ಪುಟಗಳು

ಮಂಗಳವಾರ, ಜೂನ್ 9, 2015

ಹೌದು. ಯೋಗ ಹಿಂದೂಗಳದ್ದೇ! ಏನೀಗ?

ಹೌದು. ಯೋಗ ಹಿಂದೂಗಳದ್ದೇ! ಏನೀಗ?

                 ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವನೆಯ ಬಳಿಕ ವಿಶ್ವಸಂಸ್ಥೆ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತು. ಈ ನಿರ್ಣಯಕ್ಕೆ 175 ರಾಷ್ಟ್ರಗಳು ಬೆಂಬಲ ಸೂಚಿಸಿದವು. ಅವುಗಳಲ್ಲಿ 41 ಮುಸ್ಲಿಂ ರಾಷ್ಟ್ರಗಳೂ ಸೇರಿದ್ದವು!  ವಿಶ್ವಸಂಸ್ಥೆಯ ಇತಿಹಾಸದಲ್ಲೇ ಭಾರತದ ನಿರ್ಣಯವೊಂದಕ್ಕೆ ಇಷ್ಟೊಂದು ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಇದೇ ಮೊದಲು. ಅಮೆರಿಕದ ಸಂಸತ್ತು ಸಂಸದೀಯ ಯೋಗ ಸಂಘವನ್ನೇ ರಚಿಸಿತು. ಜೂನ್ 21ಕ್ಕಾಗಿ ಹೆಚ್ಚಿನ ಎಲ್ಲಾ ರಾಷ್ಟ್ರಗಳು ಸಿದ್ಧತೆಯಲ್ಲಿ ತೊಡಗಿರುವ ಈ ವೇಳೆಯಲ್ಲಿ ಯೋಗದ ಜನ್ಮಭೂಮಿಯಲ್ಲೇ ವಿರೋಧ ವ್ಯಕ್ತವಾಗಿದೆ. ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಶಾಲೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರ ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಿ, ಅದರ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿತು. ಅಲ್ಲದೇ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಯಿತು. ಸೂರ್ಯ ನಮಸ್ಕಾರ, ಯೋಗ ಮುಸ್ಲಿಂ ಧರ್ಮದ ನಂಬಿಕೆಗಳಿಗೆ ವಿರೋಧಿ ಎಂದು ದೂರಿದ ಸಂಘಟನೆ ಮುಸ್ಲಿಮರು ಕೇವಲ ಅಲ್ಲಾನಿಗೆ ಮಾತ್ರ ತಲೆಬಾಗುವುದು. ಅಲ್ಲದೇ  ಸೂರ್ಯನಮಸ್ಕಾರ ಮಾಡಿದರೆ ಕೆಡುಕುಂಟಾಗುತ್ತದೆ ಎಂದು ವಾದಿಸುತ್ತಿದೆ.

                      ತಮ್ಮ ಮತ ಹುಟ್ಟುವುದಕ್ಕೆ ಮುನ್ನ ಜಗತ್ತೇ ಇರಲಿಲ್ಲ ಎನ್ನುವ ಮತಾಂಧರಿಗೆ ಯೋಗದ ಮಹತ್ವ ಅರಿವಾಗೋದು ಹೇಗೆ? ಈ ಮತಾಂಧತೆಯ ಪ್ರಕೋಪವನ್ನು ವಿಶ್ಲೇಷಿಸುವ ಮುನ್ನ ಯೋಗದ ಇತಿಹಾಸವನ್ನೊಮ್ಮೆ ಅವಲೋಕಿಸೋಣ. ಹರಿಯ ಮಿಡುಕಕ್ಕೆ ಶಿವತಾಂಡವವೇ ಕಾರಣವೆಂಬ ಸುಳಿವು ತಿಳಿದು ಶಿವತಾಂಡವವನ್ನು ಪ್ರತ್ಯಕ್ಷೀಕರಿಸಿಕೊಳ್ಳಲು ಮುನಿಪತ್ನಿಯೊಬ್ಬಳ ಗರ್ಭದಲ್ಲಿ ಪತಂಜಲಿಯಾಗಿ ಜನಿಸಿ ತಪಸ್ಸಿಗೆ ತೊಡಗುತ್ತಾನೆ ಶೇಷ. ತಪಸ್ಸಿಗೊಲಿದು ಭಕ್ತನ ಕೋರಿಕೆಯಂತೆ ತಾಂಡವಕ್ಕೆ ತೊಡಗುವ ಯೋಗಿ ಭೂಷಣ ಶಿವನ ತಾಂಡವದ ಒಂದೊಂದು ಭಂಗಿಯೂ ಪತಂಜಲಿಗೆ ಯೋಗದ ಒಂದೊಂದು ಆಸನವಾಗಿ ಗೋಚರಿಸುತ್ತದೆ. ಭುವಿಯ ಪ್ರಾಕೃತ ಭಾಷೆ ಡಮರಿನ ರವದಿ ಸಂಸ್ಕೃತವಾದ ಪರಿಯಂತೆ ಶಿವನ ತನುವಿನ್ಯಾಸ ಪತಂಜಲಿಗೆ ಯೋಗ ಕಲ್ಪಿಸಿತು. ಶಿವನ ತನು ವಿನ್ಯಾಸ, ಉಸಿರಿನ ನಿಯಂತ್ರಣ, ಅಂಗಾಂಗಗಳ ಭಂಗಿ, ಶರೀರದ ಸಮತೋಲನ ಇವೆಲ್ಲವೂ ಯೋಗಿಗೆ ಯೋಗವಾಗಿ ಗೋಚರಿಸಿತು. ಅಧಿ ಆತ್ಮಿಕ ತಾಪದಿಂದ ಬಳಲುತ್ತಿರುವ ಲೋಕದ ಜನರ ತಾಪವನ್ನು ಶಮನ ಮಾಡಲು ಶಿವನ ತಾಂಡವದ ರಹಸ್ಯ ಶಿವನ ಆಜ್ಞೆಯಂತೆ "ಪತಂಜಲಿ ದರ್ಶನ" ವಾಗಿ ಯೋಗಾಸನಗಳಾಗಿ ಯೋಗಿ ಪತಂಜಲಿಯಿಂದ ಹೊರಹೊಮ್ಮಿತು.

                   ಮಹರ್ಷಿ ಪತಂಜಲಿ ಯೋಗವನ್ನು "ವೃತ್ತಿ ನಿರೋಧ" ಎಂದು ವ್ಯಾಖ್ಯಾನಿಸಿದರು. ಪ್ರಮಾಣ, ವಿಪರ್ಯಯ, ವಿಕಲ್ಪ, ನಿದ್ರೆ ಹಾಗೂ ಸ್ಮೃತಿ ಇವೇ ಐದು ವಿಧದ ವೃತ್ತಿಗಳು ವೈರಾಗ್ಯ ಹಾಗೂ ಅಭ್ಯಾಸಗಳಿಂದ ಮನಸ್ಸಿನಲ್ಲಿ ಲಯ ಹೊಂದಿದಾಗ ಮನಸ್ಸು ಆತ್ಮನ ಸ್ವರೂಪದಲ್ಲಿ ಅವಸ್ಥಿತವಾಗುತ್ತದೆ. ಅದೇ ಯೋಗ! ಮಹರ್ಷಿ ವ್ಯಾಸರು ಯೋಗವನ್ನು ಸಮಾಧಿ ಎಂದರು. ಯುಜ್ ಎನ್ನುವ ಧಾತುವಿನಿಂದ ವ್ಯುತ್ತತ್ತಿಯಾಗಿದೆ ಯೋಗ. ಸಂಯಮ ಪೂರ್ವಕವಾಗಿ ಸಾಧನೆ ಮಾಡುತ್ತಾ ಆತ್ಮನನ್ನು ಪರಮಾತ್ಮನೊಡನೆ ಜೋಡಿಸಿ ಸಮಾಧಿಯ ಆನಂದವನ್ನು ಪಡೆಯುವುದೇ ಯೋಗ. ಚಿತ್ತದ ಪಂಚಸ್ಥಿತಿಗಳಾದ ಕ್ಷಿಪ್ತ, ಮೂಢ, ವಿಕ್ಷಿಪ್ತ, ಏಕಾಗ್ರ ಹಾಗೂ ನಿರುದ್ಧಗಳಲ್ಲಿ ಪಂಚಕ್ಲೇಶಗಳು ಹಾಗೂ ಕರ್ಮ ಬಂಧನಗಳ ಶಿಥಿಲತೆ ಉಂಟಾದಾಗ ಕ್ರಮಶಃ ಸಂಪ್ರಜ್ಞಾತ ಹಾಗೂ ಅಸಂಪ್ರಜ್ಞಾತ ಸಮಾಧಿ ಉಂಟಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಅನುಕೂಲತೆ-ಪ್ರತಿಕೂಲತೆ, ಸಿದ್ಧಿ-ಅಸಿದ್ಧಿ, ಸಫಲತೆ-ವಿಫಲತೆ, ಜಯ-ಅಪಜಯ ಇವುಗಳಲ್ಲಿ ಸಮತ್ವವನ್ನು ಹೊಂದಿರುವುದೇ ಯೋಗ ಎಂದಿದ್ದಾನೆ. ಅಸಂಗಭಾವದಿಂದ ದೃಷ್ಟಾ ಆಗಿದ್ದುಕೊಂದು ಒಳಗಿನ ದಿವ್ಯಭಾವದಿಂದ ಪ್ರೇರಿತನಾಗಿ ಕುಶಲತಾಪೂರ್ವಕವಾಗಿ ಮಾಡುವ ಕರ್ಮವೇ ಯೋಗ.

                        ಪ್ರತಿಯೊಂದು ಅಂಗದ ಚಲನಶೀಲ ಶಕ್ತಿಯನ್ನು ಕಾಪಾಡಿ ಅವುಗಳ ನಡುವೆ ಸಂಯೋಜನೆಯನ್ನುಂಟು ಮಾಡುವ ಶಕ್ತಿಯೇ ಪ್ರಾಣ. ಉಸಿರು ಮತ್ತು ಪ್ರಾಣ ಒಂದೇ ಅಲ್ಲ. ಪ್ರಾಣವು ಸೂಕ್ಷ ಹಾಗೂ ವೈಶ್ವಿಕ ಶಕ್ತಿಯಾಗಿದ್ದು ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿದೆ. ನಾವು ಉಚ್ಛ್ವಾಸ ಮಾಡಿದಾಗ ಗಾಳಿಯನ್ನು ಮಾತ್ರ ಒಳಗೆಳೆದುಕೊಳ್ಳುವುದಿಲ್ಲ ಜೊತೆಗೆ ಪ್ರಾಣಶಕ್ತಿಯನ್ನೂ ಎಳೆದುಕೊಳ್ಳುತ್ತೇವೆ. ಶರೀರದೊಳಗೆ ಪ್ರವೇಶಿಸಿದ ಪ್ರಾಣಶಕ್ತಿಯು ವ್ಯಾನ-ಅಪಾನ-ಉದಾನ ಮುಂತಾದುವುಗಳಾಗಿ ಪರಿವರ್ತನಗೊಂಡು ಶರೀರಾಂಗಗಳನ್ನು ನಿಯಂತ್ರಿಸುವ ಹಾಗೂ ಸಂಯೋಜಿಸುವ ಸೂಕ್ಷ್ಮ ನರ-ನಾಡಿಗಳಲ್ಲಿ ಸಂಚಯಿಸುತ್ತದೆ. ಯಾವುದಾದರೂ ಅಂಗ ಕಾರ್ಯನಿರ್ವಹಿಸಲು ವಿಫಲವಾದರೆ  ಆ ಅಂಗಗಳನ್ನು ನಿಯಂತ್ರಿಸುವ ನಾಡಿಗಳಿಗೆ ಪ್ರಾಣವು ಸರಿಯಾಗಿ ವಿತರಣೆಯಾಗಿಲ್ಲವೆಂದರ್ಥ. ಪ್ರಾಣದ ಹರಿಯುವಿಕೆಗೆ ಅಡ್ಡಿ ಉಂಟಾದಾಗ ಆಯಾ ಅಂಗಾಂಗದ ಕಾರ್ಯನಿರ್ವಹಣೆಯಲ್ಲಿ ಏರುಪೇರಾಗಿ ರೋಗಗಳಿಗೆ ಕಾರಣವಾಗುತ್ತದೆ. ಪ್ರಾಣವಾಯುವಿನ ಹರಿಯುವಿಕೆಗಿರುವ ಅಡ್ಡಿಗಳನ್ನು ನಿವಾರಿಸಿ ಅದು ಮುಕ್ತವಾಗಿ ಹರಿಯುವಂತೆ ಮಾಡುವ ಕ್ರಿಯೆಯೇ ಪ್ರಾಣಾಯಾಮ.

