ಪುಟಗಳು

ಗುರುವಾರ, ಸೆಪ್ಟೆಂಬರ್ 3, 2015

ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ-ಧರ್ಮ ನಶಿಸಿದಂತೆ!

ಸಂಸ್ಕೃತ ದಾಸ್ಯಕ್ಕೀಡಾದರೆ ಭಾರತವೇ ದಾಸ್ಯಕ್ಕೀಡಾದಂತೆ!ಧರ್ಮ ನಶಿಸಿದಂತೆ!        

                 ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ವಿಲಿಯಂ ಜೋನ್ಸ್ ನೆನಪಿರಬಹುದು. ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ಭಾರತ ಶಾಸ್ತ್ರಜ್ಞ ಎನಿಸಿಕೊಂಡಾತ. ತಕ್ಕಮಟ್ಟಿಗೆ ಭಾರತದ ನೈಜ ಇತಿಹಾಸವನ್ನು ಬರೆದ ಈತ ಸರಿಯಾದ ಆಕರಗಳನ್ನೇ ಭಾರತದ ಇತಿಹಾಸದ ರಚನೆಗೆ ತೆಗೆದುಕೊಂಡರೂ ಬರೆಯುವಾಗ ಕ್ರೈಸ್ತಮತಕ್ಕೆ ಪೂರಕವಾಗಿ, ಓದುವವನಿಗೆ ಗೊಂದಲ ಮೂಡುವಂತೆ ಬರೆದ. ಸಂಸ್ಕೃತ ಕಲಿತಿದ್ದ ಈತನನ್ನು ನಮ್ಮವರು ಪಂಡಿತನೆಂದು ಕರೆದರು. ಆದರೆ ಆತ ಮಾಡಿದ್ದೇನು? ಸಂಸ್ಕೃತ ಮತ್ತು ಯುರೋಪಿಯನ್ ಭಾಷೆಗಳ ನಡುವಿನ ಸಂಬಂಧವನ್ನು ವಿವರಿಸಲೋಸುಗ ಬೇಬೆಲ್ ಗೋಪುರದ ಕತೆ ಕಟ್ಟಿದ. ಹಿಂದೂ ಪೌರಾಣಿಕ ಕತೆಗಳು ಹಾಗೂ ಶಾಸ್ತ್ರಗ್ರಂಥಗಳು ಕ್ರಿಶ್ಚಿಯನ್ ಸತ್ಯದ ವಿಕೃತ ರೂಪಗಳೆಂದು ವರ್ಗೀಕರಿಸಿದ. ಭಾರತದ ಮೂಲ ಸಮುದಾಯ ನೋವಾನ ಜಲಪ್ರಳಯದ ನಂತರ ಭಾರತಕ್ಕೆ ಓಡಿ ಬಂದ ಹ್ಯಾಮನ ವಂಶಜರೆಂದು ವರ್ಣಿಸಿದ. ಇದರ ಆಧಾರದ ಮೇಲೆ ಭಾರತೀಯ ಸಮುದಾಯದ ಜನಾಂಗೀಯ ಅರ್ಥವಿವರಣೆಗಳೂ ಆಮೇಲೆ ರಚಿಸಿಲ್ಪಟ್ಟವು. ಇಷ್ಟೆಲ್ಲಾ ತಿಳಿದ ಮೇಲೂ ನಮ್ಮವರ ಭೋಳೇ ಸ್ವಭಾವವೇನು ಕಡಿಮೆಯಾಯಿತೇ? ವಿದೇಶೀ ಅಸಭ್ಯತೆಯ ಅನುಕರಣೆ ಒಂದು ಕಡೆಯಾದರೆ ವಿದೇಶೀಯನೊಬ್ಬ ಸ್ವಲ್ಪ ಸಂಸ್ಕೃತ ಮಾತಾಡಿದರೂ ಆತನನ್ನು ಉದ್ಧಾಮ ಪಂಡಿತನೆಂದು ಕರೆದು ಆತನ ಪಾದಕ್ಕೆರಗುವ ವರ್ಗ ಇಂದಿಗೂ ಇದೆ. ಭಾರತೀಯರ ಈ ಭೋಳೇ ಸ್ವಭಾವವನ್ನು ಉಪಯೋಗಿಸಿಕೊಂಡು ಚರ್ಚಿನ ಹಿತಕಾಯುತ್ತಿರುವ ಇವತ್ತಿನ ವ್ಯಕ್ತಿಯೇ ಶೆಲ್ಡನ್ ಪೊಲ್ಲಾಕ್!

ಯಾರು ಈ ಶೆಲ್ಡನ್ ಪೊಲಾಕ್?

