ಪುಟಗಳು

ಮಂಗಳವಾರ, ನವೆಂಬರ್ 5, 2019

ಭವ್ಯ ಭಾರತದ ಮುಕುಟಮಣಿ ವೀರಸಾವರ್ಕರ್

ಭವ್ಯ ಭಾರತದ ಮುಕುಟಮಣಿ ವೀರಸಾವರ್ಕರ್


           ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂಜೂಷದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ "ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ? ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ, ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆಗಳನ್ನೆಲ್ಲಾ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ...ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ಅದು ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದಂತೆ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.ಅಮ್ಮಾ ಫಡಕೆ ಆರಂಭಿಸಿದ ಕಾರ್ಯ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ಇನ್ನು ಮುಂದೆ ನನ್ನೀ ಜೀವನ ನಿನಗಾಗಿ ಸಮರ್ಪಿತ." ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಆ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಪುಳಕಿತಗೊಳಿಸಿತು.

                  ಏಡನ್ನಿನಲ್ಲೊಂದು ಸ್ವಾತಂತ್ರ್ಯದ ಕಿಡಿ ಆರಿತ್ತು. ಅದೇ ಕಿಡಿ ಭಗೂರಿನಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯವಾಗಿ ಮೊರೆಯಿತು! ವೀರ...ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್! ಸಾಹಿತ್ಯಾಸಕ್ತರ ಪಾಲಿಗೆ ಭಗವತುಲ್ಯ ಕವಿ; ಬರಹಗಾರ, ಆಂಗ್ಲರಿಗೆ ಯಮಸದೃಶ ಕ್ರಾಂತಿಕಾರಿ, ವಿರೋಧಿಗಳ ನಾಲಿಗೆಯಲಿ ಕೋಮುವಾದಿ, ಸಮಾಜ ಸುಧಾರಕರಿಗೆ ಗುರು, ದೇಶ ಭಕ್ತರ ಪಾಲಿಗೆ ಜೀವನದ ಕ್ಷಣ ಕ್ಷಣ ರಕ್ತದ ಕಣ ಕಣವನ್ನೂ ರಾಷ್ಟ್ರಕ್ಕಾಗಿ ಸಮರ್ಪಿಸಿ ಆತ್ಮಾಹುತಿಗೈದ ಅಭಿನವ ಶಿವಾಜಿ, ಆಧುನಿಕ ಜಗತ್ತಿಗೆ ಹಿಂದುತ್ವವೇನೆಂದು ಸಮರ್ಥವಾಗಿ ಮಂಡಿಸಿ ಇಡೀ ಸನಾತನ ಸಂಸ್ಕೃತಿಗೆ ಭಾಷ್ಯ ಬರೆದ ಮಹಾದೃಷ್ಟಾರ.

               ದಾರಣಾ ನದಿಯ ತಟದಲ್ಲಿ 1883ರ ಮೇ 28ರ ವೈಶಾಖ ಕೃಷ್ಣ ಷಷ್ಠಿಯ ಶುಭ ದಿನ ಸೃಷ್ಟಿ. ಜನಿಸಿದೊಡನೆ ತನ್ನತ್ತ ಸೆಳೆಯಿತು ಊರವರ ದೃಷ್ಟಿ. ದೊಡ್ಡಪ್ಪ ಮಹಾದೇವ ಪಂತರಿಂದ ಇತಿಹಾಸದ ಪಾಠ. ಶಿವಾಜಿಯೇ ಆದರ್ಶನಾದ, ಮನಸ್ಸು ಮಹಾರಾಣಾ ಪ್ರತಾಪನನ್ನನುಕರಿಸಿತು, ಝಾನ್ಸಿಯ ರಣದುಂದುಭಿ ಕಿವಿಯಲ್ಲಿ ಮೊಳಗಿತು. ತಂದೆ, ತಾಯಿ, ಸೋದರ ಮಾವನಿಂದ ಕಾವ್ಯ, ಸಾಹಿತ್ಯದ ಸಮೃದ್ಧಿ. ಮಾರಕವಾಗೆರಗಿದ ಪ್ಲೇಗ್ ಮೊದಲೇ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸೋದರರ ತಂದೆಯನ್ನೂ, ದೊಡ್ಡಪ್ಪನನ್ನೂ ಬಲಿತೆಗೆದುಕೊಂಡಿತು. ಗದ್ದೆ ತೋಟಗಳು ಅನ್ಯರ ವಶವಾದವು. ಶ್ರೀಮಂತ ಜಮೀನುದಾರರ ಮಕ್ಕಳಾಗಿದ್ದವರು ಕೇವಲ ಒಂದು ವಾರದೊಳಗೆ ಮನೆಯ ಹಿರಿಯರನ್ನೂ, ವಂಶದ ಸಂಪತ್ತನ್ನೂ ಕಳೆದುಕೊಂಡು ಅನಾಥರಾಗಿದ್ದರು. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ದಿಟ್ಟ. ದಿನವೂ ನಾಟಕ, ಹರಟೆ, ಇಸ್ಪೀಟು, ತಂಬಾಕು ತಿನ್ನುತ್ತಾ, ಸ್ತ್ರೀ ಪುರುಷರನ್ನು ರೇಗಿಸುತ್ತಾ ಕುಚೇಷ್ಟೆ ಮಾಡುತ್ತಾ ಕಾಲಕಳೆಯುತ್ತಿದ್ದ ಉಂಡಾಡಿಗಳೆಲ್ಲಾ ತಾತ್ಯಾ ಸಹವಾಸದಿಂದ "ರಾಷ್ಟ್ರಭಕ್ತ ಸಮೂಹ"ದ (ರಾಮ ಹರಿ) ಸದಸ್ಯರಾದರು. ಪಡ್ಡೆ ಹುಡುಗರ ನಾಯಕ ಹೆಳವ ಗೋವಿಂದ ದರೇಕರ್(ಆಬಾ ಪಾಂಗಳೆ) ಸಾವರ್ಕರ್ ಸಹವಾಸದಿಂದ "ಸ್ವಾತಂತ್ರ್ಯ ಕವಿ ಗೋವಿಂದ" ನಾಗಿ ಬಿರುದಾಂಕಿತನಾದ. ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದಾಗ ಸಾವರ್ಕರರಿಗಿನ್ನೂ ಹದಿನಾರು ವರ್ಷ.

