ಪುಟಗಳು

ಶುಕ್ರವಾರ, ಮೇ 29, 2015

ಹಿಂದುತ್ವದ ವಟವೃಕ್ಷವನ್ನುಳಿಸಿದ ಪ್ರಚಂಡ ಶಿವಶಕ್ತಿ

ಹಿಂದುತ್ವದ ವಟವೃಕ್ಷವನ್ನುಳಿಸಿದ ಪ್ರಚಂಡ ಶಿವಶಕ್ತಿ




"ದಾವಾ ದ್ರುಮದಂಡ ಪರ ಚಿತ್ತಾ ಮೃಗಝಂಡ ಪರ
ಭೂಷಣ ಬಿತಂಡ ಪರ ಜೈಸೇ ಮೃಗರಾಜ ಹೈ|
ತೇಜ ತಮ ಅಂಶ ಪರ ಕಾನ್ಹ ಜಿಮ ಕಂಸ ಪರ
ತ್ಯೋ ಮ್ಲೇಚ್ಛವಂಶ ಪರ ಶೇರ ಶಿವರಾಜ ಹೈ||"

ಕಾಡಿನ ಮರಗಳಿಗೆ ಕಾಳ್ಗಿಚ್ಚಿನಂತೆ, ಚಿಗರೆಯ ಗುಂಪಿಗೆ ಚಿರತೆಯಂತೆ, ಮದ್ದಾನೆ ಹಿಂಡಿಗೆ ಮೃಗರಾಜನಂತೆ; ಇರುಳ ಕತ್ತಲಿಗೆ ಸೂರ್ಯನಂತೆ, ಕಂಸನಿಗೆ ಕೃಷ್ಣನಿದ್ದಂತೆ, ಮ್ಲೇಚ್ಛರ ವಂಶಕ್ಕೆ ಈ ಸಿಂಹ ಸದೃಶ ರಾಜನಿದ್ದಾನೆ! ಶಿವರಾಜನಿದ್ದಾನೆ!
ತಂಗದಿರನ ತಂಪಿನ ಕಿರಣಗಳನ್ನು ಹೊದ್ದು, ನಿರ್ಭಿಡೆಯಿಂದ ಬೀಸುತಿಹ ತಂಗಾಳಿಗೆ ಮನಸೋತು, ಏರಿಳಿದು ನರ್ತಿಸುತಿಹ ಚಂಚಲ ತೆರೆಗಳ ನಿನಾದಕ್ಕೆ ಶ್ರುತಿ ಬೆರೆಸಿ ಮಧುರ ಸ್ವರದಲ್ಲಿ ತರುಣ ಸನ್ಯಾಸಿಯೊಬ್ಬ "ಅವನೊಬ್ಬ ಕಳ್ಳ, ಕಪಟಿ, ಖೂನಿ" ಎಂದ ತನ್ನ ಶಿಷ್ಯನಿಗೆ ಎರಡೂವರೆ ಶತಮಾನಗಳ ಹಿಂದಿನ ರೋಮಹರ್ಷಕ ಇತಿಹಾಸವನ್ನು ಚಿತ್ರಿಸಿದ ಪರಿ ಹೀಗೆ! ಆ ತರುಣ ಸನ್ಯಾಸಿ ಯಾರೆಂದುಕೊಂಡಿರಿ? ನವ ಭಾರತದ ನವೋದಯದ ಹರಿಕಾರ ರಾಷ್ಟ್ರದೃಷ್ಟಾರ ತೇಜಃಪುಂಜ ಸ್ವಾಮಿ ವಿವೇಕಾನಂದ!

