ಪುಟಗಳು

ಗುರುವಾರ, ನವೆಂಬರ್ 28, 2013

ನಮೋ ಭಾರತ

                 ಅನ್ಯ ಭಾಗಗಳಲ್ಲಿ ಜನವಸತಿಯೇ ಇಲ್ಲದಿದ್ದ ಕಾಲದಲ್ಲಿ ನಾವು ನಾಗರೀಕತೆಯ ತುತ್ತ ತುದಿಗೇರಿದ್ದೆವು. ಉಳಿದೆಡೆ ಹುಟ್ಟು ಸಾವುಗಳ ಬಗ್ಗೆ ಜಿಜ್ಞಾಸೆಯೇ ಇಲ್ಲದಿದ್ದ ಸಮಯದಲ್ಲೇ ನಮ್ಮಲ್ಲಿ ಸಾವಿನಾಚೆಗಿನ ಬದುಕಿನ ಅವಿಷ್ಕಾರಗಳು ನಡೆದಿತ್ತು. ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು...ಇವೇ ಮುಂತಾದುವುಗಳು ನಡೆಯುತ್ತಿದ್ದು ಒಂದು ಸುಸಂಸ್ಕೃತ ಸಮಾಜ ವ್ಯವಸ್ಥೆ ರೂಪುಗೊಂಡಿತ್ತು. ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!

             ಇಂತಹ ಸುಸಂಸ್ಕೃತ ಬೀಡಿಗೆ ಅದೆಷ್ಟು ವಿದೇಶೀ ಶಕ್ತಿಗಳು ಬಂದೆರಗಿದವು! ದೋಚಲು ಬಂದವರಿಗೂ ಮೃಷ್ಟಾನ್ನ ಭೋಜನವನ್ನುಣಿಸಿತು ನಾಡು! ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!
            ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.
ಆದರೆ.......
            ಸ್ವಾತಂತ್ರ್ಯಾನಂತರದ ಭಾರತ ತನ್ನ ಹಿಂದಿನ ಭೂರಮೆಯ ಸಿರಿಯನ್ನು, ಶ್ರೀರಮೆಯ ಕೃಪಾಕಟಾಕ್ಷವನ್ನು ಮರಳಿ ಪಡೆದಿದೆಯೇ? ನಮ್ಮ ಮೇಲೆ ದಾಳಿ ಮಾಡಿ ದೋಚಿದವರೂ ನಾಚುವಂತೆ ನಮ್ಮನ್ನಾಳಿದವರು, ಈಗ ಆಳುತ್ತಿರುವವರು ದೋಚುತ್ತಿದ್ದಾರಲ್ಲಾ?  ನಮ್ಮ ಮೇಲೆ ನಮಗೆ ಜಿಗುಪ್ಸೆ ಬರುವ ರೀತಿಯಲ್ಲಿ ನಮ್ಮ ದೇಶವನ್ನು ಅಧಪತನಕ್ಕಿಳಿಸಿದ ನಮ್ಮನ್ನಾಳುತ್ತಿರುವವರ ಒಳ ಹೂರಣವೇನು? ಸ್ವಾತಂತ್ರ್ಯನಂತರದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಿದ್ದ ಭರತ ಖಂಡದಲ್ಲಿ ದಿನ ದಿನವೂ ರೈತನ ಆತ್ಮಹತ್ಯೆ, ಕೃಷಿಯ ಹಿಮ್ಮುಖ ಬೆಳವಣಿಗೆ, ಮುಚ್ಚಿ ಮಸಣ ಸೇರುತ್ತಿರುವ ಕೈಗಾರಿಕೆಗಳು, ನೈತಿಕತೆಯ ಅಧಪತನ, ಒಟ್ಟಾರೆ ಯಾವ ನಾಗರೀಕತೆ, ಯಾವ ಸಂಸ್ಕೃತಿ ಸನಾತನ ಎಂದು ಕರೆಯಲ್ಪಡುತ್ತದೋ ಅಂತಹ ಸಂಸ್ಕೃತಿ ಜೀವಚ್ಛವವಾಗುವಂತೆ ಮಾಡುತ್ತಿರುವ ಶಕ್ತಿಗಳು ಯಾವುವು? ಸ್ವಾತಂತ್ರ್ಯಾನಂತರ ಹಣದ ಹರಿವು ಹೆಚ್ಚಾಯಿತು, ಆದರೆ ಅದು ಸೇರಿದ್ದೆಲ್ಲಿಗೆ? ಮುಂದೆಯೂ ಇಂತಹ ಭೃಷ್ಟ ವ್ಯವಸ್ಥೆಯನ್ನೇ ಚುನಾಯಿಸಿದರೆ ಒಂದು ಕಾಲದಲ್ಲಿ ಸಾರ್ವಭೌಮನಾಗಿ ಮೆರೆದ ದೇಶ ಉಳಿಯಬಹುದೆ? ಆಗ ನಮ್ಮೆಲ್ಲರ ಪಾಡೇನು? ಭಾಜಪಾದಿಂದ ಪ್ರಧಾನಿ ಅಭ್ಯರ್ಥಿಯಾಗಿ ನೇಮಕಗೊಂಡು ದೇಶದ ಕತ್ತಲನ್ನು ಕಳೆಯುವ ಸೂರ್ಯನಿವ, ಈತನೇ ನಮ್ಮ ಪ್ರಧಾನಿಯಾಗಬೇಕು ಎಂದು ದೇಶಕ್ಕೆ ದೇಶವೇ ಪಿಸುನುಡಿಯುತ್ತಿರುವ ಶ್ರೀ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಪರಿಸ್ಥಿತಿ ಯಾವ ರೀತಿ ಬದಲಾಗಿ ದೇಶವನ್ನಾವರಿಸಿರುವ ಅಂಧಕಾರ ಕೊನೆಯಾಗಬಹುದು
ದೇಶ ಸೇವೆಯೇ ಈಶ ಸೇವೆ...!
ದೇಶಕ್ಕಾಗಿ ಮೋದಿ...ಮೋದಿಗಾಗಿ ನಾವು...!
ನಾವು ಏಳದಿದ್ದರೆ ದೇಶ ಹೇಗೆ ಎದ್ದು ನಿಂತೀತು? ಮಲಗಿದ್ದು ಸಾಕು. ಇನ್ನು ಏಳೋಣ!

ಸೋಮವಾರ, ನವೆಂಬರ್ 25, 2013

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ!

ಅಭಿವೃದ್ಧಿಯೇ...ಗಾಂಧಿ ವಂಶವೇ?

