ಪುಟಗಳು

ಗುರುವಾರ, ಜುಲೈ 23, 2015

ಕಾರ್ಗಿಲ್ ಕದನ: ದೇಶ ಉಳಿಸಿದ ಯೋಧನಿಗೆ ನಮನ

ಕಾರ್ಗಿಲ್ ಕದನ: ದೇಶ ಉಳಿಸಿದ ಯೋಧನಿಗೆ ನಮನ


             ಮೇ 3, 1999. ಕಣ್ಮರೆಯಾಗಿದ್ದ ತನ್ನ ಯಾಕ್ ಒಂದನ್ನು ಹುಡುಕುತ್ತಾ ಕಾರ್ಗಿಲ್ ಜಿಲ್ಲೆಯ ತಶಿ ನಂಗ್ಯಾಲ್ ತನ್ನ ಗಾರ್ಕೋನ್ ಹಳ್ಳಿಯ ಸೀಮೆಯ ಗಿರಿಯೊಂದನ್ನೇರಿ ಹೊರಟಿದ್ದ. ಆಗವನಿಗೆ ಕಂಡದ್ದು ಆರು ಜನ ಸೈನಿಕರು. ಮೊದಲಿಗೆ ಭಾರತೀಯ ಸೈನಿಕರಿರಬಹುದು ಎಂದು ತನ್ನ ಪಾಡಿಗೆ ತಾನು ಹೊರಡಲೆತ್ನಿಸಿದ ಆತನಿಗೆ ಸಂಶಯ ಕಾಡಿತು. ಸಮವಸ್ತ್ರದ ವರ್ಣವನ್ನು ಸರಿಯಾಗಿ ಗಮನಿಸಿದವನಿಗೆ ಅದು ಭಾರತೀಯ ಸೈನಿಕರಲ್ಲ ಅನ್ನುವುದು ಸ್ಪಷ್ಟವಾಯಿತು. ಕೂಡಲೇ ಆತ ಸನಿಹದಲ್ಲಿದ್ದ ದೇಶದ ಸೇನಾನೆಲೆಗೆ ತೆರಳಿ ಸುದ್ದಿ ಮುಟ್ಟಿಸಿದ. ಘಟನೆಯ ಬಗ್ಗೆ ಸರಿಯಾದ ಅಂದಾಜಿರದ ಅಧಿಕಾರಿ, ಒಂದು ಸಣ್ಣ ಪಡೆಯನ್ನು ಕಳುಹಿಸಿದ. ಆದರೆ ಅವರಾರೂ ಜೀವಂತವಾಗಿ ಮರಳಲೇ ಇಲ್ಲ. ಆಗ ಅಧಿಕಾರಿಗೆ ಪರಿಸ್ಥಿತಿಯ ವಿಷಮತೆಯ ಅರಿವಾಯಿತು. ಇದು ಯುದ್ಧ! ಬಾರಿ ಬಾರಿ ಸೋತರೂ ಬುದ್ಧಿ ಬರದ ನಾಚಿಕೆ ಇರದ ವಾಮಮಾರ್ಗಗಳ ಮೂಲಕ ಪದೇ ಪದೇ ಭಾರತವನ್ನು ಛಿದ್ರಗೊಳಿಸಲು  ಯತ್ನಿಸುತ್ತಿರುವ ಅದೇ ಪಾಪಿ ಪಾಕಿಸ್ತಾನದಿಂದ ಮಗದೊಮ್ಮೆ ನೇರ ಯುದ್ಧ!

                 ಅದೇನು ಕಾಲು ಕೆರೆದು, ಜಗಳ ತೆಗೆದು ನಾವಾಗಿ ಮೈಮೇಲೆ ಎಳೆದುಕೊಂಡ ಯುದ್ಧವಲ್ಲ. ಲಾಹೋರಿಗೆ ಪ್ರಧಾನಿ ಅಜಾತಶತ್ರು  ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರಿನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಭಾರತ ತನ್ನ ಮಾತಿನಂತೆಯೇ ನಡೆದುಕೊಂಡಿತು. ಆದರೆ ವಚನ ಬದ್ಧತೆ ಇಲ್ಲದ, ಪ್ರಾಮಾಣಿಕತೆ-ನಿಷ್ಟೆ-ಕೃತಜ್ಞತೆ ಎಂಬ ಪದಗಳ ಅರ್ಥವೇ ಅರಿಯದ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್ ಶರೀಫ್ ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು.

                ಭಾರತ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ.  ದ್ರಾಸ್-ಬಟಾಲಿಕ್, ಕಾರ್ಗಿಲ್, ಟೈಗರ್ ಹಿಲ್ಗಳು ಅತ್ಯಂತ ದುರ್ಗಮವಾದ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಪ್ರದೇಶಗಳು. ಅಲ್ಲಿ ರಸ್ತೆಗಳೇ ಇರಲಿಲ್ಲ. ಎತ್ತ ನೋಡಿದರತ್ತ ಹಿಮಾಚ್ಛಾದಿತ ಗಿರಿಶಿಖರಗಳು. ಒಂದೊಂದು ಪರ್ವತವೂ 15-18 ಸಾವಿರ ಅಡಿ ಎತ್ತರ. ಈ ಎತ್ತರವನ್ನು ಯೋಧರು ಕಾಲ್ನಡಿಗೆಯಲ್ಲೇ ಹತ್ತಬೇಕಾದ ಅನಿವಾರ್ಯತೆ. ಮಣಭಾರದ ಬಂದೂಕು, ಇತರ ಆಯುಧಗಳು, ತಮ್ಮ ಆಹಾರವನ್ನು ಬೆನ್ನ ಮೇಲೆ ಹೊತ್ತುಕೊಂಡು ಟೈಗರ್ ಹಿಲ್ನ ತುದಿ ತಲುಪಲು ಒಬ್ಬ ಯೋಧನಿಗೆ ಕನಿಷ್ಟವೆಂದರೂ 11 ಘಂಟೆ ಹಿಡಿಯುತ್ತಿತ್ತು. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವಾಮಾನ, ಶತ್ರು ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ದುರ್ಗಮ ಶಿಖರಗಳನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಸೈನ್ಯಕ್ಕೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವೊಂದು ಬಾರಿ ನಿರಂತರ ಮೂವತ್ತಾರು ಗಂಟೆಗಳಿಗೂ ಅಧಿಕ ಕಾಲ ಶತ್ರುಪಡೆಯೊಂದಿಗೆ ಸೆಣಸುವ ಅನಿವಾರ್ಯತೆ. ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರ ಸಾಧನೆಗೆ ಅಡ್ಡಿಯಾಗಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರ, ದೇಶಪ್ರೇಮಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ.

                ಟೋಲೋಲಿಂಗ್! 16 ಸಾವಿರ ಅಡಿ ಎತ್ತರದ ಬರಡು ಹಿಮ ಶಿಖರ. ಅದರ ನೆತ್ತಿಯ ಮೇಲೆ ಕೂತಿದ್ದರು ಪಾಕಿಗಳು. ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳಲು ಮೇ 14ರಂದು ಹೋದ ಒಂದು ಪಡೆ ತಿರುಗಿ ಬರಲೇ ಇಲ್ಲ. ಹಾಗೆ ಶುರುವಾದ ಯುದ್ಧ ಕಾರ್ಗಿಲ್ನಲ್ಲಿ ಭಾರತದ ಸೈನ್ಯಕ್ಕೆದುರಾದ ಅತಿಪ್ರಮುಖ ಸವಾಲು. ಕಾರ್ಗಿಲ್ನಲ್ಲಿ ಮರಣವನ್ನಪ್ಪಿದ ಅರ್ಧದಷ್ಟು ಭಾರತೀಯ ಯೋಧರು ಟೋಲೋಲಿಂಗ್ ಯುದ್ಧದಲ್ಲೇ ಪ್ರಾಣತೆತ್ತರು. ಟೋಲೋಲಿಂಗನ್ನು ವಶಪಡಿಸಿಕೊಳ್ಳುವುದು ಪ್ರಮುಖ ಅವಶ್ಯಕತೆಯಾಗಿತ್ತು. ಕಾರಣ ಅದು ಲೇಹ್ ನ ಹೆದ್ದಾರಿಯ ಪ್ರಮುಖ ಸಂಪರ್ಕ ಕೊಂಡಿ. ಅದರ ಮೇಲೆ ಕೂತು 200 ಕಿಲೋಮೀಟರುಗಳುದ್ದಕ್ಕೂ ನರಪಿಳ್ಳೆಯೂ ಮಿಸುಕಾಡದಂತೆ ಪಾರುಪತ್ಯ ನಡೆಸಬಹುದಿತ್ತು. ಆ ದುರ್ಗಮ ಪ್ರದೇಶದಲ್ಲಿದದ್ದು ಅದೊಂದೇ ರಸ್ತೆ. ಹಾಗಾಗಿ ಸೈನ್ಯ ಮುಂದುವರಿಯುವುದಕ್ಕಿಂತಲೂ ಮೊದಲು ಈ ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆ ಭೀಕರ ಹೋರಾಟದಲ್ಲಿ ಮೊದಲಿಗೆ ಬೆಟ್ಟದ ಮೇಲೆ ಫಿರಂಗಿಗಳ ದಾಳಿ ನಡೆಸಿದ ಸೈನ್ಯ ಅದು ಫಲಿಸದಿದ್ದಾಗ ವಾಯುಸೇನೆಯನ್ನು ಬಳಸಬೇಕಾಯಿತು. ಕೊನೆಗೆ ಇಂಚಿಂಚೇ ತೆವಳುತ್ತಾ ಹೋದ ಭಾರತದ ಸೈನ್ಯ ಶಿಖರದ ನೆತ್ತಿಯನ್ನು ತಲುಪಿ ಅಳಿದುಳಿದ ಪಾಕಿಗಳನ್ನು `ಮಲ್ಲಯುದ್ಧದಲ್ಲಿ' ಮುಗಿಸಿಹಾಕಿತು. ಹೀಗೆ ಜೂನ್ 12ರಂದು ಟೋಲೋಲಿಂಗ್ ಭಾರತದ ತೆಕ್ಕೆಗೆ ಬಂತು.  ಟೋಲೋಲಿಂಗ್ ಭಾರತದ ಕೈವಶವಾದ ಕೇವಲ ಆರು ದಿನಗಳಿಗೆ ಭಾರತ ಪಾಯಿಂಟ್ 4590, 5140, ರಾಕಿ ನಾಬ್ ಮತ್ತು ಹಂಪ್ ಗಳನ್ನು ಮುಕ್ತಗೊಳಿಸಿ ನಾಲ್ಕು ದಿಗ್ವಿಜಯಗಳನ್ನು ಸಾಧಿಸಿತು.

                   ಸೂರ್ಯ ರಶ್ಮಿ ಮೊದಲು ಮುತ್ತಿಕ್ಕುವ ಶಿಖರ 17 ಸಾವಿರ ಅಡಿ ಎತ್ತರದಲ್ಲಿರುವ ಪಾಯಿಂಟ್ 5140. ಜೂನ್ 19ರ ರಾತ್ರಿ 5140 ಶಿಖರವನ್ನು ಜಯಿಸಲೇಬೇಕೆಂದು ಲೆಫ್ಟಿನೆಂಟ್ ವಿಕ್ರಮ್ ಬಾತ್ರಾ ಮತ್ತು ಕ್ಯಾಪ್ಟನ್ ಸಂಜೀವ್ ಜಾಮ್ವಾಲ್ಗೆ ಆದೇಶ ನೀಡಲಾಗಿತ್ತು. ಬೆಳಗಾದರೆ ಶಿಖರವೇರಲು ಸಾಧ್ಯವೇ ಇಲ್ಲ. ಶತ್ರುವಿನ ಗುಂಡಿಗೆ ಎದೆಗೊಡಬೇಕಾಗುತ್ತದೆ.  ಕಡಿದಾದ ಭಾಗದ ಮೂಲಕ ಶಿಖರವನ್ನೇರುವಂತೆ ತಮ್ಮ ಸಂಗಡಿಗರಿಗೆ ನಿರ್ದೇಶನ ನೀಡಿದ ವಿಕ್ರಮ್, ತಾನು ಹಿಂದಿನಿಂದ ದಾಳಿ ಮಾಡಲು ನಿರ್ಧರಿಸಿದ. ಬೆಳಗಾಗುವಷ್ಟರಲ್ಲಿ ಉತ್ತುಂಗದಲ್ಲಿದ್ದ ಬಂಕರ್ ಸ್ಫೋಟಗೊಂಡಿತ್ತು. ಶತ್ರುಗಳು ಹೆಣವಾಗಿದ್ದರು. ವಿಕ್ರಮ್ ಬಾತ್ರಾ ನೇತೃತ್ವದ ‘13 ಜಮ್ಮು-ಕಾಶ್ಮೀರ್ ರೈಫಲ್ಸ್ ಸೇನಾ ತುಕಡಿ ನಿರ್ಣಾಯಕ ಕಾಳಗದಲ್ಲಿ ಗೆದ್ದಿತ್ತು. ಮುಂದೆ ಟೈಗರ್ ಹಿಲ್ಸ್ನ ಜಯಕ್ಕೆ ಕಾರಣವಾದದ್ದು ಇದೇ. ಮುಂದೆ ಇದೇ ಪಡೆ 16 ಸಾವಿರ ಅಡಿ ಎತ್ತರದಲ್ಲಿರುವ 4875 ಶಿಖರವನ್ನು ಜಯಿಸಿತು. ಮಂಜು ಮುಸುಕಿರುವ ವಾತಾವರಣದಲ್ಲಿ 80 ಡಿಗ್ರಿ ಕಡಿದಾದ ಶಿಖರವನ್ನು ಏರುವುದು ಸಾಮಾನ್ಯ ಮಾತಾಗಿರಲಿಲ್ಲ. ಜುಲೈ 8ರ ರಾತ್ರಿ ವಿಕ್ರಮ್ ಪಡೆ ಶತ್ರುಗಳ ಮೇಲೆ ಪ್ರತಿ ದಾಳಿ ಆರಂಭಿಸಿತು. ಶಿಖರದ ಪ್ರತಿ ಹಂತದಲ್ಲೂ ಇದ್ದ ಶತ್ರುಗಳ ಬಂಕರ್ಗಳನ್ನು ನಾಶಪಡಿಸುತ್ತಲೇ ಸಾಗಿದರು. ಬೆಳಗಾಗುವಷ್ಟರಲ್ಲಿ 4875 ಶಿಖರವೇನೋ ಕೈವಶವಾಯಿತು. ಆದರೆ ವಿಕ್ರಮನ ಪ್ರೇಯಸಿ ಮದುವೆಯ ಮುನ್ನವೇ ವಿಧವೆಯಾಗಿದ್ದಳು.

