ಪುಟಗಳು

ಬುಧವಾರ, ಡಿಸೆಂಬರ್ 17, 2014

ಅತ್ತರು ಪೂಸಿದಾಕ್ಷಣ ನೆತ್ತರ ವಾಸನೆ ನಿಂತು ಹೋದೀತೇ



ಅತ್ತರು ಪೂಸಿದಾಕ್ಷಣ ನೆತ್ತರ ವಾಸನೆ ನಿಂತು ಹೋದೀತೇ

              "ನಾವು ಹೋರಾಟದಿಂದ ಬೇಸತ್ತೋ ಅಥವಾ ಸರಕಾರ ನೀಡುವ ಪ್ಯಾಕೇಜಿಗಾಗಿ ಮುಖ್ಯವಾಹಿನಿಗೆ ಬರುತ್ತಿಲ್ಲ. ನಾವು 'ನಂಬಿರುವ ಸಿದ್ಧಾಂತದ ಹಾದಿ'ಯಲ್ಲೇ ಮುಖ್ಯವಾಹಿನಿಯಲ್ಲಿ ಹೋರಾಟ ಮುಂದುವರಿಸಲಿದ್ದೇವೆ" ಇದು ಕಳೆದ ಕೆಲದಿನಗಳ ಹಿಂದೆ ಶರಣಾಗತ(?)ರಾದ ನಕ್ಸಲರಿಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೀತಿ! ಹಾಗಾದರೆ ನಂಬಿರುವ ಸಿದ್ಧಾಂತ ಯಾವುದು? ತಮ್ಮ ಪಾಡಿಗೆ ತಾವಿದ್ದವರ ತಲೆಕೆಡಿಸಿ ಕೈಯಲ್ಲಿ ಬಂದೂಕು ಕೊಟ್ಟು ತಮ್ಮೊಂದಿಗೆ ಕರೆದೊಯ್ದು ಸಮಾಜದ ನೆಮ್ಮದಿ ಹಾಳುಮಾಡುವ ಅದೇ ಹಳೆಯ ಸಿದ್ಧಾಂತವೇ ಅಥವಾ ಹೊಸತೊಂದು ಬಗೆಯದೆ ರೀತಿಯ ಹಲವಾರು ಪ್ರಶ್ನೆಗಳ ಜೊತೆಗೆ ಅವರೀರ್ವರ ಶರಣಾಗತಿ ಹಲವಾರು ಸಂಶಯಗಳಿಗೆ ಎಡೆಮಾಡಿರುವುದು ಸುಳ್ಳಲ್ಲ. ಯಾಕೆಂದರೆ ಇವರ ಹಳೆಯ ಸಿದ್ಧಾಂತವಂತೂ ಗುರಿಯಾಗಿರಿಸಿಕೊಂಡದ್ದು ಜನಸಾಮಾನ್ಯರನ್ನೇ. ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎನ್ನುವ ಹಾಗೆ ಬಡವರ ಪರವೆಂದು ಬೊಗಳೆ ಬಿಡುವ ಮಾವೋ ಭಯೋತ್ಪಾದಕರು ಕತ್ತು ಕೊಯ್ದದ್ದು ಬಡವರದ್ದೇ. ಹೊಸ ಸಿದ್ಧಾಂತದ ಬಗ್ಗೆಯೇನು ಮಾತಾಡದ ಶರಣಾಗತ ನಾಟಕ ತಂಡ ತಮ್ಮ ಹಳೆಯ ಕತ್ತುಕೊಯ್ಯುವ ಸಿದ್ಧಾಂತವನ್ನೇ ಮುಖ್ಯವಾಹಿನಿಯಲ್ಲಿ ಅಳವಡಿಸಿಕೊಂಡು ಜನರ ನೆಮ್ಮದಿ ಹಾಳು ಮಾಡುತ್ತಾರೆ ಎಂದಲ್ಲವೇ ಇದರರ್ಥ.


             ಬಡವರ ಉದ್ಧಾರ ಮಾಡುತ್ತೇವೆ ಎಂದ ಇವರು ಇಷ್ಟರವರೆಗೆ ಕೊಂದದ್ದು ಬಡವರನ್ನೇ! ಕೃಷಿಕ ಯಡಿಯಾಳ, ಶಿಕ್ಷಕ ಭೋಜಶೆಟ್ಟಿ, ಗೂಡಂಗಡಿ ವ್ಯಾಪಾರಿ, ವೃದ್ಧೆ ಹೀಗೆ ಸಾಗುತ್ತದೆ ಪಟ್ಟಿ! ಇವರಲ್ಲಿ ಭೂಮಾಲೀಕರು ಯಾರು? ಕೃಷಿಕ ಕೇಶವ ಯಡಿಯಾಳರೇ, ಶಿಕ್ಷಕ ಭೋಜ ಶೆಟ್ರೆ? ಮೇಲ್ನೋಟಕ್ಕೆ ಶ್ರೀಮಂತರ ಹಾಗೆ ಕಾಣುವ ಮಲೆನಾಡಿನ ಕೃಷಿಕರ ಕಣ್ಣೀರು ಕುಂಭದ್ರೋಣ ಮಳೆಯ ನಡುವೆ ಯಾರಿಗೂ ಕಾಣಿಸುವುದಿಲ್ಲ. ಅಡಿಕೆಗೆ ಬೆಲೆ ಬಂದರೆ ವರ್ಷಪೂರ್ತಿ ಎರಡು ಹೊತ್ತಿನ ಊಟ ಇಲ್ಲವಾದರೆ ಹೊಟ್ಟೆಗೆ ಒದ್ದೆ ಬಟ್ಟೆಯೇ ಗತಿ! ಶಾಲಾ ಶಿಕ್ಷಕರನ್ನು ಶ್ರೀಮಂತರು ಎಂದರೆ ಅದು ಶತಮಾನದ ಬಹುದೊಡ್ಡ ವಿಡಂಬನೆಯಾದೀತು. ಇನ್ನು ಗೂಡಂಗಡಿ ವ್ಯಾಪಾರಿ, ಹಣ್ಣುಹಣ್ಣು ಮುದುಕಿ, ಪಾಪದ ಕೂಲಿ ಕಾರ್ಮಿಕರು ಇವರಿಗೇನು ಮಾಡಿದರು? ಕಾರಣವಿಷ್ಟೇ ಯಾರು ಭಾಜಪಾ ಕಾರ್ಯಕರ್ತರೋ, ಯಾರು ಜನರಿಗೆ ತಮ್ಮ ರಕ್ತ ಹರಿಸುವ ಚಳವಳಿಯ ದುಷ್ಪರಿಣಾಮದ ಬಗ್ಗೆ ತಿಳಿ ಹೇಳಿದರೋ, ಯಾರು ನಕ್ಸಲ್ ನಿಗ್ರಹ ಪಡೆಗೆ ತಮ್ಮ ಬಗ್ಗೆ ಮಾಹಿತಿ ನೀಡಿದರೋ ಅವರೆಲ್ಲರ ಕತ್ತು ಸೀಳುವುದೇ. ಅದರಲ್ಲೂ ಯಡಿಯಾಳರನ್ನು ಕೊಂದ ಪರಿ ನೋಡಬೇಕು. ಮರಕ್ಕೆ ಕಟ್ಟಿ ಹಾಕಿ ಮನೆಯವರ ಇದಿರಿನಲ್ಲೇ ಗುಂಡು ಹಾರಿಸಿ ಕೊನೆಗೇ ಯಡಿಯಾಳರದೇ ಜೀಪಿನಲ್ಲಿ ಹಾಕಿ ಅದಕ್ಕೆ ಬೆಂಕಿ ಹಚ್ಚಲಾಯಿತು. ಬೆತ್ತದಿಂದ ಬುಟ್ಟಿ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕಬ್ಬಿನಾಲೆಯ ಸದಾಶಿವ ಗೌಡನನ್ನು ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟು ಸುತ್ತ ನಿಂತು ಗುಂಡು ಹಾರಿಸಿ ಕೊಲ್ಲಲಾಯಿತು.