              ಹಿಂದೂ ಧರ್ಮದ ಬಗ್ಗೆ ಆಳ ಅಧ್ಯಯನ ಮಾಡಿರುವ, ಇನ್ಫಿನಿಟಿ ಫೌಂಡೇಶನ್ ಮುಖಾಂತರ ಹಿಂದೂ ಧರ್ಮ ಅಧ್ಯಯನಕ್ಕಾಗಿ ಶೈಕ್ಷಣಿಕ - ಸಾಮಾಜಿಕ ಚಟುವಟಿಕೆ ನಡೆಸುತ್ತಿರುವ  ರಾಜೀವ್ ಮಲ್ಹೋತ್ರಾ ಶೆಲ್ಡನ್ ಪೊಲಾಕ್  ಬಗ್ಗೆ ಹೇಳುವುದು ಹೀಗೆ: ಆತ ವೆಂಡಿ ಡೋನಿಗೆರ್ (ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಮತ-ಧರ್ಮಗಳ ಇತಿಹಾಸದ ಪ್ರಾಧ್ಯಾಪಕಿ) ಅಥವಾ ಮೈಕೆಲ್ ವಿಶೆಲ್ (ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ) ಗಿಂತ ಹೆಚ್ಚು ಅಪಾಯಕಾರಿ. ವೆಂಡಿ ಮತ್ತು ಮೈಕಲ್ ಭಾರತದ ಶತಕೊಟ್ಯಾಧಿಪತಿಗಳನ್ನು ತಮ್ಮ ತೆಕ್ಕೆಯೊಳಗೆ ಬೀಳಿಸುವ ಮೊದಲೇ ಕಳಂಕಿತರಾಗಿದ್ದರು ಹಾಗೂ ಅವರ ಪ್ರಭಾವ ಎಡಪಂಥೀಯರಿಗಷ್ಟೇ ಸೀಮಿತವಾಗಿತ್ತು. ಆದರೆ ಪೊಲಾಕ್ ಶ್ರೀಮಂತ ಭಾರತೀಯರ ಮನವೊಲಿಸಿ ತನ್ನ ಭಾರತ ಭಂಜನ ಯೋಜನೆಗೆ ಅವರಿಂದ ದೊಡ್ಡ ಮಟ್ಟದ ಹಣಕಾಸಿನ ಸಹಾಯವನ್ನು  ಪಡೆದುಕೊಳ್ಳುವಷ್ಟು ಪ್ರಬಲನೂ ಚಾಲಾಕಿಯೂ ಆಗಿಬಿಟ್ಟಿದ್ದಾನೆ. ಅಂತಹ ವ್ಯಕ್ತಿ ಪಾಮರ ವಲಯದಲ್ಲಿ ಮಾತ್ರವಲ್ಲದೆ ವಿದ್ವತ್ ವಲಯದಲ್ಲೂ ಪಂಡಿತ ಅನ್ನಿಸಿಕೊಂಡದ್ದು ಹೇಗೆ? ಪಂಚೆ ಉಟ್ಟು, ಶಲ್ಯ ಹೊದೆದು ದೇವಾಲಯ ಪ್ರವೇಶಿಸಿದ ಕೂಡಲೇ ತಾರಕ ಸ್ವರದಲ್ಲಿ ಪುರುಷ ಸೂಕ್ತವನ್ನೋ, ಶಾಂತಿಮಂತ್ರವನ್ನೋ ಹೇಳುವ ಈತನನ್ನು ಹಿಂಬಾಲಕರು ಸಂಸ್ಕೃತದ ಅರಸ ಎಂದೇ ಕರೆದುಬಿಟ್ಟಿದ್ದಾರೆ! ವಿಪರ್ಯಾಸ ಎಂದರೆ ನಮ್ಮಲ್ಲಿನ ಉದ್ಧಾಮ ಪಂಡಿತರೂ ಈತನಿಗೆ ಅಡ್ಡ ಬಿದ್ದಿರುವುದು!

