂಗಿದರೆ ಹತ್ತಾರು ಮಣಗಳಷ್ಟಿತ್ತಂತೆ! ಇನ್ನೂ ಕೆಲವು ದಾಖಲೆಗಳ ಪ್ರಕಾರ ಅದರ ತೂಕ 74ಮಣಗಳು(8 ಪೌಂಡುಗಳು)! ರಾಜರನ್ನೋ, ಸೈನಿಕರನ್ನೋ ಯುದ್ಧದಲ್ಲಿ ಕೊಲ್ಲುವುದೇನೋ ಒಂದು ಬಗೆಯಲ್ಲಿ ಒಪ್ಪಬಹುದು. ಆದರೆ ಜನಸಾಮಾನ್ಯರನ್ನು ಕೊಲ್ಲುವುದು, ಅವರನ್ನು ಮತಾಂತರಿಸುವುದು, ಮಾನಿನಿಯರ ಮಾನ ಹರಣಮಾಡುವುದು ಇವೆಲ್ಲಾ ಅಸಹಿಷ್ಣುತೆಯ ಪ್ರತೀಕಗಳಲ್ಲವೇ? ಭಾರತದ ಇತಿಹಾಸದಲ್ಲಿ ಮೊಘಲರು ಮಾಡಿದ್ದು ಇದನ್ನೇ. ಮೊಘಲರು ಅಸಹಿಷ್ಣುಗಳಲ್ಲದಿದ್ದರೆ ಯಾಕೆ ಅವರಲ್ಲಿ ಒಬ್ಬನೇ ಒಬ್ಬ ಶ್ರೀರಾಮಚಂದ್ರನೋ, ಪೃಥ್ವೀರಾಜನೋ, ಶಿವಾಜಿಯೋ ಹುಟ್ಟಲಿಲ್ಲ? ಘಜನಿ ಮಹಮ್ಮದ್, ಬಾಬರ ಟಾರ್ಟರರು; ಮಹಮ್ಮದ್ ಘೋರಿ, ನಾದಿರ್ ಶಹಾ, ಅಹಮದ್ ಶಹಾ ಅಬ್ದಾಲಿ ಅಫ್ಘನ್ನರು. ಅಫ್ಘನ್ನರು ಹಾಗೂ ಟಾರ್ಟರರು ತಮ್ಮೊಳಗೇ ಕಿತ್ತಾಡಿಕೊಂಡಿದ್ದರೂ ಹಿಂದೂಗಳನ್ನು ನಾಶ ಮಾಡುವ ಬಗ್ಗೆ ಅವರಲ್ಲಿ ಏಕಶೃದ್ಧೆಯಿತ್ತು ಏಕೆ? ಮೊಘಲ್ ಸಹಿತ ಎಲ್ಲಾ ಮುಸ್ಲಿಮ್ ರಾಜರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅವುಗಳು ತಳಪಾಯವನ್ನೇ ಉಪಯೋಗಿಸಿಕೊಂಡು ಮಸೀದಿಯನ್ನು  ನಿರ್ಮಿಸಿದರಲ್ಲಾ, ಅವೆಲ್ಲಾ ಅಸಹಿಷ್ಣುತೆಯಲ್ಲವೇ?

              ಗುರು ಗೋವಿಂದ ಸಿಂಗರನ್ನು ಪಠಾಣ ಶಿಷ್ಯರಿಂದಲೇ ಹೊಡೆಸಿ ಕೊಂದ ವಜೀರ ಖಾನನದ್ದು, ಗುರು ತೇಜ್ ಬಹಾದ್ದೂರರ ಶಿಷ್ಯ ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ದೇಹವನ್ನು ಛಿದ್ರಗೊಳಿಸಿದ; ಇನ್ನಿಬ್ಬರು ಶಿಷ್ಯರನ್ನು ಕುದಿಯುವ ನೀರಿಗೂ, ಉರಿಯುವ ಬೆಂಕಿಗೂ ಎತ್ತಿ ಒಗೆದ; ಹಾಡುಹಗಲೇ ತೇಜ್ ಬಹಾದೂರರ ತಲೆಯನ್ನು ಕತ್ತರಿಸಿ ಚೆಲ್ಲಿದ; ಮರಾಠ ವೀರ ಸಂಭಾಜಿಯ ಕಣ್ಣುಗಳನ್ನು ತಿವಿದು, ನಾಲಿಗೆ ಕತ್ತರಿಸಿ, ಶರೀರದ ಅಂಗಾಂಗಗಳನ್ನು ಒಂದೊಂದಾಗಿ ಕತ್ತರಿಸಿ ಆ ಮಾಂಸವನ್ನು ನಾಯಿಗಳಿಗೆ ಹಾಕಿ ಚಿತ್ರಹಿಂಸೆ ಕೊಟ್ಟು ಕೊಂದು, ಅವನ ರುಂಡದಲ್ಲಿ ಹುಲ್ಲುತುಂಬಿ ಡೋಲು ಬಾರಿಸುತ್ತಾ ಕಹಳೆ ಊದುತ್ತಾ ದಖ್ಖನಿನ ಮುಖ್ಯ ಪಟ್ಟಣಗಳಲ್ಲಿ ಪ್ರದರ್ಶಿಸಲು ಏರ್ಪಾಟು ಮಾಡಿದ; ಗೋಲ್ಕೊಂಡಾದ ಮಂತ್ರಿಗಳಾಗಿದ್ದ ಅಕ್ಕಣ್ಣ-ಮಾದಣ್ಣರನ್ನು ಕೊಲ್ಲಿಸಿ ಅವರ ತಲೆಗಳನ್ನು ತನಗೆ ತೃಪ್ತಿಯಾಗುವಷ್ಟು ಕಾಲ ಆನೆಗಳ ಕಾಲುಗಳ ಕೆಳಗೆ ಹಾಕಿ ನುಜ್ಜುಗುಜ್ಜು ಮಾಡಿಸಿದ; ಅಸಂಖ್ಯ ದೇವಾಲಯಗಳನ್ನು, ಮತಾಮತರಕ್ಕೆ ಒಪ್ಪದ ಹಿಂದೂಗಳನ್ನು ಸರ್ವನಾಶಗೈದ ಔರಂಗಜೇಬನದ್ದು ಅಸಹಿಷ್ಣುತೆಯಲ್ಲವೇ?

             ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರೇರಣೆ ಪಡೆದು ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿ ಶ್ರದ್ಧಾನಂದ ಓರ್ವ ಕ್ರಾಂತಿಕಾರಿ ಹಿಂದೂ ಸಂತ. ಗಾಂಧಿಯವರ ಅಸಹಕಾರ ಆಂದೋಲನದ ಮೂಲಕ ರಾಜಕೀಯ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದ ಈ ಸಂನ್ಯಾಸಿ ಜಾಮಾ ಮಸೀದಿಯ ವೇದಿಕೆಯಲ್ಲೂ ಪ್ರವಚನ ನೀಡಿದ್ದರು! ಗಾಂಧಿಯವರ ಗೊಂದಲದ ಮನಃಸ್ಥಿತಿ ಹಾಗೂ ನಿರಂಕುಶ ಸರ್ವಾಧಿಕಾರವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಹೊರಬಂದ ಆತ ಶುದ್ಧಿ ಪ್ರಚಾರಕ್ಕೆ ಆರಂಭಿಸಿದರು. ಅವರ ಕರೆಗೆ ಓಗೊಟ್ಟು ಉತ್ತರಪ್ರದೇಶದಲ್ಲಿ ಆರು ತಿಂಗಳಲ್ಲೇ(1923) 18ಸಾವಿರ ಮತಾಂತರಿತರು ಮಾತೃಧರ್ಮಕ್ಕೆ ಮರಳಿದ್ದರು. ಇದರಂದ ಮುಸ್ಲಿಮರು ಅವರನ್ನು ಶತ್ರುವಿನಂತೆ ಕಾಣತೊಡಗಿದರು. ಕೊನೆಗೆ ಅಬ್ದುಲ್ ರಶೀದ್ ಎಂಬ ಮತಾಂಧ ನೀರು ಕೇಳುವ ನೆಪವೊಡ್ದಿ ಅವರನ್ನು ಗುಂಡಿಟ್ಟು ಕೊಂದ. ಬ್ರಿಟಿಷ್ ನ್ಯಾಯಾಲಯ ರಶೀದನನ್ನು ಗಲ್ಲಿಗೇರಿಸಿದಾಗ ಆತನಿಗೆ ಶೃದ್ಧಾಂಜಲಿ ಸಲ್ಲಿಸುವ ಮೆರವಣಿಗೆಯಲ್ಲಿ 50ಸಾವಿರಕ್ಕೂ ಹೆಚ್ಚು ಮುಸ್ಲಿಮರು ಸೇರಿದ್ದರು. ರಶೀದ್ ಹುತಾತ್ಮ ಎಂಬ ಕರಪತ್ರವನ್ನೂ ಹೊರಡಿಸಲಾಯಿತು! ಈಗ ಹೇಳಿ ಅಸಹಿಷ್ಣುಗಳು ಯಾರು?

              ಈ ದೇಶದಲ್ಲಿ ಇಸ್ಲಾಮಿನ ನಿಜ ಮಾನಸಿಕತೆಯನ್ನು ಬಿಚ್ಚಿಡುವ ಎಲ್ಲಾ ಬರಹಗಳು ನಿಷೇಧಿಸಲ್ಪಡುತ್ತವೆ. ಮಹರ್ಷಿ ಅರವಿಂದರ "ದಿ ಕುರಾನ್ ಆಂಡ್ ದಿ ಕಾಫಿರ್" ನಿಷೇಧಿಸಲ್ಪಟ್ಟಿತು. ರಿಚರ್ಡ್ ಮ್ಯಾಕ್ಸ್ ವೆಲ್ರ "ಸೂಫಿಸ್ ಆಫ್ ಬಿಜಾಪುರ"ಕ್ಕೂ ಅದೇ ಗತಿಯಾಯಿತು. ಪಂಡಿತ ಚಂಪೂಪತಿ ಬರೆದ ರಂಗೀಲಾ ರಸೂಲ್, ಮ್ಯಾಕ್ಸ್ ವೈಲಿಯ ಹಿಂದೂ ಹೆವೆನ್, ಅರ್ಲಿ ಇಸ್ಲಾಮ್, ರಶ್ದಿಯ ಸಟಾನಿಕ್ ವರ್ಸಸ್, ರಾಮಸ್ವರೂಪರ "ಅಂಡರ್ಸ್ಟ್ಯಾಂಡಿಗ್ ಇಸ್ಲಾಮ್ ಥ್ರೋ ಹದೀಸ್", ದಿ ಟ್ರೂ ಫರ್ಕಾನ್, ಸತ್ಯಾರ್ಥ ಪ್ರಕಾಶ್(ಸಿಂಧ್ ನಲ್ಲಿ), ತಸ್ಲಿಮಾ ನಸ್ರೀನರ ದ್ವಿಖಂಡಿತೋ...ಇನ್ನೆಷ್ಟೋ ನಿಷೇಧಿಸಲ್ಪಡುವಾಗ ಅಸಹಿಷ್ಣುತೆ ಕಣ್ಣು ಮುಚ್ಚಿ ಕುಳಿತಿತ್ತೇ?ಅಸಹಿಷ್ಣುಗಳ ಕ್ರೌರ್ಯಕ್ಕೆ ಕಾಶ್ಮೀರ ಪಂಡಿತರು ಎಂಬ ಜನಾಂಗವೇ ಅಳಿಯುವಂತಹ ಸ್ಥಿತಿಗೆ ತಲುಪಿತು. ಇವೇ ಅಸಹಿಷ್ಣುಗಳು ಗೋಧ್ರಾದಲ್ಲಿ ಕರಸೇವಕರನ್ನು ಸುಟ್ಟು ಕೊಂದರು. 2013ರ ಮುಜಾಫುರ ನಗರ ದಂಗೆಗೆ ಕಾರಣವಾದದ್ದೂ ಈ ಅಸಹಿಷ್ಣುತೆಯೇ.

             ಇದೆಲ್ಲವೂ ಇತಿಹಾಸ. ಈಗ ಹಾಗೇನಾಗಿದೆ ಎಂದಿದ್ದರೆ ನಿಮ್ಮ ಊಹೆ ತಪ್ಪು. ಇವೇ ಅಸಹಿಷ್ಣುಗಳ ಉಪಟಳದಿಂದ ಕೈರಾನದಲ್ಲಿ ಹಿಂದೂಗಳು ಊರನ್ನೇ ತೊರೆದು ಹೊರಟರು(2016). ತಮ್ಮ ಮತಾಂತರ ಕಾರ್ಯಕ್ಕೆ ತಡೆಯೊಡ್ಡಿದ ಎಂಬ ಒಂದೇ ಕಾರಣಕ್ಕೆ ರಾಮಲಿಂಗಮರನ್ನು ಬಡಿದು ಕೊಂದರು(2019). ತನ್ನ ಮಗಳನ್ನು ಚುಡಾಯಿಸಿದ್ದನ್ನು ಆಕ್ಷೇಪಿಸಿದ ಧ್ರುವ ತ್ಯಾಗಿಯನ್ನು ಸಿಗಿದು ಹಾಕಿದರು(ಮೇ 2019). ಉತ್ತರಪ್ರದೇಶದ ಔರೈಯಾದಲ್ಲಿ ಗೋಹತ್ಯೆಯನ್ನು ವಿರೋಧಿಸಿದ ಮೂವರು ಸಾಧುಗಳ ಹಲಾಲ್ ಮಾಡಿ ಶಿವದೇಗುಲದ ಕಲ್ಯಾಣಿಗೆ ಎಸೆದರು(ಆಗಸ್ಟ್ 2018). ಚಾಂದನೀ ಚೌಕದಲ್ಲಿ ದೇವಾಲಯವನ್ನೇ ಕೆಡವಿದರು. ಆಳ್ವಾರ್ನಲ್ಲಿ ಗೋಹಂತಕರನ್ನು ಎದುರಿಸಿದ ರತನ್ ಸಿಂಗರನ್ನು ಹತ್ಯೆಗೈದರು. ಮುಸ್ಲಿಮ್ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಸಂಜಯ್ ಕುಮಾರ್ ಕೊಲ್ಲಲ್ಪಟ್ಟ(2019). ಖಾಯಲಾದ ಪರಿವಾರ, ಮಹಾರಾಷ್ಟ್ರದಲ್ಲಿ ಕಾನ್ಸ್ಟೇಬಲ್, ದೆಹಲಿಯ ದಂತವೈದ್ಯ, ಖುರ್ಷಿದಾಪುರದ ರೈತ...ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೆಲ್ಲಕ್ಕೂ ಕಾರಣ ತಮ್ಮ ಅಕ್ರಮ ಚಟುವಟಿಕೆಗಳಾದ ಗೋಹತ್ಯೆ, ಮಾದಕದ್ರವ್ಯ ಮಾರಾಟ, ಅತ್ಯಾಚಾರ, ಮತಾಂತರಕ್ಕೆ ಅಡ್ಡಿಯಾದರು ಎಂಬ ಕಾರಣಗಳೇ ಆಗಿದ್ದರೂ ಮೂಲ ಕಾರಣ ಅಸಹಿಷ್ಣುತೆ, ಅಸಹನೆ, ಮತಾಂಧತೆಯೇ! ಇನ್ನೂ ಈ ವರ್ಷ ಕೇಳಿ ಬಂದ ಅತ್ಯಾಚಾರ, ಲವ್ ಜಿಹಾದ್ ಪ್ರಕರಣಗಳಂತೂ ದಂಗುಬಡಿಸುವಂತಹದ್ದು. ಸಾಲ ಕೊಟ್ಟ ಹತ್ತು ಸಾವಿರ ರೂಪಾಯಿಯನ್ನು ಮರಳಿಸುವಂತೆ ಕೇಳಿಕೊಂಡದ್ದಕ್ಕೆ ಮೂರು ವರ್ಷದ ಮಗಳ ಮೇಲೆ ಅತ್ಯಾಚಾರ, 71 ವರ್ಷದ ದಾದಿಯ ಮೇಲೆ ಅತ್ಯಾಚಾರ, ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಮದ್ರಸಾದಲ್ಲಿ ಅತ್ಯಾಚಾರ, ದಲಿತ ಹುಡುಗಿಯನ್ನು ಅಪಹರಣ ಮಾಡಿ ಮತಾಂತರಿಸಿ ಅತ್ಯಾಚಾರ...ಹೀಗೆ ಮುಗಿಯಲೊಲ್ಲದ ಘಟನೆಗಳು.

