ಪುಟಗಳು

ಸೋಮವಾರ, ಅಕ್ಟೋಬರ್ 19, 2015

ಅಳಲೆಕಾಯಿ

#ನಾಸ್ತಿಮೂಲಮನೌಷಧಮ್
#ಅಳಲೆಕಾಯಿ

            ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯ. ಸಂಸ್ಕೃತದಲ್ಲಿ ಹರೀತಕಿ, ಅಭಯಾ; ಕನ್ನಡದಲ್ಲಿ ಅಳಲೆಕಾಯಿ, ತುಳುವಿನಲ್ಲಿ ಅಣಿಲೆ, ಹಿಂದಿಯಲ್ಲಿ ಹರ್ಡಾ ಎಂದು ಕರೆಯಲ್ಪಡುವ ಈ ಕಾಯಿ ಆಯುರ್ವೇದದ ತ್ರಿಫಲಗಳಲ್ಲಿ ಒಂದು. ತ್ರಿಫಲಾದಿ ಚೂರ್ಣ, ತೈಲ, ಅಭಯಾರಿಷ್ಟದಲ್ಲಿ ಮುಖ್ಯವಸ್ತು. ಹೊಟ್ಟೆಯನ್ನು ಶುದ್ಧಗೊಳಿಸುವ ವಿರೇಚಕವೆಂಬ ಇದರ ವಿಶೇಷ ಗುಣವೇ ಅನೇಕ ಬಗೆಯ ಔಷಧಿಗಳಲ್ಲಿ ಮುಖ್ಯಸ್ಥಾನವನ್ನು ತಂದುಕೊಟ್ಟಿದೆ.  ಪಿತ್ತಪ್ರಕೋಪಕ್ಕೆ, ಹಸಿವು, ನಿದ್ದೆ ಸರಿಪಡಿಸಲು ಅಳಲೆಯ ಚೂರ್ಣವೇ ರಾಮಬಾಣ. ಅಳಲೆಕಾಯಿಯನ್ನಿ ಅರಸಿನದೊಂದಿಗೆ ಅರೆದು ಲೇಪವನ್ನು ಕಬ್ಬಿಣದ ವಸ್ತುವಿನಲ್ಲಿ ಬಿಸಿ ಮಾಡಿ, ಉಗುರು ಬೆಚ್ಚಗಿನ ಲೇಪವನ್ನು ದೊಡ್ಡ ಗಾಯಗಳಿಗೆ ಹಚ್ಚಿದರೆ ಗಾಯ, ನೋವು ಉಪಶಮನ. ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು. ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ.

ಧನ್ವಂತರಿ ನಿಘಂಟುವಿನಲ್ಲಿ
"ಹರಸ್ಯ ಭವನೇ ಜಾತಾ ಹರೀತಾ ಚ ಸ್ವಭಾವತಃ
ಸರ್ವ ರೋಗಾಂಶ್ಚ ಹರತೇತೇನ ಖ್ಯಾತ ಹರೀತಕೀ"
ದೇವಲೋಕದಲ್ಲಿ ಹುಟ್ಟಿದ, ಹಸಿರು ಬಣ್ಣವುಳ್ಳ ಅಳಲೆಕಾಯಿಯು ಎಲ್ಲ ರೋಗಗಳನ್ನೂ ಹರಣ ಮಾಡುವ ಹರೀತಕೀ! ಎಂದಿದೆ.
"ಮಾತಾ ಯಸ್ಯ ಸ್ವಯಂ ನಾಸ್ತಿ
 ತಸ್ಯ ಮಾತಾ ಹರೀತಕೀ"
 ಯಾವ ಮಗುವಿಗೆ ಶೈಶವಾವಸ್ಥೆಯಲ್ಲಿಯೇ ತಾಯಿಯನ್ನು ಕಳೆದುಕೊಳ್ಳವ ದುರ್ಭಾಗ್ಯವುಂಟಾಗುವುದೋ ಅದಕ್ಕೆ ಅಳಲೇಕಾಯಿಯೇ ತಾಯಿಯಾಗಬಲ್ಲುದು.

             ಅಳಲೆಕಾಯಿ ವಾತಾನುಲೋಮನೀ. ಆಮ್ಲರಸದಿಂದ ವಾತವನ್ನೂ, ಮಧುರ, ಕಹಿ ರಸಗಳಿಂದ ಪಿತ್ತವನ್ನೂ, ಕಾರ-ಒಗರು ರಸಗಳಿಂದ ಕಫವನ್ನೂ ಅಳಲೆಕಾಯಿಯು ಪರಿಹರಿಸಬಲ್ಲದಾದುದರಿಂದ ಅದನ್ನು ತ್ರಿದೋಷಘ್ನೀ ಎನ್ನಲಾಗಿದೆ. ಅದು ಶರೀರದಲ್ಲಿನ ವಿಷಾಂಶವನ್ನು ತೆಗೆಯುವುದು, ಮೈಯನ್ನು ಹಗುರಗೊಳಿಸುವುದು. ಬುದ್ಧಿಯನ್ನು ವರ್ಧಿಸುವುದು. ಕಣ್ಣಿನ ಕಾಯಿಲೆಗಳಿಗೆ ನಿವಾರಿಸುವುದು. ಮೂತ್ರಾಂಗ ರೋಗ, ಕುಷ್ಠ, ವಾಂತಿಗಳಿಗೆ ರಾಮಬಾಣ.

ಇಷ್ಟೆಲ್ಲಾ ಓದಿ ನೀವು ನನ್ನನ್ನು "ಅಳಲೆ ಕಾಯಿ ಪಂಡಿತ" ಅಂದರೆ........
ಬೇಜಾರಿಲ್ಲ. ಈ "ಅಳಲೆಕಾಯಿ ಪಂಡಿತ" ಪದವನ್ನು ಹುಟ್ಟು ಹಾಕಿದವರು ಆಯುರ್ವೇದ ವಿರೋಧೀ ಅಲೋಪತಿ ವೈದ್ಯರು!
ಹಾಂ ದಕ್ಷಿಣ ಕನ್ನಡದ ವಿಟ್ಲದ ಬಳಿ "ಅಣಿಲ ಕಟ್ಟೆ" ಎಂಬ ಊರೇ ಇದೆ. ಅದು ಈಗ ಅನಿಲ ಕಟ್ಟೆ ಎಂದು ಬದಲಾಗಿದೆ.


1 ಕಾಮೆಂಟ್‌: