ಪುಟಗಳು

ಗುರುವಾರ, ನವೆಂಬರ್ 27, 2014

ಸಮಾಜ ಛಿದ್ರಗೊಂಡಿತು...ಸ್ವಾಭಿಮಾನ ಮರೆತು ಹೋಯಿತು!



 ಸಮಾಜ ಛಿದ್ರಗೊಂಡಿತು...ಸ್ವಾಭಿಮಾನ ಮರೆತು ಹೋಯಿತು!
              ರಾಷ್ಟ್ರೀಯ ಸ್ವಯಂಸೇವಾ ಸಂಘ ಮತ್ತು ಅದರ ಅಂಗ ಸಂಸ್ಥೆಗಳು ಹಾಗೂ ಇನ್ನಿತರ ರಾಷ್ಟ್ರೀಯವಾದಿ ಸಂಸ್ಥೆಗಳ ಸತತ ಪ್ರಯತ್ನಗಳ ಫಲವಾಗಿ ತನ್ನ ಇತಿಹಾಸ ಹಾಗೂ ಭವಿಷ್ಯವನ್ನು ಕುರಿತು ಗರ್ವಪಡುವ ಒಂದು ಜಾಗೃತ ಸಮಾಜ ರೂಪುಗೊಳ್ಳುತ್ತಿದೆಯಾದರೂ ಇಂದಿಗೂ ಬಹುಪಾಲು ಜನತೆ ಬ್ರಿಟಿಷರ ಬಗೆಗೆ ಒಂದು ರೀತಿಯ ಸಹಾನುಭೂತಿ ಹೊಂದಿರುವುದು ಸುಳ್ಳಲ್ಲ. ಬ್ರಿಟಿಷರು ರೈಲು-ಶಿಕ್ಷಣ-ಕೈಗಾರಿಕೆಗಳನ್ನು ಸ್ಥಾಪಿಸಿದರು ಎನ್ನುವ ಪ್ರಶಂಸೆಯ ನುಡಿಗಳನ್ನು ರಾಷ್ಟ್ರೀಯವಾದಿ ಎನಿಸಿಕೊಂಡವರು ಕೂಡಾ ಆಗಾಗ ಹೇಳುತ್ತಿರುವುದು ನೋಡಿದಾಗ ನೈಜತೆಯ ಮೇಲೆ ಬೆಳಕು ಚೆಲ್ಲುವುದು ಅವಶ್ಯವೆನಿಸುತ್ತದೆ. ಇನ್ನು ಕೆಲವರು ಬ್ರಿಟಿಷರು ನಮ್ಮ ಶಿಕ್ಷಣ ವ್ಯವಸ್ಥೆಯನ್ನಷ್ಟೇ ಬದಲಾಯಿಸಿದರು ಎಂದು ನಂಬಿದ್ದಾರೆ. ಆದರೆ ಬ್ರಿಟಿಷರು ಕೇವಲ ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ ಇಲ್ಲಿನ ಸಮಾಜದ ಭದ್ರ ಬುನಾದಿಯನ್ನೇ ಸುಟ್ಟು ಹಾಕಿದರು ಎನ್ನುವುದನ್ನು ಶ್ರೀ ಧರ್ಮಪಾಲರಂತಹ ಅನೇಕರು ತಮ್ಮ ಸಂಶೋಧನೆಗಳಿಂದ ದೃಢಪಡಿಸಿದ್ದಾರೆ. ಶಿಖರದಲ್ಲಿನ ಆಡಳಿತ ಬದಲಾವಣೆಯಾದರೂ ಕೆಳಸ್ತರಗಳಲ್ಲಿ ಮತಾಂಧ ಮೊಘಲರಿಂದಲೂ ಬದಲಾಯಿಸಲು ಸಾಧ್ಯವಾಗದ ಭಾರತದ ಸಮಾಜವ್ಯವಸ್ಥೆಯನ್ನು ತುಂಡರಿಸುವ ಮೂಲಕ ಬ್ರಿಟಿಷರು ಭಾರತದಲ್ಲಿ ತಂದಿಟ್ಟ ವರ್ಗ ಸಂಘರ್ಷ ಇಂದಿಗೂ ಜಾರಿಯಲ್ಲಿರುವುದು ಸೂರ್ಯ ಸತ್ಯ! ವಿಜಯನಗರದ ಅರಸರು ಇಂತಹ ಅನುಪಮ ಸಮಾಜ ವ್ಯವಸ್ಥೆಗೆ ಒಂದು ಮಾದರಿಯನ್ನೇ ನಿರ್ಮಿಸಿದರೆ, ಮರಾಠರು ಮೊಘಲರ ಮತಾಂಧತೆಗೆ ತುತ್ತಾಗಿ ಭಾರತ ನರಳುತ್ತಿದ್ದಾಗ ಪ್ರಾಚೀನ ಭಾರತದ ರಾಜ್ಯ-ಸಮಾಜ ವ್ಯವಸ್ಥೆಯನ್ನು ಮರುಸ್ಥಾಪಿಸಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ /೧೨ ಭಾಗ ರಾಜಸ್ವವನ್ನು ವಿಧಿಸಿದಾಗಲೂ ಜನ ದಂಗೆಯೇಳಲಿಲ್ಲ ಎಂದಾದರೆ ಅಂದಿನ ಸಮಾಜ ಎಷ್ಟು ಶ್ರೀಮಂತವಾಗಿದ್ದಿರಬೇಕು? ಆಂಗ್ಲರು ಬರುವುದಕ್ಕೆ ಮುನ್ನ ನಾವು ಸುಸಂಘಟಿತ ಸಮಾಜ ಹಾಗೂ ರಾಜ್ಯ ವ್ಯವಸ್ಥೆಯನ್ನು ಹೊಂದಿದ್ದೆವು. ವಿವಿಧ ಸ್ತರಗಳ ಜೋಡಣೆ ಬೇರಾವುದೇ ವ್ಯವಸ್ಥೆಗೆ ಹೋಲಿಸಲಾಗದಷ್ಟು ಉಚ್ಛ ಮಟ್ಟದಲ್ಲಿತ್ತು.
