ಪುಟಗಳು

ಮಂಗಳವಾರ, ಜುಲೈ 21, 2015

ರಾಣಾ ಪ್ರತಾಪ: ಸ್ವಾತಂತ್ರ್ಯ, ಸ್ವಾಭಿಮಾನ, ರಾಷ್ಟ್ರೀಯತೆಗಳ ಪ್ರತೀಕ

ರಾಣಾ ಪ್ರತಾಪ: ಸ್ವಾತಂತ್ರ್ಯ, ಸ್ವಾಭಿಮಾನ, ರಾಷ್ಟ್ರೀಯತೆಗಳ ಪ್ರತೀಕ

                   ಹೆಸರಿಗೆ ಅವನು ರಾಜ. ಆದರೆ ಆಳಲು ರಾಜ್ಯವಿರಲಿಲ್ಲ. ರಾಜ್ಯವನ್ನು ಗೆದ್ದುಕೊಳ್ಳಲು ಯುದ್ಧ ಮಾಡೋಣವೆಂದರೆ ಸೈನ್ಯವಿಲ್ಲ. ಸೈನ್ಯ ಕಟ್ಟೋಣವೆಂದರೆ ಕೈಯಲ್ಲಿ ಹಣವಿಲ್ಲ. ಯಾರಾದರೂ ರಾಜರ ಸಹಾಯ ಕೇಳೋಣವೆಂದರೆ ಅವರೆಲ್ಲಾ ನಾಚಿಕೆ, ಸ್ವಾಭಿಮಾನಗಳನ್ನು ತೊರೆದು ಅಕ್ಬರನಿಗೆ ಶರಣಾಗಿ ಅವನಿಗೆ ಡೊಗ್ಗು ಸಲಾಮು ಹೊಡೆಯುತ್ತಾ ತಮ್ಮ ರಾಜ್ಯ-ಸಿರಿ-ಸ್ತ್ರೀಯರನ್ನು ಅಕ್ಬರನಿಗೆ ಗಿರವಿ ಇಟ್ಟಿದ್ದಾರೆ. ಆದರೇನು ಆತನಲ್ಲಿ ಸ್ವಾಭಿಮಾನವಿತ್ತು. ಸ್ವಾತಂತ್ರ್ಯದ ಉತ್ಕಟ ಬಯಕೆಯಿತ್ತು. ಪ್ರಾಣ ಹೋದರೂ ಸರಿಯೆ, ವಿದೇಶೀಯನೊಬ್ಬನಿಗೆ ತಲೆಬಾಗಲಾರೆನೆಂಬ ಪ್ರತಿಜ್ಞೆ ಇತ್ತು. ಹಾಗಾಗಿಯೇ ಆತ ಕಾಡುಮೇಡುಗಳಲ್ಲಿ ಅಲೆಯುತ್ತಾ, ಬೆಟ್ಟಗಳಿಂದ ಬೆಟ್ಟಗಳಿಗೆ ಹಾರುತ್ತಾ, ಹಣ್ಣು ಹಂಪಲುಗಳಿಂದ ಸಂಸಾರದ ಹೊಟ್ಟೆ ಹೊರೆಯುತ್ತಾ, ಕ್ರೂರ ಮೃಗಗಳು ಅವುಗಳಿಗಿಂತಲೂ ಕ್ರೂರರಾದ ಮತಾಂಧ ರಾಕ್ಷಸರಿಂದ ಎಳೆಯ ಮಗು ಅಮರನನ್ನು ಕಾಪಾಡುತ್ತಾ, ಕಾಲು ಶತಮಾನಗಳ ಕಾಲ, ಇಡೀ ಉತ್ತರಾಪಥವನ್ನು ತನ್ನ ಪದಾಕ್ರಾಂತ ಮಾಡಿದ್ದ ಬೃಹತ್ ಮೊಘಲ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿ ನಿಂತು ಅಜೇಯನಾಗಿಯೇ ಉಳಿದು ರಾಷ್ಟ್ರದ ಪ್ರಜೆಗಳ ಹೃದಯದಲ್ಲಿ ಆರಾಧಿಸಲ್ಪಟ್ಟ.

