ಚರಿತ್ರ ಹೀನನಷ್ಟೇ ಅಲ್ಲ; ಜಿಹಾದಿಗಳನ್ನೂ ನಾಚಿಸಿದ ಮತೋನ್ಮತ್ತ ಅಕ್ಬರ್!
ಹಲವು ದಿನಗಳೇ ಉರುಳಿದವು. ಕೋಟೆಯನ್ನು ಸುತ್ತುವರಿದ ಅಗಾಧ ಶತ್ರುಸೇನೆ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೋಟೆಯೊಳಗಿನ ಆಹಾರ ದಾಸ್ತಾನು ಬರಿದಾಗುತ್ತಿರಲು ಕೈ ಮೀರಿದ ಆ ಪರಿಸ್ಥಿತಿಯಲ್ಲಿ ಆತ್ಮಾರ್ಪಣೆಯೇ ಮಾರ್ಗವೆಂದು ನಿರ್ಧರಿಸಿತು ಚಿತ್ತೋಡಿನ ಸೇನೆ. ಬಿಲ್ಲಿನಿಂದ ಸೆಳೆದು ಬಿಟ್ಟ ಬಾಣಗಳಂತೆ ಹೊರಬಿತ್ತು 8000ಕ್ಕೂ ಅಧಿಕ ಯೋಧರ ಪಡೆ. ಆ ಸೈನ್ಯವನ್ನೆಲ್ಲಾ ತನ್ನ ಖಡ್ಗಕ್ಕೆ ಆಹುತಿ ನೀಡಿ ವಿಜಯೋತ್ಸಾಹದಿಂದ ಕೋಟೆಯೊಳಗೆ ಕಾಲಿಟ್ಟ ಶತ್ರುರಾಜ. ಬಾಯಲ್ಲಿ ನೀರೂರಿಸಿದ್ದ ಮೇವಾಡದ ಸೌಂದರ್ಯ ರಾಶಿಗಳನ್ನೆಲ್ಲಾ ತನ್ನ ಜನಾನಾಕ್ಕೆ ತಳ್ಳಿ ಮನಸೋ ಇಚ್ಛೆ ಮೇಯಬಹುದೆಂದು ಒಳಗೊಳಗೇ ಖುಷಿಪಟ್ಟ. ಆದರೆ ಕೋಟೆಯೊಳಹೊಕ್ಕವನಿಗೆ ಕಾಣಸಿಕ್ಕಿದ್ದೇನು? ಧಗಧಗಿಸುತ್ತಿರುವ ಚಿತ್ತೋಡಿನ ಚಿತ್ತಚೋರಿಯರ ಚಿತೆಗಳು! ಒಂದು ಕಡೆ ಭಸ್ಮಗೊಂಡ ಸೌಂದರ್ಯರಾಶಿಗಳನ್ನು ಎವೆಯಿಕ್ಕದೆ ನೋಡುತ್ತಾ ಉಂಟಾದ ದಿಗ್ಭ್ರಮೆ ಇನ್ನೊಂದೆಡೆ ಮಿಕ್ಕವರಂತೆ ತತ್ತಕ್ಷಣ ಮಣಿಯದೆ ತನ್ನನ್ನು ಕಾಡಿದ ಮೇವಾಡದ ಮೇಲಿನ ಕ್ರೋಧ! ಎರಡೂ ಸೇರಿ ಹೊರಬಿದ್ದದ್ದು ಸರ್ವರನ್ನು, ಸಕಲವನ್ನೂ ನಾಶ ಮಾಡಿರೆಂಬ ಆಜ್ಞೆ!
ಒಡೆಯನ ಅನುಮತಿ ಸಿಕ್ಕಿದ್ದೇ ತಡ, ಇನ್ನೇನು ತಡೆ, ಮತಿಗೆಟ್ಟ ಪಡೆ ವಿಜೃಂಭಿಸಿತು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ತಮ್ಮ ಅರಸನಿಗೆ ಲೆಕ್ಕ ಒಪ್ಪಿಸುವ ಸಲುವಾಗಿ ಶವಗಳಿಂದ ಜನಿವಾರಗಳನ್ನು ಕಲೆ ಹಾಕಿದರು. ಅವುಗಳನ್ನು ತೂಕ ಮಾಡಿದಾಗ 74ಮಣ (8 ಪೌಂಡುಗಳು)ಗಳಿದ್ದವು! ಕೇವಲ ಒಂಬತ್ತೂವರೆ ಗಂಟೆಗಳವಧಿಯಲ್ಲಿ ಕೊಲೆಯಾದವರ ಸಂಖ್ಯೆ 30ಸಾವಿರ ಎಂದು ಆನಂದದಿಂದ ವರ್ಣಿಸಿದ್ದಾನೆ ಅಬುಲ್ ಫಜಲ್! ಆ ಹೆಣಗಳ ತಲೆಯಿಂದ ಒಂದು ಗೋಪುರ ಕಟ್ಟಲಾಯಿತು. ಎಲ್ಲಿ ನೋಡಿದರಲ್ಲಿ ಶವಗಳ ರಾಶಿ, ನಾಲ್ದೆಸೆಗಳಿಗೆ ಚಾಚಿದ ಬೆಂಕಿಯ ಕೆನ್ನಾಲಿಗೆ, ಕಮಟು ವಾಸನೆ, ಆಕ್ರಂದನ, ಭೀಭತ್ಸ ದೃಶ್ಯಗಳು. ಇದಕ್ಕೆ ಕಾರಣಕರ್ತನಾದ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ ಇನ್ನೂ ಇದೆಯೇ. ಇದ್ದರೆ ಕೇಳಿ...ಮಹಾ ಮಾನವತಾವಾದಿ ಎಂದು ನಮ್ಮ ಸೆಕ್ಯುಲರ್ ಇತಿಹಾಸಕಾರರು ಹಾಡಿ ಹೊಗಳಿರುವ; ಸಾಹಸಿ, ಸುಕೋಮಲಿ, ಆದರ್ಶವಾದಿ, ಕನಸುಗಾರ ಎಂದು ನೆಹರೂ ಹಾಡಿಹೊಗಳಿರುವ, ರಾಜಸ್ಥಾನ ಭಾಜಪಾ ರಾಜ್ಯಾಧ್ಯಕ್ಷ, ಸಂಸದ ಮದನ್ ಲಾಲ್ ಸೈನಿ ಇತ್ತೀಚೆಗೆ ಯಾರನ್ನು ಚರಿತ್ರಹೀನ ಎಂದು ಅಕ್ಷರಶಃ ಸತ್ಯ ಹೇಳಿದಾಗ ಯಾವನ ಭಕ್ತರು ಮೆಣಸಿನಕಾಯಿ ತಿಂದಂತಾಡಿದರೋ ಅದೇ ಅಕ್ಬರ್!
ಈ ಭೀಭತ್ಸ ಹತ್ಯಾಕಾಂಡವನ್ನು ನೋಡಲಾರದೆ ರಾಜ್ಯದ ಮೂಲೆ ಮೂಲೆಗಳಿಂದ ಕೇಳಿಬರುತ್ತಿರುವ ಆಕ್ರಂದನಗಳಿಂದ ಕಂಬನಿದುಂಬಿ ರಜಪೂತ ಪ್ರಮುಖರಾದ ಮಾನ್ ಸಿಂಗ್, ತೋಡರಮಲ್ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಾಗ ಇದೇ ಮಾನವತಾವಾದಿ ಹೇಳಿದ್ದೇನು ಗೊತ್ತೇ?
"ನಾನೀಗ ತೈಮೂರನೊಂದಿಗೆ ಅನುಸಂಧಾನದಲ್ಲಿದ್ದೇನೆ. ನನಗೀಗ ಬೇಕಾದುದು ರಕ್ತವೇ ಹೊರತು ಅಮೃತವಲ್ಲ. ಷಾಹಾನಾಮಾದ ಪಠಣವನ್ನು ನಾನೀಗ ಕೇಳಬೇಕು."
