ಪುಟಗಳು

ಗುರುವಾರ, ಸೆಪ್ಟೆಂಬರ್ 3, 2015

ಮಾನವದ್ವೇಷಿಗಳ ಮೇಲೆ ಬುದ್ದಿಜೀವಿಗಳಿಗೇಕೆ ಪ್ರೀತಿ?

ಮಾನವದ್ವೇಷಿಗಳ ಮೇಲೆ ಬುದ್ದಿಜೀವಿಗಳಿಗೇಕೆ ಪ್ರೀತಿ?

             ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಹೊರಟ ಅರಸನಿಗೆ ಅಚ್ಚರಿ ಕಾದಿತ್ತು. ರಾಜಮಹಲಿನಿಂದ ಮಸೀದಿಯವರೆಗಿನ ರಾಜಮಾರ್ಗದ ಉದ್ದಕ್ಕೂ ಕಿಕ್ಕಿರಿದು ನೆರೆದಿತ್ತು ಜನತೆ. ತಮಗೆ ನ್ಯಾಯ ಕೊಡೆಂದು ಆರ್ತರಾಗಿ ಅರಿಕೆ ಮಾಡಿಕೊಳ್ಳುತ್ತಿದ್ದರು ಜನ. ಆ ಜನಸಂದಣಿಯನ್ನು ದಾಟಿ ಮುಂದೆ ಹೋಗಲು ಚಕ್ರವರ್ತಿಗೆ ಸಾಧ್ಯವಾಗಲಿಲ್ಲ. ಪ್ರಾರ್ಥನೆಯ ವೇಳೆ ಮೀರುತ್ತಿತ್ತು. ಕ್ಷಣ ಆಲೋಚಿಸಿದಾಗ ತಟಕ್ಕನೆ ದಯಾಮಯನಾದ ಆ ಮಹಾಪ್ರಭುವಿಗೆ ಅದ್ಭುತವಾದ ದಾರಿಯೊಂದು ಕಂಡಿತು. ಕೂಡಲೇ ಗಜಶಾಲೆಯಲ್ಲಿದ್ದ ಆನೆಯನ್ನು ಅಲ್ಲಿಗೆ ತರಿಸಿ ಜನರ ಮೇಲೆ ಬಿಡಲು ಆಜ್ಞಾಪಿಸಿದ. ಅಮಾಯಕರ ಮೇಲೆ ಕರಿಗಳು ಅರಿಭಯಂಕರವಾಗಿ ನುಗ್ಗಿದವು. ಕ್ಷಣಮಾತ್ರದಲ್ಲಿ ಮಾರ್ಗದುದ್ದಕ್ಕೂ ಹೆಣಗಳ ಸಾಲು! ಆದರೇನು ರಾಜಮಾರ್ಗ ತೆರೆದಿತ್ತು. ರಾಜ ಠೀವಿಯಿಂದ ದೇವರ ಪ್ರಾರ್ಥನೆಗೆ ಮಸೀದಿಯತ್ತ ಹೊರಟ!

