ಪುಟಗಳು

ಬುಧವಾರ, ಅಕ್ಟೋಬರ್ 7, 2015

ಗರುಡಪಾತಾಳ

#ನಾಸ್ತಿಮೂಲಮನೌಷಧಮ್
#ಗರುಡಪಾತಾಳ
ತುಳುವಿನಲ್ಲಿ ಗರುಡ ಪಾತಾಳ; ಕನ್ನಡದಲ್ಲಿ ಪಾತಾಳಗಂಧಿ,ಹಡಕಿ,ಸರ್ಪಾಕ್ಷಿ ಎಂದು ಕರೆಯಲ್ಪಡುವ ಸಸ್ಯವಿದು. ಸಂಸ್ಕೃತದಲ್ಲಿ ಸರ್ಪಗಂಧ ಚಂದ್ರಿಕಾ, ಗಂಧನಾಕುಲಿ, ಮಲೆಯಾಳಂನಲ್ಲಿ ಚುವನಾವಿಲ್‌ಪುರಿ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ 'ಹುಚ್ಚರ ಔಷಧಿ', ಆಂಗ್ಲದಲ್ಲಿ 'ಸರ್ಪೆಂಟ್‌ವುಡ್' ಎನ್ನುತ್ತಾರೆ. ಇದರ ಬೇರು ಸರ್ಪದ ಆಕಾರದಲ್ಲಿದ್ದು , ಸರ್ಪದ ವಿಷ ಇಳಿಸುವುದರಿಂದ ಆಯುರ್ವೇದದ ಪ್ರಕಾರ ಇದನ್ನು 'ಸರ್ಪಗಂಧ'(ಚರಕ ಸಂಹಿತೆ) ಎನ್ನಲಾಗಿದೆ. ಸಾಧಾರಣ ತಂಪು ಹವೆಯುಳ್ಳ, ಹೆಚ್ಚು ಮಳೆ ಬೀಳುವ ಹರಿದ್ವರ್ಣದ ಎಲ್ಲಾ ಕಾಡುಗಳಲ್ಲಿ, ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡುಗು, ಉಡುಪಿ, ಉತ್ತರಕನ್ನಡಗಳಲ್ಲಿ, ಹಿಮಾಲಯ ಶ್ರೇಣಿಗಳಲ್ಲಿ, ಶ್ರೀಲಂಕಾ, ಚೀನಾಗಳಲ್ಲಿ ಗರುಡಪಾತಾಳ ಕಾಣಸಿಗುತ್ತದೆ(ತ್ತಿತ್ತು!)

ಅಚ್ಚ ಹಸಿರಿನ ಹೊಳಪಿನ ಎಲೆಗಳು, ಕೆಂಪು ಅಥವಾ ಬಿಳಿಯ ಹೂಗಳಿರುವ ಸಸ್ಯ. ಇದರ ಬೇರು ಔಷದೀಯ ಗುಣಗಳನ್ನು ಹೊಂದಿದೆ. ಇವತ್ತಿಗೂ ಕಳ್ಳಸಾಗಾಣಿಕೆಯಿಂದ ವಿದೇಶಗಳಿಗೆ ರವಾನೆಯಾಗುತ್ತಿದೆ ಗರುಡಪಾತಾಳದ ಬೇರು! ಮಾನಸಿಕ ವೇದನೆಯನ್ನು ಶಮನ ಮಾಡುವ ವಿಶೇಷ ಗುಣವುಳ್ಳ ಬೇರು ಇದರದ್ದು. ರಕ್ತದೊತ್ತಡ ನಿವಾರಣೆಗೂ ಇದರ ಬಳಕೆಯಾಗುತ್ತದೆ. ಇದರ ಬೇರಿನಲ್ಲಿ ರಿಸರ್ಪಿನ್ ಎಂಬ ಸಸ್ಯಕ್ಷಾರವಿದೆ. ಬೇರಿನಲ್ಲಿ 20ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳ ಕ್ಷಾರ (ಅಲ್ಕಲಾಯ್ಡ್ಸ್) ಇರುವುದರಿಂದ ಅದು ಬೇರೆ ಬೇರೆ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ. ಹಾವಿನ ಕಡಿತಕ್ಕೆ ಔಷಧವಾಗಿ ಬಳಕೆಯಾಗುತ್ತದೆ ಗರುಡ ಪಾತಾಳ. ಇದರೊಂದಿಗೆ "ಈಶ್ವರ ಬೇರು" ಎಂಬ ಗಿಡದ ಬೇರು ಬಳಸಿ ಚೂರ್ಣ ತಯಾರಿಸಿ ವಿಷ ಜಂತು ಕಚ್ಚಿದಾಗ ವಿಷ ಹೊರತೆಗೆಯಲು ಬಳಸುತ್ತಿದ್ದರು. ರೋಗ ಭ್ರಾಂತಿ(Hypochondria)ಯ ಉಪಶಮನಕ್ಕೆ ಉತ್ತಮ ಔಷಧ. ಹೊಟ್ಟೆಗೆ ಸಂಬಂಧ ಪಟ್ಟ ರೋಗಗಳಿಗೂ ಇದು ರಾಮಬಾಣ! ಹಿಂದೆ ಮನೆಯೆದುರು ತುಳಸಿಕಟ್ಟೆಯಲ್ಲೇ ಇದಕ್ಕಿತ್ತು ಸ್ಥಾನ! ಮನುಷ್ಯನ ಅತಿಯಾಸೆಗೆ ಬಲಿಯಾಗಿ ವಿನಾಶದ ಅಂಚಿಗೆ ತಲುಪಿರುವ ಸರ್ಪಗಂಧ ಮುಂದೆ ಪಾತಾಳದಲ್ಲೂ ಸಿಗಲಿಕ್ಕಿಲ್ಲ!

>> ಇದರ ಬೇರನ್ನು ಮುಖ್ಯವಾಗಿ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರದ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನದ ಸಂದರ್ಭದಲ್ಲಿ ಶಮನಕಾರಿಯಾಗಿ ಬಳಸಲಾಗುತ್ತದೆ..
>> ಇದರ ಬೇರಿನಲ್ಲಿ ನಿದ್ದೆ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅಪಸ್ಮಾರ, ರಕ್ತದ ಒತ್ತಡ, ಉನ್ಮಾದ, ಚಿತ್ತಭ್ರಮಣೆ ಮತ್ತು ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ.
>> ಕಹಿ ಗುಣವನ್ನು ಹೊಂದಿದ್ದು ನಂಜು, ಕಜ್ಜಿ, ತುರಿಕೆ, ಸರ್ಪಸುತ್ತು (ಹರ್ಪಿಸ್) ಮತ್ತು ಎಲ್ಲಾ ತರಹದ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ.
>> ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದವುಗಳಿಂದ ಉಂಟಾಗುವ ರೋಗಗಳ ಮೇಲೆ ಇದು ಅತ್ಯತ್ತಮ ಪರಿಣಾಮ ಬೀರುತ್ತದೆ.
>> ಹಾವು, ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತವಾದಾಗ ಸರ್ಪಗಂಧವೇ ರಾಮಬಾಣ. ಸರ್ಪಗಂಧವು ರೋಗನಿರೋಧಕ, ರೋಗನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆ್ಯಂಟಿಬಯಾಟಿಕ್ ಮತ್ತು ಸ್ಟಿರಾಯ್ಡ್ ತರಹವೂ ಕೆಲಸ ಮಾಡುತ್ತದೆ. ಆದರೆ ಇದು ಇತರೆ ಸ್ಟಿರಾಯ್ಡ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