ಪುಟಗಳು

ಶನಿವಾರ, ಡಿಸೆಂಬರ್ 28, 2019

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ

ಸಂಶೋಧನೆಯ ನವರತ್ನ ಕಡೆಯಿತು ನಿಜ ಇತಿಹಾಸದ ನವನೀತ


                ಸಂಶೋಧನೆ...ಸಂಶೋಧನೆ...ಸಂಶೋಧನೆ. ಆತನ ಉಸಿರೇ ಅದರಲ್ಲಿತ್ತು. ಬಹುಮುಖಿ ಪ್ರತಿಭೆಯೊಂದು ವಿಷಯದ ಆಳ ಹೊಕ್ಕು ಶೋಧಿಸಿ ಅದನ್ನು ಸಮಾಜಮುಖಿಯಾಗಿಸಿ "ಇದಂ ನ ಮಮ" ಎಂದು ಸನಾತನ ಧರ್ಮದ ಸಹಜ ಭಾವ ತೋರಿದ ಶ್ರೇಷ್ಠ ಬದುಕು. ಅದು ಮೆಕಾಲೆ ಪ್ರಣೀತ ಶಿಕ್ಷಣದಿಂದ ತಮ್ಮ ಮೆದುಳನ್ನು ಅಡವಿಟ್ಟಿದ್ದ ಭಾರತೀಯ ಸಮಾಜ ಹಾಗೂ ಬ್ರಿಟಿಷರ ಪಳಿಯುಳಿಕೆಗಳ ವಿರುದ್ಧ ಸೆಣಸಾಟ ನಡೆಸಿ ನಿಜ ಇತಿಹಾಸದ ನವನೀತವನ್ನು ಕಡೆದ ಬದುಕು. ಗಣಿತಜ್ಞ, ಇತಿಹಾಸ ಸಂಶೋಧಕ, ಹಿಂದುತ್ವದ ವಿದ್ವಾಂಸ, ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಭಾಷೆಗಳಲ್ಲಿ ಸಾಧನೆಯನ್ನು ನಡೆಸಿದ, ಸಾಹಿತ್ಯವನ್ನು ಸೃಷ್ಟಿಸಿದ, ಅಪಾರ ದೂರದರ್ಶಿತ್ವ ಹೊಂದಿದ್ದ, ಹಲವುಗಳ ಆದ್ಯಪ್ರವರ್ತಕ, ಸಾಂಪ್ರಾದಾಯಿಕ ಸಂಸ್ಕೃತದ ರಸಧಾರೆ, ಹೆಸರಿಗೆ ಅನ್ವರ್ಥವೆನಿಸುವ ನವರತ್ನ ಇತ್ತೀಚೆಗೆ ಮರೆಯಾಯಿತು.

                ಒಂದೇ ತಲೆಮಾರಿನಲ್ಲಿ ಒಂಬತ್ತು ವಿದ್ವಾಂಸರನ್ನು ಹೊಂದಿದ್ದ ಈ ದೇಶಸ್ಥ ಕುಟುಂಬಕ್ಕೆ ಉತ್ತರಾದಿ ಮಠದ ಸ್ವಾಮಿಗಳಿಂದ ಕೊಡಲ್ಪಟ್ಟ ಬಿರುದು "ನವರತ್ನ". ಮುಂದೆ ಇದು ಹೆಸರಿನಲ್ಲಿ ಮಾತ್ರವಲ್ಲ, ಸಾಧನೆಯಲ್ಲೂ ಹರಿದು ಬಂತು. ನವರತ್ನ ರಾಮರಾಯರಂಥ ಪ್ರಸಿದ್ಧ ವಿದ್ವಾಂಸರನ್ನು ಕಂಡ ಪರಿವಾರದಲ್ಲಿ 1943 ಸೆಪ್ಟೆಂಬರ್ 22ರಂದು ಜನ್ಮತಾಳಿದ ಒಂದು ರತ್ನವೇ ನವರತ್ನ ಶ್ರೀನಿವಾಸ ರಾಜಾರಾಮ್. ಅಪ್ಪ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸರ್ಜನ್. ತಾಯಿ ಭೂಗರ್ಭಶಾಸ್ತ್ರಜ್ಞ, ಉದ್ದಿಮೆದಾರ, ಬಹುಭಾಷಾ ಕೋವಿದ ರಾಮೋಹಳ್ಳಿ ವ್ಯಾಸರಾಯರ ಮಗಳು. ತಾತ ನವರತ್ನ ರಾಮರಾಯರ ಪ್ರಭಾವವೇ ಎಳೆಯ ರಾಜಾರಾಮನಲ್ಲಿ ಹಲವು ಕ್ಷೇತ್ರಗಳ ಅಧ್ಯಯನದ ಆಸಕ್ತಿಯನ್ನು ಬೆಳೆಯಿಸಿತು. ಹತ್ತು ವರ್ಷದವರೆಗೆ ಮನೆಯಲ್ಲೇ ಶಿಕ್ಷಣ; ಬಳಿಕ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರೌಢ, ಪದವಿಪೂರ್ವ ಶಿಕ್ಷಣ; ಬಿಎಂಎಸ್ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದ ಮೇಲೆ 1965ರಲ್ಲಿ ಮುಂಬೈಯ ಟಾಟಾ ಪವರ್ ಕಂಪೆನಿಯಲ್ಲಿ, ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣಾ ಕೋಷ್ಠದಲ್ಲಿ ನೌಕರಿ. ಬಳಿಕ ಪೂನಾ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ ಆಧಾರಿತ ನೀರಾವರಿ ಯೋಜನೆಗಳ ಅನುಷ್ಠಾನದ ಜವಾಬ್ದಾರಿ.

              ಐದು ವರ್ಷದ ಬಳಿಕ ಟಾಟಾ ಪವರ್ ಸಂಸ್ಥೆಯನ್ನು ತೊರೆದು ಗಣಿತ ಹಾಗೂ ವಿಜ್ಞಾನದ ಉನ್ನತ ಅಧ್ಯಯನಕ್ಕಾಗಿ ಅಮೆರಿಕೆಗೆ ಹೋಗಲು ನಿರ್ಧರಿಸಿದರು ರಾಜಾರಾಮ್. 1976ರಲ್ಲಿ ಬ್ಲೂಮಿಂಗ್ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಸಂಭವನೀಯತಾ ಸಿದ್ಧಾಂತ ಮತ್ತು ಗಣಿತೀಯ ಭೌತವಿಜ್ಞಾನವನ್ನು ಆರು ವರ್ಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ, ಸಂಶೋಧಿಸಿ ಬರೆದ ಸಂಶೋಧನಾ ಪ್ರಬಂಧಕ್ಕೆ ಸಿಕ್ಕಿದ್ದು ಪಿ.ಹೆಚ್.ಡಿ ಪದವಿ. ಮುಂದಿನ ನಾಲ್ಕು ವರ್ಷ ಒಹಾಯೋದಲ್ಲಿರುವ ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯಲ್ಲಿ ಗಣಿತ ಮತ್ತು ಗಣಕವಿಜ್ಞಾನ ಬೋಧನೆ. ಸಹಜವಾಗಿಯೇ ಅವರನ್ನು ಸಂಶೋಧನಾ ಕ್ಷೇತ್ರ ಕೈಬೀಸಿ ಕರೆಯಿತು. ಮುಂದಿನ ಹನ್ನೆರಡು ವರ್ಷ ಕೈಗಾರಿಕಾ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಇಂದು ಲಾಕ್ ಹೀಡ್ ಮಾರ್ಟಿನ್ ಎಂದು ಕರೆಯಲಾಗುವ ಲಾಕ್ಹೀಡ್ ಕಾರ್ಪೊರೇಶನ್ ಎಂಬ ಸಂಸ್ಥೆಗೆ 1980ರಲ್ಲಿ ಸಂಶೋಧಕನಾಗಿ ಸೇರಿದ ಆತ ಗಣಿತ, ಸಂಖ್ಯಾಶಾಸ್ತ್ರ, ಗಣಕವಿಜ್ಞಾನ, ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ಯಂತ್ರಗಳು, ತಂತ್ರಾಂಶ ಅಭಿವೃದ್ಧಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದರು.

             ಆಗ ಜಗತ್ತಿನ ವಿವಿಧ ಪ್ರದೇಶಗಳ ಕೃಷಿ ಸಂಪನ್ಮೂಲಗಳ ಮೌಲ್ಯಮಾಪನ ಮಾಡುವ ಉದ್ದೇಶದಿಂದ ನಾಸಾ ಲ್ಯಾಂಡ್ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸುತ್ತಿದ್ದ ಕಾಲ. ಈ ಉಪಗ್ರಹಗಳು ಕಳುಹಿಸುವ ಭೂಮಿಯ ಅಗಾಧ ಪ್ರಮಾಣದ ಚಿತ್ರಗಳನ್ನು ಪರಿಶೀಲಿಸಿ ಅವುಗಳಲ್ಲಿದ್ದ ವರ್ಣ-ಛಾಯೆ ವಿನ್ಯಾಸಗಳ ವ್ಯತ್ಯಾಸಗಳನ್ನು ಗುರುತಿಸಿ ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಊಹಿಸಿ ಯಾವ ಪ್ರದೇಶ ಯಾವ ಕೃಷಿಗೆ ಸೂಕ್ತ ಎಂಬುದರ ನಿಷ್ಕರ್ಷೆ ಮಾಡುವುದು ಮುಖ್ಯ ಕೆಲಸವಾಗಿತ್ತು. ಚಿತ್ರಗಳನ್ನು ವಿಶ್ಲೇಷಿಸುವ ಕೆಲಸದಲ್ಲಿ ತೊಡಗಿದ್ದ ರಾಜಾರಾಮರು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನು ಕಂಡುಕೊಂಡರು. ನಿಖರವಾದ ಮಾಹಿತಿ ಪಡೆದು ಖಚಿತ ನಿರ್ಣಯಕ್ಕೆ ಬರಬೇಕಾದರೆ ಇವೆಲ್ಲವನ್ನೂ ಅರ್ಥಮಾಡಿಕೊಂಡು ತಾನೇತಾನಾಗಿ ಕೆಲಸ ಮಾಡಬಲ್ಲ ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ರೂಪಿಸುವ ಅಗತ್ಯವನ್ನು ಮನಗಂಡು ಸಂಬಂಧಪಟ್ಟವರಿಗೆ ಮನದಟ್ಟು ಮಾಡಿಸಿದರು. ತಮ್ಮ ಪ್ರತಿಪಾದನೆಗೆ ಪ್ರತಿಸ್ಪಂದನ ದೊರೆತಾಗ ಅವರು ಕೃತಕ ಬುದ್ಧಿವಂತಿಕೆಯ ತಂತ್ರಾಂಶಗಳನ್ನು ಬರೆದರು. ಖಚಿತತೆ ಮತ್ತು ಕಡಿಮೆ ಸಂಪನ್ಮೂಲ ಬಳಕೆಯಿಂದ ಮನುಷ್ಯ ಸಹಜವಾದ ಹಸ್ತಚಾಲಿತ ದೋಷಗಳನ್ನು ನಿವಾರಿಸಿಕೊಂಡು ನಿಖರ ಲೆಕ್ಕಾಚಾರ ಒದಗಿಸುವ ಈ ತಂತ್ರಾಂಶಗಳ ಬಗ್ಗೆ ನಾಸಾ ನಿಬ್ಬೆರಗಾಗಿ ನೋಡಿತು.

                1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ಇತ್ತ ಅವರು ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದುದು ಮಾತ್ರವಲ್ಲದೆ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಆದರೂ ನಾಸಾ ಹಾಗೂ ಲಾಕ್ ಹೀಡ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಇವರ ಬೆನ್ನುಹತ್ತುವುದನ್ನು ಬಿಡಲಿಲ್ಲ. ಹಾಗಾಗಿ ನಾಸಾ ಮತ್ತು ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಸ್ವಯಂಚಾಲಿತ ಯಂತ್ರಗಳ ನಿರ್ಮಾಣ(ರೋಬೋಟಿಕ್ಸ್) ಕುರಿತು ಹಲವು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರವನ್ನು ನಡೆಸಬೇಕಾಇತು. ಕೃತಕ ಬುದ್ಧಿಮತ್ತೆ ಬಳಸುವುದೇ ಅಚ್ಚರಿದಾಯಕವಾಗಿದ್ದ ಕಾಲದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಯಾವ ಕೆಲಸ ಮಾಡಬೇಕೆಂಬುದನ್ನು ತಾವಾಗಿ ನಿರ್ಧರಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ, ಬಾಹ್ಯಾಕಾಶದಲ್ಲಿ ಬಹಳಷ್ಟು ಪ್ರಯೋಜನಕ್ಕೆ ಬರುವ ಈ ಸಂಶೋಧನೆ ವಿಜ್ಞಾನ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲಾಯಿತು. ಈ ಸಂಬಂಧ ಅವರು ಬರೆದ ರೋಬೆಕ್ಸ್-85 ಹಾಗೂ ರೋಬೆಕ್ಸ್-87 ನಂತಹಾ ಸಂಶೋಧನಾ ಕೃತಿಗಳು ಇಂದಿಗೂ ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ಯಂತ್ರಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಆವಿಷ್ಕಾರಗಳಿಗೆ ಅಧಿಕೃತ ಆಕರ ಸಾಹಿತ್ಯಗಳಾಗಿವೆ.

              ಮುಂದೆ ರಾಜಾರಾಮ್ ಇದೇ ಪ್ರಕ್ರಿಯೆಯನ್ನು ಉದ್ದಿಮೆಗಳಲ್ಲೂ ಬಳಸಲು ಯತ್ನಿಸಿದರು. ಗಣಕ ಯಂತ್ರಗಳ ನಿರ್ಮಾಣ ಮತ್ತು ವಿನ್ಯಾಸ ಎರಡರಲ್ಲೂ ಒಂದು ಉದ್ದಿಮೆಗೆ ಸೀಮಿತವಾಗಿರುವಂತೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಲು ರೋಬೋಎಡಿಟ್ ಯಂತ್ರಾಂಶವನ್ನು ಸಿದ್ಧಪಡಿಸಿದರು. ಇದು ಯಂತ್ರವೊಂದನ್ನು ಸ್ವಯಂಚಾಲಿತ ಮಾತ್ರವಲ್ಲದೆ ತಾನು ಮುಂದೇನು ಮಾಡಬೇಕೆಂದು ಅರಿತು ಮಾಡುವಂತಹ ಬುದ್ಧಿವಂತಿಕೆಯನ್ನು ಹೊಂದಿದ್ದು ಮುಂದಿನ ಕೈಗಾರಿಕಾ ಕ್ರಾಂತಿಗೆ ಇದು ನಾಂದಿಯಾಯಿತು. ಅವರ ಮುಂದಿನ ಬಹುಮುಖ್ಯ ಸಂಶೋಧನೆ ಕೃತಕ ನರವ್ಯವಸ್ಥೆಯ ಶೋಧನೆ! ಇದಂತೂ ಹಲವು ಸಂಶೋಧಕರನ್ನು, ಉದ್ದಿಮೆದಾರರನ್ನು ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಭವಿಷ್ಯಕ್ಕೆ ಸಾಗಿದ್ದ ರಾಜಾರಾಮರ ಬದುಕನ್ನು ಭಾರತದ ಭೂತಪೂರ್ವ ಇತಿಹಾಸ ಸೆಳೆಯಿತು. ಅವರು ಅಪಾರವಾದ ಕೆಲಸ, ಪ್ರಸಿದ್ಧಿ, ಧನರಾಶಿಯನ್ನು ತೊರೆದು ಜನ್ಮಭೂಮಿಗೆ ಮರಳಿದರು. ಅದಕ್ಕೆ ಕಾರಣರಾದವರು ವಾಮದೇವ ಶಾಸ್ತ್ರಿ ಅಥವಾ ಡೇವಿಡ್ ಫ್ರಾಲಿ. ಮುಂದೆ ನಡೆದದ್ದು ಭಾರತದ ಇತಿಹಾಸದಲ್ಲಿ ದಾಖಲಾಗಬೇಕಾದ ಮಹತ್ವದ ಅಂಶ.

              1995ರಲ್ಲಿ ರಾಜಾರಾಮರು ಡೇವಿಡ್ ಫ್ರಾಲಿಯವರೊಡಗೂಡಿ ಮೂರು ವರ್ಷಗಳ ಸತತ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ "ವೇದಿಕ್ ಆರ್ಯನ್ಸ್ & ದಿ ಒರಿಜಿನ್ಸ್ ಆಫ್ ಸಿವಿಲೈಝೇಷನ್" ಎನ್ನುವ, ಬ್ರಿಟಿಷರು ಹಾಗೂ ಅವರ ಅನುವರ್ತಿಗಳ "ಆರ್ಯ ಆಕ್ರಮಣ" ಎಂಬ ಭಾರತದ ಅಂತಃಸತ್ವವನ್ನೇ ನಾಶ ಮಾಡಿದ ಹುಸಿ ಸಿದ್ಧಾಂತವನ್ನು ಸಾಧಾರವಾಗಿ ಬುಡಮೇಲು ಮಾಡಿದ ಸಂಶೋಧನಾ ಕೃತಿಯನ್ನು ರಚಿಸಿದರು. ಪ್ರಾಚೀನ ಜಗತ್ತು ತನ್ನ ವಿಜ್ಞಾನವನ್ನು ಬ್ಯಾಬಿಲೋನ್ ಮತ್ತು ಮೆಸಪೊಟೊಮಿಯಾದಿಂದ ಎರವಲು ಪಡೆದಿದೆ ಎಂದು ಚಾಲ್ತಿಯಲ್ಲಿದ್ದ  ಮಾದರಿಯನ್ನು ಅವರು ಪ್ರಶ್ನಿಸಿದರು. ಮಾತ್ರವಲ್ಲ ಪಾಶ್ಚಿಮಾತ್ಯ ಇಂಡಾಲಜಿಯು ವಿದ್ವಾಂಸರಿಲ್ಲದೆ ಬಳಲುತ್ತಿದೆ. ಅಮೆರಿಕಾ ಮತ್ತು ಯೂರೋಪಿನಲ್ಲಿ ಸಂಸ್ಕೃತ ವಿದ್ವತ್ ಮಟ್ಟ ತುಂಬಾ ಕಡಿಮೆಯಿದ್ದು ಇವರೆಲ್ಲಾ ಹತ್ತೊಂಬನೇ ಶತಮಾನದಲ್ಲಿ ಕೆಲವರು ಮಾಡಿಟ್ಟ ಅನುವಾದಗಳನ್ನೇ ಉರು ಹೊಡೆಯುತ್ತಾ, ಮಾರ್ಕ್ಸ್ ವಾದ ಮತ್ತು ಪ್ರಾಯ್ಡ್ ನ ವಿಶ್ಲೇಷಣಾ ಮಾದರಿಗಳನ್ನೇ ಅನುಕರಿಸುತ್ತಿದ್ದಾರೆ ಎಂದು ಇಂಡಾಲಿಜಿಸ್ಟ್'ಗಳೆಂದು ಪ್ರಶಂಸೆ ಪಡೆಯುತ್ತಾ ಕೂತಿದ್ದ ಮೆಕಾಲೆ ತಲೆಗಳ ಹುಳುಕುಗಳನ್ನು ಜಗತ್ತಿಗೆ ತೋರಿಸಿದರು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ, ವ್ಯಾಟಿಕನ್ನಿನ ಪಾಪಲ್ ಕಛೇರಿಯಲ್ಲಿ ಕ್ರೈಸ್ತೇತರ ಮತಗಳಿಗೆ ಸಲಹೆಗಾರರಾಗಿದ್ದ ಖ್ಯಾತ ಇಂಡಾಲಜಿಸ್ಟ್ ಡಾ. ಕ್ಲಾಸ್ ಕ್ಲೋಸ್ಟರ್ಮೇಯರ್ "ಆರ್ಯ ಆಕ್ರಮಣದ ವಿಷಯದಲ್ಲಿ ಹಳೆಯ ಸಿದ್ಧಾಂತವು ಭಾಷಾ ಶಾಸ್ತ್ರದ ವಾದಗಳ ಮೇಲೆ ನಿಂತಿದ್ದರೆ ಹೊಸದಾಗಿ  ಪ್ರವೇಶಿಸಿದ ಸಿದ್ಧಾಂತ ಖಗೋಳ, ಭೂವೈಜ್ಞಾನಿಕ, ಗಣಿತ ಮತ್ತು ಪುರಾತತ್ವ ಪುರಾವೆಗಳನ್ನು ಒಳಗೊಂಡಿದೆ" ಎಂದು ರಾಜಾರಾಮರು ಹಾಗೂ ಸಂಗಡಿಗರ ಕಾರ್ಯವನ್ನು ಬಹು ಪ್ರಶಂಸಿಸುವ ಕಾರ್ಯವನ್ನು ತಮ್ಮ "ಆರ್ಯ ಆಕ್ರಮಣವಾದವನ್ನು ಪ್ರಶ್ನಿಸುವುದು ಹಾಗೂ ಭಾರತೀಯ ಇತಿಹಾಸವನ್ನು ಪರಿಷ್ಕರಿಸುವುದು" ಎಂಬ ಲೇಖನದಲ್ಲಿ(1998) ಮಾಡಿದ್ದಾರೆ.

                  ಪ್ರಸಿದ್ಧ ಗಣಿತಜ್ಞರೂ, ಆಳವಾಗಿ ಸಂಶೋಧನೆ ಮಾಡುವವರೂ ಆಗಿದ್ದರೂ ರಾಜಾರಾಮರ ಸಂಶೋಧನೆ ಸ್ಥಾಪಿತ ಇಂಡಾಲಜಿಸ್ಟ್'ಗಳನ್ನು ಕೆರಳಿಸಿತು. ಇದಕ್ಕೆ ಕಾರಣಗಳು ಎರಡು; ಒಂದು ಆತ ಯಾವುದೇ ಪೂರ್ವಾಗ್ರಹವಿಲ್ಲದೆ ಸತ್ಯಶೋಧನೆಗೆ ಮಾತ್ರ ಮಹತ್ವ ಕೊಟ್ಟಿದ್ದು; ಇನ್ನೊಂದು ಮತಾಂತರಿಗಳನ್ನು ಖಂಡತುಂಡವಾಗಿ ವಿರೋಧಿಸಿ, ಅವರ ಕುಕೃತ್ಯವನ್ನು ಬಯಲು ಮಾಡುತ್ತಿದ್ದುದು ಮಾತ್ರವಲ್ಲದೆ ಸ್ಥಾಪಿತ ಇಂಡಾಲಜಿಯು ಹೇಗೆ ಮತಾಂತರ ಉದ್ಯಮಕ್ಕೆ ಪೂರಕವಾಗಿ ಹೆಣೆಯಲ್ಪಟ್ಟ ಸುಳ್ಳುಗಳ ಸಂತೆಯಾಗಿದೆ ಎಂದು ಸಾಕ್ಷಿ ಸಮೇತ ಎತ್ತಿ ತೋರಿಸಿದ್ದು! "ದ ವಿನ್ಸಿ ಕೋಡ್" ಬರುವುದಕ್ಕೆ ಎಷ್ಟೋ ವರ್ಷ ಮೊದಲೇ ಕ್ರೈಸ್ತ ಮತಾಂತರಿಗಳ ಸುಳ್ಳುಗಳನ್ನೆಲ್ಲಾ ಕಿತ್ತೆಸೆದು ಭಾರತದ ನಿಜ ಇತಿಹಾಸವನ್ನು ಜಗತ್ತಿಗೆ ತೋರಿಸಲು ರಾಮ ಸ್ವರೂಪ್, ಸೀತಾರಾಮ್ ಗೋಯಲ್, ನವರತ್ನ ರಾಜಾರಾಮ್, ಡೇವಿಡ್ ಫ್ರಾಲಿ ಮುಂತಾದ ಬೌದ್ಧಿಕ ಪ್ರತಿಭೆಗಳು ಅವರೊಂದಿಗೆ ಮುಖಾಮುಖಿ ಸಮರ ನಡೆಸಿದ್ದರು. ಹೆಚ್ಚು ಹೆಚ್ಚು ಪುರಾತತ್ತ್ವ ಸಂಶೋಧನೆಗಳಿಂದ ಕ್ರೈಸ್ತಮತದ ಮೂಲ ಹಾಗೂ ಅಸ್ತಿತ್ವವಾದಕ್ಕೆ ಬರಬಹುದಾದ ಬಿಕ್ಕಟ್ಟನ್ನು ರಾಜಾರಾಮರು 1997ರಲ್ಲೇ ವಿಶ್ಲೇಷಿಸಿದ್ದರು. ಇಂತಹಾ ನಿಖರ ಸಂಶೋಧನೆ, ಸತ್ಯಪಥದಿಂದಾಗಿಯೇ ಆತ ಶೈಕ್ಷಣಿಕ ವಲಯಗಳಿಂದಲೂ ಹೊರಗೆ ಜಾಜ್ವಲ್ಯಮಾನ ನಕ್ಷತ್ರದಂತೆ ಹೊಳೆದರು. ಅಲ್ಲದೆ ಅವರಲ್ಲಿನ ಗಣಿತಜ್ಞ ಹಾಗೂ ವಸ್ತುವಿಜ್ಞಾನಿ, ಆಗಿದ್ದ ಭಾಷಾಶಾಸ್ತ್ರ ರಚನೆಗಳನ್ನು ಹುಸಿವಿಜ್ಞಾನವೆಂದೇ ಪರಿಗಣಿಸುತ್ತಿದ್ದ.

                2000ನೇ ಇಸವಿಯಲ್ಲಿ ಪ್ರಾಚೀನ ಲಿಪಿ ಶಾಸ್ತ್ರಜ್ಞರೂ, ವೈದಿಕ ವಿದ್ವಾಂಸರೂ ಆಗಿದ್ದ ನಟವರ್ ಝಾರೊಡನೆ ಸೇರಿ ಸಿಂಧೂ ಲಿಪಿಯಲ್ಲಿನ ಹಲವು ಸಂಕೇತಾಕ್ಷರಗಳ ಗೂಢವನ್ನು ಭೇದಿಸುವ "ಡಿ ಡೆಸಿಫೆರೆಡ್ ಇಂಡಸ್ ಸ್ಕ್ರಿಪ್ಟ್: ಮೆಥಡಾಲಜಿ, ರೀಡಿಂಗ್ಸ್, ಇಂಟರ್ಪ್ರೆಟೇಶನ್" ಎನ್ನುವ ಸಂಶೋಧನಾತ್ಮಕ ಗ್ರಂಥವನ್ನು ಬರೆಯುವ ಮೂಲಕ ಹರಪ್ಪನ್ನರದು ವೈದಿಕ ಧಾರೆಯೇ ಎಂದು ಸಿದ್ಧಪಡಿಸಿದರು. ಅವರ ಸರಸ್ವತಿ ನದಿಯ ಬಗೆಗಿನ "ಸರಸ್ವತಿ ನದಿ ಹಾಗೂ ವೇದಕಾಲೀನ ನಾಗರಿಕತೆ" ಎನ್ನುವ ಆಂಗ್ಲ ಭಾಷೆಯಲ್ಲಿನ ಗ್ರಂಥ ಸರಸಿರೆಯ ಹುಟ್ಟು-ಹರಿವು-ಸಾವುಗಳನ್ನು, ವೇದಕಾಲೀನ ನಾಗರಿಕತೆಯ ಕಡೆಗೆ ಅದರ ಪ್ರಭಾವವನ್ನು ಸಮೂಲಾಗ್ರವಾಗಿ ವಿವರಿಸಿದೆ. "ಇತಿಹಾಸದ ರಾಜಕೀಯ", "ಪ್ರೊಫೈಲ್ಸ್ ಇನ್ ಡಿಸೆಪ್ಶನ್", "ಗುಪ್ತ ಪದರುಗಳು: ಭಾರತೀಯ ಸಂಸ್ಕೃತಿಯ 10000 ವರ್ಷಗಳ ಅನ್ವೇಷಣೆ" ಅವರ ಇನ್ನುಳಿದ ಪ್ರಮುಖ ಗ್ರಂಥಗಳು. ಕೃಷ್ಣನ ಬಗೆಗಿನ ಅವರ ವಿಚಾರವನ್ನು ಗಮನಿಸುವಂತಹದ್ದು; ಪುರಾಣಗಳನ್ನು ಮೀರಿ ನೋಡಿದರೆ ಕೃಷ್ಣನ ನೈಜ ವ್ಯಕ್ತಿ ಚಿತ್ರಣ ದೊರಕೀತು. ಆತನೊಬ್ಬ ಪ್ರಾಯೋಗಿಕ ತತ್ತ್ವಜ್ಞಾನಿ. ತನ್ನ ಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಮೀರಿ ನಿಂತು ಕ್ರಿಯಾಧಾರಿತ  ಸಾಂಖ್ಯ ಸಿದ್ಧಾಂತದತ್ತ ಸರಿದು ಕರ್ಮಯೋಗವನ್ನು ಪ್ರತಿಪಾದಿಸಿದ ಶ್ರೇಷ್ಠ ಭಗವದ್ಗೀತೆಯನ್ನು ಕೊಟ್ಟ ಶ್ರೇಷ್ಠ ಮಾನವನಾತ ಎಂದಿದ್ದಾರೆ ರಾಜಾರಾಮ್.

                 ವಿಟ್ಜೆಲ್, ಸ್ಟೀವ್ ಫಾರ್ಮರ್ ಹಾಗೂ ಅವರ ಚೇಲಾಗಳೆಲ್ಲಾ ಸೇರಿಕೊಂಡು ಮಾಧ್ಯಮಗಳಲ್ಲಿ ತಮಗಿದ್ದ ಪ್ರಭಾವವನ್ನು ಬಳಸಿಕೊಂಡು ರಾಜಾರಾಮರನ್ನು ಅಪಹಾಸ್ಯ ಮಾಡುತ್ತಾ ತೇಜೋವಧೆ ನಡೆಸಿದರೂ ಆತ ಧೃತಿಗೆಡಲಿಲ್ಲ. ಆತ ವಂಶವಾಹಿ ಆಧಾರಿತವಾಗಿ ವೈದಿಕ ನಾಗರಿಕತೆ ಮೂಲವನ್ನು ದೃಢೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಈ ಸಂಶೋಧನೆಯಿಂದ ಆರ್ಯರು ಬೇರೆಲ್ಲಿಂದಲೂ ಬಂದವರಲ್ಲವೆಂದೂ ಹತ್ತಾರು ಸಾವಿರ ವರ್ಷಗಳಿಂದಲೂ ಇಲ್ಲಿಯೇ ನೆಲೆಸಿರುವ ಜನಾಂಗವೆಂದೂ, ಆರ್ಯವೆಂದರೆ ಶ್ರೇಷ್ಠ ಎಂಬ ಅರ್ಥವೇ ಹೊರತು ಜನಾಂಗಸೂಚಕವಲ್ಲವೆಂದೂ, ದ್ರಾವಿಡವು ಕೇವಲ ಪ್ರದೇಶಸೂಚಕವೆಂದು ದೃಢಪಡಿಸಿದರು. ಮುಂದಿನ ಅವರ ಸಂಶೋಧನ ಪ್ರಕ್ರಿಯೆ ನವೀಕರಿಸಬಹುದಾದ ಶಕ್ತಿಗಳ ತಂತ್ರಜ್ಞಾನದತ್ತ ತಿರುಗಿತು. ಯೋಜನಾ ಆಯೋಗದಿಂದ ಹೊರಗಿರುವ ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುತ್ತದೆ. ಭಾರತದ ಯೋಜನಾ ಆಯೋಗ 1960ರ ದಶಕದ ಸೋವಿಯತ್ ಯುಗದ ಮನಃಸ್ಥಿತಿಯಲ್ಲೇ ಇಂದಿಗೂ ಉಳಿದುಕೊಂಡಿರುವುದು ಇದಕ್ಕೆ ಕಾರಣ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಭಾಜಪಾ ಸರಕಾರ ಯೋಜನಾ ಆಯೋಗವೆಂಬ ಕೆಲಸಕ್ಕೆ ಬಾರದ ಬಿಳಿಯಾಣೆಯನ್ನು ಕಿತ್ತೆಸೆದು, ನೀತಿ ಆಯೋಗವನ್ನು ಆರಂಭಿಸಿದ್ದು ನೆನಪಿರಬಹುದು. ಸೌರ ವಿದ್ಯುತ್ ಸ್ಥಾವರಗಳನ್ನು ವಿಕೇಂದ್ರೀಕೃತಗೊಳಿಸಿ ಜಲವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳ ಜೊತೆ ಸಂಯೋಜಿಸಬೇಕು. ಜಲವಿದ್ಯುತ್ ಉತ್ಪಾದನೆಗಾಗಿರುವ ಜಲಾಶಯಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ ಕಡಿಮೆ ಬಂಡವಾಳದಲ್ಲಿ ಹೆಚ್ಚು ಸೌರಶಕ್ತಿಯನ್ನು ಪಡೆಯುವ ಬಗೆಯನ್ನು ಆತ ಪ್ರತಿಪಾದಿಸಿದ್ದರು.

               ಶೈಕ್ಷಣಿಕವಾಗಿ ನಮ್ಮ ದೇಶದ ಇತಿಹಾಸವನ್ನು ತಿರುಚಿದ ಪಠ್ಯಗಳನ್ನು ಓದುವ ನಮ್ಮ ಪೀಳಿಗೆಗಳ ಹಣೆಯಬರಹ ಬದಲಾಗಿಲ್ಲ ನಿಜ. ಆದರೆ ನಮ್ಮ ನಿಜವಾದ ಇತಿಹಾಸವನ್ನು ಅರಿಯುವಂತೆ ಮಾಡಿದ ಕೆಲವೇ ಕೆಲವು ಮಹಾತ್ಮರಲ್ಲಿ ರಾಜಾರಾಮ್ ಒಬ್ಬರು. ತನಗಿದ್ದ ದುಬಾರಿ ವೇತನದ ಕೆಲಸ, ಸ್ಥಾನಮಾನಗಳನ್ನು ಬದಿಗಿಟ್ಟು ದೇಶದ ನಿಜವಾದ ಇತಿಹಾಸವನ್ನು ಸಂಶೋಧಿಸಿ ದೇಶೀಯರ ಸ್ವಾಭಿಮಾನವನ್ನು ಉದ್ದೀಪನಗೊಳಿಸುವ ಮಹತ್ಕಾರ್ಯವನ್ನು ದೇಶ ವಿರೋಧಿಗಳಿಂದ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂದು, ಅವಮಾನವನ್ನು ನುಂಗಿಕೊಂಡು ಮಾಡಿದ ಆತ ನಿಜಾರ್ಥದಲ್ಲಿ ಈ ದೇಶದ ನವರತ್ನ. ಜೀವಿತವಿಡೀ ಆತ ನಡೆಸಿದ್ದು ಸಂಶೋಧನೆ; ಮನುಕುಲದ ಉದ್ಧಾರಕ್ಕಾಗಿ; ತನ್ನ ದೇಶದ ಇತಿಹಾಸವನ್ನು ಎದೆಯುಬ್ಬಿಸಿಕೊಂಡು ಹೇಳುವ ಅವಕಾಶ ಭಾರತೀಯನಿಗೆ ಒದಗಿಸಲಿಕ್ಕಾಗಿ. ಅಂತಹಾ ಪುಣ್ಯಜೀವಿಯನ್ನು ಅದು ಮರೆಯಾದ ಸಮಯದಲ್ಲಾದರೂ ನೆನಪಿಸಿಕೊಳ್ಳುವುದು ಆತನ ಕಾರ್ಯಕ್ಕೆ ಸಲ್ಲಿಸಬಹುದಾದ ಅತ್ಯಲ್ಪ ಕೃತಜ್ಞತೆ!

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ

ಶ್ರಮಿಕ ಭಾರತವನ್ನು ಒಗ್ಗೂಡಿಸಿದ ಸಾಧಕ ದತ್ತೋಪಂಥ ಠೇಂಗಡಿ


              ಅದು ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತೀಯ ಮಟ್ಟದ ಪ್ರಪ್ರಥಮ ಕಾರ್ಯಾಗಾರ. ಆಗ ದತ್ತೋಪಂಥ ಠೇಂಗಡಿಯವರು ಅಂದ ಮಾತುಗಳು ಹಿಂದೂ ಎಂಬ ಜೀವನ ಪದ್ದತಿ ಹೇಗೆ ತನ್ನನ್ನು ಕಾಲ ಕಾಲಕ್ಕೆ ಪಕ್ವಗೊಳಿಸುತ್ತಾ ಸಾಗುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ. "ಒಂದೇ ಕಾಲದಲ್ಲಿ ವಿವಿಧ ಪರಿಸ್ಥಿತಿಗಳಲ್ಲಿರುವ ವಿಭಿನ್ನ ಸಮಾಜಗಳಿಗೆ ಒಂದೇ ವಿಚಾರಧಾರೆ ಇರುವುದಿಲ್ಲ. ಹಾಗೆಯೇ ಒಂದು ಸಮಾಜಕ್ಕೆ ಒಂದೇ ವಿಚಾರ ವಿಭಿನ್ನ ಕಾಲಘಟ್ಟಗಳಲ್ಲಿ ಸೂಕ್ತವಾಗಿ ಇರಬೇಕೆಂದೇನೂ ಇಲ್ಲ. ಒಂದು ಸಿದ್ಧಾಂತವು ಆ ಕಾಲದಲ್ಲಿ ಒದಗಿದ ಜ್ಞಾನ ಸಮುಚ್ಛಯದಿಂದ ಮಾತ್ರವೇ ಒಂದು ಆಕಾರವನ್ನು ಪಡೆದುಕೊಳ್ಳುವುದರಿಂದ ಹಾಗೂ ಕಾಲ ಮತ್ತು ಪರಿಸ್ಥಿತಿಗಳು ಬದಲಾಗುತ್ತಲೇ ಇರುವುದರಿಂದ ಒಂದೇ ಚಿಂತನೆಯೂ ಎಲ್ಲಾ ಕಾಯಿಲೆಗಳಿಗೆ ರಾಮಬಾಣವಾಗಲಾರದು" ಎನ್ನುತ್ತಾರೆ ಠೇಂಗಡಿ. ಎಷ್ಟು ಶ್ರೇಷ್ಠ ಚಿಂತನೆ. ಹಾಗೆಂದು ಇದೇನೂ ಹೊಸ ಚಿಂತನೆಯೆಂದೇನೂ ಅಲ್ಲ. ವೇದಗಳು ಘೋಷಿಸಿದ ಚಿಂತನೆಯೇ ಇದು. ಕಾಲಕಾಲಕ್ಕೆ ದೃಷ್ಟಾರರು ಕಂಡುಕೊಂಡ ಮಂತ್ರವೇ ಇದು. ವಿಶೇಷ ಎಂದರೆ ಆ ಚಿಂತನೆ ಈ ಕಾಲದಲ್ಲೂ ಪ್ರವಹಿಸಿದ್ದು. ಅದಕ್ಕೇ ವೇದವು ಅಪೌರುಷೇಯವಾದದ್ದು. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಸದಾ ಕಾರ್ಯಾಚರಿಸುವ ಹಿಂದೂ ಎಂಬ ಜೀವನ ಪದ್ದತಿ ನಿಂತ ನೀರಾಗದೇ ಸನಾತನ ಧರ್ಮವಾದದ್ದು. ಇಂದು ಬಹುತ್ವ ನಾಶವಾಗುತ್ತಿದೆ ಎಂದು ಬೊಬ್ಬಿರಿವ ಪ್ರಭೃತಿಗಳೆಲ್ಲಾ ಅಳವಡಿಸಿಕೊಳ್ಳಬೇಕಾದ ಚಿಂತನೆ ಇದು. ಎಲ್ಲದಕ್ಕೂ ಕೆಂಪು ಬಳಿದು ರಕ್ತ ಹರಿಸಲು ಹೊರಟ ರಕ್ಕಸರಿಗೆ ಬಹುತ್ವದ ನಿಜವಾದ ಅರ್ಥ ಏನು ತಿಳಿಸುವ ಮಾತುಗಳಿವು. ಈ ಧ್ಯೇಯ ಠೇಂಗಡಿಯವರ ಮೂಲಕ ಮಜ್ದೂರ್ ಸಂಘ, ಸ್ವದೇಶೀ ಜಾಗರಣ ಮಂಚ್ ಭಾರತೀಯ ಕಿಸಾನ್ ಸಂಘಗಳಲ್ಲೂ ಪ್ರವಹಿಸಿತು, ಜನಸಂಘಕ್ಕೂ ಹೊಕ್ಕಿತು, ಸಂಸತ್ತಿನೊಳಗೂ ವಿರಾಜಮಾನವಾಯಿತು, ಸಮಾಜದ ನಡುವೆಯೂ ಪ್ರತಿಷ್ಠಿತವಾಯಿತು.

                  ಹೋರಾಟವು ಅನ್ಯಾಯದ ವಿರುದ್ಧವಾಗಿರಬೇಕೇ ಹೊರತು ಯಾವುದೇ ವರ್ಗದ ವಿರುದ್ಧವಲ್ಲ ಎನ್ನುವುದನ್ನು ಆತ ಸ್ಪಷ್ಟಪಡಿಸಿದ್ದರು. ಜನರನ್ನು ಜಾಗೃತಿಗೊಳಿಸುವುದು ಹಾಗೂ ಸಂಘಟನೆಯನ್ನು ಬಲಗೊಳಿಸುವುದರಿಂದ ಬದಲಾವಣೆಯನ್ನು ತರಬಹುದೇ ಹೊರತು ಬರಿಯ ಹರತಾಳಗಳಿಂದಲ್ಲ ಎನ್ನುವುದನ್ನು ಅವರು ಮಾಡಿ ತೋರಿಸಿದರು. "ಜಗತ್ತಿನ ಕಾರ್ಮಿಕರೇ ಒಂದುಗೂಡಿ" ಎನ್ನುವುದನ್ನು ಆತ "ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ" ಅಂತ ಬದಲಾಯಿಸಿದರು. ಹಾಗಾಗಿಯೇ ಕಾರ್ಮಿಕ ಚಳುವಳಿಗಳಲ್ಲಿ ಅಂದಿನವರೆಗೆ ಕಾಣದಿದ್ದ ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಬಿಎಂಎಸ್ ಮೂಲಕ ಕೇಳಿ ಬರಲಾರಂಭಿಸಿತು. ಅಂದಿನವರೆಗೆ ಸ್ಪೂರ್ತಿಗಾಗಿ ರಷ್ಯಾ, ಚೀನಾಗಳತ್ತಲೇ ನೋಡುತ್ತಲಿದ್ದ ಕಾರ್ಮಿಕ ಚಳುವಳಿ ಎಡಪಂಥೀಯವೆಂಬ ಏಕ ವಿಚಾರಧಾರೆಯಿಂದ ಹೊರಳಿ ದೇಶೀ ಸೊಗಡಿನತ್ತ ಸಾಗಿತು. ಧ್ವಜದ ಬಣ್ಣ ಕೆಂಪಿನಿಂದ ಕೇಸರಿಯಾಗಿ ಬದಲಾಯಿತು. ಅದರ ಧ್ಯೇಯವು ಶ್ರಮಿಕರ ರಾಷ್ಟ್ರೀಯಕರಣ, ರಾಷ್ಟ್ರದ ಔದ್ಯೋಗೀಕರಣ, ಉದ್ಯೋಗಗಳ ಶ್ರಮಿಕೀಕರಣವೆಂಬ ಬಿಎಂಎಸ್ ಧ್ಯೇಯವಾಗಿ ಪರಿವರ್ತಿತವಾಯಿತು.

                ಠೇಂಗಡಿ ಅನಾಸಕ್ತ ಯೋಗದ ಸಾಕಾರ ಮೂರ್ತಿ. 1975ರಲ್ಲಿ ಜಯಪ್ರಕಾಶ ನಾರಾಯಣರಿಂದ ಸ್ಥಾಪಿಸಲ್ಪಟ್ಟ ಲೋಕಸಂಘರ್ಷ ಸಮಿತಿಯ ನೇತೃತ್ವ ವಹಿಸಿಕೊಂಡ ಠೇಂಗಡಿ ಇಂದಿರಾಗಾಂಧಿ ದೇಶದ ಮೇಲೆ ವಿಧಿಸಿದ್ದ ತುರ್ತುಪರಿಸ್ಥಿತಿ ಹಾಗೂ ಆಕೆಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟವನ್ನು ರೂಪಿಸಿದವರು. ಆಕೆ ಚುನಾವಣೆಯಲ್ಲಿ ಸೋತು ಜನತಾ ಸರಕಾರ ಅಧಿಕಾರಕ್ಕೆ ಬಂದಾಗ, ಅವರಾಗಿಯೇ ಜನಸಂಘವನ್ನು ಜನತಾ ಸರಕಾರದ ಜೊತೆ ಜೋಡಿಸಿದ್ದರೂ ಮೊರಾರ್ಜಿ ಸಂಪುಟದಲ್ಲಿ ಸಿಕ್ಕ ಮಂತ್ರಿ ಪದವಿಯನ್ನು ನಿರಾಕರಿಸಿದರು. ಮಾತ್ರವಲ್ಲ ರಾಜಕೀಯದಿಂದಲೇ ಹೊರಬಂದುಬಿಟ್ಟರು. ಮುಂದೆ ತಮಗೆ ಪದ್ಮವಿಭೂಷಣದಂತಹಾ ಸಮ್ಮಾನ ಘೋಷಣೆಯಾದಾಗ ಅದನ್ನೂ ನಿರಾಕರಿಸಿದರು. ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳನ್ನು, ಪ್ರಶಸ್ತಿಗಾಗಿ ಆಳುವ ವರ್ಗದ ಕೈ, ಕಾಲು ಹಿಡಿಯುವ ವ್ಯಕ್ತಿಗಳನ್ನೇ ಕಾಣುತ್ತಿರುವ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಯಿದು!

                   ಇಂದಿನ ಕೇಂದ್ರ ಸರಕಾರದ ನೀತಿಗಳಾದ ಸಾರ್ವತ್ರಿಕ ಆರೋಗ್ಯ ಸೇವೆ, ಸರ್ವರಿಗೂ ವಿದ್ಯುತ್ ಆದಿಯಾಗಿ ಇಂಧನಗಳ ಲಭ್ಯತೆ ಎಲ್ಲವೂ ಠೇಂಗಡಿಯವರ ಮೂಲ ಪರಿಕಲ್ಪನೆಗಳೇ. ಮೋದಿ ಸರಕಾರದ ಹೂಡಿಕೆಯ ವಿಧಾನಗಳು ಹಾಗೂ ನೀತಿ ನಿಯಮಗಳು ಹಾಗೂ ಪಿಎಸ್ಯು(PSU)ಗಳನ್ನು ಮಾರಾಟ ಮಾಡುವ ಬದಲು ಷೇರು ಮಾರುಕಟ್ಟೆಗಳಲ್ಲಿ ಪ್ರವೇಶ ಒದಗಿಸಿರುವುದು ಇವು ಠೇಂಗಡಿಯವರು ಪ್ರತಿಪಾದಿಸಿದ ನೀತಿಗಳೇ. ಈ ನೀತಿಯನ್ನು ವಾಜಪೇಯಿ ಸರಕಾರದ ವಿತ್ತ ಸಚಿವ ಯಶ್ವಂತ್ ಸಿನ್ಹಾ ಅನುಸರಿಸದೇ ಇದ್ದಾಗ ಆತ ತಮ್ಮದೇ ಸ್ನೇಹಿತರು, ಸಮಾನ ಮನಸ್ಕರು, ಸಿದ್ಧಾಂತವಾದಿಗಳಿದ್ದ ಸರಕಾರದ ವಿರುದ್ಧವೇ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆಯನ್ನೂ ಕೈಗೊಂಡಿದ್ದರು. ಇದು ಒಂದು ಧ್ಯೇಯಕ್ಕಾಗಿ, ತತ್ತ್ವಕ್ಕಾಗಿ ಅವರು ಬಡಿದಾಡುತ್ತಿದ್ದ ರೀತಿ. ಈಗಿನ ಜೀ ಹುಜೂರ್ ಸಂಸ್ಕೃತಿಯ, ಹಣಕ್ಕಾಗಿಯೇ ಕೆಲಸ ಮಾಡುವ ರಾಜಕಾರಣಿಗಳು ಠೇಂಗಡಿಯವರಿಂದ ಕಲಿಯಬೇಕಾದುದು ಸಾಕಷ್ಟಿದೆ!

               ಡಾಕ್ಟರ್ ಹೆಡಗೇವಾರರೊಂದಿಗೆ ಅನುಶೀಲನ ಸಮಿತಿಯಲ್ಲಿದ್ದ ನರೇಂದ್ರ ಭಟ್ಟಾಚಾರ್ಯ ಬಾಲಾಸೋರ್ ಕದನದಲ್ಲಿ ಬಾಘಾ ಜತೀನನ ವೀರ ಮರಣದ ಬಳಿಕ ಮಾರುವೇಷದಲ್ಲಿ ಎಂ.ಎನ್ ರಾಯ್ ಆಗಿ ರಷ್ಯಾ ಪ್ರವೇಶಿಸಿ ತಾಷ್ಕೆಂಟಿನಲ್ಲಿ ಭಾರತೀಯ ಕಮ್ಯೂನಿಷ್ಟ್ ಪಕ್ಷವನ್ನು ಆರಂಭಿಸಿದ. ಮುಂದೆ ಅದೇ ಮಾಸ್ಕೋ ಸಿದ್ಧಾಂತವನ್ನು ಭಾರತಕ್ಕೂ ತಂದ. ಅದರ ಮೂಲಕ ಬೆಳೆದು ಬಂದ ಕಾರ್ಮಿಕ ಸಂಘಟನೆಗಳಿಗೆ ತಮಗಾಗದ ಪ್ರತಿಯೊಂದರ ವಿರುದ್ಧವೂ ಹರತಾಳ, ಹೊಡಿ-ಬಡಿ, ಕೊಚ್ಚು-ಕೊಲ್ಲು ಇವೇ ಧ್ಯೇಯವಾಗಿ ಬೆಳೆಯಿತು. ಅದೇ ಹೆಡಗೇವಾರರು ಚತುರ್ವಿಧ ಪುರುಷಾರ್ಥಗಳನ್ನು ಆಧರಿಸಿದ ಹಿಂದೂ ಜೀವನ ಪದ್ದತಿಯ ನೆಲೆಗಟ್ಟಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಬೆಳೆದು ಬಂದ ಠೇಂಗಡಿಯವರು ಆರಂಭಿಸಿದ ಕಾರ್ಮಿಕ ಸಂಘಟನೆ ಸಾಂಪ್ರದಾಯಿಕ ಹಿಂದೂ ವಿಶ್ವದೃಷ್ಟಿಕೋನವನ್ನು ಅಪ್ಪಿಕೊಂಡು ತೀವ್ರ ವಿರೋಧದ ನಡುವೆಯೂ ಅಪಾರ ಕರ್ತೃತ್ವ ಶಕ್ತಿ ಹಾಗೂ ದೂರದೃಷ್ಟಿಯ ಫಲದಿಂದ ಬೆಳೆದು ಹೆಮ್ಮರವಾಯಿತು.

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು

ಗುಲಾಮೀತನವೆಂಬ ವನವಾಸ ಮುಗಿದು ಅಸ್ಮಿತೆಯ ಕುರುಹು ಮೇಲೆದ್ದಿತು


           ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೆದ್ದಿತು. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು.

                   ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                 ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.

                 ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

               ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!


             ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೇಳಲು ಕ್ಷಣಗಣನೆ ಶುರುವಾಗಿದೆ. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು. ಇದು ಕೋಟ್ಯಾಂತರ ಶ್ರೀರಾಮಭಕ್ತರು ಪಾವನಗೊಂಡ ಪರ್ವಕಾಲ. ಬಾಬರನಿಗಾಗಿ ಮರ್ಯಾದಾ ಪುರುಷೋತ್ತಮನ ಇತಿಹಾಸವನ್ನೇ ಸಂಶಯಿಸಿ ಈ ನೆಲದ ನಂಬಿಕೆಯನ್ನೇ ಅಲ್ಲಗೆಳೆದವರ ಸುಳ್ಳುಗಳನ್ನು ಕಿತ್ತೆಸೆದ ಕಾಲ.

               ಸ್ವಯಂ ಮನುವೇ ನಿರ್ಮಿಸಿದ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ "ವಿಶ್ವಜಿತ್" ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ದಶರಥನಿಂದ ಋಷ್ಯಶೃಂಗನ ನೇತೃತ್ವದಲ್ಲಿ ಪುತ್ರಕಾಮೇಷ್ಠಿ ನಡೆಸಲ್ಪಟ್ಟ, ಹಿಮವತ್ಪರ್ವತದ ಮಾನಸ ಪುತ್ರಿ ಸರಯೂ ಬಳಸಿ ಹರಿಯುತ್ತಿರುವ ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ. ಸಾಲು ಸಾಲು ರಾಜರ್ಷಿಗಳು, ರಾಜ-ಮಹಾರಾಜರುಗಳ ಈ ಮಾಲಿಕೆಯ ಅರವತ್ತೈದನೆಯ ಪ್ರಭು ಶ್ರೀರಾಮಚಂದ್ರ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ ಅವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು.

                     ರಾಜಾ ವಿಕ್ರಮಾದಿತ್ಯ ಅಯೋಧ್ಯೆಯ ಶ್ರೀರಾಮ ಮಂದಿರದ ಜೀರ್ಣೋದ್ಧಾರ ಮಾಡಿದ್ದ. ಪುಣ್ಯಭೂಮಿ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ” ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ. 1940ರ ಹಿಂದೆ, ಈ ಮಸೀದಿಯನ್ನು “ಮಸ್ಜೀದ್-ಇ-ಜನ್ಮಸ್ಥಾನ್” ಎಂದೂ ಕರೆಯಲಾಗುತ್ತಿತ್ತು! ಇಲ್ಲಿನ ಮಣ್ಣಿನಲ್ಲಿ ಸಿಕ್ಕಿರುವ ಕೆಲವು ದಾಖಲೆಗಳು ಇಲ್ಲಿ ಕ್ರಿಸ್ತಪೂರ್ವ 17ನೇ ಶತಮಾನದಲ್ಲಿಯೂ ಮಾನವ ವಸತಿ ಇತ್ತು ಎಂದು ಹೇಳುತ್ತಿದೆ! 1986ರ ಎನ್ಸೈಕ್ಲೋಪೀಡಿಯ ಬ್ರಿಟಾನಿಕದಲ್ಲಿ “ರಾಮನ  ಜನ್ಮ ಸ್ಥಳವನ್ನು ಇದೀಗ ಮಸೀದಿಯೊಂದು ಆಕ್ರಮಿಸಿಕೊಂಡಿದೆ. ರಾಮನ  ಜನ್ಮಸ್ಥಳದಲ್ಲಿ ನಿಂತಿದ್ದ ಭವ್ಯವಾದ ದೇವಸ್ಥಾನವನ್ನು ಕ್ರಿ.ಶ. 1528ರಲ್ಲಿ ಕೆಡವಿ ಬಾಬರ್ ಎಂಬ ರಾಜ ಮಸೀದಿ ಕಟ್ಟಿಸಿದ” ಎಂದು ಬರೆಯಲಾಗಿದೆ.

               1885ರಲ್ಲಿ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆಯನ್ನು ಮಾಡಲಾರಂಭಿಸಿದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅವರಿಗೆ ಅನುಮತಿ ದೊರಕಲಿಲ್ಲ. 1934ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂಗಳು ಬಾಬರಿ ಮಸೀದಿಯಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡು ಗುಮ್ಮಟಗಳ ದುರಸ್ತಿಗಾಗಿ ಹಿಂದೂಗಳಿಂದಲೇ ದಂಡವನ್ನೂ ಕಟ್ಟಿಸಿಕೊಂಡಿತು. ಈ ಪಾವನ ಕ್ಷೇತ್ರದಲ್ಲಿ 1940ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. 22 ಡಿಸೆಂಬರ್ 1949ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ 1986ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧನದಲ್ಲಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. 1980ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ 1986ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು. 1989ರ ನವೆಂಬರ್ 10ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲರಿಂದ ನೆರವೇರಿತು. ಶ್ರೀರಾಮ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎನ್ನುವುದಕ್ಕೆ ನಿದರ್ಶನವಿದು. ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕರಸೇವೆಗಳು ನಡೆದವು. 1990ರ ಅಕ್ಟೋಬರ್ 30ರಂದು ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ನಡೆಸುತ್ತಿದ್ದ ಸ್ವಯಂಸೇವಕರ ಮೇಲೆ  ಗುಂಡುಹಾರಿಸುವ ಆಜ್ಞೆಯನ್ನು ಅರೆಸೇನಾಪಡೆಗಳಿಗೆ ಮಾಡಿದ ಮುಲಾಯಮ್ ಸಿಂಗ್ ಯಾದವ್ ಸತ್ತವರ ಲೆಕ್ಕ ಸಿಗಬಾರದೆಂಬ ದುರುದ್ದೇಶದಿಂದ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು.

                 ಸದಾ ಹಿಂದೂ ನಂಬಿಕೆಯನ್ನು ಪ್ರಶ್ನಿಸುವ ವರ್ಗ ಹಾಗೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅಯೋಧ್ಯೆಯಲ್ಲಿ ಮಂದಿರವೇ ಇರಲಿಲ್ಲ ಎನ್ನುವ ಸಮರ್ಥನೆಗೆ ತೊಡಗಿದರು. ಆಗ ವಿವಾದಿತ ಜಾಗದಲ್ಲಿ ಉತ್ಖನನ ನಡೆಸುವ ನಿರ್ಧಾರಕ್ಕೆ ಬರಲಾಯಿತು. ಇದಕ್ಕಿಂತ ಮೊದಲು ಬ್ರಿಟಿಷರ ಕಾಲದಲ್ಲೇ ಎರಡು ಬಾರಿ ಉತ್ಖನನಗಳು ನಡೆದಿದ್ದವು. 1976-77ರಲ್ಲಿ ಬಿಬಿ ಲಾಲ್ ನೇತೃತ್ವದಲ್ಲಿ ಉತ್ಖನನಗಳು ನಡೆದಾಗ ದೇಗುಲಗಳಲ್ಲಿ ಕಂಡುಬರುವ ಪೂರ್ಣಕಲಶದ ಕೆತ್ತನೆಗಳನ್ನು ಹೊಂದಿದ್ದ ಕಪ್ಪು ಅಗ್ನಿಶಿಲೆಯನ್ನು ಬಳಸಿ ರಚಿಸಿದ 14 ಸ್ತಂಭಗಳು ದೊರೆತವು. ಸ್ತಂಭಗಳ ಮೇಲೆ ಹಿಂದೂ ದೇವಾನುದೇವತೆಗಳ ಚಿತ್ರಗಳಿದ್ದವು. ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ಎಸ್. ಗೋಪಾಲ್, ರೋಮಿಲಾ ಥಾಪರ್, ಬಿಪಿನ್ ಚಂದ್ರ ಮುಂತಾದ ಎಡಪಂಥೀಯರು ಅದು ಬಾಬರ ಖಾಲಿ ಜಾಗದಲ್ಲಿ ಕಟ್ಟಿದ ಮಸೀದಿ; ಆತ ಯಾವುದೇ ಹಿಂದೂ ಶ್ರದ್ಧಾಕೇಂದ್ರವನ್ನು ಧ್ವಂಸ ಮಾಡಿಲ್ಲ; ಬಾಬರ್ ಹಾಗೆ ಮಾಡಿದನೆಂಬುದಕ್ಕೆ 19ನೇ ಶತಮಾನದಲ್ಲಿ ಯಾವೊಂದು ಉಲ್ಲೇಖವೂ ಇಲ್ಲ; ಅಯೋಧ್ಯೆ ಮೂಲತಃ ಬೌದ್ಧ ಮತ್ತು ಜೈನರ ದೇಗುಲಗಳಿರಬಹುದು ಎಂಬ ಕಪೋಲಕಲ್ಪಿತ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ಮಂಡಿಸತೊಡಗಿದರು. ಪ್ರೊ. ಆರ್. ಎಸ್. ಶರ್ಮಾ, ಅಕ್ತರ್ ಅಲಿ, ಡಿ.ಎಸ್. ಝಾ, ಸೂರಜ್ ಭಾನ್ "ಬಾಬರಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಕಟ್ಟಡಗಳ ಅವಶೇಷಗಳೂ ಇಲ್ಲ. ಅದೆಲ್ಲವೂ ಅಲ್ಲಿ ರಾಮಮಂದಿರ ಕಟ್ಟಬೇಕೆಂದು ಹವಣಿಸುತ್ತಿರುವವರ ಕಟ್ಟುಕತೆಗಳು" ಎಂದು ಅಲಹಾಬಾದ್ನ ಉಚ್ಚನ್ಯಾಯಾಲಯಕ್ಕೆ ವರದಿ ಕೊಟ್ಟರು. ನ್ಯಾಯಾಲಯವು "ಪುರಾತತ್ತ್ವ ಇಲಾಖೆಯ ಉತ್ಖನನದ ಫಲಿತಾಂಶಗಳನ್ನು ನೀವು ಗಮನಿಸಿದ್ದೀರಾ?" ಎಂದು ಕೇಳಿದಾಗ ಈ ಸ್ವಘೋಷಿತ ವಿದ್ವಾಂಸರು "ಕ್ಷಮಿಸಿ, ನಮಗೆ ವರದಿ ಕೊಡಲು ಕೊಟ್ಟ ಅವಧಿ ಅತಿ ಕಡಿಮೆ. ಅಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ಸಂಶೋಧನೆ ಮಾಡಲು ಸಮಯ ಇರಲಿಲ್ಲ. ಆದ್ದರಿಂದ ನಾವು ನಮ್ಮ ಅಭಿಪ್ರಾಯ ತಿಳಿಸಿದೆವು ಅಷ್ಟೆ" ಎಂದು ತಪ್ಪೊಪ್ಪಿಕೊಂಡರು! ಅಂದರೆ ತಮ್ಮ ಅಭಿಪ್ರಾಯವನ್ನು ಇತಿಹಾಸ ಎಂಬಂತೆ ಬಿಂಬಿಸಿ ಈ ಎಡಪಂಥೀಯ ಖೊಟ್ಟಿ ವಿದ್ವಾಂಸರು ಸಮಾಜವನ್ನು ಒಡೆಯಲು ಉಪಯೋಗಿಸಿದ್ದರು! ಆದರೆ ಈ ದಾಳಿ ಅಷ್ಟಕ್ಕೇ ನಿಲ್ಲಲಿಲ್ಲ! ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸಬೇಕು ಎನ್ನುವುದನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಎಡಪಂಥೀಯರು ಮಸೀದಿಯ ಅಡಿಯಲ್ಲಿ ಸಿಕ್ಕಿರುವ ಕಂಬಗಳು ಮಸೀದಿಯದ್ದೇ ಯಾಕಾಗಿರಬಾರದು ಎಂದು ಹುಯಿಲೆಬ್ಬಿಸತೊಡಗಿದರು. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಬಗ್ಗೆ ತಮ್ಮ ಮೂಗಿನ ನೇರಕ್ಕೆ ಬರೆಯಲಾರಂಭಿಸಿದರು. ಇವರಾರೂ ಪ್ರಾಚ್ಯವಸ್ತು ಸಂಶೋಧಕರಲ್ಲವಾದರೂ ಇವರು ಹೇಳಿದ ಸುಳ್ಳು ಜಗತ್ತಿನೆಲ್ಲೆಡೆ ನರ್ತಿಸತೊಡಗಿತು. ಆಗ ಅಲಹಾಬಾದ್ ಹೈಕೋರ್ಟ್ ಇನ್ನೊಮ್ಮೆ ಪೂರ್ಣ ಪ್ರಮಾಣದಲ್ಲಿ ಉತ್ಖನನ ನಡೆಸುವಂತೆ ಆದೇಶಿಸಿತು. ಆಗ ಐವತ್ತು ಕಂಬಗಳ ಅಡಿಪಾಯವೇ ವಿವಾದಿತ ನೆಲದೊಳಗೆ ಪತ್ತೆಯಾಯಿತು. ಮಾತ್ರವಲ್ಲ ಕ್ರಿ.ಪೂ. 1200 ವರ್ಷಕ್ಕೂ ಹಳೆಯದಾದ ಅವಶೇಷಗಳು ದೊರೆತವು. ಹಲವು ಮಣ್ಣಿನ ಮೂರ್ತಿಗಳೂ ದೊರೆತವು. ದೇವಾಲಯಗಳಲ್ಲಿರುವ ದೇವರ ಅಭಿಷೇಕದ ನೀರು ಹರಿದು ಹೋಗುವ ಮಕರ ಪ್ರಣಾಳಿಯೂ ದೊರಕಿತು. ಅಲ್ಲದೆ ವಿಷ್ಣು ದೇವರಿಗೆ ಈ ದೇವಾಲಯ ಅರ್ಪಿತವಾಗಿದೆ ಎನ್ನುವ ಶಿಲಾಫಲಕವೂ ದೊರಕಿತು.

             ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

            ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

              ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 491 ವರ್ಷಗಳಲ್ಲಿ ಬಹುತೇಕ ಮೊಘಲರ ಆಳ್ವಿಕೆ, ಬ್ರಿಟಿಷರ ಆಳ್ವಿಕೆಯಲ್ಲೇ ಕಳೆದಿತ್ತು ದೇಶ. ಆದರೆ ಸ್ವತಂತ್ರಗೊಂಡ ಬಳಿಕವೂ 75% ಹಿಂದೂಗಳಿಂದಲೇ ತುಂಬಿರುವ ದೇಶಕ್ಕೆ ರಾಮ ಮಂದಿರವನ್ನು ನಿರ್ಮಿಸುವ ಅನುಮತಿ ದೊರಕಿಸಿಕೊಳ್ಳಲು 72 ವರ್ಷಗಳೇ ಬೇಕಾಯಿತು ಎಂದರೆ ನಾವು ರೂಪಿಸಿಕೊಂಡ ವ್ಯವಸ್ಥೆಯಲ್ಲೇ ಲೋಪವಿದೆ ಎಂದರ್ಥ. ಅಂತಹಾ ವ್ಯವಸ್ಥೆಯನ್ನು ಸರಿಪಡಿಸಿ ರಾಮರಾಜ್ಯವನ್ನಾಗಿಸಿಕೊಳ್ಳುವುದೇ ಇವೆಲ್ಲಾ ಸಮಸ್ಯೆ, ಅಪಸವ್ಯಗಳಿಗೆ ರಾಮಬಾಣ. ಹಾಗಾಗಬೇಕಿದ್ದರೆ ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯಬೇಕು!

ಮಂಗಳವಾರ, ನವೆಂಬರ್ 5, 2019

ಯಾಝಿದಿಗಳು; ಸನಾತನ ಧರ್ಮದ ದೀಪ ಬೆಳಗಿದವರು

ಯಾಝಿದಿಗಳು; ಸನಾತನ ಧರ್ಮದ ದೀಪ ಬೆಳಗಿದವರು

             
                62 ಮೈಲಿ ಉದ್ದಕ್ಕೆ ಹರಡಿರುವ ಸಿಂಜರ್ ಅಥವಾ ಶಿಂಗಲ್ ಪರ್ವತ ಶ್ರೇಣಿ. ಅದರ ಬುಡದಲ್ಲೊಂದು ಪುಟ್ಟ ಹಳ್ಳಿ; ಕೋಚೋ. ಅಲ್ಲೊಂದು ಬಡಕುಟುಂಬದಲ್ಲಿ ಹೂವೊಂದು ಅರಳಿತ್ತು. ಎಲ್ಲರಂತೆ ಬಾಲ್ಯ ಕಳೆದು, ಶಿಕ್ಷಣ ಪಡೆಯುತ್ತಾ ಇದ್ದ ಆ ಹೂವು ತಾನೊಬ್ಬಳು ಶಿಕ್ಷಕಿಯಾಗಬೇಕು, ಬ್ಯೂಟಿಷಿಯನ್ ಆಗಬೇಕು ಎಂಬ ಹಲವು ಕನಸುಗಳೊಂದಿಗೆ ತನ್ನದೇ ಪುಟ್ಟ ಜಗತ್ತಿನಲ್ಲಿ ಮೈಮರೆತಿತ್ತು. ಆದರೆ ಯಾವಾಗ ಕಪ್ಪು ಬಾವುಟ ಹೊತ್ತ; "ತನ್ನದಲ್ಲದ, ತನ್ನದಾಗದ ಎಲ್ಲವನ್ನೂ ನಾಶ ಮಾಡಬೇಕು" ಎಂಬುದನ್ನೇ ತುಂಬಿಕೊಂಡಿದ್ದ ತಲೆಗಳಿದ್ದ ಟ್ರಕ್ಕುಗಳು ಆ ಹಳ್ಳಿಗೆ ನುಗ್ಗಿದವೋ ಅಂದಿಗೆ ಆ ಕನಸಿನ ಲೋಕ ಮುರಿದು ಬಿತ್ತು. ಹೂವು ಬಾಡಿತು. ಅದೊಂದೇ ಹೂವಲ್ಲ; ಅದರೊಟ್ಟಿಗಿದ್ದ, ಆ ಹಳ್ಳಿಯ ಸುತ್ತಮುತ್ತಲಿದ್ದ ಎಲ್ಲಾ ಹೂವುಗಳು ಬಾಡಿ ಬಸವಳಿದವು. ಕೆಲವು ಅಳಿದು ಹೋದವು; ಉಳಿದವು ಕತ್ತಲ ಕೂಪದಲ್ಲಿ, ನರಕಯಾತನೆಯಲ್ಲಿ ನಲುಗಿ ಹೋದವು. ಹೂವುಗಳ ರಕ್ಷಣೆಗಿದ್ದವರನ್ನು ಹೊಸಕಿ ಹಾಕಲಾಯಿತು. ಆ ಪುಟ್ಟ ಜಗತ್ತು ಸ್ಮಶಾನವಾಯಿತು.

                 ಇದು ಕಥೆಯಲ್ಲ; ತಮ್ಮಷ್ಟಕ್ಕೆ ತಾವೇ ಇದ್ದು ಅರಳಿ ಕಂಪು ಸೂಸುತ್ತಿದ್ದ ಯಾಝಿದಿಗಳೆಂಬ ಹೂವುಗಳು ಸುಟ್ಟು ಕರಕಲಾದ ಬಗೆಗಿನ ವ್ಯಥೆ. ಅದೇ ಕೋಚೋ ಹಳ್ಳಿಯಲ್ಲಿ ಹುಟ್ಟಿದವಳೇ ನಾದಿಯಾ ಮುರಾದ್. ಅದು 2014ರ ಆಗಸ್ಟ್ 3; ಆಗ ನಾದಿಯಾಗೆ 21ರ ಹರೆಯ. ಕಪ್ಪುಧ್ವಜ ಹೊತ್ತ ಟ್ರಕ್ಕುಗಳು ಆರ್ಭಟಿಸುತ್ತಾ ಬಂದವು. ಅವುಗಳಲ್ಲಿ ಕುರಾನನ್ನು ಅರೆದು ಕುಡಿದಿದ್ದ ನರ ರಾಕ್ಷಸರು. ಹಸುಳೆ-ಹಳಬರೆನ್ನದೆ, ಗರ್ಭಿಣಿ-ರೋಗಿಗಳೆಂಬ ತಾರತಮ್ಯವಿಲ್ಲದೆ, ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಎಲ್ಲರ ಮೇಲೂ ನಡೆಯಿತು ದೌರ್ಜನ್ಯ. ಮತಾಂತರವಾಗಲು ಒಪ್ಪದ ಗಂಡಸರೆಲ್ಲಾ ಗುಂಡಿಗೆ ಬಲಿಯಾದರು. ಹೆಣ್ಣುಮಕ್ಕಳನ್ನೆಲ್ಲಾ ಟ್ರಕ್ಕುಗಳಿಗೆ ತುಂಬಿದರು. ಅದರಲ್ಲಿ ನಾದಿಯಾಳೂ ಒಬ್ಬಳು. ಅಲ್ಲಿಗೆ ಅವಳ ಜಗತ್ತು, ಅವಳ ಕುಟುಂಬ ಹಾಗೂ ಅವಳ ಕನಸುಗಳು ಛಿದ್ರ ಛಿದ್ರವಾದವು. ಅವಳದ್ದೇನು, ಇಡಿಯ ಯಾಝಿದಿ ಜನಾಂಗವೇ ಕುಸಿದು ಪಾತಾಳ ಸೇರಿತು. ಅಂದು ತನ್ನೂರು ಕೋಚೋವನ್ನು ಕೊನೆಯದಾಗಿ ಕಂಡಳು ನಾದಿಯಾ. ಎಲ್ಲೆಲ್ಲೂ ಶವಗಳ ರಾಶಿ, ನೆತ್ತರ ಹೊಳೆ, ಆಕ್ರಂದನ, ಅಸಹಾಯಕ ಕಣ್ಣೀರು... ಅವುಗಳನ್ನು ಚಕ್ರಗಳಡಿಯಲ್ಲಿ ಹೂತು ಹಾಕಿ ಟ್ರಕ್ ಮುಂದೆ ಮುಂದೆ ಸಾಗಿದಂತೆ ಅವಳು ಆಡಿ ನಲಿದಿದ್ದ ಗ್ರಾಮ ಕಣ್ಣಿಂದ ಮರೆಯಾಗುತ್ತಾ ಸಾಗಿತು.

              ಟ್ರಕ್ ಐಸಿಸ್ ಉಗ್ರರ ಸ್ವಘೋಷಿತ ಖಲಿಫೇಟ್ ರಾಜಧಾನಿ ಮೊಸೂಲ್ ತಲುಪಿತು. ಉಗ್ರನೊಬ್ಬ “ನೀವಿಲ್ಲಿ ಸಬಾಯಾಗಳಾಗಿ ಬಂದಿದ್ದೀರಿ. ನಾವೇನು ಹೇಳುತ್ತೇವೆಯೋ ಅದನ್ನು ಮಾಡಬೇಕು ಅಷ್ಟೇ" ಎಂದ. ಸಬಾಯಾ ಎಂದರೆ ಲೈಂಗಿಕ ಗುಲಾಮರು ಎಂದು ಅರಿವಾಗುವ ಹೊತ್ತಿಗೆ ಆ ನತದೃಷ್ಟೆಯರು ಮತಾಂಧರ ಕಾಮುಕತೆಗೆ ಬಲಿಯಾಗುತ್ತಾ ಒಬ್ಬರಿಂದೊಬ್ಬರಿಗೆ ಮಾರಾಟವಾಗುತ್ತಿದ್ದರು. ಮನೆಯ ಮಾಳಿಗೆಯೊಂದರಲ್ಲಿ ಅವರನ್ನು ಕೂಡಿಹಾಕಲಾಯಿತು. ಸೂರ್ಯಾಸ್ತವಾಗುತ್ತಿದ್ದಂತೆ ಮಾರುಕಟ್ಟೆಯೊಂದಕ್ಕೆ ಅವರನ್ನು ಒಯ್ಯಲಾಯಿತು. ಅದು ವಸ್ತುಗಳನ್ನು ಮಾರುವ ಸಂತೆಯಲ್ಲ. ಹುಡುಗಿಯರನ್ನು ವಿಕ್ರಯಿಸುವ, ಲೈಂಗಿಕ ಗುಲಾಮರನ್ನು ಮಾರುವ ಮಾರುಕಟ್ಟೆ! ಅದಕ್ಕಾಗಿ ನೋಂದಣಿ ಪ್ರಕ್ರಿಯೆಗಳು ಇದ್ದವು. ಹುಡುಗಿಯರಿದ್ದ ಕೋಣೆಗೆ ಹಸಿದ ತೋಳಗಳಂತೆ ಉಗ್ರರು ನುಗ್ಗಿದರು. ಅವರ ಅಳು, ಕಿರುಚಾಟಗಳು ಅರಣ್ಯರೋದನವಾಗಿತ್ತು. ನೋಡಲು ಸುಂದರವಾಗಿರುವ ಹುಡುಗಿಯರ ಬಳಿ ಮೊದಲು ಬಂದು ಪ್ರಾಯ ಕೇಳಿದರು. ಇವರೆಲ್ಲರೂ ಕನ್ಯೆಯರು ಹೌದಲ್ಲವೇ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಆತ ಮುಗುಳ್ನಕ್ಕು ವ್ಯಾಪಾರಿಯೊಬ್ಬ ತನ್ನ ಸರಕನ್ನು ಹೊಗಳುವಂತೆ ಹೌದೆಂಬಂತೆ ಉತ್ತರಿಸಿದ. ಬಳಿಕ ಉಗ್ರರು ಅವರ ದೇಹಗಳನ್ನು ತಮಗಿಷ್ಟ ಬಂದಂತೆ ಸ್ಪರ್ಶಿಸತೊಡಗಿದರು. ಹುಡುಗಿಯರು ತಮ್ಮ ಅಸಹಾಯಕತೆಯಿಂದ ಮುದುಡಿ ಮುದುಡಿ ಸೋಲುತ್ತಿದ್ದರು. ಅಸಹನೆಯಿಂದ ಕಣ್ಣೀರು ಸುರಿಸುತ್ತಿದ್ದರು. ನಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದರು.

                 ಅಷ್ಟರಲ್ಲಿ ದೈತ್ಯನೊಬ್ಬ ಬಂದು ನಿಂತ. ಅವನು ಸಲ್ವಾನ್. ಉಗ್ರಗಾಮಿಗಳ ಉನ್ನತ ಮಟ್ಟದ ನಾಯಕ. ಒಬ್ಬ ಯಾಜಿದಿ ಹುಡುಗಿಯನ್ನು ತನಗೆ ಬೇಕಾದಂತೆ ಬಳಸಿಕೊಂಡು, ಅವಳನ್ನು ಮತ್ತೆ ಇಲ್ಲಿ ಬಿಟ್ಟು, ಇನ್ನೊಬ್ಬಳನ್ನು ಕರೆದೊಯ್ಯಲೆಂದು ಆತ ಬಂದಿದ್ದ. ಮುದುಡಿ ಕುಳಿತಿದ್ದ ನಾದಿಯಾ ತಲೆಬಗ್ಗಿಸಿ ಕುಳಿತಿದ್ದಳು. ಅವನ ಪಾದಗಳಷ್ಟೇ ಕಾಣುತ್ತಿತ್ತು. “ನಿಂತುಕೋ” ಎಂದ. ಅವಳು ನಿಲ್ಲಲಿಲ್ಲ. ಆಕ್ರೋಶಗೊಂಡು ಕಾಲಲ್ಲಿ ಒದ್ದುಬಿಟ್ಟ. "ನೀನೇ, ಗುಲಾಬಿ ಬಣ್ಣದ ಜಾಕೆಟ್ ಧರಿಸಿದವಳು, ನಿಂತುಕೊಳ್ಳುತ್ತೀಯೋ ಇಲ್ಲವೋ" ಎಂದು ಗಟ್ಟಿ ಧ್ವನಿಯಲ್ಲಿ ಗದರಿದ. ಅವಳು ನಡುಗಿದಳು. ಕಣ್ಣೆತ್ತಿ ನೋಡಿದಳು; ಅವನ ಕಣ್ಣುಗಳು ಕೆಂಡದುಂಡೆಗಳಂತಿದ್ದವು. ಆತ ಮನುಷ್ಯನಂತೆ ಕಾಣುತ್ತಿರಲಿಲ್ಲ. ಆಕೆಗೆ ಮೊದಲ ಬಾರಿಗೆ ದೈತ್ಯ ರಾಕ್ಷಸನನ್ನು ನೋಡಿದಂತಾಯಿತು. ಈತನ ಕೈಗೇನಾದರೂ ತಾನು ಸಿಕ್ಕಿದರೆ ತನ್ನನ್ನು ಹೇಳಹೆಸರಿಲ್ಲದಂತೆ ಚಿವುಟಿ ಹಾಕಿಬಿಡುತ್ತಾನೆ ಎಂದು ಅವಳಿಗೆ ಅನಿಸಿತು. ಕೊಳೆತ ಮೊಟ್ಟೆಯ ವಾಸನೆ ಅವನ ದೇಹದಿಂದ ಮೂಗಿಗೆ ಬಡಿಯುತ್ತಿತ್ತು. ಆತನನ್ನು ಎದುರಿಸಿ ಒಂದು ಕ್ಷಣವೂ ಬದುಕುವುದು ಅಸಾಧ್ಯ ಎಂದು ಆಕೆಗೆ ಮನದಟ್ಟಾಯಿತು. ಏನು ಮಾಡಬೇಕೆಂದು ತೋಚದೆ, ಅತ್ತಿತ್ತ ನೋಡತೊಡಗಿದಾಗ ತೆಳ್ಳಗಿನ ವ್ಯಕ್ತಿಯೊಬ್ಬ ಕಾಣಿಸಿದ. ಮರುಯೋಚಿಸದೆ ಆ ಕಾಲಿಗೆರಗಿದಳು. “ದಯವಿಟ್ಟು ನನ್ನನ್ನು ನೀವೇ ಕರೆದುಕೊಂಡು ಹೋಗಿ" ಎಂದು ಅವನ ಕಾಲು ಹಿಡಿದು ಬೇಡತೊಡಗಿದಳು. ಆತ ಸಲ್ವಾನ್ನತ್ತ ತಿರುಗಿ, “ಈಕೆ ನನ್ನವಳು" ಎಂದ. ನೋಂದಣಿ ಮಾಡುವಾತನ ಬಳಿ ಅವಳನ್ನು ಕರೆದೊಯ್ದ. ಪುಸ್ತಕದಲ್ಲಿ ಹೆಸರು ನೋಂದಾಯಿಸಿಕೊಳ್ಳುವಲ್ಲಿ ನಿರತನಾಗಿದ್ದ ಆತ ತಲೆಎತ್ತಿಯೂ ನೋಡದೆ, ಹುಡುಗಿಯ ಮತ್ತು ಆಕೆಯನ್ನು ಖರೀದಿಸಿದಾತನ ಹೆಸರು ಕೇಳಿದ. “ನಾದಿಯಾ, ಹಜ್ಜಿ ಸಲ್ಮಾನ್" ಎಂಬ ಉತ್ತರ ಹೊರಬಂತು. “ಹಜ್ಜಿ ಸಲ್ಮಾನ್" ಎಂಬ ಹೆಸರು ಕೇಳುತ್ತಿದ್ದಂತೆ ನೋಂದಣಿ ಮಾಡುತ್ತಿದ್ದವನ ಮುಖದಲ್ಲಿ ಸಣ್ಣಗೆ ಬೆವರಿಳಿದಿದ್ದು ಕಂಡುಬಂತು. ಅದೇಕೆಂದು ಅವಳಿಗೆ ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿತ್ತು!

              ಸಲ್ವಾನ್ನ ದೈತ್ಯ ದೇಹ ಕಂಡು ಹೆದರಿದ್ದ ನಾದಿಯಾ, ಸಲ್ಮಾನ್ ಎಂಬ ವಿಕೃತ ಕಾಮಿಯ ತೆಕ್ಕೆಗೆ ಬಿದ್ದಿದ್ದಳು. ಬರೋಬ್ಬರಿ ಮೂರು ತಿಂಗಳ ಕಾಲ ಸಲ್ಮಾನ್ ಎಂಬ ರಾಕ್ಷಸ ಯಾವ ರೀತಿಯೆಲ್ಲ ಚಿತ್ರಹಿಂಸೆ ನೀಡಲು ಸಾಧ್ಯವೋ, ಅದನ್ನೆಲ್ಲವನ್ನೂ ನೀಡಿದ. ಸಿಗರೇಟ್ನಿಂದ ಅಂಗಾಂಗಗಳನ್ನು ಸುಡಲಾಯಿತು. ಹೊಡೆದು, ಬಡಿದು ಚಿತ್ರಹಿಂಸೆ ನೀಡಲಾಯಿತು. ಒಬ್ಬರ ನಂತರ ಒಬ್ಬರಿಗೆ ಮಾರಾಟ ಮಾಡಲಾಯಿತು. ಉಗ್ರರ ಕ್ರೌರ್ಯದಿಂದ ತೀವ್ರವಾಗಿ ಘಾಸಿಗೊಂಡಿದ್ದ ನಾದಿಯಾ, ಇನ್ನು ಈ ಕತ್ತಲಲ್ಲೇ ತನ್ನ ಅಂತ್ಯ ಎಂದು ಭಾವಿಸಿದ್ದಳು. ಅಲ್ಲಿಂದ ತಪ್ಪಿಸಿಕೊಳ್ಳಲು ಆಕೆ ನಡೆಸಿದ ಮೊದಲ ಪ್ರಯತ್ನ ವಿಫಲವಾಯಿತು. ಅದಕ್ಕೆ ಶಿಕ್ಷೆಯಾಗಿ ಆರು ಉಗ್ರರು ಪ್ರಜ್ಞಾಹೀನಳಾಗುವ ತನಕ ನಿರಂತರವಾಗಿ ಅವಳನ್ನು ಅತ್ಯಾಚಾರ ನಡೆಸಿದ್ದರು! ಆಘಾತದ ನಡುವೆಯೂ ಧೈರ್ಯ ತಂದುಕೊಂಡ ಮುರಾದ್ ಎಂಟು ತಿಂಗಳ ನಂತರ ದೌರ್ಜನ್ಯದ ಸಂಕೋಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದಳು. ನವೆಂಬರ್ 2014ರಲ್ಲಿ ಮೇಲ್ವಿಚಾರಕ ಮನೆಯ ಬೀಗ ತೆರೆದು ಹೊರಹೋಗಿದ್ದಾಗ ತಪ್ಪಿಸಿಕೊಂಡಳು. ಓಡಿ ಹೋಗಿ ಮನೆಯೊಂದರ ಬಾಗಿಲು ಬಡಿದಳು. ಆ ಮನೆಯವ ಅವಳಿಗೆ ರಕ್ಷಣೆ ನೀಡಿದ. ಆಕೆ ಯಾಝಿದಿ ಎನ್ನುವುದನ್ನು ಮರೆಮಾಚಿ ನಕಲಿ ಗುರುತಿನ ಚೀಟಿ ಮಾಡಿ, ಬುರ್ಖಾ ತೊಡಿಸಿ, ತನ್ನ ಪತ್ನಿ ಎಂದು ಸುಳ್ಳು ಹೇಳಿ, ಆಕೆಯನ್ನು ಮೊಸೂಲ್ ದಾಟಿಸಿ, ಇರಾಕ್ನ ಕುರ್ದಿಸ್ತಾನಕ್ಕೆ ತಲುಪಿಸಿದ. ಉತ್ತರ ಇರಾಕ್ನ ಡುಹೊಕ್ನಲ್ಲಿ ನಿರಾಶ್ರಿತರ ಶಿಬಿರಕ್ಕೆ ಸೇರಿದಳು. ಉಗ್ರರ ಅಟ್ಟಹಾಸಕ್ಕೆ ಹೆದರಿ ವಲಸೆ ಹೋದ ಯಾಜಿದಿ ಕುಟುಂಬಗಳು ಕುರ್ದಿಸ್ತಾನದಲ್ಲಿ ನೆಲೆಯೂರಿದ್ದವು. ಅವರನ್ನು ಸೇರಿದ ಬಳಿಕವೇ ನಾದಿಯಾಗೆ ತನ್ನ ತಾಯಿ ಮತ್ತು 6 ಮಂದಿ ಸಹೋದರರನ್ನು ಉಗ್ರರು ಅಂದೇ ಕೊಂದು ಹಾಕಿದ್ದರು ಎಂಬ ವಿಷಯ ಗೊತ್ತಾಗಿದ್ದು. ಬಳಿಕ ಆಕೆ ಸಂಘಟನೆಯೊಂದರ ಸಹಾಯದಿಂದ ಜರ್ಮನಿಯಲ್ಲಿದ್ದ ತನ್ನ ಸಹೋದರಿಯನ್ನು ಸೇರಿಕೊಂಡಳು.

                 ಇದು ನಾದಿಯಾಳೊಬ್ಬಳ ಕಥೆಯಲ್ಲ. ಸಿಂಜರ್ ಪರ್ವತದ ತಪ್ಪಲಲ್ಲಿದ್ದ ಸುಮಾರು 6500ಕ್ಕೂ ಹೆಚ್ಚು ಯಾಝಿದಿ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲಾಗಿತ್ತು. ಗಂಡಸರ ಕತ್ತು ಕೊಯ್ಯಲಾಯಿತು; ಕೆಲವರನ್ನು ಸಾಮೂಹಿಕವಾಗಿ ಬೆಂಕಿಗೆ ಹಾಕಿ ಸುಡಲಾಯಿತು. ಇದು ಸಿಂಜರ್ ಹತ್ಯಾಕಾಂಡವೆಂದೇ ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸದಲ್ಲಿ ಯಾಝಿದಿಗಳ 73 ಹತ್ಯಾಕಾಂಡಗಳು ದಾಖಲಾಗಿವೆ. ಐಸಿಸ್'ನದ್ದು 74ನೆಯದ್ದು. ಒಟ್ಟೊಮನ್ ಪ್ರಭುತ್ವ ಯಾಝಿದಿಗಳನ್ನು ಸುನ್ನಿಗಳಾಗಿ ಮತಾಂತರಿಸಿತು. ಯಾಝಿದಿ ಸಂಸ್ಕೃತಿಯನ್ನು ಬಿಟ್ಟು ಮುಸ್ಲಿಮರಾಗಿ ತಮ್ಮ ಮೇಲೆ ಸವಾರಿ ಮಾಡಿ, ತಮ್ಮವರನ್ನು ಹತ್ಯೆಗೈದ ಕುರ್ದಿಶ್'ಗಳನ್ನು ಯಾಝಿದಿಗಳು ಇಂದಿಗೂ ತಿರಸ್ಕಾರದಿಂದ ನೋಡುತ್ತಾರೆ. ಕ್ರೈಸ್ತರೂ ಅವರನ್ನು ಮತಾಂತರಿಸದೇ ಬಿಟ್ಟಿಲ್ಲ! ಯಾಝಿದಿಗಳು ಪ್ರತಿರೋಧ ನಡೆಸಲಿಲ್ಲ ಎನ್ನುವುದು ಸುಳ್ಳು. ಮೂರು ತಿಂಗಳುಗಳ ಕಾಲ ಅವರು ಐಸಿಸ್ ಉಗ್ರರನ್ನು ಸಮತಟ್ಟಾದ ಪ್ರದೇಶದಲ್ಲೇ ತಡೆ ಹಿಡಿದಿದ್ದರು. ಬಳಿಕ ಪರ್ವತ ಪ್ರದೇಶಕ್ಕೆ ಓಡಿಹೋಗಬೇಕಾಗಿ ಬಂದು, ಅನ್ನಾಹಾರಗಳಿಲ್ಲದೆ ಬಳಲಿ ಐಸಿಸ್ ಉಗ್ರರ ಕ್ರೌರ್ಯಕ್ಕೆ ಬಲಿಯಾದರು. 10 ರಿಂದ 20 ವರ್ಷದೊಳಗಿನ ಹುಡುಗಿಯರನ್ನು ಐಸಿಸ್'ನ ಹಿರಿಯ ಉಗ್ರನಿಗೆ ಬಹುಮಾನವಾಗಿ ಕೊಡಲಾಯಿತು. ಅದರಲ್ಲಿ ಹತ್ತು ವರ್ಷದ ಮಾರ್ವಾ ಖೇದ್ರ್ ಎನ್ನುವ ಬಾಲಕಿಯೂ ಇದ್ದಳು. ಕೆಲವೇ ಸಮಯದಲ್ಲಿ ಆ ಬಾಲಕಿ ಗರ್ಭಿಣಿಯಾಗುವ ದುಸ್ಥಿತಿಗೆ ತಲುಪಿದಳು. ಇಂತಹಾ ಹಲವು ಬಾಲಕಿಯರು ಐಸಿಸ್ ವಶದಲ್ಲಿದ್ದಾರೆ; ಮಾತ್ರವಲ್ಲ ಗರ್ಭಿಣಿಯಾಗುವ ಮುನ್ನ ಕನಿಷ್ಟ ನೂರು ಉಗ್ರರಿಂದ ಅತ್ಯಾಚಾರಕ್ಕೊಳಪಟ್ಟಿರುತ್ತಾರೆ ಎಂದಿದ್ದಾಳೆ ಐಸಿಸ್ ಕಪಿಮುಷ್ಠಿಯಿಂದ ಪಾರಾಗಿ ಬಂದ 29 ವರ್ಷದ ಮ್ಹಾದ್ಯಾ. ಅವಳ ಕಥೆಯಂತೂ ಇನ್ನಷ್ಟು ಭಯಾನಕ. ಆಕೆಯ ಮಗುವೊಂದನ್ನು ಬಾಂಬಿಟ್ಟು ಉಡಾಯಿಸಲಾಗಿತ್ತು. ಉಗ್ರರು ಆಕೆಯ ಮಕ್ಕಳನ್ನು ವೈರುಗಳಿಂದ ಹೊಡೆಯುತ್ತಿದ್ದರು. ನನ್ನನ್ನು ಅದೆಷ್ಟು ಬಾರಿ ಮಾರಾಟ ಮಾಡಿದ್ದಾರೆ ಎಂಬುದು ನನಗೇ ತಿಳಿದಿಲ್ಲ ಎನ್ನುತ್ತಾಳೆ ಆಕೆ. ಆಕೆಯ ಮಕ್ಕಳನ್ನು ಮುದುಕರಿಗೆ ಮದುವೆ ಮಾಡುವ ಬೆದರಿಕೆ ಒಡ್ಡಲಾಗಿತ್ತು. ಐಸಿಸ್'ಗೆ ಸೇರಿದ್ದ ಬಿಳಿಯನೊಬ್ಬ ಯಾಝಿದಿ ಮಹಿಳೆಯರನ್ನು ಕೊಂಡು, ಒಳ್ಳೆಯ ಬಟ್ಟೆಯಿಂದ ಸಿಂಗರಿಸಿ ಮಾರುತ್ತಿದ್ದ ಎಂದಿದ್ದಾಳೆ ಆಕೆ. ಕಡ್ಡಿಗಳನ್ನು, ಪ್ರಾಣಿಗಳ ಮಲವನ್ನು ಬಲವಂತವಾಗಿ ಆಕೆಗೆ ತಿನ್ನಿಸಿದ್ದರು. ನಾಲ್ಕೂವರೆ ವರ್ಷದ ಈ ಭಯಾನಕ ನರಕದಿಂದ ಪಾರಾಗಲು ಆಕೆ ಯತ್ನಿಸಿದಾಗ ಆಕೆಯ ಮಕ್ಕಳೇ ಆಕೆಯೊಂದಿಗೆ ಬರಲು ಒಪ್ಪಲಿಲ್ಲವಂತೆ. ಅಷ್ಟರಮಟ್ಟಿಗೆ ಆ ಮಕ್ಕಳನ್ನು ಭೀತರನ್ನಾಗಿಸಿದ್ದರು ಉಗ್ರರು.

               2015ರ ಫೆಬ್ರವರಿಯಲ್ಲಿ ಬೆಲ್ಜಿಯಂ ದಿನಪತ್ರಿಕೆ "ಲಾ ಲಿಬ್ರೆ ಬೆಲ್ಜಿಕ್"ಗೆ ತಾನನುಭವಿಸಿದ ಚಿತ್ರಹಿಂಸೆಯನ್ನು ನಾದಿಯಾ ತೆರೆದಿಟ್ಟಳು. 2015ರ ಡಿಸೆಂಬರಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಐಸಿಸ್ ಉಗ್ರರ ಅಟ್ಟಹಾಸವನ್ನು ವಿವರಿಸಿದಳು. ಮಾನವ ಕಳ್ಳಸಾಗಣೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊಟ್ಟಮೊದಲ ಚರ್ಚೆ ಅದಾಗಿತ್ತು. ಆಗ ಐಸಿಸ್ ಉಗ್ರರ ಪೈಶಾಚಿಕ ಕೃತ್ಯ ವಿಶ್ವದ ಗಮನಕ್ಕೆ ಬಂತು. ಬಳಿಕ, ದೌರ್ಜನ್ಯದಿಂದ ನಲುಗಿದ್ದ ಜನರ ಪರವಾಗಿ ಹೋರಾಡುವ ಕಾರ್ಯಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಳು. ತನ್ನ ಜನರಿಗೆ ನ್ಯಾಯ ಒದಗಿಸುವ, ಹರಿದು ಹಂಚಿಹೋಗಿರುವ ಯಾಜಿದಿ ಜನಾಂಗದವರನ್ನು ಒಂದೆಡೆ ಸೇರಿಸುವ, ಉಗ್ರರು ತನ್ನ ಸಮುದಾಯಕ್ಕೆ ಮಾಡಿದ ಘೊರ ಅನ್ಯಾಯಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದಳು. "ಇಂಥದ್ದೊಂದು ದುರಂತ ಕಥೆಗೆ ಸಾಕ್ಷಿಯಾದ ಜಗತ್ತಿನ ಕೊನೆಯ ಹುಡುಗಿ ನಾನಾಗಿರಲಿ" ಎನ್ನುವ ಆಕೆ 2017ರಲ್ಲಿ  "ದಿ ಲಾಸ್ಟ್ ಗರ್ಲ್" ಎನ್ನುವ ಪುಸ್ತಕವನ್ನೂ ಬರೆದಳು.

               ಅವಳ ಕಥೆ ಕೇಳಿದ ಬಳಿಕ 2017ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐಸಿಸ್ನ ಕ್ರೌರ್ಯಗಳ ಕುರಿತು ಸಾಕ್ಷ್ಯ ಸಂಗ್ರಹಕ್ಕೆ ಬದ್ಧ ಎಂದು ಘೋಷಿಸಿತು! ಅಷ್ಟೊಂದು ಜನರಿಗೆ ಅನ್ಯಾಯವಾದ ಮೇಲೂ ವಿಶ್ವಸಂಸ್ಥೆ ಎದ್ದು ಕುಳಿತದ್ದು ಬರಿಯ ಸಾಕ್ಷ್ಯ ಸಂಗ್ರಹಕ್ಕಷ್ಟೇ! ವಿಶ್ವದ ಮುಸ್ಲಿಮರ ಅಥವಾ ಕ್ರೈಸ್ತರ ಕೂದಲು ಕೊಂಕಿದರೂ ದೊಡ್ಡ ಗಂಟಲಲ್ಲಿ ಸುಳ್ಳೇ ಸುಳ್ಳು ಬೊಬ್ಬೆ ಹಾಕುವ ವಿಶ್ವಸಂಸ್ಥೆ ಯಾಝಿದಿಗಳೆಂಬ ಜನಾಂಗವೇ ನಿರ್ನಾಮವಾಗುವ ಸನ್ನಿವೇಶ ಹತ್ತಿರವಾದಾಗಲೂ ಸಾಕ್ಷಿ ಬೇಕು ಎನ್ನುತ್ತಾ ಕೂತಿತು. ಮಾನವ ಕಳ್ಳಸಾಗಣೆಯ ಸಂತ್ರಸ್ತರ ಮೊದಲ ಸೌಹಾರ್ದ ರಾಯಭಾರಿಯನ್ನಾಗೇನೋ ಆಕೆಯನ್ನು ವಿಶ್ವಸಂಸ್ಥೆ ನೇಮಿಸಿತು. ವಿಶ್ವಸಂಸ್ಥೆಯ ಮಾದಕದ್ರವ್ಯ ಮತ್ತು ಅಪರಾಧ ವಿಭಾಗದ ಅಧಿಕಾರಿಯಾಗಿಯೂ ಆಕೆಯನ್ನು ನೇಮಕ ಮಾಡಿತು. ಆದರೆ ಅದರಿಂದ ಏನು ಸಾಧಿಸಿದಂತಾಯಿತು? ಯಾಝಿದಿಗಳ ಜೀವ ಉಳಿಯಿತೇ? ಲೈಂಗಿಕ ಗುಲಾಮರಾಗಿ ಬದುಕುತ್ತಿರುವ ಯಾಝಿದಿ ಹೆಣ್ಣುಮಕ್ಕಳನ್ನು ಕತ್ತಲಕೂಪದಿಂದ ಹೊರತರಲು ಇದು ಸಹಾಯಕವಾಯಿತೇ? ಇಸ್ಲಾಮ್ ಮತಾಂಧತೆಯನ್ನು ಪೋಷಿಸುವ ಸೆಕ್ಯುಲರ್ ತಂಡದ ಪಾರಿತೋಷಕವಾಗಿರುವ; ನಿರ್ಭಯಾ ಅತ್ಯಾಚಾರಿಗಳಿಗೆ ಲೈಂಗಿಕ ಕ್ರಿಯೆಗೆ ಅವಕಾಶವಿರಲಿಲ್ಲ, ಹಾಗಾಗಿ ಅತ್ಯಾಚಾರ ಎಸಗಿದರು ಎಂದು ಲೇಖನ ಬರೆದವರಿಗೆಲ್ಲಾ ಕೊಡುವ; ಮೌಲ್ಯ ಕಳೆದುಕೊಂಡಿರುವ ನೊಬೆಲ್ ಎಂಬ ಪ್ರಶಸ್ತಿಯೂ ಆಕೆಗೆ ಸಿಕ್ಕಿತು. ಇದಂತೂ ಯಾಝಿದಿಗಳ ಹೋರಾಟವನ್ನೇ ತಣ್ಣಗಾಗಿಸಲು ನಡೆಸಿದ ಯತ್ನವೆಂಬಂತೆ ಅನ್ನಿಸುತ್ತದೆ. ಈ ಪ್ರಶಸ್ತಿ ಕೊಟ್ಟು ಯಾಝಿದಿಗಳ ಕಣ್ಣೀರ ಕಥೆಯನ್ನು ನಾದಿಯಾಳೊಬ್ಬಳಿಗೇ ಸೀಮಿತವಾಗಿಸಿ ಯಾಝಿದಿಗಳ ಮೇಲೆ ನಡೆದ ಕ್ರೌರ್ಯವನ್ನು ಮುಚ್ಚಿ ಹಾಕುವ ಪ್ರಯತ್ನದಂತೆ ಎಂದನ್ನಿಸುತ್ತದೆ. ನೊಬೆಲ್ ಪ್ರಶಸ್ತಿ ಕೊಡುವ ಹಿಂದಿನ ರಾಜಕಾರಣಗಳನ್ನೆಲ್ಲಾ ಗಮನಿಸಿದರೆ ಈ ಗುಮಾನಿಯನ್ನು ಅಲ್ಲಗೆಳೆಯುವಂತಿಲ್ಲ.

                ಈಗೇಕೆ ಯಾಝಿದಿಗಳ ಸುದ್ದಿ ಎನ್ನುವ ಪ್ರಶ್ನೆ ಏಳಬಹುದು. ಸೆಪ್ಟೆಂಬರ್ 30ರಂದು ಅರ್ಮೇನಿಯಾದ ಅಕ್ನಾಲಿಚ್ ಹಳ್ಳಿಯಲ್ಲಿ ಜಗತ್ತಿನ ಅತೀ ದೊಡ್ಡ ಯಾಝಿದಿಗಳ ದೇವಾಲಯ "ಕ್ಯೂಬಾ ಮಿಯರ್ ದಿವೇನ್" ಉದ್ಘಾಟನೆಯಾಯಿತು. ಮುಸ್ಲಿಂ ದೇಶದಲ್ಲಿ, ಮುಸ್ಲಿಂ ದೇಶಗಳ ನಡುವೆ ಇದ್ದು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡದ್ದು ಒಂದು ಸಾಧನೆಯಾದರೆ, ಅನವರತ ಘಾಸಿಗೊಳಗಾಗಿ ಇನ್ನೇನೂ ನಶಿಸಿಯೇ ಹೋಯಿತು ಎನ್ನುವ ಸಂದರ್ಭದಲ್ಲಿ ಜೀವಂತವಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳುವ ಸಲುವಾಗಿ ತಮ್ಮ ಸಂಸ್ಕೃತಿಯ ಕುರುಹನ್ನು ಕಟ್ಟಿಕೊಂಡದ್ದು ಮತ್ತೊಂದು ಮಹತ್ಸಾಧನೆಯೇ ಸರಿ. 1960ರಲ್ಲಿ ಟರ್ಕಿಯಲ್ಲಿ ಪುರಾತತ್ವ ಶಾಸ್ತ್ರಜ್ಞರಿಗೆ ಹಳೆಯ ಕಟ್ಟಡದ ಅವಶೇಷವೊಂದು ಕಣ್ಣಿಗೆ ಬಿತ್ತು. ಆದರೆ ಅದರತ್ತ ಎಲ್ಲರ ಗಮನ ಸೆಳೆದದ್ದು 1994ರಲ್ಲಿ ನಡೆದ ಉತ್ಖನನದಲ್ಲಿ ಅದೊಂದು 11ಸಾವಿರ ವರ್ಷ ಹಳೆಯ ದೇವಾಲಯ ಎಂಬ ಮಾಹಿತಿ ಹೊರಬಿದ್ದಾಗ. ಶಿವಾಲಯದಂತೆ ಇರುವ, ಪಕ್ಕದಲ್ಲೇ ಸ್ಮಶಾನವಿರುವ ಹಾಗೂ ಶಿಖೆ ಬಿಟ್ಟ ವ್ಯಕ್ತಿಯ ವಿಗ್ರಹ ಹೊಂದಿರುವ ಈ ದೇವಾಲಯ ಭಾರತದಿಂದ ವಲಸೆ ಹೋದ ಹಿಂದೂಗಳಿಂದ ಸ್ಥಾಪಿಸಲ್ಪಟ್ಟಿರಬಹುದು. ಗೊಬೆಕ್ಲಿ ತೇಪಿ ಎಂಬ ಹೆಸರಿನ ಈ ದೇವಾಲಯದ ಅರ್ಚಕರು ಯಾಜಿದಿಗಳಾಗಿದ್ದಿರಬಹುದು ಎನ್ನುವುದೊಂದು ಊಹೆ. ಇದಕ್ಕೆ ಕಾರಣವಿದೆ. ಕುರ್ಮಂಜಿ ಎನ್ನುವ ಭಾಷೆಯನ್ನು ಪ್ರಧಾನವಾಗಿ ಮಾತಾಡುವ ಇರಾಕ್, ಸಿರಿಯಾ, ಟರ್ಕಿ, ಅರ್ಮೇನಿಯಾಗಳಲ್ಲಿ ಹರಡಿರುವ ಯಾಝಿದಿ ಜನಾಂಗಕ್ಕೆ ಭಾರತೀಯರೊಡನೆ ಕೆಲವು ನಂಟಿದ್ದಂತನಿಸುತ್ತದೆ.ಟರ್ಕಿಯ ಪುರಾತನ ಹೆಸರು ಅನತೋಲಿಯಾ. ಆನಲ ಎಂದರೆ ಬೆಂಕಿ, ತೋಲ್ ಎಂದರೆ ಚರ್ಮ. ಬೆಂಕಿಯಂತೆ ಕೆಂಪಾದ ಚರ್ಮದ ಜನತೆಯುಳ್ಳ ಪ್ರದೇಶ ಎಂಬ ಅರ್ಥ ಇದಕ್ಕಿರಬಹುದು. ಇನ್ನೊಂದು ಅಚ್ಚರಿದಾಯಕ ಅಂಶವೆಂದರೆ ತಮಿಳಿನಲ್ಲಿ ಕುರುದಿ ಎಂದರೆ ರಕ್ತ. ರಕ್ತವರ್ಣದವರು ಎನ್ನುವ ಅರ್ಥ ಕುರ್ದಿಶ್ ಎನ್ನುವ ಪದಕ್ಕಿದ್ದಿರಬಹುದೇ? ಇರಾಕ್ ಮತ್ತು ಅರಬ್ ಮರಳುಗಾಡಿನಲ್ಲಿ ಇಂದಿಗೂ ಕೂಡ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಅಷ್ಟಾಗಿ ಒಳಪಡದ ಏಕೈಕ ಜನಾಂಗವೆಂದರೆ ಬಹುಷಃ ಯಾಝಿದಿಗಳೇ. ಇವರ ಮುಖ್ಯ ದೈವ "ತವಾಯ್ ಮೇಲಕ್" ಅಂದರೆ ನವಿಲುಗಳ ದೊರೆ. ದೇವರು ತನ್ನ ಮಗ ತವಾಯ್ ಮೇಲಕ್'ಗೆ ಸಹಾಯ ಮಾಡಲು ಆರು ಜನ ಅಪ್ಸರೆಯರನ್ನು ಸೃಷ್ಟಿಸಿದನಂತೆ. ನಮ್ಮ ಶಿವ, ಕಾರ್ತಿಕೇಯ ಹಾಗೂ ಕೃತ್ತಿಕಾ ಮಾತೆಯರನ್ನು ನೆನಪಿಸಿಕೊಳ್ಳಿ. ಅವರ ಧಾರ್ಮಿಕ ಆಚರಣೆಯಲ್ಲಿರುವ ಮುಖ್ಯ ಅಂಗವೇ ನವಿಲಿನ ಚಿತ್ರವಿರುವ ದೀಪ. ಇದರಲ್ಲೇನು ವಿಶೇಷ? ಒಂದು, ದೀಪ ಬೆಳಗುವುದು ಹಿಂದೂಗಳ ವಿಶೇಷತೆ; ಇನ್ನೊಂದು, ಇರಾಕ್, ಟರ್ಕಿ ಸೇರಿ ಪೂರ್ವ ಏಷಿಯಾದಲ್ಲೆಲ್ಲೂ ನವಿಲುಗಳೇ ಕಂಡುಬರುವುದಿಲ್ಲ. ನವಿಲುಗಳ ವಾಸವೇನಿದ್ದರೂ ಭಾರತ ಉಪಖಂಡದ ಸುತ್ತಮುತ್ತ ಮತ್ತು ಆಫ್ರಿಕಾದ ಕೆಲ ಜಾಗಗಳಷ್ಟೆ. ಅವರ ಪವಿತ್ರ ಕ್ಷೇತ್ರ ಲಾಲಿಶ್ ಮಂದಿರದ ಮುಖ್ಯದ್ವಾರದೆದುರು ಹಾವಿನ ಚಿತ್ರವಿದೆ. ಹಾವು, ನವಿಲು ಎಲ್ಲವೂ ಸುಬ್ರಹ್ಮಣ್ಯನಿಗೆ ಸಂಬಂಧಪಟ್ಟವು. ಲಾಲಿಶ್ ಮಂದಿರದ ಗೋಡೆಯೊಂದರ ಮೇಲಿರುವ ಯಾಝಿದಿಗಳ ಅಪ್ಸರೆಯ ಮೈಕಟ್ಟು, ಸೀರೆ, ಬೈತಲೆ, ಕಿವಿಯೋಲೆ, ಹೂವು ಎಲ್ಲವೂ ಪಕ್ಕಾ ಭಾರತೀಯಂತೆಯೇ ಇದೆ.