ಕ್ಷಣಿಕ ಕೋಪದಿಂದ ಅರಸ ಹೀಗಾಡಿದ ಎಂದುಕೊಳ್ಳೋಣವೇ? ಆದರೆ ಅಂತಹ ಕಿಂಚಿತ್ ಪಶ್ಚಾತ್ತಾಪವೂ ಅವನಿಗಿರಲಿಲ್ಲ. ತಾನು ಮಾಡಿದ್ದು ಸರಿ; ಅದನ್ನು ದೇವರೇ ಮೆಚ್ಚಿಕೊಂಡ ಎಂದು ಯಾವ ನಾಚಿಕೆ-ಹಿಂಜರಿಕೆಗಳಿಲ್ಲದೆ ಆತ ಹೇಳಿಕೊಂಡ. ಅಬುಲ್ ಫಜಲ್ ಯಥಾವತ್ತಾಗಿ ನಮೂದಿಸಿರುವ ಅಕ್ಬರನ ಮಾತುಗಳನ್ನು ಓದಿದವರ್ಯಾರೂ ಆತನನ್ನು ಮಾನವತಾವಾದಿ ಬಿಡಿ ಮಾನವನೆಂದೇ ಕರೆಯಲಾರರು. ಅಷ್ಟಕ್ಕೂ ನನ್ನ ರೀತಿ ನೀತಿಯನ್ನು ಅಲ್ಲಾ ಅನುಮೋದಿಸದೇ ಇರುತ್ತಿದ್ದರೆ ಮೈಮೇಲೆ ಸಣ್ಣ ಗಾಯವೂ ಇಲ್ಲದಂತೆ ನಾನು ಹಿಂದಿರುಗುತ್ತಿರಲಿಲ್ಲ ಎಂದ ಆ ದಯಾಪರನ ಉನ್ಮಾದವೇನೂ ಕ್ಷಣಿಕವಾದುದಾಗಿರಲಿಲ್ಲ. ಅದು ಜನ್ಮಜಾತ ಸ್ವಭಾವಜನ್ಯ ಸಹಜೋನ್ಮಾದ, ರಕ್ತಗುಣ! ನಮ್ಮ "ಮಹಾನ್ ಇತಿಹಾಸಕಾರರು" ಬರೆದುದನ್ನು ಓದಿ ಸತ್ಯ ಎಂದುಕೊಂಡವರಿಗೆ ಅಕ್ಬರನೇ ಆದರ್ಶಪುರುಷನಾಗಿರುವುದಕ್ಕೂ, ಅಕ್ಬರನಿಗೆ ಆತನ ವಂಶಜ ತೈಮೂರನೇ ಆದರ್ಶಪುರುಷನಾಗಿರುವುದಕ್ಕೆ ಹೆಚ್ಚೇನು ವ್ಯತ್ಯಾಸವಿಲ್ಲ. ಅದು ಆಶ್ಚರ್ಯಪಡುವಂತಹದ್ದೂ ಅಲ್ಲ!
ಚಿತ್ತೋಡಿನ ಮೇಲಾದ ದೌರ್ಜನ್ಯ ಕೇವಲ ಜನರಿಗಷ್ಟೇ ಸೀಮಿತವಾಗುಳಿಯಲಿಲ್ಲ. ಖಿಲ್ಜಿ, ಬಾಬರರು "ಕರುಣೆದೋರಿ" ಉಳಿಸಿದ್ದ ಪುಣ್ಯಕ್ಷೇತ್ರಗಳೆಲ್ಲಾ ಈ ಪಾಪಿಯ ಕತ್ತಿಗೆ ಬಲಿಯಾದವು. ರಜಪೂತರ ಆರಾಧ್ಯ ದೈವ ಏಕಲಿಂಗೇಶ್ವರನ ವಿಗ್ರಹ ಮಸೀದಿಗಳಲ್ಲಿ ಕುರಾನನ್ನಿಡುವ ಪೀಠಕ್ಕಾಗಿ ತುಂಡರಿಸಲ್ಪಟ್ಟಿತು. ಇಂತಹವನನ್ನು ಪರಮತ ಸಹಿಷ್ಣು ಎಂದವರಿಗೆ ಅಕ್ಬರನೇ 1568 ಮಾರ್ಚ್ 9ರಂದು ಹೊರಡಿಸಿದ ವಿಜಯೋನ್ಮಾದದ "ಫತ್ವಾ"ವನ್ನು ನೆನಪಿಸಬೇಕು! "ನಮ್ಮ ಅಮೂಲ್ಯ ಸಮಯವನ್ನು ಜಿಹಾದಿಗೆ ಸರ್ವರೀತಿಯಿಂದಲೂ ಬಳಸೋಣ. ಕೋಟೆ-ಕೊತ್ತಲಗಳನ್ನು ವಶಪಡಿಸಿಕೊಂಡು, ಖಡ್ಗದ ಬಲದಿಂದ ಬಹುದೇವತಾರಾಧನೆಯನ್ನು ಹೋಗಲಾಡಿಸಿ ಕಾಫಿರರ ಪುಣ್ಯ ಸ್ಥಳಗಳನ್ನು ನಾಶಮಾಡಿ ಇಸ್ಲಾಂ ಪತಾಕೆಯನ್ನು ಹಾರಿಸೋಣ." ಇಂಥವನನ್ನು ಆದರ್ಶವಾಗಿಟ್ಟುಕೊಂಡವರು ಹೇಗಿರಬಹುದು? ವಿನ್ಸೆಂಟ್ ಸ್ಮಿತ್, ಜೇಮ್ಸ್ ಟಾಡ್ ಮುಂತಾದ ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವುದನ್ನು ಬಿಡಿ, ಅಬುಲ್ ಫಜಲ್ ಎಂಬ ಅಕ್ಬರ್ ಭಕ್ತ ಬರೆದುದನ್ನೂ ಪಕ್ಕಕ್ಕಿಡಿ, ಸ್ವತಃ ಅಕ್ಬರನೇ ಹೊರಡಿಸಿದ ಫತ್ವಾಗಳನ್ನೆಲ್ಲಾ ನೋಡಿದರೆ ಸಾಕು ಆತನ ದಯಾಪರ, ಪರಮತ ಸಹಿಷ್ಣುತೆಯ ನಿಜಬಣ್ಣ ಬಯಲಿಗೆ ಬರುತ್ತದೆ.
ಉಪಕಾರ ಮಾಡಿದವರಿಗೆ ಕೇಡನ್ನುಂಟುಮಾಡುವುದು ಅಕ್ಬರನಿಗೆ ವಂಶಪಾರಂಗತವಾಗಿ ಬಂದ ವಿದ್ಯೆ. ಅಕ್ಬರನ ತಂದೆ ಹುಮಾಯೂನ್ ತನ್ನ ಸ್ವಂತ ತಮ್ಮನ ಕಣ್ಣುಗಳನ್ನೇ ಶೂಲದಿಂದ ಕೀಳಿಸಿ ಉಪ್ಪು, ನಿಂಬೆರಸಗಳನ್ನು ತುಂಬಿಸಿದ್ದ. ದ್ರೋಹವೆಸಗುವುದು ಮೊಘಲರ ಹುಟ್ಟುಗುಣ! ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಹುಮಾಯೂನನಿಗೆ ಆತ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ರಜಪೂತರು ಆಶ್ರಯ ನೀಡಿದ್ದರು! ಅಕ್ಬರ ಹುಟ್ಟಿದ್ದು ಆಗಲೇ. ಆದರೆ ಅದೇ ಹುಮಾಯೂನ ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಯುದ್ದಕ್ಕಿಳಿದ! ರಕ್ತದೊಂದಿಗೆ ಸ್ವಭಾವವೂ ಹರಿದು ಬಂತು. ಹಿಂದೂಗಳ ಸೂರಿನಡಿಯಲ್ಲಿ ಹಿಂದೂಗಳ ರಕ್ಷಣೆಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ!ಚಿಕ್ಕವಯಸ್ಸಿನಲ್ಲಿ ತಂದೆ ಸತ್ತಾಗ ದಿಕ್ಕುಕಾಣದ ಅಕ್ಬರನನ್ನು ತನ್ನ ಭುಜಗಳ ಮೇಲೆ ಕೂರಿಸಿಕೊಂಡು ವ್ಯೂಹ ರಚಿಸಿ ಗೆದ್ದು ಅಕ್ಬರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದವ ಭೈರಾಂಖಾನ್. ಆದರೆ ಅಧಿಕಾರ ಸೂತ್ರಗಳ ಮೇಲೆ ಸ್ವಲ್ಪ ಹಿಡಿತ ಸಿಗುತ್ತಿದ್ದಂತೆ ಭೈರಾಂಖಾನನಿಗೇ ಗುಂಡಿ ತೋಡಿದ ಅಕ್ಬರ್! ಸಿಕಂದರ್ ಅಪ್ಘನ್ನನನ್ನು ಸೋಲಿಸಿ ಲಾಹೋರಿನಿಂದ ದಿಲ್ಲಿಗೆ ಹಿಂದಿರುಗಿ ಬರುತ್ತಿದ್ದಾಗ ಮಾನ್ ಕೋಟ್ ಎಂಬಲ್ಲಿ ಸೇನೆ ಬೀಡು ಬಿಟ್ಟಿದ್ದಾಗ ಭೈರಾಂಖಾನ್ ಮೈಮೇಲೆಲ್ಲಾ ಗುಳ್ಳೆಗಳಾಗಿ ಡೇರೆಯಲ್ಲಿ ಮಲಗಿದ್ದ. ಆ ಡೇರೆಯ ಮೇಲೆ ಅರಸನಿಗೆ ಸೇರಿದ ಆನೆಗಳೆರಡು ದಾಳಿ ಮಾಡಹೊರಟವು. ಭೈರಾಂಖಾನ್ ಆ ಸಮಯದಲ್ಲಿ ಬದುಕುಳಿದನಾದರೂ ಆತನ ಪರಿಸ್ಥಿತಿ ನೆಟ್ಟಗಿರಲಿಲ್ಲ. ಆತ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆಂದು ಕೇಳಲು ಅರಸನಲ್ಲಿಗೆ ಕಳುಹಿಸಿದ ದೂತನಿಗೆ ಯಾವ ಪ್ರತ್ಯುತ್ತರವೂ ಸಿಗಲಿಲ್ಲ. ಈ ಘಟನೆಯಿಂದ ಬೇಸರಗೊಂಡು ಭೈರಾಂಖಾನ್ ಮೆಕ್ಕಾಗೆ ಹೊರಟಾಗ ಗುಜರಾತಿನ ಸಹರ್ವಾಲದಲ್ಲಿ ಅಕ್ಬರನ ಕಟುಕರು ಭೈರಾಂಖಾನನ ರುಂಡ ಚೆಂಡಾಡಿದರು. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅದು ಹೋಗಿ ನಿಲ್ಲುವುದು ಸಲೀಮಾ ಸುಲ್ತಾನ ಬೇಗಂಳ ಬಳಿ! ಆಕೆ ಮತ್ಯಾರಲ್ಲ, ಭೈರಾಂಖಾನನ ಹೆಂಡತಿ, ಅಕ್ಬರನಿಗೆ ಗುರುಪತ್ನಿಯ ಸಮಾನಳು! ಆದರೇನು ಭೈರಾಂಖಾನನ ಗೋರಿಯ ಮೇಲೆ ಹುಲ್ಲು ಬೆಳೆಯುವ ಮೊದಲೇ ಅಕ್ಬರ ಅವಳನ್ನು ಮದುವೆ ಮಾಡಿಕೊಂಡ!
ಅಕ್ಬರ್ ಒಬ್ಬ ಸ್ತ್ರೀಲೋಲುಪ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. "ನಿನ್ನ ಹೆಂಡತಿ ನನಗಿಷ್ಟವಾಗಿದ್ದಾಳೆ, ಅವಳನ್ನು ನನ್ನ ಅಂತಃಪುರಕ್ಕೆ ಕಳುಹಿಸು ಎಂದು ಆದೇಶ ನೀಡುತ್ತಿದ್ದ ಧರ್ಮಪ್ರಭು ಅವನು. ನಿರಾಕರಿಸಿದಾತನ ರುಂಡ ಮುಂಡ ಬೇರೆಬೇರೆಯಾಗುತ್ತಿದ್ದುದು ದಿಟ! ಬಹಳಷ್ಟು ಜನ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ದುರ್ವಿಧಿಗೆ ತಲೆಬಾಗುತ್ತಿದ್ದರು. ಅಕ್ಬರನ ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ದಿಲ್ಲಿಯ ಜನಸಾಮಾನ್ಯರ ಮನೆಯ ಮಂಚದವರೆಗೂ! ಕೆಲಕಾಲ ಸುಮ್ಮನಿದ್ದ ಜನತೆ ತಿರುಗಿಬಿದ್ದಿತು. 1564ರಲ್ಲಿ ದಿಲ್ಲಿಯ ಷೇಕ್ ಒಬ್ಬನನ್ನು ನಿನ್ನ ಹೆಂಡತಿಗೆ ವಿಚ್ಛೇದನ ಕೊಡು; ನನಗವಳು ಬೇಕು ಎಂದು ಅಕ್ಬರ್ ಒತ್ತಾಯಿಸಿದ. ಕೆಲವೇ ದಿನಗಳಲ್ಲಿ ಅಕ್ಬರ್ ರಾಜಬೀದಿಯಲ್ಲಿ ಸುತ್ತುತ್ತಿದ್ದಾಗ ಉಲಾದ್ ಎಂಬ ಗುಲಾಮನೊಬ್ಬ ಮನೆಯ ಮಾಳಿಗೆಯೊಂದರಿಂದ ಅಕ್ಬರನ ಮೇಲೆ ಬಾಣ ಬಿಟ್ಟ. ಅದು ಅಕ್ಬರನ ಭುಜಕ್ಕೆ ತಗುಲಿ ಗಾಯವಾಯಿತು. ರಾಜಭಟರು ಆತನನ್ನು ಅಲ್ಲಿಯೇ ತುಂಡರಿಸಿ ಎಸೆದರು. ಈ ಹತ್ಯಾಪ್ರಯತ್ನದ ನಂತರ ಅಕ್ಬರನ ಮರ್ಯಾದೆಗೆಟ್ಟ ಹುನ್ನಾರಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ಅದಕ್ಕಾಗಿಯೇ ತನ್ನ ರಾಜ್ಯದಲ್ಲಿ ಮೀನಾ ಬಜಾರ್" ವ್ಯವಸ್ಥೆಯನ್ನು ಪೋಷಿಸಿದ. ಹೊಸವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಅಲ್ಲಿ ನಡೆಯುತ್ತಿದ್ದ ನೌರೋಜ್ ಉತ್ಸವದಲ್ಲಿ ಹಿಂದೂ ಸಾಮಂತ ರಾಜರೆಲ್ಲಾ ಒಂದೊಂದು ಅಂಗಡಿ ತೆರೆದು ತಮ್ಮ ರಾಜ್ಯದಲ್ಲಿನ ರೂಪವತಿಯರನ್ನೆಲ್ಲಾ ಪ್ರದರ್ಶನಕ್ಕಿಡಬೇಕಾಗಿತ್ತು. ಮಹಾರಾಜ ಪ್ರತಿಯೊಂದು ಅಂಗಡಿ ವೀಕ್ಷಿಸಿ ತನಗೆ ಬೇಕಾದವರನ್ನು ಜನಾನಕ್ಕೆ ಅಟ್ಟುತ್ತಿದ್ದ!
ತನಗೆ ಇಷ್ಟವೆನಿಸಿದ ರಾಜಪ್ರಮುಖರ ಪತ್ನಿಯರನ್ನು, ಇತರ ಸ್ತ್ರೀಯರನ್ನು ಅಜೀರ್ಣವೆನಿಸುವ ತನಕ ಮನಸೋ ಇಚ್ಛೆ ಅನುಭವಿಸುತ್ತಿದ್ದ ಎಂದು ಸ್ವತಃ ಅಕ್ಬರನ ಸ್ವಾಮಿನಿಷ್ಠ ಸೇವಕ ಅಬುಲ್ ಫಜಲ್ ಬರೆದಿದ್ದಾನೆ. ಮೀನಾ ಬಜಾರಿನಿಂದ ವರ್ಷ ವರ್ಷ ಹಿಂದೂ ಸ್ತ್ರೀಯರನ್ನು ಸಾಗಿಸಿಕೊಂಡು ಬರುತ್ತಿದ್ದ ಕಾರಣ, ತಾನು ಸೋಲಿಸಿದ ರಜಪೂತರಿಂದ ಕನಿಷ್ಟ ಸಂಖ್ಯೆಯ ಹೆಣ್ಣುಗಳನ್ನು ತನ್ನ ಅಂತಃಪುರಕ್ಕೆ ಕಳುಹಿಸಿಕೊಡಬೇಕೆಂಬ ಕರಾರು ಮಾಡಿಕೊಳ್ಳುತ್ತಿದ್ದರ ಫಲವಾಗಿ, ಹಾಗೂ ಕಂಡ ಕಂಡವರ ಹೆಂಡಿರ ಮೇಲೆ ಕಣ್ಣು ಹಾಕುತ್ತಿದ್ದರಿಂದ ಈ ಸ್ತ್ರೀಲಂಪಟನ ರಾಣಿವಾಸವೆಂಬುದು ಎಮ್ಮೆದೊಡ್ಡಿಯಂತಾಗಿತ್ತು. ಅಲ್ಲದೆ ಚಕ್ರವರ್ತಿಗೆ ದಯೆ ಬಂದರೆ ಯಾವುದೇ ವಿಭಾಗಗಳ ಯಾವುದೇ ಪ್ರಮುಖ ಯಾವ ಅಂತಃಪುರ ಸ್ತ್ರೀಯರನ್ನಾದರೂ ಇಷ್ಟಾನುಸಾರ ಭೋಗಿಸಬಹುದಾಗಿತ್ತು ಎಂದಿದ್ದಾನೆ ಫಜಲ್! ಇದನ್ನು ವಿನ್ಸೆಂಟ್ ಸ್ಮಿತ್ ಕೂಡಾ ಸ್ಪಷ್ಟಪಡಿಸುತ್ತಾ ಅಕ್ಬರನ ದಾಖಲೆಗಳನ್ನು ನೋಡಿದರೆ ಅವನು ಒಬ್ಬಳು ಪತ್ನಿಗೆ ಸೀಮಿತಗೊಂಡ ಅಸಾಮಿಯಲ್ಲ ಎಂದಿದ್ದಾನೆ. ಇನ್ನು ರಜಪೂತರ ಒಲವನ್ನು ಗಳಿಸುವ ಹುನ್ನಾರದಿಂದ ಅವರ ಕನ್ಯೆಯರನ್ನು ತನ್ನ ರಾಜಪ್ರಮುಖರಿಗೋ, ಸರದಾರರಿಗೋ ಮದುವೆ ಮಾಡಿಸುತ್ತಿದ್ದನಷ್ಟೇ. ಆ ಹುಡುಗಿಯರ ಸ್ಥಿತಿ ಏನಾಗುತ್ತಿತ್ತು ಎನ್ನುವುದು ಆ ಕಾಲದಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅವಳು ಅರಸನ ಕಾಮದೃಷ್ಟಿಗೆ ಬಿದ್ದರೆ ಮುಗಿಯಿತು; ಇಲ್ಲವಾದಲ್ಲಿ ಕಟ್ಟಿಕೊಂಡವನು ಯಾರ ಕೈಗೆ ಒಪ್ಪಿಸಿದರೆ ಅವನೊಂದಿಗೆ ಎಷ್ಟುಕಾಲ ಒಪ್ಪಿಸೆಂದರೆ ಅಷ್ಟು ಕಾಲ ವ್ಯಭಿಚಾರ ಮಾಡುವುದೇ ಆ ಸ್ತ್ರೀಯರು ಅನುಭವಿಸಿದ ರಾಣೀವಾಸ! ಹಾಗಂತ ಎಲ್ಲಾ ರಜಪೂತ ಅರಸರು ಅಧಿಕಾರ, ಲಾಭದಾಸೆಗೆ ಬಲಿಬಿದ್ದು ತಮ್ಮವರ ಮಾನ ಕಳೆದುಕೊಳ್ಳಲು ಬಿಡಲಿಲ್ಲ; ಮೇವಾಡದ ಸ್ತ್ರೀಯರು ಮಾನವೇ ಪ್ರಾಣಕ್ಕಿಂತಲೂ ಶ್ರೇಷ್ಠವೆಂದು ಸಾಮೂಹಿಕವಾಗಿ ಚಿತೆಗೆ ಹಾರಿ "ಜೋಹರ್" ಮಾಡಿಕೊಂಡರು. ಸತೀಸಹಗಮನ ಪದ್ದತಿ ಆರಂಭವಾದದ್ದೇ ಕಾಮುಕ ಮೊಘಲರ ಅಟ್ಟಹಾಸದಿಂದ ಮಾನ ಉಳಿಸಿಕೊಳ್ಳಲು.
