ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ “ದಿ ಗ್ರೇಟ್” : ಭಾಗ- 4
ಮೋಸ, ಕುತಂತ್ರಗಳಿಂದ ಉತ್ತರ ಭಾರತದ ರಾಜ್ಯಗಳನ್ನು ತನ್ನ ವಶ ಮಾಡಿಕೊಂಡ ಮೇಲೆ ಅಕ್ಬರನ ದೃಷ್ಟಿ ಬಿದ್ದದ್ದು ಮತದ ಮೇಲೆ! ತನ್ನಂತಹ ಚಕ್ರವರ್ತಿ ಯಾವನೋ ಒಬ್ಬ ಯಕಶ್ಚಿತ್ ಪ್ರವಾದಿಗೆ ತಲೆಬಾಗುವುದೆಂದರೇನು? ತಾನೊಬ್ಬ ದೈವಾಂಶ ಸಂಭೂತನೆಂದೇ ಅಕ್ಬರನ ನಂಬಿಕೆಯಾಗಿತ್ತು. ಅದಕ್ಕೆ ಸರಿಯಾಗಿ ಅಕ್ಬರನ ಸುತ್ತ ಮುತ್ತ ಇದ್ದವರೆಲ್ಲಾ ಆತನ ಭಜನೆ ಮಾಡುವವರೇ. ಅಲ್ಲದೇ ಅಡ್ಡ ಬಂದವರನ್ನು ಉದ್ದುದ್ದ ಸಿಗಿದುಬಿಡುತ್ತಾನೆಂಬ ಹೆದರಿಕೆ ಬೇರೆ! ಒಟ್ಟಾರೆ ಮರ್ಕಟವೊಂದು ಮದಿರೆ ಕುಡಿದ ಹಾಗಾಯಿತು ಅಕ್ಬರನ ಸ್ಥಿತಿ! ಇಸ್ಲಾಂ, ಕ್ರೈಸ್ತ, ಹಿಂದೂಗಳನ್ನು ಸಮನ್ವಯಗೊಳಿಸಿ, ಎಲ್ಲದರಲ್ಲಿನ ಒಳ್ಳೆಯದನ್ನು ತೆಗೆದುಕೊಂಡು ಸರ್ವರಿಗೂ ಆದರಣೀಯ-ಆಚರಣೀಯ ದಾರಿಯನ್ನು ಹುಟ್ಟುಹಾಕಿದ್ದಾನೆಂದು ನಮ್ಮ ಚರಿತ್ರಕಾರರು ಗೀಚಿದ್ದಾರೆ. ಇದರ ಫಲವಾಗಿಯೇ ಅಕ್ಬರ್ "ಲಿಬರಲ್", ಸರ್ವಮತಸಮತ್ವಕ್ಕೆ ಪ್ರಯತ್ನಿಸಿದವ ಎಂದು ಬಲಪಂಥೀಯರ ತಲೆಯಲ್ಲೂ ಹುಳ ಹೊಕ್ಕಿರುವುದು. ಆದರೆ "ದೀನ್ ಇಲಾಹಿ" ಅಪ್ಪಟ ಕಾಗೆ ಬಂಗಾರ!!!ರಾಜನು ದೇವರ ನೆರಳಾದ್ದರಿಂದ, ಹಿಂದೂ ಸ್ಥಾನದಲ್ಲಿ ತಾನೇ ದೊಡ್ಡ ರಾಜನೆಂಬ ಭ್ರಮೆಯಿಂದ ತನ್ನನ್ನೇ ಪ್ರವಾದಿಯಾಗಿ ಘೋಷಿಸಿಕೊಂಡು ಹೊಸಮತವನ್ನು ಸ್ಥಾಪಿಸಹೊರಟ ಅಕ್ಬರ್ 1579ರಲ್ಲಿ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜಪ್ರಮುಖರನ್ನೊಳಗೊಂಡ ಸಭೆಯೊಂದನ್ನು ಆಯೋಜಿಸಿದ. ಅದರಲ್ಲಿ "ತನ್ನ ಸಾಮ್ರಾಜ್ಯದಲ್ಲಿ ಹಲವು ಮತಗಳಿದ್ದು, ಪರಸ್ಪರ ಭೇದಾಭಿಪ್ರಾಯಗಳನ್ನು ಹೊಂದಿವೆ. ಇದು ಸರಿಯಲ್ಲ. ಹಾಗಾಗಿ ಎಲ್ಲದರ ಉತ್ತಮವಾದುದನ್ನು ಆರಿಸಿಕೊಂಡು ಹೊಸಮತವೊಂದನ್ನು ಸೃಷ್ಟಿಸಿ ಅನುಸರಿಸಬೇಕು. ಇಲ್ಲಿರುವವರೆಲ್ಲಾ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ" ಎಂದು ಆಜ್ಞಾಪಿಸಿದ. ಉದ್ದೇಶವೇನೋ ಒಳ್ಳೆಯದೇ. ಆದರೆ ಆದದ್ದೇನು? ಅಕ್ಬರನ ಭಜನಾಮಂಡಳಿ "ವಿಶ್ವಮತ"ವನ್ನು ಸ್ಥಾಪಿಸಲು ಅವಶ್ಯವಾದ ನಿಯಮಗಳನ್ನು ಚಕ್ರವರ್ತಿಗಳೇ ರೂಪಿಸಬೇಕು ಅಂದುಬಿಟ್ಟರು. ಕಳ್ಳು ಕುಡಿದ ಕಪಿಗೆ ಚೇಳು ಕುಟುಕಿದಂತಾಯಿತು! ಸಧ್ಯದಲ್ಲಿಯೇ ಹೊಸ ಮತವನ್ನು ಸ್ಥಾಪಿಸಲಾಗುವುದೆಂದು ರಾಜ್ಯಾದ್ಯಂತ ಡಂಗುರ ಹೊಡೆಸಿದ. ಹೊಸ ಮತ ಆರಂಭಿಸುವ ಮುನ್ನ ಹಿಂದೂ ಧರ್ಮ, ಕ್ರಿಶ್ಚಿಯನ್ ಮತದ ಆಚಾರ್ಯರನ್ನು ಸಂಪರ್ಕಿಸಲೇ ಇಲ್ಲ! ಮೊಗಲ್ ಸಾಮ್ರಾಜ್ಯದ ಮುಫ್ತಿಯಾಗಿದ್ದ ಕಾಜಿಯಲ್ ಕುಜಾತ್ ಹಾಗೂ ಕೆಲವು ಉಲೇಮಾಗಳ ಕೈಯಲ್ಲಿ ಒಂದು ದಸ್ತಾವೇಜಿಗೆ ಸಹಿ ಮಾಡಿಸಿದ(1579). ಸಿವಿಲ್ ವ್ಯವಹಾರಗಳಲ್ಲಿದ್ದಂತೆ ಪಾರಲೌಕಿಕ ಸಂಗತಿಗಳಲ್ಲೂ ಚಕ್ರವರ್ತಿಯೇ ಅಂತಿಮ ನ್ಯಾಯ ತೀರ್ಮಾನ ನೀಡುವವನೆಂದೂ, ಮುಸ್ಲಿಮ್ ನ್ಯಾಯಕ್ಕೆ ಸಂಬಂಧಿಸಿದಂತೆ ಅಕ್ಬರನೇ ಮಿಕ್ಕೆಲ್ಲಾ ಖಾಜಿಗಳಿಗಿಂತ ಶ್ರೇಷ್ಠನೆಂದೂ, ಅವನ ನಿರ್ಣಯವೇ ಅಂತಿಮವೆಂದು ಅವರ ಕೈಯಲ್ಲಿ ಕಟ್ಟಳೆ ಹೊರಡಿಸಿದ.
ಹೇಗಿತ್ತು ದೀನ್ ಇಲಾಹಿ?
