ಪುಟಗಳು

ಬುಧವಾರ, ಜುಲೈ 8, 2015

ಭಾರತದ ಅಂತಃಸತ್ವವನ್ನು ಜಗಕೆ ತೋರಿಸಿದ ಅಂತರ್ಮುಖಿ

ಭಾರತದ ಅಂತಃಸತ್ವವನ್ನು ಜಗಕೆ ತೋರಿಸಿದ ಅಂತರ್ಮುಖಿ

                 ನಮ್ಮನ್ನು ಲೋಕಕ್ಕೆ ಬಿಗಿದಿರುವ ಶರೀರ, ಮನಸ್ಸು, ಬುದ್ಧಿ, ಅಹಂಕಾರಗಳ ಆಳ್ವಿಕೆಯಿಂದ ಪಾರಾಗದೆ ನಮ್ಮ ನಿಜ ಸ್ವರೂಪವನ್ನು ನಾವು ಅರಿಯಲು ಸಾಧ್ಯವಿಲ್ಲ. ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ನಮಗೆ ಅಡ್ಡಿಯಾಗಿ ನಿಂತಿರುವ ತೆರೆಯೆಂದರೆ ಮನಸ್ಸು. ಎಲ್ಲಾ ಲೋಕ ಸಂಬಂಧಗಳ ಮೂಲ ಪ್ರೇರಣೆ, ಜನ್ಮಭೂಮಿ ಅದೇ. ಈ ಅಡ್ಡ ತೆರೆಯನ್ನು ನಾಶಮಾಡದೆ ಆತ್ಮದರ್ಶನ - ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ. ಹಾಗೆ ಮನಸ್ಸನ್ನು ನಾಶ ಮಾಡಬೇಕಾದರೆ ನಾವು ಅಂತರ್ಮುಖಿಗಳಾಗಬೇಕು. ಕೆಲವರು ಖಿನ್ನತೆಗೊಳಗಾದವರನ್ನು ಅಂತರ್ಮುಖಿಗಳೆನ್ನುತ್ತಾರೆ. ಆದರೆ ಖಿನ್ನತೆ ಬೇರೆ ಅಂತರ್ಮುಖತೆ ಬೇರೆ. ಖಿನ್ನತೆ ಒಂದು ರೀತಿಯ ಮಾನಸಿಕ ಕಾಯಿಲೆ. ಅಂತರ್ಮುಖತೆಯೆಂದರೆ ಮನಸ್ಸಿನಾಳಕ್ಕಿಳಿದು ಮುಂದೆ ಮನಸ್ಸನ್ನೇ ಇಲ್ಲವಾಗಿಸಿ ಆತ್ಮನೊಡನೆ ಅನುಸಂಧಾನ ಮಾಡಿಕೊಳ್ಳಲು ನೆರವಾಗುವ ಪ್ರಕ್ರಿಯೆ. "ನಾನು ಯಾರು" ಎಂದು ಧ್ಯಾನಿಸಿ ಅರಿಯುವ ಶುಕಮಾರ್ಗ. ಅದೇ ಮುಂದೆ ಸೀಮಾತೀತವಾದ ಮತ್ತು ಸಂಕಲ್ಪರಹಿತವಾದ ಅನಂತ ಅಸ್ತಿತ್ವದಲ್ಲಿ ಸೇರಿ ಹೋಗುವ ರಾಗ-ದ್ವೇಷ-ದುಃಖಗಳಿಂದ ಅಬಾಧಿತವಾದ "ಸತ್ಯ"ವನ್ನು ಹೊಂದಲು ನೆರವಾಗುತ್ತದೆ. ಖಿನ್ನತೆಗೊಳಗಾದವರಲ್ಲಿ ಲೌಕಿಕತೆಯೂ, ಅದರೆಡೆಗಿನ ಗೊಂದಲವೂ ಇರುತ್ತದೆ. ಅಂತರ್ಮುಖಿಯಾದವನಲ್ಲಿ ಅಲೌಕಿಕತೆಯ ಪ್ರಭೆ ಕಂಗೊಳಿಸುತ್ತಿರುತ್ತದೆ. ಖಿನ್ನತೆಯನ್ನು ಹೋಗಲಾಡಿಸಲು ಅಂತರ್ಮುಖತೆ ಸೂಕ್ತ ಪರಿಹಾರವೂ ಹೌದು.

