ಪುಟಗಳು

ಗುರುವಾರ, ನವೆಂಬರ್ 5, 2015

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

ಐಸಿಸ್ ಮರಣ ಮೃದಂಗ-ಶೀತಲ ಸಮರಂಗ!

             ಶತಮಾನದ ಹಿಂದೆ ಜಗತ್ತಿನ ಜೀವ ಹಿಂಡಿದ "ಖಿಲಾಪತ್" ಮತ್ತೆ ಮುನ್ನೆಲೆಗೆ ಬಂದಿದೆ. ಮುಸ್ಲಿಮ್ ಜಗತ್ತಿನ ತಲೆಗೆ ಅಡರಿದ ಮತಾಂಧತೆಯ ಮರುಳು ಜಗತ್ತನ್ನೇ ಆಪೋಶನ ತೆಗೆದುಕೊಳ್ಳುವುದು ಹೊಸದಲ್ಲವಾದರೂ ಈ "ಐಸಿಸ್" ಎಂಬ ಜಿಹಾದೀ ಗುಂಪು ವಿಶ್ವವನ್ನು ವೇಗವಾಗಿ ಮುಸ್ಲಿಂಮಯವನ್ನಾಗಿಸುತ್ತಾ, ಒಪ್ಪದವರನ್ನು ತರಿಯುತ್ತಾ, ಜನಸಮೂಹಗಳನ್ನೇ ತನ್ನ ಸಂಘಟನೆಗೆ ಸೇರಿಸಿಕೊಳ್ಳುತ್ತಾ ಸಾಗಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ತಮ್ಮ ಪಂಥಕ್ಕೆ ಸೇರಲೊಪ್ಪದವರನ್ನು ಅಮಾನುಷವಾಗಿ ಚಿತ್ರಹಿಂಸೆ ಕೊಟ್ಟು, ಹಸುಳೆ-ಮಹಿಳೆ ಎನ್ನದೆ ಎಲ್ಲರನ್ನೂ ಬಗೆಬಗೆಯ ರೀತಿಯಲ್ಲಿ ಕೊಲ್ಲುತ್ತಾ, ಕೊಂದ ರೀತಿಯನ್ನು ಚಿತ್ರೀಕರಣ ಮಾಡಿ ಅಂತರ್ಜಾಲಕ್ಕೇರಿಸಿ ವಿಕೃತ ಆನಂದ ಪಡುತ್ತಾ ಮನುಷ್ಯ-ಪ್ರಾಣಿ ಎನ್ನದೆ ಎಲ್ಲರ ಮೇಲೂ ಅತ್ಯಾಚಾರವೆಸಗಿ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾ ಭೀಬತ್ಸವಾಗಿ ವರ್ತಿಸುತ್ತಿರುವ ಈ ಮತಾಂಧರ ಉನ್ಮಾದಕ್ಕೆ ದೇಶಗಳೆಲ್ಲಾ ಬೆದರಿ ಹೋಗಿವೆ.

               ಒಸಾಮಾ ಬಿನ್ ಲಾಡೆನ್ನನ ಅವಸಾನದ ತರುವಾಯ ಅವನ ಬಲಗೈ ಬಂಟರಾಗಿದ್ದ ಅಬೂಬಕರ್ ಅಲ್ ಬಾಗ್ದಾದಿ ಹಾಗೂ ಆಲ್ ಜವಾಹಿರಿ ಬದ್ಧ ವಿರೋಧಿಗಳಾಗಿಬಿಟ್ಟರು. ಇದರಿಂದಾಗಿ ಅಲ್ಕೈದಾದ ಅಳಿದುಳಿದ ಸಾಮರ್ಥ್ಯವೂ ಕುಗ್ಗಿಹೋಯಿತು. ಈ ಸಂಘರ್ಷ ಬಾಗ್ದಾದಿ ಆಲ್ ಕೈದಾದಿಂದ ದೂರನಾಗಿ ಪ್ರತ್ಯೇಕ ಸಂಘಟನೆ ಹುಟ್ಟುಹಾಕುವಲ್ಲಿವರೆಗೆ ಮುಟ್ಟಿತು. ಹಾಗೆ ರೂಪುಗೊಂಡ ಸಂಘಟನೆಯೇ ಐಸಿಸ್! ಬಾಗ್ದಾದಿ ನೇತೃತ್ವದಲ್ಲಿ ಐಸಿಸ್ ಅದ್ಭುತವಾಗಿ, ವೃತ್ತಿಪರವಾಗಿ ಹೋರಾಡುತ್ತಾ ಇರಾಕಿನ ಹಲವು ಪ್ರದೇಶಗಳು, ಸಿರಿಯದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿತು. ಪರಿಣಾಮವಾಗಿ ಭೂಪ್ರದೇಶಗಳ ಜೊತೆ ಅಪಾರಪ್ರಮಾಣದ ತೈಲ ಸಂಪತ್ತು, ಹಣ, ಶಸ್ತ್ರಾಸ್ತ್ರಗಳು ಐಸಿಸ್ ಕೈಸೇರಿದವು. ಐಸಿಸ್ನ ದಾಳಿ ಮುಂದುವರೆಯುತ್ತಲೇ ಇದ್ದು, ಉತ್ತರ ಮತ್ತು ಪೂರ್ವ ಇರಾಕಿನ ಪಟ್ಟಣಗಳು ಹಾಗೂ ತೈಲಬಾವಿಗಳು ಅದರ ವಶವಾಗುತ್ತಲೇ ಇವೆ. ಕುರ್ದಿಶ್ ಪ್ರದೇಶಕ್ಕೆ ಅದರ ಬೆದರಿಕೆ ಎದುರಾಗಿದೆ. ಜಗತ್ತಿನ ಇತರ ಜಿಹಾದಿ ಗುಂಪುಗಳು ಐಸಿಸ್ನಿಂದ ಉತ್ತೇಜಿತರಾಗಿ ಬಗ್ದಾದಿಗೆ ಉಘೇ ಎನ್ನುತ್ತಾ ತಮ್ಮ "ನಿಷ್ಠೆ" ಪ್ರಕಟಿಸಿವೆ. ಈ ಎಲ್ಲಾ ಯಶಸ್ಸಿನಿಂದ ಉತ್ಸಾಹಗೊಂಡ ಅದರ ನಾಯಕ ಅಬೂಬಕರ್ ಆಲ್ ಬಗ್ದಾದಿ ತನ್ನನ್ನು ತಾನು ಖಲೀಫ ಎಂದೂ, ತಾನು ಖಲೀಫ್ ರಾಜ್ಯವನ್ನು ಸ್ಥಾಪಿಸಿರುವುದಾಗಿಯೂ ಘೋಷಿಸಿದ. ಇವತ್ತು ಐಸಿಸ್ ಜಗತ್ತಿನ ಅತ್ಯಂತ ಶ್ರೀಮಂತ ಜಿಹಾದಿ ಭಯೋತ್ಪಾದಕ ಸಂಘಟನೆ. ಬಾಗ್ದಾದಿಯ ಈ ಐಸಿಸ್ ಎದುರು ಅಲ್ಕೈದಾದಂತಹ ಭಯೋತ್ಪಾದಕ ಸಂಘಟನೆಯೇ ಮಂಕಾಗಿ ಬಿಟ್ಟಿದೆ. ಐಸಿಸ್ ಹಿಂದೊಮ್ಮೆ ತನ್ನ ಧಣಿಯಾಗಿದ್ದ ಆಲ್ ಕೈದಾವನ್ನು ಹಿಂದಿಕ್ಕಿ ಜಾಗತಿಕ ಜಿಹಾದಿನ ನಾಯಕನಾದುದಲ್ಲದೆ ತನ್ನದೇ ಸರಕಾರವನ್ನು ರಚಿಸಿ ಷರೀಯತ್ ಕಾನೂನಿನಡಿಯಲ್ಲಿ  ಆಡಳಿತವನ್ನೂ ಆರಂಭಿಸಿದೆ. ಹೀಗೆ ಈ ಜಿಹಾದೀ ಸಂಘಟನೆ ರಾತ್ರಿ ಬೆಳಗಾಗುವುದರೊಳಗೆ ಇಸ್ಲಾಮಿಕ್ ರಾಜ್ಯ ಎನ್ನುವ ಹೆಸರನ್ನು ಗಳಿಸಿಕೊಂಡಿತು.