                "ರಾಮಹರಿ" "ಮಿತ್ರಮೇಳ"ವಾಯಿತು. ಶಿವಾಜಿ ಜಯಂತಿ, ಗಣೇಶ ಉತ್ಸವ, ಪ್ಲೇಗ್ ರೋಗಿಗಳ ಆರೈಕೆ , ಅನಾಥ ರೋಗಿಗಳ ಶವ ಸುಡುವುದು...ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮಿತ್ರಮೇಳ ಬೃಹದಾಕಾರವಾಗಿ ಬೆಳೆಯಿತು. ಯಾವ ಸತ್ಯದಿಂದ ಜನಹಿತ ಆಗುತ್ತದೆಯೋ ಅದೇ ಸತ್ಯ, ಧರ್ಮ. ಆದರೆ ಯಾವ ಸತ್ಯದಿಂದ ಕಳ್ಳನಿಗೆ ರಕ್ಷಣೆಯಾಗಿ ಸನ್ಯಾಸಿಗೆ ಶಿಕ್ಷೆಯಾಗುತ್ತದೋ ಅದು ಅಸತ್ಯ, ಅಧರ್ಮ. ಹೇಗೆ ರಾವಣ, ಕಂಸರ ಕೈಗಳಲ್ಲಿದ್ದ ಶಸ್ತ್ರಗಳು ರಾಮ, ಕೃಷ್ಣರ ಕೈಯಲ್ಲಿ ಪಾವನವಾಗಿ ಪೂಜಾರ್ಹವಾಗಿದ್ದವೋ ಅದೇ ರೀತಿ ಅಧಿಕಾಧಿಕ ಜನಹಿತಕ್ಕಾಗಿ ರಾಷ್ಟ್ರೀಯ ಅಧಿಕಾರಗಳ ರಕ್ಷಣೆ ಹಾಗೂ ವಿಕಾಸಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ದೇಶಾಭಿಮಾನ ನಿಜಕ್ಕೂ ಧರ್ಮಸಮ್ಮತ, ಪ್ರಶಂಸನೀಯ. ಪರದೇಶಗಳನ್ನಾಕ್ರಮಿಸಿ ಜನಕ್ಷೋಭೆ ನಿರ್ಮಿಸುವ ಶೋಷಣೆ ನಡೆಸುವ ದೇಶಾಭಿಮಾನ ಅಧರ್ಮ, ದಂಡನೀಯ ಎಂಬುದು ಸಾವರ್ಕರ್ ಅಭಿಮತವಾಗಿತ್ತು, ಮಿತ್ರಮೇಳದ ತತ್ವವಾಯಿತು. ಮುಂದೆ ಅಸಂಖ್ಯ ಕ್ರಾಂತಿಕಾರಿಗಳ ನೀತಿಯಾಗಿ ಬೆಳೆಯಿತು. ಮಿತ್ರಮೇಳ ಬೆಳೆಯುತ್ತಾ ಬೆಳೆಯುತ್ತಾ "ಅಭಿನವ ಭಾರತ"ವಾಯಿತು. ಮಹಾರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆಯಿತು. ವಂಗಭಂಗವನ್ನು ವಿರೋಧಿಸಿ ಸ್ವಾತಂತ್ರ್ಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿದೇಶೀ ವಸ್ತುಗಳ ದಹನ(ಹೋಳಿ) ನಡೆಸಿದರು ಸಾವರ್ಕರ್. ತತ್ಪರಿಣಾಮ ಸಿಕ್ಕಿದ್ದು ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯದ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ ಎಂಬ ಶ್ರೇಯ! ಅಷ್ಟರಲ್ಲೇ ಸಾವರ್ಕರ್ ಬರೆದ ಕವನ, ಲಾವಣಿಗಳು ಮನೆ ಮನೆಯಲ್ಲಿ ನಿತ್ಯಗಾಯನಗಳಾಗಿದ್ದವು. ಅವರ ಲೇಖನಗಳನ್ನೋದಲು ಜನ ಕಾತರಿಸುತ್ತಿದ್ದರು. ಅವರ ವಾಗ್ವೈಭವಕ್ಕೆ ಮರುಳಾಗುತ್ತಿದ್ದರು. ಯುವಕರು ಅವರ ಮಾತು, ವೈಖರಿಗಳಿಂದ ಪ್ರಭಾವಿತರಾಗಿ ಅಭಿನವ ಭಾರತ ಸೇರುತ್ತಿದ್ದರು. ಭವ್ಯ ಭಾರತದ ಭಾವೀ ಸೂರ್ಯ ಮಹಾರಾಷ್ಟ್ರದ ಮನೆಯಂಗಳದಲ್ಲಿ ಉದಯಿಸುತ್ತಿದ್ದ! ಅಷ್ಟರಲ್ಲಾಗಲೇ ಲಂಡನ್ನಿನ ಭಾರತ ಭವನದ ಶ್ಯಾಮಜೀ ಕೃಷ್ಣವರ್ಮರ "ಶಿವಾಜಿ ವಿದ್ಯಾರ್ಥಿ ವೇತನ" ಅರಸಿ ಬಂದಿತ್ತು. ಸಿಂಹದ ಗುಹೆಗೆ ನರಸಿಂಹನ ಆಗಮನ!

