ಡ್ರಾಗನ್ ಬಾಲ ಮುದುಡಿಸಿ ನಮೋ ಎಂದಿದೆ!
ನರೇಂದ್ರ
ಮೋದಿ ಪ್ರಧಾನಿಯಾದ ನಂತರ ಜಗತ್ತಿನ ಬಲಾಢ್ಯ ರಾಷ್ಟ್ರಗಳ ಗಮನವೆಲ್ಲಾ ಭಾರತದ ಕಡೆಗೆ ತಿರುಗಿದೆ.
ಇದಕ್ಕೆ ಗುಜರಾತಿನಲ್ಲಿ ಮೋದಿ ಮಾಡಿದ ಮೋಡಿಯೇ ಕಾರಣವೆನ್ನಬಹುದಾದರೂ ಈ ಮನುಷ್ಯ ಮುಂದೇನು
ಮಾಡಬಹುದು, ಭಾರತದ ಗತಿಯನ್ನು ಯಾವ
ಎತ್ತರಕ್ಕೆ ಕೊಂಡೊಯ್ಯಬಹುದು ಎನ್ನುವ ಕುತೂಹಲ, ಕಾತರಗಳೂ ಕಾರಣ. ಹಾಗೆಯೇ ಈ ನಮೋ
ಎಂಬ ತ್ಸುನಾಮಿಯ ನಡುವೆ ನಾವೂ ಕೊಚ್ಚಿಹೋಗಬಹುದೇನೋ ಎನ್ನುವ ಭೀತಿ ಈ ರಾಷ್ಟ್ರಗಳನ್ನು
ಕಾಡತೊಡಗಿದಲ್ಲಿ ಆಶ್ಚರ್ಯವಿಲ್ಲ. ಅಷ್ಟರಮಟ್ಟಿಗೆ ಮೋದಿ ತಮ್ಮ ಛಾಪು ಮೂಡಿಸಿದ್ದಾರೆ. ಮ್ಯಾಡಿಸನ್
ಸ್ಕ್ವೇರ್ ನಲ್ಲಿ ಅಮೇರಿಕನ್ನರು ನಮೋ ಎಂದ ರೀತಿಯೇ ಇದಕ್ಕೆ ಸಾಕ್ಷಿ. ಎಲ್ಲಕ್ಕಿಂತ ಮುಖ್ಯವಾಗಿ
ಚಿಂತೆಗೀಡಾಗಿರುವ ದೇಶವೆಂದರೆ ಚೀನಾ!
ತನ್ನ
ವಿಸ್ತರಣಾವಾದಿ ಮನೋಭಾವದಿಂದ ತನ್ನ ನೆರೆಯ ದೇಶಗಳನ್ನು ಒಂದಿಲ್ಲೊಂದು ರೀತಿಯಲ್ಲಿ ನುಂಗಿ ನೀರು
ಕುಡಿದ ಚೀನಾ ಏಷ್ಯಾದ ತನ್ಮೂಲಕ ವಿಶ್ವದ ಪ್ರಬಲ ಶಕ್ತಿಯಾಗಿ ಮೆರೆಯಲು ತನಗೆ ಅಡ್ಡಗಾಲಾಗಿರುವುದು
ಭಾರತ ಎನ್ನುವುದನ್ನು ಬಹುಹಿಂದೆಯೇ ಅರಿತುಕೊಂಡಿದೆ. ಪ್ರಪಂಚವನ್ನೇ ತನ್ನ
ಮುಷ್ಠಿಯಲ್ಲಿರಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿರುವ ಚೀನಾ ಭಾರತದ ಪಾಲಿಗೆ ಕಳೆದ
ಹಲವು ದಶಕಗಳಿಂದಲೂ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ. ಭಾರತದ ಹಿಂದಿನ ಸರಕಾರಗಳ ದುರ್ಬಲ
ವಿದೇಶಾಂಗ ನೀತಿಯನ್ನು ತನ್ನ ಪಾಲಿಗೆ ವರವಾಗಿ ಪರಿವರ್ತಿಸಿಕೊಂಡ ಚೀನಾ ಭಾರತದ ನೆರೆಯ
ರಾಷ್ಟ್ರಗಳಲ್ಲನ್ನೆಲ್ಲಾ ತನ್ನ ಕಪಿಮುಷ್ಠಿಯೊಳಗಿರಿಸಿಕೊಂಡು ಭಾರತವನ್ನು
ಸುತ್ತುವರಿಯಲಾರಂಭಿಸಿತ್ತು. ಪಾಕಿಸ್ಥಾನದ ಗ್ವಾಡಾರ್ನಲ್ಲಿ ನೌಕಾನೆಲೆಯೊಂದನ್ನು ನಿರ್ಮಿಸಿದರೆ
ಬಾಂಗ್ಲಾದೇಶದ ಚಿತ್ತಗಾಂಗಿನಲ್ಲಿ ಆರ್ಥಿಕ ಹಾಗೂ ಸಮರ ಉದ್ದೇಶದ ಸವಲತ್ತುಗಳನ್ನು
ಪಡೆದುಕೊಂಡಿತ್ತು. ಬ್ರಹ್ಮ ದೇಶ(ಮಯನ್ಮಾರ್)ದ ಸಿಟ್ವೇಯಲ್ಲಿ ಬಂದರನ್ನು, ಕೋಕೋ ದ್ವೀಪಗಳಲ್ಲಿ ನೌಕಾನೆಲೆಯೊಂದನ್ನು ಸ್ಥಾಪಿಸಿತ್ತು. ಶ್ರೀಲಂಕಾದ
ಹಂಬನ್ ತೋಟದಲ್ಲಿ ಬಂದರನ್ನು ನಿರ್ಮಿಸಿ ಭಾರತವನ್ನು ನಾಲ್ಕೂ ಕಡೆಗಳಿಂದ ಸುತ್ತುವರಿಯಿತು!
ಸಿಟ್ವೇ ಬಂದರು ಹಾಗೂ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗಳಿಗೆ ಸಮರ ಸಾಮಗ್ರಿಗಳನ್ನು ಹಾಗೂ
ಸೈನಿಕರನ್ನು ಸಾಗಿಸಲು ಸುಲಭಸಾಧ್ಯವಾಗುವಂತೆ ರೈಲು ಮಾರ್ಗವೊಂದನ್ನು ನಿರ್ಮಿಸಿತು. ಪಾಕಿಗೆ ನಮ್ಮ
ಗಿಲ್ಗಿಟ್-ಬಾಲ್ಟಿಸ್ತಾನದ(ಪಾಕ್ ಆಕ್ರಮಿತ ಕಾಶ್ಮೀರ) ಮೂಲಕ ಸಮರ ಸರಂಜಾಮು ಸಾಗಣೆಗಾಗಿಯೇ
ಹೆದ್ದಾರಿಯನ್ನು ನಿರ್ಮಿತವಾಗಿದೆ. ಇದರ ಜೊತೆಗೆ ಹೈನಾನ್ ಹಾಗೂ ಪರಾಸೆಲ್ ದ್ವೀಪಗಳಲ್ಲಿ ಚೀನಾದ
ನೌಕಾನೆಲೆ ಇದೆ.
