ಪುಟಗಳು

ಗುರುವಾರ, ನವೆಂಬರ್ 19, 2015

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!

ಹಿಂದೂಗಳ ರೂಪಾಯಿ - ಮುಜರಾಯಿ - ಭಯೋತ್ಪಾದಕರಿಗೆ ತುರಾಯಿ!


                ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಹಾಗೂ ಆಡಳಿತಾಧಿಕಾರಿಗಳನ್ನು ನೇಮಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಧಾರ್ಮಿಕ-ದತ್ತಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವುದರೊಂದಿಗೆ ಸೆಕ್ಯುಲರ್ ಸರಕಾರಕ್ಕೆ ಚುರುಕು ಮುಟ್ಟಿಸಿದೆ ಉಚ್ಛ ನ್ಯಾಯಾಲಯ. ಇದರಿಂದಾಗಿ ಮುಜರಾಯಿ ದೇಗುಲಗಳ ಆಡಳಿತ ನಿರ್ವಹಣೆಗಾಗಿ ಕಾಯ್ದೆಯ ತಿದ್ದುಪಡಿ ನಂತರ ಸರ್ಕಾರ ರಚಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್ ಕೂಡ ಮಾನ್ಯತೆ ಕಳೆದುಕೊಳ್ಳಲಿದೆ. ಹೈಕೋರ್ಟ್ ಆದೇಶದಿಂದಾಗಿ ಸರ್ಕಾರ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ, ಆಡಳಿತಾಧಿಕಾರಿಗಳ ನೇಮಕ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನೇಮಕದ ಅಧಿಕಾರವನ್ನು ಕಳೆದುಕೊಳ್ಳಲಿದೆ. ಧಾರ್ಮಿಕ ದತ್ತಿ ಕಾಯ್ದೆಯಡಿ 2003ರಲ್ಲಿ ಹೊಸ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಒಟ್ಟು 34 ಸಾವಿರ ದೇಗುಲಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಧಿಸೂಚನೆ ಹೊರಡಿಸಿತ್ತು. ಮುಜರಾಯಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಶ್ರೀಮಂತ ಧಾರ್ಮಿಕ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸಿದೆ. ಅಲ್ಲದೆ 1957ರ ಧಾರ್ಮಿಕ ದತ್ತಿ ಕಾಯ್ದೆಗೆ ಪದೇಪದೆ ತಿದ್ದುಪಡಿ ತರುವ ಮೂಲಕ ಅದರ ಸಾಂವಿಧಾನಿಕ ಮೌಲ್ಯಕ್ಕೆ ಧಕ್ಕೆ ತಂದಿದೆ ಎಂದು ಪೀಠ ಸರಕಾರದ ನಡೆಯನ್ನು ತೀಕ್ಷ್ಣವಾಗಿ ಟೀಕಿಸಿದೆ.

                ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅಲ್ಲಿ ಇತಿಹಾಸದ ನೆನಪುಗಳಿವೆ, ಪಾಠವಿದೆ! ಕಲಾವಿದನೊಬ್ಬನ ಕೈಚಳಕದಿಂದ ಸಿದ್ಧಗೊಂಡ ಕಲಾ ವೈಭವವು ಗತದ ಹಿರಿಮೆ-ಗರಿಮೆಯನ್ನು ಸಾರುತ್ತದೆ. ಹಿಂದೆ ಅಲ್ಲಿ ವೇದ-ವೇದಾಂಗಗಳ ಅಧ್ಯಯನ, ಅಧ್ಯಾಪನ, ಸಂಶೋಧನೆಗಳು ನಡೆಯುತ್ತಿದ್ದವು. ಭಾರತೀಯ ಕಲೆಗಳ ಪೋಷಕ ತಾಣಗಳಾಗಿದ್ದವು. ಅಲ್ಲಿ ಜಂಜಡದ ಬದುಕಿನ ಬವಣೆಗಳಿಂದ ಮುಕ್ತನಾಗಿ ಕ್ಷಣಕಾಲ ಶಾಂತಿಯಿಂದಿರಲು ಸಾಧ್ಯವಿತ್ತು. ಬ್ರಿಟಿಷರ ಕಾಪಟ್ಯದಿಂದಲೋ ನಮ್ಮವರದೇ ಮೌಢ್ಯದಿಂದಲೋ ಜಾತಿಯ ಒಳಸುಳಿಗೆ ಅವು ಸಿಲುಕಿದರೂ ದಶಕಗಳ ಹಿಂದಿನವರೆಗೂ ಅಲ್ಲಿ ಅಧ್ಯಾತ್ಮವನ್ನೂ ಸವಿಯಬಹುದಿತ್ತು. ಶಾಂತಿಯನ್ನು ಪಡೆಯಬಹುದಿತ್ತು. ಆದರೆ ಯಾವಾಗ ಆಳುಗರ ಕೆಟ್ಟ ದೃಷ್ಠಿ ದೇಗುಲಗಳ ಮೇಲೆ ಬಿತ್ತೋ ಅವರ ಮತ ಬ್ಯಾಂಕಿಗೆ ಈ ದೇವಾಲಯಗಳ ನಿಧಿಗಳು ಜಮಾವಣೆಯಾಗತೊಡಗಿದವು! ಅಲ್ಲಿನ ಲೌಕಿಕ ಹಾಗೂ ಅಲೌಕಿಕ ಸೌಂದರ್ಯಗಳೆರಡೂ ಸೊರಗತೊಡಗಿತು!

          ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಬಳಿಕ ಸಮರ್ಪಕವಾಗಿ ಅವುಗಳನ್ನು ನಿರ್ವಹಿಸಿದರೆ ಯಾರೊಬ್ಬರ ತಕರಾರು ಇರುವುದಿಲ್ಲ. ಆದರೆ ಒಮ್ಮೆ ಸರಕಾರದ ವಶಕ್ಕೊಳಗಾದ ದೇವಾಲಯ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಅಲ್ಲಿ ನಡೆಯುವ ಪೂಜಾ-ಉತ್ಸವಾದಿಗಳಿಗೆ, ಧಾರ್ಮಿಕ ಶಿಕ್ಷಣಕ್ಕೆ, ಅನ್ನ-ಅಕ್ಷರ ದಾಸೋಹಗಳಿಗೆ ತೆರೆ ಬೀಳುತ್ತದೆ ಅಥವಾ ಅವೆಲ್ಲವೂ ನಾಮಕೆವಾಸ್ತೇ ಎಂಬತಾಗುತ್ತವೆ. ಅರ್ಚಕರು, ಪರಿಚಾರಕರಿಗೆ ಸರಿಯಾದ ಸಂಬಳ ಸಿಗದೆ ಅವರು ತಿಂಗಳುಗಟ್ಟಲೆ ಸರಕಾರೀ ನೌಕರರಂತೆ ತಮ್ಮ ಸಂಬಳಕ್ಕೆ ಕಾಯುವಂತೆ ಮಾಡುತ್ತದೆ ಸರಕಾರ. ಆದರೆ ಹುಂಡಿಯ ಹಣದ ಲೆಕ್ಕದ ಸಮಯದಲ್ಲಿ ಸರಿಯಾಗಿ ಆಗಮಿಸುತ್ತಾರೆ ಸರಕಾರೀ ಅಧಿಕಾರಿಗಳು! ಈ ಹಣವಾದರೂ ದೇವಾಲಯದ ಅಭಿವೃದ್ಧಿಗೆ ಉಪಯೋಗವಾಗುತ್ತದೆಯೇ? ಈ ಹಣದಿಂದ ಭಕ್ತರ ಜೀವನಕ್ಕೇನಾದರೂ ಲಾಭವಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಹಜ್ ಯಾತ್ರೆಯ ಸಬ್ಸಿಡಿಗಳಲ್ಲಿ, ಮತಾಂತರದ ಕಾರಸ್ಥಾನಗಳಲ್ಲೇ ಉತ್ತರ ಕಂಡುಕೊಳ್ಳಬೇಕು!

             ದೇಶದಲ್ಲಿ ನಾಲ್ಕನೇ ಅತ್ಯಧಿಕ ದೇವಾಲಯಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು ಎರಡೂವರೆ ಲಕ್ಷ ದೇವಾಲಯಗಳು ಸರಕಾರದ ಸುಪರ್ದಿಯಲ್ಲೇ ಇವೆ. ದೇವಾಲಯಗಳಿಂದ ಬರುವ 70% ಆದಾಯ ಮದ್ರಸಾಗಳಿಗೆ, ಹಜ್ ಯಾತ್ರೆಗೆ ಬಳಸಲ್ಪಡುತ್ತದೆ. ಕರ್ನಾಟಕದಲ್ಲಿ 2003ರಲ್ಲಿ ದೇವಾಲಯಗಳಿಂದ 79ಕೋಟಿ ಸಂಗ್ರಹ ಮಾಡಲಾಗಿತ್ತು. ಆದರೆ ದೇವಸ್ಥಾನಗಳ ಅಭಿವೃದ್ಧಿಗೆ ಖರ್ಚು ಮಾಡಿದ್ದು ಬರೇ 7 ಕೋಟಿ! ಹಜ್ ಯಾತ್ರೆಗೆ 59 ಕೋಟಿ, ಚರ್ಚ್ ಗಳಿಗೆ 13 ಕೋಟಿ. ಈ ಧೋರಣೆ ಇಡೀ ದೇಶದಲ್ಲಿ ಸಾಗಿದೆ. ರಾಜ್ಯಾದ್ಯಂತ ದೇವಾಲಯಗಳಿಂದ ಬಂದ ಹಣದಲ್ಲೇ ಮುಲ್ಲಾ, ಪಾದರಿಗಳಿಗೂ ಸಂಬಳ ಪಾವತಿಯಾಗುತ್ತದೆ. ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ 125 ಎ ವರ್ಗದ ದೇವಾಲಯಗಳು, 179 ಬಿ ವರ್ಗದ ದೇವಾಯಗಳು ಇದ್ದು, ಎ ವರ್ಗದ ದೇವಾಲಯಗಳಿಂದ 2010-11ನೇ ಸಾಲಿನಲ್ಲಿ 207.61 ಕೋ.