ಪುಟಗಳು

ಭಾನುವಾರ, ನವೆಂಬರ್ 9, 2014

ಪ್ರಾಚೀನ ಭಾರತದಲ್ಲಿ ವಿಜ್ಞಾನ



ಪ್ರಾಚೀನ ಭಾರತದಲ್ಲಿ ವಿಜ್ಞಾನ
               ಸ್ವಾಮಿ ವಿವೇಕಾನಂದರು "ಪಾಶ್ಚಾತ್ಯವಾದ ಯಾವುದನ್ನೂ ಮೊದಲು ಪ್ರಶ್ನಿಸಿ ತದನಂತರ ಸರಿಯೆನಿಸಿದಲ್ಲಿ ಸ್ವೀಕರಿಸು. ಆದರೆ ಭಾರತೀಯವಾದುದನ್ನು ಮೊದಲು ಸ್ವೀಕರಿಸಿ ನಂತರ ಪ್ರಶ್ನಿಸು" ಎಂದಿದ್ದರು. ಆದರೆ ಇಂದಿನ ಭಾರತೀಯರು ಅದಕ್ಕೆ ತದ್ವಿರುದ್ಧವಾಗಿಯೇ ನಡೆಯುತ್ತಿದ್ದಾರೆ. ನಾವು ದನದ ಮಾಂಸದಿಂದ ಸಿದ್ಧಪಡಿಸುವ 'ಮೆಕ್ ಡೊನಾಲ್ಡ್'ನ ಉತ್ಪಾದನೆಗಳನ್ನು-ಪಿಜ್ಜಾ-ಬರ್ಗರುಗಳನ್ನು ಕಣ್ಣುಮುಚ್ಚಿ ಸ್ವೀಕರಿಸಿ ಆರೋಗ್ಯವನ್ನು ಸ್ಥಿರವಾಗಿಡುವ ಸಾತ್ವಿಕತೆಯನ್ನು ಬೆಳೆಸುವ ಆಹಾರಗಳನ್ನು ದೂರ ತಳ್ಳುತ್ತೇವೆ. ಹಿರಿಯರದ್ದು ಗೊಡ್ಡು ಸಂಪ್ರದಾಯ ಎಂದು ಹೇಳಿ ಪಾಶ್ಚಾತ್ಯರು ಹೇಳಿದ್ದೇ ಅಂತಿಮ ಸತ್ಯ ಎಂಬಂತೆ ಕಣ್ಣುಮುಚ್ಚಿ ಸ್ವೀಕರಿಸುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಪ್ರಕೃತಿ-ಮಾನವ ರಚನೆ-ಸಂಪ್ರದಾಯ-ಪದ್ದತಿ ಇವೆಲ್ಲವನ್ನು ಪೂರ್ವಾಗ್ರಹ ದೃಷ್ಟಿ ತೊರೆದು ಜ್ಞಾನದ ಒಳಗಣ್ಣಿನಿಂದ ನೋಡಿದಾಗ ನಮ್ಮ ಹಿರಿಯರ ಜ್ಞಾನ, ತಾಂತ್ರಿಕ ನೈಪುಣ್ಯಗಳು ನಮಗೆ ಬೆಳಕಾಗಿ ಕಂಡು ವೀರ ಸನ್ಯಾಸಿ ವಿವೇಕಾನಂದರ ಮಾತು ಎಷ್ಟು ಸತ್ಯ ಅನ್ನಿಸದಿರದು. ವಿಷ್ಣು ವರಾಹನಾಗಿ ಅವತರಿಸಿ ಗೋಲಾಕಾರದ ಭೂಮಿಯನ್ನು ತನ್ನ ಮೂತಿಯಿಂದ ಎತ್ತಿ ಹಿಡಿದು ಭೂಮಿಯನ್ನು ರಕ್ಷಿಸಿದ ಎನ್ನುತ್ತದೆ ವರಾಹ ಪುರಾಣ. ಇದು ನೈಜ ಘಟನೆಯೋ ಅಥವಾ ಕೇವಲ ಕಥೆಯೋ ಎಂಬುದನ್ನು ಬದಿಗಿಟ್ಟು ಇಲ್ಲಿರುವ ಒಂದು ಅಂಶ ಪುರಾತನ ಭಾರತೀಯರ ಅಪ್ರತಿಮ ಜ್ಞಾನಕ್ಕೆ ಕನ್ನಡಿ ಹಿಡಿದಿದೆ. ಅಂದರೆ ಭೂಮಿ ಗೋಲಾಕಾರವಾಗಿದೆ ಎಂಬುದು ಭೂಮಿಯ ಇತರ ಭಾಗಗಳಲ್ಲಿ ಜನವಸತಿಯೇ ಇಲ್ಲದಿದ್ದ ಕಾಲದಲ್ಲಿ ಸಹಸ್ರಾರು ವರ್ಷಗಳ ಮೊದಲೇ ಭಾರತೀಯರಿಗೆ ತಿಳಿದಿತ್ತು. ಇಂತಹ ಸಹಸ್ರ ಸಹಸ್ರ ಸಂಖ್ಯೆಯ ಉಲ್ಲೇಖಗಳು ನಮಗೆ ಸಿಗುತ್ತವೆ. ಆದರೆ ಅವುಗಳನ್ನು ನೋಡುವ ಕುತೂಹಲ ದೃಷ್ಟಿ ಬೇಕಷ್ಟೆ. ಅಂತಹ ವಿವಿಧ ಕ್ಷೇತ್ರಗಳಲ್ಲಿನ ಕೆಲವೊಂದು ಅಂಶಗಳನ್ನು ಇಲ್ಲಿ ಚರ್ಚಿಸಿದ್ದೇನೆ.