                 ವಿನ್ಸೆಂಟ್ ಸ್ಮಿತ್ನ ಪ್ರಕಾರ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಇಡೀ ಪ್ರಪಂಚದ ಅತ್ಯಂತ ಶಕ್ತಿವಂತ, ಸಂಪನ್ನ ದೊರೆ ಅಕ್ಬರ್. ಅಂತಹ ಅಕ್ಬರನಿಗೆ ಸಡ್ಡು ಹೊಡೆದು ನಿಂತ ಸ್ವಾಭಿಮಾನಿ ಸಿಂಹವೇ ರಾಣಾಪ್ರತಾಪ. ಅದವನಿಗೆ ಅನ್ವರ್ಥ ನಾಮವೂ ಹೌದು. ಆ ಸಮಯದಲ್ಲಿ ಬಹುತೇಕ ಇಡೀ ಉತ್ತರಭಾರತವನ್ನೇ ತನ್ನ ಕೈವಶ ಮಾಡಿಕೊಂಡಿದ್ದ ಅಕ್ಬರ್. ಆದರೆ ಆತನಿಗೆ ಚಿಕ್ಕ ಮೇವಾಡವನ್ನು ತನ್ನ ತೆಕ್ಕೆಗೆ ಕೊಳ್ಳಲಾಗಿರಲಿಲ್ಲ. ಅಕ್ಬರನಾದರೋ ಅಸಂಖ್ಯ ಸೇನೆ, ಸಿರಿ-ಸಂಪತ್ತಿನಿಂದ ಮೆರೆಯುತ್ತಿದ್ದ ಶ್ರೀಮಂತ ಚಕ್ರವರ್ತಿ. ಪ್ರತಾಪನೋ ಬರಿಗೈ ದಾಸ. ಆವರೆಗೆ ಮೇವಾಡದ ರಾಣಾರಿಗೆ ಬೆಂಬಲವಾಗಿ ನಿಂತಿದ್ದ ಜೋಧಪುರ, ಅಂಬೇರ್, ಬಿಕಾನೀರ್, ಬುಂದೀ ಸಾಮ್ರಾಜ್ಯಗಳ ರಾಜರೆಲ್ಲರೂ ಅಕ್ಬರನ ಪಕ್ಷವಹಿಸಿದ್ದರು. ಪ್ರತಾಪನ ತಮ್ಮ ಸಾಗರಜೀ ಕೂಡಾ ಮೊಗಲರ ಪಾಳಯ ಸೇರಿದ್ದ. ಅರಣ್ಯವೇ ಅವನಿಗೆ ಅರಮನೆ. ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೋ ಎಂದು ಎಚ್ಚರಿಕೆಯಿಂದ ಗಮನಿಸುತ್ತಾ, ಮುನ್ಸೂಚನೆ ಇಲ್ಲದೆಯೇ ವಾಸಸ್ಥಳ ಬದಲಾಯಿಸಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಅಡುಗೆ ಮಾಡಲು ಯಾವ ಧಾನ್ಯವೂ ಸಿಗುತ್ತಿರಲಿಲ್ಲ. ಕಾಡಿನಲ್ಲಿ ಏನಾದರೂ ಸಿಕ್ಕರೆ ಸರಿ, ಇಲ್ಲದಿದ್ದಲ್ಲಿ ಬರೀ ಹೊಟ್ಟೆಯೇ ಗತಿ. ಒಮ್ಮೊಮ್ಮೆ ಊಟಕ್ಕೆ ಕುಳಿತ ಕೂಡಲೇ ಶತ್ರುಗಳು ಬರುವುದನ್ನು ತಿಳಿದು ಎತ್ತಿದ ತುತ್ತನ್ನು ಬಾಯಲ್ಲಿಡದೆ ಕರದಲ್ಲಿ ಖಡ್ಗ ಹಿರಿದು ಬರಿದೇ ಓಡಬೇಕಾದ ದುಃಸ್ಥಿತಿ. ಗುಹೆಗಳಲ್ಲೋ, ಕಣಿವೆಗಳಲ್ಲೋ ಮಡದಿ ಮಕ್ಕಳನ್ನು ಬಚ್ಚಿಡಬೇಕಾದ ಅನಿವಾರ್ಯತೆ. ಅರಾವಳಿ ಬೆಟ್ತಗಳ ಮರಗಳಿಗೆ ರಾಜಕುಮಾರರ ಉಯ್ಯಾಲೆಗಾಗಿ ಕಟ್ಟಿದ ಕೊಕ್ಕೆಗಳು ಇಂದಿಗೂ ಇವೆ. ಒಮ್ಮೆಯಂತೂ ಐದು ಬಾರಿ ಒಲೆ ಹೊತ್ತಿಸಬೇಕಾಯಿತು. ದೇಶಭಕ್ತ ವೀರರನ್ನು, ವನವಾಸಿ ಭಿಲ್ಲರನ್ನು ಸಂಘಟಿಸಿ ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಪ್ರಚಂಡವಾಗಿ ಹೋರಾಡಿದರೂ ನೂರು-ಸಾವಿರ ಸಂಖ್ಯೆಯಲ್ಲಿ ಅವನ ಸೈನ್ಯಕ್ಕೆ ನಷ್ಟವಾಗುತ್ತಿತ್ತು. ಆ ನಷ್ಟವನ್ನು ಭರಿಸಲು ಮತ್ತೆ ಸಮಯ ಹಿಡಿಯುತ್ತಿತ್ತು.

               ಪ್ರತಾಪನನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಅಕ್ಬರ್ ನಾನಾ ತಂತ್ರಗಳನ್ನು ಹೂಡಿದ. ಅದಕ್ಕಾಗಿ ಯಾವ ಉಡುಗೊರೆಯನ್ನಾದರೂ ಕೊಡುವುದಾಗಿ ಪದೇ ಪದೇ ರಾಯಭಾರ ಕಳುಹಿಸಿದ. ಬೇರಾವ ಹಿಂದೂ ರಾಜರಿಗೆ ನೀಡದಂತಹ ವಿಶೇಷ ಸ್ಥಾನಮಾನ ನೀಡುವುದಾಗಿ ಪ್ರಲೋಭನೆಯೊಡ್ಡಿದ. ಪ್ರತಾಪ ಬಗ್ಗಲಿಲ್ಲ. ಎಂತಹುದೇ ಸ್ಥಿತಿಯಲ್ಲೂ ವಿದೇಶೀಯನೊಬ್ಬನಿಗೆ ತಲೆಬಾಗಲಾರೆ ಎಂದುಬಿಟ್ಟ. ರಾಜಾ ಮಾನ್ ಸಿಂಗ್ ಅಕ್ಬರನ ರಾಯಭಾರಿಯಾಗಿ ರಾಣಾ ಪ್ರತಾಪನನ್ನು ಓಲೈಸಿ ಒಪ್ಪಿಸಲೆಂದು ಬಂದಾಗ ಪ್ರತಾಪ ಆತನೊಡನೆ ಸಹಪಂಕ್ತಿ ಭೋಜನವನ್ನು ಮಾಡದೆ ಸ್ವಾಭಿಮಾನ ಮೆರೆದ. ಮುಸಲ್ಮಾನರಿಗೆ ತಮ್ಮ ಹೆಣ್ಣುಮಕ್ಕಳನ್ನು ಕೊಟ್ಟವರನ್ನು ಬಹಿಷ್ಕರಿಸಬೇಕೆಂದು ಆಜ್ಞೆ ಮಾಡಿದ. ತಮ್ಮ ರಾಜರು ಅಕ್ಬರನ ಪಾದಸೇವೆ ಮಾಡುತ್ತಿದ್ದರೂ ಪ್ರಜೆಗಳು ಪ್ರತಾಪನ ಮಾತನ್ನೇ ಶಿರಸಾವಹಿಸಿ ಪಾಲಿಸುತ್ತಿದ್ದರು. ಪರಿಸ್ಥಿತಿಯೊಂದಿಗೆ ರಾಜೀ ಮಾಡಿಕೊಂಡು ಅಕ್ಬರನಿಗೆ ಡೊಗ್ಗು ಸಲಾಮು ಹಾಕುತ್ತಿದ್ದ ಹಿಂದೂ ರಾಜರು, ರಾಜ ಪ್ರಮುಖರು ಕೂಡಾ ಪ್ರತಾಪನ ಧೈರ್ಯ ಸಾಹಸಗಳಿಗೆ ಹೆಮ್ಮೆ ಪಡುತ್ತಿದ್ದರು. ಒಮ್ಮೆ ಅಕ್ಬರ್ ತನ್ನ ಪೆಟ್ಟುಗಳನ್ನು ತಾಳಲಾರದೆ ಪ್ರತಾಪ ಸಂಧಿಗೆ ಸಮ್ಮತಿಸಿದ್ದಾನೆಂದು ಜಂಭ ಕೊಚ್ಚಿಕೊಂಡಾಗ ಪೃಥ್ವೀರಾಜನೆಂಬ ರಾಜಪ್ರಮುಖ "ಸೂರ್ಯ ಪಶ್ಚಿಮದಲ್ಲಿ ಉದಯಿಸಿದರೂ ಪ್ರತಾಪ ಅಂತಹ ಕೆಲಸ ಮಾಡಲಾರ" ಎಂದು ಅಕ್ಬರನ ಮುಖಕ್ಕೆ ಹೊಡೆದಂತೆ ಹೇಳಿದ. ಮಾತ್ರವಲ್ಲ "ನಿಮ್ಮ ಸಿಸೋದಿಯಾ ವಂಶದ ಮರ್ಯಾದೆಯನ್ನು, ಮೇವಾಡ್ ಕುಲೀನ ಸ್ತ್ರೀಯರ ಶೀಲವನ್ನು ದೆಹಲಿಯ ಅಂಗಡಿಯಲ್ಲಿ ಮಾರಾಟಕ್ಕಿಡುವಂತಹ ಕೆಲಸವನ್ನು ಮಾಡಬೇಡಿ. ನಾವೆಲ್ಲರೂ ನಿಮ್ಮನ್ನು ನೋಡಿಕಂಡೇ ಬದುಕುತ್ತಿದ್ದೇವೆ" ಎಂದು ಉದ್ವೇಗಭರಿತ ಪತ್ರವನ್ನು ಬರೆದ. ಇದು ಸಮಕಾಲೀನರಲ್ಲಿ ಪ್ರತಾಪನ ಬಗೆಗಿದ್ದ ಪೂಜ್ಯ ಭಾವನೆಗೆ ಹಿಡಿದ ಕೈಗನ್ನಡಿ.