ರೂ., 2011-12ನೇ ಸಾಲಿನಲ್ಲಿ 261.14 ಕೋ.ರೂ., ಬಿ ವರ್ಗದ ದೇವಾಲಯಗಳಿಂದ 20.18 ಕೋ.ರೂ. ಹಾಗೂ 21.58 ಕೋ.ರೂ. ಆದಾಯ ಬಂದಿದೆ. ದ.ಕ.ಜಿಲ್ಲೆಯಲ್ಲಿ 40 ‘ಎ’ ವರ್ಗದ ದೇವಾಲಯಗಳು, 27 ‘ಬಿ’ ವರ್ಗದ ಹಾಗೂ 400ಕ್ಕೂ ಹೆಚ್ಚು ‘ಸಿ’ವರ್ಗದ ದೇವಾಲಯಗಳು ಇವೆ. ರೂಪಾಯಿ 25ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ದೇವಾಲಯಗಳು ‘ಎ’ ವರ್ಗಕ್ಕೂ ರೂ.25ಲಕ್ಷಕ್ಕಿಂತ ಕಡಿಮೆ ರೂ.5ಲಕ್ಷಕ್ಕಿಂತ ಹೆಚ್ಚಿನ ಆಧಾಯ ಇರುವ ದೇವಾಲಯಗಳು ‘ಬಿ’ವರ್ಗಕ್ಕೂ ಹಾಗೂ ರೂ.5ಲಕ್ಷಕ್ಕಿಂತ ಕಡಿಮೆ ಹಾಗೂ 1ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವ ದೇವಾಲಯಗಳು ‘ಸಿ’ವರ್ಗಕ್ಕೆ ಸೇರಿವೆ. ಕುಕ್ಕೆ ಸುಬ್ರಹ್ಮಣ್ಯ ಅತೀ ಹೆಚ್ಚು ಆದಾಯವುಳ್ಳ ದೇವಾಲಯ. ಕುಕ್ಕೆ ದೇವಸ್ಥಾನದ ಆದಾಯ 2010-11ನೇ ಸಾಲಿನಲ್ಲಿ 44.82 ಕೋ.ರೂ.ಗಳಿದ್ದರೆ 2011-12ನೇ ಸಾಲಿನಲ್ಲಿ 58.29 ಕೋ.ರೂ.ಗೇರಿತ್ತು. 2013-14ರಲ್ಲಿ 68ಕೋಟಿ, 2013-14ರಲ್ಲಿ ಕುಕ್ಕೆಯ ಆದಾಯ 78ಕೋಟಿ ರೂಪಾಯಿಗಳಾಗಿತ್ತು. ಕೊಲ್ಲೂರು ದೇವಳದ ಆದಾಯ 17.48 ಕೋ.ರೂ.ಗಳಿಂದ 20 ಕೋ.ರೂ.ಗಳಿಗೆ ಏರಿಕೆಯಾಗಿತ್ತು. ಕಟೀಲು ದೇವಸ್ಥಾನದ ಆದಾಯ 10.07 ಕೋ.ರೂ.ಗಳಿದ್ದುದು ಮರುವರ್ಷ 11.5 ಕೋ.ರೂ.ಗೆ ಏರಿಕೆಯಾಗಿತ್ತು. ಕುಕ್ಕೆ ದೇವಸ್ಥಾನದ ಆದಾಯ ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಅತಿ ಹೆಚ್ಚಿನದಾಗಿದ್ದು ಬಳಿಕ ಕೊಲ್ಲೂರು, ಮೈಸೂರು ಚಾಮುಂಡೇಶ್ವರಿ ದೇವಾಲಯ, ಮಲೆಮಹದೇಶ್ವರ ಸ್ವಾಮಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಮೊದಲಾದವುಗಳಿವೆ.

           300ವರ್ಷಗಳಿಗೂ ಹಿಂದಿನ ಪ್ರಾಚೀನ ಸ್ಮಾರಕಗಳನ್ನು ನವೀಕರಿಸುವುದಲ್ಲ, ಯಥಾಸ್ಥಿತಿ ಕಾಪಾಡಬೇಕು ಎನ್ನುವ ಕಾನೂನಿದೆ. ದೇವಾಲಯಗಳನ್ನು ತನ್ನ ಸ್ವಾಧೀನ ಮಾಡಿಕೊಳ್ಳುವ ಸರ್ಕಾರ ದೇವಾಲಯಗಳ ಅಮೂಲ್ಯ ವಾಸ್ತುಶಿಲ್ಪದ ಪರಂಪರೆಯನ್ನು ವಿವೇಚನಾರಹಿತವಾಗಿ ನಾಶಪಡಿಸುತ್ತಿದೆ. ಎಷ್ಟೋ ದೇವಾಲಯಗಳ ಶಿಲ್ಪಕಲಾ ವೈಭವ ಹಾಗೂ ಶಾಸನಗಳು ಧೂಳು, ಮರಳು ಮೆತ್ತಿ ನಾಶವಾಗುತ್ತಲೇ ಇವೆ. ಕಾಂಕ್ರೀಟಿಕರಣದ ಭರದಲ್ಲಿ ಹಲವು ದೇವಾಲಯಗಳ ಸೊಗಡು-ಇತಿಹಾಸವೆರಡೂ ನಾಶವಾಗುತ್ತಿವೆ. 