               ಪ್ರತಿಸಲ ನೀವು ರೈಲಿನಲ್ಲಿ ಹೋಗಬೇಕಾದರೆ ನೀವು ಮೂರು ನಾಲ್ಕು ತಿಂಗಳ ಹಿಂದೆ ಟಿಕೆಟ್ ಬುಕ್ ಮಾಡಿಸಿದ್ದರೂ ನಿಮ್ಮ ಆಸನ ದೃಢೀಕರಣಗೊಂಡಿರೋದಿಲ್ಲ. ಕೊನೆಗೂ ಎಷ್ಟೋ ಜನ ನಿರ್ವಾಹಕರನ್ನು ಕಾಡಿಬೇಡಿ ಆಸನ ಪಡೆದುಕೊಂಡೋ, ರೈಲಿನ ಬೋಗಿಗಳಲ್ಲಿ ಅಲ್ಲಲ್ಲಿ ಕೂತೋ 500-600 ಕಿ.ಮೀ ದೂರ ಪ್ರಯಾಣ ಮಾಡುತ್ತಾರೆ. ಅಲ್ಲದೇ ಬಸ್ಸುಗಳಲ್ಲಿಯೂ ಟಿಕೆಟ್ ಸಿಗದೇ ಕೊನೆಯ ಕ್ಷಣದವರೆಗೂ ಪರಿತಪಿಸಿ ಕೊನೆಗೆ ತಮ್ಮ ಪ್ರಯಾಣವನ್ನೇ ರದ್ದುಗೊಳಿಸುವುದೂ ಇದೆ. ಹಬ್ಬ ಹರಿದಿನಗಳಲ್ಲಿ ಇದೆಲ್ಲಾ ಮಾಮೂಲು. ನಗರ ಹಳ್ಳಿಗಳೆನ್ನದೆ ಗಿಜಿಗಿಟ್ಟುವ ಬಸ್ಸುಗಳು, ಆಟೋ ರಿಕ್ಷಾಗಳು, ಅಂತಹ ಬಸ್ಸುಗಳಲ್ಲಿ ಬಾಗಿಲುಗಳಲ್ಲೇ ನೇತಾಡುತ್ತಾ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಜನರು... ಯಾಕೆ ಹೀಗೆ? ಅಂದರೆ ಇರುವ ಜನರಿಗೆ ಬೇಕಾದಷ್ಟು ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ! ಇನ್ನೂ ನಗರಗಳಲ್ಲಂತೂ ಟ್ರಾಫಿಕ್ ಜಾಮಿನದ್ದೇ ದೊಡ್ಡ ಸಮಸ್ಯೆ. ಎಷ್ಟೋ ಸಲ ಖಾಲಿ ಬಸ್ಸುಗಳು ಓಡಾಡುವುದು, ಹೆಚ್ಚಿನ ಸಲ ಒಬ್ಬರೇ ಕಾರಿನಲ್ಲಿ ಓಡಾಡುವುದು, ಯಾರೋ ಒಬ್ಬ ಮಾಡಬಾರದ ಕಡೆ ತಿರುವು ತೆಗೆದುಕೊಳ್ಳೋದು, ಅಥವಾ ರಸ್ತೆಯಲ್ಲೇ ಬೇಕಾಬಿಟ್ಟಿ ತನ್ನ ವಾಹನ ನಿಲ್ಲಿಸಿ ಎಲ್ಲೋ ಹೋಗಿರೋದು...(ಇದು ಎಲ್ಲ ವಾಹನಗಳಿಗೂ ಅನ್ವಯ!) ಇಲ್ಲಿ ತಮ್ಮ ಬಗ್ಗೆ ಮಾತ್ರ ಯೋಚಿಸಿ ಉಳಿದವರಿಗೇನಾದರೆ ನನಗೇನು ಅನ್ನುವ ದಾರ್ಷ್ಟ್ಯ! ನಮ್ಮ ಜನರೂ ರಾಜಕಾರಣಿಗಳ ಹಾಗೆ ಯೋಚಿಸಲು ಆರಂಭಿಸಿದ್ದೇ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಲು ಒಂದು ಕಾರಣ ಅನ್ನಿಸೋದಿಲ್ವೇ?
               ನೀವು ಯಾವುದಾದರೂ ಸರಕಾರಿ ಕಛೇರಿಗೆ ಒಂದೋ ಪಡಿತರ ಚೀಟಿ ಮಾಡಿಸಲೋ, ಚುನಾವಣಾ ಗುರುತಿನ ಚೀಟಿ ಮಾಡಿಸಲೋ ಹೀಗೆ ಯಾವುದಾರೊಂದು ಕೆಲಸಕ್ಕೆ ಹೋಗಿಯೇ ಇರುತ್ತೀರಿ. ಆದರೆ ನಿಮ್ಮ ಕೆಲಸ ತಿಂಗಳುಗಟ್ಟಲೆ ಕಳೆದರೂ ಆಗುವುದೇ ಇಲ್ಲ. ಇನ್ನು ಆ ಕೆಲಸ ಪೂರ್ಣವಾದಾಗ ಪುನಃ ಅದೇ ಗುರುತುಪತ್ರವನ್ನು ನವೀಕರಿಸಬೇಕು ಎಂಬ ಆದೇಶ ಸರ್ಕಾರ ಹೊರಡಿಸುತ್ತದೆ. ಎಷ್ಟು ಕಿರಿಕಿರಿಯಾಗಬಹುದು? ಪ್ರತಿಯೊಬ್ಬರಿಗೂ ಅವರ ಸಮಯ ಅಮೂಲ್ಯ ತಾನೆ! ಪ್ರತಿಯೊಬ್ಬರು ಸರಕಾರಿ ಕಛೇರಿಗಳಿಗೆ, ಅಧಿಕಾರಿಗಳಿಗೆ ಯಾಕೆ ಛೀಮಾರಿ ಹಾಕುತ್ತಾರೆ? ಸಮಯ, ಲಂಚ, ಅಧಿಕಾರಿಗಳ ಒರಟುತನ, ಏನೂ ಗೊತ್ತಿಲ್ಲದ ಜಾತಿ, ಮತವೊಂದೇ ಮಾನದಂಡವಾಗಿ ಆರಿಸಿಬಂದು ಸರಿಯಾಗಿ ಕೆಲಸ ಮಾಡದ ಸಿಬ್ಬಂದಿ, ಅದರ ಮಧ್ಯೆ ನೀವು ಕೊಟ್ಟಿದ್ದರೂ ಬೇಜವಾಬ್ದಾರಿತನದಿಂದ ಆ ದಾಖಲೆಗಳನ್ನು ಕಳೆದು ಹಾಕಿರೋದು ಅಥವಾ ಆ ದಾಖಲೆಗಳನ್ನು ಸಂಗ್ರಹಿಸಿಡಲು ಸರಿಯಾದ ವ್ಯವಸ್ಥೆ ಇಲ್ಲದಿರೋದು, ಸರಿಯಾದ ಮಾಹಿತಿ ಒದಗಿಸದ ಸರಕಾರಿ ವ್ಯವಸ್ಥೆ,...ಇಂತಹಾ ಹತ್ತು ಹಲವು ಕಾರಣಗಳಿಗಾಗಿಯೇ ಕೇವಲ ವಿದ್ಯಾವಂತರು ಮಾತ್ರವಲ್ಲ, ಸುಶಿಕ್ಷಿತನಲ್ಲದವನೂ ಕೂಡಾ ರೋಸಿ ಹೋಗಿ ಇವುಗಳನ್ನು ಹೇಸಿಗೆಗಿಂತಲೂ ಕಡೆಯಾಗಿ ಕಾಣೋದು! ಈ ಕಛೇರಿಗಳಲ್ಲಿರುವ ಸಿಬ್ಬಂದಿಗಳು ಮೀಸಲಾತಿ ಆಧಾರದಿಂದ ಬಂದಿರುತ್ತಾರೆಯೇ ಹೊರತು ತಮ್ಮ ಸಾಮರ್ಥ್ಯ, ಅರ್ಹತೆಗಳಿಂದಲ್ಲ! ಹಾಗಾಗಿ ಅವರಿಗೆ ತಂತ್ರಜ್ಞಾನದ ಗಂಧಗಾಳಿ ಇರೋದಿಲ್ಲ, ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಸುಧಾರಿಸಿಕೊಂದು ಹೋಗುವ ಮನಸ್ಥಿತಿಯೂ ಇರೋದಿಲ್ಲ!
               ನಮ್ಮ ಶಿಕ್ಷಣ ವ್ಯವಸ್ಥೆ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಗುರುಕುಲ ಪದ್ದತಿಯಿರುವಾಗ ಒಂದೇ ಗುರುವಿನ ಕೆಳಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ಪ್ರತಿಯೊಬ್ಬರು ತಮಗೆ ಬೇಕಾದುದನ್ನು ಕಲಿತು ಮರಳುತ್ತಿದ್ದರು. ಈಗ ಪ್ರತಿಯೊಬ್ಬರೂ ಇಂಜಿನಿಯರ್, ಡಾಕ್ಟರ್ ಆಗಬಯಸುವವರೇ! ಆದರೆ ಇಂಜಿನಿಯರ್ ಆಗಿ ಹೊರಬಂದವನಿಗೆ ಪ್ರಮಾಣಪತ್ರವಿರುತ್ತದೆಯೇ ಹೊರತು ತಾಂತ್ರಿಕ ನೈಪುಣ್ಯತೆಯೇ ಇರೋದಿಲ್ಲ. ಕೆಲಸ ಸೇರಿದ ಮೇಲೆ ಆ ನೈಪುಣ್ಯ ಸಂಪಾದಿಸುತ್ತಾರೆ ಅದು ಬೇರೆ ಮಾತು. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ತಾಂತ್ರಿಕರನ್ನು ರೂಪಿಸುತ್ತಲೇ ಇಲ್ಲ! ಮಾತ್ರವಲ್ಲ ನಿಮಗೆ ಬೇಕಾದ ಕ್ಷೇತ್ರಗಳನ್ನು ಆರಿಸೋಣವೆಂದರೆ ಅದಕ್ಕೆ ಅವಕಾಶವೇ ಇಲ್ಲ..ಅಂದರೆ ಅಂತಹ ಶಿಕ್ಷಣ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ. ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಬಿದ್ದಂತೆ ವರ್ಷದಿಂದ ವರ್ಷಕ್ಕೆ ಹೇಳಿದ್ದನ್ನೇ ಹೇಳುವ ಪಾಠಗಳು ಅದನ್ನೇ ಉರು ಹೊಡೆಯುವ ಮಕ್ಕಳನ್ನು ಈ ವ್ಯವಸ್ಥೆ ತಯಾರಿಸುತ್ತದೆ ಬಿಟ್ಟರೆ ಒಬ್ಬ ತಾನೇ ಏನೋ ಮಾಡಬೇಕು ಎನ್ನುವ ಆಶಾವಾದಿಯನ್ನಲ್ಲ. ನಮ್ಮಲ್ಲಿರುವ ಅವಕಾಶಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿಲ್ಲ. ಅದರಿಂದಾಗಿ ಸಾಲುಗಟ್ಟಲೇ ಇಂಜಿನಿಯರುಗಳು ಉದ್ಯೋಗವಿಲ್ಲದೆ ಪರದಾಡುತ್ತಿರುವ ಸ್ಥಿತಿ! ಮಾತ್ರವಲ್ಲ ಮೆಕಾಲೆ ಅಳವದಿಸಿದ ಈ ಶಿಕ್ಷಣ ಪದ್ದತಿಯಿಂದ ಧರ್ಮ ಎಂದರೇನು, ದೇಶ ಎಂದರೇನು, ಸಂಸ್ಕೃತಿ ಎಂದರೇನು, ಧರ್ಮ-ಮತಗಳ ಮಧ್ಯದ ವ್ಯತ್ಯಾಸವೇನು, ರಾಷ್ಟ್ರದ ಇತಿಹಾಸವೇನು,ಹಿರಿಮೆಯೇನು ಇವ್ಯಾವುದನ್ನು ಅರಿಯದ ಸುಳ್ಳು ಇತಿಹಾಸವನ್ನೇ ಸತ್ಯ ಎಂದು ಭ್ರಮಿಸುವ ಒಂದು ಸಂಸ್ಕೃತಿವಿಹೀನ ಪೀಳಿಗೆಯನ್ನೇ ಸೃಷ್ಠಿ ಮಾಡಿ ದೇಶದ ಅಧಪತನಕ್ಕೆ ನಾಂದಿ ಹಾಡಿದ್ದೇವೆ ಎಂಬ ಅರಿವೇ ನಮಗಾಗದಿರೋದು ವಿಷಾದಕರ ಸಂಗತಿ.