                 ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಮಾಂಸಖಂಡಗಳು, ಸಂಧಿಗಳು ಬಲಯುತಗೊಳ್ಳುತ್ತವೆ. ದುಗ್ಧ ರಸಗ್ರಂಥಿಯ ಕ್ರಿಯಾಶೀಲತೆ ಮತ್ತು ಪರಿಚಲನೆ ಉತ್ತಮಗೊಳ್ಳುತ್ತದೆ. ಸುಷುಮ್ನಾ ನಾಡಿ ಬಲಯುತಗೊಳ್ಳುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಪೀನಿಯಲ್ ಗ್ರಂಥಿಗೆ ಉತ್ತೇಜನ ಹಾಗೂ ಅಧಿಕ ಆಮ್ಲಜನಕ ದೊರೆಯುತ್ತದೆ. ರೆರ್ಲಿಯನ್ ಫೋಟೋಗ್ರಫಿಯ ಮೂಲಕ ತಿಳಿದುದೇನೆಂದರೆ ಸಿಂಪೆಥಿಟಿಕ್ ಮತ್ತು ಪ್ಯಾರಾ ಸಿಂಪೆಥೆಟಿಕ್ ನರವ್ಯೂಹಗಳ ಮೂಲಕ ಪ್ರಭಾವ ಉಂಟುಮಾಡುವುದರಿಂದ ಮನುಷ್ಯನ ದೇಹದ ಸುತ್ತಲಿರುವ ಓರಾ ಅಥವಾ ಬೆಳಕು ಮತ್ತು ಶಕ್ತಿಯ ಪುಂಜ ಪ್ರಖರಗೊಳ್ಳುತ್ತದೆ. ಮಂತ್ರಯುಕ್ತ, ಶಿಸ್ತುಬದ್ಧ ಉಸಿರಾಟದ ಸೂರ್ಯ ನಮಸ್ಕಾರ ದುಗುಡ, ಖಿನ್ನತೆ, ಆತಂಕಗಳನ್ನು ದೂರಮಾಡುತ್ತದೆ. ಎಲ್ಲಾ ಚಕ್ರಗಳನ್ನೂ ಹಾದು ಹೋಗುವ ವೇಗಸ್ ನರದ ಮೇಲೂ ಸೂರ್ಯ ನಮಸ್ಕಾರ ಪ್ರಭಾವ ಬೀರುತ್ತದೆ. ಸೂರ್ಯ ನಮಸ್ಕಾರದ ಅಭ್ಯಾಸವು ಪ್ರಜ್ಞೆಯನ್ನು ಉಚ್ಚಸ್ಥಿತಿಗೆ ಒಯ್ಯುತ್ತದೆ. ಏಕಾಗ್ರತೆ, ಮನೋಬಲ, ಆತ್ಮಬಲ, ರೋಗನಿರೋಧಕತೆ, ಪ್ರಾಣಶಕ್ತಿ, ಜೀರ್ಣಶಕ್ತಿಗಳನ್ನು ವರ್ಧಿಸುತ್ತದೆ. ಜೀವಕೋಶಗಳ ಕ್ರಿಯಾಶೀಲತೆಯನ್ನು ಸಮತೋಲನದಲ್ಲಿರಿಸುತ್ತದೆ.

               ಯೋಗದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ವಿರೋಧಿಸುವವರನ್ನು ಮೂರ್ಖರು ಎನ್ನಬೇಕಷ್ಟೆ. ಸೂರ್ಯನಿಗೆ ನಮಸ್ಕಾರ ಮಾಡದವರು ಸೂರ್ಯನ ಬೆಳಕನ್ನೂ ಪಡೆಯಬಾರದಲ್ವೇ? ಸೂರ್ಯಶಕ್ತಿಯನ್ನೂ, ಸೌರಶಕ್ತಿಯನ್ನುಪಯೋಗಿಸುವ ಯಾವುದೇ ಜೀವಿ-ವಸ್ತುಗಳನ್ನೂ ಬಳಸಬಾರದು. ಅಂದರೆ ಅನಂತ ಬ್ರಹ್ಮಾಂಡಗಳಿರುವ ಈ ಜಗತ್ತಿನಲ್ಲೇ ಇರಬಾರದು. ಯಾಕೆಂದರೆ ಅಸಂಖ್ಯ ಸೂರ್ಯರು ಈ ಬ್ರಹ್ಮಾಂಡದಲ್ಲಿದ್ದಾರೆ. ಹಾಗಂತ ಇದನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ತಮಗೆ ನಂಬಿಕೆ ಇಲ್ಲ ಅಂದಾಕ್ಷಣ ಸತ್ಯ ಸಾಯುವುದೇ? ಸೂರ್ಯನಿಗೆ ನಮಸ್ಕಾರ ಮಾಡುವುದಿಲ್ಲ ಎಂದವರು ಅಗ್ನಿ, ಗಾಳಿ, ನೀರು, ಪರಿಸರಕ್ಕೂ ನಮಸ್ಕರಿಸಿಯಾರೇ? ತನ್ನನ್ನು ಬದುಕಲು ಅವಕಾಶ ಮಾಡಿಕೊಟ್ಟವರಿಗೇ ಗೌರವ ತೋರದವನಿಗೆ ಬದುಕುವ ಹಕ್ಕೂ ಇಲ್ಲ. ಅಂತಹವನು ಇತರರನ್ನು ಬದುಕಬಿಡುವುದೂ ಇಲ್ಲ. ಮೊದಲೇ ಅವನ ಮೆದುಳು ದುರ್ಬೋಧನೆಯಿಂದ ತುಂಬಿ ಹೋಗಿರುತ್ತದೆ. ಇಡಿಯ ಜಗತ್ತೇ ಯೋಗವನ್ನು ಬಾಚಿ ಆಲಂಗಿಸಿಕೊಳ್ಳುತ್ತಿದೆ. ನಲವತ್ತೊಂದು ಮುಸ್ಲಿಮ್ ರಾಷ್ಟ್ರಗಳಿಗೆ ಬೇಕಾದ ಯೋಗ ಇಲ್ಲಿನವರಿಗೆ ಬೇಡವೆಂದರೆ ಇಲ್ಲಿನ ಮುಸಲ್ಮಾನರು ಹಾಗೂ ಆ ನಲವತ್ತೊಂದು ರಾಷ್ಟ್ರಗಳ ಮುಸಲ್ಮಾನರು ಅನುಸರಿಸುವ ಕುರಾನ್, ಅಲ್ಲಾ ಬೇರೆ ಬೇರೆಯೇನು? ಅಷ್ಟಕ್ಕೂ ಯೋಗ ಮಾಡಿ ಅಂತಾ ಇವರನ್ಯಾರಾದರೂ ಒತ್ತಾಯಪಡಿಸಿದ್ದಾರೆಯೇ? ಅಥವಾ ಈ ಮತಾಂಧರು ಯೋಗ ಮಾಡದಿದ್ದ ಮಾತ್ರಕ್ಕೆ ಯೋಗಾಸನವೇ ಈ ಜಗತ್ತಿನಿಂದ ಮರೆಯಾಗುತ್ತದೆಯೇ? ಇಡಿಯ ಜಗತ್ತು ಭಾರತವನ್ನು ನಿರೀಕ್ಷೆಯ ಕಂಗಳಿಂದ ನೋಡುತ್ತಿದೆ. ಇಲ್ಲಿನ ಪ್ರಾಚೀನ ಜ್ಞಾನ-ವಿಜ್ಞಾನಗಳನ್ನು ಒಪ್ಪಿ ಅಪ್ಪಿಕೊಳ್ಳುತ್ತಿದೆ. ಇಲ್ಲಿನ ಸೆಕ್ಯುಲರುಗಳಿಗೆ, ಮತಾಂಧರಿಗೆ ಮಾತ್ರ ಅವು ನಿರುಪಯುಕ್ತವೆಂದನ್ನಿಸುತ್ತವೆ. ಹೌದು ಓವೈಸಿಗಳು ಹೇಳುವಂತೆ ಯೋಗ ಹಿಂದೂಗಳದ್ದೇ; ಹಿಂದುತ್ವದ್ದೇ. ಮಾಡುವುದಾದರೆ ಮಾಡಲಿ; ಆಗದಿದ್ದರೆ ಬಿಡಲಿ ಯಾವುದೇ ನಷ್ಟವಿಲ್ಲ. ಈಗಾಗಲೇ ಹಲವನ್ನು ಕಳಕೊಂಡಾಗಿದೆ; ಕೆಲವು ಕೈತಪ್ಪುತ್ತಿವೆ. ಸೂರ್ಯನಮಸ್ಕಾರವನ್ನು ಏಸು ನಮಸ್ಕಾರವನ್ನಾಗಿಯೂ ಕೆಲವರು ಮಾಡಿಬಿಟ್ಟಿದ್ದಾರೆ. ಈಗ ಯೋಗವನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅದು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ.

              ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಸೂರ್ಯ ನಮಸ್ಕಾರವನ್ನು ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ. ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ನಿಟ್ಟಿನಲ್ಲಿ ಯೋಗ ದಿನಾಚರಣೆಯಂದು ಸೂರ್ಯನಮಸ್ಕಾರವನ್ನು ಕೈಬಿಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾರೋ ಕೆಲವರಿಗೆ ನೋವಾಗುತ್ತದೆಂದು ಸೂರ್ಯನಮಸ್ಕಾರವನ್ನು ಬಿಟ್ಟುಬಿಡುವುದೆಷ್ಟು ಸರಿ? ಸೂರ್ಯನಮಸ್ಕಾರ ಮಾಡುವವರು ಮಾಡಲಿ; ಇಷ್ಟವಿಲ್ಲದವರು ಬಿಡಲಿ ಎನ್ನಬಹುದಿತ್ತು. ಅದುಬಿಟ್ಟು ಯೋಗದ ಬಹುಮುಖ್ಯ ಅಂಗವನ್ನೇ ಕಠಿಣ ಎಂಬ ಕಾರಣ ಕೊಟ್ಟು ಕೈಬಿಡುವುದು ಹೇಡಿತನದ ಪರಮಾವಧಿ. ಯೋಗ ದಿನಾಚರಣೆ ಭಾರತೀಯ ವಿದ್ಯೆಯೊಂದನ್ನು ಲೋಕಮುಖಕ್ಕೆ ಪರಿಚಯಿಸಲಿಕ್ಕಾಗಿಯೋ ಅಥವಾ ಸೆಕ್ಯುಲರುಗಳ ತಾಳಕ್ಕೆ ತಕ್ಕಂತೆ ಕುಣಿಯಲಿಕ್ಕಾಗಿ ಇಟ್ಟುಕೊಂಡದ್ದೋ ಎನ್ನುವ ಸಂಶಯ ಕಾಡುತ್ತಿದೆ. ಮೋದಿಯವರು ಮುಸ್ಲಿಮರನ್ನು ಮುಖ್ಯಭೂಮಿಗೆ ತರಲು ಪ್ರಯತ್ನ ಮಾಡಿದಷ್ಟು ಅವರು ಹಿಂದೆ ಸರಿಯಲು ಯತ್ನಿಸುತ್ತಾರೆ. ಆದರೆ ಮುಖ್ಯ ಭೂಮಿಕೆಗೆ ತರುವ ಸಲುವಾಗಿ ತತ್ವಗಳೊಡನೆ ರಾಜೀಮಾಡಿಕೊಳ್ಳುವುದು ಎಷ್ಟು ಸರಿ? ಭಾಜಪಾವೂ ಕಾಂಗ್ರೆಸ್ಸಿನಂತೆ ಈ ರೀತಿ ಓಲೈಕೆ ರಾಜಕಾರಣಕ್ಕೆ ಮುಂದಾದರೆ ಅದರ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಗೊತ್ತಾದೀತು.  ನಂಬಿದವನೊಬ್ಬ ಹಿಂದೂವಿನ ಭಾವನೆಯೊಂದಿಗೆ ಚೆಲ್ಲಾಟವಾಡುವುದರಿಂದ ಉಂಟಾಗುವ ನೋವು ಒಬ್ಬ ಮತಾಂಧ ಮಾಡಿದ ಹಾನಿಯಿಂದುಂಟಾದ ನೋವಿಗಿಂತಲೂ ಹೆಚ್ಚು! ಒಬ್ಬ ರಾಣಾ ಪ್ರತಾಪ, ಶಿವಾಜಿ, ಸಾವರ್ಕರ್ ನಮಗೆ ಬೇಕೇ ಹೊರತು ಪರಿಸ್ಥಿತಿಯೊಡನೆ ರಾಜೀಯಾಗುವ ಗಾಂಧಿಯಲ್ಲ. ಭರವಸೆ ಕುಸಿಯುತ್ತಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