ಪುಟಗಳು

ಶುಕ್ರವಾರ, ಮೇ 29, 2015

ಹಿಂದುತ್ವದ ವಟವೃಕ್ಷವನ್ನುಳಿಸಿದ ಪ್ರಚಂಡ ಶಿವಶಕ್ತಿ

ಹಿಂದುತ್ವದ ವಟವೃಕ್ಷವನ್ನುಳಿಸಿದ ಪ್ರಚಂಡ ಶಿವಶಕ್ತಿ




"ದಾವಾ ದ್ರುಮದಂಡ ಪರ ಚಿತ್ತಾ ಮೃಗಝಂಡ ಪರ
ಭೂಷಣ ಬಿತಂಡ ಪರ ಜೈಸೇ ಮೃಗರಾಜ ಹೈ|
ತೇಜ ತಮ ಅಂಶ ಪರ ಕಾನ್ಹ ಜಿಮ ಕಂಸ ಪರ
ತ್ಯೋ ಮ್ಲೇಚ್ಛವಂಶ ಪರ ಶೇರ ಶಿವರಾಜ ಹೈ||"

ಕಾಡಿನ ಮರಗಳಿಗೆ ಕಾಳ್ಗಿಚ್ಚಿನಂತೆ, ಚಿಗರೆಯ ಗುಂಪಿಗೆ ಚಿರತೆಯಂತೆ, ಮದ್ದಾನೆ ಹಿಂಡಿಗೆ ಮೃಗರಾಜನಂತೆ; ಇರುಳ ಕತ್ತಲಿಗೆ ಸೂರ್ಯನಂತೆ, ಕಂಸನಿಗೆ ಕೃಷ್ಣನಿದ್ದಂತೆ, ಮ್ಲೇಚ್ಛರ ವಂಶಕ್ಕೆ ಈ ಸಿಂಹ ಸದೃಶ ರಾಜನಿದ್ದಾನೆ! ಶಿವರಾಜನಿದ್ದಾನೆ!
ತಂಗದಿರನ ತಂಪಿನ ಕಿರಣಗಳನ್ನು ಹೊದ್ದು, ನಿರ್ಭಿಡೆಯಿಂದ ಬೀಸುತಿಹ ತಂಗಾಳಿಗೆ ಮನಸೋತು, ಏರಿಳಿದು ನರ್ತಿಸುತಿಹ ಚಂಚಲ ತೆರೆಗಳ ನಿನಾದಕ್ಕೆ ಶ್ರುತಿ ಬೆರೆಸಿ ಮಧುರ ಸ್ವರದಲ್ಲಿ ತರುಣ ಸನ್ಯಾಸಿಯೊಬ್ಬ "ಅವನೊಬ್ಬ ಕಳ್ಳ, ಕಪಟಿ, ಖೂನಿ" ಎಂದ ತನ್ನ ಶಿಷ್ಯನಿಗೆ ಎರಡೂವರೆ ಶತಮಾನಗಳ ಹಿಂದಿನ ರೋಮಹರ್ಷಕ ಇತಿಹಾಸವನ್ನು ಚಿತ್ರಿಸಿದ ಪರಿ ಹೀಗೆ! ಆ ತರುಣ ಸನ್ಯಾಸಿ ಯಾರೆಂದುಕೊಂಡಿರಿ? ನವ ಭಾರತದ ನವೋದಯದ ಹರಿಕಾರ ರಾಷ್ಟ್ರದೃಷ್ಟಾರ ತೇಜಃಪುಂಜ ಸ್ವಾಮಿ ವಿವೇಕಾನಂದ!

ಶಿವಾಜಿ...? ಹೌದು...ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅದೇ ಶಿವಾಜಿ. ಶಿವಾಜಿ ಜನಿಸಿದ ಸಂದರ್ಭ ಎಂತಹದ್ದು? ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಜನಾಂಗಕ್ಕೆ ಜನಾಂಗವೇ ವಿನಾಶದ ಮಡುವಿನಲ್ಲಿ ಮುಳುಗಿಹೋಗುತ್ತಿದ್ದ ವಿಷಘಳಿಗೆಯಲ್ಲಿ ಶಿವಾಜಿ ಎದ್ದು ಬಂದ! ಆ ಮಹಾಪುರುಷನ ಬರವಿಗಾಗಿ ಅದೆಷ್ಟು ಸಾಧುಸಂತರ ತಪಸ್ಸು ನಡೆದಿತ್ತು. ಮ್ಲೇಚ್ಛರ ಮೃತ್ಯುದವಡೆಯಿಂದ ಈ ಮಣ್ಣಿನ ಮಕ್ಕಳನ್ನು ಮುಕ್ತಗೊಳಿಸುವ ಆ ಉದ್ಧಾರಕನ ಬರವಿಗೋಸ್ಕರ ಅದೆಷ್ಟು ಜನ ಕಾದು ಕುಳಿತಿದ್ದರು. ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದ ಸಮಯದಲ್ಲಿ ಅವತರಿಸಿ ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಯುಗಪುರುಷನಾತ. ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಒಳಪಟ್ಟಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ! ಭಾರತದ ಆತ್ಮಚೇತನದ ಮೂರ್ತ ರೂಪ ಅವನು. ಶೌರ್ಯಕ್ಕೆ ಶೌರ್ಯದಿಂದ, ಕ್ರೌರ್ಯಕ್ಕೆ ಕ್ರೌರ್ಯದಿಂದ, ಮೋಸಕ್ಕೆ ಮೋಸದಿಂದ ಉತ್ತರಿಸಿ, ಹಿಂದುಗಳ ಸಹಸ್ರ ವರುಷಗಳ ಭೀತಿಯನ್ನು ಹೋಗಲಾಡಿಸಿದ ಶಿವಾಂಶ ಆತ. ರಾಷ್ಟ್ರವೀರನೊಬ್ಬನಿಗಿರಬೇಕಾದ ಸಕಲ ಲಕ್ಷಣಗಳು ಮೂರ್ತೀಭವಿಸಿದ ಪುರುಷೋತ್ತಮನೇ ಛತ್ರಪತಿ ಶಿವಾಜಿ! ಭೂಷಣ ಅನ್ನೋ ಕವಿ ಹೇಳುತ್ತಾನೆ,
"ಕಾಶಿಜೀ ಕೀ ಕಳಾ ಜಾತೀ ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ ಸುನ್ನತ್ ಹೋತಿ ಸಬ್ ಕೀ||"

ಶಿವಾಜಿ ಬಸಿರಲ್ಲಿದ್ದಾಗ ಮಾತೆ ಜೀಜಾಬಾಯಿಗೆ ವಿಹಾರ-ವಿಲಾಸ-ಸುಖಶಯ್ಯೆ-ಭಕ್ಷ್ಯ-ಭೋಜ್ಯಗಳ ಆಸೆಯಾಗುತ್ತಿರಲಿಲ್ಲ. ಬದಲಾಗಿ ಅವಳಿಗೆ ಗಿರಿದುರ್ಗಗಳನ್ನೇರಬೇಕೆನಿಸುತ್ತಿತ್ತು. ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕಬೇಕೆನಿಸುತ್ತಿತ್ತು. ಛತ್ರಚಾಮರಗಳೊಡನೆ ಸಿಂಹಾಸನದಲ್ಲಿ ಮಂಡಿಸುವ ಆಸೆಯಾಗುತ್ತಿತ್ತು. ವ್ಯಾಘ್ರವಾಹಿನಿಯಾಗಿ-ಶಸ್ತ್ರಧಾರಿಣಿಯಾಗಿ ಸಂಚರಿಸಬೇಕೆಂಬ ಬಯಕೆ ಉಂಟಾಗುತ್ತಿತ್ತು. ಶಿವನೇರಿ ದುರ್ಗದಲ್ಲಿ ಶುಕ್ಲನಾಮ ಸಂವತ್ಸರದ ಫಾಲ್ಗುಣ ತದಿಗೆ ಹಿಂದೂಸ್ಥಾನದ ಇತಿಹಾಸದಲ್ಲಿ ಅಮೃತಘಳಿಗೆಯಾಯಿತು. ತಾಯೆದೆಯ ವಾತ್ಸಲ್ಯರಸದೊಂದಿಗೆ ಧರ್ಮರಸ ವೀರರಸಗಳನ್ನೂ ಸವಿಯುತ್ತಾ ಬೆಳೆದ ಶಿವಬಾ. ಹಾಲಿನ ಒಂದೊಂದು ಗುಟುಕು, ಅನ್ನದ ಒಂದೊಂದು ತುತ್ತಿನೊಂದಿಗೆ ಸ್ವದೇಶ-ಸ್ವಧರ್ಮನಿಷ್ಠೆಯ ತಿನಿಸನ್ನೂ ಉಣಬಡಿಸಿದ ಮಾತೆ ರಾಜನೀತಿ-ಯುದ್ಧನೀತಿಗಳನ್ನು ಮಗನಿಗೆ ಅರೆದು ಕುಡಿಸಿದಳು. ಮುಸಲ್ಮಾನರ ಹಾವಳಿಯಿಂದ ಹಾಳು ಬಿದ್ದಿದ್ದ ಪುಣೆಗೆ ಬಂದೊಡನೆ ಮತಾಂಧರ ಅಟ್ಟಹಾಸಕ್ಕೆ ಒಳಗೊಳಗೆ ಕುದಿಯತೊಡಗಿದ ಶಿವಬಾ. "ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್" ಎಂಬ ಭೀಷಣ ಪ್ರತಿಜ್ಞೆ ಬಾಲ ಶಿವಾಜಿಯ ಬಾಯಿಂದ ಹೊರ ಬಿದ್ದು ಸಹ್ಯಾದ್ರಿಯ ಶಿಖರಗಳಲ್ಲೆಲ್ಲಾ ಅನುರಣಿಸಿತು. ಗುರು ದಾದಾಜಿಕೊಂಡದೇವನಿಂದ ದಕ್ಷ ಆಡಳಿತದ ಪ್ರತ್ಯಕ್ಷ ಪಾಠ ಹೇಳಿಸಿಕೊಂಡ ಶಿವಾಜಿಯ ದಿನಚರಿ ಹಿಂದೂಧರ್ಮದ ಅಚ್ಚಿನಲ್ಲಿ ಎರಕ ಹೊಯ್ದಿತ್ತು. ಬೆಂಗಳೂರಿನಲ್ಲಿದ್ದ ದಿನಗಳಲ್ಲಿ ಹಿಂದೂ ಸ್ವಾತಂತ್ರ್ಯದ ಜಯಭೇರಿ ಮೊಳಗಿಸಿದ್ದ ಮೈಸೂರಿನ ಕಂಠೀರವ ನರಸರಾಜನ ಪುಣ್ಯಪ್ರಭಾವ ಶಿವಾಜಿಯನ್ನೂ ತಟ್ಟಿತು. ಹಾಗಾಗಿಯೇ ಬಿಜಾಪುರದ ಬಾದಶಹನಿಗೆ ಮುಜರೆ ಸಲ್ಲಿಸುವ ಬದಲು ಸಹ್ಯಾದ್ರಿಯ ಶಿಖರಗಳ ಮುಜರೆ ಸ್ವೀಕರಿಸಲು, ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಿ ಛತ್ರಪತಿಯಾಗಿ ಮೆರೆಯಲು, ತುಳಜಾಭವಾನಿಯ ಆಶೀರ್ವಾದ ಪಡೆಯಲು ಮನ ಎಳಸಿತು! ಗೋವನ್ನು ಕಡಿಯಲು ಖಡ್ಗವನ್ನೆತ್ತಿದ್ದ ಕಟುಕನ ಕೈಯನ್ನು ಮಿಂಚಿನೋಪಾದಿಯಲ್ಲಿ ಒರೆಯೊಳಗಿದ್ದ ಖಡ್ಗ ತುಂಡರಿಸಿತು.

           ಶಿವಾಜಿಗೆ ನಗರದಲ್ಲಾರು ಬೆಂಬಲಿಸಲಿಲ್ಲ. ಹಾಗಂತ ಅವ ಸುಮ್ಮನುಳಿಯಲಿಲ್ಲ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳ ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತು. "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ, ಚಿಮಣಾಜಿ, ಬಾಳಾಜಿ, ಸೂರ್ಯಾಜಿ, ಬಾಜಿ ಜೇಧೆ.... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು. ಮುಂದೆ ದಿಲ್ಲಿ, ಬಿಜಾಪುರಾದಿ ಸಾಮ್ರಾಜ್ಯಗಳ ಜಗದ್ವಿಖ್ಯಾತ ಸೇನಾನಿಗಳನ್ನು ಮಣ್ಣುಮುಕ್ಕಿಸಿದ ರಣಧುರಂದರರು ಇವರೇ! ಹದಿಮೂರರ ಎಳೆವಯಸ್ಸಿನಲ್ಲಿ ತನ್ನ ಸ್ವಂತದ ರಾಜಮುದ್ರೆಯನ್ನು ಅಷ್ಟಕೋನಾಕೃತಿಯಲ್ಲಿ ಸಂಸ್ಕೃತದಲ್ಲಿ ತಯಾರಿಸಿದ ಶಿವಾಜಿ.
"ಪ್ರತಿಪಚ್ಚಂದ್ರಲೇಖೇವ ವರ್ಧಿಷ್ಣುರ್ವಿಶ್ವವಂದಿತಾ|
ಶಾಹಸೂನೋಶ್ಶಿವಸ್ಯೈಷಾ ಮುದ್ರಾ ಭದ್ರಾಯ ರಾಜತೇ||"

ಅಲ್ಲಿ...ಸಹ್ಯಾದ್ರಿಯ ಗಿರಿಶಿಖರಗಳಲ್ಲಿ "ಜಯ ಜಯ ರಘುವೀರ ಸಮರ್ಥ" ಎನ್ನುವ ಉದ್ಘೋಷ ಕೇಳಿ ಬರತೊಡಗಿತು! ಶಿವಾಜಿಯ ಕ್ಷಾತ್ರ ತೇಜ, ಸಮರ್ಥ ರಾಮರ ಬ್ರಹ್ಮತೇಜದೊಡನೆ ಮಿಳಿತಗೊಂಡು ಸ್ವರಾಜ್ಯಕ್ಕೆ ತೋರಣ ಕಟ್ಟಲು ಮುಹೂರ್ತ ಹುಡುಕಲಾರಂಭಿಸಿತ್ತು! ಸ್ವರಾಜ್ಯಕ್ಕೆ ನೆರವಾಗುವ ಮಠಗಳು ಊರು ಕೇರಿಗಳಲ್ಲಿ ಎದ್ದು ನಿಂತವು. ಮತಾಂಧ ಅರಸರ ಅಟ್ಟಹಾಸಕ್ಕೆ ದೇಶ ನಲುಗುತ್ತಿದ್ದ ಆ ವೇಳೆಯಲ್ಲಿ, ಅವರ ಪದತಲದಲ್ಲಿ ಹಿಂದೂ ಸರದಾರರೆಲ್ಲಾ ಮಂಡಿಯೂರಿ ಕುಳಿತಿದ್ದಾಗ, ಸ್ವಾತಂತ್ರ್ಯವೆಂಬುದೇ ಮರೀಚಿಕೆಯಾಗಿದ್ದಾಗ ತೋರಣಗಡವನ್ನು ತನ್ನ ಪೋರ ಸೇನೆಯೊಡನೆ ಮುತ್ತಿದ ಶಿವಾಜಿ ಒಂದು ಹನಿ ರಕ್ತವೂ ಚೆಲ್ಲದಂತೆ ಆ ಗಡವನ್ನು ಗೆದ್ದು ತಾಯಿ ಭಾರತಿಗೆ ತೋರಣ ಕಟ್ಟಿದ(1946). ಅಲ್ಲಿ ಭಗವಾ ಉನ್ನತೋನ್ನತವಾಗಿ ಹಾರಾಡತೊಡಗಿತು. "ಹರಹರ ಮಹಾದೇವ" ಎನ್ನುವ ರಣಘೋಷ ತೋರಣದ ಸ್ವತಂತ್ರ ಆಗಸದಲ್ಲಿ ಸಿಂಹ ಘರ್ಜನೆಯಂತೆ ಮೊಳಗಿತು. ಮುಂದೆ ಅದು ಅಷ್ಟ ದಿಕ್ಕುಗಳಿಗೂ ಹೊರಳಿ ವಿಂಧ್ಯಾದ್ರಿಗಳಲ್ಲೂ ಪ್ರತಿಧ್ವನಿಸಿ, ಇಂದ್ರಪ್ರಸ್ಥದ ಸಿಂಹಾಸನವನ್ನೂ ವಶಪಡಿಸಿಕೊಂಡು, ಯಮುನೆ ಸಿಂಧೂಗಳಲ್ಲೂ ಭೋರ್ಗರೆದು ವಾಯುವ್ಯ ಪರ್ವತಶಿಖರಾಗ್ರಗಳಲಿ ಅನುರಣಿಸಿ ಕಾಬೂಲ್ ನದಿಯ ಅಲೆಗಳ ಮಧುರ ಆಲಾಪನೆಯಲಿ ಬೆರೆಯಿತು.

