ಪುಟಗಳು

ಮಂಗಳವಾರ, ಅಕ್ಟೋಬರ್ 20, 2015

ಮುರುಗನ_ಹುಳಿ

#ನಾಸ್ತಿಮೂಲಮನೌಷಧಮ್
#ಮುರುಗನ_ಹುಳಿ

ಬಾಯಲ್ಲಿ ನೀರೂರಿಸುವ ಸುಂದರ ಕೆಂಪನೆ ಹಣ್ಣುಗಳು, ಯಾವುದೇ ರೋಗವಿಲ್ಲದೆ, ಪೋಷಣೆಯ ಅಗತ್ಯವಿಲ್ಲದೆ ಪಶ್ಚಿಮ ಘಟ್ಟಗಳ ತಳದಲ್ಲಿ ಬೆಳೆವ ಮರ. ಅದೇ ಮಾರಾಯರ್ರೇ... ಪುನರ್ ಪುಳಿ! ಬಹುಷಃ ಪುನರ್ ಪುಳಿ ಗೊತ್ತಿಲ್ಲದ ಕರಾವಳಿಗ-ಮಲೆನಾಡಿಗನಿರಲಿಕ್ಕಿಲ್ಲ. ಸಿಪ್ಪೆಯನ್ನು ಹಿಂಡಿ ಮಾಡುವ ಶರಬತ್ತು ಸೂಪರ್! ಸಿಪ್ಪೆಯನ್ನು ಒಣಗಿಸಿ ಬಹುಕಾಲದವರೆಗೆ ಶರಬತ್ತು ಅಥವಾ ಸಾರು ಮಾಡಲು ಉಪಯೋಗಿಸಬಹುದು. ಇದರೊಳಗಿನ ಲೋಳೆ, ಸಿಪ್ಪೆ ಮನುಷ್ಯನ ಬೊಜ್ಜನ್ನು ಕರಗಿಸುತ್ತವೆ. ಬೀಜವನ್ನೊಣಗಿಸಿ ಬಿಸಿ ಮಾಡಿ ಎಣ್ಣೆಯನ್ನು ತಯಾರಿಸಬಹುದು. ಬೆಂಕಿ ತಾಗಿದ ಗಾಯಕ್ಕೆ ಈ ಎಣ್ಣೆ ಹಚ್ಚಿದರೆ ಕಲೆಯೂ ಉಳಿಯದಂತೆ ವಾಸಿ ಮಾಡುತ್ತದೆ.

ಇದರ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿಯ ವಸ್ತುಗಳನ್ನು ತೊಳೆದರೆ ಅವು ಮಿರಿ ಮಿರಿ ಮಿಂಚುತ್ತವೆ. ಕರಾವಳಿಯಲ್ಲಿ ಬಿರಿಂಡ ಎಂದು ಸಿಗುತ್ತಿದ್ದ ಶರಬತ್ತು ಇದರದ್ದೇ! ತುಳುವಿನಲ್ಲಿ ಪುನರ್ ಪುಳಿ, ಮಲೆಯಾಳದಲ್ಲಿ ಪಣಂಪುಳಿ, ಹಿಂದಿಯಲ್ಲಿ ಕೋಕಮ್, ಸಂಸ್ಕೃತದಲ್ಲಿ ವೃಕ್ಷಾಮ್ಲ, ಕನ್ನಡದಲ್ಲಿ ಮುರುಗಲ, ಮುರುಗನ ಹುಳಿ ಎನ್ನುವ ಹೆಸರುಗಳು ಇದಕ್ಕೆ! ಒಂದು ಲೊಟ ಬಿಸಿ ನೀರಿಗೆ ಕಡಲೆ ಕಾಳಿನಷ್ಟು ಎಣ್ಣೆ ಹಾಕಿ ಕುಡಿದರೆ ಆಮಶಂಕೆಗೆ ಔಷಧಿ. ಮರದ ತೊಗಟೆಯ ತಣ್ಣನೆ ಕಷಾಯದಿಂದ ಪಾರ್ಶ್ವವಾಯು ಆದ ಜಾಗಕ್ಕೆ ಹಚ್ಚಿದರೆ ಶಮನವಾಗುತ್ತದೆ.

ಹಣ್ಣಿಗೆ ಜಂತುಹುಳು ನಿವಾರಕ ಮತ್ತು ಹೃದಯೋತ್ತೇಜಕ ಗುಣಗಳಿವೆ. ಪುನರ್ ಪುಳಿ ಪಿತ್ತನಿವಾರಕ. ಇದನ್ನು ಮೂಲವ್ಯಾಧಿ, ರಕ್ತಭೇದಿ, ಹೃದ್ರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಇದರ  ಬೇರುಗಳಿಗೆ ಸ್ಥಂಭಕ ಗುಣವಿದೆ. ಬೀಜಗಳಲ್ಲಿ ಶೇ. 44ರಷ್ಟು ಜಿಡ್ಡಿನಂಶವಿರುತ್ತದೆ. ಇದನ್ನು ಮುರುಗಲ ಬೆಣ್ಣೆ ಎಂದು ಕರೆಯುತ್ತಾರೆ.

ಕೋಲಾ ಬಿಡಿ, ಕೋಕಂ ಕುಡಿಯಿರಿ...ದೇಹಕ್ಕೂ ಒಳ್ಳೆಯದು...ದೇಶಕ್ಕೂ!


ಸೋಮವಾರ, ಅಕ್ಟೋಬರ್ 19, 2015

ಅಳಲೆಕಾಯಿ

#ನಾಸ್ತಿಮೂಲಮನೌಷಧಮ್
#ಅಳಲೆಕಾಯಿ

            ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯ. ಸಂಸ್ಕೃತದಲ್ಲಿ ಹರೀತಕಿ, ಅಭಯಾ; ಕನ್ನಡದಲ್ಲಿ ಅಳಲೆಕಾಯಿ, ತುಳುವಿನಲ್ಲಿ ಅಣಿಲೆ, ಹಿಂದಿಯಲ್ಲಿ ಹರ್ಡಾ ಎಂದು ಕರೆಯಲ್ಪಡುವ ಈ ಕಾಯಿ ಆಯುರ್ವೇದದ ತ್ರಿಫಲಗಳಲ್ಲಿ ಒಂದು. ತ್ರಿಫಲಾದಿ ಚೂರ್ಣ, ತೈಲ, ಅಭಯಾರಿಷ್ಟದಲ್ಲಿ ಮುಖ್ಯವಸ್ತು. ಹೊಟ್ಟೆಯನ್ನು ಶುದ್ಧಗೊಳಿಸುವ ವಿರೇಚಕವೆಂಬ ಇದರ ವಿಶೇಷ ಗುಣವೇ ಅನೇಕ ಬಗೆಯ ಔಷಧಿಗಳಲ್ಲಿ ಮುಖ್ಯಸ್ಥಾನವನ್ನು ತಂದುಕೊಟ್ಟಿದೆ.  ಪಿತ್ತಪ್ರಕೋಪಕ್ಕೆ, ಹಸಿವು, ನಿದ್ದೆ ಸರಿಪಡಿಸಲು ಅಳಲೆಯ ಚೂರ್ಣವೇ ರಾಮಬಾಣ. ಅಳಲೆಕಾಯಿಯನ್ನಿ ಅರಸಿನದೊಂದಿಗೆ ಅರೆದು ಲೇಪವನ್ನು ಕಬ್ಬಿಣದ ವಸ್ತುವಿನಲ್ಲಿ ಬಿಸಿ ಮಾಡಿ, ಉಗುರು ಬೆಚ್ಚಗಿನ ಲೇಪವನ್ನು ದೊಡ್ಡ ಗಾಯಗಳಿಗೆ ಹಚ್ಚಿದರೆ ಗಾಯ, ನೋವು ಉಪಶಮನ. ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ.

