ಪುಟಗಳು

ಶುಕ್ರವಾರ, ಡಿಸೆಂಬರ್ 5, 2014

ಉಣಬಡಿಸಿದವರೇ ಕೆಲವರಿಗೆ ಮರೆತು ಹೋಗುತ್ತಾರೆ


ತಿಂದದ್ದು ಹೆಚ್ಚಾದಾಗ ಉಣಬಡಿಸಿದವನೇ ಮರೆತು ಹೋಗುತ್ತಾನೆ
                 ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜನ್ಮದಿನವನ್ನು ಆಚರಿಸುವುದು ಕೋಮು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆಯಂತೆ! ಇಂತಹ ಹೇಳಿಕೆ ನೀಡಿರುವುದು ಯಾವುದೇ ರಾಜಕೀಯ ವ್ಯಕ್ತಿಯಲ್ಲ. ಬದಲಾಗಿ ವಿಶ್ವವಿದ್ಯಾಲಯವೊಂದರ ಉಪ ಕುಲಪತಿ! ಇದಕ್ಕೆ ಸಾಕ್ಷಿಯಾಗಿರುವುದು ಅಖಂಡ ಭಾರತವನ್ನು ತ್ರಿಖಂಡವನ್ನಾಗಿಸಿದ ಅಲಿಗಢ ಮುಸ್ಲಿಂ ವಿವಿ. ಇಂತಹುದೊಂದು ಪತ್ರವನ್ನು ತಾನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಬರೆದಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿರುವ ಉಪ ಕುಲಪತಿ ಜಮೀರುದ್ದೀನ್ ಷಾ ಒಬ್ಬ ನಿವೃತ್ತ ಲೆಫ್ಟಿನೆಂಟ್ ಜನರಲ್! ಆದರೆ ವಾಸ್ತವ ಸಂಗತಿ ಏನೆಂದರೆ ಇಂತಹ ಪತ್ರ ತಮಗೆ ಬಂದೇ ಇಲ್ಲ, ಮಾಧ್ಯಮಗಳ ಮುಖಾಂತರವಷ್ಟೇ ತಿಳಿಯಿತು ಎನ್ನುತ್ತಿದ್ದಾರೆ ಸಚಿವೆ ಸ್ಮೃತಿ ಇರಾನಿ! ಭಾರತದ ಇತಿಹಾಸ ಅಧ್ಯಯನ ಕೇಂದ್ರದ "ಮಹಾನ್ ಇತಿಹಾಸಕಾರರು" ಹಾಗೂ ಅವರಿಂದ ಪ್ರೇರಿತರಾಗಿ ಪಠ್ಯಪುಸ್ತಕ ರಚನೆ ಮಾಡಿದವರೆಲ್ಲಾ ಇತಿಹಾಸವನ್ನೇ ತಿರುಚಿದರೆ ವಿಶ್ವವಿದ್ಯಾಲಯಗಳು ಸ್ಪಷ್ಟವಾಗಿ ಗೋಚರಿಸುವ ನೈಜ ಇತಿಹಾಸವನ್ನು ಇಂತಹುದೇ ಕಾರಣ ನೀಡಿ ಜನಮಾನಸದಿಂದ ದೂರ ಮಾಡಿ ಇತಿಹಾಸವನ್ನು ಮರೆಸುವ ಮೂಲಕ ಕೃತಾರ್ಥರಾಗುತ್ತಿದ್ದಾರೆ!
ರಾಜಾ ಮಹೇಂದ್ರ ಪ್ರತಾಪ!