              ಈ ಎಲ್ಲಾ ಘಟನೆಗಳು ನಿಜವಾದ ಅಸಹಿಷ್ಣುಗಳು ಯಾರು, ಅಸಹನೆ ಯಾವ ದಿಕ್ಕಿನಿಂದ ಇದೆ, ಮತಾಂಧತೆ ಯಾರದ್ದು, "ಮಾಬ್ ಲಿಂಚಿಂಗ್" ಮಾಡುವವರು ಯಾರು ಎನ್ನುವುದನ್ನು ಮಾತ್ರವಲ್ಲ ಜಾತ್ಯಾತೀತರ ಮಹಾಸುಳ್ಳುಗಳನ್ನೂ ಎತ್ತಿ ತೋರಿಸುತ್ತವೆ. ದೇಶದಲ್ಲಿ ಪದೇ ಪದೇ ಸಂಘ ಕಾರ್ಯಕರ್ತರ ಕೊಲೆಯಾಗುತ್ತಿದ್ದರೂ ಅಸಹಿಷ್ಣುತಾ ಬ್ರಿಗೇಡಿಗೆ ಆಗ ಅಸಹಿಷ್ಣುತೆಯ ನೆನಪಾಗುವುದಿಲ್ಲ. ಹೇಗೆ ಪೆಟಾ(PETA)ಕ್ಕೆ ಗೋವುಗಳು ಪ್ರಾಣಿಗಳು ಅಂತ ಅನ್ನಿಸುವುದಿಲ್ಲವೋ ಹಾಗೆಯೇ ಮಾನವ ಹಕ್ಕು ಆಯೋಗಕ್ಕೆ ಸಂಘದ ಕಾರ್ಯಕರ್ತರು ಮಾನವರೆಂದು ಅನ್ನಿಸುವುದೇ ಇಲ್ಲ! ಜಾತ್ಯಾತೀತರು ಎಂದು ಹೇಳಿಕೊಳ್ಳುವವರೆಲ್ಲಾ ಈ ಬಗೆಯ ಎಲ್ಲಾ ಘಟನೆಗಳು ನಡೆದಾಗ ಮುಗುಮ್ಮಾಗುಳಿಯುತ್ತಾರೆ. ಮತಾಂಧರ ಆಟಾಟೋಪಗಳಿಗೆ ಇವರದ್ದು ದಿವ್ಯ ಮೌನ. ಅದೇ ಹಿಂದೂಗಳ ತಪ್ಪಿರದಿದ್ದಾಗ್ಯೂ ಆ ಘಟನೆಯನ್ನು ವೈಭವೀಕರಿಸಿ ಅಸಹಿಷ್ಣುತೆ ಎಂದು ಬೊಬ್ಬಿರಿದು ದೇಶದ ಮಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹರಾಜು ಹಾಕುತ್ತಾರೆ. ಹಿಂದೂಗಳನ್ನು ಸಹಿಸದ ಜಾತ್ಯಾತೀತರ ಈ ಮನಃಸ್ಥಿತಿಯೂ ಅಸಹಿಷ್ಣುತೆಯಡಿಯಲ್ಲಿ ಬರುವುದಿಲ್ಲವೇ?  ಮೋದಿ ಸರಕಾರವಿದ್ದರೂ ಈ ಘಟನೆಗಳು ನಡೆದವೇ? ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲವೇ? ಮೋದಿ ಸರಕಾರ ಕಾನೂನಿನಂತೆ ನಡೆದುಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಅಪರಾಧಗೈಯುವವರಿಗೆ ಕಾನೂನಿನ ಭಯ ಎಂಬುದಾದರೂ ಇರಬೇಕಲ್ಲವೇ? ಯಾಕಿಲ್ಲ? ನಮ್ಮ ನ್ಯಾಯಾಲಯಗಳು ಕೊಡುವ ತೀರ್ಪು ಅಂತಿದೆ! ಇಲ್ಲಿ ಮುಸ್ಲಿಮರ ಮತಾಂಧತೆಯನ್ನು ಎತ್ತಿ ತೋರಿಸಿದವರಿಗೇ ಶಿಕ್ಷೆ ವಿಧಿಸಿ, ಕುರಾನ್ ಹಂಚಿ ಎನ್ನುವ ತೀರ್ಪು ಕೊಡುವ ಮನಃಸ್ಥಿತಿಯ ನ್ಯಾಯಾಧೀಶರೇ ತುಂಬಿರುವಾಗ ಮತಾಂಧರಿಗೆ ಏತರ ಭಯ? ನ್ಯಾಯಾಲಯವೂ ಹಿಂದೂಗಳನ್ನು ಸಹಿಸುವುದಿಲ್ಲವೇ? ಅದಕ್ಕೂ ಅಸಹಿಷ್ಣುತೆಯ ಮನಃಸ್ಥಿತಿ ಅಂಟಿಕೊಂಡಿದೆಯೇ? ಏನೋ! ಈ ಜಾತ್ಯಾತೀತ ರೋಗಕ್ಕೂ ಅಸಹಿಷ್ಣು ಮನಃಸ್ಥಿತಿಗೂ ತುಂಬಾ ಹತ್ತಿರದ ಬಂಧುತ್ವವಂತೂ ಎದ್ದು ಕಾಣುತ್ತಿದೆ! ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂ ಎಂದಾದರೂ ಅಸಹಿಷ್ಣುವಾಗಲು ಸಾಧ್ಯವಿದೆಯೇ?

ಶನಿವಾರ, ಜುಲೈ 6, 2019

ಚರಿತ್ರ ಹೀನನಷ್ಟೇ ಅಲ್ಲ; ಜಿಹಾದಿಗಳನ್ನೂ ನಾಚಿಸಿದ ಮತೋನ್ಮತ್ತ ಅಕ್ಬರ್!

ಚರಿತ್ರ ಹೀನನಷ್ಟೇ ಅಲ್ಲ; ಜಿಹಾದಿಗಳನ್ನೂ ನಾಚಿಸಿದ ಮತೋನ್ಮತ್ತ ಅಕ್ಬರ್!


             ಹಲವು ದಿನಗಳೇ ಉರುಳಿದವು. ಕೋಟೆಯನ್ನು ಸುತ್ತುವರಿದ ಅಗಾಧ ಶತ್ರುಸೇನೆ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೋಟೆಯೊಳಗಿನ ಆಹಾರ ದಾಸ್ತಾನು ಬರಿದಾಗುತ್ತಿರಲು ಕೈ ಮೀರಿದ ಆ ಪರಿಸ್ಥಿತಿಯಲ್ಲಿ ಆತ್ಮಾರ್ಪಣೆಯೇ ಮಾರ್ಗವೆಂದು ನಿರ್ಧರಿಸಿತು ಚಿತ್ತೋಡಿನ ಸೇನೆ. ಬಿಲ್ಲಿನಿಂದ ಸೆಳೆದು ಬಿಟ್ಟ ಬಾಣಗಳಂತೆ ಹೊರಬಿತ್ತು 8000ಕ್ಕೂ ಅಧಿಕ ಯೋಧರ ಪಡೆ. ಆ ಸೈನ್ಯವನ್ನೆಲ್ಲಾ ತನ್ನ ಖಡ್ಗಕ್ಕೆ ಆಹುತಿ ನೀಡಿ ವಿಜಯೋತ್ಸಾಹದಿಂದ ಕೋಟೆಯೊಳಗೆ ಕಾಲಿಟ್ಟ ಶತ್ರುರಾಜ. ಬಾಯಲ್ಲಿ ನೀರೂರಿಸಿದ್ದ ಮೇವಾಡದ ಸೌಂದರ್ಯ ರಾಶಿಗಳನ್ನೆಲ್ಲಾ ತನ್ನ ಜನಾನಾಕ್ಕೆ ತಳ್ಳಿ ಮನಸೋ ಇಚ್ಛೆ ಮೇಯಬಹುದೆಂದು ಒಳಗೊಳಗೇ ಖುಷಿಪಟ್ಟ. ಆದರೆ ಕೋಟೆಯೊಳಹೊಕ್ಕವನಿಗೆ ಕಾಣಸಿಕ್ಕಿದ್ದೇನು? ಧಗಧಗಿಸುತ್ತಿರುವ ಚಿತ್ತೋಡಿನ ಚಿತ್ತಚೋರಿಯರ ಚಿತೆಗಳು! ಒಂದು ಕಡೆ ಭಸ್ಮಗೊಂಡ ಸೌಂದರ್ಯರಾಶಿಗಳನ್ನು ಎವೆಯಿಕ್ಕದೆ ನೋಡುತ್ತಾ ಉಂಟಾದ ದಿಗ್ಭ್ರಮೆ ಇನ್ನೊಂದೆಡೆ ಮಿಕ್ಕವರಂತೆ ತತ್ತಕ್ಷಣ ಮಣಿಯದೆ ತನ್ನನ್ನು ಕಾಡಿದ ಮೇವಾಡದ ಮೇಲಿನ ಕ್ರೋಧ! ಎರಡೂ ಸೇರಿ ಹೊರಬಿದ್ದದ್ದು ಸರ್ವರನ್ನು, ಸಕಲವನ್ನೂ ನಾಶ ಮಾಡಿರೆಂಬ ಆಜ್ಞೆ!

                 ಒಡೆಯನ ಅನುಮತಿ ಸಿಕ್ಕಿದ್ದೇ ತಡ, ಇನ್ನೇನು ತಡೆ, ಮತಿಗೆಟ್ಟ ಪಡೆ ವಿಜೃಂಭಿಸಿತು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ತಮ್ಮ ಅರಸನಿಗೆ ಲೆಕ್ಕ ಒಪ್ಪಿಸುವ ಸಲುವಾಗಿ ಶವಗಳಿಂದ ಜನಿವಾರಗಳನ್ನು ಕಲೆ ಹಾಕಿದರು. ಅವುಗಳನ್ನು ತೂಕ ಮಾಡಿದಾಗ 74ಮಣ (8 ಪೌಂಡುಗಳು)ಗಳಿದ್ದವು! ಕೇವಲ ಒಂಬತ್ತೂವರೆ ಗಂಟೆಗಳವಧಿಯಲ್ಲಿ ಕೊಲೆಯಾದವರ ಸಂಖ್ಯೆ 30ಸಾವಿರ ಎಂದು ಆನಂದದಿಂದ ವರ್ಣಿಸಿದ್ದಾನೆ ಅಬುಲ್ ಫಜಲ್! ಆ ಹೆಣಗಳ ತಲೆಯಿಂದ ಒಂದು ಗೋಪುರ ಕಟ್ಟಲಾಯಿತು. ಎಲ್ಲಿ ನೋಡಿದರಲ್ಲಿ ಶವಗಳ ರಾಶಿ, ನಾಲ್ದೆಸೆಗಳಿಗೆ ಚಾಚಿದ ಬೆಂಕಿಯ ಕೆನ್ನಾಲಿಗೆ, ಕಮಟು ವಾಸನೆ, ಆಕ್ರಂದನ, ಭೀಭತ್ಸ ದೃಶ್ಯಗಳು. ಇದಕ್ಕೆ ಕಾರಣಕರ್ತನಾದ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ ಇನ್ನೂ ಇದೆಯೇ. ಇದ್ದರೆ ಕೇಳಿ...ಮಹಾ ಮಾನವತಾವಾದಿ ಎಂದು ನಮ್ಮ ಸೆಕ್ಯುಲರ್ ಇತಿಹಾಸಕಾರರು ಹಾಡಿ ಹೊಗಳಿರುವ; ಸಾಹಸಿ, ಸುಕೋಮಲಿ, ಆದರ್ಶವಾದಿ, ಕನಸುಗಾರ ಎಂದು ನೆಹರೂ ಹಾಡಿಹೊಗಳಿರುವ, ರಾಜಸ್ಥಾನ ಭಾಜಪಾ ರಾಜ್ಯಾಧ್ಯಕ್ಷ, ಸಂಸದ ಮದನ್ ಲಾಲ್ ಸೈನಿ ಇತ್ತೀಚೆಗೆ ಯಾರನ್ನು ಚರಿತ್ರಹೀನ ಎಂದು ಅಕ್ಷರಶಃ ಸತ್ಯ ಹೇಳಿದಾಗ ಯಾವನ ಭಕ್ತರು ಮೆಣಸಿನಕಾಯಿ ತಿಂದಂತಾಡಿದರೋ ಅದೇ ಅಕ್ಬರ್!

                ಈ ಭೀಭತ್ಸ ಹತ್ಯಾಕಾಂಡವನ್ನು ನೋಡಲಾರದೆ ರಾಜ್ಯದ ಮೂಲೆ ಮೂಲೆಗಳಿಂದ ಕೇಳಿಬರುತ್ತಿರುವ ಆಕ್ರಂದನಗಳಿಂದ ಕಂಬನಿದುಂಬಿ ರಜಪೂತ ಪ್ರಮುಖರಾದ ಮಾನ್ ಸಿಂಗ್, ತೋಡರಮಲ್ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಾಗ ಇದೇ ಮಾನವತಾವಾದಿ ಹೇಳಿದ್ದೇನು ಗೊತ್ತೇ?
"ನಾನೀಗ ತೈಮೂರನೊಂದಿಗೆ ಅನುಸಂಧಾನದಲ್ಲಿದ್ದೇನೆ. ನನಗೀಗ ಬೇಕಾದುದು ರಕ್ತವೇ ಹೊರತು ಅಮೃತವಲ್ಲ. ಷಾಹಾನಾಮಾದ ಪಠಣವನ್ನು ನಾನೀಗ ಕೇಳಬೇಕು."
ಕ್ಷಣಿಕ ಕೋಪದಿಂದ ಅರಸ ಹೀಗಾಡಿದ ಎಂದುಕೊಳ್ಳೋಣವೇ? ಆದರೆ ಅಂತಹ ಕಿಂಚಿತ್ ಪಶ್ಚಾತ್ತಾಪವೂ ಅವನಿಗಿರಲಿಲ್ಲ. ತಾನು ಮಾಡಿದ್ದು ಸರಿ; ಅದನ್ನು ದೇವರೇ ಮೆಚ್ಚಿಕೊಂಡ ಎಂದು ಯಾವ ನಾಚಿಕೆ-ಹಿಂಜರಿಕೆಗಳಿಲ್ಲದೆ ಆತ ಹೇಳಿಕೊಂಡ. ಅಬುಲ್ ಫಜಲ್ ಯಥಾವತ್ತಾಗಿ ನಮೂದಿಸಿರುವ ಅಕ್ಬರನ ಮಾತುಗಳನ್ನು ಓದಿದವರ್ಯಾರೂ ಆತನನ್ನು ಮಾನವತಾವಾದಿ ಬಿಡಿ ಮಾನವನೆಂದೇ ಕರೆಯಲಾರರು. ಅಷ್ಟಕ್ಕೂ ನನ್ನ ರೀತಿ ನೀತಿಯನ್ನು ಅಲ್ಲಾ ಅನುಮೋದಿಸದೇ ಇರುತ್ತಿದ್ದರೆ ಮೈಮೇಲೆ ಸಣ್ಣ ಗಾಯವೂ ಇಲ್ಲದಂತೆ ನಾನು ಹಿಂದಿರುಗುತ್ತಿರಲಿಲ್ಲ ಎಂದ ಆ ದಯಾಪರನ ಉನ್ಮಾದವೇನೂ ಕ್ಷಣಿಕವಾದುದಾಗಿರಲಿಲ್ಲ. ಅದು ಜನ್ಮಜಾತ ಸ್ವಭಾವಜನ್ಯ ಸಹಜೋನ್ಮಾದ, ರಕ್ತಗುಣ! ನಮ್ಮ "ಮಹಾನ್ ಇತಿಹಾಸಕಾರರು" ಬರೆದುದನ್ನು ಓದಿ ಸತ್ಯ ಎಂದುಕೊಂಡವರಿಗೆ ಅಕ್ಬರನೇ ಆದರ್ಶಪುರುಷನಾಗಿರುವುದಕ್ಕೂ, ಅಕ್ಬರನಿಗೆ ಆತನ ವಂಶಜ ತೈಮೂರನೇ ಆದರ್ಶಪುರುಷನಾಗಿರುವುದಕ್ಕೆ ಹೆಚ್ಚೇನು ವ್ಯತ್ಯಾಸವಿಲ್ಲ. ಅದು ಆಶ್ಚರ್ಯಪಡುವಂತಹದ್ದೂ ಅಲ್ಲ!

            ಚಿತ್ತೋಡಿನ ಮೇಲಾದ ದೌರ್ಜನ್ಯ ಕೇವಲ ಜನರಿಗಷ್ಟೇ ಸೀಮಿತವಾಗುಳಿಯಲಿಲ್ಲ. ಖಿಲ್ಜಿ, ಬಾಬರರು "ಕರುಣೆದೋರಿ" ಉಳಿಸಿದ್ದ ಪುಣ್ಯಕ್ಷೇತ್ರಗಳೆಲ್ಲಾ ಈ ಪಾಪಿಯ ಕತ್ತಿಗೆ ಬಲಿಯಾದವು. ರಜಪೂತರ ಆರಾಧ್ಯ ದೈವ ಏಕಲಿಂಗೇಶ್ವರನ ವಿಗ್ರಹ ಮಸೀದಿಗಳಲ್ಲಿ ಕುರಾನನ್ನಿಡುವ ಪೀಠಕ್ಕಾಗಿ ತುಂಡರಿಸಲ್ಪಟ್ಟಿತು. ಇಂತಹವನನ್ನು ಪರಮತ ಸಹಿಷ್ಣು ಎಂದವರಿಗೆ ಅಕ್ಬರನೇ 1568 ಮಾರ್ಚ್ 9ರಂದು ಹೊರಡಿಸಿದ ವಿಜಯೋನ್ಮಾದದ "ಫತ್ವಾ"ವನ್ನು ನೆನಪಿಸಬೇಕು! "ನಮ್ಮ ಅಮೂಲ್ಯ ಸಮಯವನ್ನು ಜಿಹಾದಿಗೆ ಸರ್ವರೀತಿಯಿಂದಲೂ ಬಳಸೋಣ. ಕೋಟೆ-ಕೊತ್ತಲಗಳನ್ನು ವಶಪಡಿಸಿಕೊಂಡು, ಖಡ್ಗದ ಬಲದಿಂದ ಬಹುದೇವತಾರಾಧನೆಯನ್ನು ಹೋಗಲಾಡಿಸಿ ಕಾಫಿರರ ಪುಣ್ಯ ಸ್ಥಳಗಳನ್ನು ನಾಶಮಾಡಿ ಇಸ್ಲಾಂ ಪತಾಕೆಯನ್ನು ಹಾರಿಸೋಣ." ಇಂಥವನನ್ನು ಆದರ್ಶವಾಗಿಟ್ಟುಕೊಂಡವರು ಹೇಗಿರಬಹುದು? ವಿನ್ಸೆಂಟ್ ಸ್ಮಿತ್, ಜೇಮ್ಸ್ ಟಾಡ್ ಮುಂತಾದ ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವುದನ್ನು ಬಿಡಿ, ಅಬುಲ್ ಫಜಲ್ ಎಂಬ ಅಕ್ಬರ್ ಭಕ್ತ ಬರೆದುದನ್ನೂ ಪಕ್ಕಕ್ಕಿಡಿ, ಸ್ವತಃ ಅಕ್ಬರನೇ ಹೊರಡಿಸಿದ ಫತ್ವಾಗಳನ್ನೆಲ್ಲಾ ನೋಡಿದರೆ ಸಾಕು ಆತನ ದಯಾಪರ, ಪರಮತ ಸಹಿಷ್ಣುತೆಯ ನಿಜಬಣ್ಣ ಬಯಲಿಗೆ ಬರುತ್ತದೆ.

                   ಉಪಕಾರ ಮಾಡಿದವರಿಗೆ ಕೇಡನ್ನುಂಟುಮಾಡುವುದು ಅಕ್ಬರನಿಗೆ ವಂಶಪಾರಂಗತವಾಗಿ ಬಂದ ವಿದ್ಯೆ. ಅಕ್ಬರನ ತಂದೆ ಹುಮಾಯೂನ್ ತನ್ನ ಸ್ವಂತ ತಮ್ಮನ ಕಣ್ಣುಗಳನ್ನೇ ಶೂಲದಿಂದ ಕೀಳಿಸಿ ಉಪ್ಪು, ನಿಂಬೆರಸಗಳನ್ನು ತುಂಬಿಸಿದ್ದ. ದ್ರೋಹವೆಸಗುವುದು ಮೊಘಲರ ಹುಟ್ಟುಗುಣ! ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಹುಮಾಯೂನನಿಗೆ ಆತ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ರಜಪೂತರು ಆಶ್ರಯ ನೀಡಿದ್ದರು! ಅಕ್ಬರ ಹುಟ್ಟಿದ್ದು ಆಗಲೇ. ಆದರೆ ಅದೇ ಹುಮಾಯೂನ ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಯುದ್ದಕ್ಕಿಳಿದ! ರಕ್ತದೊಂದಿಗೆ ಸ್ವಭಾವವೂ ಹರಿದು ಬಂತು. ಹಿಂದೂಗಳ ಸೂರಿನಡಿಯಲ್ಲಿ ಹಿಂದೂಗಳ ರಕ್ಷಣೆಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ!ಚಿಕ್ಕವಯಸ್ಸಿನಲ್ಲಿ ತಂದೆ ಸತ್ತಾಗ ದಿಕ್ಕುಕಾಣದ ಅಕ್ಬರನನ್ನು ತನ್ನ ಭುಜಗಳ ಮೇಲೆ ಕೂರಿಸಿಕೊಂಡು ವ್ಯೂಹ ರಚಿಸಿ ಗೆದ್ದು ಅಕ್ಬರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದವ ಭೈರಾಂಖಾನ್. ಆದರೆ ಅಧಿಕಾರ ಸೂತ್ರಗಳ ಮೇಲೆ ಸ್ವಲ್ಪ ಹಿಡಿತ ಸಿಗುತ್ತಿದ್ದಂತೆ ಭೈರಾಂಖಾನನಿಗೇ ಗುಂಡಿ ತೋಡಿದ ಅಕ್ಬರ್! ಸಿಕಂದರ್ ಅಪ್ಘನ್ನನನ್ನು ಸೋಲಿಸಿ ಲಾಹೋರಿನಿಂದ ದಿಲ್ಲಿಗೆ ಹಿಂದಿರುಗಿ ಬರುತ್ತಿದ್ದಾಗ ಮಾನ್ ಕೋಟ್ ಎಂಬಲ್ಲಿ ಸೇನೆ ಬೀಡು ಬಿಟ್ಟಿದ್ದಾಗ ಭೈರಾಂಖಾನ್ ಮೈಮೇಲೆಲ್ಲಾ ಗುಳ್ಳೆಗಳಾಗಿ ಡೇರೆಯಲ್ಲಿ ಮಲಗಿದ್ದ. ಆ ಡೇರೆಯ ಮೇಲೆ ಅರಸನಿಗೆ ಸೇರಿದ ಆನೆಗಳೆರಡು ದಾಳಿ ಮಾಡಹೊರಟವು. ಭೈರಾಂಖಾನ್ ಆ ಸಮಯದಲ್ಲಿ ಬದುಕುಳಿದನಾದರೂ ಆತನ ಪರಿಸ್ಥಿತಿ ನೆಟ್ಟಗಿರಲಿಲ್ಲ. ಆತ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆಂದು ಕೇಳಲು ಅರಸನಲ್ಲಿಗೆ ಕಳುಹಿಸಿದ ದೂತನಿಗೆ ಯಾವ ಪ್ರತ್ಯುತ್ತರವೂ ಸಿಗಲಿಲ್ಲ. ಈ ಘಟನೆಯಿಂದ ಬೇಸರಗೊಂಡು ಭೈರಾಂಖಾನ್ ಮೆಕ್ಕಾಗೆ ಹೊರಟಾಗ ಗುಜರಾತಿನ ಸಹರ್ವಾಲದಲ್ಲಿ ಅಕ್ಬರನ ಕಟುಕರು ಭೈರಾಂಖಾನನ ರುಂಡ ಚೆಂಡಾಡಿದರು. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅದು ಹೋಗಿ ನಿಲ್ಲುವುದು ಸಲೀಮಾ ಸುಲ್ತಾನ ಬೇಗಂಳ ಬಳಿ! ಆಕೆ ಮತ್ಯಾರಲ್ಲ, ಭೈರಾಂಖಾನನ ಹೆಂಡತಿ, ಅಕ್ಬರನಿಗೆ ಗುರುಪತ್ನಿಯ ಸಮಾನಳು! ಆದರೇನು ಭೈರಾಂಖಾನನ ಗೋರಿಯ ಮೇಲೆ ಹುಲ್ಲು ಬೆಳೆಯುವ ಮೊದಲೇ ಅಕ್ಬರ ಅವಳನ್ನು ಮದುವೆ ಮಾಡಿಕೊಂಡ!

                   ಅಕ್ಬರ್ ಒಬ್ಬ ಸ್ತ್ರೀಲೋಲುಪ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. "ನಿನ್ನ ಹೆಂಡತಿ ನನಗಿಷ್ಟವಾಗಿದ್ದಾಳೆ, ಅವಳನ್ನು ನನ್ನ ಅಂತಃಪುರಕ್ಕೆ ಕಳುಹಿಸು ಎಂದು ಆದೇಶ ನೀಡುತ್ತಿದ್ದ ಧರ್ಮಪ್ರಭು ಅವನು. ನಿರಾಕರಿಸಿದಾತನ ರುಂಡ ಮುಂಡ ಬೇರೆಬೇರೆಯಾಗುತ್ತಿದ್ದುದು ದಿಟ! ಬಹಳಷ್ಟು ಜನ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ದುರ್ವಿಧಿಗೆ ತಲೆಬಾಗುತ್ತಿದ್ದರು. ಅಕ್ಬರನ ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ದಿಲ್ಲಿಯ ಜನಸಾಮಾನ್ಯರ ಮನೆಯ ಮಂಚದವರೆಗೂ! ಕೆಲಕಾಲ ಸುಮ್ಮನಿದ್ದ ಜನತೆ ತಿರುಗಿಬಿದ್ದಿತು. 1564ರಲ್ಲಿ ದಿಲ್ಲಿಯ ಷೇಕ್ ಒಬ್ಬನನ್ನು ನಿನ್ನ ಹೆಂಡತಿಗೆ ವಿಚ್ಛೇದನ ಕೊಡು; ನನಗವಳು ಬೇಕು ಎಂದು ಅಕ್ಬರ್ ಒತ್ತಾಯಿಸಿದ. ಕೆಲವೇ ದಿನಗಳಲ್ಲಿ ಅಕ್ಬರ್ ರಾಜಬೀದಿಯಲ್ಲಿ ಸುತ್ತುತ್ತಿದ್ದಾಗ ಉಲಾದ್ ಎಂಬ ಗುಲಾಮನೊಬ್ಬ ಮನೆಯ ಮಾಳಿಗೆಯೊಂದರಿಂದ ಅಕ್ಬರನ ಮೇಲೆ ಬಾಣ ಬಿಟ್ಟ. ಅದು ಅಕ್ಬರನ ಭುಜಕ್ಕೆ ತಗುಲಿ ಗಾಯವಾಯಿತು. ರಾಜಭಟರು ಆತನನ್ನು ಅಲ್ಲಿಯೇ ತುಂಡರಿಸಿ ಎಸೆದರು. ಈ ಹತ್ಯಾಪ್ರಯತ್ನದ ನಂತರ ಅಕ್ಬರನ ಮರ್ಯಾದೆಗೆಟ್ಟ ಹುನ್ನಾರಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ಅದಕ್ಕಾಗಿಯೇ ತನ್ನ ರಾಜ್ಯದಲ್ಲಿ ಮೀನಾ ಬಜಾರ್" ವ್ಯವಸ್ಥೆಯನ್ನು ಪೋಷಿಸಿದ. ಹೊಸವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಅಲ್ಲಿ ನಡೆಯುತ್ತಿದ್ದ ನೌರೋಜ್ ಉತ್ಸವದಲ್ಲಿ ಹಿಂದೂ ಸಾಮಂತ ರಾಜರೆಲ್ಲಾ ಒಂದೊಂದು ಅಂಗಡಿ ತೆರೆದು ತಮ್ಮ ರಾಜ್ಯದಲ್ಲಿನ ರೂಪವತಿಯರನ್ನೆಲ್ಲಾ ಪ್ರದರ್ಶನಕ್ಕಿಡಬೇಕಾಗಿತ್ತು. ಮಹಾರಾಜ ಪ್ರತಿಯೊಂದು ಅಂಗಡಿ ವೀಕ್ಷಿಸಿ ತನಗೆ ಬೇಕಾದವರನ್ನು ಜನಾನಕ್ಕೆ ಅಟ್ಟುತ್ತಿದ್ದ!

                  ತನಗೆ ಇಷ್ಟವೆನಿಸಿದ ರಾಜಪ್ರಮುಖರ ಪತ್ನಿಯರನ್ನು, ಇತರ ಸ್ತ್ರೀಯರನ್ನು ಅಜೀರ್ಣವೆನಿಸುವ ತನಕ ಮನಸೋ ಇಚ್ಛೆ ಅನುಭವಿಸುತ್ತಿದ್ದ ಎಂದು ಸ್ವತಃ ಅಕ್ಬರನ ಸ್ವಾಮಿನಿಷ್ಠ ಸೇವಕ ಅಬುಲ್ ಫಜಲ್ ಬರೆದಿದ್ದಾನೆ. ಮೀನಾ ಬಜಾರಿನಿಂದ ವರ್ಷ ವರ್ಷ ಹಿಂದೂ ಸ್ತ್ರೀಯರನ್ನು ಸಾಗಿಸಿಕೊಂಡು ಬರುತ್ತಿದ್ದ ಕಾರಣ, ತಾನು ಸೋಲಿಸಿದ ರಜಪೂತರಿಂದ ಕನಿಷ್ಟ ಸಂಖ್ಯೆಯ ಹೆಣ್ಣುಗಳನ್ನು ತನ್ನ ಅಂತಃಪುರಕ್ಕೆ ಕಳುಹಿಸಿಕೊಡಬೇಕೆಂಬ ಕರಾರು ಮಾಡಿಕೊಳ್ಳುತ್ತಿದ್ದರ ಫಲವಾಗಿ, ಹಾಗೂ ಕಂಡ ಕಂಡವರ ಹೆಂಡಿರ ಮೇಲೆ ಕಣ್ಣು ಹಾಕುತ್ತಿದ್ದರಿಂದ ಈ ಸ್ತ್ರೀಲಂಪಟನ ರಾಣಿವಾಸವೆಂಬುದು ಎಮ್ಮೆದೊಡ್ಡಿಯಂತಾಗಿತ್ತು. ಅಲ್ಲದೆ ಚಕ್ರವರ್ತಿಗೆ ದಯೆ ಬಂದರೆ ಯಾವುದೇ ವಿಭಾಗಗಳ ಯಾವುದೇ ಪ್ರಮುಖ ಯಾವ ಅಂತಃಪುರ ಸ್ತ್ರೀಯರನ್ನಾದರೂ ಇಷ್ಟಾನುಸಾರ ಭೋಗಿಸಬಹುದಾಗಿತ್ತು ಎಂದಿದ್ದಾನೆ ಫಜಲ್! ಇದನ್ನು ವಿನ್ಸೆಂಟ್ ಸ್ಮಿತ್ ಕೂಡಾ ಸ್ಪಷ್ಟಪಡಿಸುತ್ತಾ ಅಕ್ಬರನ ದಾಖಲೆಗಳನ್ನು ನೋಡಿದರೆ ಅವನು ಒಬ್ಬಳು ಪತ್ನಿಗೆ ಸೀಮಿತಗೊಂಡ ಅಸಾಮಿಯಲ್ಲ ಎಂದಿದ್ದಾನೆ. ಇನ್ನು ರಜಪೂತರ ಒಲವನ್ನು ಗಳಿಸುವ ಹುನ್ನಾರದಿಂದ ಅವರ ಕನ್ಯೆಯರನ್ನು ತನ್ನ ರಾಜಪ್ರಮುಖರಿಗೋ, ಸರದಾರರಿಗೋ ಮದುವೆ ಮಾಡಿಸುತ್ತಿದ್ದನಷ್ಟೇ. ಆ ಹುಡುಗಿಯರ ಸ್ಥಿತಿ ಏನಾಗುತ್ತಿತ್ತು ಎನ್ನುವುದು ಆ ಕಾಲದಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅವಳು ಅರಸನ ಕಾಮದೃಷ್ಟಿಗೆ ಬಿದ್ದರೆ ಮುಗಿಯಿತು; ಇಲ್ಲವಾದಲ್ಲಿ  ಕಟ್ಟಿಕೊಂಡವನು ಯಾರ ಕೈಗೆ ಒಪ್ಪಿಸಿದರೆ ಅವನೊಂದಿಗೆ ಎಷ್ಟುಕಾಲ ಒಪ್ಪಿಸೆಂದರೆ ಅಷ್ಟು ಕಾಲ ವ್ಯಭಿಚಾರ ಮಾಡುವುದೇ ಆ ಸ್ತ್ರೀಯರು ಅನುಭವಿಸಿದ ರಾಣೀವಾಸ! ಹಾಗಂತ ಎಲ್ಲಾ ರಜಪೂತ ಅರಸರು ಅಧಿಕಾರ, ಲಾಭದಾಸೆಗೆ ಬಲಿಬಿದ್ದು ತಮ್ಮವರ ಮಾನ ಕಳೆದುಕೊಳ್ಳಲು ಬಿಡಲಿಲ್ಲ; ಮೇವಾಡದ ಸ್ತ್ರೀಯರು ಮಾನವೇ ಪ್ರಾಣಕ್ಕಿಂತಲೂ ಶ್ರೇಷ್ಠವೆಂದು ಸಾಮೂಹಿಕವಾಗಿ ಚಿತೆಗೆ ಹಾರಿ "ಜೋಹರ್" ಮಾಡಿಕೊಂಡರು. ಸತೀಸಹಗಮನ ಪದ್ದತಿ ಆರಂಭವಾದದ್ದೇ ಕಾಮುಕ ಮೊಘಲರ ಅಟ್ಟಹಾಸದಿಂದ ಮಾನ ಉಳಿಸಿಕೊಳ್ಳಲು.

                 ಹಿಂದೂ ಸ್ತ್ರೀಯರನ್ನು ವಿವಾಹವಾಗುವುದು ಅಕ್ಬರನ ಸೆಕ್ಯುಲರ್ ನೀತಿಯೆಂದು, ಹಿಂದೂ ಮುಸ್ಲಿಮ್ ಐಕ್ಯತೆಗೆ ದಾರಿದೀಪವೆಂದು ಬೊಂಬಡಾ ಬಜಾಯಿಸುವ "ಮಹಾನ್ ಇತಿಹಾಸಕಾರರು" 1568ರಲ್ಲಿ ವಂಚನೆಯಿಂದ ರಣಥಂಬೋರ್ ಕೋಟೆಯನ್ನು ಅಕ್ಬರ್ ವಶಪಡಿಸಿಕೊಂಡಾಗ ಉಂಟಾದ ಒಡಂಬಡಿಕೆಯನ್ನು ಗಮನಿಸುವುದೊಳಿತು. ಅಕ್ಬರನಿಗೂ ಸರ್ಜನರಾಯನಿಗೂ ನಡೆದ ಸಂಧಿಯ ಒಪ್ಪಂದದಲ್ಲಿ ಅರಸನ ಅಂತಃಪುರಕ್ಕೆ ವಧುಗಳನ್ನು ಕಳುಹಿಸುವ ಪದ್ದತಿಯಿಂದ ಬುಂದಿ ರಾಜ್ಯಪಾಲಕರಿಗೆ ವಿನಾಯಿತಿ ಇರುತ್ತದೆಂದೂ, ಮೀನಾಬಜಾರಿನ ಅಂಗಡಿಗಳಲ್ಲಿ ತಮ್ಮ ವಧುಗಳನ್ನು ಕಳುಹಿಸುವ ಕಾರ್ಯದಿಂದ ವಿನಾಯಿತಿ ಇರುತ್ತದೆಂಬುದೇ ಮುಖ್ಯ ಷರತ್ತುಗಳಾಗಿದ್ದವು. ಅಲ್ಲದೆ ಹಿಂದೂ ಮುಸ್ಲಿಮ್ ಐಕ್ಯತೆಗೆ ಶ್ರಮಿಸಿದ್ದನೆನ್ನುವ ಅಕ್ಬರ್ ಎಷ್ಟು ಮೊಘಲ ಸ್ತ್ರೀಯರನ್ನು ಹಿಂದೂಗಳಿಗೆ ಮದುವೆ ಮಾಡಿಸಿದ್ದ?

