ಪುಟಗಳು

ಶನಿವಾರ, ಸೆಪ್ಟೆಂಬರ್ 15, 2018

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ


              "ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರಸ್ವತೀ ಸಿಂಧುಭಿಃ ಪಿನ್ವಮಾನಾ"
 ಋಗ್ವೇದದ ಈ ಋಕ್ ನಿಜಾರ್ಥದಲ್ಲಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಹೌದು ಇಂದ್ರನೂ ನಮ್ಮ ರಕ್ಷಣೆಗೆ ನರೇಂದ್ರನಾಗಿ ಬಂದಿದ್ದಾನೆ. ಅದೇ ನರೇಂದ್ರನ ನೇತೃತ್ವದಲ್ಲಿ ನೇಪಥ್ಯಕ್ಕೆ ಸರಿದಿದ್ದ ಪುಣ್ಯಗರ್ಭೆ ಸರಸ್ವತಿ ಜನರ ಮನಸ್ಸನ್ನು ಮತ್ತೆ ಮುಟ್ಟಲಿದ್ದಾಳೆ, ತಟ್ಟಲಿದ್ದಾಳೆ, ಪ್ರವಹಿಸಲಿದ್ದಾಳೆ. ಋಗ್ವೇದದಿಂದ ಅಥರ್ವದ ತನಕವೂ ವ್ಯಾಪಿಸಿಕೊಂಡು, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಸ್ತುತಿಸಲ್ಪಟ್ಟು ಭಾರತೀಯರ ನಿತ್ಯ ಸ್ತೋತ್ರದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡು ಸ್ಮರಿಸಲ್ಪಡುತ್ತಿದ್ದ ಸರಸ್ವತಿ ಈಗ ಮತ್ತೊಮ್ಮೆ ಭಾರತೀಯರ ಮನೆಮನಗಳಲ್ಲಿ ಪ್ರವಹಿಸಲಿದ್ದಾಳೆ. "ಹರ್ ಕಿ ಧುನ್"ನಲ್ಲಿ ಜನಿಸಿ ಭೃಗುಕುಚ್ಛದ ಬಳಿ ರತ್ನಾಕರನನ್ನು ಸೇರುವವರೆಗೆ, ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಾಗಿ, 1300 ಕಿಮೀಗೂ ಹೆಚ್ಚು ದೂರ ಹರಿಯುತ್ತಿದ್ದ ಈ ಸಪ್ತ ಸಿಂಧು ಮತ್ತೊಮ್ಮೆ ಭಾರತವಿಡೀ ಸಂಚರಿಸಲಿದ್ದಾಳೆ. ಆದರೆ ನೇರವಾಗಿ ಅಲ್ಲ, ಮತ್ತೆ ಗುಪ್ತಗಾಮಿನಿಯಾಗಿಯೇ.

           ದಕ್ಷಬ್ರಹ್ಮನ ಆಹ್ವಾನದಂತೆ ಯಜ್ಞಸ್ಥಳಕ್ಕೆ ಬಂದ ಸರಸ್ವತಿ "ಸುರೇಣು" ಎನ್ನುವ ಹೆಸರಿನಿಂದ ವಿಖ್ಯಾತಳಾದಳು. ವಸಿಷ್ಠರ ಮೇಲಿನ ಪ್ರೀತಿಯಿಂದ ಅವರ ಆಹ್ವಾನವನ್ನು ಮನ್ನಿಸಿ ಕುರುಕ್ಷೇತ್ರದಲ್ಲಿ ಅವರು ಮಾಡುತ್ತಿದ್ದ ಯಜ್ಞಶಾಲೆಗೆ ಆಗಮಿಸಿದಾಗ ಅಲ್ಲಿನ ದ್ವಿಜಶ್ರೇಷ್ಠರು ಅವಳನ್ನು "ಓಘವತೀ" ಎಂದು ಕರೆದರು. ಹಿಮವತ್ಪರ್ವತದಲ್ಲಿ ಯಜ್ಞಮಾಡುತ್ತಿದ್ದ ಬ್ರಹ್ಮ ಸರಸ್ವತಿಯನ್ನು ಆಹ್ವಾನಿಸಿದಾಗ ಅಲ್ಲಿಗೆ ಆಗಮಿಸಿದ ಸರಸ್ವತಿಯನ್ನು ಯಜ್ಞವೇದಿಯಲ್ಲಿದ್ದವರು "ವಿಮಲೋದಾ" ಎಂದು ಕರೆದರು.  ಸಪ್ತಸರಸ್ವತಿಯರು ಏಕೀಭೂತರಾದ ಆ ಸ್ಥಳ "ಸಪ್ತಸಾರಸ್ವತ ತೀರ್ಥ"ವೆಂದೇ ಪ್ರಸಿದ್ಧಿಯನ್ನು ಹೊಂದಿತು. ಇಂತಹ ಸರಸ್ವತಿಯನ್ನು ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಸ್ಮರಿಸಿದೆ ಋಗ್ವೇದ. ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಋಗ್ವೇದದಿಂದ ಈಚೀನದಾದ "ಪಂಚವಿಂಶ ಬ್ರಾಹ್ಮಣ" ಸರಸ್ವತಿ ನದಿಯು ಭಾಗಶಃ ಒಣಗಿದ್ದುದನ್ನು ಹೇಳಿದೆ. ಸರಸ್ವತೀ ನದಿಯು ಹಿಮಾಲಯ ಶ್ರೇಣಿಯ "ಪ್ಲಕ್ಷ ಪ್ರಸ್ರವಣ" ಎಂಬಲ್ಲಿ ಉಗಮಗೊಂಡು ಅಲ್ಲಿಂದ ಅಶ್ವಾರೋಹಿಯೊಬ್ಬ ನಲವತ್ತನಾಲ್ಕು ದಿವಸಗಳಲ್ಲಿ ಕ್ರಮಿಸಬಹುದಾದಷ್ಟು ದೂರದಲ್ಲಿದ್ದ ಮರುಭೂಮಿಯೊಂದರಲ್ಲಿ ಅದೃಶ್ಯವಾಗುತ್ತದೆ ಎಂದು ವರ್ಣಿಸಿದೆ ಪಂಚವಿಂಶ ಬ್ರಾಹ್ಮಣ. ಪ್ಲಕ್ಷಪ್ರಸ್ರವಣದಿಂದ ನದಿಯ ಉತ್ತರದಲ್ಲಿದ್ದ ಹಲವು ತೀರ್ಥಕ್ಷೇತ್ರಗಳನ್ನು ಮಹಾಭಾರತ ಉಲ್ಲೇಖಿಸಿದೆ. ಪಾಂಡವರು ವನವಾಸದಲ್ಲಿ ದ್ವೈತವನಕ್ಕೆ ಬಂದಾಗ ಕಾಣಸಿಗುವ ಸರಸ್ವತಿಯನ್ನು ಮಹಾಭಾರತ ಬಹು ಅಂದವಾಗಿ ವರ್ಣಿಸಿದೆ. ಹೀಗೆ ಸಮೃದ್ಧವಾಗಿ ಹರಿಯುತ್ತಿದ್ದ ನದಿಯ ವಿವರಗಳನ್ನು, ಅದು ಕೆಲ ದೂರ ಹರಿದು ಅದೃಶ್ಯವಾಗುತ್ತಿದ್ದುದನ್ನು ಉಲ್ಲೇಖಿಸಿದ್ದನ್ನು ಇತಿಹಾಸ ಎಂದು ಪರಿಗಣಿಸದೇ ಬದಿಗೆ ತಳ್ಳಿದ್ದು ನಮ್ಮ ಮೌಢ್ಯವಲ್ಲದೆ ಇನ್ನೇನು? ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಬಲರಾಮನು ಮಹಾಭಾರತ ಯುದ್ಧದಲ್ಲಿ ಭಾಗವಹಿಸದೆ 42ದವಸಗಳ ಕಾಲ ತೀರ ಕ್ಷೀಣವಾಗಿ ಹರಿಯುತ್ತಿದ್ದ,ಅಲ್ಲಲ್ಲಿ ಬತ್ತಿ ಹೋಗಿದ್ದ ಸರಸ್ವತಿ ನದೀತೀರದಲ್ಲಿದ್ದ ತೀರ್ಥಕ್ಷೇತ್ರ ಗಳನ್ನು ದರ್ಶಿಸಿದ್ದ. ಒಂದು ಕಡೆ ಸರಸ್ವತಿಯು ಹರಿವನ್ನು ಬದಲಿಸಿದ್ದನ್ನು ಕಂಡು ಆಶ್ಚರ್ಯ ಪಟ್ಟಿದ್ದ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ಅಂದರೆ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಾಳೆ ಎನ್ನುವ ಅರ್ಥದಲ್ಲಿ ವರ್ಣಿಸಿದೆ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

            ಗುಜರಾತಿನ ಪಟಣ್. ಪ್ರಸಿದ್ಧ ಪಟೋಲಾ ಸೀರೆಗಳ ತವರು. ಚಾವ್ಡಾ ವಂಶಜ ವನರಾಜನಿಂದ ಸ್ಥಾಪಿಸಲ್ಪಟ್ಟ "ಅನಾಹಿಲಪಟಕ". ಮುಂದೆ ಚಾಲುಕ್ಯರ ರಾಜಧಾನಿಯಾಗಿ ಶೋಭಿಸಿ ಬಳಿಕ ಅಲ್ಲಾವುದ್ದೀನ್ ಖಿಲ್ಜಿಯೆಂಬ ರಕ್ಕಸನ ಮತಾಂಧತೆಗೆ ಎರವಾಗಿ ಸುಟ್ಟುರಿದು ಹೋದ ಪ್ರಸಿದ್ಧ ಪುರಾತನ ನಗರಿ. ಅಂತಹ ನಗರಕ್ಕೆ ಭವ್ಯ ಇತಿಹಾಸವಿದೆ. ಅಲ್ಲಿ ಅಮರ ಪ್ರೇಮದ ಕುರುಹು ಇದೆ. ವಿಶೇಷವೆಂದರೆ ಆ ಕುರುಹು ಯಾರಿಗೂ ಉಪಯೋಗವಾಗದ ಕಲ್ಲುಮಣ್ಣಿನ ಕಟ್ಟಡವಲ್ಲ. ಅದ್ಭುತ ವಿನ್ಯಾಸದ, ಸರ್ವರಿಗೂ ಉಪಯೋಗಕ್ಕೆ ಯೋಗ್ಯವಾದ ಸಿಹಿನೀರ ಬಾವಿ. ಅದರಲ್ಲೂ ಆ ಬಾವಿಯಲ್ಲಿ ಈ ನೆಲದ ಪುರಾತನ ತಾಯಿನದಿ ಸರಸ್ವತಿಯ ಅಮೃತ ಬಿಂದುಗಳಿವೆ. ಅದು ತನ್ನಿನಿಯ ಅರಸನ ನೆನಪಿಗಾಗಿ ರಾಣಿಯೊಬ್ಬಳು ನಿರ್ಮಿಸಿದ ಬಾವಿ. ಹಾಗಾಗಿ ಅದು "ರಾಣಿ ಕೀ ವಾವ್" ಎಂದೇ ಕರೆಸಿಕೊಂಡಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ  ಸೋಲಂಕಿ ಮನೆತನದ ರಾಣಿ ಉದಯಮತಿ ರಾಜ ಭೀಮದೇವನ ಸವಿ ನೆನಪಿಗಾಗಿ ಕಟ್ಟಿಸಿದ ಅದ್ಭುತ ಮೆಟ್ಟಿಲು ಬಾವಿ ಅದು. 64 ಮೀಟರ್ ಉದ್ದ, 20 ಮೀಟರ್ ಅಗಲ, ಹಾಗೂ 27 ಮೀಟರ್ ಗಳಷ್ಟು ಆಳವಿರುವ ಈ ಅದ್ಭುತ ಕಲಾಕೃತಿ ರಚನೆಯಾದದ್ದು ನದಿ ಸರಸ್ವತಿಯ ದಡದಲ್ಲೇ.

