ಪುಟಗಳು

ಶನಿವಾರ, ನವೆಂಬರ್ 23, 2013

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!

ಮೂಢನಂಬಿಕೆ ನಿಷೇಧ ಕಾನೂನಿನ ಸುತ್ತ...ಅನುಮಾನಗಳ ಹುತ್ತ!ಮೂಢನಂಬಿಕೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲು ಹೊರಟಿರುವ ಸರಕಾರದ ಕ್ರಮದ ವಿರುದ್ದ ಸಹಜವಾಗಿಯೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಕಾನೂನು ಸನಾತನ ಸಂಸ್ಕೃತಿಯ ಮೇಲೆ ಸವಾರಿ ಮಾಡಲು ಪ್ರಗತಿಪರರು ಅಂತ ತಮ್ಮನ್ನು ತಾವು ಕರೆದುಕೊಂಡವರಿಗೆ ಸಿಕ್ಕ ಒಂದು ಅವಕಾಶ ಎಂದು ಎಂತಹ ಅಜ್ಞಾನಿಗಾದರೂ ಅರ್ಥವಾಗುವ ಸಂಗತಿ. ಹಿಂದೂಗಳ ನಂಬಿಕೆಯನ್ನೇ ಗುರಿಯಾಗಿರಿಸಿ ಈ ದೇಶದಿಂದ ಸನಾತನ ಧರ್ಮವನ್ನು ಕಿತ್ತೆಸೆಯುವ ಸಲುವಾಗಿ ನಡೆಯುತ್ತಿರುವ ಷಡ್ಯಂತ್ರದ ಭಾಗವೆಂದರೂ ಅತಿಶಯೋಕ್ತಿಯಲ್ಲ. ಕರಡನ್ನು ಸಿದ್ಧಪಡಿಸುವ ತಂಡದಲ್ಲಿ ಇದ್ದ ಪ್ರತಿಯೊಬ್ಬನು ಸನಾತನ ಧರ್ಮದ ವಿರೋಧಿಯೇ! ಸಾಮಾನ್ಯನಿಗೂ ಅರ್ಥವಾಗುವ ಈ ಷಡ್ಯಂತ್ರ ಶಿಕ್ಷಿತರು ಎನ್ನಿಸಿಕೊಂಡ ವರ್ಗಕ್ಕೆ ಅರ್ಥವಾಗದೇ ಇರೋದು ವಿಪರ್ಯಾಸ. ಕಪ್ಪುಚರ್ಮದ ಬ್ರಿಟಿಷರನ್ನೇ ನಾನು ಅಳವಡಿಸಿದ ಶಿಕ್ಷಣ ವ್ಯವಸ್ಥೆ ಉತ್ಪಾದನೆ ಮಾಡುತ್ತದೆ ಎಂಬ ಮೆಕಾಲೆ ಅಣಿಮುತ್ತುಗಳು ಅಕ್ಷರಶಃ ನಿಜವಾಗಿರೋದು ಅಪ್ಪಟ ಸತ್ಯ. ಒಂದು ಕಾನೂನನ್ನು ರಚಿಸುವಾಗ ಇತ್ತಂಡಗಳ ವಾದವನ್ನು ಆಲಿಸಬೇಕೆಂಬ ನಿಯಮವನ್ನೇ ಮರೆತ ಸರಕಾರ ತನ್ನ ಭಟ್ಟಂಗಿಗಳ ನೆರವಿನಿಂದ ತನ್ನ ಅಂತ್ಯಕ್ಕೆ ತಾನೇ ಹೊಂಡ ತೋಡುತ್ತಿದೆ!