                    ಆಕಾಶ ವೀಕ್ಷಣೆಯ ಸಂದರ್ಭ ನೀವು ಚೇಳಿನಾಕಾರದ ನಕ್ಷತ್ರಗುಚ್ಛವೊಂದನ್ನು ಕಂಡಿರಬಹುದು. ಆ ಚೇಳಿನಾಕಾರದ ಹೃದಯ ಭಾಗದಲ್ಲಿ "ಅಂಟಾರಿಸ್" ಎನ್ನುವ "ಕೆಂಪು ನಕ್ಷತ್ರ"ವೊಂದಿದೆ. ಇದು ಈವರೆಗೆ ಕಾಣಸಿಕ್ಕಿರುವ ನಕ್ಷತ್ರಗಳಲ್ಲಿ ಹದಿನೇಳನೇ ಅತೀ ಹೆಚ್ಚು ಪ್ರಕಾಶಮಾನವಾಗುಳ್ಳ ನಕ್ಷತ್ರ. ನಮ್ಮ ಹಿರಿಯರು ಇದನ್ನು ಜೇಷ್ಠ ಎಂದು ಕರೆದಿದ್ದರು. ಜೇಷ್ಠ ಎಂದರೆ ಹಿರಿಯ ಅಥವಾ ದೊಡ್ಡದು ಎನ್ನುವ ಅರ್ಥ! ಅದು ಹದಿನೇಳನೆ ಅತ್ಯಂತ ದೊಡ್ಡ ನಕ್ಷತ್ರವಾದರೂ ಅದನ್ನು ನಮ್ಮ ಹಿರಿಯರು ಅದನ್ನು ದೊಡ್ಡದು ಅಂತ ಯಾಕೆ ಕರೆದರು. ಅದು ಸೂರ್ಯನಿಗಿಂತ 40ಸಾವಿರ ಪಟ್ಟು ದೊಡ್ಡದು. ಅದರ ವಿದ್ಯುತ್ಕಾಂತೀಯ ಪ್ರಕಾಶಮಾನತೆ ಸೂರ್ಯನಿಗಿಂತ ಅರವತ್ತೈದು ಸಾವಿರ ಪಟ್ಟು ಹೆಚ್ಚು. ಅಂದರೆ ಈ ಜೇಷ್ಠ ನಕ್ಷತ್ರ ಬರಿಗಣ್ಣಿಗೆ ಕಾಣುವ ಅತ್ಯಂತ ದೊಡ್ಡ ಅಂದರೆ ಅತೀ ಪ್ರಕಾಶಮಾನವಾಗುಳ್ಳ ನಕ್ಷತ್ರ. ಇದನ್ನು ಭಾರತೀಯರು ಆರೇಳು ಸಾವಿರ ವರ್ಷಗಳ ಹಿಂದೆಯೇ ಬರೇ ಕಣ್ಣ ನೋಟದಿಂದ ತಿಳಿದುಕೊಂಡಿದ್ದರು. ಕೋಟ್ಯಂತರ ಆಕಾಶಗಂಗೆಗಳಲ್ಲಿ ಇವತ್ತು ಮನುಷ್ಯನಿಗೆ ತಿಳಿದಿರುವ ಅಥವಾ ಕಾಣಬಹುದಾದ ಅತಿದೊಡ್ಡ ನಕ್ಷತ್ರ ಭೂಮಿಯಿಂದ ೫೫೦ ಜ್ಯೋತಿರ್ವರ್ಷ ದೂರದ ಆಂಟೆರಿಸ್. ಇದು ಈಗ ಕೆಂಪುದೈತ್ಯವಾಗಿ ಬದಲಾಗಿದೆ. ೫೧೨ ಮಿಲಿಯನ್ ಸೂರ್ಯರನ್ನು ಒಂದು ಅಂಟೆರಿಸ್‌ನಲ್ಲಿ ಹಿಡಿಸಬಹುದಂತೆ. ನಿಜಕ್ಕೂ ಅದು ಜ್ಯೇಷ್ಟನೇ. ಭಾರತದಲ್ಲಿ ಹತ್ತಾರು ಸಾವಿರ ವರ್ಷಗಳಿಂದ ಇದನ್ನು ಜೇಷ್ಟನೆಂದು ಕರೆಯುತ್ತಾರಾದರೂ ಪಾಶ್ಚಾತ್ಯರು ಇದನ್ನು ಕಂಡುಹಿಡಿದದ್ದು ೧೮೧೯ರಲ್ಲಿ. ನಕ್ಷತ್ರ ವೀಕ್ಷಣೆಯ ಹವ್ಯಾಸ ಇದ್ದವರು ಜೋಡಿ ನಕ್ಷತ್ರಗಳ ಬಗ್ಗೆ ತಿಳಿದಿರಬಹುದು. ನಮ್ಮ ಹಿರಿಯರು ಅಂಥವನ್ನು ಗುರುತಿಸಿದ್ದರು. ಅವುಗಳಲ್ಲೊಂದು ಜೋಡಿಗೆ ಅರುಂಧತಿ-ವಸಿಷ್ಠ ಅಂತ ಕರೆದಿದ್ದರು. ದಕ್ಷಿಣ ಭಾರತದಲ್ಲಿ ಮದುವೆಯ ದಿನ ರಾತ್ರಿ ನವಜೋಡಿ ಈ ಜೋಡಿ ನಕ್ಷತ್ರಗಳನ್ನು ನೋಡಬೇಕೆಂಬ ಸಂಪ್ರದಾಯ ಇದೆ. ಮಿಜಾರ್-ಅಲ್ಕೋರ್ ಎಂಬ ಆಧುನಿಕ ಹೆಸರಿನಿಂದ ಕರೆಯಲ್ಪಡುವ ಈ ಜೋಡಿ ನಕ್ಷತ್ರಗಳು ಒಟ್ಟಿಗೆ ಕಾಣಿಸುವುದರಿಂದ ಕಣ್ಣಿನ ದೃಷ್ಟಿ ಅಷ್ಟು ಸೂಕ್ಷ್ಮವಾಗಿರದ ಹೊರತೂ ಪ್ರತ್ಯೇಕಿಸಿ ನೋಡುವುದು ಸ್ವಲ್ಪ ಕಷ್ಟ. ಜೋಡಿ ನಕ್ಷತ್ರಗಳಿದ್ದರೆ ಸಾಧಾರಣವಾಗಿ ಒಂದು ಸ್ಥಿರವಾಗಿರುತ್ತದೆ. ಮತ್ತೊಂದು ಅದರ ಸುತ್ತ ಸುತ್ತುತ್ತಿರುತ್ತದೆ. ಆದರೆ ಆರುಂಧತಿ-ವಸಿಷ್ಟರ ವಿಶೇಷತೆಯೆಂದರೆ ಅವೆರಡೂ ಪರಸ್ಪರ ಒಂದರ ಸುತ್ತು ಇನ್ನೊಂದು ತಿರುಗುತ್ತವೆ. ದಾಂಪತ್ಯದ ಅರ್ಥ ತಿಳಿಸುವ ಸಲುವಾಗಿ ಆರುಂಧತಿ-ವಸಿಷ್ಟರನ್ನು ತೋರಿಸುವ ಸಂಪ್ರದಾಯದ ಬಂದಿರಬಹುದು. ಈ ಸಂಪ್ರದಾಯ ನಮ್ಮಲ್ಲಿ ಸಹಸ್ರಮಾನಗಳಿಂದ ಜಾರಿಯಲ್ಲಿದ್ದರೂ ಪಾಶ್ಚಾತ್ಯರು ಈ ಎರಡು ನಕ್ಷತ್ರಗಳನ್ನು ಕಂಡುಹಿಡಿದದ್ದು ಕ್ರಿ.ಶ ೧೬೫೦ರ ಸುಮಾರಿಗೆ.