              ತಲೆ ಕೆಳಗಾಗಿ ಕಾಣುವತೆ ರಚನೆಯಾದ ದೇಗುಲದ ಪಕ್ಕದಲ್ಲೇ ನಿರ್ಮಾಣವಾಗಿದೆ ಈ ಮೆಟ್ಟಿಲು ಬಾವಿ. ಸರಸ್ವತಿ ಬಿಂದುಗಳನ್ನು ಶೇಖರಿಸಿಡಲು ರಾಜಾ ಭೀಮದೇವನ ನೆನಪಿಗಾಗಿ ಆತನ ಸತಿ ಉದಯಮತಿ, ಮಗ ಕರ್ಣನ ನೆರವಿನಿಂದ ಕಟ್ಟಿಸಿದ ಅದ್ಭುತ ಕಲಾಪ್ರಕಾರ ಇದು. ಅಲ್ಲಿ ವಿಷ್ಣುವಿನ ದಶಾವತಾರಗಳ, ಭಾಗವತ, ಪುರಾಣಗಳ ಚಿತ್ರಣದ ಕೆತ್ತನೆಯಿದೆ. ಮರು - ಗುರ್ಜರ ಶೈಲಿಯ ಎಂಟುನೂರಕ್ಕೂ ಹೆಚ್ಚು ಕಲಾಕೃತಿಗಳ ಸೊಬಗು ರಾಣಿ ಕೀ ವಾವ್'ನ ಸೌಂದರ್ಯವನ್ನು ವರ್ಧಿಸಿ ನಿರಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಣಿ ಕೀ ವಾವ್ ಮೆಟ್ಟಿಲು ಬಾವಿ ನಿರ್ಮಿಸುವ ಕುಶಲಕರ್ಮಿ ಕಲೆಗಾರನ ಅನುಪಮ, ನ ಭೂತೋ ನ ಭವಿಷ್ಯತಿ ಎನ್ನುವಂತಹ ಉತ್ತುಂಗದ ನಿರ್ಮಿತಿ. ಅದರ ಸೌಂದರ್ಯ, ಸಂಕೀರ್ಣತೆಗೆ ಅದೇ ಸಾಟಿ. ತಲೆಕೆಳಗಾಗಿ ನಿರ್ಮಿತವಾದ ದೇವಾಲಯ ಬಾವಿಯ ನೀರಿನ ಪಾವಿತ್ರ್ಯವನ್ನು ಸೂಚಿಸುತ್ತದೆ. ಇಲ್ಲಿ ಕಲೆಯ ಔನ್ನತ್ಯವನ್ನು ಸೂಸುವ ಶಿಲ್ಪಗಳು ಏಳು ಅಂತಸ್ತಿನಲ್ಲಿ ಅಡಕವಾಗಿವೆ. ಐನೂರಕ್ಕೂ ಹೆಚ್ಚಿನ ತತ್ತ್ವ ಶಿಲ್ಪಗಳು, ಸಾವಿರಕ್ಕಿಂತಲೂ ಹೆಚ್ಚಿನ ಪೌರಾಣಿಕ ಚಿತ್ರಗಳು ಈ ಏಳು ಅಂತಸ್ತಿನಲ್ಲಿ ನಿರ್ಮಾಣವಾಗಿವೆ. ಹೆಚ್ಚು ಆಳವಿರುವ(23 ಮೀ) ನಾಲ್ಕನೇ ಹಂತ ಆಯತಾಕಾರದಲ್ಲಿದೆ(9.4 ಮೀ X 9.5 ಮೀ). ಒಟ್ಟಾರೆ ಸ್ಥಳದ ಪಶ್ಚಿಮ ಭಾಗದಲ್ಲಿರುವ ಬಾವಿಯಲ್ಲಿ 10 ಮೀ ವ್ಯಾಸ ಮತ್ತು 30 ಮೀ ಆಳದ ಬಾಣದಂತಹ ರಚನೆ ಅದರ ಸೌಂದರ್ಯಕ್ಕೊಂದು ಮೆರುಗು ನೀಡಿದೆ. ಮೆಟ್ಟಿಲು ಬಾವಿ ರಚನೆಯ ಎಲ್ಲಾ ಮೂಲತತ್ತ್ವಗಳನ್ನು ಸಂಯೋಜಿಸಿ ರಚಿಸಿದಂತೆ ದೃಗ್ಗೋಚರಿಸುವ ಬಾವಿಯಲ್ಲಿ ನೆಲದ ಮಟ್ಟದಿಂದ ಆರಂಭವಾಗುವ ಮೆಟ್ಟಿಲುಗಳ ಕಾರಿಡಾರ್, ಒಂದಕ್ಕಿಂತ ಹೆಚ್ಚು ಅಂತಸ್ತುಗಳುಳ್ಳ ನಾಲ್ಕು ಸರಣಿ ಮಂಟಪಗಳು, ಬಾಣಾದಾಕಾರದ ಸುರಂಗದಂತಹ ರಚನೆಯ ಬಾವಿಯನ್ನು ಹೊಂದಿರುವ ಈ ಅದ್ಭುತ ಮೆಟ್ಟಿಲು ಬಾವಿ ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದುದರಲ್ಲಿ ಆಶ್ಚರ್ಯವೇನಿಲ್ಲ.

                ಕೇವಲ ಸಿಹಿ ನೀರ ಸ್ತ್ರೋತವಾಗಿ, ಸ್ಥಿರ ರಚನೆಯಾಗಿ, ಅದ್ಭುತ ವಾಸ್ತುಶಿಲ್ಪವಾಗಿ ಮಾತ್ರವೇ ರಾಣಿ ಕೀ ವಾವ್ ನಮ್ಮ ಗಮನ ಸೆಳೆಯುವುದಿಲ್ಲ; ಅಲ್ಲಿ ಶಿಲ್ಪಗಳ ಅಲಂಕರಣವಿದೆ; ಪಾಂಡಿತ್ಯಪೂರ್ಣ ಕಲಾತ್ಮಕತೆಯಿದೆ. ಅದರ ಸಾಂಕೇತಿಕ ಲಕ್ಷಣಗಳು ಹಾಗೂ ಕೆತ್ತಿರುವ ಶಿಲ್ಪಗಳು ಮತ್ತು ತುಂಬಿರುವ ಹಾಗೂ ಖಾಲಿ ಜಾಗಗಳ ಪ್ರಮಾಣಗಳು ಬಾವಿಯ ಒಳಭಾಗಕ್ಕೆ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಕೊಡಮಾಡಿ ಒಂದು ಸಮತಟ್ಟಾದ ಜಾಗದಿಂದ ಹಠಾತ್ತನೆ ಇಳಿಯುವ ಗ್ರಹಿಕೆಯುಂಟಾಗುಂತೆ ಮಾಡುತ್ತದೆ. ಗುಜರಾತಿನ 120 ಮೆಟ್ಟಿಲು ಬಾವಿಗಳಲ್ಲಿ ಅತ್ಯಂತ ಹಳೆಯ ಹಾಗೂ ಆಳವಿರುವ ಬಾವಿ ಈ "ರಾಣಿ ಕೀ ವಾವ್". ಬಾವಿಯ ಕೊನೆಯ ಮಹಡಿ ಕಲ್ಲು ಮಣ್ಣುಗಳಿಂದ ಮುಚ್ಚಿ ಹೋಗಿದ್ದು, 30 ಕಿಮೀ ಉದ್ದದ ಸುರಂಗಮಾರ್ಗ ಇದನ್ನು ಹತ್ತಿರದ ಸಿಧ್ಪುರ್ ನಗರದೊಂದಿಗೆ ಸಂಪರ್ಕಿಸುತ್ತದೆ. ಸರಸ್ವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಈ ಬಾವಿಯು ಹೂಳಿನಿಂದ ಮುಚ್ಚಿಹೋಗಿತ್ತು. ಅಂತಹ ಪ್ರವಾಹ ಸಂಭವಿಸಿದ್ದಾಗ್ಯೂ ಇಲ್ಲಿನ ಕಲಾಕೃತಿಗಳಿಗೆ ಕಿಂಚಿತ್ತೂ ಹಾನಿ ಸಂಭವಿಸದ್ದನ್ನು ನೋಡಿ ಪುರಾತತ್ತ್ವ ಇಲಾಖೆ ಇಲ್ಲಿ ವ್ಯಾಪಕ ಉತ್ಖನನ ನಡೆಸಿತ್ತು. ಆಗ ಪತ್ತೆಯಾಯಿತು ಈ ಅದ್ಭುತ ವಿನ್ಯಾಸದ ಬಾವಿ. ಐವತ್ತು ವರ್ಷಗಳ ಹಿಂದೆ ಈ ಬಾವಿಯ ಸುತ್ತ ಅನೇಕ ಔಷಧೀಯ ಗಿಡಗಳಿದ್ದವು. ಆ ಕಾರಣದಿಂದ ಬಾವಿಯ ನೀರು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿತ್ತು. ಇಂತಹ ಹತ್ತು ಹಲವು ವಿಶೇಷತೆಗಳಿಂದಾಗಿ ಈ ಬಾವಿ 2014ರಲ್ಲಿ ಜಾಗತಿಕ ಪರ೦ಪರೆಯ ತಾಣವಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿತ್ತು. ಹದಿಮೂರನೇ ಶತಮಾನದಲ್ಲಿ ಭೂಫಲಕಗಳ ಬದಲಾವಣೆಯಿಂದ ಈ ಭಾಗದಲ್ಲಿ ಹರಿಯುತ್ತಿದ್ದ ಸರಸ್ವತಿ ನದೀ ಪಾತ್ರದಲ್ಲಿ ವ್ಯತ್ಯಯವಾದರೂ ರಾಣಿ ಕೀ ವಾವ್'ನಲ್ಲೇನೂ ಬದಲಾವಣೆಯಾಗಲಿಲ್ಲ. ಹಿಂದಿನಂತೆ ಕಾರ್ಯ ನಿರ್ವಹಿಸಲು ಆ ಬಳಿಕ ಸರಸ್ವತಿಯಲ್ಲುಂಟಾದ ಪ್ರವಾಹವೇ ಕಾರಣವಾಯಿತಾದರೂ ಈ ಪ್ರವಾಹದಿಂದ ಬಾವಿಯಲ್ಲಿನ ಕಲಾಕೃತಿಗಳಿಗಾಗಲೀ ಬಾವಿಯ ಮೂಲ ವಿನ್ಯಾಸಕ್ಕಾಗಲೀ ಯಾವುದೇ ಹಾನಿಯಾಗಲಿಲ್ಲ. ಪ್ರಾಕೃತಿಕ ವಿಕೋಪಗಳಾವುವು ಈ ಬಾವಿಗೆ ತೊಡಕಾಗಲಿಕ್ಕಿಲ್ಲ. ಆದರೆ ಅತಿಯಾದ ನಗರೀಕರಣದಂತಹ ಮನುಷ್ಯಕೃತ ಪ್ರಮಾದಗಳಿಂದ ಈ ಬಾವಿ ಇತಿಹಾಸವಾದರೆ ಅಚ್ಚರಿಯಿಲ್ಲ. ಈಗ ಈ ರಾಣಿ ಕೀ ವಾವ್ ರಿಸರ್ವ್ ಬ್ಯಾಂಕ್ ಮುದ್ರಿಸುತ್ತಿರುವ ಹೊಸ, ನೀಲಿ ಬಣ್ಣದ ನೂರರ ನೋಟಿನಲ್ಲಿ ಕಾಣಿಸಿಕೊಳ್ಳಲಿದೆ. ಹಾಂ, ಸರಸ್ವತಿಯ ಬಿಂದುಗಳು ಭಾರತೀಯರ ಮನೆಮನಗಳಲ್ಲಿ ಮತ್ತೊಮ್ಮೆ ಪ್ರವಹಿಸಲಿವೆ.