                  ೧೮೫೭ರಲ್ಲಿ ನಡೆದದ್ದು ದಂಗೆಯಲ್ಲ; ಆಂಗ್ಲರನ್ನು ಒದ್ದೋಡಿಸುವ ಸಲುವಾಗಿ ನಡೆದ ಮಹಾಸಂಗ್ರಾಮ ಎಂದು ಹೇಳಿ ಸಾಕ್ಷಿ ಸಮೇತ ರಚಿಸಿದ "೧೮೫೭ರ ಮಹಾಸಂಗ್ರಾಮ" ಬ್ರಿಟಿಷರ ಢವಗುಟ್ಟಿಸಿ, ಪ್ರಕಟಣೆಗೆ ಮೊದಲೇ ಎರಡೆರಡು ದೇಶಗಳಲ್ಲಿ ನಿಷೇಧಕ್ಕೊಳಪಟ್ಟರೂ ಲಕ್ಷ ಲಕ್ಷ ಸ್ವಾತಂತ್ರ್ಯ ಯೋಧರಿಗೆ ಭಗವದ್ಗೀತೆಯಾಯಿತು. ಶೋಕಿಲಾಲ ಧಿಂಗ್ರಾ ದೀಕ್ಷೆ ಪಡೆದ. ಕರ್ಜನ್ ವಾಯಿಲಿಯ ವಧೆಯಾಯಿತು. ಸ್ವಾತಂತ್ರ್ಯದ ಪ್ರಯತ್ನಕ್ಕಾಗಿ ಸಾವರ್ಕರರಿಗೆ ಸಿಕ್ಕಿದ್ದು ಎರಡೆರಡು ಜೀವಾವಧಿ(ಕರಿನೀರ) ಶಿಕ್ಷೆ. ಜೊತೆಗೆ ಬಿಎ, ಬ್ಯಾರಿಸ್ಟರ್ ಪದವಿಗಳ ನಿರಾಕರಣೆ. 1910 ಜುಲೈ 8ರಂದು ನಡೆದದ್ದು ಇತಿಹಾಸ ಹಿಂದೆಂದೂ ಕಂಡಿರದ ಅದ್ಭುತ ಸಾಗರ ಸಾಹಸ. ತನ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಹಡಗು ಮಾರ್ಸಿಲೆಸ್ ತಲುಪಿದಾಗ ಶರೀರಬಾಧೆಯ ನೆಪದಲ್ಲಿ ಶೌಚಾಲಯ ಹೊಕ್ಕವರು ಯೋಗಬಲದಿಂದ ಶರೀರವನ್ನು ಸಂಕುಚಿಸಿ ಸಣ್ಣಕಿಂಡಿಯ ಮೂಲಕ ಸಮುದ್ರಕ್ಕೆ ಧುಮುಕಿ ಗುಂಡಿನ ದಾಳಿಯ ಮಧ್ಯೆ ಈಜಿ ದಡ ಸೇರಿದರು. ಆದರೆ ಲಂಚದಾಸೆಗೆ ಬಲಿಯಾದ ಪ್ರೆಂಚ್ ಸಿಬ್ಬಂದಿಯಿಂದಾಗಿ ಮತ್ತೆ ಬಂಧಿಸಲ್ಪಟ್ಟರು. ಮುಂದೆ ಅಂಡಮಾನ್! ಕೇಳಿದರೇ ಮೈಜುಮ್ಮೆನಿಸುವ ಕರಿನೀರ ಶಿಕ್ಷೆ! ಆದರೇನು ಅಲ್ಲಿನ ಕತ್ತಲೆಕೋಣೆಯಲ್ಲಿ ಮೊಳೆಯಿಂದ ೧೦ ಸಾವಿರ ಸಾಲಿನ ಕಾವ್ಯ ರಾಶಿಯನ್ನು ಗೋಡೆಯ ಮೇಲೆ ಮೂಡಿಸಿ ತನ್ನ ಕಾವ್ಯರಸದಿಂದ ತಾಯಿ ಭಾರತಿಗೆ ಅಭಿಷೇಕಗೈದರು. ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಾಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ಧಿ ಚಳವಳಿ ನಡೆಸಿದರು. ತನ್ನನ್ನೂ ಇತರರಿಂದ ಪ್ರತ್ಯೇಕವಾಗಿ ಇರಿಸಿದಾಗ್ಯೂ ಕೈದಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿ ಜೈಲಿನಲ್ಲಿ ಸಮಗ್ರ ಸುಧಾರಣೆ ತಂದರು.

