ಪುಟಗಳು

ಶನಿವಾರ, ಜುಲೈ 6, 2019

ಆಯುರ್ವೇದಕ್ಕೂ ಮೂಲ ವೇದ; ನಾವು ಬದಿಗೆ ಸರಿಸಿ ಬಿಟ್ಟೆವೀಗ!

ಆಯುರ್ವೇದಕ್ಕೂ ಮೂಲ ವೇದ; ನಾವು ಬದಿಗೆ ಸರಿಸಿ ಬಿಟ್ಟೆವೀಗ!

               ಆತ ಎತ್ತಿನ ಗಾಡಿಯ ಚಾಲಕ. ಕೋವಾಸ್ಜಿ ಎಂಬ ನಾಮಧೇಯ. ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೈನ್ಯದಲ್ಲಿದ್ದು ಟಿಪ್ಪುವಿನ ವಿರುದ್ಧ ಹೋರಾಡಿದ್ದ ಆತ. ಮತಾಂಧ ಟಿಪ್ಪುವಿನ ಸೆರೆಮನೆಯಲ್ಲಿ ಕೈದಿಯಾಗಿದ್ದ ಈತ ಆ ಸಮಯದಲ್ಲಿ ಅಪಾರ ಚಿತ್ರಹಿಂಸೆಗೊಳಗಾಗಿದ್ದ. ಆ ಪಾಪಿಗಳು ಕೋವಾಸ್ಜಿಯ ಮೂಗನ್ನೇ ಕತ್ತರಿಸಿದ್ದರು. ಬಿಡುಗಡೆಯಾದ ಹನ್ನೆರಡು ತಿಂಗಳ ಪರ್ಯಂತ ಮೂಗಿಲ್ಲದೆ ಪರಿತಪಿಸುತ್ತಿದ್ದ ಆತ ಬಳಿಕ ನೇರವಾಗಿ ನಾಟಿ ವೈದ್ಯ ಕುಮಾರ (ಪುಣೆಯ ಬಳಿ) ಎನ್ನುವವನ ಬಳಿ ಬಂದ. ಆತ ಬರೇ ನಾಟಿ ವೈದ್ಯನಾಗಿರಲಿಲ್ಲ. ಸುಶ್ರುತ ಸಂಹಿತೆಯನ್ನು ಅರಗಿಸಿಕೊಂಡ ಶಸ್ತ್ರಚಿಕಿತ್ಸಕ ಆತನಾಗಿದ್ದ. 1794ರಲ್ಲಿ ಕೋವಾಸ್ಜಿಗೆ ಕುಮಾರ ಮೂಗಿನ ಶಸ್ತ್ರಚಿಕಿತ್ಸೆ ನಡೆಸಿದ. ಥೋಮಸ್ ಕ್ರೂಸೋ ಹಾಗೂ ಜೇಮ್ಸ್ ಫೈಂಡ್ಲೇ ಇದಕ್ಕೆ ಸಾಕ್ಷಿಯಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಹಂತಹಂತವನ್ನೂ ಲ್ಯೂಕಾಸ್ ಎಂಬ ಬ್ರಿಟಿಷಿಗ ದಾಖಲಿಸಿಕೊಂಡ. ಈ ರೈನೋಪ್ಲಾಸ್ಟಿ(ಮೂಗಿನ ಶಸ್ತ್ರಚಿಕಿತ್ಸೆ)ಯಾದ ಬಳಿಕ 1795ರಲ್ಲಿ ಬ್ರಿಟಿಷ ಜೇಮ್ಸ್ ವ್ಹೇಲ್ಸ್ ರಚಿಸಿದ ಕೋವಾಸ್ಜಿಯ ಭಾವಚಿತ್ರ ಪುರಾತನ ಭಾರತೀಯ ವೈದ್ಯಕೀಯದ ನಿಖರತೆ ಹಾಗೂ ಹಿರಿಮೆಯನ್ನು ಸಾರುತ್ತದೆ. ಈ ಚಿತ್ರ ಸಮಕಾಲೀನ ಜಗತ್ತಿಗೆ ಗೊತ್ತಿರುವ ಮೊದಲ ಆಧುನಿಕ ಪ್ಲಾಸ್ಟಿಕ್ ಸರ್ಜರಿಯದ್ದು. ಅಲ್ಲದೆ ಇದು ವಿಶ್ವಕ್ಕೆ ತಿಳಿದಿರುವ ಮೂಗಿನ ಸರ್ಜರಿಯ ಮೊದಲ ಚಿತ್ರ.

                       ಯೂರೋಪ್ ಆ ಸಮಯದಲ್ಲಿ ವೈಜ್ಞಾನಿಕವಾಗಿ ಬಹಳ ಹಿಂದುಳಿದಿತ್ತು. ಪ್ಲಾಸ್ಟಿಕ್ ಸರ್ಜರಿಯಂತಹ ವೈದ್ಯಕ್ರಮಕ್ಕೆ ಬೇಕಾದ ಜ್ಞಾನ, ಪರಿಣತಿಯನ್ನು ಅವರು ಹೊಂದಿರಲೇ ಇಲ್ಲ. ಲ್ಯೂಕಾಸ್ ದಾಖಲಿಸಿದ ಮಾಹಿತಿಯಿಂದ ಆಸಕ್ತರಾದ ಹಲವು ಯೂರೋಪಿಯನ್ನರು ಸುಶ್ರುತ ಸಂಹಿತೆಯ ಅಧ್ಯಯನಕ್ಕೆ ತೊಡಗಿದರು. ಅವರಲ್ಲೊಬ್ಬ ಜೋಸೆಫ್ ಕಾನ್ಸ್ಟಂಟೈನ್ ಕಾರ್ಪ್ಯೂ. ಈ ತಂತ್ರಗಳನ್ನು ಬಳಸಿದ ಆತ ಇಪ್ಪತ್ತು ವರ್ಷಗಳ ಬಳಿಕ (22 ಅಕ್ಟೋಬರ್ 1814) ಆಧುನಿಕ ಶಸ್ತ್ರಕ್ರಿಯೆಯೊಂದನ್ನು ಮಾಡಿ ಭಾರತದ ಪುರಾತನ ವಿಜ್ಞಾನವನ್ನು ಒಪ್ಪದವರ ಕಣ್ಣಲ್ಲಿ ಶಸ್ತ್ರಕ್ರಿಯೆಯ ಪಿತಾಮಹ ಎನಿಸಿಕೊಂಡ! ಆದರೆ ಆತನೇ ತನ್ನ ಪುಸ್ತಕ "An account of two successful operations .."ನಲ್ಲಿ "ಇದು ಬಹು ಹಿಂದಿನಿಂದಲೂ ಹಿಂದೂಗಳಿಂದ ಮಾಡಲ್ಪಡುತ್ತಿತ್ತು. ನಾನು ಯಾರಿಂದ ಈ ವಿದ್ಯೆಯನ್ನು ಕಲಿತೆನೋ ಅವರು ಇದನ್ನು ಹಿಂದೂ ವೈದ್ಯರಿಂದ ನಕಲಿಸಿದ್ದರು" ಎಂದು ಬರೆದದ್ದು ಇತಿಹಾಸದ ಕಾಲಗರ್ಭದಲ್ಲಿ ಮುಚ್ಚಲ್ಪಟ್ಟಿತು. ಆ ಶಸ್ತ್ರಕ್ರಿಯೆಗಳಲ್ಲಿ ಆತ ತನ್ನದೇ ಆದ ನವೀನ ಪ್ರಯೋಗಗಳನ್ನು ಅಳವಡಿಸಿದ್ದರೂ ಭಾರತದ ಸಾಂಪ್ರದಾಯಿಕ ಶಸ್ತ್ರಕ್ರಿಯೆಯ ಪ್ರಕ್ರಿಯೆಯಿಂದ ಸ್ಪೂರ್ತಿ ಪಡೆದುದನ್ನು, ಜ್ಞಾನವನ್ನು ಎರವಲು ಪಡೆದುದನ್ನು ತನ್ನ ಪುಸ್ತಕದಲ್ಲಿ ಕೃತಜ್ಞತಾಪೂರ್ವಕವಾಗಿ ಬರೆಯುವ ಔದಾರ್ಯ ತೋರುವ ಮೂಲಕ ಇತಿಹಾಸದ ಕೊಂಡಿಯೊಂದನ್ನು ಜೋಡಿಸಿದ. ಅದಕ್ಕಾಗಿ ಭಾರತೀಯರು ಅವನಿಗೆ ಕೃತಜ್ಞರಾಗಿರಬೇಕು. ಮೂಗಿನ ಪುನರ್ನಿರ್ಮಾಣವನ್ನು ಭಾರತದಲ್ಲಿ ಶತಶತಮಾನಗಳಿಂದ ದಿನನಿತ್ಯ ಅಭ್ಯಾಸ ಮಾಡಲಾಗುತ್ತಿತ್ತು. ಭಾರತದ ಎರಡು ಪ್ರಸಿದ್ಧ ಕೃತಿಗಳಾದ, ಕ್ರಿ.ಪೂ.ದ ಮೊದಲ ಸಹಸ್ರಮಾನದ ಮಧ್ಯಭಾಗದಲ್ಲಿ ರಚಿತವಾಯ್ತೆನ್ನಲಾದ ಸುಶ್ರುತ ಸಂಹಿತೆ, ಕ್ರಿ.ಶ. ಆರನೇ ಶತಮಾನದ ಅಷ್ಟಾಂಗಹೃದಯ ಸಂಹಿತೆಗಳು ಭಾರತೀಯ ಶಸ್ತ್ರಕ್ರಿಯೆಯೆ ಪ್ರಕ್ರಿಯೆಗಳನ್ನು ವಿವರಿಸಿವೆ. ಹತ್ತೊಂಬತ್ತನೇ ಶತಮಾನದ ವೇಳೆಗೆ ಈ ತಂತ್ರ ದೇಶದ ಮೂರು ವಿಭಿನ್ನ ಭಾಗಗಳಲ್ಲಿ ಪ್ರತ್ಯೇಕ ಪರಿವಾರಗಳ ಮೂಲಕ ಹಸ್ತಾಂತರಿತವಾಯಿತು! ಹದಿನೆಂಟನೆಯ ಶತಮಾನದವರೆಗೂ ಕುಂಬಾರರು ತಮ್ಮ ಕೈಚಳಕದಿಂದ ಮೂಗಿಗೆ ಸಂಬಂಧಿಸಿದ ಶಸ್ತ್ರಕ್ರಿಯೆಯನ್ನು ಮಾಡುತ್ತಿದ್ದುದಾಗಿ ತಿಳಿದು ಬರುತ್ತದೆ.

