ಪುಟಗಳು

ಗುರುವಾರ, ಅಕ್ಟೋಬರ್ 8, 2015

1971...ಸಂಘವೇ ಸೈನ್ಯವು ಇನ್ನೊಂದು!

1971...ಸಂಘವೇ ಸೈನ್ಯವು ಇನ್ನೊಂದು!

               1971. ತಮಗಾಗಿ ಪ್ರತ್ಯೇಕ ದೇಶ ಬೇಕೆಂದು ರಕ್ತದೋಕುಳಿ ಹರಿಸಿ ಪ್ರತ್ಯೇಕವಾದವರೇ ಇಬ್ಬಾಗವಾದ ವರ್ಷ! ಉಭಯ ಗಡಿಗಳಲ್ಲೂ ಗುಂಡಿನ ಚಕಮಕಿ ಆರಂಭವಾಗಿತ್ತು. ಒಂದು ದಿನ ಬೆಳ್ಳಂಬೆಳಗ್ಗೆ ಪಾಕ್ ಸೈನಿಕರು ಪಶ್ಚಿಮ ಬಂಗಾಳದ ದಿನಜಪುರ ಜಿಲ್ಲೆಯ ಚಕ್ರಂ ಹಳ್ಳಿಯ ಹಳ್ಳದಾಚೆ ಹಠಾತ್ತನೆ ಕಾಣಿಸಿಕೊಂಡರು. ಹತ್ತಿರದಲ್ಲೇ ಎತ್ತರಕ್ಕೆ ಬೆಳೆದ ಸೆಣಬಿನ ಗದ್ದೆ.  ಬೆಳೆದು ನಿಂತ ಗಿಡಗಳ ಮರೆಯಲ್ಲಿ ಭಾರತೀಯ ಸೈನಿಕರೂ ಅಡಗಿ ಕೂತರು. ಆದರೆ ಈ ಗಡಿಬಿಡಿಯಲ್ಲಿ ಮದ್ದುಗುಂಡು ತುಂಬಿದ ಕೆಲವು ಪೆಟ್ಟಿಗೆಗಳು ಹಿಂದೆಯೇ ಉಳಿದು ಹೋದವು. ಅವು ಇದ್ದ ಜಾಗ ಪಾಕಿಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲದೆ ಆ ಜಾಗ ಅವರ ಗುಂಡಳತೆಯ ದೂರದಲ್ಲೇ ಇತ್ತು. ಪ್ರತ್ಯಕ್ಷ ಸಾವಿಗೆ ಆಮಂತ್ರಣ ನೀಡುವ ಅವುಗಳನ್ನು ತರುವ ಸಾಹಸವನ್ನು ನಮ್ಮ ಸೈನಿಕರು ಕೈಬಿಡಬೇಕಾಯಿತು. ಚುರ್ಕಾಮುರ್ಮು! ಸ್ಥಳೀಯ "ಶಾಖೆ"ಯ ಮುಖ್ಯ ಶಿಕ್ಷಕನಾಗಿದ್ದ. ಶಾಲಾ ವಿದ್ಯಾರ್ಥಿ. ಆತ ಆ ಪೆಟ್ಟಿಗೆಗಳನ್ನು ತರುವ ಸಾಹಸಕ್ಕೆ ಮುಂದಾದ. ಸುಮಾರು ನೂರು ಅಡಿಗಳಷ್ಟು ತೆವಳಿಕೊಂಡೇ ಹೋದ ಆತ ಹಗ್ಗದ ಕೊನೆಯಲ್ಲಿ ಕಟ್ಟಿದ ಕೊಕ್ಕೆಗಳಿಂದ ಕೆಲವು ಪೆಟ್ಟಿಗೆಗಳನ್ನು ಎಳೆದು ತಂದ. ತರಲಾಗದ್ದನ್ನು ಹಳ್ಳಕ್ಕೆ ತಳ್ಳಿದ. ಅಷ್ಟರಲ್ಲೇ ಆರಂಭವಾಯಿತು ಗುಂಡಿನ ಮೊರೆತ! ಚುರ್ಕಾಮುರ್ಮು ನೆಲಕ್ಕುರುಳಿದ. "ಭಾರತ್ ಮಾತಾ ಕೀ ಜೈ" ಎಂಬ ಘೋಷ ಅವನ ಬಾಯಿಯಿಂದ ಮೊಳಗಿತ್ತು! ನಮ್ಮ ಸೈನಿಕರು ಆ ಮದ್ದು ಗುಂಡು ತುಂಬಿದ ಪೆಟ್ಟಿಗೆಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿದರು. ಮುಂದೆ ಅವೇ ಮದ್ದುಗುಂಡುಗಳು ಅಂದಿನ ವಿಜಯಕ್ಕೆ ಕಾರಣವಾದವು!

