ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!
ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಆರೋಪಿಸುತ್ತಾ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ಚಳುವಳಿಯೊಂದು ಆರಂಭವಾಗಿದೆ. ಎಲ್ಲಿ-ಏನು ಅಂತ ಕೇಳಿದರೆ ಅವರ ಬೆರಳು ಹೊರಳುವುದು ದಾದ್ರಿ, ಕಲ್ಬುರ್ಗಿ, ದಾಬೋಲ್ಕರ್ ಹತ್ಯೆಯತ್ತ! ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಸಾಲಿಗೆ, ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವವರ ಸಾಲಿಗೆ ಕೆಲ ಕಲಾವಿದರು, ವಿಜ್ಞಾನಿಗಳು, ಉದ್ದಿಮೆದಾರರು ಸೇರಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಇಬ್ಬಂದಿತನವನ್ನು ಸರಿಯಾಗಿ ಝಾಡಿಸಲಾಗುತ್ತಿದೆ. ಜನರ ಮನಸ್ಸಲ್ಲಿ, ಸತ್ವ ಹಾಗೂ ಸ್ವತ್ವವನ್ನು ಕಳೆದುಕೊಂಡು ಸ್ವಹಿತಕ್ಕಾಗಿ ಎಂಜಲಿಗೆ ಕೈಚಾಚುವವನೇ ಸಾಹಿತಿ ಎಂಬ ಭಾವನೆ ಬೇರೂರುತ್ತಿದೆ.ಉದ್ರಿಕ್ತಗೊಂಡ ಹಳ್ಳಿಗರು ಅಖ್ಲಾಖನನ್ನು ಸದೆಬಡಿದದ್ದೇ ತಡ ಮುಖ್ಯಮಂತ್ರಿ ಸಿದ್ಧರಾಮಯ್ಯರಂತೆ ನಿದ್ದೆ ಮಾಡುತ್ತಿದ್ದ ಮಾಧ್ಯಮಗಳು ಎದ್ದು ಕುಳಿತವು. ಘಟನೆಗೆ ಕೋಮುಬಣ್ಣ ಹಚ್ಚಿ, ಸಂಘಪರಿವಾರದ ಮೇಲೆ ಆರೋಪ ಹೊರಿಸಿದವು. ಮೋದಿ ಆಡಳಿತದಲ್ಲಿ ಕ್ರೌರ್ಯವೇ ತಾಂಡವವಾಡುತ್ತಿದೆಯೆಂದು ಬೊಬ್ಬಿರಿಯಲಾರಂಭಿಸಿದವು. ಬಿಹಾರದಲ್ಲಿ ಚುನಾವಣೆ ಕಾವೇರಿದ್ದ ಸಮಯ. ಜಲ-ತೈಲದಂತಿದ್ದು ಅಧಿಕಾರಕ್ಕೋಸ್ಕರ ಬೆರೆತ ಭಾಜಪಾ ವಿರೋಧಿಗಳಿಗೆ ಅಮೃತ ಸಿಕ್ಕಂತಾಯಿತು. ಇಷ್ಟರವರೆಗೆ ತಾವು ಬರೆದ ಪುಸ್ತಕಗಳನ್ನೇ ಹೊದ್ದು ಮಲಗಿದ್ದ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳೆಲ್ಲಾ ನಿದ್ದೆ ಬಿಟ್ಟು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು. ದಾದ್ರಿಯಲ್ಲಿ ಏನು ನಡೆಯಿತು ಎನ್ನುವುದರ ಸ್ಪಷ್ಟ ಚಿತ್ರಣವನ್ನು ಯಾವ ಮಾಧ್ಯಮಗಳೂ ಕೊಡಲಿಲ್ಲ. ಅರಿಯುವ ಪ್ರಯತ್ನವನ್ನೂ ಮಾಡಲಿಲ್ಲ. ದಾದ್ರಿ ಇರುವುದು ಉತ್ತರಪ್ರದೇಶದಲ್ಲಿ, ಅಲ್ಲಿನ ಸರಕಾರ ತಮ್ಮದೇ ಮಾನಸಿಕತೆಯ ಸಮಾಜವಾದಿ ಪಕ್ಷ ಎನ್ನುವುದನ್ನು ಮರೆತುಬಿಟ್ಟರು. ಅಲ್ಲದೆ ದಾದ್ರಿಯಲ್ಲಿ ಸತ್ತವನೊಬ್ಬ ಮುಸ್ಲಿಮ್ ಎನ್ನುವ ಕಾರಣಕ್ಕೆ ಆ ಘಟನೆಗೆ ಅಷ್ಟು ಪ್ರಚಾರ ಸಿಕ್ಕಿತೇ ವಿನಾ ಸತ್ತವ ಹಿಂದೂವಾಗಿದ್ದರೆ ಈ ಪ್ರಶಸ್ತಿ ಹಿಂದಿರುಗಿಸುವವರೆಲ್ಲಾ ತಿರುಗಿ ನೋಡುತ್ತಿರಲಿಲ್ಲ.
ಅಖ್ಲಾಖ್ ಹಳ್ಳಿಯಲ್ಲಿ ಕೋಮುದ್ವೇಷದ, ಭಾರತ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದ. ಅದರಿಂದಾಗಿ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಮುಸ್ಲಿಮರಿಗೂ ಆತನ ಮೇಲೆ ಸಿಟ್ಟಿತ್ತು. ಆತನನ್ನು ವಧಿಸುವಾಗ ಮುಸ್ಲಿಮರೂ ಜೊತೆಯಾಗಿದ್ದರು ಎಂಬ ಸಂಗತಿಗಳೆಲ್ಲ ಗೌಣವಾಗಿ ಹೋದವು. ದಾದ್ರಿ ಘಟನೆಯನ್ನು ಹಿಡಿದು ಜಗ್ಗಿ ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿರುವವರು ಅಖ್ಲಾಖ್ ಪಾಕಿಸ್ತಾನಕ್ಕೆ ಹೋದದ್ದೇಕೆಂದು ಕೇಳಲಿಲ್ಲ. ಆತನಿಗೆ ಪಾಕಿಸ್ತಾನಕ್ಕೆ ತೆರಳಲು ಬೇಕಾದ ಪೂರಕ ದಾಖಲೆಗಳು ಹೇಗೆ ಸಿಕ್ಕಿತೆಂದು ಪ್ರಶ್ನಿಸಲೇ ಇಲ್ಲ. ಪಾಕಿಸ್ತಾನಕ್ಕೆ ತೆರಳಿ ಸಂಬಂಧಿಕರ ಮನೆಯಲ್ಲಿ ತಿಂಗಳುಗಟ್ಟಲೇ ಉಳಿಯುವ ದರ್ದು ಏನಿತ್ತು ಎಂದು ಕೇಳಲೇ ಇಲ್ಲ. ಪಾಕಿಸ್ತಾನದಲ್ಲಿ ತಿಂಗಳುಗಟ್ಟಲೆ ಝಂಡಾ ಹೂಡಿದವ ಐ.ಎಸ್.ಐ ಸಂಪರ್ಕಕ್ಕೆ ಒಳಗಾಗಲಿಲ್ಲ ಎಂದು ಹೇಳುವುದು ಹೇಗೆ? ಪಾಕಿಸ್ತಾನದಿಂದ ವಾಪಸಾದ ಕೂಡಲೇ ಆತನಿಗೆ ಕಾರು ಹೇಗೆ ಸಿಕ್ಕಿತೆಂದು ಯಾರೂ ಕೇಳಲಿಲ್ಲ! ಒಂದು ವೇಳೆ ಗೋಮಾಂಸ ಸಂಗ್ರಹಕ್ಕಾಗಿಯೇ ಅಖ್ಲಾಖನನ್ನು ಕೊಲೆ ಮಾಡಲಾಗಿದ್ದರೆ ಉತ್ತರಪ್ರದೇಶ ಸರಕಾರ ಕೇಂದ್ರಕ್ಕೆ ಕಳುಹಿಸಿದ ವರದಿಯಲ್ಲಿ ಗೋಮಾಂಸದ ಉಲ್ಲೇಖವೇ ಇರಲಿಲ್ಲವೇಕೆ? ಮೃತ ಅಖ್ಲಾಖನ ಪರಿವಾರಕ್ಕೆ ನಲವತ್ತೈದು ಲಕ್ಷ ರೂಪಾಯಿಗಳನ್ನೂ ಎರಡು ಬೆಡ್ ರೂಂಗಳುಳ್ಳ ನಾಲ್ಕು ಪ್ಲ್ಯಾಟುಗಳನ್ನು ಪರಿಹಾರಾರ್ಥವಾಗಿ ಕೊಟ್ಟ ಉತ್ತರಪ್ರದೇಶ ಸರಕಾರ ಹಿಂದೂಗಳನ್ನೇ ಅವಮಾನಿಸಿ ತನ್ನ ಮತಬ್ಯಾಂಕನ್ನು ಭದ್ರಪಡಿಸಿಕೊಂಡಿತು. ದಾದ್ರಿಯಲ್ಲಿ ನಡೆದ ಘಟನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಅಣಿಯಾಗಿವೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆ ಹಾಗೂ ಅದನ್ನು ಪರಿಗಣಿಸಿ ದಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ ಕೇಂದ್ರ ಸರಕಾರದ ಕ್ರಮಗಳು ಮಾಧ್ಯಮಗಳಿಗೆ ಮುಖ್ಯ ವಿಷಯವಾಗಲೇ ಇಲ್ಲ. ದೇಶದ ಭದ್ರತೆಗಿಂತಲೂ ಪಾಕಿಸ್ತಾನ ಪ್ರಿಯನೊಬ್ಬನ ವಧೆ ಇವರಿಗೆ ಕಣ್ಣೀರು ಹಾಕುವ ವಿಷಯವಾಯಿತು!
ಅಮರನಾಥ ಯಾತ್ರಿಗಳಿಗೆ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸುವುದರ ವಿರುದ್ಧ ಎದ್ದ ಅಸಹಿಷ್ಣುತೆಯನ್ನು ಯಾವ ಸಾಹಿತಿಯೂ ಖಂಡಿಸಿ ಪ್ರಶಸ್ತಿ ವಾಪಸ್ ಮಾಡಲಿಲ್ಲ. ತಾಯ್ನೆಲದಿಂದಲೇ ಕಾಶ್ಮೀರಿ ಪಂಡಿತರನ್ನು ಓಡಿಸಿದ ಅಸಹಿಷ್ಣುತೆ ಅವರಿಗೆ ಕಾಣಲಿಲ್ಲ. ಕೇರಳದಲ್ಲಿ ರಾ.ಸ್ವ.ಸಂ.ದ ಬೆಳವಣಿಗೆಯನ್ನು ಸಹಿಸದೆ ಮಾಡಿದ ಕೊಲೆಗಳು ಸುದ್ಧಿಯೇ ಆಗಲಿಲ್ಲ. ಭಾರತಾದ್ಯಂತ ದೇಶ-ಧರ್ಮ-ಗೋ ರಕ್ಷಣೆಗಾಗಿ ಹೋರಾಡಿದ ಏಕಮಾತ್ರ ತಪ್ಪಿನಿಂದಾದ ಕೊಲೆಗಳೆಲ್ಲಾ ಮಾಧ್ಯಮಗಳಲ್ಲಿ ಮಿಣುಕು ಹುಳುಗಳಂತೆ ಮರೆಯಾದವು. ಇವೇ ಮಾಧ್ಯಮಗಳಾಗಲೀ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿ-ಕಲಾವಿದರಾಗಲೀ ಬೆಳ್ಳಂಬೆಳಗ್ಗೆ ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಗೋರಕ್ಷಣೆಯ ಒಂದೇ ಒಂದು ತಪ್ಪಿಗೆ ಮತಾಂಧರಿಂದ ಕೊಲೆಯಾಗಿ ಹೋದಾಗ ಎಲ್ಲಿ ಸತ್ತು ಹೋಗಿದ್ದರು? ಭಾರತದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಿದೆ. ಆದರೂ ಗೋಹತ್ಯೆ ನಡೆಯುತ್ತಿದೆಯೆಂದಾದರೆ ಅದು ನಮ್ಮ ಕಾನೂನಿನ ಅನುಷ್ಠಾನದ ವೈಫಲ್ಯ ಎಂದು ಯಾವ ಮಾಧ್ಯಮವೂ ಎತ್ತಿ ತೋರಿಸಲಿಲ್ಲ! 2013ರಲ್ಲಿ 823 ಕೋಮು ಸಂಘರ್ಷಗಳು ನಡೆದಿದ್ದರೆ, 2014ರಲ್ಲಿ ಅದು 644ಕ್ಕಿಳಿದಿದೆ. ಅಲ್ಲದೆ 2009ರಿಂದ 2013ಕ್ಕೆ ಹಿಂದುಳಿದ ಜಾತಿಯವರ ಮೇಲಿನ ಹಲ್ಲೆ 33,412ರಿಂದ 39,408ಕ್ಕೆ, ಹಿಂದುಳಿದ ವರ್ಗದವರ ಮೇಲಿನ ಹಲ್ಲೆ 5,250ರಿಂದ 6,793ಕ್ಕೆ ಏರಿದಾಗ ಈ ಪ್ರಶಸ್ತಿ ವಾಪಸಿಗರು ಏನು ಮಸಿ ತಿನ್ನುತ್ತಿದ್ದರೆ? ಆಗ ನೆನಪಾಗದ ಅಸಹಿಷ್ಣುತೆ ಈಗ ಹೇಗೆ ನೆನಪಾಯಿತು? ನಿಜವಾಗಿ ಅಸಹಿಷ್ಣುತೆ ಇರುವುದು ಈ ದೇಶದ ಸಾಮಾನ್ಯ ಜನರಲ್ಲಲ್ಲ, ಈ ಪ್ರಶಸ್ತಿ ವಾಪಸಿಗರಲ್ಲಿಯೇ! ಅದೂ ಪ್ರಧಾನಿ ನರೇಂದ್ರ ಮೋದಿಯ ಮೇಲೆ!
ಅಸಹಿಷ್ಣುತೆ ಹೆಚ್ಚುತ್ತಿದೆ ಅನ್ನುವವರ ಸಾಲಿಗೆ ಇತ್ತೀಚಿನ ಸೇರ್ಪಡೆ ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ನಾರಾಯಣಮೂರ್ತಿಗಳು. ಭಾರತ ದ್ವೇಷವನ್ನೇ ಮೈಗೂಡಿಸಿಕೊಂಡು, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಾ, ದೇಶದೊಳಗೆ ಸುಳ್ಳು ಸುದ್ದಿಗಳಿಂದ ಕ್ಷೋಭೆ ಸೃಷ್ಟಿಸುತ್ತಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕುಬ್ಜವಾಗಿಸಲು ಸದಾ ಪ್ರಯತ್ನ ಪಡುತ್ತಿದ್ದ ಎನ್.ಜಿ.