             ಕೊಲಂಬಿಯಾದಲ್ಲಿರುವ ಮಿಷನರಿ ಭಾರತದ ಮಾಧ್ಯಮಲೋಕವನ್ನು ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಉದ್ದೇಶಕ್ಕೆ ಬಳಸಿಕೊಳ್ಳಲು ಹಲವು ಉಪಾಯಗಳನ್ನು ಹೂಡಿತ್ತು. ಅಂತಹ ಸಂದರ್ಭದಲ್ಲಿ ಅದಕ್ಕೆ ಆಜ್ಯವಾಗಿ ದೊರಕಿದವನೇ ಈ ಪೊಲ್ಲಾಕ್! ಸಂಸ್ಕೃತ ದ್ವೇಷಿ ಅರುಂಧತಿ ರಾಯ್, ಕಾಂಚಾ ಇಲೈಗಳಿಗಿಂತ ಅವರದ್ದೇ ಸಿದ್ಧಾಂತವನ್ನು ಪ್ರತಿಪಾದಿಸುವ ಅದಕ್ಕಾಗಿ ಸಂಸ್ಕೃತಜ್ಞಾನವನ್ನು ಯಥೇಚ್ಛವಾಗಿ ಬಳಸಿಕೊಂಡು ಇದಮಿತ್ಥಂ ಎಂದು ಇತರರನ್ನು ಬಾಯಿಮುಚ್ಚಿಸುವ ಪೊಲ್ಲಾಕ್ ಎಡಪಂಥೀಯರಿಗೆ ಆಪ್ತನೆನ್ನಿಸಿಕೊಂಡಿದುದರಲ್ಲಿ ಆಶ್ಚರ್ಯವಿಲ್ಲ. "ದಿ ಅಬ್ರಾಡ್ ಇಂಡಿಯಾ" ಎಂಬ ಮ್ಯಾಗಝಿನ್ ಆತನಿಗೆ "ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್ 2013" ಪ್ರಶಸ್ತಿ ಕೊಟ್ಟು ಪಂಡಿತನೆಂದು ಮುಕ್ತಕಂಠದಿಂದ ಹೊಗಳಿದೆ. ಅಂತಹ ಪೊಲ್ಲಾಕ್ ಈಗ ಸಂಸ್ಕೃತವನ್ನು ಸೆಕ್ಯುಲರೈಸ್ ಮಾಡಿ ಮುಖ್ಯವಾಹಿನಿಗೆ ತರುತ್ತೇನೆ ಎಂಬ ಮಾತುಗಳನ್ನಾಡುತ್ತಿದ್ದಾನೆ. ಇನ್ನೊಂದು ಗಾಬರಿಗೊಳಿಸುವ ಸಂಗತಿ ಏನೆಂದರೆ ವಿವಿಧ ಕ್ಷೇತ್ರಗಳ ದಿಗ್ಗಜರಾದ ನಾರಾಯಣ ಮೂರ್ತಿ, ಶಿವ ನದರ್, ಹರ್ಷ ಗೋಯೆಂಕಾ, ಆನಂದ್ ಮಹೀಂದ್ರಾರಂಥವರೂ ಈತನ ಮಾತಿನ ಮೋಡಿಗೊಳಗಾಗಿರುವುದು!

ಶೆಲ್ಡನ್ ಪೊಲ್ಲಾಕ್ ಎಲ್ಲಿ ಎಷ್ಟು ಬೇಕೋ ಅಷ್ಟನ್ನು ಮಾತಾಡಿ ತನ್ನ ಕೆಲಸವನ್ನು ಸಾಧಿಸಿಕೊಳ್ಳುವಲ್ಲಿ ನಿಸ್ಸೀಮ. ಬೆಣ್ಣೆಯಲ್ಲಿ ಕೂದಲೆಳೆದಂತೆ, ಭಾರತದ ಬಗ್ಗೆ ಒಳ್ಳೆಯ ಭಾವನೆ ಹೊಂದಿರುವ ಆದರೆ ಇನ್ನೊಂದರ್ಥದಲ್ಲಿ ಭಾರತದಲ್ಲಿನ ಬಲಪಂಥೀಯತೆಯ ಬಗೆಗೆ ಅಸಮಧಾನ ವ್ಯಕ್ತಪಡಿಸುವ ದ್ವಂದ್ವಾರ್ಥದ ಹೇಳಿಕೆಗಳನ್ನು ಕೊಡುವ ಜಾಣ! ಕಳೆದ ಐವತ್ತು ವರ್ಷಗಳಲ್ಲಿ ಕರ್ಮಭೂಮಿ-ಜನ್ಮಭೂಮಿಗಳು ಕೆಲವು