             ಯುದ್ಧಾರಂಭಗೊಳ್ಳುತ್ತಿದ್ದಂತೆ ಸ್ವಯಂಸೇವಕರು ರಕ್ತದಾನ, ನಾಗರಿಕ ರಕ್ಷಣೆ, ಪಹರೆ, ಪ್ರಥಮ ಚಿಕಿತ್ಸೆ ಮುಂತಾದ ಪರಿಹಾರ ಕಾರ್ಯಗಳಿಗೆ ಮುಂದಾದರು. ದೆಹಲಿಯ ಕಿಂಗ್ಸ್ ವೇ ಕ್ಯಾಂಪ್ ಸ್ಟೇಷನ್ನಿನ ಪೊಲೀಸ್ ಅಧಿಕಾರಿಗಳು ರೇಡಿಯೋ ಕಾಲನಿಯಲ್ಲಿದ್ದ ಆಕಾಶವಾಣಿ ಮತ್ತಿತರ ಪ್ರಮುಖ ಸರ್ಕಾರೀ ಕಟ್ಟಡಗಳು, ವಜೀರಾಬಾದಿನ ನೀರು ಸರಬರಾಜು ಕೇಂದ್ರಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟದ್ದು ಸ್ವಯಂಸೇವಕರಿಗೇನೇ! ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕರ ಶುಶ್ರೂಷೆಗೆ ನಿಂತದ್ದು ಸ್ವಯಂ ಸೇವಕರೇ. ಸೈನಿಕರಿಗೆ ಹಣ್ಣುಹಂಪಲು, ದಿನಬಳಕೆಯ ಸಾಮಗ್ರಿಗಳನ್ನು ಒಟ್ಟುಮಾಡಿ ಪೂರೈಸಿದ್ದೂ ಸ್ವಯಂಸೇವಕರೇ. 71ರ ಡಿಸೆಂಬರ್ 7ರಂದು ರಾಜಾಸ್ಥಾನದ ಬಾರ್ ಮೇರ್ ರೈಲು ನಿಲ್ದಾಣದ ಮೇಲೆ ಪಾಕಿಗಳು ಬಾಂಬು ದಾಳಿ ಮಾಡಿರುವ ಸುದ್ದಿ ತಿಳಿದೊಡನೆ ಆ ಅಪಾಯಕಾರಿ ಸ್ಥಳಕ್ಕೆ ಧಾವಿಸಿದ ಸ್ವಯಂ ಸೇವಕರು ಅಲ್ಲಿನ ಗೂಡ್ಸ್ ರೈಲಿನಲ್ಲಿದ್ದ ಪೆಟ್ರೋಲ್ ಪೀಪಾಯಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು. ಪರಿಸ್ಥಿತಿ ತುಂಬಾ ನಾಜೂಕಾಗಿದ್ದ ಸ್ಥಳಗಳಲ್ಲಿ ಕ್ಯಾಂಟೀನ್ ನಡೆಸಲು ಸೇನೆ ಅನುಮತಿ ನೀಡುತ್ತಿದ್ದುದು ಸ್ವಯಂಸೇವಕರಿಗೆ ಮಾತ್ರ.