ಓಗಳಿಗೆ ಧನ ಸಹಾಯ ಮಾಡುತ್ತಿದ್ದ ಫೋರ್ಡ್ ಫೌಂಡೇಶನ್ನಿನ ಆಡಳಿತ ಸಮಿತಿಯ ಭಾಗವಾಗಿರುವ ನಾರಾಯಣಮೂರ್ತಿಗಳಿಗೆ ಮೋದಿ ಆಡಳಿತದಿಂದ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾದಂತೆ ಕಂಡುಬಂದರೆ ಅದರಲ್ಲಿ ಅಚ್ಚರಿಯೇನಿಲ್ಲ! ಇದೇ ನಾರಾಯಣ ಮೂರ್ತಿಗಳು ಶೆಲ್ಡನ್ ಪೊಲ್ಲಾಕ್ ಎಂಬ ಭಾರತ ದ್ವೇಷಿಗೆ, ಹಿಂದೂ ದ್ವೇಷಿಗೆ ಭಾರತದ ಪುರಾತನ ಶಾಸ್ತ್ರೀಯ ಗ್ರಂಥಗಳ ತರ್ಜುಮೆಗಾಗಿ ಇಪ್ಪತ್ತು ಮಿಲಿಯ ಡಾಲರ್ ಹಣವನ್ನು ಕೊಟ್ಟ ದೇಶದ್ರೋಹಿ ಕೃತ್ಯಕ್ಕಿಂತಲೂ ಮೋದಿ ಆಡಳಿತವೇ ಕೆಟ್ಟದ್ದು ಎಂಬ ಮಹಾನ್ ಅರಿವು ಉಂಟಾದುದು ಅವರ ತಾಂತ್ರಿಕ ಜ್ಞಾನದ ಅಪೂರ್ವ ನೈಪುಣ್ಯತೆಗೆ ಸಾಕ್ಷಿ! ತಮ್ಮ ಪುತ್ರರತ್ನ ರೋಹನ್ ಅನ್ನು ಕೇಂದ್ರೀಯ ಶೈಕ್ಷಣಿಕ ಸಲಹಾ ಮಂಡಳಿಯಿಂದ ಕೊನೆಕ್ಷಣದಲ್ಲಿ ತೆಗೆದುಹಾಕಿ ಆ ಸ್ಥಾನಕ್ಕೆ ಮನೀಷ್ ಸಬರವಾಲರನ್ನು ನೇಮಿಸಿದ ಪ್ರಧಾನಮಂತ್ರಿ ಕಛೇರಿಯ ಕ್ರಮ ಮೂರ್ತಿಯವರ "ಅಸಹಿಷ್ಣುತೆ"ಗೆ ಕಾರಣ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ!
"ಎಮಿನೆಂಟ್ ಹಿಸ್ಟೋರಿಯನ್ಸ್" ಎಂಬಂತಹ ಪುಸ್ತಕ ಬರೆದು ಎಡಬಿಡಂಗಿ, ದೇಶದ್ರೋಹಿ ಇತಿಹಾಸಕಾರರ ಬಣ್ಣ ಬಯಲು ಮಾಡಿದ ಅರುಣ್ ಶೌರಿಯಂತಹ ಚಿಂತಕನೊಬ್ಬ ಹಠಾತ್ತನೆ ಬದಲಾಗಿ ಮೋದಿ ವಿರುದ್ಧ, ಗೋಸುಂಬೆ ಸಾಹಿತಿಗಳ ಪರವಾಗಿ ಅರಚಾಡುತ್ತಿರುವುದೇ ಅನೇಕರನ್ನು ಅಚ್ಚರಿಗೆ ತಳ್ಳಿದುದು. ಶೌರಿಗೆ ಮೋದಿ ಮೇಲೆ ಸಿಟ್ಟಿದ್ದಿದ್ದರೆ ಅದು ಅವರ ವೈಯುಕ್ತಿಕ ವಿಷಯ. ಆದರೆ ಅದಕ್ಕಾಗಿ ಈ ದೇಶವಿರೋಧಿಗಳನ್ನು ಬೆಂಬಲಿಸುವುದು ಶೌರಿಯಂತಹವರಿಗೆ ಎಷ್ಟು ಸರಿ? ಶೌರಿಯಂತೆ ಗೌರವಯುತ ಸ್ಥಾನದಲ್ಲಿರುವವರು ನೆನಪಿಡಬೇಕಾದ ಸತ್ಯವೊಂದಿದೆ. ಗೌರವ ಇರುವುದು ತತ್ವಕ್ಕೇ ಹೊರತು ವ್ಯಕ್ತಿಗಲ್ಲ !!!