ಈ ನಿಷೇಧದ ಪಟ್ಟಿಯಲ್ಲಿ ಹಿಂದೂಗಳ ನಂಬಿಕೆಗಳನ್ನು ಹೊರತುಪಡಿಸಿ ಉಳಿದವ್ಯಾವುವು ಕಾಣದೇ ಇರುವುದು ಎಲ್ಲರ ಸಂಶಯಕ್ಕೆ ಕಾರಣವಾಗಿದೆ. ಈ ಕಾನೂನೇನಾದರೂ ಜಾರಿಗೆ ಬಂದರೆ ನಾಗತಂಬಿಲ, ನಾಗ ಪೂಜೆ, ನಾಗ ಮಂಡಲ, ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ, ಭೂತ ಕೋಲ, ಪರ್ವ, ವಾಸ್ತು ಹೋಮ, ಭೂಮಿ ಪೂಜೆ, ಅಡ್ಡ ಪಲ್ಲಕ್ಕಿ, ಪಾದ ಪೂಜೆ, .... ಯಾವುದನ್ನೂ ಮಾಡಬಾರದು. ರುದ್ರಾಕ್ಷಿ ಧರಿಸಬಾರದು, ಜ್ಯೋತಿಷ್ಯ, ವಾಸ್ತು ಕೇಳಬಾರದು, ಹೇಳಲೂ ಬಾರದು ಹೀಗೆ ಯಾವುದು ನಮ್ಮ ಜೀವನದ ಅವಿಭಾಜ್ಯ ಅಂಗಗಳಿವೆಯೋ ಅವೆಲ್ಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಷ್ಟಕ್ಕೂ ನಾಗಾರಾಧನೆ, ರುದ್ರಾಕ್ಷ, ಭೂತಕೋಲ, ಜ್ಯೋತಿಷ, ವಾಸ್ತುಶಾಸ್ತ್ರ ಇವೇ ಮುಂತಾದುವುಗಳನ್ನು ನಂಬುವವರಿಂದ ಸಮಾಜಕ್ಕಾಗುವ ಸಮಸ್ಯೆಯಾದರೂ ಏನು? ಮಾನಸಿಕವಾಗಿ ಖಿನ್ನರಾದ, ಆರ್ಥಿಕವಾಗಿ ತೊಂದರೆಗೊಳಗಾದ ಅಥವಾ ಇನ್ನಾವುದೇ ಸಮಸ್ಯೆಗೊಳಗಾದ ಜನ ನಾಗಾರಾಧನೆ, ಕೋಲ, ಜ್ಯೋತಿಷಿ ಹೇಳಿದ ಯಾವುದೇ ಪೂಜೆ ಪುನಸ್ಕಾರ ಮಾಡಿದರೆ ಈ ಸರ್ಕಾರಕ್ಕೇನು ನಷ್ಟ? ಇವತ್ತು ನಾಗಾರಾಧನೆ ನಿಷೇಧಿಸಿದವರು ನಾಳೆ ದೇವಾಲಯಗಳಲ್ಲಿ ಪೂಜೆ ಮಾಡುವುದು ನಿಷೇಧಿಸಲಾರರು ಎಂಬುದಕ್ಕೆ ಏನು ಗ್ಯಾರಂಟಿ?