                 ಅತ್ತ ಮಲೆನಾಡು ಭಾಗದ ಪತ್ರಕರ್ತರು, ವರದಿಗಾರರು ನಕ್ಸಲರ ಬಗ್ಗೆ ಬರೆಯುವುದನ್ನೇ ಬಿಟ್ಟಿದ್ದಾರೆ. ಬರೆದರೆ ಮರುದಿನ ಅವರ ಹೆಣ ಉರುಳುವುದು ಗ್ಯಾರಂಟಿ. ಅವರಲ್ಲದಿದ್ದರೆ ಪಶ್ಚಿಮಘಟ್ಟಗಳ ಅಂಚಿನಲ್ಲಿರುವ ಅವರ ಸಂಬಂಧಿಕರು ಬಲಿಯಾಗುತ್ತಾರೆ. ಯಾರನ್ನು ಇವರು ಭೂಮಾಲೀಕರು ಎಂದು ಕರೆಯುತ್ತಾರೋ ಅವರದೇ ಮನೆಯಲ್ಲಿ ತಿಂದುಂಡು ಹೋಗುತ್ತಾರಲ್ಲಾ? ಆಗ ಭೂಮಾಲೀಕತ್ವ ನೆನಪಾಗೋದಿಲ್ಲವೇ? ಮಧ್ಯಮ ವರ್ಗದವನೊಬ್ಬನ ಮನೆಗೆ ಮಧ್ಯ ರಾತ್ರಿ ಹತ್ತಕ್ಕಿಂತಲೂ ಹೆಚ್ಚುಮಂದಿ ಬಂದು ಬಂದೂಕು ತೋರಿಸಿ ನಮಗೆ ಊಟ ಬಡಿಸಿ ಎಂದರೆ ಅವನೇನು ಮಾಡಬೇಕು? ಆತನ ಮನೆಯೇನು ಧರ್ಮಛತ್ರವೇ? ಇವರಿಂದಾಗಿ ಇಂದು ಮಲೆನಾಡಿನಲ್ಲಿ ಕೃಷಿ ಕೆಲಸಕ್ಕೆ ಜನ ಸಿಗುವುದೇ ಕಷ್ಟವಾಗಿದೆ. ಸಿಕ್ಕಿದರೂ ಅವರ ವೇತನ ಭರಿಸುವುದು ರೈತ-ಬೆಳೆ ಎರಡಕ್ಕೂ ಬೆಲೆ ಇಲ್ಲದ ಇಂದಿನ ಪರಿಸ್ಥಿತಿಯಲ್ಲಿ ಅಸಾಧ್ಯ. ಅತ್ತ ಕೃಷಿ ಕೆಲಸಕ್ಕೆ ಹೋಗುತ್ತಿದ್ದವರಾದರೂ ಸುಖವಾಗಿದ್ದಾರೆಯೇ? ನಮ್ಮ ಜೊತೆ ಬನ್ನಿ ನಾವು ನಿಮಗೆ ಸಂಬಳ ಕೊಡುತ್ತೇವೆ ಎಂದು ತಮ್ಮೊಂದಿಗೆ ಸೇರಿಸಿಕೊಂಡು ಪುಡಿಗಾಸು ಕೊಟ್ಟು ಮೂರು ದಿನಗಳ ಬಳಿಕ ಆತನದೇ ಮನೆಗೆ ಬರುತ್ತಾರೆ. ಪಾಪ ತನ್ನ ಸಂಸಾರದ ಜೊತೆಗೇ ಆತ ಇವರ "ಸಂಸಾರ"ಕ್ಕೂ ಬಡಿಸಬೇಕು! ಏನು ಬದಲಾಯಿತು? ಯಾರು ಸ್ವರ್ಗ ಸುಖ ಕಂಡರು? ಇದೇ ಬಂದೂಕುಧಾರಿಗಳಲ್ಲವೇ? ಕಾಡಿನಲ್ಲಿ ತಿರುಗಿದರಾಯಿತು...ಬಿಟ್ಟಿ ಊಟ, ಹಣ, ಶಸ್ತ್ರಾಸ್ತ್ರ, ಕಾಂಡೋಮ್ ಏನು ಬೇಕು ಏನು ಬೇಡ? ಅದೇ, ನಕ್ಸಲ್ ಪೀಡಿತ ಪ್ರದೇಶದಲ್ಲಿ ವಾಸಿಸುವ ಜನರು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡೇ ಬದುಕಬೇಕಾದ ಪರಿಸ್ಥಿತಿ. ಪೊಲೀಸರಿಗೆ ಮಾಹಿತಿ ನೀಡಿದರೆ ನಕ್ಸಲರ ಗುಂಡಿಗೆ ಬಲಿಯಾಗುವ ಭಯ, ಮಾಹಿತಿ ನೀಡದಿದ್ದರೆ ನಕ್ಸಲ್ ಪರ ಎಂದು ಪೊಲೀಸರಿಂದ ಅನ್ನಿಸಿಕೊಂಡು ಸದಾ ಸಂಶಯದ ಕರಿನೆರಳಲ್ಲಿ ಜೀವಿಸಬೇಕಾದ ಪೀಡನೆ!