                  ಭಾರತ ಅಗಣಿತ ನಿಧಿಗಳ ಆಗರ. ಅಮಿತ ಸಂಖ್ಯೆಯ ಋಷಿಗಳು, ಯೋಗಿಗಳು, ಸಂತರು, ಜ್ಞಾನಿಗಳಿಗೆ ಜನ್ಮ ನೀಡಿದ ಪುಣ್ಯಭೂಮಿ. ಅಂತರ್ಮುಖಿಗಳಾಗಿ ಈ ದೇಶದ ಅಂತಃಸತ್ವವನ್ನು ಬೆಳಗಿದ ಅಸಂಖ್ಯ ಜ್ಯೋತಿಸ್ಥಂಭಗಳನ್ನು ಜಗತ್ತು ಕಂಡಿದೆ. ಕೆಲವರು ಹೊರಜಗತ್ತಿಗೆ ಕಾಣದೆ ಮರೆಯಲ್ಲಿಯೇ ಸಾಗಿದರೆ ಇನ್ನು ಕೆಲವರು ಸಾಮಾನ್ಯ ಜೀವಿಗಳಿಗೂ ತಮ್ಮ ಎತ್ತರಕ್ಕೆ ಏರುವ ದಾರಿ ತೋರಿದರು.  ಅಂತರ್ಮುಖಿಗಳಲ್ಲೂ ಕೆಲವರು ಬ್ರಹ್ಮಜ್ಞಾನದ ಔನ್ನತ್ಯಕ್ಕೇರಿ ಮಹರ್ಷಿಗಳೆನ್ನಿಸಿಕೊಂಡರು. ಅಂತಹ ಮಹರ್ಷಿಗಳ ಕೊಂಡಿಯಲ್ಲಿ ಬಹುಷಃ ಕೊನೆಯವರೇ ಭಗವಾನ್ ರಮಣರು. ಅಂತರ್ಮುಖಿಯಾಗಿ ಆತ್ಮಜ್ಞಾನವನ್ನು ಸ್ಪುರಿಸಿ ಅನುಭವಿಸಿ ಅರಿತ ಮಹರ್ಷಿ ಅವರು! ಅರುಣಾಚಲದ ಆತ್ಮಜ್ಯೋತಿಯಾಗಿ ಜಗವ ಬೆಳಗಿದ ಬ್ರಹ್ಮಜ್ಞಾನಿ. ತಮ್ಮ ಉಪದೇಶಕ್ಕೆ ತಾವೇ ನಿದರ್ಶನರಾಗಿ ತಮ್ಮ ಬಾಳಿನಲ್ಲಿಯೇ ಪ್ರತಿಪಾದಿಸಿ ತೋರಿದ ಜ್ಞಾನಸೂರ್ಯ!

                   ಬಾಲ್ಯದಲ್ಲಿ ಮನೆಗೆ ಬಂದ ನೆಂಟರೊಬ್ಬರಿಂದ ಕೇಳಿದ ಅರುಣಾಚಲ ಎಂಬ ಪದ ರಮಣರ ಹೃದಯದಲ್ಲೊಂದು ಅನುಭೂತಿಯನ್ನು ಸೃಷ್ಟಿಸಿ ಮನಸ್ಸಿನಾಳದಲ್ಲಿ ಸ್ಥಾಪಿತವಾಯಿತು. ಪೆರಿಯ ಪುರಾಣದಲ್ಲಿನ ಅರವತ್ತಮೂರು ಶಿವಭಕ್ತರ ಚರಿತ್ರೆಯನ್ನು ಓದಿದ ಮೇಲೆ ಭಗವಂತನನ್ನು ಕುರಿತ ಆ ಶಿವಭಕ್ತರ ದಿವ್ಯ ಉನ್ಮಾದ, ತ್ಯಾಗ ಜೀವನದಿಂದ ಲಭಿಸುವ ದಿವ್ಯಾನುಭೂತಿಯನ್ನು ನೆನೆ ನೆನೆದು ಹೃದಯ ಪರಮಾನಂದದಿಂದ ತುಂಬಿ ಹೋಯಿತು. ದಿವ್ಯ ಪ್ರಜ್ಞೆಯ ಹೊಸ ಪ್ರವಾಹವೊಂದು ಅವರಲ್ಲಿ ಎಚ್ಚರಗೊಂಡು ಆತ್ಮ ಪರಮಾನಂದದ ಅನುಭೂತಿಯನ್ನು ಅನುಭವಿಸಿತು. ಅಸಲಿಗೆ ಈ ಅರಿವೇನು ರಾಶಿ ರಾಶಿ ಗ್ರಂಥಗಳ ಅಧ್ಯಯನದಿಂದ ಉಂಟಾದುದಲ್ಲ. ಸಂತತ ಪೂಜೆ ಪುನಸ್ಕಾರಗಳ ಫಲವೋ, ಸತತ ಜಪದ ಅವಿಷ್ಕಾರವೋ ಆಗಿರಲಿಲ್ಲ. ಪೆರಿಯ ಪುರಾಣ, ತೇವರಮ್'ನ ಕೆಲ ಭಾಗಗಳನ್ನು ಬಿಟ್ಟರೆ ಬೇರೇನನ್ನೂ ಅವರು ಓದಿರಲಿಲ್ಲ. ಹೆಚ್ಚೆಂದರೆ ನಿತ್ಯಾಹ್ನಿಕವನ್ನಷ್ಟೇ ಮಾಡುತ್ತಿದ್ದ, ದೇವಾಲಯಗಳಿಗೆ ಹೋಗಿಬರುತ್ತಿದ್ದ ಅವರಿಗೆ ಈ ಅರಿವಿನ ವಿಚಾರ ಸರಣಿಯಾಗಿ ಒಂದರ ಮೇಲೊಂದರಂತೆ ಬರಲಿಲ್ಲ. ಅಥವಾ ಅವರೇನು ನಿರಾಶಾವಾದಿಯೂ ಆಗಿರಲಿಲ್ಲ. ಅತೀವ ದುಃಖದ ಪರಿಣಾಮವೂ ಇದಾಗಿರಲಿಲ್ಲ. ಕರ್ಮಬಂಧನಗಳಿಂದ ಕಳಚಿಕೊಳ್ಳಬೇಕೆಂಬ, ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಯಾವ ಅಭಿಲಾಶೆಯೂ ಅವರಿಗಿರಲಿಲ್ಲ. ಜೀವನದ ಬಗ್ಗೆ ಅರಿತುಕೊಳ್ಳುವ ಪ್ರಾಯದಲ್ಲಿ ಈ ಅರಿವು ಝಗ್ಗನೆದ್ದು ಪ್ರಕಾಶಿಸಿತು. ಚಿಕ್ಕಪ್ಪನ ಮನೆಯ ಮಹಡಿಯ ಮೇಲೆ ಕುಳಿತಿದ್ದಾಗ ಉಂಟಾದ ಸಾವಿನ ಭೀಕರ ಅರಿವು ಅಸ್ವಸ್ಥತೆಯ ಯಾವ ಕುರುಹೂ ಇಲ್ಲದ ವೇಳೆಯಲ್ಲೊದಗಿತ್ತು. ಈ ವಿಚಾರ ಅವನನ್ನು ಧೃತಿಗೆಡಿಸುವುದರ ಬದಲು ಅಂತರ್ಮುಖಿಯನ್ನಾಗಿಸಿ ವಿಚಾರಗಳ ಮಹಾಸಾಗರವೇ ಹರಿಯಲಾರಂಭಿಸಿತು. ತನ್ನನ್ನು ಹೆಣವೆಂದೇ ಭಾವಿಸಿದಾಗ ಜಡ ದೇಹದಿಂದ ಭಿನ್ನವಾದ ಶಕ್ತಿಯೊಂದು ಸ್ಪುರಿಸುತ್ತಿರುವ ಅನುಭವವಾಯಿತು. ನಾನು...ನಾನು...ಎನ್ನುವ ಆ ಅರಿವು ಈ ದೇಹವೇನೋ ಸಾಯುತ್ತಿದೆ, "ನಾನು" ಇನ್ನೂ ಇದ್ದೇನೆ. ದೇಹವನ್ನು ಮೀರಿ "ನಾನು" ನಿಂತಿದ್ದೇನೆ, ಈ ಸಾವಿಗೂ "ನಾನು" ಆತೀತನಾಗಿದ್ದೇನೆ ಎನ್ನುವ ಅನುಭವವನ್ನು ಕೊಟ್ಟಿತು.

                   ಈ ಅನುಭವ ಅವರು ತಾವಾಗಿಯೇ ಬಯಸಿ ತಂದುಕೊಂಡದ್ದಾಗಿರಲಿಲ್ಲ. ತಾನಾಗಿಯೇ ಘಟಿಸಿತ್ತು. ಆ ಅನುಭವದ ಬಳಿಕ ಶರೀರ ಯಾವುದೇ ಕ್ರಿಯೆಯಲ್ಲಿ ತೊಡಗಿರಲಿ "ನಾನು" ಎನ್ನುವ ಆತ್ಮಭಾವವೇ ಅವೆಲ್ಲದುದರ ಕೇಂದ್ರವಾಗಿರುತ್ತಿತ್ತು. ಅವರ ಜೀವನ ರೀತಿಯೇ ಬದಲಾಯಿತು. ಅವರ ಅಂತರಂಗ ಲೋಕವ್ಯವಹಾರಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿತು. ಬಾಹ್ಯ ವ್ಯವಹಾರ ನಿರ್ವಿಕಾರ ಭಾವದಿಂದ ಸಾಗತೊಡಗಿತು. ಮೀನಾಕ್ಷಿ ದೇವಾಲಯಕ್ಕೆ ಹೋದರಂತೂ ಮೀನಾಕ್ಷಿಯ ಅಥವಾ ನಟರಾಜನ ಅಥವಾ ಅರವತ್ತಮೂರು ಶಿವಭಕ್ತ ಸಂತರುಗಳ ವಿಗ್ರಹಗಳ ಮುಂದೆ ಭಾವಪರವಶರಾಗಿ ನಿಂತಾಗ ದಳದಳನೆ ಕಣ್ಣೀರು ಹರಿಯುತ್ತಿತ್ತು. ಅದು ಯಾವುದೇ ಸುಖ ಅಥವಾ ದುಃಖದ ಸಂಕೇತವಾಗಿರಲಿಲ್ಲ. ಆತ್ಮವು ಅಪರಿಮಿತ ಆಳಕ್ಕೆ ಹರಿಯುತ್ತಿತ್ತು. ಈ ಅನುಭವ ಅಲ್ಪಕಾಲ ಪರಮಾನಂದದ ಸ್ಥಿತಿಗೆ ತಲುಪಿ ಮತ್ತೆ ಮನಸ್ಸಿನ ನೆಲೆಗೆ ವಾಪಸಾಗುವ ಯೋಗಿಯ ಅವಸ್ಥೆಯಾಗಿರಲಿಲ್ಲ. ಅಹಂಕಾರ ನಾಶವಾಗಿತ್ತು. ಮನಸ್ಸು ನಿರ್ನಾಮವಾಗಿತ್ತು. ಕ್ಷಣಿಕವಾದ "ನಾನು" ಅಳಿದು ಹೋಗಿತ್ತು. ಶಾಶ್ವತವಾದ "ನಾನು" ಪುಟಿದು ನಿಂತಿತ್ತು. ನಿರಂತರವಾದ ಅಖಂಡ ಆತ್ಮಪ್ರಜ್ಞೆಯಲ್ಲಿ ಅವರು ಆಗಲೇ ಸೇರಿ ಹೋಗಿದ್ದರು. ಆತ್ಮಾನಂದದ ಅನುಭವದಲ್ಲಿರುತ್ತಲೇ ಅವರ ಬಾಹ್ಯಜೀವನ ಸಹಜವಾಗಿ, ನಿರಾಯಾಸವಾಗಿ ನಡೆಯುತ್ತಿತ್ತು.