                      ಇನ್ನುಳಿದದ್ದು ದ್ರಾಸ್ ಕಣಿವೆಯ ಭಾರೀ ಪರ್ವತಶಿಖರ ಟೈಗರ್ ಹಿಲ್! ಟೋಲೋಲಿಂಗ್ನಷ್ಟೆ ಪ್ರಾಮುಖ್ಯತೆಯುಳ್ಳ ಅದರ ಮುಕ್ತಿ ಯುದ್ಧವನ್ನು ಬಹುತೇಕ ಮುಗಿಸಲಿತ್ತು! ಟೋಲೋಲಿಂಗ್ ಅನ್ನು ವಶಪಡಿಸಿಕೊಂಡ ರಜಪುತಾನಾ ರೈಫಲ್ಸ್ ಬಟಾಲಿಯನ್ನಿಗೇ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಉತ್ಸಾಹದಿಂದ ಮುನ್ನುಗ್ಗಿದ ಇಡೀ ತಂಡವನ್ನು ಪಾಕಿಗಳು ಹೊಡೆದುರುಳಿಸಿದ್ದರು. ಒಬ್ಬ ಯೋಗೇಂದರ್ ಸಿಂಗ್ ಕಿಸೆಯಲ್ಲಿದ್ದ ಕಾಯಿನ್ ಗುಂಡಿಗೆ ಅಡ್ಡವಾಗಿ ನಿಂತದ್ದರಿಂದ ಬಚಾವಾಗಿದ್ದರು! ಮೊದಲ ಪ್ರಯತ್ನ ಕೈಕೊಟ್ಟ ನಂತರ ಎರಡನೇ ಬಾರಿ 18 ಗ್ರೆನೇಡ್ಸ್ ಬೆಟಾಲಿಯನ್ ಅಪಾರ ಕಷ್ಟ ನಷ್ಟದ ಬಳಿಕ ಟೈಗರ್ ಹಿಲ್ನ ಮೇಲೆ ಭಾರತದ ಪತಾಕೆಯನ್ನು ಹಾರಿಸಿತು. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು.

                    ಶತ್ರುಗಳು ದೇಶದ ಅಂಗುಲ ಅಂಗುಲವನ್ನು ಅತಿಕ್ರಮಿಸಿ ಬರುತ್ತಿರುವಾಗಲೂ ಬಡಿದಟ್ಟಲು ಸಿಗದ "ಅನುಮತಿ" ಎಂಬ ನಾಕಕ್ಷರ ಭಾರತೀಯ ಸೈನ್ಯವನ್ನು ಕಾಡಿದಷ್ಟು ಯಾರನ್ನೂ ಕಾಡಿರಲಿಕ್ಕಿಲ್ಲ! ಶತ್ರು ಎದುರು ನಿಂತು ಗುಂಡು ಹಾರಿಸುತ್ತಿರುವಾಗ ಕೈಯಲ್ಲಿ ಬಂದೂಕು ಹಿಡಿದಿದ್ದರೂ ಪ್ರಯೋಗಿಸಲು ಅನುಮತಿ ಇಲ್ಲದೆ ಅದೆಷ್ಟು ಯೋಧರು ಬಲಿಯಾಗಿರಬಹುದು. ಒಬ್ಬ ಯೋಧನಿಗೆ ಅದಕ್ಕಿಂತ ದೊಡ್ದ ಅವಮಾನ ಏನಿದೆ? "ವೋಟ್ ಬ್ಯಾಂಕ್ ರಾಜಕೀಯ" ಹೆಚ್ಚು ಬಲಿ ತೆಗೆದುಕೊಂಡದ್ದು ಸೈನಿಕರನ್ನೇ! ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ನಂತರ ಭಾರತೀಯರ ಯೋಧರ ಮುಖಕಮಲದಲ್ಲಿ ಮಂದಹಾಸ ಅರಳಿದೆ. ಶತ್ರುಗಳ ಉಪಟಳಕ್ಕೆ ಪ್ರತ್ಯುತ್ತರ ನೀಡಲು ಪೂರ್ಣ ಸ್ವಾತಂತ್ರ್ಯ ಲಭಿಸಿದೆ. ಇದು ಪರಿಪೂರ್ಣವಾಗಿ ಪ್ರಕಟಗೊಂಡದ್ದು ಜೂನ್ ಒಂಬತ್ತರಂದು ಬರ್ಮಾಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದು ಇತ್ತೀಚೆಗೆ ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಮಾಡಿದ  ತಕ್ಕ ಪ್ರತೀಕಾರದಲ್ಲಿ. ಆದರೆ ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸೈನಿಕರಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವರ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆಯೇ? ಅವರ  ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ? ಆಹಾರದ ಪೊಟ್ಟಣದ ಬದಲು ನೂರಕ್ಕೂ ಹೆಚ್ಚು ಬುಲೆಟುಗಳನ್ನು ಹಿಡಿದುಕೊಳ್ಳಬಹುದೆಂದು ಆಹಾರವನ್ನು ತ್ಯಜಿಸಿ ದೇಶರಕ್ಷಣೆಗಾಗಿ ಹೋರಾಡಿದ ಆ ವೀರ ಯೋಧರಿಗಾಗಿ ಕನಿಷ್ಟ ಒಂದು ದಿನವನ್ನು ಮೀಸಲಿಡಲಾರೆವೇ? ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ದೇಹ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಗಂಟೆಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶವನ್ನು ಕಂಡು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ "ಸಾಮಾನ್ಯ ಮನುಷ್ಯನಾದವನು ಸಿಯಾಚಿನ್ನಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ದೊಡ್ಡ ವಿಸ್ಮಯ" ಎಂದಿದ್ದರು. ನಾಗಾಲ್ಯಾಂಡ್ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ  ಪ್ರತಿಮೆ ಇದೆ. ಅದರ ಕೆಳಗೆ " ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ" ಎಂಬ ಒಕ್ಕಣಿಕೆ ಇದೆ. ಹೌದು ನಮ್ಮ ನಾಳೆಯ ಬದುಕಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ನಮ್ಮ ಯೋಧರಿಗೊಂದು ಗೌರವದ ಬದುಕನ್ನು ಕೊಡಲಾರೆವೇ? ಪ್ರಾಣ ಕಾಯ್ವ ಪ್ರತ್ಯಕ್ಷ ದೇವತೆಗಳಿಗಾಗಿ ನಮ್ಮ ಮನ ಮಿಡಿಯದೇ?

ಮಂಗಳವಾರ, ಜುಲೈ 21, 2015

ರಾಣಾ ಪ್ರತಾಪ: ಸ್ವಾತಂತ್ರ್ಯ, ಸ್ವಾಭಿಮಾನ, ರಾಷ್ಟ್ರೀಯತೆಗಳ ಪ್ರತೀಕ

ರಾಣಾ ಪ್ರತಾಪ: ಸ್ವಾತಂತ್ರ್ಯ, ಸ್ವಾಭಿಮಾನ, ರಾಷ್ಟ್ರೀಯತೆಗಳ ಪ್ರತೀಕ

                   ಹೆಸರಿಗೆ ಅವನು ರಾಜ. ಆದರೆ ಆಳಲು ರಾಜ್ಯವಿರಲಿಲ್ಲ. ರಾಜ್ಯವನ್ನು ಗೆದ್ದುಕೊಳ್ಳಲು ಯುದ್ಧ ಮಾಡೋಣವೆಂದರೆ ಸೈನ್ಯವಿಲ್ಲ. ಸೈನ್ಯ ಕಟ್ಟೋಣವೆಂದರೆ ಕೈಯಲ್ಲಿ ಹಣವಿಲ್ಲ. ಯಾರಾದರೂ ರಾಜರ ಸಹಾಯ ಕೇಳೋಣವೆಂದರೆ ಅವರೆಲ್ಲಾ ನಾಚಿಕೆ, ಸ್ವಾಭಿಮಾನಗಳನ್ನು ತೊರೆದು ಅಕ್ಬರನಿಗೆ ಶರಣಾಗಿ ಅವನಿಗೆ ಡೊಗ್ಗು ಸಲಾಮು ಹೊಡೆಯುತ್ತಾ ತಮ್ಮ ರಾಜ್ಯ-ಸಿರಿ-ಸ್ತ್ರೀಯರನ್ನು ಅಕ್ಬರನಿಗೆ ಗಿರವಿ ಇಟ್ಟಿದ್ದಾರೆ. ಆದರೇನು ಆತನಲ್ಲಿ ಸ್ವಾಭಿಮಾನವಿತ್ತು. ಸ್ವಾತಂತ್ರ್ಯದ ಉತ್ಕಟ ಬಯಕೆಯಿತ್ತು. ಪ್ರಾಣ ಹೋದರೂ ಸರಿಯೆ, ವಿದೇಶೀಯನೊಬ್ಬನಿಗೆ ತಲೆಬಾಗಲಾರೆನೆಂಬ ಪ್ರತಿಜ್ಞೆ ಇತ್ತು. ಹಾಗಾಗಿಯೇ ಆತ ಕಾಡುಮೇಡುಗಳಲ್ಲಿ ಅಲೆಯುತ್ತಾ, ಬೆಟ್ಟಗಳಿಂದ ಬೆಟ್ಟಗಳಿಗೆ ಹಾರುತ್ತಾ, ಹಣ್ಣು ಹಂಪಲುಗಳಿಂದ ಸಂಸಾರದ ಹೊಟ್ಟೆ ಹೊರೆಯುತ್ತಾ, ಕ್ರೂರ ಮೃಗಗಳು ಅವುಗಳಿಗಿಂತಲೂ ಕ್ರೂರರಾದ ಮತಾಂಧ ರಾಕ್ಷಸರಿಂದ ಎಳೆಯ ಮಗು ಅಮರನನ್ನು ಕಾಪಾಡುತ್ತಾ, ಕಾಲು ಶತಮಾನಗಳ ಕಾಲ, ಇಡೀ ಉತ್ತರಾಪಥವನ್ನು ತನ್ನ ಪದಾಕ್ರಾಂತ ಮಾಡಿದ್ದ ಬೃಹತ್ ಮೊಘಲ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿ ನಿಂತು ಅಜೇಯನಾಗಿಯೇ ಉಳಿದು ರಾಷ್ಟ್ರದ ಪ್ರಜೆಗಳ ಹೃದಯದಲ್ಲಿ ಆರಾಧಿಸಲ್ಪಟ್ಟ.

                 ವಿನ್ಸೆಂಟ್ ಸ್ಮಿತ್ನ ಪ್ರಕಾರ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಇಡೀ ಪ್ರಪಂಚದ ಅತ್ಯಂತ ಶಕ್ತಿವಂತ, ಸಂಪನ್ನ ದೊರೆ ಅಕ್ಬರ್. ಅಂತಹ ಅಕ್ಬರನಿಗೆ ಸಡ್ಡು ಹೊಡೆದು ನಿಂತ ಸ್ವಾಭಿಮಾನಿ ಸಿಂಹವೇ ರಾಣಾಪ್ರತಾಪ. ಅದವನಿಗೆ ಅನ್ವರ್ಥ ನಾಮವೂ ಹೌದು. ಆ ಸಮಯದಲ್ಲಿ ಬಹುತೇಕ ಇಡೀ ಉತ್ತರಭಾರತವನ್ನೇ ತನ್ನ ಕೈವಶ ಮಾಡಿಕೊಂಡಿದ್ದ ಅಕ್ಬರ್. ಆದರೆ ಆತನಿಗೆ ಚಿಕ್ಕ ಮೇವಾಡವನ್ನು ತನ್ನ ತೆಕ್ಕೆಗೆ ಕೊಳ್ಳಲಾಗಿರಲಿಲ್ಲ. ಅಕ್ಬರನಾದರೋ ಅಸಂಖ್ಯ ಸೇನೆ, ಸಿರಿ-ಸಂಪತ್ತಿನಿಂದ ಮೆರೆಯುತ್ತಿದ್ದ ಶ್ರೀಮಂತ ಚಕ್ರವರ್ತಿ. ಪ್ರತಾಪನೋ ಬರಿಗೈ ದಾಸ. ಆವರೆಗೆ ಮೇವಾಡದ ರಾಣಾರಿಗೆ ಬೆಂಬಲವಾಗಿ ನಿಂತಿದ್ದ ಜೋಧಪುರ, ಅಂಬೇರ್, ಬಿಕಾನೀರ್, ಬುಂದೀ ಸಾಮ್ರಾಜ್ಯಗಳ ರಾಜರೆಲ್ಲರೂ ಅಕ್ಬರನ ಪಕ್ಷವಹಿಸಿದ್ದರು. ಪ್ರತಾಪನ ತಮ್ಮ ಸಾಗರಜೀ ಕೂಡಾ ಮೊಗಲರ ಪಾಳಯ ಸೇರಿದ್ದ. ಅರಣ್ಯವೇ ಅವನಿಗೆ ಅರಮನೆ. ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೋ ಎಂದು ಎಚ್ಚರಿಕೆಯಿಂದ ಗಮನಿಸುತ್ತಾ, ಮುನ್ಸೂಚನೆ ಇಲ್ಲದೆಯೇ ವಾಸಸ್ಥಳ ಬದಲಾಯಿಸಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಅಡುಗೆ ಮಾಡಲು ಯಾವ ಧಾನ್ಯವೂ ಸಿಗುತ್ತಿರಲಿಲ್ಲ. ಕಾಡಿನಲ್ಲಿ ಏನಾದರೂ ಸಿಕ್ಕರೆ ಸರಿ, ಇಲ್ಲದಿದ್ದಲ್ಲಿ ಬರೀ ಹೊಟ್ಟೆಯೇ ಗತಿ. ಒಮ್ಮೊಮ್ಮೆ ಊಟಕ್ಕೆ ಕುಳಿತ ಕೂಡಲೇ ಶತ್ರುಗಳು ಬರುವುದನ್ನು ತಿಳಿದು ಎತ್ತಿದ ತುತ್ತನ್ನು ಬಾಯಲ್ಲಿಡದೆ ಕರದಲ್ಲಿ ಖಡ್ಗ ಹಿರಿದು ಬರಿದೇ ಓಡಬೇಕಾದ ದುಃಸ್ಥಿತಿ. ಗುಹೆಗಳಲ್ಲೋ, ಕಣಿವೆಗಳಲ್ಲೋ ಮಡದಿ ಮಕ್ಕಳನ್ನು ಬಚ್ಚಿಡಬೇಕಾದ ಅನಿವಾರ್ಯತೆ. ಅರಾವಳಿ ಬೆಟ್ತಗಳ ಮರಗಳಿಗೆ ರಾಜಕುಮಾರರ ಉಯ್ಯಾಲೆಗಾಗಿ ಕಟ್ಟಿದ ಕೊಕ್ಕೆಗಳು ಇಂದಿಗೂ ಇವೆ. ಒಮ್ಮೆಯಂತೂ ಐದು ಬಾರಿ ಒಲೆ ಹೊತ್ತಿಸಬೇಕಾಯಿತು. ದೇಶಭಕ್ತ ವೀರರನ್ನು, ವನವಾಸಿ ಭಿಲ್ಲರನ್ನು ಸಂಘಟಿಸಿ ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಪ್ರಚಂಡವಾಗಿ ಹೋರಾಡಿದರೂ ನೂರು-ಸಾವಿರ ಸಂಖ್ಯೆಯಲ್ಲಿ ಅವನ ಸೈನ್ಯಕ್ಕೆ ನಷ್ಟವಾಗುತ್ತಿತ್ತು. ಆ ನಷ್ಟವನ್ನು ಭರಿಸಲು ಮತ್ತೆ ಸಮಯ ಹಿಡಿಯುತ್ತಿತ್ತು.