                 ತಮ್ಮ ಹೋರಾಟ ಭೂಮಾಲೀಕರ ವಿರುದ್ಧ ಎನ್ನುವ ನಕ್ಸಲರು ನಾಗಾರಾಧನೆ, ಭೂತಾರಾಧನೆಯನ್ನು ವಿರೋಧಿಸುವುದೇಕೆ? ಇವುಗಳನ್ನು ಮೂಢನಂಬಿಕೆ ಅನ್ನುವ ಪ್ರಗತಿಪರರು ಇವರ ತಲೆಕೆಡಿಸಿದ್ದಾರೆ ಎನ್ನುವ ಎಳೆ ಸಿಗುವುದು ಇಲ್ಲೇ. ಇಲ್ಲದಿದ್ದಲ್ಲಿ ಭೂಮಾಲೀಕರ ವಿರುದ್ಧ ಹೋರಾಡಬೇಕಾದವರು ತಮ್ಮನ್ನು ವಿರೋಧಿಸುವವರನ್ನೆಲ್ಲಾ  ಮನುವಾದಿಗಳೆಂದು ಕರೆದು ಹಿಂಸಿಸುವುದೇಕೆ? ಇವರದ್ದು ಪಕ್ಷಾತೀತ ಹೋರಾಟವಾದರೆ ಭಾಜಪಾ ಕಾರ್ಯಕರ್ತರನ್ನೇಕೆ ಗುರಿಯಾಗಿರಿಸಿಕೊಳ್ಳಬೇಕು. ಇವರದ್ದು ಅನ್ಯಾಯದ ವಿರುದ್ಧ ಹೋರಾಟವಾದರೆ ಹಿಂದೂ ಧರ್ಮದ ಆಚರಣೆಗಳಿಗೇಕೆ ವಿರೋಧ ವ್ಯಕ್ತಪಡಿಸಬೇಕು? ಇದೇ ನಾಗ ಹಾಗೂ ದೈವಗಳ ಭಯದಿಂದ ಬದ್ಧ ಶತ್ರುಗಳಾಗಿದ್ದ ದಾಯಾದಿಗಳೂ ತಮ್ಮ ವೈರತ್ವವನ್ನು ಮರೆತು ಒಂದಾಗುತ್ತಾರೆಂದರೆ ಅಂತಹ ಆಚರಣೆಗಳಿಂದ ಸಮಾಜಕ್ಕೇ ಒಳ್ಳೆಯದಲ್ಲವೇ? ನಾಗಬನಗಳಿಂದಾಗಿ ಕನಿಷ್ಟ ಜಾಗದಲ್ಲಿರುವ ಮರಗಳು ಉಳಿಯುತ್ತವೆ. ಎಲ್ಲಿ ಹುತ್ತವಿರುತ್ತದೋ ಅಲ್ಲಿ ನೀರಿನ ಸೆಲೆಯಿದೆಯೆಂದರ್ಥ. ಅಂತರ್ಜಲ ಉಳಿಯುತ್ತದೆ. ಆಚರಣೆಗಳಿಂದ ಕನಿಷ್ಟ ಪರಿಸರ ಭಯದಿಂದಾದರೂ ಶುದ್ಧವಾಗುಳಿಯುತ್ತದೆ. ಇಂತಹ ಪ್ರಕೃತಿಯೊಡನೆ ಮಿಳಿತವಾದ ಆಚರಣೆಗಳನ್ನು