ಪುಟಗಳು

ಮಂಗಳವಾರ, ಜೂನ್ 16, 2015

ತನುವನ್ನು ಪಣವಾಗಿಟ್ಟು ಹೋರಾಡುವವನಿಗೂ ಬೇಕಲ್ಲವೆ ಒಳ್ಳೆಯ ದಿನ?

ತನುವನ್ನು ಪಣವಾಗಿಟ್ಟು ಹೋರಾಡುವವನಿಗೂ ಬೇಕಲ್ಲವೆ ಒಳ್ಳೆಯ ದಿನ?

                ಹೌದು ಅಂತಹುದೊಂದು ಕ್ಷಣಗಳಿಗಾಗಿ ಸೈನ್ಯ ಕಾದು ಕುಳಿತಿತ್ತು. ಕಣ್ಣೆದುರೇ ತಮ್ಮ ಸಹವರ್ತಿ ಗುಂಡೇಟು ತಿಂದು ಕುಸಿದು ಬಿದ್ದಾಗಲೂ ಏನೂ ಮಾಡಲಾಗದ ಅಸಹಾಯಕತೆಯಿಂದ ಹೊರ ಬರಲು ಮನ ತುಡಿಯುತ್ತಿತ್ತು. ಶತ್ರುಗಳು ದೇಶದ ಅಂಗುಲ ಅಂಗುಲವನ್ನು ಅತಿಕ್ರಮಿಸಿ ಬರುತ್ತಿರುವಾಗಲೂ ಬಡಿದಟ್ಟಲು ಸಿಗದ "ಅನುಮತಿ" ಎಂಬ ನಾಕಕ್ಷರ ಭಾರತೀಯ ಸೈನ್ಯವನ್ನು ಕಾಡಿದಷ್ಟು ಯಾರನ್ನೂ ಕಾಡಿರಲಿಕ್ಕಿಲ್ಲ! ಶತ್ರು ಎದುರು ನಿಂತು ಗುಂಡು ಹಾರಿಸುತ್ತಿರುವಾಗ ಕೈಯಲ್ಲಿ ಬಂದೂಕು ಹಿಡಿದಿದ್ದರೂ ಪ್ರಯೋಗಿಸಲು ಅನುಮತಿ ಇಲ್ಲದೆ ಅದೆಷ್ಟು ಯೋಧರು ಬಲಿಯಾಗಿರಬಹುದು. "ವೋಟ್ ಬ್ಯಾಂಕ್ ರಾಜಕೀಯ" ಹೆಚ್ಚು ಬಲಿ ತೆಗೆದುಕೊಂಡದ್ದು ಸೈನಿಕರನ್ನೇ! ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ನಂತರ ಭಾರತೀಯರ ಯೋಧರ ಮುಖಕಮಲದಲ್ಲಿ ಮಂದಹಾಸ ಅರಳಿತ್ತು. ಶತ್ರುಗಳ ಉಪಟಳಕ್ಕೆ ಪ್ರತ್ಯುತ್ತರ ನೀಡಲು ಪೂರ್ಣ ಸ್ವಾತಂತ್ರ್ಯ ಲಭಿಸಿತ್ತು. ಇದು ಪರಿಪೂರ್ಣವಾಗಿ ಪ್ರಕಟಗೊಂಡದ್ದು ಜೂನ್ ಒಂಬತ್ತರಂದು ಬರ್ಮಾಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದು ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಮಾಡಿದ  ತಕ್ಕ ಪ್ರತೀಕಾರದಲ್ಲಿ.