                 ಮನೆಯಲ್ಲಿ ಧ್ಯಾನ ಮಗ್ನರಾಗಿ ಕುಳಿತಿದ್ದಾಗ ನಿನ್ನಂಥವನಿಗೆ ಲೌಕಿಕ ಜೀವನ ಅನುಭವಿಸುವ ಹಕ್ಕಿಲ್ಲವೆಂದು ಅಣ್ಣ ಹೀಗಳೆದಾಗ ಹಿಂದೊಮ್ಮೆ ಕೇಳಿದ್ದ "ಅರುಣಾಚಲ" ಕೈ ಬೀಸಿ ಕರೆಯಿತು. "ಅವನ"ನ್ನು ಹುಡುಕಲು ಹೊರಟಿದ್ದೇನೆ, "ಇದ"ನ್ನು ಹುಡುಕುವ ಪ್ರಯತ್ನ ಮಾಡಬಾರದೆಂದು ಪತ್ರ ಬರೆದು ರೈಲು ಹತ್ತಿ ಹೊರಟು ಬಂದು ನಿಂತದ್ದು ಅರುಣಾಚಲೇಶ್ವರನ ದೇವಾಲಯಕ್ಕೆ. ದೇವಾಲಯದಲ್ಲಿ ಅರುಣಾಚಲೇಶ್ವರನನ್ನು ಬಿಟ್ಟರೆ ಯಾರೂ ಇರಲಿಲ್ಲ. ಗರ್ಭಗುಡಿಯ ಬಾಗಿಲು ತೆರೆದಿತ್ತು. ನೇರ ಗರ್ಭಗುಡಿಯೊಳಕ್ಕೆ ಕಾಲಿಟ್ಟು ಅರುಣಾಚಲೇಶ್ವರನ ಎದುರು ಭಾವಪರವಶರಾಗಿ ನಿಂತರು. ತಂದೆ ಮಕ್ಕಳ ಮಿಲನವಾಗಿತ್ತು. ಸಿದ್ಧಿಗೆ ತಾರ್ಕಿಕ-ತಾತ್ವಿಕ ನೆಲೆ ಒದಗಿತ್ತು. ದೇವಾಲಯದಿಂದ ಹೊರಬಂದು ಕ್ಷೌರ ಮುಗಿಸಿ ಜನಿವಾರ, ಬಟ್ಟೆ, ತಿಂಡಿಪೊಟ್ಟಣಗಳನ್ನು ಕಿತ್ತೆಸೆದು ಸ್ನಾನವಾದರೂ ಏಕೆ ಬೇಕು ಎನ್ನುವಾಗ ಮಂಗಳಕರ ಎನ್ನುವಂತೆ ವರ್ಷಧಾರೆಯೇ ಸುರಿಯಿತು. ಸಾವಿರ ಕಂಬದ ಪಟಾಂಗಣದಲ್ಲಿ ಇಹದ ಇರವನ್ನು ಮರೆತು "ಇರವಿ"ನ ಪರಮಾನಂದದಲ್ಲಿ, ದಿವ್ಯ ಸಮಾಧಿಯಲ್ಲಿ ಮುಳುಗಿ ಹೋದರಾತ!

                ಬ್ರಾಹ್ಮಣಸ್ವಾಮಿಯ ಸಮಾಧಿ ಸ್ಥಿತಿಯ ಪರಿ ಯಾವ ರೀತಿ ಇರುತ್ತಿತ್ತೆಂದರೆ ಕುಳಿತಿದ್ದ ಸ್ಥಳದಿಂದ ಸ್ವತಃ ಚಲಿಸುತ್ತಿದ್ದುದು ಅವರಿಗೇ ತಿಳಿಯುತ್ತಿರಲಿಲ್ಲ. ಕೆಲವು ಸಲ ಅವರ ಮೇಲಿನ ಭಕ್ತಿ, ಗೌರವಗಳಿಂದ ಜನರೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಎತ್ತಿಕೊಂಡು ಹೋಗಿ ಬಿಡುತ್ತಿದ್ದರು. ಅದೂ ಅವರಿಗೆ ತಿಳಿಯುತ್ತಿರಲಿಲ್ಲ. ಭಕ್ತರೆಲ್ಲಾ ಅವರ ಎದುರು ಫಲಾಹಾರಗಳನ್ನು ತಂದಿಟ್ಟರೂ ಅವರದನ್ನು ಸ್ವೀಕರಿಸುವುದೂ ಅಪರೂಪವಾಗಿತ್ತು. ಇರುವೆಗಳೆಲ್ಲಾ ಅವರ ದೇಹವನ್ನು ಮುತ್ತಿಕೊಳ್ಳದಂತೆ ಒಂದು ಹರಿವಾಣದಲ್ಲಿ ನೀರನ್ನಿರಿಸಿ ಅವರನ್ನು ಅದರಲ್ಲಿ ಕುಳ್ಳಿರಿಸಲಾಯಿತು. ಜನ ತಮ್ಮ ಆಶೋತ್ತರಗಳ ಪೂರೈಕೆಗಾಗಿ ಸ್ವಾಮಿಯ ಪಾದ ಮುಟ್ಟಿ ನಮಸ್ಕರಿಸುವುದನ್ನು ತಡೆಯಲು ಅವರ ಸುತ್ತ ಬೇಲಿ ಕಟ್ಟಲಾಯಿತು! ಮುಂದೆ ಅರುಣಾಚಲಗಿರಿಯ ಬೇರೆ ಬೇರೆ ಕಡೆ ಅವರು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು.