                ಸಾವರ್ಕರ್ ಕ್ಷಮಾಪಣೆ ಕೇಳಿದ್ದರು ಎಂದು ಸೆಕ್ಯುಲರುಗಳು ಬೊಬ್ಬಿಡುತ್ತಾರೆ. ಒಂದಲ್ಲ ಮೂರುಬಾರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು ಸಾವರ್ಕರ್. ಅಸಲಿಗೆ ಅದು ಕ್ಷಮಾಪಣೆಯೇ ಅಲ್ಲ. "ಇನ್ನು ಮುಂದೆ ಸಶಸ್ತ್ರ ಕ್ರಾಂತಿ ಮಾಡುವುದಿಲ್ಲ, ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ" ಎಂಬ ಮುಚ್ಚಳಿಕೆ ಅಷ್ಟೇ. ಸಾವರ್ಕರ್ ಮಾತ್ರವಲ್ಲ, ಭಾಯಿ ಪರಮಾನಂದ್ ಮುಂತಾದ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಹಲವು ಕ್ರಾಂತಿಕಾರಿಗಳು ಈ ರೀತಿಯ ಒಪ್ಪಂದ ಪತ್ರ ಬರೆದು ಶಿಕ್ಷೆಯಿಂದ ಬಿಡುಗಡೆ ಹೊಂದಿದ್ದರು. ಬ್ರಿಟಿಷರಿಂದ ಡಿ (ಅಂದರೆ ಡೇಂಜರಸ್) ಎಂದು ಬರೆಸಲ್ಪಟ್ಟ ಖೈದಿ ಭಿಲ್ಲೆ ಪಡೆದ ಸಾವರ್ಕರ್ ಕ್ಷಮೆ ಕೇಳುವುದೆಂದರೆ ಅದರ ಹಿಂದೆ ಮತ್ತಿನ್ಯಾವುದೋ ತಂತ್ರ ಇದೆ ಎಂದು ಬ್ರಿಟಿಷರಿಗೂ ತಿಳಿದಿತ್ತು. ಅದಕ್ಕಾಗಿ 1937ರವರೆಗೆ ರತ್ನಗಿರಿ ಬಿಟ್ಟು ಹೊರಹೋಗದಂತೆ ಸ್ಥಾನ ನಿರ್ಬಂಧ, ಜೊತೆಗೆ ಪೊಲೀಸ್ ಕಾವಲು, ಸುತ್ತ ಬೇಹುಗಾರರನ್ನು ಬಿಟ್ಟು ಅವರ ಬಿಡುಗಡೆ ಮಾಡಲಾಗಿತ್ತು. ಬ್ರಿಟಿಷರಿಗೆ ತಿಳಿದ ಸತ್ಯ ಕಾಂಗ್ರೆಸ್ಸಿಗರಿಗೆ ತಿಳಿದಿಲ್ಲ ಎಂದೇನಲ್ಲ. ಎಲ್ಲಿ ಸಾವರ್ಕರ್ ಜನಮನವನ್ನು ಆವರಿಸಿ ತಮ್ಮ ಕುಕೃತ್ಯಗಳು ಹೊರಬೀಳುತ್ತದೆ ಎನ್ನುವ ಭಯ ಅಷ್ಟೇ! ಬಿಡುಗಡೆ ಆದ ಬಳಿಕವೂ ಸಾವರ್ಕರ್ ಸುಮ್ಮನಿರಲಿಲ್ಲ. ಅಸಂಖ್ಯ ಕ್ರಾಂತಿ ವೀರರಿಗೆ ಮಾರ್ಗದರ್ಶಕರಾದರು. ಅಸ್ಪೃಶ್ಯತೆ ಮೊದಲಾದ ಪಿಡುಗುಗಳನ್ನು ತೊಡೆದು ಹಾಕುವ ಸಾಮಾಜಿಕ ಸುಧಾರಕರಾದರು. ಸುಭಾಷರಿಗೆ ದೇಶದಿಂದ ಹೊರಹೋಗಿ ಸೈನ್ಯ ಕಟ್ಟುವಂತೆ, ರಾಸ್ ಬಿಹಾರಿ ಬೋಸರನ್ನು ಸಂಪರ್ಕಿಸುವಂತೆ ಉಪಾಯ ಹೇಳಿಕೊಟ್ಟಿದ್ದು ಸಾವರ್ಕರ್ ಅವರೇ.