                    ಒ೦ದು ರಾತ್ರಿ ವೈದ್ಯನೊಬ್ಬನ ಮನೆ ಬಾಗಿಲನ್ನು ಆಗ೦ತುಕನೊಬ್ಬ ಬಡಿಯತೊಡಗಿದ. ಬಾಗಿಲು ತೆರೆದರೆ ಮೂಗು ಕಳೆದುಕೊ೦ಡು ರಕ್ತ ಸುರಿಸುತ್ತಿದ್ದವನೊಬ್ಬ ಕ೦ಡು ಬ೦ದ. ವೈದ್ಯ ಆತನನ್ನು ಒಳಗೆ ಕರೆದೊಯ್ದು ಗಿಡಮೂಲಿಕೆಗಳಿ೦ದ ತಯಾರಿಸಿದ ಔಷಧಿಯಿ೦ದ ಮೂಗು ತೊಳೆದು ಅವನಿಗೆ ಕುಡಿಯಲು ಪೇಯ ನೀಡಿದ. ಮೂಗಿನ ಅಳತೆ ತೆಗೆದು ಗಲ್ಲದ ಭಾಗದಿ೦ದ ಚರ್ಮ ಕತ್ತರಿಸಿ ಮೂಗಿನ ಜಾಗದಲ್ಲಿಟ್ಟು ಹೊಲಿದ. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾದ ಬಳಿಕ ಮು೦ದಿನ ಚಿಕಿತ್ಸೆ ನೀಡಿದ. ಆತ ಭಾರತ ಕಂಡ ಅಪೂರ್ವ ವೈದ್ಯ. ಇಂದಿನ ಹಲವು ವೈದ್ಯಕೀಯ ಪ್ರಕ್ರಿಯೆಗೆ ಮೂಲಸ್ತ್ರೋತನಾತ. ಅರಿವಳಿಕೆ ತಜ್ಞ. ಕಣ್ಣಿನ ಪೊರೆ ತೆಗೆಯಬಲ್ಲ ಚಾಣಾಕ್ಷ. ಮೂತ್ರ ಪಿ೦ಡದ ಕಲ್ಲು ಕರಗಿಸಬಲ್ಲ ಧನ್ವ೦ತರಿ. ಮೂಳೆಮುರಿತ ಸರಿಪಡಿಸಬಲ್ಲ ನಿಷ್ಣಾತ. ಅಷ್ಟೇಕೆ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆದ ವಿಶ್ವದ ಮೊದಲ ಪ್ರಸೂತಿ ತಜ್ಞ. ಬಹುಕೋನಗಳಲ್ಲಿ, ಬಹುವಿಧಗಳಲ್ಲಿ, ಬಹುವಿಭಾಗಗಳಲ್ಲಿ ಆಧುನಿಕ ವೈದ್ಯಶಾಸ್ತ್ರ ಬೆಳೆದಿದ್ದರೂ ಮೇಲಿನ ಒ೦ದೊ೦ದು ಕೆಲಸಕ್ಕೂ ಹಲವು ವೈದ್ಯರು ಅವಶ್ಯವಿರುವಾಗ ಸುಶ್ರುತ 2600 ವರ್ಷಗಳ ಹಿ೦ದೆಯೇ ಈ ಎಲ್ಲ ವೈದ್ಯ ಜ್ಞಾನವನ್ನೂ ಗಳಿಸಿದ್ದ. ಆಯುರ್ವೇದದ ಹಿರಿಮೆ ಅದು.

                     ಆಯುರ್ವೇದ ಜಗತ್ತಿನ ಅತೀ ಪ್ರಾಚೀನ ವೈದ್ಯಕೀಯ ಚಿಕಿತ್ಸೆಯೂ ಹೌದು. ಹಾಗೂ ಈಗಲೂ ಜೀವಂತವಾಗಿರುವ ವಿಶ್ವದ ಏಕೈಕ ಪ್ರಾಚೀನ ವೈದ್ಯಶಾಸ್ತ್ರ(ಚೀನಾದ ಪಾರಂಪರಿಕ ವೈದ್ಯಕೀಯವನ್ನು ಬಿಟ್ಟರೆ; ಅದಕ್ಕೂ ಮೂಲ ಭಾರತದ ಆಯುರ್ವೇದವೇ ಇರಬಹುದು). ಕಾಯ ಚಿಕಿತ್ಸಾ, ಶಲ್ಯ ಚಿಕಿತ್ಸಾ(ಶಸ್ತ್ರ ಚಿಕಿತ್ಸೆ), ಶಾಲಾಕ್ಯ ಚಿಕಿತ್ಸಾ(ಮೂಗು, ಕಿವಿ, ಗಂಟಲು, ಶಿರಸ್ಸಿಗೆ ಸಂಬಂಧಿಸಿದ ಚಿಕಿತ್ಸೆ), ಕೌಮಾರ ಭೃತ್ಯ(ಮಕ್ಕಳಿಗೆ ಸಂಬಂಧಿಸಿದ ಚಿಕಿತ್ಸೆ), ವಾಜೀಕರಣ, ಅಗದ ತಂತ್ರ(ವಿಷ ಚಿಕಿತ್ಸೆ), ರಸಾಯನ ಚಿಕಿತ್ಸೆ(ವ್ಯಾಧಿ ನಿರೋಧಕ ಚಿಕಿತ್ಸೆ), ಶಕ್ತಿ ವೃದ್ಧಿ ಚಿಕಿತ್ಸೆ ಎಂಬ ಎಂಟು ಶಾಖೆಗಳು ಆಯುರ್ವೇದದಲ್ಲಿವೆ. ಚರಕ ಸಂಹಿತೆ ಹಾಗೂ ಸುಶ್ರುತ ಸಂಹಿತೆಗಳಲ್ಲಿ ಏಳುನೂರಕ್ಕೂ ಹೆಚ್ಚು ಔಷಧೀಯ ಸಸ್ಯಗಳ ವಿಸ್ತೃತ ವಿವರಣೆ ಇದೆ. ಕೈಯದೇವ ನಿಘಂಟು, ಭಾವಪ್ರಕಾಶ ನಿಘಂಟು, ರಾಜ ನಿಘಂಟು ಔಷಧೀಯ ವನಸ್ಪತಿಗಳನ್ನು ವರ್ಣಿಸಿವೆ. ಸುಶ್ರುತ ಸಂಹಿತೆಯಲ್ಲಿ ಆ ಕಾಲದಲ್ಲಿ ಶಸ್ತ್ರಕ್ರಿಯೆಗೆ ಉಪಯೋಗಿಸುತ್ತಿದ್ದ ಉಪಕರಣಗಳ ಪಟ್ಟಿಯನ್ನು ನೋಡಿದರೆ ಇಂದಿನ ಶಸ್ತ್ರಕ್ರಿಯೆಯೂ ಅಂತಹುದೇ ಅಥವಾ ಅವಕ್ಕೆ ಸಂವಾದಿಯಾಗಿರುವ ಉಪಕರಣಗಳನ್ನು ಬಳಸುತ್ತದೆ. ಉದಾಹರಣೆಗೆ ಮಂಡಲಾಗ್ರ(ಕ್ಯುರೇಟ್), ವೃದ್ಧಿಪತ್ರ(ಸ್ಕಾಪೆಲ್), ಏಷಣಿ(ಪ್ರೋಬ್), ಖರಪತ್ರ ಮುಂತಾದುವು. ಕಣ್ಣು, ಕಿವಿ, ಮೂಗಿನ ಶಸ್ತ್ರಚಿಕಿತ್ಸೆ, ಮೂಲವ್ಯಾಧಿ, ಮೂತ್ರದಲ್ಲಿ ಕಲ್ಲು, ಪ್ರಸವ ಕಾಲದ ಶಸ್ತ್ರಚಿಕಿತ್ಸೆ, ದೇಹದೊಳಗೆ ಬೆಳೆದ ಗಂಟುಗಳನ್ನು ತೆಗೆವ ಶಸ್ತ್ರಚಿಕಿತ್ಸೆ, ಗಲ್ಲಭಾಗದಿಂದ ಚರ್ಮವನ್ನು ತೆಗೆದು ಹರಿದ ಮೂಗನ್ನು ಸರಿಪಡಿಸುವ ರೈನೋಪ್ಲಾಸ್ಟಿ ಇವೆಲ್ಲದರ ಕಾರ್ಯವಿಧಾನವನ್ನು ವಿಶ್ಲೇಷಣೆ ಸಹಿತ ಸುಶ್ರುತ ಸಂಹಿತೆ ವರ್ಣಿಸುತ್ತದೆ.