             
                ಬಲಿಷ್ಟ ಮೊಗಲ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡ ಪ್ರತಾಪ ಸಾಂಪ್ರದಾಯಿಕ ಯುದ್ಧ ತಂತ್ರವನ್ನು ಅನುಸರಿಸುತ್ತಿದ್ದರೆ ಮಿಕ್ಕ ರಾಜರಂತೆ ಅಕ್ಬರನ ಅಡಿಯಾಳಾಗಿರಬೇಕಿತ್ತೇನೋ. ಪರಿಸ್ಥಿತಿಯನ್ನನುಸರಿಸಿ ವ್ಯೂಹಗಳನ್ನು ಬದಲಾಯಿಸುತ್ತಾ, ಆತ್ಮಹತ್ಯಾ ಸದೃಶವಾದ ಹೋರಾಟದ ಪದ್ದತಿಗಳನ್ನು ವರ್ಜಿಸಿ ಪ್ರತಿಕೂಲತೆಗಳನ್ನು ಅನುಕೂಲತೆಗಳಾಗಿ ಪರಿವರ್ತಿಸಿ ಅಸಾಧಾರಣಾ ಜಾಣತನದಿಂದ, ತಾಳ್ಮೆಯಿಂದ, ಗೆರಿಲ್ಲಾ ಯುದ್ಧತಂತ್ರವನ್ನು ಅಳವಡಿಸಿದುದರಿಂದ ಪ್ರತಾಪನಿಗೆ ಅಕ್ಬರನ ಬೃಹತ್ ಸೇನೆಯನ್ನು ಕಾಲು ಶತಮಾನಗಳಿಗೂ ಅಧಿಕ ಕಾಲ ಎದುರಿಸಿ ಮಣ್ಣುಮುಕ್ಕಿಸಿ ವಿಜಯಪಥದಲ್ಲಿ ಸಾಗಲು ಸಾಧ್ಯವಾಯಿತು. ಹಲ್ದೀಘಾಟ್ ನಲ್ಲಿ ಮೊಘಲರ 80ಸಾವಿರ ಯೋಧರ ಬೃಹತ್ ಸೈನ್ಯಕ್ಕೆದುರಾದಾಗ ಪ್ರತಾಪನ ಕಡೆ ಇದ್ದವರು ಬರೇ ಇಪ್ಪತ್ತು ಸಾವಿರ ಸೈನಿಕರು. ಆನೆಯ ಮೇಲೆ ಹಾರಿ ಮಾನ್ ಸಿಂಗನ ಮೇಲೆ ದಾಳಿ ಮಾಡಲು ಹೊರಟಾಗ ಪ್ರತಾಪನ ಕುದುರೆಗೆ ತೀವ್ರ ಗಾಯವಾಗಿ ಪರಿಸ್ಥಿತಿ ಬದಲಾಯಿತು. ಮೊಗಲರಿಗೆ ಗೆಲುವು ಸಿಕ್ಕಿದರೂ ಬಹುಪಾಲು ಸೈನ್ಯ ನಾಶವಾಗಿತ್ತು. ಪ್ರತಾಪ ತನ್ನ ಸೋಲು ಅನಿವಾರ್ಯ ಎಂದು ಅರಿವಾದಾಗ ಗೋಗೋಂಡ್ ಕೋಟೆಯನ್ನು ತೆರವುಗೊಳಿಸಿದ. ಗೆಲುವಿನಿಂದ ಉಬ್ಬಿ, ಕೊಬ್ಬಿ ಮೊಗಲರು ಕೋಟೆ ಪ್ರವೇಶಿಸಿದಾಗ ಅಲ್ಲಿ ನರಪಿಳ್ಳೆಯೂ ಇರಲಿಲ್ಲ! ಮುಂದೆ ಕುಂಭಲಗಢ, ಉಅದಯಪುರ ಕೋಟೆಗಳನ್ನು ಗೆದ್ದು ಪ್ರತಾಪನ ಬೆನ್ನ ಹಿಂದೆ ಬಿದ್ದು ಹಲವು ರೀತಿ ಬೇಟೆಯಾಡಿದರೂ ಸ್ವತಃ ತಾನೇ ಅಜ್ಮೀರ್ ನಲ್ಲಿ ಕುಳಿತು ಮೇಲ್ವಿಚಾರಣೆ ಮಾಡುತ್ತಾ ಮಗ ಸಲೀಂ ಸಹಿತ ಭಾರೀ ಸರದಾರರ ಸೈನ್ಯವನ್ನು ಉಪಯೋಗಿಸಿದರೂ ಪ್ರತಾಪನ ಎದುರು ಅಕ್ಬರನ ಆಟ ನಡೆಯಲಿಲ್ಲ. ಆಕ್ರಮಿಸಿದ ಕೋಟೆಗಳಲ್ಲಿ ನೆಲೆಸೋಣವೆಂದರೆ ಅನ್ನ-ನೀರು ಸಿಗುತ್ತಿರಲಿಲ್ಲ. ಕೋಟೆಯಿಂದ ಹೊರ ಬರೋಣವೆಂದರೆ ಪ್ರತಾಪ ಯಾವಾಗ ಯಾವ ದಿಕ್ಕಿನಿಂದ ಯಾವ ರೀತಿ ಆಕ್ರಮಣ ಮಾಡುತ್ತಾನೋ ತಿಳಿಯದ ಸಂಧಿಗ್ಧ ಸ್ಥಿತಿ. ಹಿಂದೆ ಹಿಂದೂ ರಾಜರ ಕೋಟೆಗಳಿಗೆ ಮುತ್ತಿಗೆ ಹಾಕಿ ಹಿಂಸಿಸುತ್ತಿದ್ದ ಮೊಘಲರ ತಂತ್ರವನ್ನು ಅವರಿಗೆ ತಿರುಗಿ ಪ್ರಯೋಗಿಸಿದ ಪ್ರತಾಪ! ತನ್ನ ರಾಜ್ಯದ ಪ್ರಜೆಗಳನ್ನು ಪರ್ವತ ಪ್ರದೇಶಗಳಿಗೆ ತೆರಳುವಂತೆ ಮಾಡಿದುದರಿಂದ ಮೊಘಲ್ ಸೈನ್ಯ ಅನ್ನ ನೀರು ಸಿಗದೆ ತಳಮಳಿಸಿತು. ದಿಲ್ಲಿಯಿಂದ ಬಂದ ಸಾಮಗ್ರಿಗಳಾಗಲೀ ಗುಜರಾತ್ ಬಂದರಿನಿಂದ ದೆಹಲಿಗೆ ಹೋಗುತ್ತಿದ್ದ ಅಮೂಲ್ಯ ವಸ್ತುಗಳೆಲ್ಲಾ ಪ್ರತಾಪನ ಗೆರಿಲ್ಲಾ ಸೈನ್ಯದ ವಶವಾಗುತ್ತಿತ್ತು.

                ಹೀಗೆ ದಶಕಗಳ ಪರ್ಯಂತ ಹೋರಾಡಿದರೂ ಪ್ರತಾಪನನ್ನು ಗೆಲ್ಲದೆ ವಿಫಲನಾದ "ಅಕ್ಬರ್ ದಿ ಗ್ರೇಟ್" ಪ್ರತಾಪನನ್ನು ಮಣಿಸುವ ವಿಚಾರವನ್ನೇ ಕೈಬಿಟ್ಟ. ಅಷ್ಟರಲ್ಲಾಗಲೇ ಕಳೆದುಕೊಂಡ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡು, ಅಂಬೇರನ್ನು ಜಯಿಸಿ ಮಾನಸಿಂಗನ ದರ್ಪವನ್ನು ಮುರಿದು ಚಾವಂದ್ ಅನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮೇವಾಡಕ್ಕೆ ಮತ್ತೆ ಅಧಿಕಾರವನ್ನು ಒದಗಿಸಿಕೊಟ್ಟಿದ್ದ ಪ್ರತಾಪ. ಹಾಳುಬಿದ್ದಿದ್ದ ಊರುಗಳಲ್ಲೆಲ್ಲಾ ಜನವಸತಿ ಆರಂಭವಾಯಿತು. ಪಾಳುಬಿದ್ದಿದ್ದ ಹೊಲಗಳು ನಳನಳಿಸಿದವು. ವ್ಯಾಪಾರ ವಹಿವಾಟುಗಳೆಲ್ಲಾ ಆರಂಭಗೊಂಡು