             ಪಂಜಾಬಿನ ಫಾಜಿಲ್ಕಾ ನಗರದ ಮೇಲೆ ಪಾಕಿಗಳು ಬಾಂಬು ದಾಳಿ ಆರಂಭಿಸಿದ್ದರು. ಆ ನಗರದ ಜನರು ಊರು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಲಾರಂಭಿಸಿದ್ದರು. ಅಲ್ಲಿನ ಜಿಲ್ಲಾ ಸಂಘ ಚಾಲಕರು ನಾಗರಿಕ ರಕ್ಷಣಾ ವ್ಯವಸ್ಥೆಯ ಬಗ್ಗೆ ಸಲಹೆ ಕೇಳಲು ಜಿಲ್ಲಾಧಿಕಾರಿಗಳ ಬಳಿ ಬಂದರು. ಜಿಲ್ಲಾಧಿಕಾರಿ ಅರೆಕ್ಷಣ ತಬ್ಬಿಬ್ಬಾದರು. ಸ್ವತಃ ಅವರೇ ಊರು ಬಿಟ್ಟು ಓಡುವ ಸಿದ್ಧತೆಯಲ್ಲಿದ್ದರು! ಆಗ ಸಂಘಚಾಲಕರು ಅಂದು ಸಂಘ ಶಾಖೆಗಳಲ್ಲಿ ಹಾಡುತ್ತಿದ್ದ ಗೀತೆಯೊಂದನ್ನು ಅವರೆದುರು ಹಾಡಿದರು. ಉತ್ಕಟ ದೇಶಭಕ್ತಿ ಹಾಗೂ ಕೆಚ್ಚಿನ ಭಾವನೆಯನ್ನು ಉದ್ದೀಪನಗೊಳಿಸುತ್ತಿದ್ದ ಆ ಹಾಡಿನ ಭಾವಕ್ಕೆ ಕಿವಿಗೊಟ್ಟು ಜಿಲ್ಲಾಧಿಕಾರಿ ಊರು ಬಿಡುವ ಯೋಚನೆಯನ್ನು ಕೈಬಿಟ್ಟರು! ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಪಡೆಯನ್ನು ಕಳಿಸುವಂತೆ ಕೋರಿದರು. ಒಂದೇ ಗಂಟೆಯೊಳಗೆ ಬಂದು ತಲುಪಿದ ಸೈನಿಕ ಪಡೆಯಿಂದಾಗಿ ಶತ್ರುಗಳ ತೆಕ್ಕೆಗೆ ಬೀಳಬಹುದಾಗಿದ್ದ ನಗರ ಉಳಿಯಿತು. ಮುಂದೆ ಡಿವಿಜನಲ್ ಕಮೀಷನರ್ ಆದ ಆ ಜಿಲ್ಲಾಧಿಕಾರಿಯೇ 1988 ಏಪ್ರಿಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆ ಸಂಘಚಾಲಕರನ್ನು ಸನ್ಮಾನಿಸಿ ಈ ಮೇಲಿನ ಘಟನೆಗಳನ್ನು ಸ್ಮರಿಸಿಕೊಂಡು ಭಾವುಕರಾದರು.