              ಆಂಗ್ಲರು ಭಾರತದ ಶಿಕ್ಷಣ ನೀತಿಯನ್ನು ಬದಲಾಯಿಸುವ ಮೊದಲು ಕಾಲದಲ್ಲಿ ಚಾಲ್ತಿಯಲ್ಲಿದ್ದ ದೇಶೀ ಶಿಕ್ಷಣವನ್ನು ಕುರಿತು ಕೆಲವು ಸರ್ವೇಕ್ಷಣೆಗಳನ್ನು ಮಾಡಿಸಿದ್ದರು. 1822-25 ನಡುವೆ ಇಂಥ ಒಂದು ವಿಸ್ತೃತ ಸರ್ವೇಕ್ಷಣೆಯನ್ನು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ನಡೆಸಲಾಗಿತ್ತು. ಇಂದಿನ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರದ ಬಹುಭಾಗ, ಒರಿಸ್ಸಾದ ಹಲವು ಜಿಲ್ಲೆಗಳು ಆಗಿನ ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟಿದ್ದವು. ಭಾಗಗಳಲ್ಲಿ ಸಮಯದಲ್ಲಿ 11575 ಶಾಲೆಗಳೂ, 1094 ಮಹಾವಿದ್ಯಾಲಯಗಳೂ ಇದ್ದವು. ಶಾಲೆಗಳಲ್ಲಿ 1,57,195 ವಿದ್ಯಾರ್ಥಿಗಳು, ಮಹಾವಿದ್ಯಾಲಯಗಳಲ್ಲಿ 5431 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಬಹುಷಃ ಒಬ್ಬನೇ ಅಧ್ಯಾಪಕ ಸಣ್ಣ ಸಮೂಹಗಳಿಗೆ ಬೋಧಿಸುವ ಪರಿಪಾಠ ಆಗ ಇದ್ದಿರಬಹುದು. ಬ್ರಿಟಿಷರು ಕೇವಲ ವಿದ್ಯಾರ್ಥಿಗಳ ಸಂಖ್ಯೆ ಮಾತ್ರವಲ್ಲ, ಜಾತಿಯ ಅಂಶವನ್ನೂ ದಾಖಲಿಸಿಟ್ಟಿದ್ದಾರೆ. ಸರ್ವೇಕ್ಷಣೆಯ ರೀತ್ಯಾ ತಮಿಳು ಭಾಷಿಕ ಪ್ರದೇಶಗಳಲ್ಲಿ ಶಾಲೆ ಅಥವಾ ಮಹಾವಿದ್ಯಾಲಯಗಳಲ್ಲಿ 70ರಿಂದ 80 ಪ್ರತಿಶತ ವಿದ್ಯಾರ್ಥಿಗಳು, ಒರಿಯಾ ಭಾಷಿಕ ಪ್ರದೇಶಗಳಲ್ಲಿ 67%, ಮಲೆಯಾಳಿಗಳ 54%, ತೆಲುಗು ಭಾಷಿಕ ಪ್ರದೇಶಗಳಲ್ಲಿ 40%ದಷ್ಟು ಶೂದ್ರ ಜಾತಿಗಳಿಂದ ಬಂದವರಾಗಿದ್ದರು.
                ಮದರಾಸು ಗವರ್ನರನ ಪ್ರಕಾರ ಶಾಲೆಗೆ ಹೋಗುವ ಪ್ರಾಯದ ಗಂಡು ಮಕ್ಕಳಲ್ಲಿ ಶೇ. ೨೫ರಷ್ಟು ಮಂದಿ ಶಾಲೆಗೆ ಹೋಗುತ್ತಿದ್ದು ಬಹುಪಾಲು ಗಂಡು ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಕೊಡಲಾಗುತ್ತಿತ್ತು. ಹೆಣ್ಣುಮಕ್ಕಳು ಮನೆಯಲ್ಲಿಯೇ ಶಿಕ್ಷಣವನ್ನು ಪಡೆಯುತ್ತಿದ್ದರು. ಮಲಬಾರ್ ಪ್ರಾಂತ್ಯದಲ್ಲಿ ಸಮುದ್ರಿನ್ ರಾಜವಂಶಸ್ಥರಿಂದ ನಡೆಸಲ್ಪಡುತ್ತಿದ್ದ ಮಹಾವಿದ್ಯಾಲಯದಲ್ಲಿ ಜನಸಾಮಾನ್ಯರೂ ಶಿಕ್ಷಣ ಪಡೆಯುತ್ತಿದ್ದರು. ಮಲಬಾರ್ ಜಿಲ್ಲೆಯಲ್ಲಿ ಶಾಲೆಗೆ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ೩೧೯೬ ಗಂಡು ಮಕ್ಕಳಿದ್ದರೆ ೧೧೨೨ ಹೆಣ್ಣುಮಕ್ಕಳಿದ್ದರು! ಇದರ ೬೭ ವರ್ಷಗಳ ತರುವಾಯ ಪ್ರದೇಶದ ಮುಸ್ಲಿಮ್ ಜನಸಂಖ್ಯೆ ದ್ವಿಗುಣಗೊಂಡಿತ್ತು. ಶಾಲೆಗೆ ಹೋಗುತ್ತಿದ್ದ ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ೭೦೫ಕ್ಕಿಳಿದಿತ್ತು! ಶೈಕ್ಷಣಿಕ ಮಟ್ಟ ಕುಸಿದಿತ್ತು, ಮತಾಂಧತೆ ಬೆಳೆದಿತ್ತು! ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಇದಕ್ಕೆ ಹಲವು ಅಪವಾದಗಳೂ ಇದ್ದವು. ೧೭೯೦ರ ಸುಮಾರಿಗೆ ಬಂಗಾಳದ ನವದ್ವೀಪ ವಿಶ್ವವಿದ್ಯಾಲಯದಲ್ಲಿ  ೧೧೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಅಲ್ಲಿ ೧೫೦ ಜನ ನುರಿತ ಅಧ್ಯಾಪಕರಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ವ್ಯಾಕರಣ-ತತ್ವಶಾಸ್ತ್ರವನ್ನು ಅಭ್ಯಸಿಸುತ್ತಿದ್ದರಾದರೂ ಅವರಿಗೆ ಉಳಿದೆಲ್ಲಾ ಶಿಕ್ಷಣ ಶಾಲೆಗಳಲ್ಲಿ ಅಥವಾ ಮನೆಯಲ್ಲಿಯೇ ಸಿಗುತ್ತಿತ್ತು.
