ಪುಟಗಳು

ಬುಧವಾರ, ಡಿಸೆಂಬರ್ 17, 2014

"ಸ್ಮೃತಿ" ಶಕ್ತಿಯನ್ನೇ ಉದ್ದೀಪನಗೊಳಿಸುವ "ಸಂಸ್ಕೃತ" ಎಂಬ ಶಬ್ಧ ಕೇಳಿದೊಡನೆ ಬುದ್ಧಿಜೀವಿಗಳಿಗೆ ಮತಿ ತಪ್ಪುತ್ತದೆ!

"ಸ್ಮೃತಿ" ಶಕ್ತಿಯನ್ನೇ ಉದ್ದೀಪನಗೊಳಿಸುವ "ಸಂಸ್ಕೃತ" ಎಂಬ ಶಬ್ಧ ಕೇಳಿದೊಡನೆ ಬುದ್ಧಿಜೀವಿಗಳಿಗೆ ಮತಿ ತಪ್ಪುತ್ತದೆ!

            ಭಾಜಪಾ ಅಧಿಕಾರಕ್ಕೆ ಬಂದಾಗ ಆವರೆಗೆ ಕಚ್ಚಾಡುತ್ತಿದ್ದ ಎಲ್ಲಾ ಪಕ್ಷಗಳು, ಬುದ್ದಿಜೀವಿಗಳು ಒಂದಾಗಿ ಭಾಜಪಾವನ್ನು ಇಕ್ಕಟ್ಟಿಗೆ ಸಿಲುಕಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದಕ್ಕೆ "ಜಾತ್ಯಾತೀತ ಶಕ್ತಿಗಳು ಏಕತ್ರಗೊಂಡಿವೆ" ಎನ್ನುವ ಅಣಿಮುತ್ತು ಬೇರೆ. ಆಡಳಿತಾತ್ಮಕ, ಶೈಕ್ಷಣಿಕ, ಕಾನೂನು-ಕಾಯಿದೆ ಹೀಗೆ ಯಾವುದೇ ವಿಭಾಗದಲ್ಲಿ ಸುಧಾರಣೆ ತರಲು ಹೊರಟಾಗ "ಕೇಸರೀಕರಣ" ಎನ್ನುವ ಬೊಬ್ಬೆ ಸಾಮಾನ್ಯ. ಕೆಲವೇ ದಿನಗಳ ಹಿಂದೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್‌ ಭಾಷೆ ಬದಲಿಗೆ ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಮರಳಿ ಅಳವಡಿಸಬೇಕು ಎಂದು ಸರಕಾರ ನಿರ್ಧರಿಸಿದಾಗ ಹಸಿದಿದ್ದ ಬುದ್ದಿಜೀವಿಗಳಿಗೆ ಮೃಷ್ಟಾನ್ನ ಭೋಜನವೇ ಸಿಕ್ಕಿತು. ತಾತ್ವಿಕವಾದ ವಿರೋಧವಲ್ಲ. ಮುಂದೆ ತಮ್ಮ ಬೇಳೆ ಬೇಯಲಾರದು ಎಂಬ ಹೆದರಿಕೆಯೇ ವಿರೋಧಕ್ಕೆ ಮೂಲ ಕಾರಣ. "ಕೇಸರೀಕರಣ" ಎಂಬುದೊಂದು ನೆಪ. ಸ್ಮೃತಿ ಇರಾನಿಯವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾದಾಗಲೇ ಅಸಮಧಾನ ವ್ಯಕ್ತಪಡಿಸಿದವರು ಹಲವರು. ಮಾಡೆಲ್ ಆಗಿ, ನಟಿಯಾಗಿ, ಕಡೇಪಕ್ಷ ಹೇಳಿಕೊಳ್ಳಬಹುದಾದಂಥ ವಿದ್ಯಾರ್ಹತೆಯೂ ಇಲ್ಲದ ಅವರು ಈ ಹುದ್ದೆಗೆ ಹೇಗೆ ಶೋಭೆ ತಂದಾರು ಎಂಬುದೇ ಬಹುತೇಕರ ಪ್ರಶ್ನೆ. ಮುಂದೆ ಮಾಧ್ಯಮಗಳೆಲ್ಲಾ ಅವರ ವಿದ್ಯಾರ್ಹತೆಯ ವಿಷಯವನ್ನೇ ದೊಡ್ದದು ಮಾಡಿ ಎಳೆದಾಡಿದ್ದವು. ಆದರೆ ಆಕ್ಸ್ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯಗಳಿಂದ ಬಂದ ಡಾಕ್ಟರೇಟುಗಳಿಂದ ಈ ದೇಶದ ಶಿಕ್ಷಣ ವ್ಯವಸ್ಥೆಯೇ ಹಳ್ಳ ಹಿಡಿದಿರುವುದು ಇವರ ಗಮನಕ್ಕೆ ಬರುವುದೇ ಇಲ್ಲ. ಶಿಕ್ಷಣದಲ್ಲಿ ಭಾರತೀಯತೆಯನ್ನು ತರಬೇಕು ಎಂದು ಸ್ಮೃತಿ ಹೇಳಿದಾಗ ಬುದ್ದಿಜೀವಿಗಳೆಲ್ಲಾ ಎದ್ದು ಕೂತಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲಂಘಿಸಿ ಜರ್ಮನ್, ತ್ರಿಭಾಷಾ ಸೂತ್ರದಡಿಯಲ್ಲಿ ಸಂಸ್ಕೃತವನ್ನೇ ಹೊರಗಟ್ಟಿ ಕೂತಿರುವುದನ್ನು ಕಂಡ ಸ್ಮೃತಿ ಇರಾನಿ ಕೇಂದ್ರೀಯ ವಿದ್ಯಾಲಯಗಳೆಲ್ಲಾ ಜರ್ಮನ್ ಬದಲು ಸಂಸ್ಕೃತವನ್ನೇ ಕಡ್ಡಾಯವಾಗಿ ಕಲಿಸಬೇಕು ಎಂದು ಫರ್ಮಾನು ಹೊರಡಿಸಿದಾಗ ಶಿಕ್ಷಣದಲ್ಲಿ ಕೇಸರೀಕರಣ, ಮನುವಾದಿಗಳ ದಬ್ಬಾಳಿಕೆ, ರಾ.ಸ್ವ.ಸಂ. ತನ್ನ ನೀತಿಯನ್ನು ಶಿಕ್ಷಣದಲ್ಲಿ ಬಲವಂತವಾಗಿ ಹೇರುತ್ತಿದೆ, ಸ್ಮೃತಿ ಇರಾನಿ  ರಾ.ಸ್ವ.ಸಂ.ದ ದಲ್ಲಾಳಿ ಎನ್ನುತ್ತಾ ಮತ್ತೊಮ್ಮೆ ಸ್ಮೃತಿ ಇರಾನಿಯವರನ್ನು ಗುರಿಯಾಗಿರಿಸಿ ಜಾತ್ಯಾತೀತವಾದಿಗಳೆಲ್ಲಾ ಅರಚಾಡಿದರು.