                 ಕುತುಬ್ ಮಿನಾರಿನ ಎದುರಿಗಿರುವ ಸಾವಿರ ವರ್ಷಗಳಿಗೂ ಹಳೆಯದಾದ ಕಬ್ಬಿಣದ ಸ್ಥಂಭ ಇನ್ನೂ ತುಕ್ಕು ಹಿಡಿದಿಲ್ಲ. ದೆಹಲಿಯ ಮಾಲಿನ್ಯತೆಯಿಂದ ತೇಜೋಮಹಾಲಯದ ಅಮೃತಶಿಲೆಗಳೇ ಹೊಳಪು ಕಳೆದುಕೊಳ್ಳುತ್ತಿವೆ ಎಂಬ ಗುಲ್ಲೆಬ್ಬುತಿದ್ದಾಗ್ಯೂ ಆ ಕೊರಗು ಈ ಸ್ಥಂಭಕ್ಕಿಲ್ಲ. ಹಾಗೆಯೇ ಕೊಲ್ಲೂರಿನಲ್ಲಿರುವ 2400 ವರ್ಷ ಹಳೆಯದಾದ ಸ್ಥಂಭವೂ ಮಲೆನಾಡಿನ ಅಗಾಧ ಮಳೆ-ಬಿಸಿಲಿಗೆ ಮೈಯೊಡ್ಡಿ ನಿಂತೂ ತುಕ್ಕು ಹಿಡಿಯದೇ ಹೊಳಪು ಕಳೆದುಕೊಳ್ಳದೇ ನಿಂತಿರುವುದು ವಿಶೇಷ. ಇದು ನಮ್ಮವರ ಉತ್ಕೃಷ್ಠ ತಾಂತ್ರಿಕತೆಯ ನಿದರ್ಶನ. ಅದರಲ್ಲೂ ಕೊಲ್ಲೂರಿನ ಸ್ಥಂಭವನ್ನು ಆದಿಶಂಕರಾಚಾರ್ಯರ ಸ್ವಾಗತಕ್ಕೆಂದು ಸ್ಥಳೀಯ ಜನರೇ ನಿರ್ಮಿಸಿದ್ದರು. ಅಂದರೆ ಇಂತಹ ಜ್ಞಾನ ಕೇವಲ ಬ್ರಾಹ್ಮಣ ವರ್ಗದ ಸೊತ್ತಾಗಿತ್ತು, ಬ್ರಾಹ್ಮಣರು ಉಳಿದವರಿಗೆ ಜ್ಞಾನ ಸಂಪಾದನೆಯ ಅವಕಾಶ ಕೊಡಲಿಲ್ಲ ಎಂದು ಪ್ರತಿನಿತ್ಯ ಅರಚಾಡುವ ವರ್ಗಕ್ಕೆ ಇದೆಲ್ಲಾ ಯಾಕೆ ಕಾಣಿಸುವುದಿಲ್ಲ ಎನ್ನುವುದೆ ಸೋಜಿಗ! ವರ್ಷದ ಮೂರು ದಿನಗಳ ಕಾಲವಷ್ಟೇ(ರಥಸಪ್ತಮಿಯ ಸಮಯದಲ್ಲಿ) ದೇವಿಯ ವಿಗ್ರಹದ ಮೇಲೆ ಸೂರ್ಯನ ಬೆಳಕು ಬೀಳುವಂತೆ ಗರ್ಭಗುಡಿಯ ಪಶ್ಚಿಮದಲ್ಲಿ ಕಿಂಡಿಯೊಂಡನ್ನು ರಚಿಸಿ ನಿರ್ಮಿಸಿದ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯವನ್ನು ರೂಪಿಸಿದ ತಾಂತ್ರಿಕತೆ, ಪ್ರತೀ ಮಾಸಕ್ಕೆ ಅನುಗುಣವಾಗಿ ನಿರ್ದಿಷ್ಟ ಕಂಬದ ಮೇಲೆ ಸೂರ್ಯನ ಕಿರಣ ಸೋಕುವಂತೆ ರಚಿಸಿದ ಶೃಂಗೇರಿಯ ವಿದ್ಯಾ ಶಂಕರ ಮಂದಿರದ ಶಿಲ್ಪಿಯ ಚಾತುರ್ಯ...ಹೀಗೆ ಇಂದಿಗೂ ಉಳಿದುಕೊಂಡು ನಮ್ಮ ಹಿರಿಯರ ತಂತ್ರಜ್ಞಾನ ಚತುರತೆಗೆ ದಾಖಲೆಯಾಗಿ ನಿಂತಿರುವ ನಿದರ್ಶನಗಳು ಹಲವಾರಿವೆ.
                ಝಿಂಕ್ ಅದಿರು ದ್ರವವಾಗುವುದು 997 ಡಿಗ್ರಿ C ಉಷ್ಣತೆಯಲ್ಲಿ. ಆದರೆ ಅದು 1000 ಡಿಗ್ರಿ C ಉಷ್ಣತೆ ತಲುಪಿದಾಗ ಅನಿಲವಾಗಿ ಬಿಡುತ್ತದೆ. ಅಂದರೆ ಝಿಂಕ್ ಅದಿರಿನಿಂದ ಝಿಂಕ್ ಅನ್ನು ಪಡೆಯಬೇಕಾದರೆ ಈ 3 ಡಿಗ್ರಿ C ಉಷ್ಣತೆಯ ಗವಾಕ್ಷಿಯೊಳಗೆ ಪಡೆಯಬೇಕಾಗುತ್ತದೆ. ಆದರೆ ಅದಿರಿನಿಂದ ಲೋಹವನ್ನು ಪಡೆಯುವ ಮಾಮೂಲಿ ಕ್ರಮದಂತೆ ಇದನ್ನು ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಎಲ್ಲಾ ದೇಶಗಳು ಝಿಂಕ್ ಅನ್ನು ಬೇರ್ಪಡಿಸಲು ಯತ್ನಿಸಿ ಸೋತಿದ್ದವು. ಆದರೆ ಭಾರತೀಯರು ಈ ವಿಧಾನವನ್ನೇ ಮೇಲೆ ಕೆಳಗೆ ಮಾಡಿ ಅಂದರೆ ಮೇಲ್ಭಾಗದಿಂದ ಶಾಖ ಕೊಟ್ಟು ಕೆಳಭಾಗದಿಂದ ಅದನ್ನು ದ್ರವವಾಗಿ ಪಡೆದು ಝಿಂಕ್ ಸಾಮ್ರಾಟ ಎನಿಸಿಕೊಂಡಿದ್ದರು. ನಾಲ್ಕು ಸಾವಿರ ವರ್ಷಗಳ ನಂತರ ಈ ತಂತ್ರಜ್ಞಾನವನ್ನು ಚೀನೀಯನೊಬ್ಬ ಕದ್ದ. ಅವನಿಂದ ಬ್ರಿಟಿಷರು ಕದ್ದರು. 1543ರಲ್ಲಿ ವಿಲಿಯಂ ಚಾಂಪಿಯನ್ ಈ ವಿಧಾನವನ್ನು ಅನುಸರಿಸಿ ಝಿಂಕ್ ಪಡೆಯುವವರೆಗೂ ಇದು ಭಾರತೀಯರ ಸ್ವತ್ತಾಗಿತ್ತು. ಉಕ್ಕು ಮೊದಲಾದ ಲೋಹ ಮಿಶ್ರಣಗಳ ತಯಾರಿಕೆ, ಕಂಚಿನ ವಿಗ್ರಹಗಳು-ಕಬ್ಬಿಣದ ಸ್ಥಂಭಗಳ ತಯಾರಿಕೆ, ವೈದ್ಯಪದ್ದತಿ-ಚಿಕಿತ್ಸೆಗಳಲ್ಲಿ ರಾಸಾಯನಿಕಗಳ ಬಳಕೆಯಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿತ್ತು. ರಸಶಾಸ್ತ್ರ ಭಾರತದಲ್ಲಿ ಉದಿಸಿ ಮುಂದೆ ಬೌದ್ಧ ಮತೀಯರ ಮೂಲಕ ಚೀನಾಕ್ಕೂ ಹಾಗೂ ಜಗತ್ತಿನ ಉಳಿದೆಡೆಗೂ ಪ್ರವೇಶಿಸಿತು.
                ನಮ್ಮ ಪಠ್ಯಪುಸ್ತಕಗಳಲ್ಲಿ ಭಾರತವನ್ನು ಕಂಡುಹಿಡಿದಾತ ವಾಸ್ಕೋಡಗಾಮಾ ಅನ್ನುವುದನ್ನು ಇಂದಿಗೂ ಉಚ್ಛರಿಸಲಾಗುತ್ತದೆ. ಆತ ಭಾರತವನ್ನು "ಹುಡುಕುತ್ತಾ" ಬಂದಾಗ ಆತನ ಹಡಗು ಅಂದಿನ ಯುರೋಪಿಯನ್ ಹಡಗುಗಳಲ್ಲೇ ಅತೀ ದೊಡ್ಡದು. ಆಫ್ರಿಕಾಕ್ಕೆ ಬಂದ ವಾಸ್ಕೋಡಗಾಮನನ್ನು ಭಾರತಕ್ಕೆ ಕರೆದು ತಂದವನು "ಕನ್ಹಾ" ಎಂಬ ಗುಜರಾತಿ ನಾವಿಕ. ಆತನ ಹಾಗೂ ಆತನ ಸಹನಾವಿಕರ ಹಡಗು ವಾಸ್ಕೋಡಗಾಮನ ಹಡಗಿಗಿಂತ ಹನ್ನೆರಡು ಪಟ್ಟು