                ಎಲ್ಲಿ ನೋಡಿದರೂ ಮೀಸಲಾತಿ. ಸರಕಾರಿ ಘಟಕಗಳಲ್ಲಿ ಮತ, ಜಾತಿಯಾಧಾರಿತ ಮೀಸಲಾತಿ! ಖಾಸಗಿ ಕ್ಷೇತ್ರದಲ್ಲಿ ಸಂಬಂಧಾಧಾರಿತ ಮೀಸಲಾತಿ! ಪತ್ರಿಕೋದ್ಯಮದಲ್ಲಿ ಪಂಥಾಧರಿತ(ಎಡಪಂಥೀಯ) ಮೀಸಲಾತಿ! ರಾಜಕೀಯದಲ್ಲಿ ಧನಾಧರಿತ ಮೀಸಲಾತಿ! ಸಾಮಾನ್ಯನಿಗೆ ದಿನಕ್ಕೆ 1 ರೂಪಾಯಿ ಸಾಕು ಊಟಕ್ಕೆ, 5 ರೂಪಾಯಿ ಸಾಕು ಊಟಕ್ಕೆ, ಎರಡು ತರಕಾರಿ ಬಳಸೋದ್ರಿಂದ ಬೆಲೆಯೇರಿಕೆ, ಬಡತನ ಮನಸ್ಸಿಗೆ ಸಂಬಂಧಿಸಿದ್ದು(!)...ಇದು ಸರಕಾರದ ನೀತಿ!
               ನಮ್ಮ ದೇಶದಲ್ಲಿ ಇನ್ನೂ ವಿದ್ಯುತ್ತೇ ಇಲ್ಲದ(ಸೋಲಾರನ್ನು ಸೇರಿಸಿ) ಎಷ್ಟು ಹಳ್ಳಿಗಳಿವೆ? ಮನೆಗೆ ನೀರೇ ಸಿಗದೆ ಎಷ್ಟೋ ದೂರದಿಂದ ಹೊತ್ತು ತರುವ ಎಷ್ಟು ಕುಟುಂಬಗಳಿವೆ? ಎಲ್ಲಿ ನೋಡಿದರಲ್ಲಿ ಗುಂಡಿಗಳಿರುವ ರಸ್ತೆಗಳು. ಅಗತ್ಯ ಇಲ್ಲದ ಕಡೆಯೂ ಹಂಪ್-ಗಳು ಇವುಗಳಿಂದಾಗಿಯೇ ದಿನನಿತ್ಯ ಒಂದಷ್ಟು ಅಪಘಾತಗಳು. ಹಲವಾರು ಕಡೆ ಚರಂಡಿಗಳೇ ಇಲ್ಲ! ಒಂದೇ ಮಳೆಗೆ ಕಿತ್ತು ಹೋಗುವ ರಸ್ತೆಗಳು! ಕಳಪೆ ಕಾಮಗಾರಿ! ಎಷ್ಟೋ ಊರುಗಳಿಗೆ ಬಸ್ಸು ಬಿಡಿ, ರಸ್ತೆಗಳೇ ಇಲ್ಲ. ನದಿಗಳಿಗೆ ಸೇತುವೆಗಳಿಲ್ಲದೆ ಹಗ್ಗ, ತೆಪ್ಪದ ಮೂಲಕ ದಾಟುವ ಎಷ್ಟೋ ಜನ ಏನು ಈ ದೇಶದವರಲ್ಲವೆ? ಸ್ವಂತ ಸೂರು ಇಲ್ಲದೆ, ಊಟಕ್ಕೆ ಗತಿಯಿಲ್ಲದೆ, ತಮ್ಮವರವರೆನ್ನುವವರಿಲ್ಲದೆ ಭಿಕ್ಷೆ ಬೇಡುವವರು ಹಾಗೂ ತಮ್ಮ ಜೀವನಕ್ಕಾಗಿ ಇವರನ್ನು ಭಿಕ್ಷಾಟನೆಗೆ ತಳ್ಳುವವರು ಇವಕ್ಕೆಲ್ಲಾ ಎಂದು ವಿಮೋಚನೆ? ಇಂದಿಗೂ ಕನಿಷ್ಟ ಎರಡು ಗಂಟೆಯೂ ೩ ಫೇಸ್ ವಿದ್ಯುತ್ ಸಿಗದೆ ರೈತರ ಕಣ್ಣೀರಿನಲ್ಲೇ ಬೆಳೆ ಬೆಳೆಯುವಂತ ಪರಿಸ್ಥಿತಿ ಉದ್ಭವಿಸಿರುವ ಎಷ್ಟೊಂದು ಹಳ್ಳಿಗಳಿವೆ. ವಿದ್ಯುತ್ ಸಿಕ್ಕಿದರೂ ನೀರೇ ಸಿಗದ ಅದೆಷ್ಟು ಕೃಷಿಭೂಮಿಗಳು! ಇವೆಲ್ಲಾ ಇದ್ದರೂ ಕಾರ್ಮಿಕರು ಸಿಗದೇ ಅಥವಾ ದುಬಾರಿ ವೇತನ ನೀಡಬೇಕಾದ ವಿಷಮ ಪರಿಸ್ಥಿತಿಯಲ್ಲಿ ರೈತರು! ಇವೆಲ್ಲದರ ಮಧ್ಯೆ ಕಮ್ಯೂನಿಷ್ಟ್ ಪ್ರೇರಿತ ನಕ್ಸಲರ ಕಾಟ! ಎಲ್ಲ ಸರಿಯಾಗಿದೆ ಎನ್ನುವಷ್ಟರಲ್ಲಿ ವರುಣನ ಕಣ್ಣುಮುಚ್ಚಾಲೆ! ಬೆಳೆಗೆ ಸರಿಯಾದ ಬೆಲೆ ಸಿಗದೆ ಹೈರಾಣಾಗುವ ರೈತ!
             ಸ್ವಾತಂತ್ರ್ಯ ಕ್ರಾಂತಿವೀರರಿಂದ ಒದಗಿದ್ದರೂ ಅವರಿಗೆ ಸಿಗದ ಮಾನ್ಯತೆ, ಸಾವರ್ಕರ್-ಸುಭಾಷ್-ಚಂದ್ರಶೇಖರ್ ಆಜಾದ್, ಅರವಿಂದ, ಬಂಕಿಮರಾದಿಯಾಗಿ ಎಲ್ಲರನ್ನು ಬದಿಗೆ ತಳ್ಳುವ "ಕಮ್ಮಿ" ನಿಷ್ಟರ ಪ್ರಯತ್ನಗಳು, ವೇದ, ಸಂಸ್ಕೃತಿ, ಋಷಿ ಪರಂಪರೆಗೆ ಸಿಗದ ಗೌರವ! ಹಳ್ಳಿಹಳ್ಳಿಯಲ್ಲೂ ಬೇರೂರಿರುವ ಭಯೋತ್ಪಾದಕರು! ಅವರನ್ನು ಕಾಪಾಡುವ ದ್ರೋಹಿ ರಾಜಕಾರಣಿಗಳು. ನಕಲಿ ಎನ್ ಕೌಂಟರ್ ಎಂದೂ ಮಾತ್ರವಲ್ಲ ತಮ್ಮ ಮನೆಯ ಮಗಳವಳೆಂದು ನಾಚಿಕೆ ಬಿಟ್ಟು ಹೇಳುವ ಮಂತ್ರಿ ಮಹೋದಯರು, ಇವರನ್ನೇ ಬೆಂಬಲಿಸುವ ನಾಚಿಕೆ ಮಾನ ಮರ್ಯಾದೆ ಬಿಟ್ಟ ಮಾಧ್ಯಮಗಳು! ಲವ್ ಜಿಹಾದ್, ಭೂ ಜಿಹಾದ್, ವೈಣಿಕ ಜಿಹಾದ್, ಅಕ್ಷರ ಜಿಹಾದ್, ಸಾಂಸ್ಕೃತಿಕ ಜಿಹಾದ್, ರಾಜಕೀಯ ಜಿಹಾದ್..... ಹಿಂದೂಗಳ ಜೀವನಕ್ಕೆ ಕೊಳ್ಳಿ ಇಟ್ಟಿರುವ ರಕ್ತಬೀಜಾಸುರಗಳು. ಆದರೆ ಹಿಂದೂಗಳು ಇದನ್ನು ಅರ್ಥ ಮಾಡಿಕೊಳ್ಳದೆ ಇರೋದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದೇ ಇರೋದು ದೊಡ್ಡ ವಿಪರ್ಯಾಸ. ಭಯೋತ್ಪಾದಕತೆ ವಿರುದ್ದ ಪ್ರತಿಭಟನೆ ಮಾಡುವವರನ್ನೇ ಬಂಧಿಸುವ ಸರ್ಕಾರ, ಭಯೋತ್ಪಾದಕರನ್ನು ಬಹುವಚನ ಉಪಯೋಗಿಸಿ ಗೌರವಿಸುವ ಮಂತ್ರಿಗಳು, ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿ ಕೋಟ್ಯಾಂತರ ಖರ್ಚು ಮಾಡುವ ನಪುಂಸಕ ಸರಕಾರ, ದೇಶದ ಸಾಮಾನ್ಯ ಪ್ರಜೆಗೆ ನ್ಯಾಯ ಸಿಗದಿದ್ದರೂ ಪರವಾಗಿಲ್ಲ ಭಯೋತ್ಪಾದಕನಿಗೆ ನ್ಯಾಯ ಸಿಗಬೇಕೆಂದು ಬೊಬ್ಬಿರಿಯುವ ಮಾಧ್ಯಮಗಳು, ಶತ್ರುಗಳು ನುಸುಳಿದರೂ ರತ್ನಗಂಬಳಿ ಹಾಸಿ ಮಾತಿಗಿಂತ ಮೌನವೇ ಲೇಸೆನ್ನುವ ಪ್ರಧಾನಿ, ಸಾಲು ಸಾಲು ಹಗರಣಗಳು, ತನಿಖಾ ಸಂಸ್ಥೆಗಳೆಲ್ಲವನ್ನು ತನ್ನ ಕೈವಶ ಮಾಡಿಕೊಂಡಿರುವ ಗಾಂಧಿ ಕುಟುಂಬ, ಬೇಹುಗಾರಿಕಾ ವಿಭಾಗ ಮಾಹಿತಿ ಕೊಟ್ಟರು ಸೂಕ್ತ ಭದ್ರತೆ ಒದಗಿಸದೆ ಜನರ ಸಾವಿಗೆ ಕಾರಣವಾಗುವ ಸರಕಾರ, ಚಿತ್ರನಟಿಯರೊಂದಿಗೆ ಲಲ್ಲೆಗರೆಯುವ ಗೃಹ ಸಚಿವ, ಅತ್ತ ಇತ್ತ ಸುತ್ತ ಮುತ್ತ ಒಳಗೂ ಹೊರಗೂ ಎಲ್ಲೆಡೆಯೂ ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಭಾರತ! ದಿನ ನಿತ್ಯ ಗಡಿ ಸಮಸ್ಯೆ, ಭಾಷಾವಾರು ಜಗಳ, ಅತ್ಯಾಚಾರ, ಹಗರಣ, ಹೊರಗಿಂದ ಬಂದವರಿಗೆ ಪಡಿತರ, ಚುನಾವಣ ಗುರುತು ಚೀಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ದಿನಬಳಕೆಯ ವಸ್ತುಗಳಿಂದ ಹಿಡಿದು ಎಲ್ಲ ವಸ್ತುಗಳ ಬೆಲೆಯೇರಿಕೆ, ಭಾರತೀಯ ಬಡವನಾಗಿ ಹೋಗುತ್ತಿದ್ದಾನೆ, ಭಾರತದ ರಾಜಕಾರಣಿ ದುಡ್ದನ್ನೆಲ್ಲಾ ಸ್ವಿಸ್ ಬ್ಯಾಂಕಿನಲ್ಲಿಡುತ್ತಿದ್ದಾನೆ. ತನ್ನ ವಿರುದ್ದ ಮಾತಾಡುವವರನ್ನೆಲ್ಲಾ ನಕಲಿ ದಾಖಲೆ ಸೃಷ್ಟಿಸಿ ಬಾಯಿಮುಚ್ಚಿಸುವ ಸರ್ಕಾರ......