"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"
ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್.

                 ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ನೇರವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದು ಸಾವರ್ಕರ್ ಪ್ರತಿಪಾದನೆಯಾಗಿತ್ತು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ಅವರ ಹಿಂದುತ್ವದ ವ್ಯಾಖ್ಯೆ ಅವೈದಿಕ ಮತಗಳನ್ನು ಹಿಂದೂ ಜನಾಂಗದಲ್ಲಿ ಸೇರಿಸಿಕೊಂಡರೂ ಅದು ಹಿಂದೂ ಯಾರೆಂಬ ಪ್ರಾಚೀನ ವ್ಯಾಖ್ಯೆಗೇನೂ ಧಕ್ಕೆ ಎಸಗಿಲ್ಲ. ವೇದಗಳಲ್ಲಿ ಉಲ್ಲೇಖಿತವಾದ ರಾಷ್ಟ್ರ-ರಾಷ್ಟ್ರೀಯತೆಯ ವ್ಯಾಖ್ಯೆಯೂ ಸಾವರ್ಕರ್ ರಾಷ್ಟ್ರೀಯತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೊಟ್ಟ ಹಿಂದುತ್ವದ ವ್ಯಾಖ್ಯೆಯೂ ಏಕರೂಪದವು. ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆಬೇರೆಯಲ್ಲ. ಸಾವರ್ಕರರ ವ್ಯಾಖ್ಯೆ ಈ ದೇಶವನ್ನು "ರಾಷ್ಟ್ರ"ವಾಗಿ ಸ್ವೀಕರಿಸದ ಪ್ರತಿಯೊಬ್ಬರನ್ನೂ ಹಿಂದುತ್ವದಿಂದ ಪ್ರತ್ಯೇಕಿಸಿತು. ಈ ಅಂಶವನ್ನು "ಸಾವರ್ಕರರದ್ದೂ ಒಂದು ರೀತಿಯ ದ್ವಿರಾಷ್ಟ್ರ ಸಿದ್ಧಾಂತ. ಇದರಿಂದ ದೇಶದೊಳಗೇ ಹಿಂದೂ- ಮುಸ್ಲಿಂ ಎನ್ನುವ ಎರಡು ದೇಶಗಳನ್ನು ನಿರ್ಮಿಸುವ ಅಪಾಯವಿದೆ" ಎಂದು ವಿಶ್ಲೇಷಿಸಿದ ಅಂಬೇಡ್ಕರ್ ಆಗಲೀ ಅವರನ್ನೇ ಆಧಾರವಿರಿಸಿದ ಇನ್ನುಳಿದವರಾಗಲೀ ಗಮನಿಸದೇ ಹೋದರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ರಾಷ್ಟ್ರವೆಂದರೆ ಸಂಸ್ಕೃತಿಯ ಪ್ರವಾಹ. "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ.