                          ಮೇಲಿನ ಘಟನೆ ಬರೆದವರ್ಯಾರೂ ಭಜರಂಗಿಗಳಲ್ಲ, ನರೇಂದ್ರ ಮೋದಿಗೆ ನಮೋ ಎಂದವರೂ ಅಲ್ಲ. ಯಾವ ಮತಾಂಧನ ಹೆಸರನ್ನು ತೆಗೆದು ಈ ದೇಶದ ಕ್ಷಿಪಣಿತಜ್ಞನ ಹೆಸರನ್ನು ರಸ್ತೆಯೊಂದಕ್ಕಿಡಲಾಯಿತೋ ಅಂತಹ ಮತಾಂಧನ ಸಮಕಾಲೀನ ಕಾಫಿಖಾನನ "Muntakhabu-l Lukab" ಪುಸ್ತಕದ ತುಣುಕು ಇದು. ಹೌದು... ಔರಂಗಜೇಬನ ಬಗ್ಗೆ ಕಿಂಚಿತ್ ಮಾಹಿತಿ ಇದ್ದವರಿಗೂ ಇದರಲ್ಲೇನೂ ಆಶ್ಚರ್ಯ ಕಾಣಿಸಲಿಕ್ಕಿಲ್ಲ. ಯಾಕೆಂದರೆ ಆತನೊಬ್ಬ ಮಾನವ ದ್ವೇಷಿ. ಹಿಂಸಿಸುವುದರಲ್ಲಿ ಆತನಿಗೆ ತನ್ನವರು, ಪರರು ಎಂಬ ಭೇದಭಾವವೇ ಇರಲಿಲ್ಲ. ತನ್ನ ಭಯದಿಂದ ಆಗ್ರಾ ಕೋಟೆಯಲ್ಲಿ ಭದ್ರವಾಗಿ ಬಾಗಿಲು ಮುಚ್ಚಿ ಕುಳಿತಿದ್ದ ಮುದಿ ತಂದೆ ಷಾಜಹಾನನನ್ನು ಮಣಿಸಲು ನೀರು ಸರಬರಾಜನ್ನೇ ನಿಲ್ಲಿಸಿ ಅವನು ತೃಷೆಯಿಂದ ಬಳಲಿ ವಿಲವಿಲ ಒದ್ದಾಡುವಂತೆ ಮಾಡಿದ ಸುಪುತ್ರ ಅವನು. ತಂದೆಗೆ ಪ್ರೀತಿಪಾತ್ರನಾಗಿದ್ದ ತನ್ನ ಅಣ್ಣನ ತಲೆಯನ್ನು ಕತ್ತರಿಸಿ ಬಂಗಾರದ ಹರಿವಾಣದಲ್ಲಿಟ್ಟು ತನ್ನಪ್ಪನಿಗೆ ಉಡುಗೊರೆ ಕಳುಹಿಸಿದ ಮಹಾಪಾಪಿ ಔರಂಗಜೇಬ್!

                    ಸಿಂಹಾಸನಕ್ಕಾಗಿ ಸಹೋದರರನ್ನೆಲ್ಲಾ ಸಂಹರಿಸಿದಂತೆಯೇ ರಾಜ್ಯ ದೊರೆತ ಮೇಲೆ ಕಟ್ಟಿಕೊಂಡವರನ್ನು-ಇಟ್ಟುಕೊಂಡವರನ್ನು-ಸ್ವಂತಮಕ್ಕಳನ್ನೂ ದಾರುಣವಾಗಿ ಹಿಂಸಿಸಿದ. ವಾರಸಿಕೆಗಾಗಿ ನಡೆದ ಯುದ್ಧದಲ್ಲಿ ತನಗೆ ತಂದೆ ಒಪ್ಪಿಸಿದ ಪ್ರತೀ ಕೆಲಸವನ್ನೂ ಕಮಕ್ ಕಿಮಕ್ ಎನ್ನದೆ ಮಾಡಿದ ಹಿರಿಯ ಪುತ್ರ ಮಹಮ್ಮದ್ ಸುಲ್ತಾನ್ ತಂದೆಯ ಕುಕೃತ್ಯಗಳಿಂದ ಬೇಸತ್ತು ಚಿಕ್ಕಪ್ಪನ ಪಕ್ಷ ಸೇರಿದ. ಚಿಕ್ಕಪ್ಪ ಸತ್ತ ಮೇಲೆ ಹಿಂದಿರುಗಿ ಕ್ಷಮೆ ಕೇಳಿದರೂ ಲಕ್ಷಿಸದೆ ಆತನನ್ನು ಸೆರೆಯಲ್ಲಿಟ್ಟ. ಎರಡನೆಯ ಮಗ ಗೋಲ್ಕೊಂಡಾ ಸುಲ್ತಾನನೊಂದಿಗೆ ಸೇರಿಕೊಂಡನೆಂಬ ಅನುಮಾನ ಮಾತ್ರದಿಂದಲೇ ಎಂಟು ವರ್ಷಗಳ ಕಾಲ ಕಾರಾಗೃಹಕ್ಕೆ ತಳ್ಳಿದ. ಮೂರನೆಯ ಮಗ ತನ್ನ ಸಿಂಹಾಸನವನ್ನು ತುಳಿದನೆಂಬ ಕಾರಣವೊಡ್ಡಿ ಅವನನ್ನು ದೇಶದಿಂದ ಹೊರಗಟ್ಟಿದ. ನಾಲ್ಕನೆಯ ಮಗ ಅಪ್ಪನ ಮತೀಯ ಹುಚ್ಚನ್ನು ತಾಳಲಾರದೆ ಬಂಡಾಯವೆದ್ದು ಪರ್ಷಿಯಾಕ್ಕೆ ಓಡಿ ಹೋದ. ಮಕ್ಕಳು ತಿರುಗಿಬಿದ್ದರೆಂದು ಪತ್ನಿ ನವಾಬ್ ಬಾಯಿಯನ್ನು, ಕಾವ್ಯ-ಸಂಗೀತದಲ್ಲಿ ಪ್ರಾವೀಣ್ಯತೆ ಸಾಧಿಸಿದ ತಪ್ಪಿಗೆ ಮಗಳು ಜೇಬುನ್ನೀಸಾಳನ್ನು ಸಾಯುವವರೆಗೆ ಸೆರೆಯಲ್ಲಿರಿಸಿದ. ತನ್ನ ಶಿಷ್ಯ ಚಕ್ರವರ್ತಿಯಾದ ಸುದ್ದಿ ಕೇಳಿ, ಗುರುದಕ್ಷಿಣೆಯಾಗಿ ತನಗೇನಾದರೂ ಜಹಗೀರನ್ನು ಕೊಟ್ಟೇ ಕೊಡುವನೆಂದು ಆಡುತ್ತಾ ಹಾಡುತ್ತಾ ಬಂದ ತನ್ನ ಗುರುವರ್ಯನನ್ನೇ ಉಪೇಕ್ಷಿಸಿ, ಮೂರು ತಿಂಗಳ ಬಳಿಕ ಕರೆಸಿ, ಬಾಯಿಗೆ ಬಂದಂತೆ ಉಗಿದು, ಭರ್ಜರಿಯಾಗಿ ಗುರುಪೂಜೆ ಮಾಡಿ ಕಳುಹಿಸಿದ ಶಿಷ್ಯರತ್ನ ಅವನು!