ರಾಜಕೀಯ ಶಕ್ತಿಗಳ ಊರ್ಧ್ವಗತಿಗಷ್ಟೇ ಲಾಭವಾಗಿದೆ ವಿನಹ ಅದನ್ನು ಉಳಿದವರು ಮಾತಾಡದಂತಾಗಿದೆ ಎಂದು ಪರೋಕ್ಷವಾಗಿ ಭಾಜಪಾದ ಕಡೆಗೆ ಬೆರಳು ತೋರಿಸುವ ಪೊಲ್ಲಾಕ್ ನಿಧಾನವಾಗಿ ಬಲಪಂಥೀಯರ ಕಡೆಗೆ ಆರೋಪಕ್ಕೆ ತೊಡಗುತ್ತಾನೆ. ಸಂಸ್ಕೃತದಲ್ಲಿ ವ್ಯವಹರಿಸುತ್ತಲೇ ಸನಾತನ ಸಂಪ್ರದಾಯಗಳನ್ನು ಅಗ್ಗದ ಸರಕುಗಳೆಂದು ವ್ಯಂಗ್ಯವಾಡುತ್ತಾನೆ.  ರಾಮಜನ್ಮಭೂಮಿ ಚಳುವಳಿಯ ಬಗ್ಗೆ ಕಿಡಿಕಾರುತ್ತಾ, ರಾಮಾಯಣದ ಐತಿಹಾಸಿಕತೆಯನ್ನು ಪ್ರಶ್ನಿಸುತ್ತಾ ಆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ವ್ಯಕ್ತಿಗಳು ಮೂರ್ಖರು ಎಂದು ಜರೆಯುತ್ತಾನೆ ಪೊಲ್ಲಾಕ್. ರಾಮ ಹೋಮರ್, ಇಲಿಯಟ್ ಗಳ ಕಾವ್ಯನಾಯಕರಂತೆ ಒಬ್ಬ ಸಾಮಾನ್ಯ ಮನುಷ್ಯ, ಯೇಸುವಿನಂತೆ ದೇವರಲ್ಲ ಅನ್ನುತ್ತಾನೆ. ಬಾಬರಿ ಮಸೀದಿ ಧ್ವಂಸವಾದುದಕ್ಕೆ ಖೇದ ವ್ಯಕ್ತಪಡಿಸುವ ಪೊಲ್ಲಾಕ್ ಭಾರತದಲ್ಲಿ ಜಾತ್ಯಾತೀತತೆ ಎಷ್ಟು ಅಗತ್ಯ ಎನ್ನುವುದನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ ಅನ್ನುತ್ತಾನೆ. ಸರಸ್ವತಿಯನ್ನು ಮರ್ತ್ಯಪ್ರೇಮಿ ಗ್ರೀಕ್ ದೇವತೆ ಶುಕ್ರಕ್ಕೆ ಹೋಲಿಸುವ ಈತನ ಹುಚ್ಚುತನ ಈತ ಸಂಸ್ಕೃತ ಕಲಿತದ್ದೇ ಸಂಸ್ಕೃತಿಯನ್ನು ವಿರೂಪಗೊಳಿಸಲು ಎನ್ನುವ ಅರಿವು ಮೂಡಿಸುತ್ತದೆ. ತಾನು ಸಂಸ್ಕೃತದ ಬಗ್ಗೆ ಸಂಶೋಧನೆಗಿಳಿಯಲು ಕನಸಲ್ಲಿ ಕಂಡ ಸರಸ್ವತೀ ನದಿ ಕಾರಣವೆಂದೂ ಆಕೆ ತನ್ನನ್ನು ಪ್ರೀತಿಸಲು ಕೇಳಿಕೊಂಡಾಗ ನಾನು ನಿರಾಕರಿಸಿದೆ ಎಂದು ತನ್ನ ಮೂಲ ಚರ್ಚ್ ಮಾನಸಿಕತೆಯನ್ನು ಹೊರಹಾಕುವ ಇಂತಹ ವ್ಯಕ್ತಿ ಶಾರದಾ ಪೀಠಕ್ಕೆ ಅನುಗ್ರಹ ಪಡೆಯಲು ಹೋಗುತ್ತಾನೆ! ಸಂಸ್ಕೃತವನ್ನು ಇತಿಹಾಸದ ಶತ್ರುಗಳಿಂದ ಅಂದರೆ ಸನಾತನತೆಯ ಬಗ್ಗೆ ಒಲವುಳ್ಳ ಹಿಂದೂಗಳಿಂದ ರಕ್ಷಿಸಬೇಕಾಗಿದೆ. ಸಂಸ್ಕೃತವನ್ನು ಧರ್ಮದಿಂದ ಪ್ರತ್ಯೇಕಿಸಿ ಅದರಲ್ಲಿನ ಕ್ರಿಯಾಶೀಲತೆ ಹಾಗೂ ಹೊಸತನವನ್ನು ಜಾತ್ಯಾತೀತವಾಗಿ ಪುನರ್ ನಿರೂಪಿಸಬೇಕು. ಮಂತ್ರಗಳ ಉಚ್ಛಾರಣೆಯಿಂದ ಯಾವುದೇ ಶಕ್ತಿ ಉತ್ಪಾದನೆಯಾಗುವುದಿಲ್ಲ. ಅದೆಲ್ಲಾ ಸುಳ್ಳು. ಶಕ್ತಿ ಇರುವುದು ಜಾತ್ಯಾತೀತ ಕಣ್ಣುಗಳಲ್ಲಷ್ಟೇ ಎನ್ನುತ್ತಾ ತನ್ನ ನೈಜ ಉದ್ದೇಶವನ್ನು ಬಹಿರಂಗಪಡಿಸುತ್ತಾನೆ. ತನ್ನ "ಡೆತ್ ಆಫ್ ಸಂಸ್ಕೃತ" ಪ್ರಬಂಧದಲ್ಲಿ ವಿಹಿಂಪ ಹಾಗೂ ಭಾಜಪಾಗಳು ಭಾರತದ ಇತಿಹಾಸವನ್ನು ವಿರೂಪಗೊಳಿಸುತ್ತಿವೆ. ಒಂದು ವೇಳೆ ಅವರ ವಿಚಾರದಂತೆ ಸಂಸ್ಕೃತ ಭಾರತದಲ್ಲೇ ಹುಟ್ಟಿದ್ದರೆ ಸಿಂಧೂ ನಾಗರೀಕತೆ ಎರಡು ಮಿಲಿಯ ವರ್ಷಗಳಿಗೂ ಹಿಂದೆಯೇ ಇರಬೇಕಿತ್ತು. ಅವರು ಸಂಸ್ಕೃತ ಗ್ರಂಥಗಳಲ್ಲಿ ಬರುವ ಪ್ರಣಯಕಥೆಗಳನ್ನೇ ಇತಿಹಾಸವೆಂಬಂತೆ ಬಿಂಬಿಸುತ್ತಾರೆ. 1999ರಲ್ಲಿ ತಮ್ಮ ಸರಕಾರವಿದ್ದಾಗ ಸಂಸ್ಕೃತ ವರ್ಷವೆಂದು ಘೋಷಣೆ ಮಾಡಿದುದಲ್ಲದೆ ಸಂಸ್ಕೃತ ಕಲಿಕೆಗೂ ಯೋಜನೆ ರೂಪಿಸಿದ್ದರು ಎಂದು ಕಿಡಿಕಾರಿರುವುದು ಆತನ ವಿಕ್ಷಿಪ್ತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇಂತಹ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದುದಲ್ಲದೆ ನಾರಾಯಣ ಮೂರ್ತಿಗಳಿಂದ ಭಾರತದ ಪುರಾತನ ಶಾಸ್ತ್ರೀಯ ಗ್ರಂಥಗಳ ತರ್ಜುಮೆಗಾಗಿ ಇಪ್ಪತ್ತು ಮಿಲಿಯ ಡಾಲರ್ ಹಣವೂ ಸಿಕ್ಕಿದೆ.

ಇಷ್ಟೇ ಆಗಿದ್ದರೆ ಇದೊಂದು ಕ್ಷುಲ್ಲಕ ವಿಚಾರ ಎಂದು ಬದಿಗೆ ಸರಿಸಬಹುದಿತ್ತು. ಶೃಂಗೇರಿ ಮಠದ ಸಹಕಾರದೊಂದಿಗೆ ಕೊಲಂಬಿಯಾ ಸಂಸ್ಕೃತ ವಿವಿಯಲ್ಲಿ ಹಿಂದೂ ಧರ್ಮ ಸಿಂಹಾಸನ ಸ್ಥಾಪಿಸಲು NY/NJ ಸಮೂಹಗಳಿಂದ 3.5 ಮಿಲಿಯನ್ ಡಾಲರ್ ಹಣ ಪಡೆಯುವ ವಿದ್ವಾಂಸರ ಆಯ್ಕೆ ಮಾಡುವ ಅಧಿಕಾರ ಈತನ ಕೈಯಲ್ಲಿರುವುದು ಚಿಂತೆಗೀಡುಮಾಡಬೇಕಾದ ವಿಚಾರ. ಇದರಿಂದೇನು ಹಾನಿ? ಸಂಸ್ಕೃತದಲ್ಲಿ ಮಾತಾಡಲೂ ಬರದಿದ್ದರೂ, ಸಂಸ್ಕೃತ-ಇಂಗ್ಲೀಷ್ ನಿಘಂಟುಗಳನ್ನು ಜೊತೆಯಿರಿಸಿಕೊಂಡು ಅನುವಾದ ಮಾಡಿ ಯುವ ಸಂಸ್ಕೃತ ವಿದ್ವಾಂಸ ಎಂದು ಕರೆಯಿಸಿಕೊಂಡ ಈತ ಸಾಧಕನಲ್ಲ. ಎಡಪಂಥೀಯ ವಿಚಾರಧಾರೆಯನ್ನು, ಆರ್ಯ ಆಕ್ರಮಣ ಸಿದ್ಧಾಂತವನ್ನು ಪ್ರತಿಪಾದಿಸುವ ಈತ ಸನಾತನ ಧರ್ಮ ವಿರೋಧಿ. ಸಂಸ್ಕೃತವನ್ನು ಜಾತ್ಯಾತೀತವಾಗಿಸುತ್ತೇನೆ ಎಂದು ಹೊರಟಿರುವಾತನನ್ನು ನಂಬೋದು ಹೇಗೆ? ಅಲ್ಲದೆ ಮುಂದಿನ ಕೆಲ ವರ್ಷಗಳಲ್ಲಿ ಸಂಸ್ಕೃತ ವಿದ್ವಾಂಸರೆನಿಸಿಕೊಳ್ಳಬೇಕಾದರೆ ಕೊಲಂಬಿಯಾ ವಿವಿಯಿಂದ ಪ್ರಮಾಣಪತ್ರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಸಂಸ್ಕೃತದಲ್ಲೂ ಫ್ರೇಡಿಯನ್, ಸುಬಾಲ್ಟರ್ನ್, ಮಾರ್ಕ್ಸಿಸಮ್, ಪಾಶ್ಚಿಮಾತ್ಯ ವಿಚಾರಧಾರೆಯನ್ನು ಕಲಿಯಬೇಕಾದ ಪರಿಸ್ಥಿತಿ ಉಂಟಾಗಬಹುದು. ಎಷ್ಟೇ ಪ್ರಕಾಂಡ ಸಂಸ್ಕೃತ ಪಂಡಿತರಾಗಿದ್ದರೂ ಕೊಲಂಬಿಯಾ ವಿವಿಯಿಂದ ಪ್ರಮಾಣವಿರದ ಕಾರಣ ಮಠಾದೀಶರನ್ನು ಕೇಳುವವರೇ ಇಲ್ಲದಂತಾದೀತು. ಇದು ವಿದೇಶದಲ್ಲಿ ಅರಳುತ್ತಿರುವ ಮೊದಲ ಸಂಸ್ಕೃತ ಪೀಠವೆಂದು ಖುಷಿ ಪಡೋಣವೆಂದರೆ ಪೊಲ್ಲಾಕನಂತಹ ನರಿಬುದ್ಧಿಗಳ ಕೈಯಲ್ಲಿ ಆಯ್ಕೆಯ ಅಧಿಕಾರವಿರುವುದರಿಂದ ಸಂಶಯದ ಹುತ್ತವೇ ಮೊಳೆಯುತ್ತಿದೆ. ಪರಂಪರೆಯಂತೆ ಗುರುವನ್ನು ಆರಿಸುವ ಅಧಿಕಾರ ಶೃಂಗೇರಿಯ ಕೈಯಿಂದ ತಪ್ಪಿ ಹೋದೀತು. ಈಗ ಶೃಂಗೇರಿಯಲ್ಲಿರುವ ಸಂಸ್ಕೃತ ಅಧ್ಯಯನದ ಶಕ್ತಿ ಕೇಂದ್ರ ಮುಂದೆ ಕೊಲಂಬಿಯಾ ಕೈ ಸೇರೀತು! ವಿಶ್ವ ಸಂಸ್ಕೃತ ಸಮ್ಮೇಳನಗಳನ್ನು ನಡೆಸುವ, ಅನುವಾದಗಳನ್ನು ನಿಯಂತ್ರಿಸುವ ಅಧಿಕಾರವೆಲ್ಲಾ ಆ ವಿವಿಯ ಪಾಲಾಗಿ ಬುಜೀಗಳ ಸಾಮ್ರಾಜ್ಯ ಮೆರೆದಾಡೀತು. ಹಿಂದೂಗಳಿಂದ ಹಣ ಪಡೆದು ಹಿಂದೂಗಳನ್ನೇ ತಮಗೆ ತಕ್ಕಂತೆ ಕುಣಿಸುವ ಕಾರ್ಯವಾಗಿ ಸಂಸ್ಕೃತವೂ-ಭಾರತವೂ ಮತ್ತೊಮ್ಮೆ ದಾಸ್ಯಕ್ಕೀಡಾದೀತು!