                  ಸಮರಾಂಗಣಕೆ ಆಕೆ ಧುಮುಕಿದರೆ ಸಾಕ್ಷಾತ್ ದುರ್ಗೆಯೇ ಮೈದಳೆದಂತೆ. ಎಪ್ಪತ್ತು ಸಾವಿರ ಪದಾತಿಗಳು, ಇಪ್ಪತ್ತು ಸಾವಿರ ತುರಗಗಳು, ಎರಡೂವರೆ ಸಾವಿರಕ್ಕೂ ಮಿಕ್ಕಿದ ಗಜಪಡೆಯ ಬೃಹತ್ ಸೈನ್ಯದೊಡನೆ ಅವಳ ದಂಡು ಅಂಕಕ್ಕಿಳಿದಾಗ ಅರಿಗಳೆದೆ ಝಲ್ಲೆನ್ನುತ್ತಿತ್ತು. ತನಗೆ ಪ್ರೀತಿಪಾತ್ರವಾದ ಕರಿಯನ್ನೇರಿ ಅವಳು ಬಾಣ, ಖಡ್ಗ, ಬಂದೂಕುಗಳನ್ನು ಸಮಾನ ಪ್ರಾವೀಣ್ಯತೆಯಿಂದ ಪ್ರಯೋಗಿಸುತ್ತಾ ಯುದ್ಧರಂಗದ ನಾಯಕಿಯಾಗಿ ಕಂಗೊಳಿಸುವುದನ್ನು ಕಾಣುವುದೇ ಕಂಗಳಿಗೊಂದು ಸೊಬಗು. ಪತಿ ಗಣಪತಿರಾಯ್ ಸತ್ತಾಗ ಎಳೆವಯಸ್ಸಿನ ಮಗನ ಪರವಾಗಿ 1548ರಲ್ಲಿ ಗೊಂಡ್ವಾನದ ಸಿಂಹಾಸನವನ್ನೇರಿದ ಆಕೆ ಗೋಂಡಾಗಳ ಬಾಳನ್ನು ಹಸನುಮಾಡಿ ಅವರ ಆರಾಧ್ಯದೈವವಾಗಿ ರಾಣಿಯೊಬ್ಬಳು ಹೇಗಿರಬೇಕೆಂದು ತೋರಿಸಿಕೊಟ್ಟಳು. ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಐವತ್ತೊಂದು ಯುದ್ಧಗಳಲ್ಲೂ ದಿಗ್ವಿಜಯವನ್ನು ಸಾಧಿಸಿ ಜಗದ್ವಿಖ್ಯಾತಿಯನ್ನು ಪಡೆದ ಆಕೆಯೇ ಜಗದ್ವಂದ್ಯೆ ರಾಣಿ ದುರ್ಗಾವತಿ! ಬುಂದೇಲ್ ಖಂಡದ ಸಾಮ್ರಾಜ್ಞಿಯಾಗಿ ತನ್ನ ರಾಜ್ಯದಲ್ಲಿನ 23ಸಾವಿರ ಗ್ರಾಮದ ಪ್ರತಿಯೊಬ್ಬ ಹಿರಿಯನ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗಿನ ಸಂವಹನ ಆಕೆಗೆ ಪ್ರಜೆಗಳೊಂದಿಗಿತ್ತು. ಆಕೆಯ ಸಮರ್ಥ ಆಡಳಿತದಿಂದ ಗೊಂಡಾಣ ಸುಭಿಕ್ಷಗೊಂಡಿತು. ಪ್ರತಿಸ್ವರ್ಗದಂತಿದ್ದ ಆ ನಾಡನ್ನು ನರಕಸದೃಶವನ್ನಾಗಿಸಿದ್ದು ಅದೇ ದಯಾಪರ ಅಕ್ಬರ್! ಅವನ ಕಣ್ಣು ದುರ್ಗಾವತಿಯ ಮೇಲೆ ಬಿತ್ತು!

                ಭಾರೀ ದಂಡಿನೊಂದಿಗೆ ಮೊಘಲರು ಮುತ್ತಿಗೆ ಹಾಕಿದಾಗ ಆತ್ಮರಕ್ಷಣೆಗಾಗಿ ಗೋಂಡಾಗಳೆಲ್ಲರೂ ಒಂದಾಗಿ ರಣಕಣಕ್ಕೆ ಧುಮುಕಿದರು. ದುರ್ಗಾವತಿಯ ರಭಸಕ್ಕೆ ಮೊಗಲ್ ಸೇನೆ ಕಕ್ಕಾಬಿಕ್ಕಿಯಾಯಿತು. ಘನಘೋರ ಕದನದ ನಡುವೆ ಮಗ ವೀರನಾರಾಯಣ್ ಗಾಯಗೊಂಡಾಗ ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಸೂಚಿಸಿದಳು. ಅವನೊಡನೆ ಕೆಲ ಸೈನಿಕರು ತೆರಳಬೇಕಾದ ಕಾರಣ ಸೇನೆಯಲ್ಲಿ ತುಸು ಗೊಂದಲದ ವಾತಾವರಣ ಉಂಟಾಯಿತು. ಅದೇ ವೇಳೆ ಬಾಣವೊಂದು ದುರ್ಗಾವತಿಯ ಬಲಗಣ್ಣಿನ ಮೇಲ್ಭಾಗಕ್ಕೆ ಬಡಿಯಿತು. ಅವಳು ಅದನ್ನು ಕಿತ್ತು ತೆಗೆವ ಪ್ರಯತ್ನ ನಡೆಸಿರುವಾಗಲೇ ಇನ್ನೊಂದು ಬಾಣ ಬಂದು ಕುತ್ತಿಗೆಗೆ ಬಡಿಯಿತು. ತನ್ನ ಕಥೆ ಮುಗಿಯಿತೆಂದು ಮೊಗಲರ ಕೈಗೆ ಸಿಕ್ಕು ಬಂಧಿಯಾಗುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ತನ್ನನ್ನೇ ತಾನು ಇರಿದುಕೊಂಡು ಪ್ರಾಣ ತ್ಯಜಿಸಿದಳು. ಸಾವರಿಸಿಕೊಂಡ ವೀರನಾರಾಯಣ ವೀರಾವೇಶದಿಂದ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಯುವರಾಜ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಕೂಡಲೇ ರಕ್ಕಸರು ಊರೊಳಗೆ ಪ್ರವೇಶಿಸುವ ಮುನ್ನವೇ ಸ್ತ್ರೀಯರು ಮಾನ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕವಾಗಿ ಚಿತೆಗೆ ಹಾರಿದರು. ಆದರೆ ಅಗ್ನಿ ಇಬ್ಬರು ರಾಜಕುವರಿಯರನ್ನು ವಂಚಿಸಿದ. ಅವರನ್ನು ತನ್ನ ದೊಡ್ಡಿಯಂತಿದ್ದ ಜನಾನಾಕ್ಕೆ ನೂಕಿದ ಅಕ್ಬರ್ ಜೀವಂತವಿರುವಾಗಲೇ ಸಾವಿನ ಭಾಗ್ಯ ಒದಗಿಸಿದ! ಮುಂದೆ ಊರೂರೂ ದೋಚುವ ಕಾರ್ಯಕ್ರಮ ಯಥಾವತ್ ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಡೆಯಿತು. ಅಕ್ಬರ್ ಗೊಂಡ್ವಾನದ ಮೇಲೆ ಮಾಡಿದ ದಾಳಿ ಪಕ್ಕಾ ದುರಾಕ್ರಮಣವೇ ಹೊರತು ಇನ್ನೇನಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಬೇರಾವ ಸಮರ್ಥನೆಯೂ ಅದಕ್ಕಿಲ್ಲ ಎಂದಿದ್ದಾನೆ ವಿನ್ಸೆಂಟ್ ಸ್ಮಿತ್!

               ಅಕ್ಬರನ ಕಾಮದಾಸೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸಲ್ಮಾನರೂ ಬಲಿಯಾದರು. ಆಗ ಮಾಳವವನ್ನಾಳುತ್ತಿದ್ದವ ಅಕ್ಬರನ ಓರಗೆಯವನಾದ ಬಾಜ್ ಬಹಾದ್ದೂರ್! ರೂಪಮತಿ ಅವನ ಮನದನ್ನೆ. ಲವ್ ಜಿಹಾದ್ ಇಲ್ಲವೇ ಇಲ್ಲ ಅನ್ನುವವರು ಗಮನಿಸಿ ಲವ್ ಜಿಹಾದಿಗೆ ಮೊಘಲರ ಕಾಲದ ಇತಿಹಾಸವಿದೆ! ಹೆಸರಿಗೆ ಅನುರೂಪವಾಗಿ ಆಕೆ ಅಪ್ರತಿಮ ಸುಂದರಿ. ಪೌರ್ಣಮಿಯ ಶಶಿಯ ಸೊಬಗಿಗಿಂತ ರೂಪಮತಿಯ ಚೆಲುವು ಹೆಚ್ಚು ಪ್ರಕಾಶಮಾನವಾದುದೆಂದು ವರ್ಣಿಸುತ್ತಿದ್ದರು ಕವಿಗಳು. ಅವಳಂತಹ ನಿರ್ಮಲ ದಿವ್ಯಸ್ತ್ರೀಯನ್ನು ಹತ್ತುಲಕ್ಷಸಂವತ್ಸರಗಳಿಗೊಮ್ಮೆಯಷ್ಟೇ ಭಗವಂತನು ಸೃಷ್ಟಿಸುವನೆಂದೂ, ಆಕೆಯ ಕಣ್ಣಂಚಿನ ಪಾನಪಾತ್ರೆಯಿಂದ ಒಂದು ಬಿಂದು ಮಧುವನ್ನಾಸ್ವಾದಿಸುವುದು ಸ್ವರ್ಗಕ್ಕೆ ಸೋಪಾನವೆಂದು ಹಾಡುತ್ತಿದ್ದರು ಜಾನಪದರು. ಈ ಕೀರ್ತಿಗಾನ ಅಕ್ಬರನ ಕಿವಿಗೆ ಬಿತ್ತು! ಕೇಳಬೇಕೆ ಜೊಲ್ಲುಸುರಿಸಿಕೊಂಡು ಆಕೆಯನ್ನು ಕರೆತರಲು ಅಪ್ಪಣೆಯಾಯಿತು. ಆಕೆ ಬರಲೊಲ್ಲೆ ಎಂದಳು. ಮೊಗಲ್ ಸೈನ್ಯ ಬಂತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವೆನೆಂದಿದ್ದ ಬಾಜ್ ಬಹಾದ್ದೂರ್ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ! ಸುದ್ದಿ ಕೇಳಿದ ರೂಪಮತಿ ವಿಷ ಸೇವಿಸಿದಳು. ಕಾಮಾಂಧನ ಮುಖ ಕಪ್ಪಡರಿತು!

                ಜಯವಂತಿ...ಮೊಗಲ್ ದಾಸ್ಯದಿಂದ ಮೇವಾಡ ಮುಕ್ತಗೊಳ್ಳುವವರೆಗೆ ಮಗುವನ್ನು ಹಡೆಯುವುದಿಲ್ಲವೆಂದೂ, ಆಭರಣಗಳನ್ನು ಧರಿಸುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದ ಅಪೂರ್ವ ರಜಪೂತ ರಾಜಕನ್ಯೆ. ರಾಜ ಸುರ್ಜನರಾಯನ ಸೋದರನ ಸುತೆ. ಅಕ್ಬರನ ಕಾಮದೃಷ್ಟಿ ಆಕೆಯ ಮೇಲೆ ಬಿತ್ತು. ಹೇಗಾದರೂ ಮಾಡಿ ರಣಥಂಬೋರನ್ನು ಜಯಿಸಿ ಆಕೆಯನ್ನು ಪಡೆವಾಸೆಯಿಂದ ಜೊಲ್ಲುಸುರಿಸಿಕೊಂಡು ಕಾಲು ಕೆದರಿ ಯುದ್ಧಕ್ಕೆ ಹೊರಟ. ಆದರೆ ರಣಥಂಬೋರಿನ ಕೋಟೆ ದುರ್ಭೇಧ್ಯವಾಗಿತ್ತು. ಇರುವೆಗಳು ಕೂಡಾ ಅದರ ಗೋಡೆಗಳ ಮೇಲೇರಲಾರದೆ ಜಾರಿ ಬೀಳುವವೆಂದು ಅಬುಲ್ ಫಜಲ್ ಬರೆದಿದ್ದಾನೆ. ಅಕ್ಬರನಿಗೆ ಗೆಲ್ಲಲಾಗಲಿಲ್ಲ. ಅದಕ್ಕಾಗಿ ಆತ ಭಗವಾನ್ ದಾಸನ ಮೂಲಕ ಸುರ್ಜನರಾಯನಿಗೆ ಪ್ರಲೋಭನೆ ಒಡ್ಡಿ ಕೋಟೆಯ ಬೀಗದ ಕೈಗಳನ್ನು ವಶಪಡಿಸಿಕೊಂಡ. ಸುದ್ದಿ ಅರಿತ ಜಯವಂತಿ ಭರಿಸಲಾರದ ವೇದನೆಯಿಂದ ತನ್ನ ಮೈಮೇಲಿನ ಸೈನಿಕ ಪೋಷಾಕನ್ನು, ರಾಜ ಲಾಂಛನ, ತಿಲಕಗಳನ್ನು ಕಿತ್ತೆಸೆದು ದೇವಾಲಯದ ನರ್ತಕಿಯ ವೇಷ ಧರಿಸಿ ಏಕಲಿಂಗೇಶ್ವರನೆದುರು ಕಾಲ್ಗೆಜ್ಜೆ ತುಂಡಾಗುವವರೆಗೆ ಶಿವತಾಂಡವಗೈದು ಶಿವಲಿಂಗದ ಮುಂದೆ ಕುಸಿದಳು. ಹಾಗೆ ಕುಸಿವಾಗ ಸೊಂಟದಲ್ಲಿದ್ದ ಚೂರಿಯಿಂದ ಎದೆ ಬಗಿದು ರುದ್ರನಿಗೆ ರುಧಿರಾಭಿಷೇಕಗೈದಳು. ರಜಪೂತರ ಧೈರ್ಯಸ್ಥೈರ್ಯಗಳಿಗೆ ಹೊಸ ಭಾಷ್ಯ ಬರೆದು ದೇಶದ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಳು. ಹೀಗೆ ಕಾಮುಕ ಅಕ್ಬರನ ವಕ್ರದೃಷ್ಟಿಗೆ ಬಿದ್ದು ನಾಶವಾದ ರಾಜ್ಯಗಳು, ಮಾನಿನಿಯರು, ಪ್ರಾಣ ಕಳೆದುಕೊಂಡ ಜನತೆ, ಪ್ರಾಣಕ್ಕಿಂತ ಮಾನ ಹೆಚ್ಚೆಂದು ಜೌಹರ್ ಮಾಡಿಕೊಂಡ ಮಾನಿನಿಯರು ಲೆಕ್ಕವಿಲ್ಲದಷ್ಟು. ಅಂತಹ ಕಾಮಾಂಧನನ್ನೂ "ದಿ ಗ್ರೇಟ್" ಅಂದವರೂ ಬಹುಷಃ ಕಾಮಾಂಧರೇ ಇರಬೇಕು!

           ಅಧಂ ಖಾನ್. ಅಕ್ಬರನನ್ನು ಸ್ವಂತಮಗನಂತೆ ಸಾಕಿದ ಮಹಮಾನಗಾಳ ಮಗ. ಅನೇಕ ಯುದ್ಧಗಳಲ್ಲಿ ಬಲಗೈ ಬಂಟನಂತೆ ಅಕ್ಬರನಿಗೆ ಸಹಾಯ ಮಾಡಿದ ವೀರ. ಒಂದು ಅಕ್ಬರ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಏನೋ ಗದ್ದಲ ಕೇಳಿತು. ಏನೆಂದು ವಿಚಾರಿಸಿದಾಗ ವಜೀರ ಅದಗಾ ಖಾನನನ್ನು ಕೊಂದು ಅಧಂಖಾನ್ ಅರಸನನ್ನು ಕೊಲ್ಲಲು ಬರುತ್ತಿರುವನೆಂದು ಯಾರೋ ಕಿವಿಯೂದಿದರು. ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ ಅಕ್ಬರ್ ಅಧಂಖಾನನ ಮೇಲೇರಿ ಹೋದ. ಅಧಂಖಾನ್ ನಡೆದುದನ್ನು ವಿಶದೀಕರಿಸುತ್ತೇನೆಂದು ಪರಿಪರಿಯಾಗಿ ಕೋರಿದರೂ ಕೇಳದೆ ಅವನ ಮುಖದ ಮೇಲೆ ಗುದ್ದಿದ. ಜ್ಞಾನ ತಪ್ಪಿ ಬಿದ್ದ ಆತನನ್ನು ಹಗ್ಗಗಳಿಂದ ಕಟ್ಟಿ ಅರಮನೆಯ ಮೇಲಿಂದ ಕೆಳಗೆಸೆಯಿರೆಂದು ಆಜ್ಞೆ ಮಾಡಿದ. ಸೇವಕರು ಆತನನ್ನು ಕೊಲ್ಲಲು ಇಷ್ಟವಿಲ್ಲದೆ ಕೆಳಕ್ಕೆ ಜಾರಿಬಿಟ್ಟರು. ಆದರೆ ಈ ದಯಾಪರ ಬಿಡಬೇಕೇ! ಸತ್ತನೋ ಇಲ್ಲವೋ ನೋಡಿರಂದು ಆಜ್ಞೆ ಮಾಡಿದ. ಅರೆಜೀವವಾಗಿದ್ದಾನೆಂದು ತಿಳಿದೊಡನೆ ಅವನ ಜುಟ್ಟು ಹಿಡಿದು ಮೇಲಕ್ಕೆಳೆದು ತಲೆ ಹೋಳಾಗುವಂತೆ ಕೆಳಕ್ಕೆ ಬಿಸಾಕಲು ಆಜ್ಞಾಪಿಸಿದ. ಅದು ಅಕ್ಬರ್ ತನ್ನ ಸಹವರ್ತಿಯೊಬ್ಬನಿಗೆ ಪರಿಪಾಲಿಸಿದ ಸಮುಚಿತ ನ್ಯಾಯ!