             ೧೮೦೦ರ ಸುಮಾರಿಗೆ ಚೆಂಗಲ್ ಪೇಟೆ ಜಿಲ್ಲೆಯಲ್ಲಿ ೧೯೭೫ರ ದರಗಳಿಗೆ ಬದಲಾಯಿಸಿದರೆ ಏಳೂವರೆ ರೂಪಾಯಿಗೆ ಸಮನಾದ ಕೂಲಿ ಕೃಷಿಕಾರ್ಮಿಕನೊಬ್ಬನಿಗೆ ಸಿಗುತ್ತಿತ್ತು. ೧೯೭೫ರಲ್ಲಿ ಸಿಗುತ್ತಿದ್ದ ಕೂಲಿ ಕೇವಲ ಎರಡೂವರೆ ರೂಪಾಯಿ! ಅಲಹಾಬಾದ್-ವಾರಣಾಸಿ ಪ್ರಾಂತ್ಯದಲ್ಲಿ ಮೊತ್ತ ಇನ್ನೂ ಹೆಚ್ಚಾಗಿತ್ತು. ೧೮೦೪ರಲ್ಲಿ ಇಂಗ್ಲೆಂಡಿನ "ಎಡಿನ್ ಬರ್ಗ್ ರಿವ್ಯೂ" ಪತ್ರಿಕೆ ಬ್ರಿಟನ್ನಿನ ಕೃಷಿ ಕಾರ್ಮಿಕರಿಗೆ ಹೋಲಿಸಿದಲ್ಲಿ ಭಾರತದಲ್ಲಿ ದೊರಕುವ ಕೂಲಿ ಎಷ್ಟೋ ಅಧಿಕವಾಗಿದೆ. ಅರ್ಥ ವ್ಯವಸ್ಥೆ ಕುಸಿಯುತ್ತಿರುವ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಭಾರತೀಯರ ಕೃಷಿ ಕಾರ್ಮಿಕರ ಕೂಲಿ ಇಷ್ಟು ಹೆಚ್ಚಿರಬೇಕಾದರೆ ಹಿಂದೆ ಮೌಲ್ಯ ಎಷ್ಟು ಹೆಚ್ಚಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿತ್ತು! ಕಾಲದಲ್ಲಿ ಭಾರತದಲ್ಲಿ ಗೋಧಿಯ ಉತ್ಪಾದನೆ ಇಂಗ್ಲೆಂಡಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿತ್ತು.  ಆಗ್ರಾದಂತಹ ಸ್ಥಳಗಳಲ್ಲಿ ಸಾಮಾನ್ಯನಿಗೂ ತಿನ್ನಲು ಬೆಣ್ಣೆ ಬೆರೆಸಿದ ಖಿಚಡಿ ಪ್ರತಿದಿನ ದೊರೆಯುತ್ತಿತ್ತು ಎಂದು ಡಚ್ ಯಾತ್ರಿಕನೊಬ್ಬ ಬರೆದಿದ್ದಾನೆ. ೧೭೩೬ರಲ್ಲಿ ದೆಹಲಿಯ ಲೇಖಕನೊಬ್ಬ "ಕೂಲಿವಂಶದಲ್ಲಿ ಜನಿಸಿದ ಯುವಕ ತನ್ನ ಸಾಮಾನ್ಯ ಅವಶ್ಯಕತೆಗಳಿಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡುತ್ತಾನೆ " ಎಂದು ಬರೆದಿದ್ದಾನೆ. ೧೯ನೇ ಶತಮಾನದ ಆರಂಭದವರೆಗೆ ಭಾರತದಲ್ಲಿನ ಬಡವರ ಅಲ್ಲದೆ ಆಂಗ್ಲ ಭಾಷೆಯಲ್ಲಿ "ಕೆಳವರ್ಗ" ಎಂದು ಕರೆಯಲ್ಪಡುವ ಜನರ ಜೀವನಮಟ್ಟ ಬ್ರಿಟನ್ನಿನ  ಸೂರ್ಯ ಮುಳುಗದ ನಾಡಿನ ಜನರಿಗೆ ಹೋಲಿಸಿದಲ್ಲಿ ಉನ್ನತಮಟ್ಟದಲ್ಲಿತ್ತು. ಕೃಷಿಯ ಉಪಕರಣಗಳು, ತಂತ್ರಜ್ಞಾನವು ಉತ್ಕೃಷ್ಟವಾಗಿತ್ತು. ಬಟ್ಟೆ ತಯಾರಿಕಾ ಉದ್ಯಮ, ಕಬ್ಬಿಣ-ಉಕ್ಕು ರಾಸಾಯನಿಕಗಳು, ಬಣ್ಣ ಹಾಗೂ ಬಣ್ಣದ ಸಾಮಾನುಗಳ ತಯಾರಿಕೆ, ಬೆಲ್ಲ-ಸಕ್ಕರೆಯ ಉತ್ಪಾದನೆ, ಹಡಗು ತಯಾರಿಕೆ, ವಾಸ್ತುಶಿಲ್ಪ, ಕೆರೆ-ಜಲಾಶಯಗಳ ನಿರ್ಮಾಣ, ಭೂಮಾರ್ಗ-ಜಲಮಾರ್ಗಗಳ ಅಭಿವೃದ್ಧಿಯಲ್ಲಿ ಭಾರತ ಜಗತ್ತಿನಲ್ಲಿ ಅಗ್ರ ಸ್ಥಾನದಲ್ಲಿತ್ತು.