ಧನ್ವಂತರಿ ನಿಘಂಟುವಿನಲ್ಲಿ
"ಹರಸ್ಯ ಭವನೇ ಜಾತಾ ಹರೀತಾ ಚ ಸ್ವಭಾವತಃ
ಸರ್ವ ರೋಗಾಂಶ್ಚ ಹರತೇತೇನ ಖ್ಯಾತ ಹರೀತಕೀ"
ದೇವಲೋಕದಲ್ಲಿ ಹುಟ್ಟಿದ, ಹಸಿರು ಬಣ್ಣವುಳ್ಳ ಅಳಲೆಕಾಯಿಯು ಎಲ್ಲ ರೋಗಗಳನ್ನೂ ಹರಣ ಮಾಡುವ ಹರೀತಕೀ! ಎಂದಿದೆ.
"ಮಾತಾ ಯಸ್ಯ ಸ್ವಯಂ ನಾಸ್ತಿ
 ತಸ್ಯ ಮಾತಾ ಹರೀತಕೀ"
 ಯಾವ ಮಗುವಿಗೆ ಶೈಶವಾವಸ್ಥೆಯಲ್ಲಿಯೇ ತಾಯಿಯನ್ನು ಕಳೆದುಕೊಳ್ಳವ ದುರ್ಭಾಗ್ಯವುಂಟಾಗುವುದೋ ಅದಕ್ಕೆ ಅಳಲೇಕಾಯಿಯೇ ತಾಯಿಯಾಗಬಲ್ಲುದು.

             ಅಳಲೆಕಾಯಿ ವಾತಾನುಲೋಮನೀ. ಆಮ್ಲರಸದಿಂದ ವಾತವನ್ನೂ, ಮಧುರ, ಕಹಿ ರಸಗಳಿಂದ ಪಿತ್ತವನ್ನೂ, ಕಾರ-ಒಗರು ರಸಗಳಿಂದ ಕಫವನ್ನೂ ಅಳಲೆಕಾಯಿಯು ಪರಿಹರಿಸಬಲ್ಲದಾದುದರಿಂದ ಅದನ್ನು ತ್ರಿದೋಷಘ್ನೀ ಎನ್ನಲಾಗಿದೆ. ಅದು ಶರೀರದಲ್ಲಿನ ವಿಷಾಂಶವನ್ನು ತೆಗೆಯುವುದು, ಮೈಯನ್ನು ಹಗುರಗೊಳಿಸುವುದು. ಬುದ್ಧಿಯನ್ನು ವರ್ಧಿಸುವುದು. ಕಣ್ಣಿನ ಕಾಯಿಲೆಗಳಿಗೆ ನಿವಾರಿಸುವುದು. ಮೂತ್ರಾಂಗ ರೋಗ, ಕುಷ್ಠ, ವಾಂತಿಗಳಿಗೆ ರಾಮಬಾಣ.

ಇಷ್ಟೆಲ್ಲಾ ಓದಿ ನೀವು ನನ್ನನ್ನು "ಅಳಲೆ ಕಾಯಿ ಪಂಡಿತ" ಅಂದರೆ........
ಬೇಜಾರಿಲ್ಲ. ಈ "ಅಳಲೆಕಾಯಿ ಪಂಡಿತ" ಪದವನ್ನು ಹುಟ್ಟು ಹಾಕಿದವರು ಆಯುರ್ವೇದ ವಿರೋಧೀ ಅಲೋಪತಿ ವೈದ್ಯರು!
ಹಾಂ ದಕ್ಷಿಣ ಕನ್ನಡದ ವಿಟ್ಲದ ಬಳಿ "ಅಣಿಲ ಕಟ್ಟೆ" ಎಂಬ ಊರೇ ಇದೆ. ಅದು ಈಗ ಅನಿಲ ಕಟ್ಟೆ ಎಂದು ಬದಲಾಗಿದೆ.


ಮಂಗಳವಾರ, ಅಕ್ಟೋಬರ್ 13, 2015

ಈಶ್ವರೀ_ಬಳ್ಳಿ

#ನಾಸ್ತಿಮೂಲಮನೌಷಧಮ್
#ಈಶ್ವರೀ_ಬಳ್ಳಿ

ಸಂಸ್ಕೃತದಲ್ಲಿ ನಕುಲಿ, ರುದ್ರಜಿಟಾ; ಕನ್ನಡದಲ್ಲಿ ಈಶ್ವರೀ ಬಳ್ಳಿ;ತುಳುವಿನಲ್ಲಿ "ಈಸರಾ ಬೇರ್" ಎನ್ನುವ ಹೆಸರುಗಳು. ಮೂರು ವಿಧದ ಈಶ್ವರ ಬಳ್ಳಿಗಳಿವೆ. ಚಿತ್ರದಲ್ಲಿರುವಂತಹದ್ದು ದೊಡ್ಡ ಎಲೆಗಳ ಬಳ್ಳಿ. ಹೂಗಳು ಅರಳುವಾಗ ಮಧ್ಯದ ಹಳದಿ ವರ್ಣವನ್ನು ನೇರಳೆ ವರ್ಣ ಸುತ್ತುವರಿದು ಹಾವು ಹೆಡೆಬಿಚ್ಚಿದಂತೆ ಕಾಣುತ್ತದೆ. ಕಾಯಿಗಳು ಒಡೆದು ಬಳ್ಳಿಯಲ್ಲಿ ತೊಟ್ಟಿಲಂತೆ ತೂಗುತ್ತವೆ.