                    ಸಾವರ್ಕರ್ ಸೆಮೆಟಿಕ್ ಮತಗಳನ್ನು ಹೊರಗಿಟ್ಟುದುದಕ್ಕೆ ಕಾರಣವಿಲ್ಲದೆ ಇಲ್ಲ. ಈ ಮತಾವಲಂಬಿಗಳು ಎಂದಿಗೂ ಭಾರತವನ್ನು ತಮ್ಮ ಮಾತೃಭೂಮಿಯೆಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಲಾರರು. ಅವರಿಗೆ ದೇಶಕ್ಕಿಂತ ತಮ್ಮ ಮತವೇ ಶ್ರೇಷ್ಠ. ರಾಷ್ಟ್ರ ಎನ್ನುವ ಪರಿಕಲ್ಪನೆಯೇ ಅವರಿಗಿಲ್ಲ. ಹಾಗಾಗಿ "ಭಾರತ"ದಲ್ಲಿ ಅವರ ಸ್ಥಾನ ಎಂದಿಗೂ ಹೊರಗಿನವರದ್ದೇ! ಜಿನ್ನಾ, ಇಕ್ಬಾಲ್ ಮುಸ್ಲಿಂ ಲೀಗನ್ನು ಬಳಸಿಕೊಂಡು ಮುಸ್ಲಿಮರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ನೇರ ಕಾರ್ಯಾಚರಣೆಗೆ ಇಳಿದಾಗ ಅವರನ್ನು ಖಂಡತುಂಡವಾಗಿ ವಿರೋಧಿಸಿದರು ಸಾವರ್ಕರ್. ಬಹುಷಃ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತದ ಸಂವಿಧಾನದಲ್ಲಿ ಸೆಮೆಟಿಕ್ ಮತಾನುಯಾಯಿಗಳಿಗಿಂತಲೂ ಹಿಂದೂಗಳಿಗೇ ಪ್ರಧಾನ ಸ್ಥಾನಮಾನವಿರಬೇಕೆಂದು ಗಟ್ಟಿಸ್ವರದಲ್ಲಿ ಪ್ರತಿಪಾದಿಸಿದ ರಾಜಕೀಯ ನಾಯಕ ಸಾವರ್ಕರ್ ಒಬ್ಬರೇ! ಬೆರಳು ತೋರಿಸಿದರೆ ಹಸ್ತ ನುಂಗುವ ಮುಸ್ಲಿಮರು, ಕ್ರೈಸ್ತರ ಮನೋವೃತ್ತಿಯನ್ನು ಸಾವರ್ಕರ್ ಅರ್ಥಮಾಡಿಕೊಂಡಷ್ಟು ನಿಖರವಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಹಾಗಾಗಿಯೇ ಭಾರತ ರಾಷ್ಟ್ರವಾಗಿ ಉಳಿಯಬೇಕಾದರೆ ಹಿಂದೂಗಳಿಗೇ ಪ್ರಧಾನ ಸ್ಥಾನಮಾನ ನೀಡಬೇಕೆಂದು ಸಾವರ್ಕರ್ ಪ್ರತಿಪಾದಿಸಿದರು.  "ನೀವು ಬಂದರೆ ನಿಮ್ಮ ಜೊತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ವಿರೋಧಿಸಿದರೆ ನಿಮ್ಮನ್ನು ಎದುರಿಸಿ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ ಎಂದ ಸಾವರ್ಕರ್ ಮಾತನ್ನು ಉಳಿದ ನಾಯಕರು ಅನುಕರಿಸಿದ್ದರೆ ಭಾರತಕ್ಕೆ ಈ ದುಃಸ್ಥಿತಿ ಬರುತ್ತಿರಲಿಲ್ಲ. ಹಿಂದೂಗಳಿಗೆ ಭಾರತದ ಸಂವಿಧಾನದಲ್ಲಿ ಪರಮಾಧಿಕಾರ ನೀಡಬೇಕೆಂದು ಪ್ರತಿಪಾದಿಸಿದಾಗ, ಅಂಬೇಡ್ಕರ್ ಇದರಿಂದ ಬಹುಸಂಖ್ಯಾತರು ತಮ್ಮ ಭಾಷೆ, ಧರ್ಮ, ಸಂಸ್ಕೃತಿಯನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಅಪಾಯವಿರುತ್ತದೆ ಎಂದಿದ್ದರು. ಆದರೆ ಸಹಸ್ರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿಲ್ಲ, ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ಅಧಿಕಾರ ಚಲಾಯಿಸಿಲ್ಲ, ಅದು ಹಿಂದೂ ಮನೋಭೂಮಿಕೆಯಲ್ಲಿಯೇ ಇಲ್ಲ ಎನ್ನುವುದನ್ನು ಮರೆತರು ಅಂಬೇಡ್ಕರ್. ಮುಸ್ಲಿಮ, ಕ್ರೈಸ್ತರ ಕೈಗೆ ಅಧಿಕಾರ ಸಿಕ್ಕರೆ ಕೆಲವೇ ಸಮಯದಲ್ಲಿ ಅವರು ದೇಶವನ್ನು ಕುಟಿಲತೆಯಿಂದ ಒಡೆಯುವ ಅಪಾಯವನ್ನು ಸಾವರ್ಕರ್ ಮನಗಂಡಿದ್ದರು. ಅಲ್ಲದೆ ಮೀಸಲಾತಿಯಂತಹ ಸೌಲಭ್ಯಗಳನ್ನು ಈ ಜನಾಂಗಕ್ಕೆ ಕೊಟ್ಟುದುದರಿಂದ ಇಂದು ಉಂಟಾಗಿರುವ ಅನರ್ಥವನ್ನೂ, ರಾಜಕಾರಣಿಗಳ ಸೆಕ್ಯುಲರ್-ಮತಬ್ಯಾಂಕ್ ರಾಜಕಾರಣವನ್ನೂ, ಹಿಂದೂಗಳನ್ನು ಎರಡನೆ ದರ್ಜೆಯನ್ನಾಗಿಸಿರುವ ಅವರ ಕುತಂತ್ರವನ್ನು ಸಾವರ್ಕರ್ ಅಂದೇ ಅರ್ಥೈಸಿಕೊಂಡಿದ್ದರೆನಿಸುತ್ತದೆ.

            "ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ. ನೀವು ಬಲವಾಗಿದ್ದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕ್ರುಶ್ಚೇವ್ ಬೂಟು ತೋರಿಸಿದಂತೆ ನೀವೂ ತೋರಿಸಬಹುದು. ಆದರೆ ನೀವು ದುರ್ಬಲರಾಗಿದ್ದರೆ ನಿಮ್ಮ ಹಣೆಬರಹ ಶಕ್ತಿಯುತ ಆಕ್ರಮಣಕಾರಿಯ ಕೈಯಲ್ಲಿರುತ್ತದೆ" ಎಂದಿದ್ದ ಅವರು ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಇದು ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ."