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ


             ಜಾನಪದ ಕವಿಗಳಿಂದ ಜ್ಞಾತ ಕವಿಗಳವರೆಗೂ, ಬೀಸುಕಲ್ಲಿನೆದುರು ಕೂತ ಗೃಹಿಣಿಯಿಂದ ಕೀಬೋರ್ಡ್ ಕುಟ್ಟುವ ತರುಣಿಯವರೆಗೂ, ಶಾಲಾಬಾಲನಿಂದ ಜ್ಞಾನವೃದ್ಧರವರೆಗೆ ಜಾತಿ-ಮತ-ವರ್ಗ-ಲಿಂಗ, ಬಡವ-ಬಲ್ಲಿದ ತಾರತಮ್ಯಗಳಿಲ್ಲದೆ ಅಬಾಲವೃದ್ಧರಾದಿಯಾಗಿ ಪೂಜಿಸಲ್ಪಡುವ ದೇವತೆ ಗಣೇಶ. ಸಮಯ-ಅಸಮಯಗಳೆನ್ನುವ ನಿಯಮಗಳಿಲ್ಲದೆ ಸರ್ವತ್ರ ಪೂಜಿಸಲ್ಪಡುವ ದೇವರಾತ. ನಿರಾಕಾರವಾಗಿಯೂ ಆಕಾರವಾಗಿಯೂ; ಸಣ್ಣ ಅಡಿಕೆಯಲ್ಲಿಯೂ ಧಾನ್ಯದ ರಾಶಿಯಲ್ಲಿಯೂ; ಮಂಡಲದಲ್ಲಿಯೂ ಚಿತ್ರ ಪಟದಲ್ಲೂ; ಯಜ್ಞಕುಂಡವ ಬೆಳಗುವ ಅಗ್ನಿಯಾಗಿಯೂ ಮಣ್ಣಿನ ವಿಗ್ರಹವಾಗಿಯೂ ಅವನನ್ನು ಕಂಡು ಪಾವನವಾಗುತ್ತದೆ ಜನತೆ. ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಸಂಕಷ್ಟಹರ ಗಣೇಶ. ದುರ್ಜನರಿಗೆ ಅಡಿಗಡಿಗೆ ವಿಘ್ನ ಒಡ್ಡುವ ವಿಘ್ನರಾಜ. ಹೀಗಾಗಿಯೇ  ಯಾವುದೇ ಮಂಗಳಕಾರ್ಯದ ಮುನ್ನ ಅವನಿಗೆ ಪೂಜೆ; ಅಗ್ರಪೂಜೆ! ಪಿಳ್ಳಾರತಿಯಿಂದ ಪರಮಾಣುತನಕ ಅವನದ್ದು ಅಗಣಿತ, ಅಸಂಖ್ಯಾತ ಅವತಾರಗಳು. ಅವನು ಶೇಷಶಾಯಿಯೂ ಹೌದು, ವೃಷಭವಾಹನನೂ ಹೌದು; ಕಮಲಾಸನನೂ ಹೌದು.ಈ ಎಲ್ಲಾ ಅವತಾರಗಳನ್ನು ಕೊಟ್ಟವರೂ ನಾವೇ. ಕಾರಣ ಅವ ನಮ್ಮ ಹೃನ್ಮನದ ದೈವ. ನಮ್ಮೆಲ್ಲರೊಡನಾಡುವ ದೈವ. ಮಣ್ಣಿನ ಮಗ! ಯಕ್ಷವೇಶಧಾರಿಯಾಗಿ, ಸಂಘದ ಸ್ವಯಂಸೇವಕನಾಗಿ, ಕ್ರಿಕೆಟ್ ಬ್ಯಾಟು ಹಿಡಿದ ದಾಂಡಿಗನಾಗಿ, ಸುಖ ಶಯನದಲ್ಲಿ, ನೃತ್ಯಗಾರನಾಗಿ, ಗಿಟಾರ್, ಕೊಳಲು ಹಿಡಿದುಕೊಂಡು, ಟೋಪಿ ಧರಿಸಿ, ಮೊಂಡು ಹಟ ಮಾಡುವ ಬಾಲನಾಗಿ, ಕನ್ನಡಕ ಧಾರಿಯಾಗಿ, ಬಾಲ-ತರುಣ-ತರುಣಿ-ಪ್ರೌಢನಾಗಿ, ಕವಿ, ಕಲಾಕಾರನಾಗಿ ಎಷ್ಟೆಲ್ಲಾ ಬಗೆಯಲ್ಲಿ ಅವನನ್ನು ನಾವು ಚಿತ್ರಿಸಿದ್ದೇವೆ!

