ಪುಟಗಳು

ಮಂಗಳವಾರ, ನವೆಂಬರ್ 5, 2019

ಸಮಾರಾಂಗಣಸೂತ್ರಧಾರ ಸರಸ್ವತೀಕಂಠಾಭರಣ ಪರಮಾರ ಭೋಜ

ಸಮಾರಾಂಗಣಸೂತ್ರಧಾರ ಸರಸ್ವತೀಕಂಠಾಭರಣ ಪರಮಾರ ಭೋಜ


             647 ಚದರ ಕಿ.ಮೀ. ವಿಸ್ತಾರವಾದ ಬೃಹತ್ ಸರೋವರ. ಅದರ ಪಕ್ಕದಲ್ಲೇ ಇನ್ನೊಂದು ಚಿಕ್ಕ ಸರೋವರ. ಇಡೀ ರಾಜ್ಯದಲ್ಲೇ ಹರಡಿರುವ ಸಾವಿರ ವರ್ಷಗಳು ಕಳೆದರೂ ಇಂದಿಗೂ ಜನರ ದಾಹ ತೀರಿಸುತ್ತಿರುವ ಇಂತಹಾ ಹಲವು ಕೆರೆ ಕಟ್ಟೆಗಳು. ಈ ಎಲ್ಲಾ ಸರೋವರಗಳ ತಟಗಳಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಹಲವು ಮಠ, ಮಂದಿರ ನಿರ್ಮಿತಿಗಳು. ಇವೆಲ್ಲಾ ಮಠ ಮಂದಿರಗಳಿಗೆ ಕಲಶ ಪ್ರಾಯದಂತೆ ತಲೆಯೆತ್ತಿ ನಿಂತಿತ್ತು ವಿಶಾಲ ಸರಸ್ವತೀ ಮಂದಿರ. ಅಲ್ಲಿ ನಡೆಯುತ್ತಿತ್ತು ನಿರಂತರ ವಿದ್ಯಾ ವಿನೋದ. ಸಂಸ್ಕೃತ ಬರದ ಬ್ರಾಹ್ಮಣನಿಗಲ್ಲಿ ಪ್ರವೇಶವಿಲ್ಲ. ಸಂಸ್ಕೃತ ಬಲ್ಲ ಚಾಂಡಾಲನೂ ಅಲ್ಲಿ ಪೂಜಾರ್ಹ! ಅದು ಕೇವಲ ರಣ ಕಲಿಗಳ ಸಾಮ್ರಾಜ್ಯವಲ್ಲ. ಅದು ಸಾಹಿತ್ಯ ಸಾಮ್ರಾಜ್ಯವೂ ಹೌದು. ಸಮೃದ್ಧ ಶಿಲ್ಪ ಸಾಮ್ರಾಜ್ಯವೂ ನಿಜ. ಉತ್ತಮವಾದುದು ಯಾವುದಿಲ್ಲ ಎಂದು ಹುಡುಕಬೇಕಾದಂತಹಾ ಆ ಸಾಮ್ರಾಜ್ಯಕ್ಕೆ "ಸರಸ್ವತೀ ಕಂಠಾಭರಣ"ದಂತಿದ್ದ ಸಮರಾಂಗಣ ಸೂತ್ರಧಾರನೊಬ್ಬ ಅಧಿಪತಿ. ವಿಕ್ರಮಾದಿತ್ಯನಂತೆ ಅವನ ಹೆಸರೇ ಮುಂದಿನ ಪೀಳಿಗೆಗೆ ಬಿರುದಾದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

             ಭೋಜ ರಾಜ. ಮಧ್ಯೋತ್ತರ ಭಾರತದ ಜಾಜ್ವಲ್ಯಮಾನ ನಕ್ಷತ್ರ. ಈತ ಮಧ್ಯಕಾಲೀನ ಭಾರತದ ಪ್ರಸಿದ್ಧ ಅರಸ ಮಾತ್ರವಲ್ಲ; ಜಗತ್ತಿನಾದ್ಯಂತ ಸರ್ವಕಾಲದಲ್ಲೂ ಬೆಳಗಬಲ್ಲ ಮಹನೀಯ ವ್ಯಕ್ತಿತ್ವ ಆತನದ್ದು. ಪರಮಾರ ವಂಶ ಮಾಳವವನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿತು. ಅವರ ಮೂಲಸ್ಥಾನ ರಾಜಸ್ಥಾನದ ಮೌಂಟ್ ಅಬು. ಪದ್ಮಗುಪ್ತನ "ಪರಿಮಳಾ" ಗ್ರಂಥದ ನವಸಾಹಸಾಂಕ ಚರಿತದ 11ನೇ ಸರ್ಗದಲ್ಲಿ ಪರಮಾರರು ವಶಿಷ್ಠಕುಲದವರೆಂದು ಹೇಳಲ್ಪಟ್ಟಿದೆ.
ಅಸ್ತ್ಯೂರ್ವಿಘ್ನಂ ಪ್ರತೀಚ್ಯಾಂ ಹಿಮಗಿರಿ ತನಯಃ ಸಿದ್ಧ ದಾಂಪತ್ಯ ಸಿದ್ಧೇಃ |
ಸ್ಥಾನಂ ಚ ಜ್ಞಾನಭಾಜಾಮಭಿಮತ ಫಲದೋ ಖರ್ವಿರಃ ಸೋರ್ಬುಧಾಖ್ಯಃ ||
ವಿಶ್ವಾಮಿತ್ರ ವಶಿಷ್ಠಾದಹರತ ಬಲತೋ ಯತ್ರಗಾಂ ತತ್ಪ್ರಭಾವಾ |
ಜ್ಞಜ್ಞೇ ವೀರೋಗ್ನಿ ಕುಂಡಾದ್ರಿಪುಬಲ ನಿಧನಂ ಯಶ್ಚ ಕಾರೈಕ ಏವಂ ||
ಮಾರಯಿತ್ವಾ ಪರಾನ್ ಧೇನು ಮಾನಿನ್ಯೇ ಸ ತತೋ ಮುನಿಃ
ಉವಾಚ ಪರಮಾರಾಖ್ಯಃ ಪಾರ್ಥಿವೇಂದ್ರೋ ಭವಿಷ್ಯಸಿ || ಹೀಗೆ ಪರಮಾರ ವಂಶದ ಬಗ್ಗೆ ಉದಯಪುರದಲ್ಲಿರುವ ಶಾಸನದಲ್ಲೂ ಇವರು ವಸಿಷ್ಠ ಕುಲದವರೆಂದು ವರ್ಣಿಸಲಾಗಿದೆ. ವಸಿಷ್ಠನ ಬಳಿ ಇದ್ದ ಕಾಮಧೇನುವನ್ನು ವಿಶ್ವಾಮಿತ್ರ ಕಳವು ಮಾಡಿದಾಗ ಅದನ್ನು ಮರಳಿ ಪಡೆಯಲು ವಶಿಷ್ಠ ಅಬು ಪರ್ವತದಲ್ಲಿ ಯಜ್ಞ ಮಾಡಿದಾಗ ಯಜ್ಞಕುಂಡದಿಂದ ಅಪ್ರತಿಮ ವೀರನೊಬ್ಬ ಎದ್ದು ಬಂದು ಕಾಮಧೇನುವನ್ನು ವಿಶ್ವಾಮಿತ್ರನಿಂದ ಬಲಾತ್ಕಾರವಾಗಿ ಬಿಡಿಸಿ ತಂದು ವಸಿಷ್ಠನಿಗೆ ಒಪ್ಪಿಸಿದನೆಂದೂ ಮುನಿ ಆ ವೀರನಸಾಹಸವನ್ನು ಮೆಚ್ಚಿ ಪರಮಾರ (ಶತ್ರುನಾಶಕ) ಎಂದು ನಾಮಕರಣ ಮಾಡಿ ಅವನಿಗೆ ರಾಜ್ಯವನ್ನು ಅನುಗ್ರಹಿಸಿದನೆಂದೂ ಪದ್ಮಗುಪ್ತನ ಈ ಗ್ರಂಥ ವರ್ಣಿಸಿದೆ. ಪರಮಾರರ ಕಾಲಕ್ಕೂ ವಸಿಷ್ಠ, ವಿಶ್ವಾಮಿತ್ರರ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಇದನ್ನೊಂದು ಕಥೆಯೆಂದು ಬಿಟ್ಟು ಬಿಡಬಹುದಾದರೂ ಪರಮಾರರ ಮೂಲ ಅಬು ಪರ್ವತ ಎಂದು ಇದರಿಂದ ಊಹಿಸಬಹುದು. ಆ ಬಳಿಕ ಬಂದ ಪರಮಾರರ ಸಾಹಿತ್ಯ ಮತ್ತು ಶಾಸನಗಳು ಕೂಡ ಇದನ್ನೇ ಹೇಳುತ್ತವೆ. ಕೃಷ್ಣರಾಜ(ಉಪೇಂದ್ರ) ಎನ್ನುವವ ಈ ವಂಶದ ಮೂಲಪುರುಷ. ಪರಮಾರರು ರಾಷ್ಟ್ರಕೂಟರ ಸಂಬಂಧಿಗಳೆಂದು ಇವರ ಕೆಲವು ಪ್ರಾಚೀನ ಶಾಸನಗಳು ಹೇಳುತ್ತವೆ. ಆರಂಭದಲ್ಲಿ ರಾಷ್ಟ್ರಕೂಟರ ಸಾಮಂತರಾಗಿದ್ದರಿವರು.