              ಪೂರ್ವ ಬಂಗಾಳದ ನಿರ್ವಾಸಿತರ ನೆರವಿಗಾಗಿ ದೇಶಾದ್ಯಂತ ಸ್ವಯಂಸೇವಕರು ಹಣ ಹಾಗೂ ಬಟ್ಟೆಗಳನ್ನು ಒಟ್ಟು ಮಾಡಿ ಹಂಚಿದರು. ಆ ನಿರ್ವಾಸಿತರಲ್ಲಿ ಪಾಕ್ ಸೈನಿಕರ ಅತ್ಯಾಚಾರಗಳಿಗೆ ಬಲಿಯಾದ ಮುಸ್ಲಿಮರೂ ಇದ್ದರು. ಸುಸಂಘಟಿತ ಸಂಘದ ಸ್ವಯಂಸೇವಕ ತಂಡಗಳ ಕೆಲಸದ ವೇಗ, ಅಚ್ಚುಕಟ್ಟುತನ ಕಂಡು ಸರ್ಕಾರೀ ಅಧಿಕಾರಿಗಳಿಗೂ ಅಚ್ಚರಿಯಾಗುತ್ತಿತ್ತು! ಡೇರೆಗಳು, ಪಾತ್ರೆಗಳು, ಆಹಾರ ಸಾಮಗ್ರಿಗಳು, ಬಟ್ಟೆಬರೆಗಳು ನೋಡನೋಡುತ್ತಿದ್ದಂತೆ  ಬಂದು ರಾಶಿ ಬೀಳುತ್ತಿದ್ದವು. 24 ಪರಗಣ ಜಿಲ್ಲೆಯ ಬನಗಾಂವ್ ಸಮೀಪ ಇನ್ನೂ ಹೆಚ್ಚಿನ ಪರಿಹಾರ ಕೇಂದ್ರಗಳನ್ನು ತೆರೆಯುವಂತೆ ಸ್ವಯಂಸೇವಕರನ್ನು ಸರ್ಕಾರೀ ಅಧಿಕಾರಿಗಳು ವಿನಂತಿಸತೊಡಗಿದರು. ಕೆಲವೇ ದಿನಗಳೊಳಗಾಗಿ 35000 ನಿರಾಶ್ರಿತರ ಜವಾಬ್ದಾರಿಯನ್ನು ಸ್ವಯಂಸೇವಕರು ವಹಿಸಿಕೊಂಡರು.

            ಸೇನಾದಂಡನಾಯಕರಿಗೆ ಖರ್ಜೂರ-ದ್ರಾಕ್ಷಿ ಮುಂತಾದ ಒಣಹಣ್ಣುಗಳ ಪೊಟ್ಟಣಗಳನ್ನು ಉಡುಗೊರೆಯಾಗಿ ನೀಡಿದ್ದು ಒಂದು ವಿನೂತನ ಉಪಕ್ರಮ. ಮೇಜರ್ ಕೌಶಲ್ ಹಾಗೂ ಜನರಲ್ ಅರೋರಾ ಅವರಿಗೆ ಇಂತಹ ಹದಿನೈದು ಸಾವಿರ ಪೊಟ್ಟಣಗಳು ಬಂದಿದ್ದವು. ಪ್ರತಿಯೊಂದರಲ್ಲೂ ಒಂದು ಚೀಟಿ. ಅದರಲ್ಲಿ "ಬಾಂಗ್ಲಾದೇಶದಲ್ಲಿ ಅಮಾನುಷ ದೌರ್ಜನ್ಯ ನಡೆಸಿದ ಪಾಕೀ ಸೈನ್ಯವನ್ನು ಇಷ್ಟು ತ್ವರಿತವಾಗಿ ಮಣ್ಣುಮುಕ್ಕಿಸಿದ ನೀವು ಭಾರತೀಯ ಸೈನಿಕರ ಶೌರ್ಯ ಸಾಹಸಗಳ ಪುರಾತನ ಸ್ಪೂರ್ತಿದಾಯಕ ಪರಂಪರೆಗೆ ಇನ್ನಷ್ಟು ಮೆರುಗು ನೀಡಿದಿರಿ. ದೇಶದ ಜನತೆ ನಿಮ್ಮ ಬಗ್ಗೆ ತಾಳಿರುವ ಅಪಾರ ಹೆಮ್ಮೆಯ ಈ ಸಣ್ಣ ಕಾಣಿಕೆಯನ್ನು ಸ್ವೀಕರಿಸಿ." ಎಂದಿತ್ತು!
ಆಧಾರ: ಹೊ.ವೆ ಶೇಷಾದ್ರಿ, ಚಂದ್ರ ಶೇಖರ ಭಂಡಾರಿ ಸಂಕಲಿತ "ಕೃತಿರೂಪ ಸಂಘದರ್ಶನ".

1 ಕಾಮೆಂಟ್‌: