ಪುಟಗಳು

ಮಂಗಳವಾರ, ನವೆಂಬರ್ 5, 2019

ನಾಡಹಬ್ಬ; ಎಲ್ಲರನೂ, ಎಲ್ಲವನೂ ಒಳಗೊಳ್ಳುವ ಸಾಂಸ್ಕೃತಿಕ ಪರಂಪರೆ ದಸರಾ

ನಾಡಹಬ್ಬ; ಎಲ್ಲರನೂ, ಎಲ್ಲವನೂ ಒಳಗೊಳ್ಳುವ ಸಾಂಸ್ಕೃತಿಕ ಪರಂಪರೆ ದಸರಾ


             ಎಂಟು ಮೀಟರ್ ಎತ್ತರದ, ಮೇಲೆ 23 ಚದರ ಮೀಟರ್ ವಿಸ್ತೀರ್ಣವುಳ್ಳ ಬೃಹದಾಕಾರದ ದಿಬ್ಬವೊಂದರ ಮೇಲೆ ಕುಳಿತು ರಾಜ ವಿಜೃಂಭಣೆ, ಸಂಭ್ರಮ ಸಡಗರಗಳಿಂದ ನಡೆಯುತ್ತಿರುವ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾನೆ. ವಿವಿಧ ರಾಜ್ಯಗಳ ರಾಜಾಧಿರಾಜರು, ಮಹಾಸೇನಾನಿಗಳು ಅದರ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಬೆರಗಾಗುತ್ತಿದ್ದಾರೆ. ಅಲ್ಲಿ ಸೇನೆಯ ಕವಾಯತು ನಡೆಯುತ್ತಿದೆ; ಗಾನ-ನಾಟ್ಯ ವೈಭವಗಳಿವೆ; ರಾಜ ಮೊಗೆ ಮೊಗೆದು ತನ್ನ ಸೈನಿಕ, ಸೇವಕರಿಗೆ ಉಡುಗೊರೆಗಳನ್ನು ಕೊಡುತ್ತಿದ್ದಾನೆ; ಜನ ಈ ವೈಭವವನ್ನು ನೋಡಲು ಎರಡು ಕಣ್ಣು ಸಾಲದು ಎನ್ನುತ್ತಿದ್ದಾರೆ; ಅಲ್ಲಿ ರಾಜ್ಯದ ಶಕ್ತಿ, ಸಂಸ್ಕೃತಿ, ಸಂಪತ್ತು, ಸಾಧನೆಗಳನ್ನು ಜಗತ್ತಿನೆದುರುಗಡೆ ತೆರೆದಿಡಲಾಗುತ್ತಿದೆ. ಇಂತಹಾ ರಾಜ್ಯ ಈ ಜಗತ್ತಿನಲ್ಲಿ ಯಾವುದಿದ್ದೀತು? ಯಾವ ರಾಜ್ಯದಲ್ಲಿ ಬೀದಿ ಬೀದಿಗಳಲ್ಲಿ ಚಿನ್ನವನ್ನು ಮಾರಲಾಗುತ್ತಿತ್ತೋ ಅಂತಹಾ ವಿಜಯನಗರ ಸಾಮ್ರಾಜ್ಯವಲ್ಲದೆ ಮತ್ಯಾವುದಿದ್ದೀತು? ಹೌದು, ಒರಿಸ್ಸಾದ ಗಜಪತಿಯ ಗರ್ವಭಂಗ ಮಾಡಿದ ನೆನಪಿಗಾಗಿ ಶ್ರೀಕೃಷ್ಣದೇವರಾಯನಿಂದ ಕಟ್ಟಲ್ಪಟ್ಟಿತ್ತು ಆ "ಮಹಾನವಮಿ ದಿಬ್ಬ". ರಾಯಚೂರು ವಿಜಯದ ಬಳಿಕವಂತೂ ಮಹಾನವಮಿ ಉತ್ಸವದ ವೈಭವ ಗಗನಕ್ಕೇರಿತ್ತು.

