ಪುಟಗಳು

ಸೋಮವಾರ, ಜೂನ್ 1, 2015

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೩

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೩


                 ಸಮರಾಂಗಣಕೆ ಆಕೆ ಧುಮುಕಿದರೆ ಸಾಕ್ಷಾತ್ ದುರ್ಗೆಯೇ ಮೈದಳೆದಂತೆ. ಎಪ್ಪತ್ತು ಸಾವಿರ ಪದಾತಿಗಳು, ಇಪ್ಪತ್ತು ಸಾವಿರ ತುರಗಗಳು, ಎರಡೂವರೆ ಸಾವಿರಕ್ಕೂ ಮಿಕ್ಕಿದ ಗಜಪಡೆಯ ಬೃಹತ್ ಸೈನ್ಯದೊಡನೆ ಅವಳ ದಂಡು ಅಂಕಕ್ಕಿಳಿದಾಗ ಅರಿಗಳೆದೆ ಝಲ್ಲೆನ್ನುತ್ತಿತ್ತು. ತನಗೆ ಪ್ರೀತಿಪಾತ್ರವಾದ ಕರಿಯನ್ನೇರಿ ಅವಳು ಬಾಣ, ಖಡ್ಗ, ಬಂದೂಕುಗಳನ್ನು ಸಮಾನ ಪ್ರಾವೀಣ್ಯತೆಯಿಂದ ಪ್ರಯೋಗಿಸುತ್ತಾ ಯುದ್ಧರಂಗದ ನಾಯಕಿಯಾಗಿ ಕಂಗೊಳಿಸುವುದನ್ನು ಕಾಣುವುದೇ ಕಂಗಳಿಗೊಂದು ಸೊಬಗು. ಪತಿ ಗಣಪತಿರಾಯ್ ಸತ್ತಾಗ ಎಳೆವಯಸ್ಸಿನ ಮಗನ ಪರವಾಗಿ 1548ರಲ್ಲಿ ಗೊಂಡ್ವಾನದ ಸಿಂಹಾಸನವನ್ನೇರಿದ ಆಕೆ ಗೋಂಡಾಗಳ ಬಾಳನ್ನು ಹಸನುಮಾಡಿ ಅವರ ಆರಾಧ್ಯದೈವವಾಗಿ ರಾಣಿಯೊಬ್ಬಳು ಹೇಗಿರಬೇಕೆಂದು ತೋರಿಸಿಕೊಟ್ಟಳು. ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿದ ಐವತ್ತೊಂದು ಯುದ್ಧಗಳಲ್ಲೂ ದಿಗ್ವಿಜಯವನ್ನು ಸಾಧಿಸಿ ಜಗದ್ವಿಖ್ಯಾತಿಯನ್ನು ಪಡೆದ ಆಕೆಯೇ ಜಗದ್ವಂದ್ಯೆ ರಾಣಿ ದುರ್ಗಾವತಿ! ಬುಂದೇಲ್ ಖಂಡದ ಸಾಮ್ರಾಜ್ಞಿಯಾಗಿ ತನ್ನ ರಾಜ್ಯದಲ್ಲಿನ 23ಸಾವಿರ ಗ್ರಾಮದ ಪ್ರತಿಯೊಬ್ಬ ಹಿರಿಯನ ಹೆಸರು ಹಿಡಿದು ಕರೆಯುವಷ್ಟರ ಮಟ್ಟಿಗಿನ ಸಂವಹನ ಆಕೆಗೆ ಪ್ರಜೆಗಳೊಂದಿಗಿತ್ತು. ಆಕೆಯ ಸಮರ್ಥ ಆಡಳಿತದಿಂದ ಗೊಂಡಾಣ ಸುಭಿಕ್ಷಗೊಂಡಿತು. ಪ್ರತಿಸ್ವರ್ಗದಂತಿದ್ದ ಆ ನಾಡನ್ನು ನರಕಸದೃಶವನ್ನಾಗಿಸಿದ್ದು ಅದೇ ದಯಾಪರ ಅಕ್ಬರ್!