         ರಾಷ್ಟ್ರೀಯ ಶಿಕ್ಷಣ ನೀತಿ! 1968ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ ನೀತಿ ಇದು. ಇದರ ಪ್ರಕಾರ, ಎಲ್ಲ ಶಾಲೆಗಳಲ್ಲೂ ತ್ರಿಭಾಷಾ ಸೂತ್ರ ಅನ್ವಯವಾಗಬೇಕು. ಒಂದು ಭಾಷೆ ಇಂಗ್ಲೀಷ್ ಆಗಿದ್ದು, ಮತ್ತೆರಡು ಕಡ್ದಾಯವಾಗಿ ಭಾರತೀಯ ಭಾಷೆಗಳೇ ಆಗಿರಬೇಕು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೊದಲ ಭಾಷೆ ಇಂಗ್ಲೀಷ್, ಎರಡನೆಯದು ಹಿಂದಿ ಹಾಗೂ ಮೂರನೆಯದು ಸಂಸ್ಕೃತ ಅಥವಾ ಆಯಾ ರಾಜ್ಯಕ್ಕೆ ಸೇರಿದ ಭಾಷೆ. ಮೂರನೆಯ ಭಾಷೆಯಾಗಿ ಸಂವಿಧಾನದಲ್ಲಿ ಪಟ್ಟಿ ಮಾಡಿರುವ 23 ಭಾರತೀಯ ಭಾಷೆಗಳಲ್ಲಿ ಯಾವುದನ್ನು ಬೇಕಾದರೂ ಅಳವಡಿಸಿಕೊಳ್ಳಬಹುದು. ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದಿದ್ದೇ ಸಮಗ್ರತೆ ಹಾಗೂ ಭಾವೈಕ್ಯತೆಗಳನ್ನು ಮೂಡಿಸುವ ಸಲುವಾಗಿ. ಸ್ವಾತಂತ್ರ್ಯ ಪಡೆದ ಕಾಲಕ್ಕೆ ನಮ್ಮನ್ನು ಕಾಡಿದ ಹಲವು ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆಯೂ ಒಂದು! ಸ್ವಾತಂತ್ರ್ಯಾನಂತರದಲ್ಲಿ ಅಧಿಕೃತವಾಗಿ ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಆರಿಸಲು ದಕ್ಷಿಣ ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಕೊನೆಗೆ 1950ರ ಜನವರಿ 26ರಿಂದ 15 ವರ್ಷಗಳ ಕಾಲ, ಮೊದಲ ಅಧಿಕೃತ ಭಾಷೆಯಾಗಿ ಹಿಂದಿ, ಎರಡನೆಯದಾಗಿ ಇಂಗ್ಲೀಷ್ ಇರಬೇಕೆಂದು ತೀರ್ಮಾನವಾಯಿತು. ಆದರೆ 1965ರ ಜನವರಿ 25ರಂದು ತಮಿಳುನಾಡಿನಲ್ಲಿ  ಪ್ರತಿಭಟನೆ ಆರಂಭವಾಯಿತು. ವಿದ್ಯಾರ್ಥಿಗಳು ಹಾಗೂ ಡಿಎಂಕೆ ಪಕ್ಷ ಸೇರಿ ಹಮ್ಮಿಕೊಂಡ ಈ ಪ್ರತಿಭಟನೆ ಎರಡು ತಿಂಗಳಾದರೂ ನಿಲ್ಲಲಿಲ್ಲ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ, ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅರೆಸೇನಾ ಪಡೆಗಳ ನೆರವಿನಿಂದ ಪ್ರತಿಭಟನೆಯನ್ನು ಹತ್ತಿಕ್ಕಬೇಕಾಯಿತು! ಹೀಗೆ ಭಾಷಾ ವಿಷಯವೊಂದು ರಾಜಕೀಯ ಪಕ್ಷವೊಂದರ ಉನ್ನತಿಗೆ ಕಾರಣವಾಗಿ ಡಿಎಂಕೆ ತಮಿಳುನಾಡಿನಲ್ಲಿ ಬಹುಮತ ಪಡೆಯಿತು. ಹಾಗೆ ಮುಂದುವರಿದ ಅದು ಕುಸಿದದ್ದು ಇತ್ತೀಚೆಗೆ ದಾಯಾದ್ಯ ಕಲಹದಿಂದಲೇ! ಆದರೆ ಅಂದು ತಮಿಳರಲ್ಲಿ ಹೊತ್ತಿಸಿದ ಕುರುಡು ಭಾಷಾ ಪ್ರೇಮದ ಕಿಡಿ ಇಂದಿಗೂ ಆರಿಲ್ಲ!                                  