               ಪ್ರತಾಪನನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಅಕ್ಬರ್ ನಾನಾ ತಂತ್ರಗಳನ್ನು ಹೂಡಿದ. ಅದಕ್ಕಾಗಿ ಯಾವ ಉಡುಗೊರೆಯನ್ನಾದರೂ ಕೊಡುವುದಾಗಿ ಪದೇ ಪದೇ ರಾಯಭಾರ ಕಳುಹಿಸಿದ. ಬೇರಾವ ಹಿಂದೂ ರಾಜರಿಗೆ ನೀಡದಂತಹ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರಲೋಭನೆಯೊಡ್ಡಿದ. ಪ್ರತಾಪ ಬಗ್ಗಲಿಲ್ಲ. ಎಂತಹುದೇ ಸ್ಥಿತಿಯಲ್ಲೂ ವಿದೇಶೀಯನೊಬ್ಬನಿಗೆ ತಲೆಬಾಗಲಾರೆ ಎಂದುಬಿಟ್ಟ. ರಾಜಾ ಮಾನ್ ಸಿಂಗ್ ಅಕ್ಬರನ ರಾಯಭಾರಿಯಾಗಿ ರಾಣಾ ಪ್ರತಾಪನನ್ನು ಓಲೈಸಿ ಒಪ್ಪಿಸಲೆಂದು ಬಂದಾಗ ಪ್ರತಾಪ ಆತನೊಡನೆ ಸಹಪಂಕ್ತಿ ಭೋಜನವನ್ನು ಮಾಡದೆ ಸ್ವಾಭಿಮಾನ ಮೆರೆದ. ಮುಸಲ್ಮಾನರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟವರನ್ನು ಬಹಿಷ್ಕರಿಸಬೇಕೆಂದು ಆಜ್ಞೆ ಮಾಡಿದ. ತಮ್ಮ ರಾಜರು ಅಕ್ಬರನ ಪಾದಸೇವೆ ಮಾಡುತ್ತಿದ್ದರೂ ಪ್ರಜೆಗಳು ಪ್ರತಾಪನ ಮಾತನ್ನೇ ಶಿರಸಾವಹಿಸಿ ಪಾಲಿಸುತ್ತಿದ್ದರು. ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಅಕ್ಬರನಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಹಿಂದೂ ರಾಜರು, ರಾಜ ಪ್ರಮುಖರು ಕೂಡಾ ಪ್ರತಾಪನ ಧೈರ್ಯ ಸಾಹಸಗಳಿಗೆ ಹೆಮ್ಮೆ ಪಡುತ್ತಿದ್ದರು. ಒಮ್ಮೆ ಅಕ್ಬರ್ ತನ್ನ ಪೆಟ್ಟುಗಳನ್ನು ತಾಳಲಾರದೆ ಪ್ರತಾಪ ಸಂಧಿಗೆ ಸಮ್ಮತಿಸಿದ್ದಾನೆಂದು ಜಂಭ ಕೊಚ್ಚಿಕೊಂಡಾಗ ಪೃಥ್ವೀರಾಜನೆಂಬ ರಾಜಪ್ರಮುಖ "ಸೂರ್ಯ ಪಶ್ಚಿಮದಲ್ಲಿ ಉದಯಿಸಿದರೂ ಪ್ರತಾಪ ಅಂತಹ ಕೆಲಸ ಮಾಡಲಾರ" ಎಂದು ಅಕ್ಬರನ ಮುಖಕ್ಕೆ ಹೊಡೆದಂತೆ ಹೇಳಿದ. ಮಾತ್ರವಲ್ಲ "ನಿಮ್ಮ ಸಿಸೋದಿಯಾ ವಂಶದ ಮರ್ಯಾದೆಯನ್ನು, ಮೇವಾಡ್ ಕುಲೀನ ಸ್ತ್ರೀಯರ ಶೀಲವನ್ನು ದೆಹಲಿಯ ಅಂಗಡಿಯಲ್ಲಿ ಮಾರಾಟಕ್ಕಿಡುವಂತಹ ಕೆಲಸವನ್ನು ಮಾಡಬೇಡಿ. ನಾವೆಲ್ಲರೂ ನಿಮ್ಮನ್ನು ನೋಡಿಕಂಡೇ ಬದುಕುತ್ತಿದ್ದೇವೆ" ಎಂದು ಉದ್ವೇಗಭರಿತ ಪತ್ರವನ್ನು ಬರೆದ. ಇದು ಸಮಕಾಲೀನರಲ್ಲಿ ಪ್ರತಾಪನ ಬಗೆಗಿದ್ದ ಪೂಜ್ಯ ಭಾವನೆಗೆ ಹಿಡಿದ ಕೈಗನ್ನಡಿ.
             
                ಬಲಿಷ್ಟ ಮೊಗಲ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡ ಪ್ರತಾಪ ಸಾಂಪ್ರದಾಯಿಕ ಯುದ್ಧ ತಂತ್ರವನ್ನು ಅನುಸರಿಸುತ್ತಿದ್ದರೆ ಮಿಕ್ಕ ರಾಜರಂತೆ ಅಕ್ಬರನ ಅಡಿಯಾಳಾಗಿರಬೇಕಿತ್ತೇನೋ. ಪರಿಸ್ಥಿತಿಯನ್ನನುಸರಿಸಿ ವ್ಯೂಹಗಳನ್ನು ಬದಲಾಯಿಸುತ್ತಾ, ಆತ್ಮಹತ್ಯಾ ಸದೃಶವಾದ ಹೋರಾಟದ ಪದ್ದತಿಗಳನ್ನು ವರ್ಜಿಸಿ ಪ್ರತಿಕೂಲತೆಗಳನ್ನು ಅನುಕೂಲತೆಗಳಾಗಿ ಪರಿವರ್ತಿಸಿ ಅಸಾಧಾರಣಾ ಜಾಣತನದಿಂದ, ತಾಳ್ಮೆಯಿಂದ, ಗೆರಿಲ್ಲಾ ಯುದ್ಧತಂತ್ರವನ್ನು ಅಳವಡಿಸಿದುದರಿಂದ ಪ್ರತಾಪನಿಗೆ ಅಕ್ಬರನ ಬೃಹತ್ ಸೇನೆಯನ್ನು ಕಾಲು ಶತಮಾನಗಳಿಗೂ ಅಧಿಕ ಕಾಲ ಎದುರಿಸಿ ಮಣ್ಣುಮುಕ್ಕಿಸಿ ವಿಜಯಪಥದಲ್ಲಿ ಸಾಗಲು ಸಾಧ್ಯವಾಯಿತು. ಹಲ್ದೀಘಾಟ್ ನಲ್ಲಿ ಮೊಘಲರ 80ಸಾವಿರ ಯೋಧರ ಬೃಹತ್ ಸೈನ್ಯಕ್ಕೆದುರಾದಾಗ ಪ್ರತಾಪನ ಕಡೆ ಇದ್ದವರು ಬರೇ ಇಪ್ಪತ್ತು ಸಾವಿರ ಸೈನಿಕರು. ಆನೆಯ ಮೇಲೆ ಹಾರಿ ಮಾನ್ ಸಿಂಗನ ಮೇಲೆ ದಾಳಿ ಮಾಡಲು ಹೊರಟಾಗ ಪ್ರತಾಪನ ಕುದುರೆಗೆ ತೀವ್ರ ಗಾಯವಾಗಿ ಪರಿಸ್ಥಿತಿ ಬದಲಾಯಿತು. ಮೊಗಲರಿಗೆ ಗೆಲುವು ಸಿಕ್ಕಿದರೂ ಬಹುಪಾಲು ಸೈನ್ಯ ನಾಶವಾಗಿತ್ತು. ಪ್ರತಾಪ ತನ್ನ ಸೋಲು ಅನಿವಾರ್ಯ ಎಂದು ಅರಿವಾದಾಗ ಗೋಗೋಂಡ್ ಕೋಟೆಯನ್ನು ತೆರವುಗೊಳಿಸಿದ. ಗೆಲುವಿನಿಂದ ಉಬ್ಬಿ, ಕೊಬ್ಬಿ ಮೊಗಲರು ಕೋಟೆ ಪ್ರವೇಶಿಸಿದಾಗ ಅಲ್ಲಿ ನರಪಿಳ್ಳೆಯೂ ಇರಲಿಲ್ಲ! ಮುಂದೆ ಕುಂಭಲಗಢ, ಉಅದಯಪುರ ಕೋಟೆಗಳನ್ನು ಗೆದ್ದು ಪ್ರತಾಪನ ಬೆನ್ನ ಹಿಂದೆ ಬಿದ್ದು ಹಲವು ರೀತಿ ಬೇಟೆಯಾಡಿದರೂ ಸ್ವತಃ ತಾನೇ ಅಜ್ಮೀರ್ ನಲ್ಲಿ ಕುಳಿತು ಮೇಲ್ವಿಚಾರಣೆ ಮಾಡುತ್ತಾ ಮಗ ಸಲೀಂ ಸಹಿತ ಭಾರೀ ಸರದಾರರ ಸೈನ್ಯವನ್ನು ಉಪಯೋಗಿಸಿದರೂ ಪ್ರತಾಪನ ಎದುರು ಅಕ್ಬರನ ಆಟ ನಡೆಯಲಿಲ್ಲ. ಆಕ್ರಮಿಸಿದ ಕೋಟೆಗಳಲ್ಲಿ ನೆಲೆಸೋಣವೆಂದರೆ ಅನ್ನ-ನೀರು ಸಿಗುತ್ತಿರಲಿಲ್ಲ. ಕೋಟೆಯಿಂದ ಹೊರ ಬರೋಣವೆಂದರೆ ಪ್ರತಾಪ ಯಾವಾಗ ಯಾವ ದಿಕ್ಕಿನಿಂದ ಯಾವ ರೀತಿ ಆಕ್ರಮಣ ಮಾಡುತ್ತಾನೋ ತಿಳಿಯದ ಸಂಧಿಗ್ಧ ಸ್ಥಿತಿ. ಹಿಂದೆ ಹಿಂದೂ ರಾಜರ ಕೋಟೆಗಳಿಗೆ ಮುತ್ತಿಗೆ ಹಾಕಿ ಹಿಂಸಿಸುತ್ತಿದ್ದ ಮೊಘಲರ ತಂತ್ರವನ್ನು ಅವರಿಗೆ ತಿರುಗಿ ಪ್ರಯೋಗಿಸಿದ ಪ್ರತಾಪ! ತನ್ನ ರಾಜ್ಯದ ಪ್ರಜೆಗಳನ್ನು ಪರ್ವತ ಪ್ರದೇಶಗಳಿಗೆ ತೆರಳುವಂತೆ ಮಾಡಿದುದರಿಂದ ಮೊಘಲ್ ಸೈನ್ಯ ಅನ್ನ ನೀರು ಸಿಗದೆ ತಳಮಳಿಸಿತು. ದಿಲ್ಲಿಯಿಂದ ಬಂದ ಸಾಮಗ್ರಿಗಳಾಗಲೀ ಗುಜರಾತ್ ಬಂದರಿನಿಂದ ದೆಹಲಿಗೆ ಹೋಗುತ್ತಿದ್ದ ಅಮೂಲ್ಯ ವಸ್ತುಗಳೆಲ್ಲಾ ಪ್ರತಾಪನ ಗೆರಿಲ್ಲಾ ಸೈನ್ಯದ ವಶವಾಗುತ್ತಿತ್ತು.