               ಮೊಘಲರ ದುಷ್ಖೃತ್ಯಗಳಿಗೆ ಬಲಿಯಾಗದೆ, ಬ್ರಿಟಿಷರ ಕುಕೃತ್ಯಗಳಿಗೆ ಈಡಾಗದೆ ಇಂದಿಗೂ ಪವಿತ್ರವಾಗಿ ಉಳಿದುಕೊಂಡಿರುವ ಹಿಂದೂ ಧಾರ್ಮಿಕ ಶಕ್ತಿ ಕೇಂದ್ರ ಎಂದರೆ ಶೃಂಗೇರಿ. ಅಂತಹ ಶಕ್ತಿಕೇಂದ್ರವನ್ನು ನಮ್ಮ ಕೈಯಾರೆ ಕಳೆದುಕೊಳ್ಳುತ್ತಿದ್ದೇವೆಯೇ? 1600ರಲ್ಲಿ ರಾಬರ್ಟ್ ಡಿ ನೊಬಿಲಿ, 1700ರಲ್ಲಿ ವಿಲಿಯಂ ಜೋನ್ಸ್, 1800ರಲ್ಲಿ ಮ್ಯಾಕ್ಸ್ ಮುಲ್ಲರ್ ರನ್ನು ನಂಬಿ ಬಲಿಯಾದ ನಾವು ಇತಿಹಾಸವನ್ನು ಮರೆತು ಮತ್ತೆ ದಾಸ್ಯಕ್ಕೆ ತುತ್ತಾಗುತ್ತಿದ್ದೇವೆಯೇ? ಸಂಸ್ಕೃತ ದಾಸ್ಯಕ್ಕೆ ತುತ್ತಾಯಿತೆಂದರೆ ಭಾರತ ಬಲಿಯಾದಂತೆ! ಹಿಂದೂಧರ್ಮ ಕೊನೆಯಾದಂತೆ!

                ಇನ್ನೊಂದು ಮಹತ್ವದ ವಿಚಾರವೆಂದರೆ ಇಂತಹ ಪೀಠದ ಸ್ಥಾಪನೆಗಾಗಿ ಭಾರತೀಯರಿಂದಲೇ ಧನಸಹಾಯ ಪಡೆಯುತ್ತಿರುವುದು. ಇದಕ್ಕಾಗಿ ಧನ ಸಹಾಯ ಮಾಡುವ ವ್ಯಕ್ತಿಗಳಿಗೆ ಮ್ಯಾಕ್ಸ್ ಮುಲ್ಲರ್, ವಿಲಿಯಂ ಜೋನ್ಸ್, ಡಿ ನೋಬಿಲಿ ಅಲ್ಲದೆ ಇತ್ತೀಚೆಗಿನ ಭಾರತ ದ್ವೇಷಿಗಳ ಬಗ್ಗೆ ತಿಳಿದಿರುವುದಿಲ್ಲ. ಇವರ ಬಣ್ಣನೆಯ ಮಾತುಗಳನ್ನು ನಂಬಿ ಅವರು ಹಿಂದೂಧರ್ಮದ ಒಳ್ಳೆಯದಕ್ಕಾಗಿಯೇ ಇದನ್ನೆಲ್ಲಾ ಮಾಡುತ್ತಿದ್ದಾರೆಂದು ಸುಲಭವಾಗಿ ನಂಬಿ ಬಿಡುವ ಧನದಾತರಿಗೆ ಈ ವಿವಿಯೊಳಗೆ ನಡೆವ ಹಿಂದೂ ವಿದ್ರೋಹ ಗಮನಕ್ಕೆ ಬರುವ ಸಂಭವವೇ ಕಡಿಮೆ. ಅಲ್ಲದೆ ಈ ಪಾಖಂಡಿಗಳು ತಮ್ಮ ಕೆಲಸವನ್ನು ಸಾಂಗವಾಗಿ ನೆರವೇರಿಸಲು ಯಾರಾದರೂ ಗುರುಗಳ ಪಾದಕ್ಕೆ ಬೀಳುತ್ತಾರೆ. ಆ ಗುರುಗಳು ಇಂತಹುವುಗಳ ಒಳಹೊಕ್ಕು ನೋಡಲಾರರು. ಯಾರೋ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಆಶೀರ್ವದಿಸುತ್ತಾರೆ. ಒಂದು ವೇಳೆ ಈ ಪೀಠಕ್ಕೆ ಆಯ್ಕೆಯಾಗುವ ಮೊದಲ ವ್ಯಕ್ತಿ ಹಿಂದೂಪರ ಆಗಿದ್ದರೂ ಹಿಂದೂದ್ವೇಷಿಗಳೇ ತುಂಬಿತುಳುಕುತ್ತಿರುವಲ್ಲಿ ಬಹುಕಾಲ ಆ ಪೀಠ ಹಿಂದೂಪರವಾಗಿ ಉಳಿಯುವುದು ಸಂಶಯ. ಇದಕ್ಕೆ ಒಳ್ಳೆಯ್ ಉದಾಹರಣೆ UCLA ಪೀಠ. ನವೀನ್ ದೋಷಿ ಅವರ ಪ್ರಾಯೋಜಕತ್ವದ ಈ ಪೀಠದಿಂದ ಪ್ರೊಫೆಸರ್ ಸರ್ದೇಸಾಯಿ ಎಂಬ ಹಿಂದೂಪರ ಸಜ್ಜನರು ನಿವೃತ್ತರಾಗುತ್ತಿದ್ದಂತೆ ಯಾರನ್ನು ನವೀನ್ ದೋಷಿ "ದೇವರಂತಹ ಮನುಷ್ಯ" ಎಂದು ನಂಬಿದ್ದರೋ ಆ ಪಟಾಲಂ, ದೋಷಿಯವರ ವಿರೋಧದ ನಡುವೆಯೂ ತಾವು ಆಯ್ಕೆ ಮಾಡಿದ ವ್ಯಕ್ತಿಯನ್ನೇ ನೇಮಕಗೊಳಿಸುವಲ್ಲಿ ಸಫಲವಾಯಿತು. ಇಂದು ಆ ಸ್ಥಾನವನ್ನು ಬದ್ಧ ಹಿಂದೂದ್ವೇಷಿಯೊಬ್ಬ ಆಕ್ರಮಿಸಿದ್ದಾನೆ.