                ಅಕ್ಕಿ ಹರಡಿದ ಹರಿವಾಣದಲ್ಲಿ ಮುದ್ದು ಗಣಪನನ್ನು ತರುವಾಗಲೇ ಅದು ಉತ್ಸವ ರೂಪ ತಳೆದಿರುತ್ತದೆ. ಒಂದು ಕುಟುಂಬವನ್ನು, ಒಂದಿಡೀ ಸಮಾಜವನ್ನು ಒಗ್ಗೂಡಿಸುತ್ತಾನೆ ಗಣೇಶ. ಪೂಜೆಯ ಜೊತೆಗೆ ಲಂಬೋದರನಿಗೆ ಪ್ರಿಯವಾದ ಕಬ್ಬು, ಕಡಲೆ, ಕಡುಬು, ಚಕ್ಕುಲಿ, ಉಂಡೆಗಳ ನೈವೇದ್ಯ! ಅನಂತ ಚತುರ್ದಶಿಯ ಶುಭಪರ್ವದಂದು ಈ ಉತ್ಸವದ ಉತ್ಸಾಹ ಮೇರೆ ಮುಟ್ಟುತ್ತದೆ. ನದಿಯಲ್ಲೋ, ಕೆರೆಯಲ್ಲೋ, ಬಾವಿಯಲ್ಲೋ ವಿಸರ್ಜಿಸುವ ವೇಳೆಗೆ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಭಾವ! ಅರೇ, ತಾವೇ ಶೃದ್ಧಾ ಭಕ್ತಿಗಳಿಂದ ತಂದು ಮನೆಯ ಮಗುವಂತೆ ಪೂಜಿಸಿದ ದೇವರ ಚಂದ ಪುತ್ಥಳಿಯನ್ನು ವಿಗ್ರಹಾರಾಧಕ ಹಿಂದೂಗಳೇ ನೀರಿಗೆ ಹಾಕುವುದೆಂದರೆ!ಅಲ್ಲಿದೆ ಗುಟ್ಟು! ಮಣ್ಣಿನ ಮೂಲಕ ಮೂರ್ತಿಯನ್ನು ರೂಪಿಸಿ ಪೂಜಿಸುವಾಗ ಪ್ರಕೃತಿಯಲ್ಲಿ ಅಡಗಿರುವ ಸುಪ್ತ ಚೇತನವನ್ನು ತನ್ನಲ್ಲಿ ಆವಾಹಿಸಿಕೊಳ್ಳುತ್ತಾನೆ ಹಿಂದೂ. ಮೂಲಾಧಾರವೇ ಗಣೇಶನ ಸ್ಥಾನ. ಗಣೇಶನ ಪೂಜೆಯಲ್ಲಿನ ಒಂದೊಂದು ಮಂತ್ರವೂ ಒಂದೊಂದು ತಂತ್ರ. ಕುಂಡಲಿನಿ ಮೇಲೇರುವುದು ಈ ಮೂಲಾಧಾರದಿಂದಲೇ. ಅದಕ್ಕಾಗಿಯೇ ಈ ಮೂಲಾಧಾರಸ್ಥಿತನಿಗೆ ಅಗ್ರ ಪೂಜೆ. ದೇವಾಲಯಗಳಲ್ಲಿ ಭಕ್ತರಿಗೆ ಮೊದಲು ದರ್ಶನವೀವ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ತಂತ್ರಶಾಸ್ತ್ರದ ಮುಂದುವರಿದ ಭಾಗವೇ. ಸುಪ್ತಾವಸ್ಥೆಯಲ್ಲಿರುವ ಶಿವನನ್ನು ಎಚ್ಚರಿಸಿ ಬ್ರಹ್ಮಾಂಡದ ಸೃಷ್ಟಿಗೆ ಕಾರಣಕರ್ತಳಾಗುವ ಕುಂಡಲಿನಿ ಶಕ್ತಿಯನ್ನು ಸಂಕೇತಿಸುವ ಪಾರ್ವತಿ ತನ್ನ ಶಕ್ತಿಸ್ರೋತದ ದ್ವಾರದಲ್ಲಿ ವೇದಮಂತ್ರಗಳ ಅಧಿಪತಿಯಾಗಿರುವ ಗಣಪತಿಯನ್ನು ಸೃಷ್ಟಿಸಿ ನೆಲೆಗೊಳಿಸಿದಳು. ತನ್ನ ಮೈಯ ಅಂಗರಾಗದ ಆಕೃತಿಗೆ ಜೀವಕೊಟ್ಟು ಅದು ಅನುರಾಗದ ಸುತನಾದುದರ ಅರ್ಥ ಇದು. "ಚಿಕ್ಕೆರೆಲಿ ಬಿದ್ದು ದೊಡ್ಕೆರೇಲಿ ಏಳುವುದೆಂದರೆ" ಮತ್ತೊಂದು ಕೆರೆಯ ಮಣ್ಣಿನಲಿ ಮತ್ತೆ ರೂಪುಗೊಳ್ಳುತ್ತಾನೆ. ಕಾಲ ಸರಿದಂತೆ ಕಾಯ ಎನ್ನುವುದು ಬಿದ್ದು ಹೋಗುತ್ತದೆ; ಮಣ್ಣಾಗಿ ಹೋಗುತ್ತದೆ; ಆದರೆ ಆತ್ಮ ಮಾತ್ರ ಕಾಲಾತೀತ; ಕರ್ಮಫಲಕ್ಕೆ ಅನುಸಾರವಾಗಿ ಪುನರಪಿ ಜನನಂ ಪುನರಪಿ ಮರಣಂ. ಕಲ್ಲು ಮಣ್ಣುಗಳ ವಿಗ್ರಹಗಳನ್ನು ಹಿಂದೂಗಳು ಪೂಜಿಸುವುದರ ಹಿಂದಿನ ಅರ್ಥವನ್ನು, ಸೃಷ್ಟಿಯಲ್ಲಿನ ಜೀವನ ಪ್ರಕ್ರಿಯೆಯನ್ನು ಅದ್ಭುತವಾಗಿ ಕಟ್ಟಿಕೊಡುವ ಮಹಾಕಾವ್ಯ ಈ ಗಣಪನ ಹಬ್ಬ!

                 ವಿಘ್ನಕರ್ತನಾಗಿದ್ದ ಗಣಪತಿ ವಿಘ್ನಹರ್ತನಾಗಿ ಅಗ್ರಪೂಜೆಗೆ ಸಿದ್ಧನಾದದ್ದು ಕ್ರಿ.ಶ ಏಳನೆಯ ಶತಮಾನದಲ್ಲಿ. ಕಾವ್ಯಾರಂಭದಲ್ಲಿ ಗಣಪತಿಯ ಸ್ತುತಿಯನ್ನು ಮೊದಲು ಮಾಡಿದ್ದು ಭವಭೂತಿ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಮಾಲತೀ-ಮಾಧವ ಮತ್ತು ಉತ್ತರರಾಮಚರಿತದಲ್ಲಿ. ಕ್ರಿ.ಶ. 7-8ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನೆಲೆಯೂರಿದ್ದ ಶೈವ ಪಂಥಾನುಯಾಯಿಗಳಾದ ಲಕುಲೀಶ, ಕಾಳಾಮುಖ, ಪಾಶುಪತರು ಅನೇಕ ಶಿವಾಲಯಗಳನ್ನು ನಿರ್ವಿುಸಿ, ಗಣೇಶನನ್ನು ಪ್ರತಿಷ್ಠಾಪಿಸಿದರು. ಜ್ಞಾನೇಶ್ವರಾದಿಯಾಗಿ ಸಂತರಿಂದ ಸ್ತುತಿಸಲ್ಪಟ್ಟ ಗಣಪತಿ ಹವನಗಳಲ್ಲೂ ಪ್ರಾಮುಖ್ಯತೆ ಪಡೆದು ವೇದಗಳ ಬ್ರಹ್ಮಣಸ್ಪತಿಯ ಸ್ಥಾನವನ್ನು ತನ್ನದಾಗಿಸಿಕೊಂಡ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದ. ಅಂದಿನಿಂದ ಆ ಊರು "ಮೋರೆಗಾಮ್' ಆಯಿತು. ಗಣೇಶ ವಿಸರ್ಜನೆಯ ಹಿಂದಿನ ಪ್ರಸಿದ್ಧ ಘೋಷಣೆ ("ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್ ಯಾ |")ಯ ಮೂಲ ಇದು. ಪೇಶ್ವೆಗಳ ಮನೆದೇವತೆಯಾಗಿ, ಬಾದಾಮಿಯ ಚಾಲುಕ್ಯರಿಗೆ ವಾತಾಪಿ ಗಣಪತಿಯಾಗಿ ವಿಜಯನಗರಕ್ಕೂ ಬಂದು ಪ್ರತಿಷ್ಠಾಪನೆಗೊಂಡ ಗಣಪತಿ. ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ವೇದಕಾಲದ ಬ್ರಹ್ಮಣಸ್ಪತಿಯಾಗಿ, ವಿದ್ಯಾಧಿಪತಿಯೂ ವಿಘ್ನನಿವಾರಕನೂ ಆಗಿ ಜಾತಿಭೇದ ಪಂಥಭೇದವಿಲ್ಲದೆ ಪೂಜೆಗೊಳ್ಳುವ ದೇವಾಧಿದೇವ. ಭಾರತದಲ್ಲಷ್ಟೇ ಅಲ್ಲದೆ, ಭಾರತದ ಸುತ್ತಮುತ್ತಲ ದೇಶಗಳಲ್ಲಿ ಆರಾಧಿಸಲ್ಪಡುವ ಗಣಪನ ದೇಗುಲಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಲಂಕಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತವೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿರುವ ದೇವಾಲಯಗಳಲ್ಲಿಯೂ ಗಣೇಶನಿಗೆ ಅಗ್ರಸ್ಥಾನ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು ಎಂಬ ಮಾತೊಂದು ತಮಿಳುನಾಡಿನಲ್ಲಿದೆ. ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿರುವುದು ವಿಶೇಷ!

                  ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪಾರ್ವತಿ ಸೌಭಾಗ್ಯ ದೇವತೆ. ತವರಿನ ಹಂಬಲದಿಂದ ಪ್ರತಿವರುಷವೂ ಮನೆಗೆ ಬರುವ ಮಗಳು ಅವಳು. ಗಣಪತಿ ತಾಯಿಯೊಡನೆ ಬರುವ ಮುದ್ದು ಕುವರ ಎನ್ನುವ ಅರ್ಥದಲ್ಲಿ ಮಣ್ಣಿನ ಅಥವಾ ಲೋಹದ ಮೂರ್ತಿ, ಅರಿಶಿನದಿಂದ ಮಾಡಿದ ಗೌರಿ, ಸಗಣಿಯಿಂದ ಮಾಡಿದ ಅವಳ ಮಗ ಗಣಪನನ್ನು ಪೂಜಿಸುವ ಪದ್ದತಿ ಇಲ್ಲಿ ಬೆಳೆದು ಬಂದಿದೆ. ಹೀಗೆ ನಮ್ಮ ಪರಂಪರೆಯಲ್ಲಿ ಗಣೇಶನು ಎಲ್ಲೋ ಇರುವ ದೇವನಾಗಲ್ಲದೆ, ವರುಷ ವರುಷವೂ ಮನೆ-ಮನೆಗೆ ಬರುತ್ತಿರುವ ಆತ್ಮೀಯ ಅತಿಥಿಯಾಗಿ ಸರ್ವಜನಪ್ರಿಯನಾಗಿದ್ದಾನೆ. ಗಣೇಶನನ್ನು ರಾಷ್ಟ್ರೀಯ ಐಕ್ಯತೆಯ ಕೊಂಡಿಯಾಗಿ ಕಂಡ ಶಂಕರರು ಗಣೇಶ ಪಂಚರತ್ನವನ್ನು ರಚಿಸಿದರಲ್ಲದೆ ಪಂಚಾಯತನದಲ್ಲಿ ಸ್ಥಾನವನ್ನು ನೀಡಿದರು. ಎಲ್ಲರನ್ನೂ ಸಂಮೋಹನಗೊಳಿಸಿದ ಅವನ ವ್ಯಕ್ತಿತ್ವವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ತಿಲಕರು ಅವನನ್ನು ಭಾರತೀಯರನ್ನು ಒಟ್ಟುಗೂಡಿಸುವ ರಾಷ್ಟ್ರೀಯ ಐಕ್ಯತೆಯ ವಿಗ್ರಹವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿಬಿಟ್ಟರು. ಆ ಪ್ರವಾಹ ಇಂದಿಗೂ ಅವಿಚ್ಛಿನ್ನವಾಗಿ ಮುಂದುವರಿದಿದೆ.