                    ಬೆಳಿಗ್ಗೆ ಸೂರ್ಯನತ್ತ ಮುಖಮಾಡಿ ಕೈಮುಗಿಯುತ್ತಾ ಪ್ರಾರ್ಥನೆ, ಸಂಜೆ ಲಾಲಿಶ್ ದೇವಾಲಯದ ದಿಕ್ಕಿನತ್ತ; ಪ್ರಾರ್ಥನೆ ಸಮಯದಲ್ಲಿ ಹೊರಗಿನವರು ಜತೆಗಿರುವಂತಿಲ್ಲ; ಪುನರ್ಜನ್ಮದಲ್ಲಿ ನಂಬಿಕೆ; ಧಾರ್ಮಿಕ ಪರಿಶುದ್ಧತೆ; ದೇವಾಲಯ ಪ್ರವೇಶಿಸುವಾಗ ಹಣೆಗೆ ತಿಲಕವಿಡುವುದು; ಡಿಸೆಂಬರಿನಲ್ಲಿ ಮೂರು ದಿನಗಳ ಉಪವಾಸ; ಹಬ್ಬದ ಸಮಯದಲ್ಲಿ ಹೆಣ್ಣುಮಕ್ಕಳು ಮನೆ ತುಂಬಾ ದೀಪ ಬೆಳಗುವುದು; ನಮ್ಮ ಹವನದ ರೀತಿಯ ಅಗ್ನಿಪೂಜೆ; ಅನ್ಯ ಮತೀಯರೊಂದಿಗೆ ವಿವಾಹಾದಿ ಸಂಪರ್ಕ ನಡೆಸದಿರುವುದು; ಹಿಂದೂ ದೇವಾಲಯಗಳಲ್ಲಿದ್ದಂತೆ ಯಾಝಿದಿ ದೇವಾಲಯಗಳಲ್ಲಿ ಗೋಪುರಗಳಿವೆ. ಅವರ ಪುರಾಣ ಪ್ರಸಿದ್ಧ ಪವಿತ್ರ ಭೂಮಿಯ ಹೆಸರು ಪೆರನಿ(ನಮ್ಮ ಪಳನಿಯನ್ನು ನೆನಪಿಸಿಕೊಡುತ್ತದೆ)! ನಮ್ಮ ಸಪ್ತರ್ಷಿಗಳಿಗೆ ಸಮನಾದ "ಹೆಪ್ಟ್ ಸಿರ್ರ್" (ಏಳು ದೇವತೆಗಳು/ಶಕ್ತಿಗಳು)ನ್ನು ಅವರು ನಂಬುತ್ತಾರೆ. ಅವರು ವೃಕ್ಷಗಳನ್ನೂ ಪೂಜಿಸುತ್ತಾರೆ. ಯಾಝಿದಿಗಳ ಗುರುಗಳನ್ನು ಶೇಖ್ ಆದಿ೧, ಶೇಖ್ ಆದಿ೨,...ಹೀಗೆ ಕರೆಯಲಾಗುತ್ತದೆ! ಶೇಖ್ ಆದಿ ಇಬ್ನ್ ಮುಸಾಫಿರ್'ನನ್ನು ಯಾಝಿದಿಗಳು ತವಾಯ್ ಮೇಲಕ್'ನ ಅವತಾರವೆಂದೇ ನಂಬುತ್ತಾರೆ. ಸದಾ ಮೌನವಾಗಿರುತ್ತಿದ್ದ, ತಪಶ್ಚರ್ಯೆಯಲ್ಲಿ ನಿರತನಾಗಿದ್ದ ಆತ ಅನೇಕ ಪವಾಡಗಳನ್ನು ಮಾಡಿದ್ದ. ಆತನ ಸಮಾಧಿ ಇಂದಿಗೂ ಯಾಝಿದಿಗಳ ಯಾತ್ರಾಸ್ಥಳವಾಗಿದೆ. ಗಮನಿಸಿ ಮೌನ, ತಪಸ್ಸು ಹಿಂದೂ ಸಂಸ್ಕೃತಿಯನ್ನು ಬಿಟ್ಟರೆ ಮತ್ತೆಲ್ಲೂ ಬಲು ಅಪರೂಪ.

                   ಯಾಝಿದಿಗಳು ತಮ್ಮನ್ನು ದಾಸೇನಿ ಅಥವಾ ದೌಸೇನ್ ಎಂದು ಕರೆದುಕೊಳ್ಳುತ್ತಾರೆ. ಅದು ಸಂಸ್ಕೃತದ ದೇವಯಜ್ಞಿಯಿಂದ ಉತ್ಪತ್ತಿಯಾದ ಪದ. ಯಾಝಿದಿ ಎಂಬುದು ಸಂಸ್ಕೃತದ ಯಜತ(ಪೂಜೆಗೆ ಅರ್ಹ)ದಿಂದ ಹುಟ್ಟಿಕೊಂಡಿದೆ. ಪ್ರಾಚೀನ ಪರ್ಶಿಯನ್ ಹಾಗೂ ಕಾಶ್ಮೀರಿಯಲ್ಲೂ ಇದು ಯಜತ ಎಂದೇ ಕರೆಸಿಕೊಳ್ಳುತ್ತದೆ. ಈಗ ಯಾಝಿದಿ ಕ್ಯಾಲೆಂಡರಿನ ಪ್ರಕಾರ 6,769ನೇ ವರ್ಷ. ಅಂದರೆ ಅವರು ಭಾರತವನ್ನು ಬಿಟ್ಟು ಇಷ್ಟು ವರ್ಷಗಳಾಗಿದ್ದಿರಬಹುದು. ನಮ್ಮ ಸಪ್ತರ್ಷಿ ಕ್ಯಾಲೆಂಡರ್ ಹುಟ್ಟಿದ್ದು ಇದೇ ಸಮಯದಲ್ಲಿ! ಇನ್ನೊಂದು ವಿಶೇಷವೆಂದರೆ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಥಿಯ ದಿನವೇ "ಸಬ್ಬತ್ ದಿನ" ಎಂಬ ಅವರ ದೇವರ (ನವಿಲುಗಳ ಒಡೆಯ) ಹಬ್ಬವಿರುತ್ತದೆ. ಯಹೂದಿ ಬಾಬಾ ಶೇಖ್ 2014ರ ಸ್ಕಂದ ಷಷ್ಠಿಯೊಂದರ ದಿನ ವಾಷಿಂಗ್ಟನ್ನಿನ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.ಇರಾಕಿನ ಸಿಲೆಮನಿಯಾ ಪ್ರಾಂತ್ಯದಲ್ಲಿ ಶ್ರೀರಾಮ-ಹನುಮಂತರ ಕೆತ್ತನೆಯೂ ಕಂಡುಬಂದಿರುವುದರಿಂದ ಯಾಝಿದಿಗಳ ಹಿಂದೂ ಮೂಲವನ್ನು ಅಲ್ಲಗಳೆಯುವಂತಿಲ್ಲ.

                    ತಮ್ಮದು ಎಂಬ ಒಂದು ರಾಷ್ಟ್ರವಿಲ್ಲದೆ, ರಾಷ್ಟ್ರೀಯತೆಯ ಪರಿಕಲ್ಪನೆಯಿಲ್ಲದೆ, ಸಂಖ್ಯಾಬಲವೂ ಇಲ್ಲದೆ, ಎಲ್ಲವೂ ಒಳ್ಳೆಯದು, ಎಲ್ಲರೂ ಒಳ್ಳೆಯವರು ಎಂದು ಬಗೆದ ಯಾಝಿದಿಗಳು ಪಟ್ಟ ಪಾಡು ಇದು. ದೇಶಭಕ್ತಿ, ರಾಷ್ಟ್ರ ಎನ್ನುವ ಪರಿಕಲ್ಪನೆ ಅಗತ್ಯವಿಲ್ಲ, ಜಾತ್ಯಾತೀತರಾಗೋಣ, ವಿಶ್ವಮಾನವರಾಗೋಣ ಅಂತ ಬೊಬ್ಬಿಡುವ ಮಂದಮತಿಗಳು ಯಾಝಿದಿಗಳಿಗಾದ ಹಾಗೂ ಈಗ ಕುರ್ದಿಶ್'ಗಳ ಮೇಲಾಗುತ್ತಿರುವ ಘನಘೋರ ಹಿಂಸೆಯನ್ನು ಗಮನಿಸಬೇಕು. ಒಂದು ತುತ್ತು ತಿನ್ನಲೂ ಬಡಿದಾಡಬೇಕಾದ ಪರಿಸ್ಥಿತಿ ಅವರದ್ದು. ಸ್ನೇಹಿತನಾಗಿದ್ದ ಅಮೆರಿಕಾವೇ ಈಗ ಅವರ ಕೈಬಿಟ್ಟಿದೆ. ಹಿಂದೂಗಳ ಪರಿಸ್ಥಿತಿಯೇನೂ ವಿಭಿನ್ನವಲ್ಲ. ಕೊನೇ ಪಕ್ಷ ಯಾಝಿದಿಗಳ ಮಾರಣಹೋಮಕ್ಕೆ ಇಷ್ಟಾದರೂ ಪ್ರತಿಕ್ರಿಯೆ ಬಂತು. ಆದರೆ ಇತಿಹಾಸದುದ್ದಕ್ಕೂ ಬಲಿಯಾಗುತ್ತಲೇ ಬಂದ ಹಿಂದೂಗಳ ಕರುಣಾಜನಕ ಕಥೆಯನ್ನು ಕೇಳುವವರಿಲ್ಲ. ಜಗತ್ತಿನ ಇತಿಹಾಸದಲ್ಲೇ ಅತೀ ದೊಡ್ಡ ವಲಸೆ ನಡೆದ 47ರಲ್ಲಿ ಹಿಂದೂಗಳ ಮೇಲೆ ನಡೆದ ಮಾರಣಹೋಮಕ್ಕೆ ಒಂದು ಖಂಡನೆಯೂ ವ್ಯಕ್ತವಾಗಲಿಲ್ಲ. 71ರ ಆಸುಪಾಸಿನಲ್ಲಿ ಆಗಿನ ಪೂರ್ವ ಪಾಕಿಸ್ತಾನ ಈಗಿನ ಬಾಂಗ್ಲಾದಲ್ಲಿ ಭೀಕರ ಅತ್ಯಾಚಾರಕ್ಕೆ ಒಳಗಾದ ಹಿಂದೂಗಳ ಆರ್ತನಾದಕ್ಕೆ ಯಾವ ವಿಶ್ವಮಾನವನೂ ಓಗೊಡಲಿಲ್ಲ. 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರವೆಸಗಿ ಅವರ ಮೂಲನೆಲೆಯಿಂದಲೇ ಬಲವಂತವಾಗಿ ಹೊರದಬ್ಬಿದಾಗ ಯಾವ ಮಾನವ ಹಕ್ಕು ಹೋರಾಟಗಾರರೂ ಪ್ರತಿಭಟನೆ ನಡೆಸಲಿಲ್ಲ. ಇತಿಹಾಸದಲ್ಲಿ ಹಿಂದೂಗಳ ಮೇಲೆ ನಡೆದಷ್ಟು ಹಲ್ಲೆ, ಅತ್ಯಾಚಾರ, ಹತ್ಯಾಕಾಂಡ ಮತ್ಯಾವ ಜನಾಂಗದ ಮೇಲೂ ನಡೆದಿಲ್ಲ. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾದರೆ ಒಂದು ರಾಷ್ಟ್ರವಾಗಿ ಶಕ್ತಿವಂತರಾಗಬೇಕು. ಆಂಗ್ಲ ಶಿಕ್ಷಣದ ಮಾನಸಿಕತೆಯನ್ನೇ ತಲೆಯಲ್ಲಿ ತುಂಬಿಕೊಂಡಿರುವ, ಮಾವೋ-ಮಾರ್ಕ್ಸ್'ಗಳಿಂದ ಬಂದದ್ದೇ ತೀರ್ಥ ಎಂಬಂತಾಡುವ, ಜಾತ್ಯಾತೀತತೆಯೇ ಭಾರತಕ್ಕೊಳ್ಳೆಯದು ಎನ್ನುವವರಿಗೆ ಈ ಸತ್ಯ ತಿಳಿಯಲಾರದು. ತಿಳಿಯುವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. 370 ಎಂಬ ಮರಣಶಾಸನ ಕಿತ್ತೆಸೆದಾಗ ಜಗತ್ತಿನ ಕೆಲವೆಡೆ ವಿರೋಧಗಳು ಕಂಡುಬಂದರೂ ಹಲವರು ಬೆಂಬಲಕ್ಕೆ ನಿಂತರು. ಯಾಕೆ? ಶಕ್ತಿವಂತನಿಗೆ ಜಗತ್ತು ಬಾಗುತ್ತದೆ. ಮತಾಂಧರು, ಕ್ರೂರಿಗಳು ಶಕ್ತಿವಂತರಾದರೆ ಜಗತ್ತು ಅಸ್ತವ್ಯಸ್ತವಾಗುತ್ತದೆ. ಕೃಣ್ವಂತೋ ವಿಶ್ವಮಾರ್ಯಮ್ ಎಂದು ಹೊರಟ ಭಾರತ ಶಕ್ತಿವಂತವಾದರೆ ಜಗತ್ತಿಗೇ ಒಳ್ಳೆಯದಾಗುತ್ತದೆ.

ಭವ್ಯ ಭಾರತದ ಮುಕುಟಮಣಿ ವೀರಸಾವರ್ಕರ್

ಭವ್ಯ ಭಾರತದ ಮುಕುಟಮಣಿ ವೀರಸಾವರ್ಕರ್


           ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂಜೂಷದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ "ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ? ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ, ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆಗಳನ್ನೆಲ್ಲಾ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ...ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ಅದು ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದಂತೆ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.ಅಮ್ಮಾ ಫಡಕೆ ಆರಂಭಿಸಿದ ಕಾರ್ಯ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ಇನ್ನು ಮುಂದೆ ನನ್ನೀ ಜೀವನ ನಿನಗಾಗಿ ಸಮರ್ಪಿತ." ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಆ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಪುಳಕಿತಗೊಳಿಸಿತು.

                  ಏಡನ್ನಿನಲ್ಲೊಂದು ಸ್ವಾತಂತ್ರ್ಯದ ಕಿಡಿ ಆರಿತ್ತು. ಅದೇ ಕಿಡಿ ಭಗೂರಿನಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯವಾಗಿ ಮೊರೆಯಿತು! ವೀರ...ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್! ಸಾಹಿತ್ಯಾಸಕ್ತರ ಪಾಲಿಗೆ ಭಗವತುಲ್ಯ ಕವಿ; ಬರಹಗಾರ, ಆಂಗ್ಲರಿಗೆ ಯಮಸದೃಶ ಕ್ರಾಂತಿಕಾರಿ, ವಿರೋಧಿಗಳ ನಾಲಿಗೆಯಲಿ ಕೋಮುವಾದಿ, ಸಮಾಜ ಸುಧಾರಕರಿಗೆ ಗುರು, ದೇಶ ಭಕ್ತರ ಪಾಲಿಗೆ ಜೀವನದ ಕ್ಷಣ ಕ್ಷಣ ರಕ್ತದ ಕಣ ಕಣವನ್ನೂ ರಾಷ್ಟ್ರಕ್ಕಾಗಿ ಸಮರ್ಪಿಸಿ ಆತ್ಮಾಹುತಿಗೈದ ಅಭಿನವ ಶಿವಾಜಿ, ಆಧುನಿಕ ಜಗತ್ತಿಗೆ ಹಿಂದುತ್ವವೇನೆಂದು ಸಮರ್ಥವಾಗಿ ಮಂಡಿಸಿ ಇಡೀ ಸನಾತನ ಸಂಸ್ಕೃತಿಗೆ ಭಾಷ್ಯ ಬರೆದ ಮಹಾದೃಷ್ಟಾರ.

               ದಾರಣಾ ನದಿಯ ತಟದಲ್ಲಿ 1883ರ ಮೇ 28ರ ವೈಶಾಖ ಕೃಷ್ಣ ಷಷ್ಠಿಯ ಶುಭ ದಿನ ಸೃಷ್ಟಿ. ಜನಿಸಿದೊಡನೆ ತನ್ನತ್ತ ಸೆಳೆಯಿತು ಊರವರ ದೃಷ್ಟಿ. ದೊಡ್ಡಪ್ಪ ಮಹಾದೇವ ಪಂತರಿಂದ ಇತಿಹಾಸದ ಪಾಠ. ಶಿವಾಜಿಯೇ ಆದರ್ಶನಾದ, ಮನಸ್ಸು ಮಹಾರಾಣಾ ಪ್ರತಾಪನನ್ನನುಕರಿಸಿತು, ಝಾನ್ಸಿಯ ರಣದುಂದುಭಿ ಕಿವಿಯಲ್ಲಿ ಮೊಳಗಿತು. ತಂದೆ, ತಾಯಿ, ಸೋದರ ಮಾವನಿಂದ ಕಾವ್ಯ, ಸಾಹಿತ್ಯದ ಸಮೃದ್ಧಿ. ಮಾರಕವಾಗೆರಗಿದ ಪ್ಲೇಗ್ ಮೊದಲೇ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸೋದರರ ತಂದೆಯನ್ನೂ, ದೊಡ್ಡಪ್ಪನನ್ನೂ ಬಲಿತೆಗೆದುಕೊಂಡಿತು. ಗದ್ದೆ ತೋಟಗಳು ಅನ್ಯರ ವಶವಾದವು. ಶ್ರೀಮಂತ ಜಮೀನುದಾರರ ಮಕ್ಕಳಾಗಿದ್ದವರು ಕೇವಲ ಒಂದು ವಾರದೊಳಗೆ ಮನೆಯ ಹಿರಿಯರನ್ನೂ, ವಂಶದ ಸಂಪತ್ತನ್ನೂ ಕಳೆದುಕೊಂಡು ಅನಾಥರಾಗಿದ್ದರು. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ದಿಟ್ಟ. ದಿನವೂ ನಾಟಕ, ಹರಟೆ, ಇಸ್ಪೀಟು, ತಂಬಾಕು ತಿನ್ನುತ್ತಾ, ಸ್ತ್ರೀ ಪುರುಷರನ್ನು ರೇಗಿಸುತ್ತಾ ಕುಚೇಷ್ಟೆ ಮಾಡುತ್ತಾ ಕಾಲಕಳೆಯುತ್ತಿದ್ದ ಉಂಡಾಡಿಗಳೆಲ್ಲಾ ತಾತ್ಯಾ ಸಹವಾಸದಿಂದ "ರಾಷ್ಟ್ರಭಕ್ತ ಸಮೂಹ"ದ (ರಾಮ ಹರಿ) ಸದಸ್ಯರಾದರು. ಪಡ್ಡೆ ಹುಡುಗರ ನಾಯಕ ಹೆಳವ ಗೋವಿಂದ ದರೇಕರ್(ಆಬಾ ಪಾಂಗಳೆ) ಸಾವರ್ಕರ್ ಸಹವಾಸದಿಂದ "ಸ್ವಾತಂತ್ರ್ಯ ಕವಿ ಗೋವಿಂದ" ನಾಗಿ ಬಿರುದಾಂಕಿತನಾದ. ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದಾಗ ಸಾವರ್ಕರರಿಗಿನ್ನೂ ಹದಿನಾರು ವರ್ಷ.

                "ರಾಮಹರಿ" "ಮಿತ್ರಮೇಳ"ವಾಯಿತು. ಶಿವಾಜಿ ಜಯಂತಿ, ಗಣೇಶ ಉತ್ಸವ, ಪ್ಲೇಗ್ ರೋಗಿಗಳ ಆರೈಕೆ , ಅನಾಥ ರೋಗಿಗಳ ಶವ ಸುಡುವುದು...ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮಿತ್ರಮೇಳ ಬೃಹದಾಕಾರವಾಗಿ ಬೆಳೆಯಿತು. ಯಾವ ಸತ್ಯದಿಂದ ಜನಹಿತ ಆಗುತ್ತದೆಯೋ ಅದೇ ಸತ್ಯ, ಧರ್ಮ. ಆದರೆ ಯಾವ ಸತ್ಯದಿಂದ ಕಳ್ಳನಿಗೆ ರಕ್ಷಣೆಯಾಗಿ ಸನ್ಯಾಸಿಗೆ ಶಿಕ್ಷೆಯಾಗುತ್ತದೋ ಅದು ಅಸತ್ಯ, ಅಧರ್ಮ. ಹೇಗೆ ರಾವಣ, ಕಂಸರ ಕೈಗಳಲ್ಲಿದ್ದ ಶಸ್ತ್ರಗಳು ರಾಮ, ಕೃಷ್ಣರ ಕೈಯಲ್ಲಿ ಪಾವನವಾಗಿ ಪೂಜಾರ್ಹವಾಗಿದ್ದವೋ ಅದೇ ರೀತಿ ಅಧಿಕಾಧಿಕ ಜನಹಿತಕ್ಕಾಗಿ ರಾಷ್ಟ್ರೀಯ ಅಧಿಕಾರಗಳ ರಕ್ಷಣೆ ಹಾಗೂ ವಿಕಾಸಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ದೇಶಾಭಿಮಾನ ನಿಜಕ್ಕೂ ಧರ್ಮಸಮ್ಮತ, ಪ್ರಶಂಸನೀಯ. ಪರದೇಶಗಳನ್ನಾಕ್ರಮಿಸಿ ಜನಕ್ಷೋಭೆ ನಿರ್ಮಿಸುವ ಶೋಷಣೆ ನಡೆಸುವ ದೇಶಾಭಿಮಾನ ಅಧರ್ಮ, ದಂಡನೀಯ ಎಂಬುದು ಸಾವರ್ಕರ್ ಅಭಿಮತವಾಗಿತ್ತು, ಮಿತ್ರಮೇಳದ ತತ್ವವಾಯಿತು. ಮುಂದೆ ಅಸಂಖ್ಯ ಕ್ರಾಂತಿಕಾರಿಗಳ ನೀತಿಯಾಗಿ ಬೆಳೆಯಿತು. ಮಿತ್ರಮೇಳ ಬೆಳೆಯುತ್ತಾ ಬೆಳೆಯುತ್ತಾ "ಅಭಿನವ ಭಾರತ"ವಾಯಿತು. ಮಹಾರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆಯಿತು. ವಂಗಭಂಗವನ್ನು ವಿರೋಧಿಸಿ ಸ್ವಾತಂತ್ರ್ಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿದೇಶೀ ವಸ್ತುಗಳ ದಹನ(ಹೋಳಿ) ನಡೆಸಿದರು ಸಾವರ್ಕರ್. ತತ್ಪರಿಣಾಮ ಸಿಕ್ಕಿದ್ದು ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯದ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ ಎಂಬ ಶ್ರೇಯ! ಅಷ್ಟರಲ್ಲೇ ಸಾವರ್ಕರ್ ಬರೆದ ಕವನ, ಲಾವಣಿಗಳು ಮನೆ ಮನೆಯಲ್ಲಿ ನಿತ್ಯಗಾಯನಗಳಾಗಿದ್ದವು. ಅವರ ಲೇಖನಗಳನ್ನೋದಲು ಜನ ಕಾತರಿಸುತ್ತಿದ್ದರು. ಅವರ ವಾಗ್ವೈಭವಕ್ಕೆ ಮರುಳಾಗುತ್ತಿದ್ದರು. ಯುವಕರು ಅವರ ಮಾತು, ವೈಖರಿಗಳಿಂದ ಪ್ರಭಾವಿತರಾಗಿ ಅಭಿನವ ಭಾರತ ಸೇರುತ್ತಿದ್ದರು. ಭವ್ಯ ಭಾರತದ ಭಾವೀ ಸೂರ್ಯ ಮಹಾರಾಷ್ಟ್ರದ ಮನೆಯಂಗಳದಲ್ಲಿ ಉದಯಿಸುತ್ತಿದ್ದ! ಅಷ್ಟರಲ್ಲಾಗಲೇ ಲಂಡನ್ನಿನ ಭಾರತ ಭವನದ ಶ್ಯಾಮಜೀ ಕೃಷ್ಣವರ್ಮರ "ಶಿವಾಜಿ ವಿದ್ಯಾರ್ಥಿ ವೇತನ" ಅರಸಿ ಬಂದಿತ್ತು. ಸಿಂಹದ ಗುಹೆಗೆ ನರಸಿಂಹನ ಆಗಮನ!

                  ೧೮೫೭ರಲ್ಲಿ ನಡೆದದ್ದು ದಂಗೆಯಲ್ಲ; ಆಂಗ್ಲರನ್ನು ಒದ್ದೋಡಿಸುವ ಸಲುವಾಗಿ ನಡೆದ ಮಹಾಸಂಗ್ರಾಮ ಎಂದು ಹೇಳಿ ಸಾಕ್ಷಿ ಸಮೇತ ರಚಿಸಿದ "೧೮೫೭ರ ಮಹಾಸಂಗ್ರಾಮ" ಬ್ರಿಟಿಷರ ಢವಗುಟ್ಟಿಸಿ, ಪ್ರಕಟಣೆಗೆ ಮೊದಲೇ ಎರಡೆರಡು ದೇಶಗಳಲ್ಲಿ ನಿಷೇಧಕ್ಕೊಳಪಟ್ಟರೂ ಲಕ್ಷ ಲಕ್ಷ ಸ್ವಾತಂತ್ರ್ಯ ಯೋಧರಿಗೆ ಭಗವದ್ಗೀತೆಯಾಯಿತು. ಶೋಕಿಲಾಲ ಧಿಂಗ್ರಾ ದೀಕ್ಷೆ ಪಡೆದ. ಕರ್ಜನ್ ವಾಯಿಲಿಯ ವಧೆಯಾಯಿತು. ಸ್ವಾತಂತ್ರ್ಯದ ಪ್ರಯತ್ನಕ್ಕಾಗಿ ಸಾವರ್ಕರರಿಗೆ ಸಿಕ್ಕಿದ್ದು ಎರಡೆರಡು ಜೀವಾವಧಿ(ಕರಿನೀರ) ಶಿಕ್ಷೆ. ಜೊತೆಗೆ ಬಿಎ, ಬ್ಯಾರಿಸ್ಟರ್ ಪದವಿಗಳ ನಿರಾಕರಣೆ. 1910 ಜುಲೈ 8ರಂದು ನಡೆದದ್ದು ಇತಿಹಾಸ ಹಿಂದೆಂದೂ ಕಂಡಿರದ ಅದ್ಭುತ ಸಾಗರ ಸಾಹಸ. ತನ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಹಡಗು ಮಾರ್ಸಿಲೆಸ್ ತಲುಪಿದಾಗ ಶರೀರಬಾಧೆಯ ನೆಪದಲ್ಲಿ ಶೌಚಾಲಯ ಹೊಕ್ಕವರು ಯೋಗಬಲದಿಂದ ಶರೀರವನ್ನು ಸಂಕುಚಿಸಿ ಸಣ್ಣಕಿಂಡಿಯ ಮೂಲಕ ಸಮುದ್ರಕ್ಕೆ ಧುಮುಕಿ ಗುಂಡಿನ ದಾಳಿಯ ಮಧ್ಯೆ ಈಜಿ ದಡ ಸೇರಿದರು. ಆದರೆ ಲಂಚದಾಸೆಗೆ ಬಲಿಯಾದ ಪ್ರೆಂಚ್ ಸಿಬ್ಬಂದಿಯಿಂದಾಗಿ ಮತ್ತೆ ಬಂಧಿಸಲ್ಪಟ್ಟರು. ಮುಂದೆ ಅಂಡಮಾನ್! ಕೇಳಿದರೇ ಮೈಜುಮ್ಮೆನಿಸುವ ಕರಿನೀರ ಶಿಕ್ಷೆ! ಆದರೇನು ಅಲ್ಲಿನ ಕತ್ತಲೆಕೋಣೆಯಲ್ಲಿ ಮೊಳೆಯಿಂದ ೧೦ ಸಾವಿರ ಸಾಲಿನ ಕಾವ್ಯ ರಾಶಿಯನ್ನು ಗೋಡೆಯ ಮೇಲೆ ಮೂಡಿಸಿ ತನ್ನ ಕಾವ್ಯರಸದಿಂದ ತಾಯಿ ಭಾರತಿಗೆ ಅಭಿಷೇಕಗೈದರು. ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಾಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ಧಿ ಚಳವಳಿ ನಡೆಸಿದರು. ತನ್ನನ್ನೂ ಇತರರಿಂದ ಪ್ರತ್ಯೇಕವಾಗಿ ಇರಿಸಿದಾಗ್ಯೂ ಕೈದಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿ ಜೈಲಿನಲ್ಲಿ ಸಮಗ್ರ ಸುಧಾರಣೆ ತಂದರು.

                ಸಾವರ್ಕರ್ ಕ್ಷಮಾಪಣೆ ಕೇಳಿದ್ದರು ಎಂದು ಸೆಕ್ಯುಲರುಗಳು ಬೊಬ್ಬಿಡುತ್ತಾರೆ. ಒಂದಲ್ಲ ಮೂರುಬಾರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು ಸಾವರ್ಕರ್. ಅಸಲಿಗೆ ಅದು ಕ್ಷಮಾಪಣೆಯೇ ಅಲ್ಲ. "ಇನ್ನು ಮುಂದೆ ಸಶಸ್ತ್ರ ಕ್ರಾಂತಿ ಮಾಡುವುದಿಲ್ಲ, ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ" ಎಂಬ ಮುಚ್ಚಳಿಕೆ ಅಷ್ಟೇ. ಸಾವರ್ಕರ್ ಮಾತ್ರವಲ್ಲ, ಭಾಯಿ ಪರಮಾನಂದ್ ಮುಂತಾದ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಹಲವು ಕ್ರಾಂತಿಕಾರಿಗಳು ಈ ರೀತಿಯ ಒಪ್ಪಂದ ಪತ್ರ ಬರೆದು ಶಿಕ್ಷೆಯಿಂದ ಬಿಡುಗಡೆ ಹೊಂದಿದ್ದರು. ಬ್ರಿಟಿಷರಿಂದ ಡಿ (ಅಂದರೆ ಡೇಂಜರಸ್) ಎಂದು ಬರೆಸಲ್ಪಟ್ಟ ಖೈದಿ ಭಿಲ್ಲೆ ಪಡೆದ ಸಾವರ್ಕರ್ ಕ್ಷಮೆ ಕೇಳುವುದೆಂದರೆ ಅದರ ಹಿಂದೆ ಮತ್ತಿನ್ಯಾವುದೋ ತಂತ್ರ ಇದೆ ಎಂದು ಬ್ರಿಟಿಷರಿಗೂ ತಿಳಿದಿತ್ತು. ಅದಕ್ಕಾಗಿ 1937ರವರೆಗೆ ರತ್ನಗಿರಿ ಬಿಟ್ಟು ಹೊರಹೋಗದಂತೆ ಸ್ಥಾನ ನಿರ್ಬಂಧ, ಜೊತೆಗೆ ಪೊಲೀಸ್ ಕಾವಲು, ಸುತ್ತ ಬೇಹುಗಾರರನ್ನು ಬಿಟ್ಟು ಅವರ ಬಿಡುಗಡೆ ಮಾಡಲಾಗಿತ್ತು. ಬ್ರಿಟಿಷರಿಗೆ ತಿಳಿದ ಸತ್ಯ ಕಾಂಗ್ರೆಸ್ಸಿಗರಿಗೆ ತಿಳಿದಿಲ್ಲ ಎಂದೇನಲ್ಲ. ಎಲ್ಲಿ ಸಾವರ್ಕರ್ ಜನಮನವನ್ನು ಆವರಿಸಿ ತಮ್ಮ ಕುಕೃತ್ಯಗಳು ಹೊರಬೀಳುತ್ತದೆ ಎನ್ನುವ ಭಯ ಅಷ್ಟೇ! ಬಿಡುಗಡೆ ಆದ ಬಳಿಕವೂ ಸಾವರ್ಕರ್ ಸುಮ್ಮನಿರಲಿಲ್ಲ. ಅಸಂಖ್ಯ ಕ್ರಾಂತಿ ವೀರರಿಗೆ ಮಾರ್ಗದರ್ಶಕರಾದರು. ಅಸ್ಪೃಶ್ಯತೆ ಮೊದಲಾದ ಪಿಡುಗುಗಳನ್ನು ತೊಡೆದು ಹಾಕುವ ಸಾಮಾಜಿಕ ಸುಧಾರಕರಾದರು. ಸುಭಾಷರಿಗೆ ದೇಶದಿಂದ ಹೊರಹೋಗಿ ಸೈನ್ಯ ಕಟ್ಟುವಂತೆ, ರಾಸ್ ಬಿಹಾರಿ ಬೋಸರನ್ನು ಸಂಪರ್ಕಿಸುವಂತೆ ಉಪಾಯ ಹೇಳಿಕೊಟ್ಟಿದ್ದು ಸಾವರ್ಕರ್ ಅವರೇ.