                ವಿಜಯನಗರದ ರಾಯರು ಮಹಾನವಮಿ ಉತ್ಸವವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದರು. ಅದಕ್ಕೊಂದು ಭವ್ಯ ರೂಪ ಕೊಟ್ಟವ ಕೃಷ್ಣರಾಯ. ಉತ್ಸವದ ವಿಜೃಂಭಣೆಗೆ ಕೇವಲ ಸಾಲು ಸಾಲು ಗೆಲುವುಗಳು ಕಾರಣವಾಗಿರಲಿಲ್ಲ. ಅದರ ಹಿಂದೆ ಜಾತಿ, ಮತ, ತತ್ತ್ವಗಳ ವೈರುಧ್ಯಗಳನ್ನು ಪಕ್ಕಕ್ಕಿರಿಸಿ ನಾವೆಲ್ಲಾ ಒಂದು ಎಂಬ ಭಾವನೆಯನ್ನು ಹಿಂದೂಗಳಲ್ಲಿ ತುಂಬಿ ಜನತೆಯನ್ನು ಸಂಘಟಿಸುವುದು ರಾಯನ ದೂರದೃಷ್ಟಿಯ ಘನ ಉದ್ದೇಶವಿತ್ತು. ಮಹಾನವಮಿ ಉತ್ಸವವನ್ನು ವೈಭವದಿಂದ ಆಚರಿಸಿ, ವಿಜಯನಗರದ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿನೆದುರು ತೆರೆದಿಟ್ಟು ಮತ್ತೆಂದೂ ಆಕ್ರಮಣಕಾರರು ವಿಜಯನಗರದ ಕಡೆಗೆ ಕಣ್ಣೆತ್ತಿ ನೋಡದಂತಹಾ ಒಗ್ಗಟ್ಟನ್ನು, ಸಾಮರ್ಥ್ಯವನ್ನು ಜಗತ್ತಿಗೆ ಅವನು ತೋರಿಸಿಕೊಡಬೇಕಿತ್ತು. ರಂಗೋಲಿ, ಚಿತ್ತಾರ, ಅಲಂಕಾರ, ಪೂಜೆ, ಹವನ, ನಾಟ್ಯ, ಗಾಯನ, ಅಂಬಾರಿಯೊಂದಿಗೆ ರಾಯನನ್ನು ಹೊತ್ತ ಆನೆಯ ಗಂಭೀರ ನಡೆ, ಗೊಂಬೆಯಾಟ ಆದಿಯಾಗಿ ವಿವಿಧ ಪ್ರದರ್ಶನಗಳು, ಆಟಗಳು, ಇಂದ್ರಜಾಲಾದಿಗಳು, ಕುಸ್ತಿ, ಕವಾಯತುಗಳು, ಶಸ್ತ್ರಪೂಜೆ, ಗೋಪೂಜೆ ಹೀಗೆ ಆರಂಭವಾದ ಉತ್ಸವದ ವೈಭವದಲ್ಲಿ ತೇಲಿಹೋದ ಜನತೆ, ಯೋಧರು ಹಬ್ಬದ ಹೆಸರಿನಲ್ಲಿ ಒಟ್ಟಾಗಿದ್ದಲ್ಲದೇ ತಮಗರಿವಿಲ್ಲದಂತೆ ತಮ್ಮೊಳಗಿನ, ತಮ್ಮ ನಡುವಣ ವಿಶ್ವಾಸವನ್ನು ವೃದ್ಧಿಸಿಕೊಳ್ಳುತ್ತಿದ್ದರು. ಸ್ವತಃ ರಾಯ ಮಹಾನವಮಿ ದಿಬ್ಬದ ಮೇಲೆ ಕುಳಿತು ಗಜ ಪಡೆ, ಅಶ್ವ ಪಡೆ, ಸೈನ್ಯದ ಕವಾಯತುಗಳು, ಪಿರಂಗಿಗಳು ಮತ್ತು ಆಯುಧಗಳ ಶಕ್ತಿ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ. ವಿವಿಧ ರಾಜ್ಯಗಳ ರಾಜ ಮಹಾರಾಜರುಗಳು, ಸಾಮಂತರು, ಮಂತ್ರಿಗಳು, ಸೇನಾಧಿಪತಿಗಳು, ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಿ ವಿಜಯನಗರದ ಈ ಶಕ್ತಿ, ಸಾಮರ್ಥ್ಯ, ಸೇನಾಬಲ, ಸಂಸ್ಕೃತಿ, ಪರಂಪರೆ, ಶೌರ್ಯ, ಸಾಧನೆ, ಸಂಪತ್ತು, ವೈಭವಗಳನ್ನು ನೋಡಿ ಬೆರಗಾಗುತ್ತಿದ್ದರು. 11ನೇ ಶತಮಾನದಲ್ಲೇ ವಿದೇಶಿ ಪ್ರವಾಸಿಗ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ (1520-1522) ಮೊದಲಾದವರು ವಿಜಯನಗರ ಸಾಮ್ರಾಜ್ಯದ ವೈಭವೋಪೇತವಾದ ದಸರಾ ಮಹೋತ್ಸವವನ್ನು ಕೊಂಡಾಡಿ ತಮ್ಮ ಪ್ರವಾಸ ಕಥನಗಳಲ್ಲಿ ದಾಖಲಿಸಿದ್ದಾರೆ.
