ಪುಟಗಳು

ಬುಧವಾರ, ಸೆಪ್ಟೆಂಬರ್ 30, 2015

‎ಚಗ್ತೆ ಸೊಪ್ಪು‬

‪#ನಾಸ್ತಿಮೂಲಮನೌಷಧಮ್‬
‪#ಚಗ್ತೆ_ಸೊಪ್ಪು‬
ತುಳುವಿನಲ್ಲಿ ಹೊಜಂಕ್(ತೊಜಂಕ್,ತಜಂಕ್) ಎಂದು ಕರೆಯಲ್ಪಡುವ ಇದರ "ತಂಬುಳಿ" ತುಳುನಾಡಲ್ಲಿ ಚಿರಪರಿಚಿತ. ಜೇನು ಹುಳ ಕಚ್ಚಿದಾಗ ಇದರ ರಸ ಹಚ್ಚಿದರೆ ಸಾಕು ನೋವು ಮಾಯ! ಹೊಟ್ಟೆಯೊಳಗಿನ ದುರ್ಮಾಂಸ ನಿವಾರಣೆಗೂ ಇದು ಪರಿಣಾಮಕಾರಿ. ಯಾವುದೇ ಕಳೆ ಗಿಡಗಳನ್ನು ಬೆಳೆಯಲು ಬಿಡದ ಗುಣ ಇದರದ್ದು. ಆಯುದಮ, ಚಕ್ರಮರ್ದ ಎಂದು ಕರೆಯಲ್ಪಡುವ ಚಗ್ತೆ ಕೆಲವು ಬಗೆಯ ಚರ್ಮರೋಗ ನಿವಾರಣೆಗೂ ಸಹಕಾರಿ. ಹೊಟ್ಟೆ ಹಾಳಾದಾಗ ಕಶ್ಮಲಗಳನ್ನು ಹೊರ ಹಾಕಲೂ ದಿವ್ಯೌಷಧ. ಹಾಂ...ಇದರ ಪಲ್ಯ, ಪಕೋಡಾ, ದೋಸೆ ಕೂಡಾ ಬಹಳ ರುಚಿ...ಏನು ಮಾಡೋಣ ಈಗಿನ ಜನಾಂಗ ಹೊಜಂಕ್ ಅನ್ನು "ಜಂಕ್" ಎಂದೇ ಪರಿಗಣಿಸಿ ನಿಜವಾಗಿಯೂ "ಜಂಕ್" ಆದ ಆಹಾರಗಳಿಗೆ ಬಲಿಯಾಗಿದೆ!

ಬಕುಳ

#ನಾಸ್ತಿಮೂಲಮನೌಷಧಮ್‬
#ಬಕುಳ

          ಬಕುಳ ಸಂಸ್ಕೃತದ ಹೆಸರು. ಶುರದಿಕಾ, ಅನಂಗಕಾ ಎನ್ನುವ ಉಪನಾಮಗಳನ್ನು ಹೇಳಿದರೂ ಈಗಿನವರಿಗೆ ತಿಳಿಯಲಿಕ್ಕಿಲ್ಲಾ! ಆದರೆ ರೆಂಜೆ ಹೂವು ಎಂದರೆ ಹಳ್ಳಿಯಲ್ಲಿ ಬೆಳೆದವರಿಗೆ ಅದರಲ್ಲೂ ನಾರಿಯರಿಗೆ ತಿಳಿದೀತು. ರೆಂಜೆ, ಬಕುಳೆ ಎನ್ನುವಾಗಲೇ ಅದರ ಸುವಾಸನೆಯನ್ನು ಮನ ಮೆಲುಕು ಹಾಕುತ್ತದೆ. ರಾತ್ರಿ ಅರಳುವ ವಿಶಿಷ್ಟ ಪರಿಮಳಯುಕ್ತ ಹೂವು ಅದು. ಒಣಗಿದ ಮೇಲೂ ಸುಗಂಧ ಬೀರುವ ಪುಷ್ಪವದು. ಎತ್ತರದ ಮರದಿಂದ ಮಂದಾನಿಲಕೆ ಬೆದರುತ್ತಾ ಮೆಲ್ಲನೆ ಬುವಿಗಿಳಿದು ಭೂಮಿಯನ್ನು ಶ್ವೇತವರ್ಣದಿಂದ ಮುಚ್ಚುವ ಬಕುಳ ಪುಷ್ಪ ಸೃಷ್ಟಿಸುವ ಸನ್ನಿವೇಶ ಆತ್ಮೋನ್ನತಿ ಪಡೆದ ಯೋಗಿಯ ತೆರನದ್ದು! ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳೇ ಮುಡಿದು ಸಿಂಗರಿಸಿ ಕೊಂಡು ಸಂಭ್ರಮಿಸುವ "ಬಕುಳಾಶೋಕವಿಹೃತಿ" ಎಂಬ ಪರ್ವವೇ ಇದೆಯಂತೆ.  ಬೆಳ್ಳಂಬೆಳಗ್ಗೆ ಶಾಲೆಗೆ ಹೋಗುವಾಗ ದಾರಿಯ ಮೇಲೆ ರಂಗವಲ್ಲಿ ಹಾಕಿದಂತೆ ಬಿದ್ದು ಸ್ವಾಗತ ಕೋರುತ್ತಿದ್ದ ಇದರ ಸುಗಂಧಭರಿತ ಹೂವು, ಸಂಜೆಯ ವೇಳೆ ಮರವೇರಿ ಕಿಸೆ ತುಂಬಾ ಸಂಗ್ರಹಿಸುತ್ತಿದ್ದ ಇದರ ಕೆಂಪು/ಕಿತ್ತಳೆ ವರ್ಣದ ಹಣ್ಣು ಈಗ ನೆನಪು ಮಾತ್ರ. ಈಗಿನ ಮಕ್ಕಳಿಗೆೀ ಆ ಭಾಗ್ಯವೇ ಇಲ್ಲ! ಹಾಂ ಬಕುಳದ ಹೂವನ್ನು ಕಟ್ಟಬೇಕೆಂದಿಲ್ಲ, ಸುರಿಯಲು ಸುಲಭವಾಗುವಂತೆ ಅದರ ರಚನೆ!

         ಈಗ ಕೋಲ್ಗೇಟಿನವರು ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಮಂಗ ಮಾಡುತ್ತಾರಲ್ಲಾ...ನಾವು ಮಂಗ ಆದೆವಲ್ಲಾ! ನಮ್ಮ ಅಜ್ಜಿ ಈಗಲೂ ಹಲ್ಲುಜ್ಜಲು ಬಳಸುವುದು ಬಕುಳೆಯ ತೊಗಟೆಯನ್ನೇ! ಇದರಿಂದ ಎರಡು ಪ್ರಯೋಜನ ಒಂದು ದಂತಗಳು ಝಗಮಗಿಸುತ್ತವೆ. ಇನ್ನೊಂದು->ವಸಡುಗಳು ಗಟ್ಟಿಯಾಗುತ್ತವೆ. ಇದರ ಮರದ ತೊಗಟೆಯನ್ನು ಪುಡಿ ಮಾಡಿ ಅಥವಾ ಆ ಪುಡಿಯಿಂದ ಕಷಾಯ ಮಾಡಿ ಉಪಯೋಗಿಸಬಹುದು. ತೊಗಟೆ ಮಲಬದ್ಧತೆ, ಪಿತ್ತ ಕೋಶ-ಮೂತ್ರಕೋಶಗಳ ತೊಂದರೆ, ಅತಿಸಾರಗಳ ಶಮನಕ್ಕೆ ಸಹಕಾರಿ. ಬಕುಳೆ ನಿತ್ಯಹರಿದ್ವರ್ಣದ ಮರ! ನಮ್ಮ ಕರಾವಳಿಯ ಕೆಲವೆಡೆ ಮದುವೆಗಳಲ್ಲಿ ಮದುಮಕ್ಕಳು ರೆಂಜೆ ಹೂವಿನ ಮಾಲೆಯನ್ನು ಪರಸ್ಪರ ಬದಲಾಯಿಸಿಕೊಳ್ಳುವ ಶಾಸ್ತ್ರವಿತ್ತು. ಈಗ ಅದು ಇತಿಹಾಸ!


ಬುಧವಾರ, ಸೆಪ್ಟೆಂಬರ್ 23, 2015

ಬೀಳುತಿಹುದು ಬುಜೀಗಳ ಮಾಳಿಗೆ

ಕವಿಯ ಕ್ಷಮೆ ಕೋರಿ.... "ಮೇಲಕ್ಕೇರಿ" ಹೋಗುತಿಹ ಬುಜೀಗಳಿಗರ್ಪಣೆ

ಸೋರುತಿಹುದು ‪ಬುಜೀಗಳ ಮಾಳಿಗೆ ||ಅಜ್ಞಾನದಿಂದ||
ಬೀಳುತಿಹುದು ಬುಜೀಗಳ ಮಾಳಿಗೆ

ಬೀಳುತಿಹುದು ಬುಜೀಗಳ ಮಾಳಿಗೆ ದಾರು(ನೀರಾ) ಕುಡಿದು ಬೊಗಳುತ್ತಿರುವವು
ಕಾಳ ಕತ್ತಲೆಯೊಳಗೆ ಬುಜೀಗಳು "ಮೇಲಕ್ಕೇರಿ" ಹೋಗ್ವರೆಲ್ಲಾ

ಮುರುಕು ತಲೆಯು ಶೂನ್ಯ ಬುದ್ಧಿ ನಾಚಿಕೆ ತೊರೆದು ಕೀಲು ಬಿದ್ದು
ಹರಕು ಚಪ್ಪರ ಬಿದ್ದೇ ಬಿಡ್ತು "ಮೇಲಕ್ಕೇರಿ" ಹೋಗುತಿಹರು||ಸೋರುತಿಹುದು||

ತುಳಸಿ, ಗರಿಕೆ ಕಸವು ಎಂದು ರಾಮನೇನ್ಮಹಾ ಎನಲು
ರಾಮರಾಮ ಜಗವು ಕೂಗೆ "ಮೇಲಕ್ಕೇರಿ" ಹೋಗುತಿಹರು ||ಸೋರುತಿಹುದು||

#WithdrawAward‬

ಸೋಮವಾರ, ಸೆಪ್ಟೆಂಬರ್ 21, 2015

ಎತ್ತಿನಹೊಳೆ ನೀರ ತಿರುವು - ಕರಾವಳಿಗರ ಕಣ್ಣೀರ ಹರಿವು

ಎತ್ತಿನಹೊಳೆ ನೀರ ತಿರುವು - ಕರಾವಳಿಗರ ಕಣ್ಣೀರ ಹರಿವು

               ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿಯಿಂದ ನೇತ್ರಾವತಿ-ಹೇಮಾವತಿಗಳ ಜೋಡಣೆಯ ಪ್ರಸ್ತಾಪಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಕರ್ನಾಟಕ ಸರಕಾರ ನೇತ್ರಾವತಿ, ಕುಮಾರಧಾರಾ ಮುಂತಾದ ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ತಿರುಗಿಸಿ ಬಯಲಸೀಮೆಯ ಜಿಲ್ಲೆಗಳಾದ ಕೋಲಾರ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಹರಿಸುವ ಸಲುವಾಗಿ ಯೋಜನೆ ರೂಪಿಸಲು ಡಾ. ಜಿ.ಎಸ್ ಪರಮೇಶ್ವರಯ್ಯ ನೇತೃತ್ವದ ಸಮಿತಿಯೊಂದನ್ನು ರಚಿಸಿತ್ತು. ಅಷ್ಟೇನು ಪ್ರಾಮುಖ್ಯತೆ ಪಡೆಯದಿದ್ದ ಈ ಚರ್ಚೆ ಕೆಲವು ರಾಜಕಾರಣಿಗಳ ಉದ್ಧಾರಕ್ಕಾಗಿ ಎತ್ತಿನಹೊಳೆ ನದಿ ತಿರುವು ಯೋಜನೆಯಾಗಿ ಬದಲಾದುದು, ಅವರು ತಮ್ಮ ಏಳಿಗೆಗಾಗಿ ಹುಟ್ಟೂರೆಂದೂ ಲೆಕ್ಕಿಸದೆ ಜನತೆಯ-ಅಪರೂಪದ ಜೀವ ಸಂಕುಲದ-ವನ್ಯಸಂಪತ್ತಿನ ವಿನಾಶಕ್ಕೂ ಹೇಸಲಾರರು ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಕುಮಾರಧಾರಾದ ಜೀವಸೆಲೆಯಾದ ಗುಂಡ್ಯ ನದಿ ನೀರನ್ನು ತಿರುಗಿಸಿ ಬಯಲುಸೀಮೆಯ ಜಿಲ್ಲೆಗಳಿಗೆ ಹರಿಸುವುದೇ ಈ ಯೋಜನೆಯ ಉದ್ದೇಶ. ಇದರಿಂದಾಗಿ ಹಾನಿ ಕೇವಲ ಗುಂಡ್ಯ-ಕುಮಾರಧಾರಾಗಳಿಗೆ ಮಾತ್ರವಲ್ಲ, ನೇತ್ರಾವತಿಗೂ ತಪ್ಪಿದ್ದಲ್ಲ!

              ಯೋಜನೆಯನ್ವಯ ಎರಡು ಹಂತಗಳಲ್ಲಿ ಎಂಟು ಅಣೆಕಟ್ಟುಗಳನ್ನು ಗುಂಡ್ಯ ನದಿಗೆ ಕಟ್ಟಲಾಗುತ್ತದೆ. ಇವುಗಳಲ್ಲಿ ಎರಡು ಅಣೆಕಟ್ಟುಗಳನ್ನು ಎತ್ತಿನಹೊಳೆ ನದಿ ಹರಿವಿಗೂ, ಎರಡನ್ನು ಅದರ ಉಪನದಿಗಳಿಗೂ, ಎರಡನ್ನು ಕಾಡುಮನೆ ಹೊಳೆಗೂ, ಇನ್ನೊಂದನ್ನು ಕೆರಿಹೊಳೆಗೆ ಅಡ್ಡಲಾಗಿಯೂ, ಉಳಿದೊಂದನ್ನು ಹೊಂಗದ ಹಳ್ಳ ಹರಿವಿಗೆ ಅಡ್ದಲಾಗಿ ಕಟ್ಟಲಾಗುತ್ತದೆ. ಈ ಎಲ್ಲಾ ಹರಿವುಗಳು ಒಟ್ಟಾಗಿ ಗುಂಡ್ಯ ನದಿಯನ್ನು ಸೃಜಿಸಿವೆ. ಗುಂಡ್ಯ ನದಿ ಮುಂದೆ ಕುಮಾರ ಧಾರೆಯೊಡನೆ, ಕುಮಾರಧಾರೆ ನೇತ್ರಾವತಿಯೊಡನೆ ಸೇರುತ್ತದೆ. ಒತ್ತಡದ ಮೂಲಕ ನೀರನ್ನು ಮೂರು ಛೇಂಬರುಗಳಿಗೆ ಪಂಪ್ ಮಾಡಿ ಹಾಯಿಸಿ, ಅಲ್ಲಿಂದ ಸಕಲೇಶಪುರದ ದೊಡ್ದನಗರದಲ್ಲಿ ನಿರ್ಮಾಣವಾಗುವ ಪಂಪಿಂಗ್ ನಿಲ್ದಾಣಕ್ಕೆ ಏರಿಸಲಾಗುತ್ತದೆ. ದೊಡ್ಡನಗರದ ಪಂಪಿಂಗ್ ನಿಲ್ದಾಣದಿಂದ ಮತ್ತೆ ನೀರನ್ನು ಎತ್ತರಿಸಿ ಹಾಯಿಸಿ ಹಾರ್ವನಹಳ್ಳಿಯಲ್ಲಿ ನಿರ್ಮಾಣವಾಗುವ ನಾಲ್ಕು ಚೇಂಬರುಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಾರ್ವನಹಳ್ಳಿಯಿಂದ 250 ಕಿಮೀ ಉದ್ದದ ಗುರುತ್ವಾಕರ್ಷಕ ಕೊಳವೆಗಳ ಮೂಲಕ ನೀರನ್ನು ತುಮಕೂರಿಗೆ ಹರಿಸಿ ಅಲ್ಲಿಂದ,  ದೇವರಾಯನ ದುರ್ಗದಲ್ಲಿ ನಿರ್ಮಾಣಗೊಳ್ಳುವ ಜಲಾಶಯಕ್ಕೆ ನೀರನ್ನು ಎತ್ತರಿಸಿ ಹಾಯಿಸಲಾಗುತ್ತದೆ. ಈ ಜಲಾಶಯ 68 ಮೀಟರ್ ಎತ್ತರವಿದ್ದು 11TMC ನೀರು ಶೇಖರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ಎರಡು ಹಳ್ಳಿಗಳೂ ಸೇರಿದಂತೆ ಅರಣ್ಯಪ್ರದೇಶವನ್ನೊಳಗೊಂಡ ಸುಮಾರು 1200 ಎಕರೆ ಭೂಮಿ ಮುಳುಗಡೆಯಾಗುತ್ತದೆ. ಇಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರಗಳಿಗೆ ನೀರನ್ನು ಪೈಪ್ ಲೈನ್ಗಳ ಮೂಲಕ ಹರಿಸಲಾಗುತ್ತದೆ. 16ಮೀ ಅಗಲದ 250ಕಿಮೀ ಉದ್ದದ ಕೊಳವೆಗಳು ಸರಿಸುಮಾರು 400 ಹೆಕ್ಟೇರ್ ಪ್ರದೇಶವನ್ನು ನುಂಗುತ್ತದೆ.

              ಸರಕಾರದ ವರದಿಯಂತೆ ಯೋಜನೆಯ ಅನುಷ್ಠಾನಕ್ಕೆ ತಗಲುವ ಒಟ್ಟು ವೆಚ್ಚ 8323 ಕೋಟಿ ರೂ.ಗಳು. ಆದರೆ ಇದರೊಳಗೆ ಪುನರ್ವಸತಿ, ಭೂಸ್ವಾಧೀನ, 337 ಟ್ಯಾಂಕಿಗಳಿಗೆ ಬೇಕಾಗುವ ಪೈಪ್ ಲೈನ್ ಇವೆಲ್ಲಾ ಸೇರಿದರೆ ಈ ಮೊತ್ತ 10000 ಕೋಟಿ ದಾಟುವುದು ಶತಃಸಿದ್ಧ! ವರದಿಯಲ್ಲಿರುವಂತೆ ತಿರುಗಿಸಿದ 24.01 TMC ನೀರು ಕೋಲಾರ-ಚಿಕ್ಕಬಳ್ಳಾಪುರಗಳಿಗೆ ತಲುಪಿದಾಗ 2.81 TMCಗಿಳಿಯುತ್ತದೆ. ಯೋಜನೆ ಅನುಷ್ಠಾನವಾದ ಮೇಲೆ ಪ್ರಾಯೋಗಿಕವಾಗಿ ಎಷ್ಟು ನೀರು ದೊರೆಯುತ್ತದೆ ಎನ್ನುವುದನ್ನು ದೇವರೇ ಬಲ್ಲ. ತಜ್ಞರ ಅಭಿಪ್ರಾಯದಂತೆ ಇದು 0.7TMC! ಅಲ್ಲದೆ ಬಜೆಟಿನಲ್ಲಿ ತಿಳಿಸಿದಂತೆ ಬೆಂಗಳೂರು ನಗರಕ್ಕೂ ಈ ನೀರನ್ನು ಉಪಯೋಗಿಸಿದಲ್ಲಿ ಕೋಲಾರ ಚಿಕ್ಕಾಬಳ್ಳಾಪುರಗಳಿಗೆ ಬರಿಯ ಪೈಪುಗಳಷ್ಟೇ ಗತಿ! ಯೋಜನೆಯ ಯಾವುದೇ ವಿಸ್ತೃತ ವರದಿಯಿಲ್ಲದೆ, ಯೋಜನೆಯ ಲಾಭ-ನಷ್ಟಗಳ ಲೆಕ್ಕಾಚಾರ ಮಾಡದೆ, ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲಾಗುವ ಪರಿಣಾಮದ ಬಗ್ಗೆ ಅಧ್ಯಯನ ಮಾಡದೆ ಈಗಾಗಲೇ 2670 ಕೋಟಿ  ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯೂ ಆರಂಭವಾಗಿದೆ. ವಿಪರ್ಯಾಸವೆಂದರೆ ಕರಾವಳಿಯ ಉದ್ಯಮಿಗಳೂ ಇದರ ಪಾಲುದಾರರು!

