ಪುಟಗಳು

ಬುಧವಾರ, ಅಕ್ಟೋಬರ್ 20, 2021

ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ

 ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ


             ಸಿಂಹದ ಮರಿಯೊಂದಕ್ಕೆ ತನ್ನ ಶೌರ್ಯಕ್ಕೆ ಪ್ರತಿಫಲ ಸಿಗದೇ ಅಪಮಾನ ಆದಾಗ ವಸ್ತುಸ್ಥಿತಿಯ ಅರಿವಾಗಿತ್ತು. ತನ್ನ ಸಹೋದರರ ಒತ್ತಡಕ್ಕೊಳಗಾಗಿ ತಾನು ಮಾಡುತ್ತಿರುವುದು ತನ್ನ ಮನಸ್ಸಿಗೆ ಒಪ್ಪುವ ಕಾರ್ಯವಲ್ಲ ಎಂದು ಮನದಟ್ಟಾಗಿತ್ತು. ತಾನು ದಾಸ್ಯಕ್ಕೆ ಒಳಗಾದುದರ ಅರಿವಾಗಿ ಸ್ವಾಭಿಮಾನ ಭುಗಿಲೆದ್ದಿತ್ತು. ಸಹ್ಯಾದ್ರಿಯ ಘನಘೋರ ಕಾನನಗಳಲ್ಲಿ ಮೊರೆಯುತ್ತಿರುವ ಮಹಾ ಕೇಸರಿಯ ಘರ್ಜನೆ ಈ ಮರಿಸಿಂಹಕ್ಕೆ ಆ ಹೊತ್ತಿಗಾಗಲೇ ಕೇಳತೊಡಗಿತ್ತು. ಅದು ತನ್ನ ಮುಂದಿನ ದಾರಿಯನ್ನು ನಿಶ್ಚಯಮಾಡಿಕೊಂಡಿತು. ಆಪ್ತ ಪರಿವಾರದೊಡನೆ ಕಾಡಿನ ದಾರಿಯಲ್ಲೇ ಸಾಗಿ ಭೋರ್ಗರೆಯುತ್ತಿದ್ದ ಭಯಂಕರ ಭೀಮೆಯನ್ನು ತೆಪ್ಪದಲ್ಲಿ ದಾಟಿ ಮಹಾಕೇಸರಿಯ ಮುಂದೆ ಬಂದು ನಿಂತು ತಲೆಬಾಗಿತು. ಛತ್ರಪತಿಯೆಂಬ ಮಹಾಕೇಸರಿಯನ್ನು ಛತ್ರಸಾಲನೆಂಬ ಸ್ವಾಭಿಮಾನಿ ಮಹಾವೀರ ಭೇಟಿ ಆದುದು ಹೀಗೆ. ಈ ಭೇಟಿಗಿದ್ದ ಅಡತಡೆಗಳನ್ನು, ಈ ಸಂಗಮಕ್ಕಿದ್ದ ಮಹತ್ವವನ್ನು, ಈ ಸಂಗಮದಿಂದಾದ ಫಲಶ್ರುತಿಯನ್ನು ಕೇವಲ ಈ ಕಥೆಯಿಂದ ಕಟ್ಟಿಕೊಡಲಾಗದು.             ಯಮುನಾ ನದಿಯಿಂದ ನರ್ಮದೆವರೆಗೆ ಹಾಗೂ ಚಂಬಲ್ ನದಿಯಿಂದ ಟೋಂಸ್ ನದಿಯವರೆಗೆ ಬಹುವಿಸ್ತಾರವಾದ, ಮಹಾಭಾರತದ ಸಮಯದಲ್ಲಿ ಶಿಶುಪಾಲನು ಆಳುತ್ತಿದ್ದ ಚೇದಿ ಎಂದು ಕರೆಯಲ್ಪಡುತ್ತಿದ್ದ ಭೂಮಿ ಬುಂದೇಲ್ ಖಂಡ. ಶಕಪುರುಷ ರಾಜಾವಿಕ್ರಮನು ಇದನ್ನು ಮಧ್ಯ ಭಾರತದ ಕೇಂದ್ರವಾಗಿ ಮಾಡಿದ್ದ. ಅಲ್ಲಿಯ ರಾಜ ವೀರಭದ್ರ ತನ್ನ ಪಂಚಮ ಪುತ್ರ ಪಂಚಮನಿಗೆ ತನ್ನೆಲ್ಲಾ ರಾಜ್ಯವನ್ನು ಕೊಟ್ಟಾಗ, ಆತನ ಸಹೋದರರು ದಾಳಿ ಮಾಡಿ ಆತನಿಂದ ಎಲ್ಲವನ್ನೂ ಕಿತ್ತುಕೊಂಡರು. ತಂದೆ ತೀರಿಕೊಂಡ ದುಃಖ, ಅಣ್ಣಂದಿರೆಲ್ಲ ಶತ್ರುವಾದರೆಂಬ ದುಃಖ, ರಾಜ್ಯವನ್ನು ಕಳಕೊಂಡ ದುಃಖ ಈ ಎಲ್ಲವೂ ಪಂಚಮನನ್ನು ಘಾಸಿಗೊಳಿಸಿತು. ಆಗ ಪಂಚಮ ಗಂಗಾತೀರದ ವಿಂಧ್ಯವಾಸಿನೀ ದೇವಿಯೆದುರು ಪ್ರಾಣಾರ್ಪಣೆಗೆ ಮುಂದಾದ. ಪ್ರತ್ಯಕ್ಷಳಾಗಿ ದೇವಿ ತಡೆದಾಗ ಕೈಗೆ ಖಡ್ಗ ತಗುಲಿ ರಕ್ತದ ಬಿಂದುಗಳು ಇಳೆಗೆ ಬಿತ್ತು. ಹೀಗೆ ಬೂಂದ್-ಇಲ ಮುಂದೆ ಬುಂದೇಲವಾಯಿತು ಎನ್ನುವ ಪ್ರತೀತಿ. ನಾಗವಂಶ, ಕಛವಾಹವಂಶ, ಪರಿಹಾರವಂಶ, ಗಹರವಾರವಂಶ ಹೀಗೆ ಅನೇಕ ವಂಶದವರು ಇಲ್ಲಿ ರಾಜ್ಯವಾಳಿದ್ದರು. ಪಂಚಮನು ಗಹರವಾರ ವಂಶದವನು.