               ರಾಷ್ತ್ರಕೂಟರ ಮುಮ್ಮಡಿ ಕೃಷ್ಣನಿಗೆ ಅಧೀನನಾಗಿದ್ದರೂ ಮುಮ್ಮಡಿ ಕೃಷ್ಣನ ಅವಸಾನದ ಬಳಿಕ ಹಾಗೂ ಪ್ರತೀಹಾರರ ಬಲ ಕುಂದುತ್ತಿದ್ದುದರಿಂದ ಕೃಷ್ಣನ ಉತ್ತರಾಧಿಕಾರಿ ಖೊಟ್ಟನ ವಿರುದ್ಧ ದಂಗೆಯೆದ್ದ 2ನೆಯ ಸೀಯಕನ ಕಾಲದಲ್ಲಿ ಸ್ವತಂತ್ರ ಪರಮಾರ ಸಾಮ್ರಾಜ್ಯದ ನಿರ್ಮಾಣವಾಯಿತು. ಪರಮಾರ ಸೈನ್ಯ ರಾಷ್ಟ್ರ ಕೂಟರ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿತು. ಹೀಗೆ ಮಾಳವದ ದಕ್ಷಿಣದ ಗಡಿ ತಪತಿ ನದಿಯವರೆಗೂ ವಿಸ್ತರಿಸಿತು. ಇವನ ಮಗನೇ ವಾಕ್ಪತಿ ರಾಜ ಮುಂಜ(974-995). ಸ್ವತಂತ್ರ ಮಾಳವಕ್ಕೆ ಉತ್ತರಾಧಿಕಾರಿಯಾಗಿ ಇವನು ಅಧಿಕಾರಕ್ಕೆ ಬಂದಾಗ ಮಾಳವ ಉತ್ತರದಲ್ಲಿ ಜಾಲೋರ್'ವರೆಗೂ, ದಕ್ಷಿಣದಲ್ಲಿ ತಪತಿ, ಪೂರ್ವದಲ್ಲಿ ಬಿಲ್ಸ ಮತ್ತು ಪಶ್ಚಿಮದಲ್ಲಿ ಸಬರಮತಿಯವರೆಗೂ ವ್ಯಾಪಿಸಿತ್ತು. ಈತ ತನ್ನನ್ನು ರಾಜ್ಯವನ್ನು ಇನ್ನಷ್ಟು ವಿಸ್ತರಿಸಿ, ಕಳಚುರಿಗಳು, ಹೂಣರು, ಗುಹಿಲರು ಮತ್ತು ಚಾಹಮಾನರನ್ನೆಲ್ಲಾ ಸೋಲಿಸಿ ಶ್ರೀವಲ್ಲಭ, ಪೃಥ್ವೀವಲ್ಲಭ, ಅಮೋಘವರ್ಷ ಎಂಬ ಬಿರುದುಗಳನ್ನೂ ಪಡೆದ. ತಾನು ಗೆದ್ದ ಪ್ರದೇಶಗಳ ಮೇಲೆ ಪರಮಾರ ವಂಶದ ರಾಜಕುಮಾರರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದ. ಮೇರುತುಂಗನ "ಪ್ರಬಂಧಚಿಂತಾಮಣಿ"ಯಲ್ಲಿ ಮುಂಜನ ಈ ಸಾಹಸಗಳನ್ನು ವೈಭವಯುತವಾಗಿ ವರ್ಣಿಸಲಾಗಿದೆ. ಇವನು ಅನೇಕ ಸಂಸ್ಕೃತ ಕವಿಗಳಿಗೆ ಆಶ್ರಯ ನೀಡಿದ್ದನಲ್ಲದೆ, ತಾನೇ, ಸ್ವತಃ ಕವಿಯೂ, ವಿದ್ಯಾಪಕ್ಷಪಾತಿಯೂ ಆಗಿದ್ದ. ಪದ್ಮಗುಪ್ತ, ಧನಂಜಯ, ಹಲಾಯುಧ ಮುಂತಾದ ಘನವೇತ್ತರಿಗೆ ಈತ ಆಶ್ರಯದಾಯಿಯಾಗಿದ್ದ. "ತಿಲಕ ಮಂಜರಿ" ಎನ್ನುವ ಸಂಸ್ಕೃತ ಗ್ರಂಥ ರಚಿಸಿದ್ದ ಧನಪಾಲ ಈತನದ್ದೇ ಆಸ್ಥಾನ ಕವಿ. ಸಮರ ಮತ್ತು ಶಾಂತಿಯಲ್ಲಿ ಸಮಾನ ಪ್ರಸಿದ್ಧಿ ಗಳಿಸಿದ್ದ. ಚಾಲುಕ್ಯರ 2ನೆಯ ತೈಲಪನ ವಿರುದ್ಧ ಮುಂಜ ಸದಾ ಯುದ್ಧ ಮಾಡಿ ಗೆಲ್ಲುತ್ತಿದ್ದ ಮುಂಜನನ್ನು ಏಳನೆಯ ಬಾರಿಯ ಯುದ್ಧದಲ್ಲಿ ತೈಲಪ ಸೋಲಿಸಿ ಸೆರೆಯಲ್ಲಿಟ್ಟು ಕೊಲ್ಲಿಸಿದ.  ಬಳಿಕ ಮುಂಜನ ಸಹೋದರ ಸಿಂಧುರಾಜ ಪಟ್ಟಕ್ಕೆ ಬಂದವನೇ ಚಾಲುಕ್ಯರನ್ನು ಸೋಲಿಸಿ ಕಳೆದುಹೋಗಿದ್ದ ಪ್ರದೇಶಗಳನ್ನು ಮತ್ತೆ ಪಡೆದ. ಇವನ ಸಾಹಸಗಾಥೆಯನ್ನು ಆಸ್ಥಾನ ಕವಿ ಪದ್ಮಗುಪ್ತ "ನವಸಹಸಾಂಕ"ದಲ್ಲಿ ವರ್ಣಿಸಿದ್ದಾನೆ. ಸಿಂಧುರಾಜನ ಮಗನೇ ಪರಮಾರ ಭೋಜ. ಮುಂಜ ಮತ್ತು ಸಿಂಧುರಾಜರ ಕಾಲದಲ್ಲಿ ಸಂಘಟಿತವಾದ ಪರಮಾರರ ಅಧಿಕಾರ ಭೋಜನ ಕಾಲದಲ್ಲಿ ಸಾಮ್ರಾಜ್ಯದ ಶ್ರೇಣಿಯನ್ನು ಮುಟ್ಟಿತು.