                ಆ ದಿನ ದೀಪ ಹಚ್ಚುವ ನೌಕರನಿಗೇ ದೀಪ ಹಚ್ಚಬೇಕಾಯಿತು! ಕಾರಣವಿಷ್ಟೇ, ಅರಸ ನಿದ್ದೆಯಿಂದ ಬೇಗ ಎಚ್ಚರಗೊಂಡುದುದು! ಅರಸ ಎದ್ದಾಗ ಸೇವಕರ್ಯಾರೂ ಕಾಣಲಿಲ್ಲ. ದೀಪ ಹಚ್ಚುವ ಸೇವಕನೊಬ್ಬ ಮೂಲೆಯಲ್ಲಿ ಮುದುಡಿ ಮಲಗಿದ್ದ. ಸಿಡಿಮಿಡಿಗೊಂಡ ಅರಸ ಆತನನ್ನು ರಾಜಗೋಪುರದಿಂದ ಕೆಳಕ್ಕೆ ಎಸೆಯುವಂತೆ ಆಜ್ಞಾಪಿಸಿದ. ಇತಿಹಾಸದಲ್ಲಿ ದೀಪ ಹಚ್ಚುವ ಸೇವಕನೊಬ್ಬನನ್ನು ನಿದ್ದೆ ಮಾಡುವ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗೆ ಗೋಪುರದ ಕೆಳಕ್ಕೆಸೆದು ಸಾಯಿಸಿದ ಮಹಾಮಾನವತಾವಾದಿ ಧರ್ಮಪ್ರಭು ಅಕ್ಬರನೊಬ್ಬನೆ! 1565ರಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಂದ ಅಕ್ಬರನನ್ನು ದಯಾಪರ ಎಂದು ಕರೆದ ನೆಹರೂವೇ ಧನ್ಯ!

                ಮೋಸ, ಕುತಂತ್ರಗಳಿಂದ ಉತ್ತರ ಭಾರತದ ರಾಜ್ಯಗಳನ್ನು ತನ್ನ ವಶ ಮಾಡಿಕೊಂಡ ಮೇಲೆ ಅಕ್ಬರನ ದೃಷ್ಟಿ ಬಿದ್ದದ್ದು ಮತದ ಮೇಲೆ! ಗೆಲುವು, ಕೀರ್ತಿ ತಲೆಗಡರಿತ್ತು! ತನ್ನಂತಹ ಚಕ್ರವರ್ತಿ ಯಾವನೋ ಒಬ್ಬ ಯಕಶ್ಚಿತ್ ಪ್ರವಾದಿಗೆ ತಲೆಬಾಗುವುದೆಂದರೇನು? ತಾನೊಬ್ಬ ದೈವಾಂಶ ಸಂಭೂತನೆಂದೇ ಅಕ್ಬರನ ನಂಬಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಅಕ್ಬರನ ಸುತ್ತ ಮುತ್ತ ಇದ್ದವರೆಲ್ಲಾ ಆತನ ಭಜನೆ ಮಾಡುವವರೇ. ಅಲ್ಲದೇ ಅಡ್ಡ ಬಂದವರನ್ನು ಉದ್ದುದ್ದ ಸಿಗಿದುಬಿಡುತ್ತಾನೆಂಬ ಹೆದರಿಕೆ ಬೇರೆ! ಒಟ್ಟಾರೆ ಮರ್ಕಟವೊಂದು ಮದಿರೆ ಕುಡಿದ ಹಾಗಾಯಿತು  ಅಕ್ಬರನ ಸ್ಥಿತಿ! ಇಸ್ಲಾಂ, ಕ್ರೈಸ್ತ, ಹಿಂದೂಗಳನ್ನು ಸಮನ್ವಯಗೊಳಿಸಿ, ಎಲ್ಲದರಲ್ಲಿನ ಒಳ್ಳೆಯದನ್ನು ತೆಗೆದುಕೊಂಡು ಸರ್ವರಿಗೂ ಆದರಣೀಯ-ಆಚರಣೀಯ ದಾರಿಯನ್ನು ಹುಟ್ಟುಹಾಕಿದ್ದಾನೆಂದು ನಮ್ಮ ಚರಿತ್ರಕಾರರು ಗೀಚಿದ್ದಾರೆ. ಇದರ ಫಲವಾಗಿಯೇ ಅಕ್ಬರ್ "ಲಿಬರಲ್", ಸರ್ವಮತಸಮತ್ವಕ್ಕೆ ಪ್ರಯತ್ನಿಸಿದವ ಎಂದು ಬಲಪಂಥೀಯರ ತಲೆಯಲ್ಲೂ ಹುಳ ಹೊಕ್ಕಿರುವುದು. ಆದರೆ "ದೀನ್ ಇಲಾಹಿ" ಅಪ್ಪಟ ಕಾಗೆ ಬಂಗಾರ!

                ರಾಜನು ದೇವರ ನೆರಳಾದ್ದರಿಂದ, ಹಿಂದೂ ಸ್ಥಾನದಲ್ಲಿ ತಾನೇ ದೊಡ್ಡ ರಾಜನೆಂಬ ಭ್ರಮೆಯಿಂದ ತನ್ನನ್ನೇ ಪ್ರವಾದಿಯಾಗಿ ಘೋಷಿಸಿಕೊಂಡು ಹೊಸಮತವನ್ನು ಸ್ಥಾಪಿಸಹೊರಟ ಅಕ್ಬರ್ 1579ರಲ್ಲಿ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜಪ್ರಮುಖರನ್ನೊಳಗೊಂಡ ಸಭೆಯೊಂದನ್ನು ಆಯೋಜಿಸಿದ. ಅದರಲ್ಲಿ "ತನ್ನ ಸಾಮ್ರಾಜ್ಯದಲ್ಲಿ ಹಲವು ಮತಗಳಿದ್ದು, ಪರಸ್ಪರ ಭೇದಾಭಿಪ್ರಾಯಗಳನ್ನು ಹೊಂದಿವೆ. ಇದು ಸರಿಯಲ್ಲ. ಹಾಗಾಗಿ ಎಲ್ಲದರ ಉತ್ತಮವಾದುದನ್ನು ಆರಿಸಿಕೊಂಡು ಹೊಸಮತವೊಂದನ್ನು ಸೃಷ್ಟಿಸಿ ಅನುಸರಿಸಬೇಕು. ಇಲ್ಲಿರುವವರೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ" ಎಂದು ಆಜ್ಞಾಪಿಸಿದ. ಉದ್ದೇಶವೇನೋ ಒಳ್ಳೆಯದೇ. ಆದರೆ ಆದದ್ದೇನು? ಅಕ್ಬರನ ಭಜನಾಮಂಡಳಿ "ವಿಶ್ವಮತ"ವನ್ನು ಸ್ಥಾಪಿಸಲು ಅವಶ್ಯವಾದ ನಿಯಮಗಳನ್ನು ಚಕ್ರವರ್ತಿಗಳೇ ರೂಪಿಸಬೇಕು ಅಂದುಬಿಟ್ಟರು. ಕಳ್ಳು ಕುಡಿದ ಕಪಿಗೆ ಚೇಳು ಕುಟುಕಿದಂತಾಯಿತು! ಸಧ್ಯದಲ್ಲಿಯೇ ಹೊಸ ಮತವನ್ನು ಸ್ಥಾಪಿಸಲಾಗುವುದೆಂದು ರಾಜ್ಯಾದ್ಯಂತ ಡಂಗುರ ಹೊಡೆಸಿದ. ಹೊಸ ಮತ ಆರಂಭಿಸುವ ಮುನ್ನ ಹಿಂದೂ ಧರ್ಮ, ಕ್ರಿಶ್ಚಿಯನ್ ಮತದ ಆಚಾರ್ಯರನ್ನು ಸಂಪರ್ಕಿಸಲೇ ಇಲ್ಲ! ಮೊಗಲ್ ಸಾಮ್ರಾಜ್ಯದ ಮುಫ್ತಿಯಾಗಿದ್ದ ಕಾಜಿಯಲ್ ಕುಜಾತ್ ಹಾಗೂ ಕೆಲವು ಉಲೇಮಾಗಳ ಕೈಯಲ್ಲಿ ಒಂದು ದಸ್ತಾವೇಜಿಗೆ ಸಹಿ ಮಾಡಿಸಿದ(1579). ಸಿವಿಲ್ ವ್ಯವಹಾರಗಳಲ್ಲಿದ್ದಂತೆ ಪಾರಲೌಕಿಕ ಸಂಗತಿಗಳಲ್ಲೂ ಚಕ್ರವರ್ತಿಯೇ ಅಂತಿಮ ನ್ಯಾಯ ತೀರ್ಮಾನ ನೀಡುವವನೆಂದೂ, ಮುಸ್ಲಿಮ್ ನ್ಯಾಯಕ್ಕೆ ಸಂಬಂಧಿಸಿದಂತೆ ಅಕ್ಬರನೇ ಮಿಕ್ಕೆಲ್ಲಾ ಖಾಜಿಗಳಿಗಿಂತ ಶ್ರೇಷ್ಠನೆಂದೂ, ಅವನ ನಿರ್ಣಯವೇ ಅಂತಿಮವೆಂದು ಅವರ ಕೈಯಲ್ಲಿ ಕಟ್ಟಳೆ ಹೊರಡಿಸಿದ.

ಹೇಗಿತ್ತು ದೀನ್ ಇಲಾಹಿ?
                ಹೊಸ ಮತದಲ್ಲಿ ಸೇರುವಂತಹವರು ಚಕ್ರವರ್ತಿಯ ಸಮ್ಮುಖದಲ್ಲಿ ಸಮರ್ಪಿಸಿಕೊಳ್ಳಬೇಕಿದ್ದ ವಿಷಯಗಳು ನಾಲ್ಕು. ಆಸ್ತಿ, ಜೀವನ, ಗೌರವ, ಮತ! ಈ ನಾಲ್ಕರ ಪೈಕಿ ಒಂದನ್ನು ತ್ಯಾಗ ಮಾಡಿದವನಿಗೆ ಒಂದು ಡಿಗ್ರಿ, ಎರಡನ್ನು ತ್ಯಾಗ ಮಾಡಿದವನಿಗೆ ಎರಡು ಡಿಗ್ರಿ...ಹೀಗೆ ಡಿಗ್ರಿಗಳನ್ನು ನೂತನ ಗುರುಕುಲ ದಯಪಾಲಿಸುತ್ತಿತ್ತು. ಯಾವನಾದರೂ ಹಿಂದೂ ಹೊಸಪಂಥವನ್ನು ಸೇರಬೇಕೆಂದರೆ ತಾನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ದೇವರು-ಆಚರಣೆಗಳನ್ನು ತ್ಯಜಿಸಬೇಕಿತ್ತು. ತನ್ನ ಬಳಿ ಅದ್ಭುತ ಶಕ್ತಿಗಳಿವೆಯೆಂದೂ, ಬಂಜೆಯರಿಗೆ ಮಕ್ಕಳು ಹುಟ್ಟುತ್ತವೆಯೆಂದೂ, ತನ್ನ ಪಾದ ತೊಳೆದ ನೀರನ್ನು ಕುಡಿಯುವುದರಿಂದ ರೋಗಗಳು ವಾಸಿಯಾಗುತ್ತವೆಂದು ಅಕ್ಬರ್ ಮಾಡಿದ ಪ್ರಚಾರಕ್ಕೇನೂ ಕಡಿಮೆ ಇರಲಿಲ್ಲ. ಅನೇಕ ದೌರ್ಭಾಗ್ಯವಂತರು ಅಕ್ಬರನ ಪಾದೋದಕವನ್ನು ಸೇವಿಸಿ ಇಲ್ಲದ ಖಾಯಿಲೆ ಬರಿಸಿಕೊಂಡರು. ಅಕ್ಬರನ ದರಬಾರಿನಲ್ಲಿ ದೀನ್ ಇಲಾಹಿ ಸ್ವೀಕರಿಸಿದ ರಾಜಪ್ರಮುಖರು ಕೇವಲ ಹದಿನೆಂಟು ಮಂದಿ. ಅವರಲ್ಲಿ ಬೀರಬಲ್ ಒಬ್ಬನೇ ಹಿಂದೂ. ಸಾಮಾನ್ಯ ಜನರ ಸಂಖ್ಯೆಯೂ ಅತ್ಯಲ್ಪ. ಅನೇಕ ಹಿಂದೂ ಆಚಾರ-ಸಂಪ್ರದಾಯಗಳನ್ನು ಯಥಾವತ್ ನಕಲು ಹೊಡೆದರೂ ಹಿಂದೂಗಳೇನು ಆಕರ್ಷಿತರಾಗಲಿಲ್ಲ. ಕಾಫಿರರ ರೀತಿಯ ಆಚಾರಗಳೆಂದು ಮುಸ್ಲಿಮರೂ ದೂರಾದರು. ಮುಂದೇನು? ಇದೆಯಲ್ಲ ಅಸ್ತ್ರ...ಸ್ವೀಕರಿಸಬೇಕು ಇಲ್ಲಾ ಶಿಕ್ಷೆಗೆ ಗುರಿಯಾಗಬೇಕು! ಹೊಸ ಮತವನ್ನು ಸ್ವೀಕರಿಸಲಿಚ್ಛಿಸುವವರು ಸೂರ್ಯನು ಪ್ರಜ್ವಲಿಸುವ ಭಾನುವಾರದಂದು ತಮ್ಮ ಮುಂಡಾಸುಗಳನ್ನು ತೆಗೆದಿಟ್ಟು ಅಕ್ಬರನ ಪಾದಮೂಲದಲ್ಲಿ ತಮ್ಮ ತಲೆ ಇರಿಸಿ ಪ್ರಾರ್ಥಿಸಬೇಕಿತ್ತು. ದೇವರ ಪ್ರತಿನಿಧಿಯಾದ ಅರಸ ಅವರನ್ನು ಮೇಲೆಬ್ಬಿಸಿ ತಲೆಯ ಮೇಲೆ ಮುಂಡಾಸನ್ನಿರಿಸಿ ಕೈ ಎತ್ತಿ ಆಶೀರ್ವದಿಸಿ "ಅಲ್ಲಾ ಹು ಅಕ್ಬರ್" ಎಂದು ಬರೆದಿದ್ದ ಒಂದು ಭಿಲ್ಲೆಯನ್ನು ಉಡುಗೊರೆಯಾಗಿ ನೀಡುವುದರ ಮೂಲಕ ತನ್ನ ಮತಕ್ಕೆ ಸೇರಿಸಿಕೊಳ್ಳುತ್ತಿದ್ದ. ಭಕ್ತನು ಸದಾ ಆ ಭಿಲ್ಲೆಯನ್ನು ತನ್ನ ಮುಂಡಾಸಿನಲ್ಲಿ ಧರಿಸಿ ಸಂಚರಿಸಬೇಕಿತ್ತು. ನೂತನ ಮತಸ್ಥರು ಪರಸ್ಪರ ಎದುರಾದಾಗ "ಅಲ್ಲಾಹು ಅಕ್ಬರ್" ಎಂದು ಹೇಳಬೇಕಿತ್ತು.

                  ದೀನ್ ಇಲಾಹಿಯಿಂದ ಹೆಚ್ಚು ಹೊಡೆತ ಬಿದ್ದದ್ದು ಮುಸ್ಲಿಮರಿಗೇ! ನೂತನ ಮತವನ್ನು ವಿರೋಧಿಸಿದರೆಂಬ ಕಾರಣಕ್ಕೆ ಭಾರೀ ಸಂಖ್ಯೆಯ ಷೇಖ್, ಫಕೀರರನ್ನು ದೇಶದಿಂದ ಬಹಿಷ್ಕರಿಸಿ ಕಂದಹಾರಿನ ಮಾರುಕಟ್ಟೆಗಳಲ್ಲಿ ಕುದುರೆಗಳಿಗೆ ಬದಲು ಗುಲಾಮರಂತೆ ಅವರನ್ನು ಮಾರಹಾಕಿದ ಎಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಐದಾರು ವರ್ಷಗಳಲ್ಲಿ ಅವನ ಹೃದಯದಲ್ಲಿ ಇಸ್ಲಾಮಿನ ಬಗೆಗೆ ಲವಲೇಶ ಭಾವನೆಯೂ ಇಲ್ಲದಂತಾಗಿಬಿಟ್ಟಿತ್ತು ಎಂದು ಅಕ್ಬರನ ಸಮಕಾಲೀನ ಬದೌನಿ ಬರೆದಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡುವಂತಿರಲಿಲ್ಲ. ಮೊದಲೇ ಆ ಹೆಸರಿದ್ದರೆ ಬದಲಾಯಿಸಿಕೊಳ್ಳಬೇಕಿತ್ತು. ಗಡ್ಡ ಬೋಳಿಸಬೇಕಿತ್ತು. ಪ್ರಾರ್ಥನೆ, ರಂಜಾನ್ ಉಪವಾಸ, ಮೆಕ್ಕಾ ಯಾತ್ರೆ ಮಾಡುವಂತಿರಲಿಲ್ಲ. ಅರಬ್ಬೀ ಭಾಷೆ, ಕುರಾನಿನ ಅಧ್ಯಯನ, ಷರೀಯತ್ ಕಾನೂನಿಗೆ ಅವಕಾಶವಿರಲಿಲ್ಲ. ಸತ್ತವರ ತಲೆಯನ್ನು ಪೂರ್ವ ದಿಕ್ಕಿಗೆ ಬರುವಂತೆ ಹೂಳಬೇಕಿತ್ತು. ಪೂರ್ವಕ್ಕೆ ತಲೆ ಹಾಕಿ ಮಲಗಬೇಕಿತ್ತು. ಪಶ್ಚಿಮದ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥಿಸುವ ಮುಸ್ಲಿಮರನ್ನು ಅವಮಾನಿಸುವುದು ಇದರ ಉದ್ದೇಶವಾಗಿತ್ತೆಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ.

                   ಇದರಿಂದ ಹಿಂದೂಗಳಿಗೇನೂ ಹಾನಿಯಿಲ್ಲ, ಒಳ್ಳೆಯದೇ ಆಯಿತಲ್ವೇ ಅಂತಾ ನೀವು ತಿಳ್ಕೊಂಡಿದ್ದರೆ ಅದು ತಪ್ಪು. ಈ ಮತವನ್ನು ಅಪ್ಪಿಕೊಂಡವರು ಒಂದು ರೀತಿಯಲ್ಲಿ ಇಸ್ಲಾಮಿಗೆ ಮತಾಂತರಗೊಂಡಂತೆಯೇ. ಇದು ಅಕ್ಬರನ ಕಾಲಾನಂತರ ನಿಚ್ಚಳವಾಯಿತು. ಕೆಲವರು ಎಡಬಿಡಂಗಿಗಳಂತೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಉಳಿಯದೆ ಸತ್ತು ಹೋದರು. ಭಾರತೀಯತೆಯನ್ನು, ಹಿಂದೂ ಸಂಸ್ಕೃತಿಯನ್ನು ತುಚ್ಛವಾಗಿ ಕಾಣುವ ಇಂದಿನ "ಸೆಕ್ಯುಲರು"ಗಳು ಬಹುಷಃ ಇವರದ್ದೇ ಸಂತಾನವೇನೋ! ಅಲ್ಲದೆ ಆತ ಕೊನೆಗೆ ಇಸ್ಲಾಮ್ ದ್ವೇಷಿಯಾಗಿ ಬದಲಾದರೂ ಮೊದಲು ಹಿಂದೂಗಳಿಗೆ ಮಾಡಿದ ಅನ್ಯಾಯ ಮುಚ್ಚಿಹೋಗುವುದೇ? ಕಂಡ ಕಂಡ ಮಾನಿನಿಯರನ್ನು ತನ್ನ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದ ಇಂತಹ ಕಾಮುಕನನ್ನು ಹೊಗಳುವವರು ಹೆಣ್ಣನ್ನು ನೋಡುವ ಪರಿ ಯಾವ ರೀತಿ ಇರಬಹುದು? ಹೆಣ್ಣನ್ನು ಬರಿಯ ಭೋಗದ ವಸ್ತುವಾಗಿ ಕಂಡ ಈ ಮೂರ್ಖ ಕೇವಲ ಹೆಣ್ಣು-ಹೊನ್ನು-ಮಣ್ಣನ್ನಷ್ಟೇ ದೋಚಲಿಲ್ಲ, ಇಲ್ಲಿಯ ಜನರ ಬೌದ್ಧಿಕ ದಾರಿದ್ರ್ಯಕ್ಕೂ ಕಾರಣವಾದ! ಇಲ್ಲದಿದ್ದಲ್ಲಿ ಅದೆಷ್ಟೋ ರಾಜ್ಯಗಳನ್ನು ಸರ್ವನಾಶ ಮಾಡಿದ, ದೇವಾಲಯಗಳನ್ನು ಸುಟ್ಟು ಬೂದಿಯಾಗಿಸಿದ, ಲಕ್ಷ ಲಕ್ಷ ಹಿಂದೂಗಳ ಮತಾಂತರ-ಮಾರಣ ಹೋಮಕ್ಕೆ ಕಾರಣನಾದ, ಲಕ್ಷಾಂತರ ಮಾನಿನಿಯರ ಜೌಹರ್-ಶೀಲಹರಣ-ನರಕಸದೃಶ ಜೀವನಕ್ಕೆ ಕಾರಣನಾದ ಇಂತಹ ಪ್ರಭೃತಿಯನ್ನು "ದಿ ಗ್ರೇಟ್" ಎಂದವರೂ ಅದನ್ನೇ ಒಪ್ಪಿಕೊಳ್ಳುತ್ತಿರುವವರ ಬೌದ್ಧಿಕ ದಾಸ್ಯಕ್ಕೆ ಏನೆನ್ನಬೇಕು? ಅಬುಲ್ ಫಜಲನಿಗಾದರೂ ಅಕ್ಬರನನ್ನು ಹೊಗಳಲು ಅನ್ನದ ಋಣವಿತ್ತು. ಸ್ವಾಮಿನಿಷ್ಠೆಯ ಪರಾಕಾಷ್ಟತೆಯಿತ್ತು! ಆದರೆ ಚಪಲ ಚೆನ್ನಿಗ ರಾಯ ನೆಹರೂವಿಗೇನಿತ್ತು? ICHR ಎಂಬ ಸಂಸ್ಥೆಯಲ್ಲಿ ದಶಕಗಳ ಪರ್ಯಂತ ಕಾರುಬಾರು ನಡೆಸಿ ದೇಶದ ಸಂಪತ್ತನ್ನು ತಿಂದು ತೇಗಿದ ಮಹಾನ್ ಇತಿಹಾಸಕಾರರಿಗೆ ಇತಿಹಾಸವನ್ನು ತಿರುಚುವ ಅಗತ್ಯವೇನಿತ್ತು?

ಆಯುರ್ವೇದಕ್ಕೂ ಮೂಲ ವೇದ; ನಾವು ಬದಿಗೆ ಸರಿಸಿ ಬಿಟ್ಟೆವೀಗ!

ಆಯುರ್ವೇದಕ್ಕೂ ಮೂಲ ವೇದ; ನಾವು ಬದಿಗೆ ಸರಿಸಿ ಬಿಟ್ಟೆವೀಗ!

               ಆತ ಎತ್ತಿನ ಗಾಡಿಯ ಚಾಲಕ. ಕೋವಾಸ್ಜಿ ಎಂಬ ನಾಮಧೇಯ. ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೈನ್ಯದಲ್ಲಿದ್ದು ಟಿಪ್ಪುವಿನ ವಿರುದ್ಧ ಹೋರಾಡಿದ್ದ ಆತ. ಮತಾಂಧ ಟಿಪ್ಪುವಿನ ಸೆರೆಮನೆಯಲ್ಲಿ ಕೈದಿಯಾಗಿದ್ದ ಈತ ಆ ಸಮಯದಲ್ಲಿ ಅಪಾರ ಚಿತ್ರಹಿಂಸೆಗೊಳಗಾಗಿದ್ದ. ಆ ಪಾಪಿಗಳು ಕೋವಾಸ್ಜಿಯ ಮೂಗನ್ನೇ ಕತ್ತರಿಸಿದ್ದರು. ಬಿಡುಗಡೆಯಾದ ಹನ್ನೆರಡು ತಿಂಗಳ ಪರ್ಯಂತ ಮೂಗಿಲ್ಲದೆ ಪರಿತಪಿಸುತ್ತಿದ್ದ ಆತ ಬಳಿಕ ನೇರವಾಗಿ ನಾಟಿ ವೈದ್ಯ ಕುಮಾರ (ಪುಣೆಯ ಬಳಿ) ಎನ್ನುವವನ ಬಳಿ ಬಂದ. ಆತ ಬರೇ ನಾಟಿ ವೈದ್ಯನಾಗಿರಲಿಲ್ಲ. ಸುಶ್ರುತ ಸಂಹಿತೆಯನ್ನು ಅರಗಿಸಿಕೊಂಡ ಶಸ್ತ್ರಚಿಕಿತ್ಸಕ ಆತನಾಗಿದ್ದ. 1794ರಲ್ಲಿ ಕೋವಾಸ್ಜಿಗೆ ಕುಮಾರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದ. ಥೋಮಸ್ ಕ್ರೂಸೋ ಹಾಗೂ ಜೇಮ್ಸ್ ಫೈಂಡ್ಲೇ ಇದಕ್ಕೆ ಸಾಕ್ಷಿಯಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಹಂತಹಂತವನ್ನೂ ಲ್ಯೂಕಾಸ್ ಎಂಬ ಬ್ರಿಟಿಷಿಗ ದಾಖಲಿಸಿಕೊಂಡ. ಈ ರೈನೋಪ್ಲಾಸ್ಟಿ(ಮೂಗಿನ ಶಸ್ತ್ರಚಿಕಿತ್ಸೆ)ಯಾದ ಬಳಿಕ 1795ರಲ್ಲಿ ಬ್ರಿಟಿಷ ಜೇಮ್ಸ್ ವ್ಹೇಲ್ಸ್ ರಚಿಸಿದ ಕೋವಾಸ್ಜಿಯ ಭಾವಚಿತ್ರ ಪುರಾತನ ಭಾರತೀಯ ವೈದ್ಯಕೀಯದ ನಿಖರತೆ ಹಾಗೂ ಹಿರಿಮೆಯನ್ನು ಸಾರುತ್ತದೆ. ಈ ಚಿತ್ರ ಸಮಕಾಲೀನ ಜಗತ್ತಿಗೆ ಗೊತ್ತಿರುವ ಮೊದಲ ಆಧುನಿಕ ಪ್ಲಾಸ್ಟಿಕ್ ಸರ್ಜರಿಯದ್ದು. ಅಲ್ಲದೆ ಇದು ವಿಶ್ವಕ್ಕೆ ತಿಳಿದಿರುವ ಮೂಗಿನ ಸರ್ಜರಿಯ ಮೊದಲ ಚಿತ್ರ.

                       ಯೂರೋಪ್ ಆ ಸಮಯದಲ್ಲಿ ವೈಜ್ಞಾನಿಕವಾಗಿ ಬಹಳ ಹಿಂದುಳಿದಿತ್ತು. ಪ್ಲಾಸ್ಟಿಕ್ ಸರ್ಜರಿಯಂತಹ ವೈದ್ಯಕ್ರಮಕ್ಕೆ ಬೇಕಾದ ಜ್ಞಾನ, ಪರಿಣತಿಯನ್ನು ಅವರು ಹೊಂದಿರಲೇ ಇಲ್ಲ. ಲ್ಯೂಕಾಸ್ ದಾಖಲಿಸಿದ ಮಾಹಿತಿಯಿಂದ ಆಸಕ್ತರಾದ ಹಲವು ಯೂರೋಪಿಯನ್ನರು ಸುಶ್ರುತ ಸಂಹಿತೆಯ ಅಧ್ಯಯನಕ್ಕೆ ತೊಡಗಿದರು. ಅವರಲ್ಲೊಬ್ಬ ಜೋಸೆಫ್ ಕಾನ್ಸ್ಟಂಟೈನ್ ಕಾರ್ಪ್ಯೂ. ಈ ತಂತ್ರಗಳನ್ನು ಬಳಸಿದ ಆತ ಇಪ್ಪತ್ತು ವರ್ಷಗಳ ಬಳಿಕ (22 ಅಕ್ಟೋಬರ್ 1814) ಆಧುನಿಕ ಶಸ್ತ್ರಕ್ರಿಯೆಯೊಂದನ್ನು ಮಾಡಿ ಭಾರತದ ಪುರಾತನ ವಿಜ್ಞಾನವನ್ನು ಒಪ್ಪದವರ ಕಣ್ಣಲ್ಲಿ ಶಸ್ತ್ರಕ್ರಿಯೆಯ ಪಿತಾಮಹ ಎನಿಸಿಕೊಂಡ! ಆದರೆ ಆತನೇ ತನ್ನ ಪುಸ್ತಕ "An account of two successful operations .."ನಲ್ಲಿ "ಇದು ಬಹು ಹಿಂದಿನಿಂದಲೂ ಹಿಂದೂಗಳಿಂದ ಮಾಡಲ್ಪಡುತ್ತಿತ್ತು. ನಾನು ಯಾರಿಂದ ಈ ವಿದ್ಯೆಯನ್ನು ಕಲಿತೆನೋ ಅವರು ಇದನ್ನು ಹಿಂದೂ ವೈದ್ಯರಿಂದ ನಕಲಿಸಿದ್ದರು" ಎಂದು ಬರೆದದ್ದು ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಲ್ಪಟ್ಟಿತು. ಆ ಶಸ್ತ್ರಕ್ರಿಯೆಗಳಲ್ಲಿ ಆತ ತನ್ನದೇ ಆದ ನವೀನ ಪ್ರಯೋಗಗಳನ್ನು ಅಳವಡಿಸಿದ್ದರೂ ಭಾರತದ ಸಾಂಪ್ರದಾಯಿಕ ಶಸ್ತ್ರಕ್ರಿಯೆಯ ಪ್ರಕ್ರಿಯೆಯಿಂದ ಸ್ಪೂರ್ತಿ ಪಡೆದುದನ್ನು, ಜ್ಞಾನವನ್ನು ಎರವಲು ಪಡೆದುದನ್ನು ತನ್ನ ಪುಸ್ತಕದಲ್ಲಿ ಕೃತಜ್ಞತಾಪೂರ್ವಕವಾಗಿ ಬರೆಯುವ ಔದಾರ್ಯ ತೋರುವ ಮೂಲಕ ಇತಿಹಾಸದ ಕೊಂಡಿಯೊಂದನ್ನು ಜೋಡಿಸಿದ. ಅದಕ್ಕಾಗಿ ಭಾರತೀಯರು ಅವನಿಗೆ ಕೃತಜ್ಞರಾಗಿರಬೇಕು. ಮೂಗಿನ ಪುನರ್ನಿರ್ಮಾಣವನ್ನು ಭಾರತದಲ್ಲಿ ಶತಶತಮಾನಗಳಿಂದ ದಿನನಿತ್ಯ ಅಭ್ಯಾಸ ಮಾಡಲಾಗುತ್ತಿತ್ತು. ಭಾರತದ ಎರಡು ಪ್ರಸಿದ್ಧ ಕೃತಿಗಳಾದ, ಕ್ರಿ.ಪೂ.ದ ಮೊದಲ ಸಹಸ್ರಮಾನದ ಮಧ್ಯಭಾಗದಲ್ಲಿ ರಚಿತವಾಯ್ತೆನ್ನಲಾದ ಸುಶ್ರುತ ಸಂಹಿತೆ, ಕ್ರಿ.ಶ. ಆರನೇ ಶತಮಾನದ ಅಷ್ಟಾಂಗಹೃದಯ ಸಂಹಿತೆಗಳು ಭಾರತೀಯ ಶಸ್ತ್ರಕ್ರಿಯೆಯೆ ಪ್ರಕ್ರಿಯೆಗಳನ್ನು ವಿವರಿಸಿವೆ. ಹತ್ತೊಂಬತ್ತನೇ ಶತಮಾನದ ವೇಳೆಗೆ ಈ ತಂತ್ರ ದೇಶದ ಮೂರು ವಿಭಿನ್ನ ಭಾಗಗಳಲ್ಲಿ ಪ್ರತ್ಯೇಕ ಪರಿವಾರಗಳ ಮೂಲಕ ಹಸ್ತಾಂತರಿತವಾಯಿತು! ಹದಿನೆಂಟನೆಯ ಶತಮಾನದವರೆಗೂ ಕುಂಬಾರರು ತಮ್ಮ ಕೈಚಳಕದಿಂದ ಮೂಗಿಗೆ ಸಂಬಂಧಿಸಿದ ಶಸ್ತ್ರಕ್ರಿಯೆಯನ್ನು ಮಾಡುತ್ತಿದ್ದುದಾಗಿ ತಿಳಿದು ಬರುತ್ತದೆ.

                    ಒ೦ದು ರಾತ್ರಿ ವೈದ್ಯನೊಬ್ಬನ ಮನೆ ಬಾಗಿಲನ್ನು ಆಗ೦ತುಕನೊಬ್ಬ ಬಡಿಯತೊಡಗಿದ. ಬಾಗಿಲು ತೆರೆದರೆ ಮೂಗು ಕಳೆದುಕೊ೦ಡು ರಕ್ತ ಸುರಿಸುತ್ತಿದ್ದವನೊಬ್ಬ ಕ೦ಡು ಬ೦ದ. ವೈದ್ಯ ಆತನನ್ನು ಒಳಗೆ ಕರೆದೊಯ್ದು ಗಿಡಮೂಲಿಕೆಗಳಿ೦ದ ತಯಾರಿಸಿದ ಔಷಧಿಯಿ೦ದ ಮೂಗು ತೊಳೆದು ಅವನಿಗೆ ಕುಡಿಯಲು ಪೇಯ ನೀಡಿದ. ಮೂಗಿನ ಅಳತೆ ತೆಗೆದು ಗಲ್ಲದ ಭಾಗದಿ೦ದ ಚರ್ಮ ಕತ್ತರಿಸಿ ಮೂಗಿನ ಜಾಗದಲ್ಲಿಟ್ಟು ಹೊಲಿದ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಮು೦ದಿನ ಚಿಕಿತ್ಸೆ ನೀಡಿದ. ಆತ ಭಾರತ ಕಂಡ ಅಪೂರ್ವ ವೈದ್ಯ. ಇಂದಿನ ಹಲವು ವೈದ್ಯಕೀಯ ಪ್ರಕ್ರಿಯೆಗೆ ಮೂಲಸ್ತ್ರೋತನಾತ. ಅರಿವಳಿಕೆ ತಜ್ಞ. ಕಣ್ಣಿನ ಪೊರೆ ತೆಗೆಯಬಲ್ಲ ಚಾಣಾಕ್ಷ. ಮೂತ್ರ ಪಿ೦ಡದ ಕಲ್ಲು ಕರಗಿಸಬಲ್ಲ ಧನ್ವ೦ತರಿ. ಮೂಳೆಮುರಿತ ಸರಿಪಡಿಸಬಲ್ಲ ನಿಷ್ಣಾತ. ಅಷ್ಟೇಕೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆದ ವಿಶ್ವದ ಮೊದಲ ಪ್ರಸೂತಿ ತಜ್ಞ. ಬಹುಕೋನಗಳಲ್ಲಿ, ಬಹುವಿಧಗಳಲ್ಲಿ, ಬಹುವಿಭಾಗಗಳಲ್ಲಿ ಆಧುನಿಕ ವೈದ್ಯಶಾಸ್ತ್ರ ಬೆಳೆದಿದ್ದರೂ ಮೇಲಿನ ಒ೦ದೊ೦ದು ಕೆಲಸಕ್ಕೂ ಹಲವು ವೈದ್ಯರು ಅವಶ್ಯವಿರುವಾಗ ಸುಶ್ರುತ 2600 ವರ್ಷಗಳ ಹಿ೦ದೆಯೇ ಈ ಎಲ್ಲ ವೈದ್ಯ ಜ್ಞಾನವನ್ನೂ ಗಳಿಸಿದ್ದ. ಆಯುರ್ವೇದದ ಹಿರಿಮೆ ಅದು.

                     ಆಯುರ್ವೇದ ಜಗತ್ತಿನ ಅತೀ ಪ್ರಾಚೀನ ವೈದ್ಯಕೀಯ ಚಿಕಿತ್ಸೆಯೂ ಹೌದು. ಹಾಗೂ ಈಗಲೂ ಜೀವಂತವಾಗಿರುವ ವಿಶ್ವದ ಏಕೈಕ ಪ್ರಾಚೀನ ವೈದ್ಯಶಾಸ್ತ್ರ(ಚೀನಾದ ಪಾರಂಪರಿಕ ವೈದ್ಯಕೀಯವನ್ನು ಬಿಟ್ಟರೆ; ಅದಕ್ಕೂ ಮೂಲ ಭಾರತದ ಆಯುರ್ವೇದವೇ ಇರಬಹುದು). ಕಾಯ ಚಿಕಿತ್ಸಾ, ಶಲ್ಯ ಚಿಕಿತ್ಸಾ(ಶಸ್ತ್ರ ಚಿಕಿತ್ಸೆ), ಶಾಲಾಕ್ಯ ಚಿಕಿತ್ಸಾ(ಮೂಗು, ಕಿವಿ, ಗಂಟಲು, ಶಿರಸ್ಸಿಗೆ ಸಂಬಂಧಿಸಿದ ಚಿಕಿತ್ಸೆ), ಕೌಮಾರ ಭೃತ್ಯ(ಮಕ್ಕಳಿಗೆ ಸಂಬಂಧಿಸಿದ ಚಿಕಿತ್ಸೆ), ವಾಜೀಕರಣ, ಅಗದ ತಂತ್ರ(ವಿಷ ಚಿಕಿತ್ಸೆ), ರಸಾಯನ ಚಿಕಿತ್ಸೆ(ವ್ಯಾಧಿ ನಿರೋಧಕ ಚಿಕಿತ್ಸೆ), ಶಕ್ತಿ ವೃದ್ಧಿ ಚಿಕಿತ್ಸೆ ಎಂಬ ಎಂಟು ಶಾಖೆಗಳು ಆಯುರ್ವೇದದಲ್ಲಿವೆ. ಚರಕ ಸಂಹಿತೆ ಹಾಗೂ ಸುಶ್ರುತ ಸಂಹಿತೆಗಳಲ್ಲಿ ಏಳುನೂರಕ್ಕೂ ಹೆಚ್ಚು ಔಷಧೀಯ ಸಸ್ಯಗಳ ವಿಸ್ತೃತ ವಿವರಣೆ ಇದೆ. ಕೈಯದೇವ ನಿಘಂಟು, ಭಾವಪ್ರಕಾಶ ನಿಘಂಟು, ರಾಜ ನಿಘಂಟು ಔಷಧೀಯ ವನಸ್ಪತಿಗಳನ್ನು ವರ್ಣಿಸಿವೆ. ಸುಶ್ರುತ ಸಂಹಿತೆಯಲ್ಲಿ ಆ ಕಾಲದಲ್ಲಿ ಶಸ್ತ್ರಕ್ರಿಯೆಗೆ ಉಪಯೋಗಿಸುತ್ತಿದ್ದ ಉಪಕರಣಗಳ ಪಟ್ಟಿಯನ್ನು ನೋಡಿದರೆ ಇಂದಿನ ಶಸ್ತ್ರಕ್ರಿಯೆಯೂ ಅಂತಹುದೇ ಅಥವಾ ಅವಕ್ಕೆ ಸಂವಾದಿಯಾಗಿರುವ ಉಪಕರಣಗಳನ್ನು ಬಳಸುತ್ತದೆ. ಉದಾಹರಣೆಗೆ ಮಂಡಲಾಗ್ರ(ಕ್ಯುರೇಟ್), ವೃದ್ಧಿಪತ್ರ(ಸ್ಕಾಪೆಲ್), ಏಷಣಿ(ಪ್ರೋಬ್), ಖರಪತ್ರ ಮುಂತಾದುವು. ಕಣ್ಣು, ಕಿವಿ, ಮೂಗಿನ ಶಸ್ತ್ರಚಿಕಿತ್ಸೆ, ಮೂಲವ್ಯಾಧಿ, ಮೂತ್ರದಲ್ಲಿ ಕಲ್ಲು, ಪ್ರಸವ ಕಾಲದ ಶಸ್ತ್ರಚಿಕಿತ್ಸೆ, ದೇಹದೊಳಗೆ ಬೆಳೆದ ಗಂಟುಗಳನ್ನು ತೆಗೆವ ಶಸ್ತ್ರಚಿಕಿತ್ಸೆ, ಗಲ್ಲಭಾಗದಿಂದ ಚರ್ಮವನ್ನು ತೆಗೆದು ಹರಿದ ಮೂಗನ್ನು ಸರಿಪಡಿಸುವ ರೈನೋಪ್ಲಾಸ್ಟಿ ಇವೆಲ್ಲದರ ಕಾರ್ಯವಿಧಾನವನ್ನು ವಿಶ್ಲೇಷಣೆ ಸಹಿತ ಸುಶ್ರುತ ಸಂಹಿತೆ ವರ್ಣಿಸುತ್ತದೆ.

                      ‘ಸುಶ್ರುತ ಸಂಹಿತೆ’ ಯಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಬಗೆಗಿನ ಮಾಹಿತಿಯನ್ನುಕೊಡಲಾಗಿದೆ. ಅರವಳಿಕೆ, ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯಿಂದ ಹೆರಿಗೆಯನ್ನು ಮಾಡಿಸುವ ವಿವರಗಳಿವೆ. ಜಗತ್ತಿನ ಉಳಿದೆಲ್ಲಾ ಭಾಗ ಕಣ್ಣು ಬಿಡುತ್ತಿದ್ದಾಗಲೇ ಸುಶ್ರುತರ ೧೨೫ ರೀತಿಯ ಉಪಕರಣಗಳನ್ನು ಶಸ್ತ್ರಚಿಕಿತ್ಸೆಗಾಗಿ ಉಪಯೋಗಿಸಿ ಆಗಿತ್ತು! ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಬರೆಯಲ್ಪಟ್ಟ ಸುಶ್ರುತ ಸಂಹಿತಾದಲ್ಲಿ 1,120 ರೋಗಗಳು, 700 ಔಷಧೀಯ ಸಸ್ಯಗಳು, ಖನಿಜ ಮೂಲಗಳಿಂದ 64 ಸಿದ್ಧತೆಗಳು ಮತ್ತು ಪ್ರಾಣಿ ಮೂಲಗಳ ಆಧಾರದ ಮೇಲೆ 57 ಸಿದ್ಧತೆಗಳ ವಿವರಣೆಗಳೊಂದಿಗೆ 184 ಅಧ್ಯಾಯಗಳಿವೆ. ಭ್ರೂಣಶಾಸ್ತ್ರ, ಮಾನವ ಅಂಗರಚನಾ ಶಾಸ್ತ್ರ, ರಕ್ತಸ್ರಾವ ಸಂಭವನೀಯತೆಗಳ ಸೂಚನೆಗಳನ್ನು, ರೋಗಿಯ ಅಭಿಧಮನಿಯ ಸ್ಥಾನ ಮತ್ತು ಪ್ರಮುಖ ರಚನೆಗಳ ರಕ್ಷಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, ಜೀವಂತ ವ್ಯಕ್ತಿಯ ಹಲ್ಲುಗಳನ್ನು ಕೊರೆಯುವುದು, ಮೂಳೆಗಳ ಶಸ್ತ್ರಚಿಕಿತ್ಸೆಗಳ ಬಗೆಗೂ ಇದರಲ್ಲಿ ಹೇಳಲಾಗಿದೆ. 101 ರೀತಿಯ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ಸುಶ್ರುತ ಪಟ್ಟಿ ಮಾಡಿದ್ದಾನೆ. ಅವನ್ನೆಲ್ಲಾ ಪ್ರಾಣಿ-ಪಕ್ಷಿಗಳಿಗೆ ಹೋಲಿಸಿ ಹೆಸರಿಟ್ಟಿದ್ದಾನೆ. ಸುಶ್ರುತ ಶಸ್ತ್ರಚಿಕಿತ್ಸೆಯನ್ನು ಛೇದ್ಯ, ಲೇಖ್ಯ, ವೇದ್ಯ, ಈಸ್ಯ, ಅರ್ಹ್ಯ, ವ್ಯರ್ಯ, ಮತ್ತು ದಿವ್ಯ ಎ೦ದು ವಿ೦ಗಡಿಸಿದ್ದಾನೆ. ಪುಂಡರೀಕ, ಪಾಂಡುರ, ಪ್ರಮೋದ, ಷಷ್ಟಿಕ, ರಕ್ತಶಾಲಿ, ಮಹಾಶಾಲಿ, ಕಾಂಚನ, ಕುಸುಮಾಂಡಕ ಮೊದಲಾದ 24 ರೀತಿಯ ಅಕ್ಕಿಯ ಪ್ರಭೇದಗಳು, ವಿವಿಧ ಹಣ್ಣು, ತರಕಾರಿಗಳು, ಧಾನ್ಯ ಪ್ರಭೇದಗಳು, ಕಂಗು, ನೀವಾರ, ಶ್ಯಾಮಕದಂತಹಾ ಕಿರುಧಾನ್ಯಗಳ ಉಲ್ಲೇಖಗಳದರಲ್ಲಿವೆ. ಸುರಾ, ವಾರುಣಿ, ಮಾರ್ದ್ವೀಕ, ಮೈರೇಯ, ಗೌಡ, ಖಾರ್ಜೂರಾದಿ ವಿವಿಧ ಮದ್ಯಗಳ ತಯಾರಿಕೆಯ ಹಾಗೂ ಗುಣಾವಗುಣಗಳ ವರ್ಣನೆಯೂ ಆಯುರ್ವೇದ ಗ್ರಂಥಗಳಲ್ಲಿದೆ! ಆಯುರ್ವೇದ ಉಪಯೋಗಿಸುತ್ತಿದ್ದ ಭಸ್ಮ ಮಾದರಿಯ ಔಷಧೀಯ ಪ್ರಕಾರವನ್ನೂ ಆಧುನಿಕ ವೈದ್ಯ ಪದ್ದತಿ ಬಳಕೆಗೆ ತೆಗೆದುಕೊಂಡದ್ದು/ತೆರೆದುಕೊಂಡದ್ದು ಇತ್ತೀಚೆಗಷ್ಟೆ! ಪಾಶ್ಚಾತ್ಯರು ಖನಿಜ, ಲೋಹಗಳ ಬಗೆಗೆ ಅರಿಯುವ ಮೊದಲೇ ಭಾರತೀಯರು ಅವುಗಳನ್ನು ಔಷಧಿಯಾಗಿ ಉಪಯೋಗಿಸುತ್ತಿದ್ದರು. ರಸಶಾಸ್ತ್ರ ಇಲ್ಲಿಂದ ಚೀನಾಕ್ಕೆ ಹೋಗಿ ಬಳಿಕ ವಿಶ್ವದ ಉಳಿದ ಭಾಗಗಳಿಗೂ ಹರಡಿತು. ಸುಶ್ರುತ ಗಾಂಧಾರ ದೇಶದ ವಿಶ್ವಾಮಿತ್ರನ ಮಗನೆಂದು ಗ್ರಂಥಗಳಿಂದ ತಿಳಿದುಬರುತ್ತದೆ. ವಿಶ್ವಾಮಿತ್ರನು ಗಾಂಧಾರ ದೇಶದ ರಾಜನೋ ಅಥವಾ ಋಷಿಯೋ ಇದ್ದಿರಬಹುದು. ಇಂದಿಗೂ ಸಹ ಅಲ್ಲಿಯ ಬುಡಕಟ್ಟಿನ ಜನರಲ್ಲಿ ಅನೇಕರ ಹೆಸರುಗಳು, ಸುಶ್ರುತ್, ಸುರಾಟ್, ಸೌರಾಟಿ, ಸುಹ್ರಾದಿ ಇತ್ಯಾದಿಯಾಗಿವೆ. ಇವೆಲ್ಲ ‘ಸುಶ್ರುತ' ಎನ್ನುವುದರ ಅಪಭ್ರಂಶಗೊಂಡ ರೂಪಗಳು.

                   ಚರಕನ ಕಾನಿಷ್ಕದ ದೊರೆ ಮೈರಾಣನ ಆಸ್ಥಾನ ವೈದ್ಯನಾಗಿದ್ದ. ಚರಕ ಸಂಹಿತೆ ಆಯುರ್ವೇದದಲ್ಲಿ ಮಹತ್ವದ ಗ್ರಂಥ. ದೇಹವನ್ನು ಜ್ಞಾನದ ಜ್ಯೋತಿಯ ಮೂಲಕ ಪ್ರವೇಶಿಸಲಾಗದ ವೈದ್ಯನು ರೋಗಕ್ಕೆ ಚಿಕಿತ್ಸೆ ನೀಡಲಾರ ಎಂದು ಚರಕ ಸಂಹಿತೆ ಹೇಳುತ್ತದೆ. ತಳಿಶಾಸ್ತ್ರ, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ, ತ್ರಿದೋಷ ಸಹಿತ ಹಲವು ವಿಚಾರಗಳು ಚರಕ ಸಂಹಿತೆಯಲ್ಲಿವೆ. ದೇಹದಲ್ಲಿ 360 ಎಲುಬುಗಳಿವೆ ಎಂದಿದ್ದ ಚರಕ! ಐದು ಅಥವಾ ಆರನೇ ಶತಮಾನದಲ್ಲಿ ಇದ್ದನೆನ್ನಲಾದ ವಾಗ್ಭಟ ಅಷ್ಟಾಂಗ ಸಂಗ್ರಹವೆಂಬ ವಿಶೇಷ ಆಯುರ್ವೇದ ಗ್ರಂಥದ ಕರ್ತೃ. ಈತ ಪ್ರಾಣತತ್ತ್ವ, ಮನಸ್ತತ್ತ್ವ, ಆತ್ಮತತ್ತ್ವದ ಚಿಂತನಗೈದ ಮಹಾತ್ಮ. ಈತ ಭಾರತ ಕಂಡ ಸ್ವರ್ಣಯುಗ ಗುಪ್ತರ ಕಾಲದಲ್ಲಿದ್ದ ಕಾರಣ ಸಂಶೋಧನೆಗಳು ನಡೆದರೆ ಈತನ ಕಾಲ ಇನ್ನೂ ಹಿಂದಕ್ಕೆ ಸರಿದೀತು. ವಾಗ್ಭಟ ಅಷ್ಟಾಂಗ ಸಂಗ್ರಹವನ್ನು ಸ್ವಸ್ಥವೃತ್ತಮ, ದ್ರವ್ಯವಿಜ್ಞಾನ, ದೋಷಧಾತುಮಲ ವಿಜ್ಞಾನ, ರೋಗ ವಿಜ್ಞಾನ, ಚಿಕಿತ್ಸಾ ವಿಧಿ, ಶರೀರ ವಿಜ್ಞಾನ, ಅರಿಷ್ಟ ವಿಜ್ಞಾನ, ರೋಗ ನಿದಾನ, ಕಾಯ ಚಿಕಿತ್ಸಾ, ಪಂಚಕರ್ಮ ಕಲ್ಪ, ಪರಿಭಾಷಾ, ಕೌಮಾರ ಭೃತ್ಯಾ, ಭೂತವಿದ್ಯಾ, ಮಾನಸರೋಗ, ಶಾಲಾಕ್ಯ, ಶಲ್ಯ ತಂತ್ರ, ಕ್ಷುದ್ರರೋಗ, ಗುಹ್ಯ ರೋಗ, ಅಗದ ತಂತ್ರ, ರಸಾಯನ, ವಾಜೀಕರಣಗಳೆಂಬ ಅಧ್ಯಾಯಗಳಿಂದ ಶೃಂಗರಿಸಿದ್ದಾನೆ. ವಿಷಾನ್ನವನ್ನು ಪರೀಕ್ಷಿಸುವ ಬಗೆ, ವಿಷಯುಕ್ತ ವಾತಾವರಣದ ಲಕ್ಷಣ ಹಾಗೂ ಚಿಕಿತ್ಸಾ ವರ್ಣನೆ, ಋತುವಿಗನುಸಾರವಾಗಿ ಮಾಡಬೇಕಾದ ಜೀವನಕ್ರಮಗಳ ಬಗೆಗೆ ಹೇಳಿದ್ದಾನೆ.

                   “ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಲೇವರೇ|
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ|”

ವ್ಯಾಧಿಯಿಂದ ಜರ್ಜರಿತವಾಗಿ ಕಳೇಬರದಂತಾಗಿರುವ ವ್ಯಕ್ತಿಗೆ ಗಂಗೆಯ ನೀರೇ ಔಷಧ, ಇನ್ನೇನಿದ್ದರೂ ಆ ಭಗವಂತನೇ ನೋಡಿಕೊಳ್ಳಬೇಕು ಎಂದು ಕೈಚೆಲ್ಲುವ ಕ್ಷಣದಲ್ಲಿ ಹುಟ್ಟಿದ ಸುಭಾಷಿತ ಇದು. ಇದರ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಭಾಗವನ್ನು ಮಾತ್ರ ಉದ್ಧರಿಸಿ ‘ವೈದ್ಯರು ದೇವರಿಗೆ ಸಮನಾದ ರಕ್ಷಕರು’ ಎನ್ನುವ ಮಾತು ತಪ್ಪಾಗಿ ಹುಟ್ಟಿ ಇಂದಿಗೂ ಓಡುತ್ತಲೇ ಇದೆ. ಆದರೂ ರೋಗಪೀಡಿತನಿಗೂ, ಆತನ ಯೋಗಕ್ಷೇಮ ಬಯಸುವವರಿಗೂ ವೈದ್ಯರೇ ದೇವರಾಗಿ ಆ ಕ್ಷಣದಲ್ಲಿ ಕಾಣಿಸುವುದು ಸುಳ್ಳಲ್ಲ. ಅದೇ ಕಾರಣಕ್ಕೆ ಔಷಧದಿಂದ ಗುಣವಾಗದ ಕಾಯಿಲೆ ನಂಬಿಕೆಯಿಂದ ಗುಣವಾಗುವುದಿರಬೇಕು. ಇರಲಿ, ಸುಶ್ರುತನ ವಿಚಾರಕ್ಕೆ ಬಂದರೆ ಆತನೇ ಪ್ರಥಮತಃ ಶಸ್ತ್ರಕ್ರಿಯೆ ಮಾಡಿದವನಲ್ಲ ಎನ್ನುವುದು ವೇದಗಳಿಂದಲೂ, ಪುರಾಣಗಳಿಂದಲೂ ತಿಳಿದು ಬರುತ್ತದೆ. ದಿವೋದಾಸಸ್ಯ ಸತ್ಪತಿಃ, ದಿವೋದಾಸೇಭಿರ್ ಇಂದ್ರಸ್ತವಾನಃ ಎಂದು ವೇದಗಳಲ್ಲಿ ಉಲ್ಲೇಖಿತನಾದ ಜಗತ್ತು ಕಂಡ ಅಪ್ರತಿಮ ಕೌಶಲ್ಯದ ವೈದ್ಯದೇವ ಧನ್ವಂತರಿ ಸುಶ್ರುತನಿಗೂ ಗುರುವಾಗಿದ್ದ. ಋಗ್ವೇದ ಉಲ್ಲೇಖಿಸಿದ ದಿವೋದಾಸನಿಗೆ ಕಾಶಿರಾಜ ಸುದೇವ ಅಥವಾ ಧನ್ವನ ಮಗನಾದುದರಿಂದ ಧನ್ವಂತರಿ ಎಂಬ ಹೆಸರು ಬಂತೆಂದು ಕೌಶಿಕ ಸೂತ್ರ ಹೇಳುತ್ತದೆ. ಧನ್ವ ಹಾಗೂ ಧನ್ವಂತರಿಯನ್ನು ಕಾಶಿರಾಜರ ವಂಶವೃಕ್ಷ ಹರಿವಂಶವೂ ಸೂಚಿಸಿದೆ. ಕಾಶೇಯನ ಪೌತ್ರನಾದ ಧನ್ವ ಕ್ಷೀರ ಸಾಗರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರಿ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಭರದ್ವಾಜರಿಂದ ಆಯುರ್ವೇದದ ಉಪದೇಶವನ್ನು ಪಡೆದ ಧನ್ವಂತರಿ ಅವುಗಳನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದ ತಂತ್ರ, ರಸಾಯನ ಶಾಸ್ತ್ರ ಹಾಗೂ ವಾಜೀಕರಣ ತಂತ್ರಗಳೆಂದು ಎಂಟು ವಿಭಾಗ ಮಾಡಿ ಶಿಷ್ಯರಿಗೆ ಉಪದೇಶಿಸಿದ. ಲೋಹ-ರಸ-ಉಪರಸ-ರತ್ನ-ಉಪರತ್ನಾದಿಗಳ ಪ್ರಯೋಗದಿಂದ ಮಾಡುವ ಚಿಕಿತ್ಸೆಗೆ ದೈವೀ ಚಿಕಿತ್ಸೆಯೆಂದೂ, ಜಪ-ಹೋಮ-ನಿಯಮ-ಪ್ರಾಯಶ್ಚಿತ್ತ-ಷಡ್ರಸಯುಕ್ತ ಔಷಧಿಗಳಿಂದ ಮಾಡುವ ಚಿಕಿತ್ಸೆಗೆ ಮಾನುಷೀ ಚಿಕಿತ್ಸೆಯೆಂದೂ ಹಾಗೂ ಶಸ್ತ್ರಕ್ಷಾರಾಗ್ನಿಗಳಿಂದ ಛೇದನ, ಭೇದನ, ವ್ಯಧನ, ಬಂಧನ ಹಾಗೂ ದಹನದ ಮೂಲಕ ಮಾಡುವ ಚಿಕಿತ್ಸೆಗೆ ಅಸುರೀ ಚಿಕಿತ್ಸೆಯೆಂದು ಮೂರು ವಿಭಾಗಗಳನ್ನು ಧನ್ವಂತರಿ ಸುಶ್ರುತನಿಗೆ ಬೋಧಿಸುತ್ತಾನೆ. ಸುಶ್ರುತ ಸಂಹಿತೆ ಕಾಶಿಯ ರಾಜ ದಿವೋದಾಸನೇ ಧನ್ವಂತರಿ ಎಂದಿದೆ. ಅಗ್ನಿ ಪುರಾಣ, ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವ ದಿವೋದಾಸ ಎಂದಿದೆ. ಅಗ್ನಿಪುರಾಣದಲ್ಲಿ ಮನುಷ್ಯ, ಕುದುರೆ, ಹಸುಗಳಿಗೆ ಸಂಬಂಧಿಸಿದ ಆಯುರ್ವೇದ ಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು-ಶಿಷ್ಯ ಸಂವಾದ ರೂಪದಲ್ಲಿ ವರ್ಣಿಸಲ್ಪಟ್ಟಿದೆ. ಸ್ಕಂದ, ಗರುಡ, ಮಾರ್ಕಂಡೇಯ ಪುರಾಣಗಳು ವೈಶ್ಯಕನ್ಯೆ ವೀರಭದ್ರಾ ಎಂಬಾಕೆಯಿಂದ ಗಾವಲ ಋಷಿಯ ವರಬಲದಿಂದ ಹುಟ್ಟಿ ಅಶ್ವಿನೀಕುಮಾರರಿಂದ ಆಯುರ್ವೇದ ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದು ವರ್ಣಿಸಿವೆ. ಬ್ರಹ್ಮವೈವರ್ತ ಪುರಾಣ ಈತ ಸರ್ವ ವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಭಾಗವತ, ಮಾರ್ಕಂಡೇಯ, ವಿಷ್ಣುಧರ್ಮೋತ್ತರ, ವಿಷ್ಣು ಪುರಾಣಾದಿಗಳು ಹಾಗೂ ಶಿಲ್ಪರತ್ನ ಸಮರಾಂಗಣಸೂತ್ರಧಾರ ಇವನ ವಿಗ್ರಹವನ್ನೂ ವರ್ಣಿಸಿವೆ. ಅದೇನೇ ಇದ್ದರೂ ಇವೆಲ್ಲವುಗಳಿಂದ ತಿಳಿದು ಬರುವ ಅಂಶವೆಂದರೆ ಸುಶ್ರುತನಿಗೂ ಮೊದಲೇ, ಧನ್ವಂತರಿಗೂ ಮೊದಲೇ ಭರದ್ವಾಜಾದಿ ಋಷಿಗಳಿಗೆ ಈ ವಿದ್ಯೆ ತಿಳಿದಿತ್ತು. ಹಾಗಾಗಿ ಆಯುರ್ವೇದ ಋಷಿದರ್ಶನವೇ ಆಗಿದ್ದಿರಬೇಕು. ಸುಶ್ರುತ, ಧನ್ವಂತರಿಗಳಿಗೂ ಬಹುಪೂರ್ವದಲ್ಲೇ ಭಾರತದಲ್ಲಿ ಪ್ರಚಲಿತದಲ್ಲಿದ್ದಿರಬೇಕು. ಅಶ್ವಿನಿದೇವತೆಗಳೇ ಅದಕ್ಕೆ ಅಧಿಪತಿಗಳೆಂದ ಮೇಲೆ, ವೇದಗಳಲ್ಲೂ ಅದರ ಉಲ್ಲೇಖಗಳನ್ನು ಕಾಣುವಾಗ ಅದೊಂದು ದರ್ಶನವೇ ಆಗಿರಬೇಕು!

                   ಋಗ್ವೇದದ ಒಂದನೇ ಮಂಡಲದ ನೂರಹದಿನೆಂಟನೇ ಸೂಕ್ತದ ಒಂದು ಋಕ್ಕುವಿನಲ್ಲಿ ಖೇಲ ಎಂಬ ರಾಜನ ಮಹಿಳಾ ಸೈನಿಕೆ ವಿಷ್ಫಲಾ ಯುದ್ಧದಲ್ಲಿ ತನ್ನ ಕಾಲನ್ನು ಕಳೆದುಕೊಂಡಾಗ ಅಗಸ್ತ್ಯರ ಪೌರೋಹಿತ್ಯದಲ್ಲಿ ನಡೆದ ಪ್ರಾರ್ಥನೆಯನ್ನು ಮನ್ನಿಸಿ ಅಶ್ವಿನೀ ದೇವತೆಗಳು ಕಬ್ಬಿಣದ ಕಾಲನ್ನು ಜೋಡಿಸುವ ಉಲ್ಲೇಖವಿದೆ. ಋಗ್ವೇದದ ಎಂಟನೇ ಮಂಡಲದ ಒಂದನೇ ಸೂಕ್ತ ಮೇದಾತಿಥಿಯು ಅಸಂಗನ ನಪುಂಸಕತ್ವವನ್ನು(ಪುರುಷ-ಸ್ತ್ರೀ-ಪುರುಷ) ನಿವಾರಿಸಿದ್ದನ್ನು ವರ್ಣಿಸುತ್ತದೆ. ಅಸಹಜ ವಾತಕ್ಕೆ ಚಿಕಿತ್ಸಾ ವಿಧಿ ಹೇಳಿದ(ವಾತಾಪಿ ಪೀವ ಇದ್ಭವ) ಅಗಸ್ತ್ಯರ ಕಥೆ, ಪುನಃ ದೃಷ್ಟಿ ಪಡೆದುಕೊಂಡ ಉಪಮನ್ಯುವಿನ ಕಥೆ, ಮರು ಯೌವನ ಪಡೆದ ಚ್ಯವನ ಮಹರ್ಷಿಗಳ ದೃಷ್ಟಾಂತಗಳೆಲ್ಲಾ ಪುರಾತನ ವೈದ್ಯ ವಿದ್ಯೆಯ ಮಹಾನತೆಯನ್ನು ಸಾರುತ್ತವೆ.  ಹೌದು, ಭಾರತೀಯ ವೈದ್ಯ ವಿದ್ಯೆಗೆ ವೇದವೇ ಮೂಲ. ಚತುರ್ವೇದಗಳಾದ್ಯಂತ ಈ ವೈದ್ಯವಿದ್ಯೆ ಹಾಸುಹೊಕ್ಕಾಗಿದೆ. ಇದನ್ನು ಅಭ್ಯಸಿಸಿದ ಒಬ್ಬೊಬ್ಬ ಋಷಿಗಳ ಸ್ವೀಕೃತ ಶಕ್ತಿಗೆ ಅನುಸಾರವಾಗಿ ಋಷಿಪ್ರೋಕ್ತ ವೈದ್ಯಾಗಮವು ಕಾಲಘಟ್ಟದಲ್ಲಿ ವಿಭಿನ್ನತೆಯನ್ನು ಪಡೆಯಿತು. ಮೂರೂವರೆಸಾವಿರ ವರ್ಷಗಳ ಹಿಂದಕ್ಕೆ ದೊರೆತಿರುವ, ಶಾರ್ಞ್ಘ್ಯಧರ ಕೃತ ಜ್ಯೋತಿರಾಯುರ್ವೇದ ಸಂಹಿತೆಯೇ ಈ ವೈದ್ಯ ಪದ್ದತಿಯ ಲಭ್ಯವಿರುವ ಅತೀ ಪುರಾತನ ಗ್ರಂಥ. ಮೂಲ ವೇದವನ್ನು ತಂತ್ರ ಹಾಗೂ ವೇದಗಳೆಂಬ ಪ್ರತ್ಯೇಕ ಭಾಗಗಳಾಗಿ ಪರಿಷ್ಕರಿಸಿದ ದತ್ತಾತ್ರೇಯಾದಿಯಾಗಿ ಮೂರು ಲಕ್ಷ ಕೋಟಿ ಆತ್ರೇಯರ ಆಯುರ್ವೇದ ಆತ್ರೇಯ ಸಂಹಿತೆಯೂ ಇನ್ನೊಂದು ಪ್ರಖ್ಯಾತ ಗ್ರಂಥ. ಆಹಾರ ಚಕ್ರ, ಜೀವ ವ್ಯವಹಾರ, ಆರೋಗ್ಯ ಸೂತ್ರಗಳೆಲ್ಲಾ ವೇದಗಳಲ್ಲಿ ಉಲ್ಲೇಖಿಸಿದ ಮಾಹಿತಿಗೆ ಹತ್ತಿರವಾಗಿದ್ದ ಈ ವೈದ್ಯ ಪದ್ದತಿ ಕ್ರಮೇಣ ಸುಶ್ರುತ, ಚರಕಾದಿಗಳ ಕಾಲಕ್ಕೇ ವಿರೂಪಗೊಂಡವು. ಸುಶ್ರುತ, ಚರಕರು ಇದನ್ನು ಸಾರ್ವಜನಿಕ ಬಳಕೆಗೆ ತಂದರು. ಕ್ರಮೇಣ ಈ ಎಲ್ಲಾ ಮೂಲಗ್ರಂಥಗಳು ಪ್ರಕ್ಷಿಪ್ತಗೊಂಡು ವಿಕೃತವಾದವು. ಈಗಂತೂ ಇದು ಅಲೋಪತಿ ಸಹಿತ ಅನೇಕ ಪದ್ದತಿಗಳಾಗಿ ಕವಲೊಡೆದು, ಹಣ ಮಾಡುವ, ಜನರನ್ನು ಭಯಭೀತಗೊಳಿಸಿ ಸುಲಿಗೆ ಮಾಡುವ ದಂಧೆಯಾಗಿ ಬೆಳೆದು ಶರೀರಶಾಸ್ತ್ರದ ಕಿಂಚಿತ್ತೂ ಜ್ಞಾನವಿಲ್ಲದವರ ಕೈಗೆ ಸಿಕ್ಕು ರೋಗ ನಿದಾನದ ಬದಲು ವ್ಯಕ್ತಿಯೇ ನಿಧನವಾಗುವ ಪರಿಸ್ಥಿತಿ ಎದುರಾಗಿದೆ. ಋಷಿಗಳು ತಪಸ್ಸಿನ ಮೂಲಕ ಪಡೆದ ಆಯುರ್ವೇದವೆಂಬ ಜ್ಞಾನಸಾಗರದ ಮುಂದೆ ಇಂದಿನ ಆಧುನಿಕ ವೈದ್ಯ ಪದ್ದತಿ ಸಣ್ಣ ತೊರೆಯಷ್ಟೆ. ಇಂದಿನ ಪದ್ದತಿಯನ್ನು ದೂಷಿಸುವ ಮಾತಿದಲ್ಲ. ಹಿಂದಿನ ನೈತಿಕತೆ, ಮೌಲ್ಯ ಇಂದಿನ ಪದ್ದತಿಯಲ್ಲೂ ಉಳಿದು ಇನ್ನಷ್ಟು ಸಂಶೋಧನೆಗಳಾಗಲೀ ಎನ್ನುವ ಆಶಯವಷ್ಟೇ.