ಹಿಂದೂ ಸ್ತ್ರೀಯರನ್ನು ವಿವಾಹವಾಗುವುದು ಅಕ್ಬರನ ಸೆಕ್ಯುಲರ್ ನೀತಿಯೆಂದು, ಹಿಂದೂ ಮುಸ್ಲಿಮ್ ಐಕ್ಯತೆಗೆ ದಾರಿದೀಪವೆಂದು ಬೊಂಬಡಾ ಬಜಾಯಿಸುವ "ಮಹಾನ್ ಇತಿಹಾಸಕಾರರು" 1568ರಲ್ಲಿ ವಂಚನೆಯಿಂದ ರಣಥಂಬೋರ್ ಕೋಟೆಯನ್ನು ಅಕ್ಬರ್ ವಶಪಡಿಸಿಕೊಂಡಾಗ ಉಂಟಾದ ಒಡಂಬಡಿಕೆಯನ್ನು ಗಮನಿಸುವುದೊಳಿತು. ಅಕ್ಬರನಿಗೂ ಸರ್ಜನರಾಯನಿಗೂ ನಡೆದ ಸಂಧಿಯ ಒಪ್ಪಂದದಲ್ಲಿ ಅರಸನ ಅಂತಃಪುರಕ್ಕೆ ವಧುಗಳನ್ನು ಕಳುಹಿಸುವ ಪದ್ದತಿಯಿಂದ ಬುಂದಿ ರಾಜ್ಯಪಾಲಕರಿಗೆ ವಿನಾಯಿತಿ ಇರುತ್ತದೆಂದೂ, ಮೀನಾಬಜಾರಿನ ಅಂಗಡಿಗಳಲ್ಲಿ ತಮ್ಮ ವಧುಗಳನ್ನು ಕಳುಹಿಸುವ ಕಾರ್ಯದಿಂದ ವಿನಾಯಿತಿ ಇರುತ್ತದೆಂಬುದೇ ಮುಖ್ಯ ಷರತ್ತುಗಳಾಗಿದ್ದವು. ಅಲ್ಲದೆ ಹಿಂದೂ ಮುಸ್ಲಿಮ್ ಐಕ್ಯತೆಗೆ ಶ್ರಮಿಸಿದ್ದನೆನ್ನುವ ಅಕ್ಬರ್ ಎಷ್ಟು ಮೊಘಲ ಸ್ತ್ರೀಯರನ್ನು ಹಿಂದೂಗಳಿಗೆ ಮದುವೆ ಮಾಡಿಸಿದ್ದ?
ಸಮರಾಂಗಣಕೆ ಆಕೆ ಧುಮುಕಿದರೆ ಸಾಕ್ಷಾತ್ ದುರ್ಗೆಯೇ ಮೈದಳೆದಂತೆ. ಎಪ್ಪತ್ತು ಸಾವಿರ ಪದಾತಿಗಳು, ಇಪ್ಪತ್ತು ಸಾವಿರ ತುರಗಗಳು, ಎರಡೂವರೆ ಸಾವಿರಕ್ಕೂ ಮಿಕ್ಕಿದ ಗಜಪಡೆಯ ಬೃಹತ್ ಸೈನ್ಯದೊಡನೆ ಅವಳ ದಂಡು ಅಂಕಕ್ಕಿಳಿದಾಗ ಅರಿಗಳೆದೆ ಝಲ್ಲೆನ್ನುತ್ತಿತ್ತು. ತನಗೆ ಪ್ರೀತಿಪಾತ್ರವಾದ ಕರಿಯನ್ನೇರಿ ಅವಳು ಬಾಣ, ಖಡ್ಗ, ಬಂದೂಕುಗಳನ್ನು ಸಮಾನ ಪ್ರಾವೀಣ್ಯತೆಯಿಂದ ಪ್ರಯೋಗಿಸುತ್ತಾ ಯುದ್ಧರಂಗದ ನಾಯಕಿಯಾಗಿ ಕಂಗೊಳಿಸುವುದನ್ನು ಕಾಣುವುದೇ ಕಂಗಳಿಗೊಂದು ಸೊಬಗು. ಪತಿ ಗಣಪತಿರಾಯ್ ಸತ್ತಾಗ ಎಳೆವಯಸ್ಸಿನ ಮಗನ ಪರವಾಗಿ 1548ರಲ್ಲಿ ಗೊಂಡ್ವಾನದ ಸಿಂಹಾಸನವನ್ನೇರಿದ ಆಕೆ ಗೋಂಡಾಗಳ ಬಾಳನ್ನು ಹಸನುಮಾಡಿ ಅವರ ಆರಾಧ್ಯದೈವವಾಗಿ ರಾಣಿಯೊಬ್ಬಳು ಹೇಗಿರಬೇಕೆಂದು ತೋರಿಸಿಕೊಟ್ಟಳು. ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಐವತ್ತೊಂದು ಯುದ್ಧಗಳಲ್ಲೂ ದಿಗ್ವಿಜಯವನ್ನು ಸಾಧಿಸಿ ಜಗದ್ವಿಖ್ಯಾತಿಯನ್ನು ಪಡೆದ ಆಕೆಯೇ ಜಗದ್ವಂದ್ಯೆ ರಾಣಿ ದುರ್ಗಾವತಿ! ಬುಂದೇಲ್ ಖಂಡದ ಸಾಮ್ರಾಜ್ಞಿಯಾಗಿ ತನ್ನ ರಾಜ್ಯದಲ್ಲಿನ 23ಸಾವಿರ ಗ್ರಾಮದ ಪ್ರತಿಯೊಬ್ಬ ಹಿರಿಯನ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗಿನ ಸಂವಹನ ಆಕೆಗೆ ಪ್ರಜೆಗಳೊಂದಿಗಿತ್ತು. ಆಕೆಯ ಸಮರ್ಥ ಆಡಳಿತದಿಂದ ಗೊಂಡಾಣ ಸುಭಿಕ್ಷಗೊಂಡಿತು. ಪ್ರತಿಸ್ವರ್ಗದಂತಿದ್ದ ಆ ನಾಡನ್ನು ನರಕಸದೃಶವನ್ನಾಗಿಸಿದ್ದು ಅದೇ ದಯಾಪರ ಅಕ್ಬರ್! ಅವನ ಕಣ್ಣು ದುರ್ಗಾವತಿಯ ಮೇಲೆ ಬಿತ್ತು!