2003-04ರ ಅವಧಿಯಲ್ಲಿ ಕರ್ನಾಟಕದಲ್ಲಿ ಸುಮಾರು ಐದುಸಾವಿರ ದೇವಾಲಯಗಳನ್ನು ನಿರ್ವಹಣೆ ಹಾಗೂ ಹಣಕಾಸಿನ ನೆಪವೊಡ್ಡಿ ಮುಚ್ಚಲಾಗಿತ್ತು.  ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಕೆಲವು ದೇವಾಲಯಗಳಿಗೆ ಕೊಡುವ ಹಣ ಎಣ್ಣೆ-ಬತ್ತಿಗಳಿಗೇ ಸಾಲುವುದಿಲ್ಲ. ಕೆಲವು ದೇವಸ್ಥಾನಗಳ ಅರ್ಚಕರು ಬೇರೆ ಆದಾಯದ ಮೂಲಗಳಿಲ್ಲದಿದ್ದರೆ ಬದುಕುವುದೇ ದುಸ್ತರ ಎಂಬಂತಹ ಸಂಬಳ ಪಡೆಯುತ್ತಾರೆ! ಕೆಲವಾರು ವರ್ಷ ಹಿಂದಿನವರೆಗೂ ಸರಕಾರ ದೇವಾಲಯಗಳಿಗೆ ಕೊಡುತ್ತಿದ್ದ ತಸ್ತೀಕ್ ವಾರ್ಷಿಕ ರೂ. ೧೫೦ನ್ನೂ ದಾಟುತ್ತಿರಲಿಲ್ಲ. ಈಗ ಸ್ವಲ್ಪ ಏರಿಕೆಯಾಗಿದೆಯಾದರೂ ಹಲವು ದೇವಾಲಯಗಳ ದೆಸೆ ಬದಲಾಗಿಲ್ಲ. ದೇವಾಲಯಗಳಿಗೆ ಸರಕಾರ ಕೊಡುವ ತಸ್ತೀಕ್ ತಿಂಗಳಿಗೆ 2000 ರೂ.! ಈ ಬಾರಿ ಜೂನ್ ನಲ್ಲಿ ಮುಜರಾಯಿ ಇಲಾಖೆ ದೇವಾಲಯಗಳಿಗೆ ವಾರ್ಷಿಕವಾಗಿ ನೀಡುತ್ತಿರುವ ಪೂಜಾ ಕೈಂಕರ್ಯ ವೆಚ್ಚವನ್ನು 24ಸಾವಿರದಿಂದ 36 ಸಾವಿರ ರೂ.ಗಳಿಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಇಷ್ಟರ ಮೇಲೆ ದೇವಾಲಯಗಳಲ್ಲಿ ತಟ್ಟೆಗೆ ಹಣ ಹಾಕಬೇಡಿ. ಹುಂಡಿಗೇ ಹಾಕಿ ಎನ್ನುವ ಫಲಕಗಳೂ ದೇವಾಲಯಗಳಲ್ಲಿ ರಾರಾಜಿಸತೊಡಗಿವೆ.

        ಬೆಂಗಳೂರಿನಲ್ಲಿ ಕೆರೆ ಒತ್ತುವರಿ ನೆಪವೊಡ್ಡಿ ಹಲವು ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವಶಪಡಿಸಿಕೊಂಡಿದೆ. ಸಾಯಿಬಾಬಾ ದೇವಾಲಯ, ಇಸ್ಕಾನ್ ದೇವಾಲಯ, ಕನ್ನಿಕಾಪರಮೇಶ್ವರಿ, ಕೋದಂಡರಾಮಸ್ವಾಮಿ ದೇವಾಲಯಗಳು ಇವುಗಳಲ್ಲಿ ಪ್ರಮುಖವಾದವುಗಳು. ಕೆರೆ ಒತ್ತುವರಿ ಮಾಡಿ ನಿವೇಶನಗಳನ್ನಾಗಿಸಿ ಅಥವಾ ಮನೆ ಕಟ್ಟಿಸಿ ಮಾರಾಟ ಮಾಡಿದವರು, ಕಂಪೆನಿ-ಹೋಟೆಲ್ಗಳನ್ನು ಸ್ಥಾಪಿಸಿದವರು, ಅಭಿವೃದ್ಧಿಯ ನೆಪವೊಡ್ಡಿ ಕೆರೆಗಳನ್ನೇ ಗುಳುಂ ಮಾಡಿದವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಸರಕಾರದ ಕಣ್ಣಿಗೆ ಈ ದೇವಾಲಯಗಳು ಮಾತ್ರ ಯಾಕೆ ಬಿದ್ದವು? ಕಾರಣ ಸ್ಪಷ್ಟ. ಅವೆಲ್ಲವೂ ಅಧಿಕ ಆದಾಯವಿದ್ದ ದೇವಾಲಯಗಳು!

               ಎಷ್ಟೋ ದೇವಾಲಯಗಳು ಗತಿ ಗೋತ್ರವಿಲ್ಲದೆ ಪಾಳು ಬಿದ್ದು ಹೋದದ್ದಿದೆ. ಹಲವು ದೇಗುಲಗಳನ್ನು ಊರವರೇ ಚಂದಾ ಎತ್ತಿ ಜೀರ್ಣೋದ್ದಾರ ಮಾಡಿ, ಅರ್ಚಕರನ್ನು ನೇಮಿಸಿ ತಮ್ಮ ಕೈಯಿಂದಲೇ ಅವರಿಗೆ ಅಷ್ಟಿಷ್ಟು ವೇತನ ಕೊಡುವುದಿದೆ. ಆದರೆ ಒಮ್ಮೆ ದೇವಾಲಯ ಜೀರ್ಣೋದ್ಧಾರವಾಯಿತೆನ್ನಿ, ಸರಕಾರದ ಕೆಟ್ಟದೃಷ್ಠಿ ಈ ದೇವಾಲಯಗಳ ಮೇಲೆ ಬೀಳುತ್ತದೆ. ಉತ್ತಮ ಆದಾಯವಿರುವ ಹಿಂದೂ ದೇವಾಲಯಗಳನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ಸರ್ಕಾರದ ಪ್ರಯತ್ನ ಸಾಗುತ್ತಲೇ ಇರುತ್ತದೆ. ಸ್ವಚ್ಛತೆಯ ಕಾರಣವೊಡ್ಡಿ, ಆಡಳಿತ ಮಂಡಳಿಯ ದುರಾಡಳಿತ-ಅವ್ಯವಹಾರ, ಹಣ ಲೂಟಿಯ ನೆಪವೊಡ್ಡಿ ದೇವಾಲಯಗಳನ್ನು ತನ್ನ ಸುಪರ್ದಿಗೆ ಒಳಪಡಿಸುವ ಸರಕಾರಕ್ಕೆ ತನ್ನ ದುರಾಡಳಿತ ತಾನು ಮಾಡುವ ಕೋಟಿಗಟ್ಟಲೆ ಹಣದ ಲೂಟಿ ಮರೆತು ಹೋಗಿರುತ್ತದೆ! ಉಡುಪಿ ಶ್ರೀ ಕೃಷ್ಣ ಮಠದಲ್ಲಿ 8 ಮಠಗಳಿದ್ದೂ ಎಲ್ಲವೂ ಮಠಾಧೀಶರ ಉಪಸ್ಥಿತಿಯಲ್ಲಿ ಪೂಜೆ -ಪುನಸ್ಕಾರ ಅನುರಣಿಸುತ್ತದೆ . ಮಠದಲ್ಲಿ ಸಂಗ್ರಹವಾಗುವ ದೇಣಿಗೆ ಸಾಕಷ್ಟು ಜನಪಯೋಗಿ ಕಾರ್ಯದಲ್ಲಿ ಉಪಯೋಗಿಸಲ್ಪಡುತ್ತದೆ . ದಿನಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಮಠದಿಂದ ಮಧ್ಯಾಹ್ನ ಊಟ ದೊರಕುತ್ತಿದೆ. ಸರಕಾರದ ವಶವಾದ ಮೇಲೆ ಇವೆಲ್ಲಾ ಸಾಧ್ಯವಿದೆಯೇ? ಧರ್ಮಸ್ಥಳದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಒಂದು ವೇಳೆ ಸರಕಾರ ಈ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಲ್ಲಿ ಈ ಎಲ್ಲಾ ಕಾರ್ಯಗಳು ಸ್ಥಗಿತವಾಗುವುದು ಸುಸ್ಪಷ್ಟ. ಶೃಂಗೇರಿಯಂತಹ ದೇವಾಲಯಗಳಿಂದ ವೇದಾಧ್ಯಯನ, ಅನ್ನದಾನ, ವಿದ್ಯಾದಾನಗಳಲ್ಲದೆ ಬಡಜನರಿಗೆ ಮನೆಗಳ ನಿರ್ಮಾಣ, ಉಚಿತ ಸೋಲಾರ್ ದೀಪಗಳ, ಸ್ವಉದ್ಯೋಗಕ್ಕೆ ಬೇಕಾಗುವ ಉಪಕರಣಗಳ ವಿತರಣೆಯಂತಹ ಜನೋಪಯೋಗಿ ಕಾರ್ಯಗಳು ನಡೆಯುತ್ತವೆ. ಅಲ್ಲಿ ಶ್ರೀಗಳಿರದೆ ಸರಕಾರದಿಂದ ನಿಯಮಿಸಲ್ಪಟ್ಟ ಅಧಿಕಾರ ವರ್ಗ ಮಾತ್ರ ಇದ್ದರೆ ಇವುಗಳೆಲ್ಲಾ ಕನಸಿನಲ್ಲೂ ಸಾಧ್ಯವಿಲ್ಲ. ಈ ರೀತಿ ಹಲವು ದೇವಾಲಯಗಳಿಂದ ಜ್ಞಾನ-ಅನ್ನದಾಸೋಹಗಳು, ವೃತ್ತಿ-ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆಗಳು, ಸ್ವಸಹಾಯ ಸಂಘಟನೆಗಳು, ಧಾರ್ಮಿಕ ಜಾಗರಣದ ಸಮಾವೇಶಗಳು, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಪುರಾಣ ಪ್ರವಚನ, ಯಕ್ಷಗಾನದಂತಹ ಭಾರತೀಯ ಕಲೆಗಳಿಗೆ ಪ್ರೋತ್ಸಾಹವೂ ಸಿಗುತ್ತದೆ. ನಡೆಯುತ್ತವೆ. ಈ ದೇವಾಲಯಗಳು ಸರಕಾರದ ವಶವಾದಲ್ಲಿ ಇಂತಹ ಕಾರ್ಯಗಳಿಗೆಲ್ಲಾ ಎಳ್ಳು-ನೀರು ಬಿಟ್ಟಂತೆಯೇ. ಮುಜರಾಯಿ ಇಲಾಖೆಯ ವ್ಯಾಪ್ತಿಯಡಿ ಬರುವ ಶಾಲೆಗಳನ್ನು ನಡೆಸಲು ದೇವಾಲಯಗಳಿಂದ ಬರುವ ಆದಾಯದಲ್ಲಿ ಸಾಧ್ಯವಿಲ್ಲ ಎಂದು ಹೇಳಿ ಶಿಕ್ಷಣ ಇಲಾಖೆಯಡಿ ಸೇರಿಸಿರುವ ಸರಕಾರ ಇನ್ನುಳಿದ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತದೆಯೇ?