ಇದರ ಉಪಯೋಗಗಳು ಹಲವಾರು. ಇದನ್ನು ಜ್ವರ, ಕೆಮ್ಮು, ಮಲಬದ್ಧತೆ, ಮೂಲವ್ಯಾಧಿ, ವಿಷಮ ಜ್ವರ, ಸನ್ನಿಜ್ವರ, ದೃಷ್ಟಿ ದೋಷ ಶಮನಕ್ಕಾಗಿ ಬಳಸುತ್ತಾರೆ. ಹಾವಿನ ವಿಷವಿಳಿಸಲು  ಬಳಸುತ್ತಾರೆ. ಸರ್ಪ ಕಚ್ಚಿದಲ್ಲಿ, ಹಸೀ ಎಲೆಗಳನ್ನು ಚೆನ್ನಾಗಿ ಜಜ್ಜಿ ಕಷಾಯಮಾಡಿ ಕುಡಿಸಿದರೆ ವಿಷ ಇಳಿಯುವುದು. ವಿಷಜಂತು ಕಡಿತಕ್ಕೆ ಶಮನಕಾರಿಯಾಗಿ ಇದರ ಬೇರು ಕೂಡಾ ಉಪಯುಕ್ತ. ಇಡೀ ಸಸ್ಯ ಹಾವು ಕಡಿತದಲ್ಲಿ ವಿಷವಿಳಿಸಲು, ಮೂಳೆ ಜೋಡಣೆಯಲ್ಲಿ, ಮಲೇರಿಯಾ ಶಮನಕಾರಿಯಾಗಿಯೂ ಉಪಯುಕ್ತ.

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೇರೆ ಮರಗಳನ್ನು ತಬ್ಬಿ ಬೆಳೆಯುವ ಈಶ್ವರ ಬಳ್ಳಿ ಈಗ ವಿನಾಶದ ಅಂಚಿನಲ್ಲಿದೆ. ಅತಿಯಾದ ಬಳಕೆ ಒಂದೆಡೆಯಾದರೆ ಮರಗಳ ನಾಶದಿಂದ ಬದುಕಲು ಆಶ್ರಯ ಸಿಗದೇ ಇರುವುದು ಇನ್ನೊಂದೆಡೆ. ಇದರ ಮಧ್ಯೆ ಕೇವಲ ರಾಜಕಾರಣಿಗಳು-ಕಾಂಟ್ರಾಕ್ಟ್ ದಾರರಿಗೆ ಮಾತ್ರ ಪ್ರಯೋಜನವಾಗುವ ಎತ್ತಿನಹೊಳೆಯಂತಹ ಯೋಜನೆಗಳು ಇಂತಹ ಉಪಯುಕ್ತ ಸಸ್ಯಗಳನ್ನು ಗತಕಾಲಕ್ಕೆ ಸೇರಿಸುತ್ತಿವೆ.

ಸೋಮವಾರ, ಅಕ್ಟೋಬರ್ 12, 2015

ಲೋಳೆಸರ

#ನಾಸ್ತಿಮೂಲಮನೌಷಧಮ್
#ಲೋಳೆಸರ

       ಬಹುಷಃ ಲೋಳೆಸರ ಎಂದರೆ ಹೆಚ್ಚಿನವರಿಗೆ ತಿಳಿಯಲಿಕ್ಕಿಲ್ಲ. ಅದೇ ಅಲೊವೆರಾ ಅಂದರೆ ಆಯುರ್ವೇದ ಔಷಧ ಬಳಕೆ ಮಾಡುವವರಿಗೆ ತಿಳಿದೀತು. ದಪ್ಪಗಿನ ಎಲೆಗಳು, ಅದರೊಳಗೆ ಕಹಿಯಾದ, ಸಿಂಬಳದಂತಹ ಲೋಳೆ!  ಈ ಲೋಳೆಯೇ ಲೋಳೆಸರ ಎಂದು ಹೆಸರು ಬರಲು ಕಾರಣ ಕೂಡಾ. ಹಾಗೆಯೇ ಹಲವು ರೋಗಗಳನ್ನು ಶಮನ ಮಾಡುವ ಗುಣವನ್ನು ಒದಗಿಸಿದ್ದು ಈ ಕಹಿ ಲೋಳೆಯೇ! ಸಂಸ್ಕೃತದಲ್ಲಿ ಘೃತಕುಮಾರಿ, ಕುಮಾರಿ, ಕನ್ಯಾ ಎನ್ನುವ ಹೆಸರುಗಳಿವೆ ಇದಕ್ಕೆ.

          ಬೆಂಕಿ ತಾಗಿ ಸುಟ್ಟ ಚರ್ಮಕ್ಕೆ ಲೋಳೆಸರದ ಲೋಳೆಯನ್ನು ಕೂಡಲೇ ಹಚ್ಚಿದಲ್ಲಿ ವಾಸಿ. ಹೊಟ್ಟೆಯೊಳಗಿನ ದುರ್ಮಾಂಸ, ಪಿತ್ತಕೋಶದ ತೊಂದರೆ, ಗರ್ಭಕೋಶದ ತೊಂದರೆಗಳ ನಿವಾರಣೆಗೆ ಲೋಳೆಸರ ಉಪಯುಕ್ತ. ಶಾಂಪೂವಿನಂತೆ ಈ ಲೋಳೆಯನ್ನು ಉಪಯೋಗಿಸಿದರೆ ತಲೆಯ ಹೊಟ್ಟು ನಿವಾರಣೆಯಾಗುತ್ತದೆ. ಹೆಂಗಸರ ಮುಟ್ಟುದೋಷದ ತೊಂದರೆ, ಅತಿ ರಕ್ತಸ್ರಾವ ಇದ್ದಲ್ಲಿ ಇದರ ಲೋಳೆಯನ್ನು ಕಲ್ಲುಸಕ್ಕರೆಯ ಹುಡಿಯೊಟ್ಟಿಗೆ ತೆಗೆದುಕೊಂಡಲ್ಲಿ ಶಮನವಾಗುತ್ತದೆ. ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ. ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ, ಒಣ ಚರ್ಮ, ಚರ್ಮ ಒಡೆಯುವಿಕೆಗೆ ಲೋಳೆಸರ ರಾಮಬಾಣ. ಜೀರ್ಣಕ್ರಿಯ ವೃದ್ಧಿ, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ದಂತಕ್ಷಯ ನಿವಾರಣೆಗೆ, ನೋವು ಮತ್ತು ಊತ ಹೋಗಲಾಡಿಸಲು ಲೋಳೆಸರ ಸಹಕಾರಿ.