ಶಿವಾಜಿ...? ಹೌದು...ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅದೇ ಶಿವಾಜಿ. ಶಿವಾಜಿ ಜನಿಸಿದ ಸಂದರ್ಭ ಎಂತಹದ್ದು? ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಜನಾಂಗಕ್ಕೆ ಜನಾಂಗವೇ ವಿನಾಶದ ಮಡುವಿನಲ್ಲಿ ಮುಳುಗಿಹೋಗುತ್ತಿದ್ದ ವಿಷಘಳಿಗೆಯಲ್ಲಿ ಶಿವಾಜಿ ಎದ್ದು ಬಂದ! ಆ ಮಹಾಪುರುಷನ ಬರವಿಗಾಗಿ ಅದೆಷ್ಟು ಸಾಧುಸಂತರ ತಪಸ್ಸು ನಡೆದಿತ್ತು. ಮ್ಲೇಚ್ಛರ ಮೃತ್ಯುದವಡೆಯಿಂದ ಈ ಮಣ್ಣಿನ ಮಕ್ಕಳನ್ನು ಮುಕ್ತಗೊಳಿಸುವ ಆ ಉದ್ಧಾರಕನ ಬರವಿಗೋಸ್ಕರ ಅದೆಷ್ಟು ಜನ ಕಾದು ಕುಳಿತಿದ್ದರು. ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದ ಸಮಯದಲ್ಲಿ ಅವತರಿಸಿ ಅಧರ್ಮವನ್ನಳಿಸಿ ಧರ್ಮರಾಜ್ಯ ಸ್ಥಾಪಿಸಿದ ಯುಗಪುರುಷನಾತ. ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಒಳಪಟ್ಟಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ! ಭಾರತದ ಆತ್ಮಚೇತನದ ಮೂರ್ತ ರೂಪ ಅವನು. ಶೌರ್ಯಕ್ಕೆ ಶೌರ್ಯದಿಂದ, ಕ್ರೌರ್ಯಕ್ಕೆ ಕ್ರೌರ್ಯದಿಂದ, ಮೋಸಕ್ಕೆ ಮೋಸದಿಂದ ಉತ್ತರಿಸಿ, ಹಿಂದುಗಳ ಸಹಸ್ರ ವರುಷಗಳ ಭೀತಿಯನ್ನು ಹೋಗಲಾಡಿಸಿದ ಶಿವಾಂಶ ಆತ. ರಾಷ್ಟ್ರವೀರನೊಬ್ಬನಿಗಿರಬೇಕಾದ ಸಕಲ ಲಕ್ಷಣಗಳು ಮೂರ್ತೀಭವಿಸಿದ ಪುರುಷೋತ್ತಮನೇ ಛತ್ರಪತಿ ಶಿವಾಜಿ! ಭೂಷಣ ಅನ್ನೋ ಕವಿ ಹೇಳುತ್ತಾನೆ,
"ಕಾಶಿಜೀ ಕೀ ಕಳಾ ಜಾತೀ ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ ಸುನ್ನತ್ ಹೋತಿ ಸಬ್ ಕೀ||"

ಶಿವಾಜಿ ಬಸಿರಲ್ಲಿದ್ದಾಗ ಮಾತೆ ಜೀಜಾಬಾಯಿಗೆ ವಿಹಾರ-ವಿಲಾಸ-ಸುಖಶಯ್ಯೆ-ಭಕ್ಷ್ಯ-ಭೋಜ್ಯಗಳ ಆಸೆಯಾಗುತ್ತಿರಲಿಲ್ಲ. ಬದಲಾಗಿ ಅವಳಿಗೆ ಗಿರಿದುರ್ಗಗಳನ್ನೇರಬೇಕೆನಿಸುತ್ತಿತ್ತು. ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕಬೇಕೆನಿಸುತ್ತಿತ್ತು. ಛತ್ರಚಾಮರಗಳೊಡನೆ ಸಿಂಹಾಸನದಲ್ಲಿ ಮಂಡಿಸುವ ಆಸೆಯಾಗುತ್ತಿತ್ತು. ವ್ಯಾಘ್ರವಾಹಿನಿಯಾಗಿ-ಶಸ್ತ್ರಧಾರಿಣಿಯಾಗಿ ಸಂಚರಿಸಬೇಕೆಂಬ ಬಯಕೆ ಉಂಟಾಗುತ್ತಿತ್ತು. ಶಿವನೇರಿ ದುರ್ಗದಲ್ಲಿ ಶುಕ್ಲನಾಮ ಸಂವತ್ಸರದ ಫಾಲ್ಗುಣ ತದಿಗೆ ಹಿಂದೂಸ್ಥಾನದ ಇತಿಹಾಸದಲ್ಲಿ ಅಮೃತಘಳಿಗೆಯಾಯಿತು. ತಾಯೆದೆಯ ವಾತ್ಸಲ್ಯರಸದೊಂದಿಗೆ ಧರ್ಮರಸ ವೀರರಸಗಳನ್ನೂ ಸವಿಯುತ್ತಾ ಬೆಳೆದ ಶಿವಬಾ. ಹಾಲಿನ ಒಂದೊಂದು ಗುಟುಕು, ಅನ್ನದ ಒಂದೊಂದು ತುತ್ತಿನೊಂದಿಗೆ ಸ್ವದೇಶ-ಸ್ವಧರ್ಮನಿಷ್ಠೆಯ ತಿನಿಸನ್ನೂ ಉಣಬಡಿಸಿದ ಮಾತೆ ರಾಜನೀತಿ-ಯುದ್ಧನೀತಿಗಳನ್ನು ಮಗನಿಗೆ ಅರೆದು ಕುಡಿಸಿದಳು. ಮುಸಲ್ಮಾನರ ಹಾವಳಿಯಿಂದ ಹಾಳು ಬಿದ್ದಿದ್ದ ಪುಣೆಗೆ ಬಂದೊಡನೆ ಮತಾಂಧರ ಅಟ್ಟಹಾಸಕ್ಕೆ ಒಳಗೊಳಗೆ ಕುದಿಯತೊಡಗಿದ ಶಿವಬಾ. "ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್" ಎಂಬ ಭೀಷಣ ಪ್ರತಿಜ್ಞೆ ಬಾಲ ಶಿವಾಜಿಯ ಬಾಯಿಂದ ಹೊರ ಬಿದ್ದು ಸಹ್ಯಾದ್ರಿಯ ಶಿಖರಗಳಲ್ಲೆಲ್ಲಾ ಅನುರಣಿಸಿತು. ಗುರು ದಾದಾಜಿಕೊಂಡದೇವನಿಂದ ದಕ್ಷ ಆಡಳಿತದ ಪ್ರತ್ಯಕ್ಷ ಪಾಠ ಹೇಳಿಸಿಕೊಂಡ ಶಿವಾಜಿಯ ದಿನಚರಿ ಹಿಂದೂಧರ್ಮದ ಅಚ್ಚಿನಲ್ಲಿ ಎರಕ ಹೊಯ್ದಿತ್ತು. ಬೆಂಗಳೂರಿನಲ್ಲಿದ್ದ ದಿನಗಳಲ್ಲಿ ಹಿಂದೂ ಸ್ವಾತಂತ್ರ್ಯದ ಜಯಭೇರಿ ಮೊಳಗಿಸಿದ್ದ ಮೈಸೂರಿನ ಕಂಠೀರವ ನರಸರಾಜನ ಪುಣ್ಯಪ್ರಭಾವ ಶಿವಾಜಿಯನ್ನೂ ತಟ್ಟಿತು. ಹಾಗಾಗಿಯೇ ಬಿಜಾಪುರದ ಬಾದಶಹನಿಗೆ ಮುಜರೆ ಸಲ್ಲಿಸುವ ಬದಲು ಸಹ್ಯಾದ್ರಿಯ ಶಿಖರಗಳ ಮುಜರೆ ಸ್ವೀಕರಿಸಲು, ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಿ ಛತ್ರಪತಿಯಾಗಿ ಮೆರೆಯಲು, ತುಳಜಾಭವಾನಿಯ ಆಶೀರ್ವಾದ ಪಡೆಯಲು ಮನ ಎಳಸಿತು! ಗೋವನ್ನು ಕಡಿಯಲು ಖಡ್ಗವನ್ನೆತ್ತಿದ್ದ ಕಟುಕನ ಕೈಯನ್ನು ಮಿಂಚಿನೋಪಾದಿಯಲ್ಲಿ ಒರೆಯೊಳಗಿದ್ದ ಖಡ್ಗ ತುಂಡರಿಸಿತು.

           ಶಿವಾಜಿಗೆ ನಗರದಲ್ಲಾರು ಬೆಂಬಲಿಸಲಿಲ್ಲ. ಹಾಗಂತ ಅವ ಸುಮ್ಮನುಳಿಯಲಿಲ್ಲ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳ ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿತು. "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ, ಚಿಮಣಾಜಿ, ಬಾಳಾಜಿ, ಸೂರ್ಯಾಜಿ, ಬಾಜಿ ಜೇಧೆ.... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು. ಮುಂದೆ ದಿಲ್ಲಿ, ಬಿಜಾಪುರಾದಿ ಸಾಮ್ರಾಜ್ಯಗಳ ಜಗದ್ವಿಖ್ಯಾತ ಸೇನಾನಿಗಳನ್ನು ಮಣ್ಣುಮುಕ್ಕಿಸಿದ ರಣಧುರಂದರರು ಇವರೇ! ಹದಿಮೂರರ ಎಳೆವಯಸ್ಸಿನಲ್ಲಿ ತನ್ನ ಸ್ವಂತದ ರಾಜಮುದ್ರೆಯನ್ನು ಅಷ್ಟಕೋನಾಕೃತಿಯಲ್ಲಿ ಸಂಸ್ಕೃತದಲ್ಲಿ ತಯಾರಿಸಿದ ಶಿವಾಜಿ.