ವಿರೋಧಿಸುತ್ತಾರೆಂದರೆ ಅವರ ಬಂದೂಕುಗಳಿಗೆ ಗುರಿಯಾಗಿರುವುದು ಹಿಂದೂ ಧರ್ಮವೇ ಅಲ್ಲವೇ? ಹತ್ತೆನ್ನರಡು ವರುಷಗಳ ಹಿಂದೆ ಪಶ್ಚಿಮಘಟ್ಟಗಳ ತಪ್ಪಲಿನ ಹೆಬ್ರಿ, ಕಬ್ಬಿನಾಲೆ ಪರಿಸರದಲ್ಲಿ ಆಸಕ್ತರಿಗೋಸ್ಕರ ಸಂಸ್ಕೃತ ತರಗತಿಗಳು ಪ್ರತಿನಿತ್ಯ ಸಂಜೆಯ ನಂತರ ನಡೆಯುತ್ತಿದ್ದವು. ಜಾತಿಭೇದರಹಿತವಾಗಿ ನಡೆಯುತ್ತಿದ್ದ ತರಗತಿಗಳ ಪ್ರಭಾವದಿಂದ ಜೀವಮಾನದಲ್ಲಿ ಶಾಲೆಯ ಮೆಟ್ಟಿಲು ಹತ್ತದ ಕಾಲುಗಳು ಮಧ್ಯದಂಗಡಿಯ ಬದಲು ಸುಸಂಸ್ಕೃತ ಸಮಾಜದತ್ತ ಹೆಜ್ಜೆ ಹಾಕಿದವು. ಆದರೆ ಯಾವಾಗ ನಕ್ಸಲರ ಬಂದೂಕುಗಳು ಮೊರೆಯಲಾರಂಭಿಸಿದವೋ ಸಂಸ್ಕೃತ ತರಗತಿಗಳಿಗೆ ಬೀಗ ಬಿತ್ತು. ಸಂಸ್ಕೃತ ತರಗತಿಗಳನ್ನು ನಡೆಸುತ್ತಿದ್ದವರಿಗೇ ಬೆದರಿಕೆ ಒಡ್ದಿದರು ನಕ್ಸಲರು. ಅವರ ಪ್ರಕಾರ ಸಂಸ್ಕೃತ ಮನುವಾದಿಗಳ ಶೋಷಣೆಯ ಮಾಧ್ಯಮ. ಬ್ರಾಹ್ಮಣರು ಉಳಿದವರಿಗೆ ವೇದ ಸಂಸ್ಕೃತಗಳ ಅಧ್ಯಯನಕ್ಕೆ ಅವಕಾಶ ಕೊಡಲಿಲ್ಲ ಎನ್ನುವ ಇವರು, ಸಂಸ್ಕೃತ ಕಲಿಸಲು ಹೊರಟಾಗ ಜನರ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ಹೇಳಿ ಅಂತಹ ಪ್ರಯತ್ನಕ್ಕೇ ಕಲ್ಲು ಹಾಕಿದರಲ್ಲ! ಹಾಗಾದರೆ ಇದು ವೈಚಾರಿಕ ವಿರೋಧವಲ್ಲ, ಬಲಪಂಥೀಯರನ್ನು ವಿರೋಧಿಸಲೇಬೇಕು ಎನ್ನುವ ಮನೋಭಾವ ಅಷ್ಟೇ!

