ಪುಟಗಳು

ಸೋಮವಾರ, ನವೆಂಬರ್ 5, 2018

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!


              ತಮವೆಲ್ಲ ಕರಗಿದಂತೆ ಸ್ಪಟಿಕ ಶುಭ್ರ ಜಲದಿ ಕಲರವಗೈಯುತ್ತಾ ಹರಿವ ತಮಸಾ ನದಿ. ಅದರಂತೆಯೇ ತಿಳಿಯಾದ ನಿರ್ಮಲ ಮನಸ್ಸಿನ ಋಷಿಗಳ ದಂಡು. ರಮ್ಯ ಮನೋಹರವಾದ ಆ ಪರಿಸರಕ್ಕೆ ಸರಸವಾಡುತ್ತಿರುವ ಕ್ರೌಂಚ ಜೋಡಿಯ ಶೋಭೆ. ಮಾಯೆಯೊಳಗೆ ಕಾಲ ಸ್ತಬ್ಧವಲ್ಲವಲ್ಲ. ಮನೋಹರವೇ ಹರೋಹರವಾಗುವಂತೆ ಘಟನೆ ನಡೆಯಿತು. ಬೇಡನ ಶರದುರಿಗೆ ಸಿಲುಕಿ ಗಂಡು ಕ್ರೌಂಚ ನೆಲಕ್ಕುರುಳಿತು. ಹೆಣ್ಣು ಕ್ರೌಂಚದ ದುಃಖವನ್ನು ಹೇಳ ತೀರದು. ಅದು ಗಂಡು ಪಕ್ಷಿಯ ಮೇಲೆ ಬಿದ್ದು ಹೊರಳಾಡುತ್ತ ವಿಲಾಪಿಸುತ್ತಿರುವ ದೃಶ್ಯ ಅತ್ಯಂತ ಹೃದಯವಿದ್ರಾವಕವಾಗಿತ್ತು. ಆ ದೃಶ್ಯವನ್ನು ಕಂಡ ಮುನಿಯ ಸಂಕಟ ಕೋಪಕ್ಕೆ ತಿರುಗಿತು. ಕೋಪದ ಭರದಲ್ಲಿ ಶಾಪದ ಧ್ವನಿ ಹೊರಟಿತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”
“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಶಪಿಸಿದ ತುಸು ಸಮಯದಲ್ಲೇ ಜಿತಕ್ರೋಧನಾಗಿರಬೇಕಾದ ತನ್ನಿಂದ ಶಾಪ ಹೊರಹೊಮ್ಮಿತಲ್ಲ ಎನ್ನುವ ದುಃಖದಲ್ಲಿ ಮುನಿಗೆ ಮತ್ತೆ ಮತ್ತೆ ಆ ಶಾಪ ವಾಕ್ಯ ಜಪವಾಗುತ್ತಿದ್ದಂತೆ ತಿಳುವಳಿಕೆಯೊಂದು ಸ್ಫುಟವಾಯಿತು. ಶಾಪದ ವಾಕ್ಯದಲ್ಲಿ ಅನುಗ್ರಹದ ಅರ್ಥ ಕಾಣಿಸಿತು. ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಕಾಣಿಸಿ ಋಷಿಗೇ ಅಚ್ಚರಿ ಮೂಡಿಸಿತು. ಕ್ರೌಂಚದ ಶೋಕವೇ ಶ್ಲೋಕವಾಯಿತು. 24000 ಶ್ಲೋಕಗಳುಳ್ಳ ರಾಮ ಎನ್ನುವ ಪರಬ್ರಹ್ಮದ ಜೀವನದ ಕಥೆಯಾಯಿತು!

               ವಾಲ್ಮೀಕಿ...ಅಲ್ಲಲ್ಲಾ ಮಹರ್ಷಿ, ಕವಿ ವಾಲ್ಮೀಕಿ! ಸಮಾಜಕ್ಕೆ ಬೇಡದ(ರ)ವನಾಗಿ ದಾರಿಹೋಕರ ರತ್ನಗಳನ್ನು ದೋಚುತ್ತಿದ್ದ ರತ್ನಾಕರ. ಕಾಡಿನಲ್ಲಿ ಮರ ಮರ ನೋಡುತ್ತಾ, ಜನರನ್ನು ದೋಚುತ್ತಾ, ಹೆಂಡತಿ ಮಕ್ಕಳೇ ಸರ್ವಸ್ವವೆಂದುಕೊಂಡಿದ್ದವನಿಗೆ ನಾರದರ ಕೃಪೆಯಿಂದಲೋ, ಸಪ್ತರ್ಷಿಗಳ ಸಂಕಲ್ಪದಿಂದಲೋ ಹೆಂಡತಿ-ಮಕ್ಕಳು ಹೆಚ್ಚೆಂದರೆ ಮಸಣದವರೆಗೆ ಮಾತ್ರ ಬರಬಲ್ಲರೆಂಬ ತಿಳಿವು ಮೂಡಿ ರಾಮ ರಾಮ ಎನುವ ಜಪವು ಜೀವನವಾಯಿತು. ಆ ಮರ ಈ ಮರ ಎಂದು ಧ್ಯಾನಿಸುತ್ತಿದ್ದವ ರಾಮನಾಮದ ಜಪಕ್ಕೆ ತೊಡಗಿದ. ತನ್ನ ವಂಶದ ಮಹತ್ತಿನ, ಸಂಸ್ಕಾರದ, ಅದು ಉದ್ದೇಶಿಸಿದ್ದ ಜೀವನದ ಗುರಿಯ ಅರಿವಾಯಿತು. ಸುತ್ತ ಹುತ್ತ ಬೆಳೆಯಿತು. ಜ್ಞಾನೋದಯವಾಗಿ ವಲ್ಮೀಕದಿಂದ ಹೊರಬಂದವನನ್ನು ಜಗತ್ತು ವಾಲ್ಮೀಕಿಯೆಂದು ಕರೆದು ಗುರುತಿಸಿತು. ಬೇಡದವನೊಬ್ಬ ಉತ್ತಮರ ಸಂಸರ್ಗ, ಸಂಸ್ಕಾರ, ಅಲೌಕಿಕ ಜ್ಞಾನದಿಂದ ಈಗ ಜಗತ್ತಿಗೆ ಬೇಕಾದವನಾಗಿದ್ದ. ಹಾಗಾಗಿಯೇ ಕ್ರೌಂಚದ ಅಳಲು ಅವನನ್ನು ಅಲ್ಲಾಡಿಸಿ ಕವಿಯನ್ನಾಗಿಸಿತು. ಅದು ಬಹುಷಃ ಸಪ್ತರ್ಷಿಗಳ ಸಂಕಲ್ಪವಿರಬೇಕು! ಹೀಗೆ ಭಾರ್ಗವ ವಂಶಜ ಪ್ರಚೇತಸನ ಮಗನಾಗಿ, ಸಮಾಜಕ್ಕೆ ಬೇಡದ(ರ)ವನಾಗಿ, ರಾಮ ನಾಮದ ಬಲದಿಂದ ವಲ್ಮೀಕದಿಂದೆದ್ದು ಕವಿ ವಾಲ್ಮೀಕಿಯಾಗಿ ಇಂದಿಗೂ ಜಗತ್ತಿಗೆ ಬೇಕಾದವನಾದದ್ದೂ ಒಂದು ವಿಶೇಷವೇ!

               ಶಾಪ ಶ್ಲೋಕವಾದದ್ದು ಹೇಗೆ? “ಮಾ” ಎಂದರೆ ಲಕ್ಷ್ಮಿ. ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು(ರಾವಣ) ಕೊಂದೆಯಾದ್ದರಿಂದ ನೀನು(ಶ್ರೀರಾಮ) “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು ಧ್ವನಿತವಾದದ್ದು ಈ ಶ್ಲೋಕದ ಇನ್ನೊಂದು ಅರ್ಥ. “ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” - “ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು, ಅವು ರಹಸ್ಯವೇ ಆದರೂ ನಿನಗೆ ವೇದ್ಯವಾಗಲೀ" ಎಂದು ಬ್ರಹ್ಮ ದೇವನೇ ಅನುಗ್ರಹಿಸಿರಬೇಕು ವಾಲ್ಮೀಕಿಯನ್ನು! ಅದಕ್ಕಾಗಿಯೇ ಪಾತ್ರಗಳ ನಡುವಿನ ಎಲ್ಲಾ ಅಂತರಂಗಿಕ-ಬಹಿರಂಗದ ಸೂಕ್ಷ್ಮವಿಚಾರಗಳೂ ಗೋಚರಿಸಲ್ಪಟ್ಟು ರಾಮಾಯಣ ಮನೆಮನೆಯಲ್ಲಿಯೂ, ಮನಮನದಲ್ಲಿಯೂ ಪ್ರಿಯವಾಯಿತು. ಪ್ರತಿಯೊಂದು ಪಾತ್ರದ ನಗು-ಅಳು, ಸುಖ-ದುಃಖ, ಕೋಪ-ತಾಪ, ಪ್ರೀತಿ-ಸ್ನೇಹ, ದ್ವೇಷ, ಮತ್ಸರ, ಜಗಳ,ತಂಟೆ, ಹುಟ್ಟು-ಸಾವು, ಸಂಕುಚಿತತೆ, ದುರ್ಬೋಧನೆ, ತ್ಯಾಗ - ಬಲಿದಾನ, ಹಿಂಸೆ-ಕ್ರೌರ್ಯ, ಮೋಸ - ವಂಚನೆ, ಶೌರ್ಯ, ಅಧಿಕಾರ-ಅಂತಸ್ತು, ಯುದ್ಧ ಮತ್ತು ಶಾಂತಿ ಹೀಗೆ ಎಲ್ಲವೂ ಪೂರ್ಣರೂಪದಲ್ಲಿ ಮೂಡಿಬಂದಿತು. ಅಲ್ಲಿ ಬರುವ ಪಾತ್ರಗಳ ಉಡುಗೆ -ತೊಡುಗೆ, ನಡೆ-ನುಡಿ, ಘಟನಾವಳಿಗಳೆಲ್ಲವೂ ದಿವ್ಯದೃಷ್ಟಿಗೆ ಹೊಳೆದು ಯಥಾ ರೀತಿಯಲ್ಲಿ ಮೂಡಿಬಂದವು. ಅಲ್ಲದೇ ಇಡೀ ದೇಶದಲ್ಲಿ 'ರಾಮರಾಜ್ಯ' ಎಂಬ ಖ್ಯಾತಿಗೆ ಪಾತ್ರವಾದ ಆಡಳಿತವನ್ನು ಸ್ಥಾಪಿಸಿ ಅಯೋಧ್ಯೆಯನ್ನು ಆಳುತ್ತಿದ್ದ ಶ್ರೀರಾಮನ ಚರಿತ್ರೆಯನ್ನೂ ಪಡಿಮೂಡಿಸಿತು. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡಗಳಿಂದ ಒಡಮೂಡಿದ 24 ಸಾವಿರ ಶ್ಲೋಕಗಳ ಆದಿಕಾವ್ಯವಾಯಿತು. ಮುಂದಿನವರಿಗೆ ಉತ್ತರಕಾಂಡ ಎಂಬ ಏಳನೆ ಕಾಂಡದ ರಚನೆಗೂ ಪ್ರೇರಣೆಯಾಗಿ ಜಗತ್ಪ್ರಸಿದ್ಧವಾಯಿತು. ಇದು ನವರಸಗಳಿಂದ ಕೂಡಿದ ರಮ್ಯ ಮನೋಹರವಾದ, ಮಾನವೀಯತೆಯನ್ನು ಮಿಡಿಯುವ ಮತ್ತು ನೈತಿಕಮೌಲ್ಯಗಳನ್ನು ಪ್ರತಿಷ್ಠಾಪಿಸುವ ಷಜ್ಜ ,ಋಷಭ, ಗಾಂಧಾರ, ಮದ್ಯಮ,ಪಂಚಮ,ಧೈವತ,ನಿಷಾಧಗಳಲ್ಲಿ ಹಾಡಬಹುದಾದ ಮನೋಜ್ಞ ಕಾವ್ಯ. ವಾಗ್ದೇವಿಯೇ ಅವನಲ್ಲಿ ಆವಿರ್ಭವಿಸಿರಬೇಕು! ನಾರದರಿಂದ ಕೇಳಿದ್ದ ರಾಮನ ಕಥೆಯನ್ನು ಕಾವ್ಯವಾಗಿ ಬರೆಯಲು ಕ್ರೌಂಚದ ಅಳಲು ಬೆಳಕಾಯಿತಷ್ಟೇ. ಹಾಗಾಗಿಯೇ ರಾಮಾಯಣವಿಡೀ ಕೇಳಿದ್ದು ಕ್ರೌಂಚದ ದುಃಖವೇ! ರಾಮನ ಯುವರಾಜ್ಯಾಭಿಷೇಕಕ್ಕೆ ಶೃಂಗರಿಸಲ್ಪಟ್ಟ ಅಯೋಧ್ಯೆಯಲ್ಲಿ ತಮಸೆಯ ತಟದ ಮನೋಹರತೆಯಿತ್ತು. ಮಂಥರೆಯೆಂಬ 'ಬೇಡ'ಳ ಕೈಕೆಯೆಂಬ 'ಶರ'ದ ವರದ 'ಉರಿ'ಗೆ ದಶರಥ(ಕ್ರೌಂಚ) ಪುತ್ರವಿಯೋಗದ ದುಃಖಕ್ಕೆ ಈಡಾಗಬೇಕಾಯ್ತು. ದಶರಥನೇನು, ಕೌಸಲ್ಯ-ಸುಮಿತ್ರೆ-ಭರತರಾದಿಯಾಗಿ ಅಯೋಧ್ಯೆಯೇ ಹೆಣ್ಣು ಕ್ರೌಂಚದಂತೆ ರಾಮನಿಂದ ದೂರಾಗಬೇಕಾದ ಸನ್ನಿವೇಶದಲ್ಲಿ ದುಃಖಿಸಿತು. ಲಕ್ಷ್ಮಣನ ಅಗ್ರಜನೆಡೆಗಿನ ಪ್ರೀತಿ, ಕರ್ತವ್ಯ ನಿಷ್ಠೆ ಅವನ ಪತ್ನಿಯಿಂದ ಅವನನ್ನು ದೂರಾಗಿಸಿತು. ರಾವಣನ ಮಾಯಾ ಜಿಂಕೆಯ ಮೋಸ ರಾಮ-ಸೀತೆಯೆಂಬ ಕ್ರೌಂಚ ದಂಪತಿಗಳನ್ನು ದೂರವಾಗಿಸಿತು.