                      ‘ಸುಶ್ರುತ ಸಂಹಿತೆ’ ಯಲ್ಲಿ ೩೦೦ ಶಸ್ತ್ರಚಿಕಿತ್ಸೆಗಳ, ಮೂಳೆಮುರಿತದ ಕುರಿತಾದ ಉಪಚಾರ ಮತ್ತು ಪ್ಲಾಸ್ಟಿಕ್ ಸರ್ಜರಿ ಬಗೆಗಿನ ಮಾಹಿತಿಯನ್ನುಕೊಡಲಾಗಿದೆ. ಅರವಳಿಕೆ, ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಯಿಂದ ಹೆರಿಗೆಯನ್ನು ಮಾಡಿಸುವ ವಿವರಗಳಿವೆ. ಜಗತ್ತಿನ ಉಳಿದೆಲ್ಲಾ ಭಾಗ ಕಣ್ಣು ಬಿಡುತ್ತಿದ್ದಾಗಲೇ ಸುಶ್ರುತರ ೧೨೫ ರೀತಿಯ ಉಪಕರಣಗಳನ್ನು ಶಸ್ತ್ರಚಿಕಿತ್ಸೆಗಾಗಿ ಉಪಯೋಗಿಸಿ ಆಗಿತ್ತು! ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಬರೆಯಲ್ಪಟ್ಟ ಸುಶ್ರುತ ಸಂಹಿತಾದಲ್ಲಿ 1,120 ರೋಗಗಳು, 700 ಔಷಧೀಯ ಸಸ್ಯಗಳು, ಖನಿಜ ಮೂಲಗಳಿಂದ 64 ಸಿದ್ಧತೆಗಳು ಮತ್ತು ಪ್ರಾಣಿ ಮೂಲಗಳ ಆಧಾರದ ಮೇಲೆ 57 ಸಿದ್ಧತೆಗಳ ವಿವರಣೆಗಳೊಂದಿಗೆ 184 ಅಧ್ಯಾಯಗಳಿವೆ. ಭ್ರೂಣಶಾಸ್ತ್ರ, ಮಾನವ ಅಂಗರಚನಾ ಶಾಸ್ತ್ರ, ರಕ್ತಸ್ರಾವ ಸಂಭವನೀಯತೆಗಳ ಸೂಚನೆಗಳನ್ನು, ರೋಗಿಯ ಅಭಿಧಮನಿಯ ಸ್ಥಾನ ಮತ್ತು ಪ್ರಮುಖ ರಚನೆಗಳ ರಕ್ಷಣೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ, ಜೀವಂತ ವ್ಯಕ್ತಿಯ ಹಲ್ಲುಗಳನ್ನು ಕೊರೆಯುವುದು, ಮೂಳೆಗಳ ಶಸ್ತ್ರಚಿಕಿತ್ಸೆಗಳ ಬಗೆಗೂ ಇದರಲ್ಲಿ ಹೇಳಲಾಗಿದೆ. 101 ರೀತಿಯ ಶಸ್ತ್ರಚಿಕಿತ್ಸಾ ಸಲಕರಣೆಗಳನ್ನು ಸುಶ್ರುತ ಪಟ್ಟಿ ಮಾಡಿದ್ದಾನೆ. ಅವನ್ನೆಲ್ಲಾ ಪ್ರಾಣಿ-ಪಕ್ಷಿಗಳಿಗೆ ಹೋಲಿಸಿ ಹೆಸರಿಟ್ಟಿದ್ದಾನೆ. ಸುಶ್ರುತ ಶಸ್ತ್ರಚಿಕಿತ್ಸೆಯನ್ನು ಛೇದ್ಯ, ಲೇಖ್ಯ, ವೇದ್ಯ, ಈಸ್ಯ, ಅರ್ಹ್ಯ, ವ್ಯರ್ಯ, ಮತ್ತು ದಿವ್ಯ ಎ೦ದು ವಿ೦ಗಡಿಸಿದ್ದಾನೆ. ಪುಂಡರೀಕ, ಪಾಂಡುರ, ಪ್ರಮೋದ, ಷಷ್ಟಿಕ, ರಕ್ತಶಾಲಿ, ಮಹಾಶಾಲಿ, ಕಾಂಚನ, ಕುಸುಮಾಂಡಕ ಮೊದಲಾದ 24 ರೀತಿಯ ಅಕ್ಕಿಯ ಪ್ರಭೇದಗಳು, ವಿವಿಧ ಹಣ್ಣು, ತರಕಾರಿಗಳು, ಧಾನ್ಯ ಪ್ರಭೇದಗಳು, ಕಂಗು, ನೀವಾರ, ಶ್ಯಾಮಕದಂತಹಾ ಕಿರುಧಾನ್ಯಗಳ ಉಲ್ಲೇಖಗಳದರಲ್ಲಿವೆ. ಸುರಾ, ವಾರುಣಿ, ಮಾರ್ದ್ವೀಕ, ಮೈರೇಯ, ಗೌಡ, ಖಾರ್ಜೂರಾದಿ ವಿವಿಧ ಮದ್ಯಗಳ ತಯಾರಿಕೆಯ ಹಾಗೂ ಗುಣಾವಗುಣಗಳ ವರ್ಣನೆಯೂ ಆಯುರ್ವೇದ ಗ್ರಂಥಗಳಲ್ಲಿದೆ! ಆಯುರ್ವೇದ ಉಪಯೋಗಿಸುತ್ತಿದ್ದ ಭಸ್ಮ ಮಾದರಿಯ ಔಷಧೀಯ ಪ್ರಕಾರವನ್ನೂ ಆಧುನಿಕ ವೈದ್ಯ ಪದ್ದತಿ ಬಳಕೆಗೆ ತೆಗೆದುಕೊಂಡದ್ದು/ತೆರೆದುಕೊಂಡದ್ದು