                ಭೋಜ 1010ರ ಸುಮಾರಿಗೆ ಮಾಳವದ ಪಟ್ಟವನ್ನೇರಿದ. ಇತಿಹಾಸಕಾರರ ಪ್ರಕಾರ ನಲವತ್ತು ವರ್ಷಗಳ ಕಾಲ ಈತ ರಾಜ್ಯವನ್ನಾಳಿದ. ಕಾವ್ಯಾದಿಗ್ರಂಥಗಳ ಪ್ರಕಾರ ಐವತ್ತೈದು ವರ್ಷಕ್ಕೂ ಹೆಚ್ಚು ಕಾಲ ಈತ ರಾಜ್ಯವಾಳಿದನೆಂದು ತಿಳಿದು ಬರುತ್ತದೆ. ಈತ ಹರ್ಷನ ಮೊಮ್ಮಗ. ಶೂದ್ರಾತಿಶೂದ್ರವಲಯದಿಂದ ಬಂದವನಾದರೂ ತನ್ನ ಕ್ಷಾತ್ರ ಪ್ರವೃತ್ತಿಯಿಂದ ಅಪ್ರತಿಮ ರಾಜನಾದುದು ಮಾತ್ರವಲ್ಲಾ ಸಂಸ್ಕೃತವನ್ನು ಅರೆದು ಕುಡಿದವನಂತೆ ಸಾಹಿತ್ಯೋಪಾಸನೆಯನ್ನು ಆತ ಮಾಡಿದುದು ಭಾರತದಲ್ಲಿ ಅಸ್ಪೃಶ್ಯತೆಯೇ ತಾಂಡವವಾಡುತ್ತಿತ್ತು ಎಂದು ಬೊಬ್ಬಿರಿಯುವವರು ಮತ್ತೆ ಮತ್ತೆ ಯೋಚಿಸಬೇಕಾದ ಅಂಶ!
ಶೈವ ಪರಂಪರೆಯಲ್ಲಿ ಆಸಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ ಉದಾಹರಣೆಗಳು ಸಿಗುತ್ತವೆ. ಅವುಗಳಲ್ಲಿ ಭೋಜ್ಪುರದ ಭೋಜೇಶ್ವರ ದೇವಾಲಯ ಅತ್ಯಂತ ಪ್ರಸಿದ್ಧವಾದದ್ದು. ಭೋಜನಿಂದ ಬರೆಯಲ್ಪಟ್ಟ "ಯೋಗಸೂತ್ರವೃತ್ತಿ"ಯಲ್ಲಿ "ಶ್ರೀ ರಣರಂಗಮಲ್ಲ ನೃಪತೇಃ" ಎಂದಿರುವುದು ಈತನ ಬಿರುದುಗಳಲ್ಲಿ ಒಂದು.

             ಭೋಜ 1010ರ ಸುಮಾರಿಗೆ ಮಾಳವದ ಪಟ್ಟವನ್ನೇರಿದ. ಇತಿಹಾಸಕಾರರ ಪ್ರಕಾರ ನಲವತ್ತು ವರ್ಷಗಳ ಕಾಲ ಈತ ರಾಜ್ಯವನ್ನಾಳಿದ; ಕಾವ್ಯಾದಿಗ್ರಂಥಗಳ ಪ್ರಕಾರ ಐವತ್ತೈದು ವರ್ಷಕ್ಕೂ ಹೆಚ್ಚು. ಈತ ಹರ್ಷನ ಮೊಮ್ಮಗ ಎನ್ನುವ ಉಲ್ಲೇಖ ಸಿಗುತ್ತದೆ. ಶೂದ್ರಾತಿಶೂದ್ರವಲಯದಿಂದ ಬಂದವನಾದರೂ ತನ್ನ ಕ್ಷಾತ್ರ ಪ್ರವೃತ್ತಿಯಿಂದ ಅಪ್ರತಿಮ ರಾಜನಾದುದು ಮಾತ್ರವಲ್ಲಾ ಸಂಸ್ಕೃತವನ್ನು ಅರೆದು ಕುಡಿದವನಂತೆ ಸಾಹಿತ್ಯೋಪಾಸನೆಯನ್ನು ಆತ ಮಾಡಿದುದು ಭಾರತದಲ್ಲಿ ಅಸ್ಪೃಶ್ಯತೆಯೇ ತಾಂಡವವಾಡುತ್ತಿತ್ತು ಎಂದು ಬೊಬ್ಬಿರಿಯುವವರು ಮತ್ತೆ ಮತ್ತೆ ಯೋಚಿಸಬೇಕಾದ ಅಂಶ! ಭೋಜನು "ಸರಸ್ವತೀ ಕಂಠಾಭರಣ"ದಲ್ಲಿ ನಾಯಕಗುಣ, ಮಹಾಕುಲೀನತ್ವದ ಉದಾಹರಣೆಗೆ ತನ್ನ ವಂಶವನ್ನೇ ಉದಾಹರಿಸಿಕೊಂಡಿದ್ದಾನೆ. ಇದು ಆತನ ವಂಶಕ್ಕೆ ಸಿಕ್ಕ ಮಾನ್ಯತೆ, ಗೌರವ ಹಾಗೂ ಆತನ ಆತ್ಮಾಭಿಮಾನವನ್ನು ಎತ್ತಿ ತೋರಿಸುತ್ತವೆ. ಆತನ ದಿಗ್ವಿಜಯಗಳು ದಂತಕಥೆಗಳೇ ಆಗಿ ಜನಪ್ರಿಯವಾಗಿವೆ. ಶಾಸನಗಳೂ ಆತನ ಪೌರುಷವನ್ನು ಸಾರುತ್ತವೆ. ಚಾಳುಕ್ಯ, ಚೇದಿ ಮತ್ತು ಮುಸ್ಲಿಂ ರಾಜರನ್ನು ಸತತವಾಗಿ ಯುದ್ಧದಲ್ಲಿ ಸೋಲಿಸಿದ ಕೀರ್ತಿಯೂ ಆತನಿಗಿದೆ. ಸಾಮರ್ಥ್ಯದಲ್ಲಿ ಸಮುದ್ರಗುಪ್ತನನ್ನು ಆತ ನೆನಪಿಸುತ್ತಾನೆ. ಅವನಿಂದಲೇ ಬರೆಯಲ್ಪಟ್ಟ ಯೋಗಸೂತ್ರವೃತ್ತಿಯಲ್ಲಿ ಅವನಿಗಿದ್ದ "ಶ್ರೀ ರಣರಂಗಮಲ್ಲ ನೃಪತೇಃ" ಬಿರುದು ಕಾಣಸಿಗುತ್ತದೆ. ಘಜ್ನಿಯೊಡನೆ ಸೆಣಸಲು ಆನಂದಪಾಲ ಹಾಗೂ ಆತನ ಮಗ ತ್ರಿಲೋಚನಪಾಲನಿಗೆ ನೆರವಾದನಲ್ಲದೆ ಸ್ವಯಂ ಘಜನಿಯ ವಿರುದ್ಧ ಸೆಣಸಿದ್ದ. ತಾನಿರುವವರೆಗೆ ಘಜ್ನಿಯೂ ಭಾರತದೊಳಕ್ಕೆ ಬರದಂತೆ ತಡೆದ. ಇಸ್ಲಾಮಿನ ದಾಳಿಗೆ ಸಿಕ್ಕಿ ರಾಜ್ಯ ಕಳೆದುಕೊಂಡಿದ್ದ ತ್ರಿಲೋಚನಪಾಲನಿಗೆ ಆಶ್ರಯವನ್ನಿತ್ತಿದ್ದ. ಅವನ ಪರಾಕ್ರಮಕ್ಕೆ ಗಾಹಡವಾಲರ ಕುಲವೇ ಅವನಿಗೆ ಉಘೇ ಉಘೇ ಎನ್ನುತ್ತಿತ್ತು. 1055ರಲ್ಲಿ ಚಾಳುಕ್ಯರ ದೊರೆ 1ನೆಯ ಸೋಮೇಶ್ವರನೂ ಗುಜರಾತಿನದೊರೆ ಭೀಮೇಶ್ವರ ಹಾಗೂ ದಾಹಲದ ದೊರೆ ಕರ್ಣ ಜೊತೆ ಸೇರಿ ಭೋಜನನ್ನು ಯುದ್ಧದಲ್ಲಿ ಸಂಹರಿಸಿದರು. ಮುಂದೆ ಇದು ಘಜನಿಗೆ ಹಾಗೂ ಹಿಂಬಾಲಕರಿಗೆ ವರದಾನವಾಯಿತು.

                ಶಿವಭಕ್ತನಾಗಿದ್ದ ಈತ ಅನೇಕ ಶಿವ ಮಂದಿರಗಳನ್ನು ಕಟ್ಟಿಸಿದ. ಅತ್ಯಂತ ಪ್ರಸಿದ್ಧವಾದ ಭೋಜಪುರದ ಭೋಜೇಶ್ವರ ದೇವಾಲಯ ಆತನೇ ಕಟ್ಟಿಸಿದ್ದು. ಸಾಹಿತ್ಯೋಪಾಸಕನಾಗಿದ್ದ ಆತನಿಗೆ "ಕವಿರಾಜ ಮಾಲವಚಕ್ರವರ್ತಿ" ಎಂಬ ಬಿರುದಿತ್ತು. ಆತ ಸಕಲಶಾಸ್ತ್ರಕೋವಿದನೂ, ಬಹುಭಾಷಾಪಂಡಿತನೂ ಆಗಿದ್ದು ಅನೇಕ ಶಾಸ್ತ್ರ-ಕಾವ್ಯಗಳನ್ನು ರಚಿಸಿದ್ದ. ವೈದರ್ಭಿ ಶೈಲಿಯಲ್ಲಿ ಅವನನ್ನು ಮೀರಿಸಿದವರಿಲ್ಲ. ಚಂಪೂರಾಮಾಯಣವೇ ಇದಕ್ಕೆ ಸಾಕ್ಷಿ. ವೈದರ್ಭರಾಜ ಎಂಬ ಬಿರುದೂ ಆತನಿಗಿದೆ. ವಿದ್ಯಾಭ್ಯಾಸಕ್ಕೆ, ಸಾಹಿತ್ಯಕೃಷಿಗೆ ಪ್ರೋತ್ಸಾಹ ನೀಡಲು ರಾಜಧಾನಿಯಾದ ಧಾರಾ ನಗರದಲ್ಲಿ "ಸರಸ್ವತೀಮಂದಿರ" ಎಂಬ ವಿಶ್ವವಿದ್ಯಾಲಯವನ್ನೇ ಈತ ಸ್ಥಾಪಿಸಿದ. ಪ್ರಖ್ಯಾತ ಸಂಸ್ಕೃತ ಮಹಾಕಾವ್ಯಗಳಿಂದ ಆಯ್ದ ಕೆಲವು ಸ್ವಾರಸ್ಯಕರ ಭಾಗಗಳನ್ನು ಕಲ್ಲುಗಳ ಮೇಲೆ ಕೆತ್ತಿಸಿ, ವಿದ್ಯಾಲಯದ ಗೋಡೆಗಳನ್ನು ಕಟ್ಟಲು ಆ ಕಲ್ಲುಗಳನ್ನು ಉಪಯೋಗಿಸಲಾಯಿತು. ಅಲ್ಲಿಯೇ ವ್ಯಾಕರಣಕ್ಕೆ ಸಂಬಂಧಿಸಿದಂತೆ ಪಾಣಿನಿಯ ವ್ಯಾಕರಣದ ಮಾಹೇಶ್ವರ ಸೂತ್ರಗಳನ್ನು ಬರೆಸಿದ. ಈತ ಕಾವ್ಯ, ಖಗೋಳಶಾಸ್ತ್ರ, ಮಂತ್ರಶಾಸ್ತ್ರ, ನ್ಯಾಯ, ಪಶುವೈದ್ಯ, ತತ್ತ್ವ, ವ್ಯಾಕರಣ, ಅಲಂಕಾರ ಮೊದಲಾದ ವಿಷಯಗಳ ಮೇಲೆ ಗ್ರಂಥ ರಚಿಸಿದ. ಇವನ ಕಾಲದಲ್ಲಿ ಕಾವ್ಯದ ಒಂದು ಹೊಸ ಪ್ರಕಾರವೇ ಆರಂಭವಾಯಿತು. ಶಬ್ದಗಳನ್ನು ಚಮತ್ಕಾರವಾಗಿ ಜೋಡಿಸಿ ರಚಿಸುವ ಕಲೆಮುಂದೆ ಬಂತು. ಕಾವ್ಯದ ವಸ್ತುವಿನಷ್ಟೇ ಕಾವ್ಯದ ತಂತ್ರವೂ ಪ್ರಾಧಾನ್ಯತೆ ಪಡೆಯಿತು. ಶೈವಪಂಥದ ಅನುಯಾಯಿಯಾಗಿದ್ದ ಭೋಜ ಅನ್ಯ ಮತೀಯರನ್ನೂ ಗೌರವದಿಂದ ಕಾಣುತ್ತಿದ್ದ. ಪ್ರಭಾಚಂದ್ರ ಸೂರಿ, ಶಾಂತಿಸೇನ ಮತ್ತು ಧನಪಾಲ ಎಂಬ ಜೈನಕವಿಗಳೂ ಇವನ ಆಶ್ರಿತರಾಗಿದ್ದರು. ವೈದಿಕ, ಜೈನ ಮತ್ತು ಭೌದ್ಧರ ನಡುವೆ ಆಗಾಗ್ಗೆ ಧಾರ್ಮಿಕ ಚರ್ಚೆಗಳು ಏರ್ಪಡುತ್ತಿದ್ದುವು. ಮಿತಾಕ್ಷರ ಎಂಬ ಗ್ರಂಥವನ್ನು ರಚಿಸಿದ ವಿಜ್ಞಾನೇಶ್ವರ ಇವನದ್ದೇ ಆಸ್ಥಾನದಲ್ಲಿದ್ದ. ವಾಸ್ತು ಶಿಲ್ಪಶಾಸ್ತ್ರಕ್ಕೂ ಈತನ ಕೊಡುಗೆ ಅಪಾರ. ಭೋಜ "ಸಮರಾಂಗಣಸೂತ್ರಧಾರ" ಎಂಬ ವಾಸ್ತುವಿದ್ಯೆ ಮತ್ತು ಶಿಲ್ಪಶಾಸ್ತ್ರಗಳ ಕೃತಿಯನ್ನೇ ಬರೆದಿದ್ದಾನೆ. ಕುಮಾರಸಂಭವ, ಶಾಕುಂತಲ, ರಘುವಂಶ, ಮಾಲಾವಿಕಾಗ್ನಿಮಿತ್ರದಂತಹಾ ಅನುಪಮ ಗ್ರಂಥಕರ್ತೃ ಕವಿ ಕಾಳಿದಾಸನೇ ಇವನ ಆಸ್ಥಾನದಲ್ಲಿದ್ದಾತ ಎಂದು ಬ್ರಿಟಿಷ್ ಇತಿಹಾಸಕಾರರು ಭ್ರಮಿಸಿದ್ದ(ಅಥವಾ ಬೇಕಂತಲೇ ತಿರುಚಿದ್ದ) "ಶಿಲ್ಪಿ" ಕಾಳಿದಾಸನೊಬ್ಬ ಇವನ ಆಶ್ರಿತನಾಗಿದ್ದ.