                ಹೀಗೆ ದಶಕಗಳ ಪರ್ಯಂತ ಹೋರಾಡಿದರೂ ಪ್ರತಾಪನನ್ನು ಗೆಲ್ಲದೆ ವಿಫಲನಾದ "ಅಕ್ಬರ್ ದಿ ಗ್ರೇಟ್" ಪ್ರತಾಪನನ್ನು ಮಣಿಸುವ ವಿಚಾರವನ್ನೇ ಕೈಬಿಟ್ಟ. ಅಷ್ಟರಲ್ಲಾಗಲೇ ಕಳೆದುಕೊಂಡ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡು, ಅಂಬೇರನ್ನು ಜಯಿಸಿ ಮಾನಸಿಂಗನ ದರ್ಪವನ್ನು ಮುರಿದು ಚಾವಂದ್ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮೇವಾಡಕ್ಕೆ ಮತ್ತೆ ಅಧಿಕಾರವನ್ನು ಒದಗಿಸಿಕೊಟ್ಟಿದ್ದ ಪ್ರತಾಪ. ಹಾಳುಬಿದ್ದಿದ್ದ ಊರುಗಳಲ್ಲೆಲ್ಲಾ ಜನವಸತಿ ಆರಂಭವಾಯಿತು. ಪಾಳುಬಿದ್ದಿದ್ದ ಹೊಲಗಳು ನಳನಳಿಸಿದವು. ವ್ಯಾಪಾರ ವಹಿವಾಟುಗಳೆಲ್ಲಾ ಆರಂಭಗೊಂಡು ನಗರಗಳಲ್ಲಿ ಸಿರಿ ಸಂಪತ್ತು ನೆಲೆಗೊಂಡಿತು. ಕಲಾ ಪೋಷಕನಾಗಿ, ಭವ್ಯಕಟ್ಟಡಗಳ ನಿರ್ಮಾತೃವಾಗಿ, ದಕ್ಷ ಪ್ರಜಾಪರಿಪಾಲಕನಾಗಿ ತನ್ನ ಐವತ್ತೇಳನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ರಾಣಾಪ್ರತಾಪ. ಆದರೆ ಚಿತ್ತೋಡನ್ನು ಗೆಲ್ಲುವ ಅವನ ಕನಸು ಕನಸಾಗಿಯೇ ಉಳಿದಿತ್ತು. ಮರಣ ವಾರ್ತೆ ಕೇಳಿದಾಗ ಮತಾಂಧ ಅಕ್ಬರನೇ ಸ್ವತಃ ಕಣ್ಣೀರಿಟ್ಟಿದ್ದನೆಂದರೆ ರಾಣಾನ ಪ್ರತಾಪ ಎಷ್ಟಿದ್ದಿರಬಹುದು? ಯಾವ ರೀತಿಯಿಂದ ನೋಡಿದರೂ ಪ್ರತಾಪ ಈ ರಾಷ್ಟ್ರ ಪೂಜಿಸಬೇಕಾದ ಮಹಾಪುರುಷ. ಸ್ವಾತಂತ್ರ್ಯಾಕಾಂಕ್ಷೆ, ಸ್ವಾಭಿಮಾನ, ರಾಷ್ಟ್ರೀಯ ಭಾವನೆ, ಭಾರತದ ಆಶೋತ್ತರ-ಧ್ಯೇಯೋದ್ದೇಶಗಳಿಗೆ ಆತ ಪ್ರತೀಕ. ಪ್ರತಾಪನಿಗಿದ್ದ ಧೈರ್ಯ-ಸಾಹಸ-ಸ್ವಾಭಿಮಾನ-ಸ್ಥೈರ್ಯ-ಮುನ್ನುಗ್ಗುವ ಸ್ವಭಾವ-ಸಮರ ನೈಪುಣ್ಯತೆ-ದಕ್ಷತೆ ಉಳಿದ ಹಿಂದೂ ರಾಜರಲ್ಲಿ ತಿಲಾಂಶವಾದರೂ ಇದ್ದಿದ್ದರೆ ನಮ್ಮ ಚರಿತ್ರೆಯೇ ಬದಲಾಗುತ್ತಿತ್ತು. ವಿದೇಶೀಯ ರಕ್ತದಿಂದ ತನ್ನ ರಕ್ತ ಕಲುಷಿತಗೊಳ್ಳಬಾರದೆಂದೂ, ತನ್ನ ದೇಶ ಸ್ವತಂತ್ರವಾಗಿಯೇ ಇರಬೇಕೆಂದೂ, ಅದಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧನೆಂದು, ಮತ್ತಿವುಗಳಿಗೆಲ್ಲಾ ಬದ್ಧನಾಗಿ, ಅತೀವ ಕಷ್ಟಪರಂಪರೆಗಳನ್ನನುಭವಿಸಿ, ಒಂದು ಬೃಹತ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡು ಅಜೇಯನಾಗುಳಿದ ರಾಣಾ ಪ್ರತಾಪ ದೇಶಪ್ರೇಮಿಗಳಿಗೆಲ್ಲಾ "ಗ್ರೇಟೇ" ಸರಿ. ಉಳಿದವರಿಗೆ ಮತಾಂಧ-ಕಚ್ಛೆಹರುಕ-ವಿದೇಶೀ ಆಕ್ರಮಣಕಾರನೇ ಗ್ರೇಟ್ ಆಗಿ ಕಂಡರೆ ಅಚ್ಚರಿಯೇನಿದೆ?

ಗುರುವಾರ, ಜುಲೈ 16, 2015

ಕಾಲನೊಳಗೊಂದು ಪಯಣ

ಕಾಲನೊಳಗೊಂದು ಪಯಣ

          ಕಾಲ ಎನ್ನುವುದೇ ಇಲ್ಲ. ಅದೊಂದು ಭ್ರಮೆ. ಇದೇನು ಹೀಗನ್ನುತ್ತಿದ್ದಾನೆ? ಇವನಿಗೇನು ಮರುಳೇ ಎಂದು ಹುಬ್ಬೇರಿಸಬೇಡಿ! ಅನಂತವೂ ಸರ್ವವ್ಯಾಪಿಯೂ ಗತಿಶೀಲವೂ ಆದ ಆತ್ಮತತ್ವದಲ್ಲಿ ಜಗತ್ತಿನ ಸೃಷ್ಟಿಗೆ ಕಾರಣವಾಗಬಹುದಾದ ಶೃದ್ಧಾವಲಯಗಳು ಕಾಣಿಸಿಕೊಂಡು ಅಲ್ಲಿ ಶುಕ್ರ ಸ್ಫೋಟವುಂಟಾದಾಗ ಉದ್ಗೀಥ("ಓಂ" ಕಾರ) ಎನ್ನುವ ಮಹಾಕಂಪನ ಹಾಗೂ ಅದಕ್ಕೆ ಪೂರಕವಾಗಿ ಅಹಸ್ ಎನ್ನುವ ಭ್ರಾಮಕದ್ರವ್ಯ ಎಂಬೆರಡು ಸ್ತ್ರೀ-ಪುರುಷ ತತ್ವಗಳು ಉಂಟಾಗಿ ಈ ಜಗತ್ತೆನ್ನುವ ಭ್ರಾಮಕತೆಯೊಂದು ಅಸ್ತಿತ್ವವನ್ನು ಪಡೆಯಲು ಕಾರಣವಾಗುತ್ತವೆ. ಈ ಶುಕ್ರಸ್ಫೋಟದ ಸಮಯದಲ್ಲಿ ಆತ್ಮತತ್ವ(ಏಕತ್ವ ಅಥವಾ ಪರಬ್ರಹ್ಮತತ್ವ)ದಿಂದ ಸಿಡಿದ ಕಿಡಿಗಳಿಗೆ ಅಹಸ್ ದ್ರವ್ಯವು ಅಹಂ ದ್ರವ್ಯದ ರೂಪದಲ್ಲಿ ಆವರಿಸಿದಾಗ ಆತ್ಮಗಳು ಮೂಡುತ್ತವೆ. ಇದನ್ನು ಆತ್ಮವೊಂದರ ಜನ್ಮ ಎನ್ನಬಹುದು. ಅಂತಹ ಆತ್ಮ ಆಹಾರದ ಮೂಲಕ ಗಂಡು ಪ್ರಾಣಿಯ ದೇಹವನ್ನು ಸೇರಿ, ಗಂಡು ಪ್ರಾಣಿಯ ರೇತಸ್ಸಿನ ಮೂಲಕ ಹೆಣ್ಣು ಪ್ರಾಣಿಯ ಆತ್ಮಭೂಯವನ್ನು ಪ್ರವೇಶಿಸಿ ಎಲ್ಲಾ ವಿಶ್ವದೇವತೆಗಳ ಹಾಗೂ ಅವುಗಳ ಪ್ರತಿದೇವತೆಗಳ ನೆರವಿನಿಂದ ದೇಹಧಾರಣೆಯಲ್ಲಿ ತೊಡಗಿ ಕೆಲವೇ ಸಮಯದಲ್ಲಿ ಭೂಮಿಗಿಳಿಯುತ್ತದೆ. ವಿಶ್ವ ಚೈತನ್ಯರೂಪ ಚಿತ್ತ, ವಿಶ್ವದ ಆಗುಹೋಗುಗಳನ್ನೆಲ್ಲಾ ದಾಖಲಿಸುವ ಮಹಾಪ್ರಜ್ಞೆ ಬುದ್ಧಿ, ಹಾಗೂ ಅಹಂದ್ರವ್ಯಗಳು ಒಟ್ಟಾಗಿ ದೇಹದಲ್ಲಿ ನೆಲೆಸಿ ಹೃದಯ ಎಂದು ಕರೆಯಲ್ಪಡುತ್ತವೆ. ಇಲ್ಲಿ ಹೃದಯವೆಂದರೆ ದೇಹದಲ್ಲಿರುವ ರಕ್ತವನ್ನು ಪಂಪು ಮಾಡುವ ಲೋಹಿತಪಿಂಡವಲ್ಲ; ಇದು ಸೂಕ್ಷ್ಮರೂಪದಲ್ಲಿ ಎದೆಗುಂಡಿಗೆಯಲ್ಲಿ ನೆಲೆಸಿರುವ ಸ್ತ್ರೀತತ್ವ. ಹೃದಯ ಹಾಗೂ ಪುರುಷ ತತ್ವವಾದ ಆತ್ಮ ಸೇರಿ ಜೀವಿಯ ದೇಹದಲ್ಲಿ ಜೀವಾತ್ಮ ಎನಿಸಿಕೊಳ್ಳುತ್ತವೆ.  

              ದೇಹವು ಶಿಥಿಲಗೊಂಡಾಗ ಅನ್ನವು ಲಭಿಸದೆ ಪ್ರಾಣವು ದೇಹದಿಂದ ಹೊರನಡೆಯುತ್ತದೆ. ಅಂತಹ ದೇಹದಲ್ಲಿ ಆತ್ಮವುಳಿಯದು. ಅದು ಮತ್ತೊಂದು ದೇಹವನ್ನು ಹುಡುಕಲಾರಂಭಿಸುತ್ತದೆ. ಸಿಕ್ಕಿದ ದೇಹ ಶಿಥಿಲವಾದೊಡನೆ ಅದನ್ನು ತೊರೆದು ಇನ್ನೊಂದು ಹೀಗೆ ಪುನರಪಿ ಜನನಂ ಪುನರಪಿ ಮರಣಂ ನಡೆಯುತ್ತಲೇ ಇರುತ್ತದೆ. ತನ್ನ ಸಂಚಿತ-ಪ್ರಾರಬ್ಧ ಕರ್ಮಗಳೆಲ್ಲಾ ಕಳೆದ ಮೇಲೆ ಆತ್ಮ ಮತ್ತೆ ಏಕತ್ವದೊಡನೆ ಒಂದಾಗುತ್ತದೆ. ಅಂತಹ ಭಾಗ್ಯವಿಲ್ಲದ ಆತ್ಮಗಳೂ ಕೂಡಾ ಉದ್ಗೀಥ ಕಂಪನವು ಕ್ಷೀಣಿಸಿ ಅಹಸ್ ದ್ರವ್ಯವು ಏಕತ್ವದಲ್ಲಿ ಸೇರಿ ಹೋದಾಗ ತಾವೂ ಏಕತ್ವದಲ್ಲೇ ಮಿಳಿತವಾಗುತ್ತವೆ. ಮತ್ತೆ ಶೃದ್ಧಾವಲಯಗಳು-ಶುಕ್ರಸ್ಫೋಟ-ಓಂಕಾರ+ಅಹಸ್ ದ್ರವ್ಯ-ಆತ್ಮಗಳು-ಜೀವಿ ಹೀಗೆ ಪುನರಪಿ ಚಕ್ರ ತಿರುಗುತ್ತಲೇ ಇರುತ್ತದೆ. ಇದೊಂದು ಅನಂತ-ಅನವರತ ಪ್ರಕ್ರಿಯೆ. ಯಾವುದೇ ಒಂದು ಬಿಂದುವಿನಲ್ಲಿ ನಿಂತು ನೋಡಿ...ಎಲ್ಲಿದೆ ಕಾಲ? ಅದೇ ರೀತಿ ಇಡೀ ಸೃಷ್ಟಿಯೆನ್ನುವುದೇ ಒಂದು ಮಾಯೆ ಅಥವಾ ಭ್ರಮೆ ಆಗಿರುವಾಗ ಇನ್ನೂ ಸೂಕ್ಷ್ಮವಾಗಿ ಹೇಳಬೇಕಾದರೆ ಏಕತ್ವವೆನ್ನುವುದೇ ದೇಶ-ಕಾಲವನ್ನು ಮೀರಿದ ಸ್ಥಿತಿಯಾಗಿರುವಾಗ ದೇಶವೆಲ್ಲಿಯದು?