"ಪ್ರತಿಪಚ್ಚಂದ್ರಲೇಖೇವ ವರ್ಧಿಷ್ಣುರ್ವಿಶ್ವವಂದಿತಾ|
ಶಾಹಸೂನೋಶ್ಶಿವಸ್ಯೈಷಾ ಮುದ್ರಾ ಭದ್ರಾಯ ರಾಜತೇ||"

ಅಲ್ಲಿ...ಸಹ್ಯಾದ್ರಿಯ ಗಿರಿಶಿಖರಗಳಲ್ಲಿ "ಜಯ ಜಯ ರಘುವೀರ ಸಮರ್ಥ" ಎನ್ನುವ ಉದ್ಘೋಷ ಕೇಳಿ ಬರತೊಡಗಿತು! ಶಿವಾಜಿಯ ಕ್ಷಾತ್ರ ತೇಜ, ಸಮರ್ಥ ರಾಮರ ಬ್ರಹ್ಮತೇಜದೊಡನೆ ಮಿಳಿತಗೊಂಡು ಸ್ವರಾಜ್ಯಕ್ಕೆ ತೋರಣ ಕಟ್ಟಲು ಮುಹೂರ್ತ ಹುಡುಕಲಾರಂಭಿಸಿತ್ತು! ಸ್ವರಾಜ್ಯಕ್ಕೆ ನೆರವಾಗುವ ಮಠಗಳು ಊರು ಕೇರಿಗಳಲ್ಲಿ ಎದ್ದು ನಿಂತವು. ಮತಾಂಧ ಅರಸರ ಅಟ್ಟಹಾಸಕ್ಕೆ ದೇಶ ನಲುಗುತ್ತಿದ್ದ ಆ ವೇಳೆಯಲ್ಲಿ, ಅವರ ಪದತಲದಲ್ಲಿ ಹಿಂದೂ ಸರದಾರರೆಲ್ಲಾ ಮಂಡಿಯೂರಿ ಕುಳಿತಿದ್ದಾಗ, ಸ್ವಾತಂತ್ರ್ಯವೆಂಬುದೇ ಮರೀಚಿಕೆಯಾಗಿದ್ದಾಗ ತೋರಣಗಡವನ್ನು ತನ್ನ ಪೋರ ಸೇನೆಯೊಡನೆ ಮುತ್ತಿದ ಶಿವಾಜಿ ಒಂದು ಹನಿ ರಕ್ತವೂ ಚೆಲ್ಲದಂತೆ ಆ ಗಡವನ್ನು ಗೆದ್ದು ತಾಯಿ ಭಾರತಿಗೆ ತೋರಣ ಕಟ್ಟಿದ(1946). ಅಲ್ಲಿ ಭಗವಾ ಉನ್ನತೋನ್ನತವಾಗಿ ಹಾರಾಡತೊಡಗಿತು. "ಹರಹರ ಮಹಾದೇವ" ಎನ್ನುವ ರಣಘೋಷ ತೋರಣದ ಸ್ವತಂತ್ರ ಆಗಸದಲ್ಲಿ ಸಿಂಹ ಘರ್ಜನೆಯಂತೆ ಮೊಳಗಿತು. ಮುಂದೆ ಅದು ಅಷ್ಟ ದಿಕ್ಕುಗಳಿಗೂ ಹೊರಳಿ ವಿಂಧ್ಯಾದ್ರಿಗಳಲ್ಲೂ ಪ್ರತಿಧ್ವನಿಸಿ, ಇಂದ್ರಪ್ರಸ್ಥದ ಸಿಂಹಾಸನವನ್ನೂ ವಶಪಡಿಸಿಕೊಂಡು, ಯಮುನೆ ಸಿಂಧೂಗಳಲ್ಲೂ ಭೋರ್ಗರೆದು ವಾಯುವ್ಯ ಪರ್ವತಶಿಖರಾಗ್ರಗಳಲಿ ಅನುರಣಿಸಿ ಕಾಬೂಲ್ ನದಿಯ ಅಲೆಗಳ ಮಧುರ ಆಲಾಪನೆಯಲಿ ಬೆರೆಯಿತು.