            ಲೋಳೆಸರದ ರಸವನ್ನು ಮೂಲವ್ಯಾದಿ, ಕ್ಯಾನ್ಸರ್, ಕಣ್ಣು ನೋವುಗಳ ನಿವಾರಣೆಗೆ ಔಷಧಿಯಾಗಿ ಬಳಸುತ್ತಾರೆ. ಲೋಳೆರಸವನ್ನು ಅಲ್ಪ ಪ್ರಮಾಣದಲ್ಲಿ ನಿತ್ಯ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪತಂಜಲಿ ಸಂಸ್ಥೆಯಿಂದ ಅಲೊವೆರಾ ಜೆಲ್ ಹಾಗೂ ಇನ್ನಿತರ ಔಷಧಗಳು ಲಭ್ಯವಿವೆ. ಯಾವ್ಯಾವುದೋ ಕ್ರೀಮುಗಳನ್ನು ಹಚ್ಚಿ ಮುಖವನ್ನೇಕೆ ಹೊಲಸುಗೊಳಿಸುತ್ತೀರಿ? ಅಲೊವೆರಾ ಬಳಸಿ. ಆರೋಗ್ಯಕ್ಕೂ ಒಳ್ಳೆಯದು ಸೌಂದರ್ಯವರ್ಧಕವೂ ಹೌದು!

ಗುರುವಾರ, ಅಕ್ಟೋಬರ್ 8, 2015

1971...ಸಂಘವೇ ಸೈನ್ಯವು ಇನ್ನೊಂದು!

1971...ಸಂಘವೇ ಸೈನ್ಯವು ಇನ್ನೊಂದು!

               1971. ತಮಗಾಗಿ ಪ್ರತ್ಯೇಕ ದೇಶ ಬೇಕೆಂದು ರಕ್ತದೋಕುಳಿ ಹರಿಸಿ ಪ್ರತ್ಯೇಕವಾದವರೇ ಇಬ್ಬಾಗವಾದ ವರ್ಷ! ಉಭಯ ಗಡಿಗಳಲ್ಲೂ ಗುಂಡಿನ ಚಕಮಕಿ ಆರಂಭವಾಗಿತ್ತು. ಒಂದು ದಿನ ಬೆಳ್ಳಂಬೆಳಗ್ಗೆ ಪಾಕ್ ಸೈನಿಕರು ಪಶ್ಚಿಮ ಬಂಗಾಳದ ದಿನಜಪುರ ಜಿಲ್ಲೆಯ ಚಕ್ರಂ ಹಳ್ಳಿಯ ಹಳ್ಳದಾಚೆ ಹಠಾತ್ತನೆ ಕಾಣಿಸಿಕೊಂಡರು. ಹತ್ತಿರದಲ್ಲೇ ಎತ್ತರಕ್ಕೆ ಬೆಳೆದ ಸೆಣಬಿನ ಗದ್ದೆ.  ಬೆಳೆದು ನಿಂತ ಗಿಡಗಳ ಮರೆಯಲ್ಲಿ ಭಾರತೀಯ ಸೈನಿಕರೂ ಅಡಗಿ ಕೂತರು. ಆದರೆ ಈ ಗಡಿಬಿಡಿಯಲ್ಲಿ ಮದ್ದುಗುಂಡು ತುಂಬಿದ ಕೆಲವು ಪೆಟ್ಟಿಗೆಗಳು ಹಿಂದೆಯೇ ಉಳಿದು ಹೋದವು. ಅವು ಇದ್ದ ಜಾಗ ಪಾಕಿಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲದೆ ಆ ಜಾಗ ಅವರ ಗುಂಡಳತೆಯ ದೂರದಲ್ಲೇ ಇತ್ತು. ಪ್ರತ್ಯಕ್ಷ ಸಾವಿಗೆ ಆಮಂತ್ರಣ ನೀಡುವ ಅವುಗಳನ್ನು ತರುವ ಸಾಹಸವನ್ನು ನಮ್ಮ ಸೈನಿಕರು ಕೈಬಿಡಬೇಕಾಯಿತು. ಚುರ್ಕಾಮುರ್ಮು! ಸ್ಥಳೀಯ "ಶಾಖೆ"ಯ ಮುಖ್ಯ ಶಿಕ್ಷಕನಾಗಿದ್ದ. ಶಾಲಾ ವಿದ್ಯಾರ್ಥಿ. ಆತ ಆ ಪೆಟ್ಟಿಗೆಗಳನ್ನು ತರುವ ಸಾಹಸಕ್ಕೆ ಮುಂದಾದ. ಸುಮಾರು ನೂರು ಅಡಿಗಳಷ್ಟು ತೆವಳಿಕೊಂಡೇ ಹೋದ ಆತ ಹಗ್ಗದ ಕೊನೆಯಲ್ಲಿ ಕಟ್ಟಿದ ಕೊಕ್ಕೆಗಳಿಂದ ಕೆಲವು ಪೆಟ್ಟಿಗೆಗಳನ್ನು ಎಳೆದು ತಂದ. ತರಲಾಗದ್ದನ್ನು ಹಳ್ಳಕ್ಕೆ ತಳ್ಳಿದ. ಅಷ್ಟರಲ್ಲೇ ಆರಂಭವಾಯಿತು ಗುಂಡಿನ ಮೊರೆತ! ಚುರ್ಕಾಮುರ್ಮು ನೆಲಕ್ಕುರುಳಿದ. "ಭಾರತ್ ಮಾತಾ ಕೀ ಜೈ" ಎಂಬ ಘೋಷ ಅವನ ಬಾಯಿಯಿಂದ ಮೊಳಗಿತ್ತು! ನಮ್ಮ ಸೈನಿಕರು ಆ ಮದ್ದು ಗುಂಡು ತುಂಬಿದ ಪೆಟ್ಟಿಗೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿದರು. ಮುಂದೆ ಅವೇ ಮದ್ದುಗುಂಡುಗಳು ಅಂದಿನ ವಿಜಯಕ್ಕೆ ಕಾರಣವಾದವು!

