ಪುಟಗಳು

ಭಾನುವಾರ, ಡಿಸೆಂಬರ್ 14, 2014

"ಕಿಸ್ ಆಫ್ ಲವ್" ಎನ್ನುವುದು "ಸಿಕ್ ಆಫ್ ಸೆಕ್ಯುಲರಿಸಮ್"!



"ಕಿಸ್ ಆಫ್ ಲವ್" ಎನ್ನುವುದು "ಸಿಕ್ ಆಫ್ ಸೆಕ್ಯುಲರಿಸಮ್"!

                 ಹರಿಯ ಮಿಡುಕದ ಕಾರಣ ಶಿವತಾಂಡವದ ಮೆಲುಕು ಎಂದು ಅರಿತ ಶೇಷ, ಋಷಿಕೆ ಗೋನಿಕೆಯ ಗರ್ಭದಲ್ಲಿ ಪತಂಜಲಿಯಾಗಿ ಜನಿಸಿ ಶಿವನ ಕುರಿತು ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ. ಭಕ್ತನ ಕೋರಿಕೆಯನ್ನು ಮನ್ನಿಸಿ ಶಿವ ತಾಂಡವ ನೃತ್ಯವನ್ನು ಕಾಣುವ "ಯೋಗ"ವನ್ನು ಪತಂಜಲಿಗೆ ಕಲ್ಪಿಸುತ್ತಾನೆ. ಯೋಗಿ ಭೂಷಣ ಶಿವನ ತಾಂಡವದ ಒಂದೊಂದು ಭಂಗಿಯೂ ಪತಂಜಲಿಗೆ ಯೋಗದ ಒಂದೊಂದು ಆಸನವಾಗಿ ಗೋಚರಿಸುತ್ತದೆ. ಭುವಿಯ ಪ್ರಾಕೃತ ಭಾಷೆ ಡಮರಿನ ರವದಿ ಸಂಸ್ಕೃತವಾದ ಪರಿಯಂತೆ ಶಿವನ ತನುವಿನ್ಯಾಸ, ಉಸಿರಿನ ನಿಯಂತ್ರಣ, ಅಂಗಾಂಗಗಳ ಭಂಗಿ, ಶರೀರದ ಸಮತೋಲನ ಇವೆಲ್ಲವೂ ಯೋಗಿಗೆ ಯೋಗವಾಗಿ ಗೋಚರಿಸಿತು. ಅಧಿ ಆತ್ಮಿಕ ತಾಪದಿಂದ ಬಳಲುತ್ತಿರುವ ಲೋಕದ ಜನರ ತಾಪವನ್ನು ಶಮನ ಮಾಡಲು ಶಿವನ ತಾಂಡವದ ರಹಸ್ಯ ಶಿವನ ಆಜ್ಞೆಯಂತೆ "ಪತಂಜಲಿ ದರ್ಶನ" ವಾಗಿ ಯೋಗಾಸನಗಳಾಗಿ ಯೋಗಿ ಪತಂಜಲಿಯಿಂದ ಹೊರಹೊಮ್ಮಿತು. ಇದು ಕೇವಲ ಯೋಗ ರಹಸ್ಯ ಹೇಳುವ ಗ್ರಂಥ ಮಾತ್ರವಲ್ಲ. ಉಪನಿಷತ್ತಿನ ಮೋಡಿ ಹಾಗೂ ಆಡುಮಾತಿನ ಲಯವನ್ನು ಮೇಳೈಸಿದ ಸಂಸ್ಕೃತ ಸಾಹಿತ್ಯದ ಅಪೂರ್ವ ಶ್ರೇಷ್ಠ ಗದ್ಯ ಗ್ರಂಥ.