           ಬುಂದೇಲರ ರಾಜಾ ಪ್ರತಾಪರುದ್ರ ಹೆಸರಿಗೆ ಅನ್ವರ್ಥವಾಗುವಂತೆ ಮಹಾ ಪ್ರತಾಪಿ. ಬಂದೇಲ ಸಾಮ್ರಾಜ್ಯವನ್ನು ಬಹುವಾಗಿ ವಿಸ್ತರಿಸದವನೀತ. ಇಬ್ರಾಹಿಂ ಲೋದಿಯನ್ನು ಹೆಡೆಮುರಿಗಟ್ಟಿದ ಈತ ಬಾಬರನನ್ನು ಹೊಡೆದೋಡಿಸಿದ್ದ. ಓರ್ಛಾ ಮಹಾನಗರಕ್ಕೆ ಅಡಿಪಾಯ ಹಾಕಿದ ಈತ ಹುಲಿಯ ಬಾಯಿಯಿಂದ ದನವನ್ನು ರಕ್ಷಿಸಿದ ಸಂದರ್ಭದಲ್ಲಿ ಉಂಟಾದ ಗಂಭೀರ ಗಾಯಗಳಿಂದಾಗಿ ಮೃತನಾದ. ಆತನ ಮಗ ಭಾರತೀಚಂದ್ರ ಪಟ್ಟವೇರಿದ ತಕ್ಷಣ ಷೇರಶಾಹನೆಂಬ ಸರದಾರನ ನೇತೃತ್ವದಲ್ಲಿ ದಾಳಿ ಮಾಡಿದ ಮೊಘಲರು ಸೋತು ಓಡಿ ಹೋದರು. ಇಂತಹಾ ಮಹಾನ್ ಸಾಮ್ರಾಜ್ಯಕ್ಕೆ ಜಝಾರಸಿಂಹನ ಕಾಲದಲ್ಲಿ ವಿಪತ್ತು ಬಂದೆರಗಿತು. ಜಝಾರಸಿಂಹನು ಮಹಾವೀರನಾಗಿದ್ದರೂ ಮಹಾಸಂಶಯಿಯೂ ಆಗಿದ್ದ. ಮಲ್ಲಯುದ್ಧ ಪ್ರವೀಣನೂ, ಖಡ್ಗ ಯುದ್ಧ ಚತುರನೂ ಆಗಿದ್ದ ತಮ್ಮ ಹರದೇವನ ಮೇಲೆಯೇ ಸಂಶಯಪಟ್ಟು ವಿಷ ಕೊಟ್ಟು ಸಾಯಿಸಿದ. ಇದೇ ಸುಸಮಯ ಎಂದು ತಿಳಿದ ಷಾಜಹಾನ್ ತನ್ನ ಬಹುದೊಡ್ಡ ಸೈನ್ಯವನ್ನು ಬುಂದೇಲ್ ಖಂಡವನ್ನು ಆಕ್ರಮಿಸಲು ಅಟ್ಟಿದ. ಆಗ ಮಹೇವಾದಲ್ಲಿದ್ದ ವೀರ ಚಂಪತರಾಯ ತನ್ನ ದಾಯಾದಿಯ ಸಹಾಯಕ್ಕೆ ಧಾವಿಸಿದ. ಮೊಘಲರು ಮತ್ತೆ ಸೋತು ಓಡಬೇಕಾಯಿತು. ಆದರೆ ಮತ್ತೊಮ್ಮೆ ಹಠಾತ್ತನೆ ದಾಳಿ ಮಾಡಿದ ಮೊಘಲರು ಚಂಪಕರಾಯನ ಸಹಾಯಬರುವುದಕ್ಕಿಂತ ಮೊದಲೇ ಜಝಾರಸಿಂಹನನ್ನು ಅವನ ಮಕ್ಕಳಸಹಿತ ಕೊಂದರು. ಸುದ್ದಿ ತಿಳಿದು ರಕ್ತ ಕುದ್ದು ಚಂಪಕರಾಯ ಬಂದವನೇ ಮೊಘಲರನ್ನು ಸಂಹರಿಸತೊಡಗಿದ. ಷಾಜಹಾನ್ ಕಳುಹಿದ ಬಾಕಿಖಾನನ ಸೈನ್ಯವೂ ಚಂಪಕರಾಯನ ಖಡ್ಗಕ್ಕೆ ಆಹುತಿಯಾಯಿತು. ಆಗ ಬಾಕಿಖಾನನಿಗೆ ಚಂಪತರಾಯನ ಮಗ ಸಾರವಾಹನನು ಸಹವರ್ತಿಗಳೊಂದಿಗೆ ನದಿಯಲ್ಲಿ ಈಜುತ್ತಿರುವುದು ತಿಳಿದು ಆ ಬಾಲಕನನ್ನು ಕೊಲ್ಲಲು ತನ್ನ ಸೈನ್ಯವನ್ನು ಕಳುಹಿದ. ಆದರೆ ಆ ಸೈನ್ಯವನ್ನು ಆ ಚಿಣ್ಣರು ಪೊದೆ, ಮರಗಳ ಮರೆಯಲ್ಲಿ ನಿಂತು ತಮ್ಮ ಬಾಣಗಳಿಂದ ಸಂಹರಿಸಿಬಿಟ್ಟರು. ಕ್ರುದ್ಧನಾದ ಬಾಕಿಖಾನ ದೊಡ್ಡ ಸೈನ್ಯವನ್ನು ಕಳುಹಿಸಿದ. ಬಾಲಕನೇನೋ ವೀರ ಅಭಿಮನ್ಯುವಿನಂತೆ ಹೋರಾಡಿದ. ಅಷ್ಟು ಹೊತ್ತಿಗೆ ಚಂಪತರಾಯನ ಸೈನಿಕರೂ ಅಲ್ಲಿಗೆ ತಲುಪಿ ಮೊಘಲರನ್ನು ಬಡಿದಟ್ಟಿದರು. ಮೈತುಂಬಾ ಗಾಯಗೊಂಡಿದ್ದ ಬಾಲಕ ವೀರಮರಣವನ್ನಪ್ಪಿದ. ಮುಂದಿನ ವರ್ಷವೇ ಅವನಿಗೆ ಮತ್ತೊಂದು ಪುತ್ರರತ್ನ ಉದಿಸಿತು. ಅದೇ ಬುಂದೇಲಖಂಡವನ್ನು ಸೂರ್ಯನಂತೆ ಬೆಳಗಿದ ಛತ್ರಸಾಲ.