              2009ರಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಐದು ವಿದೇಶೀ ಭಾಷೆಗಳನ್ನು "ಅನ್ಯ ಭಾಷಾ ಕಲಿಕೆ" ರೂಪದಲ್ಲಿ ಕಲಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಆ ಐದು ಭಾಷೆಗಳಲ್ಲಿ ಜರ್ಮನ್ ಕೂಡಾ ಒಂದು. ಇಷ್ಟೇ ಆಗಿದ್ದರೆ ಈ ವಿವಾದ ಉದ್ಭವಿಸುತ್ತಲೇ ಇರಲಿಲ್ಲ. 2011ರ ಸೆಪ್ಟೆಂಬರಿನಲ್ಲಿ ಕೇಂದ್ರೀಯ ವಿದ್ಯಾಲಯ ಮಂಡಳಿ ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಸಂಸ್ಥೆ ಹಾಗೂ ಗ್ಯೋಥೆ ವಿದ್ಯಾಲಯದ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡಿತು. ಕೇಂದ್ರೀಯ ವಿದ್ಯಾಲಯದ ಪರವಾಗಿ ಮಾನವಸಂಪನ್ಮೂಲ ಖಾತೆಯ ಅಂದಿನ ರಾಜ್ಯ ಸಚಿವರಾಗಿದ್ದ ಇ.ಅಹಮದ್ ಸಹಿ ಮಾಡಿದ್ದರೆ, ಜರ್ಮನಿಯ ತರಬೇತಿ ಸಂಸ್ಥೆಯ ಪರವಾಗಿ ಅಲ್ಲಿನ ಸಚಿವರೊಬ್ಬರ ಸಹಿಯಿತ್ತು! ಈ ಒಪ್ಪಂದದ ಪ್ರಕಾರ ಆ ಜರ್ಮನ್ ಸಂಸ್ಥೆಗಳು ಕೇಂದ್ರೀಯ ಶಾಲೆಗಳ ಸಂಸ್ಕೃತ ಶಿಕ್ಷಕರನ್ನು ತಮ್ಮದೇ ಖರ್ಚಿನಲ್ಲಿ ಜರ್ಮನಿಗೆ ಬರಮಾಡಿಸಿಕೊಂಡು ಅವರಿಗೆ ಜರ್ಮನ್ ಭಾಷೆಯ ಶಿಕ್ಷಣ ನೀಡುವುದೆಂದು ನಿರ್ಧಾರವಾಗಿತ್ತು. ಅಸಂಖ್ಯ ಶಿಕ್ಷಕರು ಇದರ ಲಾಭ ಪಡೆದುಕೊಂಡರು. ಹೀಗೆ 1100 ಕೇಂದ್ರೀಯ ವಿದ್ಯಾಲಯಗಳ ಪೈಕಿ 504 ಶಾಲೆಗಳಲ್ಲಿ ತ್ರಿಭಾಷೆಗಳಲ್ಲೊಂದಾದ ಸಂಸ್ಕೃತದ ಜಾಗದಲ್ಲಿ ಜರ್ಮನ್ ಪ್ರವೇಶಿಸಿತು. ಅನ್ಯ ಭಾಷೆಯಾಗಿ ಪ್ರವೇಶಿಸಿದ ಜರ್ಮನ್, ತ್ರಿಭಾಷೆಗಳಲ್ಲೊಂದಾಗಿ ಮೆರೆಯತೊಡಗಿತು. ಇದಕ್ಕಾಗಿ ಜರ್ಮನಿಯಲ್ಲಿ ಒಪ್ಪಂದದಂತೆ ತರಬೇತಿ ಪಡೆದು ಬಂದಿದ್ದ ಏಳುನೂರಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರನ್ನೇ ನೇಮಿಸಿಕೊಳ್ಳಲಾಯಿತು. ಇದನ್ನು ವಿರೋಧಿಸಿದ ಸಂಸ್ಕೃತ ಶಿಕ್ಷಕ ಸಂಘವು 2013ರ ಮೇ ತಿಂಗಳಲ್ಲಿ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಿತು. ಕೇಂದ್ರೀಯ ವಿದ್ಯಾಮಂಡಳಿ ಹಾಗೂ ಜರ್ಮನ್ ಸಂಸ್ಥೆಗಳ ನಡುವಿನ ಒಪ್ಪಂದ ಈ ವರ್ಷದ ಸೆಪ್ಟೆಂಬರಿಗೆ ಕೊನೆಗೊಂಡಿತು. ಸ್ಮೃತಿ ಇರಾನಿಯವರ ನೇತೃತ್ವದಲ್ಲಿ ಕಳೆದ ಅಕ್ಟೋಬರ್ 27ರಂದು ನಡೆದ ಸಭೆಯಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಂಸ್ಕೃತದ ಜಾಗವನ್ನು ಜರ್ಮನ್ ಹೊಕ್ಕಿರುವುದು ಗಮನಕ್ಕೆ ಬಂತು. ತ್ರಿಭಾಷಾ ಸೂತ್ರಕ್ಕೆ ವಿರುದ್ಧವಾಗಿ ನಡೆದ ಈ ಒಪ್ಪಂದ ಅಸಿಂಧುವಾದ ಕಾರಣ ಮರಳಿ ಆ ಜಾಗದಲ್ಲಿ ಸಂಸ್ಕೃತವನ್ನೇ ಕಲಿಸುವಂತೆ ಸ್ಮೃತಿ ಇರಾನಿ ನೇತೃತ್ವದ ಸಭೆ ನಿರ್ಧರಿಸಿತು. ತ್ರಿಭಾಷಾ ಸೂತ್ರ ಕೇಂದ್ರೀಯ ವಿದ್ಯಾಲಯಗಳಿಗೂ ಅನ್ವಯವಾಗಲೇಬೇಕು. ಅಂದ ಮೇಲೆ ಅದನ್ನು ಮೀರುವ ಅನುಮತಿ ದೊರಕಿದ್ದು ಹೇಗೆ? ಈ ವಿಷಯ ಅಂದಿನ ಪ್ರಧಾನಿ ಮನಮೋಹನ್‍ ಸಿಂಗ್‍ರಿಗೂ ಗೊತ್ತಿತ್ತು. ಕಳೆದ ವರ್ಷ ಏಪ್ರಿಲ್‍ನಲ್ಲಿ ಅವರು ಜರ್ಮನಿಯ ಪ್ರವಾಸ ಕೈಗೊಂಡಾಗ ಇದೇ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಕಲಿಯುತ್ತಿದ್ದ ಕೆಲ ಪ್ರತಿಭಾವಂತ ಮಕ್ಕಳನ್ನು ತಮ್ಮೊಡನೆ ಕರೆದೊಯ್ದಿದ್ದರು!

              ಸ್ಮೃತಿ ಇರಾನಿಯವರ ಈ ನಿರ್ಧಾರದ ಫಲವಾಗಿ 504 ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ 75ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಕಿರುಚಾಡುವ ಮಂದಿ ನೈಜ ವಿಚಾರಗಳನ್ನೇ ಮರೆಮಾಚುತ್ತಾರೆ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ, ಅದರಲ್ಲಿಯೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರ ಮಕ್ಕಳ ಸಲುವಾಗಿ 1963ರಲ್ಲಿ ಅಸ್ತಿತ್ವಕ್ಕೆ ಬಂತು ಕೇಂದ್ರೀಯ ವಿದ್ಯಾಲಯ. ಪದೇ ಪದೇ ಎತ್ತಂಗಡಿಯಾಗಿ ದೇಶದ ಯಾವುದೇ ಭಾಗಕ್ಕೆ ಹೋದರೂ, ಕೇಂದ್ರ ಸರ್ಕಾರಿ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಏಕರೂಪ ಪಠ್ಯಕ್ರಮವನ್ನು ಜಾರಿಗೊಳಿಸಲಾಯಿತು. ಈಗ ಅವುಗಳ ಸಂಖ್ಯೆ 1100! ತ್ರಿಭಾಷಾ ಸೂತ್ರವನ್ನು ಅಳವಡಿಸಿನೋಡಿದರೆ ಇಲ್ಲಿಯ ಮಕ್ಕಳಿಗೆ ಮೂರನೆಯ ಭಾಷೆಯಾಗಿ ಪ್ರಾದೇಶಿಕ ಭಾಷೆಯನ್ನು ಪಠ್ಯಕ್ರಮದಲ್ಲಿ ಸೇರಿಸುವುದರ ಔಚಿತ್ಯವೇ ಕಾಣುವುದಿಲ್ಲ. ಒಂದು ರಾಜ್ಯದಲ್ಲಿ ಇಂತಿಷ್ಟೇ ವರ್ಷ ಇದ್ದೇ ಇರುತ್ತಾರೆಂಬ ಖಾತ್ರಿಯೇ ಇಲ್ಲವಲ್ಲ! ಆದ್ದರಿಂದಲೇ ಇವರಿಗೆ ಮೂರನೆಯ ಭಾಷೆಯಾಗಿ ಸಂಸ್ಕೃತವೇ ಕಡ್ಡಾಯವಾಯಿತು. 2011ರ ತನಕ ಹೀಗೇ ನಡೆದುಕೊಂಡು ಬಂದಿತ್ತು. ಈಗ ಮತ್ತೆ ಅದೇ ಪರಿಪಾಠ ಮುಂದುವರೆಯಬೇಕಿದೆ. ಅವರ ಸಂಕಟಕ್ಕೆ ಕಾರಣವೂ ಅದೇ. ಸಂಸ್ಕೃತವನ್ನು ಬಲವಂತವಾಗಿ ಹೇರಿ ಸ್ವಾತಂತ್ರ್ಯ ಹರಣಮಾಡುತ್ತಿದ್ದಾರೆ ಎನ್ನುತ್ತಿರುವ ಹುಸಿ ಜಾತ್ಯಾತೀತವಾದಿಗಳಿಗೆ ಇಂದು ಸಂಸ್ಕೃತದ ಕುರಿತು ಅಧ್ಯಯನ ನಡೆಸುತ್ತಿರುವ ವಿದೇಶಗಳ ಪೈಕಿ ಮುಂಚೂಣಿಯಲ್ಲಿರುವುದು ಜರ್ಮನಿಯೇ ಎಂಬ ವಿಷಯ ತಿಳಿದಿರಲಿಕ್ಕಿಲ್ಲ!