                ಯೋಜನೆಗೆ ಅಗತ್ಯವಿರುವ ವಿದ್ಯುತ್ ಸುಮಾರು 370 MW. ಸುಮಾರು 90 ಸ್ಕ್ವೇರ್ ಕಿ.ಮೀ ಜಾಗವನ್ನುಪಯೋಗಿಸಿಕೊಂಡು 24.01 TMC ನೀರು ತಿರುಗಿಸುವ ಈ ಯೋಜನೆ ಯಶಸ್ವಿಯಾಗುವುದು ಜೂನ್-ನವಂಬರ್ ಗಳ ನಡುವೆ ಮಾತ್ರ. 24.01 TMC ನೀರು ಸಿಗುವ ಸಾಧ್ಯತೆ 50%ನಷ್ಟು! ಹಾಗಾಗಿ ಈ ಯೋಜನೆಯ ಅನುಷ್ಠಾನಕ್ಕೆ ಮಾಡುವ ನಿರ್ಮಾಣಗಳೂ 50%ನಷ್ಟು ಸಾಧ್ಯತೆಯನ್ನು ಅವಲಂಬಿಸಿಯೇ ಸಿದ್ಧಗೊಳ್ಳುತ್ತವೆ. ಒಂದು ವೇಳೆ 24 TMC ಅಥವಾ ಅದಕ್ಕಿಂತ ಹೆಚ್ಚು ನೀರು ದೊರೆತಲ್ಲಿ ಅಷ್ಟನ್ನೂ ತಿರುಗಿಸುವ ದೂ(ದು)ರಾಲೋಚನೆಯೂ ಇದರಲ್ಲಿದೆ. ಯೋಜನೆಯ ಮುಂದುವರಿದ ಭಾಗವಾಗಿ ಉಳಿದ ನದಿಗಳ ನೀರನ್ನು ತಿರುಗಿಸುವ ಮಾಸ್ಟರ್ ಪ್ಲಾನ್ ಕೂಡಾ ಇದೆ! 110 ಹೆಕ್ಟೇರುಗಳಷ್ಟು ದಟ್ಟಾರಣ್ಯ ಕೇವಲ ಅಣೆಕಟ್ಟುಗಳಿಂದ ಪಂಪಿಂಗ್ ಸ್ಟೇಷನ್ನಿಗೆ ಹಾಕಲಾಗುವ ಮೈನ್ಸ್ ಗಳಿಗೇ  ಬಲಿಯಾಗುತ್ತದೆ.  ಯೋಜನೆಯ ವರದಿಯಲ್ಲಿ ಕಾಡನ್ನು ಉರಿಸಿ ನಾಶಪಡಿಸುವುದಾಗಿ ಹೇಳಿದ್ದು ಇದರಿಂದಾಗುವ ಅರಣ್ಯನಾಶ, ವನ್ಯಜೀವಿ-ಜಲಚರಗಳ ನಾಶ ಊಹಿಸಲಸಾಧ್ಯ! ಇದಲ್ಲದೆ ಅಣೆಕಟ್ಟು, ಕೆಲಸಗಾರರ ವಸತಿ, ಹೆದ್ದಾರಿಯನ್ನು ಸಂಧಿಸಲು ನಿರ್ಮಿಸುವ ಹೊಸ ಮಾರ್ಗಗಳು, ತ್ಯಾಜ್ಯವನ್ನು ಹೂಳಲು ಬೇಕಾಗುವ ಜಾಗಗಳು, ಇಲೆಕ್ಟ್ರಿಕಲ್ ಸಬ್ ಸ್ಟೇಷನ್ಗಳು, ಮೈನಿಂಗ್ ಸಾಮಗ್ರಿಗಳು, ಬಂಡೆಗಳನ್ನು ಸ್ಫೋಟಿಸುವುದರಿಂದ ಉಂಟಾಗುವ ನಾಶ ಸೇರಿ ಅರಣ್ಯದ ಮೇಲಾಗುವ ಅತ್ಯಾಚಾರ ಲೆಕ್ಕವಿಲ್ಲದ್ದು!

               ಈ ಯೋಜನೆ ಅನುಷ್ಠಾನಗೊಳ್ಳುವ ಭಾಗದಲ್ಲಿ ಐ.ಐ.ಎಸ್.ಸಿ ಕೈಗೊಂಡ ಅಧ್ಯಯನವೊಂದು 119 ವಿವಿಧ ಜಾತಿಯ ಮರಗಳು, 63 ಜಾತಿಯ ಪೊದೆಗಳು-ಬಳ್ಳಿಗಳು, 57 ಗಿಡಮೂಲಿಕೆಗಳು ಮತ್ತು 54 ಅಪುಷ್ಪಸಸ್ಯಗಳು, 44  ವಿವಿಧ ಜಾತಿಯ ಚಿಟ್ಟೆಗಳು, 4 ಡ್ರಾಗನ್ನುಗಳು, ಕನ್ನೆನೊಣಗಳು, ನಶಿಸುತ್ತಿರುವ ಗುಂಡ್ಯ ಕಪ್ಪೆಗಳನ್ನೊಳಗೊಂಡಂತೆ 23 ವಿವಿಧ ಉಭಯಚರಗಳು, 32 ಸರೀಸೃಪಗಳು, 91 ಜಾತಿಯ ಹಕ್ಕಿಗಳು, ಹುಲಿ ಮುಂತಾದ 22 ಬಗೆಯ ಸಸ್ತನಿಗಳು, ಸಿಂಹ ಬಾಲದ ಕೋತಿಗಳು, ಆನೆ, ಕಾಡುಪಾಪ , ಕಾಡುಕೋಣ ಗಳನ್ನು ಗುರುತಿಸಿತ್ತು. 2002-13ರ ನಡುವೆ 34 ಜನ ಆನೆಗಳ ದಾಳಿಗೆ ಬಲಿಯಾಗಿದ್ದರೆ, 17 ಆನೆಗಳು ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದವು. "ಕರ್ನಾಟಕ ಎಲಿಫೆಂಟ್ ಟಾಸ್ಕ್ ಫೋರ್ಸ್" ಆನೆಗಳಿಗೆ ಹಾಗೂ ಪರಿಸರ ಹಾನಿಯ ಕಾರಣವೊಡ್ಡಿ ಸಕಲೇಶಪುರದಲ್ಲಿ ಆಗಬೇಕಿದ್ದ ಜಲವಿದ್ಯುತ್ ಯೋಜನೆಯೊಂದನ್ನು ನಿಲ್ಲಿಸಿತ್ತು. ಈಗ ಅದಕ್ಕಿಂತಲೂ ಹೆಚ್ಚು ಹಾನಿಯುಂಟುಮಾಡುವ ಯೋಜನೆಗೆ ಅನುಮತಿ ಸಿಕ್ಕಿದ್ದಾದರೂ ಹೇಗೆ? ಮನುಷ್ಯ-ವನ್ಯಜೀವಿಗಳ ನಡುವೆ ಸಂಘರ್ಷ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಅದನ್ನು ತಪ್ಪಿಸಲು ಸರಿಯಾದ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆನೆಗಳ ವಾಸಸ್ಥಾನಗಳಿಗೆ ಅಪಾಯವೊಡ್ಡುವ ಈ ಯೋಜನೆಯಿಂದ ಆನೆಗಳು ನೆಲೆಯನ್ನರಸುತ್ತಾ ನಾಡಿಗಿಳಿಯಲಾರಂಭಿಸಿದರೆ ಜನರ ಪಾಡೇನು? ಮಾನವನ ದುರಾಸೆಗಾಗಿ ವನ್ಯಜೀವಿಗಳ ಪ್ರಾಣವನ್ನು ಬಲಿಕೊಡುವುದು ಎಷ್ಟು ಸರಿ? ಈ ಯೋಜನೆ ಅನುಷ್ಠಾನಗೊಳ್ಳುವುದು "ವಿಶ್ವ ಪಾರಂಪರಿಕ ತಾಣ"ಗಳಲ್ಲೊಂದಾದ ಪುಷ್ಪಗಿರಿ ಅಭಯಾರಣ್ಯಕ್ಕೆ ಹತ್ತು ಕಿಮೀ ಅಂತರದಲ್ಲಿ. ಇದರಿಂದ ಅಲ್ಲಿನ ಜೀವ ವೈವಿಧ್ಯದಲ್ಲಿ ವ್ಯತ್ಯಯವಾಗುವುದು ನಿಶ್ಚಿತ. ಈ ಯೋಜನೆ ಮೈಸೂರಿನ ಆನೆಗಳ ರಕ್ಷಿತಾರಣ್ಯಕ್ಕೂ ತೊಂದರೆಯೊಡ್ಡುವುದರಲ್ಲಿ ಅನುಮಾನವಿಲ್ಲ.
   
               ನೀರನ್ನು ತಿರುವುಗೊಳಿಸುವ ಸ್ಥಳವನ್ನು ಯಾವುದೇ ವೈಜ್ಞಾನಿಕ ಅಧ್ಯಯನವನ್ನು ಮಾಡಿ ನಿರ್ಧರಿಸಿಲ್ಲ. ಬಂಟ್ವಾಳದಲ್ಲಿ ನೇತ್ರಾವತಿಯ ನದಿ ನೀರಿನ ಮಾಪನವನ್ನು ತೆಗೆದುಕೊಂಡು ಅದನ್ನೇ ಘಟ್ಟಕ್ಕೆ ಬಹಿರ್ಗಣಿಸಿದಾಗ ಸಿಗುವ ನೀರಿನ ಪ್ರಮಾಣವನ್ನೇ 24TMC ಎಂದು ಪರಿಗಣಿಸಿದವರ ಮೂರ್ಖತನಕ್ಕೆ ಏನೆನ್ನಬೇಕು?! ಈ ಯೋಜನೆಯಿಂದಾಗಿ ಕೆಳಭಾಗಕ್ಕೆ ಹರಿಯುವ ನೀರು ಅತ್ಯಲ್ಪ ಅಥವಾ ಶೂನ್ಯ. ಇದರಿಂದ ಜಲಚರಗಳಿಗೆ, ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಅಲ್ಲದೆ ಕೆಳಭಾಗದ ಕೃಷಿಕರಿಗಾಗುವ ಹಾನಿಯ ಬಗೆಗೆ ಯೋಜನೆಯ ನಿರ್ಮಾತೃಗಳು ಯೋಚಿಸಿದ್ದಾರೆಯೇ? ಕಳೆದ ಕೆಲವು ವರ್ಷಗಳಲ್ಲಿ ಮಳೆಯ ಪ್ರಮಾಣ ಕುಸಿದಿರುವ ಪಶ್ಚಿಮಘಟ್ಟಗಳಲ್ಲಿ ಮುಂಬರುವ ವರ್ಷಗಳಲ್ಲಿ  ಮಳೆ ಮತ್ತಷ್ಟು  ಕಡಿಮೆಯಾಗುವ ಸಾಧ್ಯತೆಯನ್ನು ಅಧ್ಯಯನಗಳು ಹೇಳುತ್ತಿವೆ. ಇದರಿಂದ ಕೆಲವೇ ವರ್ಷಗಳಲ್ಲಿ ಸಣ್ಣ ನದಿಗಳು, ತೊರೆಗಳು ಬಡವಾಗಿ ಅಂತರ್ಜಲವೂ ಬತ್ತಿ ಹೋಗಿ ಭೂಮಿ ಬರಡಾಗಿ ಜನಜೀವನ ಅಸ್ತವ್ಯಸ್ತವಾದೀತು. ಮೊದಲೇ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಕರಾವಳಿ ಭಾಗದಲ್ಲಿ ಮುಂದೆ ಆಗಲಿರುವ ಕೈಗಾರಿಕಾ ವಲಯ, ವಿಶೇಷ ವಿತ್ತವಲಯ, ಹೆಚ್ಚುವ ಜನಸಂಖ್ಯೆಗೆ ಉಪ್ಪು ನೀರೇ ಗತಿ!


             ನೇತ್ರೆ ,ಕುಮಾರಧಾರಾ, ಗುಂಡ್ಯ ನದಿಗಳು ಕೆಲವು ಅಪರೂಪದ ಪ್ರಭೇದದ ಮೀನುಗಳಿಗೆ ಆಶ್ರಯತಾಣಗಳಾಗಿವೆ. ಕುಕ್ಕೆ, ನಕುರ್ ಗಯಾ, ಯೇನೇಕಲ್ ಗಳಲ್ಲಿರುವ ಮೀನು ರಕ್ಷಿತ ತಾಣಗಳು ಈ ಯೋಜನೆ ಜಾರಿಯಾದಲ್ಲಿ ಬಡವಾಗುವುದು ಖಂಡಿತ. ನೀರಿನ ಹರಿವು ಕ್ಷೀಣಗೊಂಡಾಗ ಅವುಗಳ ಆವಾಸ-ಆಹಾರಗಳಲ್ಲಿ ವ್ಯತ್ಯಯವುಂಟಾಗಿ ಸಂತತಿಯೇ ನಶಿಸಿ ಹೋಗಬಹುದು. ಈ ಬಗ್ಗೆ ಯಾವುದೇ ಅಧ್ಯಯನವನ್ನು ಮಾಡದೆ ಏಕಾಏಕಿ ಯೋಜನೆ ಜಾರಿಗೊಳಿಸಿದುದೇಕೆ? ಅಲ್ಲದೆ ಬಂಡೆಗಳನ್ನು ಡೈನಮೈಟ್ ಉಪಯೋಗಿಸಿ ಒಡೆಯುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವನ್ಯಜೀವಿ ಹಾಗೂ ಜಲಚರಗಳಿಗಾಗುವ ಹಾನಿಯೇನು ಕಡಿಮೆಯೇ? ಈ ಸ್ಫೋಟಗಳು ಅಂತರ್ಜಲ ಹಾಗೂ ನೀರಿನ ಸೆಲೆಗಳಲ್ಲಿ ಉಂಟಾಗುವ ವ್ಯತ್ಯಯಗಳ ಬಗ್ಗೆ ಸಂಶೋಧನೆಗಳು ಹೇಳುತ್ತವೆ. ಇವನ್ನೆಲ್ಲಾ ಗಮನಕ್ಕೆ ತೆಗೆದುಕೊಂಡಿಲ್ಲವೇಕೆ? ಯೋಜನೆಯ ವರದಿಯಂತೆ ಹದಿನಾಲ್ಕು ಲಕ್ಷ ಕ್ಯೂಬಿಕ್ ಮೀಟರಿಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ನೀರಿನ ಗುಣಮಟ್ಟ, ಕಾಡು ಹಾಗೂ ವನ್ಯಜೀವಿಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಪ್ರತಿದಿವಸ ಈ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗಿ ಮುಂದೊಂದು ದಿನ ಘಟ್ಟದ ಕೆಳಭಾಗದಲ್ಲಿ 2013ರಲ್ಲಿ  ಉತ್ತರಾಖಂಡದಲ್ಲಿ ಸಂಭವಿಸಿದಂತೆ ಪ್ರವಾಹ-ಭೂಕುಸಿತಗಳುಂಟಾದರೂ ಆಶ್ಚರ್ಯವಿಲ್ಲ.

              ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಅಲ್ಲಿನ ಜೀವ ವೈವಿಧ್ಯವನ್ನು ಉಳಿಸಲೋಸುಗ ಕಸ್ತೂರಿ ರಂಗನ್ ವರದಿ ಜಾರಿಗೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಕಸ್ತೂರಿ ರಂಗನ್ ವರದಿಯಂತೆ ಪರಿಸರಕ್ಕೆ ಮಾರಕವಾಗುವ ಯಾವುದೇ ಕಾಮಗಾರಿ ಈ ಭಾಗದಲ್ಲಿ ನಡೆಯಕೂಡದು. ಹಾಗಾದರೆ ಎತ್ತಿನಹೊಳೆ ಯೋಜನೆ ಹೇಗೆ ಜಾರಿಯಾಗುತ್ತಿದೆ? ಎತ್ತಿನಹೊಳೆ ಯೋಜನೆ ಭಂಡ ರಾಜಕಾರಣಿಗಳ ಇಬ್ಬಂದಿತನವನ್ನು, ತಮ್ಮ ಹೊಟ್ಟೆ ಹೊರೆದುಕೊಳ್ಳುವ ಜಾಣತನವನ್ನು ಸೂಚಿಸುತ್ತದೆ. ಒಟ್ಟಾರೆ ಮಲೆನಾಡಿಗರನ್ನು ಅತ್ತ ಭೂಮಿ ಕಿತ್ತುಕೊಳ್ಳುವ ಕಸ್ತೂರಿ ರಂಗನ್ ವರದಿಯ ಅನುಮಾನಿತ ಭೂತ ಇತ್ತ ಆಹಾರ ಕಿತ್ತುಕೊಳ್ಳುವ ಎತ್ತಿನಹೊಳೆಯ ಪ್ರೇತಗಳು ಜೀವಚ್ಛವವಾಗಿಸುವುದರಲ್ಲಿ ಸಂಶಯವಿಲ್ಲ. ಚೀನಾದಲ್ಲಿ ಹೆಚ್ಚಿದ ವಾಣಿಜ್ಯ ಚಟುವಟಿಕೆ, ಅವೈಜ್ಞಾನಿಕ ನದಿ ತಿರುವು ಯೋಜನೆಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ 28000 ನದಿಗಳೇ ಕಾಣೆಯಾಗಿವೆ. ರಾಜಕಾರಣಿಗಳ ದುರಾಸೆಗೆ ಬಲಿಬಿದ್ದರೆ ಅಂತಹ ಸ್ಥಿತಿ ನಮಗೂ ಬಂದೀತು.