           ದೇವಾಲಯಕ್ಕೆ ಆಡಳಿತ ಮಂಡಳಿಯನ್ನು ರಚಿಸುವಾಗಲೂ ಮೀಸಲಾತಿಯನ್ನನುಸರಿಸುತ್ತದೆ ಸರಕಾರ.ಪ್ರತಿಯೊಂದು ದೇವಸ್ಥಾನಕ್ಕೆ ಸರ್ಕಾರದ ಆದೇಶದಂತೆ ಮೀಸಲಾತಿಯನ್ನು ಅನುಸರಿಸಿ ಸದಸ್ಯರನ್ನು ಅಯ್ಕೆ ಮಾಡಲಾಗುತ್ತದೆ. ಕರ್ನಾಟಕ ಸರಕಾರವು ರಾಜ್ಯದ ಹಿಂದೂ ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವ ಮುಜರಾಯಿ ಇಲಾಖೆಯಲ್ಲಿ ಹಿಂದೂ ಧರ್ಮೀಯರನ್ನು ಹೊರತುಪಡಿಸಿ ಅನ್ಯ ಮತೀಯ (೪ ಮುಸಲ್ಮಾನರು ಮತ್ತು ೨ ಕ್ರೈಸ್ತರು) ಅಧಿಕಾರಿಗಳನ್ನು ನೇಮಿಸಿದೆ. ಮುಜರಾಯಿ ಇಲಾಖೆಯು ಹಿಂದೂಗಳ ದೇವಸ್ಥಾನಗಳ ವ್ಯವಸ್ಥಾಪನೆ ನೋಡುವ ಇಲಾಖೆಯಾಗಿರುವುದರಿಂದ ಅದರಲ್ಲಿ ಅಹಿಂದೂ ವ್ಯಕ್ತಿಯ ನೇಮಕವು ಕಾನೂನುಬಾಹಿರವಾಗಿದ್ದು ಅದು ನೇಮಕದ ನಿಯಮಗಳಿಗನುಸಾರವಾಗಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಅಧಿನಿಯಮ, ೧೯೯೭ ರ ಅಧ್ಯಾಯ ೨ ರಲ್ಲಿನ ಪ್ರಕರಣ ೭ ರಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು ಅಥವಾ ನೌಕರರು ಹಿಂದೂಗಳೇ ಆಗಿರಬೇಕು ಎಂಬ ಸ್ಪಷ್ಟ ಉಲ್ಲೇಖವಿದೆ. ಅಂದರೆ ನೇಮಕಾತಿಯ ಸಮಯದಲ್ಲಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮುಸಲ್ಮಾನರ ಮಸೀದಿ, ಮದರಸಾ ಇವುಗಳ ವ್ಯವಸ್ಥಾಪನೆಯನ್ನು ನೋಡುವ 'ವಕ್ಛ್ ಬೋರ್ಡ್' ಇರಲಿ ಅಥವಾ ಹಜ್ ಯಾತ್ರೆಗಾಗಿ ನೇಮಿಸಿದ ಹಜ್ ಸಮಿತಿ ಇರಲಿ, ಎಲ್ಲದರಲ್ಲಿ ಕೇವಲ ಮುಸಲ್ಮಾನರನ್ನೇ ನೇಮಿಸಲಾಗುತ್ತದೆ. ಅನ್ಯ ಮತೀಯರ  ಧಾರ್ಮಿಕ ಸಂಸ್ಥೆಗಳಲ್ಲಿ ಆಯಾ ಮತೀಯರನ್ನು ನೇಮಿಸುತ್ತಿರುವಾಗ ಹಿಂದೂಗಳ ಮುಜರಾಯಿ ಇಲಾಖೆಯಲ್ಲಿ ಮಾತ್ರ ಹಿಂದೂವೇತರರ ನೇಮಕಾತಿ ಮಾಡುವುದ್ಯಾಕೆ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಪ್ರತಿಯೊಂದು ವಿಷಯದಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತದೆ. ಸರಕಾರದ ಈ ಕ್ರಮವನ್ನು ನ್ಯಾಯಸಮ್ಮತ ಮಾರ್ಗದಿಂದ ವಿರೋಧಿಸಿದವರಿಗೆ ಕೋಮುವಾದಿ ಪಟ್ಟ ಶತಃಸಿದ್ಧ. ಮುಜರಾಯಿ ಇಲಾಖೆಯ 1997ರ ಕಾಯ್ದೆ ಅಸಂವಿಧಾನಿಕ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಕರಣದಲ್ಲಿ ತೀರ್ಪು ನೀಡಿದೆ. ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು ಸಂವಿಧಾನ ವಿರೋಧಿ ನಡೆ. ಈ ರೀತಿ ನಡೆದುಕೊಂಡರೆ ನಮ್ಮ ಸಂವಿಧಾನದ ವಿಧಿ 14, 25, 26 ಮತ್ತು 27 ಉಲ್ಲಂಘನೆ ಮಾಡಿದಂತಾಗುತ್ತದೆ. ದೇವಸ್ಥಾನಗಳ ಆದಾಯದ ಮೇಲೆ ಕಣ್ಣಿಟ್ಟಿರುವ ನಮ್ಮ ಸರಕಾರಗಳು ದೇವಸ್ಥಾನಗಳನ್ನು ನಿಯಂತ್ರಿಸಲು ಹೊರಟಿವೆ. ಸರ್ಕಾರ ಮತ್ತು ನಮ್ಮ ರಾಜಕಾರಣಿಗಳಿಗೆ ದೇವಸ್ಥಾನಗಳ ಅಭಿವೃದ್ದಿಗಿಂತ ಆದಾಯವೇ ಮುಖ್ಯವಾಗಿದೆ.