ಹೊಸ ಮತದಲ್ಲಿ ಸೇರುವಂತಹವರು ಚಕ್ರವರ್ತಿಯ ಸಮ್ಮುಖದಲ್ಲಿ ಸಮರ್ಪಿಸಿಕೊಳ್ಳಬೇಕಿದ್ದ ವಿಷಯಗಳು ನಾಲ್ಕು. ಆಸ್ತಿ, ಜೀವನ, ಗೌರವ, ಮತ! ಈ ನಾಲ್ಕರ ಪೈಕಿ ಒಂದನ್ನು ತ್ಯಾಗ ಮಾಡಿದವನಿಗೆ ಒಂದು ಡಿಗ್ರಿ, ಎರಡನ್ನು ತ್ಯಾಗ ಮಾಡಿದವನಿಗೆ ಎರಡು ಡಿಗ್ರಿ...ಹೀಗೆ ಡಿಗ್ರಿಗಳನ್ನು ನೂತನ ಗುರುಕುಲ ದಯಪಾಲಿಸುತ್ತಿತ್ತು. ಯಾವನಾದರೂ ಹಿಂದೂ ಹೊಸಪಂಥವನ್ನು ಸೇರಬೇಕೆಂದರೆ ತಾನು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ದೇವರು-ಆಚರಣೆಗಳನ್ನು ತ್ಯಜಿಸಬೇಕಿತ್ತು. ತನ್ನ ಬಳಿ ಅದ್ಭುತ ಶಕ್ತಿಗಳಿವೆಯೆಂದೂ, ಬಂಜೆಯರಿಗೆ ಮಕ್ಕಳು ಹುಟ್ಟುತ್ತವೆಯೆಂದೂ, ತನ್ನ ಪಾದ ತೊಳೆದ ನೀರನ್ನು ಕುಡಿಯುವುದರಿಂದ ರೋಗಗಳು ವಾಸಿಯಾಗುತ್ತವೆಂದು ಅಕ್ಬರ್ ಮಾಡಿದ ಪ್ರಚಾರಕ್ಕೇನೂ ಕಡಿಮೆ ಇರಲಿಲ್ಲ. ಅನೇಕ ದೌರ್ಭಾಗ್ಯವಂತರು ಅಕ್ಬರನ ಪಾದೋದಕವನ್ನು ಸೇವಿಸಿ ಇಲ್ಲದ ಖಾಯಿಲೆ ಬರಿಸಿಕೊಂಡರು. ಅಕ್ಬರನ ದರಬಾರಿನಲ್ಲಿ ದೀನ್ ಇಲಾಹಿ ಸ್ವೀಕರಿಸಿದ ರಾಜಪ್ರಮುಖರು ಕೇವಲ ಹದಿನೆಂಟು ಮಂದಿ. ಅವರಲ್ಲಿ ಬೀರಬಲ್ ಒಬ್ಬನೇ ಹಿಂದೂ. ಸಾಮಾನ್ಯ ಜನರ ಸಂಖ್ಯೆಯೂ ಅತ್ಯಲ್ಪ. ಅನೇಕ ಹಿಂದೂ ಆಚಾರ-ಸಂಪ್ರದಾಯಗಳನ್ನು ಯಥಾವತ್ ನಕಲು ಹೊಡೆದರೂ ಹಿಂದೂಗಳೇನು ಆಕರ್ಷಿತರಾಗಲಿಲ್ಲ. ಕಾಫಿರರ ರೀತಿಯ ಆಚಾರಗಳೆಂದು ಮುಸ್ಲಿಮರೂ ದೂರಾದರು. ಮುಂದೇನು? ಇದೆಯಲ್ಲ ಅಸ್ತ್ರ...ಸ್ವೀಕರಿಸಬೇಕು ಇಲ್ಲಾ ಶಿಕ್ಷೆಗೆ ಗುರಿಯಾಗಬೇಕು! ಹೊಸ ಮತವನ್ನು ಸ್ವೀಕರಿಸಲಿಚ್ಛಿಸುವವರು ಸೂರ್ಯನು ಪ್ರಜ್ವಲಿಸುವ ಭಾನುವಾರದಂದು ತಮ್ಮ ಮುಂಡಾಸುಗಳನ್ನು ತೆಗೆದಿಟ್ಟು ಅಕ್ಬರನ ಪಾದಮೂಲದಲ್ಲಿ ತಮ್ಮ ತಲೆ ಇರಿಸಿ ಪ್ರಾರ್ಥಿಸಬೇಕಿತ್ತು. ದೇವರ ಪ್ರತಿನಿಧಿಯಾದ ಅರಸ ಅವರನ್ನು ಮೇಲೆಬ್ಬಿಸಿ ತಲೆಯ ಮೇಲೆ ಮುಂಡಾಸನ್ನಿರಿಸಿ ಕೈ ಎತ್ತಿ ಆಶೀರ್ವದಿಸಿ "ಅಲ್ಲಾ ಹು ಅಕ್ಬರ್" ಎಂದು ಬರೆದಿದ್ದ ಒಂದು ಭಿಲ್ಲೆಯನ್ನು ಉದುಗೊರೆಯಾಗಿ ನೀಡುವುದರ ಮೂಲಕ ತನ್ನ ಮತಕ್ಕೆ ಸೇರಿಸಿಕೊಳ್ಳುತ್ತಿದ್ದ. ಭಕ್ತನು ಸದಾ ಆ ಭಿಲ್ಲೆಯನ್ನು ತನ್ನ ಮುಂಡಾಸಿನಲ್ಲಿ ಧರಿಸಿ ಸಂಚರಿಸಬೇಕಿತ್ತು. ನೂತನ ಮತಸ್ಥರು ಪರಸ್ಪರ ಎದುರಾದಾಗ "ಅಲ್ಲಾಹು ಅಕ್ಬರ್" ಎಂದು ಹೇಳಬೇಕಿತ್ತು.ಇದರಿಂದ ಹೆಚ್ಚು ಹೊಡೆತ ಬಿದ್ದದ್ದು ಮುಸ್ಲಿಮರಿಗೇ! ನೂತನ ಮತವನ್ನು ವಿರೋಧಿಸಿದರೆಂಬ ಕಾರಣಕ್ಕೆ ಭಾರೀ ಸಂಖ್ಯೆಯ ಷೇಖ್, ಫಕೀರರನ್ನು ದೇಶದಿಂದ ಬಹಿಷ್ಕರಿಸಿ ಕಂದಹಾರಿನ ಮಾರುಕಟ್ಟೆಗಳಲ್ಲಿ ಕುದುರೆಗಳಿಗೆ ಬದಲು ಗುಲಾಮರಂತೆ ಅವರನ್ನು ಮಾರಹಾಕಿದ ಎಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ. ಐದಾರು ವರ್ಷಗಳಲ್ಲಿ ಅವನ ಹೃದಯದಲ್ಲಿ ಇಸ್ಲಾಮಿನ ಬಗೆಗೆ ಲವಲೇಶ ಭಾವನೆಯೂ ಇಲ್ಲದಂತಾಗಿಬಿಟ್ಟಿತ್ತು ಎಂದು ಅಕ್ಬರನ ಸಮಕಾಲೀನ ಬದೌನಿ ಬರೆದಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡುವಂತಿರಲಿಲ್ಲ. ಮೊದಲೇ ಆ ಹೆಸರಿದ್ದರೆ ಬದಲಾಯಿಸಿಕೊಳ್ಳಬೇಕಿತ್ತು. ಗಡ್ಡ ಬೋಳಿಸಬೇಕಿತ್ತು. ಪ್ರಾರ್ಥನೆ, ರಂಜಾನ್ ಉಪವಾಸ, ಮೆಕ್ಕಾ ಯಾತ್ರೆ ಮಾಡುವಂತಿರಲಿಲ್ಲ. ಅರಬ್ಬೀ ಭಾಷೆ, ಕುರಾನಿನ ಅಧ್ಯಯನ, ಷರೀಯತ್ ಕಾನೂನಿಗೆ ಅವಕಾಶವಿರಲಿಲ್ಲ. ಸತ್ತವರ ತಲೆಯನ್ನು ಪೂರ್ವ ದಿಕ್ಕಿಗೆ ಬರುವಂತೆ ಹೂಳಬೇಕಿತ್ತು. ಪೂರ್ವಕ್ಕೆ ತಲೆ ಹಾಕಿ ಮಲಗಬೇಕಿತ್ತು. ಪಶ್ಚಿಮದ ಮೆಕ್ಕಾ ಕಡೆ ಮುಖ ಮಾಡಿ ಪ್ರಾರ್ಥಿಸುವ ಮುಸ್ಲಿಮರನ್ನು ಅವಮಾನಿಸುವುದು ಇದರ ಉದ್ದೇಶವಾಗಿತ್ತೆಂದು ವಿನ್ಸೆಂಟ್ ಸ್ಮಿತ್ ಬರೆದಿದ್ದಾನೆ.