                ಚಂಪೂರಾಮಾಯಣ, ಜ್ಯೋತಿಷ್ಯದ ಕುರಿತಾದ "ರಾಜ ಮೃಗಾಂಕ", ಶಿವಸೂತ್ರಗಳ ವ್ಯಾಖ್ಯಾನ "ತತ್ತ್ವಪ್ರಕಾಶ", ವ್ಯಾಕರಣ ಮತ್ತು ರಸಮೀಮಾಂಸೆಗಳ ಬಗೆಗಿನ "ಶೃಂಗಾರಪ್ರಕಾಶ", ವಾಸ್ತು ವಿದ್ಯೆ ಹಾಗೂ ಶಿಲ್ಪಶಾಸ್ತ್ರಗಳ ಕುರಿತಾದ "ಸಮರಾಂಗಣಸೂತ್ರಧಾರ", ಯೋಗಶಾಸ್ತ್ರ ಕುರಿತಾದ "ರಾಜಮಾರ್ತಾಂಡ", "ಸರಸ್ವತೀ ಕಂಠಾಭರಣ"ವೆಂಬ ಅಲಂಕಾರಶಾಸ್ತ್ರ, "ಚಾರುಚರ್ಯೆ" ಎಂಬ ಆಯುರ್ವೇದ ಗ್ರಂಥ, ರಾಜನೀತಿ ಮತ್ತು ನೌಕಾನಿರ್ಮಾಣಗಳನ್ನು ಕುರಿತಾದ "ಯುಕ್ತಿಕಲ್ಪತರು" ಹೀಗೆ ಹಲವು ಕ್ಷೇತ್ರಗಳಲ್ಲಿ ಹಲವು ಗ್ರಂಥಗಳನ್ನು ಬರೆದ ಖ್ಯಾತಿ ಅವನದ್ದು. ಆತ ತನ್ನ ದಾನಶಾಸನವೊಂದರಲ್ಲಿ ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಮಾಪಾತ ಮಾತ್ರ ಮಧುರೋವಿಷಯೋಪಭೋಗಃ |
ಪ್ರಾಣಸ್ತೃಣಾಗ್ರ ಜಲಬಿಂದು ಸಮಾನರಾಣಾಂ ಧರ್ಮಸ್ಸಖಾಪರಮಹೋ ಪರಲೋಕಯಾನೇ ||
ರಾಜಭೋಗವು ಬೀಸು ಗಾಳಿಗೆ ಸಿಕ್ಕ ಮೋಡಗಳ ಮಾಲೆಯಂತೆ ಕ್ಷಣಾರ್ಧದಲ್ಲಿ ಬಿದ್ದು ಕರಗಿ ಹೋಗಬಹುದು. ಇಂದ್ರಿಯ ಸುಖಗಳು ಕ್ಷಣಮಾತ್ರದವು. ಪ್ರಾಣವು ನೀರ ಮೇಲಣ ಗುಳ್ಳೆಯಂತೆ. ಮೋಕ್ಷಾರ್ಥಿಗಳಿಗೆ ಧರ್ಮವೇ ಸಖ ಎಂದಿದ್ದಾನೆ. ಬಲ್ಲಾಳ ಸೇನನ "ಭೋಜ ಪ್ರಬಂಧ" ಭೋಜನ ಬಗೆಗೆ ಬಹಳ ವಿವರವಾಗಿ ಕಟ್ಟಿಕೊಡುತ್ತದೆಯಾದರೂ ಕೆಲವು ತಪ್ಪುಗಳೂ ಸೇರಿಕೊಂಡಿವೆ. ಮದನನ ಪಾರಿಜಾತ ಮಂಜರೀ ಯಾ ಅರ್ಜುನವರ್ಮನ ಧಾರಾನಗರದ ಶಾಸನದಲ್ಲಿ ಭೋಜನನ್ನು ಶ್ರೀಕೃಷ್ಣನಿಗೆ ಹೋಲಿಸಲಾಗಿದ್ದು, ಕಲಚೂರಿ ವಂಶದ ರಾಜಾ ಗಾಂಗೇಯನನ್ನು ಭೋಜನು ಸೋಲಿಸಿದ ವರ್ಣನೆಯಿದೆ. ಭೋಜರಾಜ ತನ್ನ “ಶೃಂಗಾರ ಪ್ರಕಾಶ” ದಲ್ಲಿ “ಯೇನ ಶೃಂಗಂ ರೀಯತೇ ಸ ಶೃಂಗಾರಃ” ಎನ್ನುತ್ತಾನೆ. ಶೃಂಗ ಎಂದರೆ ತುತ್ತತುದಿ. ಅಂತಹ ತುತ್ತತುದಿಯನ್ನು ತಲುಪುವುದೇ ಶೃಂಗಾರ. ನಾವು ಶೃಂಗಾರವನ್ನು ಬರಿಯ ಪ್ರೇಮ-ಕಾಮಗಳಿಗಷ್ಟೇ ಸೀಮಿತಗೊಳಿಸಿಬಿಟ್ಟಿದ್ದೇವೆ. ವಾಸ್ತವದಲ್ಲಿ ಯಾವುದೇ ಯೋಚನೆ, ಮಾತು, ಕೃತಿಗಳಲ್ಲಿ ತುತ್ತತುದಿಯನ್ನು ತಲುಪುವುದೇ ಶೃಂಗಾರ. ಅದು ಆವರ್ಣನೀಯ. ಮಾತಿನ ತುತ್ತತುದಿಯೇ ಮೌನ, ಮೌನದ ತುತ್ತತುದಿಯೇ ಸಮಾಧಿ. ಸಮಾಧಿಯ ಶಿಖರಾಗ್ರದಲ್ಲಿ ಬ್ರಹ್ಮಸಾಕ್ಷಾತ್ಕಾರ!

