ಪುಟಗಳು

ಸೋಮವಾರ, ಅಕ್ಟೋಬರ್ 8, 2018

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

              "ಹಿಂದೂ ಧರ್ಮ ಯಾವುದೇ ನಿರ್ದಿಷ್ಟ ಕಾಲದಲ್ಲಿ ಸ್ಥಾಪಿತವಾದದ್ದಲ್ಲ. ಯಾವ ಮತಸ್ಥಾಪಕನಿಂದಲೂ ಸ್ಥಾಪನೆಗೊಂಡಿಲ್ಲ. ಅದು ಯಾವುದೇ ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಅದು ಸನಾತನ, ಸಾರ್ವತ್ರಿಕ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಜೀವಿಗಳೂ ಅವು ಒಪ್ಪಲಿ ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುವುದಕ್ಕೆ ಯಾವುದಾದರೂ ಪ್ರಮಾಣವನ್ನು ಅವಲಂಬಿಸಿದೆಯೇ? ನಾವು ಒಪ್ಪಿದರೂ, ಒಪ್ಪದೇ ಇದ್ದರೂ ಅದರ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಸನಾತನ ಧರ್ಮ ಈ ರೀತಿಯಾದದ್ದು. ನಾವು ಅರಿತು ಒಪ್ಪಿದರೆ ನಮಗೆ ಒಳಿತು. ಒಪ್ಪದಿದ್ದರೆ ಕೆಡುಕು ನಮಗೇ. ಯಾವುದೆಲ್ಲಾ ಉತ್ಕೃಷ್ಟ ಬೋಧನೆಗಳಿವೆಯೋ ಅವೆಲ್ಲಾ ಸನಾತನ ಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ." ಅವಿನಾಶಿಯಾದ ವರೇಣ್ಯ ಬ್ರಹ್ಮಸ್ವರೂಪದಲ್ಲಿ ನೆಲೆಗೊಂಡು ಪಾಪವೇ ಮೊದಲಾದ ಕಟ್ಟುಗಳನ್ನೆಲ್ಲಾ ದೂರಕ್ಕೆಸೆದು ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿರುವವನೇ ಅವಧೂತ. ಶಾಸ್ತ್ರ-ಸಂಪ್ರದಾಯ-ಮತಗಳ ಕಟ್ಟುಕಟ್ಟಳೆಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೂ ಕಡೆಗಣಿಸಿ, ಲೌಕಿಕ ವ್ಯವಹಾರವನ್ನೇ ದೂರ ಸರಿಸಿ ಬದುಕುವ ಅವಧೂತರ ಮುಖದಿಂದ ಹೊರಡುವ ಮಾತುಗಳೆಲ್ಲಾ ಮಂತ್ರಗಳು. ಅಂತಹಾ ಅವಧೂತರಲ್ಲೊಬ್ಬರಾದ ಶೃಂಗೇರಿಯನ್ನು ಬೆಳಗಿದ ಚಂದ್ರಶೇಖರ ಭಾರತಿ ಸ್ವಾಮಿಗಳು ಹಿಂದೂ ಧರ್ಮಕ್ಕೆ ಕೊಡುವ ವಿಶ್ಲೇಷಣೆ ಇದು.