                ಪ್ರಾಚೀನ ಭಾರತದಲ್ಲಿ ಉತ್ಪನ್ನವಾಗುತ್ತಿದ್ದ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಉತ್ತರಭಾರತದ "ಅತರಂಜನ ಖೇಡಿ"ಯಂಥ ಸ್ಥಳಗಳಲ್ಲಿ ಹನ್ನೆರಡನೇ ಶತಮಾನದಲ್ಲೇ ಆರಂಭವಾಗಿತ್ತು ಎನ್ನುವ ಅಂಶ ಇತ್ತೀಚಿನ ಸಂಶೋಧನೆಗಳಿಂದ ತಿಳಿದಿದೆಯಾದರೂ ಅದಕ್ಕೂ ಹಲವಾರು ಸಾವಿರ ಹಿಂದಿನ ಉಕ್ಕಿನ ಸ್ಥಂಭಗಳು ಲಭ್ಯವಿವೆ. ೧೮೦೦ರ ಸುಮಾರಿಗೆ ಉದ್ಯಮ ದೇಶದಾದ್ಯಂತ ಹಬ್ಬಿತ್ತು. ೧೮೦೦ರಲ್ಲಿ ದೇಶದಲ್ಲಿ ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುತ್ತಿದ್ದ ಕುಲುಮೆಗಳ ಸಂಖ್ಯೆ ಹತ್ತುಸಾವಿರಕ್ಕೂ ಅಧಿಕ. ಇಂಥ ಒಂದು ಕುಲುಮೆ ವರ್ಷದಲ್ಲಿ ಮೂವತ್ತು ವಾರಗಳ ಕಾಲ ಕೆಲಸ ಮಾಡಿ ೨೦ ಟನ್ ಶ್ರೇಷ್ಠ ಮಟ್ಟದ ಉಕ್ಕನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಕುಲುಮೆಗಳು ಹಗುರವಾಗಿದ್ದು ಎತ್ತಿನ ಗಾಡಿಯಲ್ಲಿ ಸಾಗಿಸಬಹುದಾಗಿತ್ತು. ದಿನಗಳಲ್ಲಿ ಅಲಹಬಾದಿನಂತಹ ಅತೀ ಉಷ್ಣ ಪ್ರದೇಶಗಳಲ್ಲೂ ಕೃತಕವಾಗಿ ಮಂಜುಗಡ್ಡೆಯನ್ನು ತಯಾರಿಸಲಾಗುತ್ತಿತ್ತು! ದೇವಿ ಹಾಕುವುದು, ಪ್ಲಾಸ್ಟಿಕ್ ಸರ್ಜರಿ ಹದಿನೆಂಟನೇ ಶತಮಾನದಲ್ಲಿಯೂ ಪ್ರಚಲಿತವಿದ್ದುದು ನಮ್ಮದು ಚರಕ-ಸುಶ್ರುತರ ಪೀಳಿಗೆಯೆಂಬುದರ ನಿದರ್ಶನವಲ್ಲವೇ? ಆದರೆ ನಾವು ಮರೆತು ಬಿಟ್ಟೆವು! ಪುಣೆಯಲ್ಲಿ ಅಂತಹ ಚಿಕಿತ್ಸಾಲಯಗಳಿದ್ದ ಬಗ್ಗೆ ಬ್ರಿಟಿಷರ ಉಲ್ಲೇಖವೂ ಇದೆ. ೧೮೦೦ಕ್ಕೆ ಮೊದಲು ಬ್ರಿಟಿಷ್ ಕಲೆಕ್ಟರುಗಳು ಬ್ರಿಟನ್ನಿನ ಕೃಷಿ ಉಪಕರಣಗಳ ಸುಧಾರಣೆಗೆ ಸಹಾಯವಾಗಲೆಂದು ಇಲ್ಲಿನ ಅನೇಕ ಕೃಷಿ ಉಪಕರಣಗಳನ್ನು ಮದ್ರಾಸು ಪ್ರೆಸಿಡೆನ್ಸಿಯ ಜಿಲ್ಲೆಯೊಂದರಿಂದ ಬ್ರಿಟನ್ನಿಗೆ ಕಳುಹಿಸಿದ ಅನೇಕ ವಿವರಗಳಿವೆ. ಅಂದರೆ ಅಂತಹ ದುರಂತಮಯ ಪರಿಸ್ಥಿತಿಯಲ್ಲೂ ಭಾರತದ ತಂತ್ರಜ್ಞಾನ ಮೇರುಮಟ್ಟದಲ್ಲಿತ್ತೆಂದರೆ ಭಾರತದ ಅಂತಃಸತ್ವ ಎಂತಹದ್ದಾಗಿರಬಹುದು!
             
             ಭಾರತೀಯ ರಾಜ್ಯವ್ಯವಸ್ಥೆಯ ಉಚ್ಛ ಸ್ಥಾನಗಳಲ್ಲಿದ್ದ ಜನರ ಜೀವನ ಶೈಲಿ ಹೇಗಿತ್ತು? ಬ್ರಿಟಿಷರು ಬರೆದ-ಸಂಗ್ರಹಿಸಿದ ಮಾಹಿತಿಗಳಿಂದ ಅವರದ್ದು ಸರಳ ಹಾಗೂ ಮಿತವ್ಯಯದ ಜೀವನವೆಂದು ತಿಳಿದು ಬರುತ್ತದೆ. ಇದಕ್ಕೆ ಅಪವಾದಗಳೂ ಇರಬಹುದು. ೧೮೦೦ರ ಸಮಯದ ಗವರ್ನರ್ ಜನರಲನೊಬ್ಬ "ಉಚ್ಛವರ್ಗದ ನೌಕರ ಹಾಗೂ ಸಾಮಾನ್ಯ ನೌಕರರನ್ನು ಧರಿಸಿದ ಬಟ್ಟೆಯ ಹೊಳಪಿನಿಂದಷ್ಟೇ ಗುರುತಿಸಬಹುದಿತ್ತು. ಹಿಂದೂ ರಾಜರು ತಮ್ಮ ಸ್ವಂತದ ವ್ಯವಸ್ಥೆಗೆ ಬಹಳ ಕಡಿಮೆ ಹಣ ಖರ್ಚು ಮಾಡುತ್ತಿದ್ದರು." ಎಂದಿದ್ದಾನೆ. ಇದನ್ನು ಅನೇಕರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಯೂರೋಪಿಯನ್ ಯಾತ್ರಿಕರಿಗೆ ಇಲ್ಲಿನ ಜೀವನ ಮಟ್ಟವನ್ನು ನೋಡಿದ ಬಳಿಕ ಅದು ವೈಭವೋಪೇತ ಎನಿಸಿದ್ದರೆ ಆಶ್ಚರ್ಯವಿಲ್ಲ. ಬಹುಪಾಲು ಬ್ರಿಟಿಷರ ಆಕ್ಷೇಪವೆಂದರೆ ರಾಜರುಗಳು ತಮ್ಮ ಆದಾಯದ ಬಹುತೇಕವನ್ನು ಬ್ರಾಹ್ಮಣರಿಗೆ,ದೇವಾಲಯಗಳಿಗೆ ಕೊಡುತ್ತಿದ್ದರು ಎನ್ನುವುದು! ಬ್ರಿಟಿಷರು  ಬೌದ್ಧಿಕವಾದ, ಕೌಶಲಭರಿತ ಕೆಲಸವನ್ನು ಮಾಡುತ್ತಿದ್ದ ಎಲ್ಲರನ್ನೂ ಬ್ರಾಹ್ಮಣರೆಂದೇ ಪರಿಗಣಿಸುತ್ತಿದ್ದುದು ಇದಕ್ಕೆ ಕಾರಣವಿರಬಹುದು. ಆದರೆ ಶಿಕ್ಷಣ-ವೈದ್ಯಕೀಯ-ಶಿಲ್ಪಶಾಸ್ತ್ರಾದಿ ಅರವತ್ನಾಲ್ಕು ವಿದ್ಯೆಗಳಿಗೆ ಸಂಬಂಧಿಸಿದ ವೃತ್ತಿಗಳಲ್ಲಿ ಬ್ರಾಹ್ಮಣೇತರರೂ ಇರುತ್ತಿದ್ದರು. ಅಲ್ಲದೆ ದೇವಾಲಯಗಳು ಕೇವಲ ಪೂಜೆ-ಪುನಸ್ಕಾರಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅವು ವಿದ್ಯೆ-ಸಂಸ್ಕೃತಿ-ಸಮಾಜದ ಪೋಷಕ ಸ್ಥಾನಗಳಾಗಿದ್ದವು. ದೇವಸ್ಥಾನಗಳಿಂದಲೇ ಉತ್ಸವಾದಿ ಮನೋರಂಜನೆಯ ಕಾರ್ಯಕ್ರಮಗಳು, ವಿದ್ಯಾಲಯಗಳು, ಶಿಲ್ಪ-ವೈದ್ಯ-ರಸಶಾಸ್ತ್ರ-ಕೌಶಲ ತರಬೇತಿ ಕೇಂದ್ರಗಳು, ಕೇದಾರದಿಂದ-ರಾಮೇಶ್ವರದವರೆಗಿನ ಧರ್ಮಛತ್ರಗಳು, ಕೆರೆ-ಕಟ್ಟೆ-ಜಲಾಶಯಗಳು, ಕುಂಭಮೇಳಾದಿ ಮಹಾ ಉತ್ಸವಗಳು ನಡೆಯುತ್ತಿದ್ದವು. ಗ್ರಾಮದ ವಿವಿಧ ಸಂಸ್ಥೆಗಳ ವೆಚ್ಚವನ್ನು ಪೂರೈಸಲು ಬಿಟ್ಟ ಮಾನ್ಯ ಭೂಮಿಯ ಒಡೆತನ ರಾಜನೈತಿಕ ಸಂಸ್ಥೆಗಳ ವಶದಲ್ಲಿರುತ್ತಿದ್ದವು. ಗ್ರಾಮದ ಎಲ್ಲಾ ಮಾಹಿತಿಯನ್ನಿಡುತ್ತಿದ್ದ ಕಛೇರಿ, ಗ್ರಾಮದ ತಳವಾರ, ಭೂ ಅಳತೆಯ ಕಾರ್ಯಗಳು, ಹಾಗೂ ಇಂತಹ ಅನೇಕ ಹುದ್ದೆಗಳಲ್ಲಿರುವವರಿಗೆ ಸಂಬಳ ನೀಡುವ ಹೊಣೆಗಾರಿಕೆಯನ್ನು ಬ್ರಾಹ್ಮಣೇತರರಿಗೇ ವಹಿಸಲಾಗುತ್ತಿತ್ತು. ಕಂದಾಯ ಬ್ರೀಟಿಷರು ವಿಧಿಸಿದ ಮೊತ್ತದ ಕಾಲುಭಾಗವೂ ಇರಲಿಲ್ಲ ಎಂದು ಥಾಮಸ್ ಮನ್ರೋ ಬರೆಯುತ್ತಾನೆ. ಹೆಚ್ಚಿನ ಸಂದರ್ಭಗಳಲ್ಲಿ ರೈತ ತನಗೆ ಉಚಿತವೆನಿಸುವಷ್ಟು ಕಂದಾಯವನ್ನು ಮಾತ್ರ ಕಟ್ಟುತ್ತಿದ್ದ. ೧೮೦೦ರ ಮೊದಲು ಬ್ರಿಟಿಷರು ನಡೆಸಿದ ಸರ್ವೇಕ್ಷಣೆಗಳನ್ನು ಗಮನಿಸಿದರೆ ಶ್ರೀಮಂತ-ಮಧ್ಯಮ-ಬಡವರ ನಡುವೆ ಬಹುದೊಡ್ಡ ಅಂತರವಿರಲಿಲ್ಲ ಎಂದು ತಿಳಿದು ಬರುತ್ತದೆ.
