ಪುಟಗಳು

ಶನಿವಾರ, ಸೆಪ್ಟೆಂಬರ್ 15, 2018

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ


             ಜಾನಪದ ಕವಿಗಳಿಂದ ಜ್ಞಾತ ಕವಿಗಳವರೆಗೂ, ಬೀಸುಕಲ್ಲಿನೆದುರು ಕೂತ ಗೃಹಿಣಿಯಿಂದ ಕೀಬೋರ್ಡ್ ಕುಟ್ಟುವ ತರುಣಿಯವರೆಗೂ, ಶಾಲಾಬಾಲನಿಂದ ಜ್ಞಾನವೃದ್ಧರವರೆಗೆ ಜಾತಿ-ಮತ-ವರ್ಗ-ಲಿಂಗ, ಬಡವ-ಬಲ್ಲಿದ ತಾರತಮ್ಯಗಳಿಲ್ಲದೆ ಅಬಾಲವೃದ್ಧರಾದಿಯಾಗಿ ಪೂಜಿಸಲ್ಪಡುವ ದೇವತೆ ಗಣೇಶ. ಸಮಯ-ಅಸಮಯಗಳೆನ್ನುವ ನಿಯಮಗಳಿಲ್ಲದೆ ಸರ್ವತ್ರ ಪೂಜಿಸಲ್ಪಡುವ ದೇವರಾತ. ನಿರಾಕಾರವಾಗಿಯೂ ಆಕಾರವಾಗಿಯೂ; ಸಣ್ಣ ಅಡಿಕೆಯಲ್ಲಿಯೂ ಧಾನ್ಯದ ರಾಶಿಯಲ್ಲಿಯೂ; ಮಂಡಲದಲ್ಲಿಯೂ ಚಿತ್ರ ಪಟದಲ್ಲೂ; ಯಜ್ಞಕುಂಡವ ಬೆಳಗುವ ಅಗ್ನಿಯಾಗಿಯೂ ಮಣ್ಣಿನ ವಿಗ್ರಹವಾಗಿಯೂ ಅವನನ್ನು ಕಂಡು ಪಾವನವಾಗುತ್ತದೆ ಜನತೆ. ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಸಂಕಷ್ಟಹರ ಗಣೇಶ. ದುರ್ಜನರಿಗೆ ಅಡಿಗಡಿಗೆ ವಿಘ್ನ ಒಡ್ಡುವ ವಿಘ್ನರಾಜ. ಹೀಗಾಗಿಯೇ  ಯಾವುದೇ ಮಂಗಳಕಾರ್ಯದ ಮುನ್ನ ಅವನಿಗೆ ಪೂಜೆ; ಅಗ್ರಪೂಜೆ! ಪಿಳ್ಳಾರತಿಯಿಂದ ಪರಮಾಣುತನಕ ಅವನದ್ದು ಅಗಣಿತ, ಅಸಂಖ್ಯಾತ ಅವತಾರಗಳು. ಅವನು ಶೇಷಶಾಯಿಯೂ ಹೌದು, ವೃಷಭವಾಹನನೂ ಹೌದು; ಕಮಲಾಸನನೂ ಹೌದು.ಈ ಎಲ್ಲಾ ಅವತಾರಗಳನ್ನು ಕೊಟ್ಟವರೂ ನಾವೇ. ಕಾರಣ ಅವ ನಮ್ಮ ಹೃನ್ಮನದ ದೈವ. ನಮ್ಮೆಲ್ಲರೊಡನಾಡುವ ದೈವ. ಮಣ್ಣಿನ ಮಗ! ಯಕ್ಷವೇಶಧಾರಿಯಾಗಿ, ಸಂಘದ ಸ್ವಯಂಸೇವಕನಾಗಿ, ಕ್ರಿಕೆಟ್ ಬ್ಯಾಟು ಹಿಡಿದ ದಾಂಡಿಗನಾಗಿ, ಸುಖ ಶಯನದಲ್ಲಿ, ನೃತ್ಯಗಾರನಾಗಿ, ಗಿಟಾರ್, ಕೊಳಲು ಹಿಡಿದುಕೊಂಡು, ಟೋಪಿ ಧರಿಸಿ, ಮೊಂಡು ಹಟ ಮಾಡುವ ಬಾಲನಾಗಿ, ಕನ್ನಡಕ ಧಾರಿಯಾಗಿ, ಬಾಲ-ತರುಣ-ತರುಣಿ-ಪ್ರೌಢನಾಗಿ, ಕವಿ, ಕಲಾಕಾರನಾಗಿ ಎಷ್ಟೆಲ್ಲಾ ಬಗೆಯಲ್ಲಿ ಅವನನ್ನು ನಾವು ಚಿತ್ರಿಸಿದ್ದೇವೆ!