             ಯುದ್ಧಾರಂಭಗೊಳ್ಳುತ್ತಿದ್ದಂತೆ ಸ್ವಯಂಸೇವಕರು ರಕ್ತದಾನ, ನಾಗರಿಕ ರಕ್ಷಣೆ, ಪಹರೆ, ಪ್ರಥಮ ಚಿಕಿತ್ಸೆ ಮುಂತಾದ ಪರಿಹಾರ ಕಾರ್ಯಗಳಿಗೆ ಮುಂದಾದರು. ದೆಹಲಿಯ ಕಿಂಗ್ಸ್ ವೇ ಕ್ಯಾಂಪ್ ಸ್ಟೇಷನ್ನಿನ ಪೊಲೀಸ್ ಅಧಿಕಾರಿಗಳು ರೇಡಿಯೋ ಕಾಲನಿಯಲ್ಲಿದ್ದ ಆಕಾಶವಾಣಿ ಮತ್ತಿತರ ಪ್ರಮುಖ ಸರ್ಕಾರೀ ಕಟ್ಟಡಗಳು, ವಜೀರಾಬಾದಿನ ನೀರು ಸರಬರಾಜು ಕೇಂದ್ರಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟದ್ದು ಸ್ವಯಂಸೇವಕರಿಗೇನೇ! ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರ ಶುಶ್ರೂಷೆಗೆ ನಿಂತದ್ದು ಸ್ವಯಂ ಸೇವಕರೇ. ಸೈನಿಕರಿಗೆ ಹಣ್ಣುಹಂಪಲು, ದಿನಬಳಕೆಯ ಸಾಮಗ್ರಿಗಳನ್ನು ಒಟ್ಟುಮಾಡಿ ಪೂರೈಸಿದ್ದೂ ಸ್ವಯಂಸೇವಕರೇ. 71ರ ಡಿಸೆಂಬರ್ 7ರಂದು ರಾಜಾಸ್ಥಾನದ ಬಾರ್ ಮೇರ್ ರೈಲು ನಿಲ್ದಾಣದ ಮೇಲೆ ಪಾಕಿಗಳು ಬಾಂಬು ದಾಳಿ ಮಾಡಿರುವ ಸುದ್ದಿ ತಿಳಿದೊಡನೆ ಆ ಅಪಾಯಕಾರಿ ಸ್ಥಳಕ್ಕೆ ಧಾವಿಸಿದ ಸ್ವಯಂ ಸೇವಕರು ಅಲ್ಲಿನ ಗೂಡ್ಸ್ ರೈಲಿನಲ್ಲಿದ್ದ ಪೆಟ್ರೋಲ್ ಪೀಪಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಪರಿಸ್ಥಿತಿ ತುಂಬಾ ನಾಜೂಕಾಗಿದ್ದ ಸ್ಥಳಗಳಲ್ಲಿ ಕ್ಯಾಂಟೀನ್ ನಡೆಸಲು ಸೇನೆ ಅನುಮತಿ ನೀಡುತ್ತಿದ್ದುದು ಸ್ವಯಂಸೇವಕರಿಗೆ ಮಾತ್ರ.

             ಪಂಜಾಬಿನ ಫಾಜಿಲ್ಕಾ ನಗರದ ಮೇಲೆ ಪಾಕಿಗಳು ಬಾಂಬು ದಾಳಿ ಆರಂಭಿಸಿದ್ದರು. ಆ ನಗರದ ಜನರು ಊರು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಲಾರಂಭಿಸಿದ್ದರು. ಅಲ್ಲಿನ ಜಿಲ್ಲಾ ಸಂಘ ಚಾಲಕರು ನಾಗರಿಕ ರಕ್ಷಣಾ ವ್ಯವಸ್ಥೆಯ ಬಗ್ಗೆ ಸಲಹೆ ಕೇಳಲು ಜಿಲ್ಲಾಧಿಕಾರಿಗಳ ಬಳಿ ಬಂದರು. ಜಿಲ್ಲಾಧಿಕಾರಿ ಅರೆಕ್ಷಣ ತಬ್ಬಿಬ್ಬಾದರು. ಸ್ವತಃ ಅವರೇ ಊರು ಬಿಟ್ಟು ಓಡುವ ಸಿದ್ಧತೆಯಲ್ಲಿದ್ದರು! ಆಗ ಸಂಘಚಾಲಕರು ಅಂದು ಸಂಘ ಶಾಖೆಗಳಲ್ಲಿ ಹಾಡುತ್ತಿದ್ದ ಗೀತೆಯೊಂದನ್ನು ಅವರೆದುರು ಹಾಡಿದರು. ಉತ್ಕಟ ದೇಶಭಕ್ತಿ ಹಾಗೂ ಕೆಚ್ಚಿನ ಭಾವನೆಯನ್ನು ಉದ್ದೀಪನಗೊಳಿಸುತ್ತಿದ್ದ ಆ ಹಾಡಿನ ಭಾವಕ್ಕೆ ಕಿವಿಗೊಟ್ಟು ಜಿಲ್ಲಾಧಿಕಾರಿ ಊರು ಬಿಡುವ ಯೋಚನೆಯನ್ನು ಕೈಬಿಟ್ಟರು! ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಪಡೆಯನ್ನು ಕಳಿಸುವಂತೆ ಕೋರಿದರು. ಒಂದೇ ಗಂಟೆಯೊಳಗೆ ಬಂದು ತಲುಪಿದ ಸೈನಿಕ ಪಡೆಯಿಂದಾಗಿ ಶತ್ರುಗಳ ತೆಕ್ಕೆಗೆ ಬೀಳಬಹುದಾಗಿದ್ದ ನಗರ ಉಳಿಯಿತು. ಮುಂದೆ ಡಿವಿಜನಲ್ ಕಮೀಷನರ್ ಆದ ಆ ಜಿಲ್ಲಾಧಿಕಾರಿಯೇ 1988 ಏಪ್ರಿಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆ ಸಂಘಚಾಲಕರನ್ನು ಸನ್ಮಾನಿಸಿ ಈ ಮೇಲಿನ ಘಟನೆಗಳನ್ನು ಸ್ಮರಿಸಿಕೊಂಡು ಭಾವುಕರಾದರು.

              ಪೂರ್ವ ಬಂಗಾಳದ ನಿರ್ವಾಸಿತರ ನೆರವಿಗಾಗಿ ದೇಶಾದ್ಯಂತ ಸ್ವಯಂಸೇವಕರು ಹಣ ಹಾಗೂ ಬಟ್ಟೆಗಳನ್ನು ಒಟ್ಟು ಮಾಡಿ ಹಂಚಿದರು. ಆ ನಿರ್ವಾಸಿತರಲ್ಲಿ ಪಾಕ್ ಸೈನಿಕರ ಅತ್ಯಾಚಾರಗಳಿಗೆ ಬಲಿಯಾದ ಮುಸ್ಲಿಮರೂ ಇದ್ದರು. ಸುಸಂಘಟಿತ ಸಂಘದ ಸ್ವಯಂಸೇವಕ ತಂಡಗಳ ಕೆಲಸದ ವೇಗ, ಅಚ್ಚುಕಟ್ಟುತನ ಕಂಡು ಸರ್ಕಾರೀ ಅಧಿಕಾರಿಗಳಿಗೂ ಅಚ್ಚರಿಯಾಗುತ್ತಿತ್ತು! ಡೇರೆಗಳು, ಪಾತ್ರೆಗಳು, ಆಹಾರ ಸಾಮಗ್ರಿಗಳು, ಬಟ್ಟೆಬರೆಗಳು ನೋಡನೋಡುತ್ತಿದ್ದಂತೆ  ಬಂದು ರಾಶಿ ಬೀಳುತ್ತಿದ್ದವು. 24 ಪರಗಣ ಜಿಲ್ಲೆಯ ಬನಗಾಂವ್ ಸಮೀಪ ಇನ್ನೂ ಹೆಚ್ಚಿನ ಪರಿಹಾರ ಕೇಂದ್ರಗಳನ್ನು ತೆರೆಯುವಂತೆ ಸ್ವಯಂಸೇವಕರನ್ನು ಸರ್ಕಾರೀ ಅಧಿಕಾರಿಗಳು ವಿನಂತಿಸತೊಡಗಿದರು. ಕೆಲವೇ ದಿನಗಳೊಳಗಾಗಿ 35000 ನಿರಾಶ್ರಿತರ ಜವಾಬ್ದಾರಿಯನ್ನು ಸ್ವಯಂಸೇವಕರು ವಹಿಸಿಕೊಂಡರು.

