ಪುಟಗಳು

ಸೋಮವಾರ, ಮೇ 18, 2015

ಬೋಧಿ ವೃಕ್ಷದ ಕೆಳಗೆ ಮೌನವಾಂತು ಕುಳಿತ ಶಾಕ್ಯಮುನಿಯನ್ನೂ ಎಳೆದಾಡಿದ ಪರಾಕ್ರಮ!

ಬೋಧಿ ವೃಕ್ಷದ ಕೆಳಗೆ ಮೌನವಾಂತು ಕುಳಿತ  ಶಾಕ್ಯಮುನಿಯನ್ನೂ ಎಳೆದಾಡಿದ ಪರಾಕ್ರಮ!

              "ಬ್ರಾಹ್ಮಣರೆಲ್ಲರೂ ಬುದ್ಧನ ಮೇಲಿನ ಅಸಹನೆಯಿಂದ ಅವನನ್ನು ವಾಚಾಮಗೋಚರವಾಗಿ ಜರಿಯುತ್ತಿದ್ದರು. ಅವರಲ್ಲೇ ಕೆಲವರು ಅದೇ ಬುದ್ಧನನ್ನು ವಿಷ್ಣುವಿನ ಅವತಾರದಂತೆ ಪರಿಗಣಿಸಿದರು. ಈ ಬಗೆಯ ವೈರುಧ್ಯ ಹೇಗೆ ಸಾಧ್ಯ? ಈ ಒಗಟನ್ನು ಬಿಡಿಸುವುದು ಹೇಗೆ? ಅದನ್ನು ತೊಡೆದು ಹಾಕುವುದೇ ಈ ವೈರುಧ್ಯವನ್ನು ನಿವಾರಿಸಲಿರುವ ಪರಿಹಾರ. ಅದಕ್ಕಾಗಿ ಪೂರ್ವದಲ್ಲಿ ಇಬ್ಬರು ಬುದ್ಧರಿದ್ದರೆಂದು ಊಹಿಸಿಕೊಳ್ಳಬೇಕು. ಅವರಲ್ಲಿ ಒಬ್ಬ ದ್ವಾಪರ ಯುಗಾಂತ್ಯದಲ್ಲಿ ಹುಟ್ಟಿದವನು, ಇನ್ನೊಬ್ಬ ಸಾವಿರ ವರ್ಷ ಕಳೆದ ಮೇಲೆ ಜನಿಸಿದವನು" ಪ್ರಾಚೀನ ಭಾರತದ ಚರಿತ್ರೆ ರಚನೆಯ ಮೂಲಪುರುಷರಲ್ಲಿ ಮುಖ್ಯನಾದ ಸರ್ ವಿಲಿಯಂ ಜೋನ್ಸ್ ಸಾಹೇಬ ತನ್ನ ಕೃತಿಯ ನಾಲ್ಕನೇ ಸಂಪುಟದಲ್ಲಿ ಹೊರಡಿಸಿದ ಮಹದಾಜ್ಞೆ ಇದು!