             ದಕ್ಷಿಣ ಭಾರತದಲ್ಲಿ ಆಂಗ್ಲ ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಗ್ರಾಮ ಪ್ರಧಾನ ಅಥವಾ ಸಾಮಾನ್ಯ ರೈತನಿಗೂ ವಸ್ತ್ರ ಅಥವಾ ಶಾಲು ಹೊದೆಸಿ ಗೌರವಿಸುವ ಪದ್ದತಿ ೧೮೦೦ರವರೆಗೂ ರೂಢಿಯಲ್ಲಿತ್ತು. ೧೭೯೬ರ ರಾಮನಾಡು ಜಿಲ್ಲೆಯ ಒಂದು ವರದಿಯಂತೆ ಆಂಗ್ಲ ನ್ಯಾಯಾಲಯಗಳಿಗೆ ಒಳ್ಳೆಯ ನಡತೆಯ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಲು ಬರುತ್ತಿದ್ದ ಜನರು ಅಲ್ಲಿನ ಅಧಿಕಾರಿಗಳು ತಮಗೆ ತಾಂಬೂಲ ನೀಡಬೇಕೆಂದು ಬಯಸಿದ್ದರು! ಆಂಗ್ಲ ಆಡಳಿತ ಇಲ್ಲಿ ಗಟ್ಟಿಯಾಗುವ ಮೊದಲು ಆಯಾ ಸ್ಥಳಗಳ ಸಂಪ್ರದಾಯ ಸದ್ಭಾವನೆ ಕಲಿಯುವುದು ಅನಿವಾರ್ಯವಾಗಿತ್ತು ಎಂದಾದರೆ ಭಾರತೀಯ ಸಮಾಜ ಎಷ್ಟು ಸುಶಿಕ್ಷಿತ-ಸುಶೀಲ-ಸುಗುಣಯುಕ್ತವಾಗಿದ್ದಿರಬೇಕು? ಪ್ರತಿಯೊಬ್ಬ ಆಕ್ರಮಣಕಾರ  ತಂದ ರಾಜ್ಯ ವ್ಯವಸ್ಥೆ ಇಲ್ಲಿನ ರಾಜ್ಯ ವ್ಯವಸ್ಥೆಗೆ ಹೋಲಿಸಿದಲ್ಲಿ ಪ್ರಾಥಮಿಕ ಮಟ್ಟದ್ದಾಗಿತ್ತು. ಹಾಗಾಗಿಯೇ ಆಕ್ರಮಣಕಾರರಿಗೆ ಇಲ್ಲಿ ಆಡಳಿತ ನಡೆಸಲು ಸುಲಭವಾದದ್ದು. ತುತ್ತತುದಿಯ ಆಡಳಿತ ವ್ಯವಸ್ಥೆ ಬದಲಾದರೂ ಅದರಿಂದ ಉಳಿದ ಸ್ತರಗಳಿಗೆ ಯಾವುದೇ ಅಪಾಯ ತಟ್ಟುತ್ತಿರಲಿಲ್ಲ. ಇದನ್ನು ಬದಲಾಯಿಸಿದುದೇ ಭಾರತದ ಸರ್ವ ನಾಶಕ್ಕೆ ಕಾರಣವಾಯಿತು.
ನಾವು ಆಂಗ್ಲರ ಅಧೀನರಾದ ಮೇಲೆ:
ನಮ್ಮಲ್ಲಿ ಎರಡು ಪ್ರಮುಖ ಬದಲಾವಣೆಗಳಾದವು.
) ಪರಂಪರಾನುಗತವಾಗಿ ಬಂದ ನಮ್ಮ ಪಂಡಿತರುಗಳು, ವಿದ್ವಾಂಸರುಗಳು ಸಾಮಾಜಿಕ ಜೀವನದಲ್ಲಿ ಕಡೆಗಣಿಸಲ್ಪಟ್ಟು ಹಿಂದೆ ಸರಿದು ಧಾರ್ಮಿಕ ಪುಸ್ತಕಗಳು ಹಾಗೂ ಕ್ರಿಯಾ-ಕರ್ಮಗಳಿಗಷ್ಟೇ ಸೀಮಿತರಾದರು.
)ಆಂಗ್ಲ ಸಂಸ್ಕೃತಿ-ಸಾಹಿತ್ಯ-ಮತಗಳ ಅಧಾರದಿಂದಲೇ ಚಿಗುರೊಡೆದ ಆಂಗ್ಲ ಶಿಕ್ಷಣದ ಪ್ರಭಾವ ನಮ್ಮ ಮೇಲಾಯಿತು.
ಇದರಿಂದ ಹಾಗೂ ಮುಂದೆ ನುಗ್ಗಿದ ಮಾರ್ಕ್ಸ್ ವಾದದ ಫಲವಾಗಿ ಇತಿಹಾಸವನ್ನು ತಿರುಚುವ, ನಂಬಿಕೆಯನ್ನು ಅವಹೇಳನ ಮಾಡುವ, ತನ್ನ ಅಭಿಪ್ರಾಯವನ್ನು ಸಮಾಜದ ಮೇಲೆ ಹೇರುವ ಸುಳ್ಳುಬುರುಕ ಧರ್ಮ-ಸಂಸ್ಕೃತಿ ವಿಹೀನ ಬುದ್ಧಿಜೀವಿ ವರ್ಗವೊಂದು ಸೃಷ್ಟಿಯಾಯಿತು. ಅದು ಮುಂದಕ್ಕೆ ಭಾರತದ ಸಮಗ್ರತೆ-ಸನಾತನತೆಗೆ ಮಾರಕವಾಯಿತು.