ಮಂಗಳವಾರ, ಸೆಪ್ಟೆಂಬರ್ 15, 2015

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

              ಅವರ ಮತಾಂಧತೆಗೆ ಹಲವಾರು ದೇಗುಲಗಳು ಧರೆಗುರುಳಲ್ಪಟ್ಟವು. ಅವರ ಕಾರಣಕ್ಕೆ ಇತಿಹಾಸವನ್ನೇ ತಿರುಚಿ ಬರೆಯಲಾಯಿತು. ದೇಶವನ್ನೇ ಹರಿದು ಹಂಚಲಾಯಿತು. ತಮ್ಮವರಿಗೆ ಅನ್ಯಾಯವಾಗುತ್ತಿದ್ದರೂ, ರಕ್ತದೋಕುಳಿ ಹರಿಯುತ್ತಿದ್ದರೂ ನಾಲಿಗೆ ಕಚ್ಚಿಕೊಳ್ಳಿರೆಂದು ಹೇಳಲಾಯಿತು. ಅವರಿಗಾಗಿ ರಾಷ್ಟ್ರಗೀತೆ-ರಾಷ್ಟ್ರಧ್ವಜ-ರಾಷ್ಟ್ರಭಾಷೆ ಬದಲಾಯಿತು. ಅವರ ಓಲೈಕೆಯಿಂದ ಈ ದೇಶ ಕಳೆದುಕೊಂಡದ್ದೆಷ್ಟು? ಕೇವಲ ಇಪ್ಪತ್ತು ಪ್ರತಿಶತವಿರುವ ಅವರ ಸಂಖ್ಯೆ ಈ ದೇಶದ ಕಾನೂನನ್ನೇ ಬದಲಾಯಿಸಬಲ್ಲುದು. ಯೋಜನೆಗಳ ಉದ್ದೇಶವನ್ನೇ ಮೂಲೋತ್ಪಾಟನೆ ಮಾಡಬಲ್ಲುದು. ಶತಶತಮಾನಗಳ ಪರ್ಯಂತ ಈ ದೇಶವನ್ನು ಕೊಳ್ಳೆಹೊಡೆಯುತ್ತಾ ಬಂದು, ಸ್ವಾತಂತ್ರ್ಯಗೊಂಡ ನಂತರವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯೊಂದಿಗೆ ಅನೇಕಾನೇಕ ಉಚಿತ ಸೌಲಭ್ಯಗಳನ್ನು, ಕೆಲವು ಕಡೆ ತಮಗೆ ಬೇಕಾದವರನ್ನು ಆರಿಸುವ ಅಧಿಕಾರ ಪಡೆದ ಮತವೊಂದರ ಅನುಯಾಯಿಗಳ ಒಳಗಿನ ಹೂರಣವನ್ನು ಕೆದಕುತ್ತಾ ಹೋದರೆ ಕಂಡು ಬರುವುದು ಗೆದ್ದಲು ಹುಳಗಳೇ. ಕೆಲವೊಂದಷ್ಟು ರತ್ನಗಳು ಈ ದೇಶದ ಮಣ್ಣಿನೊಂದಿಗೆ ಬೆರೆತು ಮುಖ್ಯವಾಹಿನಿಗೆ ಬಂದು ದೇಶದ ಅಸ್ಮಿತೆಗೆ ಕಾಣಿಕೆ ಸಲ್ಲಿಸಿದರೂ ಅದು ಲಕ್ಷದಲ್ಲೊಂದು. ಅನ್ನ ಕೊಟ್ಟ ಭೂಮಿಗಿಂತಲೂ ಮತವೇ ಮಹತ್ ಎನ್ನುವ ಮಾನಸಿಕತೆ ಇಂದಿಗೂ ಬದಲಾಗಿಲ್ಲ. ಎಲ್ಲವೂ ತಮ್ಮವರಿಗಾಗಿ ಎನ್ನುವವರೊಳಗಿನವರು ಎಷ್ಟು ಸುಖಿಗಳು ಎಂದು ಒಳಹೊಕ್ಕು ನೋಡಿದರೆ ಎಂಥವನೂ ಬೆಚ್ಚಿಬಿದ್ದಾನು!


               2012ರ ವರದಿಯೊಂದು ದೇಶದ ಶೇ. 59ರಷ್ಟು ಮುಸ್ಲಿಂ ಮಹಿಳೆಯರು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ ಎಂದಿತ್ತು. ಮುಸ್ಲಿಂ ಮಹಿಳೆ ನಿರಂತರ ತುಳಿತಕ್ಕೆ ಒಳಗಾಗುತ್ತಿದ್ದಾಳೆ. ಹಾಗಂತ ಆಕೆ ತುಳಿತಕ್ಕೊಳಗಾಗುತ್ತಿರುವುದು ತಮ್ಮ ಮತವೇ ಶ್ರೇಷ್ಠ ಎನ್ನುತ್ತಾ ಅನ್ಯರನ್ನು ತುಚ್ಛವಾಗಿ ಕಾಣುವ ತಮ್ಮದೇ ಸಮಾಜದ ಬಾಂಧವರಿಂದ ಅಲ್ಲವೇ?  ದೇಶಕ್ಕೆ ಸ್ವಾತಂತ್ರ್ಯದಕ್ಕಿ ಆರೂವರೆ ದಶಕಗಳು ಕಳೆದರೂ ಮುಸ್ಲಿಮರ ಅಭಿವೃದ್ಧಿ ಏಕಾಗಿಲ್ಲ ಎನ್ನುವುದಕ್ಕೆ ಮುಸ್ಲಿಮರ ಸಾಕ್ಷರತೆಯ ಪ್ರಮಾಣ ಜ್ವಲಂತ ಸಾಕ್ಷಿ. ಈ ಕುರಿತು ಅರಿವು ಮೂಡಿಸಬೇಕಿದ್ದ ಮುಸ್ಲಿಂ ಜನನಾಯಕರು ಇಷ್ಟೂ ವರ್ಷ ಮಾಡುತ್ತಿದ್ದುದೇನು? ಮುಸ್ಲಿಮ್ ಮಹಿಳೆ ನ್ಯಾಯಾಧೀಶೆಯಾಗುವಂತಿಲ್ಲ, ಚುನಾವಣೆಗೆ ಸ್ಪರ್ದಿಸುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ, ಹೋದರೂ ಕಛೇರಿಗಳಲ್ಲಿ ಪುರುಷ ಸಹೋದ್ಯೋಗಿಗಳೊಡನೆ ಮಾತಾಡುವಂತಿಲ್ಲ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ವೇದಿಕೆ ಹತ್ತಿ ಮಾತಾಡುವಂತಿಲ್ಲ, ಅವರಿಗೆ ಮೀಸಲಾತಿ ಕೊಡುವುದು ಸರಿಯಲ್ಲ, ವಾಹನ ಚಲಾವಣಾ ಪರವಾನಗಿ ಪತ್ರ-ಚುನಾವಣಾ ಗುರುತು ಚೀಟಿಯಲ್ಲಿ ಅವರ ಭಾವಚಿತ್ರ ಹಾಕುವಂತಿಲ್ಲ, ಗರ್ಭಪಾತ ಮಾಡಿಕೊಳ್ಳುವಂತಿಲ್ಲ,  ಹೀಗೆಲ್ಲಾ ಫತ್ವಾ ಹೊರಡಿಸಿರುವ ಉಲೇಮಾಗಳು, ಮೌಲ್ವಿಗಳು ಸ್ತ್ರೀಯೆಂದರೆ ಬರಿಯ ಭೋಗದ ವಸ್ತುವಾಗಿ ನೋಡಿದ್ದರಿಂದಲೇ ಅಲ್ಲವೇ ಆಕೆ ತನ್ನದೇ ಮತದಲ್ಲಿ ಕಡೆಗಣಿಸಲ್ಪಟ್ಟದ್ದು. ಕಪ್ಪು ಪರದೆಯೊಳಗಿನ ನಾಲ್ಕು ಗೋಡೆಗಳ ನಡುವಿನ ಹೆರಿಗೆಯಂತ್ರದ ಜೀವನ ಕಂಡವರಿಗೇ ಪ್ರೀತಿ! ಹಾಗಂತ ಆ ಯಂತ್ರಗಳೇನು ಮನುಷ್ಯರಲ್ಲವೇ? ಅವರಿಗೂ ಮನಸ್ಸೆಂಬುದು ಇಲ್ಲವೇ? ಎಲ್ಲವನ್ನು ಉಚಿತವಾಗಿ ಪಡೆಯುವವರ, ತಮ್ಮ ಮೂಗಿನ ನೇರಕ್ಕೇ ಈ ದೇಶದ ಯೋಜನೆಗಳನ್ನು ನಿರ್ಧರಿಸುವವರ "ಕೈಹಿಡಿಸಿಕೊಂಡವರ" ಸ್ಥಿತಿಗತಿಗಳೇನು? ಅವರ ಅಂತರಂಗದೊಳಗೆ ಹುದುಗಿ ಹೋಗಿರುವ ಮಾತುಗಳು, ಅವರ ನಿಟ್ಟುಸಿರು ಸೂಚಿಸುವ ಅಸಹಾಯಕತೆಗಳಿಗೆ ಅಂಕೆಗಳ/ಪದಗಳ ರೂಪ ಕೊಟ್ಟಾಗ ಕಂಡುದುದಿಷ್ಟು.



  • 73.1% ಕುಟುಂಬಗಳ ವಾರ್ಷಿಕ ಆದಾಯ Rs.50,000 ಕ್ಕಿಂತಲೂ ಕಡಿಮೆ.
  • 55.3% ಹುಡುಗಿಯರ ವಿವಾಹ ಹದಿನೆಂಟು ವರ್ಷ ಪ್ರಾಯ ತುಂಬುವ ಮೊದಲೇ ನಡೆಯುತ್ತದೆ!
  • ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಕೇವಲ 53.5%!
  • 53.2% ಮಹಿಳೆಯರು ಮನೆಯೊಳಗಿನ/ಸಾಂಸಾರಿಕ ಜಗಳಕ್ಕೀಡಾಗುತ್ತಿದ್ದಾರೆ.
  • 78.7% ಮಹಿಳೆಯರು ಯಾವುದೇ ಉದ್ಯೋಗವಿಲ್ಲದೆ ಅಂದರೆ ಗೃಹಿಣಿಯಾಗಿ ಜೀವನ ಸಾಗಿಸುತ್ತಿದ್ದಾರೆ.
  • 95.5% ಮಹಿಳೆಯರಿಗೆ "ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್" ಎನ್ನುವುದು ಇದೆಯೆಂಬುದೇ ತಿಳಿದಿಲ್ಲ. 
  • 75.5% ಮಹಿಳೆಯರು ಮದುವೆಯಾಗಲು ಹುಡುಗಿಯ ವಯಸ್ಸು ಹದಿನೆಂಟು ದಾಟಿರಬೇಕೆಂದು ಬಯಸುತ್ತಾರೆ. 
  • 88.3% ಮಹಿಳೆಯರು ಮದುವೆಯಾಗಲು ಹುಡುಗನ ವಯಸ್ಸು ಇಪ್ಪತ್ತೊಂದು ಕಳೆದಿರಬೇಕೆಂದು ಬಯಸುತ್ತಾರೆ.
  • 85.7% ಜನ ಮದುವೆಯ ಸಮಯದಲ್ಲಿ ಮೆಹ್ರ್ ಕೊಡಬೇಕೆಂದು ಬಯಸುತ್ತಾರೆ.
  • 83.9% ಜನ ವರನ ವಾರ್ಷಿಕ ಆದಾಯದಷ್ಟು ಮೆಹರ್ ಇರಬೇಕೆಂದು ಇಚ್ಛಿಸುತ್ತಾರೆ.
  • 75.1% ಮಹಿಳೆಯರು ವಿಚ್ಛೇದನ ಪಡೆಯುವಾಗ ಖುಲಾ ಕೊಡುವುದಾದಲ್ಲಿ ಮೆಹ್ರ್ ಅನ್ನು ಪಡೆಯಬಾರದೆಂದು ಇಚ್ಛಿಸುತ್ತಾರೆ.
  • 91.7% ಮಹಿಳೆಯರು ತನ್ನ ಪತಿ ಇನ್ನೊಂದು ಮದುವೆಯಾಗುವುದನ್ನು ಬಯಸುವುದಿಲ್ಲ.
  • 92.1% ಮಹಿಳೆಯರು ಮೌಖಿಕ/ಏಕಪಕ್ಷೀಯ ನಿರ್ಧಾರದ ವಿಚ್ಛೇದನ ರದ್ದಾಗಬೇಕೆಂದು ಬಯಸುತ್ತಾರೆ.
  • 88.3% ಮಹಿಳೆಯರು ತಲಾಕ್-ಇ-ಅಹ್ಸಾನ್ ವಿಚ್ಛೇದನದ ವಿಧಾನವಾಗಿರಬೇಕೆಂದು ಬಯಸುತ್ತಾರೆ.
  • 93% ಮಹಿಳೆಯರು ಪಂಚಾಯತಿ ಪ್ರಕ್ರಿಯೆ ವಿಚ್ಛೇದನಕ್ಕೆ ಮುನ್ನ ಇರಲೇಬೇಕೆಂದು ಪ್ರತಿಪಾದಿಸುತ್ತಾರೆ.
  • 72.3% ಮಹಿಳೆಯರು ವಿಚ್ಛೇದನಕ್ಕೆ ಮುನ್ನ ಪಂಚಾಯತಿ ಪ್ರಕ್ರಿಯೆ 3 ರಿಂದ 6 ತಿಂಗಳು ಇರಬೇಕೆಂದು ಪ್ರತಿಪಾದಿಸುತ್ತಾರೆ.
  • 88.5% ಮಹಿಳೆಯರು ಮೌಖಿಕ ವಿಚ್ಛೇದನಕ್ಕೆ ನೋಟೀಸ್ ಕಳುಹಿಸುವ ಖಾಜಿಯನ್ನು ಶಿಕ್ಷಿಸಬೇಕೆಂದು ಹೇಳುತ್ತಾರೆ.
  • 88.9% ಮಹಿಳೆಯರು ವಿಚ್ಛೇದನದ ನಂತರ ಮಕ್ಕಳನ್ನು ಪತ್ನಿಯೇ ಪಾಲಿಸಬೇಕೆಂದು ಬಯಸುತ್ತಾರೆ.
  • 95.6% ಮಹಿಳೆಯರು ತಾನು ಮಕ್ಕಳ ಪಾಲನೆ ಮಾಡಿದರೂ ವಿಚ್ಛೇದಿತ ಪತಿ ಪಾಲನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಕೊಡಬೇಕೆಂದು ಇಚ್ಛಿಸುತ್ತಾರೆ.
  • 92.7% ಮಹಿಳೆಯರು ಒಪ್ಪಿಗೆ ಹಾಗೂ ಆರೋಗ್ಯ, ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ನಿರ್ಧಾರಕ ಅಂಶಗಳಾಗಿರಬೇಕೆಂದು ಆಶಿಸುತ್ತಾರೆ.
  • 79.8% ಜನ ದತ್ತು ಸ್ವೀಕಾರಗೊಂಡ ಮಗುವೇ ಆಸ್ತಿಯ ವಾರಸುದಾರನಾಗಿರಬೇಕೆಂದು ಬಯಸುತ್ತಾರೆ.
  • 83.3% ಜನ ಮುಸ್ಲಿಮ್ ಕೌಟುಂಬಿಕ ಕಾನೂನಿನ ಕ್ರೋಢೀಕರಣ/ನವೀಕರಣ  ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುತ್ತದೆಯೆಂಬ ಭರವಸೆ ವ್ಯಕ್ತಪಡಿಸುತ್ತಾರೆ.
  • 87.9% ಜನ ದಾರುಲ್ ಖಾಜಾದ ಚಟುವಟಿಕೆಗಳನ್ನು ರಾಜ್ಯವೇ ನಿಯಂತ್ರಿಸಬೇಕೆಂದು ಬಯಸುತ್ತಾರೆ.
  • 95.4% ಜನ ಮುಸ್ಲಿಮ್ ಮಹಿಳೆಯರಿಗೆ ಕಾನೂನು ನೆರವನ್ನು ಬಯಸುತ್ತಾರೆ.


           ಯಾರೋ ಬಲಪಂಥೀಯ ಇಂತಹ ಅಂಕಿಅಂಶಗಳನ್ನು ಕೊಟ್ಟಿದ್ದರೆ ನಮ್ಮ ಬುಜೀಗಳು ಆಕಾಶ-ಭೂಮಿ ಒಂದು ಮಾಡುತ್ತಿದ್ದರೇನೋ? "ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ" ಎಂಬ ಸಂಘಟನೆಯೊಂದು ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ ಕೌಟುಂಬಿಕ ನ್ಯಾಯ ರಕ್ಷಣೆಯ ವಿಷಯಕವಾಗಿ ನಡೆಸಿದ ರಾಷ್ಟ್ರವ್ಯಾಪಿ ಸರ್ವೆಯಲ್ಲಿ ಕಂಡುಬಂದ ಮಹತ್ವದ ಅಂಶಗಳಿವು. ಅದಕ್ಕೇ ಮಾತೆತ್ತಿದರೆ ಹಿಂದೂಗಳಲ್ಲಿ ಶೋಷಣೆ-ಜಾತಿವಾದ-ಪಂಥೀಯತೆ-ಕೋಮುವಾದ ಎಂದೆಲ್ಲಾ ಬೊಂಬಡಾ ಬಜಾಯಿಸುವ ಈ ದೇಶದ ಸೆಕ್ಯುಲರುಗಳಿಗೆ, ಮತಾಂಧರಿಗೆ ಜಾಣ ಕುರುಡು! ಬುಡಕ್ಕೇ ಕೊಡಲಿಯೇಟು ಬಿದ್ದಾಗ, ಕೂತಿರುವ ಪೀಠವೇ ಸುಡುತ್ತಿರುವಾಗ ಮಾತೆಲ್ಲಿಂದ ಹೊರಟೀತು? ಎಷ್ಟು ದಿನ ಅಂತಾ ಕಣ್ಣೀರು ಸುರಿದೀತು? ಎಷ್ಟು ದಿನ ಕತ್ತಲು ಮುಸುಕಿದ್ದೀತು? ಅದಕ್ಕೇ ಕಪ್ಪು ಪರದೆ ಹರಿದು ಸಣ್ಣದಾದರೂ ಸಶಕ್ತ ಬೆಳಕೊಂದು ನಾಲ್ಕುಗೋಡೆಗಳನ್ನು ಭೇದಿಸಿ ತಲಾಕಿಗೇ ಸವಾಲೆಸೆಯುತ್ತಾ ಹೊರಟಿದೆ. ಅದು ಬರಬರುತ್ತಾ ಕ್ರಾಂತಿಜ್ವಾಲೆಯಾಗಿ ಈ ದೇಶದ ಅಸ್ಮಿತೆಯೊಂದಿಗೆ ಒಂದಾದರೆ ದೇಶಕ್ಕೂ ಲಾಭವೇ!

ಏನಿದು ಬಿ.ಎಂ.ಎಂ.ಎ.?

                  ಜನವರಿ 2007ರಲ್ಲಿ ಆರಂಭಗೊಂಡ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ್, ತನ್ನನ್ನು ತಾನು ಸ್ವತಂತ್ರ, ಜಾತ್ಯಾತೀತ, ಹಕ್ಕುಗಳೇ ಆಧಾರವಾಗುಳ್ಳ, ಮುಸ್ಲಿಮ್ ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿರುವ, ಭಾರತದ ಮುಸ್ಲಿಮರ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಬೃಹತ್ ಸಂಘಟನೆಯೆಂದು ಹೇಳಿಕೊಳ್ಳುತ್ತದೆ. ಭಾರತೀಯ ಸಮಾಜದಲ್ಲಿ ಮುಸ್ಲಿಮರು ಅದರಲ್ಲೂ ಮುಸ್ಲಿಮ್ ಮಹಿಳೆಯರು ತಮ್ಮ ಬಡತನವನ್ನು ನಿವಾರಿಸಿಕೊಂಡು ನ್ಯಾಯ, ಸಮಾನತೆ ಹಾಗೂ ಮಾನವ ಹಕ್ಕುಗಳನ್ನು ಪಡೆದು ಗೌರವಯುತ ಜೀವನವನ್ನು ನಡೆಸಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡುವುದು ತನ್ನ ಉದ್ದೇಶವೆನ್ನುತ್ತದೆ. ಬಿ.ಎಮ್.ಎಮ್.ಎ ನ್ಯಾಯಕ್ಕಾಗಿನ ತನ್ನ ಹೋರಾಟದಲ್ಲಿ ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪ್ರಜಾಪ್ರಭುತ್ವದ ಮೌಲ್ಯಗಳು, ಜಾತ್ಯಾತೀತತೆ, ಸಮಾನತೆ, ಶಾಂತಿ ಹಾಗೂ ಮಾನವ ಹಕ್ಕುಗಳು ತನ್ನ ಮಾರ್ಗದರ್ಶಕ ಸೂತ್ರಗಳೆಂದು ನಂಬುತ್ತದೆ. ಬಿ.ಎಮ್.ಎಮ್.ಎ.ಯಲ್ಲಿ 60ಸಾವಿರಕ್ಕಿಂತಲೂ ಅಧಿಕ ಸದಸ್ಯರಿದ್ದು ಹದಿಮೂರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾರೂ ಬೇಕಾದರೂ ಸದಸ್ಯರಾಗಲು ಅರ್ಹರೆಂದು ಬಿ.ಎಮ್.ಎಮ್.ಎ ಹೇಳಿಕೊಳ್ಳುತ್ತದೆ. ಅದು ಮುಸ್ಲಿಮ್ ಮಹಿಳೆಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ತಮ್ಮ ಶೈಕ್ಷಣಿಕ-ಸಾಮಾಜಿಕ ಅಭಿವೃದ್ಧಿ ಸಾಧಿಸಲು ತಾವೇ ನಾಯಕತ್ವ ವಹಿಸಿ ಮುಂದುವರಿಯಬೇಕೆಂದು ಬಯಸುತ್ತದೆ.

