ಪುಟಗಳು

ಮಂಗಳವಾರ, ಸೆಪ್ಟೆಂಬರ್ 15, 2015

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

ಕರಿ ಪರದೆ ಸರಿಸಿ ಹೊರಟಿದೆ ಕ್ಷೀಣ ಬೆಳಕು

              ಅವರ ಮತಾಂಧತೆಗೆ ಹಲವಾರು ದೇಗುಲಗಳು ಧರೆಗುರುಳಲ್ಪಟ್ಟವು. ಅವರ ಕಾರಣಕ್ಕೆ ಇತಿಹಾಸವನ್ನೇ ತಿರುಚಿ ಬರೆಯಲಾಯಿತು. ದೇಶವನ್ನೇ ಹರಿದು ಹಂಚಲಾಯಿತು. ತಮ್ಮವರಿಗೆ ಅನ್ಯಾಯವಾಗುತ್ತಿದ್ದರೂ, ರಕ್ತದೋಕುಳಿ ಹರಿಯುತ್ತಿದ್ದರೂ ನಾಲಿಗೆ ಕಚ್ಚಿಕೊಳ್ಳಿರೆಂದು ಹೇಳಲಾಯಿತು. ಅವರಿಗಾಗಿ ರಾಷ್ಟ್ರಗೀತೆ-ರಾಷ್ಟ್ರಧ್ವಜ-ರಾಷ್ಟ್ರಭಾಷೆ ಬದಲಾಯಿತು. ಅವರ ಓಲೈಕೆಯಿಂದ ಈ ದೇಶ ಕಳೆದುಕೊಂಡದ್ದೆಷ್ಟು? ಕೇವಲ ಇಪ್ಪತ್ತು ಪ್ರತಿಶತವಿರುವ ಅವರ ಸಂಖ್ಯೆ ಈ ದೇಶದ ಕಾನೂನನ್ನೇ ಬದಲಾಯಿಸಬಲ್ಲುದು. ಯೋಜನೆಗಳ ಉದ್ದೇಶವನ್ನೇ ಮೂಲೋತ್ಪಾಟನೆ ಮಾಡಬಲ್ಲುದು. ಶತಶತಮಾನಗಳ ಪರ್ಯಂತ ಈ ದೇಶವನ್ನು ಕೊಳ್ಳೆಹೊಡೆಯುತ್ತಾ ಬಂದು, ಸ್ವಾತಂತ್ರ್ಯಗೊಂಡ ನಂತರವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯೊಂದಿಗೆ ಅನೇಕಾನೇಕ ಉಚಿತ ಸೌಲಭ್ಯಗಳನ್ನು, ಕೆಲವು ಕಡೆ ತಮಗೆ ಬೇಕಾದವರನ್ನು ಆರಿಸುವ ಅಧಿಕಾರ ಪಡೆದ ಮತವೊಂದರ ಅನುಯಾಯಿಗಳ ಒಳಗಿನ ಹೂರಣವನ್ನು ಕೆದಕುತ್ತಾ ಹೋದರೆ ಕಂಡು ಬರುವುದು ಗೆದ್ದಲು ಹುಳಗಳೇ. ಕೆಲವೊಂದಷ್ಟು ರತ್ನಗಳು ಈ ದೇಶದ ಮಣ್ಣಿನೊಂದಿಗೆ ಬೆರೆತು ಮುಖ್ಯವಾಹಿನಿಗೆ ಬಂದು ದೇಶದ ಅಸ್ಮಿತೆಗೆ ಕಾಣಿಕೆ ಸಲ್ಲಿಸಿದರೂ ಅದು ಲಕ್ಷದಲ್ಲೊಂದು. ಅನ್ನ ಕೊಟ್ಟ ಭೂಮಿಗಿಂತಲೂ ಮತವೇ ಮಹತ್ ಎನ್ನುವ ಮಾನಸಿಕತೆ ಇಂದಿಗೂ ಬದಲಾಗಿಲ್ಲ. ಎಲ್ಲವೂ ತಮ್ಮವರಿಗಾಗಿ ಎನ್ನುವವರೊಳಗಿನವರು ಎಷ್ಟು ಸುಖಿಗಳು ಎಂದು ಒಳಹೊಕ್ಕು ನೋಡಿದರೆ ಎಂಥವನೂ ಬೆಚ್ಚಿಬಿದ್ದಾನು!