ಇದರಿಂದ ಹಿಂದೂಗಳಿಗೇನೂ ಹಾನಿಯಿಲ್ಲ, ಒಳ್ಳೆಯದೇ ಆಯಿತಲ್ವೇ ಅಂತಾ ನೀವು ತಿಳ್ಕೊಂಡಿದ್ದರೆ ಅದು ತಪ್ಪು. ಈ ಮತವನ್ನು ಅಪ್ಪಿಕೊಂಡವರು ಒಂದು ರೀತಿಯಲ್ಲಿ ಇಸ್ಲಾಮಿಗೆ ಮತಾಂತರಗೊಂಡಂತೆಯೇ. ಇದು ಅಕ್ಬರನ ಕಾಲಾನಂತರ ನಿಚ್ಚಳವಾಯಿತು. ಕೆಲವರು ಎಡಬಿಡಂಗಿಗಳಂತೆ ಅಲ್ಲಿಯೂ ಸಲ್ಲದೆ ಇಲ್ಲಿಯೂ ಉಳಿಯದೆ ಸತ್ತು ಹೋದರು. ಭಾರತೀಯತೆಯನ್ನು, ಹಿಂದೂ ಸಂಸ್ಕೃತಿಯನ್ನು ತುಚ್ಛವಾಗಿ ಕಾಣುವ ಇಂದಿನ "ಸೆಕ್ಯುಲರು"ಗಳು ಬಹುಷಃ ಇವರದ್ದೇ ಸಂತಾನವೇನೋ! ಅಲ್ಲದೆ ಆತ ಕೊನೆಗೆ ಇಸ್ಲಾಮ್ ದ್ವೇಷಿಯಾಗಿ ಬದಲಾದರೂ ಮೊದಲು ಹಿಂದೂಗಳಿಗೆ ಮಾಡಿದ ಅನ್ಯಾಯ ಮುಚ್ಚಿಹೋಗುವುದೇ? ಕಂಡ ಕಂಡ ಮಾನಿನಿಯರನ್ನು ತನ್ನ ಜನಾನಾಕ್ಕೆ ಸೇರಿಸಿಕೊಳ್ಳುತ್ತಿದ್ದ ಇಂತಹ ಕಾಮುಕನನ್ನು ಹೊಗಳುವವರು ಹೆಣ್ಣನ್ನು ನೋಡುವ ಪರಿ ಯಾವ ರೀತಿ ಇರಬಹುದು? ಹೆಣ್ಣನ್ನು ಬರಿಯ ಭೋಗದ ವಸ್ತುವಾಗಿ ಕಂಡ ಈ ಮೂರ್ಖ ಕೇವಲ ಹೆಣ್ಣು-ಹೊನ್ನು-ಮಣ್ಣನ್ನಷ್ಟೇ ದೋಚಲಿಲ್ಲ, ಇಲ್ಲಿಯ ಜನರ ಬೌದ್ಧಿಕ ಷಂಡತನಕ್ಕೂ ಕಾರಣವಾದ! ಇಲ್ಲದಿದ್ದಲ್ಲಿ ಅದೆಷ್ಟೋ ರಾಜ್ಯಗಳನ್ನು ಸರ್ವನಾಶ ಮಾಡಿದ, ದೇವಾಲಯಗಳನ್ನು ಸುಟ್ಟು ಬೂದಿಯಾಗಿಸಿದ, ಲಕ್ಷ ಲಕ್ಷ ಹಿಂದೂಗಳ ಮತಾಂತರ-ಮಾರಣ ಹೋಮಕ್ಕೆ ಕಾರಣನಾದ, ಲಕ್ಷಾಂತರ ಮಾನಿನಿಯರ ಜೌಹರ್-ಶೀಲಹರಣ-ನರಕಸದೃಶ ಜೀವನಕ್ಕೆ ಕಾರಣನಾದ ಇಂತಹ ಪ್ರಭೃತಿಯನ್ನು "ದಿ ಗ್ರೇಟ್" ಎಂದವರೂ ಅದನ್ನೇ ಒಪ್ಪಿಕೊಳ್ಳುತ್ತಿರುವವರ ಬೌದ್ಧಿಕ ದಾಸ್ಯಕ್ಕೆ ಏನೆನ್ನಬೇಕು? ನನ್ನ ಪ್ರಕಾರ "ಅಕ್ಬರ್ ದಿ ಗ್ರೇಟ್" ಎನ್ನುವವರಷ್ಟು "ವೇಸ್ಟ್ ಜೀವಿ"ಗಳು ಇನ್ನೊಬ್ಬರಿಲ್ಲ!
-ಮುಗಿಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