                    ಸಾವರ್ಕರರ ಹಿಂದುತ್ವದ ಚಿಂತನೆ ಕೇವಲ ಮುಸಲ್ಮಾನ ಮಾನಸಿಕತೆಗೆ ಪ್ರತಿಕ್ರಿಯೆಯಲ್ಲ. ಅದು ಈ ದೇಶ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ವೇದೋಲ್ಲೇಖಿತ ಚಿಂತನೆಯೂ ಹೌದು. ಭಾರತೀಯ ದೃಷ್ಠಿಯಿಂದ ನೋಡದೆ ಸೆಕ್ಯುಲರ್ ದೃಷ್ಠಿಯಿಂದ ನೋಡುವವರಿಗೆ ಹಿಂದೂಗಳು ಹಾಗೂ ಹಿಂದೂಯೇತರರು ತಂತಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿಕೊಂಡು ಒಂದೇ ದೇಶದೊಳಗೆ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಬಾಳಬೇಕೆಂಬುದು ಸಾವರ್ಕರ್ ಪ್ರತಿಪಾದನೆ ಅಂತನ್ನಿಸಬಹುದು. ಪ್ರಧಾನ ಜನಾಂಗಕ್ಕೆ ಪರಮಾಧಿಕಾರ ಕೊಡುವುದರಿಂದ ಎರಡು ಜನಾಂಗಗಳು ಪರಸ್ಪರ ಪ್ರೀತಿ ಗೌರವದಿಂದ, ಹೊಂದಾಣಿಕೆಯಿಂದ ಬದುಕಲು ಸಾಧ್ಯವಿಲ್ಲ ಎಂದು ಆಲೋಚಿಸುವ ಸೆಕ್ಯುಲರ್ ಚಿಂತಕರಿಗೆ ಅಲ್ಪ ಸಂಖ್ಯಾತ ಜನಾಂಗಕ್ಕೆ ಸಮಾನ ಅಥವಾ ಹೆಚ್ಚಿನ ಅಧಿಕಾರ ಕೊಟ್ಟ ಬಳಿಕವೂ ಆ ಜನಾಂಗಗಳು ಹಿಂದೂಗಳೊಟ್ಟಿಗೆ ಹೊಂದಾಣಿಕೆಯಿಂದ ಬದುಕಿಲ್ಲ/ಬದುಕುತ್ತಿಲ್ಲ ಎನ್ನುವುದು ಮರೆತು ಹೋಗಿದೆ. ಗಾಂಧಿ ಅಂತಾರಾಷ್ಟ್ರೀಯ ಸಮಸ್ಯೆಯನ್ನು(ಖಿಲಾಫತ್ ಚಳುವಳಿ)  ಸ್ವಾತಂತ್ರ್ಯ ಚಳುವಳಿಗೆ ವೃಥಾ ತಳುಕು ಹಾಕಲು ಯತ್ನಿಸಿದರು. ಮುಸ್ಲಿಮರನ್ನು ಓಲೈಸಿ ಹಿಂದೂ ಮುಸ್ಲಿಂ ಐಕ್ಯ ಸಾಧಿಸಲು ಮೂರ್ಖ ಪ್ರಯತ್ನ ನಡೆಸಿಯೂ ಮುಸ್ಲಿಮರ ಕಣ್ಣಲ್ಲಿ ಕಾಫಿರರಾಗಿಯೇ ಉಳಿದರು. ಇನ್ನು ಉಳಿದ ನಾಯಕರ ಪಾಡೇನು? ಕ್ರಿಸ್ತನ ಚಂತನೆಯನ್ನು ಗಾಂಧಿ ಹಿಂದೂ ಧರ್ಮಕ್ಕೆ ಎರವಲು ತಂದು ಅಹಿಂಸೆಯ ನಾಟಕವಾಡಿದರೆ, ಸಾವರ್ಕರ್ ಕಾಯಾ ವಾಚಾ ಮನಸಾ "ಅಹಿಂಸಾ ಪರಮೋ ಧರ್ಮ, ಧರ್ಮ ಹಿಂಸಾ ತಥೈವಚಾ" ಎಂದು ಆಚರಿಸಿದರು. ವಿಪರ್ಯಾಸ ಹಾಗೂ ವಿಷಾದವೆಂದರೆ ಭಾರತದ ರಾಜಕಾರಣ ಸಾವರ್ಕರರ ಸನಾತನ ಚಿಂತನೆಯನ್ನು ಅನುಸರಿಸುವ ಬದಲು ಗಾಂಧಿಯ ಸೆಕ್ಯುಲರ್, ನಾಟಕದ, ಸ್ವಜನಪಕ್ಷಪಾತದ, ಸ್ವಹಿತದ ರಾಜಕಾರಣವನ್ನು ತನ್ನದಾಗಿಸಿಕೊಂಡಿತು.