ದೊಡ್ಡದಿತ್ತು. ಆಗ ಭಾರತದ ಬಗ್ಗೆ ಜಗತ್ತಿನ ಮೂಲೆ ಮೂಲೆಗೂ ತಿಳಿದಿದ್ದರೂ ನಾವು ಇಂದಿಗೂ ಭಾರತವನ್ನು ಕಂಡುಹಿಡಿದವನು ವಾಸ್ಕೋಡಗಾಮ ಎಂದೇ ಓದುತ್ತಿದ್ದೇವೆ! ಭಾರತೀಯ ನೌಕೋದ್ಯಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ನೌಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ನೌಕೆಗಳ ಬಗ್ಗೆ, ಅವುಗಳನ್ನು ತಯಾರಿಸುವ, ಬಳಸುವ ಬಗ್ಗೆ ಜನತೆಗೆ ಅರಿವು ಇತ್ತು. ಅಂದರೆ ಸಾಗರ ಗರ್ಭದೊಳಗಡಗಿರುವ ಅಪಾರ ಸಂಪನ್ಮೂಲಗಳ ಬಗ್ಗೆ ಜನ ತಿಳಿದಿದ್ದರು. ಆಧುನಿಕ ವಿಜ್ಞಾನದ ಅರಿವಿಗೆ ದೊರಕಿದ ಮಾಹಿತಿಯನ್ನು ಆಧರಿಸಿದರೂ ಭಾರತವೇ ನೌಕೋದ್ಯಮದ ತವರು. ಕ್ರಿ.ಪೂ 2300ರ ಸುಮಾರಿಗೆ ಗುಜರಾತಿನ ಲೋಥಲ್ ಎಂಬ ಪ್ರದೇಶದಲ್ಲಿರುವ ಮಾಂಗ್ರೋಲ್ ಬಂದರಿನ ಬಳಿ ಸಿಂಧೂ ನಾಗರೀಕತೆಯ ಸಮಯದಲ್ಲಿ ಮೊದಲ ಉಬ್ಬರವಿಳಿತದ ಹಡಗು ನಿರ್ಮಾಣವಾಯಿತು. ಮೌರ್ಯರ ಆಳ್ವಿಕೆಯ ಸಮಯದಲ್ಲಿ ಜಲಮಾರ್ಗದ ಸಮಸ್ತ ಆಗು ಹೋಗುಗಳು ನವಾಧ್ಯಕ್ಷನ ನಿಯಂತ್ರಣದಲ್ಲಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೌಕೆಗಳ ಬಗೆಗಿನ ಅಗಾಧ ಮಾಹಿತಿಯಿದೆ. ಮೌರ್ಯರಲ್ಲದೆ ಚೋಳ, ಶಾತವಾಹನ, ಗುಪ್ತ, ಪಾಲ, ಪಾಂಡ್ಯ, ವಿಜಯನಗರ, ಕಳಿಂಗ, ಮರಾಠರ ಆಳ್ವಿಕೆಯ ಕಾಲದಲ್ಲೂ ನೌಕೋದ್ಯಮ ಪ್ರಸಿದ್ದಿ ಪಡೆದಿತ್ತು. ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ವಹಿವಾಟು ಬಹು ಹಿಂದಿನಿಂದಲೂ ಸಾಗರ ಮಾರ್ಗವಾಗಿಯೇ ನಡೆದಿತ್ತು. ಮರಾಠ ನೌಕಾ ಪಡೆಯಂತೂ ಮೂರು ಶತಮಾನಗಳ ಕಾಲ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಯೂರೋಪಿನ ನೌಕಾಪಡೆಗಳು ಅನೇಕ ಸಲ ಮರಾಠರ ನೌಕಾಪಡೆಗಳೆದುರು ನಿಲ್ಲಲಾರದೆ ಓಡಿ ಹೋಗಿದ್ದವು. ಕನ್ಹೋಜಿ ಆಂಗ್ರೇಯಂತಹ ಸಾಗರ ವೀರ ಎಂದೆಂದಿಗೂ ಅಮರ.