ನಗರಗಳಲ್ಲಿ ಸಿರಿ ಸಂಪತ್ತು ನೆಲೆಗೊಂಡಿತು. ಕಲಾ ಪೋಷಕನಾಗಿ, ಭವ್ಯಕಟ್ಟಡಗಳ ನಿರ್ಮಾತೃವಾಗಿ, ದಕ್ಷ ಪ್ರಜಾಪರಿಪಾಲಕನಾಗಿ ತನ್ನ ಐವತ್ತೇಳನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ರಾಣಾಪ್ರತಾಪ. ಆದರೆ ಚಿತ್ತೋಡನ್ನು ಗೆಲ್ಲುವ ಅವನ ಕನಸು ಕನಸಾಗಿಯೇ ಉಳಿದಿತ್ತು. ಮರಣ ವಾರ್ತೆ ಕೇಳಿದಾಗ ಮತಾಂಧ ಅಕ್ಬರನೇ ಸ್ವತಃ ಕಣ್ಣೀರಿಟ್ಟಿದ್ದನೆಂದರೆ ರಾಣಾನ ಪ್ರತಾಪ ಎಷ್ಟಿದ್ದಿರಬಹುದು? ಯಾವ ರೀತಿಯಿಂದ ನೋಡಿದರೂ ಪ್ರತಾಪ ಈ ರಾಷ್ಟ್ರ ಪೂಜಿಸಬೇಕಾದ ಮಹಾಪುರುಷ. ಸ್ವಾತಂತ್ರ್ಯಾಕಾಂಕ್ಷೆ, ಸ್ವಾಭಿಮಾನ, ರಾಷ್ಟ್ರೀಯ ಭಾವನೆ, ಭಾರತದ ಆಶೋತ್ತರ-ಧ್ಯೇಯೋದ್ದೇಶಗಳಿಗೆ ಆತ ಪ್ರತೀಕ. ಪ್ರತಾಪನಿಗಿದ್ದ ಧೈರ್ಯ-ಸಾಹಸ-ಸ್ವಾಭಿಮಾನ-ಸ್ಥೈರ್ಯ-ಮುನ್ನುಗ್ಗುವ ಸ್ವಭಾವ-ಸಮರ ನೈಪುಣ್ಯತೆ-ದಕ್ಷತೆ ಉಳಿದ ಹಿಂದೂ ರಾಜರಲ್ಲಿ ತಿಲಾಂಶವಾದರೂ ಇದ್ದಿದ್ದರೆ ನಮ್ಮ ಚರಿತ್ರೆಯೇ ಬದಲಾಗುತ್ತಿತ್ತು. ವಿದೇಶೀಯ ರಕ್ತದಿಂದ ತನ್ನ ರಕ್ತ ಕಲುಷಿತಗೊಳ್ಳಬಾರದೆಂದೂ, ತನ್ನ ದೇಶ ಸ್ವತಂತ್ರವಾಗಿಯೇ ಇರಬೇಕೆಂದೂ, ಅದಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧನೆಂದು, ಮತ್ತಿವುಗಳಿಗೆಲ್ಲಾ ಬದ್ಧನಾಗಿ, ಅತೀವ ಕಷ್ಟಪರಂಪರೆಗಳನ್ನನುಭವಿಸಿ, ಒಂದು ಬೃಹತ್ ಸಾಮ್ರಾಜ್ಯವನ್ನು ಎದುರಿಗೆ ಹಾಕಿಕೊಂಡು ಅಜೇಯನಾಗುಳಿದ ರಾಣಾ ಪ್ರತಾಪ ದೇಶಪ್ರೇಮಿಗಳಿಗೆಲ್ಲಾ "ಗ್ರೇಟೇ" ಸರಿ. ಉಳಿದವರಿಗೆ ಮತಾಂಧ-ಕಚ್ಛೆಹರುಕ-ವಿದೇಶೀ ಆಕ್ರಮಣಕಾರನೇ ಗ್ರೇಟ್ ಆಗಿ ಕಂಡರೆ ಅಚ್ಚರಿಯೇನಿದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