             ಎಂತಹಾ ಅದ್ಭುತ ವಿಶ್ಲೇಷಣೆ! ಹಿಂದೂ ಧರ್ಮ ಎಂದರೆ ಶ್ರೇಷ್ಠ. ಜನ್ಮ ತಳೆದಾಗಿನ, ಕಪಟವರಿಯದ, ಅನ್ಯರಿಗೆ ಕೇಡು ಬಯಸದ ಮನಸ್ಸು ಹಿಂದೂ. ಆದರೆ ಪ್ರಪಂಚದ ವೈಚಿತ್ರ್ಯ ಏನು ಗೊತ್ತೇ? ಕಪಟವರಿಯದ ಮನಸ್ಸು ಬುದ್ಧಿ ಬೆಳೆದಂತೆ ಯಾರದ್ದೋ "ಮತ"ಕ್ಕೆ ಜೋತು ಬೀಳುತ್ತದೆ. ಹಾಗಾದರೆ ಬೆಳೆದಿದ್ದು ಬುದ್ಧಿ ಎನ್ನುವುದು ಹೇಗೆ? ತನ್ನದಾದ ಮತವೂ ಇಲ್ಲದೆ, ಯಾರೋ ಯಾವ ಕಾಲದಲ್ಲಿ ಮಾಡಿಟ್ಟ ಅಭಿಪ್ರಾಯ, ಕಟ್ಟುಪಾಡುಗಳಿಗೆ ಜೋತು ಬೀಳುವ ಮನಸ್ಸು ವಿವೇಚನೆಯ ಶಕ್ತಿಯನ್ನೂ ಕಳೆದುಕೊಂಡು ಜಗತ್ತಿನ ಇತರರೂ ತಾನು ನಂಬಿದ್ದನ್ನೇ ನಂಬಬೇಕೆಂದೂ ಆಗ್ರಹಿಸುವ ಕುರುಡುತನಕ್ಕೆ ಇಳಿಯುತ್ತದೆ. ಒಪ್ಪದವರನ್ನು ಬಲವಂತವಾಗಿಯೋ, ಕುತಂತ್ರದಿಂದಲೋ ಎಳೆಯುತ್ತದೆ. ತನ್ನ ಮತವನ್ನು ಒಪ್ಪುವವರ ಸಂಖ್ಯೆಯನ್ನು ಹೆಚ್ಚು ಮಾಡಲೆಳಸುತ್ತದೆ. ಜೀವನದ ಪರಮಗುರಿ ತನ್ನ ಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಮೌಢ್ಯದಲ್ಲಿ ಸಿಲುಕುವುದೋ, ಜಗತ್ತಿನ ಸತ್ಯವನ್ನು ಅರ್ಥೈಸುವ ಜ್ಞಾನದ ನಿಧಿಯ ಹುಡುಕಾಟವೋ? ಹಾಗೆ ನೋಡಿದರೆ ಪ್ರಸಕ್ತ ಕಾಲದಲ್ಲಿ ಮನುಷ್ಯೇತರ ಜೀವಿಗಳ ಜೀವನವೇ ಲೇಸು. ತೃಷೆ ನೀಗುವಷ್ಟರವರೆಗೆ ಮಾತ್ರ ಅವುಗಳದ್ದು ಹೋರಾಟ. ಆಮೇಲೆ ನಿರ್ಲಿಪ್ತತೆ. ಮನುಷ್ಯನದ್ದು ಹಾಗಲ್ಲ; ಅವನು ಜನ್ಮ ನೀಡಿದ ದೇಶಕ್ಕೂ ಕೃತಜ್ಞನಾಗಿಲ್ಲ;ಭೂಮಿಗೂ! ಹಿಂದೂ ಧರ್ಮವನ್ನು ಮತವಾಗಿ ಕಾಣುವ, ತುಚ್ಛವಾಗಿ ಕಾಣುವವರೆಲ್ಲಾ ಚಂದ್ರಶೇಖರ ಭಾರತಿ ಸ್ವಾಮಿಗಳ ಈ ಮಾತುಗಳ ಮಥಿತಾರ್ಥವನ್ನು ಅರಿಯಲು ಯತ್ನಿಸಬೇಕು. ಯಾರಿಗೆ ಈ ಮಾತುಗಳ ಅರಿವಾಗುತ್ತದೋ ಅವನು ತನ್ನ "ಮತ"ವನ್ನು ಇನ್ನೊಬ್ಬನ ಮೇಲೆ ಹೇರಲಾರ. ಹೆಚ್ಚೇಕೆ ಮೌಢ್ಯ ತುಂಬಿದ ತನ್ನ ಮತವನ್ನು ತೊರೆದು ಜ್ಞಾನದ ಹುಡುಕಾಟದಲ್ಲಿ ತೊಡಗುವುದು ಶತಃಸಿದ್ಧ.