ಇಂತಹ
ಚೀನಾಕ್ಕೆ ಭಾರತದ ಬದಲಾದ ವಿದೇಶಾಂಗ ನೀತಿಯ ಬಿಸಿ ತಟ್ಟಲಾರಂಭಿಸಿದೆ. ನಮೋ ಪ್ರಧಾನಿಯಾಗಿ ಅಧಿಕಾರ
ಸ್ವೀಕರಿಸಿದ ಮೇಲೆ ತಮ್ಮ ದೇಶಕ್ಕೇ ಮೊದಲು ಬರಬಹುದು ಅಂತಾ ಚೀನಾ ಅಂದುಕೊಂಡಿತ್ತೇನೋ. ಆದರೆ ಮೋದಿ
ನೆರೆಯ ಪುಟ್ಟ ರಾಷ್ಟ್ರ ಭೂತಾನಿಗೆ ಭೇಟಿ ನೀಡುವುದರ ಮೂಲಕ ಚೀನಾ ಏಕೆ ಇಡೀ ವಿಶ್ವದ
ನಿರೀಕ್ಷೆಯನ್ನೇ ತಲೆಕೆಳಗೆ ಮಾಡಿದರು. ಮಾತ್ರವಲ್ಲ ಚಪ್ಪಾಳೆಯೇ ಹೊಡೆಯದ ಭೂತಾನಿನ ಜನರಿಂದಲೇ
ಚಪ್ಪಾಳೆಗಿಟ್ಟಿಸಿಕೊಂಡದ್ದಲ್ಲದೆ ಕಳೆದುಹೋಗಿದ್ದ ಪುರಾತನ ಭೂತಾನ್-ಭಾರತ ಮೈತ್ರಿಯನ್ನು
ಪುನರುಜ್ಜೀವನಗೊಳಿಸಿದರು. ಮುಂದೆ ನೇಪಾಳದಲ್ಲಿ ಮನೆಯ ಮಗನಂತೆ ಸತ್ಕಾರಗೊಂಡರು. ನೇಪಾಳಿಗಳು
ಮೋದಿಯ ಮೋಡಿಗೆ ಯಾವ ಪರಿಯಲ್ಲಿ ಒಳಗಾದರೆಂದರೆ ಅಲ್ಲಿನ ರಾಜಕಾರಣಿಗಳಿಗೆ ಮೋದಿ ಭಾರತದ ಪ್ರಧಾನಿಯೋ
ಅಲ್ಲ ನೇಪಾಳದ್ದೋ ಎನ್ನುವ ಸಂಶಯ ಬರುವಷ್ಟು! ಮುಂದಿನ ಭೇಟಿ ಜಪಾನಿಗೆ. ಬಹಿರಂಗವಾಗಿ ಚೀನಾದ
ವಿಸ್ತರಣಾವಾದಿ ನೀತಿಯನ್ನು ಟೀಕಿಸಿದ ಮೋದಿ ಜಪಾನಿನ ಉದ್ದಿಮೆಗಳಿಗೆ ಭಾರತದಲ್ಲಿ ರತ್ನಗಂಬಳಿ
ಹಾಸಿದರು. ಮಾತ್ರವಲ್ಲ ಬುಲೆಟ್ ರೈಲಿನ ನಿರ್ಮಾಣಕ್ಕೆ ಸಹಯೋಗವನ್ನು ಯಾಚಿಸಿದರು. ಜಪಾನಿನ ಸೇನ್
ಕಾಕು ಎನ್ನುವ ಪರ್ವತ ಪ್ರದೇಶವನ್ನು ತನ್ನದು ಎನ್ನುತ್ತಾ ಸದಾ ಜಗಳ ಕಾಯುತ್ತಾ ಇದ್ದ ಚೀನಾಕ್ಕೆ
ಹೇಗಾಗಿರಬೇಡ? ಭಾರತದ ಪ್ರಧಾನಿ ತಮ್ಮಲ್ಲಿಗೆ
ಬರಬಹುದೆಂದು ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದ ಚೀನಾ ಉತ್ಕೃಷ್ಟವಾದ ಬುಲೆಟ್ ರೈಲು
ತಯಾರಿಸಿದವರು ನಾವೇ. ಭಾರತ ಒಪ್ಪಿಗೆ ಕೊಟ್ಟರೆ ನಾವೇ ಬುಲೆಟ್ ರೈಲನ್ನು ನಿರ್ಮಿಸುತ್ತೇವೆ ಎಂದು