               2012ರ ವರದಿಯೊಂದು ದೇಶದ ಶೇ. 59ರಷ್ಟು ಮುಸ್ಲಿಂ ಮಹಿಳೆಯರು ಶಾಲೆಯ ಮೆಟ್ಟಿಲನ್ನೇ ತುಳಿದಿಲ್ಲ ಎಂದಿತ್ತು. ಮುಸ್ಲಿಂ ಮಹಿಳೆ ನಿರಂತರ ತುಳಿತಕ್ಕೆ ಒಳಗಾಗುತ್ತಿದ್ದಾಳೆ. ಹಾಗಂತ ಆಕೆ ತುಳಿತಕ್ಕೊಳಗಾಗುತ್ತಿರುವುದು ತಮ್ಮ ಮತವೇ ಶ್ರೇಷ್ಠ ಎನ್ನುತ್ತಾ ಅನ್ಯರನ್ನು ತುಚ್ಛವಾಗಿ ಕಾಣುವ ತಮ್ಮದೇ ಸಮಾಜದ ಬಾಂಧವರಿಂದ ಅಲ್ಲವೇ?  ದೇಶಕ್ಕೆ ಸ್ವಾತಂತ್ರ್ಯದಕ್ಕಿ ಆರೂವರೆ ದಶಕಗಳು ಕಳೆದರೂ ಮುಸ್ಲಿಮರ ಅಭಿವೃದ್ಧಿ ಏಕಾಗಿಲ್ಲ ಎನ್ನುವುದಕ್ಕೆ ಮುಸ್ಲಿಮರ ಸಾಕ್ಷರತೆಯ ಪ್ರಮಾಣ ಜ್ವಲಂತ ಸಾಕ್ಷಿ. ಈ ಕುರಿತು ಅರಿವು ಮೂಡಿಸಬೇಕಿದ್ದ ಮುಸ್ಲಿಂ ಜನನಾಯಕರು ಇಷ್ಟೂ ವರ್ಷ ಮಾಡುತ್ತಿದ್ದುದೇನು? ಮುಸ್ಲಿಮ್ ಮಹಿಳೆ ನ್ಯಾಯಾಧೀಶೆಯಾಗುವಂತಿಲ್ಲ, ಚುನಾವಣೆಗೆ ಸ್ಪರ್ದಿಸುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ, ಹೋದರೂ ಕಛೇರಿಗಳಲ್ಲಿ ಪುರುಷ ಸಹೋದ್ಯೋಗಿಗಳೊಡನೆ ಮಾತಾಡುವಂತಿಲ್ಲ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ವೇದಿಕೆ ಹತ್ತಿ ಮಾತಾಡುವಂತಿಲ್ಲ, ಅವರಿಗೆ ಮೀಸಲಾತಿ ಕೊಡುವುದು ಸರಿಯಲ್ಲ, ವಾಹನ ಚಲಾವಣಾ ಪರವಾನಗಿ ಪತ್ರ-ಚುನಾವಣಾ ಗುರುತು ಚೀಟಿಯಲ್ಲಿ ಅವರ ಭಾವಚಿತ್ರ ಹಾಕುವಂತಿಲ್ಲ, ಗರ್ಭಪಾತ ಮಾಡಿಕೊಳ್ಳುವಂತಿಲ್ಲ,  ಹೀಗೆಲ್ಲಾ ಫತ್ವಾ ಹೊರಡಿಸಿರುವ ಉಲೇಮಾಗಳು, ಮೌಲ್ವಿಗಳು ಸ್ತ್ರೀಯೆಂದರೆ ಬರಿಯ ಭೋಗದ ವಸ್ತುವಾಗಿ ನೋಡಿದ್ದರಿಂದಲೇ ಅಲ್ಲವೇ ಆಕೆ ತನ್ನದೇ ಮತದಲ್ಲಿ ಕಡೆಗಣಿಸಲ್ಪಟ್ಟದ್ದು. ಕಪ್ಪು ಪರದೆಯೊಳಗಿನ ನಾಲ್ಕು ಗೋಡೆಗಳ ನಡುವಿನ ಹೆರಿಗೆಯಂತ್ರದ ಜೀವನ ಕಂಡವರಿಗೇ ಪ್ರೀತಿ! ಹಾಗಂತ ಆ ಯಂತ್ರಗಳೇನು ಮನುಷ್ಯರಲ್ಲವೇ? ಅವರಿಗೂ ಮನಸ್ಸೆಂಬುದು ಇಲ್ಲವೇ? ಎಲ್ಲವನ್ನು ಉಚಿತವಾಗಿ ಪಡೆಯುವವರ, ತಮ್ಮ ಮೂಗಿನ ನೇರಕ್ಕೇ ಈ ದೇಶದ ಯೋಜನೆಗಳನ್ನು ನಿರ್ಧರಿಸುವವರ "ಕೈಹಿಡಿಸಿಕೊಂಡವರ" ಸ್ಥಿತಿಗತಿಗಳೇನು? ಅವರ ಅಂತರಂಗದೊಳಗೆ ಹುದುಗಿ ಹೋಗಿರುವ ಮಾತುಗಳು, ಅವರ ನಿಟ್ಟುಸಿರು ಸೂಚಿಸುವ ಅಸಹಾಯಕತೆಗಳಿಗೆ ಅಂಕೆಗಳ/ಪದಗಳ ರೂಪ ಕೊಟ್ಟಾಗ ಕಂಡುದುದಿಷ್ಟು.



  • 73.1% ಕುಟುಂಬಗಳ ವಾರ್ಷಿಕ ಆದಾಯ Rs.50,000 ಕ್ಕಿಂತಲೂ ಕಡಿಮೆ.
  • 55.3% ಹುಡುಗಿಯರ ವಿವಾಹ ಹದಿನೆಂಟು ವರ್ಷ ಪ್ರಾಯ ತುಂಬುವ ಮೊದಲೇ ನಡೆಯುತ್ತದೆ!
  • ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳೆಯರ ಸಂಖ್ಯೆ ಕೇವಲ 53.5%!
  • 53.2% ಮಹಿಳೆಯರು ಮನೆಯೊಳಗಿನ/ಸಾಂಸಾರಿಕ ಜಗಳಕ್ಕೀಡಾಗುತ್ತಿದ್ದಾರೆ.
  • 78.7% ಮಹಿಳೆಯರು ಯಾವುದೇ ಉದ್ಯೋಗವಿಲ್ಲದೆ ಅಂದರೆ ಗೃಹಿಣಿಯಾಗಿ ಜೀವನ ಸಾಗಿಸುತ್ತಿದ್ದಾರೆ.
  • 95.5% ಮಹಿಳೆಯರಿಗೆ "ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್" ಎನ್ನುವುದು ಇದೆಯೆಂಬುದೇ ತಿಳಿದಿಲ್ಲ. 
  • 75.5% ಮಹಿಳೆಯರು ಮದುವೆಯಾಗಲು ಹುಡುಗಿಯ ವಯಸ್ಸು ಹದಿನೆಂಟು ದಾಟಿರಬೇಕೆಂದು ಬಯಸುತ್ತಾರೆ. 