                   ದೇಶ ವಿದೇಶಗಳನ್ನೇ ರಮಣರು ಸೆಳೆದರು. ಅವರನ್ನು ಹುಡುಕಿಕೊಂಡು ಜಗತ್ತಿನ ಮೂಲೆ ಮೂಲೆಗಳಿಂದ ಭಕ್ತರು ಬಂದರು. ರಾಮಭಕ್ತ ಶೇಷಯ್ಯರ್, ತತ್ವ ಶಾಸ್ತ್ರಜ್ಞ ಶಿವಪ್ರಕಾಶಂ ಪಿಳ್ಳೈ, ಅಪ್ರತಿಮ ವಿದ್ವಾಂಸ ಕಾವ್ಯಕಂಠ ಗಣಪತಿ ಮುನಿ, ಗಣಪತಿಯ ಆರಾಧಕ ಪಳನೀಸ್ವಾಮೀ, ಪೊಲೀಸ್ ವೃತ್ತಿಯಲ್ಲಿದ್ದ ಇಂಗ್ಲೆಂಡಿನ ಹಂಫ್ರೀಸ್, "ಶರಣಾಗತಿ ತಾತ" ಎಂಬ ಹೆಸರು ಪಡೆದಿದ್ದ ರಾಮಸ್ವಾಮಿ ಅಯ್ಯರ್, ರಾಘವಚಾರಿಯಾರ್, ಶೃಂಗೇರಿಯ ಶಾಸ್ತ್ರಿಗಳು, ನಾರಾಯಣ ಗುರುಗಳು ರಮಣರ ಅಲೌಕಿಕ ದರ್ಶನವನ್ನು ಅನುಭವಿಸಿದ ಪುಣ್ಯಜೀವಿಗಳು. ಪಾಲ್ ಬ್ರಂಟನ್ನನಂತೂ ಮಹರ್ಷಿಗಳ ಪದತಲದಿಂದ ಸ್ವರ್ಣ ಫಲಗಳನ್ನು ಬುಟ್ಟಿ ತುಂಬಾ ತುಂಬಿಕೊಂಡಿದ್ದೇನೆ ಎಂದಿದ್ದು ರಮಣರ ಮಹಾನತೆಗೆ ಸಾಕ್ಷಿ. ಪರಮ ಭಕ್ತೆ ಎಚ್ಚಮ್ಮಾಳ್, ದೇವರಾಜ ಮೊದಲಿಯಾರ್, ಕವಿ ಮುರುಗನಾರ್, ಸ್ವಾಮಿನಾಥನ್, ಪಾರ್ಸಿ ಮಹಿಳೆ ಫಿರೋಜಾ, ಕುಂಜುಸ್ವಾಮಿ, ನಂಬಿಯಾರ್, ಛಗನ್ ಲಾಲ್, ಫ್ರೀಡ್ ಮ್ಯಾನ್, ನೌಲಿನ್ ನೋಯೆ, ಸೂರಿ ನಾಗಮ್ಮ, ಮೇಜರ್ ಚ್ಯಾಡ್ ವಿಕ್, ಎಸ್.ಎಸ್.ಕೋಹೆನ್, ಆರ್ಥರ್ ಆಸ್ಬೋರ್ನ್, ಡೇವಿಡ್ ಗಾಡ್ ಮನ್ ಹೀಗೆ ಪ್ರಪಂಚದ ವಿವಿಧ ಭಾಗಗಳ, ವಿವಿಧ ವೃತ್ತಿಗಳ, ವಿವಿಧ ವರ್ಗಗಳ ಜನರು ಈ ಮಹಾಜ್ಞಾನಿಯ ಮುಂದೆ ಮಂಡಿಯೂರಿದರು. ಕೇವಲ ಮನುಷ್ಯ ಜೀವಿಗಳು ಮಾತ್ರವಲ್ಲ ಪಶುಪಕ್ಷಿಗಳೂ ರಮಣರನ್ನು ಅರಸಿ ಬಂದು ಸಾಕ್ಷಾತ್ಕಾರ ಪಡೆದುಕೊಂಡವು. ಕರುವಾಗಿದ್ದಿನಿಂದಲೇ ಪ್ರತಿನಿತ್ಯ ಗಿರಿಹತ್ತಿ ರಮಣರ ಪಾದಕಮಲಗಳಲ್ಲಿ ತನ್ನ ಮೊಗವನ್ನಿಟ್ಟು ನಮಸ್ಕರಿಸಿ ತೆರಳುತ್ತಿದ್ದು, ಕೊನೆಗೊಮ್ಮೆ ತನ್ನ ಮೂರನೇ ಪ್ರಸವದ ಸಮಯದಲ್ಲಿ ಆಶ್ರಮದಿಂದ ಹೋಗಲೊಪ್ಪದೇ ಅಲ್ಲೇ ನೆಲೆ ನಿಂತ ಹಸು ಲಕ್ಷ್ಮಿ, ಕೋತಿಗಳು, ಹಾವು-ಮುಂಗುಸಿಗಳು, ಜಿಂಕೆ, ನವಿಲು, ಅಳಿಲು, ಕುರಿ, ಪಾರಿವಾಳ, ಕಾಗೆ, ನಾಯಿಗಳು ಹೀಗೆ ಹತ್ತು ಹಲವು ಜೀವಿಗಳು ಜ್ಞಾನವನ್ನರಸಿ ಬಂದವು. ಭಗವಾನರು ಈ ಪ್ರಾಣಿಗಳೊಡನೆ ಆಡುತ್ತಾ ವನಭೋಜನವನ್ನೂ ನಡೆಸುತ್ತಿದ್ದರು. ರಮಣಾಶ್ರಮದಲ್ಲಿ ಹಸು ಲಕ್ಷ್ಮಿ, ಕೋತಿ, ನಾಯಿ, ಜಿಂಕೆ, ಕಾಗೆಗಳ ಸಮಾಧಿಗಳೂ ಇವೆ. ವಿರೂಪಾಕ್ಷ ಗುಹೆ, ಸ್ಕಂದಾಶ್ರಮದಲ್ಲಿದ್ದಾಗ ಗಿರಿಯ ಮೇಲೆ ಹುಲ್ಲು ಕೊಯ್ಯಲೆಂದು ಬರುತ್ತಿದ್ದ ದೀನರಿಗೆ ಅನ್ನಾಹಾರವನ್ನು ಸ್ವತಃ ಮಾಡಿ ಕೊಡುತ್ತಿದ್ದರು. ಹರಿಜನ-ಬಡವ, ಆಬಾಲವೃದ್ಧರಾದಿಯಾಗಿ ಶರಣು ಬಂದವರೆಲ್ಲರಿಗೂ ಅನುಗ್ರಹಿಸಿದರು. ತಮ್ಮ ತಾಯಿ ಸಾಯುವ ಗಳಿಗೆಯಲ್ಲಿ ಅವಳೊಡನಿದ್ದು ಆಕೆಯ ಮನಸ್ಸನ್ನು ನಿಶ್ಚಲಗೊಳಿಸಿ ಅದು ಆತ್ಮನಲ್ಲಿ ಐಕ್ಯವಾಗುವಂತೆ ಮಾಡಿ ಮಹಾಸಮಾಧಿಯಾಗಿ ಪರಿವರ್ತಿಸಿದರು.ತನ್ನದೇ ಇನ್ನೊಂದು ರೂಪವಾಗಿ ಶೇಷಾದ್ರಿ ಸ್ವಾಮಿಗಳಾಗಿ ಅರುಣಾಚಲದ ತಪ್ಪಲಲ್ಲಿ ನೆಲೆನಿಂತು ಭಕ್ತರನ್ನು ಆಶೀರ್ವದಿಸಿದರು!

                ತಮ್ಮ ಜನ್ಮಜಯಂತಿಯನ್ನು ಆಚರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಯಾಕೆಂದು ಕೇಳಿದವರಿಗೆ "ನಿನ್ನ ಆತ್ಮ ಹುಟ್ಟಿದ್ದು ಎಂದು" ಎನ್ನುವುದನ್ನು ಮೊದಲು ಅರಿತುಕೋ ಅನ್ನುತ್ತಿದ್ದರು. ಎಲ್ಲಾ ಶಬ್ಧಗಳಿಗೆ ಮೀರಿದ ವಿಷಯವನ್ನು ಯಾವ ಶಬ್ಧಗಳೂ ಹೇಳಲಾರವು. ಮನಸ್ಸಿಗೆ ಮೀರಿದ ಸತ್ಯವನ್ನು ಯಾವ ಮನಸ್ಸೂ ಗ್ರಹಿಸಲಾರದು. ಮೌನದಿಂದಲೇ ಮಾತು ಉದಯವಾಗಿದೆ, ಮನಸ್ಸಿನ ಅಹಂಕಾರವೇ ಮಾತಿಗೆ ಕಾರಣ. ಹೀಗಾಗಿ ಮೌನವು ಮಾತಿಗೆ ಮೀರಿದ ಶಕ್ತಿಯುಳ್ಳದ್ದು. ಭಗವಾನರು ಮೌನದ ಮೂಲಕವೇ ಒಂದು ವಿಚಾರವನ್ನು ಅಥವಾ ಅನುಭವವನ್ನು ವ್ಯಕ್ತಿಗಳಿಗೆ ದಾಟಿಸಬಲ್ಲವರಾಗಿದ್ದರು. ಜ್ಞಾನಾಕಾಂಕ್ಷಿಗಳಾಗಿ ಬಂದವರಿಗೆ ನೀನು ಯಾರು ಎನ್ನುವುದನ್ನು ನಿನ್ನಲ್ಲೇ ಕೇಳಿಕೋ, ಅರಿತುಕೋ ಎನ್ನುತ್ತಿದ್ದರು. ಮನಸ್ಸು ಹೊರಮುಖವಾದಾಗ ಲೌಕಿಕತೆ ಕಾಣುತ್ತದೆ. ಅದನ್ನೇ ಒಳಮುಖವಾಗಿರಿಸಿದರೆ ಅದು ಅಲೌಕಿಕವಾದ ಆತ್ಮನೇ ಆಗಿದೆ. ಅದನ್ನು ಸಾಕ್ಷಾತ್ಕರಿಸಿಕೊಂಡಾಗಲೂ ಜಪವೂ ಅಪ್ರಯತ್ನವಾಗಿ ನಡೆಯುತ್ತಿರುತ್ತದೆ. ಯಾಕೆಂದರೆ ಅದು ಸತ್ಯ ಸ್ವರೂಪ. ಹೀಗೆ ಒಂದು ಸಮಯದಲ್ಲಿ ಸಾಧನವಾಗಿದ್ದದ್ದು ಮುಂದೊಂದು ದಿನ ಸಾಧ್ಯವಾಗಿ ಪರಿಣಮಿಸುತ್ತದೆ ಎಂದಿದ್ದಾರೆ ರಮಣರು. ತಮ್ಮ ಶರೀರದ ಬಗ್ಗೆ ನಿರ್ಲಕ್ಷ್ಯ ತಾಳಿದ್ದ ಭಗವಾನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ನುಡಿದ ಭಕ್ತರೊಬ್ಬರಿಗೆ "ಒಂದು ಗುಡಿಸಲಿನೊಳಗೆ ಅದು ಎಷ್ಟು ಗಟ್ಟಿಮುಟ್ಟಾಗಿದ್ದರೂ, ಆನೆಯೊಂದನ್ನು ಕಟ್ಟಿಹಾಕಿದರೆ ಗುಡಿಸಲಿನ ಸ್ಥಿತಿ ಏನಾಗಬಹುದು? ಹಾಗಾಗಿ ಆನೆಯ ಬಗ್ಗೆ ಚಿಂತಿಸಬೇಕೇ ಹೊರತು ಗುಡಿಸಲಿನ ಬಗೆಗಲ್ಲ" ಎನ್ನುತ್ತಾ ದೇಹವೆಂಬುದು ಊಟವಾದ ಮೇಲೆ ಬಿಸುಡುವ ಬಾಳೆ ಎಲೆ, ಆತ್ಮದ ವಿಚಾರ ಮಾಡಿ ಎಂದು ಸೂಚ್ಯವಾಗಿ ವಿವರಿಸಿದ್ದಾರೆ.