                     ಭಾರೀ ದಂಡಿನೊಂದಿಗೆ ಮೊಘಲರು ಮುತ್ತಿಗೆ ಹಾಕಿದಾಗ ಆತ್ಮರಕ್ಷಣೆಗಾಗಿ ಗೋಂಡಾಗಳೆಲ್ಲರೂ ಒಂದಾಗಿ ರಣಕಣಕ್ಕೆ ಧುಮುಕಿದರು. ದುರ್ಗಾವತಿಯ ರಭಸಕ್ಕೆ ಮೊಗಲ್ ಸೇನೆ ಕಕ್ಕಾಬಿಕ್ಕಿಯಾಯಿತು. ಘನಘೋರ ಕದನದ ನಡುವೆ ಮಗ ವೀರನಾರಾಯಣ್ ಗಾಯಗೊಂಡಾಗ ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ಸೂಚಿಸಿದಳು. ಅವನೊಡನೆ ಕೆಲ ಸೈನಿಕರು ತೆರಳಬೇಕಾದ ಕಾರಣ ಸೇನೆಯಲ್ಲಿ ತುಸು ಗೊಂದಲದ ವಾತಾವರಣ ಉಂಟಾಯಿತು. ಅದೇ ವೇಳೆ ಬಾಣವೊಂದು ದುರ್ಗಾವತಿಯ ಬಲಗಣ್ಣಿನ ಮೇಲ್ಭಾಗಕ್ಕೆ ಬಡಿಯಿತು. ಅವಳು ಅದನ್ನು ಕಿತ್ತು ತೆಗೆವ ಪ್ರಯತ್ನ ನಡೆಸಿರುವಾಗಲೇ ಇನ್ನೊಂದು ಬಾಣ ಬಂದು ಕುತ್ತಿಗೆಗೆ ಬಡಿಯಿತು. ತನ್ನ ಕಥೆ ಮುಗಿಯಿತೆಂದು ಮೊಗಲರ ಕೈಗೆ ಸಿಕ್ಕು ಬಂಧಿಯಾಗುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ತನ್ನನ್ನೇ ತಾನು ಇರಿದುಕೊಂಡು ಪ್ರಾಣ ತ್ಯಜಿಸಿದಳು. ಸಾವರಿಸಿಕೊಂಡ ವೀರನಾರಾಯಣ ವೀರಾವೇಶದಿಂದ ಹೋರಾಡಿದರೂ ಪ್ರಯೋಜನವಾಗಲಿಲ್ಲ. ಯುವರಾಜ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಕೂಡಲೇ ರಕ್ಕಸರು ಊರೊಳಗೆ ಪ್ರವೇಶಿಸುವ ಮುನ್ನವೇ ಸ್ತ್ರೀಯರು ಮಾನ ಉಳಿಸಿಕೊಳ್ಳುವ ಸಲುವಾಗಿ ಸಾಮೂಹಿಕವಾಗಿ ಚಿತೆಗೆ ಹಾರಿದರು. ಆದರೆ ಅಗ್ನಿ ಇಬ್ಬರು ರಾಜಕುವರಿಯರನ್ನು ವಂಚಿಸಿದ. ಅವರನ್ನು ತನ್ನ ದೊಡ್ಡಿಯಂತಿದ್ದ ಜನಾನಾಕ್ಕೆ ನೂಕಿದ ಅಕ್ಬರ್ ಜೀವಂತವಿರುವಾಗಲೇ ಸಾವಿನ ಭಾಗ್ಯ ಒದಗಿಸಿದ! ಮುಂದೆ ಊರೂರೂ ದೋಚುವ ಕಾರ್ಯಕ್ರಮ ಯಥಾವತ್ ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಡೆಯಿತು. ಅಕ್ಬರ್ ಗೊಂಡ್ವಾನದ ಮೇಲೆ ಮಾಡಿದ ದಾಳಿ ಪಕ್ಕಾ ದುರಾಕ್ರಮಣವೇ ಹೊರತು ಇನ್ನೇನಲ್ಲ. ಹೆಣ್ಣು, ಹೊನ್ನು, ಮಣ್ಣನ್ನು ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಬೇರಾವ ಸಮರ್ಥನೆಯೂ ಅದಕ್ಕಿಲ್ಲ ಎಂದಿದ್ದಾನೆ ವಿನ್ಸೆಂಟ್ ಸ್ಮಿತ್!