             ಕೊಂಡಾಣ, ರಾಜಗಡ ಗೆಲ್ಲುತ್ತಿದ್ದಂತೆಯೇ ಅಪ್ಪ ಶಹಾಜಿಯನ್ನು ಸೆರೆ ಹಿಡಿದ ಸುದ್ದಿ ಸಿಡಿಲೆರಗಿದಂತೆ ಬಂತು.  ಮುಯ್ಯಿಗೆ ಮುಯ್ಯಿ ತೀರಿಸಲು ಹೊರಟ ಶಿವಾಜಿಗೆ ಸಿಕ್ಕಿದ್ದು ಪುರಂದರ ಗಡ ಎಂಬ ವರಪ್ರಸಾದ. ಫತ್ತೇಖಾನ ಪತ್ತೆ ಇಲ್ಲದಂತೆ ಓಡಿದರೆ, ಮುಸೇಖಾನನೆಂಬ ದೈತ್ಯನನ್ನು ಕತ್ತರಿಸಿ ಹಾಕಿದರು ಸ್ವರಾಜ್ಯದ ಪೋರರು. ಅಣ್ಣ ಸಂಭಾಜಿ ಫರ್ರಾದಖಾನನನ್ನು ಹೊಡೆದೋಡಿಸಿದ್ದ. ತಂದೆಯನ್ನು ಬಿಡಿಸಲು ಶಿವಾಜಿ ಹೂಡಿದ ತಂತ್ರವೇನು ಗೊತ್ತೇ? ನೇರ ದಿಲ್ಲಿಯ ಮೊಘಲ ದೊರೆ ಶಹಜಾಹಾನನಿಗೆ "ನಾನೂ, ನನ್ನ ತಂದೆಯೂ ನಿಮ್ಮ ಸೇವೆಗೆ ಸಿದ್ಧ, ಆದರೆ ನನ್ನ ತಂದೆಯನ್ನು ಬಿಜಾಪುರದ ಬಾದಶಹಾ ಮೋಸದಿಂದ ಸೆರೆಹಿಡಿದಿದ್ದಾನೆ. ಅವರು ಬಿಡುಗಡೆಯಾದಕೂಡಲೇ ತಮ್ಮ ಸೇವೆಗೆ ಹಾಜರಾಗುತ್ತೇವೆ" ಎಂದು ಪತ್ರ ಬರೆದ. ಇನ್ನೂ ಇಪ್ಪತ್ತು ದಾಟದ ಪೋರನ ರಾಜಕಾರಣದ ಕೌಶಲ್ಯ ನೋಡಿ! ಈ ಸುದ್ದಿ ಬಿಜಾಪುರದ ಸುಲ್ತಾನನಿಗೆ ಮುಟ್ಟಿದ್ದೇ ತಡ ಅವನು ಬೆದರಿ ಶಹಾಜಿಯನ್ನು ಸಮ್ಮಾನಪೂರ್ವಕವಾಗಿ ಬಿಡುಗಡೆ ಮಾಡಿದ. ಜಾವಳಿಯನ್ನು ವಶಪಡಿಸಿಕೊಂಡ ಶಿವಾಜಿ ಅಲ್ಲಿ ಅಭೇದ್ಯ ಕೋಟೆಯೊಂದನ್ನು ಕಟ್ಟಿದ. ಮಾತ್ರವಲ್ಲ ಬಿಜಾಪುರದ ಸುಲ್ತಾನರಿಂದ ಗೆದ್ದ ಕೋಟೆಗಳಿಗೆ ದಿಲ್ಲಿಯ ದೊರೆ ಔರಂಗಜೇಬನಿಂದ ಮಾನ್ಯತೆ ಪಡೆದುಕೊಂಡ. ತಕ್ಷಣವೇ ಔರಂಗಜೇಬನ ಅಧೀನದಲ್ಲಿದ್ದ ಜುನ್ನರಿನ ಅಪಾರ ಐಶ್ವರ್ಯವನ್ನು ಮಧ್ಯರಾತ್ರಿ ದೋಚಿ ಅಲ್ಲಿನವೇ ಏಳುನೂರು ಕುದುರೆಗಳ ಮೇಲೆ ಹೇರಿಕೊಂಡು ಪುರಂದರಕ್ಕೆ ಪರಾರಿಯಾದ. ಇದೇ ರೀತಿ ಅಹಮದ್ ನಗರದಲ್ಲೂ ತನ್ನ ಕರಾಮತ್ತು ತೋರಿಸಿದ. ತನಗೇ ಚಳ್ಳೆಹಣ್ಣು ತಿನ್ನಿಸಿದ ಶಿವಾಜಿಯ ಮೇಲೆ ಕೆರಳಿ ಯುದ್ಧ ಸಾರಬೇಕೆನ್ನುವಷ್ಟರಲ್ಲಿ ಶಿವಾಜಿಯ ಕ್ಷಮಾಪಣಾಪತ್ರ ತಲುಪಿತು. ಆದರೆ ಅದರಲ್ಲಿ ಗೆದ್ದುದನ್ನು ಹಿಂದಿರುಗಿಸುವ ಮಾತೇ ಇರಲಿಲ್ಲ!