            ಖಲೀಫ್ ರಾಜ್ಯದಲ್ಲಿ ವಹಾಬಿ ಸಿದ್ಧಾಂತದ ಅನುಸಾರ ಶರೀಯತ್ ಶಾಸನವನ್ನು ಹೇರಲಾಗಿದೆ. ಸಿರಿಯಾದ ಪಟ್ಟಣ ರಖಾ ಅಧಿಕಾರದ ಕೇಂದ್ರಸ್ಥಾನವಾಗಿದ್ದು, ಖಲೀಫ್ ಈಗಾಗಲೇ ಆದೇಶಗಳನ್ನು ಹೊರಡಿಸುತ್ತಿದ್ದಾನೆ. ಆತನ ಸಂದೇಶ ಇಷ್ಟೇ: "ಸುನ್ನಿಗಳಾಗಿ ಅಥವಾ ಮಣ್ಣಾಗಲು ಸಿದ್ಧರಾಗಿ!".  ಎಲ್ಲಾ ಮುಸ್ಲಿಮರು ತನ್ನಲ್ಲಿ ನಿಷ್ಠೆಯನ್ನು ಪ್ರಕಟಿಸಬೇಕೆಂದು ಅಬೂಬಕರ್ ಅಲ್ ಬಗ್ದಾದಿ ಯಾನೆ ಖಲೀಫ್ ಇಬ್ರಾಹಿಮ್ ಕರೆ ನೀಡಿದ್ದಾನೆ; ಜಗತ್ತಿನ ಎಲ್ಲಾ ಮುಸ್ಲಿಮರಿಗೆ ತಾನೇ ಖಲೀಫ್ ಹಾಗೂ ಇಮಾಮ್ ಎನ್ನುತ್ತಿದ್ದಾನೆ. ಇದು ಇತರ ಅರೇಬಿಯನ್ ಆಳರಸರಲ್ಲಿ ಭಯ ಹುಟ್ಟಿಸಿದೆ. ತಾನು ಗೆದ್ದ ಪ್ರದೇಶದಲ್ಲಿ ಐಸಿಸ್ ಅನ್ಯ ಮತೀಯರ/ಪಂಥೀಯರ ಮೇಲೆ ಜಿಜಿಯಾ ವಿಧಿಸಿದೆ. ಈ ಸುನ್ನಿ ಜಿಹಾದಿಗಳ ವಿರುದ್ಧ ಹೋರಾಡಲು ಸುನ್ನಿ ಸೈನಿಕರು ನಿರಾಕರಿಸುತ್ತಿದ್ದಾರೆ.  ಐಸಿಸ್ ಭೀತಿಯಿಂದ ಲಕ್ಷಾಂತರ ಜನ ತಮ್ಮ ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಇರಾಕಿ ಮಹಿಳೆಯರ ವಿರುದ್ಧ ಖಲಿಫೇಟ್ ಹೊರಡಿಸಿದ ಆದೇಶದಲ್ಲಿ ಸ್ತ್ರೀ ಜನನಾಂಗವನ್ನು ಊನಗೊಳಿಸುವುದು, ಪೂರ್ಣ ಬುರ್ಖಾ ಧರಿಸುವುದು ಮತ್ತು ಸುಗಂಧದ್ರವ್ಯಗಳ ನಿಷೇಧ ಮುಂತಾದುವು ಸೇರಿವೆ. ಪ್ರಸಿದ್ಧ ವ್ಯಕ್ತಿಗಳ ಶಿಲ್ಪಗಳನ್ನು ಮತ್ತು ಪವಿತ್ರ ತಾಣಗಳನ್ನು ಧ್ವಂಸಗೊಳಿಸಲಾಗಿದೆ. ಪ್ರತೀ ಹತ್ಯೆಯನ್ನೂ ಬಗೆಬಗೆಯ ರೀತಿಯಲ್ಲಿ ಮಾಡುತ್ತಾ ಅವುಗಳನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮ ತಾಣಗಳಿಗೆ ಅವುಗಳನ್ನು ರವಾನಿಸಿದ್ದಾರೆ ಈ ರಕ್ಕಸರು. ಅವರ ಸಿದ್ಧಾಂತಗಳನ್ನು ಒಪ್ಪದಿರುವವರಿಗೆ ಖಲೀಫ್ ರಾಜ್ಯದಲ್ಲಿ ಜಾಗವಿಲ್ಲ. ಸಾವಿರಾರು ಯಾಜಿದಿಗಳನ್ನು ಹತ್ಯೆ ಮಾಡಿದ ಈ ಮತಾಂಧರು ಯಾಜಿದಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಿರಿಯಕ್ಕೆ ಸಾಗಿಸಿದರು. ಅವರನ್ನು ಬಲಾತ್ಕಾರವಾಗಿ ಮತಾಂತರಿಸಿ ತಮ್ಮ ಸಿದ್ಧಾಂತವನ್ನೊಪ್ಪುವವರಿಗೆ ಮಾರಾಟ ಮಾಡಿದರು.