                     ಅಬ್ಬಾ ಹೇಳುತ್ತಾ ಹೋದರೆ ಮುಗಿಯದ ಕಥೆ! ಎಲ್ಲಿ ನೋಡಿದರಲ್ಲಿ ಸಮಸ್ಯೆಗಳೇ...ಇವೆಲ್ಲದರ ಮಧ್ಯೆ ನಿದ್ದೆಗೆ ಜಾರಿರುವ ಭಾರತೀಯ! ಇವುಗಳಿಗೆಲ್ಲಾ ಕೊನೆ ಎಂದು? ಇದೆ ಇದಕ್ಕೆ ಪರಿಹಾರ ನಮ್ಮ ಕೈಯಲ್ಲಿದೆ. ಅಲ್ಲೊಬ್ಬನಿದ್ದಾನೆ ಉಕ್ಕಿನ ಮನುಷ್ಯ! 12 ವರ್ಷಗಳಿಂದ ತನ್ನ ಮೇಲಾಗುತ್ತಿರುವ ದೇಶದ್ರೋಹಿಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತು ಅಭಿವೃದ್ಧಿಯ ಶಕೆಯನ್ನೇ ಬರೆದ! ಕುಹಕಿಗಳಿಗೆ ತನ್ನ ಕಾರ್ಯದಿಂದಲೇ ಉತ್ತರ ಕೊಟ್ಟ! ಮೇಲೆ ಹೇಳಿರುವ ಎಲ್ಲ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎನ್ನುವುದನ್ನು ತನ್ನ ರಾಜ್ಯದಲ್ಲಿ ಮಾಡಿ ತೋರಿಸಿದ. ಒಂದು ಕಾಲದಲ್ಲಿ ಜನರಿಗೆ ಚಹಾ ಕುಡಿಸುತ್ತಿದ್ದ ಆ ವ್ಯಕ್ತಿ ಮುಂದೆ ಗುಜರಾತಿಗರಿಗೆ ಅಮೃತದ ಧಾರೆಯನ್ನೇ ಹರಿಸಿದ. ಎಲ್ಲರೂ ಕೇವಲವಾಗಿ ಮಾತಾಡುತ್ತಿದ್ದ ಕಾಲದಲ್ಲಿ ಮೌನವಾಗಿ ಗುಜರಾತಿನ ಅಭಿವೃದ್ಧಿಯಗಾಥೆಯನ್ನು ಬರೆದ. ಈಗ ಅದೇ ವ್ಯಕ್ತಿ ಭಾ.ಜ.ಪಾ.ದ ಪ್ರಧಾನಿ ಅಭ್ಯರ್ಥಿಯಾಗಿ ನಮ್ಮೆದುರು ನಿಂತಿದ್ದಾನೆ! ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ. ವಂಶ ಪಾರಂಪರ್ಯವಾಗಿ ತನಗೇ ಅಧಿಕಾರ ಸಿಗಬೇಕೆಂದು ಬೇಕಾದ ಆಟ ಆಡಿ, ಹೂಟ ಹೂಡಿ ಸದಾ ಗದ್ದುಗೆ ಹಿಡಿದು ದೇಶ ಕೊಳ್ಳೆ ಹೊಡೆಯುವ ಗಾಂಧಿ ಕುಟುಂಬದ ಇತಿಹಾಸ ತಿಳಿದ ಮೇಲೂ ಅವರನ್ನೇ ಆರಿಸಿ ಸದಾ ಸಮಸ್ಯೆಗಳ ಜಂಜಡದಲ್ಲಿ ಮುಳುಗಿ ಮುಂದಿನ ಪೀಳಿಗೆಯಿಂದ ಛೀ..ಥೂ..ಅಂತಾ ಉಗುಳಿಸಿಕೊಳ್ಳುತ್ತೀರಾ ಅಥವಾ ರಾಜಕೀಯ ದುರಂಧರನನ್ನು, ಅಭಿವೃದ್ಧಿಯ ಶಕಪುರುಷನನ್ನು, ದೇಶ-ಧರ್ಮ-ಸಂಸ್ಕೃತಿಯನ್ನು ಗೌರವಿಸುವ ಅಪ್ಪಟ ಭಾರತೀಯನನ್ನು ಪ್ರಧಾನಿಯಾಗಿ ಆರಿಸುತ್ತೀರಾ?