                 ಅದಕ್ಕಿಂತಲೂ ಮುಖ್ಯವಾಗಿ ಕ್ರಿಶ್ಚಿಯನ್ ಮಿಷನರಿಗಳಿಗೆ ಹಿಂದೂ ಧರ್ಮದ ವಿಷಯವಾಗಿ ಚರ್ಚೆ ನಡೆಸಲು ಅಧಿಕಾರ ಕೊಟ್ಟಂತಾಗುತ್ತದೆ. ಕೋಲು ಕೊಟ್ಟು ಪೆಟ್ಟು ತಿನ್ನುವ ರೀತಿ! ನಮ್ಮ ಪೌರೋಹಿತ್ಯ ಮಾಡಲು, ನಮ್ಮ ಮಠಗಳಿಗೆ ಮಠಾದೀಶರಾಗಲು ವ್ಯಾಟಿಕನ್ ಹೊರಗುತ್ತಿಗೆ ನೀಡಿದಂತಾಗಬಹುದು. ಕೆಲವು ಅಪದ್ಧಗಳು ಅದಕ್ಕೂ ಸೈ ಅನ್ನಬಹುದು. ಇದು ಭಾರತವನ್ನು ರಕ್ಷಿಸಲು ಪಾಕಿಸ್ತಾನದ ಸೇನೆಗೆ ಹೊರಗುತ್ತಿಗೆ ಕೊಟ್ಟಂತಾದೀತು! ಕಾಶಿಯ ಸ್ಥಾನವನ್ನು ವ್ಯಾಟಿಕನ್ ಆವರಿಸಿಕೊಂಡೀತು. ಈಗಲೇ ವಿದೇಶದಿಂದ ಬಂದಿದ್ದೆಲ್ಲವೂ ಶ್ರೇಷ್ಠ ಎನ್ನುವ ಜನಾಂಗ ಮುಂದೆ ಕೊಲಂಬಿಯ ವಿವಿಯಿಂದ ಸಂಸ್ಕೃತ ಕಲಿತು ಬಂದ ಹಿಂದೂದ್ವೇಷಿಯನ್ನೇ ಉದ್ಧಾಮ ಪಂಡಿತನೆಂದು ಅಲ್ಲಿ ಅಧ್ಯಯನ ಮಾಡುವುದೇ ಶ್ರೇಷ್ಠವೆಂದು ಪರಿಗಣಿಸೀತು! ಸೌದಿಯ ಶೇಕ್ ಒಬ್ಬ ಇಲ್ಲೂ ಒಂದು ಪೀಠ ಮಾಡಿ ಹಣ ಕೊಡುತ್ತೇನೆ ಎಂದರೆ ಈ ಭಾರತ ದ್ವೇಷಿಗಳು ಅಲ್ಲೂ ಪೀಠವೊಂದನ್ನು ಸೃಷ್ಟಿಸಿಯಾರು! ಒಬ್ಬ ವ್ಯಾಪಾರೀ ತನ್ನ ಲಾಭವನ್ನು ಹೂಡಿಕೆಯಿಂದ ಬಯಸುತ್ತಾನೆಯೇ ಹೊರತು ಗ್ರಾಹಕನ ಲಾಭವನ್ನು ಬಯಸುತ್ತಾನೆಯೇ? ಒಟ್ಟಾರೆ ರಾಜೀವ್ ಮಲ್ಹೋತ್ರಾ ಹೇಳುವಂತೆ ಹಿಂದೂ ಧರ್ಮಕ್ಕೆ ಸಹಾಯ ಮಾಡುವ ನೆಪದಲ್ಲಿ ಸನಾತನತೆಯನ್ನೇ ಕಿತ್ತೊಗೆವ ಈ ಪ್ರಯತ್ನದ ವಿರುದ್ಧ ದನಿಯೆತ್ತದಿದ್ದರೆ ಸಂಸ್ಕೃತವೂ ದಾಸ್ಯಕ್ಕೆ ತುತ್ತಾದೀತು. ತನ್ಮೂಲಕ ಇಡೀ ಭಾರತವೂ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