             ಭಕ್ತರು ನಂಬಿಕೆ, ಭಕ್ತಿಯಿಂದ ಅರ್ಪಿಸಿದ ಈ ಹಣವನ್ನು ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅಥವಾ ಕನಿಷ್ಟ ಹಿಂದೂ ಸಮಾಜದ ಅವಶ್ಯಕತೆಗಳ ಪೂರೈಕೆಗೆ ಬಳಸಬೇಕಲ್ಲವೆ? ಆದರೆ ಈ ಹಣ ಹಂಚಿಕೆಯಾಗುವುದು ಮದರಸಾ, ಚರ್ಚುಗಳಿಗೆ! ಇವು ಬಳಕೆಯಾಗೋದು ಮತಾಂತರ, ಜಿಹಾದೀ ಭಯೋತ್ಪಾದನೆಗಳಿಗೆ! ಅಂದರೆ ನಾವು ಭಕ್ತಿಯಿಂದ ಅರ್ಪಿಸಿದ ಹಣ ನಮ್ಮನ್ನೇ ಕೊಲ್ಲಲು ಬಳಕೆಯಾಗುತ್ತಿದೆ! ಅಷ್ಟಕ್ಕೂ ಸರಕಾರ ದೇವಾಲಯಗಳನ್ನು ತನ್ನ ಅಧೀನಕ್ಕೊಳಪಡಿಸುತ್ತಿರುವುದೇಕೆ? ತಾನು ‘ಮತ ನಿರಪೇಕ್ಷ, ಸಮಾಜವಾದಿ’ ಎಂದು ಬೊಂಬಡಾ ಬಜಾಯಿಸುವ ಸರ್ಕಾರಕ್ಕೆ ದೇವಾಲಯದ ಹಣಕ್ಕೆ ಕೈ ಚಾಚುವುದೇಕೆ? ಅದರಲ್ಲೂ ಕೇವಲ ಹಿಂದುಗಳ ಪೂಜಾಸ್ಥಳಗಳನ್ನು ನಿಯಂತ್ರಿಸಲು ಪ್ರಯತ್ನಿಸುವುದೇಕೆ? ಮುಸ್ಲಿಂ ಮತ್ತು ಕ್ರೈಸ್ತ ಮತೀಯ ಸಂಸ್ಥೆಗಳ ಕಡೆಗೆ ಸರ್ಕಾರದ ಗಮನವೇ ಹೋಗುವುದಿಲ್ಲವೇಕೆ? ದೇವರ ಪೂಜೆಯನ್ನೆಲ್ಲಾ ಮೌಢ್ಯವೆಂದು ವಿರೋಧಿಸ ಹೊರಟ ಸರಕಾರಕ್ಕೆ ದೇವಸ್ಥಾನಗಳ ಆದಾಯಗಳೇಕೆ ಬೇಕು? ಕುಂಭಮೇಳ ನಡೆಯುವ ಸಂದರ್ಭದಲ್ಲಿ ತೀರ್ಥಕ್ಕಾಗಿ 25-50ರೂ. ಕಸಿದುಕೊಳ್ಳುವ ಸರಕಾರಗಳು ಕೈಲಾಸ-ಮಾನಸಸರಸಿಯ ಯಾತ್ರೆಗೆ ಅತ್ಯಧಿಕ ಮೊತ್ತದ ಹಣವನ್ನು ತೆರಿಗೆಯ ರೂಪದಲ್ಲಿ ಪಡೆಯುತ್ತವೆ. ಆದರೆ ನಮ್ಮದೇ ಹಣದಲ್ಲಿ ಬಾಂಧವರು ಖರ್ಚಿಲ್ಲದೆ ಹಜ್ ಯಾತ್ರೆಗೈಯ್ಯುತ್ತಾರೆ!