ರುದ್ರಾಕ್ಷ! ಶುದ್ಧ ನೀರು, ಶುದ್ಧ ಆಹಾರ, ಬೆಂಕಿ ಮುಂತಾದುವುಗಳ ಮೇಲೆ ಹಿಡಿದಾಗ ಪ್ರದಕ್ಷಿಣಾಕಾರವಾಗಿ ಅದು ಸುತ್ತುತ್ತದೆಯೆಂದಾದರೆ ಅದರಲ್ಲೇನೋ ಶಕ್ತಿ ಇರಲೇಬೇಕಲ್ಲವೆ? ಹೌದು ಸಾಧು ಸನ್ಯಾಸಿಗಳು ಅರಣ್ಯದಲ್ಲಿ ಅಲೆಯುವ ಸಂದರ್ಭದಲ್ಲಿ ಸಿಕ್ಕ ನೀರು, ಆಹಾರವನ್ನು ಪರೀಕ್ಷಿಸಲು ಬಳಸುತ್ತಿದ್ದುದು ರುದ್ರಾಕ್ಷವನ್ನೇ. ಅದು ಧರಿಸಿದವನ ದೇಹದ ಸುತ್ತಲಿನ ಕಾಂತೀಯ ವಲಯವನ್ನು ಪ್ರಭಾವಿಸಿ ಅದನ್ನು ಶುದ್ಧಗೊಳಿಸುತ್ತದೆ. ಅಂದರೆ ನಕರಾತ್ಮಕ ವ್ಯಕ್ತಿಗಳ ವಿರುದ್ಧ ಅದೊಂದು ಕವಚದಂತೆ ವರ್ತಿಸುತ್ತದೆ ಮಾತ್ರವಲ್ಲ ರಕದೊತ್ತಡವನ್ನು ತಗ್ಗಿಸುತ್ತದೆ. ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದನ್ನು ಧರಿಸುವುದು ಹಾಗೂ ಮಾರುವುದನ್ನು ಮೂಢನಂಬಿಕೆ ಎಂದು ನಿಷೇಧಿಸಲು ಹೊರಟಿರುವ ಸರಕಾರಕ್ಕೆ ಏನೆನ್ನಬೇಕು? ಇದರ ಬದಲು ಭದ್ರಾಕ್ಷವನ್ನು ರುದ್ರಾಕ್ಷ ಎಂದು ಹೇಳಿ ಮಾರುವ ಕಳ್ಳವ್ಯಾಪಾರಿಗಳನ್ನು ನಿಯಂತ್ರಿಸಲಿ.

ಮಾಟ, ವಶೀಕರಣವನ್ನು ನಿಷೇಧಿಸಬೇಕೆನ್ನೆವುದೇನೋ ಸರಿ. ಆದರೆ ಇವುಗಳನ್ಯಾರಾದರೂ ಇನ್ನೊಬ್ಬರಿಗೆ ಹೇಳಿ ಮಾಡುತ್ತಾರೆಯೇ? ಇಂಥವರೇ ಮಾಡಿದ್ದೆಂದು ಹೇಗೆ ಪತ್ತೆ ಹಚ್ಚಬಲ್ಲರು? ಅದನ್ನು ಪತ್ತೆಹಚ್ಚಹೊರಟವರು ಕೂಡಾ ಮೂಢನಂಬಿಕೆಯುಳ್ಳವರೆಂದೇ ಆಯಿತಲ್ಲ! ಯಾರಾದರೂ ದೂರು ಕೊಟ್ಟರೆ ದೂರು ಕೊಟ್ಟವರು ಕೂಡಾ ಅದನ್ನು ನಂಬಿದಂತೆ ಆಯಿತಲ್ವೇ? ಈಗ ಶಿಕ್ಷೆ ಯಾರಿಗೆ? ಮಾಟ ಮಾಡಿದವನಿಗೋ? ದೂರು ಕೊಟ್ಟವನಿಗೋ? ಪೊಲೀಸರಿಗೋ? ಅಥವಾ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೋ? ಕಾನೂನು