              ಮುಸ್ಲಿಮ್ ಸಮಾಜದ ಸ್ಥಿತಿಗತಿ ಹಾಗೂ ಅಗತ್ಯತೆಗಳನ್ನು ಅರಿತುಕೊಳ್ಳುವುದು, ಮುಸ್ಲಿಮ್ ಮಹಿಳಾ ಸಬಲೀಕರಣ ಹಾಗೂ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ, ನಾಗರಿಕ, ಕಾನೂನಾತ್ಮಕ, ಧಾರ್ಮಿಕ ಹಕ್ಕುಗಳನ್ನು ಖಚಿತಪಡಿಸುವುದು, ಸಾಂವಿಧಾನಿಕ ಅಂಶಗಳಾದ ಸಮಾನತೆ, ಸ್ವತಂತ್ರತೆ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದು, ಮತದ ಬಗ್ಗೆ ಧನಾತ್ಮಕ ಹಾಗೂ ಉದಾರ ವ್ಯಾಖ್ಯಾನವನ್ನು ಪ್ರಸಾರ ಮಾಡಿ ಅವುಗಳಿಂದ ನ್ಯಾಯ, ಸಮಾನತೆ, ಸಮಭಾವ ಹಾಗೂ ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳುವುದು, "ಮುಸ್ಲಿಮ್ ಪರ್ಸನಲ್ ಲಾ"ದಲ್ಲಿ ಕಾನೂನಾತ್ಮಕ ಸುಧಾರಣೆಗಳಿಗೆ ಮುಂದಾಗುವುದು,ಮತೀಯತೆ, ವಿನಾಶಕಾರೀ ಬಂಡವಾಳಶಾಹಿ ವ್ಯವಸ್ಥೆ, ಪಂಥೀಯತೆ, ಸರ್ವಾಧಿಕಾರಿ ಧೋರಣೆಗಳನ್ನು ವಿರೋಧಿಸಿ ಶಾಂತಿ-ನ್ಯಾಯ-ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವುದು, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಇತರ ಸಂಸ್ಥೆ-ಸಂಘಟನೆ, ಚಳುವಳಿಗಳೊಂದಿಗೆ ಸಹಭಾಗಿಯಾಗುವುದು, ಮುಸ್ಲಿಮ್ ಸಮಾಜದಲ್ಲಿನ ಜಾತಿವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು “ದಲಿತ ಮುಸ್ಲಿಮ”ರ ಸಮಸ್ಯೆಗಳನ್ನು ಹೋಗಲಾಡಿಸಲು ದನಿಯೆತ್ತುವುದು. ಮುಸ್ಲಿಮ್ ಸಮಾಜದೊಳಗೆ ಪ್ರತ್ಯೇಕ ಪ್ರಗತಿಪರ ದನಿಯೊಂದನ್ನು ಸೃಷ್ಟಿಸುವುದು ತನ್ನ ಮುಖ್ಯ ಧ್ಯೇಯೋದ್ದೇಶಗಳೆಂದು ಹೇಳಿಕೊಳ್ಳುತ್ತದೆ.

              ಮಹಾರಾಷ್ಟ್ರದ ನವಪಾದ, ಬೆಹ್ರಂಪಾದ, ಗರೀಬ್ ನಗರ್, ಇಂದಿರಾ ನಗರ್, ಪೈಪ್ ಲೈನ್, ಭಾರತ್ ನಗರ್, ಗೋಲಿಬಾರ್ ಜಿಲ್ಲೆಗಳಲ್ಲಿ ಬಿ.ಎಂ.ಎಂ.ಎ. ಕಾರ್ಯಾಚರಿಸುತ್ತಿದೆ. ಬಿಎಂಎಂಎ "ಯುಎನ್ ವುಮೆನ್" ಹಾಗೂ ಫೋರ್ಡ್ ಫೌಂಡೇಶನ್ ಸಹಕಾರದೊಂದಿಗೆ ತನ್ನದೇ ಪ್ರಕಾಶನವನ್ನು ಹೊಂದಿದ್ದು "ಲೊಕೇಟಿಂಗ್ ಮುಸ್ಲಿಮ್ ವುಮೆನ್ ಇನ್ ಇಂಡಿಯನ್ ಪಾಲಿಸಿ" ಇನ್ ಪೀಪಲ್ ಎಟ್ ದ ಮಾರ್ಜಿನ್ಸ್: ವೂಸ್ ಬಡ್ಜೆಟ್? ವೂಸ್ ರೈಟ್ಸ್? ಎನ್ನುವ ಪುಸ್ತಕವನ್ನು ಹೊರತಂದಿದೆ."ಧಾರ್ಮಿಕ ಅಲ್ಪ ಸಂಖ್ಯಾತರ ಸಬಲೀಕರಣ" ಕಾರ್ಯಕ್ರಮದ ಅಂಶಗಳನ್ನು ಅವಲೋಕಿಸಿದಾಗ ಈ ಕಾರ್ಯಕ್ರಮದಿಂದ ಮುಸ್ಲಿಮ್ ಮಹಿಳೆಯರಿಗೆ ಸಿಗುವ ಲಾಭ ಅತ್ಯಲ್ಪ ಎಂದು ಬಿ.ಎಂ.ಎಂ.ಎ. ಪ್ರತಿಪಾದಿಸುತ್ತದೆ. ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಒರಿಸ್ಸಾ ಈ ನಾಲ್ಕು ರಾಜ್ಯಗಳಲ್ಲಿ ಪ್ರಧಾನ ಮಂತ್ರಿಗಳ ಹದಿನೈದು ಅಂಶಗಳ ಕಾರ್ಯಕ್ರಮದ ಅಧ್ಯಯನದಿಂದ ಮಾಹಿತಿ ಕಲೆ ಹಾಕಿದ ಬಿಎಂಎಂಎ ಮುಸ್ಲಿಮ್ ಮಹಿಳೆಯರಿಗಾಗಿ ಈ ಕಾರ್ಯಕ್ರಮದ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಲಹೆ ಮಾಡಿದೆ. ಹುಡುಗಿಯರಿಗಾಗಿ ಪ್ರತ್ಯೇಕ ಶಾಲೆಗಳು, ಎಲ್ಲಾ ಯೋಜನೆಗಳಲ್ಲಿ ಮುಸ್ಲಿಂ ಮಹಿಳೆಗೆ ಪ್ರತಿಯೊಂದು ಮನೆಯಲ್ಲಿ ಪ್ರಾಶಸ್ತ್ಯ ಕಲ್ಪಿಸುವುದು, ಮುಸ್ಲಿಮ್ ಮಹಿಳೆಯರಿಗೆ ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಅವಕಾಶ, ಹೆಚ್ಚಿನ ಬಂಡವಾಳ ಒದಗಿಸುವುದು ಇದರಲ್ಲಿನ ಮುಖ್ಯ ಅಂಶಗಳು.
ಒರಿಸ್ಸಾದ ಮುಸ್ಲಿಮ್ ಮಹಿಳೆಯರಿಗೆ ಸರಕಾರೀ ಯಂತ್ರದ ಬಗ್ಗೆಯಾಗಲೀ ಕಾನೂನಾತ್ಮಕ ವ್ಯವಹಾರಗಳ ಬಗ್ಗೆಯಾಗಲೀ ಸರಿಯಾದ ಶಿಕ್ಷಣವಿರಲಿಲ್ಲ. ತಮ್ಮೊಳಗಿನ ವಿವಾದ ತೊಡಕುಗಳ ನಿವಾರಣೆಗೆ ಅವರು ಗ್ರಾಮದ ಸರಪಂಚ್, ಬಸ್ತಿಯ ಸರ್ದಾರ್ ಅಥವಾ ಖಾಜಿಗಳನ್ನೇ ಅವಲಂಬಿಸಿದ್ದರು. ಇದರಿಂದ ನ್ಯಾಯವೆಂಬುದು ಮರೀಚಿಕೆಯಾಗಿತ್ತು. ಬಿಎಂಎಂಎ ಒರಿಸ್ಸಾದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿನ ಮುಸ್ಲಿಮ್ ಮಹಿಳೆಯರ ಸಹಾಯಕ್ಕೆ ಮುಂದಾಯಿತು. ಸರಕಾರದಿಂದ ತರಬೇತಿ ಪಡೆದ ಪ್ಯಾರಾ ಕಾನೂನು ಸ್ವಯಂಸೇವಕರ ಸಹಾಯದೊಂದಿಗೆ ಬಿಎಂಎಂಎ ಉಚಿತ ಕಾನೂನು ಸಹಾಯ, ಮಹಿಳಾ ಠಾಣೆ, ಮಹಿಳಾ ಜೈಲುಕೋಣೆಗಳನ್ನು ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದೆ. ಇದರ ಫಲವಾಗಿ ಮುಸ್ಲಿಮ್ ಮಹಿಳೆಯರ ಕಾನೂನಾತ್ಮಕ ವಿಚಾರಗಳಲ್ಲಿ ತಮ್ಮ ಮತಗ್ರಂಥದಲ್ಲಿ ಹೇಳಿದ್ದನ್ನು ಅನುಸರಿಸುವ ಬದಲು ನ್ಯಾಯಾಲಯಕ್ಕೆ ಎಡತಾಕುವ ಪರಿಪಾಠ ಆರಂಭವಾಗಿದೆ. ಅಲ್ಲದೆ ಮುಸ್ಲಿಮ್ ಮಹಿಳೆಯರು ಫತ್ವಾಗಳ ವಿರುದ್ಧ ದನಿಯೆತ್ತಲು ಆರಂಭಿಸಿದ್ದಾರೆ. ಬಿಎಂಎಂಎ "ನಿಕಾಹ್ ನಾಮಾ"ದ ಮಾದರಿಯೊಂದನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದು ಖಾಜಿಗಳೊಂದಿಗೆ ಇದರ ಬಗೆಗೆ ಮಾತುಕತೆಯನ್ನೂ ಆರಂಭಿಸಿದೆ.

               ಮುಸ್ಲಿಮ್ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬಿಎಂಎಂಎ ಖಾಜಿಗಗಳನ್ನು ಮಾತುಕತೆಗೆ ಆಹ್ವಾನಿಸಿತು. ನಿಖಾಹ್, ತಲಾಕ್, ಆಸ್ತಿ ಕುರಿತಾದ ಕಾನೂನುಗಳ ಕುರಿತಾದ ಚರ್ಚೆಗೆ ವೇದಿಕೆಯನ್ನೂ ಸಿದ್ಧಪಡಿಸಿತು. ಆದರೆ ಮುಸ್ಲಿಮ್ ಕ್ಲೆರ್ಜಿಗಳು ಚರ್ಚೆಗೆ ಬರದೆ ತಪ್ಪಿಸಿಕೊಂಡರು. ಯಾರು ಚರ್ಚೆಗೆ ಬಂದಿದ್ದರೋ ಅವರ ಕೈಯಲ್ಲಿ ಯಾವುದೇ ಅಧಿಕಾರವಿರಲಿಲ್ಲ.  ಪ್ರವಾದಿ ಮಹಮ್ಮದ್ ಹೇಳಿದ ವಿಧಾನವನ್ನು ಅನುಸರಿಸದೆ ಮೂರು ಸಲ ತಲಾಕ್ ಹೇಳಿ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಆಘಾತಕಾರಿ ಪ್ರಕ್ರಿಯೆಯ ನಿಯಂತ್ರಣ, ದೇಶದ ಕಾನೂನು ಮೂರು ಸಲ ತಲಾಕ್ ಹೇಳಿ ಕೊಡುವ ವಿಚ್ಛೇದನಕ್ಕೆ ಯಾವುದೇ ಮಾನ್ಯತೆ ನೀಡದಿರುವುದು. ತಲಾಕಿಗೊಳಗಾದ ಮಹಿಳೆ ಅತ್ತ ಗಂಡನ ಮನೆಯೂ ಇಲ್ಲದೆ, ಇತ್ತ ತವರು ಮನೆಯ ಆಸರೆಯೂ ಇಲ್ಲದಿರುವಾಗ ಆಕೆಯ ಮುಂದಿನ ಜೀವನಕ್ಕೆ ಸರಿಯಾದ ನಿರ್ದೇಶನ ಇಲ್ಲದಿರುವುದು. ದಾರುಲ್ ಖಾಜಾಗಳ ಬಗ್ಗೆ ಸರಿಯಾದ ಮಾಹಿತಿಯ ಅವಶ್ಯಕತೆ, ವಿಚ್ಛೇದನದ ಸಮಯದಲ್ಲಿ ಕೊಡಬೇಕಾದ ಮೆಹ್ರ್ ಹಾಗೂ ಇದ್ದತ್ ಗಳ ಬಗೆಗಿನ ಸ್ಪಷ್ಟ ನಿರ್ಣಯ, ಅನ್ಯಾಯ-ಶೋಷಣೆಗೊಳಗಾದವರ ಆಶ್ರಯಕ್ಕೆ ಬೇಕಾದ ಅಗತ್ಯ/ತ್ವರಿತ ನಿವಾಸಗಳ ನಿರ್ಮಾಣ ಆ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳಾಗಿದ್ದವು. ತಮ್ಮ ಸಮಾಜದಲ್ಲಿ ಅಂಗವೈಕಲ್ಯ ಹೊಂದಿರುವವರಿಗೆ ಸಹಾಯ ಹಸ್ತ ಚಾಚುವುದು, ಮಹಿಳೆಯರಿಗೆ ಪಡಿತರ ಕಾರ್ಡುಗಳನ್ನು ಒದಗಿಸುವುದು, ಮನೆಮಠ ಕಳೆದುಕೊಂಡವರ ರಕ್ಷಣೆಗೆ ಧಾವಿಸುವುದು, ವಿಚ್ಛೇದನ ಹಾಗೂ ವಿಚ್ಛೇದಿತೆಗೆ ಜೀವನಾಂಶ ಒದಗಿಸಲು ನೆರವಾಗುವುದು, ಸಣ್ಣ ಉದ್ದಿಮೆಗಳ ಆರಂಭಕ್ಕಾಗಿ ಹಣಕಾಸಿನ ನೆರವನ್ನು ಒದಗಿಸುವುದು, ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು, ಆರೋಗ್ಯ ಶಿಬಿರಗಳನ್ನು ನಡೆಸುವುದು, ಸಾಲಸೌಲಭ್ಯಗಳನ್ನು ಒದಗಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಲ್ಲಿ ದೇಶದ ಹದಿಮೂರು ರಾಜ್ಯಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ ಬಿಎಂಎಂಎ.

                ಹಾಗಂತ ಇವರು ಮಾಡುವ ಎಲ್ಲವೂ ಸರಿ ಎನ್ನುವಂತಿಲ್ಲ. ಸಾಚಾರ್ ವರದಿ ಜಾರಿಯಾಗಲಿ ಎಂದು ಸಹಿಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿತ್ತು ಬಿಎಂಎಂಎ!  ಭಾರತದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಎನ್ಜಿಓಗಳಿಗೆ ಹಣ ಸಹಾಯ ಮಾಡುವ ಫೋರ್ಡ್ ಫೌಂಡೇಶನ್ ಇದರ ಹಿಂದಿರುವುದು ಕೂಡಾ ಅನುಮಾನಕ್ಕೆ ಕಾರಣವಾಗಿರುವ ಇನ್ನೊಂದು ಅಂಶವಾಗಿದೆ. ತಮ್ಮೊಳಗಿನ ದಲಿತ ಮುಸ್ಲಿಮರಿಗೆ ಸಹಾಯ ಮಾಡುತ್ತೇವೆ ಎನ್ನುವ ಮೂಲಕ ಹಲವಾರು ಸತ್ಯಗಳನ್ನು ಅವರು ಒಪ್ಪಿಕೊಂಡಂತಾಯಿತು. ಒಂದು ತಮ್ಮವರು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎನ್ನುವುದು. ತಮ್ಮಲ್ಲಿ ಜಾತಿ ವ್ಯವಸ್ಥೆ ಇದೆ ಎನ್ನುವುದು ಇನ್ನೊಂದು. ಮತಾಂತರವಾಗಿ ಬಂದವರನ್ನು ತಮ್ಮವರು ಹೀನವಾಗಿ ನೋಡಿಕೊಳ್ಳುತ್ತಾರೆ ಎನ್ನುವುದು ಮಗದೊಂದು! ಇರಲಿ, ಅದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ತಮ್ಮವರೇ ಉದ್ಧಾರವಾಗಿಲ್ಲ ಎನ್ನುವ ಸತ್ಯ ಕಣ್ಣೆದುರು ಇರುವಾಗ ಈ ರೀತಿಯ ಮತಾಂತರವನ್ನು ಬಿಎಂಎಂಎ ಯಾಕೆ ವಿರೋಧಿಸುವುದಿಲ್ಲ? ತಮ್ಮೊಳಗಿನ ಜಾತಿ ವ್ಯವಸ್ಥೆಯನ್ನು ಯಾಕೆ ವಿರೋಧಿಸುವುದಿಲ್ಲ? ತಮ್ಮ ಹೆಣ್ಣುಮಕ್ಕಳ ವಿವಾಹಕ್ಕೆ ಕಷ್ಟವಾಗಿರುವಾಗ, ತಮ್ಮ ಗಂಡಸರು ಮನಸ್ಸಿಗೆ ಬಂದಷ್ಟು ವಿವಾಹವಾಗುತ್ತಾರೆ ಎನ್ನುವುದು ತಿಳಿದಿರುವಾಗ, ಮದುವೆಯಾಗಿ ತಾವು ಅನುಭವಿಸುತ್ತಿರುವ ಕಷ್ಟಪರಂಪರೆಯ ವಿರುದ್ಧ ಹೋರಾಟಕ್ಕಿಳಿದಿರುವಾಗ ಇನ್ನೊಂದು ಮತದ ಹುಡುಗಿಯನ್ನು ಲಪಟಾಯಿಸುವ ಲವ್ ಜಿಹಾದ್, ಸೆಕ್ಸ್ ಜಿಹಾದಿನಂತಹ ಕ್ರೌರ್ಯಗಳಿಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ? ತನ್ನ ವೆಬ್ ಸೈಟಿನಲ್ಲಿ ಮತಾಂಧತೆಯ ವಿರುದ್ಧ ಹೋರಾಡುತ್ತೇವೆ ಎಂದಿರುವ ಬಿಎಂಎಂಎ ಭಯೋತ್ಪಾದನೆ ವಿರುದ್ಧ ಕನಿಷ್ಟ ಹೇಳಿಕೆ ಕೊಟ್ಟದ್ದನ್ನು ಯಾರೂ ಕೇಳಿದ್ದಿಲ್ಲ!

             ಪರಿವರ್ತನೆ ಜಗದ ನಿಯಮ. ಇಸ್ಲಾಮಿನ ಮತಾಂಧತೆಯನ್ನು ಸುಡಬೇಕಾದರೆ ಅವರ ಹೆಣ್ಣುಮಕ್ಕಳೇ ಎದ್ದೇಳಬೇಕು. ಅಂತಹ ಕ್ಷೀಣ ಸಾಧ್ಯತೆಯೊಂದು ಗೋಚರಿಸುತ್ತಿದೆ. ಅಲ್ಲಲ್ಲಿ ಫತ್ವಾಗಳ ವಿರುದ್ಧ, ಮತಾಂಧ ಮಾನಸಿಕತೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿ ಆರಂಭವಾಗಿದೆ. ಅಮೇರಿಕಾದಲ್ಲಿ ಮುಸ್ಲಿಮ್ ಮಹಿಳೆಯರು ತಮಗಾಗಿಯೇ ಪ್ರತ್ಯೇಕ ಮಸೀದಿಯನ್ನೇ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಸೆಪ್ಟೆಂಬರ್ 15ರಂದು ಫ್ರಾನ್ಸಿನಲ್ಲಿ ಸಮ್ಮೇಳನವೊಂದರಲ್ಲಿ ಫತ್ವಾ ಹೊರಡಿಸುವ ಮೌಲ್ವಿಗಳಿಬ್ಬರು ಮಹಿಳಾ ಸಮಾನತೆಯನ್ನು ಟೀಕಿಸುತ್ತಿದ್ದಾಗ ವಿವಸ್ತ್ರರಾಗಿ ಮುಸ್ಲಿಮ್ ಮಹಿಳೆಯರಿಬ್ಬರು ಪ್ರತಿಭಟನೆ ನಡೆಸಿದ್ದು ಮತಾಂಧರನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಕಪ್ಪು ಪರದೆ-ಕತ್ತಲ ಕೋಣೆಯಂದ ಹೊರಬಂದು ಕನಿಷ್ಟ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೆಲ ಮನಸ್ಸುಗಳು ಮುಂದಾಗಿವೆ ಎನ್ನುವುದೇ ವಿಶೇಷ! ಈ ಹೋರಾಟದಿಂದ ಮುಸ್ಲಿಮ್ ಜಗತ್ತಿನಲ್ಲಿ ಪರಿವರ್ತನೆಯಾದರೆ ಅದರಿಂದ ದೇಶಕ್ಕೂ ಒಳ್ಳೆಯದು, ಪ್ರಪಂಚಕ್ಕೂ, ಇಸ್ಲಾಮಿಗೂ!
  

1965ರ ಯುದ್ಧದಲ್ಲಿ ಸಂಘದ ಪಾತ್ರ

1965 ಯುದ್ಧದಲ್ಲಿ ಸಂಘದ ಪಾತ್ರ

                  1965 ಜನವರಿಯಲ್ಲಿ ಕಛ್ ಭೂಭಾಗದ ಮೇಲೆ ಪಾಕಿಗಳು ಆಕ್ರಮಣ ನಡೆಸಿದ್ದರು. ಅದೇ ವರ್ಷ ಜೂನ್ 30ರಂದು ಒಪ್ಪಂದವೊಂದಕ್ಕೆ ಭಾರತ ಸಹಿ ಹಾಕಿತು. ಕಛ್'ನ 9000ಕಿ.ಮೀ ಭಾಗವನ್ನು ವಿವಾದಾಸ್ಪದ ಎಂದು ಸ್ವೀಕರಿಸಿ ತೀರ್ಮಾನಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಮುಂದೆ ಒಯ್ಯುವುದು ಹಾಗೂ 1965ರ ಜನವರಿ 1ರ ಯಥಾಸ್ಥಿತಿಗೆ ಮರಳುವುದು ಆ ಒಪ್ಪಂದದ ಮುಖ್ಯ ಅಂಶಗಳಾಗಿದ್ದವು. ಆದರೆ ಜನವರಿ ಒಂದರ ಮೊದಲೇ ಪಾಕಿಸ್ತಾನ ನಮ್ಮ ಗಡಿಯೊಳಗೆ ತಳವೂರಿತ್ತು. ಕಛ್ ಒಪ್ಪಂದವನ್ನು ವಿರೋಧಿಸಿದ್ದ ಏಕೈಕ ಪಕ್ಷವೆಂದರೆ ಜನಸಂಘ. ಈ ಒಪ್ಪಂದದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಜನಸಂಘ ಸಂಘಟಿಸಿತು. 1965 ಜುಲೈ ನಾಲ್ಕರಂದು ದೇಶದಾದ್ಯಂತ ಸಭೆ, ಮೆರವಣಿಗೆ, ಪ್ರದರ್ಶನಗಳು ನಡೆದವು. ಹೀಗಾಗಿ ಜನಜಾಗೃತಿಯಾಗಿ ಪ್ರತಿಭಟನೆಯ ಸ್ವರ ಬಲವಾಯಿತು. ಆಗಸ್ಟ್ ಹದಿನಾರರಂದು ಸಂಸತ್ ಭವನದ ಹೊರಗೆ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನಸಂಖ್ಯೆ ಐದುಲಕ್ಷ! ಆಗ ಸ್ವತಃ ಮುಖ್ಯ ಭೂಮಿಕೆಗೆ ಧುಮುಕಿದ ಪ್ರಧಾನಿ ಶಾಸ್ತ್ರೀಜೀ ಮಹಾರಾಷ್ಟ್ರ ಪ್ರವಾಸದಲ್ಲಿದ್ದ ಪೂಜ್ಯ ಶ್ರೀ ಗುರೂಜಿಯವರನ್ನು ದೆಹಲಿಯಲ್ಲಿನ ಸರ್ವಪಕ್ಷ ನಾಯಕರ ಸಭೆಗೆ ಆಹ್ವಾನಿಸಿದರು. ಸಭೆಯಲ್ಲಿ  ಸರಸಂಘಚಾಲಕರು ಸಂಘದ ಪೂರ್ಣ ಸಹಕಾರ ಘೋಷಿಸಿದರಲ್ಲದೆ ಆಕ್ರಮಕ ನೀತಿ ಅನುಸರಿಸುವಂತೆ ಶಾಸ್ತ್ರೀಯವರನ್ನು ಒತ್ತಾಯಿಸಿದರು. ಸಭೆಯಲ್ಲಿ ಪದೇ ಪದೇ "ನಿಮ್ಮ ಸೈನ್ಯ" ಎನ್ನುತ್ತಿದ್ದ ಪ್ರತಿನಿಧಿಯೊಬ್ಬರನ್ನು "ನಮ್ಮ ಸೈನ್ಯ" ಎಂದು ತಿದ್ದಿದರು!

                  22 ದಿನಗಳ ಆ ಯುದ್ಧದ ಸಮಯದಲ್ಲಿ ದಿಲ್ಲಿಯ ವಾಹನ ನಿಯಂತ್ರಣವೇ ಮೊದಲಾದ ಪೊಲೀಸ್ ಕೆಲಸಗಳನ್ನು ವಹಿಸಿಕೊಂಡದ್ದು ಸ್ವಯಂಸೇವಕರೇ. ಇದರಿಂದ ಪೊಲೀಸರನ್ನು ಇನ್ನುಳಿದ ತುರ್ತು ಸೇವೆಗಳಿಗೆ ನಿಯೋಜಿಸುವಂತಾಯಿತು. ಯುದ್ಧಾರಂಭಕ್ಕೂ ಮೊದಲೇ ಸ್ವಯಂಸೇವಕರ ತಂಡಗಳು ಪ್ರತಿದಿನ ದಿಲ್ಲಿಯ ಜನರಲ್ ಮಿಲಿಟರಿ ಆಸ್ಪತ್ರೆಯ ಬಳಿ ಸೇರುತ್ತಿದ್ದವು. ಸೇನಾಪಡೆಯಂತೂ ಸಂಘವನ್ನು ಆಪತ್ಬಾಂಧವನೆಂದೇ ಪರಿಗಣಿಸಿತ್ತು. ಅವರಿಗೆ ಯಾವುದೇ ನಾಗರಿಕ ಸೇವೆ ಅಗತ್ಯ ಬಿದ್ದಾಗ ನೇರವಾಗಿ ಸಂಘದ ಕಾರ್ಯಾಲಯಕ್ಕೆ ದೂರವಾಣಿ ಕರೆ ಬರುತ್ತಿತ್ತು. ಯುದ್ಧದ ತೀವ್ರತೆಯ ದಿನಗಳಲ್ಲೊಮ್ಮೆ ಗಾಯಾಳು ಸೈನಿಕರನ್ನು ಹೊತ್ತಿದ್ದ ರೈಲೊಂದು ದೆಹಲಿ ತಲುಪಿತು. ನೂರಾರು ಗಾಯಾಳುಗಳಿಗೆ ತುರ್ತು ರಕ್ತದ ಅವಶ್ಯಕತೆ ಇತ್ತು. ಸಂಘ ಕಾರ್ಯಾಲಯಕ್ಕೆ ಕರೆ ಬಂದುದು ನಡುರಾತ್ರಿಯಲ್ಲಿ. ಮರುದಿನ ಬೆಳಕು ಹರಿಯುವ ಮುನ್ನವೇ ಐನೂರು ಸ್ವಯಂಸೇವಕರು ರಕ್ತನೀಡಲು ಸಾಲುಗಟ್ಟಿ ನಿಂತಿದ್ದರು! ರಕ್ತ ನೀಡಿದ್ದಕ್ಕಾಗಿ ಸಿಗುತ್ತಿದ್ದ ಸಂಭಾವನೆಯನ್ನು ನಯವಾಗಿ ನಿರಾಕರಿಸಿ ಸೈನಿಕರಿಗಾಗಿ ಖರ್ಚು ಮಾಡುವಂತೆ ಹೇಳಿದರು. 

                ಅಮೃತಸರದ ಸ್ವಯಂಸೇವಕರು ಗಡಿಯಲ್ಲಿ ಗುಂಡಳತೆಯ ವ್ಯಾಪ್ತಿಯಲ್ಲೇ ನಾಲ್ಕು ಉಪಾಹಾರ ಗೃಹಗಳನ್ನು ತೆರೆದು ಸೈನಿಕರಿಗೆ ಸಹಾಯ ಮಾಡಿದ್ದರು. ಆ ಉಪಾಹಾರ ಗೃಹಕ್ಕೆ ಸ್ಥಳೀಯರು ಉಚಿತ ಹಾಲು ಸರಬರಾಜು ಮಾದುತ್ತಿದ್ದರು. ಸೈನಿಕರಿಗಾಗಿ ಶುದ್ಧ ತುಪ್ಪದಲ್ಲಿ ತಯಾರಿಸಿದ ಊಟವನ್ನು ಅಲ್ಲಿ ಕೊಡಲಾಗುತ್ತಿತ್ತು. ಸೆಪ್ಟೆಂಬರ್ ಎಂಟರಂದು ಗಾಯಗೊಂಡ ಸೈನಿಕರಿಗೆ ಬಟ್ಟೆಬರೆಗಳು ತುರ್ತಾಗಿ ಬೇಕಿವೆ ಎಂದು ಕರೆ ಬಂದಾಗ ನಾಲ್ಕೇ ಗಂಟೆಗಳಲ್ಲಿ ಸ್ವಯಂಸೇವಕರು ಅವುಗಳನ್ನು ಒಟ್ಟುಗೂಡಿಸಿ ತಂದರು.ಅಲ್ಲದೆ ನಾಗರಿಕ ರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಕರು ನಿರ್ವಹಿಸಿದ ಪಾತ್ರ ಅತ್ಯದ್ಭುತ.  ಬ್ಲಾಕ್ ಔಟ್, ರಾತ್ರಿ ಪಹರೆ, ಮತ್ತಿತರ ರಕ್ಷಣಾ ಕಾರ್ಯಗಳನ್ನು ಸ್ವಯಂಸೇವಕರು ಸಮರ್ಥವಾಗಿ ನಿರ್ವಹಿಸಿದರು. ಶಸ್ತ್ರಸಜ್ಜಿತ ಪಾಕಿ ಟ್ರೂಪರುಗಳನ್ನು ನಿರಾಯುಧರಾಗಿ ಹಿಡಿದುಕೊಟ್ಟುದುದಲ್ಲದೆ ರೈಲು ಹಳಿಗಳು, ನದಿ, ಕಾಲುವೆ, ಸೇತುವೆ, ವಿಮಾನ ನಿಲ್ದಾಣಗಳಿಗೆ ಅಹರ್ನಿಶಿ ಪಹರೆ ಹಾಕಿ ನಿಂತದ್ದು ಸ್ವಯಂಸೇವಕರ ಸಾಹಸಗಾಥೆಗಳೇ ಸರಿ. 

          ಫಿರೋಜ್ ಪುರ ಗಡಿ ಭಾಗದಲ್ಲಿದ್ದು ಅಲ್ಲಿನ ಶಾಸಕ ಜನಸಂಘದವರಾಗಿದ್ದು ಪ್ರಾಣ ಇರುವ ತನಕ ಅಲ್ಲಿಂದ ಕದಲುವುದಿಲ್ಲ ಎಂದು ಧೃಢ ನಿಶ್ಚಯ ತಾಳಿ ಕೂತದ್ದು ಮಾತ್ರವಲ್ಲ ಐದುಸಾವಿರ ಜನರಿಗೂ ಪ್ರೇರಣೆಯಾದರು. ಜಮ್ಮುವಿನ ರಜೋರಿಯಲ್ಲಿ ಇಬ್ಬರು ಸ್ವಯಂಸೇವಕರಿಗೆ ಪಾಕ್ ಪಡೆಗಳು ತಮ್ಮ ನಗರಕ್ಕೆ ಬರುವುದು ಕಂಡಿತು. ಕೂಡಲೇ ಮಾಹಿತಿ ನೀಡಲು ಸೇನಾನೆಲೆಯತ್ತ ಧಾವಿಸಿದರವರು. ಅಲ್ಲಿನ ಸೇನಾಮುಖ್ಯಸ್ಥ ಶತ್ರುವನ್ನೆದುರಿಸಲು ಸಜ್ಜಾಗಿ ನಿಂತಿದ್ದರು. ಇವರಿಬ್ಬರನ್ನು ಮಿಲಿಟರಿ ವಾಹನದಲ್ಲಿ ಸುರಕ್ಷಿತವಾಗಿ ಜಮ್ಮುವಿಗೆ ಕಳುಹಿಸುವ ಏರ್ಪಾಟು ಮಾಡ ಹೊರಟರು. ಆದರೆ ಸ್ವಯಂಸೇವಕರಿಬ್ಬರೂ ಅದನ್ನು ನಿರಾಕರಿಸಿ ಸೈನಿಕ ಪಡೆಗೆ ಬೆಂಗಾವಲಾಗಿ ನಿಂತರು. ಮೈಂಧರಿನಲ್ಲಿನ ಸ್ವಯಂಸೇವಕನೊಬ್ಬ ಶತ್ರುಕಂದಕವನ್ನೇ ಹೊಕ್ಕು ಅಲ್ಲಿದ್ದ ಪಾಕ್ ಸೈನಿಕನಿಂದ ಸ್ಟೆನ್ ಗನ್ ಕಿತ್ತುಕೊಂಡು ಅಲ್ಲಿದ್ದ ಶತ್ರು ಸೈನಿಕರನ್ನು ಕೊಂದು ನೂರಾರು ದೇಶವಾಸಿಗಳ ಪ್ರಾಣ ಉಳಿಸಿದರು. ನೌಶೇರಾ ತಾಲೂಕಿನ ಪತನಿಯಲ್ಲಿ ಪಾಕೀ ಪಡೆಯ ದಿಗ್ಬಂಧನಕ್ಕೆ ಸಿಲುಕಿದ್ದ ಭಾರತೀಯ ಪಡೆಗೆ ನೀರು ಆಹಾರಗಳನ್ನು ಪಾಕ್ ಪಡೆಯ ಕಣ್ಣುತಪ್ಪಿಸಿ ತಲುಪಿಸಿದ ಸ್ವಯಂಸೇವಕನೊಬ್ಬ ಭಾರತೀಯ ಪಡೆಗಳ ಗೆಲುವಿಗೆ ಕಾರಣನಾದ. ಅಲ್ಲದೆ ಪ್ರತಿದಿನ ಸುಮಾರು 30ಸಾವಿರದಷ್ಟು ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಸ್ವಯಂಸೇವಕರು ಕಲ್ಪಿಸಿದರು. ದ್ವಾರಕೆಯ ಓಕಾ ಎಂಬಲ್ಲಿ ಬಂದರಿನ ಮೇಲೆ ಬಾಂಬು ಹಾಕಬಂದ ಪಾಕೀ ಸೇಬರ್ ಜೆಟ್'ಗಳನ್ನು ಗುಜರಾತಿನ ಸ್ವಯಂಸೇವಕನೊಬ್ಬ ಹೊಡೆದುರುಳಿಸಿದ!

ಹೊ.ವೆ ಶೇಷಾದ್ರಿ, ಚಂದ್ರ ಶೇಖರ ಭಂಡಾರಿ ಸಂಕಲಿತ "ಕೃತಿರೂಪ ಸಂಘದರ್ಶನ" ದ ಆಯ್ದ ಭಾಗ.

ಗುರುವಾರ, ಸೆಪ್ಟೆಂಬರ್ 3, 2015

ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ-ಧರ್ಮ ನಶಿಸಿದಂತೆ!

ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ!ಧರ್ಮ ನಶಿಸಿದಂತೆ!        

                 ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ವಿಲಿಯಂ ಜೋನ್ಸ್ ನೆನಪಿರಬಹುದು. ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ಭಾರತ ಶಾಸ್ತ್ರಜ್ಞ ಎನಿಸಿಕೊಂಡಾತ. ತಕ್ಕಮಟ್ಟಿಗೆ ಭಾರತದ ನೈಜ ಇತಿಹಾಸವನ್ನು ಬರೆದ ಈತ ಸರಿಯಾದ ಆಕರಗಳನ್ನೇ ಭಾರತದ ಇತಿಹಾಸದ ರಚನೆಗೆ ತೆಗೆದುಕೊಂಡರೂ ಬರೆಯುವಾಗ ಕ್ರೈಸ್ತಮತಕ್ಕೆ ಪೂರಕವಾಗಿ, ಓದುವವನಿಗೆ ಗೊಂದಲ ಮೂಡುವಂತೆ ಬರೆದ. ಸಂಸ್ಕೃತ ಕಲಿತಿದ್ದ ಈತನನ್ನು ನಮ್ಮವರು ಪಂಡಿತನೆಂದು ಕರೆದರು. ಆದರೆ ಆತ ಮಾಡಿದ್ದೇನು? ಸಂಸ್ಕೃತ ಮತ್ತು ಯುರೋಪಿಯನ್ ಭಾಷೆಗಳ ನಡುವಿನ ಸಂಬಂಧವನ್ನು ವಿವರಿಸಲೋಸುಗ ಬೇಬೆಲ್ ಗೋಪುರದ ಕತೆ ಕಟ್ಟಿದ. ಹಿಂದೂ ಪೌರಾಣಿಕ ಕತೆಗಳು ಹಾಗೂ ಶಾಸ್ತ್ರಗ್ರಂಥಗಳು ಕ್ರಿಶ್ಚಿಯನ್ ಸತ್ಯದ ವಿಕೃತ ರೂಪಗಳೆಂದು ವರ್ಗೀಕರಿಸಿದ. ಭಾರತದ ಮೂಲ ಸಮುದಾಯ ನೋವಾನ ಜಲಪ್ರಳಯದ ನಂತರ ಭಾರತಕ್ಕೆ ಓಡಿ ಬಂದ ಹ್ಯಾಮನ ವಂಶಜರೆಂದು ವರ್ಣಿಸಿದ. ಇದರ ಆಧಾರದ ಮೇಲೆ ಭಾರತೀಯ ಸಮುದಾಯದ ಜನಾಂಗೀಯ ಅರ್ಥವಿವರಣೆಗಳೂ ಆಮೇಲೆ ರಚಿಸಿಲ್ಪಟ್ಟವು. ಇಷ್ಟೆಲ್ಲಾ ತಿಳಿದ ಮೇಲೂ ನಮ್ಮವರ ಭೋಳೇ ಸ್ವಭಾವವೇನು ಕಡಿಮೆಯಾಯಿತೇ? ವಿದೇಶೀ ಅಸಭ್ಯತೆಯ ಅನುಕರಣೆ ಒಂದು ಕಡೆಯಾದರೆ ವಿದೇಶೀಯನೊಬ್ಬ ಸ್ವಲ್ಪ ಸಂಸ್ಕೃತ ಮಾತಾಡಿದರೂ ಆತನನ್ನು ಉದ್ಧಾಮ ಪಂಡಿತನೆಂದು ಕರೆದು ಆತನ ಪಾದಕ್ಕೆರಗುವ ವರ್ಗ ಇಂದಿಗೂ ಇದೆ. ಭಾರತೀಯರ ಈ ಭೋಳೇ ಸ್ವಭಾವವನ್ನು ಉಪಯೋಗಿಸಿಕೊಂಡು ಚರ್ಚಿನ ಹಿತಕಾಯುತ್ತಿರುವ ಇವತ್ತಿನ ವ್ಯಕ್ತಿಯೇ ಶೆಲ್ಡನ್ ಪೊಲ್ಲಾಕ್!