              ರಾಜಾ ಘನಶ್ಯಾಮ ಸಿಂಹನ ಸುಪುತ್ರ. ರಾಜಾ ಹರನಾರಾಯಣ ಸಿಂಹನ ದತ್ತುಪುತ್ರ. ಭಗವಾನ್ ಕೃಷ್ಣನ ಲೀಲಾವಿನೋದಗಳಿಗೆ ಸಾಕ್ಷಿಯಾದ ವೃಂದಾವನದಲ್ಲಿ ಬಾಲ್ಯವನ್ನು ಕಳೆದ ಈತ ರಾಜಾ ರಣಬೀರ ಸಿಂಗನ ಸಹೋದರಿಯನ್ನು ವರಿಸಿದ. ಅಲಿಗಢ ಮುಸ್ಲಿಂ ವಿವಿಯಲ್ಲಿ ವಿದ್ಯಾಭ್ಯಾಸ. ತನ್ನ ಪರಿವಾರದ ವಿರೋಧದ ನಡುವೆಯೂ 1906ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಸ್ವದೇಶೀ ಆಂದೋಳನದಲ್ಲಿ ಭಾಗಿಯಾದ ಆತ ಸ್ವದೇಶೀ ಕೈಗಾರಿಕೆಗಳನ್ನು ಉತ್ತೇಜಿಸಲು ನಿರ್ಧರಿಸಿದ. 1907ರಲ್ಲಿ ಪತ್ನಿಯೊಂದಿಗೆ ಹದಿನೇಳು ದೇಶಗಳನ್ನು ಸುತ್ತಿ ಬಂದ ಈತನ ಮನಸ್ಸಿನಲ್ಲಿ ದೇಶಪ್ರೇಮದ ಕಿಚ್ಚು ಧಗಧಗಿಸತೊಡಗಿತು. ತನ್ನ ಅರಮನೆಯನ್ನೇ ತಾಂತ್ರಿಕ ವಿದ್ಯಾಲಯವನ್ನಾಗಿ ಪರಿವರ್ತಿಸಿದ ಆತ ಐದು ಗ್ರಾಮಗಳನ್ನು ವಿಶ್ವವಿದ್ಯಾಲಯಕ್ಕಾಗಿ ದಾನ ಮಾಡಿದ. ಬಹುಷಃ ಭಾರತದ ಮೊದಲ ಆಧುನಿಕ ತಾಂತ್ರಿಕ ವಿದ್ಯಾಲಯವದು. ತಿಲಕ್, ದಾದಾಭಾಯಿ ನೌರೋಜಿ, ಬಿಪಿನ್ ಚಂದ್ರ ಪಾಲ್, ಬರೋಡಾದ ಮಹಾರಾಜರಿಂದ ಸ್ವಾತಂತ್ರ್ಯ ಹೋರಾಟದ ಪ್ರೇರಣೆ ಪಡೆದು ವಿದೇಶಗಳಿಂದ ಭಾರತದ ಸ್ವಾತಂತ್ರ್ಯಕ್ಕೆ ನೆರವು ಕೋರುವ ಸಲುವಾಗಿ ದೇಶದಿಂದ ಹೊರಬಿದ್ದ. ಸ್ವಿಝರಲೆಂಡ್, ಜರ್ಮನಿ, ವಿಯೆನ್ನಾ, ಟರ್ಕಿಗಳಲ್ಲಿ ನೆರವು ಯಾಚಿಸಿ ಶ್ಯಾಮಜೀ ಕೃಷ್ಣವರ್ಮ, ಲಾಲಾ ಹರದಯಾಳ್, ವೀರೇಂದ್ರನಾಥ ಚಟ್ಟೋಪಾಧ್ಯಾಯರ ಆಜ್ಞಾನುವರ್ತಿಯಾಗಿ ಅಪ್ಘಾನಿಸ್ತಾನದಲ್ಲಿದ್ದ ಕ್ರಾಂತಿ ಪಾಳಯ ಸೇರಿದ. 1915ರಲ್ಲಿ ಭಾರತದ ಹಂಗಾಮಿ  ಸರಕಾರವನ್ನು ರಚಿಸಿ ಭಾರತದ ಮೇಲೆ ಯುದ್ಧ ಘೋಷಿಸಿದ. ಸ್ವತಃ ಅಧ್ಯಕ್ಷನಾಗಿದ್ದ ಆತನ ಹಂಗಾಮಿ ಸರಕಾರದ ಪ್ರಧಾನಿ ಹಾಗೂ ಗೃಹ ಸಚಿವರಿಬ್ಬರೂ ಮೌಲ್ವಿಗಳು! ಆದರೆ ಅಲಿಗಢ ವಿವಿಯ ತಥಾಕಥಿತ ಮೌಲ್ವಿಗಳಿಗೆ ಅದು ಮರೆತೇ ಹೋಯಿತು. ಕಾರಣ ದೇಶದ ಸ್ವಾತಂತ್ರ್ಯವೊಂದೇ ಆತನ ಧ್ಯೇಯವಾಗಿತ್ತು! ಅಪ್ಘಾನಿಸ್ತಾನದ ಅರಸನ ಬ್ರಿಟಿಷ್ ಪರವಾದ ಒಲವಿನಿಂದಾಗಿ ಮಹೇಂದ್ರನ ಕೈಕಟ್ಟಿತು. ಇತ್ತ ಭಾರತದಲ್ಲಿ ಆತನ ಆಸ್ತಿಯನ್ನು ಬ್ರಿಟಿಷ್ ಸರಕಾರ ಮುಟ್ಟುಗೋಲು ಹಾಕಿಕೊಂಡು ಅವನನ್ನು ದೇಶಭೃಷ್ಟನೆಂದು ಘೋಷಿಸಿತು. ಅಪಾಯವನ್ನರಿತ ಆತ ಜಪಾನಿಗೆ ತೆರಳಿದ. 1929ರಲ್ಲಿ ವಿಶ್ವಯುದ್ಧದ ಸಮಯವನ್ನು ಭಾರತ ಹೇಗೆ ತನ್ನ ಅನುಕೂಲಕ್ಕೆ ತಕ್ಕಂತೆ ವರ್ಗಾಯಿಸಿಕೊಳ್ಳಬೇಕು ಎನ್ನುವುದರ ಕುರಿತು "ವರ್ಲ್ಡ್ ಫೆಡರೇಷನ್ ಮಂತ್ಲಿ ಮ್ಯಾಗಜಿನ್" ಎಂಬ ಪತ್ರಿಕೆಯನ್ನು ಮುದ್ರಿಸತೊಡಗಿದ. ಭಾರತೀಯ ಕಾರ್ಯಕಾರಿ ಮಂಡಳಿಯೊಂದನ್ನು ಸ್ಥಾಪಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದ. 1932ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಗೆ ಆತನನ್ನು ನಾಮನಿರ್ದೇಶನ ಮಾಡಲಾಗಿತ್ತು!
              ಸರ್ ಸೈಯ್ಯದ್ ಮೊಹಮದ್ ಖಾನರಿಂದ ಆಧುನಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ "ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ"! ಇದಕ್ಕಾಗಿ ದತ್ತಿ-ದೇಣಿಗೆಗಳನ್ನು ನೀಡಿದ್ದು ಹಿಂದೂ ರಾಜರುಗಳೇ! ಅದಕ್ಕಾಗಿ ಅವರನ್ನು ಪ್ರೇರೇಪಿಸಿದ್ದು ಮಣ್ಣಿನ ಸಹಜ ಸಹಿಷ್ಣುತೆಯ ಭೋಳೇ ಸ್ವಭಾವ. 1920ರಲ್ಲಿ ಇದೇ ಅಲಿಗಢ ಮುಸ್ಲಿಂ ವಿವಿಯಾಗಿ ಬದಲಾಯಿತು. ವಿವಿಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದ ರಾಜಾ ಮಹೇಂದ್ರ ಪ್ರತಾಪ್ ಮುಂದೆ ಮೂರು ಎಕರೆಗಿಂತಲೂ ಹೆಚ್ಚು ಜಾಗವನ್ನು ದೇಣಿಗೆಯಾಗಿ ನೀಡಿದ್ದರು. ಭವ್ಯ ನೆನಪಿಗಾಗಿಯೇ ಸ್ವಾತಂತ್ರ್ಯ ಹೋರಾಟಗಾರನ ಜನ್ಮದಿನ(ಡಿಸೆಂಬರ್ )ವನ್ನು ವಿವಿಯ ಮೈದಾನದಲ್ಲಿ ಆಯೋಜಿಸಲಾಗಿದೆ. ವಿವಿಯ ವಿದ್ಯಾರ್ಥಿ ಸಂಘ, ಬೋಧಕ ವರ್ಗ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ ಇವರ ಮಧ್ಯಸ್ಥಿಕೆಯಲ್ಲಿಯೇ ಇದರ ನಿರ್ಧಾರವಾಗಿತ್ತು. ಆದರೆ ವಿದ್ಯಾರ್ಥಿಗಳ ವಿರೋಧದಿಂದ "ಅರವಿಂದ ಕೇಜ್ರಿವಾಲ"ರಂತೆ ಯು-ಟರ್ನ್ ಹೊಡೆದ ವಿವಿಯ ವಿದ್ಯಾರ್ಥಿ ಸಂಘ, ಕುಲಪತಿ  ಈಗ ಅದನ್ನು ವಿರೋಧಿಸತೊಡಗಿದ್ದಾರೆ. ಅಲ್ಲಿ ರಾ.ಸ್ವ.