              ಐಸಿಸ್ ಉಗ್ರರು ತಮ್ಮದೇ ಆದ ಹೊಸ ಕರೆನ್ಸಿಯನ್ನು ಸೃಷ್ಟಿಸಿದ್ದಾರೆ. ಅದೂ ಚಿನ್ನದ ನಾಣ್ಯಗಳ ಮೂಲಕ!  ಚಿನ್ನದ ದಿನಾರ್, ಬೆಳ್ಳಿ ದಿರ್ಹಾಮ್ಸ್, ತಾಮ್ರದ ನಾಣ್ಯಗಳನ್ನು ಐಸಿಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಒಂದು ದಿನಾರ್ ಚಿನ್ನದ ನಾಣ್ಯವು 4.25 ಗ್ರಾಂ ತೂಕವಿದ್ದು, 21 ಕ್ಯಾರೆಟ್ ಶುದ್ಧತೆ ಹೊಂದಿದೆ. ಹಾಗೆಯೇ ದಿರ್ಹಾಮ್ ಬೆಳ್ಳಿ ನಾಣ್ಯವು 2 ಗ್ರಾಂ ತೂಕದ್ದಾಗಿದೆ. ತಾಮ್ರದ ನಾಣ್ಯವು 20 ಗ್ರಾಂ ತೂಕವಿದೆ. ಯಾವೆಲ್ಲಾ ದೇಶಗಳನ್ನು ‘ಪೂರ್ತಿ ಇಸ್ಲಾಮೀಕರಣ’ ಮಾಡಬೇಕೆಂದು ಬಗ್ದಾದಿ ತನ್ನ ಮುಂದಿನ ಯೋಜನೆಯನ್ನೇ ಪ್ರಕಟಿಸಿದ್ದಾನೆ.  ಇಸ್ಲಾಮಿಕ್ ರಾಜ್ಯದ ಪ್ರಕಾರ ಯಾವೆಲ್ಲ ದೇಶಗಳು ಇಸ್ಲಾಮಿನ ಶತ್ರುಗಳೆಂದು ಹೊಸ್ ಖಲೀಫ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದಾನೆ. ಅದರಲ್ಲಿ ಭಾರತದ ಹೆಸರೂ ಇದೆ. ಈ ದೇಶಗಳ ಮುಸ್ಲಿಮರು ದಂಗೆಯೆದ್ದು, ತಮ್ಮ ದೇಶಗಳ ವಿರುದ್ಧ ಜಿಹಾದ್ ನಡೆಸಬೇಕೆಂದು ಆತ ಆದೇಶ ಹೊರಡಿಸಿದ್ದಾನೆ!

               ಕೆಲವು ತಿಂಗಳ ಹಿಂದೆ ಲಿಬಿಯಾ ಬೀಚ್ ನಲ್ಲಿ 21 ಈಜಿಪ್ಟ್ ಕ್ರಿಶ್ಚಿಯನ್ ರನ್ನು ಐಸಿಸ್ ಉಗ್ರರು ಶಿರಚ್ಛೇದಮಾಡಿದ್ದರು. ಇತ್ತೀಚೆಗೆ ಇಥಿಯೋಪಿಯಾದ ಹಲವು ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಬಿಡುಗಡೆ ಮಾಡಿದ್ದಾರೆ. ಸಿಕ್ಕ ಮಹಿಳೆಯರನ್ನು ಅತ್ಯಾಚಾರ ಮಾಡುವುದಲ್ಲದೆ ಅವರನ್ನು ಭಯೋತ್ಪಾದನಾ ಚಟುವಟಿಕೆಗೂ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಜೊತೆ ಸಂಭೋಗ ನಡೆಸಲು ನಿರಾಕರಿಸಿದ ಮಹಿಳೆಯರನ್ನು ಹತ್ಯೆ ಮಾಡುತ್ತಾರೆ. ಐಸಿಸ್ ಉಗ್ರರು, ಕಳ್ಳಮಾರ್ಗದಲ್ಲಿ ತೈಲ ಮಾರಾಟ, ಸುಲಿಗೆ, ಮಾನವ ಕಳ್ಳಸಾಗಣೆ ಮೂಲಕ ಭಾರೀ ಹಣ ಸಂಪಾದಿಸುತ್ತಿದ್ದಾರೆ. ಅವರು ಜನರ ಮಾರಣಹೋಮ ಮಾಡುವುದರ ಜೊತೆಗೆ ಐತಿಹಾಸಿಕ ನಗರಗಳಲ್ಲಿರುವ ಕಲಾಕೃತಿಗಳನ್ನು ಕೂಡ ನಾಶ ಪಡಿಸುತ್ತಿದ್ದಾರೆ. ಪಾಲ್ಮೈರಾ ಸಿರಿಯಾದ ಪುರಾತನ ನಗರ. ಅಲ್ಲಿಯ ಬಾಲ್-ಶಮೀನ್ ದೇವಸ್ಥಾನ ಒಂದನೇ ಶತಮಾನದ್ದು. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ತಾಣವದು. ಆ ದೇವಾಲಯವನ್ನು ನಾಶ ಪಡಿಸಿದ ಉಗ್ರರು 2000 ವರ್ಷಗಳ ಐತಿಹಾಸಿಕ ಸಿಂಹದ ಪ್ರತಿಮೆಯನ್ನು ತುಂಡರಿಸಿದರು. ಇರಾಕ್, ಸಿರಿಯಾಗಳಲ್ಲಿನ ಪ್ರಾಚೀನ ತಾಣಗಳ ನಿರ್ವಹಣೆಯ ಒಪ್ಪಂದಕ್ಕೆ ಯುನಿಸ್ಕೋ ಸಹಿ ಹಾಕಿದ ಬೆನ್ನಲ್ಲೇ ಉಗ್ರರು ಪ್ರಾಚೀನ ಕಲಾಕೃತಿಗಳನ್ನು ನಾಶ ಮಾಡಿದ್ದಾರೆ. ಅನ್ಯ ದೇಶೀಯರನ್ನು ಅಪಹರಣ ಮಾಡುವ ಐಸಿಸ್ ಅವರ ಬಿಡುಗಡೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದೆ. ಐಸಿಸ್ ಈಗಾಗಲೇ ಸಿರಿಯಾದ ಶೇ.40ರಷ್ಟು ಭಾಗವನ್ನು ಆಕ್ರಮಿಸಿದೆ.

              ಇಸ್ಲಾಂ ರಾಜ್ಯ ಸ್ಥಾಪನೆ ಹೆಸರಿನಲ್ಲಿ ನರಕ ಸೃಷ್ಟಿಸುತ್ತಿರುವ ಐಎಸ್ಐಎಸ್ ಉಗ್ರರು ಪಾಶ್ಚಾತ್ಯ ದೇಶಗಳ ಪ್ರಜೆಗಳೆಲ್ಲರನ್ನೂ ಗುರಿಯಾಗಿಸಿ ಯೋಜನೆ ರೂಪಿಸುತ್ತಿದ್ದಾರೆ. ಇರಾಕಿನ ಮೊಸೂಲ್ ಪ್ರದೇಶದಲ್ಲಿ ಐಸಿಸ್ ಭಯೋತ್ಪಾದಕರೊಂದಿಗೆ ಹತ್ತು ದಿನವಿದ್ದು, ಅವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಅವರ ಯೋಜನೆಗಳ ಬಗ್ಗೆ ತಿಳಿದುಕೊಂಡ ಮಾಜಿ ಜರ್ಮನ್ ಸಂಸದ, ಪತ್ರಕರ್ತ ಜೂರ್ಜೆನ್ ಟೋಡೆನ್ ಬಹಿರಂಗಪಡಿಸಿದ ವಿಷಯಗಳು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಮತಾಂಧರು ಖಲೀಫಾ ರಾಜ್ಯ ಸ್ಥಾಪನೆ ಗುರಿಯೊಂದಿಗೆ ಹಿಂದುಗಳು, ವಿಗ್ರಹಾರಾಧಕರು, ನಾಸ್ತಿಕರು, ಶಿಯಾ ಮುಸ್ಲಿಮರನ್ನು ಹತ್ಯೆ ಮಾಡಲು ವ್ಯೂಹ ರಚಿಸುತ್ತಿದ್ದಾರೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಲು ಅವರು ಸಿದ್ದ. ಅಣ್ವಸ್ತ್ರಗಳನ್ನು ಉಪಯೋಗಿಸಲೂ ಅವರು ಹಿಂಜರಿಯಲಾರರು. 50 ಕೋಟಿ ಜನರನ್ನು ಕೊಲ್ಲಲು ಐಸಿಸ್ ಯೋಜನೆ ರೂಪಿಸುತ್ತಿದೆ. ಅಣು ಸುನಾಮಿ ಮೂಲಕ ವಿಶ್ವವನ್ನೇ ಹೆಣಗಳ ರಾಶಿಯಾಗಿಸುವುದೇ ಅವರ ಗುರಿ ಎಂದು ಟೋಡೆನ್ ಸಂದರ್ಶನದಲ್ಲಿ ಈ ರಾಕ್ಷಸರ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ.

             ಸಿರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಐಸಿಸ್ ಹಿಡಿತ ಸಾಧಿಸುತ್ತಿದ್ದಂತೆ ಎಲ್ಲರ ಮನದಲ್ಲಿ ಪ್ರಶ್ನೆಯೊಂದು ಮೂಡಿದೆ.  ಒಬ್ಬ ವ್ಯಕ್ತಿ ಹಾಗೂ ಆತ ಕಟ್ಟಿದ ಸೇನೆ ಇಡೀ ಜಗತ್ತನ್ನು ಅಲ್ಲಾಡಿಸುತ್ತಿದೆಯೆಂದರೆ ಅದು ಸಾಮಾನ್ಯ ಸಂಗತಿಯೇನು? ಬಲಾಢ್ಯ ಶಕ್ತಿಯೊಂದರ ಸಹಕಾರವಿಲ್ಲದೆ ಒಬ್ಬ ವ್ಯಕ್ತಿಗೆ ಅಂಥ ತಾಕತ್ತು ಬರುವುದು ಹೇಗೆ? ಆತನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವವರಾರು? ಈ ಭಯೋತ್ಪಾದನಾ ಹಾವಳಿಯ ಹಿಂದೆ ಯಾರಿದ್ದಾರೆ? ಪ್ಯಾಲೆಸ್ತೈನನ್ನು ಸ್ವತಂತ್ರಗೊಳಿಸುವ ಜತೆಗೆ ಅಲ್ಲಿ ಮುಸ್ಲಿಂ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ರೂಪುಗೊಂಡಿರುವ ಹಮಾಸ್ ಸಂಘಟನೆಯ ಶಕ್ತಿ ಕುಂದಿಸಲು ಮುಸ್ಲಿಮ್ ರಾಷ್ಟ್ರಗಳನ್ನು ಒಡೆದು ತನ್ಮೂಲಕ ಕಚ್ಚಾ ತೈಲ ಸಂಪತ್ತಿನ ಮೂಲಕ ಅವು ಸಂಪಾದಿಸಿಕೊಂಡಿರುವ ಆರ್ಥಿಕ ಬಲವನ್ನು ತಗ್ಗಿಸಲು ಅಮೇರಿಕಾ ಹಾಗೂ ಅದರ ಮಿತ್ರ ರಾಷ್ಟ್ರಗಳು ಯೋಜನೆ ರೂಪಿಸಿದವು. ಅದರಂತೆ ಸಿರಿಯಾದಲ್ಲಿರುವ ಪ್ರತ್ಯೇಕತಾವಾದಿಗಳ ಕೈಗೆ ಶಸ್ತ್ರಾಸ್ತ್ರಗಳನ್ನು ನೀಡುವ ಮೂಲಕ ಖಿಲಾಫತ್ ಚಳವಳಿಗೆ ಬೆಂಬಲ ನೀಡಿತು ಅಮೇರಿಕಾ. ಮೇಲ್ನೋಟಕ್ಕೆ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳು ಇದನ್ನು ನಿರಾಕರಿಸಿದರೂ ಮುಸ್ಲಿಂ ರಾಷ್ಟ್ರಗಳ ಆಂತರಿಕ ಯುದ್ಧದಿಂದ ಅಮೆರಿಕಕ್ಕೆ ಲಾಭವಾಗುವುದು ಸುಳ್ಳಲ್ಲ. ಇದಕ್ಕೆ ಸರಿಯಾಗಿ ತನ್ನ ವಿರುದ್ಧ ತಿರುಗಿ ಬಿದ್ದಿದ್ದ ಒಸಾಮಾ ಬಿನ್ ಲಾಡೆನ್ನನ್ನು ಮುಗಿಸಿದ ಬಳಿಕ ಅವನ ಶಿಷ್ಯರಾದ ಬಾಗ್ದಾದಿ ಹಾಗೂ ಜವಾಹಿರಿ ಒಬ್ಬರಿಗೊಬ್ಬರು ವಿರೋಧಿಗಳಾಗಿಬಿಟ್ಟರು.