            ಮುಂದೆ ಚಂಪತರಾಯನನ್ನು ಮೊಘಲರು ಎಡೆಬಿಡದೆ ಕಾಡಿದರು. ಮೊಘಲರ ಆಮಿಶಕ್ಕೆ ಒಳಗಾಗಿ ಚಂಪತರಾಯನ ನೆಂಟ ಪಹಾಡಸಿಂಹನೇ ಚಂಪತರಾಯನಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ. ಸ್ವಾಮಿನಿಷ್ಠ ಭೀಮಸಿಂಹ ಅನುಮಾನಗೊಂಡು ಸ್ವತಃ ತಿಂದು ಸ್ವಾಮಿಯನ್ನುಳಿಸಿದ. ಮತ್ತೊಮ್ಮೆ ಕಳುಹಿಸಿದ ಕಟುಕನನ್ನು ಸ್ವತಃ ಚಂಪತರಾಯನೇ ಕೊಂದ. ಷಹಜಹಾನ್‌ ತನ್ನ ಮಗನನ್ನೆ ದಂಡನಾಯಕನನ್ನಾಗಿ ಮಾಡಿ ಭಾರಿ ಸೈನ್ಯವನ್ನು ಕಳುಹಿಸಿದರೂ ಚಂಪತರಾಯನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಮೊಘಲ್ ಸಿಂಹಾಸನಕ್ಕೆ ಸಹೋದರರಲ್ಲಿ ಜಗಳವಾದಾಗ ಔರಂಗಜೇಬ್‌, ಚಂಪತರಾಯನ ಸಹಾಯವನ್ನು ಬೇಡಿದ. ತಾನು ಔರಂಗಜೇಬನಿಗೆ ನೆರವಾಗಿ ಅವನು ಚಕ್ರವರ್ತಿಯಾದರೆ ಮೊಘಲರ ಜೊತೆಗೆ ತನ್ನ ನಿರಂತರ ಯುದ್ಧ ನಿಲ್ಲುತ್ತದೆ, ತನ್ನ ನೆರವನ್ನು ಪಡೆದ ಔರಂಗಜೇಬ ಹಿಂದೂಗಳಿಗೆ ಅನ್ಯಾಯ ಮಾಡಲಾರ ಎಂದು ಯೋಚಿಸಿದ ಚಂಪತರಾಯ ಹಿಂದೂ ರಾಜರ ಎಂದಿನ ಭೋಳೇ ಸ್ವಭಾವಕ್ಕೆ ತುತ್ತಾದ. ಔರಂಜೇಬ ತನ್ನ ಮುಸ್ಲಿಮ್ ಬುದ್ಧಿಯನ್ನೇ ತೋರಿಸಿದ. ಚಕ್ರವರ್ತಿಯಾದನಂತರ ಚಂಪತರಾಯನಿಗೆ ಅಪಮಾನ ಮಾಡಿದ. ಚಂಪತರಾಯ ಅವನಿಂದ ದೂರವಾದ. ಔರಂಗಜೇಬನ ಉಪಟಳದಿಂದ ಊರಿಂದೂರು ಅಲೆಯಬೇಕಾಯಿತು. ನಂಬಿದ ಭಟರೇ ಮೋಸಮಾಡಿದಾಗ ಚಂಪತರಾಯನೂ ಆತನ ಪತ್ನಿಯೂ ಭರ್ಜಿಯಿಂದ ತಮ್ಮನ್ನೇ ತಾವು ತಿವಿದುಕೊಂಡು ಆತ್ಮಹತ್ಯೆಗೈದರು. ಮರಿಕೇಸರಿಯು ಅನಾಥವಾಯ್ತು. ಆಗ ಛತ್ರಸಾಲನಿಗೆ ಹದಿನಾಲ್ಕು ವರ್ಷ ವಯಸ್ಸು. ಔರಂಗಜೇಬನ ಭೀತಿಯಿಂದ ಅವನಿಗೆ ಆಶ್ರಯ ಕೊಡುವವರೇ ಇರಲಿಲ್ಲ. ಹೇಗೋ ತಪ್ಪಿಸಿಕೊಂಡು ದೇವಗಢದಲ್ಲಿದ್ದ ಅಣ್ಣ ಅಂಗದರಾಯನನ್ನು ಸೇರಿಕೊಂಡ.