ಇರಲಿ. ಈಗ ಲೌಕಿಕ ವಿಷಯಕ್ಕೆ ಬರೋಣ. ಇತಿಹಾಸಕ್ಕೆ ಕಾಲ ಒಂದು ಮಾಪಕ ಅಥವಾ ಪ್ರಮಾಣ. ವಿದೇಶೀ-ದೇಶೀ ಇತಿಹಾಸಕಾರರು ಮಾತ್ರವಲ್ಲ, ಸಾಮಾನ್ಯ ಭಾರತೀಯನ ಆರೋಪ ನಮ್ಮ ಪೂರ್ವಜರು ಕಾಲಗಣನೆಯನ್ನು ಸರಿಯಾಗಿ ಮಾಡಿಲ್ಲ; ಇತಿಹಾಸವನ್ನು ಬರೆದಿಟ್ಟಿಲ್ಲಾ; ಬರೆದ ಪುರಾಣಗಳಲ್ಲೂ ಕಾಲದ ಉಲ್ಲೇಖವನ್ನು ಮಾಡಿಲ್ಲ ಎನ್ನುವುದು. ಇದಕ್ಕಿಂತ ಮೂರ್ಖತನದ ವಿಚಾರ ಬೇರೊಂದಿಲ್ಲ. ನಮ್ಮ ಪೂರ್ವಜರು ಪ್ರತಿಯೊಂದು ಪ್ರಮುಖ ಘಟನೆಗಳ ಕಾಲವನ್ನು ಸೂಚಿಸಲು ಆ ಸಮಯದ ಗ್ರಹಗತಿಗಳ ವಿವರವನ್ನು ಕೊಟ್ಟರು. ನಮಗೆ ಅರಿವಾಗದ ಮಾತ್ರಕ್ಕೆ ಅವರಿಗೆ ಕಾಲಗಣನೆಯ ಪರಿಜ್ಞಾನವಿರಲಿಲ್ಲ ಎನ್ನುವುದು ಎಷ್ಟು ಸರಿ? ಪ್ರಪಂಚದ ಈಗಿನ ಕಾಲದ ಲೆಕ್ಕ ಕ್ರಿಸ್ತನ ಕಾಲವನ್ನವಲಂಬಿಸಿದೆ. ಆದರೆ ಈ ನಾಗರೀಕತೆ ನಶಿಸಿದ ಮೇಲೆ ಮುಂದಿನ ನಾಗರೀಕತೆಗೆ ಈ ಕ್ರಿಸ್ತ; ಅವನನ್ನವಲಂಬಿಸಿದ ಅವೈಜ್ಞಾನಿಕ ಕಾಲಗಣನೆ ಎಷ್ಟು ಅರ್ಥವಾದೀತು? ಯಾಕೆಂದರೆ ಈ ಕಾಲಗಣನೆಗೆ ವೈಜ್ಞಾನಿಕ ತಳಪಾಯವೇ ಇಲ್ಲ. ಪ್ರಕೃತಿಯೊಂದಿಗೆ ಅದಕ್ಕೆ ಸಂಬಂಧವೇ ಇಲ್ಲ. ಅಕ್ಷರಜ್ಞಾನವಿರದ ನಮ್ಮ ಹಿರಿಯರಿಗೂ ಹುಣ್ಣಿಮೆ-ಅಮವಾಸ್ಯೆ-ಸಂಕ್ರಾಂತಿಗಳು ಎಂದು ಸಂಭವಿಸುತ್ತವೆಯೆಂದು ಕರಾರುವಕ್ಕಾಗಿ ತಿಳಿದಿರುತ್ತದೆ. ಅದು ಪ್ರಕೃತಿಯೊಂದಿಗಿನ ಒಡನಾಟದ-ಮಿಳಿತದ ಫಲ. ನಮ್ಮ ಪೂರ್ವಜರು ಆಕಾಶಕಾಯಗಳ ಗತಿ-ತನ್ಮೂಲಕ ಪ್ರಕೃತಿಯಲ್ಲುಂಟಾಗುವ ಬದಲಾವಣೆಯನ್ನನುಸರಿಸಿ ಕಾಲ ನಿರ್ಣಯ ಮಾಡುತ್ತಿದ್ದರು. ತಮ್ಮ ಚಲನೆಯ ಕಾರಣದಿಂದಾಗಿ ಆಕಾಶಕಾಯಗಳ ಒಂದು ನಿರ್ದಿಷ್ಟ ಬಿಂದುವಿಗೆ ಸಂಬಂಧಿಸಿ ಆಗುವ ಸ್ಥಾನಪಲ್ಲಟಗಳು ಮುಂದೆ ಒಂದು ದಿನ ಪುನಾರಾವರ್ತನೆ ಆಗಬಹುದು. ಅದಾಗದಿದ್ದರೂ ಆಕಾಶಕಾಯಗಳ ಗತಿಯನ್ನಾಧರಿಸಿ ಒಂದು ವಿದ್ಯಮಾನ ಎಷ್ಟು ಕಾಲ ಹಿಂದೆ ನಡೆದಿತ್ತು ಎನ್ನುವುದನ್ನು ತಿಳಿಯಬಹುದು. ಈಗ ಅದಕ್ಕೆ ಬೇಕಾದ ಸಾಫ್ಟ್ ವೇರುಗಳೂ ಅಭಿವೃದ್ಧಿ ಹೊಂದಿವೆ. ಇರಲಿ, ಮುಂದಿನ ನವ ನಾಗರೀಕತೆಯೊಂದು ಗ್ರಹಗತಿಗಳ ಸ್ಥಾನಗಳ ದಾಖಲೆ ದೊರೆತಾಗ ಆ ಘಟನೆಯ ಕಾಲವನ್ನು ಕರಾರುವಕ್ಕಾಗಿ ನಿರ್ಣಯಿಸಬಲ್ಲುದು. ಆದರೆ ನಮ್ಮ ಈ "ಮತಾಂತರಿತ" ಅವೈಜ್ಞಾನಿಕ ಲೆಕ್ಕಾಚಾರ ಅವರಿಗೆ ತಿಳಿಯುವ ಸಾಧ್ಯತೆ ಕಡಿಮೆ. ಯಾಕೆಂದರೆ ಆ ಸಮಯದ ಪ್ರಕೃತಿಯ ಗತಿ ಬದಲಾಗಿ, ಅವರ ಅಳತೆಯ ಮಾನವೂ ಬದಲಾಗುವ ನಿಚ್ಚಳ ಸಾಧ್ಯತೆಗಳಿರುವಾಗ ಜೂಲಿಯಸ್ ಸೀಜರನ ಹೆಸರಿನಲ್ಲಿ ಸೇರಿಸಿದ ಜುಲೈ ಆಗಲೀ, ಸಂತ ಆಗಸ್ಟಸ್ ಹೆಸರಿನ ಆಗಸ್ಟ್, ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆಬ್ರವರಿ 29 ಇವೆಲ್ಲಾ ಹಾಸ್ಯಾಸ್ಪದವಾಗಿ ಕಂಡೀತು. ಅದಕ್ಕಿಂತಲೂ ಮುಖ್ಯವಾಗಿ ಕ್ರಿಸ್ತ ಹುಟ್ಟಿದ ಸಮಯದ ಗ್ರಹಗತಿಗಳ ವಿವರಗಳಾವುವೂ ಇಲ್ಲದಿರುವುದರಿಂದ, ಕ್ರಿಸ್ತನ ಹುಟ್ಟಿನ ಬಗ್ಗೆ; ಕ್ರಿಸ್ತನೆಂಬುವವನೊಬ್ಬ ಇದ್ದುದರ ಬಗ್ಗೆಯೇ ಸಂಶಯಗಳಿರುವುದರಿಂದ ಈ ಕ್ರಿಸ್ತ ಪೂರ್ವ/ಶಕೆಗಳು ಗೊಂದಲಗಳ ಗೋಜಲಾದೀತೇ ಹೊರತು ಅವುಗಳ ಕಾಲ ನಿರ್ಣಯ ಮಾಡಲು ಸಾಧ್ಯವಾಗಲಿಕ್ಕಿಲ್ಲ.

ಚರಿತ್ರೆಯ ಗತಿಯಿಂದ ಹಿಡಿದು ಕಾಲಚಕ್ರದ ಚಲನೆಗೆ ಸಂಬಂಧಿಸಿದವರೆಗೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಅಸ್ಪಷ್ಟತೆಗೆ ಅವಕಾಶವೇ ಇಲ್ಲ. ಕ್ಷಣದಲ್ಲಿ 1/300 ಭಾಗವಾದ ವೇಧದಿಂದ 30ಕೋಟಿ ಅರವತ್ತೇಳು ಲಕ್ಷ ಸಂವತ್ಸರಗಳಿರುವ ಮನ್ವಂತರದವರೆಗೆ, ಅದಕ್ಕೂ ಮೀರಿ ಆಧುನಿಕ ಕಂಪ್ಯೂಟರುಗಳಿಗೂ ನಿಲುಕದ ಸೂಕ್ಷ್ಮಾತಿ ಸೂಕ್ಷ್ಮ, ಸ್ಥೂಲಾತಿ ಸ್ಥೂಲ ಕಾಲಗಣನೆಯ ವಿಧಾನ ಭಾರತೀಯರಿಗೆ ಸಿದ್ಧಿಸಿತ್ತು. ಒಂದು ಸೆಕೆಂಡಿನ ಅವಧಿಯಲ್ಲಿ 34,000 ಸ್ಥಿರವಿಶ್ವವನ್ನು(ಕ್ರಾಂತಿ)ಯನ್ನು ನಾವು ಅನುಭವಿಸುವುದರಿಂದ ನಮಗೆ ವಿಶ್ವವು ಚಲನೆಯಲ್ಲಿರುವಂತೆ ಭಾಸವಾಗುತ್ತದೆ. ಅಂದರೆ ಸೆಕೆಂಡಿನ 34,000ನೇ ಒಂದು ಭಾಗದವರೆಗಿನ ಸೂಕ್ಷ ಗಣನೆಯನ್ನು ಕಂಡುಹಿಡಿದು(ದರ್ಶಿಸಿ) ಅದನ್ನು ಕ್ರಾಂತಿ ಎಂದು ಕರೆದ ಭಾರತೀಯ ಋಷಿಗಳಿಗೆ ಕಾಲಗಣನೆಯ ಸೂಕ್ಷ್ಮ ಗೊತ್ತಿಲ್ಲ ಎಂದವರು ಮೂರ್ಖರಲ್ಲದೆ ಇನ್ನೇನು?

 ಮಹಾಭಾರತ ಯುದ್ಧದ ಬಳಿಕ ಪರೀಕ್ಷಿತನ ಜನನದ ವೇಳೆಗೆ ಸಪ್ತರ್ಷಿ ಮಂಡಲ ಮಘ ನಕ್ಷತ್ರದಲ್ಲಿತ್ತು. ನೂರು ವರ್ಷಕ್ಕೆ ಒಂದು ನಕ್ಷತ್ರದಂತೆ ಅದು ಹಿಂದೆ ಸರಿಯುತ್ತಾ 2700 ವರ್ಷಗಳಿಗೆ ಮತ್ತೆ ಅದೇ ಸ್ಥಾನಕ್ಕೆ ಬರುತ್ತದೆ. ಆಗ ದೇಶದಲ್ಲಿ ಪ್ರಾಬಲ್ಯ ಪಡೆದಿದ್ದವರು ಆಂಧ್ರರಾಜರು. ಮತ್ಸ್ಯ ಪುರಾಣ ಇದನ್ನೇ ಆಧಾರವಾಗಿಟ್ಟು ಮಹಾಭಾರತದ ಕಾಲ, ಬೃಹದ್ರಥ ವಂಶಕ್ಕೆ ಸೇರಿದ ಮಗಧ ರಾಜರ ಕಾಲಾವಧಿ ಹಾಗೂ ಆಂಧ್ರ ರಾಜರ ಸಮಯವನ್ನು ನಿಖರವಾಗಿ ಹೇಳಿದೆ. ಮಾತ್ರವಲ್ಲ ಪ್ರತಿ ನೂರು ವರ್ಷಗಳ ಅವಧಿಯಲ್ಲಿ ಹಾಗೂ ಅವುಗಳ ನಡುವೆ ಇದ್ದ ರಾಜರ ಅನುಕ್ರಮಣಿಕೆಯನ್ನೂ ಉಲ್ಲೇಖಿಸಿದೆ.  ಕಲಿ ಶಕೆ ಆರಂಭವಾದದ್ದು ಕ್ರಿ.ಪೂ. 3102ರಲ್ಲಿ. ಅದು ಶ್ರೀಕೃಷ್ಣನ ನಿರ್ಯಾಣದ ಸಮಯವೂ ಹೌದು. ಅದಕ್ಕಿಂತ ಮೊದಲಿನ 36 ವರ್ಷ ಧರ್ಮರಾಯನ ಆಳ್ವಿಕೆ ನಡೆಯಿತು. ಅಂದರೆ ಮಹಾಭಾರತ ಯುದ್ಧದ ಅವಧಿ ಕ್ರಿ.ಪೂ. 3138! ಇದಕ್ಕೆ ಇನ್ನೊಂದು ಆಧಾರವೂ ಇದೆ. ಕಲಿ ಪ್ರವೇಶಿಸಿದ್ದು ಪ್ರಮಾದಿ ನಾಮ ಸಂವತ್ಸರದ ಚೈತ್ರ ಶುದ್ಧ ಪಾಡ್ಯಮಿಯ ದಿನ. ಆ ದಿವಸ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳಲ್ಲಿ ದಾಖಲಿಸಿದ್ದಾರೆ. ಆಧುನಿಕ ಖಗೋಳ ಶಾಸ್ತ್ರಜ್ಞರು ಅಂತಹ ಗ್ರಹಸ್ಥಿತಿ ಸರಿಯಾಗಿ ಕ್ರಿ.ಪೂ. 3102ರಲ್ಲೇ ಇತ್ತೆಂದು ಹೇಳುವುದರೊಂದಿಗೆ ನಮ್ಮ ಪೂರ್ವಜರ ಕಾಲಗಣನೆಯೂ ಅದಕ್ಕೆ ಸರಿ ಹೊಂದಿತು. ಅಂದರೆ ಈಗ ನಡೆಯುತ್ತಿರುವುದು 5117ನೇ ಕಲಿವರ್ಷ! ಶತಸಂವತ್ಸರಗಳ ಕಾಲ ದೇಶವನ್ನು ಏಕಛತ್ರಾಧಿಪತ್ಯದಲ್ಲಿ ಆಳಿದ ಪ್ರಮರ ವಂಶಜ ವಿಶ್ವವಿಖ್ಯಾತ ವಿಕ್ರಮಾದಿತ್ಯನ ಪರಾಕ್ರಮಕ್ಕೆ ಹೆಗ್ಗುರುತಾಗಿ  ಕ್ರಿ.ಪೂ 57ರಲ್ಲಿ ವಿಕ್ರಮಶಕೆ ಆರಂಭವಾಯಿತು. ವಿಕ್ರಮಾದಿತ್ಯನ ಮರಿಮಗ ಶಾಲಿವಾಹನ ಶಕರು, ಟಾರ್ಟರರು, ಮ್ಲೇಚ್ಛರನ್ನು ಒದ್ದೋಡಿಸಿ ಕ್ರಿ.ಶ. 78ರಲ್ಲಿ ಉಜ್ಜಯಿನಿಯ ಸಿಂಹಾಸನ ಏರಿದುದರ ಕುರುಹಾಗಿ ಆರಂಭವಾದದ್ದೇ ಶಾಲಿವಾಹನ ಶಕೆ. ಆದರೆ ದೇಶವಾಸಿಗಳು ಚಾಚೂತಪ್ಪದೆ ಅನುಸರಿಸುತ್ತಾ ಬಂದಿರುವ ಈ ಎರಡು ಶಕೆಗಳ ಶಕಪುರುಷರ ಅಸ್ತಿತ್ವ ಮೂರ್ಖ ಇತಿಹಾಸಕಾರರಿಗೆ ಮಿಥ್ಯೆಯಾಗಿ ಕಂಡದ್ದು ಚೋದ್ಯ. ಹಾಗೆಯೇ ಇಷ್ಟು ಕರಾರುವಕ್ಕಾದ ನಮ್ಮವರ ಕಾಲಗಣನೆ ಪರಿಹಾಸಕ್ಕೀಡಾದುದು ದುರಂತ.