ಸಂ. ಸದಸ್ಯರು ಭಾಗವಹಿಸಿರುವುದು ಅವರ "ಜಾತ್ಯಾತೀತತೆ"ಗೆ ಅಡ್ಡಿಯಾಗಿದೆ! ವಿದ್ಯಾರ್ಥಿಗಳ ವಿರೋಧದಿಂದಾಗಿ ತಮ್ಮ ನಿಲುವು ಬದಲಾಯಿಸಿರುವ ಕುಲಪತಿ ಹಿಂದೊಮ್ಮೆ ಗ್ರಂಥಾಲಯದಲ್ಲಿ ಹುಡುಗರಿರುವ ಕಾರಣ ಹುಡುಗಿಯರು ಅಲ್ಲಿಗೆ ಹೋಗಬಾರದು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರನ ಜನ್ಮದಿನವನ್ನು ಆತ ಹಿಂದೂ ಎನ್ನುವ ಕಾರಣಕ್ಕೆ ವಿರೋಧಿಸುವ ಮೂಲಕ "ಹಾಲಿ ಕುಲಪತಿ ನಿವೃತ್ತ ಲೆ. ಝಮೀರುದ್ದೀನ್ ಶಾ ಅವರ ಅಧೀನದಲ್ಲಿ ಅಲಿಗಢ ಮುಸ್ಲಿಂ ವಿವಿ ಒಂದು ಮಿಲಿಟರಿ ಸಂಸ್ಥೆ ಯಂತೆ ಗೋಚರಿಸುತ್ತದೆ" ಎಂದು ಅಸಮಧಾನ ವ್ಯಕ್ತಪಡಿಸುತ್ತಿದ್ದವರನ್ನು ಸಮಧಾನಪಡಿಸಲು ಕುಲಪತಿ ಮುಂದಾಗಿದ್ದಾರೆಯೇ ಎನ್ನುವ ಸಂಶಯ ಕಾಡತೊಡಗಿದೆ.  ಇನ್ನು ವಿವಿಯ ಪ್ರಾಚಾರ್ಯ ಮೊಹಮ್ಮದ್ ಅಬ್ರಾರ್ ಅಂತೂ ರಾಜ ತಮಗೆ ಭೂಮಿ ಕೊಟ್ಟ ದಾಖಲೆಗಳೇ ಇಲ್ಲ ಎಂದು ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಉಗ್ರರನ್ನು ತಯಾರಿಸುವ ಜಾಗ ಎಂಬ ತನ್ನ ಬಿರುದನ್ನು ಅಲಿಗಢ ಮತ್ತೆ ಮತ್ತೆ ಜಗತ್ತಿಗೆ ಪ್ರಚುರಪಡಿಸುತ್ತಿರುವಂತಿದೆ.

               ರಾಜಾ ಮಹೇಂದ್ರ ಪ್ರತಾಪ್ "ಲೆನಿನ್"ನನ್ನು ಭೇಟಿಯಾಗಿದ್ದ ಎಂಬ ಒಂದೇ ಕಾರಣಕ್ಕೆ ಕಮ್ಯೂನಿಷ್ಟರು ಮಹೇಂದ್ರನನ್ನು ತಮ್ಮವನನ್ನಾಗಿ ಮಾಡಿಕೊಂಡು ತಮ್ಮ ಎಂದಿನ ಇತಿಹಾಸ ತಿರುಚುವಿಕೆಯಲ್ಲಿ ತೊಡಗಿದರೂ ಆತನೇನು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರ ಪರವಾಗಿ, ಸ್ವಾತಂತ್ರ್ಯೋತ್ತರದಲ್ಲಿ ಭಾರತದಲ್ಲಿ ಆಂತರಿಕ ಸಂಘರ್ಷ ಸೃಷ್ಟಿಸಿದ ಭಾರತೀಯ "ಎಡ" ಪಂಥೀಯನಾಗಿರಲಿಲ್ಲ. ಬಡವ-ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕು, ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ಆತ 1957ರಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದು "ಸ್ವತಂತ್ರ" ಅಭ್ಯರ್ಥಿಯಾಗಿ! ಒಂದು ಕಾಲದಲ್ಲಿ ಆತನನ್ನು ತಮ್ಮವನನ್ನಾಗಿ ಅಪ್ಪಿಕೊಂಡ ಕಮ್ಯೂನಿಷ್ಟರಿಗೆ ಈಗ ಆತ ಹಿಂದೂ ಎಂಬ ಕಾರಣಕ್ಕೆ ಬಹುಷಃ ಮರೆತು ಹೋಗಿರಬೇಕು! ಇನ್ನು ಭಾಜಪಾ ನಡೆಯನ್ನು ಅನುಗಾಲವೂ ವಿರೋಧಿಸುವ ಹುಸಿ ಜಾತ್ಯಾತೀತವಾದಿಗಳು ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಿದ ಎಲ್ಲಾ ಹಿಂದೂ ರಾಜರ ಜನ್ಮದಿನಾಚರಣೆಯನ್ನು ಭಾಜಪಾ ಹಮ್ಮಿಕೊಳ್ಳುತ್ತದೆಯೇ ಎಂದು ಕುಹಕವಾಡುತ್ತಿದ್ದಾರೆ. ಆದರೆ ರಾಜಾ ಮಹೇಂದ್ರ ಪ್ರತಾಪ ಎಲ್ಲಕ್ಕಿಂತ ಮಿಗಿಲಾಗಿ ತಾಯಿ ಭಾರತಿಯನ್ನು ದಾಸ್ಯದ ಶೃಂಖಲೆಗಳಿಂದ ಬಿಡಿಸಲು ತನ್ನದೆಲ್ಲವನ್ನೂ ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಆಜ್ಯವಾಗಿ ಅರ್ಪಿಸಿದವನು ಎನ್ನುವುದನ್ನು ಅವರು ಮರೆತಂತಿದೆ!
                ತಮ್ಮದೇ ವಿದ್ಯಾಲಯದಲ್ಲಿ ಕಲಿತ, ವಿದ್ಯಾಲಯಕ್ಕೆ ದೇಣಿಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಜನ್ಮದಿನವನ್ನು ಆಚರಿಸಲು ಯಾವುದೇ ವಿದ್ಯಾಲಯವಾದರೂ ಹೆಮ್ಮೆ ಪಡಬೇಕು. ಅಂತಹ ದೇಶಭಕ್ತನಿಗೆ ಆತ "ಹಿಂದೂ" ಎನ್ನುವ ಒಂದೇ ಕಾರಣಕ್ಕೆ ಅವಮಾನ ಮಾಡುವ ಇಂತಹ ವಿದ್ಯಾಲಯಗಳು ಸಮಾಜಕ್ಕೆ ಎಂತಹ ವಿದ್ಯಾರ್ಥಿಗಳನ್ನು ರೂಪಿಸಿಕೊಡಬಹುದು? ಜನ್ಮದಿನಾಚರಣೆಯಲ್ಲಿ ರಾ.ಸ್ವ.ಸಂ. ಸದಸ್ಯರು ಇರುತ್ತಾರೆ ಎನ್ನುವ ಕಾರಣಕ್ಕೋಸ್ಕರ ರಾಜನ ಜನ್ಮದಿನಾಚರಣೆ ಮಾಡದಂತೆ ಒತ್ತಡ ಹೇರಿ ಪ್ರತಿಭಟನೆ ಮಾಡುವ ವಿದ್ಯಾರ್ಥಿಗಳಿಗೆ ರಾ.ಸ್ವ.ಸಂ. ಮತಭೇದವೆಣಿಸದೇ ಮಾಡುವ ಕಾರ್ಯಗಳ ಕಿರುಪರಿಚಯವಾದರೂ ಇದೆಯೇ? ತಮ್ಮದೇ ಗೌರವ ಹೆಚ್ಚಿಸುವ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ  ಹಳೇ ವಿದ್ಯಾರ್ಥಿಯ ಜನ್ಮದಿನವನ್ನು ಆಚರಿಸದ ವಿದ್ಯಾಲಯಗಳು ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಟ್ಟಾರೇ? ದೇಶಕ್ಕಿಂತ ತಮ್ಮ ಮತವೇ ಮೇಲು ಎನ್ನುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಕೆಲವೇ ದಿನಗಳ ಹಿಂದೆಯಷ್ಟೇ ಹೇಳಿದ "ಭಾರತೀಯ ಮುಸಲ್ಮಾನರು ದೇಶಭಕ್ತರು" ಎನ್ನುವ ಮಾತನ್ನು ಸುಳ್ಳು ಮಾಡಲು ಹೊರಟಂತಿದೆ ಅಲಿಗಢ ವಿದ್ಯಾಲಯ! ಒಟ್ಟಾರೆ ತಿಂದುಂಡದ್ದು ಅತಿಯಾಗಿ ಉಣಬಡಿಸಿದವನೇ ಮರೆತು ಹೋದಂತಿದೆ!
                  ಕೊನೆಗೂ ವಿವಿ ಜನ್ಮದಿನಾಚರಣೆ ಮಾಡಲು ಅವಕಾಶ ಕೊಡಲಿಲ್ಲ. ಬದಲಾಗಿ ರಾಜಾ ಮಹೇಂದ್ರ ಪ್ರತಾಪರ ಕುರಿತಂತೆ ಸೆಮಿನಾರ್ ಒಂದನ್ನು ಏರ್ಪಡಿಸಲು ನಿರ್ಧರಿಸಿತು. ಆದರೆ ಅದಕ್ಕೂ ಅಲಿಗಢ ವಿವಿ ವಿದ್ಯಾರ್ಥಿ ಸಂಘದಿಂದ ಕಟು ಟೀಕೆಗಳು ಕೇಳಿಬಂದವು. ಕುಲಪತಿಗಳು ಭಾಜಪಾ ಒತ್ತಡಕ್ಕೆ ಮಣಿದರು ಎಂದು ಜಾತ್ಯಾತೀತವಾದಿಗಳು ಕೂಗಾಡಿದರು.

                 ತೇಜೋಮಹಾಲಯ ತಾಜ್ ಮಹಲ್ ಆದದ್ದು, ಅಸಂಖ್ಯಾತ ದೇವಾಲಯಗಳ ಕುರುಹೇ ಇಲ್ಲದಂತೆ ಮಸೀದಿಗಳ ನಿರ್ಮಾಣವಾದದ್ದು ಹಳೆಯ ಕಥೆಯಾದರೆ ಹೊಸದಾಗಿ ಹಲವಾರು ದಾರಿಗಳನ್ನು ಕಂಡುಕೊಳ್ಳಲಾಗಿದೆ. ಹಂಪೆಯ ಸಣ್ಣ ಸಣ್ಣ ದೇಗುಲಗಳಿಗೂ ಹಸಿರು ಮೆತ್ತಲಾಗುತ್ತಿದೆ. ಮಹಾರಾಷ್ಟ್ರದ ಪ್ರತಾಪಗಢದಲ್ಲಿ ಶಿವಾಜಿಯು ಅಫ್ಜಲ್ ಖಾನ್ನನ್ನು ಕೊಂದ ಸ್ಥಳದಲ್ಲಿದ್ದ ಶಾಸನ ಮತ್ತು ನಾಮಫಲಕ ಮಾಯವಾಗಿ ದರ್ಗಾ ನಿರ್ಮಾಣವಾಗಿದೆ. ಅಂತಹ ಇತಿಹಾಸ ನಾಶಕ್ಕೆ ಅಲಿಗಢದಂತಹ ವಿವಿಗಳ ಕೊಡುಗೆ ಅಪಾರ. ಇವತ್ತು ಕೋಮು ಸಂಘರ್ಷದ ನೆಪವೊಡ್ಡಿ ಆಚರಣೆಗಳೆಲ್ಲಾ ನಿಂತು ಹೋಗಿ ಮುಂದೊಂದು ದಿನ ಜನ ಮಾನಸಕ್ಕೆ ರಾಜ ಮಹೇಂದ್ರ ಪ್ರತಾಪನೆಂಬ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಇದ್ದ, ಆತ ಮತಭೇದವೆಣಿಸದೇ ತಾನು ಕಲಿತ ವಿದ್ಯಾಲಯಕ್ಕೆ ಭೂಮಿ ನೀಡಿದ್ದ ಎಂಬ ಅಂಶ ಮರೆತು ಹೋಗುತ್ತದೆ. ಹಾಗೆ ಮರೆಸಲು ಇಂತಹ ಹುನ್ನಾರಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ಮೊಹಮ್ಮದ್ ಅಬ್ರಾರ್ ನೀಡಿದ ಹೇಳಿಕೆಯೇ ಸಾಕ್ಷಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