ಪ್ರತ್ಯುತ್ತರ ನೀಡಲು ಅನುಮತಿಯಿಲ್ಲದೆ ಜವಾನರು ಸಾಯುತ್ತಿದ್ದಾಗ ಯಾರೂ ಪ್ರಶಸ್ತಿ ವಾಪಸ್ ಮಾಡಲಿಲ್ಲ. ದೇಶದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಹಗರಣಗಳು ನಡೆದಾಗ ಇವರಿಗೂ ಬಹುಷಃ ಪಾಲು ಸಿಗುತ್ತಿತ್ತು. ಲವ್ ಜಿಹಾದ್, ರೇಪ್ ಜಿಹಾದ್, ಲ್ಯಾಂಡ್ ಜಿಹಾದ್ ವಿರೋಧಿಸಿ ಕನಿಷ್ಟ ಹೇಳಿಕೆಯನ್ನೂ ನೀಡಲಿಲ್ಲ. ಅವ್ಯಾಹತ ಮತಾಂತರವನ್ನು ತಡೆಯಲು ಯಾರೂ ಪ್ರತಿಭಟಿಸಲಿಲ್ಲ. ಗಡಿಗಳಲ್ಲಿ ನುಗ್ಗಿಬಂದು ಇಲ್ಲೇ ನೆಲೆಸಿ ಇಲ್ಲಿನ ಹಿಂದೂಗಳನ್ನು ಕಗ್ಗೊಲೆ ನಡೆಸಿದಾಗ ಮಾನವ ಹಕ್ಕುಗಳೆಲ್ಲಾ ನೆನಪಾಗಲೇ ಇಲ್ಲ. ಈಗ ಭಾರತಕ್ಕೆ ಭಾರತವೇ ಒಂದಾಗಿ ಚಾಯ್ ವಾಲಾನೊಬ್ಬನನ್ನು ಪ್ರಧಾನಿಯಾಗಿ ಆರಿಸಿದಾಗ, ಕಳೆದ ಒಂದೂವರೆ ವರ್ಷದಲ್ಲಿ ಒಂದೇ ಒಂದು ಹಗರಣವೂ ಕಾಣದಿದ್ದಾಗ, ತಮ್ಮ ತಮ್ಮ ಗಂಜಿಕೇಂದ್ರಗಳಿಗೆ ಧಕ್ಕೆ ಉಂಟಾದಾಗ, ಸೈನಿಕರಿಗೆ ಆಕ್ರಮಣಕ್ಕೆ ಪ್ರತ್ಯಾಕ್ರಮಣ ನಡೆಸಲು ಅನುಮತಿ ಸಿಕ್ಕಿ ಸೈನ್ಯದಲ್ಲೊಂದು ಹೊಸ ಕಳೆ ಬಂದಿರುವಾಗ, ದೇಶ ಎಲ್ಲರಿಗಿಂತಲೂ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವಾಗ, ಪ್ರಧಾನಿ ವಿಶ್ವದಲ್ಲೇ ಪ್ರಭಾವಿ ವ್ಯಕ್ತಿಯಾಗಿ ದೇಶ ಮತ್ತೊಮ್ಮೆ ವಿಶ್ವಗುರುವಾಗಲು ಸನಿಹವಾಗಿರುವಾಗ ಈ ಭಾರತ ದ್ವೇಷಿಗಳು ಪ್ರಶಸ್ತಿಪತ್ರ ಹುಡುಕಲಾರಂಭಿಸಿದರು.