ಭಾರೀ ದಂಡಿನೊಂದಿಗೆ ಮೊಘಲರು ಮುತ್ತಿಗೆ ಹಾಕಿದಾಗ ಆತ್ಮರಕ್ಷಣೆಗಾಗಿ ಗೋಂಡಾಗಳೆಲ್ಲರೂ ಒಂದಾಗಿ ರಣಕಣಕ್ಕೆ ಧುಮುಕಿದರು. ದುರ್ಗಾವತಿಯ ರಭಸಕ್ಕೆ ಮೊಗಲ್ ಸೇನೆ ಕಕ್ಕಾಬಿಕ್ಕಿಯಾಯಿತು. ಘನಘೋರ ಕದನದ ನಡುವೆ ಮಗ ವೀರನಾರಾಯಣ್ ಗಾಯಗೊಂಡಾಗ ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಸೂಚಿಸಿದಳು. ಅವನೊಡನೆ ಕೆಲ ಸೈನಿಕರು ತೆರಳಬೇಕಾದ ಕಾರಣ ಸೇನೆಯಲ್ಲಿ ತುಸು ಗೊಂದಲದ ವಾತಾವರಣ ಉಂಟಾಯಿತು. ಅದೇ ವೇಳೆ ಬಾಣವೊಂದು ದುರ್ಗಾವತಿಯ ಬಲಗಣ್ಣಿನ ಮೇಲ್ಭಾಗಕ್ಕೆ ಬಡಿಯಿತು. ಅವಳು ಅದನ್ನು ಕಿತ್ತು ತೆಗೆವ ಪ್ರಯತ್ನ ನಡೆಸಿರುವಾಗಲೇ ಇನ್ನೊಂದು ಬಾಣ ಬಂದು ಕುತ್ತಿಗೆಗೆ ಬಡಿಯಿತು. ತನ್ನ ಕಥೆ ಮುಗಿಯಿತೆಂದು ಮೊಗಲರ ಕೈಗೆ ಸಿಕ್ಕು ಬಂಧಿಯಾಗುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ತನ್ನನ್ನೇ ತಾನು ಇರಿದುಕೊಂಡು ಪ್ರಾಣ ತ್ಯಜಿಸಿದಳು. ಸಾವರಿಸಿಕೊಂಡ ವೀರನಾರಾಯಣ ವೀರಾವೇಶದಿಂದ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಯುವರಾಜ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಕೂಡಲೇ ರಕ್ಕಸರು ಊರೊಳಗೆ ಪ್ರವೇಶಿಸುವ ಮುನ್ನವೇ ಸ್ತ್ರೀಯರು ಮಾನ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕವಾಗಿ ಚಿತೆಗೆ ಹಾರಿದರು. ಆದರೆ ಅಗ್ನಿ ಇಬ್ಬರು ರಾಜಕುವರಿಯರನ್ನು ವಂಚಿಸಿದ. ಅವರನ್ನು ತನ್ನ ದೊಡ್ಡಿಯಂತಿದ್ದ ಜನಾನಾಕ್ಕೆ ನೂಕಿದ ಅಕ್ಬರ್ ಜೀವಂತವಿರುವಾಗಲೇ ಸಾವಿನ ಭಾಗ್ಯ ಒದಗಿಸಿದ! ಮುಂದೆ ಊರೂರೂ ದೋಚುವ ಕಾರ್ಯಕ್ರಮ ಯಥಾವತ್ ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಡೆಯಿತು. ಅಕ್ಬರ್ ಗೊಂಡ್ವಾನದ ಮೇಲೆ ಮಾಡಿದ ದಾಳಿ ಪಕ್ಕಾ ದುರಾಕ್ರಮಣವೇ ಹೊರತು ಇನ್ನೇನಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಬೇರಾವ ಸಮರ್ಥನೆಯೂ ಅದಕ್ಕಿಲ್ಲ ಎಂದಿದ್ದಾನೆ ವಿನ್ಸೆಂಟ್ ಸ್ಮಿತ್!
ಅಕ್ಬರನ ಕಾಮದಾಸೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸಲ್ಮಾನರೂ ಬಲಿಯಾದರು. ಆಗ ಮಾಳವವನ್ನಾಳುತ್ತಿದ್ದವ ಅಕ್ಬರನ ಓರಗೆಯವನಾದ ಬಾಜ್ ಬಹಾದ್ದೂರ್! ರೂಪಮತಿ ಅವನ ಮನದನ್ನೆ. ಲವ್ ಜಿಹಾದ್ ಇಲ್ಲವೇ ಇಲ್ಲ ಅನ್ನುವವರು ಗಮನಿಸಿ ಲವ್ ಜಿಹಾದಿಗೆ ಮೊಘಲರ ಕಾಲದ ಇತಿಹಾಸವಿದೆ! ಹೆಸರಿಗೆ ಅನುರೂಪವಾಗಿ ಆಕೆ ಅಪ್ರತಿಮ ಸುಂದರಿ. ಪೌರ್ಣಮಿಯ ಶಶಿಯ ಸೊಬಗಿಗಿಂತ ರೂಪಮತಿಯ ಚೆಲುವು ಹೆಚ್ಚು ಪ್ರಕಾಶಮಾನವಾದುದೆಂದು ವರ್ಣಿಸುತ್ತಿದ್ದರು ಕವಿಗಳು. ಅವಳಂತಹ ನಿರ್ಮಲ ದಿವ್ಯಸ್ತ್ರೀಯನ್ನು ಹತ್ತುಲಕ್ಷಸಂವತ್ಸರಗಳಿಗೊಮ್ಮೆಯಷ್ಟೇ ಭಗವಂತನು ಸೃಷ್ಟಿಸುವನೆಂದೂ, ಆಕೆಯ ಕಣ್ಣಂಚಿನ ಪಾನಪಾತ್ರೆಯಿಂದ ಒಂದು ಬಿಂದು ಮಧುವನ್ನಾಸ್ವಾದಿಸುವುದು ಸ್ವರ್ಗಕ್ಕೆ ಸೋಪಾನವೆಂದು ಹಾಡುತ್ತಿದ್ದರು ಜಾನಪದರು. ಈ ಕೀರ್ತಿಗಾನ ಅಕ್ಬರನ ಕಿವಿಗೆ ಬಿತ್ತು! ಕೇಳಬೇಕೆ ಜೊಲ್ಲುಸುರಿಸಿಕೊಂಡು ಆಕೆಯನ್ನು ಕರೆತರಲು ಅಪ್ಪಣೆಯಾಯಿತು. ಆಕೆ ಬರಲೊಲ್ಲೆ ಎಂದಳು. ಮೊಗಲ್ ಸೈನ್ಯ ಬಂತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವೆನೆಂದಿದ್ದ ಬಾಜ್ ಬಹಾದ್ದೂರ್ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ! ಸುದ್ದಿ ಕೇಳಿದ ರೂಪಮತಿ ವಿಷ ಸೇವಿಸಿದಳು. ಕಾಮಾಂಧನ ಮುಖ ಕಪ್ಪಡರಿತು!
ಜಯವಂತಿ...ಮೊಗಲ್ ದಾಸ್ಯದಿಂದ ಮೇವಾಡ ಮುಕ್ತಗೊಳ್ಳುವವರೆಗೆ ಮಗುವನ್ನು ಹಡೆಯುವುದಿಲ್ಲವೆಂದೂ, ಆಭರಣಗಳನ್ನು ಧರಿಸುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದ ಅಪೂರ್ವ ರಜಪೂತ ರಾಜಕನ್ಯೆ. ರಾಜ ಸುರ್ಜನರಾಯನ ಸೋದರನ ಸುತೆ. ಅಕ್ಬರನ ಕಾಮದೃಷ್ಟಿ ಆಕೆಯ ಮೇಲೆ ಬಿತ್ತು. ಹೇಗಾದರೂ ಮಾಡಿ ರಣಥಂಬೋರನ್ನು ಜಯಿಸಿ ಆಕೆಯನ್ನು ಪಡೆವಾಸೆಯಿಂದ ಜೊಲ್ಲುಸುರಿಸಿಕೊಂಡು ಕಾಲು ಕೆದರಿ ಯುದ್ಧಕ್ಕೆ ಹೊರಟ. ಆದರೆ ರಣಥಂಬೋರಿನ ಕೋಟೆ ದುರ್ಭೇಧ್ಯವಾಗಿತ್ತು. ಇರುವೆಗಳು ಕೂಡಾ ಅದರ ಗೋಡೆಗಳ ಮೇಲೇರಲಾರದೆ ಜಾರಿ ಬೀಳುವವೆಂದು ಅಬುಲ್ ಫಜಲ್ ಬರೆದಿದ್ದಾನೆ. ಅಕ್ಬರನಿಗೆ ಗೆಲ್ಲಲಾಗಲಿಲ್ಲ. ಅದಕ್ಕಾಗಿ ಆತ ಭಗವಾನ್ ದಾಸನ ಮೂಲಕ ಸುರ್ಜನರಾಯನಿಗೆ ಪ್ರಲೋಭನೆ ಒಡ್ಡಿ ಕೋಟೆಯ ಬೀಗದ ಕೈಗಳನ್ನು ವಶಪಡಿಸಿಕೊಂಡ. ಸುದ್ದಿ ಅರಿತ ಜಯವಂತಿ ಭರಿಸಲಾರದ ವೇದನೆಯಿಂದ ತನ್ನ ಮೈಮೇಲಿನ ಸೈನಿಕ ಪೋಷಾಕನ್ನು, ರಾಜ ಲಾಂಛನ, ತಿಲಕಗಳನ್ನು ಕಿತ್ತೆಸೆದು ದೇವಾಲಯದ ನರ್ತಕಿಯ ವೇಷ ಧರಿಸಿ ಏಕಲಿಂಗೇಶ್ವರನೆದುರು ಕಾಲ್ಗೆಜ್ಜೆ ತುಂಡಾಗುವವರೆಗೆ ಶಿವತಾಂಡವಗೈದು ಶಿವಲಿಂಗದ ಮುಂದೆ ಕುಸಿದಳು. ಹಾಗೆ ಕುಸಿವಾಗ ಸೊಂಟದಲ್ಲಿದ್ದ ಚೂರಿಯಿಂದ ಎದೆ ಬಗಿದು ರುದ್ರನಿಗೆ ರುಧಿರಾಭಿಷೇಕಗೈದಳು. ರಜಪೂತರ ಧೈರ್ಯಸ್ಥೈರ್ಯಗಳಿಗೆ ಹೊಸ ಭಾಷ್ಯ ಬರೆದು ದೇಶದ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಳು. ಹೀಗೆ ಕಾಮುಕ ಅಕ್ಬರನ ವಕ್ರದೃಷ್ಟಿಗೆ ಬಿದ್ದು ನಾಶವಾದ ರಾಜ್ಯಗಳು, ಮಾನಿನಿಯರು, ಪ್ರಾಣ ಕಳೆದುಕೊಂಡ ಜನತೆ, ಪ್ರಾಣಕ್ಕಿಂತ ಮಾನ ಹೆಚ್ಚೆಂದು ಜೌಹರ್ ಮಾಡಿಕೊಂಡ ಮಾನಿನಿಯರು ಲೆಕ್ಕವಿಲ್ಲದಷ್ಟು. ಅಂತಹ ಕಾಮಾಂಧನನ್ನೂ "ದಿ ಗ್ರೇಟ್" ಅಂದವರೂ ಬಹುಷಃ ಕಾಮಾಂಧರೇ ಇರಬೇಕು!