ರೂಪಿಸಿದವನಿಗೋ?! ಪ್ರಾಣಿ ಬಲಿ ನಿಷೇಧಿಸಬೇಕೆನ್ನುವವರು ದಿನನಿತ್ಯ ಹಲಾಲ್/ಕುರ್ಬಾನಿ ಹೆಸರಲ್ಲಿ ನಡೆಯುವ ಗೋಹತ್ಯೆಯನ್ನು ಯಾಕೆ ವಿರೋಧಿಸುವುದಿಲ್ಲ? ಪ್ರಾಣಿ ಬಲಿಯಂತೆಯೇ ಕೇವಲ ತಿನ್ನುವುದಕ್ಕಾಗಿಯೇ ಪ್ರಾಣಿಗಳನ್ನು ಕೊಲ್ಲುವುದನ್ನು ಕೂಡಾ ನಿಷೇಧಿಸಬೇಕಲ್ಲವೆ? ಯಾರೇ ಸ್ವಾಮೀಜಿಯಾಗಲಿ ನನ್ನ ಪಾದ ಪೂಜೆ ಮಾಡಿ ಅಂತ ಕೇಳಿಕೊಳ್ಳುತ್ತಾರೆಯೇ ಅಥವಾ ಒತ್ತಾಯಪಡಿಸುತ್ತಾರೆಯೇ? ಅದು ಭಕ್ತರ ನಿಲುಮೆಯಲ್ಲದೆ ಮತ್ತೇನು? ಇವತ್ತು ಪಾದಪೂಜೆ ನಿಷೇಧಿಸುವವರು ನಾಳೆ ಹಿರಿಯರ ಕಾಲಿಗೆ ಅಡ್ಡ ಬೀಳುವುದನ್ನು/ಅಭಿವಾದನೆಯನ್ನು ನಿಷೇಧಿಸುವುದಿಲ್ಲ ಎಂಬುದಕ್ಕೆ ಸಾಕ್ಷಿ ಏನು? ಇವತ್ತು ರುದ್ರಾಕ್ಷಿ ಮಾಲೆ ಧರಿಸಬಾರದೆಂದವರು ನಾಳೆ ತಿಲಕ ಹಚ್ಚುವುದನ್ನೂ/ಭಸ್ಮ/ಗೋಪಿ ಧಾರಣೆಯನ್ನು ಮೌಢ್ಯವೆಂದಾರು!

ಜ್ಯೋತಿಷ್ಯವನ್ನು ಮೌಢ್ಯವೆನ್ನುವವರಿಗೆ ಜ್ಯೋತಿಷ್ಯ ಎಂದರೇನು ತಿಳಿದಿದೆಯೇ? ಜ್ಯೋತಿಷ್ಯವೆಂಬುದು ಗಣಿತ. ನಿಖರ ಲೆಕ್ಕಾಚಾರದ ಮೇಲೆ ಸಿಗುವ ಗ್ರಹಗಳ ಕೋನ/ಸ್ಥಿತಿ, ಚಲನೆಯನ್ನು ಆಧರಿಸಿ ಅದರ ಫಲವನ್ನು ಹೇಳಲಾಗುತ್ತದೆ. ಇವತ್ತಿಗೂ ನಮ್ಮ ಪಂಚಾಂಗಗಳ ಗ್ರಹಣ, ಮಳೆನಕ್ಷತ್ರ, ಹುಣ್ಣಿಮೆ/ಅಮವಾಸ್ಯೆ, ಸಂಕ್ರಮಣ ಹೀಗೆ ಪ್ರತಿಯೊಂದು ನಿಖರವಾಗಿರುತ್ತದೆಯಲ್ಲವೆ. ಪಂಚಾಂಗಗಳೂ ಕೂಡಾ ಮೌಢ್ಯದ ಭಾಗವೇ? ಜ್ಯೋತಿಷ್ಯ ಕಲಿಯದೆ ದೂರದರ್ಶನಗಳಲ್ಲಿ ಜನರನ್ನು ಯಾಮಾರಿಸುವ ಕಳ್ಳ ಜ್ಯೋತಿಷಿಗಳನ್ನು ನಿಗ್ರಹಿಸಬೇಕೆ ಹೊರತು ಜ್ಯೋತಿಷ್ಯವನ್ನೇ? ಅಷ್ಟಮಂಗಲ ಪ್ರಶ್ನೆಯಿಡುವಾಗ ಆ ಜಾಗದ ಅರಿವಿಲ್ಲದ ಎಲ್ಲಿಂದಲೋ ಕರೆಸಿದ ಪುದುವಾಳ/ಜ್ಯೋತಿಷಿ ನಿಖರ ಮಾಹಿತಿಯನ್ನು(ಇಂತಹ ಸ್ಥಳದಲ್ಲಿ ಇಂತಹ ವಸ್ತು ಇದೆ, ಇಂತಹ ಘಟನೆ ನಡೆದಿದೆ) ಹೇಳುತ್ತಾರಾದರೆ ಅಲ್ಲೇನೋ ವಿಶೇಷವಿರಲೇಬೇಕಲ್ಲವೆ? ಹೌದು. ನಮ್ಮ ನಿಜವಾದ ಸಮಸ್ಯೆ ಇರುವುದೇ ಅತೀಂದ್ರಿಯತ್ವವನ್ನು ಕೂಡಾ ವಿಜ್ಞಾನದೊಂದಿಗೆ ಮೇಳೈಸಲು ಯತ್ನಿಸುವುದರಲ್ಲಿ! ಕಲ್ಪನೆಗೆ ಮೀರಿದ್ದನ್ನು ಕಲ್ಪನಾತೀತ ಧ್ಯಾನ/ಶಕ್ತಿಯಿಂದ ಕಂಡುಕೊಳ್ಳಬೇಕೆ ಹೊರತು ಜಡ ವಸ್ತುಗಳ ಪ್ರಯೋಗದಿಂದಲ್ಲ!

ಕಾಂತೀಯ ಅಲೆಗಳು ಪರಿಣಾಮ ಬೀರುತ್ತವೆ ಎನ್ನುವ ಕಾರಣಕ್ಕಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎನ್ನುತ್ತಾರೆ. ಚರ್ಚು ಅಥವಾ ಮಸೀದಿ ಕಟ್ಟಿದಂತೆ ಸಿಕ್ಕ ಸಿಕ್ಕ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸೋದಿಲ್ಲ. ಅಲ್ಲದೆ ದೇವಾಲಯದ ಗರ್ಭಗುಡಿ ಇಂಥಹುದೇ ಆಕಾರದಲ್ಲಿರಬೇಕು ಹಾಗೂ ಅಷ್ಟಬಂಧದ ಮೂಲಕವೇ ವಿಗ್ರಹ ಪ್ರತಿಷ್ಠಾಪಿಸಬೇಕೆನ್ನುವ ಕ್ರಮವಿರುತ್ತದೆಯೆಂದಾದರೆ ಅದಕ್ಕೇನೋ ಕಾರಣ ಇರಬೇಕಲ್ಲವೆ? ನಮಗೆ ತಿಳಿದಿರದಿದ್ದ ಮಾತ್ರಕ್ಕೆ ಇವುಗಳೆಲ್ಲ ಮೂಢನಂಬಿಕೆಗಳೇ? ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ವಸ್ತುವನ್ನು ಧ್ಯಾನಿಸುವ ಹಾಗೂ ಚಿಟಿಕೆ ಹೊಡೆಯುವಷ್ಟರಲ್ಲಿ ಧ್ಯಾನವನ್ನು ಬೇರೆಡೆಗೆ ಹೊರಳಿಸಿ ಮರಳಿ ಬರುವ ಸಾಧನೆಯ ಪ್ರಾತ್ಯಕ್ಷಿಕೆಯನ್ನು ಕೆಲವು ಸಾಧುಗಳನ್ನು ಒಗ್ಗೂಡಿಸಿಕೊಂಡು ದಲಾಯಿ ಲಾಮಾ ಪ್ರಾತ್ಯಕ್ಷಿಕೆ ನೀಡಿದಾಗ ಅದುವರೆಗೆ ಮಿದುಳೇ ಎಲ್ಲವನ್ನು ನಿಯಂತ್ರಿಸುತ್ತದೆ ಎಂದು ಸಾಧಿಸುತ್ತಾ ಬಂದಿದ್ದ ವಿಜ್ಞಾನಿ ಬಳಗ ತಮ್ಮ ಕ್ರಿಯೆಗಳಿಂದ ಮೆದುಳನ್ನೇ ನಿಯಂತ್ರಿಸುವ ಪರಿಯನ್ನು ಕಂಡಾಗ ನಿಬ್ಬೆರಗಾಗಿತ್ತು. ಹೀಗೆ ಅಲ್ಲಿಂದಾಚೆಗೆ ವಿಜ್ಞಾನಿಗಳು ಹೇಗೆ ನಮ್ಮ ಮಾತು ಮಿದುಳನ್ನು ತಲುಪಿ ತನ್ಮೂಲಕ ಹೇಗೆ ದೇಹವನ್ನು ನಿಯಂತ್ರಿಸಬಲ್ಲುದು ಎಂದು ಅರಿತರು. ಮಾತ್ರವಲ್ಲ ಔಷಧ ಕೊಡುವುದು ಮಾತ್ರವಲ್ಲ ಔಷಧ ಕೊಡುವಾತನ ಒಂದು ಹಿತವಾದ ಮಾತು, ಔಷಧ ತೆಗೆದುಕೊಂಡಿದ್ದೇನೆ ಹಾಗಾಗಿ ಗುಣವಾಗುತ್ತದೆ ಎಂಬ ನಂಬಿಕೆ ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಗಳಿಂದಲೂ ಸಾಬೀತಾಗಿದೆಯಲ್ಲ. ಇವನ್ನೆಲ್ಲಾ ಮೂಢನಂಬಿಕೆ ಎಂದು ಬದಿಗೆ ಸರಿಸಬೇಕಾದರೆ ಮನೋವಿಜ್ಞಾನವನ್ನೇ ಮೂಢನಂಬಿಕೆ ಎನ್ನಲೇ ಬೇಕಾಗುತ್ತದೆಯಲ್ಲವೆ?

ಮೊಹರಂ ಹೆಸರಿನಲ್ಲಿ ಮುಸ್ಲಿಂ ಯುವಕರು ಮೈ, ಕೈ ಸೇರಿದಂತೆ ದೇಹವನ್ನೆಲ್ಲ ಚಾಕು ಗಳಿಂದ ಕೂಯ್ದುಕೊಂಡು ಒಂದು ಜೀವವನ್ನು ಉಳಿಸಬಲ್ಲ ರಕ್ತವನ್ನು ರಸ್ತೆಗೆ ಚಲ್ಲುವುದು ಸಿದ್ದ ರಾಮಯ್ಯ ನವರಿಗೆ ಮೌಢ್ಯವೆನಿಸಲಿಲ್ಲವೆ? ಸುನ್ನತ್ ಹೆಸರಿನಲ್ಲಿ ಸಣ್ಣ ಮಕ್ಕಳ ಮರ್ಮಾಂಗಕ್ಕೆ ಕತ್ತರಿ ಹಾಕೋದು ಇವರಿಗೆ ಮೌಡ್ಯ ಎನಿಸುವುದಿಲ್ಲವೇ? ಊರಿಡೀ ಕೇಳುವಂತೆ ಹತ್ತಾರು ಮೈಕುಗಳನ್ನಳವಡಿಸಿ ಕಿರುಚುವುದು, ಟೋಪಿ ಧರಿಸುವುದು, ಕ್ರಿಶ್ಚಿಯನ್ನರು ಕೊರಳಲ್ಲಿ ಧರಿಸುವ ಶಿಲುಭೆ, ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದು ಪ್ರಾರ್ಥನೆ ಮಾಡುವುದು ಇವುಗಳೆಲ್ಲಾ ಮೌಢ್ಯತೆಯಲ್ಲದೆ ಮತ್ತೇನು?