             ಕೊಂಡಾಣ, ರಾಜಗಡ ಗೆಲ್ಲುತ್ತಿದ್ದಂತೆಯೇ ಅಪ್ಪ ಶಹಾಜಿಯನ್ನು ಸೆರೆ ಹಿಡಿದ ಸುದ್ದಿ ಸಿಡಿಲೆರಗಿದಂತೆ ಬಂತು.  ಮುಯ್ಯಿಗೆ ಮುಯ್ಯಿ ತೀರಿಸಲು ಹೊರಟ ಶಿವಾಜಿಗೆ ಸಿಕ್ಕಿದ್ದು ಪುರಂದರ ಗಡ ಎಂಬ ವರಪ್ರಸಾದ. ಫತ್ತೇಖಾನ ಪತ್ತೆ ಇಲ್ಲದಂತೆ ಓಡಿದರೆ, ಮುಸೇಖಾನನೆಂಬ ದೈತ್ಯನನ್ನು ಕತ್ತರಿಸಿ ಹಾಕಿದರು ಸ್ವರಾಜ್ಯದ ಪೋರರು. ಅಣ್ಣ ಸಂಭಾಜಿ ಫರ್ರಾದಖಾನನನ್ನು ಹೊಡೆದೋಡಿಸಿದ್ದ. ತಂದೆಯನ್ನು ಬಿಡಿಸಲು ಶಿವಾಜಿ ಹೂಡಿದ ತಂತ್ರವೇನು ಗೊತ್ತೇ? ನೇರ ದಿಲ್ಲಿಯ ಮೊಘಲ ದೊರೆ ಶಹಜಾಹಾನನಿಗೆ "ನಾನೂ, ನನ್ನ ತಂದೆಯೂ ನಿಮ್ಮ ಸೇವೆಗೆ ಸಿದ್ಧ, ಆದರೆ ನನ್ನ ತಂದೆಯನ್ನು ಬಿಜಾಪುರದ ಬಾದಶಹಾ ಮೋಸದಿಂದ ಸೆರೆಹಿಡಿದಿದ್ದಾನೆ. ಅವರು ಬಿಡುಗಡೆಯಾದಕೂಡಲೇ ತಮ್ಮ ಸೇವೆಗೆ ಹಾಜರಾಗುತ್ತೇವೆ" ಎಂದು ಪತ್ರ ಬರೆದ. ಇನ್ನೂ ಇಪ್ಪತ್ತು ದಾಟದ ಪೋರನ ರಾಜಕಾರಣದ ಕೌಶಲ್ಯ ನೋಡಿ! ಈ ಸುದ್ದಿ ಬಿಜಾಪುರದ ಸುಲ್ತಾನನಿಗೆ ಮುಟ್ಟಿದ್ದೇ ತಡ ಅವನು ಬೆದರಿ ಶಹಾಜಿಯನ್ನು ಸಮ್ಮಾನಪೂರ್ವಕವಾಗಿ ಬಿಡುಗಡೆ ಮಾಡಿದ. ಜಾವಳಿಯನ್ನು ವಶಪಡಿಸಿಕೊಂಡ ಶಿವಾಜಿ ಅಲ್ಲಿ ಅಭೇದ್ಯ ಕೋಟೆಯೊಂದನ್ನು ಕಟ್ಟಿದ. ಮಾತ್ರವಲ್ಲ ಬಿಜಾಪುರದ ಸುಲ್ತಾನರಿಂದ ಗೆದ್ದ ಕೋಟೆಗಳಿಗೆ ದಿಲ್ಲಿಯ ದೊರೆ ಔರಂಗಜೇಬನಿಂದ ಮಾನ್ಯತೆ ಪಡೆದುಕೊಂಡ. ತಕ್ಷಣವೇ ಔರಂಗಜೇಬನ ಅಧೀನದಲ್ಲಿದ್ದ ಜುನ್ನರಿನ ಅಪಾರ ಐಶ್ವರ್ಯವನ್ನು ಮಧ್ಯರಾತ್ರಿ ದೋಚಿ ಅಲ್ಲಿನವೇ ಏಳುನೂರು ಕುದುರೆಗಳ ಮೇಲೆ ಹೇರಿಕೊಂಡು ಪುರಂದರಕ್ಕೆ ಪರಾರಿಯಾದ. ಇದೇ ರೀತಿ ಅಹಮದ್ ನಗರದಲ್ಲೂ ತನ್ನ ಕರಾಮತ್ತು ತೋರಿಸಿದ. ತನಗೇ ಚಳ್ಳೆಹಣ್ಣು ತಿನ್ನಿಸಿದ ಶಿವಾಜಿಯ ಮೇಲೆ ಕೆರಳಿ ಯುದ್ಧ ಸಾರಬೇಕೆನ್ನುವಷ್ಟರಲ್ಲಿ ಶಿವಾಜಿಯ ಕ್ಷಮಾಪಣಾಪತ್ರ ತಲುಪಿತು. ಆದರೆ ಅದರಲ್ಲಿ ಗೆದ್ದುದನ್ನು ಹಿಂದಿರುಗಿಸುವ ಮಾತೇ ಇರಲಿಲ್ಲ!

                  ಬೆಟ್ಟದಿಲಿಯನ್ನು ಕ್ಷಣಮಾತ್ರದಲ್ಲಿ ಎಳೆದು ತರುತ್ತೇನೆಂದು ಜಂಭಕೊಚ್ಚಿಕೊಳ್ಳುತ್ತಾ, ಹತ್ತುಸಾವಿರ ಸೈನ್ಯಬಲದೊಡನೆ ಹೊರಟು, ದಾರಿಯುದ್ದಕ್ಕೂ ದೇವಾಲಯಗಳನ್ನು, ಹಿಂದೂ ಪ್ರದೇಶಗಳನ್ನು ನಾಶಮಾಡುತ್ತಾ ಬಂದ ದೈತ್ಯ ಅಫ್ಜಲಖಾನನನ್ನು ಪ್ರತಾಪಗಢದಲ್ಲಿ ದೀನನಂತೆ ಎದುರಿಸಿದ ಶಿವಾಜಿ. ಆಲಿಂಗಿಸಿಕೊಳ್ಳುವ ನೆಪದಲ್ಲಿ ಆ ದೈತ್ಯ ಬಿಗಿಯಾಗಿ ತೋಳಿನಲ್ಲಿ ಸಿಲುಕಿಸಿ ಚಾಕುವಿನಿಂದ ಇರಿದಾಗ ಮೇಲಂಗಿಯೊಳಗಿದ್ದ ಕವಚ ಶಿವಾಜಿಯನ್ನು ಕಾಪಾಡಿತು. ಇನ್ನೇನು ಉಸಿರುಗಟ್ಟಿ ಸತ್ತೇ ಹೋದ ಎಂದನ್ನುವಷ್ಟರಲ್ಲಿಯೇ ಮಿಂಚಿನ ವೇಗದಲ್ಲಿ ವ್ಯಾಘ್ರನಖದಿಂದ ಬೆಟ್ಟದಂತಿದ್ದ ಆ ದೈತ್ಯನ ಕರುಳು ಬಗಿದ ಶಿವಾಜಿ! ತನ್ನ ಕೋಟೆಗಳನ್ನೆಲ್ಲಾ ವಶಪಡಿಸಿಕೊಂಡು ವಿಜಯಗರ್ವದಿಂದ ಮೆರೆಯುತ್ತಾ ಬಂದ ಷೆಯಿಸ್ತಾಖಾನನ ಸಹಸ್ರಾರು ಸೈನಿಕರ ಭದ್ರ ಚಕ್ರ ವ್ಯೂಹಕ್ಕೆ ಮಾರುವೇಷದಿಂದ ತನ್ನ 400 ಪ್ರಚಂಡ ಅನುಚರರನ್ನು ನುಗ್ಗಿಸಿ ರಾತ್ರೋರಾತ್ರಿ ಆಕ್ರಮಣ ಮಾಡಿದ ಶಿವಾಜಿಯ ಪರಾಕ್ರಮಕ್ಕೆ ಷೆಯಿಸ್ತಾಖಾನ್ ಬೆರಳುಗಳನ್ನು ಕಡಿಸಿಕೊಂಡು ಉಟ್ಟಬಟ್ಟೆಯಲ್ಲೇ ಓಡಬೇಕಾಯಿತು! ಔರಂಗಜೇಬನ ಆಸ್ಥಾನದಲ್ಲುಂಟಾದ ಅವಮಾನದಿಂದ ಕುದಿದು ಸ್ಫೋಟಿಸಿದ. ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ತಿಂಡಿಯ ಬುಟ್ಟಿಯಲ್ಲಿ ಅಡಗಿ ಪಾರಾಗಿ ಹೊರಬಂದು ಯತಿವೇಷ ಧರಿಸಿ ತನ್ನ ಪಾಳಯ ಸೇರಿದ!

                  ಹೀಗೆ ಅವಶ್ಯಕತೆ ಉಂಟಾದಾಗ ಪರಾಕ್ರಮದಿಂದ, ಅವಕಾಶವಿದ್ದ ಕಡೆ ವ್ಯಾವಹಾರಿಕ ಜಾಣ್ಮೆ-ರಾಯಭಾರ-ಸೂಕ್ಷ್ಮ ರಾಜಕಾರಣಗಳಿಂದ ಬೇರೆ ದಾರಿಯೇ ಇಲ್ಲದಿದ್ದಾಗ ಕ್ರೌರ್ಯ-ಕಪಟಗಳಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಸ್ವರಾಜ್ಯಕ್ಕೆ ಜೋಡಿಸಿದ. ಇದಕ್ಕಾಗಿ ಸುಲ್ತಾನರ ನಡುವಿನ ವೈರುಧ್ಯಗಳನ್ನೂ, ಅವರಿಗೂ ಮೊಘಲ್ ಬಾದಷಹಾರಿಗೂ ಇದ್ದ ದ್ವೇಷವನ್ನೂ ಚೆನ್ನಾಗಿ ಬಳಸಿಕೊಂಡ. ಶಾಶ್ವತವಾದ ಮಿತ್ರತ್ವ-ಶತ್ರುತ್ವಗಳನ್ನು ಯಾರೊಂದಿಗೂ ಇರಿಸಿಕೊಳ್ಳದೆ ಪರಿಸ್ಥಿತಿಗೆ ತಕ್ಕಂತೆ ವ್ಯೂಹ ರಚಿಸಿ ಭಯಂಕರ ಯುದ್ಧಗಳನ್ನು ಮಾಡಿ ಅರಿಭಯಂಕರನಂತೆ ಕಾದಾಡಿ ಅನೇಕ ದಿಗ್ವಿಜಯಗಳನ್ನು ಸಂಪಾದಿಸಿದ. ಕೆಲವು ಕಡೆ ಸೋತ, ಕಾಲ ಪ್ರತಿಕೂಲವಾಗಿದ್ದಾಗ ಶರಣಾಗತನಾದ, ಬಲಿದಾನದ ಮಾರ್ಗ ತಳೆಯದೆ ಅಪಮಾನಕರ ರಾಜಿಗೂ ಸಿದ್ಧನಾದ. ಆದರೆ ಕಪಟನಾಟಕಗಳನ್ನಾಡಿ, ವ್ಯೂಹಕ್ಕೆ ಪ್ರತಿವ್ಯೂಹ ರಚಿಸಿ ಕೆಳಕ್ಕೆ ಬಿದ್ದುದಕ್ಕಿಂತಲೂ ವೇಗವಾಗಿ ಪುಟಿದೆದ್ದ. ಇಡೀ ಭಾರತವನ್ನು ಏಕಚ್ಛತ್ರವಾಗಿ ಆಳಿ ಪ್ರಪಂಚದಲ್ಲೆಲ್ಲಾ ಬಲಿಷ್ಟವೆನಿಸಿಕೊಂಡಿದ್ದ ಮೊಘಲ್ ಸಾಮ್ರಾಜ್ಯವನ್ನು ಗಡಗಡ ನಡುಗಿಸಿ ಪಟ್ಟಾಭಿಷಿಕ್ತನಾಗಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಶ್ರೇಷ್ಠ ಚರಿತ್ರೆಯನ್ನು ಸೃಷ್ಟಿಸಿದ. ಹೌದು, ತನ್ನ ಅಪಾರ ಸಂಪನ್ಮೂಲವನ್ನು, ಅಜೇಯ ಯೋಧ ಶಕ್ತಿಯನ್ನೂ, ಸರ್ವಶಕ್ತಿಯನ್ನೂ ವಿನಿಯೋಗಿಸಿ ಜೀವನಪರ್ಯಂತ ಬಿರುಗಾಳಿಯಂತೆ ಬೆನ್ನಟ್ಟಿದರೂ ಔರಂಗಜೇಬನಂಥ ಚಕ್ರವರ್ತಿಗೇ ಪ್ರಚಂಡ "ಶಿವ"ಶಕ್ತಿಯನ್ನು ತಡೆಯಲಾಗಲಿಲ್ಲ. ಸ್ವತಃ ಔರಂಗಜೇಬನೇ ಶಿವಾಜಿ ಐವತ್ತಮೂರರ ಕಿರಿವಯಸ್ಸಿನಲ್ಲಿ ಶಿವಾಜಿ ಅಕಾಲ ಮರಣಕ್ಕೊಳಗಾದ ಸುದ್ದಿ ಕೇಳಿ "ಅವನು ಮಹಾ ನಾಯಕ. ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಬೇಕೆಂದು ನಾನು ಪ್ರಯತ್ನಿಸುತ್ತಿದ್ದಾಗ ಹೊಸ ರಾಜ್ಯವನ್ನು ಸ್ಥಾಪಿಸಿದ ಧೀರೋದಾತ್ತ ಮನುಷ್ಯ ಅವನೊಬ್ಬನೇ. ಹತ್ತೊಂಬತ್ತು ವರ್ಷಗಳ ಕಾಲ ನನ್ನ ಸೇನೆಗಳೆಲ್ಲವನ್ನೂ ಅವನ ಮೇಲೆ ಪ್ರಯೋಗಿಸಿದರೂ ಅವನ ರಾಜ್ಯ ಮಾತ್ರ ವಿಸ್ತರಿಸುತ್ತಲೇ ಹೋಯಿತು" ಎಂದಿದ್ದಾನೆ.