             ಸಾಹಿತ್ಯ ಸಾಮ್ರಾಜ್ಯದ ಜೊತೆಗೆ ಭೋಜ ನಿರ್ಮಾಣ ಮಾಡಿದ ಭವ್ಯ ದೇವಾಲಯಗಳು, ಜಲಾಶಯಗಳಿಗೆ ಲೆಕ್ಖವೇ ಇಲ್ಲ. ಈಗ ನಾವು ಕರೆವ ಭೋಪಾಲ ಆತನದ್ದೇ ನಿರ್ಮಾಣ. ಭೋಜಪಾಲವೆಂದಿದ್ದದ್ದು ಇಂದು ಭೋಪಾಲವಾಗಿದೆ. 2011ರಲ್ಲಿ ಅದರ ಮೂಲ ಹೆಸರಿಗೇ ಮರಳಲು ಯತ್ನಿಸಿದಾಗ ಸೆಕ್ಯುಲರುಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಭೋಪಾಲಕ್ಕೆ ನೀರು ಸರಬರಾಜು ಮಾಡುವ ಹಲವು ಸರೋವರಗಳನ್ನು ಕಟ್ಟಿಸಿದವ ಭೋಜನೇ. ಮಂಡು, ಧಾರಾನಗರಗಳಲ್ಲಿ ಇವನ ಕಾಲದಲ್ಲಿ ಹಲವು ನಿರ್ಮಾಣಗಳು ನಡೆದವು. ಅವೆಲ್ಲವೂ ಇಂದು ಮತಾಂದತೆಯ ಕ್ರೌರ್ಯಕ್ಕೆ ಬಲಿಯಾಗಿವೆ. ಆತನ ಆಳ್ವಿಕೆಯ ಕಾಲದಲ್ಲಿ ಸರಸ್ವತಿಯ ಆರಾಧನೆಯೇ ನಡೆಯಿತು. ಆತನ ರಾಜ್ಯದಲ್ಲಿ ಜನಸಾಮಾನ್ಯರು ಕೂಡ ಸಂಸ್ಕೃತದ ಮೇಲೆ ಪ್ರಭುತ್ವ ಸಾಧಿಸಿದ್ದರು. ಧಾರಾನಗರ ಸಂಸ್ಕೃತ ಅಧ್ಯಯನ, ಕಲೆ ಮತ್ತು ಸಂಸ್ಕೃತಿಗಳ ಕೇಂದ್ರವಾಗಿ ಬೆಳೆಯಿತು. ಯಾವ ಸರಸ್ವತೀಯ ಕೃಪಾಕಟಾಕ್ಷದಿಂದಾಗಿ ರಾಜ ಭೋಜನು ಯೋಗ, ಸಾಂಖ್ಯ, ನ್ಯಾಯ, ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಸಾಹಿತ್ಯ ಮತ್ತು ರಾಜಕೀಯದ ಪ್ರಕಾಂಡ ಪಂಡಿತನಾಗಿ ಬೆಳೆದಿದ್ದನೋ, ರಾಜಭೋಜನು ನಿರಂತರ ವಿದ್ಯಾವಿನೋದವನ್ನು ಸಾಗಿಸುತ್ತಿದ್ದ ಅಂತಹಾ ಸರಸ್ವತೀಯ ಮಂದಿರವಿಂದು ಮಸೀದಿಯಾಗಿದೆ. ಅಲ್ಲಿನ ವಾಗ್ದೇವಿಯ ಮೂರ್ತಿ ಬ್ರಿಟನ್ನಿಗೆ ಸಾಗಿಸಲ್ಪಟ್ಟಿದೆ!

                ವಿಕ್ರಮಾದಿತ್ಯ ಎನ್ನುವುದು ಹೇಗೆ ಬಿರುದಾಯಿತೋ ಅಂತೆಯೇ ಭೋಜನ ಹೆಸರೂ ಚಿರಸ್ಥಾಯಿಯಾಯಿತು. ಮುಂದಿನ ಅರಸರು ಅಭಿನವ ಭೋಜ, ನವಭೋಜ, ಆಂದ್ರಭೋಜ ಮುಂತಾದ ಉಪಾಧಿಗಳನ್ನು ಹೆಮ್ಮೆಯಿಂದ ತಳೆಯುವ ಶ್ರೇಷ್ಠ ಸಂಪ್ರದಾಯ ಆರಂಭವಾಯಿತು. ಹೀಗೆ ಸಾಹಿತ್ಯಾಸಕ್ತರಿಗೆ ಬೆರಗುಗೊಳಿಸುವ ಸಾಹಿತಿಯಾಗಿ, ಅರಸರಿಗೆ ಹೆಮ್ಮೆಯ ಸಂಕೇತವಾಗಿ, ಶಾಸನ ಅಧ್ಯಯನಕಾರರಿಗೆ ಅಪೂರ್ವ ಸಂಶೋಧನಾ ಆಕರವಾಗಿ, ಹತ್ತುಹಲವು ನಿರ್ಮಿತಿಗಳು, ಸುಧಾರಣೆಯ ಗುರಿಕಾರನಾಗಿ ಜನರ ಬಾಯಲ್ಲಿ ದಂತಕಥೆಯಾಗಿ ಸಂಗ್ರಾಮ, ಸಾಹಿತ್ಯ, ಸಮಾಜ ಮುಂತಾದ ಎಲ್ಲಾ ರಂಗಗಳಲ್ಲಿ ಅದ್ವಿತೀಯನಾಗಿ ಸನಾತನ ಧರ್ಮವನ್ನು ಬೆಳಗಿದ ಸಮರಾಂಗಣಸೂತ್ರಧಾರ ಸರಸ್ವತೀ ಕಂಠಾಭರಣ ರಾಜಭೋಜ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