                      ಔರಂಗಜೇಬನ ಆಡಳಿತದಲ್ಲಿ ಕಾಫಿರರ ಬೇಟೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಸಹಸ್ರಾರು ದೇವಾಲಯಗಳು, ಶಾಲೆಗಳು ನಾಶವಾದವು. ಇದಕ್ಕೆ ಇಂದಿಗೂ ವಿರೂಪಗೊಂಡು ನಿಂತಿರುವ ಕಾಶಿಯ ವಿಶ್ವನಾಥ, ಮಥುರೆಯ ವಾಸುದೇವರೇ ಸಾಕ್ಷಿ! ದೇವಾಲಯದಿಂದ ಬಂಡಿಗಳಲ್ಲಿ ಹೇರಿಕೊಂಡು ಬಂದ ವಿಗ್ರಹಗಳನ್ನು ತನ್ನ ಪತ್ನಿ ಹೋಗುವ ಮಸೀದಿಗೆ ಮೆಟ್ಟಿಲುಗಳನ್ನಾಗಿ ಹಾಕಿದವ ಯಾವ ಕೋನದಿಂದ ಪರಮತ ಸಹಿಷ್ಣುವಾಗಿ ಕಂಡನೋ ದೇವರೇ ಬಲ್ಲ! ವಾರಣಸಿಯ ಶಾಲೆಗಳ ಧ್ವಂಸವನ್ನು, ಕಾಶಿಯ ದೇವಾಲಯವನ್ನು ನಾಶ ಮಾಡಿ ಅದರದ್ದೇ ಸ್ಥಂಭಗಳನ್ನುಪಯೋಗಿಸಿ ಮಸೀದಿ ನಿರ್ಮಿಸಿದುದನ್ನು, ಸೋಮನಾಥದಲ್ಲಿ ಮತ್ತೆ ತಲೆ ಎತ್ತಿ ನಿಂತಿದ್ದ ದೇಗುಲವನ್ನು ಧ್ವಂಸಗೊಳಿಸುದುದನ್ನು, ಮಥುರೆಯನ್ನು ಮಲಿನಗೊಳಿಸಿದ ಔರಂಗಜೇಬನ "ಪರಾಕ್ರಮ"ವನ್ನು, ತನ್ನ ಆಳ್ವಿಕೆಯ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಜೋಧ್ ಪುರದಲ್ಲಿದ್ದ ದೇವಾಲಯಗಳನ್ನು ನೆಲಸಮ ಮಾಡಿ ಅಲ್ಲಿಂದ ಮಣ ಭಾರದ ವಿಗ್ರಹಗಳನ್ನೂ, ಆಭರಣಗಳನ್ನು ಅನೇಕ ಬಂಡಿಗಳಲ್ಲಿ ಹೇರಿಕೊಂಡು ಬಂದ ಖಾನ್ ಬಹಾದ್ದೂರ್ ಜಹಾನನಿಗೆ ಔರಂಗಜೇಬನಿಂದ ದೊರೆತ ರಾಜಮರ್ಯಾದೆಯನ್ನು ಔರಂಗಜೇಬನ ಆಸ್ಥಾನದಲ್ಲಿ ನಲವತ್ತು ವರ್ಷಗಳ ಕಾಲವಿದ್ದು ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡು ತನ್ನ "ಮಾ-ಅಸಿರ್-ಐ ಆಲಾಂಗಿರಿ" ಯಲ್ಲಿ ಪರ್ಷಿಯನ್ ಲೇಖಕ ಮುಹಮ್ಮದ್ ಸಾಕಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಉದಯಪುರದ ಬಳಿ 123, ಚಿತ್ತೋಡಿನಲ್ಲಿ 63, ತನ್ನ ಮಿತ್ರರಾಜ್ಯವಾಗಿದ್ದ ಅಂಬೇರಿನಲ್ಲಿ 66 ದೇವಾಲಯಗಳನ್ನು ಒಂದೇ ವರ್ಷದಲ್ಲಿ ನಿರ್ನಾಮ ಮಾಡಿದ ಈ "ಜಿಂದಾಪೀರ್"! ಇಂತಹ ಸರ್ವನಾಶ ಅವನ ಐವತ್ತು ವರ್ಷಗಳ ಆಳ್ವಿಕೆಯಲ್ಲಿ ಎಷ್ಟು ನಡೆದಿರಬಹುದು ಊಹಿಸಿ!