                ಅಕ್ಕಿ ಹರಡಿದ ಹರಿವಾಣದಲ್ಲಿ ಮುದ್ದು ಗಣಪನನ್ನು ತರುವಾಗಲೇ ಅದು ಉತ್ಸವ ರೂಪ ತಳೆದಿರುತ್ತದೆ. ಒಂದು ಕುಟುಂಬವನ್ನು, ಒಂದಿಡೀ ಸಮಾಜವನ್ನು ಒಗ್ಗೂಡಿಸುತ್ತಾನೆ ಗಣೇಶ. ಪೂಜೆಯ ಜೊತೆಗೆ ಲಂಬೋದರನಿಗೆ ಪ್ರಿಯವಾದ ಕಬ್ಬು, ಕಡಲೆ, ಕಡುಬು, ಚಕ್ಕುಲಿ, ಉಂಡೆಗಳ ನೈವೇದ್ಯ! ಅನಂತ ಚತುರ್ದಶಿಯ ಶುಭಪರ್ವದಂದು ಈ ಉತ್ಸವದ ಉತ್ಸಾಹ ಮೇರೆ ಮುಟ್ಟುತ್ತದೆ. ನದಿಯಲ್ಲೋ, ಕೆರೆಯಲ್ಲೋ, ಬಾವಿಯಲ್ಲೋ ವಿಸರ್ಜಿಸುವ ವೇಳೆಗೆ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಭಾವ! ಅರೇ, ತಾವೇ ಶೃದ್ಧಾ ಭಕ್ತಿಗಳಿಂದ ತಂದು ಮನೆಯ ಮಗುವಂತೆ ಪೂಜಿಸಿದ ದೇವರ ಚಂದ ಪುತ್ಥಳಿಯನ್ನು ವಿಗ್ರಹಾರಾಧಕ ಹಿಂದೂಗಳೇ ನೀರಿಗೆ ಹಾಕುವುದೆಂದರೆ!ಅಲ್ಲಿದೆ ಗುಟ್ಟು! ಮಣ್ಣಿನ ಮೂಲಕ ಮೂರ್ತಿಯನ್ನು ರೂಪಿಸಿ ಪೂಜಿಸುವಾಗ ಪ್ರಕೃತಿಯಲ್ಲಿ ಅಡಗಿರುವ ಸುಪ್ತ ಚೇತನವನ್ನು ತನ್ನಲ್ಲಿ ಆವಾಹಿಸಿಕೊಳ್ಳುತ್ತಾನೆ ಹಿಂದೂ. ಮೂಲಾಧಾರವೇ ಗಣೇಶನ ಸ್ಥಾನ. ಗಣೇಶನ ಪೂಜೆಯಲ್ಲಿನ ಒಂದೊಂದು ಮಂತ್ರವೂ ಒಂದೊಂದು ತಂತ್ರ. ಕುಂಡಲಿನಿ ಮೇಲೇರುವುದು ಈ ಮೂಲಾಧಾರದಿಂದಲೇ. ಅದಕ್ಕಾಗಿಯೇ ಈ ಮೂಲಾಧಾರಸ್ಥಿತನಿಗೆ ಅಗ್ರ ಪೂಜೆ. ದೇವಾಲಯಗಳಲ್ಲಿ ಭಕ್ತರಿಗೆ ಮೊದಲು ದರ್ಶನವೀವ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ತಂತ್ರಶಾಸ್ತ್ರದ ಮುಂದುವರಿದ ಭಾಗವೇ. ಸುಪ್ತಾವಸ್ಥೆಯಲ್ಲಿರುವ ಶಿವನನ್ನು ಎಚ್ಚರಿಸಿ ಬ್ರಹ್ಮಾಂಡದ ಸೃಷ್ಟಿಗೆ ಕಾರಣಕರ್ತಳಾಗುವ ಕುಂಡಲಿನಿ ಶಕ್ತಿಯನ್ನು ಸಂಕೇತಿಸುವ ಪಾರ್ವತಿ ತನ್ನ ಶಕ್ತಿಸ್ರೋತದ ದ್ವಾರದಲ್ಲಿ ವೇದಮಂತ್ರಗಳ ಅಧಿಪತಿಯಾಗಿರುವ ಗಣಪತಿಯನ್ನು ಸೃಷ್ಟಿಸಿ ನೆಲೆಗೊಳಿಸಿದಳು. ತನ್ನ ಮೈಯ ಅಂಗರಾಗದ ಆಕೃತಿಗೆ ಜೀವಕೊಟ್ಟು ಅದು ಅನುರಾಗದ ಸುತನಾದುದರ ಅರ್ಥ ಇದು. "ಚಿಕ್ಕೆರೆಲಿ ಬಿದ್ದು ದೊಡ್ಕೆರೇಲಿ ಏಳುವುದೆಂದರೆ" ಮತ್ತೊಂದು ಕೆರೆಯ ಮಣ್ಣಿನಲಿ ಮತ್ತೆ ರೂಪುಗೊಳ್ಳುತ್ತಾನೆ. ಕಾಲ ಸರಿದಂತೆ ಕಾಯ ಎನ್ನುವುದು ಬಿದ್ದು ಹೋಗುತ್ತದೆ; ಮಣ್ಣಾಗಿ ಹೋಗುತ್ತದೆ; ಆದರೆ ಆತ್ಮ ಮಾತ್ರ ಕಾಲಾತೀತ; ಕರ್ಮಫಲಕ್ಕೆ ಅನುಸಾರವಾಗಿ ಪುನರಪಿ ಜನನಂ ಪುನರಪಿ ಮರಣಂ. ಕಲ್ಲು ಮಣ್ಣುಗಳ ವಿಗ್ರಹಗಳನ್ನು ಹಿಂದೂಗಳು ಪೂಜಿಸುವುದರ ಹಿಂದಿನ ಅರ್ಥವನ್ನು, ಸೃಷ್ಟಿಯಲ್ಲಿನ ಜೀವನ ಪ್ರಕ್ರಿಯೆಯನ್ನು ಅದ್ಭುತವಾಗಿ ಕಟ್ಟಿಕೊಡುವ ಮಹಾಕಾವ್ಯ ಈ ಗಣಪನ ಹಬ್ಬ!

                 ವಿಘ್ನಕರ್ತನಾಗಿದ್ದ ಗಣಪತಿ ವಿಘ್ನಹರ್ತನಾಗಿ ಅಗ್ರಪೂಜೆಗೆ ಸಿದ್ಧನಾದದ್ದು ಕ್ರಿ.ಶ ಏಳನೆಯ ಶತಮಾನದಲ್ಲಿ. ಕಾವ್ಯಾರಂಭದಲ್ಲಿ ಗಣಪತಿಯ ಸ್ತುತಿಯನ್ನು ಮೊದಲು ಮಾಡಿದ್ದು ಭವಭೂತಿ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಮಾಲತೀ-ಮಾಧವ ಮತ್ತು ಉತ್ತರರಾಮಚರಿತದಲ್ಲಿ. ಕ್ರಿ.ಶ. 7-8ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನೆಲೆಯೂರಿದ್ದ ಶೈವ ಪಂಥಾನುಯಾಯಿಗಳಾದ ಲಕುಲೀಶ, ಕಾಳಾಮುಖ, ಪಾಶುಪತರು ಅನೇಕ ಶಿವಾಲಯಗಳನ್ನು ನಿರ್ವಿುಸಿ, ಗಣೇಶನನ್ನು ಪ್ರತಿಷ್ಠಾಪಿಸಿದರು. ಜ್ಞಾನೇಶ್ವರಾದಿಯಾಗಿ ಸಂತರಿಂದ ಸ್ತುತಿಸಲ್ಪಟ್ಟ ಗಣಪತಿ ಹವನಗಳಲ್ಲೂ ಪ್ರಾಮುಖ್ಯತೆ ಪಡೆದು ವೇದಗಳ ಬ್ರಹ್ಮಣಸ್ಪತಿಯ ಸ್ಥಾನವನ್ನು ತನ್ನದಾಗಿಸಿಕೊಂಡ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದ. ಅಂದಿನಿಂದ ಆ ಊರು "ಮೋರೆಗಾಮ್' ಆಯಿತು. ಗಣೇಶ ವಿಸರ್ಜನೆಯ ಹಿಂದಿನ ಪ್ರಸಿದ್ಧ ಘೋಷಣೆ ("ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್ ಯಾ |")ಯ ಮೂಲ ಇದು. ಪೇಶ್ವೆಗಳ ಮನೆದೇವತೆಯಾಗಿ, ಬಾದಾಮಿಯ ಚಾಲುಕ್ಯರಿಗೆ ವಾತಾಪಿ ಗಣಪತಿಯಾಗಿ ವಿಜಯನಗರಕ್ಕೂ ಬಂದು ಪ್ರತಿಷ್ಠಾಪನೆಗೊಂಡ ಗಣಪತಿ. ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ವೇದಕಾಲದ ಬ್ರಹ್ಮಣಸ್ಪತಿಯಾಗಿ, ವಿದ್ಯಾಧಿಪತಿಯೂ ವಿಘ್ನನಿವಾರಕನೂ ಆಗಿ ಜಾತಿಭೇದ ಪಂಥಭೇದವಿಲ್ಲದೆ ಪೂಜೆಗೊಳ್ಳುವ ದೇವಾಧಿದೇವ. ಭಾರತದಲ್ಲಷ್ಟೇ ಅಲ್ಲದೆ, ಭಾರತದ ಸುತ್ತಮುತ್ತಲ ದೇಶಗಳಲ್ಲಿ ಆರಾಧಿಸಲ್ಪಡುವ ಗಣಪನ ದೇಗುಲಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಲಂಕಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತವೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿರುವ ದೇವಾಲಯಗಳಲ್ಲಿಯೂ ಗಣೇಶನಿಗೆ ಅಗ್ರಸ್ಥಾನ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು ಎಂಬ ಮಾತೊಂದು ತಮಿಳುನಾಡಿನಲ್ಲಿದೆ. ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿರುವುದು ವಿಶೇಷ!

                  ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪಾರ್ವತಿ ಸೌಭಾಗ್ಯ ದೇವತೆ. ತವರಿನ ಹಂಬಲದಿಂದ ಪ್ರತಿವರುಷವೂ ಮನೆಗೆ ಬರುವ ಮಗಳು ಅವಳು. ಗಣಪತಿ ತಾಯಿಯೊಡನೆ ಬರುವ ಮುದ್ದು ಕುವರ ಎನ್ನುವ ಅರ್ಥದಲ್ಲಿ ಮಣ್ಣಿನ ಅಥವಾ ಲೋಹದ ಮೂರ್ತಿ, ಅರಿಶಿನದಿಂದ ಮಾಡಿದ ಗೌರಿ, ಸಗಣಿಯಿಂದ ಮಾಡಿದ ಅವಳ ಮಗ ಗಣಪನನ್ನು ಪೂಜಿಸುವ ಪದ್ದತಿ ಇಲ್ಲಿ ಬೆಳೆದು ಬಂದಿದೆ. ಹೀಗೆ ನಮ್ಮ ಪರಂಪರೆಯಲ್ಲಿ ಗಣೇಶನು ಎಲ್ಲೋ ಇರುವ ದೇವನಾಗಲ್ಲದೆ, ವರುಷ ವರುಷವೂ ಮನೆ-ಮನೆಗೆ ಬರುತ್ತಿರುವ ಆತ್ಮೀಯ ಅತಿಥಿಯಾಗಿ ಸರ್ವಜನಪ್ರಿಯನಾಗಿದ್ದಾನೆ. ಗಣೇಶನನ್ನು ರಾಷ್ಟ್ರೀಯ ಐಕ್ಯತೆಯ ಕೊಂಡಿಯಾಗಿ ಕಂಡ ಶಂಕರರು ಗಣೇಶ ಪಂಚರತ್ನವನ್ನು ರಚಿಸಿದರಲ್ಲದೆ ಪಂಚಾಯತನದಲ್ಲಿ ಸ್ಥಾನವನ್ನು ನೀಡಿದರು. ಎಲ್ಲರನ್ನೂ ಸಂಮೋಹನಗೊಳಿಸಿದ ಅವನ ವ್ಯಕ್ತಿತ್ವವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ತಿಲಕರು ಅವನನ್ನು ಭಾರತೀಯರನ್ನು ಒಟ್ಟುಗೂಡಿಸುವ ರಾಷ್ಟ್ರೀಯ ಐಕ್ಯತೆಯ ವಿಗ್ರಹವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿಬಿಟ್ಟರು. ಆ ಪ್ರವಾಹ ಇಂದಿಗೂ ಅವಿಚ್ಛಿನ್ನವಾಗಿ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