ಪುಟಗಳು

ಮಂಗಳವಾರ, ಅಕ್ಟೋಬರ್ 20, 2015

ಮುರುಗನ_ಹುಳಿ

#ನಾಸ್ತಿಮೂಲಮನೌಷಧಮ್
#ಮುರುಗನ_ಹುಳಿ

ಬಾಯಲ್ಲಿ ನೀರೂರಿಸುವ ಸುಂದರ ಕೆಂಪನೆ ಹಣ್ಣುಗಳು, ಯಾವುದೇ ರೋಗವಿಲ್ಲದೆ, ಪೋಷಣೆಯ ಅಗತ್ಯವಿಲ್ಲದೆ ಪಶ್ಚಿಮ ಘಟ್ಟಗಳ ತಳದಲ್ಲಿ ಬೆಳೆವ ಮರ. ಅದೇ ಮಾರಾಯರ್ರೇ... ಪುನರ್ ಪುಳಿ! ಬಹುಷಃ ಪುನರ್ ಪುಳಿ ಗೊತ್ತಿಲ್ಲದ ಕರಾವಳಿಗ-ಮಲೆನಾಡಿಗನಿರಲಿಕ್ಕಿಲ್ಲ. ಸಿಪ್ಪೆಯನ್ನು ಹಿಂಡಿ ಮಾಡುವ ಶರಬತ್ತು ಸೂಪರ್! ಸಿಪ್ಪೆಯನ್ನು ಒಣಗಿಸಿ ಬಹುಕಾಲದವರೆಗೆ ಶರಬತ್ತು ಅಥವಾ ಸಾರು ಮಾಡಲು ಉಪಯೋಗಿಸಬಹುದು. ಇದರೊಳಗಿನ ಲೋಳೆ, ಸಿಪ್ಪೆ ಮನುಷ್ಯನ ಬೊಜ್ಜನ್ನು ಕರಗಿಸುತ್ತವೆ. ಬೀಜವನ್ನೊಣಗಿಸಿ ಬಿಸಿ ಮಾಡಿ ಎಣ್ಣೆಯನ್ನು ತಯಾರಿಸಬಹುದು. ಬೆಂಕಿ ತಾಗಿದ ಗಾಯಕ್ಕೆ ಈ ಎಣ್ಣೆ ಹಚ್ಚಿದರೆ ಕಲೆಯೂ ಉಳಿಯದಂತೆ ವಾಸಿ ಮಾಡುತ್ತದೆ.

ಇದರ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಹಿತ್ತಾಳೆ, ತಾಮ್ರ, ಚಿನ್ನ, ಬೆಳ್ಳಿಯ ವಸ್ತುಗಳನ್ನು ತೊಳೆದರೆ ಅವು ಮಿರಿ ಮಿರಿ ಮಿಂಚುತ್ತವೆ. ಕರಾವಳಿಯಲ್ಲಿ ಬಿರಿಂಡ ಎಂದು ಸಿಗುತ್ತಿದ್ದ ಶರಬತ್ತು ಇದರದ್ದೇ! ತುಳುವಿನಲ್ಲಿ ಪುನರ್ ಪುಳಿ, ಮಲೆಯಾಳದಲ್ಲಿ ಪಣಂಪುಳಿ, ಹಿಂದಿಯಲ್ಲಿ ಕೋಕಮ್, ಸಂಸ್ಕೃತದಲ್ಲಿ ವೃಕ್ಷಾಮ್ಲ, ಕನ್ನಡದಲ್ಲಿ ಮುರುಗಲ, ಮುರುಗನ ಹುಳಿ ಎನ್ನುವ ಹೆಸರುಗಳು ಇದಕ್ಕೆ! ಒಂದು ಲೊಟ ಬಿಸಿ ನೀರಿಗೆ ಕಡಲೆ ಕಾಳಿನಷ್ಟು ಎಣ್ಣೆ ಹಾಕಿ ಕುಡಿದರೆ ಆಮಶಂಕೆಗೆ ಔಷಧಿ. ಮರದ ತೊಗಟೆಯ ತಣ್ಣನೆ ಕಷಾಯದಿಂದ ಪಾರ್ಶ್ವವಾಯು ಆದ ಜಾಗಕ್ಕೆ ಹಚ್ಚಿದರೆ ಶಮನವಾಗುತ್ತದೆ.

ಹಣ್ಣಿಗೆ ಜಂತುಹುಳು ನಿವಾರಕ ಮತ್ತು ಹೃದಯೋತ್ತೇಜಕ ಗುಣಗಳಿವೆ. ಪುನರ್ ಪುಳಿ ಪಿತ್ತನಿವಾರಕ. ಇದನ್ನು ಮೂಲವ್ಯಾಧಿ, ರಕ್ತಭೇದಿ, ಹೃದ್ರೋಗಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ. ಇದರ  ಬೇರುಗಳಿಗೆ ಸ್ಥಂಭಕ ಗುಣವಿದೆ. ಬೀಜಗಳಲ್ಲಿ ಶೇ. 44ರಷ್ಟು ಜಿಡ್ಡಿನಂಶವಿರುತ್ತದೆ. ಇದನ್ನು ಮುರುಗಲ ಬೆಣ್ಣೆ ಎಂದು ಕರೆಯುತ್ತಾರೆ.

ಕೋಲಾ ಬಿಡಿ, ಕೋಕಂ ಕುಡಿಯಿರಿ...ದೇಹಕ್ಕೂ ಒಳ್ಳೆಯದು...ದೇಶಕ್ಕೂ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