                  ಅಕ್ಬರನ ಕಾಮದಾಸೆಗೆ ಕೇವಲ ಹಿಂದೂಗಳು ಮಾತ್ರವಲ್ಲ ಮುಸಲ್ಮಾನರೂ ಬಲಿಯಾದರು. ಆಗ ಮಾಳವವನ್ನಾಳುತ್ತಿದ್ದವ ಅಕ್ಬರನ ಓರಗೆಯವನಾದ ಬಾಜ್ ಬಹಾದ್ದೂರ್! ರೂಪಮತಿ ಅವನ ಮನದನ್ನೆ. ಲವ್ ಜಿಹಾದ್ ಇಲ್ಲವೇ ಇಲ್ಲ ಅನ್ನುವವರು ಗಮನಿಸಿ ಲವ್ ಜಿಹಾದಿಗೆ ಮೊಘಲರ ಕಾಲದ ಇತಿಹಾಸವಿದೆ! ಹೆಸರಿಗೆ ಅನುರೂಪವಾಗಿ ಆಕೆ ಅಪ್ರತಿಮ ಸುಂದರಿ. ಪೌರ್ಣಮಿಯ ಶಶಿಯ ಸೊಬಗಿಗಿಂತ ರೂಪಮತಿಯ ಚೆಲುವು ಹೆಚ್ಚು ಪ್ರಕಾಶಮಾನವಾದುದೆಂದು ವರ್ಣಿಸುತ್ತಿದ್ದರು ಕವಿಗಳು. ಅವಳಂತಹ ನಿರ್ಮಲ ದಿವ್ಯಸ್ತ್ರೀಯನ್ನು ಹತ್ತುಲಕ್ಷಸಂವತ್ಸರಗಳಿಗೊಮ್ಮೆಯಷ್ಟೇ ಭಗವಂತನು ಸೃಷ್ಟಿಸುವನೆಂದೂ, ಆಕೆಯ ಕಣ್ಣಂಚಿನ ಪಾನಪಾತ್ರೆಯಿಂದ ಒಂದು ಬಿಂದು ಮಧುವನ್ನಾಸ್ವಾದಿಸುವುದು ಸ್ವರ್ಗಕ್ಕೆ ಸೋಪಾನವೆಂದು ಹಾಡುತ್ತಿದ್ದರು ಜಾನಪದರು. ಈ ಕೀರ್ತಿಗಾನ ಅಕ್ಬರನ ಕಿವಿಗೆ ಬಿತ್ತು! ಕೇಳಬೇಕೆ ಜೊಲ್ಲುಸುರಿಸಿಕೊಂಡು ಆಕೆಯನ್ನು ಕರೆತರಲು ಅಪ್ಪಣೆಯಾಯಿತು. ಆಕೆ ಬರಲೊಲ್ಲೆ ಎಂದಳು. ಮೊಗಲ್ ಸೈನ್ಯ ಬಂತು. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವೆನೆಂದಿದ್ದ ಬಾಜ್ ಬಹಾದ್ದೂರ್ ಪ್ರಾಣ ಉಳಿಸಿಕೊಳ್ಳಲು ಓಡಿ ಹೋದ! ಸುದ್ದಿ ಕೇಳಿದ ರೂಪಮತಿ ವಿಷ ಸೇವಿಸಿದಳು. ಕಾಮಾಂಧನ ಮುಖ ಕಪ್ಪಡರಿತು!