             ೨೦೧೨ರಲ್ಲಿ ಮಲವಂತಿಗೆ ಗ್ರಾಮದ ಉರ್ದ್ಯಾರ್ ಜಲಪಾತದ ಸಮೀಪ ನಕ್ಸಲ್ ನಿಗ್ರಹ ಪಡೆ ನಕ್ಸಲರಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲದೇ ವಿದೇಶೀ ನಿರ್ಮಿತ ಆಯುಧಗಳೂ ದೊರೆತವು. ಹಾಗಾದರೆ ನಕ್ಸಲರಿಗೆ ಇವುಗಳನ್ನು ಪೂರೈಸುತ್ತಿರುವವರಾರು? ಅಲ್ಲದೆ ಸಂದರ್ಭದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಕರಪತ್ರಗಳು, ತಮಿಳು, ತೆಲುಗು ಸಾಹಿತ್ಯಗಳು, ಡೈರಿಯೊಂದರಲ್ಲಿ ಹತ ಎಲ್ಟಿಟಿಇ ಮುಖಂಡ ಪ್ರಭಾಕರನ್ ಭಾವಚಿತ್ರ ಕೂಡಾ ದೊರಕಿತ್ತು. ಇವು ಭಾರತಾದ್ಯಂತ ಬಲವಾಗಿರುವ ಇವರ ಜಾಲ, ಎಲ್ಟಿಟಿಇ ಹಾಗೂ ವಿದೇಶೀ ಶಕ್ತಿಗಳೊಡನೆ ಜೊತೆಗಿರಬಹುದಾದ ಸಂಬಂಧದ ಬಗ್ಗೆ ಪುಷ್ಟಿ ನೀಡುತ್ತವೆ. ಮಾವೋ ಭಕ್ತರಿಗೂ ದೇಶದ ಹೊರಗಿನ ಮಾವೋವಾದಿಗಳಿಗೂ ಇರುವ ಸಂಬಂಧವೇನು? ದೇಶದ ಭದ್ರತೆಗೇ ಅಪಾಯವೊಡ್ಡಿರುವ ಇವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದನ್ನು ಬಿಟ್ಟು ಪ್ಯಾಕೇಜ್ "ಭಾಗ್ಯ"ಗಳನ್ನು ಕೊಡುವುದು ಎಷ್ಟು ಸರಿ? ರೀತಿ ಶರಣಾಗತರಾದವರಿಗೆಲ್ಲಾ ಹೂಹಾರ ಹಾಕುತ್ತಾ ಬಂದರೆ ಸರಕಾರ ಸಮಾಜಕ್ಕೆ ಯಾವ ಸಂದೇಶ ರವಾನಿಸಿದಂತಾಯಿತು? ಹಾಗಾದರೆ ವೈಯುಕ್ತಿಕ ದ್ವೇಷಕ್ಕೋಸ್ಕರ ಕೊಲೆ ಮಾಡಿದವರನ್ನೂ ಹೀಗೇ ಹೂಹಾರ ಹಾಕಿ ಮುಖ್ಯ ವಾಹಿನಿಗೆ ತರಬೇಕಲ್ಲವೆ? ಇರಲಿ ಕನಿಷ್ಟ ಶರಣಾಗತರಾದ ಮಹಾನುಭಾವರು ತಮ್ಮ ಜೊತೆಗಾರರ ಬಗ್ಗೆ ಮಾಹಿತಿ ಕೊಡುವರೇ? ಅಲ್ಲದೆ ನಕ್ಸಲ್ ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ ಸಿಪಿಐ, ಸಿಪಿಎಂ, ಬುದ್ದಿಜೀವಿಗಳು ದೇಶದಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿರುತ್ತಾರೆ. ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವವರನ್ನು ಬೆಂಬಲಿಸುವುದು ದೇಶದ್ರೋಹವಲ್ಲವೇ?
                ಜಿಹಾದ್ ಎಂಬ ಅಫೀಮು ತಿನ್ನಿಸಿ ಭಯೋತ್ಪಾದಕರನ್ನು ತಯಾರು ಮಾಡುವ ರೀತಿಯಲ್ಲಿ ಏನೂ ತಿಳಿಯದ ಮುಗ್ಧರಿಗೆ ದೂರದ ಬೆಟ್ಟದ ಆಸೆ ತೋರಿಸಿ, ಗೊತ್ತಿಲ್ಲದ ಮಾವೋವಾದವನ್ನು ತಲೆಗೆ ತುಂಬಿಸಿ ಕೈಯಲ್ಲಿ ಬಂದೂಕು ಕೊಟ್ಟು ಕಳುಹಿಸುವ ನಕ್ಸಲ್ ಪರವಾದ ವರ್ಗ ಯುವಕ ಯುವತಿಯರ ಜೀವನವನ್ನು ಸರ್ವನಾಶ ಮಾಡಿ ಹಾಕಿದೆ ವಿನಾ ಅದರಿಂದ ಅವರ ಸ್ಥಿತಿಗತಿಯೇನೂ ಬದಲಾವಣೆ ಹೊಂದಿಲ್ಲ. ೨೦೧೩ರ ನವಂಬರ್ನಲ್ಲಿ ಗುಂಡಿಗೆ ಬಲಿಯಾದ ರಾಯಚೂರಿನ ಯುವಕ ಎಲ್ಲಪ್ಪನ ಶವವನ್ನು ತನ್ನೂರಿಗೆ ಕೊಂಡೊಯ್ಯಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಅವನ ಸಹೋದರ ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಾ ನಿಂತಿದ್ದಾಗ, ನಕ್ಸಲ್ ಚಳುವಳಿ ಪರವಾದ ಯಾವ ಭಾಷಣಗಳು, ಹೇಳಿಕೆಗಳು ಆತನ ನೆರವಿಗೆ ಬರಲಿಲ್ಲ. ಕೆಲವರ ತೆವಲಿಗೆ ಬಡವರ ಕುಟುಂಬಗಳ ಮುಗ್ಧ ಹುಡುಗರ ಬಲಿ ಕೊಡುತ್ತಿರುವ ಇಂತಹ ಹೋರಾಟ ಮತ್ತು ಚಳುವಳಿಗಳಿಗೆ ಯಾವ ಅರ್ಥವಿದೆ?