                ಗುರು ತೇಜ್ ಬಹಾದುರರ ಶಿಷ್ಯರಾದ ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ದೇಹವನ್ನು ಛಿದ್ರಗೊಳಿಸಿದ. ಇನ್ನಿಬ್ಬರನ್ನು ಕುದಿಯುವ ನೀರಿಗೂ, ಉರಿಯುವ ಬೆಂಕಿಗೂ ಎತ್ತಿ ಒಗೆದ. ಹಾಡುಹಗಲೇ ತೇಜ್ ಬಹಾದೂರರ ತಲೆಯನ್ನು ಕತ್ತರಿಸಿ ಚೆಲ್ಲಿದ. ಮರಾಠ ವೀರ ಸಂಭಾಜಿಯ ಕಣ್ಣುಗಳನ್ನು ತಿವಿದು, ನಾಲಿಗೆ ಕತ್ತರಿಸಿ, ಶರೀರದ ಅಂಗಾಂಗಗಳನ್ನು ಒಂದೊಂದಾಗಿ ಕತ್ತರಿಸಿ ಆ ಮಾಂಸವನ್ನು ನಾಯಿಗಳಿಗೆ ಹಾಕಿ ಚಿತ್ರಹಿಂಸೆ ಕೊಟ್ಟು ಕೊಂದ. ಅವನ ರುಂಡದಲ್ಲಿ ಹುಲ್ಲುತುಂಬಿ ಡೋಲು ಬಾರಿಸುತ್ತಾ ಕಹಳೆ ಊದುತ್ತಾ ದಖ್ಖನಿನ ಮುಖ್ಯ ಪಟ್ಟಣಗಳಲ್ಲಿ ಪ್ರದರ್ಶಿಸಲು ಏರ್ಪಾಟು ಮಾಡಿದ. ಗೋಲ್ಕೊಂಡಾದ ಮಂತ್ರಿಗಳಾಗಿದ್ದ ಅಕ್ಕಣ್ಣ-ಮಾದಣ್ಣರನ್ನು ಕೊಲ್ಲಿಸಿ ಅವರ ತಲೆಗಳನ್ನು ತನಗೆ ತೃಪ್ತಿಯಾಗುವಷ್ಟು ಆನೆಗಳ ಕಾಲುಗಳ ಕೆಳಗೆ ಹಾಕಿ ನುಜ್ಜುಗುಜ್ಜು ಮಾಡಿಸಿದ.