  • 88.3% ಮಹಿಳೆಯರು ಮದುವೆಯಾಗಲು ಹುಡುಗನ ವಯಸ್ಸು ಇಪ್ಪತ್ತೊಂದು ಕಳೆದಿರಬೇಕೆಂದು ಬಯಸುತ್ತಾರೆ.
  • 85.7% ಜನ ಮದುವೆಯ ಸಮಯದಲ್ಲಿ ಮೆಹ್ರ್ ಕೊಡಬೇಕೆಂದು ಬಯಸುತ್ತಾರೆ.
  • 83.9% ಜನ ವರನ ವಾರ್ಷಿಕ ಆದಾಯದಷ್ಟು ಮೆಹರ್ ಇರಬೇಕೆಂದು ಇಚ್ಛಿಸುತ್ತಾರೆ.
  • 75.1% ಮಹಿಳೆಯರು ವಿಚ್ಛೇದನ ಪಡೆಯುವಾಗ ಖುಲಾ ಕೊಡುವುದಾದಲ್ಲಿ ಮೆಹ್ರ್ ಅನ್ನು ಪಡೆಯಬಾರದೆಂದು ಇಚ್ಛಿಸುತ್ತಾರೆ.
  • 91.7% ಮಹಿಳೆಯರು ತನ್ನ ಪತಿ ಇನ್ನೊಂದು ಮದುವೆಯಾಗುವುದನ್ನು ಬಯಸುವುದಿಲ್ಲ.
  • 92.1% ಮಹಿಳೆಯರು ಮೌಖಿಕ/ಏಕಪಕ್ಷೀಯ ನಿರ್ಧಾರದ ವಿಚ್ಛೇದನ ರದ್ದಾಗಬೇಕೆಂದು ಬಯಸುತ್ತಾರೆ.
  • 88.3% ಮಹಿಳೆಯರು ತಲಾಕ್-ಇ-ಅಹ್ಸಾನ್ ವಿಚ್ಛೇದನದ ವಿಧಾನವಾಗಿರಬೇಕೆಂದು ಬಯಸುತ್ತಾರೆ.
  • 93% ಮಹಿಳೆಯರು ಪಂಚಾಯತಿ ಪ್ರಕ್ರಿಯೆ ವಿಚ್ಛೇದನಕ್ಕೆ ಮುನ್ನ ಇರಲೇಬೇಕೆಂದು ಪ್ರತಿಪಾದಿಸುತ್ತಾರೆ.
  • 72.3% ಮಹಿಳೆಯರು ವಿಚ್ಛೇದನಕ್ಕೆ ಮುನ್ನ ಪಂಚಾಯತಿ ಪ್ರಕ್ರಿಯೆ 3 ರಿಂದ 6 ತಿಂಗಳು ಇರಬೇಕೆಂದು ಪ್ರತಿಪಾದಿಸುತ್ತಾರೆ.
  • 88.5% ಮಹಿಳೆಯರು ಮೌಖಿಕ ವಿಚ್ಛೇದನಕ್ಕೆ ನೋಟೀಸ್ ಕಳುಹಿಸುವ ಖಾಜಿಯನ್ನು ಶಿಕ್ಷಿಸಬೇಕೆಂದು ಹೇಳುತ್ತಾರೆ.
  • 88.9% ಮಹಿಳೆಯರು ವಿಚ್ಛೇದನದ ನಂತರ ಮಕ್ಕಳನ್ನು ಪತ್ನಿಯೇ ಪಾಲಿಸಬೇಕೆಂದು ಬಯಸುತ್ತಾರೆ.
  • 95.6% ಮಹಿಳೆಯರು ತಾನು ಮಕ್ಕಳ ಪಾಲನೆ ಮಾಡಿದರೂ ವಿಚ್ಛೇದಿತ ಪತಿ ಪಾಲನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಕೊಡಬೇಕೆಂದು ಇಚ್ಛಿಸುತ್ತಾರೆ.
  • 92.7% ಮಹಿಳೆಯರು ಒಪ್ಪಿಗೆ ಹಾಗೂ ಆರೋಗ್ಯ, ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ನಿರ್ಧಾರಕ ಅಂಶಗಳಾಗಿರಬೇಕೆಂದು ಆಶಿಸುತ್ತಾರೆ.
  • 79.8% ಜನ ದತ್ತು ಸ್ವೀಕಾರಗೊಂಡ ಮಗುವೇ ಆಸ್ತಿಯ ವಾರಸುದಾರನಾಗಿರಬೇಕೆಂದು ಬಯಸುತ್ತಾರೆ.
  • 83.3% ಜನ ಮುಸ್ಲಿಮ್ ಕೌಟುಂಬಿಕ ಕಾನೂನಿನ ಕ್ರೋಢೀಕರಣ/ನವೀಕರಣ  ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಒದಗಿಸುತ್ತದೆಯೆಂಬ ಭರವಸೆ ವ್ಯಕ್ತಪಡಿಸುತ್ತಾರೆ.
  • 87.9% ಜನ ದಾರುಲ್ ಖಾಜಾದ ಚಟುವಟಿಕೆಗಳನ್ನು ರಾಜ್ಯವೇ ನಿಯಂತ್ರಿಸಬೇಕೆಂದು ಬಯಸುತ್ತಾರೆ.
  • 95.4% ಜನ ಮುಸ್ಲಿಮ್ ಮಹಿಳೆಯರಿಗೆ ಕಾನೂನು ನೆರವನ್ನು ಬಯಸುತ್ತಾರೆ.


           ಯಾರೋ ಬಲಪಂಥೀಯ ಇಂತಹ ಅಂಕಿಅಂಶಗಳನ್ನು ಕೊಟ್ಟಿದ್ದರೆ ನಮ್ಮ ಬುಜೀಗಳು ಆಕಾಶ-ಭೂಮಿ ಒಂದು ಮಾಡುತ್ತಿದ್ದರೇನೋ? "ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ" ಎಂಬ ಸಂಘಟನೆಯೊಂದು ಇತ್ತೀಚೆಗೆ ಮುಸ್ಲಿಮ್ ಮಹಿಳೆಯರ ಕೌಟುಂಬಿಕ ನ್ಯಾಯ ರಕ್ಷಣೆಯ ವಿಷಯಕವಾಗಿ ನಡೆಸಿದ ರಾಷ್ಟ್ರವ್ಯಾಪಿ ಸರ್ವೆಯಲ್ಲಿ ಕಂಡುಬಂದ ಮಹತ್ವದ ಅಂಶಗಳಿವು. ಅದಕ್ಕೇ ಮಾತೆತ್ತಿದರೆ ಹಿಂದೂಗಳಲ್ಲಿ ಶೋಷಣೆ-ಜಾತಿವಾದ-ಪಂಥೀಯತೆ-ಕೋಮುವಾದ ಎಂದೆಲ್ಲಾ ಬೊಂಬಡಾ ಬಜಾಯಿಸುವ ಈ ದೇಶದ ಸೆಕ್ಯುಲರುಗಳಿಗೆ, ಮತಾಂಧರಿಗೆ ಜಾಣ ಕುರುಡು! ಬುಡಕ್ಕೇ ಕೊಡಲಿಯೇಟು ಬಿದ್ದಾಗ, ಕೂತಿರುವ ಪೀಠವೇ ಸುಡುತ್ತಿರುವಾಗ ಮಾತೆಲ್ಲಿಂದ ಹೊರಟೀತು? ಎಷ್ಟು ದಿನ ಅಂತಾ ಕಣ್ಣೀರು ಸುರಿದೀತು? ಎಷ್ಟು ದಿನ ಕತ್ತಲು ಮುಸುಕಿದ್ದೀತು? ಅದಕ್ಕೇ ಕಪ್ಪು ಪರದೆ ಹರಿದು ಸಣ್ಣದಾದರೂ ಸಶಕ್ತ ಬೆಳಕೊಂದು ನಾಲ್ಕುಗೋಡೆಗಳನ್ನು ಭೇದಿಸಿ ತಲಾಕಿಗೇ ಸವಾಲೆಸೆಯುತ್ತಾ ಹೊರಟಿದೆ. ಅದು ಬರಬರುತ್ತಾ ಕ್ರಾಂತಿಜ್ವಾಲೆಯಾಗಿ ಈ ದೇಶದ ಅಸ್ಮಿತೆಯೊಂದಿಗೆ ಒಂದಾದರೆ ದೇಶಕ್ಕೂ ಲಾಭವೇ!

ಏನಿದು ಬಿ.ಎಂ.ಎಂ.ಎ.?

                  ಜನವರಿ 2007ರಲ್ಲಿ ಆರಂಭಗೊಂಡ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ್, ತನ್ನನ್ನು ತಾನು ಸ್ವತಂತ್ರ, ಜಾತ್ಯಾತೀತ, ಹಕ್ಕುಗಳೇ ಆಧಾರವಾಗುಳ್ಳ, ಮುಸ್ಲಿಮ್ ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿರುವ, ಭಾರತದ ಮುಸ್ಲಿಮರ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಬೃಹತ್ ಸಂಘಟನೆಯೆಂದು ಹೇಳಿಕೊಳ್ಳುತ್ತದೆ. ಭಾರತೀಯ ಸಮಾಜದಲ್ಲಿ ಮುಸ್ಲಿಮರು ಅದರಲ್ಲೂ ಮುಸ್ಲಿಮ್ ಮಹಿಳೆಯರು ತಮ್ಮ ಬಡತನವನ್ನು ನಿವಾರಿಸಿಕೊಂಡು ನ್ಯಾಯ, ಸಮಾನತೆ ಹಾಗೂ ಮಾನವ ಹಕ್ಕುಗಳನ್ನು ಪಡೆದು ಗೌರವಯುತ ಜೀವನವನ್ನು ನಡೆಸಲು ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡುವುದು ತನ್ನ ಉದ್ದೇಶವೆನ್ನುತ್ತದೆ. ಬಿ.ಎಮ್.ಎಮ್.ಎ ನ್ಯಾಯಕ್ಕಾಗಿನ ತನ್ನ ಹೋರಾಟದಲ್ಲಿ ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪ್ರಜಾಪ್ರಭುತ್ವದ ಮೌಲ್ಯಗಳು, ಜಾತ್ಯಾತೀತತೆ, ಸಮಾನತೆ, ಶಾಂತಿ ಹಾಗೂ ಮಾನವ ಹಕ್ಕುಗಳು ತನ್ನ ಮಾರ್ಗದರ್ಶಕ ಸೂತ್ರಗಳೆಂದು ನಂಬುತ್ತದೆ. ಬಿ.ಎಮ್.ಎಮ್.ಎ.ಯಲ್ಲಿ 60ಸಾವಿರಕ್ಕಿಂತಲೂ ಅಧಿಕ ಸದಸ್ಯರಿದ್ದು ಹದಿಮೂರು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ. ತನ್ನ ಸಿದ್ಧಾಂತವನ್ನು ಒಪ್ಪುವ ಯಾರೂ ಬೇಕಾದರೂ ಸದಸ್ಯರಾಗಲು ಅರ್ಹರೆಂದು ಬಿ.ಎಮ್.ಎಮ್.ಎ ಹೇಳಿಕೊಳ್ಳುತ್ತದೆ. ಅದು ಮುಸ್ಲಿಮ್ ಮಹಿಳೆಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ತಮ್ಮ ಶೈಕ್ಷಣಿಕ-ಸಾಮಾಜಿಕ ಅಭಿವೃದ್ಧಿ ಸಾಧಿಸಲು ತಾವೇ ನಾಯಕತ್ವ ವಹಿಸಿ ಮುಂದುವರಿಯಬೇಕೆಂದು ಬಯಸುತ್ತದೆ.