                      ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಮೊಟ್ಟಮೊದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ರತ್ನಗಿರಿಯ ಪತಿತ ಪಾವನ ಮಂದಿರದ ಮೂಲಕ ಅವರಿಗೆ ದೇವಾಲಯ ಪ್ರವೇಶ ಕಲ್ಪಿಸಿದ ಸಮಾಜ ಸುಧಾರಕನಾತ. ಆತ ಕೇವಲ ಕ್ರಾಂತಿಕಾರಿಯಲ್ಲ. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕನೂ ಹೌದು. ಹೌದು. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡಿ ಚೈತನ್ಯ ತುಂಬುವ ಹೆಸರೇ "ವೀರ ಸಾವರ್ಕರ್". ವೀರ ಸಾವರ್ಕರ್ ಅಂದಾಕ್ಷಣ ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಅದು  ಹಿಮಾಲಯದೆತ್ತರದ ವ್ಯಕ್ತಿತ್ವ. ದಶದಿಕ್ಕುಗಳಿಗೂ ಹರಿದ ಅಪಾರ ಪ್ರತಿಭೆಯನ್ನು, ವಿದ್ವತ್ತನ್ನು ದೇಶಕ್ಕಾಗಿ ಮಾತ್ರ ವಿನಿಯೋಗಿಸಿದ ಅನುಪಮ ಸತ್ವ. ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಭವ್ಯ ಭಾರತದ ಮುಕುಟಮಣಿ!

                        ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಬಗೆಗೆ ಅಧ್ಯಯನ ಮಾಡಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

                      ಈಗ ಸಾವರ್ಕರರಿಗೆ ಭಾರತ ರತ್ನ ಕೊಡುತ್ತೇವೆಂದು ಭಾಜಪಾ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇ ತಡ, ರಾಷ್ಟ್ರೀಯತೆಯ ವಿರೋಧಿಗಳೆಲ್ಲರ ರೋಮ ನೆಟ್ಟಗಾಗಿದೆ. ಸಾವರ್ಕರ್ ಎಂಬ ಹೆಸರನ್ನೂ ಕೇಳಿದಾಕ್ಷಣ ಬ್ರಿಟಿಷರು ಮಾತ್ರವಲ್ಲ, ಅಂದಿನ ಕಾಂಗ್ರೆಸ್ಸರ ಎದೆಯಲ್ಲೂ ಅವಲಕ್ಕಿ ಕುಟ್ಟುತ್ತಿತ್ತು. ಇಂದಿನ ಕಾಂಗ್ರೆಸ್ಸಿಗರ ಎದೆಯಲ್ಲೂ! ಭ್ರಷ್ಟಾಚಾರಿಗಳ ಗುರುಗಳು, ಸಮಾಜವನ್ನು ಅಹಿಂದ ಎನ್ನುತ್ತಾ ಜಾತಿ ಆಧಾರದಲ್ಲಿ ಒಡೆದವರು, ಮತಾಂಧನೂ, ಕ್ರೂರಿಯೂ ಆದ ಟಿಪ್ಪು ಎಂಬ ನರಹಂತಕನನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತಾ ಅವನ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸ ಹೊರಟ ಇತಿಹಾಸ ಗೊತ್ತಿಲ್ಲದ ಗೋಸುಂಬೆಗಳು ವೀರ ಸಾವರ್ಕರ್ ಎಂಬ ಪುಣ್ಯಪುರುಷನನ್ನು, ತ್ಯಾಗಮೂರ್ತಿಯನ್ನು ಜರೆಯುತ್ತಿದ್ದಾರೆ. ಪ್ರಿನ್ಸ್ ಆಗಾ ಖಾನನ ಅರಮನೆಯಲ್ಲಿ ಮಲಗಿದ್ದನ್ನೇ ಜೈಲುವಾಸ ಎಂದು ತಿಳಿದ ಗುಲಾಮರಿಗೆ ಕರಿನೀರ ಶಿಕ್ಷೆ ಅರ್ಥವಾಗುವುದಾದರೂ ಹೇಗೆ? ನಾಚಿಕೆ, ಮಾನ, ಮರ್ಯಾದೆ ಬಿಟ್ಟ ರಾಜಕಾರಣಿಗಳೇ; ತನ್ನಿಡೀ ಪ್ರತಿಭೆ, ಜೀವ, ಜೀವನವನ್ನು, ತನ್ನ ಸಂಸಾರ, ಬಂಧುಬಳಗ, ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಎಲ್ಲವನ್ನೂ ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯಾಗಿ ಅರ್ಪಿಸಿದ ತ್ಯಾಗಮೂರ್ತಿಯನ್ನು ನಿಂದಿಸುವ ಮುನ್ನ ಯೋಚಿಸಿ. ನೀವಿವತ್ತು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಾ, ರಾಜಕೀಯ ಸ್ಥಾನಮಾನಗಳನ್ನು ಗಳಿಸುತ್ತಾ ಈ ದೇಶದಲ್ಲಿ ನೆಮ್ಮದಿಯಾಗಿ ಇದ್ದೀರಿ ಎಂದರೆ ಅದಕ್ಕೆ ಕಾರಣರು ಅವರು. ಅವರ ಋಣ ನಿಮ್ಮ ಮೇಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