                   ಮಹರ್ಷಿಗಳಿಂದ ತನ್ನ ಪ್ರಶ್ನೆಗಳಿಗೆ ಪಡೆದ ಉತ್ತರವನ್ನು ಟಿಪ್ಪಣಿಗಳ ರೂಪದಲ್ಲಿ ಗಂಭೀರಂ ಶೇಷಯ್ಯರ್ ಬರೆದಿದ್ದ ವಿಚಾರಗಳನ್ನು ಆಧರಿಸಿ "ಆತ್ಮ ವಿಚಾರ" ಎಂಬ ಗ್ರಂಥ ರೂಪುಗೊಂಡಿತು. ಭಕ್ತ ಶಿವಪ್ರಕಾಶಂ ಪಿಳ್ಳೈ ಕೇಳಿದ "ನಾನು ಯಾರು" ಎಂಬ ಪ್ರಶ್ನೆಯೇ ರಮಣರ ಅತ್ಯಂತ ಜನಪ್ರಿಯ ಕೃತಿ "ನಾನು ಯಾರು?" ಎನ್ನುವುದಕ್ಕೆ ವೇದಿಕೆಯಾಯಿತು. ಇದೇ ಶಿವಪ್ರಕಾಶಂ ಪಿಳ್ಳೈಯೇ ಮಹರ್ಷಿಗಳ ಅಲೌಕಿಕ ದರ್ಶನವನ್ನು ಮೊಟ್ಟಮೊದಲು ಪಡೆದ ಭಾಗ್ಯವಂತ. ಮಹರ್ಷಿಗಳ ಬಳಿಯಲ್ಲಿದ್ದು ಇಪ್ಪತ್ತೊಂದು ವರ್ಷಗಳ ಕಾಲ ಆತನಿಗುಂಟಾದ ಅನುಭವ "ರಮಣ ಚರಿತ ಅಹವಾಲ್" ಎಂಬ ಪದ್ಯರೂಪದಲ್ಲಿ ಹರಿದು ಬಂತು. ಕಾವ್ಯಕಂಠ ಗಣಪತಿ ಶಾಸ್ತ್ರಿಗಳಂತೂ "ರಮಣ ಗೀತಾ" ಎಂಬ ಸಂಸ್ಕೃತ ಗ್ರಂಥ ರಚಿಸಿದ್ದಲ್ಲದೇ ಉಜ್ವಲ ವ್ಯಕ್ತಿತ್ವದ ಈ ಮಹಾಜ್ಞಾನಿಯನ್ನು ಗುರು, ದೈವವೆಂದು ಗುರುತಿಸಿ ಆರಾಧಿಸಿ ವೆಂಕಟರಾಮನ್ ಎಂಬ ಅವರ ಹೆಸರನ್ನು "ಭಗವಾನ್ ರಮಣ"ರೆಂದು ಪರಿವರ್ತಿಸಿದರಲ್ಲದೆ ಜ್ಞಾನ ಸೋಪಾನಗಳ ತುತ್ತತುದಿಗೇರಿದ್ದ ಮಹರ್ಷಿ ಎಂದು ವರ್ಣಿಸಿದರು. ಮುಂದೆ ರಮಣರನ್ನು ಕುರಿತ ಅನೇಕ ಕೃತಿಗಳು ಹೊರ ಬಂದವು. ಇವೇ ಅಲ್ಲದೇ ಸ್ವತಃ ಮಹರ್ಷಿಗಳೇ ಬರೆದ, ತಮ್ಮ ಭಕ್ತರ-ಶಿಷ್ಯರ ಬೇಡಿಕೆಗಳನ್ನು ಪೂರೈಸಲು ಬರೆದ ಅನೇಕ ಕೃತಿಗಳಿವೆ.