                 1674ರ ಆನಂದ ನಾಮ ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿ. ಗಾಗಾ ಭಟ್ಟರು ಕಾಶಿಯಿಂದ ಬಂದಿಳಿದರು. ಸಾವಿರಕ್ಕೂ ಹೆಚ್ಚಿನ  ಪ್ರಾಜ್ಞ ಬ್ರಾಹ್ಮಣರು ರಾಯಗಢ ಸೇರಿದರು. ಸೇರಿದ್ದ ಅತಿಥಿಗಳ ಸಂಖ್ಯೆಯೇ ಇಪ್ಪತ್ತುಸಾವಿರಕ್ಕೂ ಅಧಿಕ. ಅಸಂಖ್ಯ ಸಾಧು ಸಂತರ ಸಮ್ಮುಖದಲ್ಲಿ, ವೇದಮಂತ್ರ ಘೋಷ ಹಾಗೂ ಸಹಸ್ರಾರು ಗಣ್ಯರ, ಕೋಟ್ಯಾಂತರ ಜನರ ಜಯಘೋಷಗಳ ನಡುವೆ ರಾಜಮಾತೆ ಜೀಜಾಬಾಯಿಯ ವಾತ್ಸಲ್ಯ ನೋಟ-ಅಂಬಾಭವಾನಿಯ ಕರುಣಾ ದೃಷ್ಟಿ-ಆಶೀರ್ವಾದಗಳನ್ನು ಪಡೆದು ಕೋದಂಡಧಾರಿಯಾಗಿ ರತ್ನಖಚಿತ ಸಿಂಹಾಸನವನ್ನೇರಿದರು ಶಿವಾಜಿ. ಸ್ವಯಂಭೂ ಛತ್ರಪತಿ ಎನಿಸಿಕೊಂಡರು. ತೋರಣಗಢ ಬೆಳಗಿತು. ಮಂಗಳವಾದ್ಯ ಮೊಳಗಿತು. ವೇದಪಠಣ ಆರಂಭವಾಯಿತು. ಹೈಂದವೀ ಸ್ವರಾಜ್ಯದ ಕನಸು ನನಸಾಯಿತು. ದಿಲ್ಲಿ ದಿಙ್ಮೂಢವಾಯಿತು. ಬಿಜಾಪುರ ಬೆದರಿತು. ಛತ್ರಪತಿಯ ಮೇಲೆ ಸುವರ್ಣವೃಷ್ಟಿಯಾಯಿತು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಹಿಂದೂಸ್ಥಾನದ ರಾಜರ ಪೈಕಿ ಅರ್ಧ ಸಹಸ್ರ ವರ್ಷಗಳ ನಂತರ ಶಿವಾಜಿಯೇ ಪ್ರಪ್ರಥಮವಾಗಿ ನೌಕಾಬಲ ಕಟ್ಟಿದರು. ವಿಜಯದುರ್ಗವೆಂಬ ಜಲದುರ್ಗ ಕಟ್ಟಿದರು. ತೀರಾ ಅಲ್ಪ ಅವಧಿಯಲ್ಲೇ ಆಂಗ್ಲ, ಪೋರ್ಚುಗೀಸ್, ಜಂಜಿರ ಮುಂತಾದ ಹೆಸರಾಂತ ಸಮುದ್ರ ಶಕ್ತಿಗಳನ್ನು ಸೋಲಿಸಿದರು. ರಾಜ್ಯ ಶಿವಾಜಿಯದ್ದಲ್ಲ, ಧರ್ಮದ್ದು ಎಂಬ ಸಮರ್ಥ ರಾಮರ ಮಾತನ್ನು ಶಿರಸಾವಹಿಸಿದ ಸ್ಥಿತಪ್ರಜ್ಞ, ನಿಸ್ಪೃಹ ರಾಜರ್ಷಿ ಶಿವಾಜಿ! ಬೆಂಕಿಯಂತಹ ಚಾರಿತ್ರ್ಯದೊಂದಿಗೆ, ವಾಸ್ತವಿಕ ಕಾರ್ಯಕ್ಷಮತೆಯೊಂದಿಗೆ, ರಾಜಕೀಯ ದೂರದೃಷ್ಟಿಯೊಂದಿಗೆ ರಾಷ್ಟ್ರದ ಜನತೆಗೆ ಮಹಾನ್ ಪ್ರೇರಣೆ ನೀಡಿದರು ಶಿವಾಜಿ. ಹಿಂದುತ್ವದ ವಟವೃಕ್ಷವು ಪರರ ದಮನದ ಭಾರಕ್ಕೆ ಸಾಯದೆ ಮತ್ತೆ ಚಿಗುರೊಡೆದು, ದಾಸ್ಯದ ಪದರುಪದರುಗಳನ್ನೆಲ್ಲಾ ದೂರಕ್ಕೆಸೆದು ಎತ್ತರೆತ್ತರಕ್ಕೆ ಬೆಳೆದು ಗಗನಚುಂಬಕವಾಗಿ ನಿಲ್ಲಬಲ್ಲುದೆಂದು ಶ್ರುತಪಡಿಸಿದರು ಶಿವಾಜಿ. ಆದರ್ಶ ರಾಜನೊಬ್ಬ ಹೇಗಿರಬೇಕೆಂದು ತನ್ನ ಜೀವನದ ಮೂಲಕ ತೋರಿಸಿಕೊಟ್ಟರು ಶಿವಾಜಿ.

ಬುಧವಾರ, ಮೇ 27, 2015

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೨

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೨


                  ಇಪ್ಪತ್ತೊಂದನೆಯ ಶತಮಾನದಲ್ಲಿ ಹಲವು ಪದಗಳ ವ್ಯಾಖ್ಯೆ ಬದಲಾಗಿದೆ. ಯಾರು ಭಯೋತ್ಪಾದಕನನ್ನು ಅಮಾಯಕನೆಂದು ಕರೆದು ಪಾಪದ ಹಿಂದೂವನ್ನು ತುಳಿದು ತನ್ನ ಅನ್ನ ಗಳಿಸಿಕೊಳ್ಳುತ್ತಾನೋ ಅವನು ಸೆಕ್ಯುಲರ್! ಯಾರು ತನ್ನನ್ನು ತಾನು ಮಹಾಮಾನವತಾವಾದಿಯೆಂದು ಕರೆಯಿಸಿಕೊಳ್ಳುತ್ತಾನೋ ಅವನು ದಾನವ ಪ್ರೇಮಿ! ಅಬುಲ್ ಫಜಲನಿಗಾದರೂ ಅಕ್ಬರನನ್ನು ಹೊಗಳಲು ಅನ್ನದ ಋಣವಿತ್ತು. ಸ್ವಾಮಿನಿಷ್ಠೆಯ ಪರಾಕಾಷ್ಟತೆಯಿತ್ತು! ಆದರೆ ಚಪಲ ಚೆನ್ನಿಗ ರಾಯ ನೆಹರೂವಿಗೇನಿತ್ತು? ICHR ಎಂಬ ಸಂಸ್ಥೆಯಲ್ಲಿ ದಶಕಗಳ ಪರ್ಯಂತ ರಾಜ್ಯಭಾರ ನಡೆಸಿ ದೇಶದ ಸಂಪತ್ತನ್ನು ತಿಂದು ತೇಗಿದ ಮಹಾನ್ ಇತಿಹಾಸಕಾರರಿಗೆ ಇತಿಹಾಸವನ್ನು ತಿರುಚುವ ಅಗತ್ಯವೇನಿತ್ತು? ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ ಅನ್ನುವುದು ಕಳೆದ ಅರವತ್ತೈದು ವರ್ಷಗಳಲ್ಲಿ ಭಾರತದ ಮಟ್ಟಿಗಂತೂ ಸತ್ಯವಾಗಿಬಿಟ್ಟಿದೆ. ಇಲ್ಲದಿದ್ದಲ್ಲಿ ಮಹಾಕ್ರೂರಿಯೊಬ್ಬನನ್ನು ದಯಾಪರ ಎಂದು ಹೊಗಳಿದುದನ್ನೇ ಕಣ್ಣುಮುಚ್ಚಿ ಉರುಹೊಡೆದ ಈ ದೇಶೀಯರ ಸತ್ವ ಎಲ್ಲಿ ಅಡಗಿಹೋಗಿತ್ತು. ಅದನ್ನು ಉದ್ದೀಪಿಸಲು ಶಿವಾಜಿ-ಸಾವರ್ಕರರೇ ಮತ್ತೊಮ್ಮೆ ಧರೆಗಿಳಿಯಬೇಕೇನೋ?

                    ಅಧಂ ಖಾನ್. ಅಕ್ಬರನನ್ನು ಸ್ವಂತಮಗನಂತೆ ಸಾಕಿದ ಮಹಮಾನಗಾಳ ಮಗ. ಅನೇಕ ಯುದ್ಧಗಳಲ್ಲಿ ಬಲಗೈ ಬಂಟನಂತೆ ಅಕ್ಬರನಿಗೆ ಸಹಾಯ ಮಾಡಿದ ವೀರ. ಒಂದು ಅಕ್ಬರ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಏನೋ ಗದ್ದಲ ಕೇಳಿತು. ಏನೆಂದು ವಿಚಾರಿಸಿದಾಗ ವಜೀರ ಅದಗಾ ಖಾನನನ್ನು ಕೊಂದು ಅಧಂಖಾನ್ ಅರಸನನ್ನು ಕೊಲ್ಲಲು ಬರುತ್ತಿರುವನೆಂದು ಯಾರೋ ಕಿವಿಯೂದಿದರು. ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ ಅಕ್ಬರ್ ಅಧಂಖಾನನ ಮೇಲೇರಿ ಹೋದ. ಅಧಂಖಾನ್ ನಡೆದುದನ್ನು ವಿಶದೀಕರಿಸುತ್ತೇನೆಂದು ಪರಿಪರಿಯಾಗಿ ಕೋರಿದರೂ ಕೇಳದೆ ಅವನ ಮುಖದ ಮೇಲೆ ಗುದ್ದಿದ. ಜ್ಞಾನ ತಪ್ಪಿ ಬಿದ್ದ ಆತನನ್ನು ಹಗ್ಗಗಳಿಂದ ಕಟ್ಟಿ ಅರಮನೆಯ ಮೇಲಿಂದ ಕೆಳಗೆಸೆಯಿರೆಂದು ಆಜ್ಞೆ ಮಾಡಿದ. ಸೇವಕರು ಆತನನ್ನು ಕೊಲ್ಲಲು ಇಷ್ಟವಿಲ್ಲದೆ ಕೆಳಕ್ಕೆ ಜಾರಿಬಿಟ್ಟರು. ಆದರೆ ಈ ದಯಾಪರ ಬಿಡಬೇಕೇ! ಸತ್ತನೋ ಇಲ್ಲವೋ ನೋಡಿರಂದು ಆಜ್ಞೆ ಮಾಡಿದ. ಅರೆಜೀವವಾಗಿದ್ದಾನೆಂದು ತಿಳಿದೊಡನೆ ಅವನ ಜುಟ್ಟು ಹಿಡಿದು ಮೇಲಕ್ಕೆಳೆದು ತಲೆ ಹೋಳಾಗುವಂತೆ ಕೆಳಕ್ಕೆ ಬಿಸಾಕಲು ಆಜ್ಞಾಪಿಸಿದ. ಅದು ಅಕ್ಬರ್ ತನ್ನ ಸಹವರ್ತಿಯೊಬ್ಬನಿಗೆ ಪರಿಪಾಲಿಸಿದ ಸಮುಚಿತ ನ್ಯಾಯ!

                    ಆ ದಿನ ದೀಪ ಹಚ್ಚುವ ನೌಕರನಿಗೇ ದೀಪ ಹಚ್ಚಬೇಕಾಯಿತು. ಕಾರಣವಿಷ್ಟೇ, ಅರಸ ನಿದ್ದೆಯಿಂದ ಬೇಗ ಎಚ್ಚರಗೊಂಡುದುದು! ಅರಸ ಎದ್ದಾಗ ಸೇವಕರ್ಯಾರೂ ಕಾಣಲಿಲ್ಲ. ದೀಪ ಹಚ್ಚುವ ಸೇವಕನೊಬ್ಬ ಮೂಲೆಯಲ್ಲಿ ಮುದುಡಿ ಮಲಗಿದ್ದ. ಸಿಡಿಮಿಡಿಗೊಂಡ ಅರಸ ಆತನನ್ನು ರಾಜಗೋಪುರದಿಂದ ಕೆಳಕ್ಕೆ ಎಸೆಯುವಂತೆ ಆಜ್ಞಾಪಿಸಿದ. ಇತಿಹಾಸದಲ್ಲಿ ದೀಪ ಹಚ್ಚುವ ಸೇವಕನೊಬ್ಬನನ್ನು ನಿದ್ದೆ ಮಾಡುವ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗೆ ಗೋಪುರದ ಕೆಳಕ್ಕೆಸೆದು ಸಾಯಿಸಿದ ಮಹಾಮಾನವತಾವಾದಿ ಧರ್ಮಪ್ರಭು ಅಕ್ಬರನೊಬ್ಬನೆ! 1565ರಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಂದ ಅಕ್ಬರನನ್ನು ದಯಾಪರ ಎಂದು ಕರೆದ ನೆಹರೂವೇ ಧನ್ಯ!