ಬುಧವಾರ, ಜುಲೈ 8, 2015

ಭಾರತದ ಅಂತಃಸತ್ವವನ್ನು ಜಗಕೆ ತೋರಿಸಿದ ಅಂತರ್ಮುಖಿ

ಭಾರತದ ಅಂತಃಸತ್ವವನ್ನು ಜಗಕೆ ತೋರಿಸಿದ ಅಂತರ್ಮುಖಿ

                 ನಮ್ಮನ್ನು ಲೋಕಕ್ಕೆ ಬಿಗಿದಿರುವ ಶರೀರ, ಮನಸ್ಸು, ಬುದ್ಧಿ, ಅಹಂಕಾರಗಳ ಆಳ್ವಿಕೆಯಿಂದ ಪಾರಾಗದೆ ನಮ್ಮ ನಿಜ ಸ್ವರೂಪವನ್ನು ನಾವು ಅರಿಯಲು ಸಾಧ್ಯವಿಲ್ಲ. ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ನಮಗೆ ಅಡ್ಡಿಯಾಗಿ ನಿಂತಿರುವ ತೆರೆಯೆಂದರೆ ಮನಸ್ಸು. ಎಲ್ಲಾ ಲೋಕ ಸಂಬಂಧಗಳ ಮೂಲ ಪ್ರೇರಣೆ, ಜನ್ಮಭೂಮಿ ಅದೇ. ಈ ಅಡ್ಡ ತೆರೆಯನ್ನು ನಾಶಮಾಡದೆ ಆತ್ಮದರ್ಶನ - ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ. ಹಾಗೆ ಮನಸ್ಸನ್ನು ನಾಶ ಮಾಡಬೇಕಾದರೆ ನಾವು ಅಂತರ್ಮುಖಿಗಳಾಗಬೇಕು. ಕೆಲವರು ಖಿನ್ನತೆಗೊಳಗಾದವರನ್ನು ಅಂತರ್ಮುಖಿಗಳೆನ್ನುತ್ತಾರೆ. ಆದರೆ ಖಿನ್ನತೆ ಬೇರೆ ಅಂತರ್ಮುಖತೆ ಬೇರೆ. ಖಿನ್ನತೆ ಒಂದು ರೀತಿಯ ಮಾನಸಿಕ ಕಾಯಿಲೆ. ಅಂತರ್ಮುಖತೆಯೆಂದರೆ ಮನಸ್ಸಿನಾಳಕ್ಕಿಳಿದು ಮುಂದೆ ಮನಸ್ಸನ್ನೇ ಇಲ್ಲವಾಗಿಸಿ ಆತ್ಮನೊಡನೆ ಅನುಸಂಧಾನ ಮಾಡಿಕೊಳ್ಳಲು ನೆರವಾಗುವ ಪ್ರಕ್ರಿಯೆ. "ನಾನು ಯಾರು" ಎಂದು ಧ್ಯಾನಿಸಿ ಅರಿಯುವ ಶುಕಮಾರ್ಗ. ಅದೇ ಮುಂದೆ ಸೀಮಾತೀತವಾದ ಮತ್ತು ಸಂಕಲ್ಪರಹಿತವಾದ ಅನಂತ ಅಸ್ತಿತ್ವದಲ್ಲಿ ಸೇರಿ ಹೋಗುವ ರಾಗ-ದ್ವೇಷ-ದುಃಖಗಳಿಂದ ಅಬಾಧಿತವಾದ "ಸತ್ಯ"ವನ್ನು ಹೊಂದಲು ನೆರವಾಗುತ್ತದೆ. ಖಿನ್ನತೆಗೊಳಗಾದವರಲ್ಲಿ ಲೌಕಿಕತೆಯೂ, ಅದರೆಡೆಗಿನ ಗೊಂದಲವೂ ಇರುತ್ತದೆ. ಅಂತರ್ಮುಖಿಯಾದವನಲ್ಲಿ ಅಲೌಕಿಕತೆಯ ಪ್ರಭೆ ಕಂಗೊಳಿಸುತ್ತಿರುತ್ತದೆ. ಖಿನ್ನತೆಯನ್ನು ಹೋಗಲಾಡಿಸಲು ಅಂತರ್ಮುಖತೆ ಸೂಕ್ತ ಪರಿಹಾರವೂ ಹೌದು.

                  ಭಾರತ ಅಗಣಿತ ನಿಧಿಗಳ ಆಗರ. ಅಮಿತ ಸಂಖ್ಯೆಯ ಋಷಿಗಳು, ಯೋಗಿಗಳು, ಸಂತರು, ಜ್ಞಾನಿಗಳಿಗೆ ಜನ್ಮ ನೀಡಿದ ಪುಣ್ಯಭೂಮಿ. ಅಂತರ್ಮುಖಿಗಳಾಗಿ ಈ ದೇಶದ ಅಂತಃಸತ್ವವನ್ನು ಬೆಳಗಿದ ಅಸಂಖ್ಯ ಜ್ಯೋತಿಸ್ಥಂಭಗಳನ್ನು ಜಗತ್ತು ಕಂಡಿದೆ. ಕೆಲವರು ಹೊರಜಗತ್ತಿಗೆ ಕಾಣದೆ ಮರೆಯಲ್ಲಿಯೇ ಸಾಗಿದರೆ ಇನ್ನು ಕೆಲವರು ಸಾಮಾನ್ಯ ಜೀವಿಗಳಿಗೂ ತಮ್ಮ ಎತ್ತರಕ್ಕೆ ಏರುವ ದಾರಿ ತೋರಿದರು.  ಅಂತರ್ಮುಖಿಗಳಲ್ಲೂ ಕೆಲವರು ಬ್ರಹ್ಮಜ್ಞಾನದ ಔನ್ನತ್ಯಕ್ಕೇರಿ ಮಹರ್ಷಿಗಳೆನ್ನಿಸಿಕೊಂಡರು. ಅಂತಹ ಮಹರ್ಷಿಗಳ ಕೊಂಡಿಯಲ್ಲಿ ಬಹುಷಃ ಕೊನೆಯವರೇ ಭಗವಾನ್ ರಮಣರು. ಅಂತರ್ಮುಖಿಯಾಗಿ ಆತ್ಮಜ್ಞಾನವನ್ನು ಸ್ಪುರಿಸಿ ಅನುಭವಿಸಿ ಅರಿತ ಮಹರ್ಷಿ ಅವರು! ಅರುಣಾಚಲದ ಆತ್ಮಜ್ಯೋತಿಯಾಗಿ ಜಗವ ಬೆಳಗಿದ ಬ್ರಹ್ಮಜ್ಞಾನಿ. ತಮ್ಮ ಉಪದೇಶಕ್ಕೆ ತಾವೇ ನಿದರ್ಶನರಾಗಿ ತಮ್ಮ ಬಾಳಿನಲ್ಲಿಯೇ ಪ್ರತಿಪಾದಿಸಿ ತೋರಿದ ಜ್ಞಾನಸೂರ್ಯ!

                   ಬಾಲ್ಯದಲ್ಲಿ ಮನೆಗೆ ಬಂದ ನೆಂಟರೊಬ್ಬರಿಂದ ಕೇಳಿದ ಅರುಣಾಚಲ ಎಂಬ ಪದ ರಮಣರ ಹೃದಯದಲ್ಲೊಂದು ಅನುಭೂತಿಯನ್ನು ಸೃಷ್ಟಿಸಿ ಮನಸ್ಸಿನಾಳದಲ್ಲಿ ಸ್ಥಾಪಿತವಾಯಿತು. ಪೆರಿಯ ಪುರಾಣದಲ್ಲಿನ ಅರವತ್ತಮೂರು ಶಿವಭಕ್ತರ ಚರಿತ್ರೆಯನ್ನು ಓದಿದ ಮೇಲೆ ಭಗವಂತನನ್ನು ಕುರಿತ ಆ ಶಿವಭಕ್ತರ ದಿವ್ಯ ಉನ್ಮಾದ, ತ್ಯಾಗ ಜೀವನದಿಂದ ಲಭಿಸುವ ದಿವ್ಯಾನುಭೂತಿಯನ್ನು ನೆನೆ ನೆನೆದು ಹೃದಯ ಪರಮಾನಂದದಿಂದ ತುಂಬಿ ಹೋಯಿತು. ದಿವ್ಯ ಪ್ರಜ್ಞೆಯ ಹೊಸ ಪ್ರವಾಹವೊಂದು ಅವರಲ್ಲಿ ಎಚ್ಚರಗೊಂಡು ಆತ್ಮ ಪರಮಾನಂದದ ಅನುಭೂತಿಯನ್ನು ಅನುಭವಿಸಿತು. ಅಸಲಿಗೆ ಈ ಅರಿವೇನು ರಾಶಿ ರಾಶಿ ಗ್ರಂಥಗಳ ಅಧ್ಯಯನದಿಂದ ಉಂಟಾದುದಲ್ಲ. ಸಂತತ ಪೂಜೆ ಪುನಸ್ಕಾರಗಳ ಫಲವೋ, ಸತತ ಜಪದ ಅವಿಷ್ಕಾರವೋ ಆಗಿರಲಿಲ್ಲ. ಪೆರಿಯ ಪುರಾಣ, ತೇವರಮ್'ನ ಕೆಲ ಭಾಗಗಳನ್ನು ಬಿಟ್ಟರೆ ಬೇರೇನನ್ನೂ ಅವರು ಓದಿರಲಿಲ್ಲ. ಹೆಚ್ಚೆಂದರೆ ನಿತ್ಯಾಹ್ನಿಕವನ್ನಷ್ಟೇ ಮಾಡುತ್ತಿದ್ದ, ದೇವಾಲಯಗಳಿಗೆ ಹೋಗಿಬರುತ್ತಿದ್ದ ಅವರಿಗೆ ಈ ಅರಿವಿನ ವಿಚಾರ ಸರಣಿಯಾಗಿ ಒಂದರ ಮೇಲೊಂದರಂತೆ ಬರಲಿಲ್ಲ. ಅಥವಾ ಅವರೇನು ನಿರಾಶಾವಾದಿಯೂ ಆಗಿರಲಿಲ್ಲ. ಅತೀವ ದುಃಖದ ಪರಿಣಾಮವೂ ಇದಾಗಿರಲಿಲ್ಲ. ಕರ್ಮಬಂಧನಗಳಿಂದ ಕಳಚಿಕೊಳ್ಳಬೇಕೆಂಬ, ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಯಾವ ಅಭಿಲಾಶೆಯೂ ಅವರಿಗಿರಲಿಲ್ಲ. ಜೀವನದ ಬಗ್ಗೆ ಅರಿತುಕೊಳ್ಳುವ ಪ್ರಾಯದಲ್ಲಿ ಈ ಅರಿವು ಝಗ್ಗನೆದ್ದು ಪ್ರಕಾಶಿಸಿತು. ಚಿಕ್ಕಪ್ಪನ ಮನೆಯ ಮಹಡಿಯ ಮೇಲೆ ಕುಳಿತಿದ್ದಾಗ ಉಂಟಾದ ಸಾವಿನ ಭೀಕರ ಅರಿವು ಅಸ್ವಸ್ಥತೆಯ ಯಾವ ಕುರುಹೂ ಇಲ್ಲದ ವೇಳೆಯಲ್ಲೊದಗಿತ್ತು. ಈ ವಿಚಾರ ಅವನನ್ನು ಧೃತಿಗೆಡಿಸುವುದರ ಬದಲು ಅಂತರ್ಮುಖಿಯನ್ನಾಗಿಸಿ ವಿಚಾರಗಳ ಮಹಾಸಾಗರವೇ ಹರಿಯಲಾರಂಭಿಸಿತು. ತನ್ನನ್ನು ಹೆಣವೆಂದೇ ಭಾವಿಸಿದಾಗ ಜಡ ದೇಹದಿಂದ ಭಿನ್ನವಾದ ಶಕ್ತಿಯೊಂದು ಸ್ಪುರಿಸುತ್ತಿರುವ ಅನುಭವವಾಯಿತು. ನಾನು...ನಾನು...ಎನ್ನುವ ಆ ಅರಿವು ಈ ದೇಹವೇನೋ ಸಾಯುತ್ತಿದೆ, "ನಾನು" ಇನ್ನೂ ಇದ್ದೇನೆ. ದೇಹವನ್ನು ಮೀರಿ "ನಾನು" ನಿಂತಿದ್ದೇನೆ, ಈ ಸಾವಿಗೂ "ನಾನು" ಆತೀತನಾಗಿದ್ದೇನೆ ಎನ್ನುವ ಅನುಭವವನ್ನು ಕೊಟ್ಟಿತು.

                   ಈ ಅನುಭವ ಅವರು ತಾವಾಗಿಯೇ ಬಯಸಿ ತಂದುಕೊಂಡದ್ದಾಗಿರಲಿಲ್ಲ. ತಾನಾಗಿಯೇ ಘಟಿಸಿತ್ತು. ಆ ಅನುಭವದ ಬಳಿಕ ಶರೀರ ಯಾವುದೇ ಕ್ರಿಯೆಯಲ್ಲಿ ತೊಡಗಿರಲಿ "ನಾನು" ಎನ್ನುವ ಆತ್ಮಭಾವವೇ ಅವೆಲ್ಲದುದರ ಕೇಂದ್ರವಾಗಿರುತ್ತಿತ್ತು. ಅವರ ಜೀವನ ರೀತಿಯೇ ಬದಲಾಯಿತು. ಅವರ ಅಂತರಂಗ ಲೋಕವ್ಯವಹಾರಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿತು. ಬಾಹ್ಯ ವ್ಯವಹಾರ ನಿರ್ವಿಕಾರ ಭಾವದಿಂದ ಸಾಗತೊಡಗಿತು. ಮೀನಾಕ್ಷಿ ದೇವಾಲಯಕ್ಕೆ ಹೋದರಂತೂ ಮೀನಾಕ್ಷಿಯ ಅಥವಾ ನಟರಾಜನ ಅಥವಾ ಅರವತ್ತಮೂರು ಶಿವಭಕ್ತ ಸಂತರುಗಳ ವಿಗ್ರಹಗಳ ಮುಂದೆ ಭಾವಪರವಶರಾಗಿ ನಿಂತಾಗ ದಳದಳನೆ ಕಣ್ಣೀರು ಹರಿಯುತ್ತಿತ್ತು. ಅದು ಯಾವುದೇ ಸುಖ ಅಥವಾ ದುಃಖದ ಸಂಕೇತವಾಗಿರಲಿಲ್ಲ. ಆತ್ಮವು ಅಪರಿಮಿತ ಆಳಕ್ಕೆ ಹರಿಯುತ್ತಿತ್ತು. ಈ ಅನುಭವ ಅಲ್ಪಕಾಲ ಪರಮಾನಂದದ ಸ್ಥಿತಿಗೆ ತಲುಪಿ ಮತ್ತೆ ಮನಸ್ಸಿನ ನೆಲೆಗೆ ವಾಪಸಾಗುವ ಯೋಗಿಯ ಅವಸ್ಥೆಯಾಗಿರಲಿಲ್ಲ. ಅಹಂಕಾರ ನಾಶವಾಗಿತ್ತು. ಮನಸ್ಸು ನಿರ್ನಾಮವಾಗಿತ್ತು. ಕ್ಷಣಿಕವಾದ "ನಾನು" ಅಳಿದು ಹೋಗಿತ್ತು. ಶಾಶ್ವತವಾದ "ನಾನು" ಪುಟಿದು ನಿಂತಿತ್ತು. ನಿರಂತರವಾದ ಅಖಂಡ ಆತ್ಮಪ್ರಜ್ಞೆಯಲ್ಲಿ ಅವರು ಆಗಲೇ ಸೇರಿ ಹೋಗಿದ್ದರು. ಆತ್ಮಾನಂದದ ಅನುಭವದಲ್ಲಿರುತ್ತಲೇ ಅವರ ಬಾಹ್ಯಜೀವನ ಸಹಜವಾಗಿ, ನಿರಾಯಾಸವಾಗಿ ನಡೆಯುತ್ತಿತ್ತು.