ಯಾರು ಈ ಶೆಲ್ಡನ್ ಪೊಲಾಕ್?

              ಹಿಂದೂ ಧರ್ಮದ ಬಗ್ಗೆ ಆಳ ಅಧ್ಯಯನ ಮಾಡಿರುವ, ಇನ್ಫಿನಿಟಿ ಫೌಂಡೇಶನ್ ಮುಖಾಂತರ ಹಿಂದೂ ಧರ್ಮ ಅಧ್ಯಯನಕ್ಕಾಗಿ ಶೈಕ್ಷಣಿಕ - ಸಾಮಾಜಿಕ ಚಟುವಟಿಕೆ ನಡೆಸುತ್ತಿರುವ  ರಾಜೀವ್ ಮಲ್ಹೋತ್ರಾ ಶೆಲ್ಡನ್ ಪೊಲಾಕ್  ಬಗ್ಗೆ ಹೇಳುವುದು ಹೀಗೆ: ಆತ ವೆಂಡಿ ಡೋನಿಗೆರ್ (ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಮತ-ಧರ್ಮಗಳ ಇತಿಹಾಸದ ಪ್ರಾಧ್ಯಾಪಕಿ) ಅಥವಾ ಮೈಕೆಲ್ ವಿಶೆಲ್ (ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ) ಗಿಂತ ಹೆಚ್ಚು ಅಪಾಯಕಾರಿ. ವೆಂಡಿ ಮತ್ತು ಮೈಕಲ್ ಭಾರತದ ಶತಕೊಟ್ಯಾಧಿಪತಿಗಳನ್ನು ತಮ್ಮ ತೆಕ್ಕೆಯೊಳಗೆ ಬೀಳಿಸುವ ಮೊದಲೇ ಕಳಂಕಿತರಾಗಿದ್ದರು ಹಾಗೂ ಅವರ ಪ್ರಭಾವ ಎಡಪಂಥೀಯರಿಗಷ್ಟೇ ಸೀಮಿತವಾಗಿತ್ತು. ಆದರೆ ಪೊಲಾಕ್ ಶ್ರೀಮಂತ ಭಾರತೀಯರ ಮನವೊಲಿಸಿ ತನ್ನ ಭಾರತ ಭಂಜನ ಯೋಜನೆಗೆ ಅವರಿಂದ ದೊಡ್ಡ ಮಟ್ಟದ ಹಣಕಾಸಿನ ಸಹಾಯವನ್ನು  ಪಡೆದುಕೊಳ್ಳುವಷ್ಟು ಪ್ರಬಲನೂ ಚಾಲಾಕಿಯೂ ಆಗಿಬಿಟ್ಟಿದ್ದಾನೆ. ಅಂತಹ ವ್ಯಕ್ತಿ ಪಾಮರ ವಲಯದಲ್ಲಿ ಮಾತ್ರವಲ್ಲದೆ ವಿದ್ವತ್ ವಲಯದಲ್ಲೂ ಪಂಡಿತ ಅನ್ನಿಸಿಕೊಂಡದ್ದು ಹೇಗೆ? ಪಂಚೆ ಉಟ್ಟು, ಶಲ್ಯ ಹೊದೆದು ದೇವಾಲಯ ಪ್ರವೇಶಿಸಿದ ಕೂಡಲೇ ತಾರಕ ಸ್ವರದಲ್ಲಿ ಪುರುಷ ಸೂಕ್ತವನ್ನೋ, ಶಾಂತಿಮಂತ್ರವನ್ನೋ ಹೇಳುವ ಈತನನ್ನು ಹಿಂಬಾಲಕರು ಸಂಸ್ಕೃತದ ಅರಸ ಎಂದೇ ಕರೆದುಬಿಟ್ಟಿದ್ದಾರೆ! ವಿಪರ್ಯಾಸ ಎಂದರೆ ನಮ್ಮಲ್ಲಿನ ಉದ್ಧಾಮ ಪಂಡಿತರೂ ಈತನಿಗೆ ಅಡ್ಡ ಬಿದ್ದಿರುವುದು!

             ಕೊಲಂಬಿಯಾದಲ್ಲಿರುವ ಮಿಷನರಿ ಭಾರತದ ಮಾಧ್ಯಮಲೋಕವನ್ನು ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳಲು ಹಲವು ಉಪಾಯಗಳನ್ನು ಹೂಡಿತ್ತು. ಅಂತಹ ಸಂದರ್ಭದಲ್ಲಿ ಅದಕ್ಕೆ ಆಜ್ಯವಾಗಿ ದೊರಕಿದವನೇ ಈ ಪೊಲ್ಲಾಕ್! ಸಂಸ್ಕೃತ ದ್ವೇಷಿ ಅರುಂಧತಿ ರಾಯ್, ಕಾಂಚಾ ಇಲೈಗಳಿಗಿಂತ ಅವರದ್ದೇ ಸಿದ್ಧಾಂತವನ್ನು ಪ್ರತಿಪಾದಿಸುವ ಅದಕ್ಕಾಗಿ ಸಂಸ್ಕೃತಜ್ಞಾನವನ್ನು ಯಥೇಚ್ಛವಾಗಿ ಬಳಸಿಕೊಂಡು ಇದಮಿತ್ಥಂ ಎಂದು ಇತರರನ್ನು ಬಾಯಿಮುಚ್ಚಿಸುವ ಪೊಲ್ಲಾಕ್ ಎಡಪಂಥೀಯರಿಗೆ ಆಪ್ತನೆನ್ನಿಸಿಕೊಂಡಿದುದರಲ್ಲಿ ಆಶ್ಚರ್ಯವಿಲ್ಲ. "ದಿ ಅಬ್ರಾಡ್ ಇಂಡಿಯಾ" ಎಂಬ ಮ್ಯಾಗಝಿನ್ ಆತನಿಗೆ "ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್ 2013" ಪ್ರಶಸ್ತಿ ಕೊಟ್ಟು ಪಂಡಿತನೆಂದು ಮುಕ್ತಕಂಠದಿಂದ ಹೊಗಳಿದೆ. ಅಂತಹ ಪೊಲ್ಲಾಕ್ ಈಗ ಸಂಸ್ಕೃತವನ್ನು ಸೆಕ್ಯುಲರೈಸ್ ಮಾಡಿ ಮುಖ್ಯವಾಹಿನಿಗೆ ತರುತ್ತೇನೆ ಎಂಬ ಮಾತುಗಳನ್ನಾಡುತ್ತಿದ್ದಾನೆ. ಇನ್ನೊಂದು ಗಾಬರಿಗೊಳಿಸುವ ಸಂಗತಿ ಏನೆಂದರೆ ವಿವಿಧ ಕ್ಷೇತ್ರಗಳ ದಿಗ್ಗಜರಾದ ನಾರಾಯಣ ಮೂರ್ತಿ, ಶಿವ ನದರ್, ಹರ್ಷ ಗೋಯೆಂಕಾ, ಆನಂದ್ ಮಹೀಂದ್ರಾರಂಥವರೂ ಈತನ ಮಾತಿನ ಮೋಡಿಗೊಳಗಾಗಿರುವುದು!

ಶೆಲ್ಡನ್ ಪೊಲ್ಲಾಕ್ ಎಲ್ಲಿ ಎಷ್ಟು ಬೇಕೋ ಅಷ್ಟನ್ನು ಮಾತಾಡಿ ತನ್ನ ಕೆಲಸವನ್ನು ಸಾಧಿಸಿಕೊಳ್ಳುವಲ್ಲಿ ನಿಸ್ಸೀಮ. ಬೆಣ್ಣೆಯಲ್ಲಿ ಕೂದಲೆಳೆದಂತೆ, ಭಾರತದ ಬಗ್ಗೆ ಒಳ್ಳೆಯ ಭಾವನೆ ಹೊಂದಿರುವ ಆದರೆ ಇನ್ನೊಂದರ್ಥದಲ್ಲಿ ಭಾರತದಲ್ಲಿನ ಬಲಪಂಥೀಯತೆಯ ಬಗೆಗೆ ಅಸಮಧಾನ ವ್ಯಕ್ತಪಡಿಸುವ ದ್ವಂದ್ವಾರ್ಥದ ಹೇಳಿಕೆಗಳನ್ನು ಕೊಡುವ ಜಾಣ! ಕಳೆದ ಐವತ್ತು ವರ್ಷಗಳಲ್ಲಿ ಕರ್ಮಭೂಮಿ-ಜನ್ಮಭೂಮಿಗಳು ಕೆಲವು ರಾಜಕೀಯ ಶಕ್ತಿಗಳ ಊರ್ಧ್ವಗತಿಗಷ್ಟೇ ಲಾಭವಾಗಿದೆ ವಿನಹ ಅದನ್ನು ಉಳಿದವರು ಮಾತಾಡದಂತಾಗಿದೆ ಎಂದು ಪರೋಕ್ಷವಾಗಿ ಭಾಜಪಾದ ಕಡೆಗೆ ಬೆರಳು ತೋರಿಸುವ ಪೊಲ್ಲಾಕ್ ನಿಧಾನವಾಗಿ ಬಲಪಂಥೀಯರ ಕಡೆಗೆ ಆರೋಪಕ್ಕೆ ತೊಡಗುತ್ತಾನೆ. ಸಂಸ್ಕೃತದಲ್ಲಿ ವ್ಯವಹರಿಸುತ್ತಲೇ ಸನಾತನ ಸಂಪ್ರದಾಯಗಳನ್ನು ಅಗ್ಗದ ಸರಕುಗಳೆಂದು ವ್ಯಂಗ್ಯವಾಡುತ್ತಾನೆ.  ರಾಮಜನ್ಮಭೂಮಿ ಚಳುವಳಿಯ ಬಗ್ಗೆ ಕಿಡಿಕಾರುತ್ತಾ, ರಾಮಾಯಣದ ಐತಿಹಾಸಿಕತೆಯನ್ನು ಪ್ರಶ್ನಿಸುತ್ತಾ ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ವ್ಯಕ್ತಿಗಳು ಮೂರ್ಖರು ಎಂದು ಜರೆಯುತ್ತಾನೆ ಪೊಲ್ಲಾಕ್. ರಾಮ ಹೋಮರ್, ಇಲಿಯಟ್ ಗಳ ಕಾವ್ಯನಾಯಕರಂತೆ ಒಬ್ಬ ಸಾಮಾನ್ಯ ಮನುಷ್ಯ, ಯೇಸುವಿನಂತೆ ದೇವರಲ್ಲ ಅನ್ನುತ್ತಾನೆ. ಬಾಬರಿ ಮಸೀದಿ ಧ್ವಂಸವಾದುದಕ್ಕೆ ಖೇದ ವ್ಯಕ್ತಪಡಿಸುವ ಪೊಲ್ಲಾಕ್ ಭಾರತದಲ್ಲಿ ಜಾತ್ಯಾತೀತತೆ ಎಷ್ಟು ಅಗತ್ಯ ಎನ್ನುವುದನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ ಅನ್ನುತ್ತಾನೆ. ಸರಸ್ವತಿಯನ್ನು ಮರ್ತ್ಯಪ್ರೇಮಿ ಗ್ರೀಕ್ ದೇವತೆ ಶುಕ್ರಕ್ಕೆ ಹೋಲಿಸುವ ಈತನ ಹುಚ್ಚುತನ ಈತ ಸಂಸ್ಕೃತ ಕಲಿತದ್ದೇ ಸಂಸ್ಕೃತಿಯನ್ನು ವಿರೂಪಗೊಳಿಸಲು ಎನ್ನುವ ಅರಿವು ಮೂಡಿಸುತ್ತದೆ. ತಾನು ಸಂಸ್ಕೃತದ ಬಗ್ಗೆ ಸಂಶೋಧನೆಗಿಳಿಯಲು ಕನಸಲ್ಲಿ ಕಂಡ ಸರಸ್ವತೀ ನದಿ ಕಾರಣವೆಂದೂ ಆಕೆ ತನ್ನನ್ನು ಪ್ರೀತಿಸಲು ಕೇಳಿಕೊಂಡಾಗ ನಾನು ನಿರಾಕರಿಸಿದೆ ಎಂದು ತನ್ನ ಮೂಲ ಚರ್ಚ್ ಮಾನಸಿಕತೆಯನ್ನು ಹೊರಹಾಕುವ ಇಂತಹ ವ್ಯಕ್ತಿ ಶಾರದಾ ಪೀಠಕ್ಕೆ ಅನುಗ್ರಹ ಪಡೆಯಲು ಹೋಗುತ್ತಾನೆ! ಸಂಸ್ಕೃತವನ್ನು ಇತಿಹಾಸದ ಶತ್ರುಗಳಿಂದ ಅಂದರೆ ಸನಾತನತೆಯ ಬಗ್ಗೆ ಒಲವುಳ್ಳ ಹಿಂದೂಗಳಿಂದ ರಕ್ಷಿಸಬೇಕಾಗಿದೆ. ಸಂಸ್ಕೃತವನ್ನು ಧರ್ಮದಿಂದ ಪ್ರತ್ಯೇಕಿಸಿ ಅದರಲ್ಲಿನ ಕ್ರಿಯಾಶೀಲತೆ ಹಾಗೂ ಹೊಸತನವನ್ನು ಜಾತ್ಯಾತೀತವಾಗಿ ಪುನರ್ ನಿರೂಪಿಸಬೇಕು. ಮಂತ್ರಗಳ ಉಚ್ಛಾರಣೆಯಿಂದ ಯಾವುದೇ ಶಕ್ತಿ ಉತ್ಪಾದನೆಯಾಗುವುದಿಲ್ಲ. ಅದೆಲ್ಲಾ ಸುಳ್ಳು. ಶಕ್ತಿ ಇರುವುದು ಜಾತ್ಯಾತೀತ ಕಣ್ಣುಗಳಲ್ಲಷ್ಟೇ ಎನ್ನುತ್ತಾ ತನ್ನ ನೈಜ ಉದ್ದೇಶವನ್ನು ಬಹಿರಂಗಪಡಿಸುತ್ತಾನೆ. ತನ್ನ "ಡೆತ್ ಆಫ್ ಸಂಸ್ಕೃತ" ಪ್ರಬಂಧದಲ್ಲಿ ವಿಹಿಂಪ ಹಾಗೂ ಭಾಜಪಾಗಳು ಭಾರತದ ಇತಿಹಾಸವನ್ನು ವಿರೂಪಗೊಳಿಸುತ್ತಿವೆ. ಒಂದು ವೇಳೆ ಅವರ ವಿಚಾರದಂತೆ ಸಂಸ್ಕೃತ ಭಾರತದಲ್ಲೇ ಹುಟ್ಟಿದ್ದರೆ ಸಿಂಧೂ ನಾಗರೀಕತೆ ಎರಡು ಮಿಲಿಯ ವರ್ಷಗಳಿಗೂ ಹಿಂದೆಯೇ ಇರಬೇಕಿತ್ತು. ಅವರು ಸಂಸ್ಕೃತ ಗ್ರಂಥಗಳಲ್ಲಿ ಬರುವ ಪ್ರಣಯಕಥೆಗಳನ್ನೇ ಇತಿಹಾಸವೆಂಬಂತೆ ಬಿಂಬಿಸುತ್ತಾರೆ. 1999ರಲ್ಲಿ ತಮ್ಮ ಸರಕಾರವಿದ್ದಾಗ ಸಂಸ್ಕೃತ ವರ್ಷವೆಂದು ಘೋಷಣೆ ಮಾಡಿದುದಲ್ಲದೆ ಸಂಸ್ಕೃತ ಕಲಿಕೆಗೂ ಯೋಜನೆ ರೂಪಿಸಿದ್ದರು ಎಂದು ಕಿಡಿಕಾರಿರುವುದು ಆತನ ವಿಕ್ಷಿಪ್ತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದುದಲ್ಲದೆ ನಾರಾಯಣ ಮೂರ್ತಿಗಳಿಂದ ಭಾರತದ ಪುರಾತನ ಶಾಸ್ತ್ರೀಯ ಗ್ರಂಥಗಳ ತರ್ಜುಮೆಗಾಗಿ ಇಪ್ಪತ್ತು ಮಿಲಿಯ ಡಾಲರ್ ಹಣವೂ ಸಿಕ್ಕಿದೆ.