           ಔರಂಗಜೇಬನು ದಕ್ಷಿಣದ ರಾಜ್ಯಗಳ ಮೇಲೆ ಯುದ್ಧಕ್ಕಾಗಿ ಜಯಸಿಂಹನಿಗೆ ನೇತೃತ್ವ ವಹಿಸಿದಾಗ ತನ್ನ ಅಣ್ಣ ಅಂಗದರಾಯನ ಜೊತೆ ಅವನ ಒತ್ತಾಯದಿಂದಾಗಿ ಛತ್ರಸಾಲ, ಜಯಸಿಂಹನ ಸೈನ್ಯವನ್ನು ಸೇರಿಕೊಂಡ. ದೇವಗಢವನ್ನು ಜಯಿಸಲು ಜಯಸಿಂಹನಿಗೆ ಸಹಾಯಕನಾಗಿ ಬಹಾದುರ ಖಾನನನ್ನು ದೊಡ್ಡ ಸೈನ್ಯದೊಡನೆ ಔರಂಗಜೇಬ  ಕಳುಹಿಸಿದಾಗ ತನ್ನ ಸಾಹಸವನ್ನು ತೋರಿಸಲು ಸರಿಯಾದ ಸಮಯವೆಂದು ಛತ್ರಸಾಲನು ಮುನ್ನುಗ್ಗಿ ಹೋರಾಡಿದ. ದೇವಗಢ ವಶವಾಯಿತು. ಆದರೆ ಆ ಸಾಹಸಕ್ಕೆ ತಕ್ಕ ಪ್ರತಿಫಲ ಛತ್ರಸಾಲನಿಗೆ ಸಿಗಲಿಲ್ಲ. ಜೊತೆಗೆ ಮುಸ್ಲಿಮರು ಹಿಂದೂಗಳನ್ನು ತುಚ್ಛವಾಗಿ ನೋಡುತ್ತಿದ್ದುದನ್ನು, ಅವರ ಪಕ್ಷಪಾತ ಧೋರಣೆಗಳನ್ನು ನೋಡಿ ಅವನ ಸ್ವಾಭಿಮಾನ ಸಿಡಿದೆದ್ದಿತು. ಒಂದು ರಾಜ್ಯವನ್ನು ಆಳಬಲ್ಲ ತಾನು ಜಯಸಿಂಹನ ಬಳಿಯಲ್ಲಿ ಸಂಬಳಕ್ಕಾಗಿ ಔರಂಗಜೇಬನ ದಾಸ್ಯದಲ್ಲಿ ಬದುಕಲು ಅವನ ಮನವು ಒಡಂಬಡಲಿಲ್ಲ. ಆ ವೇಳೆಗಾಗಲೇ ಶಿವಾಜಿ ಆಗ್ರಾದ ಸೆರೆಮನೆಯಿಂದ ತಪ್ಪಿಸಿಕೊಂಡು ರಾಯಘಡಕ್ಕೆ ಪರಾರಿಯಾದ ಅಪ್ರತಿಮ ಸಾಹಸ ಅವನ ಕಿವಿಗೆ ಬಿದ್ದಿತು. ಅದರಿಂದ ಸ್ಫೂರ್ತಿಗೊಂಡ ಛತ್ರಸಾಲ, ಶಿವಛತ್ರಪತಿಯನ್ನು ಕೂಡಿಕೊಳ್ಳುವುದಕ್ಕಾಗಿ ಹವಣಿಸಿದ.