ಅಧಂ ಖಾನ್. ಅಕ್ಬರನನ್ನು ಸ್ವಂತಮಗನಂತೆ ಸಾಕಿದ ಮಹಮಾನಗಾಳ ಮಗ. ಅನೇಕ ಯುದ್ಧಗಳಲ್ಲಿ ಬಲಗೈ ಬಂಟನಂತೆ ಅಕ್ಬರನಿಗೆ ಸಹಾಯ ಮಾಡಿದ ವೀರ. ಒಂದು ಅಕ್ಬರ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಏನೋ ಗದ್ದಲ ಕೇಳಿತು. ಏನೆಂದು ವಿಚಾರಿಸಿದಾಗ ವಜೀರ ಅದಗಾ ಖಾನನನ್ನು ಕೊಂದು ಅಧಂಖಾನ್ ಅರಸನನ್ನು ಕೊಲ್ಲಲು ಬರುತ್ತಿರುವನೆಂದು ಯಾರೋ ಕಿವಿಯೂದಿದರು. ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ ಅಕ್ಬರ್ ಅಧಂಖಾನನ ಮೇಲೇರಿ ಹೋದ. ಅಧಂಖಾನ್ ನಡೆದುದನ್ನು ವಿಶದೀಕರಿಸುತ್ತೇನೆಂದು ಪರಿಪರಿಯಾಗಿ ಕೋರಿದರೂ ಕೇಳದೆ ಅವನ ಮುಖದ ಮೇಲೆ ಗುದ್ದಿದ. ಜ್ಞಾನ ತಪ್ಪಿ ಬಿದ್ದ ಆತನನ್ನು ಹಗ್ಗಗಳಿಂದ ಕಟ್ಟಿ ಅರಮನೆಯ ಮೇಲಿಂದ ಕೆಳಗೆಸೆಯಿರೆಂದು ಆಜ್ಞೆ ಮಾಡಿದ. ಸೇವಕರು ಆತನನ್ನು ಕೊಲ್ಲಲು ಇಷ್ಟವಿಲ್ಲದೆ ಕೆಳಕ್ಕೆ ಜಾರಿಬಿಟ್ಟರು. ಆದರೆ ಈ ದಯಾಪರ ಬಿಡಬೇಕೇ! ಸತ್ತನೋ ಇಲ್ಲವೋ ನೋಡಿರಂದು ಆಜ್ಞೆ ಮಾಡಿದ. ಅರೆಜೀವವಾಗಿದ್ದಾನೆಂದು ತಿಳಿದೊಡನೆ ಅವನ ಜುಟ್ಟು ಹಿಡಿದು ಮೇಲಕ್ಕೆಳೆದು ತಲೆ ಹೋಳಾಗುವಂತೆ ಕೆಳಕ್ಕೆ ಬಿಸಾಕಲು ಆಜ್ಞಾಪಿಸಿದ. ಅದು ಅಕ್ಬರ್ ತನ್ನ ಸಹವರ್ತಿಯೊಬ್ಬನಿಗೆ ಪರಿಪಾಲಿಸಿದ ಸಮುಚಿತ ನ್ಯಾಯ!
ಆ ದಿನ ದೀಪ ಹಚ್ಚುವ ನೌಕರನಿಗೇ ದೀಪ ಹಚ್ಚಬೇಕಾಯಿತು! ಕಾರಣವಿಷ್ಟೇ, ಅರಸ ನಿದ್ದೆಯಿಂದ ಬೇಗ ಎಚ್ಚರಗೊಂಡುದುದು! ಅರಸ ಎದ್ದಾಗ ಸೇವಕರ್ಯಾರೂ ಕಾಣಲಿಲ್ಲ. ದೀಪ ಹಚ್ಚುವ ಸೇವಕನೊಬ್ಬ ಮೂಲೆಯಲ್ಲಿ ಮುದುಡಿ ಮಲಗಿದ್ದ. ಸಿಡಿಮಿಡಿಗೊಂಡ ಅರಸ ಆತನನ್ನು ರಾಜಗೋಪುರದಿಂದ ಕೆಳಕ್ಕೆ ಎಸೆಯುವಂತೆ ಆಜ್ಞಾಪಿಸಿದ. ಇತಿಹಾಸದಲ್ಲಿ ದೀಪ ಹಚ್ಚುವ ಸೇವಕನೊಬ್ಬನನ್ನು ನಿದ್ದೆ ಮಾಡುವ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗೆ ಗೋಪುರದ ಕೆಳಕ್ಕೆಸೆದು ಸಾಯಿಸಿದ ಮಹಾಮಾನವತಾವಾದಿ ಧರ್ಮಪ್ರಭು ಅಕ್ಬರನೊಬ್ಬನೆ! 1565ರಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಂದ ಅಕ್ಬರನನ್ನು ದಯಾಪರ ಎಂದು ಕರೆದ ನೆಹರೂವೇ ಧನ್ಯ!
ಮೋಸ, ಕುತಂತ್ರಗಳಿಂದ ಉತ್ತರ ಭಾರತದ ರಾಜ್ಯಗಳನ್ನು ತನ್ನ ವಶ ಮಾಡಿಕೊಂಡ ಮೇಲೆ ಅಕ್ಬರನ ದೃಷ್ಟಿ ಬಿದ್ದದ್ದು ಮತದ ಮೇಲೆ! ಗೆಲುವು, ಕೀರ್ತಿ ತಲೆಗಡರಿತ್ತು! ತನ್ನಂತಹ ಚಕ್ರವರ್ತಿ ಯಾವನೋ ಒಬ್ಬ ಯಕಶ್ಚಿತ್ ಪ್ರವಾದಿಗೆ ತಲೆಬಾಗುವುದೆಂದರೇನು? ತಾನೊಬ್ಬ ದೈವಾಂಶ ಸಂಭೂತನೆಂದೇ ಅಕ್ಬರನ ನಂಬಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಅಕ್ಬರನ ಸುತ್ತ ಮುತ್ತ ಇದ್ದವರೆಲ್ಲಾ ಆತನ ಭಜನೆ ಮಾಡುವವರೇ. ಅಲ್ಲದೇ ಅಡ್ಡ ಬಂದವರನ್ನು ಉದ್ದುದ್ದ ಸಿಗಿದುಬಿಡುತ್ತಾನೆಂಬ ಹೆದರಿಕೆ ಬೇರೆ! ಒಟ್ಟಾರೆ ಮರ್ಕಟವೊಂದು ಮದಿರೆ ಕುಡಿದ ಹಾಗಾಯಿತು ಅಕ್ಬರನ ಸ್ಥಿತಿ! ಇಸ್ಲಾಂ, ಕ್ರೈಸ್ತ, ಹಿಂದೂಗಳನ್ನು ಸಮನ್ವಯಗೊಳಿಸಿ, ಎಲ್ಲದರಲ್ಲಿನ ಒಳ್ಳೆಯದನ್ನು ತೆಗೆದುಕೊಂಡು ಸರ್ವರಿಗೂ ಆದರಣೀಯ-ಆಚರಣೀಯ ದಾರಿಯನ್ನು ಹುಟ್ಟುಹಾಕಿದ್ದಾನೆಂದು ನಮ್ಮ ಚರಿತ್ರಕಾರರು ಗೀಚಿದ್ದಾರೆ. ಇದರ ಫಲವಾಗಿಯೇ ಅಕ್ಬರ್ "ಲಿಬರಲ್", ಸರ್ವಮತಸಮತ್ವಕ್ಕೆ ಪ್ರಯತ್ನಿಸಿದವ ಎಂದು ಬಲಪಂಥೀಯರ ತಲೆಯಲ್ಲೂ ಹುಳ ಹೊಕ್ಕಿರುವುದು. ಆದರೆ "ದೀನ್ ಇಲಾಹಿ" ಅಪ್ಪಟ ಕಾಗೆ ಬಂಗಾರ!