                        ಉಪಕಾರ ಮಾಡಿದವರಿಗೆ ಕೇಡನ್ನುಂಟುಮಾಡುವುದು ಅಕ್ಬರನಿಗೆ ವಂಶಪಾರಂಗತವಾಗಿ ಬಂದ ವಿದ್ಯೆ. ಅಕ್ಬರನ ತಂದೆ ಹುಮಾಯೂನ್ ತನ್ನ ಸ್ವಂತ ತಮ್ಮನ ಕಣ್ಣುಗಳನ್ನೇ ಶೂಲದಿಂದ ಕೀಳಿಸಿ ಉಪ್ಪು, ನಿಂಬೆರಸಗಳನ್ನು ತುಂಬಿಸಿದ್ದ. ಚಿಕ್ಕವಯಸ್ಸಿನಲ್ಲಿ ತಂದೆ ಸತ್ತಾಗ ದಿಕ್ಕುಕಾಣದ ಅಕ್ಬರನನ್ನು ತನ್ನ ಭುಜಗಳ ಮೇಲೆ ಕೂರಿಸಿಕೊಂಡು ವ್ಯೂಹ ರಚಿಸಿ ಗೆದ್ದು ಅಕ್ಬರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದವ ಭೈರಾಂಖಾನ್. ಆದರೆ ಅಧಿಕಾರ ಸೂತ್ರಗಳ ಮೇಲೆ ಸ್ವಲ್ಪ ಹಿಡಿತ ಸಿಗುತ್ತಿದ್ದಂತೆ ಭೈರಾಂಖಾನನಿಗೇ ಗುಂಡಿ ತೋಡಿದ ಅಕ್ಬರ್! ಸಿಕಂದರ್ ಅಪ್ಘನ್ನನನ್ನು ಸೋಲಿಸಿ ಲಾಹೋರಿನಿಂದ ದಿಲ್ಲಿಗೆ ಹಿಂದಿರುಗಿ ಬರುತ್ತಿದ್ದಾಗ ಮಾನ್ ಕೋಟ್ ಎಂಬಲ್ಲಿ ಸೇನೆ ಬೀಡು ಬಿಟ್ಟಿದ್ದಾಗ ಭೈರಾಂಖಾನ್ ಮೈಮೇಲೆಲ್ಲಾ ಗುಳ್ಳೆಗಳಾಗಿ ಡೇರೆಯಲ್ಲಿ ಮಲಗಿದ್ದ. ಆ ಡೇರೆಯ ಮೇಲೆ ಅರಸನಿಗೆ ಸೇರಿದ ಆನೆಗಳೆರಡು ದಾಳಿ ಮಾಡಹೊರಟವು. ಭೈರಾಂಖಾನ್ ಆ ಸಮಯದಲ್ಲಿ ಬದುಕುಳಿದನಾದರೂ ಆತನ ಪರಿಸ್ಥಿತಿ ನೆಟ್ಟಗಿರಲಿಲ್ಲ. ಆತ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆಂದು ಕೇಳಲು ಅರಸನಲ್ಲಿಗೆ ಕಳುಹಿಸಿದ ದೂತನಿಗೆ ಯಾವ ಪ್ರತ್ಯುತ್ತರವೂ ಸಿಗಲಿಲ್ಲ. ಈ ಘಟನೆಯಿಂದ ಬೇಸರಗೊಂಡು ಭೈರಾಂಖಾನ್ ಮೆಕ್ಕಾಗೆ ಹೊರಟಾಗ ಗುಜರಾತಿನ ಸಹರ್ವಾಲದಲ್ಲಿ ಅಕ್ಬರನ ಕಟುಕರು ಭೈರಾಂಖಾನನ ರುಂಡ ಚೆಂಡಾಡಿದರು. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅದು ಹೋಗಿ ನಿಲ್ಲುವುದು ಸಲೀಮಾ ಸುಲ್ತಾನ ಬೇಗಂಳ ಬಳಿ! ಆಕೆ ಮತ್ಯಾರಲ್ಲ, ಭೈರಾಂಖಾನನ ಹೆಂಡತಿ, ಅಕ್ಬರನಿಗೆ ಗುರುಪತ್ನಿಯ ಸಮಾನಳು! ಆದರೇನು ಭೈರಾಂಖಾನನ ಗೋರಿಯ ಮೇಲೆ ಹುಲ್ಲುಸಹಾ ಬೆಳೆಯುವ ಮೊದಲೇ ಅಕ್ಬರ ಅವಳನ್ನು ಮದುವೆ ಮಾಡಿಕೊಂಡ!

                    ಅಕ್ಬರ್ ಒಬ್ಬ ಸ್ತ್ರೀಲೋಲುಪ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. "ನಿನ್ನ ಹೆಂಡತಿ ನನಗಿಷ್ಟವಾಗಿದ್ದಾಳೆ, ಅವಳನ್ನು ನನ್ನ ಅಂತಃಪುರಕ್ಕೆ ಕಳುಹಿಸು ಎಂದು ಆದೇಶ ನೀಡುತ್ತಿದ್ದ ಧರ್ಮಪ್ರಭು ಅವನು. ನಿರಾಕರಿಸಿದಾತನ ರುಂಡ ಮುಂಡ ಬೇರೆಬೇರೆಯಾಗುತ್ತಿದ್ದುದು ದಿಟ! ಬಹಳಷ್ಟು ಜನ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ದುರ್ವಿಧಿಗೆ ತಲೆಬಾಗುತ್ತಿದ್ದರು. ಅಕ್ಬರನ ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ದಿಲ್ಲಿಯ ಜನಸಾಮಾನ್ಯರ ಮನೆಯ ಮಂಚದವರೆಗೂ! ಕೆಲಕಾಲ ಸುಮ್ಮನಿದ್ದ ಜನತೆ ತಿರುಗಿಬಿದ್ದಿತು. 1564ರಲ್ಲಿ ದಿಲ್ಲಿಯ ಷೇಕ್ ಒಬ್ಬನನ್ನು ನಿನ್ನ ಹೆಂಡತಿಗೆ ವಿಚ್ಛೇದನ ಕೊಡು; ನನಗವಳು ಬೇಕು ಎಂದು ಅಕ್ಬರ್ ಒತ್ತಾಯಿಸಿದ. ಕೆಲವೇ ದಿನಗಳಲ್ಲಿ ಅಕ್ಬರ್ ರಾಜಬೀದಿಯಲ್ಲಿ ಸುತ್ತುತ್ತಿದ್ದಾಗ ಉಲಾದ್ ಎಂಬ ಗುಲಾಮನೊಬ್ಬ ಮನೆಯ ಮಾಳಿಗೆಯಂದರಿಂದ ಅಕ್ಬರನ ಮೇಲೆ ಬಾಣ ಬಿಟ್ಟ. ಅದು ಅಕ್ಬರನ ಭುಜಕ್ಕೆ ತಗುಲಿ ಗಾಯವಾಯಿತು. ರಾಜಭಟರು ಆತನನ್ನು ಅಲ್ಲಿಯೇ ತುಂಡರಿಸಿ ಎಸೆದರು. ಈ ಹತ್ಯಾಪ್ರಯತ್ನದ ನಂತರ ಅಕ್ಬರನ ಮರ್ಯಾದೆಗೆಟ್ಟ ಹುನ್ನಾರಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ಅದಕ್ಕಾಗಿಯೇ ತನ್ನ ರಾಜ್ಯದಲ್ಲಿ ಮೀನಾ ಬಜಾರ್" ವ್ಯವಸ್ಥೆಯನ್ನು ಪೋಷಿಸಿದ. ಹೊಸವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಅಲ್ಲಿ ನಡೆಯುತ್ತಿದ್ದ ನೌರೋಜ್ ಉತ್ಸವದಲ್ಲಿ ಹಿಂದೂ ಸಾಮಂತ ರಾಜರೆಲ್ಲಾ ಒಂದೊಂದು ಅಂಗಡಿ ತೆರೆದು ತಮ್ಮ ರಾಜ್ಯದಲ್ಲಿನ ರೂಪವತಿಯರನ್ನೆಲ್ಲಾ ಪ್ರದರ್ಶನಕ್ಕಿಡಬೇಕಾಗಿತ್ತು. ಮಹಾರಾಜ ಪ್ರತಿಯೊಂದು ಅಂಗಡಿ ವೀಕ್ಷಿಸಿ ತನಗೆ ಬೇಕಾದವರನ್ನು ಜನಾನಕ್ಕೆ ಅಟ್ಟುತ್ತಿದ್ದ!

                 ತನಗೆ ಇಷ್ಟವೆನಿಸಿದ ರಾಜಪ್ರಮುಖರ ಪತ್ನಿಯರನ್ನು, ಇತರ ಸ್ತ್ರೀಯರನ್ನು ಅಜೀರ್ಣವೆನಿಸುವ ತನಕ ಮನಸೋ ಇಚ್ಛೆ ಅನುಭವಿಸುತ್ತಿದ್ದ ಎಂದು ಸ್ವತಃ ಅಕ್ಬರನ ಸ್ವಾಮಿನಿಷ್ಠ ಸೇವಕ ಅಬುಲ್ ಫಜಲ್ ಬರೆದಿದ್ದಾನೆ. ಮೀನಾ ಬಜಾರಿನಿಂದ ವರ್ಷ ವರ್ಷ ಹಿಂದೂ ಸ್ತ್ರೀಯರನ್ನು ಸಾಗಿಸಿಕೊಂಡು ಬರುತ್ತಿದ್ದ ಕಾರಣ, ತಾನು ಸೋಲಿಸಿದ ರಜಪೂತರಿಂದ ಕನಿಷ್ಟ ಸಂಖ್ಯೆಯ ಹೆಣ್ಣುಗಳನ್ನು ತನ್ನ ಅಂತಃಪುರಕ್ಕೆ ಕಳುಹಿಸಿಕೊಡಬೇಕೆಂಬ ಕರಾರು ಮಾಡಿಕೊಳ್ಳುತ್ತಿದ್ದರ ಫಲವಾಗಿ, ಹಾಗೂ ಕಂಡ ಕಂಡವರ ಹೆಂಡಿರ ಮೇಲೆ ಕಣ್ಣು ಹಾಕುತ್ತಿದ್ದರಿಂದ ಈ ಸ್ತ್ರೀಲಂಪಟನ ರಾಣಿವಾಸವೆಂಬುದು ಎಮ್ಮೆದೊಡ್ಡಿಯಂತಾಗಿತ್ತು. ಅಲ್ಲದೆ ಚಕ್ರವರ್ತಿಗೆ ದಯೆ ಬಂದರೆ ಯಾವುದೇ ವಿಭಾಗಗಳ ಯಾವುದೇ ಪ್ರಮುಖ ಯಾವ ಅಂತಃಪುರ ಸ್ತ್ರೀಯರನ್ನಾದರೂ ಇಷ್ಟಾನುಸಾರ ಭೋಗಿಸಬಹುದಾಗಿತ್ತು ಎಂದಿದ್ದಾನೆ ಫಜಲ್! ಇದನ್ನು ವಿನ್ಸೆಂಟ್ ಸ್ಮಿತ್ ಕೂಡಾ ಸ್ಪಷ್ಟಪಡಿಸುತ್ತಾ ಅಕ್ಬರನ ದಾಖಲೆಗಳನ್ನು ನೋಡಿದರೆ ಅವನು ಒಬ್ಬಳು ಪತ್ನಿಗೆ ಸೀಮಿತಗೊಂಡ ಅಸಾಮಿಯಲ್ಲ ಎಂದಿದ್ದಾನೆ. ಇನ್ನು ರಜಪೂತರ ಒಲವನ್ನು ಗಳಿಸುವ ಹುನ್ನಾರದಿಂದ ಅವರ ಕನ್ಯೆಯರನ್ನು ತನ್ನ ರಾಜಪ್ರಮುಖರಿಗೋ, ಸರದಾರರಿಗೋ ಮದುವೆ ಮಾಡಿಸುತ್ತಿದ್ದನಷ್ಟೇ. ಆ ಹುಡುಗಿಯರ ಸ್ಥಿತಿ ಏನಾಗುತ್ತಿತ್ತು ಎನ್ನುವುದು ಆ ಕಾಲದಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅವಳು ಅರಸನ ಕಾಮದೃಷ್ಟಿಗೆ ಬಿದ್ದರೆ ಮುಗಿಯಿತು; ಇಲ್ಲವಾದಲ್ಲಿ  ಕಟ್ಟಿಕೊಂಡವನು ಯಾರ ಕೈಗೆ ಒಪ್ಪಿಸಿದರೆ ಅವನೊಂದಿಗೆ ಎಷ್ಟುಕಾಲ ಒಪ್ಪಿಸೆಂದರೆ ಅಷ್ಟು ಕಾಲ ವ್ಯಭಿಚಾರ ಮಾಡುವುದೇ ಆ ಸ್ತ್ರೀಯರು ಅನುಭವಿಸಿದ ರಾಣೀವಾಸ! ಹಾಗಂತ ಎಲ್ಲಾ ರಜಪೂತ ಅರಸರು ಅಧಿಕಾರ, ಲಾಭದಾಸೆಗೆ ಬಲಿಬಿದ್ದು ತಮ್ಮವರ ಮಾನ ಕಳೆದುಕೊಳ್ಳಲು ಬಿಡಲಿಲ್ಲ; ಮೇವಾಡದ ಸ್ತ್ರೀಯರು ಮಾನವೇ ಪ್ರಾಣಕ್ಕಿಂತಲೂ ಶ್ರೇಷ್ಠವೆಂದು ಸಾಮೂಹಿಕವಾಗಿ ಚಿತೆಗೆ ಹಾರಿ "ಜೋಹರ್" ಮಾಡಿಕೊಂಡರು. ಸತೀಸಹಗಮನ ಪದ್ದತಿ ಆರಂಭವಾದದ್ದೇ ಕಾಮುಕ ಮೊಘಲರ ಅಟ್ಟಹಾಸದಿಂದ ಮಾನ ಉಳಿಸಿಕೊಳ್ಳಲು.

                    ಹಿಂದೂ ಸ್ತ್ರೀಯರನ್ನು ವಿವಾಹವಾಗುವುದು ಅಕ್ಬರನ ಸೆಕ್ಯುಲರ್ ನೀತಿಯೆಂದು, ಹಿಂದೂ ಮುಸ್ಲಿಮ್ ಐಕ್ಯತೆಗೆ ದಾರಿದೀಪವೆಂದು ಬೊಂಬಡಾ ಬಜಾಯಿಸುವ "ಮಹಾನ್ ಇತಿಹಾಸಕಾರರು" 1568ರಲ್ಲಿ ವಂಚನೆಯಿಂದ ರಣಥಂಬೋರ್ ಕೋಟೆಯನ್ನು ಅಕ್ಬರ್ ವಶಪಡಿಸಿಕೊಂಡಾಗ ಉಂಟಾದ ಒಡಂಬಡಿಕೆಯನ್ನು ಗಮನಿಸುವುದೊಳಿತು. ಅಕ್ಬರನಿಗೂ ಸರ್ಜನರಾಯನಿಗೂ ನಡೆದ ಸಂಧಿಯ ಒಪ್ಪಂದದಲ್ಲಿ ಅರಸನ ಅಂತಃಪುರಕ್ಕೆ ವಧುಗಳನ್ನು ಕಳುಹಿಸುವ ಪದ್ದತಿಯಿಂದ ಬುಂದಿ ರಾಜ್ಯಪಾಲಕರಿಗೆ ವಿನಾಯಿತಿ ಇರುತ್ತದೆಂದೂ, ಮೀನಾಬಜಾರಿನ ಅಂಗಡಿಗಳಲ್ಲಿ ತಮ್ಮ ವಧುಗಳನ್ನು ಕಳುಹಿಸುವ ಕಾರ್ಯದಿಂದ ವಿನಾಯಿತಿ ಇರುತ್ತದೆಂಬುದೇ ಮುಖ್ಯ ಷರತ್ತುಗಳಾಗಿದ್ದವು. ಅಲ್ಲದೆ ಹಿಂದೂ ಮುಸ್ಲಿಮ್ ಐಕ್ಯತೆಗೆ ಶ್ರಮಿಸಿದ್ದನೆನ್ನುವ ಅಕ್ಬರ್ ಎಷ್ಟು ಮೊಘಲ ಸ್ತ್ರೀಯರನ್ನು ಹಿಂದೂಗಳಿಗೆ ಮದುವೆ ಮಾಡಿಸಿದ್ದ?