 "ಪಿತಾ ಹಮಾರೆ ಸೂಬಾ ಡಾಂಡೆ| ತುರಕನ ಪರ ಅಜಮಾಯೇ ಖಾಂಡೆ||

ತಿನ ಚಂಪತಿ ಕೆ ನಂದ ಹಮ್| ಸಸಿ ನವಾವೈ ಕಾಹಿ||

ಹಮ್ ಭೂಲೆ ಸೇಯೌ ವೃಥಾ| ಹಿತು ಜಾನಿ ಕೈ ವಾಹಿ||

ಏಡ ಏಕ ಸಿವರಾಜ ನಿಬಾಹಿ| ಕರೌ ಅಪನೆ ಚಿತಕಿ ಚಾಹಿ||

ಆಠ ಪಾತಶಾಹಿ ಝುಕ ಝೋರೆ| ಸುಬನಿ ಬಾಂಧೀ ಡಾಡ ಲೈ ಛೌರೇ||

ಐಸೇ ಗುಣ ಶಿವರಾಜ ಕೇ| ಬಸೇ ಚಿತ್ರ ಮೇ ಆಯಿ||

ಮಿಲಿವೋಯಿ ಮನ ಮೇ ಧನ್ಯೋ| ಮನಸಿ ಮತ ಜ್ಯೋ ಬನಾಯಿ||

"ನನ್ನ ತಂದೆ ತನ್ನ ತಾಯ್ನಾಡಿಗಾಗಿ ಮೊಘಲರ ವಿರುದ್ಧ ಕರದಲ್ಲಿ ಖಡುಗ ಹಿರಿದು ಹೋರಾಡಿದ. ಅಂಥವನ ಮಗನಾದ ನಾನು ಇಂದು ಅದೇ ಮೊಘಲರ ಮುಂದೆ ತಲೆತಗ್ಗಿಸಿ ಅವರ ಸೇವೆ ಮಾಡುತ್ತಿದ್ದೇನೆ. ಅದೇ ಶಿವರಾಜನನ್ನು ನೋಡಿ. ಆ ಮಹಾತ್ಮ ಮೊಘಲ ದೊರೆಯ ವಿರುದ್ಧ ಅಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಹೋರಾಡುತ್ತಿದ್ದಾನೆ. ಎಂಟು ಸುಲ್ತಾನರು ಅವನ ಕೈಯಲ್ಲಿ ಪೆಟ್ಟು ತಿಂದು ಓಡಿದರು. ನನಗೆ ಅಂತಹ ಮಹಾನ್ ದೊರೆಯ ದರ್ಶನ ಭಾಗ್ಯ ಲಭಿಸಿದರೆ ನಾನು ಧನ್ಯ". ಮೊಘಲರ ಬಿಗು ಪಹರೆ, ಗೂಢಚಾರರಿಂದ ತಪ್ಪಿಸಿಕೊಳ್ಳಲು ಬೇಡರ ಗುಂಪಿನ ಜೊತೆ ಅವರಂತೆ ವೇಶ ಧರಿಸಿ ಕಾಡುಮೇಡುಗಳಲ್ಲಿ ಅಲೆದು, ಭಯಂಕರ ಭೀಮೆಯನ್ನು ತೆಪ್ಪಗಳಲ್ಲಿ ದಾಟಿ ಶಿವಾಜಿಯ ಆಸ್ಥಾನಕ್ಕೆ ಪ್ರವೇಶಿಸಿದ. ಒಬ್ಬ ಸಮರ್ಥ ನಾಯಕನ ಹಿರಿತನ-ಗುರುತನಗಳನ್ನು ಇನ್ನೊಬ್ಬ ನಾಯಕನೇ ಗುರುತಿಸಬಲ್ಲನೆಂದರೆ ಶಿವಾಜಿಯ ಸಾಮರ್ಥ್ಯವನ್ನು ಊಹಿಸಬೇಕು.


            ಛತ್ರಸಾಲನನ್ನು ಕಂಡು ಶಿವಾಜಿಯ ಸಂತೋಷಕ್ಕೂ, ಆಶ್ಚರ್ಯಕ್ಕೂ ಪಾರವೇ ಇರಲಿಲ್ಲ. ಶಿವಾಜಿ "ಏನು ಬೇಕು?" ಎಂದು ಕೇಳಿದಾಗ "ನಿನ್ನ ಪರಿವಾರದೊಡನೆ ಸೇರಿ ಮುಘಲರ ವಿರುದ್ಧ ಯುದ್ಧ ಮಾಡಬೇಕು" ಎನ್ನುವುದು ಛತ್ರಸಾಲನ ಉತ್ತರವಾಗಿತ್ತು. ಆಗ ಶಿವಾಜಿಯು "ನಿನ್ನಂತಹಾ ವೀರಾಗ್ರೇಸರ ನನ್ನ ಸೇನೆಯಲ್ಲಿರುವುದರ ಬದಲು ಸ್ವತಂತ್ರವಾಗಿ ಹೋರಾಡಬೇಕು. ನಾನು ದಕ್ಷಿಣದಲ್ಲಿದ್ದೇನೆ. ನೀನು ಉತ್ತರದಲ್ಲಿ. ನೀನು ನಿನ್ನ ನೆಲದಲ್ಲಿ ಸ್ವತಂತ್ರನಾಗಿ, ಹತ್ತಿರದ ಹಿಂದೂಗಳನ್ನು ಒಟ್ಟು ಸೇರಿಸಿ ಅತ್ತಲಿಂದ ಮುಘಲರನ್ನು ಅಟಕಾಯಿಸು. ಸಂಘಶಕ್ತಿಯಲ್ಲಿ ಬಲವಿದೆ, ಗೆಲುವಿದೆ" ಎಂದು ಹುರಿದುಂಬಿಸಿದ. ಶಿವಾಜಿಯ ದೂರದೃಷ್ಟಿಯನ್ನು ಛತ್ರಸಾಲನೂ ಒಪ್ಪಿದ. ಶಿವಾಜಿ ವಿಶೇಷವಾದ ಖಡ್ಗವೊಂದನ್ನು ಛತ್ರಸಾಲನ ಸೊಂಟಕ್ಕೆ ಕಟ್ಟಿದ. ಈ ಸಂಗಮ ವಿಶೇಷವಾದದ್ದು. ಇಲ್ಲಿ ಶಿವಾಜಿಯ ದೂರದೃಷ್ಟಿ, ಸಮಗ್ರ ಹಿಂದೂಸ್ಥಾನದ ದೃಷ್ಟಿ, ಹಿಂದೂಗಳನ್ನು ಸಂಘಟಿಸುವ ಶಕ್ತಿ, ರಾಜಕೀಯ ಚಾಣಾಕ್ಷತೆಯ ಜೊತೆಗೆ ಶಿವಾಜಿಯ ನಾಯಕತ್ವದ ಆ ಅಸಾಮಾನ್ಯ ಸಾಮರ್ಥ್ಯವನ್ನು ಗುರುತಿಸಿದ ಛತ್ರಸಾಲನ ಯೋಗ್ಯತೆಯ ಅರಿವಾಗುತ್ತದೆ.


