ಪುಟಗಳು

ಶನಿವಾರ, ಸೆಪ್ಟೆಂಬರ್ 15, 2018

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ


              "ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರಸ್ವತೀ ಸಿಂಧುಭಿಃ ಪಿನ್ವಮಾನಾ"
 ಋಗ್ವೇದದ ಈ ಋಕ್ ನಿಜಾರ್ಥದಲ್ಲಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಹೌದು ಇಂದ್ರನೂ ನಮ್ಮ ರಕ್ಷಣೆಗೆ ನರೇಂದ್ರನಾಗಿ ಬಂದಿದ್ದಾನೆ. ಅದೇ ನರೇಂದ್ರನ ನೇತೃತ್ವದಲ್ಲಿ ನೇಪಥ್ಯಕ್ಕೆ ಸರಿದಿದ್ದ ಪುಣ್ಯಗರ್ಭೆ ಸರಸ್ವತಿ ಜನರ ಮನಸ್ಸನ್ನು ಮತ್ತೆ ಮುಟ್ಟಲಿದ್ದಾಳೆ, ತಟ್ಟಲಿದ್ದಾಳೆ, ಪ್ರವಹಿಸಲಿದ್ದಾಳೆ. ಋಗ್ವೇದದಿಂದ ಅಥರ್ವದ ತನಕವೂ ವ್ಯಾಪಿಸಿಕೊಂಡು, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಸ್ತುತಿಸಲ್ಪಟ್ಟು ಭಾರತೀಯರ ನಿತ್ಯ ಸ್ತೋತ್ರದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡು ಸ್ಮರಿಸಲ್ಪಡುತ್ತಿದ್ದ ಸರಸ್ವತಿ ಈಗ ಮತ್ತೊಮ್ಮೆ ಭಾರತೀಯರ ಮನೆಮನಗಳಲ್ಲಿ ಪ್ರವಹಿಸಲಿದ್ದಾಳೆ. "ಹರ್ ಕಿ ಧುನ್"ನಲ್ಲಿ ಜನಿಸಿ ಭೃಗುಕುಚ್ಛದ ಬಳಿ ರತ್ನಾಕರನನ್ನು ಸೇರುವವರೆಗೆ, ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಾಗಿ, 1300 ಕಿಮೀಗೂ ಹೆಚ್ಚು ದೂರ ಹರಿಯುತ್ತಿದ್ದ ಈ ಸಪ್ತ ಸಿಂಧು ಮತ್ತೊಮ್ಮೆ ಭಾರತವಿಡೀ ಸಂಚರಿಸಲಿದ್ದಾಳೆ. ಆದರೆ ನೇರವಾಗಿ ಅಲ್ಲ, ಮತ್ತೆ ಗುಪ್ತಗಾಮಿನಿಯಾಗಿಯೇ.

           ದಕ್ಷಬ್ರಹ್ಮನ ಆಹ್ವಾನದಂತೆ ಯಜ್ಞಸ್ಥಳಕ್ಕೆ ಬಂದ ಸರಸ್ವತಿ "ಸುರೇಣು" ಎನ್ನುವ ಹೆಸರಿನಿಂದ ವಿಖ್ಯಾತಳಾದಳು. ವಸಿಷ್ಠರ ಮೇಲಿನ ಪ್ರೀತಿಯಿಂದ ಅವರ ಆಹ್ವಾನವನ್ನು ಮನ್ನಿಸಿ ಕುರುಕ್ಷೇತ್ರದಲ್ಲಿ ಅವರು ಮಾಡುತ್ತಿದ್ದ ಯಜ್ಞಶಾಲೆಗೆ ಆಗಮಿಸಿದಾಗ ಅಲ್ಲಿನ ದ್ವಿಜಶ್ರೇಷ್ಠರು ಅವಳನ್ನು "ಓಘವತೀ" ಎಂದು ಕರೆದರು. ಹಿಮವತ್ಪರ್ವತದಲ್ಲಿ ಯಜ್ಞಮಾಡುತ್ತಿದ್ದ ಬ್ರಹ್ಮ ಸರಸ್ವತಿಯನ್ನು ಆಹ್ವಾನಿಸಿದಾಗ ಅಲ್ಲಿಗೆ ಆಗಮಿಸಿದ ಸರಸ್ವತಿಯನ್ನು ಯಜ್ಞವೇದಿಯಲ್ಲಿದ್ದವರು "ವಿಮಲೋದಾ" ಎಂದು ಕರೆದರು.  ಸಪ್ತಸರಸ್ವತಿಯರು ಏಕೀಭೂತರಾದ ಆ ಸ್ಥಳ "ಸಪ್ತಸಾರಸ್ವತ ತೀರ್ಥ"ವೆಂದೇ ಪ್ರಸಿದ್ಧಿಯನ್ನು ಹೊಂದಿತು. ಇಂತಹ ಸರಸ್ವತಿಯನ್ನು ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಸ್ಮರಿಸಿದೆ ಋಗ್ವೇದ. ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಋಗ್ವೇದದಿಂದ ಈಚೀನದಾದ "ಪಂಚವಿಂಶ ಬ್ರಾಹ್ಮಣ" ಸರಸ್ವತಿ ನದಿಯು ಭಾಗಶಃ ಒಣಗಿದ್ದುದನ್ನು ಹೇಳಿದೆ. ಸರಸ್ವತೀ ನದಿಯು ಹಿಮಾಲಯ ಶ್ರೇಣಿಯ "ಪ್ಲಕ್ಷ ಪ್ರಸ್ರವಣ" ಎಂಬಲ್ಲಿ ಉಗಮಗೊಂಡು ಅಲ್ಲಿಂದ ಅಶ್ವಾರೋಹಿಯೊಬ್ಬ ನಲವತ್ತನಾಲ್ಕು ದಿವಸಗಳಲ್ಲಿ ಕ್ರಮಿಸಬಹುದಾದಷ್ಟು ದೂರದಲ್ಲಿದ್ದ ಮರುಭೂಮಿಯೊಂದರಲ್ಲಿ ಅದೃಶ್ಯವಾಗುತ್ತದೆ ಎಂದು ವರ್ಣಿಸಿದೆ ಪಂಚವಿಂಶ ಬ್ರಾಹ್ಮಣ. ಪ್ಲಕ್ಷಪ್ರಸ್ರವಣದಿಂದ ನದಿಯ ಉತ್ತರದಲ್ಲಿದ್ದ ಹಲವು ತೀರ್ಥಕ್ಷೇತ್ರಗಳನ್ನು ಮಹಾಭಾರತ ಉಲ್ಲೇಖಿಸಿದೆ. ಪಾಂಡವರು ವನವಾಸದಲ್ಲಿ ದ್ವೈತವನಕ್ಕೆ ಬಂದಾಗ ಕಾಣಸಿಗುವ ಸರಸ್ವತಿಯನ್ನು ಮಹಾಭಾರತ ಬಹು ಅಂದವಾಗಿ ವರ್ಣಿಸಿದೆ. ಹೀಗೆ ಸಮೃದ್ಧವಾಗಿ ಹರಿಯುತ್ತಿದ್ದ ನದಿಯ ವಿವರಗಳನ್ನು, ಅದು ಕೆಲ ದೂರ ಹರಿದು ಅದೃಶ್ಯವಾಗುತ್ತಿದ್ದುದನ್ನು ಉಲ್ಲೇಖಿಸಿದ್ದನ್ನು ಇತಿಹಾಸ ಎಂದು ಪರಿಗಣಿಸದೇ ಬದಿಗೆ ತಳ್ಳಿದ್ದು ನಮ್ಮ ಮೌಢ್ಯವಲ್ಲದೆ ಇನ್ನೇನು? ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಬಲರಾಮನು ಮಹಾಭಾರತ ಯುದ್ಧದಲ್ಲಿ ಭಾಗವಹಿಸದೆ 42ದವಸಗಳ ಕಾಲ ತೀರ ಕ್ಷೀಣವಾಗಿ ಹರಿಯುತ್ತಿದ್ದ,ಅಲ್ಲಲ್ಲಿ ಬತ್ತಿ ಹೋಗಿದ್ದ ಸರಸ್ವತಿ ನದೀತೀರದಲ್ಲಿದ್ದ ತೀರ್ಥಕ್ಷೇತ್ರ ಗಳನ್ನು ದರ್ಶಿಸಿದ್ದ. ಒಂದು ಕಡೆ ಸರಸ್ವತಿಯು ಹರಿವನ್ನು ಬದಲಿಸಿದ್ದನ್ನು ಕಂಡು ಆಶ್ಚರ್ಯ ಪಟ್ಟಿದ್ದ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ಅಂದರೆ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಾಳೆ ಎನ್ನುವ ಅರ್ಥದಲ್ಲಿ ವರ್ಣಿಸಿದೆ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

            ಗುಜರಾತಿನ ಪಟಣ್. ಪ್ರಸಿದ್ಧ ಪಟೋಲಾ ಸೀರೆಗಳ ತವರು. ಚಾವ್ಡಾ ವಂಶಜ ವನರಾಜನಿಂದ ಸ್ಥಾಪಿಸಲ್ಪಟ್ಟ "ಅನಾಹಿಲಪಟಕ". ಮುಂದೆ ಚಾಲುಕ್ಯರ ರಾಜಧಾನಿಯಾಗಿ ಶೋಭಿಸಿ ಬಳಿಕ ಅಲ್ಲಾವುದ್ದೀನ್ ಖಿಲ್ಜಿಯೆಂಬ ರಕ್ಕಸನ ಮತಾಂಧತೆಗೆ ಎರವಾಗಿ ಸುಟ್ಟುರಿದು ಹೋದ ಪ್ರಸಿದ್ಧ ಪುರಾತನ ನಗರಿ. ಅಂತಹ ನಗರಕ್ಕೆ ಭವ್ಯ ಇತಿಹಾಸವಿದೆ. ಅಲ್ಲಿ ಅಮರ ಪ್ರೇಮದ ಕುರುಹು ಇದೆ. ವಿಶೇಷವೆಂದರೆ ಆ ಕುರುಹು ಯಾರಿಗೂ ಉಪಯೋಗವಾಗದ ಕಲ್ಲುಮಣ್ಣಿನ ಕಟ್ಟಡವಲ್ಲ. ಅದ್ಭುತ ವಿನ್ಯಾಸದ, ಸರ್ವರಿಗೂ ಉಪಯೋಗಕ್ಕೆ ಯೋಗ್ಯವಾದ ಸಿಹಿನೀರ ಬಾವಿ. ಅದರಲ್ಲೂ ಆ ಬಾವಿಯಲ್ಲಿ ಈ ನೆಲದ ಪುರಾತನ ತಾಯಿನದಿ ಸರಸ್ವತಿಯ ಅಮೃತ ಬಿಂದುಗಳಿವೆ. ಅದು ತನ್ನಿನಿಯ ಅರಸನ ನೆನಪಿಗಾಗಿ ರಾಣಿಯೊಬ್ಬಳು ನಿರ್ಮಿಸಿದ ಬಾವಿ. ಹಾಗಾಗಿ ಅದು "ರಾಣಿ ಕೀ ವಾವ್" ಎಂದೇ ಕರೆಸಿಕೊಂಡಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ  ಸೋಲಂಕಿ ಮನೆತನದ ರಾಣಿ ಉದಯಮತಿ ರಾಜ ಭೀಮದೇವನ ಸವಿ ನೆನಪಿಗಾಗಿ ಕಟ್ಟಿಸಿದ ಅದ್ಭುತ ಮೆಟ್ಟಿಲು ಬಾವಿ ಅದು. 64 ಮೀಟರ್ ಉದ್ದ, 20 ಮೀಟರ್ ಅಗಲ, ಹಾಗೂ 27 ಮೀಟರ್ ಗಳಷ್ಟು ಆಳವಿರುವ ಈ ಅದ್ಭುತ ಕಲಾಕೃತಿ ರಚನೆಯಾದದ್ದು ನದಿ ಸರಸ್ವತಿಯ ದಡದಲ್ಲೇ.