                        ಜಯವಂತಿ...ಮೊಗಲ್ ದಾಸ್ಯದಿಂದ ಮೇವಾಡ ಮುಕ್ತಗೊಳ್ಳುವವರೆಗೆ ಮಗುವನ್ನು ಹಡೆಯುವುದಿಲ್ಲವೆಂದೂ, ಆಭರಣಗಳನ್ನು ಧರಿಸುವುದಿಲ್ಲವೆಂದೂ ಪ್ರತಿಜ್ಞೆ ಮಾಡಿದ್ದ ಅಪೂರ್ವ ರಜಪೂತ ರಾಜಕನ್ಯೆ. ರಾಜ ಸುರ್ಜನರಾಯನ ಸೋದರನ ಸುತೆ. ಅಕ್ಬರನ ಕಾಮದೃಷ್ಟಿ ಆಕೆಯ ಮೇಲೆ ಬಿತ್ತು. ಹೇಗಾದರೂ ಮಾಡಿ ರಣಥಂಬೋರನ್ನು ಜಯಿಸಿ ಆಕೆಯನ್ನು ಪಡೆವಾಸೆಯಿಂದ ಜೊಲ್ಲುಸುರಿಸಿಕೊಂಡು ಕಾಲು ಕೆದರಿ ಯುದ್ಧಕ್ಕೆ ಹೊರಟ. ಆದರೆ ರಣಥಂಬೋರಿನ ಕೋಟೆ ದುರ್ಭೇಧ್ಯವಾಗಿತ್ತು. ಇರುವೆಗಳು ಕೂಡಾ ಅದರ ಗೋಡೆಗಳ ಮೇಲೇರಲಾರದೆ ಜಾರಿ ಬೀಳುವವೆಂದು ಅಬುಲ್ ಫಜಲ್ ಬರೆದಿದ್ದಾನೆ. ಅಕ್ಬರನಿಗೆ ಗೆಲ್ಲಲಾಗಲಿಲ್ಲ. ಅದಕ್ಕಾಗಿ ಆತ ಭಗವಾನ್ ದಾಸನ ಮೂಲಕ ಸುರ್ಜನರಾಯನಿಗೆ ಪ್ರಲೋಭನೆ ಒಡ್ಡಿ ಕೋಟೆಯ ಬೀಗದ ಕೈಗಳನ್ನು ವಶಪಡಿಸಿಕೊಂಡ. ಸುದ್ದಿ ಅರಿತ ಜಯವಂತಿ ಭರಿಸಲಾರದ ವೇದನೆಯಿಂದ ತನ್ನ ಮೈಮೇಲಿನ ಸೈನಿಕ ಪೋಷಾಕನ್ನು, ರಾಜ ಲಾಂಛನ, ತಿಲಕಗಳನ್ನು ಕಿತ್ತೆಸೆದು ದೇವಾಲಯದ ನರ್ತಕಿಯ ವೇಷ ಧರಿಸಿ ಏಕಲಿಂಗೇಶ್ವರನೆದುರು ಕಾಲ್ಗೆಜ್ಜೆ ತುಂಡಾಗುವವರೆಗೆ ಶಿವತಾಂಡವಗೈದು ಶಿವಲಿಂಗದ ಮುಂದೆ ಕುಸಿದಳು. ಹಾಗೆ ಕುಸಿವಾಗ ಸೊಂಟದಲ್ಲಿದ್ದ ಚೂರಿಯಿಂದ ಎದೆ ಬಗಿದು ರುದ್ರನಿಗೆ ರುಧಿರಾಭಿಷೇಕಗೈದಳು. ರಜಪೂತರ ಧೈರ್ಯಸ್ಥೈರ್ಯಗಳಿಗೆ ಹೊಸ ಭಾಷ್ಯ ಬರೆದು ದೇಶದ ಜನರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನಿಂತು ಬಿಟ್ಟಳು.

                 ಹೀಗೆ ಕಾಮುಕ ಅಕ್ಬರನ ವಕ್ರದೃಷ್ಟಿಗೆ ಬಿದ್ದು ನಾಶವಾದ ರಾಜ್ಯಗಳು, ಮಾನಿನಿಯರು, ಪ್ರಾಣ ಕಳೆದುಕೊಂಡ ಜನತೆ, ಪ್ರಾಣಕ್ಕಿಂತ ಮಾನ ಹೆಚ್ಚೆಂದು ಜೌಹರ್ ಮಾಡಿಕೊಂಡ ಮಾನಿನಿಯರು ಲೆಕ್ಕವಿಲ್ಲದಷ್ಟು. ಅಂತಹ ಕಾಮಾಂಧನನ್ನೂ "ದಿ ಗ್ರೇಟ್" ಅಂದವರು ಯಾವ ಪರಿಯ ಕಾಮಾಂಧರಾಗಿರಬಹುದು???!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