ವಿಜಯನಗರದ ಸಾಮಂತರಾಗಿ ಶ್ರೀರಂಗಪಟ್ಟಣದಲ್ಲಿ ಆಳ್ವಿಕೆಯನ್ನು ಪ್ರಾರಂಭಿಸಿದವರು ಯದುರಾಯ, ಕೃಷ್ಣರಾಯ ಸಹೋದರರು(ಕ್ರಿ.ಶ. 1399). ಕ್ರಿ.ಶ 1610ರಲ್ಲಿ ಒಂದನೇ ರಾಜಒಡೆಯರು ವಿಜಯನಗರದ ರಾಜಪರಂಪರೆಯಂತೆ ಮಹಾನವಮಿ ಉತ್ಸವವನ್ನು ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿ ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ಹಾಗೆ ಪ್ರಾರಂಭಗೊಂಡ ದಸರಾ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ವಿಶ್ವ ಮನ್ನಣೆಗಳಿಸಿ, ವಿದೇಶಿಯರನ್ನು ಆಕರ್ಷಿಸಿತು. ಮೈಸೂರಿಗರ ಜನ ಜೀವನದ ಭಾಗವಾಗಿ, ಭಾವೈಕ್ಯತೆಯನು ಬೆಸೆಯುವ ಸಂಕೇತದ ಹಬ್ಬವಾಯಿತು. ಅರಸರ ಘೋಷಣೆಯಂತೆಯೇ ಕರ್ನಾಟಕದ ನಾಡಹಬ್ಬವೆನಿಸಿತು.

                  ದಸರಾ ಸಂಭ್ರಮ ಮೈಸೂರಿನಲ್ಲಿ ಎರಡು ತಿಂಗಳ ಮುಂಚೆಯೇ ಗರಿಗೆದರಿಕೊಳ್ಳುತ್ತದೆ. ಆನೆಗಳು ಕಾಡಿನಿಂದ ಬಂದು ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡುತ್ತವೆ. ಆನೆಗಳ ಆರೈಕೆಗೆ ಮಾವುತ, ಕಾವಾಡಿಗ ಕುಟುಂಬವೂ ಬರುತ್ತದೆ. ರಸ್ತೆಗಳೆಲ್ಲಾ ಹೊಸ ಜೀವ ಪಡೆಯುತ್ತವೆ. ಸೊರಗಿದ್ದ ಗೋಡೆ, ಕಟ್ಟಡಗಳು ಬಣ್ಣಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತವೆ. ಇಡೀ ನಗರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ಮೈಸೂರು ನಗರವನ್ನು ದೀಪಗಳೊಟ್ಟಿಗೆ ರಾತ್ರಿ ನೋಡುವುದೇ ಒಂದು ಸೊಬಗು. ರಂಗೋಲಿ, ಚಿತ್ತಾರಗಳು ಆಕರ್ಷಿಸುತ್ತವೆ. ಮದುವಣಗಿತ್ತಿಯಂತೆ ನಗರ ಅಲಂಕೃತಗೊಂಡಿರುತ್ತದೆ. ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದಾಗ ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆಯುತ್ತದೆ. ಒಡೆಯರು ಆಶ್ವಯುಜ ಪಾಡ್ಯದ ದಿನ ಸಪತ್ನೀಕರಾಗಿ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಿ, ನವರಾತ್ರಿಯ ವ್ರತಕ್ಕಾಗಿ ಕಂಕಣ ತೊಡುತ್ತಾರೆ. ಅಂಬಾವಿಲಾಸ ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಒಂಬತ್ತು ದಿನವೂ ನಡೆಯುತ್ತವೆ. ಪಟ್ಟದ ಆನೆ, ಗೋವಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಖಾಸಗಿ ದರ್ಬಾರ್ ಮೈಸೂರು ಸಂಪ್ರದಾಯದ ಎಲ್ಲ ಆಚರಣೆಗಳ ಜೊತೆಗೆ ರಾಜಮನೆತನ ವೈಭವವನ್ನು ಸಾರಿ ಹೇಳುತ್ತದೆ. ಈ ಆಚರಣೆಯ ಸೊಬಗು ಮೈಸೂರು ಮೂಲದ ಹಲವು ಮನೆಗಳಲ್ಲೂ ವಾಡಿಕೆಯಲ್ಲಿದೆ.

                 ದಸರೆ ಎಂದೊಡನೆ ನಮಗೆ ನೆನಪಾಗುವುದು ಮೈಸೂರು ಒಡೆಯರ ದರ್ಬಾರಿನ ವೈಭವ; ವಿದ್ಯುತ್ ದೀಪಗಳಿಂದ ಜಗಮಗಿಸುವ ಅರಮನೆ;ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ;ಪಂಜಿನ ಕವಾಯತು. ಹಳೆಯ ಅರಮನೆ 1897ರಲ್ಲಿ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ನಂತರ ಈಗಿರುವ ಗ್ರಾನೈಟ್ ಶಿಲೆಯ ಭವ್ಯವಾದ ಅರಮನೆ ನಿರ್ಮಾಣವಾಯಿತು. ಸುವರ್ಣ ಧ್ವಜದ ಕನಕ ಲೇಪಿತ 145 ಅಡಿ ಎತ್ತರದ ಸುಂದರ ಶಿಖರ, ವಿಜಯನಗರದ ಅರಸ ಶ್ರೀರಂಗರಾಯರು ಕ್ರಿ.ಶ. 1610ರಲ್ಲಿ ಮೈಸೂರಿನ ರಾಜ ಒಡೆಯರಿಗೆ ಕೊಟ್ಟ ಸಿಂಹಾಸನ ಮನಸೆಳೆಯುತ್ತವೆ. ದೇವಿಯು ಶಕ್ತಿ ಸ್ವರೂಪಿಣಿಯಾಗಿ ಮಹಿಷ, ರಕ್ತಬೀಜ, ಶುಂಭ-ನಿಶುಂಭಾದಿ ರಕ್ಕಸರನ್ನು ಸಂಹರಿಸಿದ್ದು ಶರನ್ನವರಾತ್ರಿಯ ಸಮಯದಲ್ಲೇ. ಹಾಗಾಗಿ ಶರನ್ನವರಾತ್ರಿಯ ಒಂಬತ್ತೂ ದಿನ ದುರ್ಗೆಗೆ ವಿಶೇಷ ಪೂಜೆ ನಡೆಯುತ್ತದೆ. ದುರ್ಗಾಷ್ಟಮಿಯ ದಿನ ನಾಡದೇವಿ ಚಾಮುಂಡೇಶ್ವರಿಯ ಪ್ರೀತ್ಯರ್ಥ ವಿಶೇಷ ಪೂಜೆ ನಡೆಯುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನು ರಾವಣಾಸುರನನ್ನು ಸಂಹರಿಸಿದ ದಿನ ವಿಜಯದಶಮಿ. ವಿಜಯದಶಮಿಯ ದಿನ ಸೀಮೋಲ್ಲಂಘನ ನಡೆಯುತ್ತದೆ. ಹಿಂದೆ ಅಂದು ಮಹಾರಾಜರು ಚಿನ್ನದಂಬಾರಿಯಲ್ಲಿ ಕುಳಿತು ತಮ್ಮ ಸೈನ್ಯ ಸಮೇತ ಬನ್ನಿ ಮಂಟಪಕ್ಕೆ ಹೋಗುತ್ತಿದ್ದರು. ಹಿಂದೆ ಆಯುಧಗಳನ್ನು ಬನ್ನಿ ವೃಕ್ಷದಲ್ಲಿ ಸಂರಕ್ಷಿಸಿಡುತ್ತಿದ್ದರು. ಪಾಂಡವರು ಅಜ್ಞಾತವಾಸಕ್ಕೆ ತೆರಳುವ ಮುನ್ನ ಬನ್ನಿ ವೃಕ್ಷದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟಿದ್ದರು. ಆಜ್ಞಾತವಾಸ ಮುಗಿದ ಬಳಿಕ ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಮರಳಿ ಆಯುಧಗಳನ್ನು ಪಡೆದರು. ಆ ಸಂಪ್ರದಾಯವೇ ಇಲ್ಲಿ ಮುಂದುವರಿದಿದ್ದು ಬನ್ನಿ ವೃಕ್ಷದ ಪೂಜೆ ಜೊತೆಗೆ ಬನ್ನಿಯನ್ನು ಹಂಚುವ ವಾಡಿಕೆಯೂ ಮುಂದುವರೆದಿದೆ. ಆದರೆ ಈಗ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ನಾಡದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ ಬನ್ನಿಮಂಟಪಕ್ಕೆ ಕರೆತರಲಾಗುತ್ತದೆ. ಇದೇ ಎಲ್ಲರ ನೆಚ್ಚಿನ ಜಂಬೂ ಸವಾರಿ.

                ಜಂಬೂ ಸವಾರಿಯಂದು 750 ಕಿಲೋ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುವ ಪಟ್ಟದ ಆನೆಯೇ ಎಲ್ಲರ ಕಣ್ಮಣಿ. ಮಂದಗತಿಯಲಿ, ರಾಜಗಾಂಭೀರ್ಯದಿಂದ ಅರಮನೆಯ ಆವರಣದಿಂದ ಬನ್ನಿ ಮಂಟಪದತ್ತ ಅಲಂಕೃತಗೊಂಡು ಸಾಗುವ ಗಜಸಮೂಹದ ಸೊಬಗನ್ನು ನೋಡಲು ಕಣ್ಗಳೆರಡು ಸಾಲವು. ಈ ಅತ್ಯಾಕರ್ಷಕ ಮೆರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಚಿತ್ರಗಳು, ಕುದುರೆ, ಕಾಲಾಳುಗಳು, ಪೋಲೀಸ್ ಬ್ಯಾಂಡ್, ನಂದಿಧ್ವಜ ಜೊತೆಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಕುಸ್ತಿ, ಜಟ್ಟಿ ಕಾಳಗ, ಮಲ್ಲಯುದ್ಧ, ನಾಟಕ, ಜನಪದ ಕುಣಿತ ಮುಂತಾದ ಕಲೆಗಳ ಪ್ರದರ್ಶನ ಮನಸೂರೆಗೊಳ್ಳುತ್ತವೆ. ಹಿಂದೆ ಬಂಗಾರದ ಅಂಬಾರಿಯಲ್ಲಿ ಮಹಾರಾಜರ ದರ್ಶನ ನೋಡುಗರಿಗೆ ರೋಮಾಂಚನ ಉಂಟುಮಾಡುತ್ತಿತ್ತು. ಸೈನಿಕರ ಕವಾಯತು, ಕಾಲಾಳುಗಳ ಪಥಸಂಚಲನ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಚಾಮುಂಡಿ ಬೆಟ್ಟದ ಮೇಲೂ ಪೂಜೆ, ಉತ್ಸವ, ತೆಪ್ಪೋತ್ಸವ ನಡೆಯುತ್ತಿದ್ದವು. ಬನ್ನಿ ಪೂಜೆ ಬಳಿಕ ಅಂಬಾರಿ ಮೆರವಣಿಗೆ ಅರಮನೆಗೆ ಹಿಂದಿರುಗುವಾಗ ವಿದ್ಯುತ್ ದೀಪಗಳ ಅಲಂಕಾರದ ಹಿನ್ನಲೆಯಲ್ಲಿ ಮೈಸೂರು ನಗರ ಕಿನ್ನರ ಲೋಕವನ್ನು ನೆನಪಿಸುವಂತೆ ಕಂಗೊಳಿಸುತ್ತದೆ. ಬಾಣ ಬಿರುಸು ಪ್ರದರ್ಶನ ನಡೆದು ಇಡೀ ಮೈಸೂರು ದೀಪಾಲಂಕಾರದಿಂದ ಕಂಗೊಳಿಸುತ್ತಾ ನಾಡಿನ ಎಲ್ಲ ಭಾಗಗಳಿಂದ ಪ್ರವಾಸಿಗರನ್ನೂ, ವಿದೇಶಿಯರನ್ನೂ ಆಕರ್ಷಿಸುತ್ತಾ ಬಂದಿದೆ.