              ಮುಸ್ಲಿಮ್ ಸಮಾಜದ ಸ್ಥಿತಿಗತಿ ಹಾಗೂ ಅಗತ್ಯತೆಗಳನ್ನು ಅರಿತುಕೊಳ್ಳುವುದು, ಮುಸ್ಲಿಮ್ ಮಹಿಳಾ ಸಬಲೀಕರಣ ಹಾಗೂ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ, ನಾಗರಿಕ, ಕಾನೂನಾತ್ಮಕ, ಧಾರ್ಮಿಕ ಹಕ್ಕುಗಳನ್ನು ಖಚಿತಪಡಿಸುವುದು, ಸಾಂವಿಧಾನಿಕ ಅಂಶಗಳಾದ ಸಮಾನತೆ, ಸ್ವತಂತ್ರತೆ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದು, ಮತದ ಬಗ್ಗೆ ಧನಾತ್ಮಕ ಹಾಗೂ ಉದಾರ ವ್ಯಾಖ್ಯಾನವನ್ನು ಪ್ರಸಾರ ಮಾಡಿ ಅವುಗಳಿಂದ ನ್ಯಾಯ, ಸಮಾನತೆ, ಸಮಭಾವ ಹಾಗೂ ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ನೋಡಿಕೊಳ್ಳುವುದು, "ಮುಸ್ಲಿಮ್ ಪರ್ಸನಲ್ ಲಾ"ದಲ್ಲಿ ಕಾನೂನಾತ್ಮಕ ಸುಧಾರಣೆಗಳಿಗೆ ಮುಂದಾಗುವುದು,ಮತೀಯತೆ, ವಿನಾಶಕಾರೀ ಬಂಡವಾಳಶಾಹಿ ವ್ಯವಸ್ಥೆ, ಪಂಥೀಯತೆ, ಸರ್ವಾಧಿಕಾರಿ ಧೋರಣೆಗಳನ್ನು ವಿರೋಧಿಸಿ ಶಾಂತಿ-ನ್ಯಾಯ-ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವುದು, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಇತರ ಸಂಸ್ಥೆ-ಸಂಘಟನೆ, ಚಳುವಳಿಗಳೊಂದಿಗೆ ಸಹಭಾಗಿಯಾಗುವುದು, ಮುಸ್ಲಿಮ್ ಸಮಾಜದಲ್ಲಿನ ಜಾತಿವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು “ದಲಿತ ಮುಸ್ಲಿಮ”ರ ಸಮಸ್ಯೆಗಳನ್ನು ಹೋಗಲಾಡಿಸಲು ದನಿಯೆತ್ತುವುದು. ಮುಸ್ಲಿಮ್ ಸಮಾಜದೊಳಗೆ ಪ್ರತ್ಯೇಕ ಪ್ರಗತಿಪರ ದನಿಯೊಂದನ್ನು ಸೃಷ್ಟಿಸುವುದು ತನ್ನ ಮುಖ್ಯ ಧ್ಯೇಯೋದ್ದೇಶಗಳೆಂದು ಹೇಳಿಕೊಳ್ಳುತ್ತದೆ.

              ಮಹಾರಾಷ್ಟ್ರದ ನವಪಾದ, ಬೆಹ್ರಂಪಾದ, ಗರೀಬ್ ನಗರ್, ಇಂದಿರಾ ನಗರ್, ಪೈಪ್ ಲೈನ್, ಭಾರತ್ ನಗರ್, ಗೋಲಿಬಾರ್ ಜಿಲ್ಲೆಗಳಲ್ಲಿ ಬಿ.ಎಂ.ಎಂ.ಎ. ಕಾರ್ಯಾಚರಿಸುತ್ತಿದೆ. ಬಿಎಂಎಂಎ "ಯುಎನ್ ವುಮೆನ್" ಹಾಗೂ ಫೋರ್ಡ್ ಫೌಂಡೇಶನ್ ಸಹಕಾರದೊಂದಿಗೆ ತನ್ನದೇ ಪ್ರಕಾಶನವನ್ನು ಹೊಂದಿದ್ದು "ಲೊಕೇಟಿಂಗ್ ಮುಸ್ಲಿಮ್ ವುಮೆನ್ ಇನ್ ಇಂಡಿಯನ್ ಪಾಲಿಸಿ" ಇನ್ ಪೀಪಲ್ ಎಟ್ ದ ಮಾರ್ಜಿನ್ಸ್: ವೂಸ್ ಬಡ್ಜೆಟ್? ವೂಸ್ ರೈಟ್ಸ್? ಎನ್ನುವ ಪುಸ್ತಕವನ್ನು ಹೊರತಂದಿದೆ."