ಇಷ್ಟೇ ಆಗಿದ್ದರೆ ಇದೊಂದು ಕ್ಷುಲ್ಲಕ ವಿಚಾರ ಎಂದು ಬದಿಗೆ ಸರಿಸಬಹುದಿತ್ತು. ಶೃಂಗೇರಿ ಮಠದ ಸಹಕಾರದೊಂದಿಗೆ ಕೊಲಂಬಿಯಾ ಸಂಸ್ಕೃತ ವಿವಿಯಲ್ಲಿ ಹಿಂದೂ ಧರ್ಮ ಸಿಂಹಾಸನ ಸ್ಥಾಪಿಸಲು NY/NJ ಸಮೂಹಗಳಿಂದ 3.5 ಮಿಲಿಯನ್ ಡಾಲರ್ ಹಣ ಪಡೆಯುವ ವಿದ್ವಾಂಸರ ಆಯ್ಕೆ ಮಾಡುವ ಅಧಿಕಾರ ಈತನ ಕೈಯಲ್ಲಿರುವುದು ಚಿಂತೆಗೀಡುಮಾಡಬೇಕಾದ ವಿಚಾರ. ಇದರಿಂದೇನು ಹಾನಿ? ಸಂಸ್ಕೃತದಲ್ಲಿ ಮಾತಾಡಲೂ ಬರದಿದ್ದರೂ, ಸಂಸ್ಕೃತ-ಇಂಗ್ಲೀಷ್ ನಿಘಂಟುಗಳನ್ನು ಜೊತೆಯಿರಿಸಿಕೊಂಡು ಅನುವಾದ ಮಾಡಿ ಯುವ ಸಂಸ್ಕೃತ ವಿದ್ವಾಂಸ ಎಂದು ಕರೆಯಿಸಿಕೊಂಡ ಈತ ಸಾಧಕನಲ್ಲ. ಎಡಪಂಥೀಯ ವಿಚಾರಧಾರೆಯನ್ನು, ಆರ್ಯ ಆಕ್ರಮಣ ಸಿದ್ಧಾಂತವನ್ನು ಪ್ರತಿಪಾದಿಸುವ ಈತ ಸನಾತನ ಧರ್ಮ ವಿರೋಧಿ. ಸಂಸ್ಕೃತವನ್ನು ಜಾತ್ಯಾತೀತವಾಗಿಸುತ್ತೇನೆ ಎಂದು ಹೊರಟಿರುವಾತನನ್ನು ನಂಬೋದು ಹೇಗೆ? ಅಲ್ಲದೆ ಮುಂದಿನ ಕೆಲ ವರ್ಷಗಳಲ್ಲಿ ಸಂಸ್ಕೃತ ವಿದ್ವಾಂಸರೆನಿಸಿಕೊಳ್ಳಬೇಕಾದರೆ ಕೊಲಂಬಿಯಾ ವಿವಿಯಿಂದ ಪ್ರಮಾಣಪತ್ರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಸಂಸ್ಕೃತದಲ್ಲೂ ಫ್ರೇಡಿಯನ್, ಸುಬಾಲ್ಟರ್ನ್, ಮಾರ್ಕ್ಸಿಸಮ್, ಪಾಶ್ಚಿಮಾತ್ಯ ವಿಚಾರಧಾರೆಯನ್ನು ಕಲಿಯಬೇಕಾದ ಪರಿಸ್ಥಿತಿ ಉಂಟಾಗಬಹುದು. ಎಷ್ಟೇ ಪ್ರಕಾಂಡ ಸಂಸ್ಕೃತ ಪಂಡಿತರಾಗಿದ್ದರೂ ಕೊಲಂಬಿಯಾ ವಿವಿಯಿಂದ ಪ್ರಮಾಣವಿರದ ಕಾರಣ ಮಠಾದೀಶರನ್ನು ಕೇಳುವವರೇ ಇಲ್ಲದಂತಾದೀತು. ಇದು ವಿದೇಶದಲ್ಲಿ ಅರಳುತ್ತಿರುವ ಮೊದಲ ಸಂಸ್ಕೃತ ಪೀಠವೆಂದು ಖುಷಿ ಪಡೋಣವೆಂದರೆ ಪೊಲ್ಲಾಕನಂತಹ ನರಿಬುದ್ಧಿಗಳ ಕೈಯಲ್ಲಿ ಆಯ್ಕೆಯ ಅಧಿಕಾರವಿರುವುದರಿಂದ ಸಂಶಯದ ಹುತ್ತವೇ ಮೊಳೆಯುತ್ತಿದೆ. ಪರಂಪರೆಯಂತೆ ಗುರುವನ್ನು ಆರಿಸುವ ಅಧಿಕಾರ ಶೃಂಗೇರಿಯ ಕೈಯಿಂದ ತಪ್ಪಿ ಹೋದೀತು. ಈಗ ಶೃಂಗೇರಿಯಲ್ಲಿರುವ ಸಂಸ್ಕೃತ ಅಧ್ಯಯನದ ಶಕ್ತಿ ಕೇಂದ್ರ ಮುಂದೆ ಕೊಲಂಬಿಯಾ ಕೈ ಸೇರೀತು! ವಿಶ್ವ ಸಂಸ್ಕೃತ ಸಮ್ಮೇಳನಗಳನ್ನು ನಡೆಸುವ, ಅನುವಾದಗಳನ್ನು ನಿಯಂತ್ರಿಸುವ ಅಧಿಕಾರವೆಲ್ಲಾ ಆ ವಿವಿಯ ಪಾಲಾಗಿ ಬುಜೀಗಳ ಸಾಮ್ರಾಜ್ಯ ಮೆರೆದಾಡೀತು. ಹಿಂದೂಗಳಿಂದ ಹಣ ಪಡೆದು ಹಿಂದೂಗಳನ್ನೇ ತಮಗೆ ತಕ್ಕಂತೆ ಕುಣಿಸುವ ಕಾರ್ಯವಾಗಿ ಸಂಸ್ಕೃತವೂ-ಭಾರತವೂ ಮತ್ತೊಮ್ಮೆ ದಾಸ್ಯಕ್ಕೀಡಾದೀತು!

               ಮೊಘಲರ ದುಷ್ಖೃತ್ಯಗಳಿಗೆ ಬಲಿಯಾಗದೆ, ಬ್ರಿಟಿಷರ ಕುಕೃತ್ಯಗಳಿಗೆ ಈಡಾಗದೆ ಇಂದಿಗೂ ಪವಿತ್ರವಾಗಿ ಉಳಿದುಕೊಂಡಿರುವ ಹಿಂದೂ ಧಾರ್ಮಿಕ ಶಕ್ತಿ ಕೇಂದ್ರ ಎಂದರೆ ಶೃಂಗೇರಿ. ಅಂತಹ ಶಕ್ತಿಕೇಂದ್ರವನ್ನು ನಮ್ಮ ಕೈಯಾರೆ ಕಳೆದುಕೊಳ್ಳುತ್ತಿದ್ದೇವೆಯೇ? 1600ರಲ್ಲಿ ರಾಬರ್ಟ್ ಡಿ ನೊಬಿಲಿ, 1700ರಲ್ಲಿ ವಿಲಿಯಂ ಜೋನ್ಸ್, 1800ರಲ್ಲಿ ಮ್ಯಾಕ್ಸ್ ಮುಲ್ಲರ್ ರನ್ನು ನಂಬಿ ಬಲಿಯಾದ ನಾವು ಇತಿಹಾಸವನ್ನು ಮರೆತು ಮತ್ತೆ ದಾಸ್ಯಕ್ಕೆ ತುತ್ತಾಗುತ್ತಿದ್ದೇವೆಯೇ? ಸಂಸ್ಕೃತ ದಾಸ್ಯಕ್ಕೆ ತುತ್ತಾಯಿತೆಂದರೆ ಭಾರತ ಬಲಿಯಾದಂತೆ! ಹಿಂದೂಧರ್ಮ ಕೊನೆಯಾದಂತೆ!

                ಇನ್ನೊಂದು ಮಹತ್ವದ ವಿಚಾರವೆಂದರೆ ಇಂತಹ ಪೀಠದ ಸ್ಥಾಪನೆಗಾಗಿ ಭಾರತೀಯರಿಂದಲೇ ಧನಸಹಾಯ ಪಡೆಯುತ್ತಿರುವುದು. ಇದಕ್ಕಾಗಿ ಧನ ಸಹಾಯ ಮಾಡುವ ವ್ಯಕ್ತಿಗಳಿಗೆ ಮ್ಯಾಕ್ಸ್ ಮುಲ್ಲರ್, ವಿಲಿಯಂ ಜೋನ್ಸ್, ಡಿ ನೋಬಿಲಿ ಅಲ್ಲದೆ ಇತ್ತೀಚೆಗಿನ ಭಾರತ ದ್ವೇಷಿಗಳ ಬಗ್ಗೆ ತಿಳಿದಿರುವುದಿಲ್ಲ. ಇವರ ಬಣ್ಣನೆಯ ಮಾತುಗಳನ್ನು ನಂಬಿ ಅವರು ಹಿಂದೂಧರ್ಮದ ಒಳ್ಳೆಯದಕ್ಕಾಗಿಯೇ ಇದನ್ನೆಲ್ಲಾ ಮಾಡುತ್ತಿದ್ದಾರೆಂದು ಸುಲಭವಾಗಿ ನಂಬಿ ಬಿಡುವ ಧನದಾತರಿಗೆ ಈ ವಿವಿಯೊಳಗೆ ನಡೆವ ಹಿಂದೂ ವಿದ್ರೋಹ ಗಮನಕ್ಕೆ ಬರುವ ಸಂಭವವೇ ಕಡಿಮೆ. ಅಲ್ಲದೆ ಈ ಪಾಖಂಡಿಗಳು ತಮ್ಮ ಕೆಲಸವನ್ನು ಸಾಂಗವಾಗಿ ನೆರವೇರಿಸಲು ಯಾರಾದರೂ ಗುರುಗಳ ಪಾದಕ್ಕೆ ಬೀಳುತ್ತಾರೆ. ಆ ಗುರುಗಳು ಇಂತಹುವುಗಳ ಒಳಹೊಕ್ಕು ನೋಡಲಾರರು. ಯಾರೋ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಆಶೀರ್ವದಿಸುತ್ತಾರೆ. ಒಂದು ವೇಳೆ ಈ ಪೀಠಕ್ಕೆ ಆಯ್ಕೆಯಾಗುವ ಮೊದಲ ವ್ಯಕ್ತಿ ಹಿಂದೂಪರ ಆಗಿದ್ದರೂ ಹಿಂದೂದ್ವೇಷಿಗಳೇ ತುಂಬಿತುಳುಕುತ್ತಿರುವಲ್ಲಿ ಬಹುಕಾಲ ಆ ಪೀಠ ಹಿಂದೂಪರವಾಗಿ ಉಳಿಯುವುದು ಸಂಶಯ. ಇದಕ್ಕೆ ಒಳ್ಳೆಯ್ ಉದಾಹರಣೆ UCLA ಪೀಠ. ನವೀನ್ ದೋಷಿ ಅವರ ಪ್ರಾಯೋಜಕತ್ವದ ಈ ಪೀಠದಿಂದ ಪ್ರೊಫೆಸರ್ ಸರ್ದೇಸಾಯಿ ಎಂಬ ಹಿಂದೂಪರ ಸಜ್ಜನರು ನಿವೃತ್ತರಾಗುತ್ತಿದ್ದಂತೆ ಯಾರನ್ನು ನವೀನ್ ದೋಷಿ "ದೇವರಂತಹ ಮನುಷ್ಯ" ಎಂದು ನಂಬಿದ್ದರೋ ಆ ಪಟಾಲಂ, ದೋಷಿಯವರ ವಿರೋಧದ ನಡುವೆಯೂ ತಾವು ಆಯ್ಕೆ ಮಾಡಿದ ವ್ಯಕ್ತಿಯನ್ನೇ ನೇಮಕಗೊಳಿಸುವಲ್ಲಿ ಸಫಲವಾಯಿತು. ಇಂದು ಆ ಸ್ಥಾನವನ್ನು ಬದ್ಧ ಹಿಂದೂದ್ವೇಷಿಯೊಬ್ಬ ಆಕ್ರಮಿಸಿದ್ದಾನೆ.

                 ಅದಕ್ಕಿಂತಲೂ ಮುಖ್ಯವಾಗಿ ಕ್ರಿಶ್ಚಿಯನ್ ಮಿಷನರಿಗಳಿಗೆ ಹಿಂದೂ ಧರ್ಮದ ವಿಷಯವಾಗಿ ಚರ್ಚೆ ನಡೆಸಲು ಅಧಿಕಾರ ಕೊಟ್ಟಂತಾಗುತ್ತದೆ. ಕೋಲು ಕೊಟ್ಟು ಪೆಟ್ಟು ತಿನ್ನುವ ರೀತಿ! ನಮ್ಮ ಪೌರೋಹಿತ್ಯ ಮಾಡಲು, ನಮ್ಮ ಮಠಗಳಿಗೆ ಮಠಾದೀಶರಾಗಲು ವ್ಯಾಟಿಕನ್ ಹೊರಗುತ್ತಿಗೆ ನೀಡಿದಂತಾಗಬಹುದು. ಕೆಲವು ಅಪದ್ಧಗಳು ಅದಕ್ಕೂ ಸೈ ಅನ್ನಬಹುದು. ಇದು ಭಾರತವನ್ನು ರಕ್ಷಿಸಲು ಪಾಕಿಸ್ತಾನದ ಸೇನೆಗೆ ಹೊರಗುತ್ತಿಗೆ ಕೊಟ್ಟಂತಾದೀತು! ಕಾಶಿಯ ಸ್ಥಾನವನ್ನು ವ್ಯಾಟಿಕನ್ ಆವರಿಸಿಕೊಂಡೀತು. ಈಗಲೇ ವಿದೇಶದಿಂದ ಬಂದಿದ್ದೆಲ್ಲವೂ ಶ್ರೇಷ್ಠ ಎನ್ನುವ ಜನಾಂಗ ಮುಂದೆ ಕೊಲಂಬಿಯ ವಿವಿಯಿಂದ ಸಂಸ್ಕೃತ ಕಲಿತು ಬಂದ ಹಿಂದೂದ್ವೇಷಿಯನ್ನೇ ಉದ್ಧಾಮ ಪಂಡಿತನೆಂದು ಅಲ್ಲಿ ಅಧ್ಯಯನ ಮಾಡುವುದೇ ಶ್ರೇಷ್ಠವೆಂದು ಪರಿಗಣಿಸೀತು! ಸೌದಿಯ ಶೇಕ್ ಒಬ್ಬ ಇಲ್ಲೂ ಒಂದು ಪೀಠ ಮಾಡಿ ಹಣ ಕೊಡುತ್ತೇನೆ ಎಂದರೆ ಈ ಭಾರತ ದ್ವೇಷಿಗಳು ಅಲ್ಲೂ ಪೀಠವೊಂದನ್ನು ಸೃಷ್ಟಿಸಿಯಾರು! ಒಬ್ಬ ವ್ಯಾಪಾರೀ ತನ್ನ ಲಾಭವನ್ನು ಹೂಡಿಕೆಯಿಂದ ಬಯಸುತ್ತಾನೆಯೇ ಹೊರತು ಗ್ರಾಹಕನ ಲಾಭವನ್ನು ಬಯಸುತ್ತಾನೆಯೇ? ಒಟ್ಟಾರೆ ರಾಜೀವ್ ಮಲ್ಹೋತ್ರಾ ಹೇಳುವಂತೆ ಹಿಂದೂ ಧರ್ಮಕ್ಕೆ ಸಹಾಯ ಮಾಡುವ ನೆಪದಲ್ಲಿ ಸನಾತನತೆಯನ್ನೇ ಕಿತ್ತೊಗೆವ ಈ ಪ್ರಯತ್ನದ ವಿರುದ್ಧ ದನಿಯೆತ್ತದಿದ್ದರೆ ಸಂಸ್ಕೃತವೂ ದಾಸ್ಯಕ್ಕೆ ತುತ್ತಾದೀತು. ತನ್ಮೂಲಕ ಇಡೀ ಭಾರತವೂ!

ಮಾನವದ್ವೇಷಿಗಳ ಮೇಲೆ ಬುದ್ದಿಜೀವಿಗಳಿಗೇಕೆ ಪ್ರೀತಿ?

ಮಾನವದ್ವೇಷಿಗಳ ಮೇಲೆ ಬುದ್ದಿಜೀವಿಗಳಿಗೇಕೆ ಪ್ರೀತಿ?

             ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಹೊರಟ ಅರಸನಿಗೆ ಅಚ್ಚರಿ ಕಾದಿತ್ತು. ರಾಜಮಹಲಿನಿಂದ ಮಸೀದಿಯವರೆಗಿನ ರಾಜಮಾರ್ಗದ ಉದ್ದಕ್ಕೂ ಕಿಕ್ಕಿರಿದು ನೆರೆದಿತ್ತು ಜನತೆ. ತಮಗೆ ನ್ಯಾಯ ಕೊಡೆಂದು ಆರ್ತರಾಗಿ ಅರಿಕೆ ಮಾಡಿಕೊಳ್ಳುತ್ತಿದ್ದರು ಜನ. ಆ ಜನಸಂದಣಿಯನ್ನು ದಾಟಿ ಮುಂದೆ ಹೋಗಲು ಚಕ್ರವರ್ತಿಗೆ ಸಾಧ್ಯವಾಗಲಿಲ್ಲ. ಪ್ರಾರ್ಥನೆಯ ವೇಳೆ ಮೀರುತ್ತಿತ್ತು. ಕ್ಷಣ ಆಲೋಚಿಸಿದಾಗ ತಟಕ್ಕನೆ ದಯಾಮಯನಾದ ಆ ಮಹಾಪ್ರಭುವಿಗೆ ಅದ್ಭುತವಾದ ದಾರಿಯೊಂದು ಕಂಡಿತು. ಕೂಡಲೇ ಗಜಶಾಲೆಯಲ್ಲಿದ್ದ ಆನೆಯನ್ನು ಅಲ್ಲಿಗೆ ತರಿಸಿ ಜನರ ಮೇಲೆ ಬಿಡಲು ಆಜ್ಞಾಪಿಸಿದ. ಅಮಾಯಕರ ಮೇಲೆ ಕರಿಗಳು ಅರಿಭಯಂಕರವಾಗಿ ನುಗ್ಗಿದವು. ಕ್ಷಣಮಾತ್ರದಲ್ಲಿ ಮಾರ್ಗದುದ್ದಕ್ಕೂ ಹೆಣಗಳ ಸಾಲು! ಆದರೇನು ರಾಜಮಾರ್ಗ ತೆರೆದಿತ್ತು. ರಾಜ ಠೀವಿಯಿಂದ ದೇವರ ಪ್ರಾರ್ಥನೆಗೆ ಮಸೀದಿಯತ್ತ ಹೊರಟ!

                          ಮೇಲಿನ ಘಟನೆ ಬರೆದವರ್ಯಾರೂ ಭಜರಂಗಿಗಳಲ್ಲ, ನರೇಂದ್ರ ಮೋದಿಗೆ ನಮೋ ಎಂದವರೂ ಅಲ್ಲ. ಯಾವ ಮತಾಂಧನ ಹೆಸರನ್ನು ತೆಗೆದು ಈ ದೇಶದ ಕ್ಷಿಪಣಿತಜ್ಞನ ಹೆಸರನ್ನು ರಸ್ತೆಯೊಂದಕ್ಕಿಡಲಾಯಿತೋ ಅಂತಹ ಮತಾಂಧನ ಸಮಕಾಲೀನ ಕಾಫಿಖಾನನ "Muntakhabu-l Lukab" ಪುಸ್ತಕದ ತುಣುಕು ಇದು. ಹೌದು... ಔರಂಗಜೇಬನ ಬಗ್ಗೆ ಕಿಂಚಿತ್ ಮಾಹಿತಿ ಇದ್ದವರಿಗೂ ಇದರಲ್ಲೇನೂ ಆಶ್ಚರ್ಯ ಕಾಣಿಸಲಿಕ್ಕಿಲ್ಲ. ಯಾಕೆಂದರೆ ಆತನೊಬ್ಬ ಮಾನವ ದ್ವೇಷಿ. ಹಿಂಸಿಸುವುದರಲ್ಲಿ ಆತನಿಗೆ ತನ್ನವರು, ಪರರು ಎಂಬ ಭೇದಭಾವವೇ ಇರಲಿಲ್ಲ. ತನ್ನ ಭಯದಿಂದ ಆಗ್ರಾ ಕೋಟೆಯಲ್ಲಿ ಭದ್ರವಾಗಿ ಬಾಗಿಲು ಮುಚ್ಚಿ ಕುಳಿತಿದ್ದ ಮುದಿ ತಂದೆ ಷಾಜಹಾನನನ್ನು ಮಣಿಸಲು ನೀರು ಸರಬರಾಜನ್ನೇ ನಿಲ್ಲಿಸಿ ಅವನು ತೃಷೆಯಿಂದ ಬಳಲಿ ವಿಲವಿಲ ಒದ್ದಾಡುವಂತೆ ಮಾಡಿದ ಸುಪುತ್ರ ಅವನು. ತಂದೆಗೆ ಪ್ರೀತಿಪಾತ್ರನಾಗಿದ್ದ ತನ್ನ ಅಣ್ಣನ ತಲೆಯನ್ನು ಕತ್ತರಿಸಿ ಬಂಗಾರದ ಹರಿವಾಣದಲ್ಲಿಟ್ಟು ತನ್ನಪ್ಪನಿಗೆ ಉಡುಗೊರೆ ಕಳುಹಿಸಿದ ಮಹಾಪಾಪಿ ಔರಂಗಜೇಬ್!