                  ಹತ್ತು ಮಿಲಿಯನ್ ಪ್ರಕಾಶ ವರ್ಷ ದೂರದಿಂದ ವೀಕ್ಷಿಸಲು ಸಾಧ್ಯವಾದರೆ ನಮಗೆ ಬ್ರಹ್ಮಾಂಡದ ಸ್ವರೂಪವು ಯಾವ ವಿನ್ಯಾಸದಲ್ಲಿ ಕಾಣುತ್ತದೋ ಅದನ್ನೇ ಹೋಲುವ ದೃಶ್ಯವು ಆ ಬ್ರಹ್ಮಾಂಡದ ಒಂದು ಅಣುವಿನ ಆಂತರಿಕ ಭಾಗವನ್ನು ೧೦ ಪಿಕೋಮೀಟರ್ ಸಮೀಪದಿಂದ ನೋಡಿದಾಗಲೂ ಕಾಣುತ್ತದೆ ಎನ್ನುತ್ತದೆ ಆಧುನಿಕ ವಿಜ್ಞಾನ. ಇದನ್ನೇ ನಮ್ಮ ಪ್ರಾಚೀನ ವಿಜ್ಞಾನ "ಯಥಾ ಬ್ರಹ್ಮಾಂಡೇ ತಥಾ ಪಿಂಡಾಂಡೇ" ಎಂದು ಹೇಳಿ ಬ್ರಹ್ಮಾಂಡದ ಅಣು-ರೇಣು-ತೃಣ-ಕಾಷ್ಟ ಮುಂತಾದ ಎಲ್ಲಾ ಭಾಗಗಳಿಗೂ ಇದು ಅನವಯಿಸುತ್ತದೆ ಎಂದು ವಿವರಿಸಿತ್ತು. ಸೂರ್ಯ ಸಿದ್ಧಾಂತದ ಪ್ರಕಾರ ಬ್ರಹ್ಮಾಂಡದ ವ್ಯಾಪ್ತಿ 18,712,080,864,000,000 ಮೈಲುಗಳು. ಇದನ್ನು ವೇದಾಂತ ಭಚಕ್ರ ಎಂದು ಕರೆದಿದೆ. ಇಂತಹ ಅನಂತ ಬ್ರಹ್ಮಾಂಡಗಳಿವೆ. ಭಾರತೀಯರು ಅದನ್ನು ಮೊದಲೇ ಕಂಡುಕೊಂಡಿದ್ದರು. ಅದಕ್ಕಾಗಿಯೇ ದೇವರನ್ನು ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ ಎಂದಿದ್ದರು! ವೇದಾಂತ ಈಗ ನಾವು ಕಾಣುತ್ತಿರುವ ವಿಶ್ವ 2200ಕೋಟಿ ವರ್ಷ ಹಳೆಯದು ಎಂದಿದೆ. ಇದು ಈಗಿನ ವಿಜ್ಞಾನ ಹೇಳುವ ಈ ವಿಶ್ವ 2000ಕೋಟಿ ವರ್ಷ ಹಳೆಯದು ಎನ್ನುವುದಕ್ಕೆ ಹತ್ತಿರವಾದ ಲೆಕ್ಕಾಚಾರ! ಸೃಷ್ಟಿ ತನ್ನ ಹುಟ್ಟುಸಾವಿನ ಪ್ರಕ್ರಿಯೆ ಮುಗಿಸಿ ತನ್ನ ಮೂಲಸ್ಥಿತಿಯನ್ನು ಹೊಂದಲು ತೆಗೆದುಕೊಳ್ಳುವ ಕಾಲಮಾನ 315 ಟ್ರಿಲಿಯನ್ ವರ್ಷಗಳು! ಈ ವಿಶ್ವದಲ್ಲಿನ ಪ್ರತಿಯೊಂದು ಕಾಯಕ್ಕೂ ತದ್ರೂಪಿ ಎಂಬುದಿದೆ ಎಂದು ಇಂದಿನ ವಿಜ್ಞಾನ ಹೇಳುತ್ತೆ! ಆಧ್ಯಾತ್ಮ ಅದನ್ನು ಸಹಸ್ರಾರು ವರ್ಷಗಳ ಹಿಂದೆಯೇ "ಕಾರಣ ಶರೀರ" ಎಂದು ವಿವರಿಸಿತ್ತು! ನಮ್ಮ ಪೂರ್ವಜರು ಕಾಲದ ಸಣ್ಣ ಪ್ರಮಾಣವನ್ನು "ಕ್ರಾಂತಿ" ಎಂದು ಕರೆದಿದ್ದರು. ಒಂದು ಕ್ರಾಂತಿ ಎಂದರೆ ಒಂದು ಸೆಕೆಂಡಿನ 1/34000 ನೇ ಭಾಗಕ್ಕೆ ಸಮ! ಇದು ಸ್ಥಿರ ವಿಶ್ವ ಅಥವಾ ಆಗ ಸಮಯ ಅನಂತ! ಸೆಕೆಂಡಿಗೆ ಇಂತಹ 34000 ಸ್ಥಿರ ವಿಶ್ವವನ್ನು ನಾವು ಅನುಭವಿಸುವುದರಿಂದ ನಮಗೆ ವಿಶ್ವವು ಚಲನೆಯಲ್ಲಿರುವಂತೆ ಗೋಚರಿಸುತ್ತದೆ. ಮಾನವ ಚರ ವಿಶ್ವವನ್ನು ಗಮನಿಸಲು ಬೇಕಾದ ಕನಿಷ್ಟ ಕಾಲಮಾನವನ್ನು ಒಂದು "ತ್ರುಟಿ" ಎನ್ನಲಾಗಿದೆ. ಇದು ಸೆಕೆಂಡಿನ 1/300 ಭಾಗ!