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"


              "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ"! ಇದೇನೂ ಹೊಸದಲ್ಲ. ದ್ರಾವಿಡ ದೇಶ ಅಂತ ಹಿಂದೆ ಬೊಬ್ಬಿರಿಯುತ್ತಿದ್ದುದಕ್ಕೆ ಹೊಸ ಆಂಗ್ಲ ಹೆಸರು ಅಷ್ಟೇ. ಹೊಸ ಬಾಟಲಿಯಲ್ಲಿ ಹಳೇ ಹೆಂಡ. ಈ ಹೊಸ ಕಿರಿಕ್ ಶುರುವಾಗಿದ್ದು 2016ರಲ್ಲಿ. "ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದಲ್ಲಿ ದಕ್ಷಿಣದ ರಾಜ್ಯಗಳ ಎಲ್ಲಾ ಮಾನವ ಅಭಿವೃದ್ಧಿ ಸೂಚಕಗಳು ಉತ್ತಮವಾಗಿವೆ. ದಕ್ಷಿಣದ ರಾಜ್ಯಗಳು ವಿವಿಧ ತೆರಿಗೆಗಳ ಮೂಲಕ ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ ಕೇಂದ್ರದಿಂದ ಸಿಗುವ ಅನುದಾನದಲ್ಲಿ ಅನವರತ ಅನ್ಯಾಯ, ಅಸಮಾನತೆ ಇದೆ. ಈ ಅನ್ಯಾಯವನ್ನು ಖಂಡಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಮ್ಮ ನ್ಯಾಯೋಚಿತ ಪಾಲನ್ನು ಪಡೆದುಕೊಳ್ಳಲು ದಕ್ಷಿಣದ ರಾಜ್ಯಗಳು "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ" ಎಂಬ ಹೆಸರಿನಡಿಯಲ್ಲಿ ಒಟ್ಟಾಗಬೇಕು" ಎನ್ನುವ ಹೊಸ ವಾದವೊಂದು 2016ರಿಂದೀಚೆಗೆ ಕೇಳಿ ಬರುತ್ತಿದೆ. ಅದಕ್ಕಾಗಿ ಅಂಕಿ ಅಂಶಗಳನ್ನೆಲ್ಲಾ ತಿರುಚಿ ಸಾಲು ಸಾಲು ಲೇಖನಗಳೂ ವಾಮಪಂಥೀಯರಿಂದ ಹೊರಬಂದವು.

               ಆದರೆ ಈ ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ? ಮೊದಲನೆಯದಾಗಿ ರಾಜ್ಯಗಳಿಗೆ ಈ ರೀತಿಯ ಅನುದಾನದ ಅಸಮಾನ ಹಂಚಿಕೆ ಕೇವಲ ಭಾರತದಲ್ಲಿ ಮಾತ್ರವಲ್ಲ; ಅಮೇರಿಕಾ, ಸ್ವಿಜರ್ ಲೆಂಡ್, ಜರ್ಮನಿ ಹಾಗೂ ಇಂಗ್ಲೆಂಡುಗಳಲ್ಲೂ ಇದೆ. ಇದನ್ನು ಅಸಮಾನ ಹಂಚಿಕೆ ಎನ್ನುವುದೇ ತಪ್ಪು. ಮೂಲಭೂತ ಸೌಕರ್ಯಗಳು ಕಡಿಮೆ ಇರುವ ರಾಜ್ಯಗಳನ್ನು ಶ್ರೀಮಂತ ರಾಜ್ಯಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡದಿದ್ದರೆ ಈ ಎರಡೂ ರಾಜ್ಯಗಳ ಆರ್ಥಿಕ ಅಭಿವೃದ್ಧಿ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ. ವಿಶ್ವ ಆರ್ಥಿಕ ಅಭಿವೃದ್ಧಿಯ ಮಾನದಂಡಗಳು ಭಾರತವನ್ನು ಒಂದು ರಾಷ್ಟ್ರವಾಗಿ ನೋಡುತ್ತವೆಯೇ ಹೊರತು ಭಾರತದ ಯಾವ ರಾಜ್ಯ ಹೆಚ್ಚು ಶ್ರೀಮಂತ ಎನ್ನುವುದನ್ನಲ್ಲ. ಅದಕ್ಕಿಂತಲೂ ಗಂಭೀರ ವಿಚಾರವೆಂದರೆ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಆರ್ಥಿಕ ಉತ್ಪಾತ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು. ಬರೇ ಬೆಂಗಳೂರು ಒಂದನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ/ಅಭಿವೃದ್ಧಿ ಮಾಡಿದ ಕಾರಣದಿಂದ ಕರ್ನಾಟಕದ ಉಳಿದ ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ. ಉಳ್ಳವರಿಂದ ಕಿತ್ತುಕೊಂಡು ಇಲ್ಲದವರಿಗೆ ಕೊಡುವ ಎಡಪಂಥೀಯ ತತ್ತ್ವಗಳಲ್ಲಿ ನಂಬಿಕೆಯುಳ್ಳ ಬುದ್ಧಿಜೀವಿಗಳು ಅವರದೇ ಮಾರ್ಗಕ್ಕೆ ತುಸುವಾದರೂ ಹತ್ತಿರವುಳ್ಳ ಅವರೇ ಹೇಳುವಂತೆ ಬಂಡವಾಳಶಾಹೀ ಸರಕಾರದ ಈ ಕ್ರಮವನ್ನು ವಿರೋಧಿಸುವುದು ಅವರು ಎಂದಿಗೂ ತಮ್ಮ ತತ್ತ್ವಕ್ಕೆ ಬದ್ಧರಾಗಿರುವುದಿಲ್ಲ ಎನ್ನುವುದಕ್ಕೆ ಇನ್ನೊಂದು ನಿದರ್ಶನ ಅಷ್ಟೇ! ಎರಡನೆಯದಾಗಿ ಇವರ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಾಗುಳ್ಳ ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ವಿಶೇಷ ವರ್ಗದ ರಾಜ್ಯಗಳನ್ನಾಗಿಸಿ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ಅದು ಸಾಕಾಗುವುದಿಲ್ಲವೆಂಬ ನೆಪವೊಡ್ಡಿ ತೆಲುಗುದೇಶಂ ಕೆಂದ್ರ ಸರ್ಕಾರದ ತನ್ನ ಪಾಲುದಾರಿಕೆಯನ್ನು ಕಳಚಿಕೊಂಡು ಹೊರನಡೆದಿದೆ. ಎಡ ಬುದ್ಧಿಜೀವಿಗಳ ಪ್ರಕಾರ ಇವೆರಡೂ ಶ್ರೀಮಂತ ರಾಜ್ಯಗಳಾಗಿದ್ದರೆ ಇವಕ್ಕೆ ವಿಶೇಷ ಅನುದಾನ ಯಾಕೆ ಬೇಕು? ವಿಚಿತ್ರವೆಂದರೆ ಇವರು ಶ್ರೀಮಂತ ಎನ್ನುವ ಕರ್ನಾಟಕ, ತಮಿಳುನಾಡು, ಆಂಧ್ರಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ರೈತರು ಸಾಯುತ್ತಿದ್ದಾರೆ! ದಕ್ಷಿಣದ ರಾಜ್ಯಗಳು ಶ್ರೀಮಂತ ಎನ್ನುವ ಇವರುಗಳು ಮರೆತ ಮುಖ್ಯ ಅಂಶವೊಂದಿದೆ. ದಕ್ಷಿಣದ ರಾಜ್ಯಗಳ ಬೆಂಗಳೂರು, ಚೆನ್ನೈಯಂತಹ ನಗರಗಳು ಅತೀ ಹೆಚ್ಚು ತೆರಿಗೆ ಪಾವತಿಸುತ್ತವೆಯೇ ಹೊರತು ಈ ರಾಜ್ಯಗಳ ಉಳಿದ ನಗರಗಳಲ್ಲ. ಹಾಗೆಯೇ ದೇಶದ 40% ತೆರಿಗೆ ಮಹಾರಾಷ್ಟ್ರದಿಂದ ಸಂಗ್ರಹಿಸಲ್ಪಡುತ್ತದೆ(ಇದು ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಲ್ಲ!). ಅದರಲ್ಲೂ ಮುಂಬೈ ಒಂದರ ಪಾಲೇ 30%. ಚೆನ್ನೈ, ಬೆಂಗಳೂರಿಗರು ನಾವೇ ಹೆಚ್ಚು ತೆರಿಗೆ ಪಾವತಿಸುತ್ತೇವೆ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಧರಣಿ ಕೂತರೆ ಈ ನಗರಗಳನ್ನೂ ಪ್ರತ್ಯೇಕ ದೇಶವನ್ನಾಗಿ ಮಾಡಲು ಸಾಧ್ಯವಿದೆಯೇ? (ಕಮ್ಯೂನಿಷ್ಟರು ಇದಕ್ಕೂ ಸಿದ್ಧರಾಗಿರಬಹುದು; ಒಡೆಯುವುದು ಅವರ ಜನ್ಮಸಿದ್ಧ ಹಕ್ಕು}. ತಮಿಳುನಾಡು, ಕರ್ನಾಟಕದಲ್ಲಿ ರೈತರಿಂದ ಬರುವ ತೆರಿಗೆ ಪ್ರಮಾಣ ಕೂಡಾ ಕಡಿಮೆ. ಹಾಗಾಗಿ ತಮಿಳು ರೈತರು ಉತ್ತರಪ್ರದೇಶದ ರೈತರಿಗೆ ಸಬ್ಸಿಡಿ ಕೊಡುವಂತಾಗಿದೆ ಎಂದು ವರ್ಷದ ಕೆಳಗೆ ಧರಣಿ ನಡೆಸುತ್ತಿದ್ದ ರೈತರಲ್ಲದ ತಮಿಳು ಎಡಪಂಥೀಯರ ವಾದದಲ್ಲಿ ಯಾವುದೇ ಹುರುಳಿಲ್ಲ. ಸ್ವಾತಂತ್ರ್ಯಾನಂತರ ಬಹುಕಾಲ ಆಳಿದ ರಾಜಕೀಯ ಪಕ್ಷವೊಂದರ ದುರಾಡಳಿತದ ಕಾರಣದಿಂದ ಕೆಲವು ರಾಜ್ಯಗಳು ಶ್ರೀಮಂತವಾಗಿ ಕೆಲವು ರಾಜ್ಯಗಳು ಬಡವಾಗಿಯೇ ವಿನಾ ಅಲ್ಲಿರುವ ಸಂಪನ್ಮೂಲದ ಕೊರತೆಯಿಂದಲ್ಲ. ಇವತ್ತು ಶ್ರೀಮಂತ ಎನ್ನಿಸಿಕೊಂಡ ರಾಜ್ಯ/ನಗರಗಳು ಭವಿಷ್ಯದಲ್ಲಿ ಜನಸಂಖ್ಯಾ ಸ್ಫೋಟವೋ ಅಥವಾ ಯಾವುದೋ ಪ್ರಾಕೃತಿಕ ವಿಕೋಪದ ಕಾರಣದಿಂದ ವಿನಾಶದತ್ತ ಸಾಗಿದರೆ ಈ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಉಳಿದ ಪಾಲುದಾರ ರಾಜ್ಯಗಳು ತಮ್ಮದೇ ಪ್ರತ್ಯೇಕ ದೇಶವೆಂದು ಬೆನ್ನಿಗೆ ಇರಿದಾವೆಯೇ ಹೊರತು ಬೆನ್ನಿಗೆ ನಿಂತು ಸಹಾಯ ಮಾಡಲಿಕ್ಕಿಲ್ಲ. ನಾವು ಹೆಚ್ಚು ಕೊಡುತ್ತೇವೆ; ನಮಗೆ ಹೆಚ್ಚು ಸಿಗಬೇಕು; ಇಲ್ಲದಿದ್ದರೆ ಪ್ರತ್ಯೇಕವಾಗುತ್ತೇವೆ ಎನ್ನುವುದರ ದೂರಗಾಮೀ ಪರಿಣಾಮ ಅದೇ. ತಮಿಳು ಅಸ್ಮಿತೆಯನ್ನೇ ಬೊಬ್ಬಿರಿವ ಭಾಷಾಂಧತೆ, ಕಷ್ಟ ಕಾಲದಲ್ಲಿ ಯಾರಿಗೂ ಸಹಾಯ ಮಾಡದ ಮಲಯಾಳೀ ರಾಜಕಾರಣವನ್ನು ಅರಿತ ಎಂತಹಾ ಸಾಮಾನ್ಯನಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿ ಇದು.

            ಹಾಗಾದರೆ ಇವರ ಮೂಲ ಉದ್ದೇಶವೇನು?  ಆರ್ಯ ದ್ರಾವಿಡ ಜನಾಂಗವೆಂಬ ಎಂಬ ಕಪೋಲ ಕಲ್ಪಿತ ವಾದದ ಜೊತೆಜೊತೆಗೆ ಅಭಿವೃದ್ಧಿಯ ವಿಚಾರವನ್ನು ಬಳಸಿ ದಕ್ಷಿಣ ಭಾರತೀಯರಲ್ಲಿ ಮೌಢ್ಯದ ಬೀಜ ಬಿತ್ತುವುದು; ಹೇಗೆ ಮೋದಿ ಅಭಿವೃದ್ಧಿ ಎಂಬ ಅಸ್ತ್ರವನ್ನು ಪ್ರಯೋಗಿಸಿ ಭಾರತೀಯರನ್ನು ಗೆದ್ದರೋ, ಅದೇ ಅಭಿವೃದ್ಧಿ ಎಂಬ ಅಸ್ತ್ರವನ್ನು ಅಸಂಬದ್ಧವಾಗಿ ಪ್ರಯೋಗಿಸಿ ಭಾಜಪಾವನ್ನು ಅಧಿಕಾರದಿಂದ ದೂರ ಇಡುವುದು; ಇದು ಮೊದಲ ಹೆಜ್ಜೆ; ಉತ್ತರ ದಕ್ಷಿಣ ವಿಭಜನೆಗೆ ಮೊದಲ ಮೆಟ್ಟಿಲು. ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾದ ಮುಂದುವರಿದ ಭಾಗವೇ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಲುದ್ದೇಶಿಸಿರುವ 'ದ್ರಾವಿಡ ವಿಚಾರ ಕಲಾ ಮೇಳ' ಎಂಬ ಸಮ್ಮೇಳನ! ದ್ರಾವಿಡ ಭಾಷೆಗಳನ್ನು ಒಂದೇ ವೇದಿಕೆಗೆ ತಂದು ಸೌಹಾರ್ದ ಬೆಸೆಯುವುದರ ಹಿಂದೆ ದಕ್ಷಿಣ ಭಾರತದಲ್ಲಿ ದ್ರಾವಿಡ ಚಳವಳಿಗೆ ಮತ್ತೆ ಕಾವು ಕೊಟ್ಟು ಈಗಿರುವ ಕೇಂದ್ರ ಸರಕಾರ ಹಿಂದೀ ಸರಕಾರ, ಅದು ದಕ್ಷಿಣ ಭಾರತೀಯರ ಅಳಲುಗಳಿಗೆ ಕಿವಿಗೊಡುತ್ತಿಲ್ಲ ಎಂದು ಬೊಬ್ಬಿರಿದು ಮುಂದಿನ ಲೋಕಸಭಾ ಚುನಾವಣೆಗೆ ತನ್ನ ಅನ್ನದಾತರಿಗೆ ಸಹಾಯ ಮಾಡುವ ಉದ್ದೇಶವಿದೆ. ಆದರೆ ಇದರ ದೂರಗಾಮೀ ಪರಿಣಾಮ ಮಾತ್ರ ಉತ್ತರ ದಕ್ಷಿಣವಾಗಿ ಭಾರತದ ವಿಭಜನೆ.

         ಆಫ್ರಿಕಾ, ರಷ್ಯಾ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸ್ಥಳೀಯ ಕರಿಯ ಜನರ ಮೇಲೆ ಅಧಿಕಾರ ಚಲಾಯಿಸಿದಂತೆ ಭಾರತದಲ್ಲಿ ಸುಲಭವಾಗಿ ಅಧಿಕಾರ ಚಲಾಯಿಸಲು ಅದಕ್ಕಿಂತಲೂ ಮುಖ್ಯವಾಗಿ ಮತಾಂತರಿಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಇದರಿಂದ ಹಲವು ಬಗೆಯ ಲಾಭಗಳು ಅವರಿಗಾಗುತ್ತಿದ್ದವು. ಭಾರತೀಯರಲ್ಲೇ ಮೂಲ ಮತ್ತು ಆಕ್ರಮಣಕಾರರೆಂಬ ಜಗಳ ಉಂಟಾಗಿ ಉತ್ತರ ದಕ್ಷಿಣಗಳು ದೂರದೂರವಾಗುವ ಸಾಧ್ಯತೆ ಒಂದು. ಬ್ರಿಟಿಷರ ಈ ಇತಿಹಾಸವನ್ನೇ ನಂಬಿ ತಾವು ಶ್ರೇಷ್ಠರೆಂಬ ಭಾವನೆಯಿಂದ ದಕ್ಷಿಣದವರ ಮೇಲೆ ದ್ವೇಷ ಕಾರುತ್ತಾ ಬ್ರಿಟಿಷರಂತೆ ತಾವು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಅವರ ಸಂಸ್ಕಾರವನ್ನು ಅನುಕರಿಸುತ್ತಾ ಸ್ವಧರ್ಮವನ್ನು ಮರೆಯುವ ಉತ್ತರ ಭಾರತೀಯರು, ಇದರಿಂದ ಕೀಳರಿಮೆಗೊಳಗಾಗಿ ಅವರನ್ನು ವಿರೋಧಿಸುವ ಅಥವಾ ಅವರಂತೆ ತಾವಾಗಲು ಬಯಸಿ ಬ್ರಿಟಿಷರ ಅನುಕರಣೆ ಮಾಡತೊಡಗುವ ಅಥವಾ ಇಂದಿನ ತಮ್ಮ ಸಂಸ್ಕೃತಿಯನ್ನೇ ತೊರೆದು ರಾಕ್ಷಸ ಕುಲವೇ ತಮ್ಮ ಮೂಲವೆಂಬಂತೆ ಅನಾಗರಿಕರಾಗುವ ದಕ್ಷಿಣಾತ್ಯರು. ಈ ಪರಿಸ್ಥಿತಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಆದರೆ ಯಾವಾಗ ಹರಪ್ಪಾ, ಮೊಹಂಜೋದಾರೋಗಳಲ್ಲಿ ಉತ್ಖನನಗಳು ನಡೆದವೋ ಬಿಳಿಯರ ಬುದ್ಧಿಗೆ ಮಂಕು ಬಡಿಯತೊಡಗಿತು. ಆಂಗ್ಲರು ಕಲ್ಪಿಸಿಕೊಂಡ ಆರ್ಯರು ಭಾರತ ತಲುಪುವ ಸಾವಿರ ವರ್ಷಗಳ ಮೊದಲೇ ಇಲ್ಲಿ ವೈದಿಕ ಸಂಸ್ಕೃತಿಯೊಂದು ಅದ್ಭುತವಾದ ನಾಗರಿಕತೆಯೊಂದು ಅಭಿವೃದ್ಧಿಗೊಂಡಿತ್ತು ಎನ್ನುವ ಸಾಲು ಸಾಲು ದಾಖಲೆಗಳು ಈ ಉತ್ಖನನದಲ್ಲಿ ಲಭ್ಯವಾದವು. ತಮ್ಮದು ಕಟ್ಟುಕಥೆಯೆಂದು ಜಗತ್ತಿಗೆ ಅರಿವಾಯಿತೆಂದು ಗೊತ್ತಾದೊಡನೆ ಉತ್ಖನನದಲ್ಲಿ ಗೊತ್ತಾದ ನಾಗರಿಕತೆ ವೇದ ಸಂಸ್ಕೃತಿಯದ್ದಲ್ಲವೆಂದೂ, ಅನಾರ್ಯರಾದ ದ್ರಾವಿಡರದ್ದೆಂದೂ, ಅವರನ್ನು ಆಕ್ರಮಿಸಿದ ಆರ್ಯರು ಆ ನಾಗರಿಕತೆಯನ್ನು ಧ್ವಂಸ ಮಾಡಿ ಬಳಿಕ ವೇದಗಳನ್ನು ರಚಿಸಿದರೆಂದೂ ಚರಿತ್ರೆಯ ಪುಟಗಳಲ್ಲಿ ಬರೆಯಿಸಿಬಿಟ್ಟರು. ಹರಪ್ಪಾ ಉತ್ಖನನದಲ್ಲಿ ಭಾಗಿಯಾಗಿದ್ದ ವ್ಹೀಲರ್ ಅವಶೇಷಗಳನ್ನು ಆಕ್ರಮಣ ಮಾಡಿದವರದ್ದು ಈ ವಸ್ತುಗಳು, ಆಕ್ರಮಣಕ್ಕೊಳಗಾದವರದ್ದು ಉಳಿದವುಗಳೆಂದು ಘಂಟಾಘೋಷವಾಗಿ ನಿರ್ಣಯಿಸಿಬಿಟ್ಟ. ಚರಿತ್ರಕಾರರು ಕುರಿಗಳಂತೆ ಆತನ ವಾದವನ್ನು ಹಿಂಬಾಲಿಸಿದರು. ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇವರಿಂದ ಬಿಂಬಿಸಲ್ಪಡುವ ಹೊರಗಿನಿಂದ ಬಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಸುಂದರ, ಸಶಕ್ತ , ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಬಹು ಹತ್ತಿರದ ಸಂಬಂಧವಿರುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಸಾಹಿತ್ಯ ಹೊಂದಿರುವ ಜನಾಂಗಕ್ಕೆ ಸಂಸ್ಕೃತಿ ಇರುವುದು ಅಥವಾ ಸಂಸ್ಕೃತಿ ಇರುವ ಜನಾಂಗ ಸಾಹಿತ್ಯ ಸೃಷ್ಟಿ ಮಾಡಿರುವುದು ಇತಿಹಾಸ ಕಂಡ ಸತ್ಯ. "ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು, ಆದರೆ ಅವರಿಗೆ  ನಾಗರಿಕತೆಯಿರಲಿಲ್ಲ. ಆಕ್ರಮಣಕ್ಕೊಳಗಾದವರು ಅದ್ಭುತ ನಾಗರಿಕತೆಯನ್ನು ಬಿಟ್ಟು ಓಡಿದರು. ಅವರಿಗೆ ಅವರದ್ದೆನ್ನಲಾದ ಸಾಹಿತ್ಯವೇ ಇರಲಿಲ್ಲ!" ಎನ್ನುವ ಇವರ ಮೂರ್ಖ ವಾದ ನಿಷ್ಪಕ್ಷಪಾತಿಯಾಗಿರುವ, ನಿಜವಾದ ಇತಿಹಾಸಕಾರರಿಂದ ನಗೆಪಾಟಲಿಗೀಡಾಯಿತು.