               ಶರಣಾಗತರಾದವರನ್ನು ಕ್ಷಮಿಸಬೇಕು, ಸಮಾಜದ ಮುಖ್ಯ ಭೂಮಿಕೆಯಲ್ಲಿ ಸೇರಲು ಅವರಿಗೊಂದು ಅವಕಾಶ ನೀಡಬೇಕು ಎಂಬುದೆಲ್ಲಾ ಸರಿ. ಆದರೆ ಶರಣಾಗತರಾದವರಿಗೆ ತಾವು ಮಾಡಿದ್ದು ತಪ್ಪು ಎನ್ನುವ ಸಣ್ಣ ಪಶ್ಚಾತ್ತಾಪವಾದರೂ ಇರಬೇಕಲ್ಲ. ಇಲ್ಲದಿದ್ದಲ್ಲಿ ತಾವು ನಂಬಿರುವ ಸಿದ್ಧಾಂತವನ್ನು ಬಿಡದ ಮಾತಾಡುವ ಶರಣಾಗತಿ ನಾಟಕ ತಂಡಕ್ಕೆ ತಾವು ಮಾಡಿದುದು ತಪ್ಪೆನ್ನುವ ಕಿಂಚಿತ್ ಭಾವನೆಯೂ ಹುಟ್ಟಿಲ್ಲ ಎಂದರೆ ಶರಣಾಗತಿಯ ಅರ್ಥವೇನು? ಮುಗ್ಧ ಜನಕ್ಕೆ ತಾವು ಅನ್ಯಾಯ ಮಾಡಿದ್ದೇವೆ, ತಮ್ಮನ್ನು ಕ್ಷಮಿಸಿ ಎಂಬ ಎರಡು ಪದಗಳೂ ಇವರ ನಾಲಗೆಯಿಂದ ಹುಟ್ಟಲಿಲ್ಲ. ಮುಖ್ಯಭೂಮಿಕೆಗೆ ಸೇರಿದ ನಂತರದಲ್ಲಿ ಇವರು ಬೆಂಬಲಿಸುವುದು ಅದೇ ನಕ್ಸಲ್ ವಾದವನ್ನೇ ಅಲ್ಲವೇ? ಅದೇ ಲೂಟಿ-ದಂಗೆಕೋರರನ್ನೇ ಅಲ್ಲವೇ? ಇದೇ ಕಾರಣಕ್ಕೆ "ಈಗ ಪ್ರಾಯ ಕಳೆಯಿತು;ಕಾಡಲ್ಲಿ ತಿರುಗಲು, ಬಂದೂಕು ಹಿಡಿಯಲು ದೇಹ ಕೇಳುವುದಿಲ್ಲ; ಸರಕಾರವೇ ಕರೆಕರೆದು "ಭಾಗ್ಯ"ಗಳನ್ನು ಕೊಡುತ್ತಿರುವಾಗ ತಮ್ಮ "ವಿಶ್ರಾಂತ ಜೀವನ" ಕಳೆಯುವ ಸುವರ್ಣಾವಕಾಶವನ್ನು ಯಾಕೆ ಕಳೆದುಕೊಳ್ಳುತ್ತಾರೆ” ಎಂದು ಜನರಾಡುತ್ತಿರುವ ಮಾತು ಸತ್ಯವಾಗಿ ಕಾಣುತ್ತಿರುವುದು.