            ಭಾರತವನ್ನು ಸಂಪೂರ್ಣವಾಗಿ ಛಿದ್ರಗೊಳಿಸುವ ಕಾರ್ಯ ಕೈಗೂಡುವುದಿಲ್ಲ ಎಂಬುದನ್ನು ಅರಿತ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ಯೂರೋಪಿಯನ್ನರನ್ನು ಭಾರತದಲ್ಲಿ ನೆಲೆಗೊಳಿಸುವುದು ಸುಲಭಸಾಧ್ಯವಲ್ಲ ಎಂದು ಮನವರಿಕೆಯಾದಾಗ ಭಾರತವನ್ನು ಸಂಪನ್ಮೂಲಗಳ ಖಜಾನೆಯಾಗಿ ಬಳಸಿಕೊಳ್ಳುವ ಹಾಗೂ ಬ್ರಿಟನ್ನಿನ ಉದ್ಯಮಗಳಿಗೆ ಭಾರತವನ್ನು ಮಾರುಕಟ್ಟೆಯಾಗಿ ಪರಿವರ್ತಿಸುವ ಕಾರ್ಯವನ್ನು ಬ್ರಿಟಿಷರು ಆರಂಭಿಸಿದರು. ಇದಕ್ಕಾಗಿ ಭಾರತೀಯ ಸಮಾಜವನ್ನು ಆಂತರಿಕವಾಗಿ ಒಡೆದು ಸಾಕಷ್ಟು ಸಣ್ಣ ಹೋಳುಗಳನ್ನಾಗಿ ಮಾಡಿ ಅವುಗಳಲ್ಲಿ ಪರಸ್ಪರ ಜಗಳ ಹುಟ್ಟಿಸಿ ಸಮಾಜವನ್ನು ಜಡಸ್ಥಿತಿಗೆ ಕೊಂಡೊಯ್ದು ದೇಶದ ಯಾವುದೇ ಕಾರ್ಯಗಳು ಬಹುಕಾಲ ಮುಂದುವರಿಯದಂತೆ ನೋಡಿಕೊಳ್ಳುವುದು ಬಹು ಉಪಯುಕ್ತ ಎನ್ನುವುದು ಆಂಗ್ಲರಿಗೆ ತಿಳಿದಿತ್ತು. ಆಂಗ್ಲರ ನೀತಿ ಜಗತ್ತಿಗೇ ಪರಿಚಿತ. ೧೯೪೫ರ ಯುದ್ಧದಲ್ಲಿ ಸೋತ ಜರ್ಮನಿಯನ್ನು ಅದರ ಹಿಂದಿನ ಪಶುಪಾಲನಾ ವ್ಯವಸ್ಥೆಗೆ ತಲುಪಿಸಬೇಕೆಂಬ ವಿಚಾರವನ್ನು ಅಂದಿನ ಬ್ರಿಟಿಷ್ ಪ್ರಧಾನಿ ಚರ್ಚಿಲ್ ವ್ಯಕ್ತಪಡಿಸಿದ್ದು ತಿಳಿದಿರಬಹುದು. ಮಾತು ಸೂರ್ಯ ಮುಳುಗದ ಸಾಮ್ರಾಜ್ಯದ ರಾಜಕಾರಣಿಗಳು, ಬುದ್ಧಿಜೀವಿಗಳು, ಚಿಂತಕರು ಹಲವಾರು ಶತಮಾನಗಳ ಕಾಲ ವಿವಿಧ ದೇಶಗಳನ್ನು ವಶಪಡಿಸಿಕೊಂಡು ಆಳಿದ ರೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಭಾರತ ತಮಗಾಗಿ ಸಂಪನ್ಮೂಲಗಳ ಬೃಹತ್ ಖಜಾನೆ ಎನ್ನುವುದನ್ನು ಅವರು ಮನಗಂಡಿದ್ದರು. ಇಲ್ಲಿನ ಜನಸಂಖ್ಯೆಯ ಬಹಳಷ್ಟು ಭಾಗವನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡಾಗ ಅದು ಸಾಧ್ಯವೆಂದು ಅವರು ಕಂಡುಕೊಂಡಿದ್ದರು. ಕಾರ್ಯಕ್ಕಾಗಿ ಎಲ್ಲಾ ಕುಟಿಲೋಪಾಯಗಳನ್ನು ಅವರು ಬಳಸಿದರು. ಇದಕ್ಕಾಗಿ ಜನಸಮುದಾಯಗಳನ್ನೇ ನಾಶಗೊಳಿಸಿದರು. ಬರಗಾಲ-ಹಸಿವು-ಮಹಾಮಾರಿ ರೋಗಗಳಿಗೆ ಸಾಲುಸಾಲು ಜನ ಬಲಿಯಾಗುತ್ತಿದ್ದಾಗ ಸಂಭ್ರಮಾಚರಣೆ ನಡೆಸುತ್ತಿದ್ದರು. ಇಲ್ಲಿನ ಸಮಾಜ-ರಾಜ ವ್ಯವಸ್ಥೆಯನ್ನು ಎಳೆ ಎಳೆಯಾಗಿ ಕತ್ತರಿಸಿ ತಮ್ಮದೇ ಆಡಳಿತ ವ್ಯವಸ್ಥೆಯನ್ನು ತಂದು ಜನರನ್ನು ಆತ್ಮವಿಸ್ಮೃತಿಗೆ ತಳ್ಳಿದರು. ೧೮೨೦ರ ವೇಳೆಗೆ ಬ್ರಿಟಿಷ್ ಸರಕಾರ ಒಟ್ಟು ಕೃಷಿ ಉತ್ಪನ್ನದ ಶೇ ೩೦ರಷ್ಟು ಕಂದಾಯವನ್ನು ವಿಧಿಸಿದ್ದರೆ ಮುಂದೆ ಅದು ೫೦ರಷ್ಟಾಯಿತು. ಉಚ್ಛ ಅಧಿಕಾರಿಗಳಿಗೆ, ರಾಜರಿಗೆ ಕೊಡುವ ಹಣವನ್ನು ಹಲವಾರು ಪಟ್ಟು ಹೆಚ್ಚಿಸಿದರು. ಪ್ರತಿಯೊಂದು ಆಡಳಿತಾತ್ಮಕ ಸ್ತರಗಳ ನಡುವೆ ಬಹಳಷ್ಟು ಬದಲಾವಣೆ ತಂದರು. ಕಂದಾಯವನ್ನು ಶೇ ೫೦ಕ್ಕಿಂತಲೂ ಹೆಚ್ಚು ಮಾಡಿದರು. ಇದರಿಂದ ಶ್ರೀಮಂತ-ಮಧ್ಯಮ-ಬಡ ವರ್ಗಗಳ ನಡುವಿನ ಅಂತರ ಹೆಚ್ಚಿತು. ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದರು. ಬೌದ್ಧಿಕ ವರ್ಗವನ್ನು ಸಾಮಾನ್ಯ ವರ್ಗದಿಂದ, ಶ್ರೀಮಂತ ವರ್ಗವನ್ನು ಬಡ ವರ್ಗದಿಂದ ಹಾಗೂ ಸಾಮಾನ್ಯನನ್ನು ಧಾರ್ಮಿಕ-ನೈತಿಕ-ಸಾಮಾಜಿಕ ಮೌಲ್ಯದ ಬಗೆಗೆ ತಿಳಿಸಿ ಹೇಳುವ ವರ್ಗದಿಂದ ಬೇರ್ಪಡಿಸಿದರು. ತಮ್ಮದೇ ಶಿಕ್ಷಣವನ್ನು ಅಳವಡಿಸಿ ಭಾರತೀಯತೆಯ ಅಸ್ಮಿತೆಯನ್ನು ಪ್ರಶ್ನಿಸುವ ಪುಂಡರನ್ನು ಸೃಷ್ಟಿಸಿ ಸನಾತನ ಭಾರತೀಯತೆಯ ಕೊರಳಕೊಯ್ದರು!