ಇತ್ತೀಚೆಗಷ್ಟೆ! ಪಾಶ್ಚಾತ್ಯರು ಖನಿಜ, ಲೋಹಗಳ ಬಗೆಗೆ ಅರಿಯುವ ಮೊದಲೇ ಭಾರತೀಯರು ಅವುಗಳನ್ನು ಔಷಧಿಯಾಗಿ ಉಪಯೋಗಿಸುತ್ತಿದ್ದರು. ರಸಶಾಸ್ತ್ರ ಇಲ್ಲಿಂದ ಚೀನಾಕ್ಕೆ ಹೋಗಿ ಬಳಿಕ ವಿಶ್ವದ ಉಳಿದ ಭಾಗಗಳಿಗೂ ಹರಡಿತು. ಸುಶ್ರುತ ಗಾಂಧಾರ ದೇಶದ ವಿಶ್ವಾಮಿತ್ರನ ಮಗನೆಂದು ಗ್ರಂಥಗಳಿಂದ ತಿಳಿದುಬರುತ್ತದೆ. ವಿಶ್ವಾಮಿತ್ರನು ಗಾಂಧಾರ ದೇಶದ ರಾಜನೋ ಅಥವಾ ಋಷಿಯೋ ಇದ್ದಿರಬಹುದು. ಇಂದಿಗೂ ಸಹ ಅಲ್ಲಿಯ ಬುಡಕಟ್ಟಿನ ಜನರಲ್ಲಿ ಅನೇಕರ ಹೆಸರುಗಳು, ಸುಶ್ರುತ್, ಸುರಾಟ್, ಸೌರಾಟಿ, ಸುಹ್ರಾದಿ ಇತ್ಯಾದಿಯಾಗಿವೆ. ಇವೆಲ್ಲ ‘ಸುಶ್ರುತ' ಎನ್ನುವುದರ ಅಪಭ್ರಂಶಗೊಂಡ ರೂಪಗಳು.

                   ಚರಕನ ಕಾನಿಷ್ಕದ ದೊರೆ ಮೈರಾಣನ ಆಸ್ಥಾನ ವೈದ್ಯನಾಗಿದ್ದ. ಚರಕ ಸಂಹಿತೆ ಆಯುರ್ವೇದದಲ್ಲಿ ಮಹತ್ವದ ಗ್ರಂಥ. ದೇಹವನ್ನು ಜ್ಞಾನದ ಜ್ಯೋತಿಯ ಮೂಲಕ ಪ್ರವೇಶಿಸಲಾಗದ ವೈದ್ಯನು ರೋಗಕ್ಕೆ ಚಿಕಿತ್ಸೆ ನೀಡಲಾರ ಎಂದು ಚರಕ ಸಂಹಿತೆ ಹೇಳುತ್ತದೆ. ತಳಿಶಾಸ್ತ್ರ, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ, ತ್ರಿದೋಷ ಸಹಿತ ಹಲವು ವಿಚಾರಗಳು ಚರಕ ಸಂಹಿತೆಯಲ್ಲಿವೆ. ದೇಹದಲ್ಲಿ 360 ಎಲುಬುಗಳಿವೆ ಎಂದಿದ್ದ ಚರಕ! ಐದು ಅಥವಾ ಆರನೇ ಶತಮಾನದಲ್ಲಿ ಇದ್ದನೆನ್ನಲಾದ ವಾಗ್ಭಟ ಅಷ್ಟಾಂಗ ಸಂಗ್ರಹವೆಂಬ ವಿಶೇಷ ಆಯುರ್ವೇದ ಗ್ರಂಥದ ಕರ್ತೃ. ಈತ ಪ್ರಾಣತತ್ತ್ವ, ಮನಸ್ತತ್ತ್ವ, ಆತ್ಮತತ್ತ್ವದ ಚಿಂತನಗೈದ ಮಹಾತ್ಮ. ಈತ ಭಾರತ ಕಂಡ ಸ್ವರ್ಣಯುಗ ಗುಪ್ತರ ಕಾಲದಲ್ಲಿದ್ದ ಕಾರಣ ಸಂಶೋಧನೆಗಳು ನಡೆದರೆ ಈತನ ಕಾಲ ಇನ್ನೂ ಹಿಂದಕ್ಕೆ ಸರಿದೀತು. ವಾಗ್ಭಟ ಅಷ್ಟಾಂಗ ಸಂಗ್ರಹವನ್ನು ಸ್ವಸ್ಥವೃತ್ತಮ, ದ್ರವ್ಯವಿಜ್ಞಾನ, ದೋಷಧಾತುಮಲ ವಿಜ್ಞಾನ, ರೋಗ ವಿಜ್ಞಾನ, ಚಿಕಿತ್ಸಾ ವಿಧಿ, ಶರೀರ ವಿಜ್ಞಾನ, ಅರಿಷ್ಟ ವಿಜ್ಞಾನ, ರೋಗ ನಿದಾನ, ಕಾಯ ಚಿಕಿತ್ಸಾ, ಪಂಚಕರ್ಮ ಕಲ್ಪ, ಪರಿಭಾಷಾ, ಕೌಮಾರ ಭೃತ್ಯಾ, ಭೂತವಿದ್ಯಾ, ಮಾನಸರೋಗ, ಶಾಲಾಕ್ಯ, ಶಲ್ಯ ತಂತ್ರ, ಕ್ಷುದ್ರರೋಗ, ಗುಹ್ಯ ರೋಗ, ಅಗದ ತಂತ್ರ, ರಸಾಯನ, ವಾಜೀಕರಣಗಳೆಂಬ ಅಧ್ಯಾಯಗಳಿಂದ ಶೃಂಗರಿಸಿದ್ದಾನೆ. ವಿಷಾನ್ನವನ್ನು ಪರೀಕ್ಷಿಸುವ ಬಗೆ, ವಿಷಯುಕ್ತ ವಾತಾವರಣದ ಲಕ್ಷಣ ಹಾಗೂ ಚಿಕಿತ್ಸಾ ವರ್ಣನೆ, ಋತುವಿಗನುಸಾರವಾಗಿ ಮಾಡಬೇಕಾದ ಜೀವನಕ್ರಮಗಳ ಬಗೆಗೆ ಹೇಳಿದ್ದಾನೆ.