            ಕಚ್ಚಾ ತೈಲ ಸಂಪತ್ತು ಹೊಂದಿರುವ ಮುಸ್ಲಿಂ ರಾಷ್ಟ್ರಗಳನ್ನು ಒಡೆಯಬೇಕಾದರೆ ಪ್ರಬಲ ಅಸ್ತ್ರವೇ ಶಿಯಾ-ಸುನ್ನಿ ವರ್ಗೀಕರಣ! ಐಸಿಸ್ಗೆ ಬೆಂಗಾವಲಾಗಿ ನಿಂತಿರುವವರ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವುದು ಸೌದಿ ಅರೇಬಿಯಾ, ಈಜಿಪ್ಟ್, ಕತಾರ್ ಹಾಗೂ ಅಮೆರಿಕಗಳ ಹೆಸರು! ಸಧ್ಯ ಸಿರಿಯಾ ಅಮೇರಿಕಾದಿಂದ ಯಾವುದೇ ಯುದ್ದ ಉಪಕರಣಗಳನ್ನಾ ಖರೀದಿಸದೆ ಚೈನಾ ಹಾಗೂ ರಷ್ಯಾದ ಯುದ್ದ ಪರಿಕರಗಳನ್ನ ಬಳಸುತ್ತಿದೆ. ವೆನಿಜ಼ುವೆಲಾ, ಕ್ಯೂಬಾ ಮತ್ತು ಅರ್ಜೆಂಟೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಶರ್ ಅಲ್ ಅಸದ್ ಅಮೇರಿಕಾ ವಿರೋಧೀ ನೀತಿ ಅನುಸರಿಸುತ್ತಿದ್ದಾನೆ. 2006ರವರೆಗೆ ವಿದೇಶಿ ವಿನಿಮಯಕ್ಕೆ  ಬಳಸುತ್ತಿದ್ದ ಡಾಲರ್ ಅನ್ನು ಯುರೋಗೆ ಬದಲಾಯಿಸಿದ ಅಸದ್! ಈ ಎಲ್ಲವೂ ಅಮೇರಿಕಾದ ಕಣ್ಣು ಕೆಂಪಗಾಗಿಸಿತ್ತು. ಜೊತೆಗೆ ಅಪಾರ ತೈಲ ಸಾಮ್ರಾಜ್ಯದ ಮೇಲೂ ಅದರ ಕಣ್ಣುಬಿದ್ದಿತ್ತು. ಹೀಗಾಗಿ ಅಸದ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾನೆ, ಆತನನ್ನು ಪದಚ್ಯುತಗೊಳಿಸಬೇಕು ಎನ್ನುವ ನೆಪವೊಡ್ಡಿ ಅಮೇರಿಕಾ ಆಡುತ್ತಿರುವ ಹೂಟ ಇದು. ಇದಕ್ಕೆ ಸರಿಯಾಗಿ ಅಸದ್ ಆಡಳಿತವನ್ನು ವಿರೋಧಿಸುವವರಿಗೆ ಕೋಟ್ಯಂತರ ಡಾಲರ್ ಹಣದ ಸಹಾಯವನ್ನು ತೈಲ ಸಾಮ್ರಾಜ್ಯದ ದೊರೆಗಳು ಒದಗಿಸಿದ್ದಾರೆ. ತನ್ನ ಸಾಮ್ರಾಜ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೌದಿ ಎಂಥ ಅಪಾಯಕಾರಿ ಹೆಜ್ಜೆಯನ್ನೂ ಇಡಬಲ್ಲದು ಎನ್ನುವುದಕ್ಕೆ ಅದು ಐಸಿಸ್ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರಗಳ ಸಹಾಯ ನೀಡುತ್ತಿರುವುದೇ ಸಾಕ್ಷಿ. ಇದಕ್ಕೆ ಟರ್ಕಿಯೂ ಜೊತೆಗೂಡಿದೆ. ಸಿರಿಯಾದಲ್ಲಿ ಸುನ್ನಿ ಪಂಗಡವನ್ನು ಬಲಗೊಳಿಸಿ ಅಸದ್ ನನ್ನು ಕೆಳಗಿಳಿಸುವುದೇ ಇದರ ಉದ್ದೇಶ. ಬಾಗ್ದಾದಿ ಬಳಿ ಸಿಕ್ಕಿರುವ ಶಸ್ತ್ರಾಸ್ತ್ರ ಸೌದಿಯದ್ದು ಎನ್ನುವುದು ಸಾಬೀತಾಗಿದೆ.
ಖಿಲಾಫತ್ ಸ್ಥಾಪನೆಗಾಗಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಬಾಗ್ದಾದಿ ಲಾಡೆನ್ನಿನಂತೆ ತನಗೇ ತಿರುಗಿ ಬೀಳುತ್ತಾನೆ ಎನ್ನುವ ಸತ್ಯ ಗೊತ್ತಿದ್ದೂ ಅಸದ್ ನನ್ನು ಆತ ಹತ್ಯೆಗೈಯುವ ತನಕ ಸುಮ್ಮನುಳಿಯಲು ಯೋಚಿಸಿತ್ತು ಅಮೇರಿಕಾ. ಆದರೆ ಯಾವಾಗ ತಮ್ಮ ಪತ್ರಕರ್ತ ಸ್ಟೀವನ್ ಸೋಟ್ಲೊನನ್ನು ಐಸಿಸ್ ಶಿರಚ್ಛೇದ ಮಾಡಿತೋ ಆಗ ಅಮೇರಿಕಾದ ಜನತೆ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಲಾರಂಭಿಸಿದರು. ಹಾಗಾಗಿ ಅಮೇರಿಕಾ ಯುದ್ಧ ರಂಗಕ್ಕಿಳಿಯಬೇಕಾಯಿತು. ಆದರೆ ಈ ನಿರ್ಧಾರದ ಹಿಂದೆ ಇನ್ನೊಂದು ಕಾರಣವೂ ಇದೆ. ಅತ್ತ ರಷ್ಯಾ ಐಸಿಸ್ ಉಗ್ರರ ನಿರ್ಮೂಲನ ಮಾಡುವುದಾಗಿ ಘೋಷಿಸಿ ಸಮರಾಂಗಣಕ್ಕಿಳಿದಿದೆ. ಅಪಾರ ಯಶಸ್ಸು ಅದರ ಪಾಲಿಗೊದಗಿದೆ. ಜಗತ್ತಿನ ಭೂಪಟದಲ್ಲಿ ತನ್ನ ಅಸ್ತಿತ್ವವನ್ನು ವಿಶ್ವಕ್ಕೆ ಸಾಬೀತು ಮಾಡಿ ದೊಡ್ಡಣ್ಣನಾಗಿ ಮೆರೆಯಲು ಅದು ಪ್ರಯತ್ನಕ್ಕಿಳಿದಿದೆ. ಉಕ್ರೇನ್, ಕ್ರಿಮಿಯಾವನ್ನು ತನ್ನ ತೆಕ್ಕೆಗೆ ಸೇರಿಸಲು ಬಲಪ್ರಯೋಗಿಸಿದಾಗಲೇ ಅದರ ಈ ಇರಾದೆ ಸ್ಪಷ್ಟವಾಗಿತ್ತು. ಒಟ್ಟಾರೆ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿನ ವಿಶ್ವದ ಪ್ರಬಲ ರಾಷ್ಟ್ರಗಳ ನಡುವಿನ ಈ ಶೀತಲ ಸಮರ ಮತಾಂಧರನ್ನು ಹೆಚ್ಚಿಸಿ ಶಾಂತಿಯುತ ದೇಶಗಳಲ್ಲೂ ಗಲಭೆ ಸೃಷ್ಟಿಸಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಳಿಸಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.