          ಎಲ್ಲರ ಪ್ರಶಂಸೆಗೆ ಪಾತ್ರವಾದ, ಬ್ರಹ್ಮ ದೇಶದಲ್ಲಿ ಅಡಗಿದ್ದ ಉಗ್ರಗಾಮಿಗಳನ್ನು ಹುಡುಕಿಕೊಂಡು ಹೋಗಿ ಕೇವಲ 45 ನಿಮಿಷಗಳಲ್ಲಿ ಉಗ್ರರ ಸಂಹಾರ ನಡೆಸಿದ ಭಾರತೀಯ ಯೋಧರ ಈ ಸಾಹಸಕಾರ್ಯ ಹೇಗೆ ನಡೆಯಿತು? ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಇಬ್ಬರೂ ಮಣಿಪುರಕ್ಕೆ ಹೋಗಿ ಕಾರ್ಯಾಚರಣೆಯ ನೀಲಿ ನಕಾಶೆ ತಯಾರಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕಾರ್ಯಾಚರಣೆಗೆ ಸಂಪೂರ್ಣ ಸಮ್ಮತಿ ನೀಡಿದ್ದರು. ಪ್ರಧಾನಿ ಮೋದಿ ಜೊತೆ ಹೋಗಬೇಕಿದ್ದ ಪ್ರವಾಸವನ್ನು ಅಜಿತ್ ದೋವಲ್ ಈ ಕಾರ್ಯಾಚರಣೆಗೋಸ್ಕರ ಕೈಬಿಟ್ಟಿದ್ದರು. ಸೇನಾ ಮುಖ್ಯಸ್ಥರೂ ಕೂಡ ಬ್ರಿಟನ್ ಪ್ರವಾಸದಿಂದ ಹಿಂದೆಸರಿದಿದ್ದರು. ಮಯನ್ಮಾರ್ ಸರ್ಕಾರಕ್ಕೆ ಈ ಕಾರ್ಯಾಚರಣೆಯ ವಿವರವನ್ನು ಭಾರತ ಮೊದಲೇ ತಿಳಿಸಿತ್ತು. ವಿಶೇಷ ತರಬೇತಿ ಪಡೆದ ಪ್ಯಾರಾ ಕಮಾಂಡೋಗಳ ತಂಡಗಳನ್ನು ಅಣಿಗೊಳಿಸಲಾಯಿತು. ಮಂಗಳವಾರ ಮುಂಜಾವು 3 ಗಂಟೆಗೆ ಕಾರ್ಯಾಚರಣೆ ಆರಂಭಿಸಲಾಯಿತು. ವಾಯುಸೇನೆ ಹೆಲಿಕಾಪ್ಟರ್'ಗಳ ಮೂಲಕ ಕಮಾಂಡೋಗಳು ಮಣಿಪುರ, ನಾಗಾಲ್ಯಾಂಡ್ ಗಡಿಭಾಗದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಳಿದರು. ಬಳಿಕ ಕಮಾಂಡೋಗಳು ನಡೆದುಕೊಂಡೇ ಉಗ್ರರ ಅಡಗುದಾಣಗಳನ್ನು ತಲುಪಿದರು. ಎರಡು ಉಗ್ರರ ಗುಂಪು ನೆಲೆಯೂರಿದ್ದರಿಂದ ಎರಡು ಕಮಾಂಡೋಗಳ ಗುಂಪನ್ನು ರಚಿಸಲಾಗಿತ್ತು. ಉಗ್ರರ ಶಿಬಿರಗಳನ್ನು ಸುತ್ತುವರಿದು ಕಮಾಂಡೋಗಳು ಗುಂಡಿನ ದಾಳಿ ನಡೆಸಿದರು. 45 ನಿಮಿಷಗಳ ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಹತರಾದರು. ಬೇರೆ ದೇಶದೊಳಗೆ ಹೋಗಿ ಭಾರತೀಯ ಸೇನೆ ಇಂಥ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲು! ಮತ್ತು ಅದಕ್ಕಾಗಿ 56 ಇಂಚಿನೆದೆಯ ವ್ಯಕ್ತಿಯೇ ಪ್ರಧಾನಿಯಾಗಬೇಕಾಯಿತು!

                 ಕಾರ್ಗಿಲ್ ನಂತರ ಭಾರತೀಯ ಸೇನೆಯ ಬಹುದೊಡ್ಡ ಕಾರ್ಯಾಚರಣೆ ಇದು. ಹೌದು ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಂಡದ್ದಕ್ಕೂ ಕಾರಣವಿದೆ. ಅದು ನಡೆದದ್ದೂ ಎನ್.ಡಿ.ಎ ಸರಕಾರವಿದ್ದಾಗಲೇ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ಲಾಹೋರ್ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು. ಆದರೆ ಕಪಟಿ ಪಾಕಿಸ್ತಾನ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಭಾರತ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಸೈನ್ಯಕ್ಕೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು.