ಧಾರ್ಮಿಕ ಅಲ್ಪ ಸಂಖ್ಯಾತರ ಸಬಲೀಕರಣ" ಕಾರ್ಯಕ್ರಮದ ಅಂಶಗಳನ್ನು ಅವಲೋಕಿಸಿದಾಗ ಈ ಕಾರ್ಯಕ್ರಮದಿಂದ ಮುಸ್ಲಿಮ್ ಮಹಿಳೆಯರಿಗೆ ಸಿಗುವ ಲಾಭ ಅತ್ಯಲ್ಪ ಎಂದು ಬಿ.ಎಂ.ಎಂ.ಎ. ಪ್ರತಿಪಾದಿಸುತ್ತದೆ. ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್, ಒರಿಸ್ಸಾ ಈ ನಾಲ್ಕು ರಾಜ್ಯಗಳಲ್ಲಿ ಪ್ರಧಾನ ಮಂತ್ರಿಗಳ ಹದಿನೈದು ಅಂಶಗಳ ಕಾರ್ಯಕ್ರಮದ ಅಧ್ಯಯನದಿಂದ ಮಾಹಿತಿ ಕಲೆ ಹಾಕಿದ ಬಿಎಂಎಂಎ ಮುಸ್ಲಿಮ್ ಮಹಿಳೆಯರಿಗಾಗಿ ಈ ಕಾರ್ಯಕ್ರಮದ ಅಂಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಲಹೆ ಮಾಡಿದೆ. ಹುಡುಗಿಯರಿಗಾಗಿ ಪ್ರತ್ಯೇಕ ಶಾಲೆಗಳು, ಎಲ್ಲಾ ಯೋಜನೆಗಳಲ್ಲಿ ಮುಸ್ಲಿಂ ಮಹಿಳೆಗೆ ಪ್ರತಿಯೊಂದು ಮನೆಯಲ್ಲಿ ಪ್ರಾಶಸ್ತ್ಯ ಕಲ್ಪಿಸುವುದು, ಮುಸ್ಲಿಮ್ ಮಹಿಳೆಯರಿಗೆ ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಅವಕಾಶ, ಹೆಚ್ಚಿನ ಬಂಡವಾಳ ಒದಗಿಸುವುದು ಇದರಲ್ಲಿನ ಮುಖ್ಯ ಅಂಶಗಳು.
ಒರಿಸ್ಸಾದ ಮುಸ್ಲಿಮ್ ಮಹಿಳೆಯರಿಗೆ ಸರಕಾರೀ ಯಂತ್ರದ ಬಗ್ಗೆಯಾಗಲೀ ಕಾನೂನಾತ್ಮಕ ವ್ಯವಹಾರಗಳ ಬಗ್ಗೆಯಾಗಲೀ ಸರಿಯಾದ ಶಿಕ್ಷಣವಿರಲಿಲ್ಲ. ತಮ್ಮೊಳಗಿನ ವಿವಾದ ತೊಡಕುಗಳ ನಿವಾರಣೆಗೆ ಅವರು ಗ್ರಾಮದ ಸರಪಂಚ್, ಬಸ್ತಿಯ ಸರ್ದಾರ್ ಅಥವಾ ಖಾಜಿಗಳನ್ನೇ ಅವಲಂಬಿಸಿದ್ದರು. ಇದರಿಂದ ನ್ಯಾಯವೆಂಬುದು ಮರೀಚಿಕೆಯಾಗಿತ್ತು. ಬಿಎಂಎಂಎ ಒರಿಸ್ಸಾದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿನ ಮುಸ್ಲಿಮ್ ಮಹಿಳೆಯರ ಸಹಾಯಕ್ಕೆ ಮುಂದಾಯಿತು. ಸರಕಾರದಿಂದ ತರಬೇತಿ ಪಡೆದ ಪ್ಯಾರಾ ಕಾನೂನು ಸ್ವಯಂಸೇವಕರ ಸಹಾಯದೊಂದಿಗೆ ಬಿಎಂಎಂಎ ಉಚಿತ ಕಾನೂನು ಸಹಾಯ, ಮಹಿಳಾ ಠಾಣೆ, ಮಹಿಳಾ ಜೈಲುಕೋಣೆಗಳನ್ನು ಮಾಡುವ ಮೂಲಕ ಕ್ರಾಂತಿಯನ್ನೇ ಮಾಡಿದೆ. ಇದರ ಫಲವಾಗಿ ಮುಸ್ಲಿಮ್ ಮಹಿಳೆಯರ ಕಾನೂನಾತ್ಮಕ ವಿಚಾರಗಳಲ್ಲಿ ತಮ್ಮ ಮತಗ್ರಂಥದಲ್ಲಿ ಹೇಳಿದ್ದನ್ನು ಅನುಸರಿಸುವ ಬದಲು ನ್ಯಾಯಾಲಯಕ್ಕೆ ಎಡತಾಕುವ ಪರಿಪಾಠ ಆರಂಭವಾಗಿದೆ. ಅಲ್ಲದೆ ಮುಸ್ಲಿಮ್ ಮಹಿಳೆಯರು ಫತ್ವಾಗಳ ವಿರುದ್ಧ ದನಿಯೆತ್ತಲು ಆರಂಭಿಸಿದ್ದಾರೆ. ಬಿಎಂಎಂಎ "ನಿಕಾಹ್ ನಾಮಾ"ದ ಮಾದರಿಯೊಂದನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದು ಖಾಜಿಗಳೊಂದಿಗೆ ಇದರ ಬಗೆಗೆ ಮಾತುಕತೆಯನ್ನೂ ಆರಂಭಿಸಿದೆ.