                   “ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಲೇವರೇ|
ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ|”

ವ್ಯಾಧಿಯಿಂದ ಜರ್ಜರಿತವಾಗಿ ಕಳೇಬರದಂತಾಗಿರುವ ವ್ಯಕ್ತಿಗೆ ಗಂಗೆಯ ನೀರೇ ಔಷಧ, ಇನ್ನೇನಿದ್ದರೂ ಆ ಭಗವಂತನೇ ನೋಡಿಕೊಳ್ಳಬೇಕು ಎಂದು ಕೈಚೆಲ್ಲುವ ಕ್ಷಣದಲ್ಲಿ ಹುಟ್ಟಿದ ಸುಭಾಷಿತ ಇದು. ಇದರ ‘ವೈದ್ಯೋ ನಾರಾಯಣೋ ಹರಿಃ’ ಎಂಬ ಭಾಗವನ್ನು ಮಾತ್ರ ಉದ್ಧರಿಸಿ ‘ವೈದ್ಯರು ದೇವರಿಗೆ ಸಮನಾದ ರಕ್ಷಕರು’ ಎನ್ನುವ ಮಾತು ತಪ್ಪಾಗಿ ಹುಟ್ಟಿ ಇಂದಿಗೂ ಓಡುತ್ತಲೇ ಇದೆ. ಆದರೂ ರೋಗಪೀಡಿತನಿಗೂ, ಆತನ ಯೋಗಕ್ಷೇಮ ಬಯಸುವವರಿಗೂ ವೈದ್ಯರೇ ದೇವರಾಗಿ ಆ ಕ್ಷಣದಲ್ಲಿ ಕಾಣಿಸುವುದು ಸುಳ್ಳಲ್ಲ. ಅದೇ ಕಾರಣಕ್ಕೆ ಔಷಧದಿಂದ ಗುಣವಾಗದ ಕಾಯಿಲೆ ನಂಬಿಕೆಯಿಂದ ಗುಣವಾಗುವುದಿರಬೇಕು. ಇರಲಿ, ಸುಶ್ರುತನ ವಿಚಾರಕ್ಕೆ ಬಂದರೆ ಆತನೇ ಪ್ರಥಮತಃ ಶಸ್ತ್ರಕ್ರಿಯೆ ಮಾಡಿದವನಲ್ಲ ಎನ್ನುವುದು ವೇದಗಳಿಂದಲೂ, ಪುರಾಣಗಳಿಂದಲೂ ತಿಳಿದು ಬರುತ್ತದೆ. ದಿವೋದಾಸಸ್ಯ ಸತ್ಪತಿಃ, ದಿವೋದಾಸೇಭಿರ್ ಇಂದ್ರಸ್ತವಾನಃ ಎಂದು ವೇದಗಳಲ್ಲಿ ಉಲ್ಲೇಖಿತನಾದ ಜಗತ್ತು ಕಂಡ ಅಪ್ರತಿಮ ಕೌಶಲ್ಯದ ವೈದ್ಯದೇವ ಧನ್ವಂತರಿ ಸುಶ್ರುತನಿಗೂ ಗುರುವಾಗಿದ್ದ. ಋಗ್ವೇದ ಉಲ್ಲೇಖಿಸಿದ ದಿವೋದಾಸನಿಗೆ ಕಾಶಿರಾಜ ಸುದೇವ ಅಥವಾ ಧನ್ವನ ಮಗನಾದುದರಿಂದ ಧನ್ವಂತರಿ ಎಂಬ ಹೆಸರು ಬಂತೆಂದು ಕೌಶಿಕ ಸೂತ್ರ ಹೇಳುತ್ತದೆ. ಧನ್ವ ಹಾಗೂ ಧನ್ವಂತರಿಯನ್ನು ಕಾಶಿರಾಜರ ವಂಶವೃಕ್ಷ ಹರಿವಂಶವೂ ಸೂಚಿಸಿದೆ. ಕಾಶೇಯನ ಪೌತ್ರನಾದ ಧನ್ವ ಕ್ಷೀರ ಸಾಗರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರಿ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಭರದ್ವಾಜರಿಂದ ಆಯುರ್ವೇದದ ಉಪದೇಶವನ್ನು ಪಡೆದ ಧನ್ವಂತರಿ ಅವುಗಳನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದ ತಂತ್ರ, ರಸಾಯನ ಶಾಸ್ತ್ರ ಹಾಗೂ ವಾಜೀಕರಣ ತಂತ್ರಗಳೆಂದು ಎಂಟು ವಿಭಾಗ ಮಾಡಿ ಶಿಷ್ಯರಿಗೆ ಉಪದೇಶಿಸಿದ. ಲೋಹ-ರಸ-ಉಪರಸ-ರತ್ನ-ಉಪರತ್ನಾದಿಗಳ ಪ್ರಯೋಗದಿಂದ ಮಾಡುವ ಚಿಕಿತ್ಸೆಗೆ ದೈವೀ ಚಿಕಿತ್ಸೆಯೆಂದೂ, ಜಪ-ಹೋಮ-ನಿಯಮ-ಪ್ರಾಯಶ್ಚಿತ್ತ-ಷಡ್ರಸಯುಕ್ತ ಔಷಧಿಗಳಿಂದ ಮಾಡುವ ಚಿಕಿತ್ಸೆಗೆ ಮಾನುಷೀ ಚಿಕಿತ್ಸೆಯೆಂದೂ ಹಾಗೂ ಶಸ್ತ್ರಕ್ಷಾರಾಗ್ನಿಗಳಿಂದ ಛೇದನ, ಭೇದನ, ವ್ಯಧನ, ಬಂಧನ ಹಾಗೂ ದಹನದ ಮೂಲಕ ಮಾಡುವ ಚಿಕಿತ್ಸೆಗೆ ಅಸುರೀ ಚಿಕಿತ್ಸೆಯೆಂದು ಮೂರು ವಿಭಾಗಗಳನ್ನು ಧನ್ವಂತರಿ ಸುಶ್ರುತನಿಗೆ ಬೋಧಿಸುತ್ತಾನೆ. ಸುಶ್ರುತ ಸಂಹಿತೆ ಕಾಶಿಯ ರಾಜ ದಿವೋದಾಸನೇ ಧನ್ವಂತರಿ ಎಂದಿದೆ. ಅಗ್ನಿ ಪುರಾಣ, ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವ ದಿವೋದಾಸ ಎಂದಿದೆ. ಅಗ್ನಿಪುರಾಣದಲ್ಲಿ ಮನುಷ್ಯ, ಕುದುರೆ, ಹಸುಗಳಿಗೆ ಸಂಬಂಧಿಸಿದ ಆಯುರ್ವೇದ ಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು-ಶಿಷ್ಯ ಸಂವಾದ ರೂಪದಲ್ಲಿ ವರ್ಣಿಸಲ್ಪಟ್ಟಿದೆ. ಸ್ಕಂದ, ಗರುಡ, ಮಾರ್ಕಂಡೇಯ ಪುರಾಣಗಳು ವೈಶ್ಯಕನ್ಯೆ ವೀರಭದ್ರಾ ಎಂಬಾಕೆಯಿಂದ ಗಾವಲ ಋಷಿಯ ವರಬಲದಿಂದ ಹುಟ್ಟಿ ಅಶ್ವಿನೀಕುಮಾರರಿಂದ ಆಯುರ್ವೇದ ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದು ವರ್ಣಿಸಿವೆ. ಬ್ರಹ್ಮವೈವರ್ತ ಪುರಾಣ ಈತ ಸರ್ವ ವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಭಾಗವತ, ಮಾರ್ಕಂಡೇಯ, ವಿಷ್ಣುಧರ್ಮೋತ್ತರ, ವಿಷ್ಣು ಪುರಾಣಾದಿಗಳು ಹಾಗೂ ಶಿಲ್ಪರತ್ನ ಸಮರಾಂಗಣಸೂತ್ರಧಾರ ಇವನ ವಿಗ್ರಹವನ್ನೂ ವರ್ಣಿಸಿವೆ. ಅದೇನೇ ಇದ್ದರೂ ಇವೆಲ್ಲವುಗಳಿಂದ ತಿಳಿದು ಬರುವ ಅಂಶವೆಂದರೆ ಸುಶ್ರುತನಿಗೂ ಮೊದಲೇ, ಧನ್ವಂತರಿಗೂ ಮೊದಲೇ ಭರದ್ವಾಜಾದಿ ಋಷಿಗಳಿಗೆ ಈ ವಿದ್ಯೆ ತಿಳಿದಿತ್ತು. ಹಾಗಾಗಿ ಆಯುರ್ವೇದ ಋಷಿದರ್ಶನವೇ ಆಗಿದ್ದಿರಬೇಕು. ಸುಶ್ರುತ, ಧನ್ವಂತರಿಗಳಿಗೂ ಬಹುಪೂರ್ವದಲ್ಲೇ ಭಾರತದಲ್ಲಿ ಪ್ರಚಲಿತದಲ್ಲಿದ್ದಿರಬೇಕು. ಅಶ್ವಿನಿದೇವತೆಗಳೇ ಅದಕ್ಕೆ ಅಧಿಪತಿಗಳೆಂದ ಮೇಲೆ, ವೇದಗಳಲ್ಲೂ ಅದರ ಉಲ್ಲೇಖಗಳನ್ನು ಕಾಣುವಾಗ ಅದೊಂದು ದರ್ಶನವೇ ಆಗಿರಬೇಕು!