                  ಬೆಟ್ಟದಿಲಿಯನ್ನು ಕ್ಷಣಮಾತ್ರದಲ್ಲಿ ಎಳೆದು ತರುತ್ತೇನೆಂದು ಜಂಭಕೊಚ್ಚಿಕೊಳ್ಳುತ್ತಾ, ಹತ್ತುಸಾವಿರ ಸೈನ್ಯಬಲದೊಡನೆ ಹೊರಟು, ದಾರಿಯುದ್ದಕ್ಕೂ ದೇವಾಲಯಗಳನ್ನು, ಹಿಂದೂ ಪ್ರದೇಶಗಳನ್ನು ನಾಶಮಾಡುತ್ತಾ ಬಂದ ದೈತ್ಯ ಅಫ್ಜಲಖಾನನನ್ನು ಪ್ರತಾಪಗಢದಲ್ಲಿ ದೀನನಂತೆ ಎದುರಿಸಿದ ಶಿವಾಜಿ. ಆಲಿಂಗಿಸಿಕೊಳ್ಳುವ ನೆಪದಲ್ಲಿ ಆ ದೈತ್ಯ ಬಿಗಿಯಾಗಿ ತೋಳಿನಲ್ಲಿ ಸಿಲುಕಿಸಿ ಚಾಕುವಿನಿಂದ ಇರಿದಾಗ ಮೇಲಂಗಿಯೊಳಗಿದ್ದ ಕವಚ ಶಿವಾಜಿಯನ್ನು ಕಾಪಾಡಿತು. ಇನ್ನೇನು ಉಸಿರುಗಟ್ಟಿ ಸತ್ತೇ ಹೋದ ಎಂದನ್ನುವಷ್ಟರಲ್ಲಿಯೇ ಮಿಂಚಿನ ವೇಗದಲ್ಲಿ ವ್ಯಾಘ್ರನಖದಿಂದ ಬೆಟ್ಟದಂತಿದ್ದ ಆ ದೈತ್ಯನ ಕರುಳು ಬಗಿದ ಶಿವಾಜಿ! ತನ್ನ ಕೋಟೆಗಳನ್ನೆಲ್ಲಾ ವಶಪಡಿಸಿಕೊಂಡು ವಿಜಯಗರ್ವದಿಂದ ಮೆರೆಯುತ್ತಾ ಬಂದ ಷೆಯಿಸ್ತಾಖಾನನ ಸಹಸ್ರಾರು ಸೈನಿಕರ ಭದ್ರ ಚಕ್ರ ವ್ಯೂಹಕ್ಕೆ ಮಾರುವೇಷದಿಂದ ತನ್ನ 400 ಪ್ರಚಂಡ ಅನುಚರರನ್ನು ನುಗ್ಗಿಸಿ ರಾತ್ರೋರಾತ್ರಿ ಆಕ್ರಮಣ ಮಾಡಿದ ಶಿವಾಜಿಯ ಪರಾಕ್ರಮಕ್ಕೆ ಷೆಯಿಸ್ತಾಖಾನ್ ಬೆರಳುಗಳನ್ನು ಕಡಿಸಿಕೊಂಡು ಉಟ್ಟಬಟ್ಟೆಯಲ್ಲೇ ಓಡಬೇಕಾಯಿತು! ಔರಂಗಜೇಬನ ಆಸ್ಥಾನದಲ್ಲುಂಟಾದ ಅವಮಾನದಿಂದ ಕುದಿದು ಸ್ಫೋಟಿಸಿದ. ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ತಿಂಡಿಯ ಬುಟ್ಟಿಯಲ್ಲಿ ಅಡಗಿ ಪಾರಾಗಿ ಹೊರಬಂದು ಯತಿವೇಷ ಧರಿಸಿ ತನ್ನ ಪಾಳಯ ಸೇರಿದ!

                  ಹೀಗೆ ಅವಶ್ಯಕತೆ ಉಂಟಾದಾಗ ಪರಾಕ್ರಮದಿಂದ, ಅವಕಾಶವಿದ್ದ ಕಡೆ ವ್ಯಾವಹಾರಿಕ ಜಾಣ್ಮೆ-ರಾಯಭಾರ-ಸೂಕ್ಷ್ಮ ರಾಜಕಾರಣಗಳಿಂದ ಬೇರೆ ದಾರಿಯೇ ಇಲ್ಲದಿದ್ದಾಗ ಕ್ರೌರ್ಯ-ಕಪಟಗಳಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಸ್ವರಾಜ್ಯಕ್ಕೆ ಜೋಡಿಸಿದ. ಇದಕ್ಕಾಗಿ ಸುಲ್ತಾನರ ನಡುವಿನ ವೈರುಧ್ಯಗಳನ್ನೂ, ಅವರಿಗೂ ಮೊಘಲ್ ಬಾದಷಹಾರಿಗೂ ಇದ್ದ ದ್ವೇಷವನ್ನೂ ಚೆನ್ನಾಗಿ ಬಳಸಿಕೊಂಡ. ಶಾಶ್ವತವಾದ ಮಿತ್ರತ್ವ-ಶತ್ರುತ್ವಗಳನ್ನು ಯಾರೊಂದಿಗೂ ಇರಿಸಿಕೊಳ್ಳದೆ ಪರಿಸ್ಥಿತಿಗೆ ತಕ್ಕಂತೆ ವ್ಯೂಹ ರಚಿಸಿ ಭಯಂಕರ ಯುದ್ಧಗಳನ್ನು ಮಾಡಿ ಅರಿಭಯಂಕರನಂತೆ ಕಾದಾಡಿ ಅನೇಕ ದಿಗ್ವಿಜಯಗಳನ್ನು ಸಂಪಾದಿಸಿದ. ಕೆಲವು ಕಡೆ ಸೋತ, ಕಾಲ ಪ್ರತಿಕೂಲವಾಗಿದ್ದಾಗ ಶರಣಾಗತನಾದ, ಬಲಿದಾನದ ಮಾರ್ಗ ತಳೆಯದೆ ಅಪಮಾನಕರ ರಾಜಿಗೂ ಸಿದ್ಧನಾದ. ಆದರೆ ಕಪಟನಾಟಕಗಳನ್ನಾಡಿ, ವ್ಯೂಹಕ್ಕೆ ಪ್ರತಿವ್ಯೂಹ ರಚಿಸಿ ಕೆಳಕ್ಕೆ ಬಿದ್ದುದಕ್ಕಿಂತಲೂ ವೇಗವಾಗಿ ಪುಟಿದೆದ್ದ. ಇಡೀ ಭಾರತವನ್ನು ಏಕಚ್ಛತ್ರವಾಗಿ ಆಳಿ ಪ್ರಪಂಚದಲ್ಲೆಲ್ಲಾ ಬಲಿಷ್ಟವೆನಿಸಿಕೊಂಡಿದ್ದ ಮೊಘಲ್ ಸಾಮ್ರಾಜ್ಯವನ್ನು ಗಡಗಡ ನಡುಗಿಸಿ ಪಟ್ಟಾಭಿಷಿಕ್ತನಾಗಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಶ್ರೇಷ್ಠ ಚರಿತ್ರೆಯನ್ನು ಸೃಷ್ಟಿಸಿದ. ಹೌದು, ತನ್ನ ಅಪಾರ ಸಂಪನ್ಮೂಲವನ್ನು, ಅಜೇಯ ಯೋಧ ಶಕ್ತಿಯನ್ನೂ, ಸರ್ವಶಕ್ತಿಯನ್ನೂ ವಿನಿಯೋಗಿಸಿ ಜೀವನಪರ್ಯಂತ ಬಿರುಗಾಳಿಯಂತೆ ಬೆನ್ನಟ್ಟಿದರೂ ಔರಂಗಜೇಬನಂಥ ಚಕ್ರವರ್ತಿಗೇ ಪ್ರಚಂಡ "ಶಿವ"ಶಕ್ತಿಯನ್ನು ತಡೆಯಲಾಗಲಿಲ್ಲ. ಸ್ವತಃ ಔರಂಗಜೇಬನೇ ಶಿವಾಜಿ ಐವತ್ತಮೂರರ ಕಿರಿವಯಸ್ಸಿನಲ್ಲಿ ಶಿವಾಜಿ ಅಕಾಲ ಮರಣಕ್ಕೊಳಗಾದ ಸುದ್ದಿ ಕೇಳಿ "ಅವನು ಮಹಾ ನಾಯಕ. ಹಿಂದೂಸ್ಥಾನದ ಪ್ರಾಚೀನ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಬೇಕೆಂದು ನಾನು ಪ್ರಯತ್ನಿಸುತ್ತಿದ್ದಾಗ ಹೊಸ ರಾಜ್ಯವನ್ನು ಸ್ಥಾಪಿಸಿದ ಧೀರೋದಾತ್ತ ಮನುಷ್ಯ ಅವನೊಬ್ಬನೇ. ಹತ್ತೊಂಬತ್ತು ವರ್ಷಗಳ ಕಾಲ ನನ್ನ ಸೇನೆಗಳೆಲ್ಲವನ್ನೂ ಅವನ ಮೇಲೆ ಪ್ರಯೋಗಿಸಿದರೂ ಅವನ ರಾಜ್ಯ ಮಾತ್ರ ವಿಸ್ತರಿಸುತ್ತಲೇ ಹೋಯಿತು" ಎಂದಿದ್ದಾನೆ.