ಅನ್ನಬೇಕಾದರೆ ಮೋದಿಯ ವಿದೇಶಾಂಗ ನೀತಿಗೊಂದು ಶಹಬ್ಬಾಸ್ ಅನ್ನಲೇ ಬೇಕಲ್ಲವೆ. ಹೌದು ಈ ಮೂರು
ದೇಶಗಳ ಪ್ರವಾಸಗಳು ಕಾಕತಾಳೀಯವಲ್ಲ. ಅವುಗಳ ಹಿಂದೆ ದೂರದೃಷ್ಟಿ ಇದೆ. ಭಾರತದ ನೆರೆಯ ರಾಷ್ಟ್ರಗಳ
ಜೊತೆ ಸಂಬಂಧವನ್ನು ವೃದ್ಧಿಸಿಕೊಂಡು ಭಾರತದ ಕೊರಳ ತರಿಯಲು ಸಿದ್ಧವಾಗುತ್ತಿದ್ದ ಚೀನಾದ ಇಷ್ಟು
ದಿವಸಗಳ ಪ್ರಯತ್ನಕ್ಕೆ ಬಿದ್ದ ದೊಡ್ಡ ಹೊಡೆತಗಳಿವು. ಮುಂದೆ ಚೀನಾ ಅಧ್ಯಕ್ಷರು ತಾವಾಗಿಯೇ ಭಾರತ
ಪ್ರವಾಸ ಕೈಗೊಂಡು ಆಗಬಹುದಾದ ಮುಜುಗುರವನ್ನು ತಪ್ಪಿಸಿಕೊಂಡದ್ದು ಮಾತ್ರವಲ್ಲದೆ ಆ ಸಮಯದಲ್ಲೂ
ತನ್ನ ಸೈನ್ಯ ಗಡಿಯಲ್ಲಿ ಆಕ್ರಮಣ ಮಾಡಿದುದಕ್ಕಾಗಿ ಸೇನೆಯ ಮುಖ್ಯಸ್ಥರಿಬ್ಬರನ್ನು ಕೆಲಸದಿಂದ
ಕಿತ್ತೊಗೆದರು.
ಹೀಗೆ 1965ರ ನಂತರ ನೇರ ಯುದ್ಧ ಮಾಡದೇ
ಇದ್ದರೂ ಗಡಿಯಲ್ಲಿ ಸದಾ ಗದ್ದಲ ಸೃಷ್ಟಿಸುತ್ತಿದ್ದ ಚೀನಾಕ್ಕೆ ಭಾರತದಲ್ಲಿ ಈ ಬಾರಿ ಉಂಟಾದ
ರಾಜಕೀಯ ಪಲ್ಲಟನ ಭಯ ಹುಟ್ಟಿಸಿದುದಂತೂ ಸತ್ಯ. ಆದರೂ ಇತ್ತ ತಮ್ಮ ಅದ್ಯಕ್ಷರು ಭಾರತದ ರಾಜಾತಿಥ್ಯ
ಪಡೆಯುತ್ತಿರುವಾಗಲೂ ಚೀನಾದ ಗಡಿತಂಟೆ ಸಂಪೂರ್ಣವಾಗಿ ನಿಂತಿರಲಿಲ್ಲ. ಹಾಗಂತ ಅದೇ ವಿಷಯವಾಗಿ
ಚೀನಾದೊಡನೆ ಸಮರ ಸಾರುವುದು ಸಧ್ಯದ ಪರಿಸ್ಥಿತಿಯಲ್ಲಿ ಸೂಕ್ತ ನಿರ್ಧಾರವೂ ಆಗಿರಲಿಲ್ಲ. ಆದರೆ
ಇಂದಿನ ಕಾಲಘಟ್ಟದಲ್ಲಿ ಯುದ್ಧವೆಂದರೆ ಕೇವಲ ಶಸ್ತ್ರಾಸ್ತ್ರಗಳ ಸಮರವಲ್ಲವಲ್ಲ. ಇದು ಮೋದಿಯಂತಹ
ಪ್ರಬಲ ಮುತ್ಸದ್ದಿಗೆ ತಿಳಿಯದ ವಿಷಯವೇನಲ್ಲ. ಒಂದು ದೇಶದ ಮಾರುಕಟ್ಟೆಯನ್ನು ಪ್ರವೇಶಿಸಿ ಅಲ್ಲಿ
ಪಾರುಪತ್ಯ ಸ್ಥಾಪಿಸುವುದು ಅಥವಾ ತನ್ನದೇ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ದೇಶದ
ಉತ್ಪನ್ನಗಳನ್ನು ನಿಷೇಧಿಸುವುದರ ಮೂಲಕ ಆ ದೇಶಕ್ಕೆ ನಷ್ಟವನ್ನುಂಟುಮಾಡುವ ಪ್ರಕ್ರಿಯೆಗಳೂ ಆಧುನಿಕ
