1965ರ ಯುದ್ಧದಲ್ಲಿ ಸಂಘದ ಪಾತ್ರ
1965 ಜನವರಿಯಲ್ಲಿ ಕಛ್ ಭೂಭಾಗದ ಮೇಲೆ ಪಾಕಿಗಳು ಆಕ್ರಮಣ ನಡೆಸಿದ್ದರು. ಅದೇ ವರ್ಷ ಜೂನ್ 30ರಂದು ಒಪ್ಪಂದವೊಂದಕ್ಕೆ ಭಾರತ ಸಹಿ ಹಾಕಿತು. ಕಛ್'ನ 9000ಕಿ.ಮೀ ಭಾಗವನ್ನು ವಿವಾದಾಸ್ಪದ ಎಂದು ಸ್ವೀಕರಿಸಿ ತೀರ್ಮಾನಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಯ ಮುಂದೆ ಒಯ್ಯುವುದು ಹಾಗೂ 1965ರ ಜನವರಿ 1ರ ಯಥಾಸ್ಥಿತಿಗೆ ಮರಳುವುದು ಆ ಒಪ್ಪಂದದ ಮುಖ್ಯ ಅಂಶಗಳಾಗಿದ್ದವು. ಆದರೆ ಜನವರಿ ಒಂದರ ಮೊದಲೇ ಪಾಕಿಸ್ತಾನ ನಮ್ಮ ಗಡಿಯೊಳಗೆ ತಳವೂರಿತ್ತು. ಕಛ್ ಒಪ್ಪಂದವನ್ನು ವಿರೋಧಿಸಿದ್ದ ಏಕೈಕ ಪಕ್ಷವೆಂದರೆ ಜನಸಂಘ. ಈ ಒಪ್ಪಂದದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಜನಸಂಘ ಸಂಘಟಿಸಿತು. 1965 ಜುಲೈ ನಾಲ್ಕರಂದು ದೇಶದಾದ್ಯಂತ ಸಭೆ, ಮೆರವಣಿಗೆ, ಪ್ರದರ್ಶನಗಳು ನಡೆದವು. ಹೀಗಾಗಿ ಜನಜಾಗೃತಿಯಾಗಿ ಪ್ರತಿಭಟನೆಯ ಸ್ವರ ಬಲವಾಯಿತು. ಆಗಸ್ಟ್ ಹದಿನಾರರಂದು ಸಂಸತ್ ಭವನದ ಹೊರಗೆ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನಸಂಖ್ಯೆ ಐದುಲಕ್ಷ! ಆಗ ಸ್ವತಃ ಮುಖ್ಯ ಭೂಮಿಕೆಗೆ ಧುಮುಕಿದ ಪ್ರಧಾನಿ ಶಾಸ್ತ್ರೀಜೀ ಮಹಾರಾಷ್ಟ್ರ ಪ್ರವಾಸದಲ್ಲಿದ್ದ ಪೂಜ್ಯ ಶ್ರೀ ಗುರೂಜಿಯವರನ್ನು ದೆಹಲಿಯಲ್ಲಿನ ಸರ್ವಪಕ್ಷ ನಾಯಕರ ಸಭೆಗೆ ಆಹ್ವಾನಿಸಿದರು. ಸಭೆಯಲ್ಲಿ ಸರಸಂಘಚಾಲಕರು ಸಂಘದ ಪೂರ್ಣ ಸಹಕಾರ ಘೋಷಿಸಿದರಲ್ಲದೆ ಆಕ್ರಮಕ ನೀತಿ ಅನುಸರಿಸುವಂತೆ ಶಾಸ್ತ್ರೀಯವರನ್ನು ಒತ್ತಾಯಿಸಿದರು. ಸಭೆಯಲ್ಲಿ ಪದೇ ಪದೇ "ನಿಮ್ಮ ಸೈನ್ಯ" ಎನ್ನುತ್ತಿದ್ದ ಪ್ರತಿನಿಧಿಯೊಬ್ಬರನ್ನು "ನಮ್ಮ ಸೈನ್ಯ" ಎಂದು ತಿದ್ದಿದರು!
22 ದಿನಗಳ ಆ ಯುದ್ಧದ ಸಮಯದಲ್ಲಿ ದಿಲ್ಲಿಯ ವಾಹನ ನಿಯಂತ್ರಣವೇ ಮೊದಲಾದ ಪೊಲೀಸ್ ಕೆಲಸಗಳನ್ನು ವಹಿಸಿಕೊಂಡದ್ದು ಸ್ವಯಂಸೇವಕರೇ. ಇದರಿಂದ ಪೊಲೀಸರನ್ನು ಇನ್ನುಳಿದ ತುರ್ತು ಸೇವೆಗಳಿಗೆ ನಿಯೋಜಿಸುವಂತಾಯಿತು. ಯುದ್ಧಾರಂಭಕ್ಕೂ ಮೊದಲೇ ಸ್ವಯಂಸೇವಕರ ತಂಡಗಳು ಪ್ರತಿದಿನ ದಿಲ್ಲಿಯ ಜನರಲ್ ಮಿಲಿಟರಿ ಆಸ್ಪತ್ರೆಯ ಬಳಿ ಸೇರುತ್ತಿದ್ದವು. ಸೇನಾಪಡೆಯಂತೂ ಸಂಘವನ್ನು ಆಪತ್ಬಾಂಧವನೆಂದೇ ಪರಿಗಣಿಸಿತ್ತು. ಅವರಿಗೆ ಯಾವುದೇ ನಾಗರಿಕ ಸೇವೆ ಅಗತ್ಯ ಬಿದ್ದಾಗ ನೇರವಾಗಿ ಸಂಘದ ಕಾರ್ಯಾಲಯಕ್ಕೆ ದೂರವಾಣಿ ಕರೆ ಬರುತ್ತಿತ್ತು. ಯುದ್ಧದ ತೀವ್ರತೆಯ ದಿನಗಳಲ್ಲೊಮ್ಮೆ ಗಾಯಾಳು ಸೈನಿಕರನ್ನು ಹೊತ್ತಿದ್ದ ರೈಲೊಂದು ದೆಹಲಿ ತಲುಪಿತು. ನೂರಾರು ಗಾಯಾಳುಗಳಿಗೆ ತುರ್ತು ರಕ್ತದ ಅವಶ್ಯಕತೆ ಇತ್ತು. ಸಂಘ ಕಾರ್ಯಾಲಯಕ್ಕೆ ಕರೆ ಬಂದುದು ನಡುರಾತ್ರಿಯಲ್ಲಿ. ಮರುದಿನ ಬೆಳಕು ಹರಿಯುವ ಮುನ್ನವೇ ಐನೂರು ಸ್ವಯಂಸೇವಕರು ರಕ್ತನೀಡಲು ಸಾಲುಗಟ್ಟಿ ನಿಂತಿದ್ದರು! ರಕ್ತ ನೀಡಿದ್ದಕ್ಕಾಗಿ ಸಿಗುತ್ತಿದ್ದ ಸಂಭಾವನೆಯನ್ನು ನಯವಾಗಿ ನಿರಾಕರಿಸಿ ಸೈನಿಕರಿಗಾಗಿ ಖರ್ಚು ಮಾಡುವಂತೆ ಹೇಳಿದರು.
ಅಮೃತಸರದ ಸ್ವಯಂಸೇವಕರು ಗಡಿಯಲ್ಲಿ ಗುಂಡಳತೆಯ ವ್ಯಾಪ್ತಿಯಲ್ಲೇ ನಾಲ್ಕು ಉಪಾಹಾರ ಗೃಹಗಳನ್ನು ತೆರೆದು ಸೈನಿಕರಿಗೆ ಸಹಾಯ ಮಾಡಿದ್ದರು. ಆ ಉಪಾಹಾರ ಗೃಹಕ್ಕೆ ಸ್ಥಳೀಯರು ಉಚಿತ ಹಾಲು ಸರಬರಾಜು ಮಾದುತ್ತಿದ್ದರು. ಸೈನಿಕರಿಗಾಗಿ ಶುದ್ಧ ತುಪ್ಪದಲ್ಲಿ ತಯಾರಿಸಿದ ಊಟವನ್ನು ಅಲ್ಲಿ ಕೊಡಲಾಗುತ್ತಿತ್ತು. ಸೆಪ್ಟೆಂಬರ್ ಎಂಟರಂದು ಗಾಯಗೊಂಡ ಸೈನಿಕರಿಗೆ ಬಟ್ಟೆಬರೆಗಳು ತುರ್ತಾಗಿ ಬೇಕಿವೆ ಎಂದು ಕರೆ ಬಂದಾಗ ನಾಲ್ಕೇ ಗಂಟೆಗಳಲ್ಲಿ ಸ್ವಯಂಸೇವಕರು ಅವುಗಳನ್ನು ಒಟ್ಟುಗೂಡಿಸಿ ತಂದರು.ಅಲ್ಲದೆ ನಾಗರಿಕ ರಕ್ಷಣಾ ಕಾರ್ಯದಲ್ಲಿ ಸ್ವಯಂ ಸೇವಕರು ನಿರ್ವಹಿಸಿದ ಪಾತ್ರ ಅತ್ಯದ್ಭುತ. ಬ್ಲಾಕ್ ಔಟ್, ರಾತ್ರಿ ಪಹರೆ, ಮತ್ತಿತರ ರಕ್ಷಣಾ ಕಾರ್ಯಗಳನ್ನು ಸ್ವಯಂಸೇವಕರು ಸಮರ್ಥವಾಗಿ ನಿರ್ವಹಿಸಿದರು. ಶಸ್ತ್ರಸಜ್ಜಿತ ಪಾಕಿ ಟ್ರೂಪರುಗಳನ್ನು ನಿರಾಯುಧರಾಗಿ ಹಿಡಿದುಕೊಟ್ಟುದುದಲ್ಲದೆ ರೈಲು ಹಳಿಗಳು, ನದಿ, ಕಾಲುವೆ, ಸೇತುವೆ, ವಿಮಾನ ನಿಲ್ದಾಣಗಳಿಗೆ ಅಹರ್ನಿಶಿ ಪಹರೆ ಹಾಕಿ ನಿಂತದ್ದು ಸ್ವಯಂಸೇವಕರ ಸಾಹಸಗಾಥೆಗಳೇ ಸರಿ.
ಫಿರೋಜ್ ಪುರ ಗಡಿ ಭಾಗದಲ್ಲಿದ್ದು ಅಲ್ಲಿನ ಶಾಸಕ ಜನಸಂಘದವರಾಗಿದ್ದು ಪ್ರಾಣ ಇರುವ ತನಕ ಅಲ್ಲಿಂದ ಕದಲುವುದಿಲ್ಲ ಎಂದು ಧೃಢ ನಿಶ್ಚಯ ತಾಳಿ ಕೂತದ್ದು ಮಾತ್ರವಲ್ಲ ಐದುಸಾವಿರ ಜನರಿಗೂ ಪ್ರೇರಣೆಯಾದರು. ಜಮ್ಮುವಿನ ರಜೋರಿಯಲ್ಲಿ ಇಬ್ಬರು ಸ್ವಯಂಸೇವಕರಿಗೆ ಪಾಕ್ ಪಡೆಗಳು ತಮ್ಮ ನಗರಕ್ಕೆ ಬರುವುದು ಕಂಡಿತು. ಕೂಡಲೇ ಮಾಹಿತಿ ನೀಡಲು ಸೇನಾನೆಲೆಯತ್ತ ಧಾವಿಸಿದರವರು. ಅಲ್ಲಿನ ಸೇನಾಮುಖ್ಯಸ್ಥ ಶತ್ರುವನ್ನೆದುರಿಸಲು ಸಜ್ಜಾಗಿ ನಿಂತಿದ್ದರು. ಇವರಿಬ್ಬರನ್ನು ಮಿಲಿಟರಿ ವಾಹನದಲ್ಲಿ ಸುರಕ್ಷಿತವಾಗಿ ಜಮ್ಮುವಿಗೆ ಕಳುಹಿಸುವ ಏರ್ಪಾಟು ಮಾಡ ಹೊರಟರು. ಆದರೆ ಸ್ವಯಂಸೇವಕರಿಬ್ಬರೂ ಅದನ್ನು ನಿರಾಕರಿಸಿ ಸೈನಿಕ ಪಡೆಗೆ ಬೆಂಗಾವಲಾಗಿ ನಿಂತರು. ಮೈಂಧರಿನಲ್ಲಿನ ಸ್ವಯಂಸೇವಕನೊಬ್ಬ ಶತ್ರುಕಂದಕವನ್ನೇ ಹೊಕ್ಕು ಅಲ್ಲಿದ್ದ ಪಾಕ್ ಸೈನಿಕನಿಂದ ಸ್ಟೆನ್ ಗನ್ ಕಿತ್ತುಕೊಂಡು ಅಲ್ಲಿದ್ದ ಶತ್ರು ಸೈನಿಕರನ್ನು ಕೊಂದು ನೂರಾರು ದೇಶವಾಸಿಗಳ ಪ್ರಾಣ ಉಳಿಸಿದರು. ನೌಶೇರಾ ತಾಲೂಕಿನ ಪತನಿಯಲ್ಲಿ ಪಾಕೀ ಪಡೆಯ ದಿಗ್ಬಂಧನಕ್ಕೆ ಸಿಲುಕಿದ್ದ ಭಾರತೀಯ ಪಡೆಗೆ ನೀರು ಆಹಾರಗಳನ್ನು ಪಾಕ್ ಪಡೆಯ ಕಣ್ಣುತಪ್ಪಿಸಿ ತಲುಪಿಸಿದ ಸ್ವಯಂಸೇವಕನೊಬ್ಬ ಭಾರತೀಯ ಪಡೆಗಳ ಗೆಲುವಿಗೆ ಕಾರಣನಾದ. ಅಲ್ಲದೆ ಪ್ರತಿದಿನ ಸುಮಾರು 30ಸಾವಿರದಷ್ಟು ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಸ್ವಯಂಸೇವಕರು ಕಲ್ಪಿಸಿದರು. ದ್ವಾರಕೆಯ ಓಕಾ ಎಂಬಲ್ಲಿ ಬಂದರಿನ ಮೇಲೆ ಬಾಂಬು ಹಾಕಬಂದ ಪಾಕೀ ಸೇಬರ್ ಜೆಟ್'ಗಳನ್ನು ಗುಜರಾತಿನ ಸ್ವಯಂಸೇವಕನೊಬ್ಬ ಹೊಡೆದುರುಳಿಸಿದ!
ಹೊ.ವೆ ಶೇಷಾದ್ರಿ, ಚಂದ್ರ ಶೇಖರ ಭಂಡಾರಿ ಸಂಕಲಿತ "ಕೃತಿರೂಪ ಸಂಘದರ್ಶನ" ದ ಆಯ್ದ ಭಾಗ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