               ಮುಸ್ಲಿಮ್ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬಿಎಂಎಂಎ ಖಾಜಿಗಗಳನ್ನು ಮಾತುಕತೆಗೆ ಆಹ್ವಾನಿಸಿತು. ನಿಖಾಹ್, ತಲಾಕ್, ಆಸ್ತಿ ಕುರಿತಾದ ಕಾನೂನುಗಳ ಕುರಿತಾದ ಚರ್ಚೆಗೆ ವೇದಿಕೆಯನ್ನೂ ಸಿದ್ಧಪಡಿಸಿತು. ಆದರೆ ಮುಸ್ಲಿಮ್ ಕ್ಲೆರ್ಜಿಗಳು ಚರ್ಚೆಗೆ ಬರದೆ ತಪ್ಪಿಸಿಕೊಂಡರು. ಯಾರು ಚರ್ಚೆಗೆ ಬಂದಿದ್ದರೋ ಅವರ ಕೈಯಲ್ಲಿ ಯಾವುದೇ ಅಧಿಕಾರವಿರಲಿಲ್ಲ.  ಪ್ರವಾದಿ ಮಹಮ್ಮದ್ ಹೇಳಿದ ವಿಧಾನವನ್ನು ಅನುಸರಿಸದೆ ಮೂರು ಸಲ ತಲಾಕ್ ಹೇಳಿ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಆಘಾತಕಾರಿ ಪ್ರಕ್ರಿಯೆಯ ನಿಯಂತ್ರಣ, ದೇಶದ ಕಾನೂನು ಮೂರು ಸಲ ತಲಾಕ್ ಹೇಳಿ ಕೊಡುವ ವಿಚ್ಛೇದನಕ್ಕೆ ಯಾವುದೇ ಮಾನ್ಯತೆ ನೀಡದಿರುವುದು. ತಲಾಕಿಗೊಳಗಾದ ಮಹಿಳೆ ಅತ್ತ ಗಂಡನ ಮನೆಯೂ ಇಲ್ಲದೆ, ಇತ್ತ ತವರು ಮನೆಯ ಆಸರೆಯೂ ಇಲ್ಲದಿರುವಾಗ ಆಕೆಯ ಮುಂದಿನ ಜೀವನಕ್ಕೆ ಸರಿಯಾದ ನಿರ್ದೇಶನ ಇಲ್ಲದಿರುವುದು. ದಾರುಲ್ ಖಾಜಾಗಳ ಬಗ್ಗೆ ಸರಿಯಾದ ಮಾಹಿತಿಯ ಅವಶ್ಯಕತೆ, ವಿಚ್ಛೇದನದ ಸಮಯದಲ್ಲಿ ಕೊಡಬೇಕಾದ ಮೆಹ್ರ್ ಹಾಗೂ ಇದ್ದತ್ ಗಳ ಬಗೆಗಿನ ಸ್ಪಷ್ಟ ನಿರ್ಣಯ, ಅನ್ಯಾಯ-ಶೋಷಣೆಗೊಳಗಾದವರ ಆಶ್ರಯಕ್ಕೆ ಬೇಕಾದ ಅಗತ್ಯ/ತ್ವರಿತ ನಿವಾಸಗಳ ನಿರ್ಮಾಣ ಆ ಸಭೆಯಲ್ಲಿ ಚರ್ಚೆಗೆ ಬಂದ ವಿಷಯಗಳಾಗಿದ್ದವು. ತಮ್ಮ ಸಮಾಜದಲ್ಲಿ ಅಂಗವೈಕಲ್ಯ ಹೊಂದಿರುವವರಿಗೆ ಸಹಾಯ ಹಸ್ತ ಚಾಚುವುದು, ಮಹಿಳೆಯರಿಗೆ ಪಡಿತರ ಕಾರ್ಡುಗಳನ್ನು ಒದಗಿಸುವುದು, ಮನೆಮಠ ಕಳೆದುಕೊಂಡವರ ರಕ್ಷಣೆಗೆ ಧಾವಿಸುವುದು, ವಿಚ್ಛೇದನ ಹಾಗೂ ವಿಚ್ಛೇದಿತೆಗೆ ಜೀವನಾಂಶ ಒದಗಿಸಲು ನೆರವಾಗುವುದು, ಸಣ್ಣ ಉದ್ದಿಮೆಗಳ ಆರಂಭಕ್ಕಾಗಿ ಹಣಕಾಸಿನ ನೆರವನ್ನು ಒದಗಿಸುವುದು, ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು, ಆರೋಗ್ಯ ಶಿಬಿರಗಳನ್ನು ನಡೆಸುವುದು, ಸಾಲಸೌಲಭ್ಯಗಳನ್ನು ಒದಗಿಸುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಲ್ಲಿ ದೇಶದ ಹದಿಮೂರು ರಾಜ್ಯಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ ಬಿಎಂಎಂಎ.