                   ತನ್ನ ಪತ್ನಿಯ ಚಾರಿತ್ರ್ಯಕ್ಕಿಂತಲೂ ಸಿಂಹಾಸನದ ಗೌರವ ಮುಖ್ಯವಾಗಿ ರಾಜಧರ್ಮದ ಪಾಲನೆಗಾಗಿ ಪ್ರಿಯ ಪತ್ನಿಯ ವಿಯೋಗ ಎನ್ನುವ ದುಃಖವನ್ನೂ ಹತ್ತಿಕ್ಕಿ ಪರಿತ್ಯಾಗ ಮಾಡಿದ ರಾಜಾರಾಮ. ರಾಮನ ಆಜ್ಞೆಯಂತೆ ಲಕ್ಷಣನು ತುಂಬು ಗರ್ಭಿಣಿ ಸೀತೆಯನ್ನು ಕಾಡಿನಲ್ಲಿ ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಿಟ್ಟು ಹೋಗುತ್ತಾನೆ. ಅಶೋಕ ವನವೂ ಅವಳ ಶೋಕವನ್ನು ಶಮನ ಮಾಡಲಿಲ್ಲ; ರಾಮರಾಜ್ಯವೂ! ಆದರೂ ಆಕೆ "ಕರುಣಾಳು ರಾಘವನೊಳು ತಪ್ಪಿಲ್ಲ" ಎಂದು ದುಃಖ ನುಂಗಿಕೊಂಡು ಮಹಾತ್ಮೆಯಾದಳು. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಕ್ರೌಂಚದ ಕಣ್ಣೀರಿನ ಕಥೆ ಬರೆದವನಿಗೆ ತನ್ನ ನಾಯಕಿಯ ಕಣ್ಣೀರ ಕಥೆ ಬರೆಯುವಾಗ ಕೈಕಟ್ಟಿರಬೇಕು! ಶೋಕವನ್ನೇ ಶ್ಲೋಕವನ್ನಾಗಿಸಿದವನಿಗೆ ಶೋಕತಪ್ತಳಾದ ತನ್ನ ಕಥಾ ನಾಯಕಿಯನ್ನು ಪ್ರತ್ಯಕ್ಷವಾಗಿ ಕಾಣುವಾಗ ಎದೆ ಬಿರಿಯದಿದ್ದೀತೇ? ಮಹರ್ಷಿಗಳ ಆಶ್ರಮದಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ಅವರು ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ಶ್ರೀರಾಮನ ಅಶ್ವಮೇಧ ಯಾಗಕ್ಕೆ ಆಮಂತ್ರಿತರಾದ ವಾಲ್ಮೀಕಿ ಮಹರ್ಷಿಗಳು ಲವ-ಕುಶರನ್ನು ಕರೆದುಕೊಂಡು ಯಾಗ ಮಂಟಪದಲ್ಲಿ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ಆ ಗಾನದ ಮಾಧುರ್ಯಕ್ಕೆ ಸೋತ ಶ್ರೀರಾಮ ಸಿಂಹಾಸನದಿಂದೆದ್ದು ಮೆಲ್ಲನೆ ಬಂದು ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಕುಳಿತನಂತೆ. ವಸಿಷ್ಠರು “ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆಯಾ” ಎಂದು ಕೇಳಲು, ಶ್ರೀರಾಮ “ನನ್ನ ಕಥೆ ಎಂದಲ್ಲ, ಇದು  ಸೀತೆಯ ಕಥೆ ಎನ್ನುವ ಕಾರಣಕ್ಕೆ ನಾನು ಮೆಚ್ಚುಗೆಯಿಂದ ಕೇಳುತ್ತಿರುವುದು” ಎಂದುತ್ತರಿಸುತ್ತಾನೆ. ಕ್ರೌಂಚದ ಅಳಲು ರಾಮನನ್ನೂ ಸಂಕಟದಲ್ಲಿ ನೂಕದೇ ಬಿಡಲಿಲ್ಲ! ಅದು ವಾಲ್ಮೀಕಿಯ ಪ್ರತಿಭೆಗೆ ಸಿಕ್ಕ ಪ್ರಶಸ್ತಿ!