ರಾಜನು ದೇವರ ನೆರಳಾದ್ದರಿಂದ, ಹಿಂದೂ ಸ್ಥಾನದಲ್ಲಿ ತಾನೇ ದೊಡ್ಡ ರಾಜನೆಂಬ ಭ್ರಮೆಯಿಂದ ತನ್ನನ್ನೇ ಪ್ರವಾದಿಯಾಗಿ ಘೋಷಿಸಿಕೊಂಡು ಹೊಸಮತವನ್ನು ಸ್ಥಾಪಿಸಹೊರಟ ಅಕ್ಬರ್ 1579ರಲ್ಲಿ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜಪ್ರಮುಖರನ್ನೊಳಗೊಂಡ ಸಭೆಯೊಂದನ್ನು ಆಯೋಜಿಸಿದ. ಅದರಲ್ಲಿ "ತನ್ನ ಸಾಮ್ರಾಜ್ಯದಲ್ಲಿ ಹಲವು ಮತಗಳಿದ್ದು, ಪರಸ್ಪರ ಭೇದಾಭಿಪ್ರಾಯಗಳನ್ನು ಹೊಂದಿವೆ. ಇದು ಸರಿಯಲ್ಲ. ಹಾಗಾಗಿ ಎಲ್ಲದರ ಉತ್ತಮವಾದುದನ್ನು ಆರಿಸಿಕೊಂಡು ಹೊಸಮತವೊಂದನ್ನು ಸೃಷ್ಟಿಸಿ ಅನುಸರಿಸಬೇಕು. ಇಲ್ಲಿರುವವರೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ" ಎಂದು ಆಜ್ಞಾಪಿಸಿದ. ಉದ್ದೇಶವೇನೋ ಒಳ್ಳೆಯದೇ. ಆದರೆ ಆದದ್ದೇನು? ಅಕ್ಬರನ ಭಜನಾಮಂಡಳಿ "ವಿಶ್ವಮತ"ವನ್ನು ಸ್ಥಾಪಿಸಲು ಅವಶ್ಯವಾದ ನಿಯಮಗಳನ್ನು ಚಕ್ರವರ್ತಿಗಳೇ ರೂಪಿಸಬೇಕು ಅಂದುಬಿಟ್ಟರು. ಕಳ್ಳು ಕುಡಿದ ಕಪಿಗೆ ಚೇಳು ಕುಟುಕಿದಂತಾಯಿತು! ಸಧ್ಯದಲ್ಲಿಯೇ ಹೊಸ ಮತವನ್ನು ಸ್ಥಾಪಿಸಲಾಗುವುದೆಂದು ರಾಜ್ಯಾದ್ಯಂತ ಡಂಗುರ ಹೊಡೆಸಿದ. ಹೊಸ ಮತ ಆರಂಭಿಸುವ ಮುನ್ನ ಹಿಂದೂ ಧರ್ಮ, ಕ್ರಿಶ್ಚಿಯನ್ ಮತದ ಆಚಾರ್ಯರನ್ನು ಸಂಪರ್ಕಿಸಲೇ ಇಲ್ಲ! ಮೊಗಲ್ ಸಾಮ್ರಾಜ್ಯದ ಮುಫ್ತಿಯಾಗಿದ್ದ ಕಾಜಿಯಲ್ ಕುಜಾತ್ ಹಾಗೂ ಕೆಲವು ಉಲೇಮಾಗಳ ಕೈಯಲ್ಲಿ ಒಂದು ದಸ್ತಾವೇಜಿಗೆ ಸಹಿ ಮಾಡಿಸಿದ(1579). ಸಿವಿಲ್ ವ್ಯವಹಾರಗಳಲ್ಲಿದ್ದಂತೆ ಪಾರಲೌಕಿಕ ಸಂಗತಿಗಳಲ್ಲೂ ಚಕ್ರವರ್ತಿಯೇ ಅಂತಿಮ ನ್ಯಾಯ ತೀರ್ಮಾನ ನೀಡುವವನೆಂದೂ, ಮುಸ್ಲಿಮ್ ನ್ಯಾಯಕ್ಕೆ ಸಂಬಂಧಿಸಿದಂತೆ ಅಕ್ಬರನೇ ಮಿಕ್ಕೆಲ್ಲಾ ಖಾಜಿಗಳಿಗಿಂತ ಶ್ರೇಷ್ಠನೆಂದೂ, ಅವನ ನಿರ್ಣಯವೇ ಅಂತಿಮವೆಂದು ಅವರ ಕೈಯಲ್ಲಿ ಕಟ್ಟಳೆ ಹೊರಡಿಸಿದ.
ಹೇಗಿತ್ತು ದೀನ್ ಇಲಾಹಿ?
ಹೊಸ ಮತದಲ್ಲಿ ಸೇರುವಂತಹವರು ಚಕ್ರವರ್ತಿಯ ಸಮ್ಮುಖದಲ್ಲಿ ಸಮರ್ಪಿಸಿಕೊಳ್ಳಬೇಕಿದ್ದ ವಿಷಯಗಳು ನಾಲ್ಕು. ಆಸ್ತಿ, ಜೀವನ, ಗೌರವ, ಮತ! ಈ ನಾಲ್ಕರ ಪೈಕಿ ಒಂದನ್ನು ತ್ಯಾಗ ಮಾಡಿದವನಿಗೆ ಒಂದು ಡಿಗ್ರಿ, ಎರಡನ್ನು ತ್ಯಾಗ ಮಾಡಿದವನಿಗೆ ಎರಡು ಡಿಗ್ರಿ...ಹೀಗೆ ಡಿಗ್ರಿಗಳನ್ನು ನೂತನ ಗುರುಕುಲ ದಯಪಾಲಿಸುತ್ತಿತ್ತು. ಯಾವನಾದರೂ ಹಿಂದೂ ಹೊಸಪಂಥವನ್ನು ಸೇರಬೇಕೆಂದರೆ ತಾನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ದೇವರು-ಆಚರಣೆಗಳನ್ನು ತ್ಯಜಿಸಬೇಕಿತ್ತು. ತನ್ನ ಬಳಿ ಅದ್ಭುತ ಶಕ್ತಿಗಳಿವೆಯೆಂದೂ, ಬಂಜೆಯರಿಗೆ ಮಕ್ಕಳು ಹುಟ್ಟುತ್ತವೆಯೆಂದೂ, ತನ್ನ ಪಾದ ತೊಳೆದ ನೀರನ್ನು ಕುಡಿಯುವುದರಿಂದ ರೋಗಗಳು ವಾಸಿಯಾಗುತ್ತವೆಂದು ಅಕ್ಬರ್ ಮಾಡಿದ ಪ್ರಚಾರಕ್ಕೇನೂ ಕಡಿಮೆ ಇರಲಿಲ್ಲ. ಅನೇಕ ದೌರ್ಭಾಗ್ಯವಂತರು ಅಕ್ಬರನ ಪಾದೋದಕವನ್ನು ಸೇವಿಸಿ ಇಲ್ಲದ ಖಾಯಿಲೆ ಬರಿಸಿಕೊಂಡರು. ಅಕ್ಬರನ ದರಬಾರಿನಲ್ಲಿ ದೀನ್ ಇಲಾಹಿ ಸ್ವೀಕರಿಸಿದ ರಾಜಪ್ರಮುಖರು ಕೇವಲ ಹದಿನೆಂಟು ಮಂದಿ. ಅವರಲ್ಲಿ ಬೀರಬಲ್ ಒಬ್ಬನೇ ಹಿಂದೂ. ಸಾಮಾನ್ಯ ಜನರ ಸಂಖ್ಯೆಯೂ ಅತ್ಯಲ್ಪ. ಅನೇಕ ಹಿಂದೂ ಆಚಾರ-ಸಂಪ್ರದಾಯಗಳನ್ನು ಯಥಾವತ್ ನಕಲು ಹೊಡೆದರೂ ಹಿಂದೂಗಳೇನು ಆಕರ್ಷಿತರಾಗಲಿಲ್ಲ. ಕಾಫಿರರ ರೀತಿಯ ಆಚಾರಗಳೆಂದು ಮುಸ್ಲಿಮರೂ ದೂರಾದರು. ಮುಂದೇನು? ಇದೆಯಲ್ಲ ಅಸ್ತ್ರ...ಸ್ವೀಕರಿಸಬೇಕು ಇಲ್ಲಾ ಶಿಕ್ಷೆಗೆ ಗುರಿಯಾಗಬೇಕು! ಹೊಸ ಮತವನ್ನು ಸ್ವೀಕರಿಸಲಿಚ್ಛಿಸುವವರು ಸೂರ್ಯನು ಪ್ರಜ್ವಲಿಸುವ ಭಾನುವಾರದಂದು ತಮ್ಮ ಮುಂಡಾಸುಗಳನ್ನು ತೆಗೆದಿಟ್ಟು ಅಕ್ಬರನ ಪಾದಮೂಲದಲ್ಲಿ ತಮ್ಮ ತಲೆ ಇರಿಸಿ ಪ್ರಾರ್ಥಿಸಬೇಕಿತ್ತು. ದೇವರ ಪ್ರತಿನಿಧಿಯಾದ ಅರಸ ಅವರನ್ನು ಮೇಲೆಬ್ಬಿಸಿ ತಲೆಯ ಮೇಲೆ ಮುಂಡಾಸನ್ನಿರಿಸಿ ಕೈ ಎತ್ತಿ ಆಶೀರ್ವದಿಸಿ "ಅಲ್ಲಾ ಹು ಅಕ್ಬರ್" ಎಂದು ಬರೆದಿದ್ದ ಒಂದು ಭಿಲ್ಲೆಯನ್ನು ಉಡುಗೊರೆಯಾಗಿ ನೀಡುವುದರ ಮೂಲಕ ತನ್ನ ಮತಕ್ಕೆ ಸೇರಿಸಿಕೊಳ್ಳುತ್ತಿದ್ದ. ಭಕ್ತನು ಸದಾ ಆ ಭಿಲ್ಲೆಯನ್ನು ತನ್ನ ಮುಂಡಾಸಿನಲ್ಲಿ ಧರಿಸಿ ಸಂಚರಿಸಬೇಕಿತ್ತು. ನೂತನ ಮತಸ್ಥರು ಪರಸ್ಪರ ಎದುರಾದಾಗ "ಅಲ್ಲಾಹು ಅಕ್ಬರ್" ಎಂದು ಹೇಳಬೇಕಿತ್ತು.