                 ಮನೆಯಲ್ಲಿ ಧ್ಯಾನ ಮಗ್ನರಾಗಿ ಕುಳಿತಿದ್ದಾಗ ನಿನ್ನಂಥವನಿಗೆ ಲೌಕಿಕ ಜೀವನ ಅನುಭವಿಸುವ ಹಕ್ಕಿಲ್ಲವೆಂದು ಅಣ್ಣ ಹೀಗಳೆದಾಗ ಹಿಂದೊಮ್ಮೆ ಕೇಳಿದ್ದ "ಅರುಣಾಚಲ" ಕೈ ಬೀಸಿ ಕರೆಯಿತು. "ಅವನ"ನ್ನು ಹುಡುಕಲು ಹೊರಟಿದ್ದೇನೆ, "ಇದ"ನ್ನು ಹುಡುಕುವ ಪ್ರಯತ್ನ ಮಾಡಬಾರದೆಂದು ಪತ್ರ ಬರೆದು ರೈಲು ಹತ್ತಿ ಹೊರಟು ಬಂದು ನಿಂತದ್ದು ಅರುಣಾಚಲೇಶ್ವರನ ದೇವಾಲಯಕ್ಕೆ. ದೇವಾಲಯದಲ್ಲಿ ಅರುಣಾಚಲೇಶ್ವರನನ್ನು ಬಿಟ್ಟರೆ ಯಾರೂ ಇರಲಿಲ್ಲ. ಗರ್ಭಗುಡಿಯ ಬಾಗಿಲು ತೆರೆದಿತ್ತು. ನೇರ ಗರ್ಭಗುಡಿಯೊಳಕ್ಕೆ ಕಾಲಿಟ್ಟು ಅರುಣಾಚಲೇಶ್ವರನ ಎದುರು ಭಾವಪರವಶರಾಗಿ ನಿಂತರು. ತಂದೆ ಮಕ್ಕಳ ಮಿಲನವಾಗಿತ್ತು. ಸಿದ್ಧಿಗೆ ತಾರ್ಕಿಕ-ತಾತ್ವಿಕ ನೆಲೆ ಒದಗಿತ್ತು. ದೇವಾಲಯದಿಂದ ಹೊರಬಂದು ಕ್ಷೌರ ಮುಗಿಸಿ ಜನಿವಾರ, ಬಟ್ಟೆ, ತಿಂಡಿಪೊಟ್ಟಣಗಳನ್ನು ಕಿತ್ತೆಸೆದು ಸ್ನಾನವಾದರೂ ಏಕೆ ಬೇಕು ಎನ್ನುವಾಗ ಮಂಗಳಕರ ಎನ್ನುವಂತೆ ವರ್ಷಧಾರೆಯೇ ಸುರಿಯಿತು. ಸಾವಿರ ಕಂಬದ ಪಟಾಂಗಣದಲ್ಲಿ ಇಹದ ಇರವನ್ನು ಮರೆತು "ಇರವಿ"ನ ಪರಮಾನಂದದಲ್ಲಿ, ದಿವ್ಯ ಸಮಾಧಿಯಲ್ಲಿ ಮುಳುಗಿ ಹೋದರಾತ!

                ಬ್ರಾಹ್ಮಣಸ್ವಾಮಿಯ ಸಮಾಧಿ ಸ್ಥಿತಿಯ ಪರಿ ಯಾವ ರೀತಿ ಇರುತ್ತಿತ್ತೆಂದರೆ ಕುಳಿತಿದ್ದ ಸ್ಥಳದಿಂದ ಸ್ವತಃ ಚಲಿಸುತ್ತಿದ್ದುದು ಅವರಿಗೇ ತಿಳಿಯುತ್ತಿರಲಿಲ್ಲ. ಕೆಲವು ಸಲ ಅವರ ಮೇಲಿನ ಭಕ್ತಿ, ಗೌರವಗಳಿಂದ ಜನರೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಎತ್ತಿಕೊಂಡು ಹೋಗಿ ಬಿಡುತ್ತಿದ್ದರು. ಅದೂ ಅವರಿಗೆ ತಿಳಿಯುತ್ತಿರಲಿಲ್ಲ. ಭಕ್ತರೆಲ್ಲಾ ಅವರ ಎದುರು ಫಲಾಹಾರಗಳನ್ನು ತಂದಿಟ್ಟರೂ ಅವರದನ್ನು ಸ್ವೀಕರಿಸುವುದೂ ಅಪರೂಪವಾಗಿತ್ತು. ಇರುವೆಗಳೆಲ್ಲಾ ಅವರ ದೇಹವನ್ನು ಮುತ್ತಿಕೊಳ್ಳದಂತೆ ಒಂದು ಹರಿವಾಣದಲ್ಲಿ ನೀರನ್ನಿರಿಸಿ ಅವರನ್ನು ಅದರಲ್ಲಿ ಕುಳ್ಳಿರಿಸಲಾಯಿತು. ಜನ ತಮ್ಮ ಆಶೋತ್ತರಗಳ ಪೂರೈಕೆಗಾಗಿ ಸ್ವಾಮಿಯ ಪಾದ ಮುಟ್ಟಿ ನಮಸ್ಕರಿಸುವುದನ್ನು ತಡೆಯಲು ಅವರ ಸುತ್ತ ಬೇಲಿ ಕಟ್ಟಲಾಯಿತು! ಮುಂದೆ ಅರುಣಾಚಲಗಿರಿಯ ಬೇರೆ ಬೇರೆ ಕಡೆ ಅವರು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು.

                   ದೇಶ ವಿದೇಶಗಳನ್ನೇ ರಮಣರು ಸೆಳೆದರು. ಅವರನ್ನು ಹುಡುಕಿಕೊಂಡು ಜಗತ್ತಿನ ಮೂಲೆ ಮೂಲೆಗಳಿಂದ ಭಕ್ತರು ಬಂದರು. ರಾಮಭಕ್ತ ಶೇಷಯ್ಯರ್, ತತ್ವ ಶಾಸ್ತ್ರಜ್ಞ ಶಿವಪ್ರಕಾಶಂ ಪಿಳ್ಳೈ, ಅಪ್ರತಿಮ ವಿದ್ವಾಂಸ ಕಾವ್ಯಕಂಠ ಗಣಪತಿ ಮುನಿ, ಗಣಪತಿಯ ಆರಾಧಕ ಪಳನೀಸ್ವಾಮೀ, ಪೊಲೀಸ್ ವೃತ್ತಿಯಲ್ಲಿದ್ದ ಇಂಗ್ಲೆಂಡಿನ ಹಂಫ್ರೀಸ್, "ಶರಣಾಗತಿ ತಾತ" ಎಂಬ ಹೆಸರು ಪಡೆದಿದ್ದ ರಾಮಸ್ವಾಮಿ ಅಯ್ಯರ್, ರಾಘವಚಾರಿಯಾರ್, ಶೃಂಗೇರಿಯ ಶಾಸ್ತ್ರಿಗಳು, ನಾರಾಯಣ ಗುರುಗಳು ರಮಣರ ಅಲೌಕಿಕ ದರ್ಶನವನ್ನು ಅನುಭವಿಸಿದ ಪುಣ್ಯಜೀವಿಗಳು. ಪಾಲ್ ಬ್ರಂಟನ್ನನಂತೂ ಮಹರ್ಷಿಗಳ ಪದತಲದಿಂದ ಸ್ವರ್ಣ ಫಲಗಳನ್ನು ಬುಟ್ಟಿ ತುಂಬಾ ತುಂಬಿಕೊಂಡಿದ್ದೇನೆ ಎಂದಿದ್ದು ರಮಣರ ಮಹಾನತೆಗೆ ಸಾಕ್ಷಿ. ಪರಮ ಭಕ್ತೆ ಎಚ್ಚಮ್ಮಾಳ್, ದೇವರಾಜ ಮೊದಲಿಯಾರ್, ಕವಿ ಮುರುಗನಾರ್, ಸ್ವಾಮಿನಾಥನ್, ಪಾರ್ಸಿ ಮಹಿಳೆ ಫಿರೋಜಾ, ಕುಂಜುಸ್ವಾಮಿ, ನಂಬಿಯಾರ್, ಛಗನ್ ಲಾಲ್, ಫ್ರೀಡ್ ಮ್ಯಾನ್, ನೌಲಿನ್ ನೋಯೆ, ಸೂರಿ ನಾಗಮ್ಮ, ಮೇಜರ್ ಚ್ಯಾಡ್ ವಿಕ್, ಎಸ್.ಎಸ್.ಕೋಹೆನ್, ಆರ್ಥರ್ ಆಸ್ಬೋರ್ನ್, ಡೇವಿಡ್ ಗಾಡ್ ಮನ್ ಹೀಗೆ ಪ್ರಪಂಚದ ವಿವಿಧ ಭಾಗಗಳ, ವಿವಿಧ ವೃತ್ತಿಗಳ, ವಿವಿಧ ವರ್ಗಗಳ ಜನರು ಈ ಮಹಾಜ್ಞಾನಿಯ ಮುಂದೆ ಮಂಡಿಯೂರಿದರು. ಕೇವಲ ಮನುಷ್ಯ ಜೀವಿಗಳು ಮಾತ್ರವಲ್ಲ ಪಶುಪಕ್ಷಿಗಳೂ ರಮಣರನ್ನು ಅರಸಿ ಬಂದು ಸಾಕ್ಷಾತ್ಕಾರ ಪಡೆದುಕೊಂಡವು. ಕರುವಾಗಿದ್ದಿನಿಂದಲೇ ಪ್ರತಿನಿತ್ಯ ಗಿರಿಹತ್ತಿ ರಮಣರ ಪಾದಕಮಲಗಳಲ್ಲಿ ತನ್ನ ಮೊಗವನ್ನಿಟ್ಟು ನಮಸ್ಕರಿಸಿ ತೆರಳುತ್ತಿದ್ದು, ಕೊನೆಗೊಮ್ಮೆ ತನ್ನ ಮೂರನೇ ಪ್ರಸವದ ಸಮಯದಲ್ಲಿ ಆಶ್ರಮದಿಂದ ಹೋಗಲೊಪ್ಪದೇ ಅಲ್ಲೇ ನೆಲೆ ನಿಂತ ಹಸು ಲಕ್ಷ್ಮಿ, ಕೋತಿಗಳು, ಹಾವು-ಮುಂಗುಸಿಗಳು, ಜಿಂಕೆ, ನವಿಲು, ಅಳಿಲು, ಕುರಿ, ಪಾರಿವಾಳ, ಕಾಗೆ, ನಾಯಿಗಳು ಹೀಗೆ ಹತ್ತು ಹಲವು ಜೀವಿಗಳು ಜ್ಞಾನವನ್ನರಸಿ ಬಂದವು. ಭಗವಾನರು ಈ ಪ್ರಾಣಿಗಳೊಡನೆ ಆಡುತ್ತಾ ವನಭೋಜನವನ್ನೂ ನಡೆಸುತ್ತಿದ್ದರು. ರಮಣಾಶ್ರಮದಲ್ಲಿ ಹಸು ಲಕ್ಷ್ಮಿ, ಕೋತಿ, ನಾಯಿ, ಜಿಂಕೆ, ಕಾಗೆಗಳ ಸಮಾಧಿಗಳೂ ಇವೆ. ವಿರೂಪಾಕ್ಷ ಗುಹೆ, ಸ್ಕಂದಾಶ್ರಮದಲ್ಲಿದ್ದಾಗ ಗಿರಿಯ ಮೇಲೆ ಹುಲ್ಲು ಕೊಯ್ಯಲೆಂದು ಬರುತ್ತಿದ್ದ ದೀನರಿಗೆ ಅನ್ನಾಹಾರವನ್ನು ಸ್ವತಃ ಮಾಡಿ ಕೊಡುತ್ತಿದ್ದರು. ಹರಿಜನ-ಬಡವ, ಆಬಾಲವೃದ್ಧರಾದಿಯಾಗಿ ಶರಣು ಬಂದವರೆಲ್ಲರಿಗೂ ಅನುಗ್ರಹಿಸಿದರು. ತಮ್ಮ ತಾಯಿ ಸಾಯುವ ಗಳಿಗೆಯಲ್ಲಿ ಅವಳೊಡನಿದ್ದು ಆಕೆಯ ಮನಸ್ಸನ್ನು ನಿಶ್ಚಲಗೊಳಿಸಿ ಅದು ಆತ್ಮನಲ್ಲಿ ಐಕ್ಯವಾಗುವಂತೆ ಮಾಡಿ ಮಹಾಸಮಾಧಿಯಾಗಿ ಪರಿವರ್ತಿಸಿದರು.ತನ್ನದೇ ಇನ್ನೊಂದು ರೂಪವಾಗಿ ಶೇಷಾದ್ರಿ ಸ್ವಾಮಿಗಳಾಗಿ ಅರುಣಾಚಲದ ತಪ್ಪಲಲ್ಲಿ ನೆಲೆನಿಂತು ಭಕ್ತರನ್ನು ಆಶೀರ್ವದಿಸಿದರು!