ನಿರ್ಧಾರದ ಕಾಲ ಬಂದಿದೆ! ಎದ್ದೇಳು ಅರ್ಜುನ! ನಿಮ್ಮ ಮತ ದೇಶಕ್ಕೆ ಹಿತ!

ಶನಿವಾರ, ನವೆಂಬರ್ 23, 2013

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!



ಮೂಢನಂಬಿಕೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮದ ವಿರುದ್ದ ಸಹಜವಾಗಿಯೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕಾನೂನು ಸನಾತನ ಸಂಸ್ಕೃತಿಯ ಮೇಲೆ ಸವಾರಿ ಮಾಡಲು ಪ್ರಗತಿಪರರು ಅಂತ ತಮ್ಮನ್ನು ತಾವು ಕರೆದುಕೊಂಡವರಿಗೆ ಸಿಕ್ಕ ಒಂದು ಅವಕಾಶ ಎಂದು ಎಂತಹ ಅಜ್ಞಾನಿಗಾದರೂ ಅರ್ಥವಾಗುವ ಸಂಗತಿ. ಹಿಂದೂಗಳ ನಂಬಿಕೆಯನ್ನೇ ಗುರಿಯಾಗಿರಿಸಿ ಈ ದೇಶದಿಂದ ಸನಾತನ ಧರ್ಮವನ್ನು ಕಿತ್ತೆಸೆಯುವ ಸಲುವಾಗಿ ನಡೆಯುತ್ತಿರುವ ಷಡ್ಯಂತ್ರದ ಭಾಗವೆಂದರೂ ಅತಿಶಯೋಕ್ತಿಯಲ್ಲ. ಕರಡನ್ನು ಸಿದ್ಧಪಡಿಸುವ ತಂಡದಲ್ಲಿ ಇದ್ದ ಪ್ರತಿಯೊಬ್ಬನು ಸನಾತನ ಧರ್ಮದ ವಿರೋಧಿಯೇ! ಸಾಮಾನ್ಯನಿಗೂ ಅರ್ಥವಾಗುವ ಈ ಷಡ್ಯಂತ್ರ ಶಿಕ್ಷಿತರು ಎನ್ನಿಸಿಕೊಂಡ ವರ್ಗಕ್ಕೆ ಅರ್ಥವಾಗದೇ ಇರೋದು ವಿಪರ್ಯಾಸ. ಕಪ್ಪುಚರ್ಮದ ಬ್ರಿಟಿಷರನ್ನೇ ನಾನು ಅಳವಡಿಸಿದ ಶಿಕ್ಷಣ ವ್ಯವಸ್ಥೆ ಉತ್ಪಾದನೆ ಮಾಡುತ್ತದೆ ಎಂಬ ಮೆಕಾಲೆ ಅಣಿಮುತ್ತುಗಳು ಅಕ್ಷರಶಃ ನಿಜವಾಗಿರೋದು ಅಪ್ಪಟ ಸತ್ಯ. ಒಂದು ಕಾನೂನನ್ನು ರಚಿಸುವಾಗ ಇತ್ತಂಡಗಳ ವಾದವನ್ನು ಆಲಿಸಬೇಕೆಂಬ ನಿಯಮವನ್ನೇ ಮರೆತ ಸರಕಾರ ತನ್ನ ಭಟ್ಟಂಗಿಗಳ ನೆರವಿನಿಂದ ತನ್ನ ಅಂತ್ಯಕ್ಕೆ ತಾನೇ ಹೊಂಡ ತೋಡುತ್ತಿದೆ!

ಈ ನಿಷೇಧದ ಪಟ್ಟಿಯಲ್ಲಿ ಹಿಂದೂಗಳ ನಂಬಿಕೆಗಳನ್ನು ಹೊರತುಪಡಿಸಿ ಉಳಿದವ್ಯಾವುವು ಕಾಣದೇ ಇರುವುದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ. ಈ ಕಾನೂನೇನಾದರೂ ಜಾರಿಗೆ ಬಂದರೆ ನಾಗತಂಬಿಲ, ನಾಗ ಪೂಜೆ, ನಾಗ ಮಂಡಲ, ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ, ಭೂತ ಕೋಲ, ಪರ್ವ, ವಾಸ್ತು ಹೋಮ, ಭೂಮಿ ಪೂಜೆ, ಅಡ್ಡ ಪಲ್ಲಕ್ಕಿ, ಪಾದ ಪೂಜೆ, .... ಯಾವುದನ್ನೂ ಮಾಡಬಾರದು. ರುದ್ರಾಕ್ಷಿ ಧರಿಸಬಾರದು, ಜ್ಯೋತಿಷ್ಯ, ವಾಸ್ತು ಕೇಳಬಾರದು, ಹೇಳಲೂ ಬಾರದು ಹೀಗೆ ಯಾವುದು ನಮ್ಮ ಜೀವನದ ಅವಿಭಾಜ್ಯ ಅಂಗಗಳಿವೆಯೋ ಅವೆಲ್ಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಷ್ಟಕ್ಕೂ ನಾಗಾರಾಧನೆ, ರುದ್ರಾಕ್ಷ, ಭೂತಕೋಲ, ಜ್ಯೋತಿಷ, ವಾಸ್ತುಶಾಸ್ತ್ರ ಇವೇ ಮುಂತಾದುವುಗಳನ್ನು ನಂಬುವವರಿಂದ ಸಮಾಜಕ್ಕಾಗುವ ಸಮಸ್ಯೆಯಾದರೂ ಏನು? ಮಾನಸಿಕವಾಗಿ ಖಿನ್ನರಾದ, ಆರ್ಥಿಕವಾಗಿ ತೊಂದರೆಗೊಳಗಾದ ಅಥವಾ ಇನ್ನಾವುದೇ ಸಮಸ್ಯೆಗೊಳಗಾದ ಜನ ನಾಗಾರಾಧನೆ, ಕೋಲ, ಜ್ಯೋತಿಷಿ ಹೇಳಿದ ಯಾವುದೇ ಪೂಜೆ ಪುನಸ್ಕಾರ ಮಾಡಿದರೆ ಈ ಸರ್ಕಾರಕ್ಕೇನು ನಷ್ಟ? ಇವತ್ತು ನಾಗಾರಾಧನೆ ನಿಷೇಧಿಸಿದವರು ನಾಳೆ ದೇವಾಲಯಗಳಲ್ಲಿ ಪೂಜೆ ಮಾಡುವುದು ನಿಷೇಧಿಸಲಾರರು ಎಂಬುದಕ್ಕೆ ಏನು ಗ್ಯಾರಂಟಿ?