ಯುಗದಲ್ಲಿ ಯುದ್ಧದ ಸಾಲಿಗೇ ಸೇರುತ್ತವೆ. ಹಾಗಾಗಿಯೇ ಮೋದಿ ನವರಾತ್ರಿ ಉತ್ಸವಕ್ಕೆ ಕೆಲವೇ
ದಿನಗಳಿರುವಾಗ ಚೀನಾದ ಪಟಾಕಿ ನಮ್ಮ ಮಾರುಕಟ್ಟೆಗೆ ಬರುವುದನ್ನು ನಿಷೇಧಿಸಿದರು. ದೀಪಾವಳಿಗೆ
ಮುನ್ನ ಚೀನಾದ ಚಾಕೋಲೇಟ್ ಹಾಗೂ ಹಾಲಿನ ಉತ್ಪನ್ನಗಳಿಗೆ ನಿಷೇಧ ಹೇರಿದರು. ಮಾಧ್ಯಮಗಳು ಗುಣಮಟ್ಟದ
ಕೊರತೆಯಿಂದಾಗಿ ಸರಕಾರ ಉತ್ಪನ್ನಗಳನ್ನು ನಿಷೇಧಿಸಿತು ಎಂದು ವಿಶ್ಲೇಷಿಸಿದವಾದರೂ ಅದರ ಹಿಂದಿನ
ಮರ್ಮವೇ ಬೇರೆಯಿತ್ತು. ಏನೇ ಇರಲಿ ಚೀನಾದ ಉತ್ಪನ್ನಗಳಿಗೆ ಭಾರತ ಅತೀ ದೊಡ್ಡ ಮಾರುಕಟ್ಟೆ.
ಇಷ್ಟರವರೆಗೆ ನಮ್ಮ ಮಾರುಕಟ್ಟೆಯನ್ನು ತನ್ನ ಇಚ್ಛೆಗನುಗುಣವಾಗಿ ಬಳಸಿಕೊಂಡಿದ್ದ ಸಧ್ಯಕ್ಕೆ
ಔದ್ಯೋಗಿಕವಾಗಿ ಸಂಕಷ್ಟಗೊಳಗಾಗಿರುವ ಚೀನಾಕ್ಕೆ ಇದು ಮರ್ಮಾಘಾತವೇ ಸರಿ. ಮನಸೋ ಇಚ್ಛೆ ಬೇರೆ ದೇಶದ
ಮಾರುಕಟ್ಟೆಗಳನ್ನು ಬಳಸಿಕೊಂಡರೂ ತನ್ನ ದೇಶದಲ್ಲಿ ಇತರ ದೇಶಗಳ ಉತ್ಪನ್ನಗಳನ್ನು ಮಾರಾಟ ಮಾಡಲು
ವಿಧವಿಧದ ಕಾನೂನು-ಕಟ್ಟಳೆಗಳನ್ನು ಅಳವಡಿಸಿ ಅಡ್ಡಿಪಡಿಸುತ್ತಿದ್ದ ಚೀನಾ ಭಾರತದ ಈ ನಿರ್ಧಾರದಿಂದ
ಬಾಲ ಮುದುಡಿಸಿ ಕೂತಿದೆ. ಚೀನಾಕ್ಕೆ ಇನ್ನೊಂದು ಆಘಾತ ನೀಡಿದ್ದು ಅದರ ಬದ್ಧ ವೈರಿ ವಿಯೆಟ್ನಾಂಗೆ
ನಮೋ ಭೇಟಿ ಹಾಗೂ ಅಲ್ಲಿ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದ. ವಿಯೆಟ್ನಾಂನ ನೌಕಾಪಡೆಗೆ ಯುದ್ಧ
ನೌಕೆಗಳನ್ನು ಸರಬರಾಜು ಮಾಡುವ ಘೋಷಣೆ ಮಾಡಿದ ಮೋದಿ ಅಲ್ಲಿನ ಮಿಲಿಟರಿಯ ಆಧುನೀಕರಣಕ್ಕೂ ಸಹಾಯ
ಮಾಡುವುದಾಗಿ ಹೇಳಿದರು. ಜೊತೆಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಒದಗಿಸುವುದಾಗಿಯೂ ಘೋಷಿಸಿದರು.