"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"
ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್.

                 ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ನೇರವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದು ಸಾವರ್ಕರ್ ಪ್ರತಿಪಾದನೆಯಾಗಿತ್ತು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ಅವರ ಹಿಂದುತ್ವದ ವ್ಯಾಖ್ಯೆ ಅವೈದಿಕ ಮತಗಳನ್ನು ಹಿಂದೂ ಜನಾಂಗದಲ್ಲಿ ಸೇರಿಸಿಕೊಂಡರೂ ಅದು ಹಿಂದೂ ಯಾರೆಂಬ ಪ್ರಾಚೀನ ವ್ಯಾಖ್ಯೆಗೇನೂ ಧಕ್ಕೆ ಎಸಗಿಲ್ಲ. ವೇದಗಳಲ್ಲಿ ಉಲ್ಲೇಖಿತವಾದ ರಾಷ್ಟ್ರ-ರಾಷ್ಟ್ರೀಯತೆಯ ವ್ಯಾಖ್ಯೆಯೂ ಸಾವರ್ಕರ್ ರಾಷ್ಟ್ರೀಯತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೊಟ್ಟ ಹಿಂದುತ್ವದ ವ್ಯಾಖ್ಯೆಯೂ ಏಕರೂಪದವು. ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಬೇರೆಯಲ್ಲ. ಸಾವರ್ಕರರ ವ್ಯಾಖ್ಯೆ ಈ ದೇಶವನ್ನು "ರಾಷ್ಟ್ರ"ವಾಗಿ ಸ್ವೀಕರಿಸದ ಪ್ರತಿಯೊಬ್ಬರನ್ನೂ ಹಿಂದುತ್ವದಿಂದ ಪ್ರತ್ಯೇಕಿಸಿತು. ಈ ಅಂಶವನ್ನು "ಸಾವರ್ಕರರದ್ದೂ ಒಂದು ರೀತಿಯ ದ್ವಿರಾಷ್ಟ್ರ ಸಿದ್ಧಾಂತ. ಇದರಿಂದ ದೇಶದೊಳಗೇ ಹಿಂದೂ- ಮುಸ್ಲಿಂ ಎನ್ನುವ ಎರಡು ದೇಶಗಳನ್ನು ನಿರ್ಮಿಸುವ ಅಪಾಯವಿದೆ" ಎಂದು ವಿಶ್ಲೇಷಿಸಿದ ಅಂಬೇಡ್ಕರ್ ಆಗಲೀ ಅವರನ್ನೇ ಆಧಾರವಿರಿಸಿದ ಇನ್ನುಳಿದವರಾಗಲೀ ಗಮನಿಸದೇ ಹೋದರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ.

                    ಸಾವರ್ಕರ್ ಸೆಮೆಟಿಕ್ ಮತಗಳನ್ನು ಹೊರಗಿಟ್ಟುದುದಕ್ಕೆ ಕಾರಣವಿಲ್ಲದೆ ಇಲ್ಲ. ಈ ಮತಾವಲಂಬಿಗಳು ಎಂದಿಗೂ ಭಾರತವನ್ನು ತಮ್ಮ ಮಾತೃಭೂಮಿಯೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಲಾರರು. ಅವರಿಗೆ ದೇಶಕ್ಕಿಂತ ತಮ್ಮ ಮತವೇ ಶ್ರೇಷ್ಠ. ರಾಷ್ಟ್ರ ಎನ್ನುವ ಪರಿಕಲ್ಪನೆಯೇ ಅವರಿಗಿಲ್ಲ. ಹಾಗಾಗಿ "ಭಾರತ"ದಲ್ಲಿ ಅವರ ಸ್ಥಾನ ಎಂದಿಗೂ ಹೊರಗಿನವರದ್ದೇ! ಜಿನ್ನಾ, ಇಕ್ಬಾಲ್ ಮುಸ್ಲಿಂ ಲೀಗನ್ನು ಬಳಸಿಕೊಂಡು ಮುಸ್ಲಿಮರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ನೇರ ಕಾರ್ಯಾಚರಣೆಗೆ ಇಳಿದಾಗ ಅವರನ್ನು ಖಂಡತುಂಡವಾಗಿ ವಿರೋಧಿಸಿದರು ಸಾವರ್ಕರ್. ಬಹುಷಃ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತದ ಸಂವಿಧಾನದಲ್ಲಿ ಸೆಮೆಟಿಕ್ ಮತಾನುಯಾಯಿಗಳಿಗಿಂತಲೂ ಹಿಂದೂಗಳಿಗೇ ಪ್ರಧಾನ ಸ್ಥಾನಮಾನವಿರಬೇಕೆಂದು ಗಟ್ಟಿಸ್ವರದಲ್ಲಿ ಪ್ರತಿಪಾದಿಸಿದ ರಾಜಕೀಯ ನಾಯಕ ಸಾವರ್ಕರ್ ಒಬ್ಬರೇ! ಬೆರಳು ತೋರಿಸಿದರೆ ಹಸ್ತ ನುಂಗುವ ಮುಸ್ಲಿಮರು, ಕ್ರೈಸ್ತರ ಮನೋವೃತ್ತಿಯನ್ನು ಸಾವರ್ಕರ್ ಅರ್ಥಮಾಡಿಕೊಂಡಷ್ಟು ನಿಖರವಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಹಾಗಾಗಿಯೇ ಭಾರತ ರಾಷ್ಟ್ರವಾಗಿ ಉಳಿಯಬೇಕಾದರೆ ಹಿಂದೂಗಳಿಗೇ ಪ್ರಧಾನ ಸ್ಥಾನಮಾನ ನೀಡಬೇಕೆಂದು ಸಾವರ್ಕರ್ ಪ್ರತಿಪಾದಿಸಿದರು.  "ನೀವು ಬಂದರೆ ನಿಮ್ಮ ಜೊತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಎದುರಿಸಿ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ ಎಂದ ಸಾವರ್ಕರ್ ಮಾತನ್ನು ಉಳಿದ ನಾಯಕರು ಅನುಕರಿಸಿದ್ದರೆ ಭಾರತಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಹಿಂದೂಗಳಿಗೆ ಭಾರತದ ಸಂವಿಧಾನದಲ್ಲಿ ಪರಮಾಧಿಕಾರ ನೀಡಬೇಕೆಂದು ಪ್ರತಿಪಾದಿಸಿದಾಗ, ಅಂಬೇಡ್ಕರ್ ಇದರಿಂದ ಬಹುಸಂಖ್ಯಾತರು ತಮ್ಮ ಭಾಷೆ, ಧರ್ಮ, ಸಂಸ್ಕೃತಿಯನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಅಪಾಯವಿರುತ್ತದೆ ಎಂದಿದ್ದರು. ಆದರೆ ಸಹಸ್ರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿಲ್ಲ, ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ಅಧಿಕಾರ ಚಲಾಯಿಸಿಲ್ಲ, ಅದು ಹಿಂದೂ ಮನೋಭೂಮಿಕೆಯಲ್ಲಿಯೇ ಇಲ್ಲ ಎನ್ನುವುದನ್ನು ಮರೆತರು ಅಂಬೇಡ್ಕರ್. ಮುಸ್ಲಿಮ, ಕ್ರೈಸ್ತರ ಕೈಗೆ ಅಧಿಕಾರ ಸಿಕ್ಕರೆ ಕೆಲವೇ ಸಮಯದಲ್ಲಿ ಅವರು ದೇಶವನ್ನು ಕುಟಿಲತೆಯಿಂದ ಒಡೆಯುವ ಅಪಾಯವನ್ನು ಸಾವರ್ಕರ್ ಮನಗಂಡಿದ್ದರು. ಅಲ್ಲದೆ ಮೀಸಲಾತಿಯಂತಹ ಸೌಲಭ್ಯಗಳನ್ನು ಈ ಜನಾಂಗಕ್ಕೆ ಕೊಟ್ಟುದುದರಿಂದ ಇಂದು ಉಂಟಾಗಿರುವ ಅನರ್ಥವನ್ನೂ, ರಾಜಕಾರಣಿಗಳ ಸೆಕ್ಯುಲರ್-ಮತಬ್ಯಾಂಕ್ ರಾಜಕಾರಣವನ್ನೂ, ಹಿಂದೂಗಳನ್ನು ಎರಡನೆ ದರ್ಜೆಯನ್ನಾಗಿಸಿರುವ ಅವರ ಕುತಂತ್ರವನ್ನು ಸಾವರ್ಕರ್ ಅಂದೇ ಅರ್ಥೈಸಿಕೊಂಡಿದ್ದರೆನಿಸುತ್ತದೆ.

            "ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ. ನೀವು ಬಲವಾಗಿದ್ದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕ್ರುಶ್ಚೇವ್ ಬೂಟು ತೋರಿಸಿದಂತೆ ನೀವೂ ತೋರಿಸಬಹುದು. ಆದರೆ ನೀವು ದುರ್ಬಲರಾಗಿದ್ದರೆ ನಿಮ್ಮ ಹಣೆಬರಹ ಶಕ್ತಿಯುತ ಆಕ್ರಮಣಕಾರಿಯ ಕೈಯಲ್ಲಿರುತ್ತದೆ" ಎಂದಿದ್ದ ಅವರು ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇದು ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ."

                    ಸಾವರ್ಕರರ ಹಿಂದುತ್ವದ ಚಿಂತನೆ ಕೇವಲ ಮುಸಲ್ಮಾನ ಮಾನಸಿಕತೆಗೆ ಪ್ರತಿಕ್ರಿಯೆಯಲ್ಲ. ಅದು ಈ ದೇಶ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ವೇದೋಲ್ಲೇಖಿತ ಚಿಂತನೆಯೂ ಹೌದು. ಭಾರತೀಯ ದೃಷ್ಠಿಯಿಂದ ನೋಡದೆ ಸೆಕ್ಯುಲರ್ ದೃಷ್ಠಿಯಿಂದ ನೋಡುವವರಿಗೆ ಹಿಂದೂಗಳು ಹಾಗೂ ಹಿಂದೂಯೇತರರು ತಂತಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿಕೊಂಡು ಒಂದೇ ದೇಶದೊಳಗೆ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಬಾಳಬೇಕೆಂಬುದು ಸಾವರ್ಕರ್ ಪ್ರತಿಪಾದನೆ ಅಂತನ್ನಿಸಬಹುದು. ಪ್ರಧಾನ ಜನಾಂಗಕ್ಕೆ ಪರಮಾಧಿಕಾರ ಕೊಡುವುದರಿಂದ ಎರಡು ಜನಾಂಗಗಳು ಪರಸ್ಪರ ಪ್ರೀತಿ ಗೌರವದಿಂದ, ಹೊಂದಾಣಿಕೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಆಲೋಚಿಸುವ ಸೆಕ್ಯುಲರ್ ಚಿಂತಕರಿಗೆ ಅಲ್ಪ ಸಂಖ್ಯಾತ ಜನಾಂಗಕ್ಕೆ ಸಮಾನ ಅಥವಾ ಹೆಚ್ಚಿನ ಅಧಿಕಾರ ಕೊಟ್ಟ ಬಳಿಕವೂ ಆ ಜನಾಂಗಗಳು ಹಿಂದೂಗಳೊಟ್ಟಿಗೆ ಹೊಂದಾಣಿಕೆಯಿಂದ ಬದುಕಿಲ್ಲ/ಬದುಕುತ್ತಿಲ್ಲ ಎನ್ನುವುದು ಮರೆತು ಹೋಗಿದೆ. ಗಾಂಧಿ ಅಂತಾರಾಷ್ಟ್ರೀಯ ಸಮಸ್ಯೆಯನ್ನು(ಖಿಲಾಫತ್ ಚಳುವಳಿ)  ಸ್ವಾತಂತ್ರ್ಯ ಚಳುವಳಿಗೆ ವೃಥಾ ತಳುಕು ಹಾಕಲು ಯತ್ನಿಸಿದರು. ಮುಸ್ಲಿಮರನ್ನು ಓಲೈಸಿ ಹಿಂದೂ ಮುಸ್ಲಿಂ ಐಕ್ಯ ಸಾಧಿಸಲು ಮೂರ್ಖ ಪ್ರಯತ್ನ ನಡೆಸಿಯೂ ಮುಸ್ಲಿಮರ ಕಣ್ಣಲ್ಲಿ ಕಾಫಿರರಾಗಿಯೇ ಉಳಿದರು. ಇನ್ನು ಉಳಿದ ನಾಯಕರ ಪಾಡೇನು? ಕ್ರಿಸ್ತನ ಚಂತನೆಯನ್ನು ಗಾಂಧಿ ಹಿಂದೂ ಧರ್ಮಕ್ಕೆ ಎರವಲು ತಂದು ಅಹಿಂಸೆಯ ನಾಟಕವಾಡಿದರೆ, ಸಾವರ್ಕರ್ ಕಾಯಾ ವಾಚಾ ಮನಸಾ "ಅಹಿಂಸಾ ಪರಮೋ ಧರ್ಮ, ಧರ್ಮ ಹಿಂಸಾ ತಥೈವಚಾ" ಎಂದು ಆಚರಿಸಿದರು. ವಿಪರ್ಯಾಸ ಹಾಗೂ ವಿಷಾದವೆಂದರೆ ಭಾರತದ ರಾಜಕಾರಣ ಸಾವರ್ಕರರ ಸನಾತನ ಚಿಂತನೆಯನ್ನು ಅನುಸರಿಸುವ ಬದಲು ಗಾಂಧಿಯ ಸೆಕ್ಯುಲರ್, ನಾಟಕದ, ಸ್ವಜನಪಕ್ಷಪಾತದ, ಸ್ವಹಿತದ ರಾಜಕಾರಣವನ್ನು ತನ್ನದಾಗಿಸಿಕೊಂಡಿತು.

                      ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಮೊಟ್ಟಮೊದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ರತ್ನಗಿರಿಯ ಪತಿತ ಪಾವನ ಮಂದಿರದ ಮೂಲಕ ಅವರಿಗೆ ದೇವಾಲಯ ಪ್ರವೇಶ ಕಲ್ಪಿಸಿದ ಸಮಾಜ ಸುಧಾರಕನಾತ. ಆತ ಕೇವಲ ಕ್ರಾಂತಿಕಾರಿಯಲ್ಲ. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕನೂ ಹೌದು. ಹೌದು. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡಿ ಚೈತನ್ಯ ತುಂಬುವ ಹೆಸರೇ "ವೀರ ಸಾವರ್ಕರ್". ವೀರ ಸಾವರ್ಕರ್ ಅಂದಾಕ್ಷಣ ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಅದು  ಹಿಮಾಲಯದೆತ್ತರದ ವ್ಯಕ್ತಿತ್ವ. ದಶದಿಕ್ಕುಗಳಿಗೂ ಹರಿದ ಅಪಾರ ಪ್ರತಿಭೆಯನ್ನು, ವಿದ್ವತ್ತನ್ನು ದೇಶಕ್ಕಾಗಿ ಮಾತ್ರ ವಿನಿಯೋಗಿಸಿದ ಅನುಪಮ ಸತ್ವ. ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಭವ್ಯ ಭಾರತದ ಮುಕುಟಮಣಿ!

                        ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಬಗೆಗೆ ಅಧ್ಯಯನ ಮಾಡಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

                      ಈಗ ಸಾವರ್ಕರರಿಗೆ ಭಾರತ ರತ್ನ ಕೊಡುತ್ತೇವೆಂದು ಭಾಜಪಾ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇ ತಡ, ರಾಷ್ಟ್ರೀಯತೆಯ ವಿರೋಧಿಗಳೆಲ್ಲರ ರೋಮ ನೆಟ್ಟಗಾಗಿದೆ. ಸಾವರ್ಕರ್ ಎಂಬ ಹೆಸರನ್ನೂ ಕೇಳಿದಾಕ್ಷಣ ಬ್ರಿಟಿಷರು ಮಾತ್ರವಲ್ಲ, ಅಂದಿನ ಕಾಂಗ್ರೆಸ್ಸರ ಎದೆಯಲ್ಲೂ ಅವಲಕ್ಕಿ ಕುಟ್ಟುತ್ತಿತ್ತು. ಇಂದಿನ ಕಾಂಗ್ರೆಸ್ಸಿಗರ ಎದೆಯಲ್ಲೂ! ಭ್ರಷ್ಟಾಚಾರಿಗಳ ಗುರುಗಳು, ಸಮಾಜವನ್ನು ಅಹಿಂದ ಎನ್ನುತ್ತಾ ಜಾತಿ ಆಧಾರದಲ್ಲಿ ಒಡೆದವರು, ಮತಾಂಧನೂ, ಕ್ರೂರಿಯೂ ಆದ ಟಿಪ್ಪು ಎಂಬ ನರಹಂತಕನನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತಾ ಅವನ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸ ಹೊರಟ ಇತಿಹಾಸ ಗೊತ್ತಿಲ್ಲದ ಗೋಸುಂಬೆಗಳು ವೀರ ಸಾವರ್ಕರ್ ಎಂಬ ಪುಣ್ಯಪುರುಷನನ್ನು, ತ್ಯಾಗಮೂರ್ತಿಯನ್ನು ಜರೆಯುತ್ತಿದ್ದಾರೆ. ಪ್ರಿನ್ಸ್ ಆಗಾ ಖಾನನ ಅರಮನೆಯಲ್ಲಿ ಮಲಗಿದ್ದನ್ನೇ ಜೈಲುವಾಸ ಎಂದು ತಿಳಿದ ಗುಲಾಮರಿಗೆ ಕರಿನೀರ ಶಿಕ್ಷೆ ಅರ್ಥವಾಗುವುದಾದರೂ ಹೇಗೆ? ನಾಚಿಕೆ, ಮಾನ, ಮರ್ಯಾದೆ ಬಿಟ್ಟ ರಾಜಕಾರಣಿಗಳೇ; ತನ್ನಿಡೀ ಪ್ರತಿಭೆ, ಜೀವ, ಜೀವನವನ್ನು, ತನ್ನ ಸಂಸಾರ, ಬಂಧುಬಳಗ, ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಎಲ್ಲವನ್ನೂ ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯಾಗಿ ಅರ್ಪಿಸಿದ ತ್ಯಾಗಮೂರ್ತಿಯನ್ನು ನಿಂದಿಸುವ ಮುನ್ನ ಯೋಚಿಸಿ. ನೀವಿವತ್ತು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಾ, ರಾಜಕೀಯ ಸ್ಥಾನಮಾನಗಳನ್ನು ಗಳಿಸುತ್ತಾ ಈ ದೇಶದಲ್ಲಿ ನೆಮ್ಮದಿಯಾಗಿ ಇದ್ದೀರಿ ಎಂದರೆ ಅದಕ್ಕೆ ಕಾರಣರು ಅವರು. ಅವರ ಋಣ ನಿಮ್ಮ ಮೇಲಿದೆ.

ನಾಡಹಬ್ಬ; ಎಲ್ಲರನೂ, ಎಲ್ಲವನೂ ಒಳಗೊಳ್ಳುವ ಸಾಂಸ್ಕೃತಿಕ ಪರಂಪರೆ ದಸರಾ

ನಾಡಹಬ್ಬ; ಎಲ್ಲರನೂ, ಎಲ್ಲವನೂ ಒಳಗೊಳ್ಳುವ ಸಾಂಸ್ಕೃತಿಕ ಪರಂಪರೆ ದಸರಾ


             ಎಂಟು ಮೀಟರ್ ಎತ್ತರದ, ಮೇಲೆ 23 ಚದರ ಮೀಟರ್ ವಿಸ್ತೀರ್ಣವುಳ್ಳ ಬೃಹದಾಕಾರದ ದಿಬ್ಬವೊಂದರ ಮೇಲೆ ಕುಳಿತು ರಾಜ ವಿಜೃಂಭಣೆ, ಸಂಭ್ರಮ ಸಡಗರಗಳಿಂದ ನಡೆಯುತ್ತಿರುವ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾನೆ. ವಿವಿಧ ರಾಜ್ಯಗಳ ರಾಜಾಧಿರಾಜರು, ಮಹಾಸೇನಾನಿಗಳು ಅದರ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಬೆರಗಾಗುತ್ತಿದ್ದಾರೆ. ಅಲ್ಲಿ ಸೇನೆಯ ಕವಾಯತು ನಡೆಯುತ್ತಿದೆ; ಗಾನ-ನಾಟ್ಯ ವೈಭವಗಳಿವೆ; ರಾಜ ಮೊಗೆ ಮೊಗೆದು ತನ್ನ ಸೈನಿಕ, ಸೇವಕರಿಗೆ ಉಡುಗೊರೆಗಳನ್ನು ಕೊಡುತ್ತಿದ್ದಾನೆ; ಜನ ಈ ವೈಭವವನ್ನು ನೋಡಲು ಎರಡು ಕಣ್ಣು ಸಾಲದು ಎನ್ನುತ್ತಿದ್ದಾರೆ; ಅಲ್ಲಿ ರಾಜ್ಯದ ಶಕ್ತಿ, ಸಂಸ್ಕೃತಿ, ಸಂಪತ್ತು, ಸಾಧನೆಗಳನ್ನು ಜಗತ್ತಿನೆದುರುಗಡೆ ತೆರೆದಿಡಲಾಗುತ್ತಿದೆ. ಇಂತಹಾ ರಾಜ್ಯ ಈ ಜಗತ್ತಿನಲ್ಲಿ ಯಾವುದಿದ್ದೀತು? ಯಾವ ರಾಜ್ಯದಲ್ಲಿ ಬೀದಿ ಬೀದಿಗಳಲ್ಲಿ ಚಿನ್ನವನ್ನು ಮಾರಲಾಗುತ್ತಿತ್ತೋ ಅಂತಹಾ ವಿಜಯನಗರ ಸಾಮ್ರಾಜ್ಯವಲ್ಲದೆ ಮತ್ಯಾವುದಿದ್ದೀತು? ಹೌದು, ಒರಿಸ್ಸಾದ ಗಜಪತಿಯ ಗರ್ವಭಂಗ ಮಾಡಿದ ನೆನಪಿಗಾಗಿ ಶ್ರೀಕೃಷ್ಣದೇವರಾಯನಿಂದ ಕಟ್ಟಲ್ಪಟ್ಟಿತ್ತು ಆ "ಮಹಾನವಮಿ ದಿಬ್ಬ". ರಾಯಚೂರು ವಿಜಯದ ಬಳಿಕವಂತೂ ಮಹಾನವಮಿ ಉತ್ಸವದ ವೈಭವ ಗಗನಕ್ಕೇರಿತ್ತು.

                ವಿಜಯನಗರದ ರಾಯರು ಮಹಾನವಮಿ ಉತ್ಸವವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದರು. ಅದಕ್ಕೊಂದು ಭವ್ಯ ರೂಪ ಕೊಟ್ಟವ ಕೃಷ್ಣರಾಯ. ಉತ್ಸವದ ವಿಜೃಂಭಣೆಗೆ ಕೇವಲ ಸಾಲು ಸಾಲು ಗೆಲುವುಗಳು ಕಾರಣವಾಗಿರಲಿಲ್ಲ. ಅದರ ಹಿಂದೆ ಜಾತಿ, ಮತ, ತತ್ತ್ವಗಳ ವೈರುಧ್ಯಗಳನ್ನು ಪಕ್ಕಕ್ಕಿರಿಸಿ ನಾವೆಲ್ಲಾ ಒಂದು ಎಂಬ ಭಾವನೆಯನ್ನು ಹಿಂದೂಗಳಲ್ಲಿ ತುಂಬಿ ಜನತೆಯನ್ನು ಸಂಘಟಿಸುವುದು ರಾಯನ ದೂರದೃಷ್ಟಿಯ ಘನ ಉದ್ದೇಶವಿತ್ತು. ಮಹಾನವಮಿ ಉತ್ಸವವನ್ನು ವೈಭವದಿಂದ ಆಚರಿಸಿ, ವಿಜಯನಗರದ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿನೆದುರು ತೆರೆದಿಟ್ಟು ಮತ್ತೆಂದೂ ಆಕ್ರಮಣಕಾರರು ವಿಜಯನಗರದ ಕಡೆಗೆ ಕಣ್ಣೆತ್ತಿ ನೋಡದಂತಹಾ ಒಗ್ಗಟ್ಟನ್ನು, ಸಾಮರ್ಥ್ಯವನ್ನು ಜಗತ್ತಿಗೆ ಅವನು ತೋರಿಸಿಕೊಡಬೇಕಿತ್ತು. ರಂಗೋಲಿ, ಚಿತ್ತಾರ, ಅಲಂಕಾರ, ಪೂಜೆ, ಹವನ, ನಾಟ್ಯ, ಗಾಯನ, ಅಂಬಾರಿಯೊಂದಿಗೆ ರಾಯನನ್ನು ಹೊತ್ತ ಆನೆಯ ಗಂಭೀರ ನಡೆ, ಗೊಂಬೆಯಾಟ ಆದಿಯಾಗಿ ವಿವಿಧ ಪ್ರದರ್ಶನಗಳು, ಆಟಗಳು, ಇಂದ್ರಜಾಲಾದಿಗಳು, ಕುಸ್ತಿ, ಕವಾಯತುಗಳು, ಶಸ್ತ್ರಪೂಜೆ, ಗೋಪೂಜೆ ಹೀಗೆ ಆರಂಭವಾದ ಉತ್ಸವದ ವೈಭವದಲ್ಲಿ ತೇಲಿಹೋದ ಜನತೆ, ಯೋಧರು ಹಬ್ಬದ ಹೆಸರಿನಲ್ಲಿ ಒಟ್ಟಾಗಿದ್ದಲ್ಲದೇ ತಮಗರಿವಿಲ್ಲದಂತೆ ತಮ್ಮೊಳಗಿನ, ತಮ್ಮ ನಡುವಣ ವಿಶ್ವಾಸವನ್ನು ವೃದ್ಧಿಸಿಕೊಳ್ಳುತ್ತಿದ್ದರು. ಸ್ವತಃ ರಾಯ ಮಹಾನವಮಿ ದಿಬ್ಬದ ಮೇಲೆ ಕುಳಿತು ಗಜ ಪಡೆ, ಅಶ್ವ ಪಡೆ, ಸೈನ್ಯದ ಕವಾಯತುಗಳು, ಪಿರಂಗಿಗಳು ಮತ್ತು ಆಯುಧಗಳ ಶಕ್ತಿ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ. ವಿವಿಧ ರಾಜ್ಯಗಳ ರಾಜ ಮಹಾರಾಜರುಗಳು, ಸಾಮಂತರು, ಮಂತ್ರಿಗಳು, ಸೇನಾಧಿಪತಿಗಳು, ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಿ ವಿಜಯನಗರದ ಈ ಶಕ್ತಿ, ಸಾಮರ್ಥ್ಯ, ಸೇನಾಬಲ, ಸಂಸ್ಕೃತಿ, ಪರಂಪರೆ, ಶೌರ್ಯ, ಸಾಧನೆ, ಸಂಪತ್ತು, ವೈಭವಗಳನ್ನು ನೋಡಿ ಬೆರಗಾಗುತ್ತಿದ್ದರು. 11ನೇ ಶತಮಾನದಲ್ಲೇ ವಿದೇಶಿ ಪ್ರವಾಸಿಗ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ದಸರಾ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
ವಿಜಯನಗರದ ಸಾಮಂತರಾಗಿ ಶ್ರೀರಂಗಪಟ್ಟಣದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದವರು ಯದುರಾಯ, ಕೃಷ್ಣರಾಯ ಸಹೋದರರು(ಕ್ರಿ.ಶ. 1399). ಕ್ರಿ.ಶ 1610ರಲ್ಲಿ ಒಂದನೇ ರಾಜಒಡೆಯರು ವಿಜಯನಗರದ ರಾಜಪರಂಪರೆಯಂತೆ ಮಹಾನವಮಿ ಉತ್ಸವವನ್ನು ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿ ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ಹಾಗೆ ಪ್ರಾರಂಭಗೊಂಡ ದಸರಾ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಶ್ವ ಮನ್ನಣೆಗಳಿಸಿ, ವಿದೇಶಿಯರನ್ನು ಆಕರ್ಷಿಸಿತು. ಮೈಸೂರಿಗರ ಜನ ಜೀವನದ ಭಾಗವಾಗಿ, ಭಾವೈಕ್ಯತೆಯನು ಬೆಸೆಯುವ ಸಂಕೇತದ ಹಬ್ಬವಾಯಿತು. ಅರಸರ ಘೋಷಣೆಯಂತೆಯೇ ಕರ್ನಾಟಕದ ನಾಡಹಬ್ಬವೆನಿಸಿತು.

                  ದಸರಾ ಸಂಭ್ರಮ ಮೈಸೂರಿನಲ್ಲಿ ಎರಡು ತಿಂಗಳ ಮುಂಚೆಯೇ ಗರಿಗೆದರಿಕೊಳ್ಳುತ್ತದೆ. ಆನೆಗಳು ಕಾಡಿನಿಂದ ಬಂದು ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡುತ್ತವೆ. ಆನೆಗಳ ಆರೈಕೆಗೆ ಮಾವುತ, ಕಾವಾಡಿಗ ಕುಟುಂಬವೂ ಬರುತ್ತದೆ. ರಸ್ತೆಗಳೆಲ್ಲಾ ಹೊಸ ಜೀವ ಪಡೆಯುತ್ತವೆ. ಸೊರಗಿದ್ದ ಗೋಡೆ, ಕಟ್ಟಡಗಳು ಬಣ್ಣಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತವೆ. ಇಡೀ ನಗರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ಮೈಸೂರು ನಗರವನ್ನು ದೀಪಗಳೊಟ್ಟಿಗೆ ರಾತ್ರಿ ನೋಡುವುದೇ ಒಂದು ಸೊಬಗು. ರಂಗೋಲಿ, ಚಿತ್ತಾರಗಳು ಆಕರ್ಷಿಸುತ್ತವೆ. ಮದುವಣಗಿತ್ತಿಯಂತೆ ನಗರ ಅಲಂಕೃತಗೊಂಡಿರುತ್ತದೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದಾಗ ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆಯುತ್ತದೆ. ಒಡೆಯರು ಆಶ್ವಯುಜ ಪಾಡ್ಯದ ದಿನ ಸಪತ್ನೀಕರಾಗಿ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಿ, ನವರಾತ್ರಿಯ ವ್ರತಕ್ಕಾಗಿ ಕಂಕಣ ತೊಡುತ್ತಾರೆ. ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಒಂಬತ್ತು ದಿನವೂ ನಡೆಯುತ್ತವೆ. ಪಟ್ಟದ ಆನೆ, ಗೋವಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಖಾಸಗಿ ದರ್ಬಾರ್ ಮೈಸೂರು ಸಂಪ್ರದಾಯದ ಎಲ್ಲ ಆಚರಣೆಗಳ ಜೊತೆಗೆ ರಾಜಮನೆತನ ವೈಭವವನ್ನು ಸಾರಿ ಹೇಳುತ್ತದೆ. ಈ ಆಚರಣೆಯ ಸೊಬಗು ಮೈಸೂರು ಮೂಲದ ಹಲವು ಮನೆಗಳಲ್ಲೂ ವಾಡಿಕೆಯಲ್ಲಿದೆ.

                 ದಸರೆ ಎಂದೊಡನೆ ನಮಗೆ ನೆನಪಾಗುವುದು ಮೈಸೂರು ಒಡೆಯರ ದರ್ಬಾರಿನ ವೈಭವ; ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆ;ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ;ಪಂಜಿನ ಕವಾಯತು. ಹಳೆಯ ಅರಮನೆ 1897ರಲ್ಲಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ನಂತರ ಈಗಿರುವ ಗ್ರಾನೈಟ್ ಶಿಲೆಯ ಭವ್ಯವಾದ ಅರಮನೆ ನಿರ್ಮಾಣವಾಯಿತು. ಸುವರ್ಣ ಧ್ವಜದ ಕನಕ ಲೇಪಿತ 145 ಅಡಿ ಎತ್ತರದ ಸುಂದರ ಶಿಖರ, ವಿಜಯನಗರದ ಅರಸ ಶ್ರೀರಂಗರಾಯರು ಕ್ರಿ.ಶ. 1610ರಲ್ಲಿ ಮೈಸೂರಿನ ರಾಜ ಒಡೆಯರಿಗೆ ಕೊಟ್ಟ ಸಿಂಹಾಸನ ಮನಸೆಳೆಯುತ್ತವೆ. ದೇವಿಯು ಶಕ್ತಿ ಸ್ವರೂಪಿಣಿಯಾಗಿ ಮಹಿಷ, ರಕ್ತಬೀಜ, ಶುಂಭ-ನಿಶುಂಭಾದಿ ರಕ್ಕಸರನ್ನು ಸಂಹರಿಸಿದ್ದು ಶರನ್ನವರಾತ್ರಿಯ ಸಮಯದಲ್ಲೇ. ಹಾಗಾಗಿ ಶರನ್ನವರಾತ್ರಿಯ ಒಂಬತ್ತೂ ದಿನ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ದುರ್ಗಾಷ್ಟಮಿಯ ದಿನ ನಾಡದೇವಿ ಚಾಮುಂಡೇಶ್ವರಿಯ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನು ರಾವಣಾಸುರನನ್ನು ಸಂಹರಿಸಿದ ದಿನ ವಿಜಯದಶಮಿ. ವಿಜಯದಶಮಿಯ ದಿನ ಸೀಮೋಲ್ಲಂಘನ ನಡೆಯುತ್ತದೆ. ಹಿಂದೆ ಅಂದು ಮಹಾರಾಜರು ಚಿನ್ನದಂಬಾರಿಯಲ್ಲಿ ಕುಳಿತು ತಮ್ಮ ಸೈನ್ಯ ಸಮೇತ ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು. ಹಿಂದೆ ಆಯುಧಗಳನ್ನು ಬನ್ನಿ ವೃಕ್ಷದಲ್ಲಿ ಸಂರಕ್ಷಿಸಿಡುತ್ತಿದ್ದರು. ಪಾಂಡವರು ಅಜ್ಞಾತವಾಸಕ್ಕೆ ತೆರಳುವ ಮುನ್ನ ಬನ್ನಿ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟಿದ್ದರು. ಆಜ್ಞಾತವಾಸ ಮುಗಿದ ಬಳಿಕ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಮರಳಿ ಆಯುಧಗಳನ್ನು ಪಡೆದರು. ಆ ಸಂಪ್ರದಾಯವೇ ಇಲ್ಲಿ ಮುಂದುವರಿದಿದ್ದು ಬನ್ನಿ ವೃಕ್ಷದ ಪೂಜೆ ಜೊತೆಗೆ ಬನ್ನಿಯನ್ನು ಹಂಚುವ ವಾಡಿಕೆಯೂ ಮುಂದುವರೆದಿದೆ. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ ಬನ್ನಿಮಂಟಪಕ್ಕೆ ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ ಜಂಬೂ ಸವಾರಿ.