            ಸೇನಾದಂಡನಾಯಕರಿಗೆ ಖರ್ಜೂರ-ದ್ರಾಕ್ಷಿ ಮುಂತಾದ ಒಣಹಣ್ಣುಗಳ ಪೊಟ್ಟಣಗಳನ್ನು ಉಡುಗೊರೆಯಾಗಿ ನೀಡಿದ್ದು ಒಂದು ವಿನೂತನ ಉಪಕ್ರಮ. ಮೇಜರ್ ಕೌಶಲ್ ಹಾಗೂ ಜನರಲ್ ಅರೋರಾ ಅವರಿಗೆ ಇಂತಹ ಹದಿನೈದು ಸಾವಿರ ಪೊಟ್ಟಣಗಳು ಬಂದಿದ್ದವು. ಪ್ರತಿಯೊಂದರಲ್ಲೂ ಒಂದು ಚೀಟಿ. ಅದರಲ್ಲಿ "ಬಾಂಗ್ಲಾದೇಶದಲ್ಲಿ ಅಮಾನುಷ ದೌರ್ಜನ್ಯ ನಡೆಸಿದ ಪಾಕೀ ಸೈನ್ಯವನ್ನು ಇಷ್ಟು ತ್ವರಿತವಾಗಿ ಮಣ್ಣುಮುಕ್ಕಿಸಿದ ನೀವು ಭಾರತೀಯ ಸೈನಿಕರ ಶೌರ್ಯ ಸಾಹಸಗಳ ಪುರಾತನ ಸ್ಪೂರ್ತಿದಾಯಕ ಪರಂಪರೆಗೆ ಇನ್ನಷ್ಟು ಮೆರುಗು ನೀಡಿದಿರಿ. ದೇಶದ ಜನತೆ ನಿಮ್ಮ ಬಗ್ಗೆ ತಾಳಿರುವ ಅಪಾರ ಹೆಮ್ಮೆಯ ಈ ಸಣ್ಣ ಕಾಣಿಕೆಯನ್ನು ಸ್ವೀಕರಿಸಿ." ಎಂದಿತ್ತು!
ಆಧಾರ: ಹೊ.ವೆ ಶೇಷಾದ್ರಿ, ಚಂದ್ರ ಶೇಖರ ಭಂಡಾರಿ ಸಂಕಲಿತ "ಕೃತಿರೂಪ ಸಂಘದರ್ಶನ".

ಬುಧವಾರ, ಅಕ್ಟೋಬರ್ 7, 2015

ಮುಳ್ಳುಸಂಪಿಗೆ

#ನಾಸ್ತಿಮೂಲಮನೌಷಧಮ್
#ಮುಳ್ಳುಸಂಪಿಗೆ
ತುಳುವಿನಲ್ಲಿ ಹಂಪುಲ್, ಕಲ್ಲ್ ಸಂಪಿಗೆ ; ಕನ್ನಡದಲ್ಲಿ ಮುಳ್ಳುಸಂಪಿಗೆ, ಚಪ್ಳಕ, ಚಾಪಿ ಹಣ್ಣು, ಅಬ್ಳುಕಗ ಎಂದೆಲ್ಲಾ ಕರೆಯಲ್ಪ್ಡುವ ಸುಂದರ ಕೆಂಪನೆಯ ರುಚಿಕರ ಹಣ್ಣು ಇದು. ಈ ಹಣ್ಣನ್ನು ಸುಣ್ಣದೊಟ್ಟಿಗೆ ತಿಂದರೆ ಇನ್ನಷ್ಟು ರುಚಿ! ಸಂಸ್ಕೃತದಲ್ಲಿ ವಿಕಂಟಕ ಎಂಬ ಹೆಸರು.
ಈ ಮರವು ಕಾಸರ್ಕನ ಮರವನ್ನೇ ಹೋಲುತ್ತದೆ. ಹಸಿರು ಗೊಬ್ಬರಕ್ಕೆ ಇದರ ಗೆಲ್ಲು-ಎಲೆಗಳು ಉತ್ತಮ. ಇದರ ಚೆಕ್ಕೆಯು ಅತಿಸಾರ, ಗಂಟುನೋವು, ಹುಣ್ಣು-ಗಾಯಗಳ ನಿವಾರಣೆಗೆ ಉಪಯುಕ್ತ.
ವಿಕಂಟಕ ಮಿಡಿಯಾಗಿರುವಾಗ ಕೊಯ್ದು ತಂದು ನೀರಿನಲ್ಲಿ ಹಾಕಿ ಕುದಿಸಬೇಕು. ಅನಂತರ ಒಂದು ದಿನ ಕಾಲ ಉಪ್ಪು ನೀರಿನಲ್ಲಿ ನೆನೆ ಹಾಕಿ. ಬಳಿಕ ಮೆಣಸು ಸಾಸಿವೆ, ಅರಶಿಣಗಳನ್ನು ಅರೆದು ಮಿಶ್ರಮಾಡಿ ಉಪ್ಪಿನಕಾಯಿ ತಯಾರಿಸಲಾಗುತ್ತದೆ.
ಹಾಂ...ಈ ಹಣ್ಣನ್ನು ಅತಿಯಾಗಿ ತಿಂದರೆ ಬೇಧಿ ಶುರುವಾದೀತು!