               ಮೈಸೂರು ಹಿಂದಿನಿಂದಲೂ ಕಲೆ, ಕಲಾವಿದರನ್ನು ಪೋಷಿಸಿದ ನಗರಿ. ದಸರೆಯಂತೂ ದೇಶದಾದ್ಯಂತ ಕಲಾವಿದರನ್ನು ಕೈಬೀಸಿ ಕರೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. ಡೊಳ್ಳು, ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಚಂಡೆ ಮುಂತಾದ ಜನಪದ ಕಲಾವಿದರು ದಸರಾದಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಾರೆ. ಸಂಗೀತ, ನಾಟ್ಯಗಾರರಿಗೂ ಸೂಕ್ತ ಅವಕಾಶ ಸಿಗುತ್ತದೆ. ಮೈಸೂರಿನ ಸುತ್ತಮುತ್ತಲಿನ ನಾನಾ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆಯುತ್ತಾರೆ. ರಂಗಾಯಣದ ನಾಟಕೋತ್ಸವ, ಯುವ ಸಂಭ್ರಮದಂತಹಾ ಕಾರ್ಯಕ್ರಮಗಳು ನಡೆಯುತ್ತವೆ. ಹಿಂದೆ ಅರಮನೆ ಮತ್ತು ಜಗನ್ಮೋಹನ ಅರಮನೆಯಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಇದೀಗ ಕಲಾಮಂದಿರ, ಪುರಭವನ, ಚಿಕ್ಕಗಡಿಯಾರ, ವೀಣೆ ಶೇಷಣ್ಣ ಭವನದಲ್ಲಿ ವಿವಿಧ ನೃತ್ಯ ರೂಪಕ ಹಾಗೂ ನಾಟಕ ಪ್ರದರ್ಶನ ನಡೆಯುತ್ತವೆ. ವಸ್ತ್ರ, ಪುಸ್ತಕ ಮೇಳ, ಆಹಾರ ಮೇಳ, ಗೊಂಬೆಗಳ ಪ್ರದರ್ಶನ, ಕರಕುಶಲ ಮೇಳ, ಓಪನ್ ಬಸ್, ಏರ್ ಶೋ, ಗಾಳಿಪಟ ಉತ್ಸವ, ಹೆಲಿಕಾಪ್ಟರ್ ರೈಡ್, ಕ್ರೀಡೆಯನ್ನು ಪ್ರೋತ್ಸಾಹಿಸಲು ರಾಜ್ಯಮಟ್ಟದ ಕ್ರೀಡೋತ್ಸವ ನಡೆಯುತ್ತದೆ. ಹತ್ತೂ ದಿನ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ರೈತ ದಸರಾ, ಮಹಿಳಾ ದಸರಾ, ಚಿಣ್ಣರ ದಸರಾ ಹೀಗೆ ವಿವಿಧ ಕಾರ್ಯಕ್ರಮಗಳು ನಡೆದು ಪ್ರತಿಭಾ ಸಂಪನ್ನರಿಗೆ ದಸರಾ ಬಹುದೊಡ್ಡ ವೇದಿಕೆಯಾಗಿ ಮಾರ್ಪಟ್ಟಿದೆ.

             ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ರಾಜಾ ಪ್ರತ್ಯಕ್ಷ ದೇವತಾ ಎಂದು ನಂಬಿದವರು ನಾವು. ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಿದ್ದುದು ವಾಡಿಕೆ. ನವವಿವಾಹಿತರಿಗೆ ವರಪೂಜೆಯ ಕಾಲದಲ್ಲೇ ಪಟ್ಟದ ಬೊಂಬೆಗಳನ್ನು ನೀಡುವ ಸಂಪ್ರದಾಯವೂ ಇದೆ. ಅರಮನೆಯಲ್ಲೂ ಬೊಂಬೆಗಳನ್ನು ಕೂರಿಸಲಾಗುತ್ತದೆ. ಯುದ್ಧ ಹಾಗೂ ವಿಜಯವೇ ಈ ಹಬ್ಬಕ್ಕೆ ನಾಂದಿಯಾದ ಕಾರಣ ಚತುರಂಗ ಬಲವನ್ನು ಬಿಂಬಿಸುವ ಬೊಂಬೆಗಳನ್ನು ಇಡಲಾಗುತ್ತದೆ. ಇದೂ ವಿಜಯನಗರದ್ದೇ ಬಳುವಳಿ. ಹಿಂದೆ ಬೊಂಬೆಗಳು ಮಹಾಭಾರತ, ರಾಮಾಯಣ, ದೇವಿ ಭಾಗವತದಂತಹಾ ಚರಿತ್ರೆಯನ್ನು ಹೇಳುತ್ತಿದ್ದರೆ ಇಂದು ದೇವ, ದಾನವರಿಂದ ಹಿಡಿದು ರಾಷ್ಟ್ರದ ಹಿರಿಯ ಚೇತನಗಳು, ನೇತಾರರು, ಕ್ರೀಡಾಪಟುಗಳ ಬೊಂಬೆಗಳೂ ಕಾಣ ಸಿಗುತ್ತವೆ. ಹಿಂದೆ ದಂತ, ಶ್ರೀಗಂಧ, ಹಿತ್ತಾಳೆ, ಬೆಳ್ಳಿ, ಕಂಚಿನ ಬೊಂಬೆಗಳಿದ್ದರೆ ಕಾಲಕ್ರಮೇಣ ಇಂದು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್, ಪಿಂಗಾಣಿ, ಪೇಪರ್ ಪೇಸ್ಟಿನ ಬೊಂಬೆಗಳು ಕಾಣಬರುತ್ತವೆ. ಅಂದಿನ ಬೊಂಬೆಗಳು ಸಂಸ್ಕೃತಿಯ ಪ್ರತೀಕವಾಗಿದ್ದರೆ ಇಂದಿನ ಬೊಂಬೆಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ. ಶಾರದೆಯ ಹಬ್ಬದ ದಿನ ಮನೆಯಲ್ಲಿರುವ ಓಲೆಗರಿ, ಪುಸ್ತಕಗಳನ್ನು ಒಪ್ಪ ಓರಣವಾಗಿ ಜೋಡಿಸಿಟ್ಟು, ಅದರ ಮೇಲೊಂದು ಕಳಶವಿಟ್ಟು ಸೀರೆ ಉಡಿಸಿ ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕನ್ನಿಕೆಯರನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಆಯುಧ ಪೂಜೆಯ ದಿನ ಶಸ್ತ್ರಾಸ್ತ್ರಗಳ ಪೂಜೆ, ವಾಹನ ಪೂಜೆಯೂ ನಡೆಯುತ್ತದೆ.