                ಜಂಬೂ ಸವಾರಿಯಂದು 750 ಕಿಲೋ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುವ ಪಟ್ಟದ ಆನೆಯೇ ಎಲ್ಲರ ಕಣ್ಮಣಿ. ಮಂದಗತಿಯಲಿ, ರಾಜಗಾಂಭೀರ್ಯದಿಂದ ಅರಮನೆಯ ಆವರಣದಿಂದ ಬನ್ನಿ ಮಂಟಪದತ್ತ ಅಲಂಕೃತಗೊಂಡು ಸಾಗುವ ಗಜಸಮೂಹದ ಸೊಬಗನ್ನು ನೋಡಲು ಕಣ್ಗಳೆರಡು ಸಾಲವು. ಈ ಅತ್ಯಾಕರ್ಷಕ ಮೆರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಚಿತ್ರಗಳು, ಕುದುರೆ, ಕಾಲಾಳುಗಳು, ಪೋಲೀಸ್ ಬ್ಯಾಂಡ್, ನಂದಿಧ್ವಜ ಜೊತೆಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಕುಸ್ತಿ, ಜಟ್ಟಿ ಕಾಳಗ, ಮಲ್ಲಯುದ್ಧ, ನಾಟಕ, ಜನಪದ ಕುಣಿತ ಮುಂತಾದ ಕಲೆಗಳ ಪ್ರದರ್ಶನ ಮನಸೂರೆಗೊಳ್ಳುತ್ತವೆ. ಹಿಂದೆ ಬಂಗಾರದ ಅಂಬಾರಿಯಲ್ಲಿ ಮಹಾರಾಜರ ದರ್ಶನ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿತ್ತು. ಸೈನಿಕರ ಕವಾಯತು, ಕಾಲಾಳುಗಳ ಪಥಸಂಚಲನ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಚಾಮುಂಡಿ ಬೆಟ್ಟದ ಮೇಲೂ ಪೂಜೆ, ಉತ್ಸವ, ತೆಪ್ಪೋತ್ಸವ ನಡೆಯುತ್ತಿದ್ದವು. ಬನ್ನಿ ಪೂಜೆ ಬಳಿಕ ಅಂಬಾರಿ ಮೆರವಣಿಗೆ ಅರಮನೆಗೆ ಹಿಂದಿರುಗುವಾಗ ವಿದ್ಯುತ್ ದೀಪಗಳ ಅಲಂಕಾರದ ಹಿನ್ನಲೆಯಲ್ಲಿ ಮೈಸೂರು ನಗರ ಕಿನ್ನರ ಲೋಕವನ್ನು ನೆನಪಿಸುವಂತೆ ಕಂಗೊಳಿಸುತ್ತದೆ. ಬಾಣ ಬಿರುಸು ಪ್ರದರ್ಶನ ನಡೆದು ಇಡೀ ಮೈಸೂರು ದೀಪಾಲಂಕಾರದಿಂದ ಕಂಗೊಳಿಸುತ್ತಾ ನಾಡಿನ ಎಲ್ಲ ಭಾಗಗಳಿಂದ ಪ್ರವಾಸಿಗರನ್ನೂ, ವಿದೇಶಿಯರನ್ನೂ ಆಕರ್ಷಿಸುತ್ತಾ ಬಂದಿದೆ.

               ಮೈಸೂರು ಹಿಂದಿನಿಂದಲೂ ಕಲೆ, ಕಲಾವಿದರನ್ನು ಪೋಷಿಸಿದ ನಗರಿ. ದಸರೆಯಂತೂ ದೇಶದಾದ್ಯಂತ ಕಲಾವಿದರನ್ನು ಕೈಬೀಸಿ ಕರೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಚಂಡೆ ಮುಂತಾದ ಜನಪದ ಕಲಾವಿದರು ದಸರಾದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಾರೆ. ಸಂಗೀತ, ನಾಟ್ಯಗಾರರಿಗೂ ಸೂಕ್ತ ಅವಕಾಶ ಸಿಗುತ್ತದೆ. ಮೈಸೂರಿನ ಸುತ್ತಮುತ್ತಲಿನ ನಾನಾ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆಯುತ್ತಾರೆ. ರಂಗಾಯಣದ ನಾಟಕೋತ್ಸವ, ಯುವ ಸಂಭ್ರಮದಂತಹಾ ಕಾರ್ಯಕ್ರಮಗಳು ನಡೆಯುತ್ತವೆ. ಹಿಂದೆ ಅರಮನೆ ಮತ್ತು ಜಗನ್ಮೋಹನ ಅರಮನೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಇದೀಗ ಕಲಾಮಂದಿರ, ಪುರಭವನ, ಚಿಕ್ಕಗಡಿಯಾರ, ವೀಣೆ ಶೇಷಣ್ಣ ಭವನದಲ್ಲಿ ವಿವಿಧ ನೃತ್ಯ ರೂಪಕ ಹಾಗೂ ನಾಟಕ ಪ್ರದರ್ಶನ ನಡೆಯುತ್ತವೆ. ವಸ್ತ್ರ, ಪುಸ್ತಕ ಮೇಳ, ಆಹಾರ ಮೇಳ, ಗೊಂಬೆಗಳ ಪ್ರದರ್ಶನ, ಕರಕುಶಲ ಮೇಳ, ಓಪನ್ ಬಸ್, ಏರ್ ಶೋ, ಗಾಳಿಪಟ ಉತ್ಸವ, ಹೆಲಿಕಾಪ್ಟರ್ ರೈಡ್, ಕ್ರೀಡೆಯನ್ನು ಪ್ರೋತ್ಸಾಹಿಸಲು ರಾಜ್ಯಮಟ್ಟದ ಕ್ರೀಡೋತ್ಸವ ನಡೆಯುತ್ತದೆ. ಹತ್ತೂ ದಿನ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ರೈತ ದಸರಾ, ಮಹಿಳಾ ದಸರಾ, ಚಿಣ್ಣರ ದಸರಾ ಹೀಗೆ ವಿವಿಧ ಕಾರ್ಯಕ್ರಮಗಳು ನಡೆದು ಪ್ರತಿಭಾ ಸಂಪನ್ನರಿಗೆ ದಸರಾ ಬಹುದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ.

             ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ರಾಜಾ ಪ್ರತ್ಯಕ್ಷ ದೇವತಾ ಎಂದು ನಂಬಿದವರು ನಾವು. ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ನವವಿವಾಹಿತರಿಗೆ ವರಪೂಜೆಯ ಕಾಲದಲ್ಲೇ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಇದೆ. ಅರಮನೆಯಲ್ಲೂ ಬೊಂಬೆಗಳನ್ನು ಕೂರಿಸಲಾಗುತ್ತದೆ. ಯುದ್ಧ ಹಾಗೂ ವಿಜಯವೇ ಈ ಹಬ್ಬಕ್ಕೆ ನಾಂದಿಯಾದ ಕಾರಣ ಚತುರಂಗ ಬಲವನ್ನು ಬಿಂಬಿಸುವ ಬೊಂಬೆಗಳನ್ನು ಇಡಲಾಗುತ್ತದೆ. ಇದೂ ವಿಜಯನಗರದ್ದೇ ಬಳುವಳಿ. ಹಿಂದೆ ಬೊಂಬೆಗಳು ಮಹಾಭಾರತ, ರಾಮಾಯಣ, ದೇವಿ ಭಾಗವತದಂತಹಾ ಚರಿತ್ರೆಯನ್ನು ಹೇಳುತ್ತಿದ್ದರೆ ಇಂದು ದೇವ, ದಾನವರಿಂದ ಹಿಡಿದು ರಾಷ್ಟ್ರದ ಹಿರಿಯ ಚೇತನಗಳು, ನೇತಾರರು, ಕ್ರೀಡಾಪಟುಗಳ ಬೊಂಬೆಗಳೂ ಕಾಣ ಸಿಗುತ್ತವೆ. ಹಿಂದೆ ದಂತ, ಶ್ರೀಗಂಧ, ಹಿತ್ತಾಳೆ, ಬೆಳ್ಳಿ, ಕಂಚಿನ ಬೊಂಬೆಗಳಿದ್ದರೆ ಕಾಲಕ್ರಮೇಣ ಇಂದು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್, ಪಿಂಗಾಣಿ, ಪೇಪರ್ ಪೇಸ್ಟಿನ ಬೊಂಬೆಗಳು ಕಾಣಬರುತ್ತವೆ. ಅಂದಿನ ಬೊಂಬೆಗಳು ಸಂಸ್ಕೃತಿಯ ಪ್ರತೀಕವಾಗಿದ್ದರೆ ಇಂದಿನ ಬೊಂಬೆಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ. ಶಾರದೆಯ ಹಬ್ಬದ ದಿನ ಮನೆಯಲ್ಲಿರುವ ಓಲೆಗರಿ, ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು, ಅದರ ಮೇಲೊಂದು ಕಳಶವಿಟ್ಟು ಸೀರೆ ಉಡಿಸಿ ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕನ್ನಿಕೆಯರನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಆಯುಧ ಪೂಜೆಯ ದಿನ ಶಸ್ತ್ರಾಸ್ತ್ರಗಳ ಪೂಜೆ, ವಾಹನ ಪೂಜೆಯೂ ನಡೆಯುತ್ತದೆ.

             ದೈನಂದಿನ ಬದುಕಿನ ಜಂಜಡದಿಂದ ಮುಕ್ತಿ ಹೊಂದಿ, ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ಚೇತನ ನೀಡುವುದರಲ್ಲಿ ಭಾರತೀಯ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ನಿಶ್ಚಲ ಬ್ರಹ್ಮಾಂಡವನ್ನು ಉದ್ದೀಪಿಸಿ ಕಾರ್ಯವೆಸಗುವಂತೆ ಮಾಡುವ ಶಕ್ತಿಯ ಆರಾಧನೆಯೇ ನವರಾತ್ರಿ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ. ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದುದರ ಆರಾಧನೆ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಭೇದಗಳನ್ನು, ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಂಬಂಧಗಳ ತೊಡಕುಗಳನ್ನು ಸರಿಪಡಿಸಿಕೊಳ್ಳಲು ಬಿಗುಮಾನ ಬಿಟ್ಟು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು, ಸ್ನೇಹ-ಪ್ರೀತಿ ವ್ಯಕ್ತಪಡಿಸುವ ದಸರಾ ಅವಕಾಶವೀಯುತ್ತದೆ. ರೈತ, ಬಾಣಸಿಗ, ಕಲಾವಿದ, ವ್ಯಾಪಾರಿ, ವಸ್ತ್ರ ವಿನ್ಯಾಸಕ, ಪುರೋಹಿತ, ತಂತ್ರಜ್ಞ,...ಹೀಗೆ ಎಲ್ಲರೂ ದಸರಾದ ಭಾಗವಾಗುತ್ತಾರೆ. ನಮ್ಮ ಮನೆಹಬ್ಬ ಎಂಬಂತೆ ವಿಜೃಂಭಿಸುತ್ತಾರೆ. ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಮೈಸೂರು ಈ ವೇಳೆ ಅಕ್ಷರಶಃ ದೇವಲೋಕದಂತೆ ಕಂಗೊಳಿಸುತ್ತಿರುತ್ತದೆ. ಹಾಗಾಗಿ ದಸರಾ ಬರೀ ಅದ್ಧೂರಿ ಆಚರಣೆಯಾಗಿ ಉಳಿಯದೇ ಸಮಾನವಾಗಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಸಮಾನ ಅವಕಾಶ ಕೊಡುವ ನಾಡಹಬ್ಬವಾಗಿ ರೂಪುಗೊಂಡು ಒಂದು ಸಾಂಸ್ಕೃತಿಕ ಪರಂಪರೆಯನ್ನೇ ಸೃಷ್ಟಿಸಿದೆ. ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ. ಪಾಲ್ಗೊಳ್ಳುವ ಜನರೂ ಬದಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ದಸರಾ ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಯುವ ಮನಸ್ಸುಗಳಿಗೆ ಹೆಚ್ಚು ಆಪ್ತವಾಗುತ್ತಿದೆ. ತಂತ್ರಜ್ಞಾನದ ಬಳಕೆಯೂ ಉತ್ಸವದಲ್ಲಿ ಹೆಚ್ಚಾಗುತ್ತಿದೆ. ಅಂದರೆ ದಸರಾ ಎಲ್ಲರನ್ನೂ ಒಳಗೊಳ್ಳುವ ಕೆಲಸ ಮಾಡುತ್ತಿದೆ. ದಸರಾ ಹಬ್ಬದ ಮೂಲದಲ್ಲಿ ಸಂಪ್ರದಾಯವಿದೆ. ಸಾವಿರಾರು ಬಗೆಯ ಸಂಭ್ರಮಗಳಿವೆ. ಎಲ್ಲಾ ವಯೋಮಾನದವರು ರೆಕ್ಕೆ ಗರಿಬಿಚ್ಚಲು ವೇದಿಕೆ ಇದೆ. ದಸರಾ ಅಂದರೆ ಮೊಗೆದಷ್ಟು ಬಗೆ. ಅಲ್ಲಿ ಎಲ್ಲವೂ ಇದೆ.

ಸಮಾರಾಂಗಣಸೂತ್ರಧಾರ ಸರಸ್ವತೀಕಂಠಾಭರಣ ಪರಮಾರ ಭೋಜ

ಸಮಾರಾಂಗಣಸೂತ್ರಧಾರ ಸರಸ್ವತೀಕಂಠಾಭರಣ ಪರಮಾರ ಭೋಜ


             647 ಚದರ ಕಿ.ಮೀ. ವಿಸ್ತಾರವಾದ ಬೃಹತ್ ಸರೋವರ. ಅದರ ಪಕ್ಕದಲ್ಲೇ ಇನ್ನೊಂದು ಚಿಕ್ಕ ಸರೋವರ. ಇಡೀ ರಾಜ್ಯದಲ್ಲೇ ಹರಡಿರುವ ಸಾವಿರ ವರ್ಷಗಳು ಕಳೆದರೂ ಇಂದಿಗೂ ಜನರ ದಾಹ ತೀರಿಸುತ್ತಿರುವ ಇಂತಹಾ ಹಲವು ಕೆರೆ ಕಟ್ಟೆಗಳು. ಈ ಎಲ್ಲಾ ಸರೋವರಗಳ ತಟಗಳಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಹಲವು ಮಠ, ಮಂದಿರ ನಿರ್ಮಿತಿಗಳು. ಇವೆಲ್ಲಾ ಮಠ ಮಂದಿರಗಳಿಗೆ ಕಲಶ ಪ್ರಾಯದಂತೆ ತಲೆಯೆತ್ತಿ ನಿಂತಿತ್ತು ವಿಶಾಲ ಸರಸ್ವತೀ ಮಂದಿರ. ಅಲ್ಲಿ ನಡೆಯುತ್ತಿತ್ತು ನಿರಂತರ ವಿದ್ಯಾ ವಿನೋದ. ಸಂಸ್ಕೃತ ಬರದ ಬ್ರಾಹ್ಮಣನಿಗಲ್ಲಿ ಪ್ರವೇಶವಿಲ್ಲ. ಸಂಸ್ಕೃತ ಬಲ್ಲ ಚಾಂಡಾಲನೂ ಅಲ್ಲಿ ಪೂಜಾರ್ಹ! ಅದು ಕೇವಲ ರಣ ಕಲಿಗಳ ಸಾಮ್ರಾಜ್ಯವಲ್ಲ. ಅದು ಸಾಹಿತ್ಯ ಸಾಮ್ರಾಜ್ಯವೂ ಹೌದು. ಸಮೃದ್ಧ ಶಿಲ್ಪ ಸಾಮ್ರಾಜ್ಯವೂ ನಿಜ. ಉತ್ತಮವಾದುದು ಯಾವುದಿಲ್ಲ ಎಂದು ಹುಡುಕಬೇಕಾದಂತಹಾ ಆ ಸಾಮ್ರಾಜ್ಯಕ್ಕೆ "ಸರಸ್ವತೀ ಕಂಠಾಭರಣ"ದಂತಿದ್ದ ಸಮರಾಂಗಣ ಸೂತ್ರಧಾರನೊಬ್ಬ ಅಧಿಪತಿ. ವಿಕ್ರಮಾದಿತ್ಯನಂತೆ ಅವನ ಹೆಸರೇ ಮುಂದಿನ ಪೀಳಿಗೆಗೆ ಬಿರುದಾದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

             ಭೋಜ ರಾಜ. ಮಧ್ಯೋತ್ತರ ಭಾರತದ ಜಾಜ್ವಲ್ಯಮಾನ ನಕ್ಷತ್ರ. ಈತ ಮಧ್ಯಕಾಲೀನ ಭಾರತದ ಪ್ರಸಿದ್ಧ ಅರಸ ಮಾತ್ರವಲ್ಲ; ಜಗತ್ತಿನಾದ್ಯಂತ ಸರ್ವಕಾಲದಲ್ಲೂ ಬೆಳಗಬಲ್ಲ ಮಹನೀಯ ವ್ಯಕ್ತಿತ್ವ ಆತನದ್ದು. ಪರಮಾರ ವಂಶ ಮಾಳವವನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿತು. ಅವರ ಮೂಲಸ್ಥಾನ ರಾಜಸ್ಥಾನದ ಮೌಂಟ್ ಅಬು. ಪದ್ಮಗುಪ್ತನ "ಪರಿಮಳಾ" ಗ್ರಂಥದ ನವಸಾಹಸಾಂಕ ಚರಿತದ 11ನೇ ಸರ್ಗದಲ್ಲಿ ಪರಮಾರರು ವಶಿಷ್ಠಕುಲದವರೆಂದು ಹೇಳಲ್ಪಟ್ಟಿದೆ.
ಅಸ್ತ್ಯೂರ್ವಿಘ್ನಂ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಾಂಪತ್ಯ ಸಿದ್ಧೇಃ |
ಸ್ಥಾನಂ ಚ ಜ್ಞಾನಭಾಜಾಮಭಿಮತ ಫಲದೋ ಖರ್ವಿರಃ ಸೋರ್ಬುಧಾಖ್ಯಃ ||
ವಿಶ್ವಾಮಿತ್ರ ವಶಿಷ್ಠಾದಹರತ ಬಲತೋ ಯತ್ರಗಾಂ ತತ್ಪ್ರಭಾವಾ |
ಜ್ಞಜ್ಞೇ ವೀರೋಗ್ನಿ ಕುಂಡಾದ್ರಿಪುಬಲ ನಿಧನಂ ಯಶ್ಚ ಕಾರೈಕ ಏವಂ ||
ಮಾರಯಿತ್ವಾ ಪರಾನ್ ಧೇನು ಮಾನಿನ್ಯೇ ಸ ತತೋ ಮುನಿಃ
ಉವಾಚ ಪರಮಾರಾಖ್ಯಃ ಪಾರ್ಥಿವೇಂದ್ರೋ ಭವಿಷ್ಯಸಿ || ಹೀಗೆ ಪರಮಾರ ವಂಶದ ಬಗ್ಗೆ ಉದಯಪುರದಲ್ಲಿರುವ ಶಾಸನದಲ್ಲೂ ಇವರು ವಸಿಷ್ಠ ಕುಲದವರೆಂದು ವರ್ಣಿಸಲಾಗಿದೆ. ವಸಿಷ್ಠನ ಬಳಿ ಇದ್ದ ಕಾಮಧೇನುವನ್ನು ವಿಶ್ವಾಮಿತ್ರ ಕಳವು ಮಾಡಿದಾಗ ಅದನ್ನು ಮರಳಿ ಪಡೆಯಲು ವಶಿಷ್ಠ ಅಬು ಪರ್ವತದಲ್ಲಿ ಯಜ್ಞ ಮಾಡಿದಾಗ ಯಜ್ಞಕುಂಡದಿಂದ ಅಪ್ರತಿಮ ವೀರನೊಬ್ಬ ಎದ್ದು ಬಂದು ಕಾಮಧೇನುವನ್ನು ವಿಶ್ವಾಮಿತ್ರನಿಂದ ಬಲಾತ್ಕಾರವಾಗಿ ಬಿಡಿಸಿ ತಂದು ವಸಿಷ್ಠನಿಗೆ ಒಪ್ಪಿಸಿದನೆಂದೂ ಮುನಿ ಆ ವೀರನಸಾಹಸವನ್ನು ಮೆಚ್ಚಿ ಪರಮಾರ (ಶತ್ರುನಾಶಕ) ಎಂದು ನಾಮಕರಣ ಮಾಡಿ ಅವನಿಗೆ ರಾಜ್ಯವನ್ನು ಅನುಗ್ರಹಿಸಿದನೆಂದೂ ಪದ್ಮಗುಪ್ತನ ಈ ಗ್ರಂಥ ವರ್ಣಿಸಿದೆ. ಪರಮಾರರ ಕಾಲಕ್ಕೂ ವಸಿಷ್ಠ, ವಿಶ್ವಾಮಿತ್ರರ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಇದನ್ನೊಂದು ಕಥೆಯೆಂದು ಬಿಟ್ಟು ಬಿಡಬಹುದಾದರೂ ಪರಮಾರರ ಮೂಲ ಅಬು ಪರ್ವತ ಎಂದು ಇದರಿಂದ ಊಹಿಸಬಹುದು. ಆ ಬಳಿಕ ಬಂದ ಪರಮಾರರ ಸಾಹಿತ್ಯ ಮತ್ತು ಶಾಸನಗಳು ಕೂಡ ಇದನ್ನೇ ಹೇಳುತ್ತವೆ. ಕೃಷ್ಣರಾಜ(ಉಪೇಂದ್ರ) ಎನ್ನುವವ ಈ ವಂಶದ ಮೂಲಪುರುಷ. ಪರಮಾರರು ರಾಷ್ಟ್ರಕೂಟರ ಸಂಬಂಧಿಗಳೆಂದು ಇವರ ಕೆಲವು ಪ್ರಾಚೀನ ಶಾಸನಗಳು ಹೇಳುತ್ತವೆ. ಆರಂಭದಲ್ಲಿ ರಾಷ್ಟ್ರಕೂಟರ ಸಾಮಂತರಾಗಿದ್ದರಿವರು.

               ರಾಷ್ತ್ರಕೂಟರ ಮುಮ್ಮಡಿ ಕೃಷ್ಣನಿಗೆ ಅಧೀನನಾಗಿದ್ದರೂ ಮುಮ್ಮಡಿ ಕೃಷ್ಣನ ಅವಸಾನದ ಬಳಿಕ ಹಾಗೂ ಪ್ರತೀಹಾರರ ಬಲ ಕುಂದುತ್ತಿದ್ದುದರಿಂದ ಕೃಷ್ಣನ ಉತ್ತರಾಧಿಕಾರಿ ಖೊಟ್ಟನ ವಿರುದ್ಧ ದಂಗೆಯೆದ್ದ 2ನೆಯ ಸೀಯಕನ ಕಾಲದಲ್ಲಿ ಸ್ವತಂತ್ರ ಪರಮಾರ ಸಾಮ್ರಾಜ್ಯದ ನಿರ್ಮಾಣವಾಯಿತು. ಪರಮಾರ ಸೈನ್ಯ ರಾಷ್ಟ್ರ ಕೂಟರ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿತು. ಹೀಗೆ ಮಾಳವದ ದಕ್ಷಿಣದ ಗಡಿ ತಪತಿ ನದಿಯವರೆಗೂ ವಿಸ್ತರಿಸಿತು. ಇವನ ಮಗನೇ ವಾಕ್ಪತಿ ರಾಜ ಮುಂಜ(974-995). ಸ್ವತಂತ್ರ ಮಾಳವಕ್ಕೆ ಉತ್ತರಾಧಿಕಾರಿಯಾಗಿ ಇವನು ಅಧಿಕಾರಕ್ಕೆ ಬಂದಾಗ ಮಾಳವ ಉತ್ತರದಲ್ಲಿ ಜಾಲೋರ್'ವರೆಗೂ, ದಕ್ಷಿಣದಲ್ಲಿ ತಪತಿ, ಪೂರ್ವದಲ್ಲಿ ಬಿಲ್ಸ ಮತ್ತು ಪಶ್ಚಿಮದಲ್ಲಿ ಸಬರಮತಿಯವರೆಗೂ ವ್ಯಾಪಿಸಿತ್ತು. ಈತ ತನ್ನನ್ನು ರಾಜ್ಯವನ್ನು ಇನ್ನಷ್ಟು ವಿಸ್ತರಿಸಿ, ಕಳಚುರಿಗಳು, ಹೂಣರು, ಗುಹಿಲರು ಮತ್ತು ಚಾಹಮಾನರನ್ನೆಲ್ಲಾ ಸೋಲಿಸಿ ಶ್ರೀವಲ್ಲಭ, ಪೃಥ್ವೀವಲ್ಲಭ, ಅಮೋಘವರ್ಷ ಎಂಬ ಬಿರುದುಗಳನ್ನೂ ಪಡೆದ. ತಾನು ಗೆದ್ದ ಪ್ರದೇಶಗಳ ಮೇಲೆ ಪರಮಾರ ವಂಶದ ರಾಜಕುಮಾರರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದ. ಮೇರುತುಂಗನ "ಪ್ರಬಂಧಚಿಂತಾಮಣಿ"ಯಲ್ಲಿ ಮುಂಜನ ಈ ಸಾಹಸಗಳನ್ನು ವೈಭವಯುತವಾಗಿ ವರ್ಣಿಸಲಾಗಿದೆ. ಇವನು ಅನೇಕ ಸಂಸ್ಕೃತ ಕವಿಗಳಿಗೆ ಆಶ್ರಯ ನೀಡಿದ್ದನಲ್ಲದೆ, ತಾನೇ, ಸ್ವತಃ ಕವಿಯೂ, ವಿದ್ಯಾಪಕ್ಷಪಾತಿಯೂ ಆಗಿದ್ದ. ಪದ್ಮಗುಪ್ತ, ಧನಂಜಯ, ಹಲಾಯುಧ ಮುಂತಾದ ಘನವೇತ್ತರಿಗೆ ಈತ ಆಶ್ರಯದಾಯಿಯಾಗಿದ್ದ. "ತಿಲಕ ಮಂಜರಿ" ಎನ್ನುವ ಸಂಸ್ಕೃತ ಗ್ರಂಥ ರಚಿಸಿದ್ದ ಧನಪಾಲ ಈತನದ್ದೇ ಆಸ್ಥಾನ ಕವಿ. ಸಮರ ಮತ್ತು ಶಾಂತಿಯಲ್ಲಿ ಸಮಾನ ಪ್ರಸಿದ್ಧಿ ಗಳಿಸಿದ್ದ. ಚಾಲುಕ್ಯರ 2ನೆಯ ತೈಲಪನ ವಿರುದ್ಧ ಮುಂಜ ಸದಾ ಯುದ್ಧ ಮಾಡಿ ಗೆಲ್ಲುತ್ತಿದ್ದ ಮುಂಜನನ್ನು ಏಳನೆಯ ಬಾರಿಯ ಯುದ್ಧದಲ್ಲಿ ತೈಲಪ ಸೋಲಿಸಿ ಸೆರೆಯಲ್ಲಿಟ್ಟು ಕೊಲ್ಲಿಸಿದ.  ಬಳಿಕ ಮುಂಜನ ಸಹೋದರ ಸಿಂಧುರಾಜ ಪಟ್ಟಕ್ಕೆ ಬಂದವನೇ ಚಾಲುಕ್ಯರನ್ನು ಸೋಲಿಸಿ ಕಳೆದುಹೋಗಿದ್ದ ಪ್ರದೇಶಗಳನ್ನು ಮತ್ತೆ ಪಡೆದ. ಇವನ ಸಾಹಸಗಾಥೆಯನ್ನು ಆಸ್ಥಾನ ಕವಿ ಪದ್ಮಗುಪ್ತ "ನವಸಹಸಾಂಕ"ದಲ್ಲಿ ವರ್ಣಿಸಿದ್ದಾನೆ. ಸಿಂಧುರಾಜನ ಮಗನೇ ಪರಮಾರ ಭೋಜ. ಮುಂಜ ಮತ್ತು ಸಿಂಧುರಾಜರ ಕಾಲದಲ್ಲಿ ಸಂಘಟಿತವಾದ ಪರಮಾರರ ಅಧಿಕಾರ ಭೋಜನ ಕಾಲದಲ್ಲಿ ಸಾಮ್ರಾಜ್ಯದ ಶ್ರೇಣಿಯನ್ನು ಮುಟ್ಟಿತು.

                ಭೋಜ 1010ರ ಸುಮಾರಿಗೆ ಮಾಳವದ ಪಟ್ಟವನ್ನೇರಿದ. ಇತಿಹಾಸಕಾರರ ಪ್ರಕಾರ ನಲವತ್ತು ವರ್ಷಗಳ ಕಾಲ ಈತ ರಾಜ್ಯವನ್ನಾಳಿದ. ಕಾವ್ಯಾದಿಗ್ರಂಥಗಳ ಪ್ರಕಾರ ಐವತ್ತೈದು ವರ್ಷಕ್ಕೂ ಹೆಚ್ಚು ಕಾಲ ಈತ ರಾಜ್ಯವಾಳಿದನೆಂದು ತಿಳಿದು ಬರುತ್ತದೆ. ಈತ ಹರ್ಷನ ಮೊಮ್ಮಗ. ಶೂದ್ರಾತಿಶೂದ್ರವಲಯದಿಂದ ಬಂದವನಾದರೂ ತನ್ನ ಕ್ಷಾತ್ರ ಪ್ರವೃತ್ತಿಯಿಂದ ಅಪ್ರತಿಮ ರಾಜನಾದುದು ಮಾತ್ರವಲ್ಲಾ ಸಂಸ್ಕೃತವನ್ನು ಅರೆದು ಕುಡಿದವನಂತೆ ಸಾಹಿತ್ಯೋಪಾಸನೆಯನ್ನು ಆತ ಮಾಡಿದುದು ಭಾರತದಲ್ಲಿ ಅಸ್ಪೃಶ್ಯತೆಯೇ ತಾಂಡವವಾಡುತ್ತಿತ್ತು ಎಂದು ಬೊಬ್ಬಿರಿಯುವವರು ಮತ್ತೆ ಮತ್ತೆ ಯೋಚಿಸಬೇಕಾದ ಅಂಶ!
ಶೈವ ಪರಂಪರೆಯಲ್ಲಿ ಆಸಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಭೋಜ್ಪುರದ ಭೋಜೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು. ಭೋಜನಿಂದ ಬರೆಯಲ್ಪಟ್ಟ "ಯೋಗಸೂತ್ರವೃತ್ತಿ"ಯಲ್ಲಿ "ಶ್ರೀ ರಣರಂಗಮಲ್ಲ ನೃಪತೇಃ" ಎಂದಿರುವುದು ಈತನ ಬಿರುದುಗಳಲ್ಲಿ ಒಂದು.

             ಭೋಜ 1010ರ ಸುಮಾರಿಗೆ ಮಾಳವದ ಪಟ್ಟವನ್ನೇರಿದ. ಇತಿಹಾಸಕಾರರ ಪ್ರಕಾರ ನಲವತ್ತು ವರ್ಷಗಳ ಕಾಲ ಈತ ರಾಜ್ಯವನ್ನಾಳಿದ; ಕಾವ್ಯಾದಿಗ್ರಂಥಗಳ ಪ್ರಕಾರ ಐವತ್ತೈದು ವರ್ಷಕ್ಕೂ ಹೆಚ್ಚು. ಈತ ಹರ್ಷನ ಮೊಮ್ಮಗ ಎನ್ನುವ ಉಲ್ಲೇಖ ಸಿಗುತ್ತದೆ. ಶೂದ್ರಾತಿಶೂದ್ರವಲಯದಿಂದ ಬಂದವನಾದರೂ ತನ್ನ ಕ್ಷಾತ್ರ ಪ್ರವೃತ್ತಿಯಿಂದ ಅಪ್ರತಿಮ ರಾಜನಾದುದು ಮಾತ್ರವಲ್ಲಾ ಸಂಸ್ಕೃತವನ್ನು ಅರೆದು ಕುಡಿದವನಂತೆ ಸಾಹಿತ್ಯೋಪಾಸನೆಯನ್ನು ಆತ ಮಾಡಿದುದು ಭಾರತದಲ್ಲಿ ಅಸ್ಪೃಶ್ಯತೆಯೇ ತಾಂಡವವಾಡುತ್ತಿತ್ತು ಎಂದು ಬೊಬ್ಬಿರಿಯುವವರು ಮತ್ತೆ ಮತ್ತೆ ಯೋಚಿಸಬೇಕಾದ ಅಂಶ! ಭೋಜನು "ಸರಸ್ವತೀ ಕಂಠಾಭರಣ"ದಲ್ಲಿ ನಾಯಕಗುಣ, ಮಹಾಕುಲೀನತ್ವದ ಉದಾಹರಣೆಗೆ ತನ್ನ ವಂಶವನ್ನೇ ಉದಾಹರಿಸಿಕೊಂಡಿದ್ದಾನೆ. ಇದು ಆತನ ವಂಶಕ್ಕೆ ಸಿಕ್ಕ ಮಾನ್ಯತೆ, ಗೌರವ ಹಾಗೂ ಆತನ ಆತ್ಮಾಭಿಮಾನವನ್ನು ಎತ್ತಿ ತೋರಿಸುತ್ತವೆ. ಆತನ ದಿಗ್ವಿಜಯಗಳು ದಂತಕಥೆಗಳೇ ಆಗಿ ಜನಪ್ರಿಯವಾಗಿವೆ. ಶಾಸನಗಳೂ ಆತನ ಪೌರುಷವನ್ನು ಸಾರುತ್ತವೆ. ಚಾಳುಕ್ಯ, ಚೇದಿ ಮತ್ತು ಮುಸ್ಲಿಂ ರಾಜರನ್ನು ಸತತವಾಗಿ ಯುದ್ಧದಲ್ಲಿ ಸೋಲಿಸಿದ ಕೀರ್ತಿಯೂ ಆತನಿಗಿದೆ. ಸಾಮರ್ಥ್ಯದಲ್ಲಿ ಸಮುದ್ರಗುಪ್ತನನ್ನು ಆತ ನೆನಪಿಸುತ್ತಾನೆ. ಅವನಿಂದಲೇ ಬರೆಯಲ್ಪಟ್ಟ ಯೋಗಸೂತ್ರವೃತ್ತಿಯಲ್ಲಿ ಅವನಿಗಿದ್ದ "ಶ್ರೀ ರಣರಂಗಮಲ್ಲ ನೃಪತೇಃ" ಬಿರುದು ಕಾಣಸಿಗುತ್ತದೆ. ಘಜ್ನಿಯೊಡನೆ ಸೆಣಸಲು ಆನಂದಪಾಲ ಹಾಗೂ ಆತನ ಮಗ ತ್ರಿಲೋಚನಪಾಲನಿಗೆ ನೆರವಾದನಲ್ಲದೆ ಸ್ವಯಂ ಘಜನಿಯ ವಿರುದ್ಧ ಸೆಣಸಿದ್ದ. ತಾನಿರುವವರೆಗೆ ಘಜ್ನಿಯೂ ಭಾರತದೊಳಕ್ಕೆ ಬರದಂತೆ ತಡೆದ. ಇಸ್ಲಾಮಿನ ದಾಳಿಗೆ ಸಿಕ್ಕಿ ರಾಜ್ಯ ಕಳೆದುಕೊಂಡಿದ್ದ ತ್ರಿಲೋಚನಪಾಲನಿಗೆ ಆಶ್ರಯವನ್ನಿತ್ತಿದ್ದ. ಅವನ ಪರಾಕ್ರಮಕ್ಕೆ ಗಾಹಡವಾಲರ ಕುಲವೇ ಅವನಿಗೆ ಉಘೇ ಉಘೇ ಎನ್ನುತ್ತಿತ್ತು. 1055ರಲ್ಲಿ ಚಾಳುಕ್ಯರ ದೊರೆ 1ನೆಯ ಸೋಮೇಶ್ವರನೂ ಗುಜರಾತಿನದೊರೆ ಭೀಮೇಶ್ವರ ಹಾಗೂ ದಾಹಲದ ದೊರೆ ಕರ್ಣ ಜೊತೆ ಸೇರಿ ಭೋಜನನ್ನು ಯುದ್ಧದಲ್ಲಿ ಸಂಹರಿಸಿದರು. ಮುಂದೆ ಇದು ಘಜನಿಗೆ ಹಾಗೂ ಹಿಂಬಾಲಕರಿಗೆ ವರದಾನವಾಯಿತು.

                ಶಿವಭಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ. ಅತ್ಯಂತ ಪ್ರಸಿದ್ಧವಾದ ಭೋಜಪುರದ ಭೋಜೇಶ್ವರ ದೇವಾಲಯ ಆತನೇ ಕಟ್ಟಿಸಿದ್ದು. ಸಾಹಿತ್ಯೋಪಾಸಕನಾಗಿದ್ದ ಆತನಿಗೆ "ಕವಿರಾಜ ಮಾಲವಚಕ್ರವರ್ತಿ" ಎಂಬ ಬಿರುದಿತ್ತು. ಆತ ಸಕಲಶಾಸ್ತ್ರಕೋವಿದನೂ, ಬಹುಭಾಷಾಪಂಡಿತನೂ ಆಗಿದ್ದು ಅನೇಕ ಶಾಸ್ತ್ರ-ಕಾವ್ಯಗಳನ್ನು ರಚಿಸಿದ್ದ. ವೈದರ್ಭಿ ಶೈಲಿಯಲ್ಲಿ ಅವನನ್ನು ಮೀರಿಸಿದವರಿಲ್ಲ. ಚಂಪೂರಾಮಾಯಣವೇ ಇದಕ್ಕೆ ಸಾಕ್ಷಿ. ವೈದರ್ಭರಾಜ ಎಂಬ ಬಿರುದೂ ಆತನಿಗಿದೆ. ವಿದ್ಯಾಭ್ಯಾಸಕ್ಕೆ, ಸಾಹಿತ್ಯಕೃಷಿಗೆ ಪ್ರೋತ್ಸಾಹ ನೀಡಲು ರಾಜಧಾನಿಯಾದ ಧಾರಾ ನಗರದಲ್ಲಿ "ಸರಸ್ವತೀಮಂದಿರ" ಎಂಬ ವಿಶ್ವವಿದ್ಯಾಲಯವನ್ನೇ ಈತ ಸ್ಥಾಪಿಸಿದ. ಪ್ರಖ್ಯಾತ ಸಂಸ್ಕೃತ ಮಹಾಕಾವ್ಯಗಳಿಂದ ಆಯ್ದ ಕೆಲವು ಸ್ವಾರಸ್ಯಕರ ಭಾಗಗಳನ್ನು ಕಲ್ಲುಗಳ ಮೇಲೆ ಕೆತ್ತಿಸಿ, ವಿದ್ಯಾಲಯದ ಗೋಡೆಗಳನ್ನು ಕಟ್ಟಲು ಆ ಕಲ್ಲುಗಳನ್ನು ಉಪಯೋಗಿಸಲಾಯಿತು. ಅಲ್ಲಿಯೇ ವ್ಯಾಕರಣಕ್ಕೆ ಸಂಬಂಧಿಸಿದಂತೆ ಪಾಣಿನಿಯ ವ್ಯಾಕರಣದ ಮಾಹೇಶ್ವರ ಸೂತ್ರಗಳನ್ನು ಬರೆಸಿದ. ಈತ ಕಾವ್ಯ, ಖಗೋಳಶಾಸ್ತ್ರ, ಮಂತ್ರಶಾಸ್ತ್ರ, ನ್ಯಾಯ, ಪಶುವೈದ್ಯ, ತತ್ತ್ವ, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳ ಮೇಲೆ ಗ್ರಂಥ ರಚಿಸಿದ. ಇವನ ಕಾಲದಲ್ಲಿ ಕಾವ್ಯದ ಒಂದು ಹೊಸ ಪ್ರಕಾರವೇ ಆರಂಭವಾಯಿತು. ಶಬ್ದಗಳನ್ನು ಚಮತ್ಕಾರವಾಗಿ ಜೋಡಿಸಿ ರಚಿಸುವ ಕಲೆಮುಂದೆ ಬಂತು. ಕಾವ್ಯದ ವಸ್ತುವಿನಷ್ಟೇ ಕಾವ್ಯದ ತಂತ್ರವೂ ಪ್ರಾಧಾನ್ಯತೆ ಪಡೆಯಿತು. ಶೈವಪಂಥದ ಅನುಯಾಯಿಯಾಗಿದ್ದ ಭೋಜ ಅನ್ಯ ಮತೀಯರನ್ನೂ ಗೌರವದಿಂದ ಕಾಣುತ್ತಿದ್ದ. ಪ್ರಭಾಚಂದ್ರ ಸೂರಿ, ಶಾಂತಿಸೇನ ಮತ್ತು ಧನಪಾಲ ಎಂಬ ಜೈನಕವಿಗಳೂ ಇವನ ಆಶ್ರಿತರಾಗಿದ್ದರು. ವೈದಿಕ, ಜೈನ ಮತ್ತು ಭೌದ್ಧರ ನಡುವೆ ಆಗಾಗ್ಗೆ ಧಾರ್ಮಿಕ ಚರ್ಚೆಗಳು ಏರ್ಪಡುತ್ತಿದ್ದುವು. ಮಿತಾಕ್ಷರ ಎಂಬ ಗ್ರಂಥವನ್ನು ರಚಿಸಿದ ವಿಜ್ಞಾನೇಶ್ವರ ಇವನದ್ದೇ ಆಸ್ಥಾನದಲ್ಲಿದ್ದ. ವಾಸ್ತು ಶಿಲ್ಪಶಾಸ್ತ್ರಕ್ಕೂ ಈತನ ಕೊಡುಗೆ ಅಪಾರ. ಭೋಜ "ಸಮರಾಂಗಣಸೂತ್ರಧಾರ" ಎಂಬ ವಾಸ್ತುವಿದ್ಯೆ ಮತ್ತು ಶಿಲ್ಪಶಾಸ್ತ್ರಗಳ ಕೃತಿಯನ್ನೇ ಬರೆದಿದ್ದಾನೆ. ಕುಮಾರಸಂಭವ, ಶಾಕುಂತಲ, ರಘುವಂಶ, ಮಾಲಾವಿಕಾಗ್ನಿಮಿತ್ರದಂತಹಾ ಅನುಪಮ ಗ್ರಂಥಕರ್ತೃ ಕವಿ ಕಾಳಿದಾಸನೇ ಇವನ ಆಸ್ಥಾನದಲ್ಲಿದ್ದಾತ ಎಂದು ಬ್ರಿಟಿಷ್ ಇತಿಹಾಸಕಾರರು ಭ್ರಮಿಸಿದ್ದ(ಅಥವಾ ಬೇಕಂತಲೇ ತಿರುಚಿದ್ದ) "ಶಿಲ್ಪಿ" ಕಾಳಿದಾಸನೊಬ್ಬ ಇವನ ಆಶ್ರಿತನಾಗಿದ್ದ.

                ಚಂಪೂರಾಮಾಯಣ, ಜ್ಯೋತಿಷ್ಯದ ಕುರಿತಾದ "ರಾಜ ಮೃಗಾಂಕ", ಶಿವಸೂತ್ರಗಳ ವ್ಯಾಖ್ಯಾನ "ತತ್ತ್ವಪ್ರಕಾಶ", ವ್ಯಾಕರಣ ಮತ್ತು ರಸಮೀಮಾಂಸೆಗಳ ಬಗೆಗಿನ "ಶೃಂಗಾರಪ್ರಕಾಶ", ವಾಸ್ತು ವಿದ್ಯೆ ಹಾಗೂ ಶಿಲ್ಪಶಾಸ್ತ್ರಗಳ ಕುರಿತಾದ "ಸಮರಾಂಗಣಸೂತ್ರಧಾರ", ಯೋಗಶಾಸ್ತ್ರ ಕುರಿತಾದ "ರಾಜಮಾರ್ತಾಂಡ", "ಸರಸ್ವತೀ ಕಂಠಾಭರಣ"ವೆಂಬ ಅಲಂಕಾರಶಾಸ್ತ್ರ, "ಚಾರುಚರ್ಯೆ" ಎಂಬ ಆಯುರ್ವೇದ ಗ್ರಂಥ, ರಾಜನೀತಿ ಮತ್ತು ನೌಕಾನಿರ್ಮಾಣಗಳನ್ನು ಕುರಿತಾದ "ಯುಕ್ತಿಕಲ್ಪತರು" ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಗ್ರಂಥಗಳನ್ನು ಬರೆದ ಖ್ಯಾತಿ ಅವನದ್ದು. ಆತ ತನ್ನ ದಾನಶಾಸನವೊಂದರಲ್ಲಿ ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಮಾಪಾತ ಮಾತ್ರ ಮಧುರೋವಿಷಯೋಪಭೋಗಃ |
ಪ್ರಾಣಸ್ತೃಣಾಗ್ರ ಜಲಬಿಂದು ಸಮಾನರಾಣಾಂ ಧರ್ಮಸ್ಸಖಾಪರಮಹೋ ಪರಲೋಕಯಾನೇ ||
ರಾಜಭೋಗವು ಬೀಸು ಗಾಳಿಗೆ ಸಿಕ್ಕ ಮೋಡಗಳ ಮಾಲೆಯಂತೆ ಕ್ಷಣಾರ್ಧದಲ್ಲಿ ಬಿದ್ದು ಕರಗಿ ಹೋಗಬಹುದು. ಇಂದ್ರಿಯ ಸುಖಗಳು ಕ್ಷಣಮಾತ್ರದವು. ಪ್ರಾಣವು ನೀರ ಮೇಲಣ ಗುಳ್ಳೆಯಂತೆ. ಮೋಕ್ಷಾರ್ಥಿಗಳಿಗೆ ಧರ್ಮವೇ ಸಖ ಎಂದಿದ್ದಾನೆ. ಬಲ್ಲಾಳ ಸೇನನ "ಭೋಜ ಪ್ರಬಂಧ" ಭೋಜನ ಬಗೆಗೆ ಬಹಳ ವಿವರವಾಗಿ ಕಟ್ಟಿಕೊಡುತ್ತದೆಯಾದರೂ ಕೆಲವು ತಪ್ಪುಗಳೂ ಸೇರಿಕೊಂಡಿವೆ. ಮದನನ ಪಾರಿಜಾತ ಮಂಜರೀ ಯಾ ಅರ್ಜುನವರ್ಮನ ಧಾರಾನಗರದ ಶಾಸನದಲ್ಲಿ ಭೋಜನನ್ನು ಶ್ರೀಕೃಷ್ಣನಿಗೆ ಹೋಲಿಸಲಾಗಿದ್ದು, ಕಲಚೂರಿ ವಂಶದ ರಾಜಾ ಗಾಂಗೇಯನನ್ನು ಭೋಜನು ಸೋಲಿಸಿದ ವರ್ಣನೆಯಿದೆ. ಭೋಜರಾಜ ತನ್ನ “ಶೃಂಗಾರ ಪ್ರಕಾಶ” ದಲ್ಲಿ “ಯೇನ ಶೃಂಗಂ ರೀಯತೇ ಸ ಶೃಂಗಾರಃ” ಎನ್ನುತ್ತಾನೆ. ಶೃಂಗ ಎಂದರೆ ತುತ್ತತುದಿ. ಅಂತಹ ತುತ್ತತುದಿಯನ್ನು ತಲುಪುವುದೇ ಶೃಂಗಾರ. ನಾವು ಶೃಂಗಾರವನ್ನು ಬರಿಯ ಪ್ರೇಮ-ಕಾಮಗಳಿಗಷ್ಟೇ ಸೀಮಿತಗೊಳಿಸಿಬಿಟ್ಟಿದ್ದೇವೆ. ವಾಸ್ತವದಲ್ಲಿ ಯಾವುದೇ ಯೋಚನೆ, ಮಾತು, ಕೃತಿಗಳಲ್ಲಿ ತುತ್ತತುದಿಯನ್ನು ತಲುಪುವುದೇ ಶೃಂಗಾರ. ಅದು ಆವರ್ಣನೀಯ. ಮಾತಿನ ತುತ್ತತುದಿಯೇ ಮೌನ, ಮೌನದ ತುತ್ತತುದಿಯೇ ಸಮಾಧಿ. ಸಮಾಧಿಯ ಶಿಖರಾಗ್ರದಲ್ಲಿ ಬ್ರಹ್ಮಸಾಕ್ಷಾತ್ಕಾರ!

             ಸಾಹಿತ್ಯ ಸಾಮ್ರಾಜ್ಯದ ಜೊತೆಗೆ ಭೋಜ ನಿರ್ಮಾಣ ಮಾಡಿದ ಭವ್ಯ ದೇವಾಲಯಗಳು, ಜಲಾಶಯಗಳಿಗೆ ಲೆಕ್ಖವೇ ಇಲ್ಲ. ಈಗ ನಾವು ಕರೆವ ಭೋಪಾಲ ಆತನದ್ದೇ ನಿರ್ಮಾಣ. ಭೋಜಪಾಲವೆಂದಿದ್ದದ್ದು ಇಂದು ಭೋಪಾಲವಾಗಿದೆ. 2011ರಲ್ಲಿ ಅದರ ಮೂಲ ಹೆಸರಿಗೇ ಮರಳಲು ಯತ್ನಿಸಿದಾಗ ಸೆಕ್ಯುಲರುಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಭೋಪಾಲಕ್ಕೆ ನೀರು ಸರಬರಾಜು ಮಾಡುವ ಹಲವು ಸರೋವರಗಳನ್ನು ಕಟ್ಟಿಸಿದವ ಭೋಜನೇ. ಮಂಡು, ಧಾರಾನಗರಗಳಲ್ಲಿ ಇವನ ಕಾಲದಲ್ಲಿ ಹಲವು ನಿರ್ಮಾಣಗಳು ನಡೆದವು. ಅವೆಲ್ಲವೂ ಇಂದು ಮತಾಂದತೆಯ ಕ್ರೌರ್ಯಕ್ಕೆ ಬಲಿಯಾಗಿವೆ. ಆತನ ಆಳ್ವಿಕೆಯ ಕಾಲದಲ್ಲಿ ಸರಸ್ವತಿಯ ಆರಾಧನೆಯೇ ನಡೆಯಿತು. ಆತನ ರಾಜ್ಯದಲ್ಲಿ ಜನಸಾಮಾನ್ಯರು ಕೂಡ ಸಂಸ್ಕೃತದ ಮೇಲೆ ಪ್ರಭುತ್ವ ಸಾಧಿಸಿದ್ದರು. ಧಾರಾನಗರ ಸಂಸ್ಕೃತ ಅಧ್ಯಯನ, ಕಲೆ ಮತ್ತು ಸಂಸ್ಕೃತಿಗಳ ಕೇಂದ್ರವಾಗಿ ಬೆಳೆಯಿತು. ಯಾವ ಸರಸ್ವತೀಯ ಕೃಪಾಕಟಾಕ್ಷದಿಂದಾಗಿ ರಾಜ ಭೋಜನು ಯೋಗ, ಸಾಂಖ್ಯ, ನ್ಯಾಯ, ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಸಾಹಿತ್ಯ ಮತ್ತು ರಾಜಕೀಯದ ಪ್ರಕಾಂಡ ಪಂಡಿತನಾಗಿ ಬೆಳೆದಿದ್ದನೋ, ರಾಜಭೋಜನು ನಿರಂತರ ವಿದ್ಯಾವಿನೋದವನ್ನು ಸಾಗಿಸುತ್ತಿದ್ದ ಅಂತಹಾ ಸರಸ್ವತೀಯ ಮಂದಿರವಿಂದು ಮಸೀದಿಯಾಗಿದೆ. ಅಲ್ಲಿನ ವಾಗ್ದೇವಿಯ ಮೂರ್ತಿ ಬ್ರಿಟನ್ನಿಗೆ ಸಾಗಿಸಲ್ಪಟ್ಟಿದೆ!

                ವಿಕ್ರಮಾದಿತ್ಯ ಎನ್ನುವುದು ಹೇಗೆ ಬಿರುದಾಯಿತೋ ಅಂತೆಯೇ ಭೋಜನ ಹೆಸರೂ ಚಿರಸ್ಥಾಯಿಯಾಯಿತು. ಮುಂದಿನ ಅರಸರು ಅಭಿನವ ಭೋಜ, ನವಭೋಜ, ಆಂದ್ರಭೋಜ ಮುಂತಾದ ಉಪಾಧಿಗಳನ್ನು ಹೆಮ್ಮೆಯಿಂದ ತಳೆಯುವ ಶ್ರೇಷ್ಠ ಸಂಪ್ರದಾಯ ಆರಂಭವಾಯಿತು. ಹೀಗೆ ಸಾಹಿತ್ಯಾಸಕ್ತರಿಗೆ ಬೆರಗುಗೊಳಿಸುವ ಸಾಹಿತಿಯಾಗಿ, ಅರಸರಿಗೆ ಹೆಮ್ಮೆಯ ಸಂಕೇತವಾಗಿ, ಶಾಸನ ಅಧ್ಯಯನಕಾರರಿಗೆ ಅಪೂರ್ವ ಸಂಶೋಧನಾ ಆಕರವಾಗಿ, ಹತ್ತುಹಲವು ನಿರ್ಮಿತಿಗಳು, ಸುಧಾರಣೆಯ ಗುರಿಕಾರನಾಗಿ ಜನರ ಬಾಯಲ್ಲಿ ದಂತಕಥೆಯಾಗಿ ಸಂಗ್ರಾಮ, ಸಾಹಿತ್ಯ, ಸಮಾಜ ಮುಂತಾದ ಎಲ್ಲಾ ರಂಗಗಳಲ್ಲಿ ಅದ್ವಿತೀಯನಾಗಿ ಸನಾತನ ಧರ್ಮವನ್ನು ಬೆಳಗಿದ ಸಮರಾಂಗಣಸೂತ್ರಧಾರ ಸರಸ್ವತೀ ಕಂಠಾಭರಣ ರಾಜಭೋಜ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾನೆ.

ಶನಿವಾರ, ಸೆಪ್ಟೆಂಬರ್ 14, 2019

ತಾಯಿ ಭಾರತಿಯ ಮುಕುಟಮಣಿಯರ್ಧ ಮರಳಿ ಬಂದಿತು

ತಾಯಿ ಭಾರತಿಯ ಮುಕುಟಮಣಿಯರ್ಧ ಮರಳಿ ಬಂದಿತು


            ಹೌದು ಎಪ್ಪತ್ತು ವರ್ಷಗಳ ಕಾಲ ನೆಹರೂ ಎಂಬ ಮೂರ್ಖನ ನಿರ್ಧಾರದಿಂದ, ಮೂರು ಪರಿವಾರಗಳ ಖಜಾನೆಯಾಗಿ, ಪ್ರತ್ಯೇಕತಾವಾದಿಗಳ ಸ್ವರ್ಗವಾಗಿ, ಭಯೋತ್ಪಾದಕರ ಅಡ್ಡೆಯಾಗಿ, ಹಿಂದೂಗಳಿಗೆ ನರಕವಾಗಿ ನಲುಗಿದ್ದ ಕಶ್ಯಪನ ಭೂಮಿ ಇಂದು ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಸೇರಿದೆ. ಈ ಘನ ಕಾರ್ಯದ ಹಿಂದೆ ಶ್ಯಾಮ್ ಪ್ರಸಾದ್ ಮುಖರ್ಜಿಯಂತಹಾ ರಾಷ್ಟ್ರಭಕ್ತರ ಬಲಿದಾನದ ಪಾಲಿದೆ. ಅಸಂಖ್ಯ ಯೋಧರ ರಕ್ತದ ಕಲೆಯಿದೆ. ತಮ್ಮ ಮಗನನ್ನು ಕಳೆದುಕೊಂಡ ಯೋಧ ಕುಟುಂಬದ ಕಣ್ಣೀರಿನ ಹನಿಯಿದೆ. ತಮ್ಮದೇ ನೆಲದಿಂದ ಒದ್ದೋಡಿಸಲ್ಪಟ್ಟ, ತಮ್ಮ ನೆರೆಕರೆಯ ಮತಾಂಧರಿಂದಲೇ ಅತ್ಯಾಚಾರಕ್ಕೊಳಗಾದ, ಕೊಲೆಯಾದ, ದೇಶದ ಸರ್ಕಾರಗಳಿಂದ ವಿಶ್ವಾಸ ದ್ರೋಹಕ್ಕೊಳಗಾದ ಕಾಶ್ಮೀರ ಪಂಡಿತರ ಅಸಹಾಯಕತೆಯ ನಿಟ್ಟುಸಿರು ಇದೆ. ದಶಕಗಳ ಕಾಲ ಕಾದು ಕುಳಿತ, ನಡೆಯುತ್ತಿದ್ದ ಅನ್ಯಾಯವನ್ನು ಜಗತ್ತಿನೆಲ್ಲೆಡೆ ಸಾರಿ ಹೇಳಿ ಪ್ರತಿಭಟಿಸಿದ ಅಸಂಖ್ಯ ಸಂಘ, ಸಂಸ್ಥೆ ಮತ್ತು ವ್ಯಕ್ತಿಗಳ ಪರಿಶ್ರಮವಿದೆ. ಇವೆಲ್ಲದರ ಪ್ರತಿಯೊಂದು ಅಂಶವನ್ನು ಹೊತ್ತು ಹುಟ್ಟಿದ ದೇಶಭಕ್ತ ಕೇಂದ್ರ ಸರಕಾರದ ರಾಷ್ಟ್ರೀಯತೆಯ ಪರವಾದ ನಿಲುವು, ನೀತಿ, ಕಾರ್ಯಗಳಿವೆ.

              ಗಾಂಧಿ-ನೆಹರೂ ಜೋಡಿಯ ದುರಾಸೆಗೆ ಬಲಿಯಾಗಿ ದೇಶ ಒಡೆದು ಭಾರತ, ಪಾಕಿಸ್ತಾನಗಳೆಂಬ ಎರಡು  ಭಾಗವಾಗಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ತನ್ನ ಪ್ರಧಾನಿ ರಾಮಚಂದ್ರ ಕಾಕ್ ಸಲಹೆಯಂತೆ ಸ್ವತಂತ್ರವಾಗಿ ಕಾಶ್ಮೀರವನ್ನಾಳುವ ಉದ್ಡೇಶದಿಂದ ಸುಮ್ಮನುಳಿದುಬಿಟ್ಟ. ಭಾರತದ ಜೊತೆಗೆ ಮಾತುಕತೆಗೂ ನಿರಾಕರಿಸಿಬಿಟ್ಟ. ಅತ್ತ ಅನಾರೋಗ್ಯದಿಂದ ಬಳಲುತ್ತಿದ್ದ ಜಿನ್ನಾ ವಿಶ್ರಾಂತಿ ಪಡೆಯಲು ಕಾಶ್ಮೀರಕ್ಕೆ ತೆರಳಲು ನಿರ್ಧರಿಸಿ ಆಗಸ್ಟ್ 24ರಂದು ತನ್ನ ಬ್ರಿಟಿಷ್ ಕಾರ್ಯದರ್ಶಿ ವಿಲಿಯಮ್ ಬರ್ನಿಯನ್ನು ಕರೆದು "ಎರಡು ವಾರ ಕಾಶ್ಮೀರದಲ್ಲಿ ಉಳಿಯುವ ವ್ಯವಸ್ಥೆ ಮಾಡಿ" ಎಂದು ಆದೇಶಿಸಿದ. ಮುಸ್ಲಿಂ ಬಾಹುಳ್ಯವಿದ್ದ ಕಾರಣ ಕಾಶ್ಮೀರ ಎಂದಿದ್ದರೂ ತಮಗೇ ಸೇರುವುದು ಎಂದು ಬಗೆದಿದ್ದ ಜಿನ್ನಾನ ಲೆಕ್ಕಾಚಾರ ತಪ್ಪಾಗಿತ್ತು. ಹರಿಸಿಂಗ್ "ಜಿನ್ನಾನನ್ನು ಪ್ರವಾಸಿಯಾಗಿಯೂ ಕಾಶ್ಮೀರಕ್ಕೆ ಕಾಲಿಡಲು ಬಿಡುವುದಿಲ್ಲ" ಎಂದು ಬರ್ನಿಯ ಬಳಿ ಗುಡುಗಿದ್ದ. ಆಗ ಕಾಶ್ಮೀರದಲ್ಲಿ ಮುಸ್ಲಿಮರ ಸಂಖ್ಯೆ 70%. ರಾಜಾ ಹರಿಸಿಂಗನ ಸೇನೆಯಲ್ಲಿ 50%ಕ್ಕಿಂತ ಹೆಚ್ಚು ಮುಸಲ್ಮಾನರಿದ್ದರು. ಪಾಕಿಸ್ತಾನಿಗಳು ಸೇನೆಯನ್ನು ಹೊಕ್ಕು ವಿದ್ರೋಹ ಎಸಗುತ್ತಾರೆ ಎಂದ ಹಿತೈಷಿಗಳ ಬುದ್ಧಿವಾದವನ್ನು ಕೇಳದ ಆತ "ಇಲ್ಲ, ಇಲ್ಲ; ನನ್ನ ಸೈನಿಕರು ನನಗೆ ನಿಷ್ಠರಾಗಿದ್ದಾರೆ" ಎಂದುಬಿಟ್ಟ. ಆದರೆ ಯಾವುದು ಆಗುವುದಿಲ್ಲ ಎಂದು ಅವನು ಹೇಳಿದ್ದನೋ ಅದೇ ಆಯಿತು. ಅಳಿದುಳಿದ ಸೇನೆಯೂ ಅವ್ಯವಸ್ಥಿತವಾಯಿತು. ಕಬೈಲಿ, ಪಠಾಣ್, ಮೈಸೂದ್ ಮುಂತಾದ ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬುಡಕಟ್ಟುಗಳು ಕಾಶ್ಮೀರದ ಲೂಟಿಗೆ ಅಕ್ಟೋಬರ್ 22ರಂದು ಬಂದಿಳಿದವು. ಅಸಂಖ್ಯ ಹಿಂದೂಗಳ ಬರ್ಬರ ಅತ್ಯಾಚಾರ, ಕೊಲೆ ನಡೆದು ಹೋಯಿತು. ಕಾನ್ವೆಂಟುಗಳಲ್ಲಿದ್ದ ನರ್ಸುಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಬಾರಾಮುಲ್ಲಾದ ಜನಸಂಖ್ಯೆ ಮೂರನೇ ಒಂದು ಭಾಗಕ್ಕಿಳಿದಿತ್ತು. ಪರಿಸ್ಥಿತಿ ಕೈಮೀರಿದಾಗ ಗಾಬರಿಗೊಂಡ ರಾಜಾ ಹರಿಸಿಂಗ್ ಯಾವುದೇ ಶರತ್ತಿಲ್ಲದೆ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಒಪ್ಪಂದದ ಸಹಿ ಹಾಕಿದ ಪತ್ರವನ್ನು ಭಾರತಕ್ಕೆ ಕಳುಹಿಸಿ ರಕ್ಷಿಸಬೇಕೆಂದು ಗೋಳಿಟ್ಟ(ಅಕ್ಟೋಬರ್ 24). ಶೇಖ್ ಅಬ್ದುಲ್ಲಾ ಬರುವ ತನಕ ಮಾತಾಡುವುದಿಲ್ಲವೆಂದ ನೆಹರೂ ಆ ಪತ್ರವನ್ನು ಕಸದ ಬುಟ್ಟಿಗೆ ಎಸೆದರು. ಕಾಶ್ಮೀರ ಭಾರತದ ಭಾಗವಲ್ಲ; ಹಾಗಾಗಿ ಭಾರತದ ಸೈನ್ಯವನ್ನು ಕಾಶ್ಮೀರದ ರಕ್ಷಣೆಗೆ ಯಾಕೆ ಉಪಯೋಗಿಸಬೇಕು ಅಂದು ಬಿಟ್ಟರು! ಅಕ್ಟೋಬರ್ 26ರಂದು ಇನ್ನೊಂದು ಒಪ್ಪಂದ ಪತ್ರವನ್ನು ನೇರ ಲಾರ್ಡ್ ಮೌಂಟ್ ಬ್ಯಾಟನ್ನಿಗೆ ಕಳುಹಿಸಿಬಿಟ್ಟ ಹರಿಸಿಂಗ್. ತನ್ನ ಆಪ್ತನನ್ನು ಕರೆದು ತನ್ನ ಪಿಸ್ತೂಲನ್ನು ಕೊಟ್ಟು “ಈ ಪ್ರಸ್ತಾಪವೂ ತಿರಸ್ಕೃತವಾದರೆ ನಾನು ಮಲಗಿರುವಾಗಲೇ ನನಗೆ ಗುಂಡು ಹಾರಿಸಿಬಿಡು” ಅಂದುಬಿಟ್ಟ! ಅತ್ತ ನಿರ್ಧಾರ ತೆಗೆದುಕೊಳ್ಳಲು ಸೇರಿದ್ದ ಸಭೆಯಲ್ಲಿ ಮೌಂಟ್ ಬ್ಯಾಟನ್, ಸ್ಯಾಮ್ ಮಾಣಿಕ್ ಶಾ ಮುಂತಾದವರ ಎದುರು ಜಾಗತಿಕ ಯುದ್ಧ, ವಿಶ್ವಸಂಸ್ಥೆ ಎಂದು ಭಾಷಣ ಬಿಗಿಯಲಾರಂಭಿಸಿದ ನೆಹರೂವನ್ನು ಅರ್ಧದಲ್ಲಿ ತಡೆದ ಪಟೇಲ್ ಭಾರತೀಯ ಸೇನೆಗೆ ಕಾಶ್ಮೀರಕ್ಕೆ ಹೋಗಲು ಅನುಮತಿ ದೊರಕಿಸಿಕೊಟ್ಟರು. ಹೀಗೆ 1947 ಅಕ್ಟೋಬರ್ 26ರಂದು ಕಾಶ್ಮೀರ ಭಾರತಕ್ಕೆ ಅಧಿಕೃತವಾಗಿ ಸೇರಿಬಿಟ್ಟಿತ್ತು.

             ನಮ್ಮ ಸೈನಿಕರು ಕಾಶ್ಮೀರಕ್ಕೆ ತೆರಳಿದ್ದೇನೋ ನಿಜ. ಆದರೆ ಅಲ್ಲಿನ ಸ್ಥಿತಿ ಭಯಾನಕವಾಗಿತ್ತು. ರಸ್ತೆ ಸಂಪರ್ಕವಿರಲಿಲ್ಲ. ವಿಮಾನ ನಿಲ್ದಾಣವೊಂದಿತ್ತು. ಇವರು ಹೋದ ಮೊದಲ ವಿಮಾನವೇ ನಿಲ್ದಾಣದಲ್ಲಿ ದೊಪ್ಪನೆ ಬಿತ್ತು. ಅದನ್ನು ಸರಿಪಡಿಸಿಕೊಂಡು ಯುದ್ಧಕ್ಕಿಳಿದ ಕುಮಾವ್ ರೆಜಿಮೆಂಟ್ ಸಮಯಕ್ಕೆ ಸರಿಯಾಗಿ ಬರದೇ ಇದ್ದಿದ್ದರೆ ಇವತ್ತು ಕಾಶ್ಮೀರ ಭಾರತದ ಪಾಲಿಗಿರುತ್ತಿರಲಿಲ್ಲ! ಸ್ವತಂತ್ರ ಭಾರತದ ಮೊದಲ ಬಲಿದಾನಿ ಮೇಜರ್ ಸೋಮನಾಥ ಶರ್ಮಾರಿಗೆ ಇದಕ್ಕಾಗಿ ನಾವು ಎಷ್ಟು ಕೃತಜ್ಞತೆ ಅರ್ಪಿಸಿದರೂ ಸಾಲದು. ಅಲ್ಲಿ ಇನ್ನೊಂದು ಸವಾಲಿತ್ತು. ಬುಡಕಟ್ಟುಗಳ ಜನರೊಂದಿಗೆ ಅವರದ್ದೇ ವೇಶ ಧರಿಸಿ ಪಾಕೀ ಸೈನಿಕರೂ ಒಳ ನುಗ್ಗಿದ್ದರು. ಭಾರತ ಈ ಪುರಾವೆಗಳನ್ನು ತೆಗೆದುಕೊಂಡು ಮೌಂಟ್ ಬ್ಯಾಟನ್ ಸೂಚನೆಯಂತೆ ನಮ್ಮ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿದೆ ಎಂದು ಜೂನ್ 1, 1948ರಲ್ಲಿ ವಿಶ್ವಸಂಸ್ಥೆಯ ಬಾಗಿಲು ತಟ್ಟಿತು. ಪಾಕಿಸ್ತಾನ, ಭಾರತವೇ ಬಲಾತ್ಕಾರವಾಗಿ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುತ್ತಿರುವಾಗ ಅಲ್ಲಿನ ಬುಡಕಟ್ಟುಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ನುಣುಚಿಕೊಳ್ಳಲು ಯತ್ನಿಸಿತಾದರೂ ವಿಶ್ವಸಂಸ್ಥೆ ನೇಮಿಸಿದ ಆಯೋಗ ತೋರಿಸಿದ ದಾಖಲೆಗಳನ್ನು ನೋಡಿ "ತಮ್ಮ ಸೈನಿಕರು ಅಲ್ಲಿನ ಮುಸಲ್ಮಾನರಿಗೆ ಸಹಾಯ ಮಾಡಿರಬೇಕು, ನಾವು ಆದೇಶ ನೀಡಿಲ್ಲ" ಎಂದು ಭಾಗಶಃ ಅದನ್ನು ಒಪ್ಪಿಕೊಂಡಿತು. ಈಗಾಗಲೇ ಕಾಶ್ಮೀರದ ಹಳ್ಳಿ-ಗಲ್ಲಿಗಳಲ್ಲಿ ಸೇರಿಕೊಂಡಿರುವ ಪಾಕೀ ಸೈನ್ಯವನ್ನು ಸೋಲಿಸಬೇಕಾದರೆ ಕಾಶ್ಮೀರ-ಪಾಕ್ ಗಡಿಯಲ್ಲಿ ಸೇನೆಯನ್ನು ನಿಯುಕ್ತಗೊಳಿಸಬೇಕು ಎಂದಾಗ ನೆಹರೂ "ಇಲ್ಲ, ಇಲ್ಲ; ಪಾಕಿಸ್ತಾನ ವಿಧಿವತ್ತಾಗಿ ಯುದ್ಧ ಘೋಷಣೆ ಮಾಡಿಲ್ಲ. ಕಾಶ್ಮೀರದಲ್ಲೇ ಯುದ್ಧ ಮಾಡಿ" ಎಂದು ಬಿಟ್ಟರು! ಇಂಥಾ ಪರಿಸ್ಥಿತಿಯಲ್ಲೂ ಭಾರತೀಯ ಸೇನೆ ಡಕೋಟಾ ವಿಮಾನಗಳು, ಓಬೀರಾಯನ ಕಾಲದ ಶಸ್ತ್ರಾಸ್ತ್ರಗಳೊಂದಿಗೂ ರಣಭಯಂಕರವಾಗಿ ಹೋರಾಡಿ ಕಾಶ್ಮೀರವನ್ನು ಶತ್ರುಮುಕ್ತಗೊಳಿಸುತ್ತಾ ಸಾಗುತ್ತಿತ್ತು. ಕಾಶ್ಮೀರದ ಅರವತ್ತು ಪ್ರತಿಶತ ಭಾಗ ಮುಕ್ತಗೊಂಡಿದ್ದಾಗ, "ಉಳಿದ ಕಾಶ್ಮೀರವನ್ನು ವಿಶ್ವಸಂಸ್ಥೆಯ ನೇತೃತ್ವದಲ್ಲಿ ತೆಗೆದುಕೊಳ್ಳೋಣ" ಎಂದ ನೆಹರೂ 1949 ಜನವರಿ 1 ರಂದು ಕದನ ವಿರಾಮ ಘೋಷಿಸಿಬಿಟ್ಟರು! "ಇನ್ನು ಕೆಲ ದಿನ ಸಮಯ ಕೊಡಿ; ಇಡೀ ಕಾಶ್ಮೀರವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ" ಎಂದು ಸೈನ್ಯ ಕೈಮುಗಿದು ಬೇಡಿಕೊಂಡರೂ ನೆಹರೂವಿಗೆ ತನ್ನ ಮೆರೆದಾಟವೇ ಮುಖ್ಯವಾಗಿತ್ತು! ಆಗ ನೀಲಂ ಕಣಿವೆಯಲ್ಲಿರುವ ಶಾರದಾ ಪೀಠ ಭಾರತೀಯ ಸೇನೆಯಿಂದ ಕೇವಲ ಮೂವತ್ತು ಕಿ.ಮೀ ದೂರದಲ್ಲಿತ್ತು!