                ತಮ್ಮ ಜನ್ಮಜಯಂತಿಯನ್ನು ಆಚರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಯಾಕೆಂದು ಕೇಳಿದವರಿಗೆ "ನಿನ್ನ ಆತ್ಮ ಹುಟ್ಟಿದ್ದು ಎಂದು" ಎನ್ನುವುದನ್ನು ಮೊದಲು ಅರಿತುಕೋ ಅನ್ನುತ್ತಿದ್ದರು. ಎಲ್ಲಾ ಶಬ್ಧಗಳಿಗೆ ಮೀರಿದ ವಿಷಯವನ್ನು ಯಾವ ಶಬ್ಧಗಳೂ ಹೇಳಲಾರವು. ಮನಸ್ಸಿಗೆ ಮೀರಿದ ಸತ್ಯವನ್ನು ಯಾವ ಮನಸ್ಸೂ ಗ್ರಹಿಸಲಾರದು. ಮೌನದಿಂದಲೇ ಮಾತು ಉದಯವಾಗಿದೆ, ಮನಸ್ಸಿನ ಅಹಂಕಾರವೇ ಮಾತಿಗೆ ಕಾರಣ. ಹೀಗಾಗಿ ಮೌನವು ಮಾತಿಗೆ ಮೀರಿದ ಶಕ್ತಿಯುಳ್ಳದ್ದು. ಭಗವಾನರು ಮೌನದ ಮೂಲಕವೇ ಒಂದು ವಿಚಾರವನ್ನು ಅಥವಾ ಅನುಭವವನ್ನು ವ್ಯಕ್ತಿಗಳಿಗೆ ದಾಟಿಸಬಲ್ಲವರಾಗಿದ್ದರು. ಜ್ಞಾನಾಕಾಂಕ್ಷಿಗಳಾಗಿ ಬಂದವರಿಗೆ ನೀನು ಯಾರು ಎನ್ನುವುದನ್ನು ನಿನ್ನಲ್ಲೇ ಕೇಳಿಕೋ, ಅರಿತುಕೋ ಎನ್ನುತ್ತಿದ್ದರು. ಮನಸ್ಸು ಹೊರಮುಖವಾದಾಗ ಲೌಕಿಕತೆ ಕಾಣುತ್ತದೆ. ಅದನ್ನೇ ಒಳಮುಖವಾಗಿರಿಸಿದರೆ ಅದು ಅಲೌಕಿಕವಾದ ಆತ್ಮನೇ ಆಗಿದೆ. ಅದನ್ನು ಸಾಕ್ಷಾತ್ಕರಿಸಿಕೊಂಡಾಗಲೂ ಜಪವೂ ಅಪ್ರಯತ್ನವಾಗಿ ನಡೆಯುತ್ತಿರುತ್ತದೆ. ಯಾಕೆಂದರೆ ಅದು ಸತ್ಯ ಸ್ವರೂಪ. ಹೀಗೆ ಒಂದು ಸಮಯದಲ್ಲಿ ಸಾಧನವಾಗಿದ್ದದ್ದು ಮುಂದೊಂದು ದಿನ ಸಾಧ್ಯವಾಗಿ ಪರಿಣಮಿಸುತ್ತದೆ ಎಂದಿದ್ದಾರೆ ರಮಣರು. ತಮ್ಮ ಶರೀರದ ಬಗ್ಗೆ ನಿರ್ಲಕ್ಷ್ಯ ತಾಳಿದ್ದ ಭಗವಾನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ನುಡಿದ ಭಕ್ತರೊಬ್ಬರಿಗೆ "ಒಂದು ಗುಡಿಸಲಿನೊಳಗೆ ಅದು ಎಷ್ಟು ಗಟ್ಟಿಮುಟ್ಟಾಗಿದ್ದರೂ, ಆನೆಯೊಂದನ್ನು ಕಟ್ಟಿಹಾಕಿದರೆ ಗುಡಿಸಲಿನ ಸ್ಥಿತಿ ಏನಾಗಬಹುದು? ಹಾಗಾಗಿ ಆನೆಯ ಬಗ್ಗೆ ಚಿಂತಿಸಬೇಕೇ ಹೊರತು ಗುಡಿಸಲಿನ ಬಗೆಗಲ್ಲ" ಎನ್ನುತ್ತಾ ದೇಹವೆಂಬುದು ಊಟವಾದ ಮೇಲೆ ಬಿಸುಡುವ ಬಾಳೆ ಎಲೆ, ಆತ್ಮದ ವಿಚಾರ ಮಾಡಿ ಎಂದು ಸೂಚ್ಯವಾಗಿ ವಿವರಿಸಿದ್ದಾರೆ.

                   ಮಹರ್ಷಿಗಳಿಂದ ತನ್ನ ಪ್ರಶ್ನೆಗಳಿಗೆ ಪಡೆದ ಉತ್ತರವನ್ನು ಟಿಪ್ಪಣಿಗಳ ರೂಪದಲ್ಲಿ ಗಂಭೀರಂ ಶೇಷಯ್ಯರ್ ಬರೆದಿದ್ದ ವಿಚಾರಗಳನ್ನು ಆಧರಿಸಿ "ಆತ್ಮ ವಿಚಾರ" ಎಂಬ ಗ್ರಂಥ ರೂಪುಗೊಂಡಿತು. ಭಕ್ತ ಶಿವಪ್ರಕಾಶಂ ಪಿಳ್ಳೈ ಕೇಳಿದ "ನಾನು ಯಾರು" ಎಂಬ ಪ್ರಶ್ನೆಯೇ ರಮಣರ ಅತ್ಯಂತ ಜನಪ್ರಿಯ ಕೃತಿ "ನಾನು ಯಾರು?" ಎನ್ನುವುದಕ್ಕೆ ವೇದಿಕೆಯಾಯಿತು. ಇದೇ ಶಿವಪ್ರಕಾಶಂ ಪಿಳ್ಳೈಯೇ ಮಹರ್ಷಿಗಳ ಅಲೌಕಿಕ ದರ್ಶನವನ್ನು ಮೊಟ್ಟಮೊದಲು ಪಡೆದ ಭಾಗ್ಯವಂತ. ಮಹರ್ಷಿಗಳ ಬಳಿಯಲ್ಲಿದ್ದು ಇಪ್ಪತ್ತೊಂದು ವರ್ಷಗಳ ಕಾಲ ಆತನಿಗುಂಟಾದ ಅನುಭವ "ರಮಣ ಚರಿತ ಅಹವಾಲ್" ಎಂಬ ಪದ್ಯರೂಪದಲ್ಲಿ ಹರಿದು ಬಂತು. ಕಾವ್ಯಕಂಠ ಗಣಪತಿ ಶಾಸ್ತ್ರಿಗಳಂತೂ "ರಮಣ ಗೀತಾ" ಎಂಬ ಸಂಸ್ಕೃತ ಗ್ರಂಥ ರಚಿಸಿದ್ದಲ್ಲದೇ ಉಜ್ವಲ ವ್ಯಕ್ತಿತ್ವದ ಈ ಮಹಾಜ್ಞಾನಿಯನ್ನು ಗುರು, ದೈವವೆಂದು ಗುರುತಿಸಿ ಆರಾಧಿಸಿ ವೆಂಕಟರಾಮನ್ ಎಂಬ ಅವರ ಹೆಸರನ್ನು "ಭಗವಾನ್ ರಮಣ"ರೆಂದು ಪರಿವರ್ತಿಸಿದರಲ್ಲದೆ ಜ್ಞಾನ ಸೋಪಾನಗಳ ತುತ್ತತುದಿಗೇರಿದ್ದ ಮಹರ್ಷಿ ಎಂದು ವರ್ಣಿಸಿದರು. ಮುಂದೆ ರಮಣರನ್ನು ಕುರಿತ ಅನೇಕ ಕೃತಿಗಳು ಹೊರ ಬಂದವು. ಇವೇ ಅಲ್ಲದೇ ಸ್ವತಃ ಮಹರ್ಷಿಗಳೇ ಬರೆದ, ತಮ್ಮ ಭಕ್ತರ-ಶಿಷ್ಯರ ಬೇಡಿಕೆಗಳನ್ನು ಪೂರೈಸಲು ಬರೆದ ಅನೇಕ ಕೃತಿಗಳಿವೆ.

                ಶುಕ ಮಾರ್ಗದಿ ಆತ್ಮ ಸಾಕ್ಷಾತ್ಕರಿಸಿಕೊಂಡ ಈ ಪ್ರಖರ ಸೂರ್ಯನ ಕಿರಣ ಭೂಮಂಡಲದ ಇಂಚು ಇಂಚಿಗೂ ಮುಟ್ಟಿತು. ಜಗತ್ತಿನ ಎಲ್ಲಾ ಭಾಗಗಳಿಂದ ಜಾತಿ, ಮತ, ಪಂಥ, ಲಿಂಗ, ಪ್ರಾಯ, ಬಡವ ಬಲ್ಲಿದ ಮನುಷ್ಯ-ಪ್ರಾಣಿ ಎಂಬ ಭೇದಗಳಿಲ್ಲದೆ ಸಹಸ್ರಾರು ಜನರು ಆ ಕಿರಣದ ಜಾಡು ಹುಡುಕುತ್ತಾ ಬಂದು ಸನ್ನಿಧಿಯಲ್ಲಿ ಶಾಂತಿ, ನೆಮ್ಮದಿಯನ್ನು ಅನುಭವಿಸಿದರು, ಆತ್ಮಜ್ಞಾನ ಗಳಿಸುವತ್ತ ಹೊರಳಿದರು, ಜ್ಞಾನದ ಸ್ವರ್ಣಫಲಗಳನ್ನೇ ಪಡೆದುಕೊಂಡರು. ಆತನನ್ನು ಭಗವಾನನೆಂದೂ, ಮಹರ್ಷಿಯೆಂದೂ ಆರಾಧಿಸಿದರು. ಹಾಗಂತ ಆತನೇನು ಮಠ ಕಟ್ಟಿಕೊಳ್ಳಲಿಲ್ಲ. ಪೀಠಾಧಿಪತಿಯೆಂದು ಘೋಷಿಸಿಕೊಳ್ಳಲಿಲ್ಲ. ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಆತನಿಂದ ಜರಗಿದವು. ಅವನ್ನೇನು ತನ್ನದೆಂದು ಹೇಳಲಿಲ್ಲ. ಸಹಜ ಪ್ರಾಕೃತಿಕ ಕ್ರಿಯೆಯೆಂಬಂತೆ ಬದಿಗೆ ಸರಿಸಿದ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ವಿವಿಧ ಮತ-ಪಂಥಗಳ ಜನರು ಬಂದರೂ ಅವರಿಗೆ ಜ್ಞಾನದ ಸವಿಯನ್ನುಣಬಡಿಸಿದ. ಅವರನ್ನೇನೂ ಮತಾಂತರ ಮಾಡಲಿಲ್ಲ. ಅವರ ಬಳಿ ಹೋದವರು ತಮ್ಮ ಮತವನ್ನೇನು ಬದಲಾಯಿಸಲಿಲ್ಲ. ಆ ರೀತಿ ಮತಾಂತರ ಮಾಡುತ್ತಿದ್ದರೆ ಇಂದು ಜಗತ್ತಿನಲ್ಲಿ ಹಿಂದೂಗಳೇ ತುಂಬಿಕೊಂಡಿರುತ್ತಿದ್ದರೇನೋ! ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದ. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದ. ಮೌನವಾಗಿಯೇ ಜಗವನ್ನಾಳಿದ. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದ. ದಕ್ಷಿಣಾಮೂರ್ತಿಯ ಅಪರಾವತಾರವೆನಿಸಿದ. ಈಗಲೂ ದೇಶವಿದೇಶಗಳಿಂದ ರಮಣಾಶ್ರಮ-ಅರುಣಾಚಲ ಜನರನ್ನು ಸೆಳೆಯುತ್ತಲೇ ಇದೆ. ಇಂದಿಗೂ ಅರುಣಾಚಲದ ತುತ್ತತುದಿಗೆ ಪ್ರಾಣಿಗಳು ಹೋಗಿ ಧ್ಯಾನಿಸುತ್ತವೆ. ರಮಣಾಶ್ರಮದಲ್ಲಿ ಎಲ್ಲಿಂದಲೋ ಬಂದ ನಾಯಿ, ಕೋತಿ, ಹಸು, ಅಳಿಲು,...ವಿವಿಧ ಪಕ್ಷಿಗಳು ಧ್ಯಾನದಲ್ಲಿ ತೊಡಗುತ್ತವೆ. ರಮಣಾಶ್ರಮದಲ್ಲಿ ಪ್ರತಿಯೊಂದು ಜೀವಿಯೂ ಸ್ವಚ್ಚಂದವಾಗಿ ಓಡಾಡುತ್ತದೆ, ಹಾಗಂತ ಸ್ವೇಚ್ಛೆಯಿಂದಲ್ಲ. ಯೋಗಿಗಳು, ಜ್ಞಾನಾಕಾಂಕ್ಷಿಗಳು ಅರುಣಾಚಲವನ್ನು ಏರುತ್ತಲೇ ಇದ್ದಾರೆ. "ಆತ್ಮ ಜ್ಞಾನ" ಗಳಿಸಿದ ಮೇಲೂ ಜನರ ನಡುವೆಯೇ ಜೀವಿಸಿದ ರಮಣರು ಅರಿತವರಿಗೆ ಎಲ್ಲೆಲ್ಲೂ ಕಂಡುಬರುತ್ತಾರೆ. ಸ್ವಘೋಷಿತ ಆಧ್ಯಾತ್ಮ ಜೀವಿಗಳೆಲ್ಲಾ ರಮಣರ ಎದುರು ಬರಲು ಹೆದರುತ್ತಿದ್ದರೆಂದರೆ ಅವರ ಮಹಾನತೆ ಅರಿಯಬಹುದು. ಅರಿತವರಿಗೆ ಆತ ಜ್ಞಾನಿ, ಮೂಢರಿಗೆ ಬರಿಯ ಕೌಪೀನಧಾರಿ! ಆತ ಭಾರತದ ಅಂತಃಸತ್ವವನ್ನು ಬೆಳಗಿ ಜಗಕೆ ಪಸರಿಸಿದ ಆತ್ಮಜ್ಯೋತಿ!

ಶುಕ್ರವಾರ, ಜುಲೈ 3, 2015

ನಿರಂತರತೆಜಲ ಬಿಂದುಗಳನ್ನೇ ಪೋಣಿಸ ಹೊರಟ ಪರಿ
ಪ್ರಕೃತಿ ಸೌಂದರ್ಯಕ್ಕೆ ಯಾವುದು ಸಾಟಿ
ಜಲಧಿ ಉಕ್ಕೇರಿದರೂ ಲಯವು ದಿಟ
ಮತ್ತೆ ಹೆಣೆಯುವುದೇ ಪ್ರಕೃತಿಯ ಆಟ
#ನಿರಂತರತೆ #ಆತ್ಮತತ್ವ