                 ಅತ್ತ ತನ್ನದೇ ಮತದ ಷಿಯಾಗಳನ್ನೂ ಬಿಡಲಿಲ್ಲ. ಸೂಫಿಗಳನ್ನು, ಫಕೀರರನ್ನೂ ಬೇಟೆಯಾಡಿದ ಈ ಸೆಕ್ಯುಲರ್. ಮುಸ್ಲಿಮರೊಳಗೆ ಜಾತಿ ಇಲ್ಲ ಎನ್ನುವ ಮೂರ್ಖರಿಗೆ ಇದು ಹೇಗೆ ಕಾಣಲಿಲ್ಲವೋ? ಮೊಗಲ್ ದರ್ಬಾರಿನಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದ ರಜಪೂತರನ್ನು, ಉದಾರ ಸ್ವಭಾವದ ಮುಸ್ಲಿಂ ಪ್ರಮುಖರನ್ನು ನೀರಿಲ್ಲದ ಸ್ಥಳಗಳಲ್ಲಿ ಹಾಕಿ ತನ್ನ ಆಸ್ಥಾನವನ್ನು ಸುನ್ನಿ ಉಲೇಮಾಗಳಿಂದ ತುಂಬಿಸಿಬಿಟ್ಟ. ಸರ್ಕಾರೀ ಕೆಲಸಗಳಲ್ಲಿದ್ದ ಹಿಂದೂಗಳನ್ನು ತೆಗೆದು ಹಾಕಿ ಸುನ್ನಿಗಳನ್ನು ನೇಮಿಸಬೇಕೆಂದು ಪ್ರಾಂತೀಯ ಗವರ್ನರುಗಳಿಗೆ ಫರ್ಮಾನು ಹೊರಡಿಸಿದ. ಹಿಂದೂಗಳ ಮೇಲೆ ಸರಕು-ಸಾಗಾಟ ತೆರಿಗೆಯನ್ನು ಹೆಚ್ಚಿಸಿದ. ದರಬಾರಿನಲ್ಲಿ ಕಲೆ, ಸಂಗೀತಗಳನ್ನು ನಿಷೇಧಿಸಿದ. ಕವಿ, ಪಂಡಿತ, ಗಾಯಕ, ನೃತ್ಯಪಟುಗಳನ್ನು ಒದ್ದೋಡಿಸಿದ. ಕಾಲಗಣನೆಯ ಪದ್ದತಿಯನ್ನು ಸೌರಮಾನದಿಂದ ಚಾಂದ್ರಮಾನಕ್ಕೆ ಬದಲಾಯಿಸಿದ. ರಾಜಲಾಂಛನ, ವೇಷಭೂಷಣ,ಆಭಿವಂದನೆ-ಅಭಿನಂದನೆಯ ಶೈಲಿ ಹೀಗೆ ಎಲ್ಲಾ ರೀತಿ-ರಿವಾಜುಗಳನ್ನು ಮಾರ್ಪಡಿಸಿದ. 1679ರ ಏಪ್ರಿಲ್ 2ರಂದು ಕಾಫಿರರ ದೇಶವನ್ನು ಪವಿತ್ರಗೊಳಿಸುವ ಸಲುವಾಗಿ ಹಿಂದೂಗಳ ಮೇಲೆ ಬಹಿರಂಗ ಜಿಹಾದ್ ಘೋಷಿಸಿದ. ಜಿಜಿಯಾ ತಲೆಗಂದಾಯ ಹಿಂದೂವಾಗಿ ಉಳಿದುದಕ್ಕೆ ಔರಂಗಜೇಬನಿಗೆ ಅವನು ಒಪ್ಪಿಸಬೇಕಾಗಿದ್ದ ವಿಶೇಷ ಮುಡಿಪು!(ಈಗಿನ ನಮ್ಮ ಸೆಕ್ಯುಲರ್ ಸರಕಾರಗಳು ಮಾಡುತ್ತಿರುವುದೂ ಇದನ್ನೇ!). ತನ್ನ ಅಧಿಕಾರ-ಸಂಪತ್ತು-ಸೈನಿಕ ಬಲ ಎಲ್ಲವನ್ನೂ ಹಿಂದೂಗಳನ್ನು ಪರಿಪರಿಯಾಗಿ ಪೀಡಿಸಿ ಅವರು ಇಸ್ಲಾಂ ಸ್ವೀಕರಿಸದೆ ಬೇರೆ ವಿಧಿಯೇ ಇಲ್ಲವೆನ್ನುವ ಪರಿಸ್ಥಿತಿ ಸೃಷ್ಟಿಸಲು ಧಾರಾಳವಾಗಿ ಬಳಸಿಕೊಂಡ.