ಗರುಡಪಾತಾಳ

#ನಾಸ್ತಿಮೂಲಮನೌಷಧಮ್
#ಗರುಡಪಾತಾಳ
ತುಳುವಿನಲ್ಲಿ ಗರುಡ ಪಾತಾಳ; ಕನ್ನಡದಲ್ಲಿ ಪಾತಾಳಗಂಧಿ,ಹಡಕಿ,ಸರ್ಪಾಕ್ಷಿ ಎಂದು ಕರೆಯಲ್ಪಡುವ ಸಸ್ಯವಿದು. ಸಂಸ್ಕೃತದಲ್ಲಿ ಸರ್ಪಗಂಧ ಚಂದ್ರಿಕಾ, ಗಂಧನಾಕುಲಿ, ಮಲೆಯಾಳಂನಲ್ಲಿ ಚುವನಾವಿಲ್‌ಪುರಿ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ 'ಹುಚ್ಚರ ಔಷಧಿ', ಆಂಗ್ಲದಲ್ಲಿ 'ಸರ್ಪೆಂಟ್‌ವುಡ್' ಎನ್ನುತ್ತಾರೆ. ಇದರ ಬೇರು ಸರ್ಪದ ಆಕಾರದಲ್ಲಿದ್ದು , ಸರ್ಪದ ವಿಷ ಇಳಿಸುವುದರಿಂದ ಆಯುರ್ವೇದದ ಪ್ರಕಾರ ಇದನ್ನು 'ಸರ್ಪಗಂಧ'(ಚರಕ ಸಂಹಿತೆ) ಎನ್ನಲಾಗಿದೆ. ಸಾಧಾರಣ ತಂಪು ಹವೆಯುಳ್ಳ, ಹೆಚ್ಚು ಮಳೆ ಬೀಳುವ ಹರಿದ್ವರ್ಣದ ಎಲ್ಲಾ ಕಾಡುಗಳಲ್ಲಿ, ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡುಗು, ಉಡುಪಿ, ಉತ್ತರಕನ್ನಡಗಳಲ್ಲಿ, ಹಿಮಾಲಯ ಶ್ರೇಣಿಗಳಲ್ಲಿ, ಶ್ರೀಲಂಕಾ, ಚೀನಾಗಳಲ್ಲಿ ಗರುಡಪಾತಾಳ ಕಾಣಸಿಗುತ್ತದೆ(ತ್ತಿತ್ತು!)

ಅಚ್ಚ ಹಸಿರಿನ ಹೊಳಪಿನ ಎಲೆಗಳು, ಕೆಂಪು ಅಥವಾ ಬಿಳಿಯ ಹೂಗಳಿರುವ ಸಸ್ಯ. ಇದರ ಬೇರು ಔಷದೀಯ ಗುಣಗಳನ್ನು ಹೊಂದಿದೆ. ಇವತ್ತಿಗೂ ಕಳ್ಳಸಾಗಾಣಿಕೆಯಿಂದ ವಿದೇಶಗಳಿಗೆ ರವಾನೆಯಾಗುತ್ತಿದೆ ಗರುಡಪಾತಾಳದ ಬೇರು! ಮಾನಸಿಕ ವೇದನೆಯನ್ನು ಶಮನ ಮಾಡುವ ವಿಶೇಷ ಗುಣವುಳ್ಳ ಬೇರು ಇದರದ್ದು. ರಕ್ತದೊತ್ತಡ ನಿವಾರಣೆಗೂ ಇದರ ಬಳಕೆಯಾಗುತ್ತದೆ. ಇದರ ಬೇರಿನಲ್ಲಿ ರಿಸರ್ಪಿನ್ ಎಂಬ ಸಸ್ಯಕ್ಷಾರವಿದೆ. ಬೇರಿನಲ್ಲಿ 20ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳ ಕ್ಷಾರ (ಅಲ್ಕಲಾಯ್ಡ್ಸ್) ಇರುವುದರಿಂದ ಅದು ಬೇರೆ ಬೇರೆ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ. ಹಾವಿನ ಕಡಿತಕ್ಕೆ ಔಷಧವಾಗಿ ಬಳಕೆಯಾಗುತ್ತದೆ ಗರುಡ ಪಾತಾಳ. ಇದರೊಂದಿಗೆ "ಈಶ್ವರ ಬೇರು" ಎಂಬ ಗಿಡದ ಬೇರು ಬಳಸಿ ಚೂರ್ಣ ತಯಾರಿಸಿ ವಿಷ ಜಂತು ಕಚ್ಚಿದಾಗ ವಿಷ ಹೊರತೆಗೆಯಲು ಬಳಸುತ್ತಿದ್ದರು. ರೋಗ ಭ್ರಾಂತಿ(Hypochondria)ಯ ಉಪಶಮನಕ್ಕೆ ಉತ್ತಮ ಔಷಧ. ಹೊಟ್ಟೆಗೆ ಸಂಬಂಧ ಪಟ್ಟ ರೋಗಗಳಿಗೂ ಇದು ರಾಮಬಾಣ! ಹಿಂದೆ ಮನೆಯೆದುರು ತುಳಸಿಕಟ್ಟೆಯಲ್ಲೇ ಇದಕ್ಕಿತ್ತು ಸ್ಥಾನ! ಮನುಷ್ಯನ ಅತಿಯಾಸೆಗೆ ಬಲಿಯಾಗಿ ವಿನಾಶದ ಅಂಚಿಗೆ ತಲುಪಿರುವ ಸರ್ಪಗಂಧ ಮುಂದೆ ಪಾತಾಳದಲ್ಲೂ ಸಿಗಲಿಕ್ಕಿಲ್ಲ!

>> ಇದರ ಬೇರನ್ನು ಮುಖ್ಯವಾಗಿ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರದ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನದ ಸಂದರ್ಭದಲ್ಲಿ ಶಮನಕಾರಿಯಾಗಿ ಬಳಸಲಾಗುತ್ತದೆ..
>> ಇದರ ಬೇರಿನಲ್ಲಿ ನಿದ್ದೆ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅಪಸ್ಮಾರ, ರಕ್ತದ ಒತ್ತಡ, ಉನ್ಮಾದ, ಚಿತ್ತಭ್ರಮಣೆ ಮತ್ತು ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ.
>> ಕಹಿ ಗುಣವನ್ನು ಹೊಂದಿದ್ದು ನಂಜು, ಕಜ್ಜಿ, ತುರಿಕೆ, ಸರ್ಪಸುತ್ತು (ಹರ್ಪಿಸ್) ಮತ್ತು ಎಲ್ಲಾ ತರಹದ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
>> ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದವುಗಳಿಂದ ಉಂಟಾಗುವ ರೋಗಗಳ ಮೇಲೆ ಇದು ಅತ್ಯತ್ತಮ ಪರಿಣಾಮ ಬೀರುತ್ತದೆ.
>> ಹಾವು, ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತವಾದಾಗ ಸರ್ಪಗಂಧವೇ ರಾಮಬಾಣ. ಸರ್ಪಗಂಧವು ರೋಗನಿರೋಧಕ, ರೋಗನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆ್ಯಂಟಿಬಯಾಟಿಕ್ ಮತ್ತು ಸ್ಟಿರಾಯ್ಡ್ ತರಹವೂ ಕೆಲಸ ಮಾಡುತ್ತದೆ. ಆದರೆ ಇದು ಇತರೆ ಸ್ಟಿರಾಯ್ಡ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ.