                ಅರೇ....., ಹಿಂದೂಗಳು ಬೌದ್ಧರೊಂದಿಗೆ ಜಗಳವಾಡಿ ಅವರನ್ನು ಈ ದೇಶದಿಂದ ಅಕ್ಷರಶಃ ಒದ್ದೋಡಿಸಿ ಆಮೇಲೆ ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಿದರೇ ಅಥವಾ ದೇವನನ್ನಾಗಿಸಿದ ಮೇಲೆ ಬೌದ್ಧರ ಮೇಲೆ ಹಣಾಹಣಿಗಿಳಿದರೆ? ಭಾರತದ ಇತಿಹಾಸವೆನ್ನುವುದು ಅಂತೆಕಂತೆಗಳ ಬೊಂತೆಯಾಗಿ ಗೊಂದಲಗಳ ಗೂಡಾದದ್ದು ಹೀಗೆಯೇ. ಅದಕ್ಕಾಗಿಯೇ ಬುದ್ಧ ಎರಡಾದ, ಗುಪ್ತರ ಚಂದ್ರಗುಪ್ತನನ್ನು ಮೌರ್ಯ ಚಂದ್ರಗುಪ್ತನೊಡನೆ ತಳುಕು ಹಾಕಿದರು. ವಿಕ್ರಮ ಶಾಲಿವಾಹನಾದಿ ಶಕಪುರುಷರು ಬದಿಗೆ ಸರಿದರು. ಬೇರೆ ಬೇರೆ ಕಾಲದ ಮೂವರು ಅಶೋಕರನ್ನು ಕಲಸುಮೇಲೋಗರ ಮಾಡಿ ಭಾರತದ ಇತಿಹಾಸವನ್ನೇ ಶೋಕಭರಿತವನ್ನಾಗಿಸಿದರು. ಹೌದು ನಮ್ಮ ಇತಿಹಾಸ ರಚನೆಯಾದದ್ದೇ ಹಾಗೆ. ಕಗ್ಗಂಟು ಬಂದಲ್ಲಿ ಕತ್ತರಿಸಿ ಹಾಕುತ್ತಾ, ಅರ್ಥವಾಗದೇ ಇದ್ದಲ್ಲಿ ತಮಗೆ ಬೇಕಾದ ಹಾಗೆ ಊಹಿಸುತ್ತಾ, ಖಚಿತ ದಾಖಲೆಗಳಿರುವ ಘಟನೆಗಳನ್ನು ಕಲಸುಮೇಲೋಗರ ಮಾಡುತ್ತಾ, ಮನಸ್ಸು ಬಂದಲ್ಲಿ ಕವಿಗಳ ರೀತಿ ಕಲ್ಪನೆಗಳನ್ನು ಹೆಣೆಯುತ್ತಾ ತಮಗೆ ಬೇಕಾದ ಹಾಗೆ ತಿರುಚಿ ತಮ್ಮರಸರಿಗೆ ರುಚಿಸುವಂತೆ ಬರೆದರು.

                    ಕಾಶ್ಮೀರ, ಚೀನಾ, ಟಿಬೆಟ್ ಮೊದಲಾದ ಕಡೆ ಸಿಕ್ಕಿದ ಬೌದ್ಧರ ಕುರಿತಾದ ದಾಖಲೆಗಳನ್ನು, ಅಬುಲ್ ಫಜಲ್ ಬರಹಗಳು ಹಾಗೂ ನಮ್ಮ ಪುರಾಣಗಳನ್ನು ಪರಿಶೀಲಿಸಿದ ನಂತರ ಬುದ್ಧನ ಜನ್ಮವರ್ಷವನ್ನು ಕ್ರಿ.ಪೂ. 1027 ಎಂದು ದಾಖಲಿಸಿದ. ಮ್ಯಾಕ್ಸ್ ಮುಲ್ಲರ್, ಚೀನೀ ಬೌದ್ಧ ಗ್ರಂಥಗಳ ಪ್ರಕಾರ ಅಶೋಕನ ಕಾಲ ಕ್ರಿ.ಪೂ 850 ಎಂದು ಪರಿಗಣಿಸಿ ಬುದ್ಧ ಅವನಿಗಿಂತ 371 ವರ್ಷ ಹಿಂದಿನವನಾದುದರಿಂದ ಬುದ್ಧ ನಿರ್ವಾಣ ಕ್ರಿ.ಪೂ 1260ರಲ್ಲಾದುದೆಂದ. ಆತನ ಸಮಕಾಲೀನ ಫ್ಲೀಟ್ ಕಲ್ಹಣನ ರಾಜತರಂಗಿಣಿಯ ಪ್ರಕಾರಶೋಕ ಕ್ರಿ.ಪೂ 1260ರ ಸಮಯದವನಾದುದರಿಂದ ಬುದ್ಧ ನಿರ್ವಾಣ ಕ್ರಿ.ಪೂ 1631ರಲ್ಲಾಯಿತೆಂದು ನಿರ್ಣಯಿಸಿದ. ಆದರೆ ಉಳಿದ ಚರಿತ್ರಕಾರರು ಲಭ್ಯವಿದ್ದ ಅಪಾರ ದಾಖಲೆಗಳನ್ನು ಬದಿಗೆ ಸರಿಸಿ ಶಾಕ್ಯಮುನಿಯನ್ನು ಕ್ರಿ.ಪೂ. ಐದನೇ ಶತಮಾನಕ್ಕೆ ಹೊತ್ತೊಯ್ದರು.

                 ಕ್ಷೇಮಜಿತ್, ಬಿಂಬಸಾರ ಹಾಗೂ ಅಜಾತಶತ್ರು ಎಂಬ ಶಿಶುನಾಗ ವಂಶದ ದೊರೆಗಳು ಬುದ್ಧನಿಗೆ ಸಮಕಾಲೀನರು. ಬುದ್ಧನನ್ನು ವೈಶಾಲಿಗೆ ಕರೆದೊಯ್ಯಲು ಅನುಮತಿಗೋಸ್ಕರ ಅಲ್ಲಿನ ಪ್ರಜೆಗಳ ಗುಂಪೊಂದು ಆಸ್ಥಾನಕ್ಕೆ ಬಂದಾಗ ಅಲ್ಲಿನ ಅರಸನಾಗಿದ್ದವ ಬಿಂಬಸಾರ. ಆ ಸಂದರ್ಭದಲ್ಲಿ ಬಿಂಬಸಾರ ಹಾಕಿದ ಷರತ್ತುಗಳು ಹಾಗೂ ಬುದ್ಧ ತೋರಿಸಿದ ಮಹಾತ್ಮೆಗಳನ್ನು ದಿವ್ಯವಾದನ ಗ್ರಂಥ ವಿವರಿಸಿದೆ. ಬಿಂಬಸಾರನ ಕಾಲ ಕ್ರಿ.ಪೂ 1852ರಿಂದ 1814. ಬುದ್ಧನ 72ನೇ ವಯಸ್ಸಿನಲ್ಲಿ ಬಿಂಬಸಾರನ ಮಗ ಅಜಾತಶತ್ರು ಮಗಧದ ಪಟ್ಟವನ್ನೇರಿದನೆಂದೂ, ಅದರ ಎಂಟುವರ್ಷಗಳ ತರುವಾಯ ಬುದ್ಧನ ಮಹಾಪ್ರಸ್ಥಾನವಾಯಿತೆಂದು ಕೆನೆತ್ ಸ್ಯಾಂಡರ್ಸ್ ಉಲ್ಲೇಖಿಸಿದ್ದಾನೆ. ಅಜಾತಶತ್ರುವಿನ ಕಾಲ ಕ್ರಿ.ಪೂ. 1814-1787. ಈ ಕಾಲಮಾನ ವಿಷ್ಣು, ವಾಯು, ಮತ್ಸ್ಯ, ಬ್ರಹ್ಮಾಂಡ ಪುರಾಣಗಳಲ್ಲಿ ಹೇಳಿದ ಇಕ್ಷ್ವಾಕು ವಂಶಕ್ರಮದ ಕಾಲಕ್ಕೆ ತಾಳೆಯಾಗುತ್ತದೆ. ಬುದ್ಧನದ್ದು ಇಕ್ಷ್ವಾಕು ವಂಶ. ಪುರಾಣಗಳು, ಬೌದ್ಧ ಸಾಹಿತ್ಯ, ಪಾಶ್ಚಾತ್ಯ ವಿದ್ವಾಂಸರ ಲೆಕ್ಕಾಚಾರಗಳನ್ನೆಲ್ಲಾ ಅವಲೋಕಿಸಿದಾಗ ಬುದ್ಧನ ಕಾಲ ಕ್ರಿ.ಪೂ 1882ರಿಂದ 1807 ಎನ್ನುವುದು ಖಚಿತವಾಗುತ್ತದೆ.
ಆದರೆ ನಮ್ಮ ಇತಿಹಾಸಕಾರರು ಅತ್ತ ಪುರಾಣಗಳು, ಬೌದ್ಧ ಸಾಹಿತ್ಯಗಳನ್ನೂ ನಂಬಲಿಲ್ಲ. ಇತ್ತ ವಿದೇಶೀ ಇತಿಹಾಸಕಾರರ ಕಾಲನಿರ್ಣಯದ ಹತ್ತಿರಕ್ಕೂ ಸುಳಿಯಲಿಲ್ಲ. ಚೀನೀ ಯಾತ್ರಿಕ ಫಾಹಿಯಾನನ ಮಾತನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಫಾಹಿಯಾನನ ಪ್ರಕಾರ ಬುದ್ಧನ ನಿರ್ವಾಣವಾದುದು ಕ್ರಿ.ಪೂ. 1050. ಫಾಹಿಯಾನ್ ಅಪ್ಘಾನಿಸ್ತಾನಕ್ಕೆ ಹೋದಾಗ ಅಲ್ಲಿ ಭೇಟಿಯಾದ ಬೌದ್ಧ ಗುರುಗಳನ್ನು ಆ ದೇಶದಲ್ಲಿ ಬೌದ್ಧಮತದ ಆರಂಭದ ಬಗ್ಗೆ ಕೇಳಿದಾಗ ಬುದ್ಧನ ನಿರ್ವಾಣದ 300 ವರ್ಷಗಳ ತರುವಾಯ ತಮ್ಮ ದೇಶದಲ್ಲಿ ಮೈತ್ರೇಯ ಬೋಧಿಸತ್ವನ ವಿಗ್ರಹ ಸ್ಥಾಪಿಸಿದಾಗಿನಿಂದ ಪ್ರವರ್ಧಮಾನಕ್ಕೆ ಬಂತು ಎನ್ನುವ ಮಾಹಿತಿ ಸಿಕ್ಕಿತು. ಈ ವಿಗ್ರಹ ನಿರ್ಮಾಣ ಚೀನಾದ ಚೌ ವಂಶಸ್ಥ ಪಿಇಂಗ್ ರಾಜ(ಕ್ರಿ.ಪೂ. 750-716)ನ ಕಾಲದಲ್ಲಿ ಆಯಿತೆಂದು ಫಾಹಿಯಾನ ಊಹಿಸಿದ. ಆದರೆ ಇ.ಜೆ. ರಾಪ್ಸನ್, ವಿನ್ಸೆಂಟ್ ಸ್ಮಿತ್ ಹಾಗೂ ಅವರನ್ನನುಸರಿಸಿದ ನಮ್ಮವರೂ ಬುದ್ಧನನ್ನು ಕ್ರಿ.ಪೂ 482 ರಲ್ಲಿ ಹುಟ್ಟಿಸಿ ಕ್ರಿ.ಪೂ 403 ರಲ್ಲಿ ಸಾಯಿಸಿದರು! ರಾಪ್ಸನ್ "ದುರದೃಷ್ಟವಶಾತ್ ಬೌದ್ಧ ಕಾಲಕ್ರಮವನ್ನು ಕುರಿತು ಸವಿಸ್ತಾರವಾಗಿ ಬರೆದ ನಂತರವೂ ಬುದ್ಧನ ಜನ್ಮದಿನವನ್ನು ಕುರಿತು ಖಚಿತವಾಗಿ ಹೇಳಲಾರದವರಾಗಿದ್ದೇವೆ. ಇಲ್ಲಿ ಉಲ್ಲೇಖಿಸಿರುವ ಕ್ರಿ.ಪೂ. 483ನ್ನು ತಾತ್ಕಾಲಿಕವೆಂದೇ ಪರಿಗಣಿಸಬೇಕು" ಎಂದಿದ್ದಾನೆ. ಆದರೆ ವಿನ್ಸೆಂಟ್ ಸ್ಮಿತ್ ಪ್ರಕಾರ ಬುದ್ಧನ ಕಾಲ ಸಂಧಿಗ್ಧವಾದರೂ ಕೂಡಾ ಕ್ರಿ.ಪೂ. 487ರ ಕಾಲವೇ ಹೆಚ್ಚು ಸೂಕ್ತ!