                ಹಾಗೆಂದು ಜರ್ಮನ್ ಭಾಷೆಯ ಮೇಲೆ ನಿಷೇಧವನ್ನೇನೂ ಹೇರಿಲ್ಲ. ಸಾಂವಿಧಾನಿಕವಾಗಿ ಅಂಗೀಕರಿಸಲ್ಪಟ್ಟ 125 ಭಾಷೆಗಳು ಹಾಗೂ 1600 ಆಡುಭಾಷೆಗಳಿರುವ ನಮಗೆ ಒಂದು ಜರ್ಮನ್ ಭಾಷೆ ಹೆಚ್ಚಾದೀತೇ? ಐದು ವಿದೇಶೀ ಭಾಷೆಗಳ ಅಧ್ಯಯನದ ಆಯ್ಕೆಯಲ್ಲಿ ಜರ್ಮನ್ ಕೂಡಾ ಇದೆ. ಆದರೂ ಜರ್ಮನ್ ಸರ್ಕಾರ ಎಷ್ಟು ತಲೆ ಕೆಡಿಸಿಕೊಂಡಿದೆಯೆಂದರೆ, ವಿಷಯ ತಿಳಿಯುತ್ತಿದ್ದಂತೆಯೇ, ಜರ್ಮನಿಯ ರಾಯಭಾರಿ ಮೈಕಲ್ ಸ್ಟೀನರ್ ಸಂಸ್ಕೃತ ಶಿಕ್ಷಕ ಸಂಘಕ್ಕೆ ಓಡಿ ಹೋದರು. ಈ ನಿರ್ಣಯವನ್ನು ಬದಲಾಯಿಸುವಂತೆ ಕೋರಿದರು. ಇದು ಜರ್ಮನ್ ದೇಶದ ಪ್ರತಿಷ್ಠೆಯ ವಿಷಯ ಎಂದು ಹೇಳಿ ಅದನ್ನು ಈ ವಿವಾದವನ್ನು ಗೌರವಯುತವಾಗಿ ಪರಿಹರಿಸಬೆಕೆಂದರು. ಅಷ್ಟೇ ಅಲ್ಲ, ಜಿ20 ಶೃಂಗ ಸಭೆಯಲ್ಲೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮೋರ್ಕೆಲ್ ಮೋದಿಯವರನ್ನು ಈ ವಿಷಯ ಕುರಿತು ಪರಿಶೀಲಿಸುವಂತೆ ಮನವಿ ಮಾಡಿಕೊಂಡರು! ಜರ್ಮನಿಯವರಿಗಾದರೋ ಅದು ಮಾತೃ ಭಾಷೆ.  ಹಾಗಾಗಿ ಅವರು ಕಾಳಜಿ ವಹಿಸುವುದು ಸಹಜ ಎಂದುಕೊಳ್ಳೋಣ. ಈ ನಮ್ಮ ಭಾರತೀಯರಿಗೇನಾಗಿದೆ? 1822ರಲ್ಲಿ ಗ್ರಿಮ್ಸ್ ಸಹೋದರರು ಪ್ರತಿಪಾದಿಸಿದ ಗ್ರಿಮ್ಸ್ ಲಾದ ಬಗ್ಗೆ ಸ್ವಲ್ಪವಾದರೂ ಈ ಹುಸಿ ಜಾತ್ಯಾತೀತವಾದಿಗಳಿಗೆ ತಿಳಿದಿದೆಯೇ. ಇದರ ಪ್ರಕಾರ ಮೂಲದಲ್ಲಿ ಒಂದೇ ಭಾಷೆಯಿಂದ ಉತ್ಪತ್ತಿಯಾಗಿದ್ದು ಧ್ವನಿ ಬದಲಾವಣೆಯ ಕಾರಣದಿಂದ ಅಕ್ಷರಗಳಲ್ಲುಂಟಾದ ಬದಲಾವಣೆಯನ್ನು ಅಧ್ಯಯನ ಮಾಡುವುದರ ಮೂಲಕ ಆ ಭಾಷೆಯ ಮೂಲವನ್ನು ಅರಿಯಬಹುದು. ಈ ರೀತಿ ನೋಡಿದಾಗ ಸಂಸ್ಕೃತ ಭಾರತೀಯ ಮಾತ್ರವಲ್ಲದೆ ಐರೋಪ್ಯ ಸಹಿತವಾಗಿ ಅನೇಕ ಭಾಷೆಗಳಿಗೆ ಮೂಲವಾಗಿರುವುದು ಕಂಡುಬರುತ್ತದೆ. ಆದರೆ ನಮ್ಮ ಹುಸಿ ಜಾತ್ಯಾತೀತವಾದಿಗಳಿಗೆ ತಾತ್ವಿಕವಾದ ವಿರೋಧ ಬೇಕಾಗಿಲ್ಲ. ಅವರದ್ದು ಬಲಪಂಥೀಯರು ಮಾಡುವಂತಹ ಯಾವುದನ್ನಾದರೂ ವಿರೋಧಿಸಲೇಬೇಕೆಂಬ ಮನೋಭಾವ! "ಸ್ಮೃತಿ" ಶಕ್ತಿಯನ್ನೇ ಉದ್ದೀಪನಗೊಳಿಸುವ "ಸಂಸ್ಕೃತ" ಎಂಬ ಶಬ್ಧ ಕೇಳಿದೊಡನೆ ಬುದ್ದಿಜೀವಿಗಳಿಗೆ ಮತಿ ತಪ್ಪುತ್ತದೆ!  