              ತಲೆ ಕೆಳಗಾಗಿ ಕಾಣುವತೆ ರಚನೆಯಾದ ದೇಗುಲದ ಪಕ್ಕದಲ್ಲೇ ನಿರ್ಮಾಣವಾಗಿದೆ ಈ ಮೆಟ್ಟಿಲು ಬಾವಿ. ಸರಸ್ವತಿ ಬಿಂದುಗಳನ್ನು ಶೇಖರಿಸಿಡಲು ರಾಜಾ ಭೀಮದೇವನ ನೆನಪಿಗಾಗಿ ಆತನ ಸತಿ ಉದಯಮತಿ, ಮಗ ಕರ್ಣನ ನೆರವಿನಿಂದ ಕಟ್ಟಿಸಿದ ಅದ್ಭುತ ಕಲಾಪ್ರಕಾರ ಇದು. ಅಲ್ಲಿ ವಿಷ್ಣುವಿನ ದಶಾವತಾರಗಳ, ಭಾಗವತ, ಪುರಾಣಗಳ ಚಿತ್ರಣದ ಕೆತ್ತನೆಯಿದೆ. ಮರು - ಗುರ್ಜರ ಶೈಲಿಯ ಎಂಟುನೂರಕ್ಕೂ ಹೆಚ್ಚು ಕಲಾಕೃತಿಗಳ ಸೊಬಗು ರಾಣಿ ಕೀ ವಾವ್'ನ ಸೌಂದರ್ಯವನ್ನು ವರ್ಧಿಸಿ ನಿರಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಣಿ ಕೀ ವಾವ್ ಮೆಟ್ಟಿಲು ಬಾವಿ ನಿರ್ಮಿಸುವ ಕುಶಲಕರ್ಮಿ ಕಲೆಗಾರನ ಅನುಪಮ, ನ ಭೂತೋ ನ ಭವಿಷ್ಯತಿ ಎನ್ನುವಂತಹ ಉತ್ತುಂಗದ ನಿರ್ಮಿತಿ. ಅದರ ಸೌಂದರ್ಯ, ಸಂಕೀರ್ಣತೆಗೆ ಅದೇ ಸಾಟಿ. ತಲೆಕೆಳಗಾಗಿ ನಿರ್ಮಿತವಾದ ದೇವಾಲಯ ಬಾವಿಯ ನೀರಿನ ಪಾವಿತ್ರ್ಯವನ್ನು ಸೂಚಿಸುತ್ತದೆ. ಇಲ್ಲಿ ಕಲೆಯ ಔನ್ನತ್ಯವನ್ನು ಸೂಸುವ ಶಿಲ್ಪಗಳು ಏಳು ಅಂತಸ್ತಿನಲ್ಲಿ ಅಡಕವಾಗಿವೆ. ಐನೂರಕ್ಕೂ ಹೆಚ್ಚಿನ ತತ್ತ್ವ ಶಿಲ್ಪಗಳು, ಸಾವಿರಕ್ಕಿಂತಲೂ ಹೆಚ್ಚಿನ ಪೌರಾಣಿಕ ಚಿತ್ರಗಳು ಈ ಏಳು ಅಂತಸ್ತಿನಲ್ಲಿ ನಿರ್ಮಾಣವಾಗಿವೆ. ಹೆಚ್ಚು ಆಳವಿರುವ(23 ಮೀ) ನಾಲ್ಕನೇ ಹಂತ ಆಯತಾಕಾರದಲ್ಲಿದೆ(9.4 ಮೀ X 9.5 ಮೀ). ಒಟ್ಟಾರೆ ಸ್ಥಳದ ಪಶ್ಚಿಮ ಭಾಗದಲ್ಲಿರುವ ಬಾವಿಯಲ್ಲಿ 10 ಮೀ ವ್ಯಾಸ ಮತ್ತು 30 ಮೀ ಆಳದ ಬಾಣದಂತಹ ರಚನೆ ಅದರ ಸೌಂದರ್ಯಕ್ಕೊಂದು ಮೆರುಗು ನೀಡಿದೆ. ಮೆಟ್ಟಿಲು ಬಾವಿ ರಚನೆಯ ಎಲ್ಲಾ ಮೂಲತತ್ತ್ವಗಳನ್ನು