ಹಿಂದೂಗಳ ನಂಬಿಕೆಗಳನ್ನೆಲ್ಲಾ ಮೂಢನಂಬಿಕೆಗಳು ಅಂತ ಹೇಳುವವರು ತಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಸ್ವಲ್ಪ ಯೋಚಿಸಬೇಕು. ವಿದೇಶೀ ಕಂಪೆನಿಗಳ ಜಾಹೀರಾತುಗಳಿಗೆ ಮಾರು ಹೋಗಿ ಅದರ ಸತ್ಯಾಸತ್ಯತೆ ಪರಿಶೀಲಿಸದೆ ಆ ವಸ್ತುಗಳನ್ನು ಬಳಸುವ ನಮ್ಮ ಅಂಧಶೃದ್ಧೆಗಿಂತ ಯಾರಿಗೂ ಉಪದ್ರವ ಆಗದ ಈ ಮೇಲಿನ ನಂಬಿಕೆಗಳೇ ಮೇಲು ಅಂತ ಅನ್ನಿಸೋದಿಲ್ಲವೆ? ಫೇರ್ ಆಂಡ್ ಲವ್ಲಿಯಿಂದ ಸೌಂದರ್ಯ ವೃದ್ಧಿಸುವುದರ ಬದಲು ಮೊಡವೆಗಳಾದದ್ದೆ ಹೆಚ್ಚು! ಪೆಪ್ಸಿ, ಕೋಕ್ ಮುಂತಾದುವುಗಳು ಶೌಚಾಲಯ ಸ್ವಚ್ಛಗೊಳಿಸಲಷ್ಟೇ ಯೋಗ್ಯವಾಗಿದ್ದರೂ ಕಣ್ಣು ಮುಚ್ಚಿ ಅದನ್ನು ಕುಡಿಯುತ್ತೇವಲ್ಲ ಅದು ಮೂಢನಂಬಿಕೆಯಲ್ಲವೆ? ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಕೇಳುವ ಉಪ್ಪಿರದ , ಹಲ್ಲುಗಳಿಗೆ ಮುಪ್ಪು ಬರಿಸುವ ಕೋಲ್ಗೇಟ್ ಬಳಸುವುದು ಎಷ್ಟೊಂದು ದೊಡ್ಡ ಮೂಢನಂಬಿಕೆ! ವಿದೇಶಗಳಲ್ಲಿ ಹಾನಿಕಾರಕವೆಂದು ನಿಷೇಧಿಸಿದ ಔಷದಿಗಳನ್ನು ಕಣ್ಣು ಮುಚ್ಚಿ ನುಂಗುವ ಹಾಗೂ ಪ್ರಪಂಚದ ಮೊದಲ ಹಾಗೂ ಏಕಾಮೇವದ್ವಿತೀಯ ಔಷಧ ಪದ್ದತಿ ಆಯುರ್ವೇದವನ್ನೇ ದೂರುವವರ ಮನಸ್ಥಿತಿಗೆ ಏನೆನ್ನಬೇಕು? ವಿವೇಕಾನಂದರು ಒಂದು ಮಾತು ಹೇಳಿದ್ದರು, "ಭಾರತೀಯವಾದುದನ್ನು ಮೊದಲು ಸ್ವೀಕರಿಸಿ ಆಮೇಲೆ ಪ್ರಶ್ನಿಸು. ಪಾಶ್ಚಾತ್ಯವಾದುದನ್ನು ಮೊದಲು ಪ್ರಶ್ನಿಸು, ಆಮೇಲೆ ಸ್ವೀಕರಿಸು". ನಾವು ಮಾಡುತ್ತಿರುವುದು ತದ್ವಿರುದ್ದ!