                
                2011ರಲ್ಲಿ ಕೇಂದ್ರೀಯ ವಿದ್ಯಾಲಯ ಮಂಡಳಿ ಹಾಗೂ ಜರ್ಮನ್ ಸಂಸ್ಥೆಗಳ ನಡುವೆ ನಡೆದ ಒಪ್ಪಂದದ ಮುನ್ನಾದಿನ ಆಗಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಸಂಸ್ಕೃತದ ಬದಲು ಜರ್ಮನ್ ಭಾಷಾ ಕಲಿಕೆಯನ್ನು ಅಳವಡಿಸುವ ಪರವಾಗಿ ಮಾತಾಡುತ್ತಾ ಜಾಗತೀಕರಣದ ಇಂದಿನ ಯುಗದಲ್ಲಿ ವಿದೇಶೀ ಭಾಷೆಗಳನ್ನು ಕಲಿಯುವುದು ಅವಶ್ಯಕವೆಂದೂ ಇದರಿಂದ ಎರಡೂ ದೇಶದ ಜನತೆಯ ನಡುವೆ ಐಕ್ಯತೆಯ ಭಾವನೆ ಮೂಡುತ್ತದೆ ಎಂದು ವಾದಿಸಿದ್ದರು. ಅಂದರೆ ಜನ್ಮ ನೀಡಿದ ತಾಯಿಯನ್ನು ಬಿಟ್ಟರೂ ಪರವಾಗಿಲ್ಲ, ಇನ್ನೋರ್ವ ಮಹಿಳೆಯಿಂದಾಗಿ ತನ್ನ ಮನೆಯಲ್ಲಿ ಅನ್ನ ಬೇಯುತ್ತದೆ, ಹಾಗಾಗಿ ಆಕೆಯನ್ನೇ ತನ್ನ ತಾಯಿಯೆಂದು ಸ್ವೀಕರಿಸುತ್ತೇನೆ ಎನ್ನುವ ಮನಸ್ಥಿತಿ. ಬಹುಷಃ ಈ ಕಪಿಲ್ ಸಿಬಲರಿಗೆ ಸಂಸ್ಕೃತ-ಭಾರತ ಹಾಗೂ ಜರ್ಮನ್ನರಿಗೆ ಐತಿಹಾಸಿಕ ನಂಟು ತಿಳಿದಿಲ್ಲ ಅಥವಾ ತಿಳಿದಿದ್ದರೂ ಯಾರದೋ ಹಿತಾಸಕ್ತಿ ಕಾಪಾಡಲು ಸ್ವಂತ ತಾಯಿಯನ್ನು ಕೊಲೆ ಮಾಡುವ ಕಾರ್ಯಕ್ಕೆ ಇಳಿದರೇನೋ! ಯೂರೋಪಿನ ಉಳಿದ ರಾಷ್ಟ್ರಗಳು ಭಾರತದ ಸಂಪತ್ತನ್ನು ಲೂಟಿಮಾಡುತ್ತಿರುವಾಗ ಜರ್ಮನ್ನರು ಸಂಸ್ಕೃತವನ್ನು ಅಧ್ಯಯನ ಮಾಡುವ ಮೂಲಕ ಭಾರತದ ಅಗಾಧ ಜ್ಞಾನ ಭಂಡಾರದಲ್ಲಿ ಹುಡುಕಾಡುವ ಒಂದು ಬೌದ್ಧಿಕ ಚಳುವಳಿಯನ್ನೇ ಆರಂಭಿಸಿದ್ದರು. ಹೆನ್ರಿಕ್ ಹೇಗ್ ಎಂಬ ಜರ್ಮನ್ ಪ್ರಾಚ್ಯತಜ್ಞ "ಫ್ರಾನ್ಸ್, ಹಾಲಂಡ್, ಇಂಗ್ಲೆಂಡುಗಳು ಹಡಗುಗಳಲ್ಲಿ ಭಾರತದ ಭೌತಿಕ ಸಂಪತ್ತನ್ನು ಕೊಂಡೊಯ್ಯುತ್ತಿರುವಾಗ ನಾವು ಭಾರತದ ಜ್ಞಾನ ಹಾಗೂ ತತ್ವಶಾಸ್ತ್ರದ ಖಜಾನೆಯನ್ನೇ ಕೊಂಡೊಯ್ಯುತ್ತಿದ್ದೇವೆ" ಎಂದಿದ್ದಾನೆ. ಹೌದು, 18ನೆಯ ಶತಮಾನದಲ್ಲಿ ಯುರೋಪಿನಲ್ಲಿ ಸಂಸ್ಕೃತ ಅಧ್ಯಯನ ಆರಂಭವಾಗಲು ಮಹತ್ತರ ಕೊಡುಗೆ ನೀಡಿದವರು ಜರ್ಮನ್‌ ವಿದ್ವಾಂಸರು. ಮತಾಂತರಿಗಳೆಲ್ಲಾ ತಮ್ಮದೇ ಶ್ರೇಷ್ಠ ಎಂದು ಬೀಗುತ್ತಿದ್ದ ಕಾಲದಲ್ಲಿ ಸಂಸ್ಕೃತ ಭಾಷೆಯ ಮಹತ್ತಿಕೆ, ವೇದಗಳು, ಉಪನಿಷತ್‌ಗಳು ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಪಾಶ್ಚಾತ್ಯರ ದೃಷ್ಠಿಕೋನವನ್ನು ಬದಲಾಯಿಸಲು ಇದು ನೆರವಾಯಿತು. ಅಲ್ಲದೆ ಆರ್ಯ ದ್ರಾವಿಡ ಕಲ್ಪನೆಯನ್ನು ಮಾಡಿ ಭಾರತದ ಇತಿಹಾಸವನ್ನು ತಿರುಚಲೂ ಈ ಜರ್ಮನ್ನರೇ ಕಾರಣ. ಕೊಲ್ಕೊತ್ತದಲ್ಲಿ ಏಷ್ಯಾಟಿಕ್‌ ಸೊಸೈಟಿಯನ್ನು ಸ್ಥಾಪಿಸಿದ, ಆರ್ಯರ ಆಕ್ರಮಣ ಸಿದ್ಧಾಂತವನ್ನು ಮೊದಲು ಹರಿಯಬಿಟ್ಟ ಸರ್‌ ವಿಲಿಯಂ ಜೋನ್ಸ್‌, ಋಗ್ವೇದವನ್ನು ಇಂಗ್ಲೀಷಿಗೆ ಅನುವಾದಿಸಿಯೂ, ಭಾರತದ ಇತಿಹಾಸವನ್ನು ಬ್ರಿಟಿಷರ ಫೌಂಡಿನಾಸೆಗೆ ಆರ್ಯ-ದ್ರಾವಿಡ ಕಲ್ಪನೆಯಾಗಿ ತಿರುಚಿ, ತನ್ನ ಕೊನೆಗಾಲದಲ್ಲಿ ಈ ಬಗ್ಗೆ ಪಶ್ಚಾತ್ತಾಪ ಪಟ್ಟ ಮ್ಯಾಕ್ಸ್ ಮುಲ್ಲರ್ ಕೂಡಾ ಜರ್ಮನಿಯವರೇ. ಇವರ ನಂತರದಲ್ಲಿ ಅನೇಕ ಜರ್ಮನ್ನರು ಭಾರತ ಜ್ಞಾನದ ಭಂಡಾರವನ್ನು ಪಡೆವ ಆಸೆಯಿಂದ ಬಂದರು. ಲುಡ್ವಿಗ್‌ ಅಲ್ದಾಫ್, ಜೀನ್‌ ಫಿಲಾಜಟ್‌, ಜಾರ್ಜ್‌ ಬಹರ್‌, ಲಾರೆಂಜ್‌ ಕೀಲ್‌ಹಾರ್ನ್, ಮಾರ್ಟಿನ್‌ ಹಾಗ್‌, ಯೂಜಿನ್‌ ಹಲ್ಶ್, ಹೆನ್ರಿಚ್‌ ಲೂದರ್ಸ್‌ ಮತ್ತು ಹರ್ಮನ್‌ ಓಲ್ಡನ್‌ಬರ್ಗ್‌ ಮೊದಲಾದ ಗಣ್ಯ ವಿದ್ವಾಂಸರ ಗಡಣವೇ ಸಂಸ್ಕೃತದ ಸಿರಿಯನ್ನುಂಡಿದೆ. ಲೂದರ್ಸ್‌ ಭಾಗಶಃ ಲಭ್ಯವಿದ್ದ ಭತೃಹರಿಯ ಕೃತಿಗಳನ್ನು ಶೋಧಿಸಿದ. ಇವರೆಲ್ಲರೂ ಇಂಡೋ - ಐರೋಪ್ಯ ಭಾಷೆಗಳಲ್ಲಿ ಸಂಸ್ಕೃತ ಅತಿ ಪುರಾತನವಾದುದು ಹಾಗೂ ಗ್ರೀಕ್‌ ಮತ್ತು ಲ್ಯಾಟಿನ್‌ಗಳ ಜತೆಗೆ ಮೂಲ ಬೇರುಗಳನ್ನು ಹಂಚಿಕೊಂಡಿದೆ ಎಂಬ ಅಭಿಪ್ರಾಯವುಳ್ಳವರಾಗಿದ್ದರು.

          ಇಂಗ್ಲೆಂಡ್‌, ಫ್ರಾನ್ಸ್‌ , ಡೆನ್ಮಾರ್ಕ್‌, ನೆದರ್‌ಲ್ಯಾಂಡ್ಸ್‌ ಮತ್ತು ಝಾರ್‌ ಆಳ್ವಿಕೆಯ ರಷ್ಯದ ವಿದ್ವಾಂಸರೂ ಸಂಸ್ಕೃತ ಕಲಿತಿದ್ದರು. ಈಗಲೂ ಅನೇಕ ಐರೋಪ್ಯ ವಿವಿಗಳಲ್ಲಿ ಪೌರಾತ್ಯ ಅಧ್ಯಯನ ವಿಭಾಗಗಳಿವೆ ಮತ್ತು ಅವುಗಳಲ್ಲಿ ಸಂಸ್ಕೃತ ಒಂದು ಅಧ್ಯಯನ ವಿಷಯವಾಗಿದೆ. ನಮ್ಮ ಅನೇಕ ವಿವಿಗಳಲ್ಲಿ ವಿದ್ಯಾರ್ಥಿಗಳು ಸಂಸ್ಕೃತದ ಬಗ್ಗೆ ನಿರಾಸಕ್ತಿ ತಾಳಿದ್ದರೆ, ಬಹುತೇಕ ವಿವಿಗಳಲ್ಲಿ ತತ್ವಶಾಸ್ತ್ರ ವಿಭಾಗಗಳು ವಿದ್ಯಾರ್ಥಿಗಳಿಲ್ಲದೆ ಕಣ್ಮರೆಯಾಗುತ್ತಿವೆ. ಆದರೆ ವಿಜ್ಞಾನ ಮತ್ತು ತಾಂತ್ರಿಕ ಹಾಗೂ ಇನ್ನಿತರ ಕ್ಷೇತ್ರಗಳ ಜನರು ಸಂಸ್ಕೃತ, ತತ್ವಶಾಸ್ತ್ರ , ಭಾರತದ ಇತಿಹಾಸದ ಅದ್ಯಯನದತ್ತ ಆಸಕ್ತರಾಗುತ್ತಿದ್ದಾರೆ. ಕಾಲಕಾಲಕ್ಕೆ ಸರಕಾರಗಳ ಪ್ರೋತ್ಸಾಹದ ಕೊರತೆಯನ್ನು