                    ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಸೀತೆಯ ದುಃಖವನ್ನು ಬರೆದವರಿದ್ದಾರೆ. ಊರ್ಮಿಳೆಯ ಬವಣೆಯನ್ನು ವಿವರಿಸಿದವರಿದ್ದಾರೆ. ಅಹಲ್ಯೆಯ ಪರವಾಗಿ ಕಣ್ಣೀರು ಸುರಿಸಿದವರಿದ್ದಾರೆ! ಆದರೆ ರಾಮನ ದುಃಖವನ್ನು ಕಂಡವರಾರು? ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ! ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ! ಅವನನ್ನು ದೇವರಾಗಿಸಿದ್ದು, ಮರ್ಯಾದಾ ಪುರುಷೋತ್ತಮನಾಗಿಸಿದ್ದು ವಾಲ್ಮೀಕಿಯಲ್ಲಿ ಸ್ಫುರಿಸಿದ ಆದಿ ಕಾವ್ಯವೇ!

                    ವಾಲ್ಮೀಕಿ ರಾಮಾಯಣ ಜಗದ ಜನರ ಜೀವನವನ್ನು ಬದಲಿಸಿದ ಮಹಾ ಕಾವ್ಯವಾಗಿದೆ. ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳೂ ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ, ಕರ್ಮಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ದಾರಿ ತೋರಿಸುತ್ತವೆ. ಬ್ರಹ್ಮನೆಂದಂತೆ ಅದರ ಕೀರ್ತಿ ದಶದಿಕ್ಕುಗಳಿಗೂ ಹಬ್ಬಿತು. ಅನೇಕ ಕವಿಗಳಿಗೆ ಸ್ಪೂರ್ತಿಯಾಯಿತು. ಅನೇಕ ದೇಶ-ಭಾಷೆಗಳಲ್ಲಿ ಅದು ರಚಿತವಾಯಿತು. ರಾಮಾಯಣದ ಭಾರಕ್ಕೆ ಫಣಿರಾಯನೇ ಬಳಲಿದನಂತೆ! ಭಾರತದ ಮೂಲೆಮೂಲೆ ಇಂದಿಗೂ ರಾಮರಾಮ ಎಂದು ಜಪಿಸುತ್ತಿದ್ದರೆ, ಥಾಯ್ಲೆಂಡಿನ ಅರಸರಿಂದಿಗೂ ರಾಮ ಎಂದೇ ಕರೆಯಲ್ಪಡುತ್ತಿದ್ದರೆ, ಮಲೇಷ್ಯಾದ ರಾಷ್ಟ್ರಾಧ್ಯಕ್ಷರು ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವಿಕರಿಸುತ್ತಿದ್ದರೆ, ದೇಶದೇಶಗಳಲ್ಲಿ ರಾಮಾಯಣ ಪ್ರತಿಧ್ವನಿಸುತ್ತಿದ್ದರೆ ಅದಕ್ಕೆ ವಾಲ್ಮೀಕಿ ರಚಿಸಿದ ಧರ್ಮ ಮಾರ್ಗದಲ್ಲಿ ನಡೆವ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ಜ್ಞಾನ ಜ್ಯೋತಿ ರಾಮಾಯಣ ಮಹಾಕಾವ್ಯವೇ ಕಾರಣ. ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಎಂಬ ಕೋಗಿಲೆಗೆ ವಂದಿಸುವುದು ಜಗದ ಜೀವಿಗಳ ಕರ್ತವ್ಯ.
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||