೨೦೦ ಮೆಗಾವ್ಯಾಟ್ ಸಾಮರ್ಥ್ಯದ ಪರಮಾಣು ಸ್ಥಾವರ ಸ್ಥಾಪನೆಗೂ ಸಹಾಯ ಹಸ್ತ ಚಾಚಿದರು. ವಿಯೆಟ್ನಾಮಿನ
ಭಾಗಗಳನ್ನು ಆಕ್ರಮಿಸಿ ಸದಾ ಕಿರುಕುಳ ಕೊಡುತ್ತಿದ್ದ ಚೀನಾಕ್ಕೆ ಇದಕ್ಕಿಂತ ದೊಡ್ಡ ಮುಖಭಂಗ
ಯಾವುದಿದೆ?
ಕಳೆದೊಂದು ದಶಕದಿಂದ ಶತ್ರುಗಳ ಗಡಿ ಆಕ್ರಮಣವನ್ನಷ್ಟೇ ಕೇಳಿ ಬೇಸತ್ತಿದ್ದ ಭಾರತೀಯರಿಗೆ
ಸರಕಾರದ ನಿರ್ಧಾರಗಳು ಭರವಸೆ ಹುಟ್ಟಿಸಿದ್ದಂತೂ ಸತ್ಯ. ಆದರೆ ಚೀನಾ ಸುಮ್ಮನೆ ಕೂರುವ
ಜಾಯಮಾನದ್ದಲ್ಲ. ಶಸ್ತ್ರಾಸ್ತ್ರ ಪೂರೈಸಿ ಪಾಕಿಸ್ತಾನವನ್ನು ನಮ್ಮ ಮೇಲೆ ಛೂ ಬಿಡುತ್ತಲೇ ಇದೆ.
ಪಾಕಿಸ್ತಾನಕ್ಕಂತೂ ಭಾರತಕ್ಕೆ ಕಿರುಕುಳ ಕೊಡದೇ ತಿಂದ ಅನ್ನ ಕರಗುವುದಿಲ್ಲ. ಅದಕ್ಕೆ ಚೀನಾ, ಅಮೇರಿಕಾಗಳ ಪರೋಕ್ಷ ಕುಮ್ಮಕ್ಕು ಬೇರೆ. ಭಾರತದ ಪ್ರತ್ಯುತ್ತರಕ್ಕೆ
ಬೆದರಿ ಬಾಲ ಮುದುರಿಸಿಕೊಂಡಿರುವ ಅದು ಭಯೋತ್ಪಾದಕರಿಗೆ ಗಡಿಯಲ್ಲಿ ನುಸುಳಲು ಅವಕಾಶ
ಮಾಡಿಕೊಡುತ್ತಿದೆ. ಇವೆಲ್ಲಕ್ಕೂ ಶಾಶ್ವತವಾಗಿ ಮಂಗಳ ಹಾಡುವುದು ಮೋದಿ ಹಾಗೂ ಭಾರತ ಇಬ್ಬರಿಗೂ
ತುರ್ತು ಅಗತ್ಯ ಹಾಗೂ ಅದು ಅಸಂಭವವೇನಲ್ಲ. ಮುಖ್ಯವಾಗಿ ಕಣಿವೆ ರಾಜ್ಯದಲ್ಲಿ ನಡೆಯಲಿರುವ
ಚುನಾವಣೆಯ ಫಲಿತಾಂಶಕ್ಕೆ ಇವೆಲ್ಲವನ್ನು ನಿರ್ಧರಿಸುವ ಸಾಮರ್ಥ್ಯ ಇರುವುದೂ ಸುಳ್ಳಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