ಗುರುವಾರ, ಅಕ್ಟೋಬರ್ 1, 2015

ಬ್ರಾಹ್ಮೀ

#ನಾಸ್ತಿಮೂಲಮನೌಷಧಮ್
#ಬ್ರಾಹ್ಮೀ
ತುಳುವಿನಲ್ಲಿ ತಿಮರೆ, ಸಂಸ್ಕೃತದಲ್ಲಿ ಬ್ರಾಹ್ಮೀ, ಮಂಡೂಕಪರ್ಣೀ, ಕಪೋತವಂಕಾ,ಸೋಮವಲ್ಲೀ, ಹಿಂದಿ-ಕೊಂಕಣಿಯಲ್ಲಿ ಏಕಪಾನಿ ಎಂದು ಕರೆಯಲ್ಪಡುವ ಅದ್ಭುತ ಮದ್ದಿನ ಗುಣಗಳುಳ್ಳ ಕನ್ನಡದಲ್ಲಿ ಒಂದೆಲಗ ಎಂದೇ ಕರೆಯಲ್ಪಡುವ ಒಂದೇ ಎಲೆ ಹೊಂದಿರುವ ವಾರ್ಷಿಕ ಸಸ್ಯವಿದು. ಅಚ್ಚರಿಯೇನು ಗೊತ್ತಾ? ನೆನಪಿನ ಶಕ್ತಿಯನ್ನು ಉದ್ದೀಪನಗೊಳಿಸಬಲ್ಲ ಇದರ ಎಲೆಯ ಆಕಾರ ಮೆದುಳಿನ ರೀತಿಯೇ! ಗ್ರಹಣಶಕ್ತಿಯನ್ನು ಜಾಸ್ತಿ ಮಾಡಬಲ್ಲ ಇದು ಮೆದುಳಿನ ಟಾನಿಕ್ಕೇ ಸರಿ.

ಇದರ ಎಲೆಯನ್ನು ದಂಟು ಸಮೇತ ನಲವತ್ತೆಂಟು ದಿನಗಳ ಸೇವಿಸಿದರೆ ಒಳ್ಳೆಯದು. ಇದರ ಸೇವನೆಯಿಂದ ದೇಹದಾರ್ಢ್ಯತೆ ಹೆಚ್ಚುತ್ತದೆ. ಸೊಂಟ ನೋವು, ಬೆನ್ನು ಹುರಿ, ಕುತ್ತಿಗೆ ನೋವಿಗೆ ರಾಮಬಾಣ! ಸೇವಿಸಿದರೆ ನಿಮ್ಮ ರಾಗವೂ ಉತ್ತಮಗೊಳ್ಳುವುದು. ಗರ್ಭಿಣಿಯರು ಸೇವಿಸಿದಲ್ಲಿ ಅವರ ದೇಹದಾರ್ಢ್ಯತೆ ಹೆಚ್ಚುವುದರೊಂದಿಗೆ ಹುಟ್ಟುವ ಮಗುವೂ ಬುದ್ಧಿವಂತನಾಗುತ್ತದೆ. ಅದರಿಂದಾಗಿಯೇ ಸರಸ್ವತೀ ಎಂಬ ಹೆಸರೂ ಇದಕ್ಕಿದೆ. ಸಾರಸ್ವತಾರಿಷ್ಟ ಇದರದ್ದೇ ಉತ್ಪನ್ನ. ಇದನ್ನು ನೆಲ್ಲಿಕಾಯಿಯೊಂದಿಗೆ ಸೇರಿಸಿ ತಯಾರಿಸಿದ ತೈಲ ತಲೆಗೆ ಹಚ್ಚಿಕೊಂಡರೆ ಸೊಂಪಾದ ತಲೆಕೂದಲು, ಸುಖನಿದ್ದೆ ನಿಮ್ಮದ್ದು! ಬ್ರಾಹ್ಮೀಯಿಂದ ತಯಾರಿಸಲ್ಪಟ್ಟ ಬಗೆಬಗೆಯ ತೈಲ, ಅರಿಷ್ಟಗಳು ಲಭ್ಯವಿವೆ. ಜಲಬ್ರಾಹ್ಮೀ ಎನ್ನುವ ಇನ್ನೊಂದು ಪ್ರಭೇದವೂ ಇದೆ.

ಹಾಂ ಇಷ್ಟು ಹೇಳಿದ ಮೇಲೆ ಅಡುಗೆಯ ಬಗ್ಗೆ ಹೇಳಲೇಬೇಕಲ್ವೇ. ತುಳುನಾಡ ಬ್ರಾಹ್ಮಣರನ್ನು ಕೇಳಿನೋಡಿ...ಶ್ರಾದ್ಧದ ದಿನದ ಭೋಜನದಲ್ಲಿ "ತಿಮರೆಯ ಚಟ್ನಿ"ಗೆ ಮೊದಲ ಪ್ರಾಶಸ್ತ್ಯ! ಹಾಂ ಪುಳಿಚಾರು ಎಂದು ಜರೆಯುವವರಿಗೆ ಇದರ ರುಚಿ ಖಂಡಿತಾ ತಿಳಿಯದು! ಇದರ ತಂಬುಳಿಯೂ ರುಚಿಕರ.
>>ಜ್ಞಾನಕಾರಕ
>> ಕಫ,ಪಿತ್ತ ದೋಷ ನಿವಾರಕ
>>ಚರ್ಮರೋಗ ವಿನಾಶಕ
>>ಅಪಸ್ಮಾರವಿದ್ದಲ್ಲಿ ಇದರ ಸೇವನೆ ಒಳ್ಳೆಯದು
>>ಅಜೀರ್ಣನಾಶಕ
>>ಹೃದ್ರೋಗ, ಶ್ವಾಸಕೋಶದ ತೊಂದರೆ, ಮಧುಮೇಹವನ್ನು ಹೋಗಲಾಡಿಸಲು ಸಹಕಾರಿ.
>>ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಸಹಕಾರಿ

ಸೂರ್ಯೋದಯಕ್ಕೂ ಮುನ್ನ ಹುಟ್ಟುಡುಗೆಯಲ್ಲಿ ಬ್ರಾಹ್ಮಿ ಸಸ್ಯವು ಬೆಳೆದ ಸ್ಥಳಕ್ಕೆ ದೀಪ ಉಪಯೋಗಿಸದೇ ನಡೆದು ಹೋಗಿ, ಒಂದು ಬ್ರಾಹ್ಮಿ ಗಿಡವನ್ನು ಸಮೂಲವಾಗಿ ತನ್ನ ಹಲ್ಲಿನಿಂದಲೇ ಕಿತ್ತು, ಅಗಿದು ನುಂಗಿ, ತನ್ನ ವಾಸಸ್ಥಾನಕ್ಕೆ ವಾಪಸಾಗಿ, ಬೆಳಗಾಗುವ ತನಕ ಬ್ರಾಹ್ಮೀ ಜಪವನ್ನು ಮಾಡಿದವನಿಗೆ ಬ್ರಾಹ್ಮೀ ಸಿದ್ಧಿಯಾಗುವುದೆಂಬ ಪ್ರತೀತಿಯೂ ಇದೆ.