ರುದ್ರಾಕ್ಷ! ಶುದ್ಧ ನೀರು, ಶುದ್ಧ ಆಹಾರ, ಬೆಂಕಿ ಮುಂತಾದುವುಗಳ ಮೇಲೆ ಹಿಡಿದಾಗ ಪ್ರದಕ್ಷಿಣಾಕಾರವಾಗಿ ಅದು ಸುತ್ತುತ್ತದೆಯೆಂದಾದರೆ ಅದರಲ್ಲೇನೋ ಶಕ್ತಿ ಇರಲೇಬೇಕಲ್ಲವೆ? ಹೌದು ಸಾಧು ಸನ್ಯಾಸಿಗಳು ಅರಣ್ಯದಲ್ಲಿ ಅಲೆಯುವ ಸಂದರ್ಭದಲ್ಲಿ ಸಿಕ್ಕ ನೀರು, ಆಹಾರವನ್ನು ಪರೀಕ್ಷಿಸಲು ಬಳಸುತ್ತಿದ್ದುದು ರುದ್ರಾಕ್ಷವನ್ನೇ. ಅದು ಧರಿಸಿದವನ ದೇಹದ ಸುತ್ತಲಿನ ಕಾಂತೀಯ ವಲಯವನ್ನು ಪ್ರಭಾವಿಸಿ ಅದನ್ನು ಶುದ್ಧಗೊಳಿಸುತ್ತದೆ. ಅಂದರೆ ನಕರಾತ್ಮಕ ವ್ಯಕ್ತಿಗಳ ವಿರುದ್ಧ ಅದೊಂದು ಕವಚದಂತೆ ವರ್ತಿಸುತ್ತದೆ ಮಾತ್ರವಲ್ಲ ರಕದೊತ್ತಡವನ್ನು ತಗ್ಗಿಸುತ್ತದೆ. ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದನ್ನು ಧರಿಸುವುದು ಹಾಗೂ ಮಾರುವುದನ್ನು ಮೂಢನಂಬಿಕೆ ಎಂದು ನಿಷೇಧಿಸಲು ಹೊರಟಿರುವ ಸರಕಾರಕ್ಕೆ ಏನೆನ್ನಬೇಕು? ಇದರ ಬದಲು ಭದ್ರಾಕ್ಷವನ್ನು ರುದ್ರಾಕ್ಷ ಎಂದು ಹೇಳಿ ಮಾರುವ ಕಳ್ಳವ್ಯಾಪಾರಿಗಳನ್ನು ನಿಯಂತ್ರಿಸಲಿ.

ಮಾಟ, ವಶೀಕರಣವನ್ನು ನಿಷೇಧಿಸಬೇಕೆನ್ನೆವುದೇನೋ ಸರಿ. ಆದರೆ ಇವುಗಳನ್ಯಾರಾದರೂ ಇನ್ನೊಬ್ಬರಿಗೆ ಹೇಳಿ ಮಾಡುತ್ತಾರೆಯೇ? ಇಂಥವರೇ ಮಾಡಿದ್ದೆಂದು ಹೇಗೆ ಪತ್ತೆ ಹಚ್ಚಬಲ್ಲರು? ಅದನ್ನು ಪತ್ತೆಹಚ್ಚಹೊರಟವರು ಕೂಡಾ ಮೂಢನಂಬಿಕೆಯುಳ್ಳವರೆಂದೇ ಆಯಿತಲ್ಲ! ಯಾರಾದರೂ ದೂರು ಕೊಟ್ಟರೆ ದೂರು ಕೊಟ್ಟವರು ಕೂಡಾ ಅದನ್ನು ನಂಬಿದಂತೆ ಆಯಿತಲ್ವೇ? ಈಗ ಶಿಕ್ಷೆ ಯಾರಿಗೆ? ಮಾಟ ಮಾಡಿದವನಿಗೋ? ದೂರು ಕೊಟ್ಟವನಿಗೋ? ಪೊಲೀಸರಿಗೋ? ಅಥವಾ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೋ? ಕಾನೂನು ರೂಪಿಸಿದವನಿಗೋ?! ಪ್ರಾಣಿ ಬಲಿ ನಿಷೇಧಿಸಬೇಕೆನ್ನುವವರು ದಿನನಿತ್ಯ ಹಲಾಲ್/ಕುರ್ಬಾನಿ ಹೆಸರಲ್ಲಿ ನಡೆಯುವ ಗೋಹತ್ಯೆಯನ್ನು ಯಾಕೆ ವಿರೋಧಿಸುವುದಿಲ್ಲ? ಪ್ರಾಣಿ ಬಲಿಯಂತೆಯೇ ಕೇವಲ ತಿನ್ನುವುದಕ್ಕಾಗಿಯೇ ಪ್ರಾಣಿಗಳನ್ನು ಕೊಲ್ಲುವುದನ್ನು ಕೂಡಾ ನಿಷೇಧಿಸಬೇಕಲ್ಲವೆ? ಯಾರೇ ಸ್ವಾಮೀಜಿಯಾಗಲಿ ನನ್ನ ಪಾದ ಪೂಜೆ ಮಾಡಿ ಅಂತ ಕೇಳಿಕೊಳ್ಳುತ್ತಾರೆಯೇ ಅಥವಾ ಒತ್ತಾಯಪಡಿಸುತ್ತಾರೆಯೇ? ಅದು ಭಕ್ತರ ನಿಲುಮೆಯಲ್ಲದೆ ಮತ್ತೇನು? ಇವತ್ತು ಪಾದಪೂಜೆ ನಿಷೇಧಿಸುವವರು ನಾಳೆ ಹಿರಿಯರ ಕಾಲಿಗೆ ಅಡ್ಡ ಬೀಳುವುದನ್ನು/ಅಭಿವಾದನೆಯನ್ನು ನಿಷೇಧಿಸುವುದಿಲ್ಲ ಎಂಬುದಕ್ಕೆ ಸಾಕ್ಷಿ ಏನು? ಇವತ್ತು ರುದ್ರಾಕ್ಷಿ ಮಾಲೆ ಧರಿಸಬಾರದೆಂದವರು ನಾಳೆ ತಿಲಕ ಹಚ್ಚುವುದನ್ನೂ/ಭಸ್ಮ/ಗೋಪಿ ಧಾರಣೆಯನ್ನು ಮೌಢ್ಯವೆಂದಾರು!