                ಭಾರತೀಯ ತತ್ವಜ್ಞಾನದ ಷಡ್ದರ್ಶನಗಳಲ್ಲಿ ಯೋಗವೂ ಒಂದು. ಇದೇ ಯೋಗ ಕೇವಲ ಶರೀರ ಸಾಧನೆ, ಆರೋಗ್ಯ ಸುಧಾರಣೆಯ ಪ್ರಕ್ರಿಯೆಯಾಗಿ ಉಳಿಯದೆ ಆಧ್ಯಾತ್ಮ ಸಾಧನೆಯ ತಳಹದಿಯಾಗಿ ಬೆಳೆಯಿತು. ಎಷ್ಟೆಂದರೆ ಯೋಗವಿಲ್ಲದೆ ಯೋಗಿಯಿಲ್ಲ ಅನ್ನುವಂತೆ! ಕೇವಲ ಭಾರತೀಯರನ್ನು ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಕುತೂಹಲಿಗಳನ್ನು ಆಕರ್ಷಿಸಿದ ಯೋಗ ಕೆಲವು ಪಾಶ್ಚಾತ್ಯರನ್ನು ಯೋಗಿಗಳನ್ನಾಗಿಸಿತು. ನಮ್ಮ ಪ್ರಧಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸೋಣ ಎಂದು ಕರೆ ಕೊಟ್ಟಿದ್ದೇ ತಡ 130 ರಾಷ್ಟ್ರಗಳು ತಡಮಾಡದೇ ಬೆಂಬಲ ಸೂಚಿಸಿದವು. ಯೋಗದ ಮಹತ್ವ ಅವುಗಳಿಗೆ ಅರ್ಥವಾಗಿದೆ. ಇತ್ತ ನಮ್ಮ ಸರ್ವೋಚ್ಛ ನ್ಯಾಯಾಲಯ ಕಡ್ಡಾಯ ಯೋಗ ಶಿಕ್ಷಣದ ಬಗ್ಗೆ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ ಅತ್ತ ಅಮೇರಿಕಾದ ನಾಗರಿಕರು ಯೋಗದ ಮೊರೆ ಹೋಗಿದ್ದರು. ಇಲ್ಲಿರುವಂತೆಯೇ ಅಲ್ಲಿನ ಹುಸಿ ಜಾತ್ಯಾತೀತವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಲಯ ಅವರಿಗೆ ಛೀಮಾರಿ ಹಾಕಿತು. ಆದರೆ ನಮ್ಮಲ್ಲಿ ಶಿಕ್ಷಣದ ಕೇಸರೀಕರಣವಾಗುತ್ತದೆ ಎನ್ನುವವರ ಬೊಬ್ಬೆ ಬಹುಷಃ ಸರ್ವೋಚ್ಛ ನ್ಯಾಯಾಲಯಕ್ಕೆ ಜೋಗುಳವಾಗಿ ಕೇಳಿರಬೇಕು. ಹಾಗಾಗಿ ಯೋಗವನ್ನು ಕಡ್ಡಾಯಗೊಳಿಸುವುದರಿಂದ ಅಲ್ಪಸಂಖ್ಯಾತರಿಗೆ ಬೇಸರವಾಗಬಹುದು ಎಂದರ್ಥ ಬರುವ ತೀರ್ಪು ಕೊಟ್ಟಿತು. ಯಾವ ನೆಲದಲ್ಲಿ ಯೋಗದ ಜನನವಾಗಿತ್ತೋ ಅಲ್ಲೇ ಅದನ್ನು ಸಂಕಲೆಗಳಿಂದ ಬಂಧಿಸಲಾಗಿದೆ!
             ಅತ್ತ ಪಶ್ಚಿಮದ ದೇಶಗಳಲ್ಲಿ ಬೀದಿಬೀದಿಗಳಲ್ಲಿ ಯೋಗ ಕಲಿಕೆ ನಡೆಯುತ್ತಿದ್ದರೆ ಇಲ್ಲಿ ಪಶ್ಚಿಮವು ಕೈ ಬಿಡುತ್ತಾ ಬಂದಿರುವ ಚುಂಬನವನ್ನು ಬೀದಿ ಬೀದಿಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ! "ಕಿಸ್ ಆಫ್ ಲವ್" ಅಂತೆ! ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸುವ ಪ್ರಕ್ರಿಯೆಯಂತೆ! ಅಷ್ಟಕ್ಕೂ ನೈತಿಕ ಪೊಲೀಸ್ ಗಿರಿ ಎನ್ನುವುದು ಯಾಕೆ ಆರಂಭವಾಯಿತು ಎನ್ನುವುದರ ಮರ್ಮವಾದರೂ ಅರೆಬೆಂದ ಮನಸ್ಸುಗಳಿಗೆ ತಿಳಿದಿದೆಯೇ? ಲವ್ ಜಿಹಾದ್, ಸೆಕ್ಸ್ ಜಿಹಾದ್, ರೇಪ್ ಜಿಹಾದ್, ಮತಾಂತರ, ಪಬ್-ಹೋಮ್ ಸ್ಟೇಯಂತಹ ನೆಲದ ಸಂಸ್ಕೃತಿಯನ್ನು ಧ್ವಂಸ ಮಾಡುವ, ನೈತಿಕತೆಯನ್ನು ದೂರೀಕರಿಸುವ, ನೆಲದ ಮೇಲೆ ದ್ವೇಷವನ್ನು ಬೆಳೆಸುವ ಘೋರ ಕೃತ್ಯಗಳಿಗೆ ನ್ಯಾಯಾಲಯ ಅಥವಾ ಸರಕಾರಗಳು ಕಡಿವಾಣ ಹಾಕಿದ್ದರೆ ನೈತಿಕ ಪೊಲೀಸ್ ಗಿರಿ ಎನ್ನುವುದು ಆರಂಭವಾಗುತ್ತಿತ್ತೇ? ಒಂದು ವೇಳೆ ನೈತಿಕ ಪೊಲೀಸ್ ಗಿರಿಯನ್ನೇ ವಿರೋಧಿಸುವುದು ಎಂದಾದರೆ ಇಲ್ಲಿನ ಸಂಸ್ಕೃತಿಯನ್ನೇಕೆ ಅಂದಗೆಡಿಸಲು ಮುಂದಾಗಿದ್ದಾರೆ ಅತೃಪ್ತ ಆತ್ಮಗಳು? ಹಾಗಾಗಿ ಇದೊಂದು ರೀತಿಯ ತೆವಲು ಎನ್ನದೇ ವಿಧಿಯಿಲ್ಲ. ಅದರಲ್ಲೂ ಮೃಗೀಯವಾಗಿ ನಡುರಸ್ತೆಗಳಲ್ಲಿ ಚುಂಬಿಸುವುದು ಅನೈತಿಕತೆಯ ಪರಮಾವಧಿಯಲ್ಲದೇ ಮತ್ತೇನು? ಅಸಲಿಗೆ ಮೃಗ-ಖಗಗಳಲ್ಲಾದರೂ ಅಂತಹ ಸ್ವೇಚ್ಛಾ ಮನೋಭಾವ ಒಂದು ನಿಯಂತ್ರಣದಲ್ಲಿರುತ್ತದೆ. ಭಾವನೆಗೊಳಗಾದ ಸಮಯದಲ್ಲಷ್ಟೇ, ಅಥವಾ ನೈಸರ್ಗಿಕವಾದ ಒಂದು ಸಮಯದಲ್ಲಷ್ಟೇ ಚುಂಬನದಂತಹ ಪ್ರಕ್ರಿಯೆಗಳಲ್ಲಿ ತೊಡಗುತ್ತವೆ. ಆದರೆ ಮಾನವ ಪ್ರಾಣಿಗಳಿಗೆ ಕಾಲ-ದೇಶಗಳ ಪರಿವೆಯೇ ಇಲ್ಲವೆಂದು ತೋರುತ್ತದೆ!
            ಲ್ಯಾಟಿನ್ ಅಮೇರಿಕಾದ ದೇಶಗಳಲ್ಲಿ ಸಾರ್ವಜನಿಕ ಚುಂಬನ ದಂಡಕ್ಕೆ ಆಹ್ವಾನ. ವಿಯೆನ್ನಾ, ಇಂಗ್ಲೆಂಡಿನಲ್ಲೂ ಸಾರ್ವಜನಿಕ ಚುಂಬನ ಮಾಡಿದರೆ ದಂಡ ವಿಧಿಸಲಾಗುತ್ತದೆ. ಅಮೇರಿಕಾ,ಇಟಲಿಗಳ ಸಂಸತ್ತಿನಲ್ಲಿ ಸಾರ್ವಜನಿಕ ಚುಂಬನ ಹಾಗೂ ಸಲಿಂಗ ಕಾಮದ ನಿಷೇಧದ ಬಗ್ಗೆ ಚರ್ಚೆಗಳಾಗುತ್ತಿದೆ. ಯಾವ ಕಮ್ಯೂನಿಸ್ಟ್ ಪ್ರೇರಿತ ರಷ್ಯಾದಲ್ಲಿ ಸ್ವೇಚ್ಛಾಚಾರವೇ ಬದುಕಾಗಿತ್ತೋ ಅಂತಹ ರಷ್ಯಾ ಮದುವೆಯ ಅಗತ್ಯವನ್ನು ಮನಗಂಡಿದ್ದರೆ, ಇಲ್ಲಿನ ಕರಿ ಚರ್ಮದ ಬ್ರಿಟಿಷರ ಸ್ವರ್ಗ ಅಮೇರಿಕಾದಲ್ಲಿ ಸ್ವೇಚ್ಛಾಚಾರವನ್ನು ನಿಯಂತ್ರಿಸುವುದಕ್ಕೆ ಮದುವೆಯನ್ನು ಮಂಗಳಕರ ಮೈತ್ರಿಯನ್ನಾಗಿ ಮಾಡಬೇಕೆಂದು ಅಲ್ಲಿನ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ ಇಲ್ಲಿ ಐವತ್ತು ವರ್ಷಗಳ ಹಿಂದಿನ ಪಾಶ್ಚಾತ್ಯ ಮನಸ್ಥಿತಿಗೆ ಅರೆಬೆಂದ ಮನಸ್ಥಿತಿಗಳು ಜೋತು ಬೀಳುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಅಷ್ಟಕ್ಕೂ  ನೈತಿಕ ಪೊಲೀಸ್ ಗಿರಿಯಿಂದಾಗಿ ಇಲ್ಲಿ ಪ್ರೇಮವಿವಾಹಗಳು, ಚುಂಬನಗಳೆಲ್ಲವೂ ನಿಂತು ಹೋಗಿದೆಯೇ? ಅಪ್ಪಿಕೊಳ್ಳುವ, ಕೈಕುಲುಕುವ ಪದ್ದತಿಗಳು ಭಾರತಕ್ಕೆ ಹೊರಗಿನಿಂದ ಬಂದವು ಅವು ಇಂದು ಸಾಮಾನ್ಯವಾಗಿಬಿಟ್ಟಿವೆ. ಕಾರಣ ನೆಲದ ಸಂಸ್ಕೃತಿಗೆ ಧಕ್ಕೆ ಬರದ ಯಾವುದೇ ಒಳ್ಳೆಯ ಸಂಗತಿಯನ್ನು ಸ್ವೀಕರಿಸುವ ಗುಣ ಮಣ್ಣಿನದ್ದು. ಹಾಗಂತ ಹಾದರವನ್ನು ಒಪ್ಪಿಕೊಳ್ಳಲು ಸಾಧ್ಯವೇ? ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ್ದನ್ನು ನಾಲ್ಕು ಜನರಿಗೆ ಕಾಣುವ ಹಾಗೆ ಮಾಡಬೇಕೆಂಬ ದರ್ದನ್ನು ವಿರೋಧಿಸದೇ ಇದ್ದೀತೇ ನೆಲ? ಈಗ ಪ್ರಕ್ರಿಯೆಗೆ ಅನುಮತಿ ನೀಡಿದ ಸರಕಾರ, ಪೊಲೀಸ್ ವ್ಯವಸ್ಥೆ ಮುಂದೆ ಯಾರಾದರೂ ಸಾರ್ವಜನಿಕವಾಗಿ ಕಾಮಕೇಳಿಯಾಡುವ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಕೋರಿದಲ್ಲಿ ಅನುಮತಿ ನೀಡುವುದಿಲ್ಲ ಎನ್ನುವುದಕ್ಕೇನು ಖಚಿತತೆ? ಸಾರ್ವಜನಿಕ ಸ್ಥಳಗಳಲ್ಲಿ ಬಹಿರ್ದೆಶೆಗೆ ಅನುಮತಿ ನೀಡಬೇಕೆಂದು ಯಾರಾದರೂ ಪ್ಯಾಂಟು ಬಿಚ್ಚಿ ಪ್ರತಿಭಟನೆ ಆರಂಬಿಸಿದರೆ ಏನಾದೀತು? ತಮ್ಮದಾದ ಚಪಲತೆಯಿಂದ ಸಾರ್ವಜನಿಕರಿಗೆ ಇರಿಸುಮುರಿಸು ಉಂಟುಮಾಡುವ ಇಂತಹ ಪ್ರಕ್ರಿಯೆಗಳಿಗೆ ಅನುಮತಿ ನೀಡುವವರಿಗೆ, ಬೆಂಬಲ ನೀಡುವವರ ಮೆದುಳು ಸ್ವಲ್ಪವಾದರೂ ಕೆಲಸ ಮಾಡುತ್ತಿದೆಯೇ?
                ಕೆಲವರು ಈ "ಕಿಸ್ ಆಫ್ ಲವ್" ಅನ್ನು ಬೆಂಬಲಿಸುವ ಭರದಲ್ಲಿ ಭಾರತೀಯ ಪುರಾಣ, ಕಲೆಗಳನ್ನೂ ಹಿಡಿದು ಎಳೆದಾಡುತ್ತಿದ್ದಾರೆ. ಕೆಲವರು ಚುಂಬನದ ಮೂಲ ಭಾರತವೆಂದರೆ ಮಗದೊಬ್ಬರು ಕಾಮಸೂತ್ರವನ್ನೇ ಬರೆದ ಭಾರತದಲ್ಲಿ ಕಿಸ್ ಆಫ್ ಲವ್ ಅಪರಾಧ ಆಗುವುದು ಹೇಗೆ ಎಂಬ ತಮ್ಮ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ. ಇನ್ನು ಕೆಲವರು ದೇವಾಲಯದ ಮಿಥುನ ಶಿಲ್ಪಗಳ ಬಗ್ಗೆ ಬೆರಳು ತೋರಿಸಿದ್ದಾರೆ. ಆದರೆ ಇವುಗಳೆಲ್ಲದರ ಮೂಲತತ್ವವನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಈ ಮೈಗಳ್ಳರು ಕಿಸ್ ಆಫ್ ಲವ್ ಒಂದು ಪ್ರಸಿದ್ಧಿಗೆ ಬರಲು ಇರುವ ಮಾರ್ಗ ಎಂದು ತಿಳಿದಿರಬೇಕು. ಯಾಕೆಂದರೆ ಈಗ ಹೆಸರುಗಳಿಸಲು ಜನರಿಗೆ ಯಾವ ಮಾರ್ಗವೂ ಆಗುತ್ತದೆ. ಹಾಗೂ ಅದೂ ಕುಪ್ರಸಿದ್ಧಿಯಾದರೂ ಸರಿಯೇ! ವಾತ್ಸಾಯನ ಕಾಮಸೂತ್ರ ಬರೆದರೂ ಅವನೇನಾದರೂ ಸಾರ್ವಜನಿಕವಾಗಿ ಇದನ್ನೆಲ್ಲಾ ಮಾಡಬೇಕೆಂದಿದ್ದಾನೆಯೇ? ದೇವಾಲಯಗಳಲ್ಲಿರುವ ಮಿಥುನ ಶಿಲ್ಪಗಳ ಹಿಂದಿನ ತಾತ್ವಿಕ ಅರ್ಥ, ಆಧ್ಯಾತ್ಮ ಈ ಅಲ್ಪಜ್ಞಾನಿಗಳಿಗೆ ತಿಳಿದಿದೆಯೇ? ಅಥವಾ ಚುಂಬನದ ಮೂಲ ಭಾರತ ಎಂದಾಕ್ಷಣ ಮೃಗಗಳಿಗಿಂತ ಕಡೆಯಾಗಿ ವರ್ತಿಸಬೇಕೆ? ಸಮಾಜ ಎಂದಾಕ್ಷಣ ಕೆಲವಷ್ಟು ಕಟ್ಟುಪಾಡುಗಳು ಇರುತ್ತವೆ. ಅವು ಸಮಾಜದ ಉಳಿವಿಗಾಗಿಯೇ ಹೊರತು ಯಾರೊಬ್ಬರ ಸ್ವಾತಂತ್ರ್ಯದ ಹರಣ ಅದರಿಂದಾಗುವುದಿಲ್ಲ. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸ ಅರಿಯದ ಜನಾಂಗವೊಂದರ ಸೃಷ್ಟಿಯಾಗಿರುವುದು ಈ ದೇಶಕ್ಕೆ ಮಾರಕವಾಗಿ ಪರಿಣಮಿಸುವುದು ಶತಸಿದ್ಧ! ಅಂದ ಹಾಗೆ ಕಿಸ್ ಮಾಡೋದ್ರಿಂದ 80 ಮಿಲಿಯನ್ ಬ್ಯಾಕ್ಟೀರಿಯಾಗಳು ವರ್ಗಾವಣೆಯಾಗುತ್ತವೆ ಅಂತ ಡಚ್ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅಷ್ಟರ ಮೇಲೂ ಸಾರ್ವಜನಿಕವಾಗಿ ಕಂಡಕಂಡವರಿಗೆ ಚುಂಬಿಸಬೇಕೇಂಬ ತೆವಲು ನಿಮಗಿದ್ದರೆ ಬ್ಯಾಕ್ಟೀರಿಯಾಗಳಿಗೆ ಒಂದಷ್ಟು ಜಾಗವನ್ನು ನಿಮ್ಮ ದೇಹದೊಳಗೆ ಸಿದ್ಧವಾಗಿಟ್ಟುಕೊಳ್ಳಿ! ಹಾಗೆಯೇ ವೈದ್ಯರಿಗಾಗಿ ಒಂದಷ್ಟು ಹಣವನ್ನೂ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