              ಅಂಕ-ಬೀಜ-ರೇಖಾಗಣಿತ, ಕಲನಶಾಸ್ತ್ರ, ತ್ರಿಕೋನಮಿತಿ ಸೇರಿದಂತೆ ಈಗಿನ ವಿಜ್ಞಾನಿಗಳಿಗೂ ತಿಳಿಯದ ಹಲವಾರು ಗಣಿತ ಪ್ರಕಾರಗಳನ್ನು ಭಾರತೀಯರು ಕೇವಲ ಸೈದ್ಧಾಂತಿಕವಾಗಿ ಮಾತ್ರವಲ್ಲದೆ ವ್ಯಾವಹಾರಿಕವಾಗಿಯೂ ಬಳಸಿದ್ದರು. ಎಷ್ಟೆಂದರೆ ಎರಡರ ವರ್ಗಮೂಲವನ್ನು ವಸ್ತುನಿಷ್ಠತೆಯ ಕಾರಣದಿಂದ ಪೈಥಾಗೋರಸನ ಅನುಯಾಯಿಗಳೇ ವ್ಯಾವಹಾರಿಕವಾಗಿ ಬಳಸಲು ನಿರಾಕರಿಸಿದ್ದರೆ ಭಾರತೀಯರು ಅದನ್ನು ಕಟ್ಟಡ ನಿರ್ಮಾಣದಂತಹ ಸಂಕೀರ್ಣ ವಿಷಯಗಳಿಗೂ ಬಳಸುತ್ತಿದರು. ಕಟಪಯದಿ ಎಂಬ ಸಂಖ್ಯಾ ಶ್ಲೋಕದ ಬಗ್ಗೆ ನೀವು ಕೇಳಿರಬಹುದು. ಮೇಲುನೋಟಕ್ಕೆ ಶ್ರೀ ಕೃಷ್ಣನನ್ನು ಹೊಗಳುವಂತೆ ಕಂಡರೂ ಪ್ರತಿಯೊಂದು ಅಕ್ಷರಕ್ಕೂ ಕ್ರಮಾನುಗತವಾಗಿ ಒಂದೊಂದು ಸಂಖ್ಯೆಯನ್ನು ಕೊಡುತ್ತಾ ಹೋಗಿ ಈ ಶ್ಲೋಕವನ್ನು ಸಂಖ್ಯಾ ರೂಪದಲ್ಲಿ ಜೋಡಿಸಿದಾಗ ಸಿಗುವ ಸಂಖ್ಯೆ 3.142....! ಅಂದರೆ "ಪೈ" ಯ ಬೆಲೆ. ಅದೂ 30 ದಶಮಾಂಶ ಸ್ಥಾನಗಳವರೆಗೆ! ಅಂದರೆ ಈಗ ನಾವು ಬಳಸುವ ಎನ್ ಕ್ರಿಪ್ಷನ್ ಅಥವಾ ಗೂಢ ಲಿಪೀಕರಣವನ್ನು ನಮ್ಮ ಪೂರ್ವಜರು ಎಂದೋ ಬಳಸಿದ್ದರು. ಅಗ್ನಿಕುಂಡದ ರಚನೆಯಲ್ಲಿ ರೇಖಾಗಣಿತ ಬಳಕೆಯಾದಷ್ಟು ಈಗಿನ ಲೌಕಿಕ ಉಪಯೋಗ ಹಾಗೂ ಈಗಿನ ವಿಜ್ಞಾನದಲ್ಲೂ ಬಳಕೆಯಾಗಿಲ್ಲ ಎಂದರೆ ಅಚ್ಚರಿಯಲ್ಲವೇ? ನಮ್ಮ ಹಿರಿಯರ ಈ ಜ್ಞಾನ-ಸಾಧನೆಗಳು ನಮಗೆ ಸ್ಪೂರ್ತಿಯ ಚಿಲುಮೆಯಾಗಬೇಕಿದೆ. ನಮ್ಮ ದೇಶ ಹೀಗಿತ್ತು, ನಮ್ಮಲ್ಲಿ ಇಂತಹ ಋಷಿ ಪುಂಗವ ಜ್ಞಾನಿ-ವಿಜ್ಞಾನಿಗಳಿದ್ದರು, ಸಹಸ್ರಾರು ಸಾಧನೆ ಮೆರೆದಿದ್ದರು ಎಂದು ಓದಿ-ಹೇಳಿಕೊಂಡ ಮಾತ್ರಕ್ಕೆ ಅದರಿಂದ ಏನು ಉಪಯೋಗ? ಅಂತಹ ಸಾಧನೆಯನ್ನು ನಾವು ಮೆರೆದು ಜಗತ್ತಿನ ರಾಷ್ಟ್ರಗಳಿಗೆ ಸಡ್ಡು ಹೊಡೆದು ಮತ್ತೊಮ್ಮೆ ನಮ್ಮನ್ನು ವಿಶ್ವಗುರುವನ್ನಾಗಿಸುವ ಕಾರ್ಯ ನಮ್ಮಿಂದಾಗಬೇಕು. ಭಾರತ ದೊಡ್ಡಣ್ಣನಾದಾಗ ಜಗತ್ತನ್ನು ಕಾಡುತ್ತಿರುವ ವಿಸ್ತಾರವಾದಿ ಭೀತಿ, ಭಯೋತ್ಪಾದನೆಯಿಂದ ಹಿಡಿದು ಪ್ರಾದೇಶಿಕವಾದದಂತಹ ಸಣ್ಣ ಸಮಸ್ಯೆಗಳಿಗೂ ಪರಿಹಾರ ದೊರಕಬಲ್ಲುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