ಪುಟಗಳು

ಗುರುವಾರ, ಅಕ್ಟೋಬರ್ 1, 2015

ಬ್ರಾಹ್ಮೀ

#ನಾಸ್ತಿಮೂಲಮನೌಷಧಮ್
#ಬ್ರಾಹ್ಮೀ
ತುಳುವಿನಲ್ಲಿ ತಿಮರೆ, ಸಂಸ್ಕೃತದಲ್ಲಿ ಬ್ರಾಹ್ಮೀ, ಮಂಡೂಕಪರ್ಣೀ, ಕಪೋತವಂಕಾ,ಸೋಮವಲ್ಲೀ, ಹಿಂದಿ-ಕೊಂಕಣಿಯಲ್ಲಿ ಏಕಪಾನಿ ಎಂದು ಕರೆಯಲ್ಪಡುವ ಅದ್ಭುತ ಮದ್ದಿನ ಗುಣಗಳುಳ್ಳ ಕನ್ನಡದಲ್ಲಿ ಒಂದೆಲಗ ಎಂದೇ ಕರೆಯಲ್ಪಡುವ ಒಂದೇ ಎಲೆ ಹೊಂದಿರುವ ವಾರ್ಷಿಕ ಸಸ್ಯವಿದು. ಅಚ್ಚರಿಯೇನು ಗೊತ್ತಾ? ನೆನಪಿನ ಶಕ್ತಿಯನ್ನು ಉದ್ದೀಪನಗೊಳಿಸಬಲ್ಲ ಇದರ ಎಲೆಯ ಆಕಾರ ಮೆದುಳಿನ ರೀತಿಯೇ! ಗ್ರಹಣಶಕ್ತಿಯನ್ನು ಜಾಸ್ತಿ ಮಾಡಬಲ್ಲ ಇದು ಮೆದುಳಿನ ಟಾನಿಕ್ಕೇ ಸರಿ.

ಇದರ ಎಲೆಯನ್ನು ದಂಟು ಸಮೇತ ನಲವತ್ತೆಂಟು ದಿನಗಳ ಸೇವಿಸಿದರೆ ಒಳ್ಳೆಯದು. ಇದರ ಸೇವನೆಯಿಂದ ದೇಹದಾರ್ಢ್ಯತೆ ಹೆಚ್ಚುತ್ತದೆ. ಸೊಂಟ ನೋವು, ಬೆನ್ನು ಹುರಿ, ಕುತ್ತಿಗೆ ನೋವಿಗೆ ರಾಮಬಾಣ! ಸೇವಿಸಿದರೆ ನಿಮ್ಮ ರಾಗವೂ ಉತ್ತಮಗೊಳ್ಳುವುದು. ಗರ್ಭಿಣಿಯರು ಸೇವಿಸಿದಲ್ಲಿ ಅವರ ದೇಹದಾರ್ಢ್ಯತೆ ಹೆಚ್ಚುವುದರೊಂದಿಗೆ ಹುಟ್ಟುವ ಮಗುವೂ ಬುದ್ಧಿವಂತನಾಗುತ್ತದೆ. ಅದರಿಂದಾಗಿಯೇ ಸರಸ್ವತೀ ಎಂಬ ಹೆಸರೂ ಇದಕ್ಕಿದೆ. ಸಾರಸ್ವತಾರಿಷ್ಟ ಇದರದ್ದೇ ಉತ್ಪನ್ನ. ಇದನ್ನು ನೆಲ್ಲಿಕಾಯಿಯೊಂದಿಗೆ ಸೇರಿಸಿ ತಯಾರಿಸಿದ ತೈಲ ತಲೆಗೆ ಹಚ್ಚಿಕೊಂಡರೆ ಸೊಂಪಾದ ತಲೆಕೂದಲು, ಸುಖನಿದ್ದೆ ನಿಮ್ಮದ್ದು! ಬ್ರಾಹ್ಮೀಯಿಂದ ತಯಾರಿಸಲ್ಪಟ್ಟ ಬಗೆಬಗೆಯ ತೈಲ, ಅರಿಷ್ಟಗಳು ಲಭ್ಯವಿವೆ. ಜಲಬ್ರಾಹ್ಮೀ ಎನ್ನುವ ಇನ್ನೊಂದು ಪ್ರಭೇದವೂ ಇದೆ.

ಹಾಂ ಇಷ್ಟು ಹೇಳಿದ ಮೇಲೆ ಅಡುಗೆಯ ಬಗ್ಗೆ ಹೇಳಲೇಬೇಕಲ್ವೇ. ತುಳುನಾಡ ಬ್ರಾಹ್ಮಣರನ್ನು ಕೇಳಿನೋಡಿ...ಶ್ರಾದ್ಧದ ದಿನದ ಭೋಜನದಲ್ಲಿ "ತಿಮರೆಯ ಚಟ್ನಿ"ಗೆ ಮೊದಲ ಪ್ರಾಶಸ್ತ್ಯ! ಹಾಂ ಪುಳಿಚಾರು ಎಂದು ಜರೆಯುವವರಿಗೆ ಇದರ ರುಚಿ ಖಂಡಿತಾ ತಿಳಿಯದು! ಇದರ ತಂಬುಳಿಯೂ ರುಚಿಕರ.
>>ಜ್ಞಾನಕಾರಕ
>> ಕಫ,ಪಿತ್ತ ದೋಷ ನಿವಾರಕ
>>ಚರ್ಮರೋಗ ವಿನಾಶಕ
>>ಅಪಸ್ಮಾರವಿದ್ದಲ್ಲಿ ಇದರ ಸೇವನೆ ಒಳ್ಳೆಯದು
>>ಅಜೀರ್ಣನಾಶಕ
>>ಹೃದ್ರೋಗ, ಶ್ವಾಸಕೋಶದ ತೊಂದರೆ, ಮಧುಮೇಹವನ್ನು ಹೋಗಲಾಡಿಸಲು ಸಹಕಾರಿ.
>>ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಸಹಕಾರಿ

ಸೂರ್ಯೋದಯಕ್ಕೂ ಮುನ್ನ ಹುಟ್ಟುಡುಗೆಯಲ್ಲಿ ಬ್ರಾಹ್ಮಿ ಸಸ್ಯವು ಬೆಳೆದ ಸ್ಥಳಕ್ಕೆ ದೀಪ ಉಪಯೋಗಿಸದೇ ನಡೆದು ಹೋಗಿ, ಒಂದು ಬ್ರಾಹ್ಮಿ ಗಿಡವನ್ನು ಸಮೂಲವಾಗಿ ತನ್ನ ಹಲ್ಲಿನಿಂದಲೇ ಕಿತ್ತು, ಅಗಿದು ನುಂಗಿ, ತನ್ನ ವಾಸಸ್ಥಾನಕ್ಕೆ ವಾಪಸಾಗಿ, ಬೆಳಗಾಗುವ ತನಕ ಬ್ರಾಹ್ಮೀ ಜಪವನ್ನು ಮಾಡಿದವನಿಗೆ ಬ್ರಾಹ್ಮೀ ಸಿದ್ಧಿಯಾಗುವುದೆಂಬ ಪ್ರತೀತಿಯೂ ಇದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