ದೀನ್ ಇಲಾಹಿಯಿಂದ ಹೆಚ್ಚು ಹೊಡೆತ ಬಿದ್ದದ್ದು ಮುಸ್ಲಿಮರಿಗೇ! ನೂತನ ಮತವನ್ನು ವಿರೋಧಿಸಿದರೆಂಬ ಕಾರಣಕ್ಕೆ ಭಾರೀ ಸಂಖ್ಯೆಯ ಷೇಖ್, ಫಕೀರರನ್ನು ದೇಶದಿಂದ ಬಹಿಷ್ಕರಿಸಿ ಕಂದಹಾರಿನ ಮಾರುಕಟ್ಟೆಗಳಲ್ಲಿ ಕುದುರೆಗಳಿಗೆ ಬದಲು ಗುಲಾಮರಂತೆ ಅವರನ್ನು ಮಾರಹಾಕಿದ ಎಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಐದಾರು ವರ್ಷಗಳಲ್ಲಿ ಅವನ ಹೃದಯದಲ್ಲಿ ಇಸ್ಲಾಮಿನ ಬಗೆಗೆ ಲವಲೇಶ ಭಾವನೆಯೂ ಇಲ್ಲದಂತಾಗಿಬಿಟ್ಟಿತ್ತು ಎಂದು ಅಕ್ಬರನ ಸಮಕಾಲೀನ ಬದೌನಿ ಬರೆದಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡುವಂತಿರಲಿಲ್ಲ. ಮೊದಲೇ ಆ ಹೆಸರಿದ್ದರೆ ಬದಲಾಯಿಸಿಕೊಳ್ಳಬೇಕಿತ್ತು. ಗಡ್ಡ ಬೋಳಿಸಬೇಕಿತ್ತು. ಪ್ರಾರ್ಥನೆ, ರಂಜಾನ್ ಉಪವಾಸ, ಮೆಕ್ಕಾ ಯಾತ್ರೆ ಮಾಡುವಂತಿರಲಿಲ್ಲ. ಅರಬ್ಬೀ ಭಾಷೆ, ಕುರಾನಿನ ಅಧ್ಯಯನ, ಷರೀಯತ್ ಕಾನೂನಿಗೆ ಅವಕಾಶವಿರಲಿಲ್ಲ. ಸತ್ತವರ ತಲೆಯನ್ನು ಪೂರ್ವ ದಿಕ್ಕಿಗೆ ಬರುವಂತೆ ಹೂಳಬೇಕಿತ್ತು. ಪೂರ್ವಕ್ಕೆ ತಲೆ ಹಾಕಿ ಮಲಗಬೇಕಿತ್ತು. ಪಶ್ಚಿಮದ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥಿಸುವ ಮುಸ್ಲಿಮರನ್ನು ಅವಮಾನಿಸುವುದು ಇದರ ಉದ್ದೇಶವಾಗಿತ್ತೆಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ.
ಇದರಿಂದ ಹಿಂದೂಗಳಿಗೇನೂ ಹಾನಿಯಿಲ್ಲ, ಒಳ್ಳೆಯದೇ ಆಯಿತಲ್ವೇ ಅಂತಾ ನೀವು ತಿಳ್ಕೊಂಡಿದ್ದರೆ ಅದು ತಪ್ಪು. ಈ ಮತವನ್ನು ಅಪ್ಪಿಕೊಂಡವರು ಒಂದು ರೀತಿಯಲ್ಲಿ ಇಸ್ಲಾಮಿಗೆ ಮತಾಂತರಗೊಂಡಂತೆಯೇ. ಇದು ಅಕ್ಬರನ ಕಾಲಾನಂತರ ನಿಚ್ಚಳವಾಯಿತು. ಕೆಲವರು ಎಡಬಿಡಂಗಿಗಳಂತೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಉಳಿಯದೆ ಸತ್ತು ಹೋದರು. ಭಾರತೀಯತೆಯನ್ನು, ಹಿಂದೂ ಸಂಸ್ಕೃತಿಯನ್ನು ತುಚ್ಛವಾಗಿ ಕಾಣುವ ಇಂದಿನ "ಸೆಕ್ಯುಲರು"ಗಳು ಬಹುಷಃ ಇವರದ್ದೇ ಸಂತಾನವೇನೋ! ಅಲ್ಲದೆ ಆತ ಕೊನೆಗೆ ಇಸ್ಲಾಮ್ ದ್ವೇಷಿಯಾಗಿ ಬದಲಾದರೂ ಮೊದಲು ಹಿಂದೂಗಳಿಗೆ ಮಾಡಿದ ಅನ್ಯಾಯ ಮುಚ್ಚಿಹೋಗುವುದೇ? ಕಂಡ ಕಂಡ ಮಾನಿನಿಯರನ್ನು ತನ್ನ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದ ಇಂತಹ ಕಾಮುಕನನ್ನು ಹೊಗಳುವವರು ಹೆಣ್ಣನ್ನು ನೋಡುವ ಪರಿ ಯಾವ ರೀತಿ ಇರಬಹುದು? ಹೆಣ್ಣನ್ನು ಬರಿಯ ಭೋಗದ ವಸ್ತುವಾಗಿ ಕಂಡ ಈ ಮೂರ್ಖ ಕೇವಲ ಹೆಣ್ಣು-ಹೊನ್ನು-ಮಣ್ಣನ್ನಷ್ಟೇ ದೋಚಲಿಲ್ಲ, ಇಲ್ಲಿಯ ಜನರ ಬೌದ್ಧಿಕ ದಾರಿದ್ರ್ಯಕ್ಕೂ ಕಾರಣವಾದ! ಇಲ್ಲದಿದ್ದಲ್ಲಿ ಅದೆಷ್ಟೋ ರಾಜ್ಯಗಳನ್ನು ಸರ್ವನಾಶ ಮಾಡಿದ, ದೇವಾಲಯಗಳನ್ನು ಸುಟ್ಟು ಬೂದಿಯಾಗಿಸಿದ, ಲಕ್ಷ ಲಕ್ಷ ಹಿಂದೂಗಳ ಮತಾಂತರ-ಮಾರಣ ಹೋಮಕ್ಕೆ ಕಾರಣನಾದ, ಲಕ್ಷಾಂತರ ಮಾನಿನಿಯರ ಜೌಹರ್-ಶೀಲಹರಣ-ನರಕಸದೃಶ ಜೀವನಕ್ಕೆ ಕಾರಣನಾದ ಇಂತಹ ಪ್ರಭೃತಿಯನ್ನು "ದಿ ಗ್ರೇಟ್" ಎಂದವರೂ ಅದನ್ನೇ ಒಪ್ಪಿಕೊಳ್ಳುತ್ತಿರುವವರ ಬೌದ್ಧಿಕ ದಾಸ್ಯಕ್ಕೆ ಏನೆನ್ನಬೇಕು? ಅಬುಲ್ ಫಜಲನಿಗಾದರೂ ಅಕ್ಬರನನ್ನು ಹೊಗಳಲು ಅನ್ನದ ಋಣವಿತ್ತು. ಸ್ವಾಮಿನಿಷ್ಠೆಯ ಪರಾಕಾಷ್ಟತೆಯಿತ್ತು! ಆದರೆ ಚಪಲ ಚೆನ್ನಿಗ ರಾಯ ನೆಹರೂವಿಗೇನಿತ್ತು? ICHR ಎಂಬ ಸಂಸ್ಥೆಯಲ್ಲಿ ದಶಕಗಳ ಪರ್ಯಂತ ಕಾರುಬಾರು ನಡೆಸಿ ದೇಶದ ಸಂಪತ್ತನ್ನು ತಿಂದು ತೇಗಿದ ಮಹಾನ್ ಇತಿಹಾಸಕಾರರಿಗೆ ಇತಿಹಾಸವನ್ನು ತಿರುಚುವ ಅಗತ್ಯವೇನಿತ್ತು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