                 1674ರ ಆನಂದ ನಾಮ ಸಂವತ್ಸರದ ಜ್ಯೇಷ್ಠ ಶುದ್ಧ ತ್ರಯೋದಶಿ. ಗಾಗಾ ಭಟ್ಟರು ಕಾಶಿಯಿಂದ ಬಂದಿಳಿದರು. ಸಾವಿರಕ್ಕೂ ಹೆಚ್ಚಿನ  ಪ್ರಾಜ್ಞ ಬ್ರಾಹ್ಮಣರು ರಾಯಗಢ ಸೇರಿದರು. ಸೇರಿದ್ದ ಅತಿಥಿಗಳ ಸಂಖ್ಯೆಯೇ ಇಪ್ಪತ್ತುಸಾವಿರಕ್ಕೂ ಅಧಿಕ. ಅಸಂಖ್ಯ ಸಾಧು ಸಂತರ ಸಮ್ಮುಖದಲ್ಲಿ, ವೇದಮಂತ್ರ ಘೋಷ ಹಾಗೂ ಸಹಸ್ರಾರು ಗಣ್ಯರ, ಕೋಟ್ಯಾಂತರ ಜನರ ಜಯಘೋಷಗಳ ನಡುವೆ ರಾಜಮಾತೆ ಜೀಜಾಬಾಯಿಯ ವಾತ್ಸಲ್ಯ ನೋಟ-ಅಂಬಾಭವಾನಿಯ ಕರುಣಾ ದೃಷ್ಟಿ-ಆಶೀರ್ವಾದಗಳನ್ನು ಪಡೆದು ಕೋದಂಡಧಾರಿಯಾಗಿ ರತ್ನಖಚಿತ ಸಿಂಹಾಸನವನ್ನೇರಿದರು ಶಿವಾಜಿ. ಸ್ವಯಂಭೂ ಛತ್ರಪತಿ ಎನಿಸಿಕೊಂಡರು. ತೋರಣಗಢ ಬೆಳಗಿತು. ಮಂಗಳವಾದ್ಯ ಮೊಳಗಿತು. ವೇದಪಠಣ ಆರಂಭವಾಯಿತು. ಹೈಂದವೀ ಸ್ವರಾಜ್ಯದ ಕನಸು ನನಸಾಯಿತು. ದಿಲ್ಲಿ ದಿಙ್ಮೂಢವಾಯಿತು. ಬಿಜಾಪುರ ಬೆದರಿತು. ಛತ್ರಪತಿಯ ಮೇಲೆ ಸುವರ್ಣವೃಷ್ಟಿಯಾಯಿತು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಹಿಂದೂಸ್ಥಾನದ ರಾಜರ ಪೈಕಿ ಅರ್ಧ ಸಹಸ್ರ ವರ್ಷಗಳ ನಂತರ ಶಿವಾಜಿಯೇ ಪ್ರಪ್ರಥಮವಾಗಿ ನೌಕಾಬಲ ಕಟ್ಟಿದರು. ವಿಜಯದುರ್ಗವೆಂಬ ಜಲದುರ್ಗ ಕಟ್ಟಿದರು. ತೀರಾ ಅಲ್ಪ ಅವಧಿಯಲ್ಲೇ ಆಂಗ್ಲ, ಪೋರ್ಚುಗೀಸ್, ಜಂಜಿರ ಮುಂತಾದ ಹೆಸರಾಂತ ಸಮುದ್ರ ಶಕ್ತಿಗಳನ್ನು ಸೋಲಿಸಿದರು. ರಾಜ್ಯ ಶಿವಾಜಿಯದ್ದಲ್ಲ, ಧರ್ಮದ್ದು ಎಂಬ ಸಮರ್ಥ ರಾಮರ ಮಾತನ್ನು ಶಿರಸಾವಹಿಸಿದ ಸ್ಥಿತಪ್ರಜ್ಞ, ನಿಸ್ಪೃಹ ರಾಜರ್ಷಿ ಶಿವಾಜಿ! ಬೆಂಕಿಯಂತಹ ಚಾರಿತ್ರ್ಯದೊಂದಿಗೆ, ವಾಸ್ತವಿಕ ಕಾರ್ಯಕ್ಷಮತೆಯೊಂದಿಗೆ, ರಾಜಕೀಯ ದೂರದೃಷ್ಟಿಯೊಂದಿಗೆ ರಾಷ್ಟ್ರದ ಜನತೆಗೆ ಮಹಾನ್ ಪ್ರೇರಣೆ ನೀಡಿದರು ಶಿವಾಜಿ. ಹಿಂದುತ್ವದ ವಟವೃಕ್ಷವು ಪರರ ದಮನದ ಭಾರಕ್ಕೆ ಸಾಯದೆ ಮತ್ತೆ ಚಿಗುರೊಡೆದು, ದಾಸ್ಯದ ಪದರುಪದರುಗಳನ್ನೆಲ್ಲಾ ದೂರಕ್ಕೆಸೆದು ಎತ್ತರೆತ್ತರಕ್ಕೆ ಬೆಳೆದು ಗಗನಚುಂಬಕವಾಗಿ ನಿಲ್ಲಬಲ್ಲುದೆಂದು ಶ್ರುತಪಡಿಸಿದರು ಶಿವಾಜಿ. ಆದರ್ಶ ರಾಜನೊಬ್ಬ ಹೇಗಿರಬೇಕೆಂದು ತನ್ನ ಜೀವನದ ಮೂಲಕ ತೋರಿಸಿಕೊಟ್ಟರು ಶಿವಾಜಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