                 ಇತ್ತ ಕಾಶ್ಮೀರದಲ್ಲಿ ಗುಳ್ಳೆ ನರಿ ಶೇಖ್ ಅಬ್ದುಲ್ಲಾನಿಗೆ ಕಾಶ್ಮೀರವನ್ನು ಆಳುವ ದುರಾಸೆ ಹುಟ್ಟಿತ್ತು. ಆತ ಮುಸ್ಲಿಂ ಲೀಗ್ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ. 1939ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಟ್ಟಿದ್ದ ಅಬ್ದುಲ್ಲಾ, ತನ್ನ ಪಕ್ಷವನ್ನು ಮುಸ್ಲಿಂ ಕಾನ್ಫರೆನ್ಸ್ ಜೊತೆ ವಿಲೀನಗೊಳಿಸಿದ. ಈ ತಂಡ ಸ್ವತಂತ್ರವಾಗಿ ಉಳಿಯುತ್ತೇವೆ ಎಂದು ಘೋಷಿಸಿ, ಜಿನ್ನಾನನ್ನು ಪೇಷಾವರದಲ್ಲಿ ಭೇಟಿಯಾಗಿ ಕಾಶ್ಮೀರದ ಮೇಲೆ ದಾಳಿ ಮಾಡಲು ಸಮಯ ಕಾಯುತ್ತಿತ್ತು. ಕಾಶ್ಮೀರದ ಅರ್ಧ ಭಾಗ ಭಾರತಕ್ಕೆ ಸೇರುತ್ತಿದ್ದಂತೆ ಅಬ್ದುಲ್ಲಾ ಹಾಗೂ ಆತನ ಪ್ರಾಣಮಿತ್ರ ನೆಹರೂ ಕಾಶ್ಮೀರದಲ್ಲಿ ಅಬ್ದುಲ್ಲಾನಿಗೆ ಅಧಿಕಾರ ದೊರಕಿಸಿಕೊಡುವ ಉದ್ದೇಶದಿಂದ (ಕು)ತಂತ್ರವೊಂದನ್ನು ಹೆಣೆದರು. ಕಾಶ್ಮೀರ ವ್ಯವಹಾರಗಳಿಗೆ ಸಂಬಂಧಿಸಿ ಕೇಂದ್ರ ಸಚಿವರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರರ ಮೇಲೆ ಒತ್ತಡ ಹೇರಿದ ನೆಹರೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 306-ಎ ವಿಧಿಯನ್ನು ಸೇರಿಸಿದರು. ಅಯ್ಯಂಗಾರ್ ಸಂಸತ್ತಿನಲ್ಲಿ ಇದರ ಪ್ರಸ್ತಾಪ ಮಾಡುತ್ತಿದ್ದಂತೆ ಕೋಲಾಹಲ ಉಂಟಾಯಿತು. ಆಗ ಕಾರ್ಯಕಾರಿಣಿಯ ಮನವೊಲಿಸುವಂತೆ ಪಟೇಲರನ್ನು ಒಪ್ಪಿಸಲಾಯಿತು. ಅಂಬೇಡ್ಕರರನ್ನು ಕಂಡು ಮಾತಾಡಿ ಮನವೊಲಿಸಲು ಶೇಖ್ ಅಬ್ದುಲ್ಲಾನಿಗೆ ಸೂಚಿಸಿದರು ನೆಹರೂ. ಹಾಗೆ ಬಂದ ಅಬ್ದುಲ್ಲಾನಿಗೆ "ಕಾಶ್ಮೀರಿಗಳಿಗೆ ಭಾರತದ ಪ್ರಜೆಗಳಿಗಿರುವಂತೆ ಸಮಾನ ಹಕ್ಕುಗಳನ್ನು ಬಯಸುವ ನೀವು, ಭಾರತೀಯರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳಿರಬಾರದು ಎನ್ನುತ್ತೀರಿ. ಕಾಶ್ಮೀರದ ರಕ್ಷಣೆಗೆ, ಅಭಿವೃದ್ಧಿಗೆ ಭಾರತ ಬೇಕು. ಆದರೆ ಅಲ್ಲಿ ಉಳಿದ ಭಾರತೀಯರಿಗೆ ಹಕ್ಕಿಲ್ಲ ಎಂದರೇನರ್ಥ? ಈ ದೇಶದ ಕಾನೂನು ಮಂತ್ರಿಯಾಗಿ ನಾನು ನನ್ನ ದೇಶೀಯರ ಹಿತಾಸಕ್ತಿಯನ್ನು, ದೇಶದ ಸಾರ್ವಭೌಮತ್ವವನ್ನು ಎಂದಿಗೂ ಕಡೆಗಣಿಸುವುದಿಲ್ಲ" ಎಂದು ಖಂಡತುಂಡವಾಗಿ ನಿರಾಕರಿಸುತ್ತಾರೆ ಅಂಬೇಡ್ಕರ್. ಆದರೂ ಪಟೇಲರ ಕಣ್ಣಿಗೆ ಮಣ್ಣೆರಚಿ, ಅಂಬೇಡ್ಕರ್ ಮೇಲೆ ಒತ್ತಡ ಹೇರಿ ಅದನ್ನು ತಾತ್ಕಾಲಿಕ ಎಂದೂ, ವಿಧಿ 370 ಎಂಬುದಾಗಿ ಸೇರಿಸುವಲ್ಲಿ ಯಶಸ್ವಿಯಾಗುತ್ತಾರೆ ನೆಹರೂ ಹಾಗೂ ಶೇಖ್ ಅಬ್ದುಲ್ಲಾ! ಅಲ್ಲದೆ 1954ರಲ್ಲಿ ಕಾಶ್ಮೀರಕ್ಕೆ ವಿಶೇಷ ಸವಲತ್ತು ನೀಡುವ ಸಲುವಾಗಿ 35ಎ ಎನ್ನುವ ಇನ್ನೊಂದು ವಿಧಿಯನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಮೂಲಕ ಸೇರಿಸುತ್ತಾರೆ ನೆಹರೂ. ಹೀಗೆ ವಿಧಿ 370 ಹಾಗೂ 35ಎ ಗಳು ಯಾವುದೇ ರಾಜ್ಯಕ್ಕಿರದ ವಿಶೇಷ ಸ್ಥಾನಮಾನ, ರಿಯಾಯಿತಿಗಳನ್ನು ಜಮ್ಮುಕಾಶ್ಮೀರಕ್ಕೆ ಕೊಟ್ಟವು.

ಹೇಗಿತ್ತು ವಿಧಿ 370?
            ಈ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರ ರಾಜ್ಯದ ಹೊರಗಿನವರಾರೂ ಅಲ್ಲಿ ಭೂಮಿ ಖರೀದಿಸುವಂತಿರಲಿಲ್ಲ. ಭಾರತದ ಉಳಿದ ಭಾಗದವರು ಅಲ್ಲಿ ಹೋಗಿ ನೆಲೆಸಿದರೆ ಅಲ್ಲವರಿಗೆ ಮತದಾನದ ಹಕ್ಕು ಇರಲಿಲ್ಲ. ಸರ್ಕಾರಿ ನೌಕರಿಯ ಹಕ್ಕೂ ಇರಲಿಲ್ಲ. ವ್ಯಾಪಾರ ಮಾಡುವಂತಿರಲಿಲ್ಲ. ಶಾಶ್ವತವಾಗಿ ನೆಲೆಸುವಂತಿರಲಿಲ್ಲ. ಹೊರಗಿನವರಾರೂ ಅಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ. ರಾಜ್ಯದ ಹೊರಗಿನವರನ್ನು ವಿವಾಹವಾಗುವ ಮಹಿಳೆಗೂ ಈ ವಿಧಿಯ ಪ್ರಕಾರ ಸಿಗುತ್ತಿದ್ದ ಹಕ್ಕು, ಸೌಲಭ್ಯಗಳೆಲ್ಲಾ ತಪ್ಪಿ ಹೋಗುತ್ತಿದ್ದವು. ಆದರೆ ಆಕೆ ಪಾಕಿಸ್ತಾನದವನೊಬ್ಬನನ್ನು ಮದುವೆಯಾದರೆ ಆಕೆಯ ಹಕ್ಕುಗಳೆಲ್ಲಾ ಹಾಗೆಯೇ ಉಳಿಯುತ್ತಿದ್ದವು. ಮಾತ್ರವಲ್ಲಾ ಆ ಪಾಕಿಸ್ತಾನಿಗೂ ಜಮ್ಮುಕಾಶ್ಮೀರದ ನಾಗರಿಕತ್ವ ತನ್ಮೂಲಕ ಭಾರತದ ನಾಗರಿಕತ್ವವೂ ಸಿಗುತ್ತಿತ್ತು. ಅಂದರೆ ಇದು ಭಯೋತ್ಪಾದಕರಿಗೆ ಭಾರತಕ್ಕೆ ಬರಲು ಇದ್ದ ರಹದಾರಿಯಾಗಿತ್ತು. ಹಾಗೆಯೇ ಜಮ್ಮು-ಕಾಶ್ಮೀರದ ಪುರುಷ ಹೊರ ರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕು ಅಬಾಧಿತ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತಿತ್ತು. ಷರಿಯಾ ಕಾನೂನಿನ ಕುಣಿಕೆ ಮಹಿಳೆಯರ ಮೇಲಿರುತ್ತಿತ್ತು. ಈ ಅಸಮಾನತೆಯ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಹೋರಾಡಿದ್ದು ಕಾಣೆ. ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಆದರೆ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಹಣ ಇಲ್ಲಿಗೆ ಹೋಗುತ್ತಿತ್ತು!

            ಈ 370ನೇ ವಿಧಿಯ ಲಾಭ ಪಡೆದು ಜಮ್ಮುಕಾಶ್ಮೀರ ರಾಜ್ಯ ತನ್ನದೇ ಆದ ಸಂವಿಧಾನವನ್ನು 1957ರಲ್ಲಿ ಅಳವಡಿಸಿಕೊಂಡಿತು. ಒಂದು ದೇಶದಲ್ಲಿ ಎರಡು ಸಂವಿಧಾನ! ಈಗ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿರುವ ಜಾತ್ಯಾತೀತರು ಹಾಗೂ ಸಮಾಜವಾದಿಗಳೆಂದು ಕರೆಯಿಸಿಕೊಳ್ಳುತ್ತಿರುವವರೂ ಗಮನಿಸಬೇಕಾದ ವಿಷಯವೇನೆಂದರೆ ಅವೆರಡೂ ಪದಗಳಿಗೆ ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಜಾಗವೇ ಇರಲಿಲ್ಲ! ಕೇಂದ್ರ ಸರಕಾರ ಇತ್ತೀಚೆಗೆ ಆರ್.ಟಿ.ಐ ಕಾಯ್ದೆಗೆ ತಿದ್ದುಪಡಿ ತಂದಾಗ ಇದೇ 370ನೇ ವಿಧಿಯ ಪರವಾಗಿರುವವರು ವಿರೋಧಿಸಿದ್ದರು. ಆದರೆ 370ನೇ ವಿಧಿಯ ಕಾರಣ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಆರ್.ಟಿ.ಐಗೆ ಯಾವುದೇ ಕಿಮ್ಮತ್ತಿರಲಿಲ್ಲ. ಕೌಟುಂಬಿಕ ದೌರ್ಜನ್ಯ ಪರಿಹಾರ, ವನ್ಯಜೀವಿ ಸಂರಕ್ಷಣೆ,ಸಿಎಜಿ, ಭ್ರಷ್ಟಾಚಾರ ನಿಯಂತ್ರಣಗಳಂತಹಾ ಕಾಯ್ದೆಗಳ ಸಹಿತ ಯಾವುದೇ ಕಾಯ್ದೆ ಅನ್ವಯವಾಗುತ್ತಿರಲಿಲ್ಲ. ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಇಲ್ಲಿ ಅಧಿಕಾರವಿರಲಿಲ್ಲ. ಸಿಬಿಐ ತನಿಖೆ ನಡೆಸಬೇಕಾದರೆ ರಾಜ್ಯ ಸರಕಾರದ ಅನುಮತಿ ಪಡೆಯಬೇ ಕಿತ್ತು! ಸರ್ವೋಚ್ಚ ನ್ಯಾಯಾಲಯ ಕೇವಲ ಮನವಿ ಮಾಡಬಹುದಿತ್ತು! ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ. ಪಂಚಾಯತ್ಗಳಿಗೆ ಅಧಿಕಾರವಿಲ್ಲ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಾದರೂ ಅನುಮತಿ ಪಡೆದುಕೊಳ್ಳಬೇಕಿತ್ತು. ಬಳಿಕವೂ ಜಮ್ಮು ಕಾಶ್ಮೀರದ ಧ್ವಜದ ಜೊತೆಗೆಯೇ ಹಾರಿಸಬೇಕಿತ್ತು. ರಾಷ್ಟ್ರಧ್ವಜವನ್ನು ಸುಡುವ, ಹರಿಯುವ ಮುಂತಾದ ರಾಷ್ತ್ರೀಯ ಸಂಕೇತಗಳಿಗೆ ಮಾಡುವ ಅವಮಾನ ಇಲ್ಲಿ ಅಪರಾಧವಾಗಿರಲಿಲ್ಲ. ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ-ಸಂಪರ್ಕ ಕ್ಷೇತ್ರ ಬಿಟ್ಟು ಯಾವುದೇ ಕಾಯಿದೆ-ಕಾನೂನುಗಳನ್ನು ಜಮ್ಮು ಕಾಶ್ಮೀರದಲ್ಲಿ ಮಾಡಲು ಕೇಂದ್ರ ಸರಕಾರ ಅಲ್ಲಿನ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು.

             ರಾಷ್ಟ್ರಾದ್ಯಂತ ಮಂಡಲ ಆಯೋಗದ ಬಗ್ಗೆ ಬೊಬ್ಬೆ ಕೇಳಿ ಬರುತ್ತದೆ. ಆದರೆ ಕಾಶ್ಮೀರದಲ್ಲಿ ಮಂಡಲ ಆಯೋಗದ ವರದಿ ಜಾರಿಗೇ ಬರಲಿಲ್ಲ. 1991ರವರೆಗೆ ಹಿಂದುಳಿದ ವರ್ಗಕ್ಕೆ ಯಾವುದೇ ಮೀಸಲಾತಿಯೇ ಸಿಗುತ್ತಿರಲಿಲ್ಲ. 91ರ ಬಳಿಕವೂ ರಾಜಕೀಯ ಮೀಸಲಾತಿ ಸಿಗಲಿಲ್ಲ. ಅಸಲಿಗೆ ಅಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟಿದೆಯೆಂಬ ಅಂಕಿ ಅಂಶಗಳೇ ಇಲ್ಲ. 1956ರಲ್ಲಿ ಪಂಜಾಬಿನಿಂದ ಕರೆತಂದ ವಾಲ್ಮೀಕಿ ಜನಾಂಗಕ್ಕೆ ಯಾವುದೇ ನಾಗರಿಕ ಹಕ್ಕುಗಳು ಸಿಕ್ಕಿಲ್ಲ. 1947ರಲ್ಲಿ ಅಪಾರ ಪ್ರಮಾಣದ ಹಿಂದೂಗಳು, ಸಿಕ್ಖರು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಆಗ ಬಂದವರಲ್ಲಿ ಕೆಲವರು ಕಾಶ್ಮೀರದಲ್ಲಿ ನೆಲೆ ನಿಂತರು. ಆದರೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಸಿಗಲಿಲ್ಲ. ಆದರೆ ವಿಭಜನೆ ಸಂದರ್ಭದಲ್ಲಿ ಕಾಶ್ಮೀರದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರು ಬೇಕಾದರೆ ಮರಳಿ ಬರಬಹುದು, ತಮ್ಮ ಭೂಮಿಯನ್ನು ಮರಳಿ ಪಡೆಯಬಹುದು, ಪರಿಹಾರವನ್ನೂ ಪಡೆದುಕೊಳ್ಳಬಹುದು!

           1951ರಲ್ಲಿ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಡೆಯಿತು. ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವಲ್ಲ, ಅಲ್ಲಿನ ಭೌಗೋಳಿಕ ಸನ್ನಿವೇಶವನ್ನೂ ಪರಿಗಣಿಸಬೇಕು ಅಂತ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಮತ್ತು ಜಮ್ಮು-ಕಾಶ್ಮೀರ ಸಂವಿಧಾನದ 50ನೇ ವಿಧಿ ಇವೆರಡರಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಕ್ಷೇತ್ರ ಮರುವಿಂಗಡಣಾ ಆಯೋಗಗಳು ಸಂವಿಧಾನ ಮತ್ತು ಪ್ರಜಾಪ್ರಾತಿನಿಧ್ಯ ಕಾಯಿದೆಯ ಆಶಯವನ್ನು ಎಂದೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. 2001ರಲ್ಲಿ ನಡೆಸಿದ ಜನಗಣತಿ ಪ್ರಕಾರ, ಜಮ್ಮುವಿನ 26 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ 30,59,986 ಮತದಾರರಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಜಮ್ಮುವಿನ ಮೂರನೇ ಎರಡರಷ್ಟು ಪ್ರದೇಶ ದುರ್ಗಮ ಗುಡ್ಡಗಾಡು, ಪರ್ವತ ಪ್ರದೇಶಗಳಿಂದ ಕೂಡಿದೆ. ಅಲ್ಲಿ ಸುವ್ಯವಸ್ಥಿತವಾದ ರಸ್ತೆ ಸಂಪರ್ಕವೂ ಇಲ್ಲ. ಆದರೆ ಈ ಪ್ರದೇಶಕ್ಕೆ 37 ವಿಧಾನಸಭಾ ಕ್ಷೇತ್ರಗಳನ್ನು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಕೇವಲ 15,953 ಚ.ಕಿ.ಮೀ. ವಿಸ್ತಾರವಾದ ಪ್ರದೇಶ ಮತ್ತು 29 ಲಕ್ಷ ಮತದಾರರನ್ನಷ್ಟೇ ಹೊಂದಿರುವ ಕಾಶ್ಮೀರ ಕಣಿವೆಗೆ 46 ವಿಧಾನಸಭಾ ಕ್ಷೇತ್ರಗಳು ಮತ್ತು 3 ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ! ಯಾಕೆ ಹೀಗೆ? ಕಾರಣ ಜಮ್ಮುವಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ!

            1992ರಲ್ಲಿ ಕ್ಷೇತ್ರ ಮರುವಿಂಗಡಣಾ ಆಯೋಗ 1957ರ ಪ್ರಜಾಪ್ರಾತಿನಿಧ್ಯ ಕಾಯಿದೆ ಅನುಸಾರ ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ನಡೆದಿತ್ತು. ಇನ್ನೇನು ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಬೇಕು ಅನ್ನುವಷ್ಟರಲ್ಲಿ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಕೆ. ಗುಪ್ತಾ ಆ ಯೋಜನೆಯನ್ನು ತಿರಸ್ಕರಿಸಿಬಿಟ್ಟರು! ಕೇವಲ ರಾಜಕೀಯ ಮಾತ್ರವಲ್ಲ ಅಭಿವೃದ್ಧಿಯೂ ಜಮ್ಮು ಪಾಲಿಗೆ ಮರೀಚಿಕೆಯೇ! ಪ್ರವಾಸೋದ್ಯಮ ಬಜೆಟ್ನಲ್ಲಿ ಶೇ.90ರಷ್ಟನ್ನು ಕಾಶ್ಮೀರಕ್ಕೆ ಕೊಡಲಾಗಿದೆ.. ವ್ಯಾಪಾರ ಮತ್ತು ಪ್ರವಾಸೋದ್ಯಮದಿಂದ ಬರುವ ಬಹುತೇಕ ಆದಾಯ ಜಮ್ಮುವಿನಿಂದಲೇ ಆಗಿದ್ದರೂ ಅಲ್ಲಿಗೆ ಅನುದಾನವಿಲ್ಲ! ಮಾತ್ರವಲ್ಲ, ಕಾಶ್ಮೀರ ಕಣಿವೆಗೆ ಉಚಿತ ವಿದ್ಯುತ್, ಜಮ್ಮು ಪ್ರಾಂತ್ಯದಲ್ಲಿ ದುಬಾರಿ ವಿದ್ಯುತ್ ಶುಲ್ಕ, ಇವೆಲ್ಲವೂ 370ನೇ ವಿಧಿಯ ಅಪಸವ್ಯಗಳು! ಹೀಗೆ ದೇಶಕ್ಕೇ ಒಂದು ಕಾನೂನಿದ್ದರೆ ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಕಾನೂನು, ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನವಿತ್ತು. ಒಂದು ದೇಶದಲ್ಲಿ "ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್, ದೋ ಸಂವಿಧಾನ್"! ಎಂತಹಾ ವಿಚಿತ್ರ!

               ಇದನ್ನು ಕಿತ್ತು ಹಾಕಬೇಕೆಂದು ಅದೆಷ್ಟು ಹೋರಾಟಗಳು ನಡೆದವು. "ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ಔರ್ ದೋ ನಿಷಾನ್ ನಹಿ ಚಲೇಗಾ" ಎನ್ನುತ್ತಾ ಪ್ರತಿಭಟನೆ ನಡೆಸಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರನ್ನು ಅಲ್ಲಿನ ಸರಕಾರ ಸೆರೆಮನೆಯಲ್ಲಿಟ್ಟು ಹತ್ಯೆ ಮಾಡಿತು. ಅಮರನಾಥ ಯಾತ್ರಿಗಳ ಮೇಲಂತೂ ಪ್ರತಿವರ್ಷ ಭಯೋತ್ಪಾದಕ ತಂಡಗಳು ದಾಳಿಯೆಸಗುತ್ತಿದ್ದವು. ಮುಫ್ತಿ ಮಹಮದ್ ಸಯೀದ್ ಮುಖ್ಯಮಂತ್ರಿಯಾಗಿದ್ದಾಗ ತನ್ನ ಮಗಳನ್ನೇ ಭಯೋತ್ಪಾದಕರಿಗೆ ಕೊಟ್ಟು ಅಪಹರಣದ ನಾಟಕವಾಡಿ ಸೆರೆಮನೆಯಲ್ಲಿದ್ದ ಭಯೋತ್ಪಾದಕರನ್ನು ಬಿಡಿಸಿದ್ದ. ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾಗ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ರೋಹಿಂಗ್ಯಾಗಳನ್ನು ಕರೆತಂದು ಎಲ್.ಓ.ಸಿಯಿಂದ 50ಕಿಮೀ ದೂರದಲ್ಲಿರುವ ಜಮ್ಮುವಿನ ಭಟಿಂಡಾದಲ್ಲಿ ನೆಲೆಗೊಳಿಸಿಬಿಟ್ಟ. ಅವರೀಗ ಎಲ್ಲಾ ದುಷ್ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಮರನಾಥ ಯಾತ್ರಿಗಳಿಗೆ ಯಾತ್ರಿನಿವಾಸಗಳನ್ನು ಕಟ್ಟಿಕೊಡಿ ಎಂದರೆ ಇದೇ ಕಾಶ್ಮೀರಿ ರಾಜಕಾರಣಿಗಳು ಆಕಾಶ ಭೂಮಿ ಒಂದು ಮಾಡಿ ಕಿರುಚಾಡಿದ್ದರು. ಪ್ರತ್ಯೇಕತಾವಾದಿಗಳು ಇಲ್ಲಿಯ ತರುಣರ ಕೈಗೆ ಕಲ್ಲು ಕೊಟ್ಟು ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸಿ, ಕೆಲಸ ಕೊಡಿಸಿದರು.

             ದೇಶದ 1% ಜನಸಂಖ್ಯೆ ಇರುವ ಜಮ್ಮು ಕಾಶ್ಮೀರಕ್ಕೆ ಕೇಂದ್ರದ ಅನುದಾನದ ಪಾಲು 10%! ದೇಶದ 13% ಜನಸಂಖ್ಯೆಯುಳ್ಳ ಉತ್ತರ ಪ್ರದೇಶ ಪಡೆಯುವ ಪಾಲು 8.2%. 2000-2016ರ ಅವಧಿಯಲ್ಲಿ ಜಮ್ಮು ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿ ತಲಾ 91,300 ರೂ. ಪಡೆದರೆ ಉತ್ತರಪ್ರದೇಶದ ವ್ಯಕ್ತಿಗೆ ಸಿಕ್ಕಿದ್ದು ಬರೇ 4300 ರೂ. ಈ ಅವಧಿಯಲ್ಲಿ ಜಮ್ಮು ಕಾಶ್ಮೀರ ಗಿಟ್ಟಿಸಿದ್ದು ಬರೋಬ್ಬರಿ 1.14 ಲಕ್ಷ ಕೋಟಿ ರೂ.! ಇವೆಲ್ಲವೂ ವಿಧಿ 370ರ ಫಲಶ್ರುತಿಗಳೇ. ಈ ಅವಧಿಗೆ ಮುನ್ನವೂ ಇಷ್ಟೇ ಅಥವಾ ಇದಕ್ಕಿಂತಲೂ ಹೆಚ್ಚು ಪ್ರಮಾಣದ ಅನುದಾನವನ್ನು ಜಮ್ಮು ಕಾಶ್ಮೀರ ಪಡೆದುಕೊಂಡು ಬಂದಿತ್ತು. ಆದರೆ ಆ ಹಣದ ಹಂಚಿಕೆ, ವಿನಿಯೋಗ, ಉಳಿತಾಯದಲ್ಲಿ ಯಾವುದೇ ಪಾರದರ್ಶಕತೆಯಿರಲಿಲ್ಲ ಎಂದು 2016ರ ಕೇಂದ್ರ ಸಿಎಜಿ ವರದಿ ಹೇಳಿದೆ. ಇಷ್ಟು ಅನುದಾನವಿದ್ದರೂ ಕಾಶ್ಮೀರ ಯಾಕೆ ಅಭಿವೃದ್ಧಿಯಾಗಲಿಲ್ಲ? ಕಾರಣ ಇವೆಲ್ಲವೂ ಮೂರು ಕುಟುಂಬಗಳ ಖಜಾನೆ ಸೇರಿತ್ತು!

                    ಈ ವಿಧಿಯಿಂದಾಗಿಯೇ ಜಮ್ಮುಕಾಶ್ಮೀರದಲ್ಲಿ ಯಾವುದೇ ಬಂಡವಾಳ ಹೂಡಿಕೆಯಾಗಲಿಲ್ಲ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ಹೀಗಾಗಿ ಬಡ ಕಾಶ್ಮೀರಿಯ ಕೊಳ್ಳುವ ಸಾಮರ್ಥ್ಯವೂ ವೃದ್ಧಿಯಾಗಲಿಲ್ಲ. ಹಾಗಾಗಿಯೇ ಅನಾಯಾಸವಾಗಿ ಕಲ್ಲು ಬಿಸಾಕಿದರೆ ಬರುವ 500ರೂಪಾಯಿ ಭಿಕ್ಷೆಗೆ ಅವ ಇಳಿದದ್ದು. ಅದಕ್ಕೆ ಕುರಾನಿನ ಬೋಧನೆ ಕೂಡಾ ಜತೆಯಾಯಿತು!  ತನ್ನ ಹೊಟ್ಟೆಗೆ ಕಲ್ಲು ಹೊಡೆಯುತ್ತಿರುವುದು ವಿಧಿ 370 ಹಾಗೂ ಕಾಶ್ಮೀರದ ಮೂರು ರಾಜಕೀಯ ಕುಟುಂಬಗಳು ಎಂದು ಅರಿಯದ ಆತ ಭಯೋತ್ಪಾದನೆಗೂ ಬೆಂಬಲ ಕೊಟ್ಟ. ಅದು ಪಾಕಿಸ್ತಾನ ಹಾಗೂ ಅದರ ಕೈಗೊಂಬೆಯಾಗಿ ವರ್ತಿಸುವ ಕಾಶ್ಮೀರದ ರಾಜಕಾರಣಿಗಳು ಹಾಗೂ ಸಂಘಟನೆಗಳು ತನ್ನನ್ನು ಆಡಿಸಿ ತಾವು ಮೆರೆಯುವ ಆಟ ಎಂದು ಆತನಿಗೆ ಅರಿವಾಗಲೇ ಇಲ್ಲ! ಇದ್ದ ಕೆಲವೇ ಕೆಲವು ಸರಕಾರೀ ಉದ್ಯೋಗಗಳಲ್ಲಿ ಮುಸ್ಲಿಮರಿಗೇ ಹೆಚ್ಚು ರಿಯಾಯಿತಿ ಇದ್ದ ಕಾರಣ ಹಿಂದೂ ಕೂಡಾ ಬಡವನಾಗಿಯೇ ಉಳಿದ. ಕಳೆದ ಏಳು ದಶಕಗಳಲ್ಲಿ ಕೇಂದ್ರ ಸರಕಾರಗಳು ಸುರಿದ ಅಪಾರ ಪ್ರಮಾಣದ ಹಣ ಕೆಲವೇ ಕೆಲವು ಕೈಗಳಲ್ಲಿಯೇ ಉಳಿದು, ಜಮ್ಮು ಕಾಶ್ಮೀರ ಭ್ರಷ್ಟಾಚಾರದ ಗೂಡಾಯಿತು. ಕೇವಲ ಆರು ತಿಂಗಳ ಪ್ರವಾಸೋದ್ಯಮ, ಅಲ್ಲಲ್ಲಿ ಬೆಳೆವ ಕೇಸರಿ, ಸೇಬು, ಬಾಸ್ಮತಿಯಿಂದ ಎಷ್ಟು ಗಳಿಕೆಯಾದೀತು?

                ಈಗ ಕೇಂದ್ರ ಸರಕಾರ ವಿಧಿ 370ಯನ್ನು ಕಿತ್ತೊಗೆದಿದೆ. ದೇಶದ ಇತರ ರಾಜ್ಯಗಳಿಗೂ ಅನ್ವಯವಾಗುವ ಕಾನೂನು, ಸಂವಿಧಾನ ಈಗ ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಇನ್ನು ಮುಂದೆ ಜಮ್ಮು-ಕಾಶ್ಮೀರ ಶಾಸನ ಸಭೆ ಸಹಿತ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಢಕ್ ಶಾಸನ ಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿರಲಿದೆ. ವಿಧಿ 370 ಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಹೈಕೋರ್ಟ್ 2015ರ ಅಕ್ಟೋಬರ್ ರಂದು ನೀಡಿದ್ದ ಆದೇಶದ ಪ್ರಕಾರ ಅನುಚ್ಛೇದ 3 ರ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನಿರ್ಧರಿಸುವ ಹಕ್ಕು ಸಾಂವಿಧಾನಿಕ ಶಾಸನ ಸಭೆಗೆ ಇದೆ. ವಿಧಾನಸಭೆ ವಿಸರ್ಜನೆಯಾಗಿರುವ ಜಮ್ಮು ಕಾಶ್ಮೀರದಲ್ಲಿ ಈಗ ರಾಜ್ಯಪಾಲರ ಆಳ್ವಿಕೆ. ಹಾಗಾಗಿ ಕಾಶ್ಮೀರದ ರಾಜ್ಯಪಾಲರ ಸಹಿಯೊಂದು ಸಾಕು. ಯಾವ ರಾಷ್ಟ್ರಪತಿಗಳ ಹುದ್ದೆಯ ಮೂಲಕ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತೋ ಈಗ ಅದೇ ರಾಷ್ಟ್ರಪತಿಗಳ ಅಂಕಿತದ ಮೂಲಕ ವಿಧಿ 370ರ ವಿಧಿಬರೆಹವನ್ನು ಬದಲಾಯಿಸಿ ಅಂತಿಮ ಸಂಸ್ಕಾರ ಮಾಡಲಾಗಿದೆ. ಈಗ ಜಮ್ಮು ಕಾಶ್ಮೀರ ನಿಜಾರ್ಥದಲ್ಲಿ ಸ್ವತಂತ್ರಗೊಂಡು ತಾಯಿ ಭಾರತಿಯ ತೆಕ್ಕೆಗೆ ಮರಳಿದೆ. ವಿಧಿ 370ನ್ನು ತೆಗೆದರೆ ಭೂಕಂಪನವಾಗುತ್ತದೆ ಎನ್ನುತ್ತಿದ್ದವರಿಗೆ ಈಗ ತಮ್ಮ ಕಾಲ ಕೆಳಗಿನ ನೆಲ ಕುಸಿಯುತ್ತಿರುವ ಅನುಭವವಾಗುತ್ತಿದೆ! ಸಿಕ್ಕಿದ ಅಪಾರ ಸಂಪತ್ತನ್ನು ತಿಂದುಂಡು ದುಂಡಾಗಿ ಬೆಳೆದು, ತರುಣರನ್ನು ಕಲ್ಲೆಸೆಯಲು ಕಳುಹುತ್ತಿದ್ದ, ಕಾಶ್ಮೀರಿ ಪಂಡಿತರ, ಸೈನಿಕರ ಕೊಲೆಗೆ ಕಾರಣರಾದ ಜಮ್ಮು ಕಾಶ್ಮೀರವನ್ನು ನರಕಕ್ಕೆ ತಳ್ಳಿದ ಮೂರು ಪರಿವಾರಗಳಿಗೆ ಇನ್ನು ಕಾದಿದೆ ಹಬ್ಬ! ಜಮ್ಮು ಕಾಶ್ಮೀರದ ಕ್ಷೇತ್ರ ಮರುವಿಂಗಡನೆಗೂ ಕಾಲ ಕೂಡಿ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ, ಪ್ರವಾಸೋದ್ಯಮ, ಮೌಲ್ಯ ವೃದ್ಧಿಗೊಳಿಸುವ ಉಪಾಯದೊಂದಿಗಿನ ಆಹಾರ-ಔಷಧೀಯ ಬೆಳೆಗಳ ವ್ಯಾಪಾರ ಅಲ್ಲಿ ಉದ್ಯೋಗವಕಾಶವನ್ನು ಹೆಚ್ಚಿಸಿ ಕಾಶ್ಮೀರವನ್ನು ಮತ್ತೆ ಭೂಸ್ವರ್ಗವನ್ನಾಗಿಸಲಿದೆ. ಕೇಸರಿಯ ಘಮಲಿನೊಂದಿಗೆ ಶಾರದೆಯ ಗುಣಗಾನ ಕೇಳುವ ದಿನಗಳು ಹತ್ತಿರವಾಗಿವೆ. ಕಾಶ್ಮೀರದ ಉಳಿದರ್ಧವನ್ನು ಪಡೆವ ಆಸೆಯೂ ಗರಿಗೆದರಿದೆ. ಅಷ್ಟೇ ಏಕೆ ರಾಜಕೀಯ ಅಸ್ಥಿರತೆಯುಳ್ಳ, ದಾರಿದ್ರ್ಯದಿಂದ ಕೊಳೆಯುತ್ತಿರುವ ಪಾಕಿಸ್ತಾನ ಸ್ವಯಂಕೃತ ಅಪರಾಧದಿಂದ ನಾಲ್ಕು ಭಾಗಗಳಾಗಿ ವಿಭಜಿತಗೊಂಡು ಮತ್ತೆ ಭಾರತದ ತೆಕ್ಕೆಗೆ ಬರುವ ದಿನವೂ ದೂರವಿಲ್ಲ ಅನಿಸುತ್ತಿದೆ.