ಕೆಲವು ದೇವಾಲಯಗಳಲ್ಲಿ ಗ್ರಾಮಸ್ಥರ ಆಗ್ರಹದಿಂದಾಗಿಯೋ, ಅಥವಾ ಅರ್ಚಕ-ಪರಿಚಾರಕ ವರ್ಗದವರ ಜಾಣ್ಮೆಯಿಂದಲೋ ತಕ್ಕಮಟ್ಟಿಗಿನ ಸೇವಾ ಕೈಂಕರ್ಯಗಳು ನಡೆಯುತ್ತವೆ. ಆದರೆ ಹಲವಷ್ಟು ದೇವಾಲಯಗಳು ಪಾಳು ಬೀಳುತ್ತಲಿವೆ. ಪಾಳು ಬೀಳುವುದೆಂದರೆ ಕೇವಲ ಧೂಳು ಮೆತ್ತಿ, ಕಟ್ಟಡ ಕುಸಿದು ಹೋಗಿರುವುದು ಮಾತ್ರವಲ್ಲ, ಅಲ್ಲಿನ ಆಡಳಿತ ನಿರ್ವಹಣೆ, ಧಾರ್ಮಿಕ ಕಾರ್ಯಕ್ರಮಗಳಿಗೂ ತತ್ವಾರವುಂಟಾಗಿದೆ. ಈಗ ನ್ಯಾಯಾಲಯದ ಆದೇಶದಿಂದಾಗಿ ಕೆಲವಷ್ಟು ದೇವಾಲಯಗಳಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕ ಹಿಂದು ಧರ್ಮ ಹಾಗೂ ಧಾರ್ಮಿಕ ದತ್ತಿ ಮಸೂದೆ 1997ರಲ್ಲೇ ಜಾರಿಗೊಳಿಸಲಾಗಿತ್ತಾದರೂ, ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿದ್ದು 2001ರ ಅಕ್ಟೋಬರ್ನಲ್ಲಿ. ನಂತರ 2003ರ ಮೇ ತಿಂಗಳಲ್ಲಿ ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ನಂತರ 2011ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಗುಲಗಳನ್ನು ಸರ್ಕಾರದ ಹತೋಟಿಗೆ ತರಲು ಅವಕಾಶ ಕಲ್ಪಿಸಲಾಗಿತ್ತು. 2012ರಲ್ಲಿ ಮತ್ತೊಮ್ಮೆ ಕಾಯ್ದೆಗೆ ತಿದ್ದುಪಡಿ ತಂದು ವಾರ್ಷಿಕ 50 ಲಕ್ಷ ರೂ.ಗೂ ಹೆಚ್ಚಿನ ಆದಾಯ ಗಳಿಸುವ ದೇಗುಲಗಳ ವ್ಯವಸ್ಥಾಪಕ ಮಂಡಳಿ ರಚನೆ, ಆಡಳಿತಾಧಿಕಾರಿ ನೇಮಕ ಮತ್ತಿತರ ನಿರ್ಧಾರ ಕೈಗೊಳ್ಳಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಧಾರ್ಮಿಕ ಪರಿಷತ್ಗಳನ್ನು ರಚಿಸಿತ್ತು. 2012ರ ತಿದ್ದುಪಡಿ ಕಾಯ್ದೆಯನ್ವಯ ಮುಜ ರಾಯಿ ವ್ಯಾಪ್ತಿಗೊಳಪಟ್ಟ ಎಲ್ಲ ದೇವಸ್ಥಾನಗಳು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸರ್ಕಾರದ ಅಂಕುಶದಿಂದ ಮುಕ್ತಗೊಳ್ಳಲಿವೆ.

           ಮುಜರಾಯಿ ಇಲಾಖೆಯಲ್ಲಿ ಹಿಂದುಗಳು ಮಾತ್ರವಿರಬೇಕು. ದೇವಾಲಯ ಹಾಗೂ ಹಿಂದು ಭಕ್ತರಿಂದ ಸಂಗ್ರಹ ವಾಗುವ ಆದಾಯ ಮತ್ಯಾವುದೇ ಮತದ ಅಭಿವೃದ್ಧಿಗೆ ಬಳಕೆ ಮಾಡಬಾರದು. ಅರ್ಚಕರು, ಪರಿಚಾರಕರಿಗೆ ಜೀವನ ಸಾಗಿಸಲು ನೆರವಾಗುವಷ್ಟು ಗೌರವಧನವನ್ನಾದರೂ ಕೊಡಬೇಕು. ದೇವಾಲಯಗಳಿಂದ ಬರುವ ಆದಾಯದಿಂದ ಸಿ ದರ್ಜೆ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರಿಗೆ ವೇತನ, ದೇವಾಲಯಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಮಾಡಬೇಕು. ದೇವಾಲಯಗಳಿಂದ ಬರುವ ಆದಾಯವನ್ನು ಆಯಾ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸಬೇಕು. ಇದರಿಂದ ಗ್ರಾಮದ ಹಣ ಅಲ್ಲಿಗೇ ಉಪಯೋಗವಾಗುವುದರ ಜೊತೆಗೆ ಭಯೋತ್ಪಾದಕರ ಜೋಳಿಗೆ ಸೇರುವುದು ತಪ್ಪುತ್ತದೆ. ದೇವಾಲಯಗಳು ಅರ್ಚಕರು-ಭಕ್ತರಿಂದಾಗಿ ಉಳಿದಿವೆಯೇ ಹೊರತು, ಆಡಳಿತ ಮಂಡಳಿಗಳಿಂದಾಗಲಿ, ವ್ಯವಸ್ಥಾಪನಾ ಸಮಿತಿಗಳಿಂದಾಗಲಿ ಅಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