             ದೈನಂದಿನ ಬದುಕಿನ ಜಂಜಡದಿಂದ ಮುಕ್ತಿ ಹೊಂದಿ, ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ಚೇತನ ನೀಡುವುದರಲ್ಲಿ ಭಾರತೀಯ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ನಿಶ್ಚಲ ಬ್ರಹ್ಮಾಂಡವನ್ನು ಉದ್ದೀಪಿಸಿ ಕಾರ್ಯವೆಸಗುವಂತೆ ಮಾಡುವ ಶಕ್ತಿಯ ಆರಾಧನೆಯೇ ನವರಾತ್ರಿ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ. ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದುದರ ಆರಾಧನೆ. ಇಂದಿನ ಸಂಕೀರ್ಣ ಜಗತ್ತಿನಲ್ಲಿ ಉಂಟಾಗುವ ಅಭಿಪ್ರಾಯ ಭೇದಗಳನ್ನು, ತಪ್ಪು ಗ್ರಹಿಕೆಗಳಿಂದ ಉಂಟಾಗುವ ಸಂಬಂಧಗಳ ತೊಡಕುಗಳನ್ನು ಸರಿಪಡಿಸಿಕೊಳ್ಳಲು ಬಿಗುಮಾನ ಬಿಟ್ಟು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು, ಸ್ನೇಹ-ಪ್ರೀತಿ ವ್ಯಕ್ತಪಡಿಸುವ ದಸರಾ ಅವಕಾಶವೀಯುತ್ತದೆ. ರೈತ, ಬಾಣಸಿಗ, ಕಲಾವಿದ, ವ್ಯಾಪಾರಿ, ವಸ್ತ್ರ ವಿನ್ಯಾಸಕ, ಪುರೋಹಿತ, ತಂತ್ರಜ್ಞ,...ಹೀಗೆ ಎಲ್ಲರೂ ದಸರಾದ ಭಾಗವಾಗುತ್ತಾರೆ. ನಮ್ಮ ಮನೆಹಬ್ಬ ಎಂಬಂತೆ ವಿಜೃಂಭಿಸುತ್ತಾರೆ. ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಮೈಸೂರು ಈ ವೇಳೆ ಅಕ್ಷರಶಃ ದೇವಲೋಕದಂತೆ ಕಂಗೊಳಿಸುತ್ತಿರುತ್ತದೆ. ಹಾಗಾಗಿ ದಸರಾ ಬರೀ ಅದ್ಧೂರಿ ಆಚರಣೆಯಾಗಿ ಉಳಿಯದೇ ಸಮಾನವಾಗಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಸಮಾನ ಅವಕಾಶ ಕೊಡುವ ನಾಡಹಬ್ಬವಾಗಿ ರೂಪುಗೊಂಡು ಒಂದು ಸಾಂಸ್ಕೃತಿಕ ಪರಂಪರೆಯನ್ನೇ ಸೃಷ್ಟಿಸಿದೆ. ನಾಡಹಬ್ಬದ ಆಚರಣೆಯ ಬಗೆ ಬದಲಾಗುತ್ತ ಬಂದಿದೆ. ಪಾಲ್ಗೊಳ್ಳುವ ಜನರೂ ಬದಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ದಸರಾ ಹೊಸತನಕ್ಕೆ ತೆರೆದುಕೊಳ್ಳುತ್ತಿದೆ. ಯುವ ಮನಸ್ಸುಗಳಿಗೆ ಹೆಚ್ಚು ಆಪ್ತವಾಗುತ್ತಿದೆ. ತಂತ್ರಜ್ಞಾನದ ಬಳಕೆಯೂ ಉತ್ಸವದಲ್ಲಿ ಹೆಚ್ಚಾಗುತ್ತಿದೆ. ಅಂದರೆ ದಸರಾ ಎಲ್ಲರನ್ನೂ ಒಳಗೊಳ್ಳುವ ಕೆಲಸ ಮಾಡುತ್ತಿದೆ. ದಸರಾ ಹಬ್ಬದ ಮೂಲದಲ್ಲಿ ಸಂಪ್ರದಾಯವಿದೆ. ಸಾವಿರಾರು ಬಗೆಯ ಸಂಭ್ರಮಗಳಿವೆ. ಎಲ್ಲಾ ವಯೋಮಾನದವರು ರೆಕ್ಕೆ ಗರಿಬಿಚ್ಚಲು ವೇದಿಕೆ ಇದೆ. ದಸರಾ ಅಂದರೆ ಮೊಗೆದಷ್ಟು ಬಗೆ. ಅಲ್ಲಿ ಎಲ್ಲವೂ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