                ಕಾಶ್ಮೀರದ ಚರಿತ್ರೆಯುಳ್ಳ ಗ್ರಂಥ ಕಲ್ಹಣ ಬರೆದ ರಾಜತರಂಗಿಣಿ. ಕ್ರಿ.ಶ 1148ರಲ್ಲಿ ಕಾಶ್ಮೀರದ ರಾಜವಂಶಗಳ ವಾಸ್ತವ ಚರಿತ್ರೆಯನ್ನು ಸಿದ್ಧಗೊಳಿಸಿದಾಗ ಮೂಡಿದ ಐತಿಹಾಸಿಕ ಗ್ರಂಥವಿದು. ರಾಜತರಂಗಿಣಿಯ ಪ್ರಕಾರ ಕಾನಿಷ್ಕನಿಗೆ ನೂರೈವತ್ತು ವರ್ಷಗಳ ಮೊದಲು ಬುದ್ಧ ನಿರ್ವಾಣ ಹೊಂದಿದ. ಕಾನಿಷ್ಕನ ಕಾಲ ಕ್ರಿ.ಪೂ. 1294ರಿಂದ 1234. ಅಂದರೆ ಬುದ್ಧನಿರ್ವಾಣ ಕ್ರಿ.ಪೂ. 1444ರಲ್ಲೇ ಆಗಿರಬೇಕು. ಆದರೆ ಆಧುನಿಕ ಚರಿತ್ರಕಾರರು ಕಾನಿಷ್ಕನನ್ನು ಕ್ರಿ.ಶ. 78ಕ್ಕೆ ತಳ್ಳಿದರು. ಹಾಗಾದಲ್ಲಿ ಬುದ್ಧ ಕ್ರಿ.ಪೂ 72ರಲ್ಲಿ ನಿರ್ವಾಣ ಹೊಂದಬೇಕಿತ್ತಲ್ಲವೇ? ಕ್ರಿ.ಪೂ. 403 ಆದದ್ದು ಹೇಗೆ? ಕಾನಿಷ್ಕನ ನಂತರ ಕಾಶ್ಮೀರವನ್ನಾಳಿದ ರಾಜ ಅಭಿಮನ್ಯು. ಆಗ ನಾಗಾರ್ಜುನ ಎಂಬ ಬೋಧಿಸತ್ವ ರಾಜ್ಯಾದ್ಯಂತ ಬೌದ್ಧಮತವನ್ನು ಪಸರಿಸಿದನೆಂದು ರಾಜತರಂಗಿಣಿ ಹೇಳುತ್ತದೆ. ಒಂದು ವೇಳೆ ಬುದ್ಧ ಕ್ರಿ.ಪೂ 483ರಲ್ಲೇ ಹುಟ್ಟಿದ್ದರೆ ಕ್ರಿ.ಪೂ. 1234ರ ಅಭಿಮನ್ಯುವಿನ ಕಾಲದಲ್ಲಿಯೇ ಬೌದ್ಧಮತ ವ್ಯಾಪಿಸಿದ್ದು ಹೇಗೆ? ಇನ್ನು ಬುದ್ಧನ ಜೀವನದಲ್ಲಿನ ಘಟನೆಗಳ ಸಮಯದಲ್ಲಿನ ತಿಥಿ-ಗ್ರಹಗತಿಗಳನ್ನು ತೆಗೆದುಕೊಂಡು ತಾಳೆ ನೋಡಿದರೆ ಬುದ್ಧನು ಹತ್ತೊಂಬತ್ತನೇ ಶತಮಾನದವನಾಗಿದ್ದರೆ ಮಾತ್ರ ಸರಿಹೊಂದುವುದೆಂದು, ಕ್ರಿ.ಪೂ ಐದನೇ ಶತಮಾನಕ್ಕೆ ಸ್ವಲ್ಪವೂ ಹೊಂದಾಣಿಕೆಯಾಗುವುದಿಲ್ಲವೆಂದು ವಿ. ತಿರುವೆಂಕಟಾಚಾರ್ಯರು ಸಿದ್ಧಪಡಿಸಿದರು. ಈ ಪರಿಶೀಲನೆಯಿಂದ ಬುದ್ಧನ ಜನನ ಕ್ರಿ.ಪೂ. 1886 ಮಾರ್ಚ್ 31ರಂದು ಹಾಗೂ ನಿರ್ವಾಣ 1807 ಮಾರ್ಚ್ 27ರಂದು ಎನ್ನುವುದು ರುಜುವಾತಾಯಿತು.