            ಛತ್ರಸಾಲನು ಬುಂದೇಲಖಂಡಕ್ಕೆ ಹಿಂದಿರುಗಿದ. ಔರಂಗಜೇಬನಿಂದ ಮಾಸಿಕ ವೇತನ ಕೊಡಿಸುವ ಸೂಬಾ ಶುಭಕರಣನ ಆಮಿಶವನ್ನು ತಿರಸ್ಕರಿಸಿದ. ತನ್ನ ತಂದೆಯೊಂದಿಗೆ ಹಗೆತನ ಸಾಧಿಸಿ, ಅಡಿಗಡಿಗೆ ಅಡ್ಡಿಯುಂಟುಮಾಡಿದ್ದವನ ವಂಶದೊಟ್ಟಿಗೆ ದ್ವೇಷವನ್ನು ಮರೆತು ಆ ವಂಶದ ಕುಡಿ ಸುಜಾನಸಿಂಹನನ್ನು ತನ್ನ ಪರವಾಗಿ ಸೆಳೆದುಕೊಂಡ. ಹತ್ತಿರದ ರಾಜರನ್ನು ಒಟ್ಟು ಸೇರಿಸಿದ. ಔರಂಗಾಬಾದಿನ ವೀರ ಬಲದೇವನನ್ನೂ ಸಂಧಿಸಿ ಯುದ್ಧಕ್ಕೆ ಹುರಿದುಂಬಿಸಿದ. ಸೈನ್ಯವನ್ನು ಕಟ್ಟಲು ದೇಶದ ತಾಯಂದಿರು ತಮ್ಮ ಬಂಗಾರದ ಒಡವೆಗಳನ್ನು ಕೊಟ್ಟರು. ಮುನ್ನೂರು ಬುಂದೇಲ ಸೈನಿಕರು ಒಟ್ಟು ಸೇರಿದರು. ಛತ್ರಸಾಲ ದಂಭೇರವನ್ನು ಗೆದ್ದ. ರತ್ನಾಗರ, ಸಿರೋಜ್ ಗಿಲ್ ನಗರ, ಗೌನಾ, ಪಿರಾಹಟ್, ಘೋರಾಸಾಗರ, ಹನೂಟಕ್, ಲಕ್ಕೋರಿ, ಬಡಿಹಾರಗಳನ್ನು ಜಯಸಿ ರಾಜ್ಯವನ್ನು ವಿಸ್ತರಿಸಿದ. ಔರಂಗಜೇಬನ ಪರಮನೀಚವಾದ ಕಾನೂನುಗಳನ್ನೆಲ್ಲಾ ಧಿಕ್ಕರಿಸಿದ. ಛತ್ರಸಾಲನು ಐವರು ಸಂಘಡಿಗರೊಡನೆ ಬೇಟೆಗಾಗಿ ಅರಣ್ಯಕ್ಕೆ ಹೋಗಿದ್ದಾಗ ಔರಂಗಜೇಬನ ಸೇನಾಧಿಪತಿ ಸೈಯದ್‌ಬಹಾದೂರನು ಸೈನ್ಯದೊಂದಿಗೆ ಅರಣ್ಯದೊಳಗೇ ನುಗ್ಗಿದ. ಕೆರಳಿದ ಛತ್ರಸಾಲನು ಮೊಗಲರನ್ನು ಕತ್ತರಿಸಿ ಚೆಲ್ಲಿದ. ಆ ಆರೇ ಜನರು ಬಹಾದ್ದೂರನ ಸೇನೆಯನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಹಾಕಿದರು. ಬಳಿಕ ವರಾವಾ, ಘೂಮಘಾಟ್‌, ಗೋಪಾಚಲ, ಸೈದಮನೋವರ್, ಗ್ವಾಲಿಯರುಗಳನ್ನು ಗೆದ್ದ. ಗೆದ್ದಲ್ಲೆಲ್ಲಾ ಕಂದಾಯ ವಸೂಲಿಗೆ ಆರಂಭಿಸಿದ. ಛತ್ರಸಾಲನ ಕೀರ್ತಿ ದಶದಿಕ್ಕುಗಳಲ್ಲಿ ಹಬ್ಬಿತು. ಹಿಂದೊಮ್ಮೆ ವಿರೋಧಿಸಿದ್ದ ರತ್ನಷಾಹ ಮತ್ತು ಇಂದ್ರಮಣಿ ಮುಂತಾದ ನಾಯಕರುಗಳೂ ಛತ್ರಸಾಲನ ಬೆನ್ನಿಗೆ ನಿಂತರು. ಛತ್ರಸಾಲನ ರಾಜಛತ್ರದಡಿಯಲ್ಲಿ ಮಠಮಂದಿರಗಳಲ್ಲಿ ಘಂಟೆ, ಶಂಖಗಳು ಧ್ವನಿಸಿದವು. ಅಲ್ಲೆಲ್ಲಾ ಭಗವಾಧ್ವಜ ನಿರ್ಭಯದಿಂದ ಹಾರಾಡತೊಡಗಿತು. ಹಿಂದೂಗಳ ಮಾನ, ಸಮ್ಮಾನಗಳು ಮರಳಿ ಬಂದವು.