ತಮ್ಮದಾದ ಅಭಿಪ್ರಾಯವನ್ನು ಕಾನೂನು ಎಂಬ ಖಡ್ಗದಂಚಿನಲ್ಲಿರಿಸಿ ಜನರನ್ನು ಬಗ್ಗು ಬಡಿಯುವ ಆಲೋಚನೆಯಿಂದಲೇ ತಯಾರು ಮಾಡಿದಂತಿದೆ ಈ "ಮೂಢನಂಬಿಕೆ ವಿರೋಧಿ ಕಾನೂನು" ಅಷ್ಟಕ್ಕೂ ಇನ್ನೊಬ್ಬರ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರವನ್ನು ಕೊಟ್ಟವರ್ಯಾರು? ಇನ್ನೊಬ್ಬರ ಹಕ್ಕನ್ನು ಕಸಿದುಕೊಂಡು ಅವರ ಮೇಲೆ ತಮ್ಮದಾದ ಅಭಿಪ್ರಾಯವನ್ನು ಹೇರುವುದು ಸರ್ವಾಧಿಕಾರವಲ್ಲವೆ? ಒಬ್ಬನ ನಂಬಿಕೆ ಇನ್ನೊಬ್ಬನಿಗೆ ಮೂಢನಂಬಿಕೆಯಾಗಿ ಕಾಣಬಹುದು. ಹಾಗಂತ ಅದನ್ನು ನಿಷೇಧಿಸಬೇಕು ಎಂದರೆ ಹೇಗೆ? ಅಷ್ಟಕ್ಕೂ ಮೂಢ ನಂಬಿಕೆ ಎನ್ನುವ ಮೊದಲು ನಂಬಿಕೆ ಅಂದರೇನು ಅಂತ ಮೊದಲು ಸ್ಪಷ್ಟಪಡಿಸಬೇಕಲ್ಲವೆ? ಅಷ್ಟಕ್ಕೂ ನಂಬಿಕೆ ಎನ್ನುವುದು ವಿಜ್ಞಾನ ಶೋಧಿಸಿದ ಸತ್ಯ ಸಂಗತಿಯೇ ಆಗಿರಬೇಕೆಂದರೆ ಆಗ ಅದು ಸತ್ಯ ಎಂದು ಹೇಗಾಗುತ್ತದೆ? ವೈಜ್ಞಾನಿಕ ಸಂಶೋಧನೆಯೆನ್ನುವುದು ಹಿಂದಿನ ಸಂಶೋಧನೆಗಳ ಮೇಲೆ, ತತ್ವಗಳ ಮೇಲೆ ಆಧರಿತವಾಗಿರುತ್ತದೆ. ಹಾಗಾಗಿ ಅದು ಸತ್ಯವೆಂದಾದರೆ ಎಷ್ಟು ಕಾಲದವರೆಗೆ? ಯಾಕೆಂದರೆ ಯಾವುದೇ ವೈಜ್ಞಾನಿಕ ಸಂಶೋಧನೆ ಅದು ನಿಂತಿರುವ ಬುಡ ಅಲುಗಾಡಿದಾಗ ಅದು ಬಿದ್ದು ಹೋಗುವುದು ಸಹಜ. ಹಾಗಾದರೆ ನಂಬಿಕೆ ವಿಜ್ಞಾನದ ತಳಹದಿಯ ಮೇಲೆಯೇ ನಿಂತಿರಬೇಕು ಎನ್ನುವುದು ಕೂಡಾ ಒಂದು ಭ್ರಮೆ ಅರ್ಥಾತ್ ಮೂಢನಂಬಿಕೆಯೇ ಆಯಿತಲ್ಲ! ಒಂದು ಸಮಾಜದ ನಡೆನುಡಿಗಳನ್ನು ಕಾನೂನಿಂದ ನಿಯಂತ್ರಿಸಬಹುದು ಎಂದು ಹೊರಟಿರುವ ಸರಕಾರ ತಾನೇ ಮೌಢ್ಯದಲ್ಲಿ ಬಿದ್ದು ತೊಳಲಾಡುತ್ತಿದೆ ಅನ್ನಲಡ್ಡಿಯಿಲ್ಲ ಅಲ್ಲವೇ?
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