ಜ್ಯೋತಿಷ್ಯವನ್ನು ಮೌಢ್ಯವೆನ್ನುವವರಿಗೆ ಜ್ಯೋತಿಷ್ಯ ಎಂದರೇನು ತಿಳಿದಿದೆಯೇ? ಜ್ಯೋತಿಷ್ಯವೆಂಬುದು ಗಣಿತ. ನಿಖರ ಲೆಕ್ಕಾಚಾರದ ಮೇಲೆ ಸಿಗುವ ಗ್ರಹಗಳ ಕೋನ/ಸ್ಥಿತಿ, ಚಲನೆಯನ್ನು ಆಧರಿಸಿ ಅದರ ಫಲವನ್ನು ಹೇಳಲಾಗುತ್ತದೆ. ಇವತ್ತಿಗೂ ನಮ್ಮ ಪಂಚಾಂಗಗಳ ಗ್ರಹಣ, ಮಳೆನಕ್ಷತ್ರ, ಹುಣ್ಣಿಮೆ/ಅಮವಾಸ್ಯೆ, ಸಂಕ್ರಮಣ ಹೀಗೆ ಪ್ರತಿಯೊಂದು ನಿಖರವಾಗಿರುತ್ತದೆಯಲ್ಲವೆ. ಪಂಚಾಂಗಗಳೂ ಕೂಡಾ ಮೌಢ್ಯದ ಭಾಗವೇ? ಜ್ಯೋತಿಷ್ಯ ಕಲಿಯದೆ ದೂರದರ್ಶನಗಳಲ್ಲಿ ಜನರನ್ನು ಯಾಮಾರಿಸುವ ಕಳ್ಳ ಜ್ಯೋತಿಷಿಗಳನ್ನು ನಿಗ್ರಹಿಸಬೇಕೆ ಹೊರತು ಜ್ಯೋತಿಷ್ಯವನ್ನೇ? ಅಷ್ಟಮಂಗಲ ಪ್ರಶ್ನೆಯಿಡುವಾಗ ಆ ಜಾಗದ ಅರಿವಿಲ್ಲದ ಎಲ್ಲಿಂದಲೋ ಕರೆಸಿದ ಪುದುವಾಳ/ಜ್ಯೋತಿಷಿ ನಿಖರ ಮಾಹಿತಿಯನ್ನು(ಇಂತಹ ಸ್ಥಳದಲ್ಲಿ ಇಂತಹ ವಸ್ತು ಇದೆ, ಇಂತಹ ಘಟನೆ ನಡೆದಿದೆ) ಹೇಳುತ್ತಾರಾದರೆ ಅಲ್ಲೇನೋ ವಿಶೇಷವಿರಲೇಬೇಕಲ್ಲವೆ? ಹೌದು. ನಮ್ಮ ನಿಜವಾದ ಸಮಸ್ಯೆ ಇರುವುದೇ ಅತೀಂದ್ರಿಯತ್ವವನ್ನು ಕೂಡಾ ವಿಜ್ಞಾನದೊಂದಿಗೆ ಮೇಳೈಸಲು ಯತ್ನಿಸುವುದರಲ್ಲಿ! ಕಲ್ಪನೆಗೆ ಮೀರಿದ್ದನ್ನು ಕಲ್ಪನಾತೀತ ಧ್ಯಾನ/ಶಕ್ತಿಯಿಂದ ಕಂಡುಕೊಳ್ಳಬೇಕೆ ಹೊರತು ಜಡ ವಸ್ತುಗಳ ಪ್ರಯೋಗದಿಂದಲ್ಲ!

ಕಾಂತೀಯ ಅಲೆಗಳು ಪರಿಣಾಮ ಬೀರುತ್ತವೆ ಎನ್ನುವ ಕಾರಣಕ್ಕಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುತ್ತಾರೆ. ಚರ್ಚು ಅಥವಾ ಮಸೀದಿ ಕಟ್ಟಿದಂತೆ ಸಿಕ್ಕ ಸಿಕ್ಕ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸೋದಿಲ್ಲ. ಅಲ್ಲದೆ ದೇವಾಲಯದ ಗರ್ಭಗುಡಿ ಇಂಥಹುದೇ ಆಕಾರದಲ್ಲಿರಬೇಕು ಹಾಗೂ ಅಷ್ಟಬಂಧದ ಮೂಲಕವೇ ವಿಗ್ರಹ ಪ್ರತಿಷ್ಠಾಪಿಸಬೇಕೆನ್ನುವ ಕ್ರಮವಿರುತ್ತದೆಯೆಂದಾದರೆ ಅದಕ್ಕೇನೋ ಕಾರಣ ಇರಬೇಕಲ್ಲವೆ? ನಮಗೆ ತಿಳಿದಿರದಿದ್ದ ಮಾತ್ರಕ್ಕೆ ಇವುಗಳೆಲ್ಲ ಮೂಢನಂಬಿಕೆಗಳೇ? ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ವಸ್ತುವನ್ನು ಧ್ಯಾನಿಸುವ ಹಾಗೂ ಚಿಟಿಕೆ ಹೊಡೆಯುವಷ್ಟರಲ್ಲಿ ಧ್ಯಾನವನ್ನು ಬೇರೆಡೆಗೆ ಹೊರಳಿಸಿ ಮರಳಿ ಬರುವ ಸಾಧನೆಯ ಪ್ರಾತ್ಯಕ್ಷಿಕೆಯನ್ನು ಕೆಲವು ಸಾಧುಗಳನ್ನು ಒಗ್ಗೂಡಿಸಿಕೊಂಡು ದಲಾಯಿ ಲಾಮಾ ಪ್ರಾತ್ಯಕ್ಷಿಕೆ ನೀಡಿದಾಗ ಅದುವರೆಗೆ ಮಿದುಳೇ ಎಲ್ಲವನ್ನು ನಿಯಂತ್ರಿಸುತ್ತದೆ ಎಂದು ಸಾಧಿಸುತ್ತಾ ಬಂದಿದ್ದ ವಿಜ್ಞಾನಿ ಬಳಗ ತಮ್ಮ ಕ್ರಿಯೆಗಳಿಂದ ಮೆದುಳನ್ನೇ ನಿಯಂತ್ರಿಸುವ ಪರಿಯನ್ನು ಕಂಡಾಗ ನಿಬ್ಬೆರಗಾಗಿತ್ತು. ಹೀಗೆ ಅಲ್ಲಿಂದಾಚೆಗೆ ವಿಜ್ಞಾನಿಗಳು ಹೇಗೆ ನಮ್ಮ ಮಾತು ಮಿದುಳನ್ನು ತಲುಪಿ ತನ್ಮೂಲಕ ಹೇಗೆ ದೇಹವನ್ನು ನಿಯಂತ್ರಿಸಬಲ್ಲುದು ಎಂದು ಅರಿತರು. ಮಾತ್ರವಲ್ಲ ಔಷಧ ಕೊಡುವುದು ಮಾತ್ರವಲ್ಲ ಔಷಧ ಕೊಡುವಾತನ ಒಂದು ಹಿತವಾದ ಮಾತು, ಔಷಧ ತೆಗೆದುಕೊಂಡಿದ್ದೇನೆ ಹಾಗಾಗಿ ಗುಣವಾಗುತ್ತದೆ ಎಂಬ ನಂಬಿಕೆ ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆಯಲ್ಲ. ಇವನ್ನೆಲ್ಲಾ ಮೂಢನಂಬಿಕೆ ಎಂದು ಬದಿಗೆ ಸರಿಸಬೇಕಾದರೆ ಮನೋವಿಜ್ಞಾನವನ್ನೇ ಮೂಢನಂಬಿಕೆ ಎನ್ನಲೇ ಬೇಕಾಗುತ್ತದೆಯಲ್ಲವೆ?

ಮೊಹರಂ ಹೆಸರಿನಲ್ಲಿ ಮುಸ್ಲಿಂ ಯುವಕರು ಮೈ, ಕೈ ಸೇರಿದಂತೆ ದೇಹವನ್ನೆಲ್ಲ ಚಾಕು ಗಳಿಂದ ಕೂಯ್ದುಕೊಂಡು ಒಂದು ಜೀವವನ್ನು ಉಳಿಸಬಲ್ಲ ರಕ್ತವನ್ನು ರಸ್ತೆಗೆ ಚಲ್ಲುವುದು ಸಿದ್ದ ರಾಮಯ್ಯ ನವರಿಗೆ ಮೌಢ್ಯವೆನಿಸಲಿಲ್ಲವೆ? ಸುನ್ನತ್ ಹೆಸರಿನಲ್ಲಿ ಸಣ್ಣ ಮಕ್ಕಳ ಮರ್ಮಾಂಗಕ್ಕೆ ಕತ್ತರಿ ಹಾಕೋದು ಇವರಿಗೆ ಮೌಡ್ಯ ಎನಿಸುವುದಿಲ್ಲವೇ? ಊರಿಡೀ ಕೇಳುವಂತೆ ಹತ್ತಾರು ಮೈಕುಗಳನ್ನಳವಡಿಸಿ ಕಿರುಚುವುದು, ಟೋಪಿ ಧರಿಸುವುದು, ಕ್ರಿಶ್ಚಿಯನ್ನರು ಕೊರಳಲ್ಲಿ ಧರಿಸುವ ಶಿಲುಭೆ, ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದು ಪ್ರಾರ್ಥನೆ ಮಾಡುವುದು ಇವುಗಳೆಲ್ಲಾ ಮೌಢ್ಯತೆಯಲ್ಲದೆ ಮತ್ತೇನು?

ಹಿಂದೂಗಳ ನಂಬಿಕೆಗಳನ್ನೆಲ್ಲಾ ಮೂಢನಂಬಿಕೆಗಳು ಅಂತ ಹೇಳುವವರು ತಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಸ್ವಲ್ಪ ಯೋಚಿಸಬೇಕು. ವಿದೇಶೀ ಕಂಪೆನಿಗಳ ಜಾಹೀರಾತುಗಳಿಗೆ ಮಾರು ಹೋಗಿ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಆ ವಸ್ತುಗಳನ್ನು ಬಳಸುವ ನಮ್ಮ ಅಂಧಶೃದ್ಧೆಗಿಂತ ಯಾರಿಗೂ ಉಪದ್ರವ ಆಗದ ಈ ಮೇಲಿನ ನಂಬಿಕೆಗಳೇ ಮೇಲು ಅಂತ ಅನ್ನಿಸೋದಿಲ್ಲವೆ? ಫೇರ್ ಆಂಡ್ ಲವ್ಲಿಯಿಂದ ಸೌಂದರ್ಯ ವೃದ್ಧಿಸುವುದರ ಬದಲು ಮೊಡವೆಗಳಾದದ್ದೆ ಹೆಚ್ಚು! ಪೆಪ್ಸಿ, ಕೋಕ್ ಮುಂತಾದುವುಗಳು ಶೌಚಾಲಯ ಸ್ವಚ್ಛಗೊಳಿಸಲಷ್ಟೇ ಯೋಗ್ಯವಾಗಿದ್ದರೂ ಕಣ್ಣು ಮುಚ್ಚಿ ಅದನ್ನು ಕುಡಿಯುತ್ತೇವಲ್ಲ ಅದು ಮೂಢನಂಬಿಕೆಯಲ್ಲವೆ? ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳುವ ಉಪ್ಪಿರದ , ಹಲ್ಲುಗಳಿಗೆ ಮುಪ್ಪು ಬರಿಸುವ ಕೋಲ್ಗೇಟ್ ಬಳಸುವುದು ಎಷ್ಟೊಂದು ದೊಡ್ಡ ಮೂಢನಂಬಿಕೆ! ವಿದೇಶಗಳಲ್ಲಿ ಹಾನಿಕಾರಕವೆಂದು ನಿಷೇಧಿಸಿದ ಔಷದಿಗಳನ್ನು ಕಣ್ಣು ಮುಚ್ಚಿ ನುಂಗುವ ಹಾಗೂ ಪ್ರಪಂಚದ ಮೊದಲ ಹಾಗೂ ಏಕಾಮೇವದ್ವಿತೀಯ ಔಷಧ ಪದ್ದತಿ ಆಯುರ್ವೇದವನ್ನೇ ದೂರುವವರ ಮನಸ್ಥಿತಿಗೆ ಏನೆನ್ನಬೇಕು? ವಿವೇಕಾನಂದರು ಒಂದು ಮಾತು ಹೇಳಿದ್ದರು, "ಭಾರತೀಯವಾದುದನ್ನು ಮೊದಲು ಸ್ವೀಕರಿಸಿ ಆಮೇಲೆ ಪ್ರಶ್ನಿಸು. ಪಾಶ್ಚಾತ್ಯವಾದುದನ್ನು ಮೊದಲು ಪ್ರಶ್ನಿಸು, ಆಮೇಲೆ ಸ್ವೀಕರಿಸು". ನಾವು ಮಾಡುತ್ತಿರುವುದು ತದ್ವಿರುದ್ದ!

ತಮ್ಮದಾದ ಅಭಿಪ್ರಾಯವನ್ನು ಕಾನೂನು ಎಂಬ ಖಡ್ಗದಂಚಿನಲ್ಲಿರಿಸಿ ಜನರನ್ನು ಬಗ್ಗು ಬಡಿಯುವ ಆಲೋಚನೆಯಿಂದಲೇ ತಯಾರು ಮಾಡಿದಂತಿದೆ ಈ "ಮೂಢನಂಬಿಕೆ ವಿರೋಧಿ ಕಾನೂನು" ಅಷ್ಟಕ್ಕೂ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರವನ್ನು ಕೊಟ್ಟವರ್ಯಾರು? ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡು ಅವರ ಮೇಲೆ ತಮ್ಮದಾದ ಅಭಿಪ್ರಾಯವನ್ನು ಹೇರುವುದು ಸರ್ವಾಧಿಕಾರವಲ್ಲವೆ? ಒಬ್ಬನ ನಂಬಿಕೆ ಇನ್ನೊಬ್ಬನಿಗೆ ಮೂಢನಂಬಿಕೆಯಾಗಿ ಕಾಣಬಹುದು. ಹಾಗಂತ ಅದನ್ನು ನಿಷೇಧಿಸಬೇಕು ಎಂದರೆ ಹೇಗೆ? ಅಷ್ಟಕ್ಕೂ ಮೂಢ ನಂಬಿಕೆ ಎನ್ನುವ ಮೊದಲು ನಂಬಿಕೆ ಅಂದರೇನು ಅಂತ ಮೊದಲು ಸ್ಪಷ್ಟಪಡಿಸಬೇಕಲ್ಲವೆ? ಅಷ್ಟಕ್ಕೂ ನಂಬಿಕೆ ಎನ್ನುವುದು ವಿಜ್ಞಾನ ಶೋಧಿಸಿದ ಸತ್ಯ ಸಂಗತಿಯೇ ಆಗಿರಬೇಕೆಂದರೆ ಆಗ ಅದು ಸತ್ಯ ಎಂದು ಹೇಗಾಗುತ್ತದೆ? ವೈಜ್ಞಾನಿಕ ಸಂಶೋಧನೆಯೆನ್ನುವುದು ಹಿಂದಿನ ಸಂಶೋಧನೆಗಳ ಮೇಲೆ, ತತ್ವಗಳ ಮೇಲೆ ಆಧರಿತವಾಗಿರುತ್ತದೆ. ಹಾಗಾಗಿ ಅದು ಸತ್ಯವೆಂದಾದರೆ ಎಷ್ಟು ಕಾಲದವರೆಗೆ? ಯಾಕೆಂದರೆ ಯಾವುದೇ ವೈಜ್ಞಾನಿಕ ಸಂಶೋಧನೆ ಅದು ನಿಂತಿರುವ ಬುಡ ಅಲುಗಾಡಿದಾಗ ಅದು ಬಿದ್ದು ಹೋಗುವುದು ಸಹಜ. ಹಾಗಾದರೆ ನಂಬಿಕೆ ವಿಜ್ಞಾನದ ತಳಹದಿಯ ಮೇಲೆಯೇ ನಿಂತಿರಬೇಕು ಎನ್ನುವುದು ಕೂಡಾ ಒಂದು ಭ್ರಮೆ ಅರ್ಥಾತ್ ಮೂಢನಂಬಿಕೆಯೇ ಆಯಿತಲ್ಲ! ಒಂದು ಸಮಾಜದ ನಡೆನುಡಿಗಳನ್ನು ಕಾನೂನಿಂದ ನಿಯಂತ್ರಿಸಬಹುದು ಎಂದು ಹೊರಟಿರುವ ಸರಕಾರ ತಾನೇ ಮೌಢ್ಯದಲ್ಲಿ ಬಿದ್ದು ತೊಳಲಾಡುತ್ತಿದೆ ಅನ್ನಲಡ್ಡಿಯಿಲ್ಲ ಅಲ್ಲವೇ?