                    ಸಿಂಹಾಸನಕ್ಕಾಗಿ ಸಹೋದರರನ್ನೆಲ್ಲಾ ಸಂಹರಿಸಿದಂತೆಯೇ ರಾಜ್ಯ ದೊರೆತ ಮೇಲೆ ಕಟ್ಟಿಕೊಂಡವರನ್ನು-ಇಟ್ಟುಕೊಂಡವರನ್ನು-ಸ್ವಂತಮಕ್ಕಳನ್ನೂ ದಾರುಣವಾಗಿ ಹಿಂಸಿಸಿದ. ವಾರಸಿಕೆಗಾಗಿ ನಡೆದ ಯುದ್ಧದಲ್ಲಿ ತನಗೆ ತಂದೆ ಒಪ್ಪಿಸಿದ ಪ್ರತೀ ಕೆಲಸವನ್ನೂ ಕಮಕ್ ಕಿಮಕ್ ಎನ್ನದೆ ಮಾಡಿದ ಹಿರಿಯ ಪುತ್ರ ಮಹಮ್ಮದ್ ಸುಲ್ತಾನ್ ತಂದೆಯ ಕುಕೃತ್ಯಗಳಿಂದ ಬೇಸತ್ತು ಚಿಕ್ಕಪ್ಪನ ಪಕ್ಷ ಸೇರಿದ. ಚಿಕ್ಕಪ್ಪ ಸತ್ತ ಮೇಲೆ ಹಿಂದಿರುಗಿ ಕ್ಷಮೆ ಕೇಳಿದರೂ ಲಕ್ಷಿಸದೆ ಆತನನ್ನು ಸೆರೆಯಲ್ಲಿಟ್ಟ. ಎರಡನೆಯ ಮಗ ಗೋಲ್ಕೊಂಡಾ ಸುಲ್ತಾನನೊಂದಿಗೆ ಸೇರಿಕೊಂಡನೆಂಬ ಅನುಮಾನ ಮಾತ್ರದಿಂದಲೇ ಎಂಟು ವರ್ಷಗಳ ಕಾಲ ಕಾರಾಗೃಹಕ್ಕೆ ತಳ್ಳಿದ. ಮೂರನೆಯ ಮಗ ತನ್ನ ಸಿಂಹಾಸನವನ್ನು ತುಳಿದನೆಂಬ ಕಾರಣವೊಡ್ಡಿ ಅವನನ್ನು ದೇಶದಿಂದ ಹೊರಗಟ್ಟಿದ. ನಾಲ್ಕನೆಯ ಮಗ ಅಪ್ಪನ ಮತೀಯ ಹುಚ್ಚನ್ನು ತಾಳಲಾರದೆ ಬಂಡಾಯವೆದ್ದು ಪರ್ಷಿಯಾಕ್ಕೆ ಓಡಿ ಹೋದ. ಮಕ್ಕಳು ತಿರುಗಿಬಿದ್ದರೆಂದು ಪತ್ನಿ ನವಾಬ್ ಬಾಯಿಯನ್ನು, ಕಾವ್ಯ-ಸಂಗೀತದಲ್ಲಿ ಪ್ರಾವೀಣ್ಯತೆ ಸಾಧಿಸಿದ ತಪ್ಪಿಗೆ ಮಗಳು ಜೇಬುನ್ನೀಸಾಳನ್ನು ಸಾಯುವವರೆಗೆ ಸೆರೆಯಲ್ಲಿರಿಸಿದ. ತನ್ನ ಶಿಷ್ಯ ಚಕ್ರವರ್ತಿಯಾದ ಸುದ್ದಿ ಕೇಳಿ, ಗುರುದಕ್ಷಿಣೆಯಾಗಿ ತನಗೇನಾದರೂ ಜಹಗೀರನ್ನು ಕೊಟ್ಟೇ ಕೊಡುವನೆಂದು ಆಡುತ್ತಾ ಹಾಡುತ್ತಾ ಬಂದ ತನ್ನ ಗುರುವರ್ಯನನ್ನೇ ಉಪೇಕ್ಷಿಸಿ, ಮೂರು ತಿಂಗಳ ಬಳಿಕ ಕರೆಸಿ, ಬಾಯಿಗೆ ಬಂದಂತೆ ಉಗಿದು, ಭರ್ಜರಿಯಾಗಿ ಗುರುಪೂಜೆ ಮಾಡಿ ಕಳುಹಿಸಿದ ಶಿಷ್ಯರತ್ನ ಅವನು!

                      ಔರಂಗಜೇಬನ ಆಡಳಿತದಲ್ಲಿ ಕಾಫಿರರ ಬೇಟೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಸಹಸ್ರಾರು ದೇವಾಲಯಗಳು, ಶಾಲೆಗಳು ನಾಶವಾದವು. ಇದಕ್ಕೆ ಇಂದಿಗೂ ವಿರೂಪಗೊಂಡು ನಿಂತಿರುವ ಕಾಶಿಯ ವಿಶ್ವನಾಥ, ಮಥುರೆಯ ವಾಸುದೇವರೇ ಸಾಕ್ಷಿ! ದೇವಾಲಯದಿಂದ ಬಂಡಿಗಳಲ್ಲಿ ಹೇರಿಕೊಂಡು ಬಂದ ವಿಗ್ರಹಗಳನ್ನು ತನ್ನ ಪತ್ನಿ ಹೋಗುವ ಮಸೀದಿಗೆ ಮೆಟ್ಟಿಲುಗಳನ್ನಾಗಿ ಹಾಕಿದವ ಯಾವ ಕೋನದಿಂದ ಪರಮತ ಸಹಿಷ್ಣುವಾಗಿ ಕಂಡನೋ ದೇವರೇ ಬಲ್ಲ! ವಾರಣಸಿಯ ಶಾಲೆಗಳ ಧ್ವಂಸವನ್ನು, ಕಾಶಿಯ ದೇವಾಲಯವನ್ನು ನಾಶ ಮಾಡಿ ಅದರದ್ದೇ ಸ್ಥಂಭಗಳನ್ನುಪಯೋಗಿಸಿ ಮಸೀದಿ ನಿರ್ಮಿಸಿದುದನ್ನು, ಸೋಮನಾಥದಲ್ಲಿ ಮತ್ತೆ ತಲೆ ಎತ್ತಿ ನಿಂತಿದ್ದ ದೇಗುಲವನ್ನು ಧ್ವಂಸಗೊಳಿಸುದುದನ್ನು, ಮಥುರೆಯನ್ನು ಮಲಿನಗೊಳಿಸಿದ ಔರಂಗಜೇಬನ "ಪರಾಕ್ರಮ"ವನ್ನು, ತನ್ನ ಆಳ್ವಿಕೆಯ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಜೋಧ್ ಪುರದಲ್ಲಿದ್ದ ದೇವಾಲಯಗಳನ್ನು ನೆಲಸಮ ಮಾಡಿ ಅಲ್ಲಿಂದ ಮಣ ಭಾರದ ವಿಗ್ರಹಗಳನ್ನೂ, ಆಭರಣಗಳನ್ನು ಅನೇಕ ಬಂಡಿಗಳಲ್ಲಿ ಹೇರಿಕೊಂಡು ಬಂದ ಖಾನ್ ಬಹಾದ್ದೂರ್ ಜಹಾನನಿಗೆ ಔರಂಗಜೇಬನಿಂದ ದೊರೆತ ರಾಜಮರ್ಯಾದೆಯನ್ನು ಔರಂಗಜೇಬನ ಆಸ್ಥಾನದಲ್ಲಿ ನಲವತ್ತು ವರ್ಷಗಳ ಕಾಲವಿದ್ದು ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡು ತನ್ನ "ಮಾ-ಅಸಿರ್-ಐ ಆಲಾಂಗಿರಿ" ಯಲ್ಲಿ ಪರ್ಷಿಯನ್ ಲೇಖಕ ಮುಹಮ್ಮದ್ ಸಾಕಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಉದಯಪುರದ ಬಳಿ 123, ಚಿತ್ತೋಡಿನಲ್ಲಿ 63, ತನ್ನ ಮಿತ್ರರಾಜ್ಯವಾಗಿದ್ದ ಅಂಬೇರಿನಲ್ಲಿ 66 ದೇವಾಲಯಗಳನ್ನು ಒಂದೇ ವರ್ಷದಲ್ಲಿ ನಿರ್ನಾಮ ಮಾಡಿದ ಈ "ಜಿಂದಾಪೀರ್"! ಇಂತಹ ಸರ್ವನಾಶ ಅವನ ಐವತ್ತು ವರ್ಷಗಳ ಆಳ್ವಿಕೆಯಲ್ಲಿ ಎಷ್ಟು ನಡೆದಿರಬಹುದು ಊಹಿಸಿ!

                ಗುರು ತೇಜ್ ಬಹಾದುರರ ಶಿಷ್ಯರಾದ ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ದೇಹವನ್ನು ಛಿದ್ರಗೊಳಿಸಿದ. ಇನ್ನಿಬ್ಬರನ್ನು ಕುದಿಯುವ ನೀರಿಗೂ, ಉರಿಯುವ ಬೆಂಕಿಗೂ ಎತ್ತಿ ಒಗೆದ. ಹಾಡುಹಗಲೇ ತೇಜ್ ಬಹಾದೂರರ ತಲೆಯನ್ನು ಕತ್ತರಿಸಿ ಚೆಲ್ಲಿದ. ಮರಾಠ ವೀರ ಸಂಭಾಜಿಯ ಕಣ್ಣುಗಳನ್ನು ತಿವಿದು, ನಾಲಿಗೆ ಕತ್ತರಿಸಿ, ಶರೀರದ ಅಂಗಾಂಗಗಳನ್ನು ಒಂದೊಂದಾಗಿ ಕತ್ತರಿಸಿ ಆ ಮಾಂಸವನ್ನು ನಾಯಿಗಳಿಗೆ ಹಾಕಿ ಚಿತ್ರಹಿಂಸೆ ಕೊಟ್ಟು ಕೊಂದ. ಅವನ ರುಂಡದಲ್ಲಿ ಹುಲ್ಲುತುಂಬಿ ಡೋಲು ಬಾರಿಸುತ್ತಾ ಕಹಳೆ ಊದುತ್ತಾ ದಖ್ಖನಿನ ಮುಖ್ಯ ಪಟ್ಟಣಗಳಲ್ಲಿ ಪ್ರದರ್ಶಿಸಲು ಏರ್ಪಾಟು ಮಾಡಿದ. ಗೋಲ್ಕೊಂಡಾದ ಮಂತ್ರಿಗಳಾಗಿದ್ದ ಅಕ್ಕಣ್ಣ-ಮಾದಣ್ಣರನ್ನು ಕೊಲ್ಲಿಸಿ ಅವರ ತಲೆಗಳನ್ನು ತನಗೆ ತೃಪ್ತಿಯಾಗುವಷ್ಟು ಆನೆಗಳ ಕಾಲುಗಳ ಕೆಳಗೆ ಹಾಕಿ ನುಜ್ಜುಗುಜ್ಜು ಮಾಡಿಸಿದ.

                 ಅತ್ತ ತನ್ನದೇ ಮತದ ಷಿಯಾಗಳನ್ನೂ ಬಿಡಲಿಲ್ಲ. ಸೂಫಿಗಳನ್ನು, ಫಕೀರರನ್ನೂ ಬೇಟೆಯಾಡಿದ ಈ ಸೆಕ್ಯುಲರ್. ಮುಸ್ಲಿಮರೊಳಗೆ ಜಾತಿ ಇಲ್ಲ ಎನ್ನುವ ಮೂರ್ಖರಿಗೆ ಇದು ಹೇಗೆ ಕಾಣಲಿಲ್ಲವೋ? ಮೊಗಲ್ ದರ್ಬಾರಿನಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದ ರಜಪೂತರನ್ನು, ಉದಾರ ಸ್ವಭಾವದ ಮುಸ್ಲಿಂ ಪ್ರಮುಖರನ್ನು ನೀರಿಲ್ಲದ ಸ್ಥಳಗಳಲ್ಲಿ ಹಾಕಿ ತನ್ನ ಆಸ್ಥಾನವನ್ನು ಸುನ್ನಿ ಉಲೇಮಾಗಳಿಂದ ತುಂಬಿಸಿಬಿಟ್ಟ. ಸರ್ಕಾರೀ ಕೆಲಸಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಸುನ್ನಿಗಳನ್ನು ನೇಮಿಸಬೇಕೆಂದು ಪ್ರಾಂತೀಯ ಗವರ್ನರುಗಳಿಗೆ ಫರ್ಮಾನು ಹೊರಡಿಸಿದ. ಹಿಂದೂಗಳ ಮೇಲೆ ಸರಕು-ಸಾಗಾಟ ತೆರಿಗೆಯನ್ನು ಹೆಚ್ಚಿಸಿದ. ದರಬಾರಿನಲ್ಲಿ ಕಲೆ, ಸಂಗೀತಗಳನ್ನು ನಿಷೇಧಿಸಿದ. ಕವಿ, ಪಂಡಿತ, ಗಾಯಕ, ನೃತ್ಯಪಟುಗಳನ್ನು ಒದ್ದೋಡಿಸಿದ. ಕಾಲಗಣನೆಯ ಪದ್ದತಿಯನ್ನು ಸೌರಮಾನದಿಂದ ಚಾಂದ್ರಮಾನಕ್ಕೆ ಬದಲಾಯಿಸಿದ. ರಾಜಲಾಂಛನ, ವೇಷಭೂಷಣ,ಆಭಿವಂದನೆ-ಅಭಿನಂದನೆಯ ಶೈಲಿ ಹೀಗೆ ಎಲ್ಲಾ ರೀತಿ-ರಿವಾಜುಗಳನ್ನು ಮಾರ್ಪಡಿಸಿದ. 1679ರ ಏಪ್ರಿಲ್ 2ರಂದು ಕಾಫಿರರ ದೇಶವನ್ನು ಪವಿತ್ರಗೊಳಿಸುವ ಸಲುವಾಗಿ ಹಿಂದೂಗಳ ಮೇಲೆ ಬಹಿರಂಗ ಜಿಹಾದ್ ಘೋಷಿಸಿದ. ಜಿಜಿಯಾ ತಲೆಗಂದಾಯ ಹಿಂದೂವಾಗಿ ಉಳಿದುದಕ್ಕೆ ಔರಂಗಜೇಬನಿಗೆ ಅವನು ಒಪ್ಪಿಸಬೇಕಾಗಿದ್ದ ವಿಶೇಷ ಮುಡಿಪು!(ಈಗಿನ ನಮ್ಮ ಸೆಕ್ಯುಲರ್ ಸರಕಾರಗಳು ಮಾಡುತ್ತಿರುವುದೂ ಇದನ್ನೇ!). ತನ್ನ ಅಧಿಕಾರ-ಸಂಪತ್ತು-ಸೈನಿಕ ಬಲ ಎಲ್ಲವನ್ನೂ ಹಿಂದೂಗಳನ್ನು ಪರಿಪರಿಯಾಗಿ ಪೀಡಿಸಿ ಅವರು ಇಸ್ಲಾಂ ಸ್ವೀಕರಿಸದೆ ಬೇರೆ ವಿಧಿಯೇ ಇಲ್ಲವೆನ್ನುವ ಪರಿಸ್ಥಿತಿ ಸೃಷ್ಟಿಸಲು ಧಾರಾಳವಾಗಿ ಬಳಸಿಕೊಂಡ.

                    ಆ ಕಾಲಕ್ಕೆ ಇಡೀ ಪ್ರಪಂಚದಲ್ಲೇ ಬಲಿಷ್ಟವಾಗಿದ್ದ ಸಾಮ್ರಾಜ್ಯವೊಂದರ ಚಕ್ರವರ್ತಿಯಾಗಿ ಭರ್ತಿ ಅರ್ಧಶತಮಾನಗಳ ಕಾಲ ಆಳಿದಾತನಿಗೆ ಪ್ರಜೆಗಳೊಂದಿಗೆ ಹೇಗೆ ವರ್ತಿಸಬೇಕೆನ್ನುವ ಮೂಲಪಾಠವೇ ತಿಳಿಯಲಿಲ್ಲ. ಮತದ ಹೆಸರಲ್ಲಿ ಮಿತಿಮೀರಿದ ದಬ್ಬಾಳಿಕೆ ನಡೆಸಿ ಗುಡಿಗೋಪುರ, ಶಾಲೆಗಳನ್ನೂ ಧ್ವಂಸಮಾಡಿ, ಪ್ರಜೆಗಳನ್ನು ಸದಾ ಅನ್ಯಾಯಕ್ಕೀಡುಮಾಡಿ, ಎಲ್ಲರ ವಿಶ್ವಾಸ ಕಳೆದುಕೊಂಡು ಯಾರನ್ನೂ ನಂಬದೆ, ತನ್ನ ನೆರಳನ್ನು ನೋಡಿಯೇ ಬೆದರಿ ಬಿದ್ದು, ನಿರಂತರ ದಂಗೆಗಳನ್ನೆದುರಿಸುತ್ತಾ ನಿಕೃಷ್ಟ ಜೀವನ ನಡೆಸಿದವನ ಹೆಸರನ್ನು ರಸ್ತೆಗಿಟ್ಟವರ ಮೌಢ್ಯಕ್ಕೆ ಏನನ್ನಬೇಕು? ಇಂತಹ ಕ್ರೂರಿಯ ಆಸ್ಥಾನದಲ್ಲಿದ್ದುಕೊಂಡೇ ಸ್ವಲ್ಪವೂ ಹೆದರದೆ ಆತನ ಪರಮತ ದ್ವೇಷವನ್ನೂ, ಸ್ವಮತ ಪಕ್ಷಪಾತವನ್ನೂ, ಅನ್ಯಾಯದ ತೆರಿಗೆ-ಕಾನೂನು-ಕಟ್ಟಳೆಗಳನ್ನು ಪ್ರಾಮಾಣಿಕವಾಗಿ ಬರೆದಿಟ್ಟಿರುವಾಗ ಈ ಆಧುನಿಕ ಕಾಲದ ಎಡಬಿಡಂಗಿಗಳು ಚರಿತ್ರೆಯನ್ನು ತಮಗೆ ಬೇಕಾದಂತೆ ತಿರುಚಿ ಮತಾಂಧನೊಬ್ಬನನ್ನು ಪರಮ ಸಾಧುವಿನಂತೆ, ಪ್ರಜೆಗಳೆಲ್ಲರನ್ನೂ ಸಮದೃಷ್ಟಿಯಿಂದ ನೋಡಿದ ಮಹಾನ್ ಜಾತ್ಯಾತೀತನಂತೆ ಚಿತ್ರಿಸಿದ ಕಾರಣವಾದರೂ ಏನು? ತನಗೆ ಕಂಡ ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಹಿಂಸಿಸಿ ತನ್ನಿಂದ ಯಾರಿಗೂ ಉಪಕಾರವಾಗದಂತೆ ಬದುಕಿ ಸತ್ತವನೊಬ್ಬ ಕೆಲವರಿಗೆ ಆದರ್ಶವಾಗುತ್ತಾನೆಂದರೆ ಅವರು ಆತನ ಸಂತಾನದವರೇ ಇರಬೇಕು!