               ಯಾರನ್ನು ಆರ್ಯರನ್ನಾಗಿಸುವುದು, ದ್ರಾವಿಡರ ಪಟ್ಟಿಗೆ ಯಾರನ್ನು ಸೇರಿಸುವುದು ಎನ್ನುವುದರ ಬಗ್ಗೆ ಈ ಆರ್ಯ ಆಕ್ರಮಣ ವಾದಿಗಳ ಬಳಿಯೇ ಸ್ಪಷ್ಟತೆಯಿಲ್ಲ. ಬ್ರಾಹ್ಮಣರನ್ನಷ್ಟೇ ಆರ್ಯ ಪಟ್ಟಿಗೆ ಸೇರಿಸೋಣವೆಂದರೆ ಬ್ರಾಹ್ಮಣ ರಾವಣನನ್ನು ಅವರೀಗಾಗಲೇ ದ್ರಾವಿಡನನ್ನಾಗಿಸಿಯಾಗಿದೆ; ದಕ್ಷಿಣಾತ್ಯರೂ ದೇವರೆಂದು ಆರಾಧಿಸುವ ಕ್ಷತ್ರಿಯ ರಾಮನನ್ನು ಆರ್ಯ ಪಟ್ಟಿಗೆ ಸೇರಿಸಿಯಾಗಿದೆ! ದಕ್ಷಿಣದವರು ಆರಾಧಿಸುವ ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿ ವೈದಿಕ ಸೂತ್ರಕಾರರಾದ ದಕ್ಷಿಣ ಭಾರತೀಯರಾದ ಬೋಧಾಯನ, ಆಪಸ್ತಂಭರನ್ನು; ವೇದಗಳಲ್ಲಿ ಬರುವ ಕೃಷ್ಣವರ್ಣದವರಾಗಿದ್ದ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ  ಇವರನ್ನು ಯಾವ ಪಟ್ಟಿಯಲ್ಲಿ ಸೇರಿಸುವುದು? ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ ಎಂದಿದೆ ವೇದ. ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ. ಕೊಂಬುಗಳಿದ್ದ ಪಶುಪತಿಯನ್ನು ಕ್ರೈಸ್ತರ ಕಾಲಕ್ಕೆ ಮೊದಲೇ ಯೂರೋಪಿನಲ್ಲಿಯೂ ಆರಾಧಿಸುತ್ತಿದ್ದರು. ಆ ಚಿತ್ರವನ್ನು ಚಿತ್ರಿಸಲಾಗಿದ್ದ ದೊಡ್ಡ ಬೆಳ್ಳಿಯ ಬಟ್ಟಲು ಜರ್ಮನಿಯಲ್ಲಿ ಕಂಡು ಬಂತು. ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ದೇವಾಸುರ ಕದನದಲ್ಲಿ ಸೋಲುಂಡ ಬಳಿಕ ದಾನವರು ಆರ್ಯಾವರ್ತವನ್ನು ಬಿಟ್ಟು ಬೇರೆ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಹೋದರು ಎಂದು ವೇದಗಳಲ್ಲೇ ಇದೆ. ಅಂದರೆ ವಲಸೆ ಇಲ್ಲಿಂದಲೇ ಆಗಿರಬೇಕು.  ಹಾಗೆ ನೋಡಿದರೆ ಭಾರತದಲ್ಲಿ ಸರ್ವಕಾಲಕ್ಕೂ ದಲಿತರ ಅಥವಾ ಕೆಳವರ್ಗದವರ ಸಂಖ್ಯೆಯೇ ಮೇಲ್ವರ್ಗಕ್ಕಿಂತ ಹೆಚ್ಚು ಇದ್ದಿದ್ದು, ಬ್ರಾಹ್ಮಣರಂದರೆ ಆರ್ಯರು, ಅಹಿಂದರೆಂದರೆ ದ್ರಾವಿಡರು ಎನ್ನುವ ಬುಡವಿಲ್ಲದ ವಾದವೂ ಅರ್ಥ ಹೀನವೆನಿಸುತ್ತದೆ. ಕೆಲವೇ ಕೆಲವು ಪ್ರತಿಶತ ಸಂಖ್ಯೆಯ ಆರ್ಯರು ಅಗಾಧ ಸಂಖ್ಯೆಯ ದ್ರಾವಿಡರನ್ನು ಸೋಲಿಸಿದ್ದು ಹೇಗೆ?  ಹರಪ್ಪ ಉತ್ಖನನದಲ್ಲಿ ವೇದಗಳಲ್ಲಿ ಹೇಳಲಾದ, ಶುಲ್ಬಸೂತ್ರಗಳಲ್ಲಿ ಉಲ್ಲೇಖಿಸಿದಂತೆಯೇ ರಚಿತವಾದ ಯಜ್ಞಶಾಲೆಗಳು ಕಂಡುಬಂದವು. ಯಜ್ಞಕುಂಡಗಳ ಜೊತೆಗೆ ಯಜ್ಞಕುಂಡದಲ್ಲಿ ಹವಿಸ್ಸು, ಬಲಿ ನೀಡಲಾದ ಪ್ರಾಣಿಗಳ ಅಸ್ಥಿಯೂ ಸಿಕ್ಕಿದವು. ಇಲ್ಲಿನ ಮೂಲ ಸಂಸ್ಕೃತಿಗೆ ವೈದಿಕತೆಯ ಗಂಧಗಾಳಿ ಇಲ್ಲದಿದ್ದರೆ ಯಜ್ಞಶಾಲೆಗಳು ನಿರ್ಮಿತವಾದದ್ದೇಕೆ? ಆರ್ಯ ಆಕ್ರಮಣವಾದಿಗಳು ಹೇಳುವಂತೆ ಅದು ದ್ರಾವಿಡರದ್ದಾಗಿದ್ದಾರೆ ಯಜ್ಞಶಾಲೆ, ಯಜ್ಞಕುಂಡದ ಆಕಾರ, ಯಜ್ಞವಿಧಾನದಲ್ಲೂ ವೈದಿಕ ಸಂಸ್ಕೃತಿಯ ಕುರುಹು ಕಂಡುಬಂದದ್ದಾದರೂ ಹೇಗೆ? ಧರ್ಮ-ಸಂಸ್ಕೃತಿ, ಮತ-ತತ್ವ, ನ್ಯಾಯ-ನೀತಿ, ಸಾಮಾಜಿಕ-ಕೌಟುಂಬಿಕ ಪದ್ದತಿಗಳಲ್ಲಿ ಉತ್ತರ-ದಕ್ಷಿಣವಾಸಿಗಳಲ್ಲಿ ಚಾರಿತ್ರಿಕ ವೈರುಧ್ಯವೇ ಕಾಣದಿರುವಾಗ ಈ ಆರ್ಯ ಆಕ್ರಮಣವಾದ ಹಸಿ ಹಸಿ ಸುಳ್ಳೆಂದು ಮೇಲ್ನೋಟಕ್ಕೇ ಅನಿಸುವುದಿಲ್ಲವೇ?

               ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ, ಆತ ಹೆಸರಿಸಿದ ಎರಡು ಸಂಸ್ಕೃತಿಗಳು ಒಂದೇ ಕಾಲದ್ದಲ್ಲವೆಂದು ನಿರೂಪಿಸಿತು. ಮೊದಲ ಗುಂಪಿನವರನ್ನು ಆಕ್ರಮಣಕಾರರನ್ನಾಗಿಯೂ ಎರಡನೆಯವರನ್ನು ಆಕ್ರಮಣಕ್ಕೊಳಗಾದವರಂತೆ ವ್ಹೀಲರ್ ಪರಿಗಣಿಸಿದ್ದ. ಆದರೆ ಆಕ್ರಮಣಕಾರರು ಬರುವ ಸಮಯಕ್ಕೆ ಆಕ್ರಮಣಕ್ಕೊಳಗಾದವರು ಅಲ್ಲಿ ಇರಲೇ ಇಲ್ಲ ಎಂದು ಸ್ಟ್ರಾಟಿಗ್ರಫಿ ನಿಚ್ಚಳವಾಗಿ ಸಾರಿತು. ಇಬ್ಬರು ಬೇರೆ ಬೇರೆ ಕಾಲದವರಾಗಿದ್ದರೆ ನರಸಂಹಾರ ಹೇಗೆ ಸಾಧ್ಯ? ಹೀಗಾಗಿ ಆರ್ಯರು ದ್ರಾವಿಡರ ಸಂಹಾರ ಮಾಡಿದರು ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ನಿಚ್ಚಳವಾಯಿತು. ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆ; ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲಿ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಸಿಕ್ಕಿದ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಆ ನಾಗರೀಕತೆ ಆರ್ಯರದ್ದೇ ಎನ್ನುವುದನ್ನು ಸ್ಪಷ್ಟಪಡಿಸಿತು. ಹರಪ್ಪಾದಲ್ಲಿ ಕಂಡುಬಂದ ನಾಗರಿಕತೆ ದ್ರಾವಿಡರದ್ದು ಎಂದು ನಖಶಿಖಾಂತ ವಾದಿಸಿದವರಿಗೆ ಎಷ್ಟೇ ಪ್ರಯತ್ನಿಸಿದರೂ ಹರಪ್ಪಾ ಲಿಪಿಯ ಜಾಡೇ ಸಿಗಲಿಲ್ಲ. ಅದು ಆರ್ಯರದ್ದೆಂದು, ಹಾಗಾಗಿ ಲಿಪಿಯೂ ಆರ್ಯ ಸಂಸ್ಕೃತಿಯದ್ದಿರಬಹುದೆಂದು ಭಾವಿಸಿದವರಿಗೆ ಉತ್ಖನನದಲ್ಲಿ ಸಿಕ್ಕ ಮೊಹರು, ಕಲಾಕೃತಿಗಳಲ್ಲಿದ್ದ ಲಿಪಿಯ ಗೂಢತೆಯೂ ಅರ್ಥವಾಯಿತು. ಭುಜ್, ಕ್ಯಾಂಬೆಗಳಲ್ಲಿ ಇತ್ತೀಚಿಗೆ ನಡೆದ ಸಂಶೋಧನೆಗಳು ವೇದಗಳ ರಚನೆಯ ಕಾಲವನ್ನು ಕ್ರಿ.ಪೂ 6000ಕ್ಕೂ ಹಿಂದಕ್ಕೆ ದೂಡುತ್ತವೆ. ಪಾಕಿಸ್ತಾನದ ಮೆಹರ್ ಗಢ್ ನಲ್ಲಿ (ಕ್ರಿ.ಪೂ. 6500) ನಡೆದ ಉತ್ಖನನ ಹರಪ್ಪ ನಾಗರಿಕತೆಗೂ ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ದೃಢೀಕರಿಸಿತು. ಅಲ್ಲಿನ ಜನ ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದು ಇತಿಹಾಸ ತಿರುಚಿದವರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಸಂಗತಿ. ಸರಸ್ವತಿ ನದಿಯ ಬಗ್ಗೆ ನಡೆದ ಅಪಾರ ಸಂಶೋಧನೆಗಳು ಈ ವೇದ ಕಾಲೀನ ನಾಗರಿಕತೆಯನ್ನು ಹತ್ತು ಸಾವಿರ ವರ್ಷಗಳಿಗೂ ಹಿಂದಕ್ಕೊಯ್ದಿವೆ. ಬಿರ್ಹಾನದಲ್ಲಿ ದೊರಕಿದ ವಸ್ತುಗಳನ್ನು ಕಾರ್ಬನ್ ಡೇಟಿಂಗ್ ಮಾಡಿದಾಗ ಕ್ರಿ.ಪೂ 7400 ಕಾಲಕ್ಕೆ ಹೋಗಿ ಮುಟ್ಟಿದವು. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು. ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು ಎಂದು ರಾಖಿಗರ್ಹಿಯಲ್ಲಿ ನಡೆದ ಉತ್ಖನನಗಳಿಂದ ರುಜುವಾತಾಗಿದೆ. ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಭಾರತದ ಹತ್ತಿ ಸಿಕ್ಕಿದೆ. ಅದೇ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ.  ಇನ್ನು ಕುದುರೆಗಳ ವಿಷಯಕ್ಕೆ ಬಂದರೆ ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36.  ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ.

                ‘ಆರ್ಯ' ಎಂದರೆ ‘ಸುಸಂಸ್ಕೃತ', ‘ಶ್ರೇಷ್ಠ', ‘ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಆರ್ಯ ಶಬ್ಧ "ಅರಿಯ" ಶಬ್ಧದಿಂದ ಬಂತು. ಭತ್ತವನ್ನು ಸಂಸ್ಕರಿಸಿ ಪಡೆದ ಅಕ್ಕಿಯನ್ನು ತುಳುವಿನಲ್ಲಿ "ಅರಿ" ಎನ್ನುತ್ತೇವೆ. ಅಂದರೆ ಆರ್ಯ ಎಂದರೆ ಸಂಸ್ಕಾರವಂತ ಎಂದರ್ಥವೇ ಹೊರತು  ಜನಾಂಗದ ಹೆಸರಲ್ಲ. ದ್ರವಿಡ ಎಂದರೆ ಮರಗಳಿಂದ ಸಮೃದ್ಧವಾದುದು ಎಂದರ್ಥ. ಅದು ಪ್ರದೇಶ ಸೂಚಕ ಪದ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ(ನಂಬರ್ ಸಿಸ್ಟಮ್) ವಲಸೆಯನ್ನು ಅಧ್ಯಯನ ಮಾಡಿದರು. ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು.  ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗೀಯ ವಲಸೆ ಆಗಿಯೇ ಇಲ್ಲ ಎಂದು ಮಾಲಿಕ್ಯುಲರ್ ಜೆನೆಟಿಕ್ಸ್ ಮೂಲಕ ತಿಳಿದು ಬರುತ್ತದೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ. ಸ್ವಾರಸ್ಯವೆಂದರೆ ಮೊದಲ ಇಪ್ಪತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಜನಾಂಗವೆಂದು ಸಾಧಿಸಿದ, ಆರ್ಯ ಆಕ್ರಮಣವಾದವನ್ನು ಮುನ್ನೆಲೆಗೆ ತರಲು ಕಾರಣನಾದ ಮುಲ್ಲರ್ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಭಾಷಾ ಕುಟುಂಬವೇ ಹೊರತು ಪ್ರತ್ಯೇಕ ಜನಾಂಗವಲ್ಲವೆಂದು ಹೇಳ ತೊಡಗಿದ್ದ.

                 ಬುಡವೇ ಇಲ್ಲದ ಆರ್ಯ ದ್ರಾವಿಡ ಜನಾಂಗೀಯ ಪರಿಕಲ್ಪನೆ ಇವತ್ತಿಗೂ ಭಾರತವನ್ನು ಅಲ್ಲಾಡಿಸುತ್ತಿದೆ. ಅಸಲಿಗೆ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳಿಂದಲೂ ಸುಳ್ಳೆಂದು ನಿರೂಪಿತವಾದ ಆರ್ಯ ಆಕ್ರಮಣ ವಾದ ಇಂದಿಗೂ ಎಡಪಂಥೀಯ ಬುದ್ಧಿಜೀವಿಗಳ ಬಾಯಲ್ಲಿ ನಲಿದಾಡುವ ಕಾರಣ ಅದೊಂದು ಅವರಿಗೆ ಅನುಕೂಲಕರ ವಾದ ಎಂಬ ಕಾರಣದಿಂದ ಅಷ್ಟೇ!  ಎಲ್ಲವನ್ನೂ ರಷ್ಯಾ, ಚೀನಾಗಳಿಂದ ಎರವಲು ಪಡೆದುಕೊಂಡ ಸ್ವಂತ ವಿಚಾರಗಳೇ ಇಲ್ಲದ ಭಾರತೀಯ ಎಡಪಂಥೀಯರಿಗೆ ಇವತ್ತಿಗೂ ಭೂರಿ ಭೋಜನ ನೀಡುವ "ಸಾವಿರದ ಸುಳ್ಳು" ಬಹುಷಃ ಇದೇ! ಒಂದೇ ಸುಳ್ಳನ್ನು ಸಾವಿರ ಸಲ ಹೇಳುವಷ್ಟರಲ್ಲಿ ಅದು ಸತ್ಯವಾಗಿಬಿಡುವ ಅಪಾಯವಿದೆ ಎನ್ನುವುದಕ್ಕೆ ಕಣ್ಣೆದುರಿನ ನಿದರ್ಶನ ಈ ಆರ್ಯ ಆಕ್ರಮಣ ವಾದ. ನೆಹರೂ ಪಾರುಪತ್ಯದಲ್ಲಿ ಶೈಕ್ಷಣಿಕ ವಲಯವನ್ನು ಹೊಕ್ಕ ಅದು ಇಂದಿಗೂ ಭಾರತೀಯ ಪೀಳಿಗೆಗಳ ತಲೆಯೊಳಗೆ ಇಳಿದು ವಶೀಕರಿಸಿ ಭಾರತೀಯ ಮಾನಸಿಕತೆಯನ್ನು ಭಾರತವಿರೋಧಿ ಮನಃಸ್ಥಿತಿಯಾಗಿ ಮತಾಂತರಿಸುತ್ತಿದೆ. ಯಾವ ಆರ್ಯ ಆಕ್ರಮಣ ಎಂಬ ಪೊಳ್ಳು ವಾದ ಭಾರತವನ್ನು ಒಡೆಯಲು ತಮಗೆ ಅನುಕೂಲ ಎಂದು ಬ್ರಿಟಿಷರು ಭಾವಿಸಿ ಈ ನೆಲದಲ್ಲಿ ಹರಿಯಬಿಟ್ಟರೋ ಅದೇ ಕಾರ್ಯವನ್ನು ಭಾರತದ ಎಡಪಂಥೀಯರು ಇಂದು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಭಾರತವನ್ನು ದೇಶವಾಗಿ ಪರಿಗಣಿಸದ ಅವರನ್ನು ಭಾರತದ ಎಡಪಂಥೀಯ ಎಂದು ಕರೆಯುವುದೇ ಬಹು ದೊಡ್ದ ಪ್ರಮಾದ. ಅವರ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಹಲವು ಚಳವಳಿಗಳನ್ನು ಹೂಡಿ, ಹೊಡೆದು, ಬಡಿದು; ಜಾತಿ-ಜಾತಿಗಳ ನಡುವೆ ಕಲಹ ತಂದಿಕ್ಕಿ; ಹಲವು ಪಕ್ಷಗಳನ್ನು ಕಟ್ಟಿ, ಒಡೆದು; ಜನರ ಮನಸ್ಸನ್ನು ಭ್ರಮಾಧೀನವನ್ನಾಗಿಸಿ ಹಲ ಕಾಲ ದೇಶವನ್ನು ದುರ್ದೆಶೆಗೆ ತಳ್ಳಿ; ಈಗ ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗಿರುವಾಗ, ಅದೇ ಅಭಿವೃದ್ಧಿಯ ವಿಚಾರವನ್ನು ಬಳಸಿಕೊಂಡು ದೇಶವನ್ನು ಉತ್ತರ-ದಕ್ಷಿಣವಾಗಿ ಒಡೆಯುವ ಮಟ್ಟಕ್ಕೆ ಮುಟ್ಟಿಸಿದೆ.