ಭಾರತಕ್ಕೇನು ಹಾನಿ?

               ಮತಭ್ರಾಂತಿಯ ಹುಚ್ಚು ಕಳೆದ ಎರಡು ಸಾವಿರ ವರುಷಗಳಲ್ಲಿ ಭಾರತವನ್ನೇ ಛಿದ್ರಗೊಳಿಸಿಬಿಟ್ಟಿದೆ. ಇವತ್ತು ಉಳಿದಿರುವ ಭಾರತದ ಭೂಭಾಗದಲ್ಲೂ ದಿನ ನಿತ್ಯ ಈ ಮತಾಂಧರದ್ದೇ ಅಬ್ಬರ. ಈ ವಿಕ್ಷಿಪ್ತ ಮನಸ್ಥಿತಿಯ ಬೆಳವಣಿಗೆಗೆ ನಮ್ಮಲ್ಲಿನ ಗೋಸುಂಬೆ ನಾಯಕರ 'ಸೆಕ್ಯುಲರಿಸಂ" ಪರಿಕಲ್ಪನೆಯೇ ಕಾರಣ. ಕಳೆದ ಶತಮಾನದ ಆರಂಭದಲ್ಲಿ ಇದೇ "ಖಿಲಾಫತ್" ಭೂತ ಇಲ್ಲಿನ ಹಿಂದೂಗಳನ್ನು ಆಪೋಶನ ತೆಗೆದುಕೊಂಡದ್ದು ಕಡಿಮೆಯೇನು? ಗಾಂಧಿಯೂ ಸೇರಿ ಕಾಂಗ್ರೆಸ್ಸಿನ ನಾಯಕರೆಲ್ಲಾ ಇದೇ ಖಿಲಾಫತಿಗೆ ಬೆಂಬಲ ನೀಡಿದ್ದರಿಂದಲೇ ಅದು ಉಳಿದಿದ್ದ ಭಾರತವನ್ನೂ ತುಂಡರಿಸುವವರೆಗೆ ಬೆಳೆದು ಈಗಲೂ ಕಾಡುತ್ತಿರುವುದು ಸುಳ್ಳಲ್ಲ. ಹಾಗಾಗಿ ಐಸಿಸ್ ಉಗ್ರರು ಎಸಗುತ್ತಿರುವ ಪ್ರತಿಯೊಂದು ಕೃತ್ಯಗಳನ್ನೂ ಕಂಡರಿತಿರುವ ಭಾರತ ಇತಿಹಾಸದ ತಪ್ಪುಗಳು ಪುನಾರವರ್ತನೆಯಾಗದಂತೆ ನೋಡಿಕೊಳ್ಳಬೇಕಿತ್ತು. ಕೇಂದ್ರ ಸರಕಾರವೇನೋ ಕಠಿಣ ನಿಲುವು ತೆಗೆದುಕೊಂಡು ಕಟ್ಟೆಚ್ಚರ ವಹಿಸಿದೆ. ಆದರೆ ರಾಜ್ಯ ಸರಕಾರಗಳು? ಹೀಗೆ ಹೇಳಲೂ ಕಾರಣವಿದೆ. ಐಸಿಸ್ ಪರವಾಗಿ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಮಸೂರ್ ಬಗ್ಗೆ ಬ್ರಿಟನ್ನಿನ ಚಾನಲ್4-ಟಿವಿ ಮಾಹಿತಿ ಪ್ರಸಾರ ಮಾಡಿತ್ತು. ಈ ವರದಿಯನ್ನು ಆಧಾರಿಸಿಕೊಂಡು ಬೆಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. 2014, ಡಿಸೆಂಬರ್ 13ರ ಮುಂಜಾನೆ ಮೆಹದಿಯ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಆದರೆ ಮಸೂರ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನಾ ದಿನವೇ ಆತನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಳ್ಕರರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿತು. ಮಾತ್ರವಲ್ಲ ಖಿಲಾಫತ್ ಪರವಾಗಿರುವ ಮತಾಂಧರಿಗೆ ಇಲ್ಲಿನ ರಾಜ್ಯ ಸರಕಾರವೇ ರಕ್ಷಣೆ ನೀಡುತ್ತಿದೆ. ಕಳೆದರಡು ವರುಷಗಳಲ್ಲಿ ನಡೆದ ಹಿಂದೂಗಳ ಹತ್ಯೆ ಹಾಗೂ ಹತ್ಯೆಗೆ ಕಾರಣವಾದವರ ಬಗ್ಗೆ ಮಾಹಿತಿ ಇದ್ದರೂ ಬಂಧಿಸದೇ ಮೀನ ಮೇಷ ಎಣಿಸುತ್ತಿರುವುದು, ದನಕಳ್ಳ ಮತಾಂಧ ಭಯೋತ್ಪಾದಕರು ಸತ್ತಾಗ ಲಕ್ಷಗಟ್ಟಲೆ ಪರಿಹಾರ ಧನ ನೀಡಿರುವುದೇ ಇದಕ್ಕೆ ನಿದರ್ಶನ! ಸರಕಾರದಿಂದಲೇ ಇಂತಹ ಪ್ರೋತ್ಸಾಹ ಸಿಗುತ್ತಿರುವಾಗ ಬಾಲ್ಯದಲ್ಲೇ ಮೆದುಳು ಬದಲಾಗಿಸಿಕೊಂಡಿರುವ ಈ ಮತಾಂಧರು ಐಸಿಸ್ನಂತಹ ಉಗ್ರ ಸಂಘಟನೆಗಳ ಸೆಳೆತಕ್ಕೊಳಗಾಗದಿರುತ್ತಾರೆಯೇ?