                   ಋಗ್ವೇದದ ಒಂದನೇ ಮಂಡಲದ ನೂರಹದಿನೆಂಟನೇ ಸೂಕ್ತದ ಒಂದು ಋಕ್ಕುವಿನಲ್ಲಿ ಖೇಲ ಎಂಬ ರಾಜನ ಮಹಿಳಾ ಸೈನಿಕೆ ವಿಷ್ಫಲಾ ಯುದ್ಧದಲ್ಲಿ ತನ್ನ ಕಾಲನ್ನು ಕಳೆದುಕೊಂಡಾಗ ಅಗಸ್ತ್ಯರ ಪೌರೋಹಿತ್ಯದಲ್ಲಿ ನಡೆದ ಪ್ರಾರ್ಥನೆಯನ್ನು ಮನ್ನಿಸಿ ಅಶ್ವಿನೀ ದೇವತೆಗಳು ಕಬ್ಬಿಣದ ಕಾಲನ್ನು ಜೋಡಿಸುವ ಉಲ್ಲೇಖವಿದೆ. ಋಗ್ವೇದದ ಎಂಟನೇ ಮಂಡಲದ ಒಂದನೇ ಸೂಕ್ತ ಮೇದಾತಿಥಿಯು ಅಸಂಗನ ನಪುಂಸಕತ್ವವನ್ನು(ಪುರುಷ-ಸ್ತ್ರೀ-ಪುರುಷ) ನಿವಾರಿಸಿದ್ದನ್ನು ವರ್ಣಿಸುತ್ತದೆ. ಅಸಹಜ ವಾತಕ್ಕೆ ಚಿಕಿತ್ಸಾ ವಿಧಿ ಹೇಳಿದ(ವಾತಾಪಿ ಪೀವ ಇದ್ಭವ) ಅಗಸ್ತ್ಯರ ಕಥೆ, ಪುನಃ ದೃಷ್ಟಿ ಪಡೆದುಕೊಂಡ ಉಪಮನ್ಯುವಿನ ಕಥೆ, ಮರು ಯೌವನ ಪಡೆದ ಚ್ಯವನ ಮಹರ್ಷಿಗಳ ದೃಷ್ಟಾಂತಗಳೆಲ್ಲಾ ಪುರಾತನ ವೈದ್ಯ ವಿದ್ಯೆಯ ಮಹಾನತೆಯನ್ನು ಸಾರುತ್ತವೆ.  ಹೌದು, ಭಾರತೀಯ ವೈದ್ಯ ವಿದ್ಯೆಗೆ ವೇದವೇ ಮೂಲ. ಚತುರ್ವೇದಗಳಾದ್ಯಂತ ಈ ವೈದ್ಯವಿದ್ಯೆ ಹಾಸುಹೊಕ್ಕಾಗಿದೆ. ಇದನ್ನು ಅಭ್ಯಸಿಸಿದ ಒಬ್ಬೊಬ್ಬ ಋಷಿಗಳ ಸ್ವೀಕೃತ ಶಕ್ತಿಗೆ ಅನುಸಾರವಾಗಿ ಋಷಿಪ್ರೋಕ್ತ ವೈದ್ಯಾಗಮವು ಕಾಲಘಟ್ಟದಲ್ಲಿ ವಿಭಿನ್ನತೆಯನ್ನು ಪಡೆಯಿತು. ಮೂರೂವರೆಸಾವಿರ ವರ್ಷಗಳ ಹಿಂದಕ್ಕೆ ದೊರೆತಿರುವ, ಶಾರ್ಞ್ಘ್ಯಧರ ಕೃತ ಜ್ಯೋತಿರಾಯುರ್ವೇದ ಸಂಹಿತೆಯೇ ಈ ವೈದ್ಯ ಪದ್ದತಿಯ ಲಭ್ಯವಿರುವ ಅತೀ ಪುರಾತನ ಗ್ರಂಥ. ಮೂಲ ವೇದವನ್ನು ತಂತ್ರ ಹಾಗೂ ವೇದಗಳೆಂಬ ಪ್ರತ್ಯೇಕ ಭಾಗಗಳಾಗಿ ಪರಿಷ್ಕರಿಸಿದ ದತ್ತಾತ್ರೇಯಾದಿಯಾಗಿ ಮೂರು ಲಕ್ಷ ಕೋಟಿ ಆತ್ರೇಯರ ಆಯುರ್ವೇದ ಆತ್ರೇಯ ಸಂಹಿತೆಯೂ ಇನ್ನೊಂದು ಪ್ರಖ್ಯಾತ ಗ್ರಂಥ. ಆಹಾರ ಚಕ್ರ, ಜೀವ ವ್ಯವಹಾರ, ಆರೋಗ್ಯ ಸೂತ್ರಗಳೆಲ್ಲಾ ವೇದಗಳಲ್ಲಿ ಉಲ್ಲೇಖಿಸಿದ ಮಾಹಿತಿಗೆ ಹತ್ತಿರವಾಗಿದ್ದ ಈ ವೈದ್ಯ ಪದ್ದತಿ ಕ್ರಮೇಣ ಸುಶ್ರುತ, ಚರಕಾದಿಗಳ ಕಾಲಕ್ಕೇ ವಿರೂಪಗೊಂಡವು. ಸುಶ್ರುತ, ಚರಕರು ಇದನ್ನು ಸಾರ್ವಜನಿಕ ಬಳಕೆಗೆ ತಂದರು. ಕ್ರಮೇಣ ಈ ಎಲ್ಲಾ ಮೂಲಗ್ರಂಥಗಳು ಪ್ರಕ್ಷಿಪ್ತಗೊಂಡು ವಿಕೃತವಾದವು. ಈಗಂತೂ ಇದು ಅಲೋಪತಿ ಸಹಿತ ಅನೇಕ ಪದ್ದತಿಗಳಾಗಿ ಕವಲೊಡೆದು, ಹಣ ಮಾಡುವ, ಜನರನ್ನು ಭಯಭೀತಗೊಳಿಸಿ ಸುಲಿಗೆ ಮಾಡುವ ದಂಧೆಯಾಗಿ ಬೆಳೆದು ಶರೀರಶಾಸ್ತ್ರದ ಕಿಂಚಿತ್ತೂ ಜ್ಞಾನವಿಲ್ಲದವರ ಕೈಗೆ ಸಿಕ್ಕು ರೋಗ ನಿದಾನದ ಬದಲು ವ್ಯಕ್ತಿಯೇ ನಿಧನವಾಗುವ ಪರಿಸ್ಥಿತಿ ಎದುರಾಗಿದೆ. ಋಷಿಗಳು ತಪಸ್ಸಿನ ಮೂಲಕ ಪಡೆದ ಆಯುರ್ವೇದವೆಂಬ ಜ್ಞಾನಸಾಗರದ ಮುಂದೆ ಇಂದಿನ ಆಧುನಿಕ ವೈದ್ಯ ಪದ್ದತಿ ಸಣ್ಣ ತೊರೆಯಷ್ಟೆ. ಇಂದಿನ ಪದ್ದತಿಯನ್ನು ದೂಷಿಸುವ ಮಾತಿದಲ್ಲ. ಹಿಂದಿನ ನೈತಿಕತೆ, ಮೌಲ್ಯ ಇಂದಿನ ಪದ್ದತಿಯಲ್ಲೂ ಉಳಿದು ಇನ್ನಷ್ಟು ಸಂಶೋಧನೆಗಳಾಗಲೀ ಎನ್ನುವ ಆಶಯವಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