             ಛತ್ರಸಾಲನನ್ನು ಮಣಿಸಲು ಔರಂಗಜೇಬ ರಣದುಲ್ಲಾಖಾನನನ್ನು ಮೂವತ್ತು ಸಾವಿರ ಸೈನ್ಯದೊಂದಿಗೆ ಕಳುಹಿಸಿದ. ಘನಘೋರ ಯುದ್ಧದಲ್ಲಿ ರಣಭಯಂಕರ ಛತ್ರಸಾಲನೊಡನೆ ಕೈಸಾಗದೆ ರಣದುಲ್ಲಾ ಸೋತು ಸುಣ್ಣವಾಗಿ ಓಡಿಹೋದ. ಬಳಿಕ ಹಲವು ನೂರು ಗಾಡಿಗಳಲ್ಲಿ ದಿಲ್ಲಿಗೆ ಸಾಗುತ್ತಿದ್ದ ಹೇರಳ ದ್ರವ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಛತ್ರಸಾಲ ಕಾರ್ಯದ ಸುದ್ದಿ ಕೇಳಿ ರೊಚ್ಚಿಗೆದ್ದ ಔರಂಗಜೇಬ ರೂಮಿ ಎಂಬ ಸೇನಾಧಿಪತಿಯನ್ನು ಭಾರೀ ಸೈನ್ಯದೊಂದಿಗೆ ಕಳುಹಿಸಿದನು. ಈ ರೂಮಿ ಸಹಿತ ಬಳಿಕ ಬಂದ ದಲೈರ್ ಖಾನ್, ಅಬ್ದುಲ್ ಸಮದ್, ಬಹಲೋರ್ ಖಾನ್, ಸುತರ್ ದೀನ್, ತಹವರ ಖಾನ್, ಸೈಯದ್ ಲತೀಫ್‌ ಮುಂತಾದ ಹತ್ತಾರು ಸರದಾರರಿಗೆ ಛತ್ರಸಾಲನ ಪೆಟ್ಟುಗಳನ್ನು ತಾಳಿಕೊಳ್ಳಲಾಗಲಿಲ್ಲ. ಒಂದು ಕಡೆ ಶಿವಾಜಿ, ಇನ್ನೊಂದೆಡೆ ಛತ್ರಸಾಲರ ಪಟ್ಟುಗಳನ್ನೂ, ಪೆಟ್ಟುಗಳನ್ನೂ ತಾಳಿಕೊಳ್ಳಲಾಗದೆ ಔರಂಗಜೇಬ ಕಂಗೆಟ್ಟ. ಆತ ಕೊನೆಗೆ ಸುತರದೀನ ಈರಾನಿ ಎಂಬ ಮಹಾದುಷ್ಟನೂ, ಕ್ರೂರಿಯೂ ಆದ ಸೇನಾನಿಯೊಬ್ಬನನ್ನು ಛತ್ರಸಾಲನನ್ನು ಕೊಲ್ಲಲು ಕಳುಹಿಸಿದ. ಆತ ಛತ್ರಸಾಲನಿಗೆ ಸುಮ್ಮನೇ ಪ್ರಾಣಹಾನಿಮಾಡಿಕೊಳ್ಳದೆ ಸಂಧಿ ಮಾಡಿಕೊಳ್ಳುವಂತೆ ಕರೆಕಳುಹಿಸಿದ. "ನಾವು ಕ್ಷತ್ರಿಯರು; ಯುದ್ಧಕ್ಕೆ ಹೆದರುವವರಲ್ಲ. ಸುತರದೀನನಿಗೆ ನಿಜವಾಗಿಯೂ ಸಂಧಿ ಮಾಡಿಕೊಳ್ಳಬೇಕೆಂದಿದ್ದರೆ ಕಂದಾಯವನ್ನು ತಂದು ನಮಗೇ ಒಪ್ಪಿಸಲಿ” ಎಂಬ ಕ್ಷತ್ರಿಯೋಚಿತ ಉತ್ತರ ಛತ್ರಸಾಲನಿಂದ ಬಂತು. ಬುಂದೇಲರ ಖಡ್ಗಗಳಾಘಾತಕ್ಕೆ ಮೊಘಲರ ಸೈನ್ಯ ತತ್ತರಿಸಿ ರಕ್ತದ ಕೋಡಿಯೇ ಹರಿಯಿತು. ವಿಂಧ್ಯವಾಸಿನಿಯ ಪಡೆ ಜಗದ್ವಂದ್ಯವಾಯಿತು.               ಅನ್ಯ ಹಿಂದೂ ರಾಜರಂತೆ ಯುದ್ಧರಂಗದಲ್ಲಿ ಹೋರಾಡಿ ವೀರಸ್ವರ್ಗ ಪಡೆಯುವುದು ಛತ್ರಸಾಲನ ಉದ್ದೇಶವಾಗಿರಲಿಲ್ಲ. ಅವನಲ್ಲಿ ದೂರದೃಷ್ಟಿಯಿತ್ತು. ಮೊಘಲರ ಅಟ್ಟಹಾಸವನ್ನು ಕೊನೆಗಾಣಿಸುವ ಸಿಟ್ಟಿತ್ತು. ಶಕ್ತಿಯ ಜೊತೆ ಯುಕ್ತಿಯೂ ಬೆರೆತಿತ್ತು. ತಮ್ಮವರ ಸಂಖ್ಯೆ ಕಡಿಮೆ ಇದ್ದಾಗ, ವ್ಯರ್ಥವಾಗಿ ಯಾರನ್ನೂ ಕಳೆದುಕೊಳ್ಳದೆ, ಸೈನ್ಯ ಸಮೇತ ಅವನು ಯುದ್ಧರಂಗದಿಂದಲೇ ಮರೆಯಾಗುತ್ತಿದ್ದನು. ಎದುರಾಳಿ ಸೈನ್ಯ ವಿಜಯೋನ್ಮಾದದಲ್ಲಿ ಮೈಮರೆತಿದ್ದಾಗ ಮಿಂಚಿನ ದಾಳಿ ನಡೆಸುತ್ತಿದ್ದ. ವಿಜಯಿಯಾದ ಮೇಲೂ ಆತನೆಂದೂ ಮೈಮರೆಯುತ್ತಿರಲಿಲ್ಲ. ತಹವರಖಾನನು ದಂಡೆತ್ತಿ ಬಂದಾಗ ಛತ್ರಸಾಲನ ವಿವಾಹ ನಡೆಯುತ್ತಿತ್ತು. ಕ್ಷಣಮಾತ್ರವೂ ತಡಮಾಡದೇ ರಣರಂಗಕ್ಕಿಳಿದು ತಹವರಖಾನನ ಸೊಕ್ಕಡಗಿಸಿದನು. ಪರಸ್ಪರ ಕಾದಾಡುತ್ತಿದ್ದ ಹಿಂದೂ ರಾಜರಿಗೆ ಬುದ್ಧಿವಾದ ಹೇಳಿ ಅವರನ್ನೆಲ್ಲ ಸಂಘಟಿಸಿ ತನ್ನ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದ. ಯಾರು ಸಾಮಕ್ಕೆ ಬಗ್ಗುತ್ತಿರಲಿಲ್ಲವೋ ಅವರಲ್ಲಿ ಅವನ ಖಡ್ಗ ಮಾತಾಡುತ್ತಿತ್ತು. ಅವನೆಂದೂ ಭೋಗಲಾಲಸೆಗೆ ಎಳೆಸಲಿಲ್ಲ. ಪ್ರಾಣನಾಥರ ಆಶೀರ್ವಾದದಿಂದ ಧರ್ಮದ ಹಾದಿಯಲ್ಲಿ ಅವನ ಅಧಿಕಾರ ಎಂದೆಂದಿಗೂ ಚಲಿಸುತ್ತಿತ್ತು. ಅವನ ಆಡಳಿತ ಕ್ರಮದಿಂದ ರಾಜ್ಯದಲ್ಲಿ ಶಾಂತಿ, ಸಮೃದ್ಧಿಗಳು ನೆಲೆಸಿದ್ದವು.