ಅನುಭವಿಸಿದ್ದರೂ ಸಂಸ್ಕೃತ ಕಲಿಕೆಯ ಆಸಕ್ತಿ ಕುಂದಿಲ್ಲ. ಬೆಂಗಳೂರಿನಲ್ಲಿರುವ ದಿ ಮಿಥಿಕ್‌ ಸೊಸೈಟಿ ಇಂಡಾಲಜಿ ಅಧ್ಯಯನ ಶಾಲೆ ಹಾಗೂ ಡಿಪ್ಲೊಮಾ ಕೋರ್ಸುಗಳನ್ನು ನಡೆಸುತ್ತಿರುವ ರೀತಿ ವಿಶ್ವವಿದ್ಯಾಲಯಗಳು ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡಲ್ಲಿ ದೇಶದ ಇತಿಹಾಸ-ಪ್ರಾಚ್ಯಶಾಸ್ತ್ರ-ತತ್ವಶಾಸ್ತ್ರೀಯ ಕ್ಷೇತ್ರಕ್ಕೆ ಪ್ರಯೋಜನಕರವಾಗಿ ಇದನ್ನು ಪರಿವರ್ತಿಸಬಹುದು. ಜಪಾನಿನಲ್ಲಿ ಉದ್ಯಾನವನಗಳನ್ನು ಸಂಸ್ಕೃತ ಅಕ್ಷರಗಳ ಆಕೃತಿಯಲ್ಲಿ ರೂಪಿಸಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ, ಭಾರತೀಯ ತತ್ವಶಾಸ್ತ್ರವನ್ನು ಬೋಧಿಸಲಾಗುತ್ತದೆ. ಇಲ್ಲಿನ ದೇವಾಲಯಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಸಂಸ್ಕೃತ ಮಂತ್ರಗಳನ್ನುಚ್ಛರಿಸುತ್ತಾ ಹೋಮಗಳನ್ನು ಶುದ್ಧ ತುಪ್ಪವನ್ನು ಆಜ್ಯವಾಗಿ ಬಳಸಿ ಮಾಡಲಾಗುತ್ತದೆ. ಸೈಬೀರಿಯಾದಲ್ಲೂ ಸಂಸ್ಕೃತ ವ್ಯಾಕರಣದ ಬಗ್ಗೆ ಈಗಲೂ ಸಂಶೋಧನೆಗಳನ್ನು ನಡೆಸುತ್ತಾರೆ. ರಷಿಯಾದಲ್ಲಿ ವೇದಮಂತ್ರಗಳ, ಶ್ರೀ ಚಕ್ರಾದಿ ಯಂತ್ರಗಳ ಬಗ್ಗೆ ಆಧುನಿಕ ರೀತಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಚೀನಾದಲ್ಲಿ 1955ರ ಸುಮಾರಿಗೆ ಪೀಕಿಂಗ್ ಅರಮನೆಯ ಗ್ರಂಥಾಲಯದಲ್ಲಿ ಸಂಸ್ಕೃತ ಮಂತ್ರಗಳಿರುವ ಪುಸ್ತಕಗಳು ದೊರೆತಿದ್ದವು. ಇಂಡೋನೇಷಿಯಾ, ಥಾಯ್ ಲೆಂಡ್, ಬಾಲಿ-ಸುಮಾತ್ರ, ಟಿಬೆಟ್ ಗಳಲ್ಲಿ ಸಂಸ್ಕೃತದ ಕಂಪು ಈಗಲೂ ಉಳಿದುಕೊಂಡಿದೆ. ಪ್ರಪಂಚಾದ್ಯಂತ ಸಂಸ್ಕೃತದ, ಭಾರತೀಯತೆಯ ಕುರುಹುಗಳು ಕಂಡು ಬರುತ್ತಿರುವ ಜೊತೆಯಲ್ಲಿಯೇ ಜಗತ್ತೇ ಮತ್ತೊಮ್ಮೆ ಭಾರತದತ್ತ, ಸಂಸ್ಕೃತದತ್ತ, ಭಾರತೀಯ ಸಂಸ್ಕೃತಿಯ ಅಗಾಧ ಭಂಡಾರದತ್ತ ಆಸೆಗಣ್ಣಿನಿಂದ ಮುಖ ಮಾಡಿರುವಾಗ ನಮ್ಮಲ್ಲಿನ ಕೆಲವೇ ಕೆಲವು ಮೂರ್ಖರ ವಾದಗಳಿಗೆ ಬೆಲೆಕೊಡಬೇಕೇ? ಮುಂದಿನ ಪೀಳಿಗೆಯನ್ನು ಭಾರತದ ನೈಜ ವಾರಸುದಾರರನ್ನಾಗಿ ಮಾಡುವ ಅವಶ್ಯಕತೆ-ಕರ್ತವ್ಯ ಎರಡೂ ನಮ್ಮ ಮುಂದಿರುವಾಗ ಈ ಸಂಸ್ಕೃತ-ಸಂಸ್ಕೃತಿ ವಿರೋಧಿಗಳ ಮಾತಿಗೆ ಕಿವಿಗೊಡದಿರುವುದೇ ಲೇಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