                ಶುಕ ಮಾರ್ಗದಿ ಆತ್ಮ ಸಾಕ್ಷಾತ್ಕರಿಸಿಕೊಂಡ ಈ ಪ್ರಖರ ಸೂರ್ಯನ ಕಿರಣ ಭೂಮಂಡಲದ ಇಂಚು ಇಂಚಿಗೂ ಮುಟ್ಟಿತು. ಜಗತ್ತಿನ ಎಲ್ಲಾ ಭಾಗಗಳಿಂದ ಜಾತಿ, ಮತ, ಪಂಥ, ಲಿಂಗ, ಪ್ರಾಯ, ಬಡವ ಬಲ್ಲಿದ ಮನುಷ್ಯ-ಪ್ರಾಣಿ ಎಂಬ ಭೇದಗಳಿಲ್ಲದೆ ಸಹಸ್ರಾರು ಜನರು ಆ ಕಿರಣದ ಜಾಡು ಹುಡುಕುತ್ತಾ ಬಂದು ಸನ್ನಿಧಿಯಲ್ಲಿ ಶಾಂತಿ, ನೆಮ್ಮದಿಯನ್ನು ಅನುಭವಿಸಿದರು, ಆತ್ಮಜ್ಞಾನ ಗಳಿಸುವತ್ತ ಹೊರಳಿದರು, ಜ್ಞಾನದ ಸ್ವರ್ಣಫಲಗಳನ್ನೇ ಪಡೆದುಕೊಂಡರು. ಆತನನ್ನು ಭಗವಾನನೆಂದೂ, ಮಹರ್ಷಿಯೆಂದೂ ಆರಾಧಿಸಿದರು. ಹಾಗಂತ ಆತನೇನು ಮಠ ಕಟ್ಟಿಕೊಳ್ಳಲಿಲ್ಲ. ಪೀಠಾಧಿಪತಿಯೆಂದು ಘೋಷಿಸಿಕೊಳ್ಳಲಿಲ್ಲ. ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಆತನಿಂದ ಜರಗಿದವು. ಅವನ್ನೇನು ತನ್ನದೆಂದು ಹೇಳಲಿಲ್ಲ. ಸಹಜ ಪ್ರಾಕೃತಿಕ ಕ್ರಿಯೆಯೆಂಬಂತೆ ಬದಿಗೆ ಸರಿಸಿದ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ವಿವಿಧ ಮತ-ಪಂಥಗಳ ಜನರು ಬಂದರೂ ಅವರಿಗೆ ಜ್ಞಾನದ ಸವಿಯನ್ನುಣಬಡಿಸಿದ. ಅವರನ್ನೇನೂ ಮತಾಂತರ ಮಾಡಲಿಲ್ಲ. ಅವರ ಬಳಿ ಹೋದವರು ತಮ್ಮ ಮತವನ್ನೇನು ಬದಲಾಯಿಸಲಿಲ್ಲ. ಆ ರೀತಿ ಮತಾಂತರ ಮಾಡುತ್ತಿದ್ದರೆ ಇಂದು ಜಗತ್ತಿನಲ್ಲಿ ಹಿಂದೂಗಳೇ ತುಂಬಿಕೊಂಡಿರುತ್ತಿದ್ದರೇನೋ! ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದ. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದ. ಮೌನವಾಗಿಯೇ ಜಗವನ್ನಾಳಿದ. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದ. ದಕ್ಷಿಣಾಮೂರ್ತಿಯ ಅಪರಾವತಾರವೆನಿಸಿದ. ಈಗಲೂ ದೇಶವಿದೇಶಗಳಿಂದ ರಮಣಾಶ್ರಮ-ಅರುಣಾಚಲ ಜನರನ್ನು ಸೆಳೆಯುತ್ತಲೇ ಇದೆ. ಇಂದಿಗೂ ಅರುಣಾಚಲದ ತುತ್ತತುದಿಗೆ ಪ್ರಾಣಿಗಳು ಹೋಗಿ ಧ್ಯಾನಿಸುತ್ತವೆ. ರಮಣಾಶ್ರಮದಲ್ಲಿ ಎಲ್ಲಿಂದಲೋ ಬಂದ ನಾಯಿ, ಕೋತಿ, ಹಸು, ಅಳಿಲು,...ವಿವಿಧ ಪಕ್ಷಿಗಳು ಧ್ಯಾನದಲ್ಲಿ ತೊಡಗುತ್ತವೆ. ರಮಣಾಶ್ರಮದಲ್ಲಿ ಪ್ರತಿಯೊಂದು ಜೀವಿಯೂ ಸ್ವಚ್ಚಂದವಾಗಿ ಓಡಾಡುತ್ತದೆ, ಹಾಗಂತ ಸ್ವೇಚ್ಛೆಯಿಂದಲ್ಲ. ಯೋಗಿಗಳು, ಜ್ಞಾನಾಕಾಂಕ್ಷಿಗಳು ಅರುಣಾಚಲವನ್ನು ಏರುತ್ತಲೇ ಇದ್ದಾರೆ. "ಆತ್ಮ ಜ್ಞಾನ" ಗಳಿಸಿದ ಮೇಲೂ ಜನರ ನಡುವೆಯೇ ಜೀವಿಸಿದ ರಮಣರು ಅರಿತವರಿಗೆ ಎಲ್ಲೆಲ್ಲೂ ಕಂಡುಬರುತ್ತಾರೆ. ಸ್ವಘೋಷಿತ ಆಧ್ಯಾತ್ಮ ಜೀವಿಗಳೆಲ್ಲಾ ರಮಣರ ಎದುರು ಬರಲು ಹೆದರುತ್ತಿದ್ದರೆಂದರೆ ಅವರ ಮಹಾನತೆ ಅರಿಯಬಹುದು. ಅರಿತವರಿಗೆ ಆತ ಜ್ಞಾನಿ, ಮೂಢರಿಗೆ ಬರಿಯ ಕೌಪೀನಧಾರಿ! ಆತ ಭಾರತದ ಅಂತಃಸತ್ವವನ್ನು ಬೆಳಗಿ ಜಗಕೆ ಪಸರಿಸಿದ ಆತ್ಮಜ್ಯೋತಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