             ಔರಂಗಜೇಬನ ಬಳಿಕ ದಿಲ್ಲಿಯ ಸಿಂಹಾಸನ ಏರಿದ ದುರ್ಬಲ ಬಹಾದ್ದೂರ್ ಷಾಹ ಛತ್ರಸಾಲನನ್ನು ಆಸ್ಥಾನಕ್ಕೆ ಆಹ್ವಾನಿಸಿದ್ದ. ಆದರೆ ಅದು ಮಿತೃತ್ವವೂ ಅಲ್ಲದೇ, ಸಮಾನ ಗೌರವವೂ ಅಲ್ಲದೆ ಸಂಬಳಕ್ಕಾಗಿ ಕೆಲಸ ಮಾಡುವ ಆಹ್ವಾನ ಎಂಬುದನ್ನು ಅರಿತ ಕೂಡಲೇ ಅದನ್ನು ತಿರಸ್ಕರಿಸಿದ. ಬಹಾದೂರ್ ಶಾಹನು ಮಹಮದ್ ಖಾನ್ ಎಂಬ ಸೇನಾಧಿಪತಿಯನ್ನು ಎಂಬತ್ತು ಸಾವಿರ ಯೋಧರ ಸೈನ್ಯದೊಂದಿಗೆ ಛತ್ರಸಾಲನೊಡನೆ ಯುದ್ಧಕ್ಕೆ ಕಳುಹಿಸಿದ. ಛತ್ರಸಾಲನು ಬಾಜೀರಾವ್ ಪೇಶ್ವೆಯ ಸಹಾಯ ಪಡೆದು ಆ ಸೈನ್ಯವನ್ನು ಧೂಳೀಪಟ ಮಾಡಿದ. ಮಹಮ್ಮದ್ ಖಾನ್ ಜೈಪುರದ ಕೋಟೆಗೆ ಓಡಿ ಹೋಗಿ ಅವಿತುಕೊಂಡಾಗ ಅದಕ್ಕೂ ಮುತ್ತಿಗೆ ಹಾಕಿದ. ಆರು ತಿಂಗಳ ಬಳಿಕ ಮೊಹಮ್ಮದನ ಪುತ್ರ ಶರಣಾದ ಬಳಿಕ ಅವನಿಗೆ ಜೀವದಾನ ಸಿಕ್ಕಿತು.


           ಎಂಬತ್ನಾಲ್ಕು ವರ್ಷದ ತುಂಬು ಜೀವನ ನಡೆಸಿ ಪುತ್ರಪೌತ್ರಾದಿಗಳನ್ನು ಹೊಂದಿ ನೆಮ್ಮದಿಯಲ್ಲಿ ಪ್ರಾಣ ತೊರೆದ ಛತ್ರಸಾಲ, ಔರಂಗಜೇಬನಂತಹಾ ದುಷ್ಟ ಮತಾಂಧನಿಗೆ ಮಣಿಯದೆ ಅವನ ಅವಸಾನವನ್ನೂ ನೋಡಿದ ಪುಣ್ಯಪುರುಷ. ಬದುಕಿದ ಎಂಬತ್ನಾಲ್ಕು ವರ್ಷಗಳಲ್ಲಿ ಮೊದಲ ಹದಿನಾಲ್ಕು ವರ್ಷಗಳನ್ನು ಬಿಟ್ಟು ಉಳಿದ ಎಪ್ಪತ್ತು ವರ್ಷಗಳನ್ನು ಯುದ್ಧದಲ್ಲಿಯೇ ಕಳೆದ ವೀರ ಅವನು. ಚಿಕ್ಕಪ್ರಾಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥನಾಗಿ, ದಾಯಾದಿಗಳ ಆಶ್ರಯದಲ್ಲಿ ಬೆಳೆದು, ದುಷ್ಟ ಔರಂಗಜೇಬನಿಗೆ ಎಲ್ಲರೂ ಹೆದರುತ್ತಿದ್ದ ಕಾಲದಲ್ಲಿ, ಔರಂಗಜೇಬನ ದಾಸ್ಯದಿಂದ ಹೇಸಿ, ಆತ್ಮಾಭಿಮಾನ ಜಾಗೃತವಾಗಿ, ಶಿವಾಜಿಯಿಂದ ಸ್ಫೂರ್ತಿ ಪಡೆದು ಏಕಛತ್ರನಾಗಿ ಬುಂದೇಲವನ್ನು ಒಂದಾಗಿಸಿ ಆಳಿ, ಸನಾತನ ಸಂಸ್ಕೃತಿಯನ್ನು ರಕ್ಷಿಸಿದ ಛತ್ರಸಾಲನ ಬದುಕು ಎಂದೆಂದಿಗೂ ಸ್ಫೂರ್ತಿಯುತವಾದದ್ದು. ತನ್ನ ರಾಜ್ಯವನ್ನು ಇಬ್ಬರು ಮಕ್ಕಳಿಗೂ, ಪೇಶ್ವೆಗೂ ಹಂಚಿಕೊಟ್ಟ, ದೇಶದ ಭವಿಷ್ಯದ ಬಗೆಗಿನ ಅವನ ದೂರದೃಷ್ಟಿ ಅಂತ್ಯಕಾಲದಲ್ಲೂ ಸ್ಥಿರವಾಗಿತ್ತು.