ಸಂಯೋಜಿಸಿ ರಚಿಸಿದಂತೆ ದೃಗ್ಗೋಚರಿಸುವ ಬಾವಿಯಲ್ಲಿ ನೆಲದ ಮಟ್ಟದಿಂದ ಆರಂಭವಾಗುವ ಮೆಟ್ಟಿಲುಗಳ ಕಾರಿಡಾರ್, ಒಂದಕ್ಕಿಂತ ಹೆಚ್ಚು ಅಂತಸ್ತುಗಳುಳ್ಳ ನಾಲ್ಕು ಸರಣಿ ಮಂಟಪಗಳು, ಬಾಣಾದಾಕಾರದ ಸುರಂಗದಂತಹ ರಚನೆಯ ಬಾವಿಯನ್ನು ಹೊಂದಿರುವ ಈ ಅದ್ಭುತ ಮೆಟ್ಟಿಲು ಬಾವಿ ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದುದರಲ್ಲಿ ಆಶ್ಚರ್ಯವೇನಿಲ್ಲ.

                ಕೇವಲ ಸಿಹಿ ನೀರ ಸ್ತ್ರೋತವಾಗಿ, ಸ್ಥಿರ ರಚನೆಯಾಗಿ, ಅದ್ಭುತ ವಾಸ್ತುಶಿಲ್ಪವಾಗಿ ಮಾತ್ರವೇ ರಾಣಿ ಕೀ ವಾವ್ ನಮ್ಮ ಗಮನ ಸೆಳೆಯುವುದಿಲ್ಲ; ಅಲ್ಲಿ ಶಿಲ್ಪಗಳ ಅಲಂಕರಣವಿದೆ; ಪಾಂಡಿತ್ಯಪೂರ್ಣ ಕಲಾತ್ಮಕತೆಯಿದೆ. ಅದರ ಸಾಂಕೇತಿಕ ಲಕ್ಷಣಗಳು ಹಾಗೂ ಕೆತ್ತಿರುವ ಶಿಲ್ಪಗಳು ಮತ್ತು ತುಂಬಿರುವ ಹಾಗೂ ಖಾಲಿ ಜಾಗಗಳ ಪ್ರಮಾಣಗಳು ಬಾವಿಯ ಒಳಭಾಗಕ್ಕೆ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಕೊಡಮಾಡಿ ಒಂದು ಸಮತಟ್ಟಾದ ಜಾಗದಿಂದ ಹಠಾತ್ತನೆ ಇಳಿಯುವ ಗ್ರಹಿಕೆಯುಂಟಾಗುಂತೆ ಮಾಡುತ್ತದೆ. ಗುಜರಾತಿನ 120 ಮೆಟ್ಟಿಲು ಬಾವಿಗಳಲ್ಲಿ ಅತ್ಯಂತ ಹಳೆಯ ಹಾಗೂ ಆಳವಿರುವ ಬಾವಿ ಈ "ರಾಣಿ ಕೀ ವಾವ್". ಬಾವಿಯ ಕೊನೆಯ ಮಹಡಿ ಕಲ್ಲು ಮಣ್ಣುಗಳಿಂದ ಮುಚ್ಚಿ ಹೋಗಿದ್ದು, 30 ಕಿಮೀ ಉದ್ದದ ಸುರಂಗಮಾರ್ಗ ಇದನ್ನು ಹತ್ತಿರದ ಸಿಧ್ಪುರ್ ನಗರದೊಂದಿಗೆ ಸಂಪರ್ಕಿಸುತ್ತದೆ. ಸರಸ್ವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಈ ಬಾವಿಯು ಹೂಳಿನಿಂದ ಮುಚ್ಚಿಹೋಗಿತ್ತು. ಅಂತಹ ಪ್ರವಾಹ ಸಂಭವಿಸಿದ್ದಾಗ್ಯೂ ಇಲ್ಲಿನ ಕಲಾಕೃತಿಗಳಿಗೆ ಕಿಂಚಿತ್ತೂ ಹಾನಿ ಸಂಭವಿಸದ್ದನ್ನು ನೋಡಿ ಪುರಾತತ್ತ್ವ ಇಲಾಖೆ ಇಲ್ಲಿ ವ್ಯಾಪಕ ಉತ್ಖನನ ನಡೆಸಿತ್ತು. ಆಗ ಪತ್ತೆಯಾಯಿತು ಈ ಅದ್ಭುತ ವಿನ್ಯಾಸದ ಬಾವಿ. ಐವತ್ತು ವರ್ಷಗಳ ಹಿಂದೆ ಈ ಬಾವಿಯ ಸುತ್ತ ಅನೇಕ ಔಷಧೀಯ ಗಿಡಗಳಿದ್ದವು. ಆ ಕಾರಣದಿಂದ ಬಾವಿಯ ನೀರು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿತ್ತು. ಇಂತಹ ಹತ್ತು ಹಲವು ವಿಶೇಷತೆಗಳಿಂದಾಗಿ ಈ ಬಾವಿ 2014ರಲ್ಲಿ ಜಾಗತಿಕ ಪರ೦ಪರೆಯ ತಾಣವಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿತ್ತು. ಹದಿಮೂರನೇ ಶತಮಾನದಲ್ಲಿ ಭೂಫಲಕಗಳ ಬದಲಾವಣೆಯಿಂದ ಈ ಭಾಗದಲ್ಲಿ ಹರಿಯುತ್ತಿದ್ದ ಸರಸ್ವತಿ ನದೀ ಪಾತ್ರದಲ್ಲಿ ವ್ಯತ್ಯಯವಾದರೂ ರಾಣಿ ಕೀ ವಾವ್'ನಲ್ಲೇನೂ ಬದಲಾವಣೆಯಾಗಲಿಲ್ಲ. ಹಿಂದಿನಂತೆ ಕಾರ್ಯ ನಿರ್ವಹಿಸಲು ಆ ಬಳಿಕ ಸರಸ್ವತಿಯಲ್ಲುಂಟಾದ ಪ್ರವಾಹವೇ ಕಾರಣವಾಯಿತಾದರೂ ಈ ಪ್ರವಾಹದಿಂದ ಬಾವಿಯಲ್ಲಿನ ಕಲಾಕೃತಿಗಳಿಗಾಗಲೀ ಬಾವಿಯ ಮೂಲ ವಿನ್ಯಾಸಕ್ಕಾಗಲೀ ಯಾವುದೇ ಹಾನಿಯಾಗಲಿಲ್ಲ. ಪ್ರಾಕೃತಿಕ ವಿಕೋಪಗಳಾವುವು ಈ ಬಾವಿಗೆ ತೊಡಕಾಗಲಿಕ್ಕಿಲ್ಲ. ಆದರೆ ಅತಿಯಾದ ನಗರೀಕರಣದಂತಹ ಮನುಷ್ಯಕೃತ ಪ್ರಮಾದಗಳಿಂದ ಈ ಬಾವಿ ಇತಿಹಾಸವಾದರೆ ಅಚ್ಚರಿಯಿಲ್ಲ. ಈಗ ಈ ರಾಣಿ ಕೀ ವಾವ್ ರಿಸರ್ವ್ ಬ್ಯಾಂಕ್ ಮುದ್ರಿಸುತ್ತಿರುವ ಹೊಸ, ನೀಲಿ ಬಣ್ಣದ ನೂರರ ನೋಟಿನಲ್ಲಿ ಕಾಣಿಸಿಕೊಳ್ಳಲಿದೆ. ಹಾಂ, ಸರಸ್ವತಿಯ ಬಿಂದುಗಳು ಭಾರತೀಯರ ಮನೆಮನಗಳಲ್ಲಿ ಮತ್ತೊಮ್ಮೆ ಪ್ರವಹಿಸಲಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