              "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅದೂ ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ! ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ಈ ವಾದ ನಿರಾಕರಿಸುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ? ಹಾಗಾಗಿಯೇ ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಾವು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ" ಎನ್ನುವ ಅವರ ಮಾತುಗಳು ಮತಗಳ ಮೇಲಾಟದಲ್ಲಿ ಮುಳುಗೇಳುತ್ತಿರುವವರ ಕಣ್ಣು ತೆರೆಸಬೇಕು.

                ಜಗದ್ಗುರು ಪೀಠಾಧಿಪತ್ಯ ಬಿಡಿ ಸಂನ್ಯಾಸವನ್ನೂ ಕೂಡಾ ಅವರು ಬಯಸಿ ಪಡೆದುದಲ್ಲ. ಅವಧೂತರಾಗಿ ಎದ್ದು ಹೋದ ಅವರ ಅಜ್ಜನ ಪುಣ್ಯಫಲ; ಅವರ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಆಗಿನ ಜಗದ್ಗುರು ನೃಸಿಂಹ ಭಾರತೀ ಸ್ವಾಮಿಗಳ ಮನಸೂರೆಗೊಂಡು ಅವರು ಮಾಡಿದ ದೃಢನಿಶ್ಚಯ ಹಾಗೂ ಆಜ್ಞೆ ಮತ್ತು ಶೃಂಗೇರಿಯ ಅವಿಚ್ಛಿನ್ನ ಐತಿಹಾಸಿಕ ಶಿಷ್ಯಪರಿಗ್ರಹ ಪರಂಪರೆ ಈ ಬಡ, ಬಡಕಲು ಹುಡುಗನನ್ನು ಎತ್ತರದ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಿತು. ಶ್ಲೋಕಗಳನ್ನು ರಸವತ್ತಾಗಿ ಹಾಡುತ್ತಿದ್ದ, ಸಂಗೀತದಲ್ಲಿ ಅಭಿರುಚಿಯಿದ್ದ ಕವಿಹೃದಯಿಗೆ ವಿರಕ್ತಿ ಸಹಜವಾಗಿ ಹೇಗೆ ಬಂದೀತು? ಹಾಗಂತ ಅದು ದುಃಖದರ್ಶನದಿಂದಲೂ ಬಂದುದಲ್ಲ. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಆತ್ಮತತ್ತ್ವದ ಅನುಸಂಧಾನವೇ ಗುರಿಯಾಯಿತು. ಆತ್ಮವಿದ್ಯಾವಿಲಾಸವಂತೂ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆಯಿಸಿತು. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು. ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಇವೆಲ್ಲದರ ಪುನರಾವರ್ತನೆ. ಈ ನಡುವೆ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟವರು ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಉಪನ್ಯಾಸ ಮಾಡಿದರು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆ, ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

             ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ" ಎನ್ನುತ್ತಿದ್ದ ಅವರು ಅಂತಹವರನ್ನು ತಿದ್ದುತ್ತಿದ್ದರು. ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎನ್ನುತ್ತಿದ್ದ ಅವರು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರು, ಹನುಮಂತನಿಗಾಗಿ!

              1954ರ ಭಾದ್ರಪದ ಬಹುಳ ಅಮವಾಸ್ಯೆಯ(ನವರಾತ್ರಿಯ ಹಿಂದಿನ) ದಿನ ಬೆಳಕು ಹರಿಯುವ ಮುನ್ನವೇ ಕೊರೆಯುವ ಚಳಿಯಲ್ಲಿ ತುಂಗೆಯಲ್ಲಿ ಸ್ನಾನಕ್ಕೆಂದು ಇಳಿದ ಅವರು ನೀರಿನಲ್ಲಿ ಮುಳುಗು ಹಾಕಿ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತವರು ಪದ್ಮಾಸನದಲ್ಲಿಯೇ ನೀರಿನಲ್ಲಿ ತೇಲಿ ಹೋದರು. ಜೊತೆಗಿದ್ದವರು ಸ್ವಾಮಿಗಳನ್ನು ದಡಕ್ಕೆ ತಂದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ! ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