                    ಕಳೆದ ಸೆಪ್ಟೆಂಬರಿನಲ್ಲಿ ಕಾಶ್ಮೀರ ಪ್ರವಾಹದುರಿಗೆ ಸಿಲುಕಿದಾಗ ಜನರ ರಕ್ಷಣೆ ಮಾಡಿದ್ದು ಸೇನೆಯೇ! ಏಳು ದಿನಗಳ ಮಗುವನ್ನು ರಕ್ಷಿಸಿದರು. ಏಳು ವರ್ಷಗಳ ಬಾಲೆಯನ್ನೂ. ಎಪ್ಪತ್ತು ವರ್ಷದ ವೃದ್ಧರನ್ನೂ! ರಕ್ಷಿಸುವಾಗ ಜಾತಿ-ಮತಗಳಾವುವೂ ಅಡ್ಡಿಯಾಗಲಿಲ್ಲ. ಪ್ರತ್ಯೇಕವಾದಿ-ಏಕತಾವಾದಿ, ಪರಿಸರ ರಕ್ಷಕ-ಪರಿಸರ ಭಕ್ಷಕ, ದೇಶಪ್ರೇಮಿ-ದೇಶದ್ರೋಹಿ ಅಂತ ಯಾರನ್ನೂ ವಿಂಗಡಿಸಲಿಲ್ಲ. ಎಲ್ಲರನ್ನೂ ಪ್ರವಾಹದ ವಿರುದ್ದ ಈಜಿ ದಡ ಸೇರಿಸಿದರು. ಪ್ರೀತಿ ತೋರಿದವರನ್ನೂ ರಕ್ಷಿಸಿದರು. ತಮ್ಮ ಮೇಲೆ ಕಲ್ಲೆಸೆದವರನ್ನೂ ರಕ್ಷಿಸಿದರು! ಬಾಂಬಿಟ್ಟವರನ್ನೂ! ಏಕೆಂದರೆ ಭಾರತೀಯ ಸೈನಿಕರಲ್ಲಿರುವುದು ದೇಶದ ಮೇಲಿನ ಅಪರಿಮಿತ ಭಕ್ತಿ! ತತ್ಪರಿಣಾಮದಿಂದ ರಾಗ-ದ್ವೇಷಗಳೆರಡೂ ಮರೆಯಾಗಿ ಸೇವೆಯ ಮೂರ್ತರೂಪವಷ್ಟೇ ಅಲ್ಲಿ ಉಳಿದು ಬಿಡುತ್ತದೆ! ಆದರೆ ನಾವು ಮಾಡುತ್ತಿರುವುದೇನು? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವರ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆಯೇ? ಅವರ  ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ? ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ದೇಹ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ತಾಸಿಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶವನ್ನು ಕಂಡು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ "ಸಾಮಾನ್ಯ ಮನುಷ್ಯನಾದವನು ಸಿಯಾಚಿನ್'ಅಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ಒಂದು ವಿಸ್ಮಯ" ಎಂದಿದ್ದರು.

            ಪಾಕಿಗಳ ಚಿತ್ರಹಿಂಸೆಯಿಂದ ಸಾವನ್ನಪ್ಪಿದ ಸೌರಭ್ ಕಾಲಿಯಾ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಲಯಕ್ಕೆ ಒಪ್ಪಿಸಲೂ ಮೀನ ಮೇಷ ಎಣಿಸಲಾಗುತ್ತೆ(ಈ ಲೇಖನ ಬರೆಯುವ ವೇಳೆಗೆ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯಲು ಸರಕಾರ ತೀರ್ಮಾನಿಸಿದೆ). ನಿವೃತ್ತ ಯೋಧರ ಏಕ ಶ್ರೇಣಿ-ಏಕ ಪಿಂಚಣಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಈ ದೇಶದ ನಾಗರೀಕರು ಮಾತ್ರವಲ್ಲ, ಭಾರತೀಯ ಸೈನ್ಯಕ್ಕೂ ಭಾಜಪಾ ಕೇಂದ್ರದಲ್ಲಿ ಸರಕಾರ ರಚಿಸಿದ್ದು ಹರ್ಷ ತಂದಿದೆ. ಅವರಿಗೆ ತಮ್ಮ ಸಾಹಸವನ್ನು ತೋರಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ನಿಜ; ಆದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿಳಂಬವಾಗದಂತೆ ಒದಗಿಸಬೇಕಲ್ಲವೆ? ಭಾಜಪವೂ ಕಾಂಗ್ರೆಸಿನಂತೆ ದೇಶ ಕಾಯುವವರನ್ನು ಕಡೆಗಣಿಸಿದರೆ ದೇಶದ ಪಾಡೇನಾದೀತು? ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ  ಪ್ರತಿಮೆ ಇದೆ. ಅದರ ಕೆಳಗೆ " ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ" ಎಂಬ ಒಕ್ಕಣಿಕೆ ಇದೆ. ಹೌದು ನಮ್ಮ ನಾಳೆಯ ಬದುಕಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ನಮ್ಮ ಯೋಧರಿಗೊಂದು ಗೌರವದ ಬದುಕನ್ನು ಕೊಡಲಾರೆವೇ? ಸೈನಿಕರಿಗೂ ಅಚ್ಛೇ ದಿನ್ ಬರಬೇಕಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