ಪುಟಗಳು

ಬುಧವಾರ, ಸೆಪ್ಟೆಂಬರ್ 30, 2015

ಬಕುಳ

#ನಾಸ್ತಿಮೂಲಮನೌಷಧಮ್‬
#ಬಕುಳ

          ಬಕುಳ ಸಂಸ್ಕೃತದ ಹೆಸರು. ಶುರದಿಕಾ, ಅನಂಗಕಾ ಎನ್ನುವ ಉಪನಾಮಗಳನ್ನು ಹೇಳಿದರೂ ಈಗಿನವರಿಗೆ ತಿಳಿಯಲಿಕ್ಕಿಲ್ಲಾ! ಆದರೆ ರೆಂಜೆ ಹೂವು ಎಂದರೆ ಹಳ್ಳಿಯಲ್ಲಿ ಬೆಳೆದವರಿಗೆ ಅದರಲ್ಲೂ ನಾರಿಯರಿಗೆ ತಿಳಿದೀತು. ರೆಂಜೆ, ಬಕುಳೆ ಎನ್ನುವಾಗಲೇ ಅದರ ಸುವಾಸನೆಯನ್ನು ಮನ ಮೆಲುಕು ಹಾಕುತ್ತದೆ. ರಾತ್ರಿ ಅರಳುವ ವಿಶಿಷ್ಟ ಪರಿಮಳಯುಕ್ತ ಹೂವು ಅದು. ಒಣಗಿದ ಮೇಲೂ ಸುಗಂಧ ಬೀರುವ ಪುಷ್ಪವದು. ಎತ್ತರದ ಮರದಿಂದ ಮಂದಾನಿಲಕೆ ಬೆದರುತ್ತಾ ಮೆಲ್ಲನೆ ಬುವಿಗಿಳಿದು ಭೂಮಿಯನ್ನು ಶ್ವೇತವರ್ಣದಿಂದ ಮುಚ್ಚುವ ಬಕುಳ ಪುಷ್ಪ ಸೃಷ್ಟಿಸುವ ಸನ್ನಿವೇಶ ಆತ್ಮೋನ್ನತಿ ಪಡೆದ ಯೋಗಿಯ ತೆರನದ್ದು! ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳೇ ಮುಡಿದು ಸಿಂಗರಿಸಿ ಕೊಂಡು ಸಂಭ್ರಮಿಸುವ "ಬಕುಳಾಶೋಕವಿಹೃತಿ" ಎಂಬ ಪರ್ವವೇ ಇದೆಯಂತೆ.  ಬೆಳ್ಳಂಬೆಳಗ್ಗೆ ಶಾಲೆಗೆ ಹೋಗುವಾಗ ದಾರಿಯ ಮೇಲೆ ರಂಗವಲ್ಲಿ ಹಾಕಿದಂತೆ ಬಿದ್ದು ಸ್ವಾಗತ ಕೋರುತ್ತಿದ್ದ ಇದರ ಸುಗಂಧಭರಿತ ಹೂವು, ಸಂಜೆಯ ವೇಳೆ ಮರವೇರಿ ಕಿಸೆ ತುಂಬಾ ಸಂಗ್ರಹಿಸುತ್ತಿದ್ದ ಇದರ ಕೆಂಪು/ಕಿತ್ತಳೆ ವರ್ಣದ ಹಣ್ಣು ಈಗ ನೆನಪು ಮಾತ್ರ. ಈಗಿನ ಮಕ್ಕಳಿಗೆೀ ಆ ಭಾಗ್ಯವೇ ಇಲ್ಲ! ಹಾಂ ಬಕುಳದ ಹೂವನ್ನು ಕಟ್ಟಬೇಕೆಂದಿಲ್ಲ, ಸುರಿಯಲು ಸುಲಭವಾಗುವಂತೆ ಅದರ ರಚನೆ!

         ಈಗ ಕೋಲ್ಗೇಟಿನವರು ನಿಮ್ಮ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಮಂಗ ಮಾಡುತ್ತಾರಲ್ಲಾ...ನಾವು ಮಂಗ ಆದೆವಲ್ಲಾ! ನಮ್ಮ ಅಜ್ಜಿ ಈಗಲೂ ಹಲ್ಲುಜ್ಜಲು ಬಳಸುವುದು ಬಕುಳೆಯ ತೊಗಟೆಯನ್ನೇ! ಇದರಿಂದ ಎರಡು ಪ್ರಯೋಜನ ಒಂದು ದಂತಗಳು ಝಗಮಗಿಸುತ್ತವೆ. ಇನ್ನೊಂದು->ವಸಡುಗಳು ಗಟ್ಟಿಯಾಗುತ್ತವೆ. ಇದರ ಮರದ ತೊಗಟೆಯನ್ನು ಪುಡಿ ಮಾಡಿ ಅಥವಾ ಆ ಪುಡಿಯಿಂದ ಕಷಾಯ ಮಾಡಿ ಉಪಯೋಗಿಸಬಹುದು. ತೊಗಟೆ ಮಲಬದ್ಧತೆ, ಪಿತ್ತ ಕೋಶ-ಮೂತ್ರಕೋಶಗಳ ತೊಂದರೆ, ಅತಿಸಾರಗಳ ಶಮನಕ್ಕೆ ಸಹಕಾರಿ. ಬಕುಳೆ ನಿತ್ಯಹರಿದ್ವರ್ಣದ ಮರ! ನಮ್ಮ ಕರಾವಳಿಯ ಕೆಲವೆಡೆ ಮದುವೆಗಳಲ್ಲಿ ಮದುಮಕ್ಕಳು ರೆಂಜೆ ಹೂವಿನ ಮಾಲೆಯನ್ನು ಪರಸ್ಪರ ಬದಲಾಯಿಸಿಕೊಳ್ಳುವ ಶಾಸ್ತ್ರವಿತ್ತು. ಈಗ ಅದು ಇತಿಹಾಸ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