              ಏಪ್ರಿಲ್ 15ರಂದು ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ವಿಚಾರಣೆ ವೇಳೆ  ಈ ಉಗ್ರರಿಗೆ ಐಸಿಸ್ ಜೊತೆಗಿರುವ ನಂಟು ಬೆಳಕಿಗೆ ಬಂತು. ಬಾಂಬ್ ತಯಾರಿಸುವ ರಾಸಾಯನಿಕಗಳನ್ನು ಹೊಂದಿದ್ದ ಆರೋಪದಲ್ಲಿ ಖಾನ್ ಮತ್ತು ಅವನ ನಾಲ್ವರು ಸಹಚರರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಐಸಿಸ್ ಉಗ್ರರಿಗೂ ಭಟ್ಕಳಕ್ಕೂ ನಂಟಿರುವ ಬಗ್ಗೆ ಇಮ್ರಾನ್ ಬಾಯಿ ಬಿಟ್ಟ. ಬಂಧಿತ ಇಮ್ರಾನ್ ಖಾನನನ್ನು ಐಸಿಸ್ ಸಂಘಟನೆಗೆ ಸೇರಿಸಿದ್ದು, ಐಸಿಸ್ನ ಸಕ್ರಿಯ ಕಾರ್ಯಕರ್ತ ಭಟ್ಕಳ ಮೂಲದ ಮಹಮ್ಮದ್ ಶಫಿ ಅರ್ಮರ್! ಗ್ರಾಮೀಣ ಶಿಕ್ಷಣ ಇಲಾಖೆಯ ಗುಮಾಸ್ತರೊಬ್ಬರ ಮಗನಾಗಿರುವ ಇಮ್ರಾನ್ ಖಾನ್ ಉದ್ಯೋಗ ಅರಸಿಕೊಂಡು ಗಲ್ಪ್ ದೇಶಗಳಿಗೆ ಹೋಗಿದ್ದ. ಅಲ್ಲಿ ಅರ್ಮರನ ಸಂಪರ್ಕ ಸಾಧಿಸಿ ಅವನಿಂದ ಬಾಂಬ್ ತಯಾರಿಸುವ ವಿಧಾನವನ್ನು ಕಲಿತಿದ್ದ. ಬಳಿಕ ಶಫಿ ಅರ್ಮರ್ ಅವನನ್ನು ಐಸಿಸ್ಗೆ ಸೇರಿಸಿದ. ಅನಂತರ ವಾಸಿಂ ಖಾನ್, ಮೊಹಮ್ಮದ್ ರಿಜ್ವಾನ್, ಅನ್ವರ್ ಮತ್ತು ಮಝರ್ ಎಂಬವರನ್ನು ಸೇರಿಸಿಕೊಂಡು ಖಾನ್ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಮಾಡಿದ್ದ! ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿಯಾದ ಫಯಾಜ್ ಮಸೂದ್ ಖಾಸಗಿ ಕೆಲಸ ನಿಮಿತ್ತ 2013ರ ಸೆಪ್ಟೆಂಬರಿನಲ್ಲಿ ಕತಾರ್ ಗೆ ತೆರಳಿದ್ದ. ಅಲ್ಲಿಂದ ಸಿರಿಯಾಗೆ ತೆರಳಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಗೊಂಡ. ಶಿವಾಜಿನಗರದ ನಿವಾಸಿ ಉಮರ್ ಸುಬಾನ್ ಯೆಮೆನ್ ನಲ್ಲಿ ಖಾಸಗಿ ಕಂಪನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಈತನೂ 2013ರ ಅಂತ್ಯಕ್ಕೆ ಇರಾಕಿಗೆ ತೆರಳಿ ಐಸಿಸ್ ಗೆ ಸೇರ್ಪಡೆಯಾಗಿದ್ದ. ವಿಜಯಪುರದ ನಿವಾಸಿಯಾದ ಅಬ್ದುಲ್ ಖುದ್ದುಸ್ ಟರ್ಕಿ, ಫಯಾಜ್ ಮಸೂದ್ ಹಾಗೂ ಉಮರ್ ಸುಬಾನ್ ಸಂಪರ್ಕ ಬೆಳೆಸಿಕೊಂಡು ನಕಲಿ ಪಾಸ್ ಪೋರ್ಟ್ ಮೂಲಕ ಬಾಗ್ದಾದಿಗೆ ತೆರಳಿದ್ದ.

             ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವೀಧರೆಯಾಗಿದ್ದ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಪುತ್ರಿ ಐಸಿಸ್ ಉಗ್ರಗಾಮಿ ಸಂಘಟನೆ ಸೇರಿಕೊಳ್ಳಲು ಮುಂದಾಗಿದ್ದಳು. ಉನ್ನತ ಶಿಕ್ಷಣಕ್ಕೆಂದು ಆಸ್ಟ್ರೇಲಿಯಾಕ್ಕೆ ಹೋದಾಗ ಅಲ್ಲಿ ಐಸಿಸ್ ಉಗ್ರ ಸಂಘಟನೆಗೆ ನೇಮಕಾತಿ ಮಾಡುವ ಜಾಲವೊಂದರ ಸಂಪರ್ಕಕ್ಕೆ ಈ ಯುವತಿ ಬಂದಿದ್ದು ಅವರ ಪ್ರಭಾವದಿಂದಾಗಿಯೇ ಐಸಿಸ್ ಸೇರಲು ಮುಂದಾಗಿದ್ದಳು. ಬೌದ್ಧಮತದಿಂದ ಮತಾತಂರಗೊಂಡು ಅಬು ಖಲೀದ್ ಅಲ್ ಕಾಂಬೊಡಿ ಎಂದು ಹೆಸರಿಟ್ಟುಕೊಂಡಿರುವ ನೀಲ್ ಪ್ರಕಾಶ್ ಎಂಬಾತ ಆಸ್ಟ್ರೇಲಿಯಾದಲ್ಲಿ ಐಸಿಸ್ಗೆ ನೇಮಕಾತಿ ಮಾಡುವ ಮುಖ್ಯಸ್ಥರಲ್ಲೊಬ್ಬ. ಇತ್ತೀಚೆಗಷ್ಟೆ ಆತ ಆಸ್ಟ್ರೇಲಿಯಾದ ಯುವಜನರಿಗೆ ಆಸ್ಟ್ರೇಲಿಯಾದಲ್ಲಿ ತೋಳ ದಾಳಿ ನಡೆಸುವಂತೆ ಪ್ರೇರೇಪಿಸುವ ವಿಡಿಯೊವೊಂದನ್ನು ಅಂತರ್ಜಾಲಕ್ಕೇರಿಸಿದ್ದ. ಇವುಗಳಿಂದ ಉತ್ತೇಜಿತಗೊಂಡಿದ್ದ ಈಕೆ ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಇಸ್ಲಾಂಗೆ ಮತಾಂತರಗೊಂಡು ಬಳಿಕ ಆಸ್ಟ್ರೇಲಿಯಾದ ಮೂಲಕ ಸಿರಿಯಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಇಸ್ಲಾಮಿಕ್ ಸ್ಟೇಟ್ ಸೇರಿ ಜಿಹಾದ್ ನಡೆಸುವ ಇರಾದೆಯಲ್ಲಿದ್ದಳು. ಅಂತರ್ಜಾಲ ಮೂಲಕ ಯುವಕರನ್ನು ಐಸಿಸ್ ಸಂಘಟನೆ ಸೇರಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದ, ಇರಾಕ್ ಮತ್ತು ಸಿರಿಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ವೀರ ಮರಣವನ್ನಪ್ಪಿದರೆ ಸ್ವರ್ಗದಲ್ಲಿ ನಮಗೆ ಅಲ್ಲಾನ ಕೃಪೆ ಸಿಗುತ್ತದೆ ಎಂದು ಯುವಕರಿಗೆ ನೀತಿ ಪಾಠ ಹೇಳುತ್ತಿದ್ದ, ಭಾರತ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟಬೇಕಾದರೆ ನಾವೆಲ್ಲರೂ ಒಂದಾಗಿ ಐಸಿಸ್ ಸಂಘಟನೆಯನ್ನು ಬಲಪಡಿಸಬೇಕೆಂದು ಉಗ್ರವಾದವನ್ನು ಬೆಂಬಲಿಸುತ್ತಿದ್ದ ಈಕೆಯ ನಡವಳಿಕೆಯಿಂದ ಸಂಶಯಗೊಂಡ ತಂದೆ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಿದರು. ಎನ್ಐಎ ಅಧಿಕಾರಿಗಳು ಯುವತಿಯನ್ನು ವಶಕ್ಕೆ ತೆಗೆದುಕೊಂಡು ಕೌನ್ಸಲಿಂಗ್ ನಡೆಸುತ್ತಿದ್ದಾರೆ.

              ಕಳೆದ ಜನವರಿಯಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಪಡ್ಡಾಯೂರು ಸಮೀಪ ಐಸಿಸ್ ಬೆಂಬಲಿಸಿ ಬರಹಗಳು ಪತ್ತೆಯಾಗಿದ್ದವು. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಸ್ಸಾಂ, ಜಮ್ಮುಕಾಶ್ಮೀರದಲ್ಲಿ ಐಸಿಸ್ ಕುರಿತು ಆಸಕ್ತಿ ಹೆಚ್ಚುತ್ತಿದೆ. ಅಂತರ್ಜಾಲದಲ್ಲಿ ಐಸಿಸ್ ಕುರಿತು ಜನರು ಮಾಹಿತಿ ಶೋಧಿಸುತ್ತಿರುವ ರಾಜ್ಯಗಳಲ್ಲಿ ಇವೆರಡು ಮೊದಲ ಸ್ಥಾನದಲ್ಲಿವೆ. ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿ ಐಸಿಸ್ ಹೊಸ ಟ್ವಿಟರ್ ಖಾತೆಯನ್ನು ಕಳೆದ ಫೆಬ್ರವರಿಯಲ್ಲಿ ಆರಂಭಿಸಿದೆ. ದೇಶದ್ರೋಹಿ, ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಗೃಹ ಬಂಧನದಲ್ಲಿ ಇರಿಸಿದ್ದನ್ನು ವಿರೋಧಿಸಿ ಭಾರತ ವಿರೋಧಿಗಳು ಕಳೆದ ಜುಲೈ 18 ರಂದು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಐಸಿಸ್ ಧ್ವಜವನ್ನು ಪ್ರದರ್ಶಿಸಿದ್ದರು. ಇಂತಹ ಹಲವಾರು ಘಟನೆಗಳು ದಿನಂಪ್ರತಿ ವರದಿಯಾಗುತ್ತಿದ್ದು ಐಸಿಸ್ ಪರ ಒಲವು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆ ಐಸಿಸ್ ಉಗ್ರ ಸಂಘಟನೆ ಭಾರತದಲ್ಲೂ ಸದ್ದಿಲ್ಲದೆ ಬೇರೂರಲಾರಂಭಿಸಿದೆ.  ಮತ ಬ್ಯಾಂಕ್ ಎಲ್ಲಿ ಕೈತಪ್ಪುತ್ತದೋ ಎಂಬ ಭೀತಿಯಿಂದ ರಾಜಕಾರಣಿಗಳು ಇದಕ್ಕೆ ನೀರೆರೆಯುತ್ತಿದ್ದಾರೆ. ಈ ರಕ್ತಬೀಜಾಸುರರು ತಮ್ಮನ್ನೇ ಆಪೋಶನ ತೆಗೆದುಕೊಳ್ಳುತ್ತಾರೆನ್ನುವ ಕನಿಷ್ಟ ಪ್ರಜ್ಞೆಯೂ ಅವರಲ್ಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