                    ಆ ಕಾಲಕ್ಕೆ ಇಡೀ ಪ್ರಪಂಚದಲ್ಲೇ ಬಲಿಷ್ಟವಾಗಿದ್ದ ಸಾಮ್ರಾಜ್ಯವೊಂದರ ಚಕ್ರವರ್ತಿಯಾಗಿ ಭರ್ತಿ ಅರ್ಧಶತಮಾನಗಳ ಕಾಲ ಆಳಿದಾತನಿಗೆ ಪ್ರಜೆಗಳೊಂದಿಗೆ ಹೇಗೆ ವರ್ತಿಸಬೇಕೆನ್ನುವ ಮೂಲಪಾಠವೇ ತಿಳಿಯಲಿಲ್ಲ. ಮತದ ಹೆಸರಲ್ಲಿ ಮಿತಿಮೀರಿದ ದಬ್ಬಾಳಿಕೆ ನಡೆಸಿ ಗುಡಿಗೋಪುರ, ಶಾಲೆಗಳನ್ನೂ ಧ್ವಂಸಮಾಡಿ, ಪ್ರಜೆಗಳನ್ನು ಸದಾ ಅನ್ಯಾಯಕ್ಕೀಡುಮಾಡಿ, ಎಲ್ಲರ ವಿಶ್ವಾಸ ಕಳೆದುಕೊಂಡು ಯಾರನ್ನೂ ನಂಬದೆ, ತನ್ನ ನೆರಳನ್ನು ನೋಡಿಯೇ ಬೆದರಿ ಬಿದ್ದು, ನಿರಂತರ ದಂಗೆಗಳನ್ನೆದುರಿಸುತ್ತಾ ನಿಕೃಷ್ಟ ಜೀವನ ನಡೆಸಿದವನ ಹೆಸರನ್ನು ರಸ್ತೆಗಿಟ್ಟವರ ಮೌಢ್ಯಕ್ಕೆ ಏನನ್ನಬೇಕು? ಇಂತಹ ಕ್ರೂರಿಯ ಆಸ್ಥಾನದಲ್ಲಿದ್ದುಕೊಂಡೇ ಸ್ವಲ್ಪವೂ ಹೆದರದೆ ಆತನ ಪರಮತ ದ್ವೇಷವನ್ನೂ, ಸ್ವಮತ ಪಕ್ಷಪಾತವನ್ನೂ, ಅನ್ಯಾಯದ ತೆರಿಗೆ-ಕಾನೂನು-ಕಟ್ಟಳೆಗಳನ್ನು ಪ್ರಾಮಾಣಿಕವಾಗಿ ಬರೆದಿಟ್ಟಿರುವಾಗ ಈ ಆಧುನಿಕ ಕಾಲದ ಎಡಬಿಡಂಗಿಗಳು ಚರಿತ್ರೆಯನ್ನು ತಮಗೆ ಬೇಕಾದಂತೆ ತಿರುಚಿ ಮತಾಂಧನೊಬ್ಬನನ್ನು ಪರಮ ಸಾಧುವಿನಂತೆ, ಪ್ರಜೆಗಳೆಲ್ಲರನ್ನೂ ಸಮದೃಷ್ಟಿಯಿಂದ ನೋಡಿದ ಮಹಾನ್ ಜಾತ್ಯಾತೀತನಂತೆ ಚಿತ್ರಿಸಿದ ಕಾರಣವಾದರೂ ಏನು? ತನಗೆ ಕಂಡ ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಹಿಂಸಿಸಿ ತನ್ನಿಂದ ಯಾರಿಗೂ ಉಪಕಾರವಾಗದಂತೆ ಬದುಕಿ ಸತ್ತವನೊಬ್ಬ ಕೆಲವರಿಗೆ ಆದರ್ಶವಾಗುತ್ತಾನೆಂದರೆ ಅವರು ಆತನ ಸಂತಾನದವರೇ ಇರಬೇಕು!




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