          ಹಾಗಾದರೆ ಇದಕ್ಕೆ ಭಾರತೀಯರಿಂದ ವಿರೋಧ ವ್ಯಕ್ತವಾಗಲಿಲ್ಲವೇ? ಭಾರತೀಯರದ್ದೂ ಕ್ಷಾತ್ರ ತೇಜ. ಅಲ್ಲಲ್ಲಿ ಕ್ರಾಂತಿಯ ಬುಗ್ಗೆಗಳು ಪುಟಿದೇಳುತ್ತಲೆ ಇದ್ದವು. ಅವುಗಳಿಗೊಂದು ಸಾರ್ವತ್ರಿಕ ರೂಪವಿರಲಿಲ್ಲ ಅಷ್ಟೇ. ನಮ್ಮ ಇತಿಹಾಸಕಾರರು ಅವುಗಳನ್ನು ಮುಚ್ಚಿಟ್ಟರು. ಕ್ರಾಂತಿ ಬಿಡಿ ಸೌಮ್ಯ ರೀತಿಯ ಹೋರಾಟ-ಪ್ರತಿಭಟನೆ-ಆಂದೋಲನಗಳನ್ನೂ ಬ್ರಿಟಿಷ್ ಹಾಗೂ ಮಾರ್ಕ್ಸ್ ಶಿಷ್ಯರು ಮುಚ್ಚಿಟ್ಟರು. ಆದರೇನೂ ಬ್ರಿಟಿಷರ ಕಾರಣದಿಂದಲೇ ಈಗ ಬೆಳಕಿಗೆ ಬರುತ್ತಿವೆ. ಅಸಹಕಾರ ಆಂದೋಲನದ ಶ್ರೇಯಸ್ಸನ್ನು ಗಾಂಧಿಗಷ್ಟೇ ಸೀಮಿತವಾಗಿಸುವ ಕೆಲವು ಇತಿಹಾಸಕಾರರ ಪ್ರಯತ್ನ ಎಷ್ಟು ದಿನ ಉಳಿದೀತು? ಗಾಂಧಿಗಿಂತ ಮುಂಚೆಯೇ ಭಾರತದಲ್ಲಿ ಅಂತಹ ಅನೇಕ ಆಂದೋಲನಗಳು ನಡೆದಿದ್ದವು. ೧೮೧೦ರಲ್ಲಿ ವಾರಾಣಸಿಯಲ್ಲಿ ಮನೆಗಂದಾಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಎರಡು ಲಕ್ಷ ಜನ ಸೇರಿದ್ದರು. ಹಲವಾರು ದಿನಗಳವರೆಗೆ ನಗರದ ಎಲ್ಲಾ ಕಾರ್ಯಗಳು ಸ್ತಬ್ಧವಾಗಿದ್ದವು. ಕರ್ನಾಟಕ, ಮಲಬಾರ್, ಮಹಾರಾಷ್ಟ್ರಗಳಲ್ಲಿ ಹಲವಾರು ರೈತ ಆಂದೋಲನಗಳು ನಡೆದಿದ್ದವು. ಉಪ್ಪಿನ ಮೇಲೆ ವಿಧಿಸಿದ್ದ ತೆರಿಗೆಯ ವಿರುದ್ಧ ಆಂದೋಲನ ಗಾಂಧಿ ಹುಟ್ಟುವ ಮೊದಲೇ ೧೮೪೦ರಲ್ಲಿ ಸೂರತ್ತಿನಲ್ಲಿ ನಡೆದಿತ್ತು.
             ನಾವು ಸ್ವತಂತ್ರಗೊಂಡ ನಂತರ ನಮ್ಮ ರಾಜಕೀಯ ನಾಯಕರು ಬ್ರಿಟಿಷರನ್ನೇ ಅನುಕರಿಸಿದ್ದು ಎಂತಹ ಮೂರ್ಖತನ. ಒಂದು ಕಾಲದಲ್ಲಿ ಶಾಸನ ಗ್ರಾಮಗಳು, ಸಮುದಾಯ ಗ್ರಾಮಗಳು ಎಂದು ಕರೆಯಲ್ಪಡುತ್ತಿದ್ದ, ಇಸ್ರೇಲಿನ ಇಂದಿನ ಹಳ್ಳಿಗಳಂತಿದ್ದ ಸೌಂದರ್ಯ-ವಿನ್ಯಾಸ-ಯೋಜನೆ-ಕೃಷಿ-ಸೌಕರ್ಯಗಳಲ್ಲಿ ಸರ್ವಾಂಗ ಸುಂದರವಾಗಿದ್ದ ಬ್ರಿಟಿಷರ ಆಕ್ರಮಣದ ನಡುವೆಯೂ ಉಳಿದಿದ್ದ ದೇಶದ ಅನೇಕ ಗ್ರಾಮಗಳು "ಉಳುವವನೇ ಭೂಮಿಯ ಒಡೆಯ" ಎಂಬ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಕೊಚ್ಚಿಹೋದವು ಎಂದಿದ್ದಾರೆ ಶ್ರೀ ಧರ್ಮಪಾಲ್! ಇಂದಿಗೂ ಬ್ರಿಟಿಷರ ಕಾಲದ ಕಾನೂನುಗಳು ದೇಶದಲ್ಲಿ ಉಳಿದಿವೆ ಎಂದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡು ಏನಿದೆ. ಸದ್ಯಕ್ಕೆ ಭಾಜಪಾ ನೇತೃತ್ವದ ಕೇಂದ್ರ ಸರಕಾರ ಅಂತಹ ಕಾನೂನುಗಳನ್ನು ಕಿತ್ತೆಸೆಯುವ ಕಾರ್ಯ ಆರಂಭಿಸಿದೆ. ಪ್ರಧಾನಿ ನಮೋ ಕನಸಿನ ಆದರ್ಶ ಗ್ರಾಮ ಯೋಜನೆ ಭಾರತದ ಹಿಂದಿನ ಅನುಮಮ, ಸದೃಢ ಸಮಾಜವ್ಯವಸ್ಥೆಯನ್ನು ಮತ್ತೆ ಪ್ರತಿಷ್ಠಾಪಿಸೀತೇ?