-ಮುಂದುವರಿಯುವುದು

ಶುಕ್ರವಾರ, ಮೇ 22, 2015

ಬುದ್ಧಿ

ಬುದ್ಧಿಯನ್ನು ಹದಿನಾರು ಪರ್ಯಾಯ ಹೆಸರುಗಳಿಂದ ಉಪನಿಷತ್ತುಗಳಲ್ಲಿ ಕರೆಯಲಾಗಿದೆ. ಸಂಜ್ಞಾನ, ಆಜ್ಞಾನ, ವಿಜ್ಞಾನ, ಪ್ರಜ್ಞಾನ, ಮೇಧಾ, ದೃಷ್ಟಿ, ಧೃತಿ, ಮತಿ, ಮನಿಷಾ, ಜೂತಿ, ಸ್ಮೃತಿ, ಸಂಕಲ್ಪ, ಕ್ರತು, ಅಸು, ಕಾಮ, ವಶ ಇವೇ ಆ ಹದಿನಾರು ಹೆಸರುಗಳು!
* ಪ್ರಜ್ಞಾನ : ಪರಿಪೂರ್ಣ ಜ್ಞಾನ
*ಸೂಚನೆಗಳಿಗೆ ಸ್ಪಂದಿಸುವ ಕಾರಣ ಅದು "ಸಂಜ್ಞಾನ"
*ಪ್ರಯೋಗಕ್ಕಿಳಿದಾಗ ಮನಸ್ಸಿನಲ್ಲಿ ಬೋಧ್ಯವಾಗುವ ಕಾರಣ "ಆಜ್ಞಾನ"
*ವಸ್ತುವಿನ ಪರಿಪೂರ್ಣ ಅರಿವು ಇರುವ ಕಾರಣ ಅದು "ವಿಜ್ಞಾನ"
*ಗ್ರಹಣ ಶಕ್ತಿ ಅದಕ್ಕಿರುವುದರಿಂದ "ಮೇಧಾ"
*ಪಡೆದ ಅನುಭವವನ್ನು ದಾಖಲಿಸುವ ಸಾಮರ್ಥ್ಯ ಇರುವುದರಿಂದ ಅದು "ಧೃತಿ"
*ಮನನದ ಸಾಮರ್ಥ್ಯದಿಂದಾಗಿ "ಮತಿ"
*ತಿಳಿದುಕೊಳ್ಳಬೇಕೆಂಬ ಇಚ್ಛೆ ಇರುವುದರಿಂದ "ಮನಿಷಾ"
*ಉಪಾಸನೆ ಮೂಲಕ ಚಲಿಸುವ ಕಾರಣ "ಜೂತಿ"
*ಧ್ಯಾನದಿಂದ ತೆರೆದುಕೊಳ್ಳುವ ಗುಣದಿಂದಾಗಿ "ಸ್ಮೃತಿ"
*ನಿರ್ಧಾರವನ್ನು ತೆಗೆದುಕೊಳ್ಳಬಹುದಾದ ಕಾರಣ "ಸಂಕಲ್ಪ"
*ಎಲ್ಲಾ ಕೃತಿ ಹಾಗೂ ಯಜ್ಞಗಳಿಗೆ ಪ್ರೇರಣೆಯಾದುದರಿಂದ ಅದು "ಕ್ರತು"
*ಚಿತ್ತ ಹಾಗೂ ಅಹಂಕಾರಗಳನ್ನು ಉಪಾಸನೆಗೊಳಪಡಿಸುವ ಕಾರಣ ಅದು "ವಸು"
*ಬಯಕೆಯನ್ನು ಹೊಂದಿರುವ ಕಾರಣ ಅದು "ಕಾಮ"
*ಜಗತ್ತಿನ ಎಲ್ಲಾ ಜ್ಞಾನಗಳನ್ನು ವಶಪಡಿಸಿಕೊಳ್ಳಬಹುದಾದ ಕಾರಣ ಅದು "ವಶ"
ವಿಶೇಷ ಏನಂದರೆ ಬುದ್ಧಿಯಲ್ಲಿ ಸಂಗ್ರಹವಾದ ಮಾಹಿತಿಯನ್ನು ಪಡೆಯಲು ಕಂಪ್ಯೂಟರಿನಲ್ಲಿ ಮಾಡುವಂತೆ "ಸರ್ಚ್" ಮಾಡಬೇಕೆಂದಿಲ್ಲ."

ಮಂಗಳವಾರ, ಮೇ 19, 2015

ಆಜ್ಯ...ಹವಿಸ್ಸು...ಆತ್ಮಾಹುತಿ!!!

ಆಜ್ಯ...ಹವಿಸ್ಸು...ಆತ್ಮಾಹುತಿ!!!

                    ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂದಾಸನದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ "ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ? ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ, ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆಗಳನ್ನೆಲ್ಲಾ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ...ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ಅದು ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದಂತೆ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.ಅಮ್ಮಾ ಫಡಕೆ ಆರಂಭಿಸಿದ ಕಾರ್ಯ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ಇನ್ನು ಮುಂದೆ ನನ್ನೀ ಜೀವನ ನಿನಗಾಗಿ ಸಮರ್ಪಿತ." ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಆ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಅಂತಃಕರಣವನ್ನು ಪುಳಕಿತಗೊಳಿಸಿತು.

                  ಏಡನ್ನಿನಲ್ಲೊಂದು ಸ್ವಾತಂತ್ರ್ಯದ ಕಿಡಿ ಆರಿತ್ತು. ಅದೇ ಕಿಡಿ ಭಗೂರಿನಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯವಾಗಿ ಮೊರೆಯಿತು! ವೀರ...ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್! ಸಾಹಿತ್ಯಾಸಕ್ತರ ಪಾಲಿಗೆ ಭಗವತುಲ್ಯ ಕವಿ; ಬರಹಗಾರ, ಆಂಗ್ಲರಿಗೆ ಯಮಸದೃಶ ಕ್ರಾಂತಿಕಾರಿ, ವಿರೋಧಿಗಳ ನಾಲಿಗೆಯಲಿ ಕೋಮುವಾದಿ, ಸಮಾಜ ಸುಧಾರಕರಿಗೆ ಗುರು, ದೇಶ ಭಕ್ತರ ಪಾಲಿಗೆ ಜೀವನದ ಕ್ಷಣ ಕ್ಷಣ ರಕ್ತದ ಕಣ ಕಣವನ್ನೂ ರಾಷ್ಟ್ರಕ್ಕಾಗಿ ಸಮರ್ಪಿಸಿ ಆತ್ಮಾಹುತಿಗೈದ ಅಭಿನವ ಶಿವಾಜಿ, ಆಧುನಿಕ ಜಗತ್ತಿಗೆ ಹಿಂದುತ್ವವೇನೆಂದು ಸಮರ್ಥವಾಗಿ ಮಂಡಿಸಿ ಇಡೀ ಸನಾತನ ಸಂಸ್ಕೃತಿಗೆ ಭಾಷ್ಯ ಬರೆದ ಮಹಾದೃಷ್ಟಾರ.

                 ದಾರಣಾ ನದಿಯ ತಟದಲ್ಲಿ 1883ರ ಮೇ 28ರ ವೈಶಾಖ ಕೃಷ್ಣ ಷಷ್ಠಿಯ ಶುಭ ದಿನ ಸೃಷ್ಟಿ. ಜನಿಸಿದೊಡನೆ ತನ್ನತ್ತ ಸೆಳೆಯಿತು ಊರವರ ದೃಷ್ಟಿ. ದೊಡ್ಡಪ್ಪ ಮಹಾದೇವ ಪಂತರಿಂದ ಇತಿಹಾಸದ ಪಾಠ. ಶಿವಾಜಿಯೇ ಆದರ್ಶನಾದ, ಮನಸ್ಸು ಮಹಾರಾಣಾ ಪ್ರತಾಪನನ್ನನುಕರಿಸಿತು, ಝಾನ್ಸಿಯ ರಣದುಂದುಭಿ ಕಿವಿಯಲ್ಲಿ ಮೊಳಗಿತು. ತಂದೆ, ತಾಯಿ, ಸೋದರ ಮಾವನಿಂದ ಕಾವ್ಯ, ಸಾಹಿತ್ಯದ ಸಮೃದ್ಧಿ. ಮಾರಕವಾಗೆರಗಿದ ಪ್ಲೇಗ್ ಮೊದಲೇ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸೋದರರ ತಂದೆಯನ್ನೂ, ದೊಡ್ಡಪ್ಪನನ್ನೂ ಬಲಿತೆಗೆದುಕೊಂಡಿತು. ಗದ್ದೆ ತೋಟಗಳು ಅನ್ಯರ ವಶವಾದವು. ಶ್ರೀಮಂತ ಜಮೀನುದಾರರ ಮಕ್ಕಳಾಗಿದ್ದವರು ಕೇವಲ ಒಂದು ವಾರದೊಳಗೆ ಮನೆಯ ಹಿರಿಯರನ್ನೂ, ವಂಶದ ಸಂಪತ್ತನ್ನೂ ಕಳೆದುಕೊಂಡು ಅನಾಥರಾಗಿದ್ದರು. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ದಿಟ್ಟ. ದಿನವೂ ನಾಟಕ, ಹರಟೆ, ಇಸ್ಪೀಟು, ತಂಬಾಕು ತಿನ್ನುತ್ತಾ, ಸ್ತ್ರೀ ಪುರುಷರನ್ನು ರೇಗಿಸುತ್ತಾ ಕುಚೇಷ್ಟೆ ಮಾಡುತ್ತಾ ಕಾಲಕಳೆಯುತ್ತಿದ್ದ ಉಂಡಾಡಿಗಳೆಲ್ಲಾ ತಾತ್ಯಾ ಸಹವಾಸದಿಂದ "ರಾಷ್ಟ್ರಭಕ್ತ ಸಮೂಹ"ದ (ರಾಮ ಹರಿ) ಸದಸ್ಯರಾದರು. ಪಡ್ಡೆ ಹುಡುಗರ ನಾಯಕ ಹೆಳವ ಗೋವಿಂದ ದರೇಕರ್(ಆಬಾ ಪಾಂಗಳೆ) ಸಾವರ್ಕರ್ ಸಹವಾಸದಿಂದ "ಸ್ವಾತಂತ್ರ್ಯ ಕವಿ ಗೋವಿಂದ" ನಾಗಿ ಬಿರುದಾಂಕಿತನಾದ. ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದಾಗ ಸಾವರ್ಕರರಿಗಿನ್ನೂ ಹದಿನಾರು ವರ್ಷ.

               "ರಾಮಹರಿ" "ಮಿತ್ರಮೇಳ"ವಾಯಿತು. ಶಿವಾಜಿ ಜಯಂತಿ, ಗಣೇಶ ಉತ್ಸವ, ಪ್ಲೇಗ್ ರೋಗಿಗಳ ಆರೈಕೆ , ಅನಾಥ ರೋಗಿಗಳ ಶವ ಸುಡುವುದು...ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮಿತ್ರಮೇಳ ಬೃಹದಾಕಾರವಾಗಿ ಬೆಳೆಯಿತು. ಯಾವ ಸತ್ಯದಿಂದ ಜನಹಿತ ಆಗುತ್ತದೆಯೋ ಅದೇ ಸತ್ಯ, ಧರ್ಮ. ಆದರೆ ಯಾವ ಸತ್ಯದಿಂದ ಕಳ್ಳನಿಗೆ ರಕ್ಷಣೆಯಾಗಿ ಸನ್ಯಾಸಿಗೆ ಶಿಕ್ಷೆಯಾಗುತ್ತದೋ ಅದು ಅಸತ್ಯ, ಅಧರ್ಮ. ಹೇಗೆ ರಾವಣ, ಕಂಸರ ಕೈಗಳಲ್ಲಿದ್ದ ಶಸ್ತ್ರಗಳು ರಾಮ, ಕೃಷ್ಣರ ಕೈಯಲ್ಲಿ ಪಾವನವಾಗಿ ಪೂಜಾರ್ಹವಾಗಿದ್ದವೋ ಅದೇ ರೀತಿ ಅಧಿಕಾಧಿಕ ಜನಹಿತಕ್ಕಾಗಿ ರಾಷ್ಟ್ರೀಯ ಅಧಿಕಾರಗಳ ರಕ್ಷಣೆ ಹಾಗೂ ವಿಕಾಸಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ದೇಶಾಭಿಮಾನ ನಿಜಕ್ಕೂ ಧರ್ಮಸಮ್ಮತ, ಪ್ರಶಂಸನೀಯ. ಪರದೇಶಗಳನ್ನಾಕ್ರಮಿಸಿ ಜನಕ್ಷೋಭೆ ನಿರ್ಮಿಸುವ ಶೋಷಣೆ ನಡೆಸುವ ದೇಶಾಭಿಮಾನ ಅಧರ್ಮ, ದಂಡನೀಯ ಎಂಬುದು ಸಾವರ್ಕರ್ ಅಭಿಮತವಾಗಿತ್ತು, ಮಿತ್ರಮೇಳದ ತತ್ವವಾಯಿತು. ಮುಂದೆ ಅಸಂಖ್ಯ ಕ್ರಾಂತಿಕಾರಿಗಳ ನೀತಿಯಾಗಿ ಬೆಳೆಯಿತು. ಮಿತ್ರಮೇಳ ಬೆಳೆಯುತ್ತಾ ಬೆಳೆಯುತ್ತಾ "ಅಭಿನವ ಭಾರತ"ವಾಯಿತು. ಮಹಾರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆಯಿತು. ವಂಗಭಂಗವನ್ನು ವಿರೋಧಿಸಿ ಸ್ವಾತಂತ್ರ್ಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿದೇಶೀ ವಸ್ತುಗಳ ದಹನ(ಹೋಳಿ) ನಡೆಸಿದರು ಸಾವರ್ಕರ್. ತತ್ಪರಿಣಾಮ ಸಿಕ್ಕಿದ್ದು ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯದ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ ಎಂಬ ಶ್ರೇಯ! ಅಷ್ಟರಲ್ಲೇ ಸಾವರ್ಕರ್ ಬರೆದ ಕವನ, ಲಾವಣಿಗಳು ಮನೆ ಮನೆಯಲ್ಲಿ ನಿತ್ಯಗಾಯನಗಳಾಗಿದ್ದವು. ಅವರ ಲೇಖನಗಳನ್ನೋದಲು ಜನ ಕಾತರಿಸುತ್ತಿದ್ದರು. ಅವರ ವಾಗ್ವೈಭವಕ್ಕೆ ಮರುಳಾಗುತ್ತಿದ್ದರು. ಯುವಕರು ಅವರ ಮಾತು, ವೈಖರಿಗಳಿಂದ ಪ್ರಭಾವಿತರಾಗಿ ಅಭಿನವ ಭಾರತ ಸೇರುತ್ತಿದ್ದರು. ಭವ್ಯ ಭಾರತದ ಭಾವೀ ಸೂರ್ಯ ಮಹಾರಾಷ್ಟ್ರದ ಮನೆಯಂಗಳದಲ್ಲಿ ಉದಯಿಸುತ್ತಿದ್ದ! ಅಷ್ಟರಲ್ಲಾಗಲೇ ಲಂಡನ್ನಿನ ಭಾರತ ಭವನದ ಶ್ಯಾಮಜೀ ಕೃಷ್ಣವರ್ಮರ "ಶಿವಾಜಿ ವಿದ್ಯಾರ್ಥಿ ವೇತನ" ಅರಸಿ ಬಂದಿತ್ತು. ಸಿಂಹದ ಗುಹೆಗೆ ನರಸಿಂಹನ ಆಗಮನ!

                  ೧೮೫೭ರಲ್ಲಿ ನಡೆದದ್ದು ದಂಗೆಯಲ್ಲ; ಆಂಗ್ಲರನ್ನು ಒದ್ದೋಡಿಸುವ ಸಲುವಾಗಿ ನಡೆದ ಮಹಾಸಂಗ್ರಾಮ ಎಂದು ಹೇಳಿ ಸಾಕ್ಷಿ ಸಮೇತ ರಚಿಸಿದ "೧೮೫೭ರ ಮಹಾಸಂಗ್ರಾಮ" ಬ್ರಿಟಿಷರ ಢವಗುಟ್ಟಿಸಿ, ಪ್ರಕಟಣೆಗೆ ಮೊದಲೇ ಎರಡೆರಡು ದೇಶಗಳಲ್ಲಿ ನಿಷೇಧಕ್ಕೊಳಪಟ್ಟರೂ ಲಕ್ಷ ಲಕ್ಷ ಸ್ವಾತಂತ್ರ್ಯ ಯೋಧರಿಗೆ ಭಗವದ್ಗೀತೆಯಾಯಿತು. ಶೋಕಿಲಾಲ ಧಿಂಗ್ರಾ ದೀಕ್ಷೆ ಪಡೆದ. ಕರ್ಜನ್ ವಾಯಿಲಿಯ ವಧೆಯಾಯಿತು. ಸ್ವಾತಂತ್ರ್ಯದ ಪ್ರಯತ್ನಕ್ಕಾಗಿ ಸಾವರ್ಕರರಿಗೆ ಸಿಕ್ಕಿದ್ದು ಎರಡೆರಡು ಜೀವಾವಧಿ(ಕರಿನೀರ) ಶಿಕ್ಷೆ. ಜೊತೆಗೆ ಬಿಎ, ಬ್ಯಾರಿಸ್ಟರ್ ಪದವಿಗಳ ನಿರಾಕರಣೆ. 1910 ಜುಲೈ 8ರಂದು ನಡೆದದ್ದು ಇತಿಹಾಸ ಹಿಂದೆಂದೂ ಕಂಡಿರದ ಅದ್ಭುತ ಸಾಗರ ಸಾಹಸ. ತನ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಹಡಗು ಮಾರ್ಸಿಲೆಸ್ ತಲುಪಿದಾಗ ಶರೀರಬಾಧೆಯ ನೆಪದಲ್ಲಿ ಶೌಚಾಲಯ ಹೊಕ್ಕವರು ಯೋಗಬಲದಿಂದ ಶರೀರವನ್ನು ಸಂಕುಚಿಸಿ ಸಣ್ಣಕಿಂಡಿಯ ಮೂಲಕ ಸಮುದ್ರಕ್ಕೆ ಧುಮುಕಿ ಗುಂಡಿನ ದಾಳಿಯ ಮಧ್ಯೆ ಈಜಿ ದಡ ಸೇರಿದರು. ಆದರೆ ಲಂಚದಾಸೆಗೆ ಬಲಿಯಾದ ಪ್ರೆಂಚ್ ಸಿಬ್ಬಂದಿಯಿಂದಾಗಿ ಮತ್ತೆ ಬಂಧಿಸಲ್ಪಟ್ಟರು. ಮುಂದೆ ಅಂಡಮಾನ್! ಕೇಳಿದರೇ ಮೈಜುಮ್ಮೆನಿಸುವ ಕರಿನೀರ ಶಿಕ್ಷೆ! ಆದರೇನು ಅಲ್ಲಿನ ಕತ್ತಲೆಕೋಣೆಯಲ್ಲಿ ಮೊಳೆಯಿಂದ ೧೦ ಸಾವಿರ ಸಾಲಿನ ಕಾವ್ಯ ರಾಶಿಯನ್ನು ಗೋಡೆಯ ಮೇಲೆ ಮೂಡಿಸಿ ತನ್ನ ಕಾವ್ಯರಸದಿಂದ ತಾಯಿ ಭಾರತಿಗೆ ಅಭಿಷೇಕಗೈದರು. ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಾಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ಧಿ ಚಳವಳಿ ನಡೆಸಿದರು. ತನ್ನನ್ನೂ ಇತರರಿಂದ ಪ್ರತ್ಯೇಕವಾಗಿ ಇರಿಸಿದಾಗ್ಯೂ ಕೈದಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿ ಜೈಲಿನಲ್ಲಿ ಸಮಗ್ರ ಸುಧಾರಣೆ ತಂದರು.

                      ಅಖಂಡ ಭಾರತದ ಪರಿಕಲ್ಪನೆಯನ್ನು ಕೊಟ್ಟಿದ್ದಲ್ಲದೆ ಸಿಖ್, ಬೌದ್ಧ, ಜೈನರು ಹಿಂದೂಗಳೇ ಎಂದು ಸಾರಿದ ಸಾವರ್ಕರ್ ಮುಸ್ಲಿಮರ ವಿಭಜನಾವಾದಿ ಮನಸ್ಥಿತಿಯನ್ನು ಖಂಡಿಸಿದರು. ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಮೊಟ್ಟಮದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ರತ್ನಗಿರಿಯ ಪತಿತ ಪಾವನ ಮಂದಿರದ ಮೂಲಕ ಅವರಿಗೆ ದೇವಾಲಯ ಪ್ರವೇಶ ಕಲ್ಪಿಸಿದ ಸಮಾಜ ಸುಧಾರಕನಾತ. ಆತ ಕೇವಲ ಕ್ರಾಂತಿಕಾರಿಯಲ್ಲ. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕನೂ ಹೌದು. "ರಾಜಕೀಯವನ್ನು ಹಿಂದೂಕರಣಗೊಳಿಸಿ ಮತ್ತು ರಾಷ್ಟ್ರವನ್ನು ಸೈನಿಕೀಕರಣಗೊಳಿಸಿ. ನೀವು ಬಲವಾಗಿದ್ದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕ್ರುಶ್ಚೇವ್ ಬೂಟು ತೋರಿಸಿದಂತೆ ನೀವೂ ತೋರಿಸಬಹುದು. ಆದರೆ ನೀವು ದುರ್ಬಲರಾಗಿದ್ದರೆ ನಿಮ್ಮ ಹಣೆಬರಹ ಶಕ್ತಿಯುತ ಆಕ್ರಮಣಕಾರಿಯ ಕೈಯಲ್ಲಿರುತ್ತದೆ" ಎಂದ ಅವರು ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತರು.

                    ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಕಾಂಗ್ರೇಸ್ಸಿನ ದೇಶದ್ರೋಹಿ ನೀತಿಗಳನ್ನು ಖಂಡಿಸುತ್ತಿದ್ದರು ಎಂಬ ಒಂದೇ ಒಂದು ಕಾರಣಕ್ಕಾಗಿ ಅವರ ಮೇಲೆ ದ್ವೇಷ ಸಾಧಿಸಲಾಯಿತು. ಕೊನೆಗೊಮ್ಮೆ ಅವರು ತೀರಿಕೊಂಡಾಗ ಅವರ ಹೆಣ ಇಡಲು ಗನ್ ಕ್ಯಾರೇಜ್ ಕೂಡ ಸಿಗದಂತೆ ನೆಹರು ಮಾಡಿ ಬಿಟ್ಟರು. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಮೇಲೆ ಪ್ರಶ್ನೆ ಕೇಳಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

                        ಹೌದು. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡಿ ಚೈತನ್ಯ ತುಂಬುವ ಹೆಸರೇ "ವೀರ ಸಾವರ್ಕರ್". ವೀರ ಸಾವರ್ಕರ್ ಅಂದಾಕ್ಷಣ ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಅದು  ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿತ್ವ. ನಿರಂತರ ಅಂತರ್ಗಂಗೆಯಂತೆ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ! ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಭವ್ಯ ಭಾರತದ ಮುಕುಟಮಣಿ!

ಸೋಮವಾರ, ಮೇ 18, 2015

ಬೋಧಿ ವೃಕ್ಷದ ಕೆಳಗೆ ಮೌನವಾಂತು ಕುಳಿತ ಶಾಕ್ಯಮುನಿಯನ್ನೂ ಎಳೆದಾಡಿದ ಪರಾಕ್ರಮ!

ಬೋಧಿ ವೃಕ್ಷದ ಕೆಳಗೆ ಮೌನವಾಂತು ಕುಳಿತ  ಶಾಕ್ಯಮುನಿಯನ್ನೂ ಎಳೆದಾಡಿದ ಪರಾಕ್ರಮ!

              "ಬ್ರಾಹ್ಮಣರೆಲ್ಲರೂ ಬುದ್ಧನ ಮೇಲಿನ ಅಸಹನೆಯಿಂದ ಅವನನ್ನು ವಾಚಾಮಗೋಚರವಾಗಿ ಜರಿಯುತ್ತಿದ್ದರು. ಅವರಲ್ಲೇ ಕೆಲವರು ಅದೇ ಬುದ್ಧನನ್ನು ವಿಷ್ಣುವಿನ ಅವತಾರದಂತೆ ಪರಿಗಣಿಸಿದರು. ಈ ಬಗೆಯ ವೈರುಧ್ಯ ಹೇಗೆ ಸಾಧ್ಯ? ಈ ಒಗಟನ್ನು ಬಿಡಿಸುವುದು ಹೇಗೆ? ಅದನ್ನು ತೊಡೆದು ಹಾಕುವುದೇ ಈ ವೈರುಧ್ಯವನ್ನು ನಿವಾರಿಸಲಿರುವ ಪರಿಹಾರ. ಅದಕ್ಕಾಗಿ ಪೂರ್ವದಲ್ಲಿ ಇಬ್ಬರು ಬುದ್ಧರಿದ್ದರೆಂದು ಊಹಿಸಿಕೊಳ್ಳಬೇಕು. ಅವರಲ್ಲಿ ಒಬ್ಬ ದ್ವಾಪರ ಯುಗಾಂತ್ಯದಲ್ಲಿ ಹುಟ್ಟಿದವನು, ಇನ್ನೊಬ್ಬ ಸಾವಿರ ವರ್ಷ ಕಳೆದ ಮೇಲೆ ಜನಿಸಿದವನು" ಪ್ರಾಚೀನ ಭಾರತದ ಚರಿತ್ರೆ ರಚನೆಯ ಮೂಲಪುರುಷರಲ್ಲಿ ಮುಖ್ಯನಾದ ಸರ್ ವಿಲಿಯಂ ಜೋನ್ಸ್ ಸಾಹೇಬ ತನ್ನ ಕೃತಿಯ ನಾಲ್ಕನೇ ಸಂಪುಟದಲ್ಲಿ ಹೊರಡಿಸಿದ ಮಹದಾಜ್ಞೆ ಇದು!

                ಅರೇ....., ಹಿಂದೂಗಳು ಬೌದ್ಧರೊಂದಿಗೆ ಜಗಳವಾಡಿ ಅವರನ್ನು ಈ ದೇಶದಿಂದ ಅಕ್ಷರಶಃ ಒದ್ದೋಡಿಸಿ ಆಮೇಲೆ ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಿದರೇ ಅಥವಾ ದೇವನನ್ನಾಗಿಸಿದ ಮೇಲೆ ಬೌದ್ಧರ ಮೇಲೆ ಹಣಾಹಣಿಗಿಳಿದರೆ? ಭಾರತದ ಇತಿಹಾಸವೆನ್ನುವುದು ಅಂತೆಕಂತೆಗಳ ಬೊಂತೆಯಾಗಿ ಗೊಂದಲಗಳ ಗೂಡಾದದ್ದು ಹೀಗೆಯೇ. ಅದಕ್ಕಾಗಿಯೇ ಬುದ್ಧ ಎರಡಾದ, ಗುಪ್ತರ ಚಂದ್ರಗುಪ್ತನನ್ನು ಮೌರ್ಯ ಚಂದ್ರಗುಪ್ತನೊಡನೆ ತಳುಕು ಹಾಕಿದರು. ವಿಕ್ರಮ ಶಾಲಿವಾಹನಾದಿ ಶಕಪುರುಷರು ಬದಿಗೆ ಸರಿದರು. ಬೇರೆ ಬೇರೆ ಕಾಲದ ಮೂವರು ಅಶೋಕರನ್ನು ಕಲಸುಮೇಲೋಗರ ಮಾಡಿ ಭಾರತದ ಇತಿಹಾಸವನ್ನೇ ಶೋಕಭರಿತವನ್ನಾಗಿಸಿದರು. ಹೌದು ನಮ್ಮ ಇತಿಹಾಸ ರಚನೆಯಾದದ್ದೇ ಹಾಗೆ. ಕಗ್ಗಂಟು ಬಂದಲ್ಲಿ ಕತ್ತರಿಸಿ ಹಾಕುತ್ತಾ, ಅರ್ಥವಾಗದೇ ಇದ್ದಲ್ಲಿ ತಮಗೆ ಬೇಕಾದ ಹಾಗೆ ಊಹಿಸುತ್ತಾ, ಖಚಿತ ದಾಖಲೆಗಳಿರುವ ಘಟನೆಗಳನ್ನು ಕಲಸುಮೇಲೋಗರ ಮಾಡುತ್ತಾ, ಮನಸ್ಸು ಬಂದಲ್ಲಿ ಕವಿಗಳ ರೀತಿ ಕಲ್ಪನೆಗಳನ್ನು ಹೆಣೆಯುತ್ತಾ ತಮಗೆ ಬೇಕಾದ ಹಾಗೆ ತಿರುಚಿ ತಮ್ಮರಸರಿಗೆ ರುಚಿಸುವಂತೆ ಬರೆದರು.