ಬುದ್ಧಿಜೀವಿಗಳ ಅಸಹಿಷ್ಣುತೆಗೆ ಕಾರಣ ಇಲ್ಲದಿಲ್ಲ. ಕಳೆದ ಆರು ದಶಕಗಳಲ್ಲಿ ಬೇಕಾದ ಸ್ಥಾನಮಾನವನ್ನುಂಡು ಕೊಬ್ಬಿರುವ ಅವರನ್ನು ಹಠಾತ್ತನೆ ಇಳಿಸಿಬಿಟ್ಟರೆ ಮತ್ತೇನಾದೀತು? ಐ.ಸಿ.ಎಚ್.ಆರ್.ನಿಂದ ಇತಿಹಾಸವನ್ನು ತಿರುಚಿದ ಹೆಗ್ಗಣಗಳನ್ನು ಮನೆಗೆ ಕಳುಹಿಸಿದಾಗಲೇ ಅವರ ಪಿತ್ತ ನೆತ್ತಿಗೇರಿತ್ತು. ತಮ್ಮ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದ್ದ ಎನ್ಜಿಓಗಳನ್ನು ನಿಷೇಧಿಸಿದಾಗ ಆಕಾಶವೇ ಕುಸಿದುಬಿದ್ದಂತಾಗಿತ್ತು. ಮೋದಿಯ ನಾಯಕತ್ವದಲ್ಲಿ ಭಾರತ ಬಲು ವೇಗವಾಗಿ ಅಭಿವೃದ್ಧಿಗೊಳ್ಳುತ್ತಾ ದೇಶದ ಕೀರ್ತಿ ಗಗನಕ್ಕೇರುತ್ತಿರುವಾಗ ತಮ್ಮ ಆಶ್ರಯದಾತರಿಗೇ ಆಶ್ರಯತಪ್ಪುವ ಸೂಚನೆ ಕಂಡೊಡನೆ ಅವರು ಧರಾಶಾಯಿಗಳಾಗಿದ್ದರು. ಹಾಗಾಗಿಯೇ ಈ ಕೌರವರೆಲ್ಲಾ ಒಟ್ಟು ಸೇರಿ ದಾದ್ರಿ ಪ್ರಕರಣವನ್ನು ಸೃಷ್ಟಿಸಿ ವಿಶ್ವ ಮಟ್ಟದಲ್ಲಿ "ಭಾರತ ಅಲ್ಪಸಂಖ್ಯಾತರನ್ನು ಸಹಿಸದ ದೇಶವೆಂದು" ಬಿಂಬಿಸಿ ಇಲ್ಲಿ ಯಾವುದೇ ಹೂಡಿಕೆ ಆಗದಂತೆ ತಡೆದು ಇದೇ ವಿಷಯವನ್ನು ಹಿಡಿದು ಚಳಿಗಾಲದ ಅಧಿವೇಶನವನ್ನು ಹಾಳುಗೆಡವಿ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಯೋಜಿಸಿದರು. ಇದಕ್ಕಾಗಿ ಹಲವು ದೇಶದ್ರೋಹಿ ಎನ್ಜಿಓಗಳು, ಭಾರತ ವಿರೋಧಿ ಶಕ್ತಿಗಳು ಹಣಕಾಸಿನ ನೆರವನ್ನು ನೀಡಿವೆ. ಹಾಗಾಗಿ ತನ್ನ ಆಡಳಿತವನ್ನು ಸುಗಮವಾಗಿ ನೆರವೇರಿಸಬೇಕಾದರೆ ಇಂತಹ ವಿದ್ರೋಹಿ ಶಕ್ತಿಗಳ ಸೊಂಟ ಮುರಿಯುವುದು ಮೋದಿ ಸರಕಾರದ ತುರ್ತು ಅಗತ್ಯವಾಗಿದೆ. ಹಾಂ… ಬುಜೀಗಳಿಗೆ ಬುರೇ ದಿನ್ ಬಂದಿದೆ ಎಂದರೆ "ಭಾರತೀಯರಿಗೆ" ಅಚ್ಛೇದಿನ್ ಬಂದಿದೆ ಎಂದರ್ಥ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