                  ಒಟ್ಟಾರೆ ಆಧಾರಗಳು ಬೆಟ್ಟದಷ್ಟಿದ್ದರೂ ಪಾಶ್ಚಾತ್ಯ ಇತಿಹಾಸಕಾರರು ಹೇಳಿದ್ದೇ ಸತ್ಯವೆಂದು ನಂಬುವ ಭಾರತೀಯರು ಇರುವವರೆಗೆ ಬುದ್ಧನ ಹುಟ್ಟು ಐದನೇ ಶತಮಾನದಲ್ಲೇ ಇರುತ್ತದೆ. ಇಬ್ಬಿಬ್ಬರು ಬುದ್ಧರು ಬರುತ್ತಾರೆ. ಆರ್ಯ ಆಕ್ರಮಣದ ಪೊಳ್ಳುವಾದ ವಿಜೃಂಭಿಸುತ್ತದೆ. ಮತಾಂಧರೇ ಮಹಾತ್ಮರಾಗಿ ರಾಷ್ಟ್ರೀಯತೆಯ ಹರಿಕಾರರು ಕೋಮುವಾದಿಗಳಾಗಿ ಕಾಣಿಸುತ್ತಿರುತ್ತಾರೆ. ನೈಜ ಇತಿಹಾಸ ಪಠ್ಯಪುಸ್ತಕಗಳಲ್ಲಿ ಅಳವಡಿಸದ ಹೊರತು ಭಾರತೀಯರ ಸ್ಮೃತಿ ಶಕ್ತಿ ಉದ್ದೀಪನಗೊಳ್ಳದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