                ಹಾಗಂತ ಇವರು ಮಾಡುವ ಎಲ್ಲವೂ ಸರಿ ಎನ್ನುವಂತಿಲ್ಲ. ಸಾಚಾರ್ ವರದಿ ಜಾರಿಯಾಗಲಿ ಎಂದು ಸಹಿಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿತ್ತು ಬಿಎಂಎಂಎ!  ಭಾರತದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವ ಎನ್ಜಿಓಗಳಿಗೆ ಹಣ ಸಹಾಯ ಮಾಡುವ ಫೋರ್ಡ್ ಫೌಂಡೇಶನ್ ಇದರ ಹಿಂದಿರುವುದು ಕೂಡಾ ಅನುಮಾನಕ್ಕೆ ಕಾರಣವಾಗಿರುವ ಇನ್ನೊಂದು ಅಂಶವಾಗಿದೆ. ತಮ್ಮೊಳಗಿನ ದಲಿತ ಮುಸ್ಲಿಮರಿಗೆ ಸಹಾಯ ಮಾಡುತ್ತೇವೆ ಎನ್ನುವ ಮೂಲಕ ಹಲವಾರು ಸತ್ಯಗಳನ್ನು ಅವರು ಒಪ್ಪಿಕೊಂಡಂತಾಯಿತು. ಒಂದು ತಮ್ಮವರು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎನ್ನುವುದು. ತಮ್ಮಲ್ಲಿ ಜಾತಿ ವ್ಯವಸ್ಥೆ ಇದೆ ಎನ್ನುವುದು ಇನ್ನೊಂದು. ಮತಾಂತರವಾಗಿ ಬಂದವರನ್ನು ತಮ್ಮವರು ಹೀನವಾಗಿ ನೋಡಿಕೊಳ್ಳುತ್ತಾರೆ ಎನ್ನುವುದು ಮಗದೊಂದು! ಇರಲಿ, ಅದು ಜಗತ್ತಿಗೇ ಗೊತ್ತಿರುವ ಸತ್ಯ. ಆದರೆ ತಮ್ಮವರೇ ಉದ್ಧಾರವಾಗಿಲ್ಲ ಎನ್ನುವ ಸತ್ಯ ಕಣ್ಣೆದುರು ಇರುವಾಗ ಈ ರೀತಿಯ ಮತಾಂತರವನ್ನು ಬಿಎಂಎಂಎ ಯಾಕೆ ವಿರೋಧಿಸುವುದಿಲ್ಲ? ತಮ್ಮೊಳಗಿನ ಜಾತಿ ವ್ಯವಸ್ಥೆಯನ್ನು ಯಾಕೆ ವಿರೋಧಿಸುವುದಿಲ್ಲ? ತಮ್ಮ ಹೆಣ್ಣುಮಕ್ಕಳ ವಿವಾಹಕ್ಕೆ ಕಷ್ಟವಾಗಿರುವಾಗ, ತಮ್ಮ ಗಂಡಸರು ಮನಸ್ಸಿಗೆ ಬಂದಷ್ಟು ವಿವಾಹವಾಗುತ್ತಾರೆ ಎನ್ನುವುದು ತಿಳಿದಿರುವಾಗ, ಮದುವೆಯಾಗಿ ತಾವು ಅನುಭವಿಸುತ್ತಿರುವ ಕಷ್ಟಪರಂಪರೆಯ ವಿರುದ್ಧ ಹೋರಾಟಕ್ಕಿಳಿದಿರುವಾಗ ಇನ್ನೊಂದು ಮತದ ಹುಡುಗಿಯನ್ನು ಲಪಟಾಯಿಸುವ ಲವ್ ಜಿಹಾದ್, ಸೆಕ್ಸ್ ಜಿಹಾದಿನಂತಹ ಕ್ರೌರ್ಯಗಳಿಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ? ತನ್ನ ವೆಬ್ ಸೈಟಿನಲ್ಲಿ ಮತಾಂಧತೆಯ ವಿರುದ್ಧ ಹೋರಾಡುತ್ತೇವೆ ಎಂದಿರುವ ಬಿಎಂಎಂಎ ಭಯೋತ್ಪಾದನೆ ವಿರುದ್ಧ ಕನಿಷ್ಟ ಹೇಳಿಕೆ ಕೊಟ್ಟದ್ದನ್ನು ಯಾರೂ ಕೇಳಿದ್ದಿಲ್ಲ!

             ಪರಿವರ್ತನೆ ಜಗದ ನಿಯಮ. ಇಸ್ಲಾಮಿನ ಮತಾಂಧತೆಯನ್ನು ಸುಡಬೇಕಾದರೆ ಅವರ ಹೆಣ್ಣುಮಕ್ಕಳೇ ಎದ್ದೇಳಬೇಕು. ಅಂತಹ ಕ್ಷೀಣ ಸಾಧ್ಯತೆಯೊಂದು ಗೋಚರಿಸುತ್ತಿದೆ. ಅಲ್ಲಲ್ಲಿ ಫತ್ವಾಗಳ ವಿರುದ್ಧ, ಮತಾಂಧ ಮಾನಸಿಕತೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿ ಆರಂಭವಾಗಿದೆ. ಅಮೇರಿಕಾದಲ್ಲಿ ಮುಸ್ಲಿಮ್ ಮಹಿಳೆಯರು ತಮಗಾಗಿಯೇ ಪ್ರತ್ಯೇಕ ಮಸೀದಿಯನ್ನೇ ನಿರ್ಮಿಸಿಕೊಂಡಿದ್ದಾರೆ. ಅಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಸೆಪ್ಟೆಂಬರ್ 15ರಂದು ಫ್ರಾನ್ಸಿನಲ್ಲಿ ಸಮ್ಮೇಳನವೊಂದರಲ್ಲಿ ಫತ್ವಾ ಹೊರಡಿಸುವ ಮೌಲ್ವಿಗಳಿಬ್ಬರು ಮಹಿಳಾ ಸಮಾನತೆಯನ್ನು ಟೀಕಿಸುತ್ತಿದ್ದಾಗ ವಿವಸ್ತ್ರರಾಗಿ ಮುಸ್ಲಿಮ್ ಮಹಿಳೆಯರಿಬ್ಬರು ಪ್ರತಿಭಟನೆ ನಡೆಸಿದ್ದು ಮತಾಂಧರನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಕಪ್ಪು ಪರದೆ-ಕತ್ತಲ ಕೋಣೆಯಂದ ಹೊರಬಂದು ಕನಿಷ್ಟ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೆಲ ಮನಸ್ಸುಗಳು ಮುಂದಾಗಿವೆ ಎನ್ನುವುದೇ ವಿಶೇಷ! ಈ ಹೋರಾಟದಿಂದ ಮುಸ್ಲಿಮ್ ಜಗತ್ತಿನಲ್ಲಿ ಪರಿವರ್ತನೆಯಾದರೆ ಅದರಿಂದ ದೇಶಕ್ಕೂ ಒಳ್ಳೆಯದು, ಪ್ರಪಂಚಕ್ಕೂ, ಇಸ್ಲಾಮಿಗೂ!
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