                    ಕಾಶ್ಮೀರ, ಚೀನಾ, ಟಿಬೆಟ್ ಮೊದಲಾದ ಕಡೆ ಸಿಕ್ಕಿದ ಬೌದ್ಧರ ಕುರಿತಾದ ದಾಖಲೆಗಳನ್ನು, ಅಬುಲ್ ಫಜಲ್ ಬರಹಗಳು ಹಾಗೂ ನಮ್ಮ ಪುರಾಣಗಳನ್ನು ಪರಿಶೀಲಿಸಿದ ನಂತರ ಬುದ್ಧನ ಜನ್ಮವರ್ಷವನ್ನು ಕ್ರಿ.ಪೂ. 1027 ಎಂದು ದಾಖಲಿಸಿದ. ಮ್ಯಾಕ್ಸ್ ಮುಲ್ಲರ್, ಚೀನೀ ಬೌದ್ಧ ಗ್ರಂಥಗಳ ಪ್ರಕಾರ ಅಶೋಕನ ಕಾಲ ಕ್ರಿ.ಪೂ 850 ಎಂದು ಪರಿಗಣಿಸಿ ಬುದ್ಧ ಅವನಿಗಿಂತ 371 ವರ್ಷ ಹಿಂದಿನವನಾದುದರಿಂದ ಬುದ್ಧ ನಿರ್ವಾಣ ಕ್ರಿ.ಪೂ 1260ರಲ್ಲಾದುದೆಂದ. ಆತನ ಸಮಕಾಲೀನ ಫ್ಲೀಟ್ ಕಲ್ಹಣನ ರಾಜತರಂಗಿಣಿಯ ಪ್ರಕಾರಶೋಕ ಕ್ರಿ.ಪೂ 1260ರ ಸಮಯದವನಾದುದರಿಂದ ಬುದ್ಧ ನಿರ್ವಾಣ ಕ್ರಿ.ಪೂ 1631ರಲ್ಲಾಯಿತೆಂದು ನಿರ್ಣಯಿಸಿದ. ಆದರೆ ಉಳಿದ ಚರಿತ್ರಕಾರರು ಲಭ್ಯವಿದ್ದ ಅಪಾರ ದಾಖಲೆಗಳನ್ನು ಬದಿಗೆ ಸರಿಸಿ ಶಾಕ್ಯಮುನಿಯನ್ನು ಕ್ರಿ.ಪೂ. ಐದನೇ ಶತಮಾನಕ್ಕೆ ಹೊತ್ತೊಯ್ದರು.

                 ಕ್ಷೇಮಜಿತ್, ಬಿಂಬಸಾರ ಹಾಗೂ ಅಜಾತಶತ್ರು ಎಂಬ ಶಿಶುನಾಗ ವಂಶದ ದೊರೆಗಳು ಬುದ್ಧನಿಗೆ ಸಮಕಾಲೀನರು. ಬುದ್ಧನನ್ನು ವೈಶಾಲಿಗೆ ಕರೆದೊಯ್ಯಲು ಅನುಮತಿಗೋಸ್ಕರ ಅಲ್ಲಿನ ಪ್ರಜೆಗಳ ಗುಂಪೊಂದು ಆಸ್ಥಾನಕ್ಕೆ ಬಂದಾಗ ಅಲ್ಲಿನ ಅರಸನಾಗಿದ್ದವ ಬಿಂಬಸಾರ. ಆ ಸಂದರ್ಭದಲ್ಲಿ ಬಿಂಬಸಾರ ಹಾಕಿದ ಷರತ್ತುಗಳು ಹಾಗೂ ಬುದ್ಧ ತೋರಿಸಿದ ಮಹಾತ್ಮೆಗಳನ್ನು ದಿವ್ಯವಾದನ ಗ್ರಂಥ ವಿವರಿಸಿದೆ. ಬಿಂಬಸಾರನ ಕಾಲ ಕ್ರಿ.ಪೂ 1852ರಿಂದ 1814. ಬುದ್ಧನ 72ನೇ ವಯಸ್ಸಿನಲ್ಲಿ ಬಿಂಬಸಾರನ ಮಗ ಅಜಾತಶತ್ರು ಮಗಧದ ಪಟ್ಟವನ್ನೇರಿದನೆಂದೂ, ಅದರ ಎಂಟುವರ್ಷಗಳ ತರುವಾಯ ಬುದ್ಧನ ಮಹಾಪ್ರಸ್ಥಾನವಾಯಿತೆಂದು ಕೆನೆತ್ ಸ್ಯಾಂಡರ್ಸ್ ಉಲ್ಲೇಖಿಸಿದ್ದಾನೆ. ಅಜಾತಶತ್ರುವಿನ ಕಾಲ ಕ್ರಿ.ಪೂ. 1814-1787. ಈ ಕಾಲಮಾನ ವಿಷ್ಣು, ವಾಯು, ಮತ್ಸ್ಯ, ಬ್ರಹ್ಮಾಂಡ ಪುರಾಣಗಳಲ್ಲಿ ಹೇಳಿದ ಇಕ್ಷ್ವಾಕು ವಂಶಕ್ರಮದ ಕಾಲಕ್ಕೆ ತಾಳೆಯಾಗುತ್ತದೆ. ಬುದ್ಧನದ್ದು ಇಕ್ಷ್ವಾಕು ವಂಶ. ಪುರಾಣಗಳು, ಬೌದ್ಧ ಸಾಹಿತ್ಯ, ಪಾಶ್ಚಾತ್ಯ ವಿದ್ವಾಂಸರ ಲೆಕ್ಕಾಚಾರಗಳನ್ನೆಲ್ಲಾ ಅವಲೋಕಿಸಿದಾಗ ಬುದ್ಧನ ಕಾಲ ಕ್ರಿ.ಪೂ 1882ರಿಂದ 1807 ಎನ್ನುವುದು ಖಚಿತವಾಗುತ್ತದೆ.
ಆದರೆ ನಮ್ಮ ಇತಿಹಾಸಕಾರರು ಅತ್ತ ಪುರಾಣಗಳು, ಬೌದ್ಧ ಸಾಹಿತ್ಯಗಳನ್ನೂ ನಂಬಲಿಲ್ಲ. ಇತ್ತ ವಿದೇಶೀ ಇತಿಹಾಸಕಾರರ ಕಾಲನಿರ್ಣಯದ ಹತ್ತಿರಕ್ಕೂ ಸುಳಿಯಲಿಲ್ಲ. ಚೀನೀ ಯಾತ್ರಿಕ ಫಾಹಿಯಾನನ ಮಾತನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಫಾಹಿಯಾನನ ಪ್ರಕಾರ ಬುದ್ಧನ ನಿರ್ವಾಣವಾದುದು ಕ್ರಿ.ಪೂ. 1050. ಫಾಹಿಯಾನ್ ಅಪ್ಘಾನಿಸ್ತಾನಕ್ಕೆ ಹೋದಾಗ ಅಲ್ಲಿ ಭೇಟಿಯಾದ ಬೌದ್ಧ ಗುರುಗಳನ್ನು ಆ ದೇಶದಲ್ಲಿ ಬೌದ್ಧಮತದ ಆರಂಭದ ಬಗ್ಗೆ ಕೇಳಿದಾಗ ಬುದ್ಧನ ನಿರ್ವಾಣದ 300 ವರ್ಷಗಳ ತರುವಾಯ ತಮ್ಮ ದೇಶದಲ್ಲಿ ಮೈತ್ರೇಯ ಬೋಧಿಸತ್ವನ ವಿಗ್ರಹ ಸ್ಥಾಪಿಸಿದಾಗಿನಿಂದ ಪ್ರವರ್ಧಮಾನಕ್ಕೆ ಬಂತು ಎನ್ನುವ ಮಾಹಿತಿ ಸಿಕ್ಕಿತು. ಈ ವಿಗ್ರಹ ನಿರ್ಮಾಣ ಚೀನಾದ ಚೌ ವಂಶಸ್ಥ ಪಿಇಂಗ್ ರಾಜ(ಕ್ರಿ.ಪೂ. 750-716)ನ ಕಾಲದಲ್ಲಿ ಆಯಿತೆಂದು ಫಾಹಿಯಾನ ಊಹಿಸಿದ. ಆದರೆ ಇ.ಜೆ. ರಾಪ್ಸನ್, ವಿನ್ಸೆಂಟ್ ಸ್ಮಿತ್ ಹಾಗೂ ಅವರನ್ನನುಸರಿಸಿದ ನಮ್ಮವರೂ ಬುದ್ಧನನ್ನು ಕ್ರಿ.ಪೂ 482 ರಲ್ಲಿ ಹುಟ್ಟಿಸಿ ಕ್ರಿ.ಪೂ 403 ರಲ್ಲಿ ಸಾಯಿಸಿದರು! ರಾಪ್ಸನ್ "ದುರದೃಷ್ಟವಶಾತ್ ಬೌದ್ಧ ಕಾಲಕ್ರಮವನ್ನು ಕುರಿತು ಸವಿಸ್ತಾರವಾಗಿ ಬರೆದ ನಂತರವೂ ಬುದ್ಧನ ಜನ್ಮದಿನವನ್ನು ಕುರಿತು ಖಚಿತವಾಗಿ ಹೇಳಲಾರದವರಾಗಿದ್ದೇವೆ. ಇಲ್ಲಿ ಉಲ್ಲೇಖಿಸಿರುವ ಕ್ರಿ.ಪೂ. 483ನ್ನು ತಾತ್ಕಾಲಿಕವೆಂದೇ ಪರಿಗಣಿಸಬೇಕು" ಎಂದಿದ್ದಾನೆ. ಆದರೆ ವಿನ್ಸೆಂಟ್ ಸ್ಮಿತ್ ಪ್ರಕಾರ ಬುದ್ಧನ ಕಾಲ ಸಂಧಿಗ್ಧವಾದರೂ ಕೂಡಾ ಕ್ರಿ.ಪೂ. 487ರ ಕಾಲವೇ ಹೆಚ್ಚು ಸೂಕ್ತ!

                ಕಾಶ್ಮೀರದ ಚರಿತ್ರೆಯುಳ್ಳ ಗ್ರಂಥ ಕಲ್ಹಣ ಬರೆದ ರಾಜತರಂಗಿಣಿ. ಕ್ರಿ.ಶ 1148ರಲ್ಲಿ ಕಾಶ್ಮೀರದ ರಾಜವಂಶಗಳ ವಾಸ್ತವ ಚರಿತ್ರೆಯನ್ನು ಸಿದ್ಧಗೊಳಿಸಿದಾಗ ಮೂಡಿದ ಐತಿಹಾಸಿಕ ಗ್ರಂಥವಿದು. ರಾಜತರಂಗಿಣಿಯ ಪ್ರಕಾರ ಕಾನಿಷ್ಕನಿಗೆ ನೂರೈವತ್ತು ವರ್ಷಗಳ ಮೊದಲು ಬುದ್ಧ ನಿರ್ವಾಣ ಹೊಂದಿದ. ಕಾನಿಷ್ಕನ ಕಾಲ ಕ್ರಿ.ಪೂ. 1294ರಿಂದ 1234. ಅಂದರೆ ಬುದ್ಧನಿರ್ವಾಣ ಕ್ರಿ.ಪೂ. 1444ರಲ್ಲೇ ಆಗಿರಬೇಕು. ಆದರೆ ಆಧುನಿಕ ಚರಿತ್ರಕಾರರು ಕಾನಿಷ್ಕನನ್ನು ಕ್ರಿ.ಶ. 78ಕ್ಕೆ ತಳ್ಳಿದರು. ಹಾಗಾದಲ್ಲಿ ಬುದ್ಧ ಕ್ರಿ.ಪೂ 72ರಲ್ಲಿ ನಿರ್ವಾಣ ಹೊಂದಬೇಕಿತ್ತಲ್ಲವೇ? ಕ್ರಿ.ಪೂ. 403 ಆದದ್ದು ಹೇಗೆ? ಕಾನಿಷ್ಕನ ನಂತರ ಕಾಶ್ಮೀರವನ್ನಾಳಿದ ರಾಜ ಅಭಿಮನ್ಯು. ಆಗ ನಾಗಾರ್ಜುನ ಎಂಬ ಬೋಧಿಸತ್ವ ರಾಜ್ಯಾದ್ಯಂತ ಬೌದ್ಧಮತವನ್ನು ಪಸರಿಸಿದನೆಂದು ರಾಜತರಂಗಿಣಿ ಹೇಳುತ್ತದೆ. ಒಂದು ವೇಳೆ ಬುದ್ಧ ಕ್ರಿ.ಪೂ 483ರಲ್ಲೇ ಹುಟ್ಟಿದ್ದರೆ ಕ್ರಿ.ಪೂ. 1234ರ ಅಭಿಮನ್ಯುವಿನ ಕಾಲದಲ್ಲಿಯೇ ಬೌದ್ಧಮತ ವ್ಯಾಪಿಸಿದ್ದು ಹೇಗೆ? ಇನ್ನು ಬುದ್ಧನ ಜೀವನದಲ್ಲಿನ ಘಟನೆಗಳ ಸಮಯದಲ್ಲಿನ ತಿಥಿ-ಗ್ರಹಗತಿಗಳನ್ನು ತೆಗೆದುಕೊಂಡು ತಾಳೆ ನೋಡಿದರೆ ಬುದ್ಧನು ಹತ್ತೊಂಬತ್ತನೇ ಶತಮಾನದವನಾಗಿದ್ದರೆ ಮಾತ್ರ ಸರಿಹೊಂದುವುದೆಂದು, ಕ್ರಿ.ಪೂ ಐದನೇ ಶತಮಾನಕ್ಕೆ ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲವೆಂದು ವಿ. ತಿರುವೆಂಕಟಾಚಾರ್ಯರು ಸಿದ್ಧಪಡಿಸಿದರು. ಈ ಪರಿಶೀಲನೆಯಿಂದ ಬುದ್ಧನ ಜನನ ಕ್ರಿ.ಪೂ. 1886 ಮಾರ್ಚ್ 31ರಂದು ಹಾಗೂ ನಿರ್ವಾಣ 1807 ಮಾರ್ಚ್ 27ರಂದು ಎನ್ನುವುದು ರುಜುವಾತಾಯಿತು.

                  ಒಟ್ಟಾರೆ ಆಧಾರಗಳು ಬೆಟ್ಟದಷ್ಟಿದ್ದರೂ ಪಾಶ್ಚಾತ್ಯ ಇತಿಹಾಸಕಾರರು ಹೇಳಿದ್ದೇ ಸತ್ಯವೆಂದು ನಂಬುವ ಭಾರತೀಯರು ಇರುವವರೆಗೆ ಬುದ್ಧನ ಹುಟ್ಟು ಐದನೇ ಶತಮಾನದಲ್ಲೇ ಇರುತ್ತದೆ. ಇಬ್ಬಿಬ್ಬರು ಬುದ್ಧರು ಬರುತ್ತಾರೆ. ಆರ್ಯ ಆಕ್ರಮಣದ ಪೊಳ್ಳುವಾದ ವಿಜೃಂಭಿಸುತ್ತದೆ. ಮತಾಂಧರೇ ಮಹಾತ್ಮರಾಗಿ ರಾಷ್ಟ್ರೀಯತೆಯ ಹರಿಕಾರರು ಕೋಮುವಾದಿಗಳಾಗಿ ಕಾಣಿಸುತ್ತಿರುತ್ತಾರೆ. ನೈಜ ಇತಿಹಾಸ ಪಠ್ಯಪುಸ್ತಕಗಳಲ್ಲಿ ಅಳವಡಿಸದ ಹೊರತು ಭಾರತೀಯರ ಸ್ಮೃತಿ ಶಕ್ತಿ ಉದ್ದೀಪನಗೊಳ್ಳದು.

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ-೧

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ-೧

                ಹಲವು ದಿನಗಳೇ ಉರುಳಿದವು. ಕೋಟೆಯನ್ನು ಸುತ್ತುವರಿದ ಅಗಾಧ ಶತ್ರುಸೇನೆ ಹಿಂದೆ ಸರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೋಟೆಯೊಳಗಿನ ಆಹಾರ ದಾಸ್ತಾನು ಬರಿದಾಗುತ್ತಿರಲು ಕೈ ಮೀರಿದ ಆ ಪರಿಸ್ಥಿತಿಯಲ್ಲಿ ಆತ್ಮಾರ್ಪಣೆಯೇ ಮಾರ್ಗವೆಂದು ನಿರ್ಧರಿಸಿತು ಚಿತ್ತೋಡಿನ ಸೇನೆ. ಬಿಲ್ಲಿನಿಂದ ಸೆಳೆದು ಬಿಟ್ಟ ಬಾಣಗಳಂತೆ ಹೊರಬಿತ್ತು 8000ಕ್ಕೂ ಅಧಿಕ ಯೋಧರ ಪಡೆ. ಆ ಸೈನ್ಯವನ್ನೆಲ್ಲಾ ತನ್ನ ಕತ್ತಿಗೆ ಆಹುತಿ ನೀಡಿ ವಿಜಯೋತ್ಸಾಹದಿಂದ ಕೋಟೆಯೊಳಗೆ ಕಾಲಿಟ್ಟ ಶತ್ರುರಾಜ. ಬಾಯಲ್ಲಿ ನೀರೂರಿಸಿದ್ದ ಮೇವಾಡದ ಸೌಂದರ್ಯ ರಾಶಿಗಳನ್ನೆಲ್ಲಾ ತನ್ನ ಜನಾನಾಕ್ಕೆ ತಳ್ಳಿ ಮನಸೋ ಇಚ್ಛೆ ಮೇಯಬಹುದೆಂದು ಒಳಗೊಳಗೇ ಖುಷಿಪಟ್ಟ. ಆದರೆ ಕೋಟೆಯೊಳಹೊಕ್ಕವನಿಗೆ ಕಾಣಸಿಕ್ಕಿದ್ದೇನು? ಧಗಧಗಿಸುತ್ತಿರುವ ಚಿತ್ತೋಡಿನ ಚಿತ್ತಚೋರಿಯರ ಚಿತೆಗಳು! ಒಂದು ಕಡೆ ಭಸ್ಮಗೊಂಡ ಸೌಂದರ್ಯರಾಶಿಗಳನ್ನು ಎವೆಯಿಕ್ಕದೆ ನೋಡುತ್ತಾ ಉಂಟಾದ ದಿಗ್ಭ್ರಮೆ ಇನ್ನೊಂದೆಡೆ ಮಿಕ್ಕವರಂತೆ ತತ್ತಕ್ಷಣ ಮಣಿಯದೆ ತನ್ನನ್ನು ಕಾಡಿದ ಮೇವಾಡದ ಮೇಲಿನ ಕ್ರೋಧ! ಎರಡೂ ಸೇರಿ ಹೊರಬಿದ್ದದ್ದು ಸರ್ವರನ್ನು, ಸಕಲವನ್ನೂ ನಾಶ ಮಾಡಿರೆಂಬ ಆಜ್ಞೆ!

               ಒಡೆಯನ ಅನುಮತಿ ಸಿಕ್ಕಿದ್ದೇ ತಡ, ಇನ್ನೇನು ತಡೆ, ಮತಿಗೆಟ್ಟ ಪಡೆ ವಿಜೃಂಭಿಸಿತು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ತಮ್ಮ ಅರಸನಿಗೆ ಲೆಕ್ಕ ಒಪ್ಪಿಸುವ ಸಲುವಾಗಿ ಶವಗಳಿಂದ ಜನಿವಾರಗಳನ್ನು ಕಲೆ ಹಾಕಿದರು. ಅವುಗಳನ್ನು ತೂಕ ಮಾಡಿದಾಗ 600 ಪೌಂಡುಗಳಿದ್ದವೆಂದರೆ ಮಾರಣಹೋಮದ ಪರಿ ಅರಿವಾದೀತು. ಕೇವಲ ಒಂಬತ್ತೂವರೆ ಗಂಟೆಗಳವಧಿಯಲ್ಲಿ ಕೊಲೆಯಾದವರ ಸಂಖ್ಯೆ 30ಸಾವಿರ ಎಂದು ಆನಂದದಿಂದ ವರ್ಣಿಸಿದ್ದಾನೆ ಅಬುಲ್ ಫಜಲ್! ಎಲ್ಲಿ ನೋಡಿದರಲ್ಲಿ ಶವಗಳ ರಾಶಿ, ನಾಲ್ದೆಸೆಗಳಿಗೆ ಚಾಚಿದ ಬೆಂಕಿಯ ಕೆನ್ನಾಲಿಗೆ, ಕಮಟು ವಾಸನೆ, ಆಕ್ರಂದನ, ಭೀಭತ್ಸ ದೃಶ್ಯಗಳು. ಇದರ ಕಾರಣಕರ್ತನಾದ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ ಇನ್ನೂ ಇದೆಯೇ. ಇದ್ದರೆ ಕೇಳಿ...ಮಹಾ ಮಾನವತಾವಾದಿ ಎಂದು ನಮ್ಮ ಸೆಕ್ಯುಲರ್ ಇತಿಹಾಸಕಾರರು ಹಾಡಿ ಹೊಗಳಿರುವ; ಸಾಹಸಿ, ಸುಕೋಮಲಿ, ಆದರ್ಶವಾದಿ, ಕನಸುಗಾರ ಎಂದು ನೆಹರೂ ಹಾಡಿಹೊಗಳಿರುವ ಅಕ್ಬರ್...ಅದೇ "ಅಕ್ಬರ್ ದಿ ಗ್ರೇಟ್"!!!

                 ಈ ಭೀಭತ್ಸ ಹತ್ಯಾಕಾಂಡವನ್ನು ನೋಡಲಾರದೆ ರಾಜ್ಯದ ಮೂಲೆ ಮೂಲೆಗಳಿಂದ ಕೇಳಿಬರುತ್ತಿರುವ ಆಕ್ರಂದನಗಳಿಂದ ಕಂಬನಿದುಂಬಿ ರಜಪೂತ ಪ್ರಮುಖರಾದ ಮಾನ್ ಸಿಂಗ್, ತೋಡರಮಲ್ ಹತ್ಯಾಕಾಂಡವನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಾಗ ಇದೇ ಮಾನವತಾವಾದಿ ಹೇಳಿದ್ದೇನು ಗೊತ್ತೇ? 
"ನಾನೀಗ ತೈಮೂರನೊಂದಿಗೆ ಅನುಸಂಧಾನದಲ್ಲಿದ್ದೇನೆ. ನನಗೀಗ ಬೇಕಾದುದು ರಕ್ತವೇ ಹೊರತು ಅಮೃತವಲ್ಲ. ಷಾಹಾನಾಮಾದ ಪಠಣವನ್ನು ನಾನೀಗ ಕೇಳಬೇಕು."
ಕ್ಷಣಿಕ ಕೋಪದಿಂದ ಅರಸ ಹೀಗಾಡಿದ ಎಂದುಕೊಳ್ಳೋಣವೇ? ಆದರೆ ಅಂತಹ ಕಿಂಚಿತ್ ಪಶ್ಚಾತ್ತಾಪವೂ ಅವನಿಗಿರಲಿಲ್ಲ. ತಾನು ಮಾಡಿದ್ದು ಸರಿ; ಅದನ್ನು ದೇವರೇ ಮೆಚ್ಚಿಕೊಂಡ ಎಂದು ಯಾವ ನಾಚಿಕೆ-ಹಿಂಜರಿಕೆಗಳಿಲ್ಲದೆ ಆತ ಹೇಳಿಕೊಂಡ. ಅಬುಲ್ ಫಜಲ್ ಯಥಾವತ್ತಾಗಿ ನಮೂದಿಸಿರುವ ಅಕ್ಬರನ ಮಾತುಗಳನ್ನು ಓದಿದವರ್ಯಾರೂ ಆತನನ್ನು ಮಾನವತಾವಾದಿ ಬಿಡಿ ಮಾನವನೆಂದೇ ಕರೆಯಲಾರರು. ಅಷ್ಟಕ್ಕೂ ನನ್ನ ರೀತಿ ನೀತಿಯನ್ನು ಅಲ್ಲಾ ಅನುಮೋದಿಸದೇ ಇರುತ್ತಿದ್ದರೆ ಮೈಮೇಲೆ ಸಣ್ಣ ಗಾಯವೂ ಇಲ್ಲದಂತೆ ನಾನು ಹಿಂದಿರುಗುತ್ತಿರಲಿಲ್ಲ ಎಂದ ಆ ದಯಾಪರನ ಉನ್ಮಾದವೇನೂ ಕ್ಷಣಿಕವಾದುದಾಗಿರಲಿಲ್ಲ. ಅದು ಜನ್ಮಜಾತ ಸ್ವಭಾವಜನ್ಯ ಸಹಜೋನ್ಮಾದ, ರಕ್ತಗುಣ! ನಮ್ಮ "ಮಹಾನ್ ಇತಿಹಾಸಕಾರರು" ಬರೆದುದನ್ನು ಓದಿ ಸತ್ಯ ಎಂದುಕೊಂಡವರಿಗೆ ಅಕ್ಬರನೇ ಆದರ್ಶಪುರುಷನಾಗಿರುವುದಕ್ಕೂ, ಅಕ್ಬರನಿಗೆ ಆತನ ವಂಶಜ ತೈಮೂರನೇ ಆದರ್ಶಪುರುಷನಾಗಿರುವುದಕ್ಕೆ ಹೆಚ್ಚೇನು ವ್ಯತ್ಯಾಸವಿಲ್ಲ. ಅದು ಆಶ್ಚರ್ಯಪಡುವಂತಹದ್ದೂ ಅಲ್ಲ!

                  ಚಿತ್ತೋಡಿನ ಮೇಲಾದ ದೌರ್ಜನ್ಯ ಕೇವಲ ಜನರಿಗಷ್ಟೇ ಸೀಮಿತವಾಗುಳಿಯಲಿಲ್ಲ. ಖಿಲ್ಜಿ, ಬಾಬರರು "ಕರುಣೆದೋರಿ" ಉಳಿಸಿದ್ದ ಪುಣ್ಯಕ್ಷೇತ್ರಗಳೆಲ್ಲಾ ಈ ಪಾಪಿಯ ಕತ್ತಿಗೆ ಬಲಿಯಾದವು. ರಜಪೂತರ ಆರಾಧ್ಯ ದೈವ ಏಕಲಿಂಗೇಶ್ವರನ ವಿಗ್ರಹ ಮಸೀದಿಗಳಲ್ಲಿ ಕುರಾನನ್ನಿಡುವ ಪೀಠಕ್ಕಾಗಿ ತುಂಡರಿಸಲ್ಪಟ್ಟಿತು. ಇಂತಹವನನ್ನು ಪರಮತ ಸಹಿಷ್ಣು ಎಂದವರಿಗೆ ಅಕ್ಬರನೇ 1568 ಮಾರ್ಚ್ 9ರಂದು ಹೊರಡಿಸಿದ ವಿಜಯೋನ್ಮಾದದ "ಫತ್ವಾ" ತಮ್ಮ ಸೆಕ್ಯುಲರ್ ಬುದ್ಧಿಯಿಂದಲೇ ಮರೆತುಹೋಗಿರಬೇಕು! "ನಮ್ಮ ಅಮೂಲ್ಯ ಸಮಯವನ್ನು ಜಿಹಾದಿಗೆ ಸರ್ವರೀತಿಯಿಂದಲೂ ಬಳಸೋಣ. ಕೋಟೆ-ಕೊತ್ತಲಗಳನ್ನು ವಶಪಡಿಸಿಕೊಂಡು, ಖಡ್ಗದ ಬಲದಿಂದ ಬಹುದೇವತಾರಾಧನೆಯನ್ನು ಹೋಗಲಾಡಿಸಿ ಕಾಫಿರರ ಪುಣ್ಯ ಸ್ಥಳಗಳನ್ನು ನಾಶಮಾಡಿ ಇಸ್ಲಾಂ ಪತಾಕೆಯನ್ನು ಹಾರಿಸೋಣ." ಎಂದವನನ್ನು ಆದರ್ಶವಾಗಿಟ್ಟುಕೊಂಡವರು ಹೇಗಿರಬಹುದು?

             ವಿನ್ಸೆಂಟ್ ಸ್ಮಿತ್, ಜೇಮ್ಸ್ ಟಾಡ್ ಮುಂತಾದ ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವುದನ್ನು ಬಿಡಿ, ಅಬುಲ್ ಫಜಲ್ ಎಂಬ ಅಕ್ಬರ್ ಭಕ್ತ ಬರೆದುದನ್ನೂ ಪಕ್ಕಕ್ಕಿಡಿ, ಸ್ವತಃ ಅಕ್ಬರನೇ ಹೊರಡಿಸಿದ ಫತ್ವಾಗಳನ್ನೆಲ್ಲಾ ನೋಡಿದರೆ ಸಾಕು ದಯಾಪರ, ಪರಮತ ಸಹಿಷ್ಣುವಿನ ನಿಜಬಣ್ಣ ಬಯಲಿಗೆ ಬರುತ್ತದೆ. ತನ್ನ ಕನಸು ಸಾಕಾರಗೊಳಿಸಲು ಈ ಮಹಾನ್ ಮಾನವತಾವಾದಿ ಮಾಡಿದ ದಾನವ ಉಪಕ್ರಮಗಳ ಅರಿವಾದೀತು.
--ಮುಂದುವರಿಯುವುದು.